Tuesday, 31 October 2017

ರಾಷ್ಟ್ರೀಯ ಏಕತಾ ಓಟಕ್ಕೆ ಸಂಸದ ಕರಡಿ ಸಂಗಣ್ಣ ಚಾಲನೆ, ನಂತರ ಪ್ರತಿಜ್ಞಾ ವಿಧಿ ಸ್ವೀಕಾರ


ಕೊಪ್ಪಳ, ಅ. 31 (ಕರ್ನಾಟಕ ವಾರ್ತೆ) :ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮ ದಿನದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಮಂಗಳವಾರದಂದು ಕೊಪ್ಪಳದ ಗಡಿಯಾರ ಕಂಬದ ಬಳಿ ಆರಂಭಿಸಲಾದ ರಾಷ್ಟ್ರೀಯ ಏಕತಾ ಓಟಕ್ಕೆ ಸಂಸದ ಕರಡಿ ಸಂಗಣ್ಣ ಅವರು ಚಾಲನೆ ನೀಡಿದರು.

     ರಾಷ್ಟ್ರೀಯ ಏಕತಾ ಓಟಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ ಅವರು ಉಪಸ್ಥಿತರಿದ್ದರು.  ನಗರದ ಗಡಿಯಾರ ಕಂಬದ ಬಳಿಯಿಂದ ಪ್ರಾರಂಭಿಸಲಾದ ರಾಷ್ಟ್ರೀಯ ಏಕತಾ ಓಟದಲ್ಲಿ ಸಂಸದ ಕರಡಿ ಸಂಗಣ್ಣ ಅವರು ಉತ್ಸಾಹದಿಂದ ಖುದ್ದು ಪಾಲ್ಗೊಂಡಿದ್ದು ವಿಶೇಷವಾಗಿತ್ತು.  ಗಡಿಯಾರ ಕಂಬದಿಂದ ಪ್ರಾರಂಭವಾದ ಏಕತಾ ಓಟ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ನಗರಸಭೆ ಕಚೇರಿವರೆಗೂ ಸಾಗಿಬಂದಿತು. ತಹಸಿಲ್ದಾರ್ ಗುರುಬಸವರಾಜ್ ಸೇರಿದಂತೆ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.  

     ನಂತರ ನಗರಸಭೆ ಕಾರ್ಯಾಲಯ ಆವರಣದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವೈ. ಸುದರ್ಶನ್ ಅವರು ರಾಷ್ಟ್ರೀಯ ಏಕತಾ ಪ್ರತಿಜ್ಞಾ ವಿಧಿ ಬೋಧಿಸಿದರು.  ರಾಷ್ಟ್ರೀಯ ಐಕ್ಯತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು ನನ್ನನ್ನು ಅರ್ಪಿಸಿಕೊಳ್ಳುತ್ತೇನೆ.  ಮತ್ತು ನನ್ನ ದೇಶ ಬಾಂಧವರಲ್ಲಿ ಈ ಸಂದೇಶ ಸಾರಲು ಶ್ರಮಿಸುತ್ತೇನೆ.  ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆಯಿಂದ ಸಾಧಿಸಿದ ರಾಷ್ಟ್ರೀಯ ಏಕೀಕರಣದ ಸ್ಫೂರ್ತಿಯನ್ನು ಕಾಪಾಡುತ್ತೇನೆ.  ರಾಷ್ಟ್ರದ ಆಂತರಿಕ ಭದ್ರತೆಯನ್ನು ಖಾತ್ರಿ ಪಡಿಸಲು ನಾನು ನನ್ನದೇ ಆದ ಕೊಡುಗೆ ನೀಡುತ್ತೇನೆ ಎಂದು ಒಮ್ಮನಸ್ಸಿನಿಂದ ಪ್ರತಿಜ್ಞೆ ಮಾಡುವುದಾಗಿ ಎಲ್ಲರೂ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
     ದಿ. ಇಂದಿರಾಗಾಂಧಿ ಅವರ ಪುಣ್ಯ ತಿಥಿ ದಿನದ ಅಂಗವಾಗಿ ರಾಷ್ಟ್ರೀಯ ಸಂಕಲ್ಪ ದಿವಸ ಆಚರಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರೂ ರಾಷ್ಟ್ರೀಯ ಸಂಕಲ್ಪ ದಿವಸದ ಪ್ರತಿಜ್ಞೆ ಸ್ವೀಕರಿಸಿದರು. ಹಲವು ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಸಂರಕ್ಷಣೆ ಮುಖ್ಯವಾಗಿದೆ : ಟಿ. ಶ್ರೀನಿವಾಸಕೊಪ್ಪಳ ಅ. 31 (ಕರ್ನಾಟಕ ವಾರ್ತೆ): ಮಹಿಳೆಯರ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಒಂದು ಸುಂದರವಾದ, ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಸಂರಕ್ಷಣೆ ಬಹಳ ಮಖ್ಯವಾಗಿದೆ ಎಂದು  ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ. ಶ್ರೀನಿವಾಸ ಅವರು ಹೇಳಿದರು.  

    ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಕಾರಿಗಳ ಕಛೇರಿ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ರಕ್ಷಣೆ ದಿನ ಅಂಗವಾಗಿ ಸಾಕ್ಷಿದಾರರ ಮೊಗಸಾಲೆ, ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಮಂಗಳವಾರದಂದು ಹಮ್ಮಿಕೊಳ್ಳಲಾಗಿದ್ದ, “ಕಾನೂನು ಅರಿವು-ನೆರೆವು” ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಮಹಿಳೆಯರ ರಕ್ಷಣೆ ಎಂದರೆ ಕೇವಲ ನಮ್ಮ ಮನೆಯ ಹೆಣ್ಣು ಮಕ್ಕಳ ಸಂರಕ್ಷಣೆ ಅಲ್ಲದೇ ಅಕ್ಕ-ಪಕ್ಕದ, ಸಮಾಜದಲ್ಲಿ ವಾಸಿಸುವಂತ ಪ್ರತಿಯೊಬ್ಬ ಹೆಣ್ಣುಮಕ್ಕಳ, ಮಹಿಳೆಯರ ಸಂರಕ್ಷಣೆಯಾಗಿದೆ.  ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು, ಒಬ್ಬ ಮಹಿಳೆ ನಿರ್ಭಯವಾಗಿ ಮಧ್ಯರಾತ್ರಿಯಲ್ಲಿ ಓಡಾಡಿದರೆ ನಮ್ಮ ದೇಶ ಅಂದು ರಾಮ ರಾಜ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.  ಮಹಿಳಾ ಸಬಲೀಕರಣದ ಉದ್ದೇಶದಿಂದ ಸರ್ಕಾರ ಹಲವಾರು ಕಾನೂನುಗಳನ್ನು ಜಾರಿಗೊಳಿಸಿದೆ.  ಸಂವಿಧಾನವಾಗಿ ಮಹಿಳೆಯರಿಗೆ ಕೊಟ್ಟಂತಹ ಕಾನೂನು ರಕ್ಷಣೆ ವ್ಯವಸ್ಥೆ ಪುರುಷರಿಗಿಲ್ಲ.  ಕಾನೂನಿನ ಕುರಿತು ಮಹಿಳೆಯರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚು-ಹೆಚ್ಚು ಸಂಖ್ಯೆಯಲ್ಲಿ ನಡೆಯಬೇಕಿವೆ.  ದಿನವೂ ನಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನಡೆಯದೆ ಇರುವುದಕ್ಕೆ ಕಾರಣ ಭ್ರಷ್ಟಾಚಾರ.  ಇದಕ್ಕೆ ನಾವು ಅನುವು ಮಾಡಬಾರದು.  ಭ್ರಷ್ಟಾಚಾರವನ್ನು ಕೊನೆಗೊಳಿಸಲು ಜನಜಾಗೃತಿ ಉಂಟು ಮಾಡಬೇಕು.  ಇದರ ನಿರ್ಮೂಲನೆಗಾಗಿ ಎಲ್ಲರೂ ಕೈಜೋಡಿಸಿ, ಭ್ರಷ್ಟಾಚಾರ ಮುಕ್ತ ವ್ಯವಸ್ಥೆಯನ್ನಾಗಿಸಿ ಎಂದು ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ. ಶ್ರೀನಿವಾಸ ಅವರು ಹೇಳಿದರು.
    ಸಮಾರಂಭದ ಅಧ್ಯಕ್ಷತೆಯನ್ನು  ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಸ್.ಹೆಚ್. ಇಂಗಳದಾಳ ಅವರು ವಹಿಸಿದ್ದರು.  ಸಿವಿಲ್ ನ್ಯಾಯಾಧೀಶರಾದ ವಿಜಯ ಕುಮಾರ ಕನ್ನೂರು, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಮನುಶರ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.  ವಕೀಲರಾದ ಎಂ. ಹನುಮಂತರಾವ್ ಅವರು ಹೆಣ್ಣುಮಕ್ಕಳ ರಕ್ಷಣೆ ಮತ್ತು ಸಮಾಜದ ಹೊಣೆ ಕುರಿತು ಹಾಗೂ ಗೌರಮ್ಮ ದೇಸಾಯಿ ಅವರು ಅಪ್ರಾಪ್ತ ವಯಸ್ಕ ಮಕ್ಕಳ ಸಂಬಂಧ ಕಾನೂನು ಕುರಿತು ವಿಶೇಷ ಉಪನ್ಯಾಸ ನೀಡಿದರು.    

ಕನ್ನಡ ರಾಜ್ಯೋತ್ಸವದ ಅಂಗವಾಗಿ ನ. 01 ರಂದು ಭುವನೇಶ್ವರಿ ದೇವಿ ಭಾವಚಿತ್ರ ಮೆರವಣಿಗೆ


ಕೊಪ್ಪಳ ಅ. 31 (ಕರ್ನಾಟಕ ವಾರ್ತೆ): ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನ. 01 ರಂದು ಬೆಳಿಗ್ಗೆ 7 ಗಂಟೆಗೆ ಕನ್ನಡ ತಾಯಿ ಭುವನೇಶ್ವರಿ ದೇವಿ ಭಾವಚಿತ್ರದ ಮೆರವಣಿಗೆಗೆ ನಗರದ ತಹಸಿಲ್ದಾರ್ ಕಚೇರಿ ಆವರಣದಲ್ಲಿ ಚಾಲನೆ ದೊರೆಯಲಿದೆ.
     ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿಯನ್ನು ಬಿಂಬಿಸುವ ಸ್ತಬ್ಧಚಿತ್ರಗಳು, ಕನ್ನಡ ನಾಡಿನ ಸಾಧಕರನ್ನು ಬಿಂಬಿಸುವ ಸ್ತಬ್ಧಚಿತ್ರಗಳು, ಕಲಾತಂಡಗಳು ಪಾಲ್ಗೊಳ್ಳಲಿವೆ.  ಮೆರವಣಿಗೆಯು ತಹಸಿಲ್ದಾರರ ಕಚೇರಿ ಆವರಣ, ರಾಷ್ಟ್ರೀಯ ಹೆದ್ದಾರಿ ಮೂಲಕ ಜಿಲ್ಲಾ ಕ್ರೀಡಾಂಗಣದವರೆಗೆ ಸಾಗಿಬರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಅಲ್ಪಸಂಖ್ಯಾತರ ಯುವಕ/ ಯುವತಿಯರಿಗೆ ವಿವಿಧ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ ಅ. 31 (ಕರ್ನಾಟಕ ವಾರ್ತೆ): ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಅಲ್ಪಸಂಖ್ಯಾತರ ಯುವಕ/ ಯುವತಿಯರಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ವಿವಿಧ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. 
    ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯ ಯುವಕ/ ಯುವತಿಯರಿಗೆ ಯಲಬುರ್ಗಾ ತಾಲೂಕಿನ ಎ.ಸಿ.ಸಿ.ಪಿ.ಎಲ್ ಟ್ರೈನಿಂಗ್ ಡಿವಿಜನ್, ಸಿಸ್‍ಕಾನ್ ಕಂಪ್ಯೂಟರ್ಸ್‍ನಲ್ಲಿ “ಕಂಪ್ಯೂಟರ್ ಹಾರ್ಡ್‍ವೇರ್ ಅಸಿಸ್ಟಂಟ್” ಕೋರ್ಸ, ಕೊಪ್ಪಳದ ಎ.ಸಿ.ಸಿ.ಪಿ.ಎಲ್ ಟ್ರೈನಿಂಗ್ ಡಿವಿಜನ್, ರಾಮನ್ ಕಂಪ್ಯೂಟರ್ಸ್‍ನಲ್ಲಿ 8ನೇ ತರಗತಿ ವಿದ್ಯಾರ್ಹತೆ ಹೊಂದಿದವರಿಗೆ “ಅಸಿಸ್ಟಂಟ್ ಸೋಲಾರ್ ಪಿ.ವಿ ಟೆಕ್ನಿಕಲ್” ಕೋರ್ಸ, ಕೊಪ್ಪಳದ ಎ.ಸಿ.ಸಿ.ಪಿ.ಎಲ್ ಟ್ರೈನಿಂಗ್ ಡಿವಿಜನ್, ಎಸ್.ಎಸ್ ಎಜುಕೇಶನ್ ಸೊಸೈಟಿಯಲ್ಲಿ  ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿದವರಿಗೆ “ಕಂಪ್ಯೂಟರ್ ಹಾರ್ಡ್‍ವೇರ್ ಅಸಿಸ್ಟಂಟ್” 8ನೇ ತರಗತಿ ವಿದ್ಯಾರ್ಹತೆ ಹೊಂದಿದವರಿಗೆ “ಅಸಿಸ್ಟಂಟ್ ಸೋಲಾರ್ ಪಿ.ವಿ ಟೆಕ್ನಿಕಲ್” ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿದವರಿಗೆ ಬ್ಯೂಟಿ ಥೇರಪಿಸ್ಟ್ & ಹೇರ್ ಸ್ಟೈಲಿಂಗ್ ಲೆವೆಲ್-1 ಕೋರ್ಸ್‍ಗಳು.  ಗಂಗಾವತಿಯ ಎ.ಸಿ.ಸಿ.ಪಿ.ಎಲ್ ಟ್ರೈನಿಂಗ್ ಡಿವಿಜಂನ್, ಹುಮಾ ವುಮೆನ್ ಮೈನೊರಿಟೀಸ್ ರೂರಲ್ ಡೆವೆಲೆಪ್‍ಮೆಂಟ್ ಸೊಸೈಟಿಯಲ್ಲಿ ಹಾಗೂ ಎನ್-ಟೀಚ್ ಕಂಪ್ಯೂಟರ್ ಸೆಂಟರ್‍ನಲ್ಲಿ  ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯ ಯುವಕ/ ಯುವತಿಯರಿಗೆ ಕಂಪ್ಯೂಟರ್ ಹಾರ್ಡ್‍ವೇರ್ ಅಸಿಸ್ಟಂಟ್” ಕೋರ್ಸಗಳ ತರಬೇತಿಯನ್ನು ನೀಡಲಾಗುವುದು. 
    ಅರ್ಜಿ ಸಲ್ಲಿಸಲು ನವೆಂಬರ್. 10 ಕೊನೆಯ ದಿನವಾಗಿದ್ದು, ತರಬೇತಿ ಸಂಸ್ಥೆಗಳಲ್ಲಿಯೇ ಅರ್ಜಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಅಥವಾ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಗಂಗಾವತಿ ಮತ್ತು ಯಲಬುರ್ಗಾದಲ್ಲಿ ಮಾಹಿತಿಯನ್ನು ಪಡೆಯಬಹುದು ಎಂದು ಇಲಾಖಾ ಜಿಲ್ಲಾ ಅಧಿಕಾರಿ ಮಹಿಮೂದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

Monday, 30 October 2017

ಮನೋರೋಗದ ಬಗ್ಗೆ ಜಾಗೃತಿ ಅತ್ಯವಶ್ಯಕ : ರಾಜೀವ್ ಗುರುನಾಥ ಜೋಶಿ


ಕೊಪ್ಪಳ ಅ. 30 (ಕರ್ನಾಟಕ ವಾರ್ತೆ): ಮನೋರೋಗವು ವ್ಯಾಪಕವಾಗಿದ್ದು, ಈ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರಾಜೀವ ಗುರುನಾಥ ಜೋಷಿ ಅವರು ಹೇಳಿದರು. 
    ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ” ಅಂಗವಾಗಿ ಸಾಕ್ಷಿದಾರರ ಮೊಗಸಾಲೆ, ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸೋಮವಾರಂದು ಹಮ್ಮಿಕೊಳ್ಳಲಾಗಿದ್ದ, “ಕಾನೂನು ಅರಿವು-ನೆರೆವು” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 
    ಮಾನಸಿಕ ಕಾಯಿಲೆಯಿಂದ ಮನುಷ್ಯ ದುಷ್ಚಟಗಳಿಗೆ ಬಲಿಯಾಗುತ್ತಾನೆ.  ಮಾನಸಿಕ ಆರೋಗ್ಯದ ಕಾಳಜಿಯಲ್ಲಿ ಎಲ್ಲರೂ ಅವಶ್ಯಕವಾಗಿ ಸಕಾಲಕ್ಕೆ ವೈದ್ಯರಲ್ಲಿ ಪರೀಕ್ಷಿಸಿ ಚಿಕಿತ್ಸೆ ಪಡೆಯಬೇಕು.  ಕಾರ್ಯ ಸ್ಥಳದಲ್ಲಿ ಯಾವುದೇ ಒತ್ತಡಗಳಿಗೆ ಬಳಲದೇ ಮಾನಸಿಕವಾಗಿ ಸದೃಡತೆಯನ್ನು ಕಾಪಾಡಿಕೊಳ್ಳಬೇಕು.  ಕಾನೂನಿನಲ್ಲಿ ಮನೋರೋಗಿಗಳಿಗೆ ವಿಶೇಷ ಚಿಕಿತ್ಸೆ ನೀಡಲು ಅವಕಾಶವಿದ್ದು, ಇದರ ಸದಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರಾಜೀವ ಗುರುನಾಥ ಜೋಷಿ ಅವರು ಸಲಹೆ ನೀಡಿದರು.
    ಸಮಾರಂಭದ ಅಧ್ಯಕ್ಷತೆ ವಹಿಸಿದ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹೆಚ್. ಅವರು ಮಾತನಾಡಿ, “ಕಾರ್ಯ ಸ್ಥಳದಲ್ಲಿ ಮಾನಸಿಕ ಆರೋಗ್ಯ” ಎಂಬುವುದು ಈ ವರ್ಷದ ಘೋಷಣೆ ವಾಕ್ಯವಾಗಿದ್ದು, ಕೆಲಸದ ಒತ್ತಡದಿಂದ ಬಳಲದೇ ಎಲ್ಲರೂ ಮಾನಸಿಕ ರೋಗದಿಂದ ಮುಕ್ತರಾಗಿ, ಸಹ ಬಾಳ್ವೆಯನ್ನು ನಡೆಸಿ, ಸಂತೋಷದಿಂದ ಬದುಕಬೇಕು ಎಂಬುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.  ಇಂದಿನ ದಿನಗಳಲ್ಲಿ ಎಲ್ಲರೂ ಒಂದಲ್ಲ ಒಂದು ಸಮಸ್ಯೆಗಳಿಗೆ ಒಳಗೊಳ್ಳುತ್ತಿದ್ದು, ನಮ್ಮ ಮನಸ್ಥಿತಿ ಸುಧಾರಿಸಿಕೊಳ್ಳಬೇಕು.  ಹಾಗೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದರ ಮೂಲಕ ಉತ್ತಮ ಆರೋಗ್ಯದ ಜೊತೆ ಮಾನಸಿಕ ಸದೃಡತೆಯನ್ನು ಕಾಪಾಡಿಕೊಳ್ಳಬೇಕು.  ಮಾನಸಿಕ ರೋಗದ ಬಗ್ಗೆ ಮೂಢನಂಬಿಕೆಗಳಿಗೆ ಒಳಗಾಗದೆ, ಸೂಕ್ತ ಕಾಲದಲ್ಲಿ ಚಿಕಿತ್ಸೆ ಕೊಡಿಸಲು ಸಾರ್ವಜನಿಕರು ಮುಂದಾಗಬೇಕು ಎಂದರು.
    ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಮಾನಸಿಕ ತಜ್ಞರಾದ ಡಾ. ಕೃಷ್ಣ ಓಂಕಾರ ಅವರು ಮಾನಸಿಕ ರೋಗದ ವ್ಯಕ್ತಿತ್ವ ವಿಚಾರಗಳು ಹಾಗೂ ಮನರೋಗ ನಿಯಂತ್ರಣ ಹಾಗೂ ಚಿಕಿತ್ಸೆ ಕುರಿತು ವಿಶೇಷ ಉಪನ್ಯಾಸ ನೀಡಿದರು.  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ. ಶ್ರೀನಿವಾಸ, ಸಿವಿಲ್ ನ್ಯಾಯಾಧೀಶರಾದ ವಿಜಯ ಕುಮಾರ ಕನ್ನೂರು, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಮನುಶರ್ಮ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ದಾನರೆಡ್ಡಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಎಸ್.ಕೆ ದೇಸಾಯಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಬಸಪ್ಪ ಎಸ್. ಕಂಪ್ಲಿ, ಜಿಲ್ಲಾ ಸರ್ಕಾರಿ ವಕೀಲ ಆಸೀಫ್ ಅಲಿ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಕೊಟ್ರೇಶ ಯು. ಪೋಚಗುಂಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  ಕಾರ್ಯಕ್ರಮವನ್ನು ವಕೀಲರಾದ ಎಂ. ಹನುಮಂತರಾವ್ ನಿರೂಪಿಸಿದರು.  ಸೈಕಾಟ್ರಿಕ್ ಸೋಶಿಯಲ್ ವೆಲ್‍ಫೇರ್ ಆಫೀಸರ್ ಗವಿಸಿದ್ದಪ್ಪ ಕೊನೆಯಲ್ಲಿ ವಂದಿಸಿದರು.    

ನ. 06 ರಂದು ವಿಜೃಂಭಣೆಯಿಂದ ಭಕ್ತ ಕನಕದಾಸರ ಜಯಂತಿ ಆಚರಣೆ- ಡಾ. ರುದ್ರೇಶ್ ಘಾಳಿ

ಕೊಪ್ಪಳ, ಅ. 30 (ಕರ್ನಾಟಕ ವಾರ್ತೆ) : ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯನ್ನು ನ. 06 ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ವಿಜೃಂಭಣೆಯ ಜೊತೆಗೆ ಅರ್ಥಪೂರ್ಣ ರೀತಿಯಲ್ಲಿ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುವುದು ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು.

     ಭಕ್ತ ಕನಕದಾಸರ ಜಯಂತಿ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಭಕ್ತ ಶ್ರೇಷ್ಠ ಕನಕದಾಸರು ಇಡೀ ಜಗತ್ತಿಗೆ ಅನ್ವಯವಾಗುವ ತತ್ವ ಸಂದೇಶಗಳನ್ನು ನೀಡಿದ್ದಾರೆ.  ಅವರ ಆದರ್ಶ ಹಾಗೂ ಅವರು ನಡೆದುಕೊಂಡು ಬಂದ ರೀತಿ ನೀತಿಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ರೀತಿಯಲ್ಲಿ ಅವರ ಜಯಂತಿ ಆಚರಣೆಯನ್ನು ಮಾಡಬೇಕಿದೆ.  ಕನಕದಾಸರ ಅಂಗವಾಗಿ ನ. 06 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸಿರಸಪ್ಪಯ್ಯ ಮಠ ಆವರಣದಿಂದ ಕನಕದಾಸರ ಭಾವಚಿತ್ರ ಸಹಿತ ಮೆರವಣಿಗೆಯನ್ನು ಪ್ರಾರಂಭಿಸಲಾಗುವುದು.  ಇದಕ್ಕೂ ಪೂರ್ವದಲ್ಲಿ ಬಸ್‍ಸ್ಟ್ಯಾಂಡ್ ಬಳಿಯ ಕನಕದಾಸರ ವೃತ್ತದಲ್ಲಿನ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಗುವುದು.  ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಸೇರಿದಂತೆ ಹಲವಾರು ವೈವಿಧ್ಯಮಯ ಜಾನಪದ ಕಲಾ ತಂಡಗಳು ಪಾಲ್ಗೊಳ್ಳಲಿದ್ದು, ಮೆರವಣಿಗೆಯನ್ನು ಆಕರ್ಷಕಗೊಳಿಸಲಿದೆ.  ಮೆರವಣಿಗೆಯು ಸಿರಸಪ್ಪಯ್ಯನ ಮಠ ಬಳಿಯಿಂದ ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ನಗರದ ಸಾರ್ವಜನಿಕ ಮೈದಾನ (ಬಾಲಕಿಯರ ಪ.ಪೂ. ಕಾಲೇಜು ಮೈದಾನ) ತಲುಪಲಿದೆ.  ಜಯಂತಿಯನ್ನು ಸಮಾಜದ ಮುಖಂಡರ ಮನವಿ ಮೇರೆಗೆ ಅಂದು ಮಧ್ಯಾಹ್ನ 01 ಗಂಟೆಗೆ ಸಾಹಿತ್ಯ ಭವನದ ಬದಲಿಗೆ ನಗರದ ಸಾರ್ವಜನಿಕ ಮೈದಾನದಲ್ಲಿ ವೇದಿಕೆ ಸಮಾರಂಭ ಜರುಗಲಿದ್ದು, ಗಣ್ಯಾತಿಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.  ವಿವಿಧ ಕ್ಷೇತ್ರಗಳಲ್ಲಿನ ಸ್ಪರ್ಧೆಗಳಲ್ಲಿ ಜಿಲ್ಲೆಗೆ ಕೀರ್ತಿ ತಂದವರನ್ನು ಸನ್ಮಾನಿಸಲಾಗುವುದು.  ಎಲ್ಲ ಸಮುದಾಯದ ಮುಖಂಡರು, ಸಂಘಟನೆಗಳು ಭಕ್ತ ಕನಕದಾಸರ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು, ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಮನವಿ ಮಾಡಿದರು.
     ಕೊಪ್ಪಳ ಶಾಸಕರಾದ ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಕನಕದಾಸರ ಜಯಂತಿ ಆಚರಣೆಗೆ ನಂದಿಕೋಲು, ಡೊಳ್ಳು ಕುಣಿತ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾಂಸ್ಕøತಿಕ ಕಲಾತಂಡಗಳನ್ನು ಆಯೋಜಿಸಲಾಗುವುದು.  ಅಲ್ಲದೆ ಸಮಾಜದ ವತಿಯಿಂದ ಮಹಿಳೆಯರಿಂದ ಪೂರ್ಣ ಕುಂಭ ಮೆರವಣಿಗೆಯನ್ನೂ ಸಹ ಆಯೋಜಿಸಲಾಗುವುದು.  ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸುವುದಕ್ಕೆ ಸಂಬಂಧಿಸಿದಂತೆ ಎಲ್ಲ ಸಮಾಜದ ಮುಖಂಡರು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮನವಿ ಮಾಡಿದರು.
     ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್ ಅವರು ಮಾತನಾಡಿ, ಭಕ್ತ ಕನಕದಾಸರ ವೃತ್ತದ ಬಳಿ ಸ್ವಚ್ಛತೆಯನ್ನು ಕೈಗೊಳ್ಳಬೇಕು.  ಅಲ್ಲದೆ ಸಾರ್ವಜನಿಕ ಮೈದಾನವನ್ನು ಸ್ವಚ್ಛಗೊಳಿಸಬೇಕು.  ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರಿಗೆ ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಕನಕದಾಸರ ಜೀವನ ಹಾಗೂ ಅವರ ತತ್ವಾದರ್ಶಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಲು  ಹಂಪಿ ಕನ್ನಡ ವಿವಿ ಭಾಷಾಂತರ ವಿಭಾಗದ ಮುಖ್ಯಸ್ಥ ಡಾ. ವಿಠ್ಠಲರಾವ್ ಗಾಯಕ್ವಾಡ್ ಅವರನ್ನು ಆಹ್ವಾನಿಸಲು ನಿರ್ಧರಿಸಲಾಯಿತು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಸ್ಮಮ್ಮ ನೀರಲೂಟಿ, ಜಿ.ಪಂ. ಸದಸ್ಯ ಹನುಮಂತಗೌಡ ಚಂಡೂರ, ನಗರಸಭೆ ಸದಸ್ಯ ಅಮ್ಜದ್ ಪಟೇಲ್, ವಿವಿಧ ಸಮಾಜದ ಮುಖಂಡರುಗಳಾದ ವಿಠ್ಠಪ್ಪ ಗೋರಂಟ್ಲಿ, ಶಿವಾನಂದ ಹೊದ್ಲೂರು, ಮಂಜುನಾಥ ಗೊಂಡಬಾಳ, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ನವೆಂಬರ್. 01 ರಂದು ಕೊಪ್ಪಳದಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ


ಕೊಪ್ಪಳ ಅ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ನವೆಂಬರ್. 01 ರಂದು ಬೆಳಿಗ್ಗೆ 09-00 ಗಂಟೆಗೆ ಕೊಪ್ಪಳ-ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
    ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಧ್ವಜಾರೋಹಣ ನೆರೆವೇರಿಸುವರು.  ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ್, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ್ ಎಸ್. ತಂಗಡಗಿ, ಇಕ್ಬಾಲ್ ಅನ್ಸಾರಿ ಹಾಗೂ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ ಹಾಗೂ ಶರಣಪ್ಪ ಮಟ್ಟೂರ, ಜಿ.ಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ ಖಾದ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹಾದೇವನ್ ಪಾಲ್ಗೊಳ್ಳುವರು.
ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ವಿವಿಧ ಶಾಲಾ ಮಕ್ಕಳು, ಪೊಲೀಸ್, ಎನ್.ಸಿ.ಸಿ. ಸೇವಾದಳ, ಭಾರತ್ ಸ್ಕೌಟ್ಸ್ ಮತ್ತು ಗೈಟ್ಸ್ ಹಾಗೂ ಗೃಹ ರಕ್ಷಕ ದಳದಿಂದ ಪಥಸಂಚಲನ, ಗೌರವ ರಕ್ಷೆ ಸ್ವೀಕಾರ ಕಾರ್ಯಕ್ರಮ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಗರೀಕರಿಗೆ ಹಾಗೂ ಮಕ್ಕಳಿಗೆ ಪ್ರಶಸ್ತಿ, ಸನ್ಮಾನ ಕಾರ್ಯಕ್ರಮ ನಡೆಯಲಿದೆ.  ಅಂದು ಸಂಜೆ 06-00 ಗಂಟೆಯಿಂದ ನಗರದ ಸಾಹಿತ್ಯ ಭವನದಲ್ಲಿ ದೇಶ ಭಕ್ತಿ ಗೀತೆ, ದೇಶ ಭಕ್ತಿ ನೃತ್ಯಗಳು, ಭರತನಾಟ್ಯ, ಜನಪದ ನೃತ್ಯ ಹಾಗೂ ಸಮೂಹ ಇತ್ಯಾದಿ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.

ನವೆಂಬರ್. 02 ರಂದು ಕೊಪ್ಪಳದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ


ಕೊಪ್ಪಳ ಅ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ ಕಾರ್ಯಕ್ರಮ ನವೆಂಬರ್. 02 ರಂದು ಬೆಳಿಗ್ಗೆ 11-30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.
ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದರ ಖಾದ್ರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಉಮಾ ಮಹದೇವನ್ ಪಾಲ್ಗೊಳ್ಳುವರು.  ಬೆಳಗಾವಿಯ ನಿವೃತ್ತ ತಹಶೀಲ್ದಾರರಾದ ವೈ.ಆರ್. ಪಾಟೀಲ ಅವರು ಕಿತ್ತೂರು ರಾಣಿ ಚನ್ನಮ್ಮರವರ ಕುರಿತು ವಿಶೇಷ ಉಪನ್ಯಾಸ ನೀಡುವರು.
ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ 08-30 ಗಂಟೆಗೆ ಕಿತ್ತೂರು ರಾಣಿ ಚನ್ನಮ್ಮರವರ ಭಾವಚಿತ್ರದ ಮೆರವಣಿಗೆ ಕೊಪ್ಪಳದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಪ್ರಾರಂಭಗೊಂಡು, ಗಡಿಯಾರ ಕಂಬದ ಮಾರ್ಗವಾಗಿ ಜವಾಹರ ರಸ್ತೆಯ ಮೂಲಕ ಸಾಹಿತ್ಯ ಭವನದ ವರೆಗೆ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ. 

ನ. 20 ರಂದು ಕೊಪ್ಪಳದಲ್ಲಿ ಟಿಪ್ಪುಸುಲ್ತಾನ್ ಜಯಂತಿ ಅದ್ದೂರಿ ಆಚರಣೆ- ಡಾ. ರುದ್ರೇಶ್ ಘಾಳಿ

ಕೊಪ್ಪಳ ಅ. 30 (ಕರ್ನಾಟಕ ವಾರ್ತೆ): ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಅವರ ಜನ್ಮ ದಿನಾಚರಣೆಯನ್ನು ನ. 20 ರಂದು ಸರ್ಕಾರಿ ಕಾರ್ಯಕ್ರಮವನ್ನಾಗಿ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು.
 
     ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 
     ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದ್ದು ಸಮಾಜದ ಮುಖಂಡರ ಮನವಿ ಮೇರೆಗೆ ನ. 10 ರ ಬದಲಿಗೆ ನ. 20 ರಂದು ಅದ್ಧೂರಿಯಾಗಿ ಆಚರಿಸಲಾಗುವುದು.   ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ನ. 20 ರಂದು ಬೆಳಿಗ್ಗೆ 9 ಗಂಟೆಗೆ ನಗರ ಪೊಲೀಸ್ ಠಾಣೆ ಬಳಿಯ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಗಣ್ಯಮಾನ್ಯರಿಂದ ಹೂಮಾಲೆ ಅರ್ಪಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಗುವುದು.    ಬೆ. 10-30 ಗಂಟೆಗೆ ಸಾಹಿತ್ಯ ಭವನದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ವೇದಿಕೆ ಸಮಾರಂಭ ಜರುಗಲಿದ್ದು, ಸಮಾರಂಭದಲ್ಲಿ ಗಣ್ಯಾತಿಗಣ್ಯರೆಲ್ಲರು ಭಾಗವಹಿಸಲಿದ್ದಾರೆ.   ಮೈಸೂರು ಹುಲಿ ಟಿಪ್ಪುಸುಲ್ತಾನ್ ಅವರ ಜೀವನ ಚರಿತ್ರೆ ಕುರಿತು ಹಾಗೂ ಜಯಂತಿ ಕಾರ್ಯಕ್ರಮದ ಮಹತ್ವ ಕುರಿತಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಸಾರ್ವಜನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಟಿಪ್ಪು ಸುಲ್ತಾನ್ ಜಯಂತಿಯನ್ನು  ಅರ್ಥಪೂರ್ಣವಾಗಿ ಹಾಗೂ ಶಾಂತಿ ಸೌಹಾರ್ದತೆಯೊಂದಿಗೆ ಆಚರಿಸಲು ಎಲ್ಲ ಸಮುದಾಯದವರು ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಮನವಿ ಮಾಡಿದರು.  
     ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಸರ್ಕಾರಿ ಕಾರ್ಯಕ್ರಮವಾಗಿರುವುದರಿಂದ ಜಿಲ್ಲೆಯ ಎಲ್ಲ ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ನ. 10 ರಂದೇ ಕಡ್ಡಾಯವಾಗಿ ಆಚರಿಸಲು ಸೂಕ್ತ ನಿರ್ದೇಶನವನ್ನು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಸೂಚನೆ ನೀಡಿದರು.
    ಸಭೆಯಲ್ಲಿ ಕೊಪ್ಪಳ ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ವಿವಿಧ ಇಲಾಖೆಗಳ ಅಧಿಕಾರಿಗಳು  ಸಮಾಜದ ಮುಖಂಡರುಗಳಾದ ಕೆ.ಎಂ. ಸೈಯದ್, ಅಮ್ಜದ್ ಪಟೇಲ್, ಪಾಶಾ ಕಾಟನ್, ಮಾನ್ವಿ ಪಾಶಾ, ಬಾಷುಸಾಬ್ ಖತೀಬ್, ಶಾಬುದ್ದೀನ್ ಸಾಬ್, ಜಿಲಾನ್ ಕಿಲ್ಲಾದಾರ, ಇಬ್ರಾಹಿಂ ಕಿಲ್ಲೇದಾರ, ಶಿವಾನಂದ ಹೊದ್ಲೂರ, ವಿಠ್ಠಪ್ಪ ಗೋರಂಟ್ಲಿ, ಮಂಜುನಾಥ ಗೊಂಡಬಾಳ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಕುರಿತು ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

Sunday, 29 October 2017

ಅ. 31 ರಂದು ರಾಷ್ಟ್ರೀಯ ಏಕತಾ ಹಾಗೂ ಸಂಕಲ್ಪ ದಿವಸ್ ಆಚರಣೆ


ಕೊಪ್ಪಳ ಅ.29 (ಕರ್ನಾಟಕ ವಾರ್ತೆ ): ಸರ್ಕಾರದ ನಿರ್ದೇಶನದಂತೆ ಅ. 31 ರಂದು ಕೊಪ್ಪಳದಲ್ಲಿ ರಾಷ್ಟ್ರೀಯ ಏಕತಾ ದಿವಸ್ ಹಾಗೂ ರಾಷ್ಟ್ರೀಯ ಸಂಕಲ್ಪ ದಿವಸ ಆಚರಣೆ ನಡೆಯಲಿದೆ.
     ರಾಷ್ಟ್ರೀಯ ಏಕತಾ ದಿವಸ್ ಆಚರಣೆ ಅಂಗವಾಗಿ ಅಂದು ಬೆಳಿಗ್ಗೆ 8 ಗಂಟೆಗೆ ನಗರದ ಗಡಿಯಾರ ಕಂಬದಿಂದ ಜವಾಹರ ರಸ್ತೆ ಮಾರ್ಗವಾಗಿ ಅಶೋಕ ವೃತ್ತದವರೆಗೆ ಏಕತೆ ಓಟ ಹಮ್ಮಿಕೊಳ್ಳಲಾಗಿದೆ.  ರಾಷ್ಟ್ರೀಯ ಸಂಕಲ್ಪ ದಿವಸ್ ಆಚರಣೆ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ರಾಷ್ಟ್ರೀಯ ಸಂಕಲ್ಪ ದಿವಸ್‍ನ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಜರುಗಲಿದೆ.  ಈ ಎರಡೂ ಕಾರ್ಯಕ್ರಮಗಳಲ್ಲಿ ಎಲ್ಲ ಸಾರ್ವಜನಿಕರು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ವಿವಿಧ ಸಮಾಜದ ಮುಖಂಡರುಗಳು ಪಾಲ್ಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಮನವಿ ಮಾಡಿದ್ದಾರೆ.

ನ. 01 ರಿಂದ ಜಾನುವಾರುಗಳಿಗೆ ಕಾಲು-ಬಾಯಿ ಜ್ವರ ರೋಗ ನಿರೋಧಕ ಲಸಿಕೆ ಕಾರ್ಯಕ್ರಮ


ಕೊಪ್ಪಳ ಅ. 29 (ಕರ್ನಾಟಕ ವಾರ್ತೆ): ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಕಾಲು ಬಾಯಿ ರೋಗ ನಿಯಂತ್ರಣ ಯೋಜನೆಯಡಿ ಜಿಲ್ಲೆಯಲ್ಲಿ ನ. 01 ರಿಂದ 25 ರವರೆಗೆ ಉಚಿತವಾಗಿ ಕಾಲು-ಬಾಯಿ ಜ್ವರ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ 2. 90 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
     ಕಾಲು ಬಾಯಿ ಜ್ವರ ರೋಗವು ದನ, ಎಮ್ಮೆ, ಹಂದಿ, ಜಿಂಕೆ ಮತ್ತು ಇತರೆ ಸೀಳು ಗೊರಸಿನ ರಾಸುಗಳಲ್ಲಿ ಪಿಕಾರ್ನೋ ವೈರಾಣುವಿನಿಂದ ಉಟಾಗುವ ಸಾಂಕ್ರಾಮಿಕ ರೋಗವಾಗಿದೆ.  ಈ ರೋಗವು ಅಂಟು ಜಾಡ್ಯವಾಗಿದ್ದು, ರೋಗಗ್ರಸ್ತ ರಾಸುವಿನ ಸಂಪರ್ಕ, ಆಹಾರ, ಗಾಳಿ ಮತ್ತು ನೀರಿನ ಮೂಲಕ ರಾಸುವಿನಿಂದ ರಾಸುವಿಗೆ ಹರಡುತ್ತದೆ.  ಕಾಲು-ಬಾಯಿ ಜ್ವರದ ತೀವ್ರ ಪರಿಣಾಮ ಸಂದರ್ಭದಲ್ಲಿ ಕೆಲವೊಮ್ಮೆ ಜಾನುವಾರುಗಳು ಮರಣವನ್ನಪ್ಪುತ್ತವೆ.  ರೋಗದಿಂದ ಚೇತರಿಸಿಕೊಂಡ ರಾಸುಗಳ ಉತ್ಪನ್ನ ಸಾಮಥ್ರ್ಯ ಕಡಿಮೆಯಾಗುವುದಲ್ಲದೆ, ಹಸು/ಎಮ್ಮೆಗಳಲ್ಲಿ ಗರ್ಭ ಕಟ್ಟುವ ತೊಂದರೆಗಳು ಉಂಟಾಗುತ್ತವೆ.  ಗರ್ಭಪಾತ ಉಂಟಾಗುವ ಸಂಭವ ಇರುತ್ತದೆ.  ಹೋರಿ/ಎತ್ತುಗಳಲ್ಲಿ ಕೆಲಸ ಮಾಡುವ ಸಾಮಥ್ರ್ಯ ಕ್ಷೀಣಿಸುತ್ತದೆ.  ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ.  ಕಾಲು-ಬಾಯಿ ಜ್ವರದ ವಿರುದ್ಧ ನಿಯಮಿತವಾಗಿ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಈ ರೋಗವನ್ನು ತಹಬದಿಗೆ ತರಬಹುದಾಗಿದ್ದು, ಈ ನಿಟ್ಟಿನಲ್ಲಿ ಸದ್ಯ ಉಚಿತ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.  ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯನ್ನು ತಾಲೂಕುವಾರು, ಗ್ರಾಮವಾರು ಸಿದ್ಧಪಡಿಸಲಾಗಿದ್ದು, ಪಶುಪಾಲನಾ ಇಲಾಖೆ ಅಧಿಕಾರಿ/ಸಿಬ್ಬಂದಿಯನ್ನು ಒಳಗೊಂಡ ಲಸಿಕಾ ತಂಡಗಳು ನಿಗದಿತ ವೇಳಾಪಟ್ಟಿಯಂಗತೆ ಆಯಾ ಗ್ರಾಮಗಳಿಗೆ ಭೇಟಿ ನೀಡಿ, ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುವುದು.  ಈ ಲಸಿಕೆ ಹಾಕುವುದರಿಂದ ಹಾಲು ಕಡಿಮೆಯಾಗುವಾಗಲಿ, ಗರ್ಭಪಾತವಾಗುವುದಾಗಲಿ ಆಗುವುದಿಲ್ಲ.  ರೈತರು ಇಂತಹ ಯಾವುದೇ ಮೂಢನಂಬಿಕೆ, ತಪ್ಪು ಗ್ರಹಿಕೆಗೆ ಒಳಗಾಗದೆ ತಮ್ಮ ಜಾನುವಾರುಗಳಿಗೆ ತಪ್ಪದೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, 28 October 2017

ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಅ. 28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅ. 31 ರಿಂದ ನ. 06 ರವರೆಗೆ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
    ಬಸವರಾಜ ರಾಯರಡ್ಡಿ ಅವರು ಹುಬ್ಬಳಿಯಿಂದ ಹೊರಟು ಅ. 31 ರಂದು ರಾತ್ರಿ 07 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು. ನಂತರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ “ಕೃಷ್ಣ ಮೇಲ್ದಂಡೆ ಯೋಜನೆ” ಹಂತ-3 ಕ್ಕೆ ಭೂಸ್ವಾಧಿನ ಪಡಿಸಿಕೊಳ್ಳುವ ಜಮೀನಿಗೆ ಭೂ ಪರಿಹಾರ ದರವನ್ನು ನಿಗದಿಪಡಿಸುವ ಕುರಿತು ಸಚಿವ ಸಂಪುಟ ಉಪಸಮಿತಿ ಸಭೆಯ ಕುರಿತು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುವರು.  ಮಂತ್ರಿಗಳು ಅಂದು ಕೊಪ್ಪಳದಲ್ಲಿ ವಾಸ್ತವ್ಯ ಮಾಡುವರು.  ನ. 01 ರಂದು ಬೆಳಿಗ್ಗೆ 9 ಗಂಟೆಗೆ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುವರು.   ಬೆಳಿಗ್ಗೆ 11-30 ಗಂಟೆಗೆ ಮುನಿರಾಬಾದಗೆ ತೆರಳಿ  ತುಂಗಭದ್ರ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡುವರು.  ಮಧ್ಯಾಹ್ನ 1 ಗಂಟೆಗೆ ಕುಕನೂರಿಗೆ ತೆರಳುವರು.  2-30ಕ್ಕೆ ಯಲಬುರ್ಗಾ ತಹಶಿಲ್ದಾರ ಕಛೇರಿ ಸಭಾಂಗಣದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸುವರು.    ಸಂಜೆ 7-30ಕ್ಕೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. 
    ನವೆಂಬರ್. 2 ರಂದು ಬೆಳಿಗ್ಗೆ 10 ಗಂಟೆ ಕೊಪ್ಪಳದಲ್ಲಿ ಜರುಗಲಿರುವ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.    ಮಧ್ಯಾಹ್ನ 12-45 ಕ್ಕೆ ಕೊಪ್ಪಳದಿಂದ ಆಲಮಟ್ಟಿಗೆ ತೆರಳುವರು.  3 ಗಂಟೆಗೆ ಆಲಮಟ್ಟಿಯಲ್ಲಿ ಕಂದಾಯ ಸಚಿವರು ಮತ್ತು ಸಚಿವ ಸಂಪುಟ ಉಪಸಮಿತಿಯ ಇತರೆ ಸಚಿವರುಗಳೊಂದಿಗೆ ಕೃಷ್ಣ ನದಿಯ ರೈತರ ಸಭೆಯಲ್ಲಿ ಭಾಗವಹಿಸುವರು.  8-30ಕ್ಕೆ ಯಲಬುರ್ಗಾ ತಾಲೂಕು ಹಿರೇವಂಕಲಕುಂಟಾಗೆ ಆಗಮಿಸುವರು. ರಾತ್ರಿ 10 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  
     ನ. 3 ರಂದು ಬೆಳಿಗ್ಗೆ 10 ಕ್ಕೆ ಹಿರೇವಂಕಲಕುಂಟಾಗೆ ತೆರಳಿ ಕಂದಾಯ ಸಚಿವರು ಮತ್ತು ಸಚಿವ ಸಂಪುಟ ಉಪಸಮಿತಿಯ ಇತರೆ ಸಚಿವರುಗಳೊಂದಿಗೆ ಕೃಷ್ಣ ನದಿಯ ರೈತರ ಸಭೆಯಲ್ಲಿ ಭಾಗವಹಿಸುವರು.  ಬೆಳಿಗ್ಗೆ 11-30ಕ್ಕೆ ಕೊಪ್ಪಳದಲ್ಲಿ ಕಂದಾಯ ಸಚಿವರು ಮತ್ತು ಸಚಿವ ಸಂಪುಟ ಉಪಸಮಿತಿಯ ಇತರೆ ಸಚಿವರುಗಳೊಂದಿಗೆ ಕೃಷ್ಣ ನದಿಯ ರೈತರ ಸಭೆಯಲ್ಲಿ ಭಾಗವಹಿಸುವರು.  ಮಂತ್ರಿಗಳು ಅಂದು ಕೊಪ್ಪಳದಲ್ಲಿ ವಾಸ್ತವ್ಯ ಹೂಡುವರು. 
     ನ. 4 ರಿಂದ 06 ರವರೆಗೆ ನಿತ್ಯ ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಜನಸಂಪರ್ಕ ಸಭೆಯಲ್ಲಿ ಭಾಗವಹಿಸುವರು.  ನಂತರ ಯಲಬುರ್ಗಾದಲ್ಲಿ ವಾಸ್ತವ್ಯ ಹೂಡುವರು.  ನ. 5 ಯಲಬುರ್ಗಾ ತಾಲೂಕಿನ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ, ಯಲಬುರ್ಗಾದಲ್ಲಿ ವಾಸ್ತವ್ಯ ಮಾಡುವರು.  ನ. 6 ರಂದು ರಾತ್ರಿ 8-15ಕ್ಕೆ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ತೆರಳುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ : ಅ. 30 ರಂದು ಕೊಪ್ಪಳದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ


ಕೊಪ್ಪಳ ಅ. 28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಕಾನೂನು ಅರಿವು-ನೆರೆವು ಕಾರ್ಯಕ್ರಮವನ್ನು ಅ. 30 ರಂದು ಬೆಳಿಗ್ಗೆ 09-30 ಗಂಟೆಗೆ ಸಾಕ್ಷಿದಾರರ ಮೊಗಸಾಲೆ, ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
    ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರಾಜೀವ ಗುರುನಾಥ ಜೋಷಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸುವರು.  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹೆಚ್. ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸೀನಿಯರ್ ಸಿವಿಲ್ ಜಡ್ಜ್ ಟಿ. ಶ್ರೀನಿವಾಸ, ಸಿವಿಲ್ ಜಡ್ಜ್ ಹಾಗೂ ಜೆ.ಎಂ,ಎಫ್.ಸಿ ವಿಜಯ ಕುಮಾರ ಕನ್ನೂರು, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಮನುಶರ್ಮ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ದಾನರೆಡ್ಡಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಎಸ್.ಕೆ ದೇಸಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ, ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಮಾಂಜನಯ್ಯ, ತಹಶಿಲ್ದಾರ ಗುರುಬಸವರಾಜ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಬಸಪ್ಪ ಎಸ್. ಕಂಪ್ಲಿ, ಜಿಲ್ಲಾ ಸರ್ಕಾರಿ ವಕೀಲ ಆಸೀಫ್ ಅಲಿ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಕೊಟ್ರೇಶ ಯು. ಪೋಚಗುಂಡಿ,  ಭಾಗವಹಿಸುವರು. 
    ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಮಾನಸಿಕ ತಜ್ಞರಾದ ಡಾ. ಕೃಷ್ಣ ಓಂಕಾರ ಅವರು ಮಾನಸಿಕ ರೋಗದ ವ್ಯಕ್ತಿತ್ವ ವಿಚಾರಗಳು ಹಾಗೂ ಮನೋರೋಗ ನಿಯಂತ್ರಣ ಹಾಗೂ ಚಿಕಿತ್ಸೆ ಕುರಿತು, ಹಾಗೂ ವಕೀಲರಾದ ಎಂ. ಹನುಮಂತರಾವ್ ಅವರು ಮಾನಸಿಕ ಆರೋಗ್ಯ ಕಾನೂನು ಅರಿವು-ನೆರವು ಕುರಿತು ವಿಶೇಷ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ. 

ವಿಷನ್ 2025 : ಸಾರ್ವಜನಿಕರಿಗೆ ಆನ್‍ಲೈನ್‍ನಲ್ಲಿ ಸರ್ಕಾರದ ಎಲ್ಲ ಸೇವೆಗಳು ಲಭಿಸಲಿ


ಕೊಪ್ಪಳ ಅ. 28 (ಕರ್ನಾಟಕ ವಾರ್ತೆ): ಸರ್ಕಾರ ಜನರ ಹಿತಕ್ಕಾಗಿ ಜಾರಿಗೊಳಿಸುವ ಎಲ್ಲ ಸೇವೆಗಳ ಸೌಲಭ್ಯ ಆನ್‍ಲೈನ್ ಮೂಲಕವೇ ದೊರೆಯುವಂತಾಗಬೇಕು, ಸರ್ಕಾರಿ ನೌಕರರ ಕಾರ್ಯದಕ್ಷತೆಯ ಮೌಲ್ಯಮಾಪನ ಪ್ರತಿ ವರ್ಷ ನಡೆಯುವಂತಾಗಬೇಕು ಎಂಬ ಅಭಿಪ್ರಾಯ ಸಾರ್ವಜನಿಕರು, ವಿಷಯ ತಜ್ಞರಿಂದ ವ್ಯಕ್ತವಾಯಿತು.
     ಕರ್ನಾಟಕ ವಿಷನ್-2025 ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿ ಅಭಿವೃದ್ಧಿಗಾಗಿ ಜನರ ಅಭಿಪ್ರಾಯ ಸಂಗ್ರಹಣೆ ಕುರಿತು ಜಿಲ್ಲಾಡಳಿತ ಭವನದ ಎನ್‍ಐಸಿ ಸಭಾಂಗಣದಲ್ಲಿ ಜರುಗಿದ ವಿಷಯಾಧಾರಿತ ಗುಂಪು ಚರ್ಚೆಯಲ್ಲಿ ಇಂತಹ ಅಭಿಪ್ರಾಯ ವ್ಯಕ್ತಗೊಂಡವು.
ಆಡಳಿತ : ಎಲ್ಲಾ ಕಛೇರಿಗಳಲ್ಲಿ 2025 ರೊಳಗಾಗಿ ಕಾಗದ ರಹಿತ (ಪೇಪರ್ ಲೆಸ್) ಕಾರ್ಯನಿರ್ವಹಿಸಬೇಕು.  ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಆನ್ ಲೈನ್‍ನಲ್ಲಿ ಎಲ್ಲ ಜನ ಸಾಮಾನ್ಯರು ಪಡೆಯುವಂತಾಗಬೇಕು.  ಸರ್ಕಾರಿ ನೌಕರರ ಕಾರ್ಯದಕ್ಷತೆಯ ಮೌಲ್ಯಮಾಪನ ಪ್ರತಿ ವರ್ಷ ಜರುಗಬೇಕು.  ಪ್ರತಿ ಗ್ರಾ.ಪಂ ಗಳಿಗೆ ಆನ್‍ಲೈನ್ ಸೌಲಭ್ಯ, ಹಾಗೂ ಸಿಸಿ ಕ್ಯಾಮರಾ ಅಳವಡಿಕೆ ಮಾಡಲೇಬೇಕು.  ಎಲ್ಲಾ ವಾಹನಗಳಿಗೆ ಜಿ.ಪಿ.ಎಸ್ ಅಳವಡಿಸುವ ನಿಯಮ ಜಾರಿಗೊಳ್ಳಬೇಕು.   ಎಲ್ಲಾ ಪದವಿ ಕಾಲೇಜುಗಳಲ್ಲೂ 18 ವರ್ಷಕ್ಕಿಂತ ಮೇಲ್ಪಟ್ಟ ಯುವಕ-ಯುವತಿಯರಿಗೆ ಚುನಾವಣಾ ಗುರುತಿನ ಚೀಟಿ ಮತ್ತು ಚಾಲನಾ ಪರವಾನಿಗೆ ಪ್ರಮಾಣ ಪತ್ರ, ಸಂದರ್ಶನ ಮಾಡಿ ವಿತರಿಸುವಂತಾಗಬೇಕು.  ಪ್ರತಿ ಇಲಾಖೆಯ ನೌಕರರ ವರ್ಗಾವಣೆ ನಿಗದಿತ ಅವಧಿ ಅಂದರೆ ಏಪ್ರಿಲ್-ಮೇ ತಿಂಗಳ ಒಳಗೆ ಕಡ್ಡಾಯವಾಗಿ ಕೌನ್ಸಿಲಿಂಗ್ ಮೂಲಕವೇ ಪೂರ್ಣಗೊಳ್ಳಬೇಕು.  ಎಲ್ಲಾ ಗ್ರಾಮಗಳು ಇಂಟರ್‍ನೆಟ್ ಸೌಲಭ್ಯ ಪಡೆದು, ಗ್ರಾಮಗಳಿಂದಲೇ ಸರ್ಕಾರಿ ಸೌಲಭ್ಯಗಳನ್ನು ಪಡೆಯುವಂತಾಗಬೇಕು.  ಚುನಾವಣೆಯಲ್ಲಿ ಎಲ್ಲಾ ಮತದಾನವು ಆನ್‍ಲೈನ್ ಹಾಗೂ ಮೊಬೈಲ್ ಮೂಲಕ ಮತದಾನ ಮಾಡುವಂತಾಗಬೇಕು ಎಂಬ ಸಲಹೆಗಳು ಸಾರ್ವಜನಿಕ ವಲಯದಿಂದ ಕೇಳಿಬಂದವು.
ಕಾನೂನು ಮತ್ತು ನ್ಯಾಯ : ಪ್ರತಿಯೊಬ್ಬ ನಾಗರಿಕನು ತಮ್ಮ ಗ್ರಾಮ, ವಾರ್ಡ, ತಾಲೂಕು ಜಿಲ್ಲಾ ಸಮಸ್ಯೆಗಳನ್ನು ಮೊಬೈಲ್‍ಗಳನ್ನು  ಬಳಸಿ, ಸಂಬಂಧಪಟ್ಟ ಇಲಾಖೆಗಳಿಗೆ ತಲುಪಿಸಿ, ಶೀಘ್ರವಾಗಿ ಕಾರ್ಯ ಪೂರ್ಣಗೊಳಿಸುವ ರೀತಿಯಲ್ಲಿ ತರಬೇತಿ ನೀಡುವುದು.  20 ಸಾವಿರ ಜನಸಂಖ್ಯೆಗಳಿಗೆ ಒಂದು ಪೊಲೀಸ್ ಠಾಣೆ ತೆರಯಬೇಕು.  ಮತ್ತು ಪ್ರತಿ ಠಾಣೆಗೆ 2 ಮಹಿಳಾ ಸಿಬ್ಬಂದಿ ಮಿತಿಗೊಳಿಸಬೇಕು.   ಪೊಲೀಸ್ ಕೇಸ್‍ಗಳಲ್ಲಿ ಎಲ್ಲಾ ಇಲಾಖೆಗಳಿಂದ ವರದಿಯು ಆನ್‍ಲೈನ್ ಮೂಲಕ ನೀಡಿದಲ್ಲಿ ಇತ್ಯರ್ಥಗೊಳಿಸಬಹುದು.  ಆರೋಪಿಯಿಂದ ಸಾಕ್ಷಿಯನ್ನು ವಿಡಿಯೋ ಮೂಲಕ ತೆಗೆದುಕೊಳ್ಳಬೇಕು.  ಇದರಿಂದ ಸಾಕ್ಷಿ ಭದ್ರತೆ ದೊರೆಯುತ್ತದೆ.  ಎಲ್ಲಾ ನ್ಯಾಯಾಲಯಗಳಿಂದಲೂ ಹೊರಡಿಸುವ ಆದೇಶ, ತೀರ್ಪುಗಳನ್ನು ಆನ್‍ಲೈನ್ ಮೂಲಕವೇ ಮಾಹಿತಿ ತಲುಪಿಸಿ, ಕಾರ್ಯ ಕೈಗೊಳ್ಳುವಂತಾಗಬೇಕು.  ವಿಮೆ ಇಲ್ಲದ ವಾಹನಗಳನ್ನು ಪತ್ತೆ ಹಚ್ಚಲು, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು.  ಪ್ರತಿ ತಾಲೂಕು ಕೇಂದ್ರಕ್ಕೆ ಒಂದು ಜೈಲು, ಸೆರೆಮನೆ ತೆರೆಯಬೇಕು.  ಪ್ರತಿ ಆರೋಗ್ಯ ಕೇಂದ್ರದಿಂದಲೂ ಒಂದು ಆಂಬುಲೆನ್ಸ್ ಇರಬೇಕು.  ಜೈಲು ಸುಧಾರಣೆ, ಬಗ್ಗೆ ಕೌನ್ಸಿಲಿಂಗ್, ಮನೋತಜ್ಞರ ಮೂಲಕ ಕೌಶಲ್ಯ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆಗಳು ತಜ್ಞರು, ಸಾರ್ವಜನಿಕರಿಂದ ಕೇಳಿಬಂದವು.
     ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ ಅವರು ಈ ಕ್ಷೇತ್ರಗಳಿಗೆ ಸಂಬಂಧಿಸಿದ ಗುಂಪು ಚರ್ಚೆಯ ನೇತೃತ್ವ ವಹಿಸಿದ್ದರು.  ಉಳಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಹಲವು ನ್ಯಾಯವಾದಿಗಳು ಪಾಲ್ಗೊಂಡಿದ್ದರು.

ಮಿಷನ್-2025 : ಸಾರಿಗೆ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ


ಕೊಪ್ಪಳ ಅ. 28 (ಕರ್ನಾಟಕ ವಾರ್ತೆ):  ರೈತ ಬೆಳೆಯುವ ಬೆಳೆಯನ್ನು ಸೂಕ್ತ ಸಮಯದೊಳಗೆ ನಿಗದಿತ ಸ್ಥಳ ತಲುಪುವಂತಾಗಲು, ರಸ್ತೆ ಅಪಘಾತಗಳ ಪ್ರಮಾಣ ತಗ್ಗಿಸಲು ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಬಹಳಷ್ಟು ಸುಧಾರಿಸಬೇಕಿದೆ ಎಂಬ ಅಭಿಪ್ರಾಯ ಸಾರ್ವಜನಿಕರು, ವಿಷಯ ತಜ್ಞರಿಂದ ವ್ಯಕ್ತವಾಯಿತು.
     ಕರ್ನಾಟಕ ವಿಷನ್-2025 ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿ ಅಭಿವೃದ್ಧಿಗಾಗಿ ಜನರ ಅಭಿಪ್ರಾಯ ಸಂಗ್ರಹಣೆ ಕುರಿತು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ವಿಷಯಾಧಾರಿತ ಗುಂಪು ಚರ್ಚೆಯಲ್ಲಿ ಇಂತಹ ಅಭಿಪ್ರಾಯ ವ್ಯಕ್ತಗೊಂಡವು.
    “ಮಿಷನ್-2025” ಈ ಯೋಜನೆ ಕೊಪ್ಪಳ ಜಿಲ್ಲೆಗೆ ಬಹಳ ಮಹತ್ವದ್ದಾಗಿದ್ದು, ಇದಕ್ಕೆ ಮುಖ್ಯವಾಗಿ ಸಾರಿಗೆ ಸಂಪರ್ಕಕ್ಕೆ ರಸ್ತೆಯು ಅತ್ಯವಶ್ಯಕವಾಗಿ ಬೇಕು.  ಉತ್ತಮವಾದ ರಸ್ತೆಯಿಂದಾಗಿ ರೈತರು ಬೆಳಿಯುವ ಬೆಳೆಗಳನ್ನು (ಫಸಲನ್ನು) ಹಳ್ಳಿಯಿಂದ ಪಟ್ಟಣಕ್ಕೆ ಪಟ್ಟಣಗಳಿಂದ ಜಿಲ್ಲೆಗಳಿಗೆ, ಜಿಲ್ಲೆಗಳಿಂದ ರಾಜ್ಯಕ್ಕೆ, ರಾಜ್ಯಗಳಿಂದ ರಾಷ್ಟ್ರಮಟ್ಟಕ್ಕೆ.  ಅಲ್ಲದೇ ವಿದೇಶಗಳಿಗೂ ರಫ್ತು ಮಾಡಲು ಉತ್ತಮ ರಸ್ತೆಗಳು ಸಹಕಾರಿಯಾಗಲಿವೆ.   ನೈಸರ್ಗೀಕ ಸಂಪತ್ತು ಕೊಪ್ಪಳ ಜಿಲ್ಲೆಯಲ್ಲಿ ಅಧಿಕವಾಗಿದ್ದು, ರಸ್ತೆ ಸಂಪರ್ಕಕ್ಕೆ ಹೆಚ್ಚಿನ ಆಧ್ಯತೆಯನ್ನು ಕೊಡಬೇಕು.  ಜನ ಸಂಖ್ಯೆಗೆ ಅನುಗುಣವಾಗಿ ವಾಹನಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಬೇಕು.   ರಸ್ತೆಗಳ ಬಗ್ಗೆ ಅರಿವು ಮೂಡಿಸಬೇಕು.  ಧೂಳು ಮುಕ್ತ ಪ್ರದೇಶವಾಗಬೇಕಾದರೆ ರಸ್ತೆ ಪಕ್ಕದಲ್ಲಿ ಗಿಡ-ಮರಗಳನ್ನು ಹೆಚ್ಚು-ಹೆಚ್ಚಾಗಿ ನೆಡುವುದು ಬಹುಮುಖ್ಯ.  ರಸ್ತೆಗಳು ಕೇವಲ ವಾಹನಗಳಿಗಲ್ಲದೇ, ಪಾದಚಾರಿಗಳಿಗೂ ಅವಕಾಶ ಇದೆ.  ಅದಕ್ಕಾಗಿ ಫುಟ್‍ಪಾತ್ ನಿರ್ಮಾಣ, ಬೀದಿ ದೀಪಗಳ ಅಳವಡಿಕೆಯಾಗಬೇಕು.  ನಗರ ಪ್ರದೇಶಗಳಲ್ಲಿ ಉತ್ತಮ ರಸ್ತೆಗಳು ನಿರ್ಮಾಣವಾಗಬೇಕಾದರೆ ಸಂಬಂಧಪಟ್ಟ ವಿವಿಧ ಇಲಾಖೆಗಳ ಸೌಹಾರ್ಧ ಚರ್ಚೆಯಾಗಬೇಕು.  ಒಳ ಚರಂಡಿ ವ್ಯವಸ್ಥೆ, ವಿದ್ಯುತ್ ಇತ್ಯಾಧಿಗಳ ಬಗ್ಗೆ ಚರ್ಚೆಯಾಗಬೇಕು.  ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಸರ್ಕಾರ ಸಾವಿರಾರು ಕೋಟಿ ರೂ.ಗಳನ್ನು ಬಿಡುಗಡೆ ಮಾಡುತ್ತಿದ್ದು, ಸರ್ಕಾರದ ಅನುದಾನ ಪೋಲಾಗದಂತೆ ಕ್ರಮ ವಹಿಸಬೇಕು. ಉತ್ತಮ ಗುಣಮಟ್ಟದ ರಸ್ತೆಗಳಾಗಬೇಕಾದರೆ ಸಿ.ಸಿ ರೋಡ್‍ಗಳನ್ನೆ ಮಾಡಬೇಕು.  ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಬದಿಯಲ್ಲಿ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡಬೇಕು   ವಾಹನಗಳಿಗೆ ತಕ್ಕಂತೆ ಪ್ರತ್ಯೆಕ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕು.  ನಗರದ ಹೊರವಲಯದಲ್ಲಿ ಅಟೋ ಟರ್ಮಿನಲ್, ಅಟೋ ನಗರ ನಿರ್ಮಿಸಿ ಭಾರಿ ವಾಹನಗಳ ದುರಸ್ಥಿ, ಇತರೆ ಸೇವೆಗಳಿಗಾಗಿ ಅನುಕೂಲ ಮಾಡಿಕೊಡಬೇಕು ಎಂಬ ಅಭಿಪ್ರಾಯ ವ್ಯಕ್ತವಾದವು.
     ಭಾನಾಪುರ ಮಾರ್ಗದ ಗದಗ-ವಾಡಿ ರೈಲು ಮಾರ್ಗ ಕಾಮಗಾರಿ ಶೀಘ್ರ ಪ್ರಾರಂಭವಾಗಿ, ತ್ವರಿತವಾಗಿ ಪೂರ್ಣಗೊಳ್ಳಬೇಕು.  ಗಿಣಿಗೇರ - ಹರಿಹರ ಹೊಸ ರೈಲು ಮಾರ್ಗವನ್ನು ನಿರ್ಮಾಣ ಮಾಡಬೇಕು  ರೈಲು ನಿಲ್ದಾಣಗಳಲ್ಲಿ ಸ್ವಚ್ಛತೆ, ಕಾನೂನು ವ್ಯವಸ್ಥೆ ಕಲ್ಪಿಸುವುದು.  ಕೊಪ್ಪಳ ಜಿಲ್ಲಾ ಕೇಂದ್ರದಿಂದ ರಾಜ್ಯದ ರಾಜಧಾನಿಗೆ ವಿಮಾನದ ಮೂಲಕ ಹೋಗಲು ಸಂಪರ್ಕಿಸುವ ವ್ಯವಸ್ಥೆ ಕಲ್ಪಿಸಲು ಸಾಧ್ಯವಿದ್ದು, ಇದನ್ನು ಜಾರಿಗೊಳಿಸಬಹುದಾಗಿದೆ.   ಜಿಲ್ಲೆಯಲ್ಲಿ ಪೂರ್ವ-ಪಶ್ಚಿಮ ಹಾಗೂ ಉತ್ತರ-ದಕ್ಷಿಣದಲ್ಲಿ ಪ್ರವಾಸ ಕಾರಿಡಾರ್ ನಿರ್ಮಾಣ ಮಾಡಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು.  ಜಿಲ್ಲೆಯ ಪ್ರತಿ ಹೋಬಳಿಗೆ ಒಂದರಂತೆ ಶೀತಲೀಕರಣ ಘಟಕಗಳನ್ನು ನಿರ್ಮಾಣ ಮಾಡಬೇಕು.  ಹೂ, ಹಣ್ಣು, ತರಕಾರಿ ಹೊರ ರಾಜ್ಯ ಹಾಗೂ ವಿದೇಶಗಳಿಗೆ ಸರಬರಾಜು ಮಾಡಲು ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ವಾಗಬೇಕು.  ರೈಲ್ವೆ ಮೂಲಕವೂ ಸಹ ರೈತರ ಬೆಳೆಗಳು ಸಾಗಾಣಿಕೆಯಾಗುತ್ತಿದ್ದು, ರೈಲ್ವೆಯಲ್ಲಿ ಸೂಕ್ತ ದಾಸ್ತಾನು ವ್ಯವಸ್ಥೆ ಮಾಡಬೇಕು.  ಎಲ್ಲಾ ರೈತರು ಸುಗ್ಗಿ ಸಮಯದಲ್ಲಿ ರಸ್ತೆಗಳನ್ನು ಕಣಗಳನ್ನಾಗಿ ಬಳಕೆ ಮಾಡುವುದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತವೆ.  ಇದಕ್ಕಾಗಿ ಎಲ್ಲಾ ರೈತರು ತಮ್ಮ ಕಣಗಳನ್ನು ನಿರ್ಮಾಣ ಮಾಡಿಕೊಳ್ಳಲು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡವುದು.  ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಕಲ್ಪಿಸಬೇಕು.  ಕುಡಿಯುವ ನೀರನ್ನು ಶಾಶ್ವತವಾಗಿ ಬಳಕೆ ಮಾಡಲು ಮಳೆ ನೀರನ್ನು ಸಂಗ್ರಹಿಸಿ, ಮಳೆ ನೀರಿನ ಕೊಯ್ಲುಗಳ ಮುಖಾಂತರ ಬೋರ್‍ವೆಲ್‍ಗಳಿಗೆ ಇಂಗಿಸುವಂತೆ ಮಾಡಬೇಕು.  ಪ್ರತಿ ಗ್ರಾಮಕ್ಕೆ ಒಂದರಂತೆ ಕೆರೆಗಳನ್ನು ಪುನರ್ಜಿವಗೊಳಿಸುವುದು ಅತ್ಯವಶ್ಯಕ.  ಪ್ರತಿ ಪಟ್ಟಣ, ನಗರ, ಗ್ರಾಮೀಣ ಪ್ರದೇಶಗಳಲ್ಲಿ ಬೋರ್‍ವೆಲ್‍ಗಳ ನಿರ್ಮಾಣವನ್ನು ಕಾನೂನಾತ್ಮಕವಾಗಿ ಮಿತಿಗೊಳಿಸಬೇಕು.  ನೀರಿನ ಮಹತ್ವ ಹಾಗೂ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆಗಳನ್ನು ಮೂಡಿಸಬೇಕು.  ಪ್ರತಿಯೊಂದು ಮನೆ ನಿರ್ಮಾಣ ಮಾಡುವಾಗ ಮಳೆ ನೀರು ಇಂಗು ಗುಂಡಿಯನ್ನು ಕಡ್ಡಾಯವಾಗಿ ನಿರ್ಮಾಣ ಮಾಡಬೇಕು.   ಬಸ್ ನಿಲ್ದಾಣಗಳಲ್ಲಿ ವೈಫೈ ವ್ಯವಸ್ಥೆ ಕಲ್ಪಿಸುವುದು.  ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಸ ವಿಲೇವಾರಿ ವಾಹನಗಳ ಬಳಕೆ.  ಸ್ವಚ್ಛವಾದ ವಾತಾವರಣ ನಿರ್ಮಾಣಕ್ಕೆ ಆಧ್ಯತೆ ನೀಡಬೇಕು.   ಶೌಚಾಲಯಗಳ ನಿರ್ಮಾಣ, ಒಳ ಚರಂಡಿ ವ್ಯವಸ್ಥೆ, ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬ ಸಲಹೆಗಳು ಮೂಡಿಬಂದವು. 
     ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಬಂಡಿವಡ್ಡರ್ ಸೇರಿದಂತೆ ಹಲವು ಅಧಿಕಾರಿಗಳು, ವಿಷಯ ತಜ್ಞರು, ಸಾರ್ವಜನಿಕರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಮಿಷನ್-2025 : ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಉಚಿತ ಚಿಕಿತ್ಸೆಗೆ ಆದ್ಯತೆ ನೀಡಿ


ಕೊಪ್ಪಳ ಅ. 28 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಸಮಗ್ರ ವ್ಯವಸ್ಥೆ ಹೊಂದಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ತಾಲೂಕಿಗೊಂದು ನಿರ್ಮಾಣವಾಗಬೇಕು. ಹಾಗೂ ಪ್ರತಿಯೊಬ್ಬ ಬಡ ರೋಗಿಗಳಿಗೂ ಉಚಿತ ಚಿಕಿತ್ಸೆ ದೊರೆಯುವಂತಾಗಬೇಕು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು.
     ಕರ್ನಾಟಕ ವಿಷನ್-2025 ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿ ಅಭಿವೃದ್ಧಿಗಾಗಿ ಜನರ ಅಭಿಪ್ರಾಯ ಸಂಗ್ರಹಣೆ ಕುರಿತು ಜಿಲ್ಲಾ ಪಂಚಾಯತಿಯ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಜರುಗಿದ ವಿಷಯಾಧಾರಿತ ಗುಂಪು ಚರ್ಚೆಯಲ್ಲಿ ಇಂತಹ ಅಭಿಪ್ರಾಯ ವ್ಯಕ್ತಗೊಂಡವು.
      ಪ್ರತಿ ತಾಲೂಕುಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ನಿರ್ಮಾಣಗೊಂಡು, ಪ್ರತಿಯೊಬ್ಬ ಬಡ ರೋಗಿಗೂ ಉತ್ತಮ ಹಾಗೂ ಉಚಿತ ಚಿಕಿತ್ಸೆ ಸಕಾಲದಲ್ಲಿ ದೊರೆಯುವಂತಾಗಬೇಕು.  ಶಿಶು ಹಾಗೂ ತಾಯಿ ಮರಣವನ್ನು ಸಂಪೂರ್ಣವಾಗಿ ತಡೆಗಟ್ಟಲು, ಇದರಿಂದ ಮಾತ್ರ ಸಾಧ್ಯವಾಗಲಿದೆ.  ಸರ್ಕಾರದಿಂದ ಪ್ರತಿಯೊಬ್ಬ ಪ್ರಜೆಗೂ ಆರ್ಥಿಕ, ಸಾಮಾಜಿಕ  ಹಾಗೂ ರಾಜಕೀಯವಾಗಿ ಎಲ್ಲ ಸೌಲಭ್ಯಗಳು ದೊರೆಯುವಂತಾಗಬೇಕು.   ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಟ ಪದ್ಧತಿಗಳು ಸಂಪೂರ್ಣವಾಗಿ ತೊಲಗಲು ಅವಶ್ಯಕ ಹೆಚ್ಚಿನ ಕ್ರಮ ಜರುಗಿಸಬೇಕು.  ವಸತಿ ನಿಲಯಗಳಿಗೆ ವಿಶೇಷ ಭದ್ರತೆ ವ್ಯವಸ್ಥೆ ಒದಗಿಸಬೇಕು.  ಹೋಬಳಿವಾರು ವಸತಿ ಸಾಲೆ, ಡಿಜಿಟಲ್ ಲೈಬ್ರರಿ ತೆರೆಯಬೇಕು.  ಅಲ್ಪಸಂಖ್ಯಾತರ ಸಾಮಾಜಿಕ ನ್ಯಾಯಕ್ಕೆ ಮಿಷನ್ ಸಹಕಾರಿಯಾಗಲಿದೆ.  ಬಾಲ್ಯ ವಿವಾಹ ತಡೆಗಟ್ಟಬೇಕು.   ಭಿಕ್ಷಾಟನೆಯನ್ನು ತಡೆಗಟ್ಟಿ, ಅಂತಹ ಮಕ್ಕಳನ್ನು ಶಾಲೆಗೆ ಸೇರಿಸಿ, ಅವರ ಶಿಕ್ಷಣಕ್ಕೆ ಯೋಜನೆ ರೂಪಿಸಬೇಕು.  ನಿವೇಶನಗಳನ್ನು ಎಲ್ಲಾ ಜನಾಂಗಕ್ಕೆ ನೀಡಬೇಕು.  ಅಲೆಮಾರಿಗಳು ವಾಸಿಸುವ ಸ್ಥಳಗಳಲ್ಲಿ ಶಾಲೆಗಳನ್ನು ನಿರ್ಮಿಸಬೇಕು.  ರಸ್ತೆಗಳ ಅಭಿವೃದ್ಧಿಯಾಗಬೇಕು.  ಹೊಗೆ ರಹಿತ ಗ್ರಾಮಗಳ ನಿರ್ಮಾಣಕ್ಕಾಗಿ ಪ್ರತಿಯೊಂದು ಕುಟುಂಬಗಳಿಗೂ ಎಲ್‍ಪಿಜಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಬೇಕು.  ಸಾಮೂಹಿಕ ಮದುವೆಯಲ್ಲಿ ಕ್ರಮಬದ್ಧವಾಗಿ ವಧು-ವರರ ವಯಸ್ಸು ಪರಿಶೀಲನೆ ಆಗಬೇಕು.  ಜಾತಿ ಭೇಧ-ಭಾವ ಮಾಡದೆ, ಪ್ರತಿಯೊಂದು ಸಮುದಾಯಕ್ಕೂ ಸಾಮಾಜಿಕ ನ್ಯಾಯ ದೊರೆಯುವಂತಾಗಬೇಕು. ಸಾಕ್ಷರತೆ ಪ್ರಮಾಣವನ್ನು 2025 ರ ಹೊತ್ತಿಗೆ ಶೇ. 100 ರಷ್ಟು ಹೆಚ್ಚಿಸಬೇಕು.     ಪ್ರತಿ ತಾಲೂಕಿಗೆ ಒಂದರಂತೆ ಹೆಣ್ಣು ಮಕ್ಕಳಿಗಾಗಿ ವಸತಿ ಶಾಲೆ ನಿರ್ಮಿಸಬೇಕು.  ಶಾಲಾ ಕಾಲೇಜುಗಳಲ್ಲಿ  ಕಂಪ್ಯೂಟರ್ ತರಬೇತಿಯನ್ನು ಪ್ರಾರಂಭಿಸಬೇಕು.  ಇಂಗ್ಲೀಷ್ ಶಾಲೆಗಳು ಹೆಚ್ಚಾಗುತ್ತಿದ್ದಂತೆ ಕನ್ನಡ ಶಾಲೆಗಳು ಕಡಿಮೆಯಾಗುತ್ತಿವೆ.  ಆದ್ದರಿಂದ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಬೇಕು.  ಪರೀಕ್ಷೆಯ ಪದ್ದತಿಯಲ್ಲಿ ಬದಲಾವಣೆ ತರಬೇಕು.   ಕಾಲೇಜುಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಗಳಲ್ಲಿ ನಿರ್ಮಾಣ ಮಾಡಬೇಕು.  ಮೊರಾರ್ಜಿ ಶಾಲೆಗಳಂತಂಹ ವಸತಿ ಶಾಲೆಗಳನ್ನು ಹೆಚ್ಚಿಸಬೇಕು.    ಮಕ್ಕಳಿಗೆ  ಜಿಲ್ಲಾ ಮಟ್ಟದಲ್ಲಿ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಬೇಕು.  ಕಂಪ್ಯೂಟರ್, ಲ್ಯಾಪ್‍ಟ್ಯಾಪ್ ಗಳನ್ನು ವಿದ್ಯಾರ್ಥಿಗಳಿಗೆ ನೀಡಬೇಕು.  ಮತ್ತು ಅವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂಬ ಸಲಹೆಗಳು ಸಾರ್ವಜನಿಕರಿಂದ ಕೇಳಿಬಂದವು.
     ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗೋನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಸೇರಿದಂತೆ ಹಲವು ಅಧಿಕಾರಿಗಳು, ವಿಷಯ ತಜ್ಞರು, ಸಾರ್ವಜನಿಕರು ಚರ್ಚೆಯಲ್ಲಿ ಭಾಗವಹಿಸಿದ್ದರು.

ವಿಷನ್ 2025 : ಯುವ ಪೀಳಿಗೆಯನ್ನು ಕೃಷಿಯತ್ತ ಆಕರ್ಷಿಸಬೇಕಾದ ಅನಿವಾರ್ಯತೆ ಇದೆ


ಕೊಪ್ಪಳ ಅ. 28 (ಕರ್ನಾಟಕ ವಾರ್ತೆ): ಈಗಿನ ಯುವ ಪೀಳಿಗೆ ಕೃಷಿಯಿಂದ ವಿಮುಖರಾಗುತ್ತಿದ್ದು, ಕೃಷಿಯನ್ನು ಉಳಿಸಿಕೊಳ್ಳಲು ಯುವ ಜನತೆಯನ್ನು ಕೃಷಿಯತ್ತ ಆಕರ್ಷಿಸುವ ಅನಿವಾರ್ಯತೆ ನಿರ್ಮಾಣವಾಗುತ್ತಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಹೇಳಿದರು.
     ಕರ್ನಾಟಕ ವಿಷನ್-2025 ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿ ಅಭಿವೃದ್ಧಿಗಾಗಿ ಜನರ ಅಭಿಪ್ರಾಯ ಸಂಗ್ರಹಣೆ ಕುರಿತು ಕೃಷಿ ಇಲಾಖೆಯ ಸಭಾಂಗಣದಲ್ಲಿ ಜರುಗಿದ ವಿಷಯಾಧಾರಿತ ಗುಂಪು ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
     ಕೃಷಿ ಭೂಮಿ ಕಡಿಮೆಯಾಗುತ್ತಿದ್ದು, ಬರುವ ದಿನಗಳಲ್ಲಿ ಆಹಾರದ ಕೊರತೆ ಉಂಟಾಗುವ ಸಂಭವ ಹೆಚ್ಚಾಗಲಿದೆ.  ಕೃಷಿಯಿಂದ ಆದಾಯ ಹೆಚ್ಚಿಸುವಂತಹ ಯೋಜನೆಗಳು ಜಾರಿಗೊಳ್ಳಬೇಕಿದ್ದು, ಕೃಷಿಯಿಂದ ವಿಮುಖವಾಗುತ್ತಿರುವ ಯುವಜನರನ್ನು ಕೃಷಿಯತ್ತ ಆಕರ್ಷಿಸುವ ಅನಿವಾರ್ಯತೆ ಉಂಟಾಗಿದೆ.  ಕೃಷಿಯನ್ನು ಲಾಭದಾಯಕವಾಗಿಸಲು, ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಿದ್ದು, ಕೃಷಿಯ ಜೊತೆಗೆ ಉಪ ಕಸುಬಾಗಿರುವ ಹೈನುಗಾರಿಕೆಗೆ ಆದ್ಯತೆ ನೀಡಬಹುದಾಗಿದೆ.  ಸರ್ಕಾರದಿಂದ ಹೈನುಗಾರಿಕೆಗೆ ಹೆಚ್ಚಿನ ಸಹಾಯಧನ ನೀಡುವ ಯೋಜನೆ ಜಾರಿಗೊಳಿಸಬೇಕಿದೆ ಎಂದು ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ ಹೇಳಿದರು.
     ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಅವರು ಮಾತನಾಡಿ, ಜಿಲ್ಲೆಯಲ್ಲಿ ತೋಟಗಾರಿಕೆಗೆ ವಿಫುಲ ಅವಕಾಶವಿದೆ ಅಲ್ಲದೆ ಜಿಲ್ಲೆಯ ಹವಾಗುಣವೂ ಇದಕ್ಕೆ ಪೂರಕವಾಗಿದೆ.  ತೋಟಗಾರಿಕೆ ಕ್ಷೇತ್ರವನ್ನು ವಿಸ್ತರಿಸಲು, ರೈತರನ್ನು ಆಕರ್ಷಿಸುವ ಯೋಜನೆಗಳನ್ನು ರೂಪಿಸಬೇಕಿದೆ.  ರಾಜಸ್ಥಾನದಲ್ಲಿ ಲಕ್ಷಣಸಿಂಗ್ ಎನ್ನುವ ರೈತ ಮಳೆ ನೀರು ಸಂಗ್ರಹಣೆಗೆ ಅನುಸರಿಸಿದ ಮಾರ್ಗವನ್ನು ಇಲ್ಲಿಯೂ ಅನುಸರಿಸಬೇಕಿದೆ.  ಕೃಷಿ ಭೂಮಿ ಕಡಿಮೆಯಾಗುವುದನ್ನು ತಪ್ಪಿಸಲು, ಎನ್‍ಎ ಮಾಡಿಕೊಡುವ ನಿಯಮವನ್ನು ಇನ್ನಷ್ಟು ಬಿಗಿಗೊಳಿಸಬೇಕು.  ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಿದಲ್ಲಿ, ಜಿಲ್ಲೆ ಬರದಿಂದ ಮುಕ್ತವಾಗಲಿದೆ.  ಬೆಳೆ ವಿಮೆ ಯೋಜನೆ ನಿಷ್ಪ್ರಯೋಜಕವಾಗಿದ್ದು, ಇದರ ಲಾಭ ರೈತರಿಗೆ ಸಮರ್ಪಕವಾಗಿ ದೊರಕುತ್ತಿಲ್ಲ.  ರೈತರಿಗೆ ಲಾಭದಾಯಕವಾಗುವ ರೀತಿಯಲ್ಲಿ ನಿಯಮಗಳನ್ನು ರೂಪಿಸಬೇಕು ಎಂದರು.
     ಕೊಟ್ರಪ್ಪ ಮುತ್ತಾಳ ಮಾತನಾಡಿ, ಗ್ರಾಮಗಳ ಅಭಿವೃದ್ಧಿಯಾಗಬೇಕಾದರೆ, ರಸ್ತೆ ಸಂಪರ್ಕ ವ್ಯವಸ್ಥೆ ಸುಧಾರಣೆಯಾಗಬೇಕು.  ಇದಕ್ಕಾಗಿ ಪ್ರತಿಯೊಂದು ಗ್ರಾಮಗಳ ರಸ್ತೆಗಳು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣವಾಗಬೇಕು ಎಂದರು.
     ಗಂಗಾವತಿಯ ಶ್ಯಾಮ್ ಅವರು ಮಾತನಾಡಿ, ಮುಂಗಾರು ಪ್ರಾರಂಭವಾಗುವ ಪೂರ್ವದಲ್ಲಿ, ರೈತರಿಗೆ ಯಾವ ಬೆಳೆ ಬೆಳೆಯುವುದು ಸೂಕ್ತ ಎನ್ನುವ ಬಗ್ಗೆ ಹಾಗೂ ಕೃಷಿ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಜಾರಿಗೊಳ್ಳಬೇಕು.  ಕೃಷಿ ಸಂಸ್ಕರಣಾ ಘಟಕಗಳ ನಿರ್ಮಾಣ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಮದ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ರೈತರಿಗೆ ಲಾಭ ಹೆಚ್ಚಿಸುವುದು, ಕೃಷಿ ಸಲಹಾ ಕೇಂದ್ರಗಳನ್ನು ಹೆಚ್ಚಿಸುವುದು, ಹೊಸ ತಂತ್ರಜ್ಞಾನಗಳ ಬಳಕೆಗೆ ಹೆಚ್ಚಿನ ಒತ್ತು ನೀಡುವುದು, ಉಪ ಕಸುಬುಗಳ ಬಗ್ಗೆ ರೈತರಿಗೆ ತರಬೇತಿ ನೀಡುವಂತಾಗಬೇಕು ಎಂದರು.  ಗಿಣಿಗೇರಾದ ಗೋವಿಂದರಾಜು ಮಾತನಾಡಿ, ಹೋಬಳಿಗೊಂದು ನರ್ಸರಿ ಸ್ಥಾಪಿಸಿ, ರೈತರಿಗೆ ಸಮರ್ಪಕವಾಗಿ ಹಣ್ಣಿನ ಅಥವಾ ಇತರೆ ಗಿಡಗಳು ದೊರೆಯುವಂತಾಗಬೇಕು.  ಸೂಕ್ತ ಕಾಲದಲ್ಲಿ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ, ರೈತರ ಹಿತ ಕಾಯಬೇಕು.  ಹೆಚ್ಚು ನೀರು ಬಳಸಿ, ಬೆಳೆಯುವ ಬೆಳೆಗಳಿಗೆ ಹನಿ ನೀರಾವರಿಯನ್ನು ಕಡ್ಡಾಯಗೊಳಿಸಿ, ಮಿತ ನೀರು ಬಳಕೆ ಮಾಡುವಂತಾಗಬೇಕು.  ಕೃಷಿ ಆಧಾರಿತ ಕೈಗಾರಿಕೆಗಳು, ಸಂಸ್ಕರಣೆ ಘಟಕಗಳು ನಿರ್ಮಾಣವಾಗಬೇಕು.  ಸರ್ಕಾರಿ ಯೋಜನೆಗಳಲ್ಲಿ ಸಹಾಯಧನದ ಜೊತೆಗೆ ಸಾಲ ನೀಡಲು ಬ್ಯಾಂಕ್‍ಗಳು ಸಹಕಾರ ನೀಡದ ಕಾರಣ ಪಶುಭಾಗ್ಯದಂತಹ ಯೋಜನೆಗಳು ವಿಫಲವಾಗುತ್ತಿದ್ದು, ಇದಕ್ಕೆ ಸರಿಯಾದ ನಿಯಮಗಳನ್ನು ರೂಪಿಸಬೇಕು ಎಂದರು.
     ಜಿ.ಪಂ. ಮಾಜಿ ಅಧ್ಯಕ್ಷ ಜನಾರ್ಧನ ಹುಲಿಗಿ ಮಾತನಾಡಿ, ಹೊಲದ ಬದುಗಳು ಹಾಗೂ, ಕೆರೆಯ ಬದುಗಳಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಅರಣ್ಯೀಕರಣ ಮಾಡಲು ಅವಕಾಶ ನೀಡಬೇಕು.  ಪ್ರತಿ 05-06 ಗ್ರಾಮ ಪಂಚಾಯತಿಗಳನ್ನು ಸೇರಿಸಿ, ಬಹುಗ್ರಾಮ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಿ, ಸಮರ್ಪಕ ತ್ಯಾಜ್ಯ ವಿಲೇವಾರಿ ಮಾಡಬೇಕು.  ಎಲ್ಲ ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಾಗಬೇಕು ಎಂದರು.
     ಉಳಿದಂತೆ ಹನಿ ನೀರಾವರಿ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಬೇಕು.  ಗೊಬ್ಬರ ಮತ್ತು ಬೀಜ ಕಳಪೆ ಪೂರೈಕೆಯಾಗುವುದನ್ನು ತಡೆಗಟ್ಟಲು ಕಠಿಣ ನಿಯಮಗಳು ಜಾರಿಗೊಳ್ಳಬೇಕು.  ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು.  ಜೇನು ಕೃಷಿ, ಪುಷ್ಪ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು.  ಆರೋಗ್ಯ ದೃಷ್ಟಿಯಿಂದ ಸಿರಿಧಾನ್ಯ ಬೆಳೆಗೆ ಉತ್ತೇಜನ ನೀಡಬೇಕು.  ಹಸಿ ಮೇವು ಘಟಕಗಳು, ಎರೆ ಹುಳು ಘಟಕಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣಗೊಳ್ಳಬೇಕು.  ಪ್ರತಿ ಜಿಲ್ಲೆಯಲ್ಲಿ ಕನಿಷ್ಟ 02 ಸಂಚಾರಿ ಮಣ್ಣು ಪರೀಕ್ಷೆ ಘಟಕಗಳು ಪ್ರಾರಂಭವಾಗಬೇಕು ಎಂಬ ಅಭಿಪ್ರಾಯಗಳು ರೈತರಿಂದ ಕೇಳಿಬಂದವು.
     ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಕೃಷಿ ಇಲಾಖೆ ಜಂಟಿನಿರ್ದೇಶಕ ವೀರೇಶ್ ಹುನಗುಂದ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಪಶುಸಂಗೋಪನೆ ಉಪನಿರ್ದೇಶಕ ಡಾ. ಶಿವಣ್ಣ ಸೇರಿದಂತೆ ಹಲವು ಅಧಿಕಾರಿಗಳು, ಕೃಷಿ ತಜ್ಞರು, ರೈತರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯದ ಸಮಗ್ರ ಅಭಿವೃದ್ಧಿಗೆ ಜನಾಭಿಪ್ರಾಯ ಸಂಗ್ರಹ ಯತ್ನ ದೇಶದಲ್ಲೇ ಮೊದಲು- ರೇಣುಕಾ ಚಿದಂಬರಂ

 ಕೊಪ್ಪಳ ಅ. 28 (ಕರ್ನಾಟಕ ವಾರ್ತೆ): ರಾಜ್ಯದ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಕಾರ್ಯಕ್ರಮಗಳು, ಯೋಜನೆಗಳ ಬಗ್ಗೆ ತಜ್ಞರು, ಸಾರ್ವಜನಿಕರು, ವಿವಿಧ ಸ್ಥರಗಳ ಪ್ರತಿನಿಧಿಗಳಿಂದ ಅಭಿಪ್ರಾಯ, ಸಲಹೆಗಳನ್ನು ಸ್ವೀಕರಿಸುವಂತಹ ವಿಷನ್ 2025 ಕಾರ್ಯಕ್ರಮ ಕರ್ನಾಟಕ ರಾಜ್ಯದಲ್ಲಿ ಇದೀಗ ಜರುಗುತ್ತಿದ್ದು, ಇಂತಹ ಪ್ರಯತ್ನ ದೇಶದಲ್ಲಿಯೇ ಇದೇ ಮೊದಲ ಯತ್ನವಾಗಿದೆ ಎಂದು ವಿಷನ್ 2025 ಕಾರ್ಯಕ್ರಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ರೇಣುಕಾ ಚಿದಂಬರಂ ಅವರು ಹೇಳಿದರು
 
     ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಶನಿವಾರದಂದು ಏರ್ಪಡಿಸಲಾದ ವಿಷನ್ 2025 ಜನಾಭಿಪ್ರಾಯ ಸಂಗ್ರಹಣೆ ಜಿಲ್ಲಾ ಮಟ್ಟದ ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
 
     ರಾಜ್ಯದ ಸಮಗ್ರ ಅಭಿವೃದ್ಧಿಯ ಬಗ್ಗೆ ಗುರಿಯನ್ನು ಹೊಂದುವುದು ನಮ್ಮ ಮೊದಲ ಕರ್ತವ್ಯವಾಗಿದ್ದು, ಆ ಗುರಿ ಸಾಧನೆಗೆ ತಲುಪಬೇಕಾದ ಮಾರ್ಗಗಳ ಬಗ್ಗೆ ನಂತರ ಯೋಜಿಸಿ, ಕಾರ್ಯ ಸಾಧಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ.  ಭವಿಷ್ಯದ 07 ವರ್ಷಗಳಲ್ಲಿ ರಾಜ್ಯದಲ್ಲಿ ಆಗಲಿರುವ ಜನಸಂಖ್ಯೆಗೆ ಅನುಗುಣವಾಗಿ, ಪ್ರತಿಯೊಂದು ಪ್ರದೇಶದ ಜನರ ಹಿತಕ್ಕಾಗಿ ಹಲವು ಕ್ಷೇತ್ರಗಳಲ್ಲಿ ಏನೆಲ್ಲಾ ಯೋಜನೆಗಳು ಜಾರಿಗೊಳ್ಳಬೇಕು ಎನ್ನುವ ನವ ಕರ್ನಾಟಕ ಮುನ್ನೋಟವನ್ನು ಸಿದ್ಧಪಡಿಸಲು ವಿಷನ್ 2025 ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದ್ದು, ಬರುವ ಏಳು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಯ ದಾರಿ ನಕಾಶೆ ಇದಾಗಲಿದೆ.  ಅಲ್ಲದೆ ವಿಷನ್ 2025 ದೇಶದ ಅಪರೂಪದ ದಾಖಲೆಯೂ ಆಗಲಿದೆ.  ಯಾವುದೇ ರಾಜ್ಯದ ಅಭಿವೃದ್ಧಿಯನ್ನು ಸಾರ್ವಜನಿಕರು ಆಯಾ ವರ್ಷದ ಬಜೆಟ್ ಅನ್ನು ಗಮನಿಸಿ, ಅಭಿಪ್ರಾಯ ವ್ಯಕ್ತಪಡಿಸುವುದು ಸಹಜ.  ಆದರೆ ವ್ಯಕ್ತಿಗಳು, ತಮ್ಮ ಆಸಕ್ತಿ ಕ್ಷೇತ್ರದ ಅಭಿವೃದ್ಧಿಯನ್ನು ಮಾತ್ರ ಗಮನಿಸಿ, ಅದರ ಬಗ್ಗೆ ವಿಮರ್ಶೆ ಮಾಡುತ್ತಾರೆ.  ಹೀಗಾಗಿ, ಪ್ರತಿಯೊಬ್ಬರಿಗೂ ತಮ್ಮದೇ ಆದ ಕ್ಷೇತ್ರ, ವ್ಯಾಪ್ತಿಯ ಬಗ್ಗೆ ಆಸಕ್ತಿ ಇದ್ದು, ಅದರ ಬಗ್ಗೆ ಗಮನ ಕೇಂದ್ರೀಕರಿಸುತ್ತಾರೆ.  ಇದಕ್ಕೆಂದೇ ಸರ್ಕಾರ ಯಾವುದೋ ಒಂದು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮಾತ್ರ ಯೋಚಿಸದೆ, ರಾಜ್ಯದ ಸಮಗ್ರ ಅಭಿವೃದ್ಧಿಯ ಬಗ್ಗೆ ಯೋಜನೆ ರೂಪಿಸುವಾಗ, ಪ್ರತಿಯೊಂದು ಕ್ಷೇತ್ರದ ತಜ್ಞರು, ಪ್ರಗತಿಪರ ಚಿಂತಕರು, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಇದೀಗ ಮುಂದಾಗಿದ್ದು, ಪ್ರತಿ ಕ್ಷೇತ್ರದ ಗುಂಪುಗಳ ಆಸಕ್ತಿ, ಅವಶ್ಯಕತೆಗಳನ್ನು ಪರಿಶೀಲಿಸಿ, ಸಲಹೆಗಳನ್ನು ಪಡೆದು, ಅದನ್ನು ದಾಖಲಿಸಬೇಕಾಗಿದೆ.  ಸಾಮಾನ್ಯ ಜನರ ಅಭಿಪ್ರಾಯ, ಸಲಹೆಗಳನ್ನು ಪಡೆಯುವ ಸರ್ಕಾರದ ಯತ್ನ ದೇಶದಲ್ಲಿಯೇ ಇದೇ ಮೊದಲಾಗಿದೆ.  ಜನರ ನಡುವೆ ಕುಳಿತು, ಅವರಿಂದ ಭವಿಷ್ಯದಲ್ಲಿ ನಮ್ಮ ರಾಜ್ಯ, ಜಿಲ್ಲೆ ಹೀಗೆಯೇ ಅಭಿವೃದ್ಧಿ ಹೊಂದಬೇಕೆಂಬುದರ ಬಗ್ಗೆ ಸಲಹೆಗಳನ್ನು ಪಡೆದು, ವಿಷನ್ 2025 ಡಾಕ್ಯುಮೆಂಟ್ ತಯಾರಿಸಲಾಗುತ್ತಿದೆ.  ಈಗಾಗಲೆ ರಾಜ್ಯದ 25 ಜಿಲ್ಲೆಗಳಲ್ಲಿ ಅಭಿಪ್ರಾಯ, ಸಲಹೆಗಳ ಸಂಗ್ರಹಣೆ ಆಗಿದ್ದು, ಕೊಪ್ಪಳ ಜಿಲ್ಲೆ 26 ನೇ ಜಿಲ್ಲೆಯಾಗಿದೆ.  ಪ್ರತಿಯೊಂದು ಜಿಲ್ಲೆಗಳಿಂದಲೂ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ಸಂಗ್ರಹಿಸಿ, ಪ್ರತಿಯೊಂದು ಕ್ಷೇತ್ರಕ್ಕೂ ಪ್ರತ್ಯೇಕವಾಗಿ ಕರಡನ್ನು ಸಿದ್ಧಪಡಿಸಿ, ಉನ್ನತ ಮಟ್ಟದ ಅಧಿಕಾರಿಗಳ ಮಟ್ಟದಲ್ಲಿ ಕರಡನ್ನು ಪರಿಶೀಲಿಸಿ, ಹೆಚ್ಚುವರಿಯಾಗಿ ಅಭಿವೃದ್ಧಿಗೆ ಅಗತ್ಯ ಸಲಹೆಗಳಿದ್ದಲ್ಲಿ ಅವುಗಳನ್ನೂ ಸಹ ಸೇರ್ಪಡೆ ಮಾಡಲಾಗುವುದು.  ನಂತರ ಕರಡು ಯೋಜನೆಯನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯ ರಾಜ್ಯದ ಉನ್ನತ ಮಟ್ಟದ ಸಮಿತಿಗೆ ಸಲ್ಲಿಸಲಾಗುವುದು.  ಈ ಸಮಿತಿಗೆ ರಾಜ್ಯದ ಎಲ್ಲ ಸಚಿವರುಗಳು ಸದಸ್ಯರುಗಳಾಗಿದ್ದು, ಈ ಸಮಿತಿಯ ಪರಿಶೀಲನೆ ನಂತರ, ವರದಿಯು ಸಾರ್ವಜನಿಕ ದಾಖಲೆಯಾಗಿ ಹೊರ ಬರಲಿದೆ.  ಡಿಸೆಂಬರ್ ಅಂತ್ಯದೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿಷನ್ 2025 ಕಾರ್ಯಕ್ರಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ರೇಣುಕಾ ಚಿದಂಬರಂ ಅವರು ಹೇಳಿದರು.
 
     ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ವಿಷನ್ 2025 ಕಾರ್ಯಕ್ರಮವು ಮುಖ್ಯಮಂತ್ರಿಗಳ ದೂರದೃಷ್ಟಿ ಯೋಜನೆಯಾಗಿದ್ದು, ಈ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ದಾಪುಗಾಲು ಇಡುವ ಕಾರ್ಯಕ್ರಮ ಇದಾಗಿದೆ.  ಯಾವುದೇ ಸರ್ಕಾರ ದೂರದೃಷ್ಟಿ ಹೊಂದಿಲ್ಲದಿದ್ದರೆ, ರಾಜ್ಯದ ಅಭಿವೃದ್ಧಿ ಕೈಗೊಳ್ಳಲು ಕಷ್ಟ ಸಾಧ್ಯ.  ಜನರೊಂದಿಗೆ ಚರ್ಚೆ ಮಾಡಿ, ಇಂತಹ ವರದಿ ಸಿದ್ಧಪಡಿಸಲು ಹೊರಟಿರುವುದು ದೇಶದಲ್ಲೇ ಮೊದಲ ರಾಜ್ಯವಾಗಿದೆ.  ಈ ಹಿಂದೆ ಸಾರ್ವಜನಿಕರೊಂದಿಗೆ ಚರ್ಚಿಸಿಯೇ 371(ಜೆ) ಕಲಂ ತಿದ್ದುಪಡಿ ಮಾಡಲಾಗಿತ್ತು.  ಕೊಪ್ಪಳದಲ್ಲಿ ಕೆರೆ ತುಂಬಿಸುವ ಯೋಜನೆಗಳು, ಶಾಶ್ವತ ಕುಡಿಯುವ ನೀರಿನ ಯೋಜನೆಗಳು ಕೂಡ ಇಂತಹ ದೂರದೃಷ್ಟಿ ಯೋಜನೆಗಳಾಗಿದ್ದು, ನಮ್ಮ ಸರ್ಕಾರ ಇಂತಹ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.
     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಉಪ ವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಸೇರಿದಂತೆ ಹಲವು ಅಧಿಕಾರಿಗಳು, ನಾನಾ ತಾಲೂಕುಗಳಿಂದ ಆಗಮಿಸಿದ್ದ ಜನಪ್ರತಿನಿಧಿಗಳು, ಪ್ರಗತಿಪರ ಚಿಂತಕರು, ರೈತರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಕಾರ್ಯಕ್ರಮ ನಿರೂಪಿಸಿದರು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ವಂದಿಸಿದರು.  ಉದ್ಘಾಟನಾ ಸಮಾರಂಭದ ಬಳಿಕ, ಜಿಲ್ಲಾಡಳಿತ ಭವನದ ಹಲವು ಸ್ಥಳಗಳಲ್ಲಿ ವಿವಿಧ ಕ್ಷೇತ್ರವಾರು, ಸಾರ್ವಜನಿಕರು, ತಜ್ಞರೊಂದಿಗೆ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಅಗತ್ಯವಿರುವ ಸಲಹೆ, ಸೂಚನೆಗಳು, ಅಭಿಪ್ರಾಯಗಳ ಸಂಗ್ರಹಣೆಗೆ ಗುಂಪು ಚರ್ಚೆಗಳು ಜರುಗಿದವು.

Friday, 27 October 2017

ಅಕಾಡೆಮಿ ಬಾಲಗೌರವ ಪ್ರಶಸ್ತಿ : ಅರ್ಜಿ ಆಹ್ವಾನ


ಕೊಪ್ಪಳ ಅ.27 (ಕರ್ನಾಟಕ ವಾರ್ತೆ ): ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯು ನೃತ್ಯ, ವಾದ್ಯ ನುಡಿಸುವಿಕೆ, ಸಾಹಿತ್ಯ ರಚನೆ, ಗಾಯನ, ಅಭಿನಯ, ಕ್ರೀಡೆ, ಚಿತ್ರಕಲೆ, ಕರಕುಶಲ, ವಿಜ್ಞಾನ ಮಾದರಿ ಹಾಗೂ ವಿಶೇಷ ಸಾಧನೆ ಮಾಡಿದ 18 ವರ್ಷದೊಳಗಿನ ಮಕ್ಕಳಿಗೆ “ಅಕಾಡೆಮಿ ಬಾಲಗೌರವ ಪ್ರಶಸ್ತಿ-2017” ನೀಡಲು ಅರ್ಜಿ ಆಹ್ವಾನಿಸಲಾಗಿದೆ.
          ಮಕ್ಕಳು ತಮ್ಮ ಸ್ವವಿಳಾಸದೊಂದಿಗೆ ವಿವಿಧ ಪುರಸ್ಕಾರಗಳ ಮತ್ತು ಪ್ರಶಸ್ತಿಗಳ ಝರಾಕ್ಸ ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ, ನ. 04 ರೊಳಗಾಗಿ ಯೋಜನಾಧಿಕಾರಿಗಳು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಕೆ.ಎಚ್.ಬಿ. ಕಾಲೋನಿ, ಲಕ್ಕಮನಹಳ್ಳಿ, ಧಾರವಾಡ-580004 ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕು. ವಿವಿಧ ಅಕಾಡೆಮಿಗಳಿಂದ ಪುರಸ್ಕಾರಗೊಂಡ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದು. ನವೆಂಬರ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ 0836-2461666 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಷನ್ 2025 : ಅ. 28 ರಂದು ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಅಭಿಪ್ರಾಯ ಸಂಗ್ರಹಣೆ


ಕೊಪ್ಪಳ (ಕರ್ನಾಟಕ ವಾರ್ತೆ) ಅ. 28: ಮುಂದಿನ ಏಳು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಕ್ಷೇತ್ರಗಳಲ್ಲಿ, ಏನೇನು ಸಾಧನೆಗಳಾಗಬೇಕು, ಕೃಷಿ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ನಗರಗಳ ಅಭಿವೃದ್ಧಿ, ಆಡಳಿತ, ಕಾನೂನು, ಸಾಮಾಜಿಕ ನ್ಯಾಯ ಹೀಗೆ ನಾನಾ ವಲಯಗಳ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಜನರ ಅಭಿಪ್ರಾಯ ಸಂಗ್ರಹಣೆಗೆ ಸರ್ಕಾರ ಉದ್ದೇಶಿಸಿದ್ದು, ಅ. 28 ರಂದು ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಅಭಿಪ್ರಾಯ ಸಂಗ್ರಹಣೆ ಹಾಗೂ ಅಂಶಗಳ ಕ್ರೋಢೀಕರಣ ಕಾರ್ಯಕ್ರಮ ನವ ಕರ್ನಾಟಕ 2025 ರ ಮುನ್ನೋಟ (ವಿಷನ್ 2025) ಸಿದ್ಧಪಡಿಸಲು ವೇದಿಕೆ ಸಜ್ಜಾಗಿದೆ.
     ಬದಲಾದ ಸನ್ನಿವೇಶದಲ್ಲಿ ಜನರ ಜೀವನ ಶೈಲಿ, ಉದ್ಯೋಗ, ಆಹಾರ ಪದ್ಧತಿ, ಹವಾಮಾನ, ಭೌಗೋಳಿಕ ಸ್ಥಿತ್ಯಂತರ, ಕೃಷಿ ಮತ್ತು ಕೈಗಾರಿಕಾ ರಂಗಗಳಲ್ಲಿ ಆಗಬೇಕಾದ ಬದಲಾವಣೆಗಳನ್ನು ಆಡಳಿತ ವ್ಯವಸ್ಥೆಯು ಎಚ್ಚರಿಕೆಯಿಂದಲೇ ಗಮನಿಸಿ ಮುಂದಿನ ಹೆಜ್ಜೆ ಇಡಬೇಕಾದ ಸ್ಥಿತಿ ಬಂದಿದೆ.  ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂದಿನ ಏಳು ವರ್ಷಗಳಲ್ಲಿ ಜನಾಗತ್ಯಕ್ಕೆ ತಕ್ಕಂತೆ ಯೋಜನೆಗಾಗಿ, ಜನಾಭಿಪ್ರಾಯ ಸಂಗ್ರಹಣೆಯನ್ನು  ಜಿಲ್ಲಾ ಕೇಂದ್ರಗಳಿಂದಲೇ ಆರಂಭಿಸಿ ರಾಜ್ಯ ಸರ್ಕಾರದ ಆದ್ಯತೆಗಳನ್ನು ಗುರುತಿಸಿ, ಯೋಜನೆ ರೂಪಿಸಲು ನವ ಕರ್ನಾಟಕ 2025 ರ ಮುನ್ನೋಟ ಸಿದ್ಧಪಡಿಸಲು ಮುಂದಾಗಿದೆ. ಇದಕ್ಕಾಗಿ ಪ್ರತಿ ಜಿಲ್ಲೆಯ ಅಭಿವೃದ್ಧಿಗಳ ಆದ್ಯತೆ ಅಭಿಪ್ರಾಯ ಸಂಗ್ರಹಣೆ ನಡೆಯುತ್ತಿದೆ.  ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ದೂರದೃಷ್ಟಿ ಚಿಂತನೆಯೊಂದಿಗೆ ವಿಷನ್ 2025 ಡಾಕ್ಯುಮೆಂಟ್ ತಯಾರಿಗೆ  ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಆಯಾಯ ಕ್ಷೇತ್ರದಲ್ಲಿನ ಅನುಭವಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು, ಸಾಧಕರನ್ನು ಒಗ್ಗೂಡಿಸಿ, ಕ್ಷೇತ್ರವಾರು ಗುಂಪುಗಳನ್ನು ರಚಿಸಿ, ಸಂವಾದದ ಮೂಲಕ ಅಭಿವೃದ್ಧಿಯ ಆಧ್ಯತೆ, ಸಾಧ್ಯತೆ ನಿಟ್ಟಿನಲ್ಲಿ ಅಭಿಪ್ರಾಯ ಸಂಗ್ರಹಣೆಗೆ ಸಿದ್ಧತೆ ಕೈಗೊಂಡಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಸುಮಾರು 13 ಆದ್ಯತಾ ವಲಯಗಳನ್ನು ನಿಗದಿಪಡಿಸಲಾಗಿದ್ದು, ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ, ಕೃಷಿ ಮತ್ತು ಕೃಷಿಗೆ ಸಂಬಂಧಿತ ಕ್ಷೇತ್ರಗಳು, ಉದ್ಯೋಗ ಮತ್ತು ಕೌಶಲ್ಯ, ಆಡಳಿತ, ಆರೋಗ್ಯ, ಕೈಗಾರಿಕೆ, ಮೂಲಭೂತ ಸೌಕರ್ಯ, ಕಾನೂನು ಮತ್ತು ಸುವ್ಯವಸ್ಥೆ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ನಗರಾಭಿವೃದ್ಧಿ, ಸ್ಮಾರ್ಟ್ ಸಿಟಿ ಸೇರಿದಂತೆ ಅಭಿವೃದ್ಧಿಯ ಆದ್ಯತೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರಗತಿಪರ ಚಿಂತಕರು, ಸಾಹಿತಿಗಳು, ಸಂಪನ್ಮೂಲ ವ್ಯಕ್ತಿಗಳು, ತಜ್ಞರು ಸೇರಿದಂತೆ ಎಲ್ಲ ನಿಟ್ಟಿನಿಂದಲೂ, ಅಭಿವೃದ್ಧಿಗಾಗಿ ಚಿಂತನೆಗಳನ್ನು, ಸಲಹೆಗಳನ್ನು ಕ್ರೋಢೀಕರಿಸುವ ಕಾರ್ಯ ಆಗಲಿದೆ ಇವುಗಳನ್ನೊಳಗೊಂಡಂತೆ ಜಿಲ್ಲೆಯ ಜನಪ್ರತಿನಿಧಿಗಳು, ವಿಷಯಗಳ ತಜ್ಞರು, ಭಾಗೀದಾರರು, ಸಾರ್ವಜನಿಕರ  ಅಭಿಪ್ರಾಯ ಸಂಗ್ರಹಣೆ ಹಾಗೂ ಅಂಶಗಳ ಕ್ರೋಢಿಕರಣ ಅ. 28 ರಂದು ಕೊಪ್ಪಳದಲ್ಲಿ ನಡೆಯಲಿದೆ.  ಈ ಕಾರ್ಯಕ್ರಮ ಮುನ್ನಡೆಸಲು ವಿಷನ್ 2025 ರ ಸಿಇಒ ರೇಣುಕಾ ಚಿದಂಬರಂ ಅವರು ಕೊಪ್ಪಳಕ್ಕೆ ಆಗಮಿಸುವರು.
     ಅಭಿವೃದ್ಧಿಯ ಉದ್ದೇಶದಿಂದ 13 ಕ್ಷೇತ್ರಗಳನ್ನು 05 ಆದ್ಯತಾ ವಲಯಗಳನ್ನಾಗಿ ರೂಪಿಸಲಾಗಿದ್ದು, ನಗರ, ಮೂಲಭೂತ ಸೌಕರ್ಯ/ಸ್ಮಾರ್ಟ್ ಸಿಟಿ.  ಸಾಮಾಜಿಕ ನ್ಯಾಯ, ಆರೋಗ್ಯ ಮತ್ತು ಶಿಕ್ಷಣ.  ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಮತ್ತಿತರೆ ಹಾಗೂ ಗ್ರಾಮೀಣಾಭಿವೃದ್ಧಿ.  ಕೈಗಾರಿಕಾ ಅಭಿವೃದ್ಧಿ, ಸೇವೆಗಳು, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ, ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಆಡಳಿತ, ಕಾನೂನು ಮತ್ತು ನ್ಯಾಯ ಸೇರಿದಂತೆ 05 ಆದ್ಯತಾ ವಲಯಗಳನ್ನಾಗಿಸಿ, ಈ ವಲಯಗಳ ಅಭಿವೃದ್ಧಿಗೆ ಅಭಿಪ್ರಾಯ ಕ್ರೋಢೀಕರಣ ಜರುಗಲಿದೆ. 
ಉದ್ಘಾಟನೆ : ಕರ್ನಾಟಕ ವಿಷನ್ 2025 ಡಾಕ್ಯುಮೆಂಟ್ ಸಿದ್ಧತೆ ಕುರಿತ ಕಾರ್ಯಕ್ರಮದ ಉದ್ಘಾಟನೆ ಅ. 28 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ನೆರವೇರಲಿದೆ.  ವಿಷನ್ 2025 ರ ಸಿಇಒ ರೇಣುಕಾ ಚಿದಂಬರಂ ಅವರು ಯೋಜನೆ ಕುರಿತ ಪ್ರಾಸ್ತಾವಿಕ ಭಾಷಣ ಮಾಡುವರು.  ಈ ಕಾರ್ಯಕ್ರಮದ ನಂತರ ವಿಷಯಾಧಾರಿತ ಚರ್ಚೆಗಳು, ಅಭಿಪ್ರಾಯ ಸಂಗ್ರಹಣೆ ಪ್ರತ್ಯೇಕ ಸ್ಥಳಗಳಲ್ಲಿ ಬೆಳಿಗ್ಗೆ 11-15 ಗಂಟೆಯಿಂದ ಜರುಗಲಿದೆ.   ಈಗಾಗಲೆ ಹಲವು ವಿಷಯಕ್ಕೆ ಸಂಬಂಧಿಸಿದಂತೆ ಭಾಗೀದಾರರು, ಜನಪ್ರತಿನಿಧಿಗಳು, ವಿಷಯ ಪರಿಣಿತರು, ಮಾಧ್ಯಮದವರು, ಸಾರ್ವಜನಿಕರು ಹಾಗೂ  ತಜ್ಞರು ಸೇರಿದ ಪ್ರತಿಯೊಂದು ರಂಗಕ್ಕೆ ಪ್ರತಿನಿಧಿಗಳನ್ನು ಗುರುತಿಸಿದ್ದು  ಅವರು ಐದು ವಲಯಗಳ ಪ್ರತ್ಯೇಕ ಅಭಿಪ್ರಾಯ ಸಂಗ್ರಹಣೆ ಸಭೆಗಳಲ್ಲಿ ಭಾಗವಹಿಸಿ ಅಭಿಪ್ರಾಯ ನೀಡಲಿದ್ದಾರೆ. ತದನಂತರ ಎಲ್ಲ ವಲಯಗಳ ಕ್ರೋಢೀಕರಣ ಸಮನ್ವಯತೆ ಅಭಿಪ್ರಾಯ ಸಂಗ್ರಹಣೆ ಸಭೆ ನಡೆಯಲಿದೆ. 
     ಈಗಾಗಲೇ ಕೊಪ್ಪಳ ಜಿಲ್ಲಾಡಳಿತ ಸಾರ್ವಜನಿಕವಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಅಭಿಪ್ರಾಯ ಕಳುಹಿಸಲು  vision2025koppal@gmail.com ಇ-ಮೇಲ್ ವಿಳಾಸವನ್ನು ಈ ಹಿಂದೆಯೇ ನೀಡಿದ್ದು, ಅದರಲ್ಲಿ ಬಂದಂತಹ ಅಂಶಗಳನ್ನು ಸಹ ಗಣನೆಗೆ ತೆಗೆದುಕೊಂಡು ಕೊಪ್ಪಳ ಜಿಲ್ಲೆ ಮುನ್ನೋಟ 2025 ಸಿದ್ದಪಡಿಸುವ ಒಟ್ಟಾರೆ ಅಂಶಗಳು ಅಂತಿಮಗೊಳ್ಳಲಿವೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.

ಬಿ.ಎಫ್.ಟಿ ಅಭ್ಯರ್ಥಿಗಳ ನೇಮಕ : ಮೂಲ ದಾಖಲೆ ಪರಿಶೀಲನೆಗೆ ಹಾಜರಾಗಲು ಸೂಚನೆ


ಕೊಪ್ಪಳ ಅ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪಂಚಾಯತ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಿಎಫ್.ಟಿ ಅಭ್ಯರ್ಥಿಗಳ ನೇಮಕ ಮಾಡುವ ಸಂಬಂಧ, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಅ. 30 ರಂದು ಜರುಗಲಿದ್ದು, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ಹಾಜರಾಗಲು ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಅಭ್ಯರ್ಥಿಗಳಿಗೆ ಸೂಚನೆ ನೀಡಿದ್ದಾರೆ.
    ಬಿಎಫ್.ಟಿ ಅಭ್ಯರ್ಥಿಗಳ ನೇಮಕ ಸಂಬಂಧ ಈಗಾಗಲೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಮೂಲ ದಾಖಲಾತಿಗಳನ್ನು ಅ. 30 ರಂದು ಪರಿಶೀಲಿಸಲಾಗುತ್ತಿದ್ದು, ಕೊಪ್ಪಳ ತಾಲೂಕಿನ ಅಭ್ಯರ್ಥಿಗಳಿಗೆ ಬೆಳಿಗ್ಗೆ 10-00 ರಿಂದ ಮಧ್ಯಾಹ್ನ 1-30 ರವರೆಗೆ, ಹಾಗೂ ಕುಷ್ಟಗಿ ತಾಲೂಕಿನ ಅಭ್ಯರ್ಥಿಗಳಿಗೆ ಮಧ್ಯಾಹ್ನ 2-00 ರಿಂದ 5-30 ರವರೆಗೆ ಕೊಪ್ಪಳ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ.  ಮತ್ತು ಗಂಗಾವತಿ ತಾಲೂಕಿನ ಅಭ್ಯರ್ಥಿಗಳಿಗೆ ಬೆಳಿಗ್ಗೆ 10-00 ರಿಂದ ಮಧ್ಯಾಹ್ನ 1-30 ರವರೆಗೆ, ಹಾಗೂ ಯಲಬುರ್ಗಾ ತಾಲೂಕಿನ ಅಭ್ಯರ್ಥಿಗಳಿಗೆ  ಮಧ್ಯಾಹ್ನ 2-00 ರಿಂದ 5-30 ರವರೆಗೆ ಕೊಪ್ಪಳ ತಾಲೂಕ ಪಂಚಾಯತ ಸಭಾಂಗಣದಲ್ಲಿ ಮೂಲ ದಾಖಲೆಗಳ ಪರಿಶೀಲನೆಯನ್ನು ಏರ್ಪಡಿಸಲಾಗಿದೆ.   ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳದಲ್ಲಿ ಮೂಲ ದಾಖಲೆಗಳೊಂದಿಗೆ ಹಾಜರಾಗಲು ಪ್ರಕಟಣೆ ತಿಳಿಸಿದೆ.

ಭಕ್ತ ಕನಕದಾಸರ ಜಯಂತಿ : ಅ. 30 ರಂದು ಪೂರ್ವಭಾವಿ ಸಭೆ


ಕೊಪ್ಪಳ ಅ. 27 (ಕರ್ನಾಟಕ ವಾರ್ತೆ): ಭಕ್ತ ಕನಕದಾಸರ ಜಯಂತಿಯನ್ನು ನವೆಂಬರ್ 06 ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸುವುದಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ಅ. 30 ರಂದು ಮಧ್ಯಾಹ್ನ 03 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಲಿದೆ.
     ಸಭೆಗೆ ಎಲ್ಲ ಸಮಾಜದ ಮುಖಂಡರು ಆಗಮಿಸಿ, ಕನಕದಾಸರ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಹಿಟ್ನಾಳ್ ಅವರು ತಿಳಿಸಿದ್ದಾರೆ.

ಹಜರತ್ ಟಿಪ್ಪು ಸುಲ್ತಾನ್ ಜಯಂತಿ : ಅ. 30 ರಂದು ಪೂರ್ವಭಾವಿ ಸಭೆ


ಕೊಪ್ಪಳ ಅ. 27 (ಕರ್ನಾಟಕ ವಾರ್ತೆ): ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ನವೆಂಬರ್ 10 ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸುವುದಕ್ಕೆ ಸಂಬಂಧಿಸಿದಂತೆ ಸಿದ್ಧತಾ ಸಭೆ ಅ. 30 ರಂದು ಸಂಜೆ 04 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
     ಸಭೆಗೆ ಎಲ್ಲ ಸಮಾಜದ ಮುಖಂಡರು ಆಗಮಿಸಿ, ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಹಿಟ್ನಾಳ್ ಅವರು ತಿಳಿಸಿದ್ದಾರೆ.

ಹಿಂಗಾರು : ಕೊತ್ತಂಬರಿ ಬೆಳೆಯಲು ರೈತರಿಗೆ ಸಲಹೆ

ಕೊಪ್ಪಳ ಅ. 27 (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಹಿಂಗಾರು ಬೆಳೆಗಳಿಗೆ ತುಂಬ ಸಹಕಾರಿಯಾಗಿದೆ. ಹಿಂಗಾರಿನಲ್ಲಿ ಮಳೆಯಾಶ್ರಿತ ಹಲವು ಬಗೆಯ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆ ರೈತರಿಗೆ ಸಲಹೆಗಳನ್ನು ನೀಡಿದೆ.

      ಉತ್ತಮ ಹಿಂಗಾರು ಮಳೆ ಹಿನ್ನೆಲೆಯಲ್ಲಿ ತೋಟಗಾರಿಕೆ ಬೆಳೆಗಳಾದ ಫ್ರೆಂಚ್ ಬೀನ್ಸ್, ಅವರೆ, ಬಟಾಣಿ, ಎಲೆಕೋಸು ಹಾಗೂ ಹೂ ಕೋಸು ಅಲ್ಲದೆ ಎರೆ ಭೂಮಿಗೆ ಸೂಕ್ತವಾದ ಅಲ್ಪಾವಧಿ ಸೊಪ್ಪಿನ ಬೆಳೆಯಾದ ಕೊತ್ತಂಬರಿ ಬಿತ್ತಲು ಈಗ ಸೂಕ್ತ ಕಾಲವಾಗಿದೆ.  ಕೊತ್ತಂಬರಿ ಬೆಳೆಯುವವರಿಗೆ ತೋಟಗಾರಿಕೆ ಇಲಾಖೆಯಿಂದ ಸಲಹೆ ನೀಡಲಾಗಿದೆ. ಧನಿಯಾ ಎಂದು ಕರೆಯಲ್ಪಡುವ ಈ ಬೆಳೆ ಎರೆ ಭೂಮಿಗೆ  ಹೇಳಿ ಮಾಡಿಸಿದ  ಮಳೆಯಾಶ್ರಿತ  ಸೊಪ್ಪಿನ ಬೆಳೆ.   ಇದನ್ನು ಬೀಜಕ್ಕಾಗಿ ಮತ್ತು ಸೊಪ್ಪಿಗಾಗಿ ಬೆಳೆಯಬಹುದು.
ಬೇಸಾಯ ಕ್ರಮಗಳು:  ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಕಸಕಡ್ಡಿ  ತೆಗೆದು ಸ್ವಚ್ಛಗೊಳಿಸಿದ ನಂತರ ಎಕರೆಗೆ ಬೇಕಾದ 3-4 ಟನ್ ಕೊಟ್ಟಿಗೆ ಗೊಬ್ಬರವನ್ನು ಟ್ರೈಕೋಡರ್ಮಾ ದಂತಹ ಸೂಕ್ಷ್ಮಾಣು ಜೀವಿಗಳಿಂದ ಉಪಚರಿಸಿ ಭೂಮಿಯಲ್ಲಿ ಸೇರಿಸಬೇಕು. ನಂತರ ಉತ್ತಮ ತಳಿಯ ಬೀಜಗಳ ಆಯ್ಕೆ ಬಹು ಮುಖ್ಯ. ಸ್ಥಳಿಯ ತಳಿಗಳಿಂದ ಇಳುವರಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.  ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯಿಂದ ಅರ್ಕಾ ಇಶಾ ಎನ್ನುವ ಅಧಿಕ ಇಳುವರಿ ಕೊಡುವ ಸುಧಾರಿತ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಡಿ.ಡಬ್ಲೂ,ಡಿ -3 ಎನ್ನುವ ಇನ್ನೂಂದು ತಳಿ ಸೊಪ್ಪು ಹಾಗೂ ಬೀಜಕ್ಕಾಗಿ ಬೆಳೆಯಬಹುದಾಗಿದೆ. ಕಡಿಮೆ ಅವಧಿಯಲ್ಲಿ ಅಂದರೆ ಬಿತ್ತಿದ 4-6 ವಾರಗಳಲ್ಲಿ ಕಟಾವಿಗೆ ಬರುವ  ಈ ಬೆಳೆಯಿಂದ ಉತ್ತಮ ಲಾಭ ಪಡೆಯಬಹುವುದು. ಮನೆ ಬೀಜ ಬಳಸಿದರೆ ಇಳುವರಿ ಕಡಿಮೆ.   ಬಿತ್ತಿದ 90 ದಿನಗಳ ನಂತರ ಬೀಜದ ಕಾಳು ಲಭ್ಯವಾಗುತ್ತವೆ. ಈಗ ಬೀಜ ಬಿತ್ತಲು ಸಕಾಲ.   ಕೂರಿಗೆ ಬಳಸಿ ಬಿತ್ತನೆ ಮಾಡಿದ 10-12 ದಿನಗಳಲ್ಲಿ ಬೀಜ ಮೊಳಕೆ  ಒಡೆಯುವುದು. ಬಿತ್ತನೆ ಮಾಡಿದ ಮರು ದಿನವೇ ಕಳೆನಾಶಕ ಬಳಸಿದರೆ ಉತ್ತಮ. ಕಳೆಮುಕ್ತ ಬೆಳೆಯಿಂದ ಉತ್ತಮ ಇಳುವರಿ ನಿರೀಕ್ಷಿಸಬಹುದು. ಏರು ಮಡಿ ಮಾಡಿ ಬಿತ್ತುವುದು ಸೂಕ್ತ .ರಾಸಾಯನಿಕ ಗೊಬ್ಬರಗಳನ್ನು 15:15:15 (ಸಾ.ರಂ.ಪೊ.) ಪ್ರಮಾಣದಲ್ಲಿ ಎಕರೆಗೆ ನೀಡಬೇಕು. ಸಾರಜನಕವನ್ನು ಅರ್ಧಭಾಗ ಬಿತ್ತುವಾಗ ಮತ್ತು ಇನ್ನರ್ಧ ಭಾಗ ಮೇಲು ಗೊಬ್ಬರವಾಗಿ ಕೊಡಬೇಕು.  ಕೀಟ /ರೋಗಗಳ ನಿಯಂತ್ರಣಕ್ಕೆ  ಒಂದೆರೆಡು ಬಾರಿ ಗಂಧಕದ ಪುಡಿ ಹಾಗೂ ಬೇವಿನ ಎಣ್ಣೆ ಸಿಂಪರಿಸಿದರೆ ಸಾಕು. ಎಕರೆಗೆ 3-4 ಟನ್ ಸೊಪ್ಪು ಹಾಗೂ ಸುಮಾರು 400 ಕಿ.ಗ್ರಾಂ. ನಷ್ಟು ಜೀಜದ ಇಳುವರಿ ಪಡೆಯಬಹುದು.   ಉತ್ತಮ ಬೆಲೆ  ಇದ್ದಲ್ಲಿ ಎಕೆರೆಗೆ ನಿವ್ವಳ ರೂ.50000 ಲಾಭ ಸಿಗುವ ಸಾಧ್ಯತೆ ಇದೆ.  ಬಿತ್ತನೆ ಮಾಡುವಾಗ ಬಿತ್ತನೆ ಪ್ರದೇಶವನ್ನು 3-4 ಭಾಗ ಮಾಡಿ 10-12 ದಿನಗಳ ಅಂತರದಲ್ಲಿ ಬಿತ್ತಿದರೆ ನಿರಂತರ ಆದಾಯ ಲಭ್ಯ.
      ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆಯ ಆಯಾ ತಾಲ್ಲೂಕಾ ಕಛೇರಿ, ಹಾಗೂ ತೋಟಗಾರಿಕೆ ಉಪ ನಿರ್ದೇಶಕರು ಅಥವಾ ಹಾರ್ಟಿಕ್ಲಿನಿಕ್ ವಿಷಯ ತಜ್ಞರು, ಕೊಪ್ಪಳ ರವರನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.

Thursday, 26 October 2017

ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ನೇಮಕಾತಿ : ಅ. 29 ರಂದು ಲಿಖಿತ ಪರೀಕ್ಷೆ


ಕೊಪ್ಪಳ ಅ. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪೊಲೀಸ್ ಘಟಕದಲ್ಲಿ ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್‍ರ ಪ್ರಸಕ್ತ ಸಾಲಿನ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಅಕ್ಟೋಬರ್. 29 ರಂದು ಭಾನುವಾರ ಬೆಳಿಗ್ಗೆ 11-00 ರಿಂದ 12-30 ಗಂಟೆಯವರೆಗೆ ಜಿಲ್ಲೆಯ ಗಂಗಾವತಿ ತಾಲೂಕಿನ 17 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 5120 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 
ಪರೀಕ್ಷಾ ಕೇಂದ್ರಗಳ ವಿವರ : ಗಂಗಾವತಿ ತಾಲೂಕಿನ ಸಾಯಿ ನಗರದ ಕೊಲ್ಲಿ ನಾಗೇಶ್ವರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದಲ್ಲಿ ರೂಲ್ ನಂಬರ್. 6664001 ರಿಂದ 6664600 ವರೆಗೆ ಒಟ್ಟು 600 ಅಭ್ಯರ್ಥಿಗಳು.  ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ, ಸರಸ್ವತಿ ಗಿರಿ, ಲಲಿತ ಮಹಲ್ ಹೊಟೇಲ್ ಹಿಂದುಗಡೆ ರೂಲ್ ನಂಬರ್. 6664601 ರಿಂದ 6664900 ವರೆಗೆ ಒಟ್ಟು 300, ವಿರುಪಾಪುರ ಬೆಥಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ರೂಲ್ ನಂಬರ್. 6664901 ರಿಂದ 6665300 ವರೆಗೆ ಒಟ್ಟು 400, ಎಂ.ಎನ್.ಎಂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್ (ಪ್ರೌಢ ಶಾಲಾ ವಿಬಾಗ) ದಲ್ಲಿ ರೂಲ್ ನಂಬರ್. 6665301 ರಿಂದ 6665600 ರವರೆಗೆ ಒಟ್ಟು 300, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರೂಲ್ ನಂಬರ್. 6665601 ರಿಂದ 666200 ವರೆಗೆ ಒಟ್ಟು 300, ಲಯನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜ್ ಲಯನ್ಸ್ ಕ್ಲಬ್ ಆವರಣದಲ್ಲಿ ರೂಲ್ ನಂಬರ್. 6665901 ರಿಂದ 6666200 ವರೆಗೆ ಒಟ್ಟು 300, ಪಂಪಾನಗರದ ಕೊಟ್ಟೂರೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜ್ (ಪ್ರೌಢ ಶಾಲಾ ವಿಭಾಗ) ದಲ್ಲಿ ರೂಲ್ ನಂಬರ್. 6666201 ರಿಂದ 6666500 ವರೆಗೆ ಒಟ್ಟು 300, ಎಚ್.ಆರ್. ಸರೋಜಮ್ಮ ಸ್ಮಾರಕ ಬಾಲಕಿಯರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ರೂಲ್ ನಂಬರ್. 6666501 ರಿಂದ 6666700 ಒಟ್ಟು 200, ಕಲ್ಮಠ ಚನ್ನಬಸವಸ್ವಾಮಿ ಮಹಿಳಾ ಕಲಾ & ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ರೂಲ್ ನಂಬರ್. 6666701 ರಿಂದ 6666960 ವರೆಗೆ ಒಟ್ಟು 260, ಜಯನಗರದ ಸೇಂಟ್ ಪಾಲ್ಸ್ ಆಂಗ್ಲ ಶಾಲೆಯಲ್ಲಿ ರೂಲ್ ನಂಬರ್. 6666961 ರಿಂದ 6667320 ವರೆಗೆ ಒಟ್ಟು 360, ಎಲ್.ಐ.ಸಿ ಆಫೀಸ್ ಎದುರುಗಡೆ ಲಿಟಲ್ ಹಾಟ್ರ್ಸ್ ಸ್ಕೂಲ್‍ನಲ್ಲಿ ರೂಲ್ ನಂಬರ್. 6667321 ರಿಂದ 6667720 ವರೆಗೆ ಒಟ್ಟು 400, ಜುಲಾಯಿ ನಗರದ ಜನತಾ ಸೇವಾ ಅನುದಾನಿತ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ರೂಲ್ ನಂಬರ್.  6667721 ರಿಂದ 6667980 ವರೆಗೆ ಒಟ್ಟು 260, ಲಕ್ಷ್ಮೀದೇವಿ ಗುಡಿ ಹತ್ತಿರದ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ 6667981 ರಿಂದ 6668220 ವರೆಗೆ ಒಟ್ಟು 240, ವಡ್ಡರಹಟ್ಟಿಯ ಕೆ.ಎಲ್.ಇ ಸಂಸ್ಥೆಯ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ರೂಲ್ ನಂಬರ್.  6668221 ರಿಂದ 6668460 ವರೆಗೆ ಒಟ್ಟು 240, ಚೈತನ್ಯ ಟೆಕ್ನೊ ಸ್ಕೂಲ್, ಕೇರಾಫ್ ಸಪ್ತಗಿರಿ ಪಬ್ಲಿಕ್ ಸ್ಕೂಲ್‍ನಲ್ಲಿ ರೂಲ್ ನಂಬರ್. 6668461 ರಿಂದ 6668760 ವರೆಗೆ ಒಟ್ಟು 300, ಕೊಪ್ಪಳ ರಸ್ತೆಯ ವೆಂಕಟೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ರೂಲ್ ನಂಬರ್. 6668761 ರಿಂದ 6669000 ವರೆಗೆ ಒಟ್ಟು 240, ಹಾಗೂ ಇಲಾಹಿ ಕಾಲೋನಿಯ ಟಿ.ಎಂ.ಎ.ಇ ಸೊಸೈಟಿ ಆಫ್ ಎಜ್ಯಕೇಶನ್ ಸಂಸ್ಥೆಯಲ್ಲಿ ರೂಲ್ ನಂಬರ್. 6669001 ರಿಂದ 6669120 ವರೆಗೆ ಒಟ್ಟು 120, ಸೇರಿದಂತೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ 17 ಪರೀಕ್ಷಾ ಕೇಂದ್ರಗಳಲ್ಲಿ ಹೀಗೆ ಒಟ್ಟು 5120 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
    ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕರೆಪತ್ರಗಳನ್ನು ಇಲಾಖೆಯ ಅಧಿಕೃತ ವೆಬ್‍ಸೈಟ್  www.ksp.gov.in ನಿಂದ ಪಡೆದುಕೊಳ್ಳಬಹುದಾಗಿದೆ.  ಲಿಖಿತ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಹಾಗೂ ಲಿಖಿತ ಪರೀಕ್ಷೆಗೆ ಹಾಜರಾಗಬೇಕಾದ ಪರೀಕ್ಷಾ ಕೇಂದ್ರದ ವಿವರಗಳನ್ನು ಸಹ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ.  ಕರಪತ್ರವನ್ನು ಪಡೆಯದೇ ಪರೀಕ್ಷೆಗೆ ಹಾಜರಾದಲ್ಲಿ ಲಿಖಿತ ಪರೀಕ್ಷಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ.  ಕರೆಪತ್ರದ ಜೊತೆಗೆ ಗುರುತಿನ ಚೀಟಿಯನ್ನು ಕಡ್ಡಾಯಬಾಗಿ ತರಬೇಕು.  ನಿಗಧಿತ ದಿನಾಂಕ ಹಾಗೂ ಸಮಯದಲ್ಲಿ ಹಾಜರಾಗದಿದ್ದರೆ ಅಂತಹವರನ್ನು ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದಿಲ್ಲ. 
ಪೊಲೀಸ್ ನೇಮಕಾತಿಯು ಪಾರದರ್ಶಕ, ಗಣಕೀಕೃತ, ಸಂಪೂರ್ಣ ವಸ್ತುನಿಷ್ಠ, ಅರ್ಹತೆ ಮತ್ತು ಮೀಸಲಾತಿ ಆಧಾರದ ಮೇಲೆ ನಡೆಯುತ್ತದೆ.  ಯಾವುದೇ ಅಭ್ಯರ್ಥಿಯು ಇಲಾಖೆಯ ಹೊರಗಾಗಲಿ ಅಥವಾ ಒಳಗಾಗಲೀ ಉದ್ಯೋಗ ಪಡೆಯುವ ಸಲುವಾಗಿ ಯಾವುದೇ ವ್ಯಕ್ತಿಗೆ ಹಣ ನೀಡುವುದು ಅಥವಾ ಯಾವುದೇ ವಿಧವಾದ ಪಾರತೋಷಕ ನೀಡುವುದು ಮಾಡಬಾರದು.  ಯಾವುದೇ ವಿಧವಾದ ಹಣ ವಸೂಲಾತಿಗೆ ಯಾರಿಗೂ ಅಧಿಕಾರ ನೀಡಿರುವುದಿಲ್ಲ.  ಈ ದಿಸೆಯಲ್ಲಿ ಮಧ್ಯವರ್ತಿಗಳ ಭರವಸೆಗಳಿಗೆ ಮಾರು ಹೋಗಬಾರದು ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ನೇಮಕಾತಿ ಅಧ್ಯಕ್ಷರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.      

ಗ್ರಾಮಗಳನ್ನು ಪಾನಮುಕ್ತಗೊಳಿಸಲು ಮನಪರಿವರ್ತನೆ ಅಗತ್ಯ- ಹೆಚ್.ಸಿ. ರುದ್ರಪ್ಪ

 ಕೊಪ್ಪಳ ಅ. 26 (ಕರ್ನಾಟಕ ವಾರ್ತೆ): ಮದ್ಯಪಾನದಿಂದ ಗ್ರಾಮಗಳಲ್ಲಿ ಅಹಿತಕರ ಘಟನೆಗಳು ಹೆಚ್ಚಾಗುತ್ತಿದ್ದು, ಗ್ರಾಮಗಳನ್ನು ಪಾನಮುಕ್ತಗೊಳಿಸಲು, ಜನರ ಮನಪರಿವರ್ತನೆ ಮಾಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಹೆಚ್.ಸಿ. ರುದ್ರಪ್ಪ ಅವರು ಹೇಳಿದರು
 
      ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಮದ್ಯಪಾನ ಮತ್ತು ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಕೇವಲ ಕಾನೂನು ಪ್ರಯೋಗಿಸಿ, ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ.  ಗ್ರಾಮಗಳು ಪಾನಮುಕ್ತವಾಗಬೇಕು.  ಮದ್ಯ ಮತ್ತು ಮಾದಕಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಬೇಕು.  ಜನರ ಮನ ಪರಿವರ್ತನೆಯಾಗದ ಹೊರತು ದುಶ್ಚಟಗಳನ್ನು ದೂರಗೊಳಿಸುವುದು ಕಷ್ಟಸಾಧ್ಯ.  ಮಹಿಳೆ ಮನಸ್ಸು ಮಾಡಿದಲ್ಲಿ, ತನ್ನ ಇಡೀ ಸಂಸಾರ ತಪ್ಪು ದಾರಿಗೆ ಹೋಗುವುದನ್ನು ತಡೆಗಟ್ಟಲು ಸಾಧ್ಯವಿದೆ.  ಹೀಗಾಗಿ ರಾಜ್ಯ ಮದ್ಯಪಾನ ಸಂಯಮ ಮಂಡಳಿಯು ಪಂಚಾಯತಿ ಮಟ್ಟದಿಂದ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಮಹಿಳಾ ಕೇಂದ್ರಿತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.  ಒಂದೆಡೆ ಅಬಕಾರಿ ಇಲಾಖೆಗೆ ಮದ್ಯ ಮಾರಾಟದ ಗುರಿ ನಿಗದಿಪಡಿಸಲಾಗುತ್ತಿದೆ.  ಇನ್ನೊಂದೆಡೆ ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಸರ್ಕಾರವೇ ಜಾಗೃತಿ ಮೂಡಿಸಲು ಶ್ರಮ ಪಡುತ್ತಿದೆ.  ಇದೇಕೆ ಹೀಗೆ ಎನ್ನುವ ಜಿಜ್ಞಾಸೆ ಜನರಲ್ಲಿ ಮೂಡುವುದು ಸಹಜ.  ಆಹಾರ, ಹವ್ಯಾಸಗಳು ಆಯಾ ವ್ಯಕ್ತಿಯ ವಯಕ್ತಿಕ ವಿಷಯವಾಗಿದ್ದು, ಆಯಾ ಇಲಾಖೆಗಳು ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತವೆ.  ಮದ್ಯ ಮತ್ತು ಮಾದಕಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಲವು ಬಗೆಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ.  ಈ ದಿಸೆಯಲ್ಲಿ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಜ್ಯಾದ್ಯಂತ ಮದ್ಯ ವರ್ಜನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿರುವುದು ಸ್ವಾಗತಾರ್ಹವಾಗಿದ್ದು, ಇಂತಹ ಶಿಬಿರಗಳಿಂದ ಈವರೆಗೆ ರಾಜ್ಯದಲ್ಲಿ 80 ಸಾವಿರ ಜನ ಪಾನಮುಕ್ತರಾಗಿದ್ದಾರೆ.  ಒಟ್ಟಾರೆಯಾಗಿ ಮನ ಪರಿವರ್ತನೆ ಮಾಡುವುದು ಬಹು ಮುಖ್ಯ ಅಂಶವಾಗಿದೆ.  ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳು ತಪ್ಪುದಾರಿಗೆ ಇಳಿಯುತ್ತಿರುವ ಬಗ್ಗೆ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.  ಹೀಗಾಗಿ ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ಜರುಗಬೇಕು.  ಪೊಲೀಸ್ ಮತ್ತು ಅಬಕಾರಿ ಇಲಾಖೆಯವರು ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವಂತಹವರ ಮೇಲೆ ಮಾತ್ರ ಕ್ರಮ ಜರುಗಿಸುತ್ತಾರೆಯೇ ಹೊರತು, ಅವರಿಗೆ ಮದ್ಯ ಮಾರಾಟ ಪೂರೈಸಿದವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ.  ಹೀಗಾಗಿ ಇದು ನಿಯಂತ್ರಣಕ್ಕೆ ಬರುತ್ತಿಲ್ಲ.  ಅಕ್ರಮವಾಗಿ ಮದ್ಯ ಪೂರೈಸುವವರ ಮೇಲೂ ಕ್ರಮ ಆಗಬೇಕು ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಹೆಚ್.ಸಿ. ರುದ್ರಪ್ಪ ಅವರು ಹೇಳಿದರು.
     ಸಭೆಯಲ್ಲಿ ಭಾಗವಹಿಸಿದ್ದ ಅಬಕಾರಿ ಉಪ ಅಧೀಕ್ಷಕ ಡಿ. ದೇಮಣ್ಣ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 139 ಪರವಾನಿಗೆ ಹೊಂದಿರುವ ಮದ್ಯ ಮಾರಾಟಗಾರರಿದ್ದು, ಕಳೆದ ವರ್ಷ 24 ಕೋಟಿ ರೂ. ರೆವಿನ್ಯೂ ಸಂಗ್ರಹವಾಗಿದೆ.  ಕಳೆದ 2016 ರ ಜುಲೈ ರಿಂದ 2017 ರ ಜೂನ್ ವರೆಗೆ ಜಿಲ್ಲೆಯಲ್ಲಿ ಲೈಸೆನ್ಸ್ ಷರತ್ತುಗಳ ಉಲ್ಲಂಘನೆಗಾಗಿ 371 ಪ್ರಕರಣಗಳು ದಾಖಲಾಗಿದ್ದು, 44. 46 ಲಕ್ಷ ರೂ. ದಂಡ ವಿಧಿಸಲಾಗಿದೆ.  ಗ್ರಾಮಗಳ ಸಣ್ಣ ಪುಟ್ಟ ಅಂಗಡಿಗಳಲ್ಲಿ, ಡಾಬಾಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿದಂತಹ 415 ಪ್ರಕರಣಗಳನ್ನು ದಾಖಲಿಸಿ 6. 72 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಜಿಲ್ಲೆಯಲ್ಲಿ 06 ಗಂಭೀರ ಪ್ರಕರಣಗಳನ್ನು ದಾಖಲಿಸಿದ್ದು, ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ ಎಂದರು.
     ಸಭೆಯಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಸೇರಿದಂತೆ ಹಲವು ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಅ. 30 ರಂದು ಕೊಪ್ಪಳದಲ್ಲಿ ಮಿನಿ ಉದ್ಯೋಗ ಮೇಳ


ಕೊಪ್ಪಳ ಅ. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಮಿನಿ ಉದ್ಯೋಗ ಮೇಳವನ್ನು ಅ. 30 ರಂದು ಬೆಳಿಗ್ಗೆ 10-30 ರಿಂದ 2.30 ರವರೆಗೆ ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಯೋಜಿಸಲಾಗಿದೆ. 
     ಮಿನಿ ಉದ್ಯೋಗ ಮೇಳದಲ್ಲಿ ಸಕ್ಯೂರೆಟಿ & ಇಂಟೆಲಿಜೆಂನ್ಸ್ ಸರ್ವಿಸ್ (ಎಸ್.ಐ.ಎಸ್) ಎಲ್.ಟಿ.ಡಿ ಬೆಂಗಳೂರು, ನವತಾ ರೋಡ ಟ್ರಾನ್ಸ್‍ಸ್ಪ್ರೋಟ್ಸ್ ಹುಬ್ಬಳ್ಳಿ, ಅಪ್ಪೇಂಟನ್ ಲರ್ನಿಂಗ್ ಸೆಲೂಶನ್ಸ್ ಗದಗ, ಆರ್.ಎನ್.ಎಸ್ ಮೋಟರ್ಸ್ ಹುಬ್ಬಳ್ಳಿ ಖಾಸಗಿ ಕಂಪನಿಗಳು ಭಾಗವಹಿಸಿ ತಮ್ಮಲ್ಲಿನ ಖಾಲಿ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದು, ಭಾಗವಹಿಸಲು ಉಚಿತ ಪ್ರವೇಶವಿರುತ್ತದೆ. 
    ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐ.ಟಿ.ಐ (ಅಟೋಮೊಬೈಲ್, ಡಿಸೈಲ್ ಮೆಕಾನಿಕ್), ಡಿಪ್ಲೋಮಾ (ಅಟೋಮೊಬೈಲ್), ಯಾವುದೇ ಪದವಿ, ಪೋಸ್ಟ್ ಗ್ರಾಜುಯೆಟ್ಸ್, ಬಿ.ಎಡ್., ಎಸ್.ಎಸ್.ಸಿ., ವಿದ್ಯಾರ್ಹತೆ ಹೊಂದಿದ ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು, ಆಧಾರ ಕಾರ್ಡಿನ ಪ್ರತಿ, ಬಯೋಡಾಟಾ, ಹಾಗೂ ಪಾಸ್ ಪೋಟ ಅಳತೆಯ ಭಾವಚಿತ್ರಗಳೊಂದಿಗೆ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ ಕೊಪ್ಪಳ ದೂರವಾಣಿ ಸಂಖ್ಯೆ 08539-220859, 9742498368 ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಮ್ಯುನಿಟಿ ಹೆಲ್ತ್ ಆಫೀಸರ್ ಹುದ್ದೆಗಳ ನೇಮಕಾತಿ : ಆಕ್ಷೇಪಣೆಗೆ ಆಹ್ವಾನ


ಕೊಪ್ಪಳ ಅ. 26 (ಕರ್ನಾಟಕ ವಾರ್ತೆ): ಕೊಪ್ಪಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಕಮ್ಯುನಿಟಿ ಹೆಲ್ತ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಚುರಪಡಿಸಲಾಗಿದ್ದು, ಆಕ್ಷೇಪಣೆಗಳಿಗೆ ಆಹ್ವಾನಿಸಲಾಗಿದೆ. 
ಕೊಪ್ಪಳ ರಾಷ್ಟ್ರೀಯ ಆರೋಗ್ಯ ಅಭಿಯಾನದ ಯುನಿವರ್ಸಲ್ ಹೆಲ್ತ್ ಕವರೇಜ್ ಕಾರ್ಯಕ್ರಮದಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಖಾಲಿ ಇರುವ ಕಮ್ಯುನಿಟಿ ಹೆಲ್ತ್ ಆಫೀಸರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದ್ದು, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಛೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.  ಈ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಕುರಿತು ಆಕ್ಷೇಪಣೆಗಳಿದ್ದಲ್ಲಿ ಅ. 31 ರೊಳಗಾಗಿ ಲಿಖಿತವಾಗಿ ಸಲ್ಲಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹೆಚ್. ರಾಮಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಕರ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟ : ಆಕ್ಷೇಪಣೆಗೆ ಆಹ್ವಾನ


ಕೊಪ್ಪಳ ಅ. 26 (ಕರ್ನಾಟಕ ವಾರ್ತೆ): ಸರಕಾರಿ ಪ್ರೌಢಶಾಲೆ/ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಮತ್ತು ಗ್ರೇಡ್-2, ಸಂಗೀತ/ ನೃತ್ಯ/ ನಾಟಕ ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗೆ ಆಹ್ವಾನಿಸಲಾಗಿದೆ.  
       ಸರಕಾರಿ ಪ್ರೌಢಶಾಲೆ/ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಮತ್ತು ಗ್ರೇಡ್-2, ಸಂಗೀತ/ ನೃತ್ಯ/ ನಾಟಕ ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಸೇವೆಗೆ ಸೇರಿದ ದಿನಾಂಕವನ್ನು ಪರಿಗಣಿಸದೆ ಆಯ್ಕೆ ಪಟ್ಟಿಯಲ್ಲಿರುವ ಮೆರಿಟ್‍ಲಿಸ್ಟ್‍ನಲ್ಲಿರುವ ಕ್ರಮ ಸಂಖ್ಯೆಯನ್ನು ಪರಿಗಣಿಸಿ ಜೇಷ್ಟತಾ ಪಟ್ಟಿಯನ್ನು ಸರಕಾರದ ಆದೇಶ ಸಂ:ಇಡಿ 152 ಎಲ್‍ಬಿಸಿ 2014 ದಿನಾಂಕ:20/05/2014 ರ ಪ್ರಕಾರ ಸಿದ್ದಪಡಿಸಿ ಇಲಾಖಾ ವೆಬ್‍ಸೈಟ್  www.schooleducation.kar.nic.in  ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಉಪನಿರ್ದೇಶಕರ ಕಛೇರಿ ಮತ್ತು ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸೂಚನಾ ಫಲಕದಲ್ಲಿಯೂ ಪ್ರಕಟಿಸಲಾಗಿದೆ.  
ಶಿಕ್ಷಕರ ತಾತ್ಕಾಲಿಕ ಜೇಷ್ಟತಾ ಪಟ್ಟಿಗೆ ಸಂಬಂಧಿಸಿದಂತೆ ನೇಮಕಾತಿ ದಿನಾಂಕ, ನೇಮಕಾತಿ ಮೆರಿಟ್ ಕ್ರಮಸಂಖ್ಯೆ, ಬಡ್ತಿ, ಜಾತಿ ಹಾಗೂ ವೆಬ್‍ಸೈಟ್‍ನಲ್ಲಿ ನೀಡಲಾಗಿರುವ ನಮೂನೆಯ ಕಾಲಂ 01 ರಿಂದ 13 ರ ವರೆಗೆ ಯಾವುದಾದರೂ ತಪ್ಪುಗಳಿದ್ದಲ್ಲಿ ಅಥವಾ ಹೆಸರು ಕೈಬಿಟ್ಟು ಹೋಗಿದ್ದಲ್ಲಿ, ಅವುಗಳನ್ನು ಸಮರ್ಥಿಸುವ ದೃಢೀಕೃತ ಪೂರಕ ದಾಖಲೆಗಳೊಂದಿಗೆ ಕಾಲಂ 01 ರಿಂದ 13 ರ ವರೆಗಿನ ಎಲ್ಲಾ ಅಂಕಣಗಳನ್ನು ಭರ್ತಿ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ ಕೊಪ್ಪಳ ರವರ ಕಛೇರಿಗೆ ಖುದ್ದಾಗಿ ಅ. 30 ರೊಳಗಾಗಿ ಸಲ್ಲಿಸಬೇಕು.  ತದನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಇಲಾಖಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Wednesday, 25 October 2017

ಬೀದಿ ಬದಿ ವ್ಯಾಪಾರಿಗಳ ಸಂರಕ್ಷಣೆ ಕಾಯ್ದೆಯ ಅರಿವು ಮೂಡಿಸಿ- ಎಂ. ಕನಗವಲ್ಲಿಕೊಪ್ಪಳ ಅ. 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಬೀದಿಬದಿ ವ್ಯಾಪಾರಸ್ಥರಿಗೆ “ಬೀದಿಬದಿ ವ್ಯಾಪಾರಿಗಳ ಸಂರಕ್ಷಣೆ, ಜೀವನೋಪಾಯ ಹಾಗೂ ನಿಯಂತ್ರಣ ಕಾಯ್ದೆ 2014 ಮತ್ತು 2016” ಕುರಿತು ಅಧಿಕಾರಿಗಳು ಅರಿವು ಮೂಡಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
    
    ಪೌರಾಡಳಿತ ನಿರ್ದೇಶನಾಲಯ ರಾಜ್ಯ ನಗರಾಭಿವೃದ್ಧಿ ಸಂಸ್ಥೆ ಮೈಸೂರು ಹಾಗೂ ಕೊಪ್ಪಳ ಜಿಲ್ಲಾ ನಗರಾಭಿವೃದ್ಧಿಕೋಶ ಇವರ ಸಹಯೋಗದಲ್ಲಿ ದೀನದಯಾಳ್ ಅಂತ್ಯೋದಯ ನಲ್ಮ್ ಯೋಜನೆಯಡಿ “ಬೀದಿಬದಿ ವ್ಯಾಪಾರಿಗಳ ಸಂರಕ್ಷಣೆ, ಜೀವನೋಪಾಯ ಹಾಗೂ ನಿಯಂತ್ರಣ ಕಾಯ್ದೆ 2014 ಮತ್ತು 2016” ಕುರಿತು ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಿದ ಜಿಲ್ಲಾ ಮಟ್ಟದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

     ಅಸಂಘಟಿತ ವಲಯದ ಬೀದಿ ವ್ಯಾಪಾರಿಗಳಿಂದ ನಗರದ ಆರ್ಥಿಕತೆಗೆ ಪೂರಕವಾಗಿ ಒಳ್ಳೆಯ ಕೊಡುಗೆ ನೀಡುತ್ತಿದ್ದಾರೆ. ಸಾಮಾನ್ಯವಾಗಿ ಬೀದಿ ಬದಿ ವ್ಯಾಪಾರಸ್ಥರು, ತಮ್ಮ ವ್ಯವಹಾರ ಮುಗಿದ ಬಳಿಕ ಕಸ ಹಾಗೂ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಡುತ್ತಾರೆ.  ಹೀಗಾಗಿ ಅವರಿಗೆ ನೈರ್ಮಲ್ಯ ಕುರಿತು ಅರಿವು ಮೂಡಿಸಬೇಕು.  ವ್ಯಾಪಾರಸ್ಥರು ತಮ್ಮ ಅಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಟ್ಟುಕೊಳ್ಳಬೇಕು.  ಬೀದಿ ಬದಿ ವ್ಯಾಪಾರಿಗಳ ಹಿತರಕ್ಷಣೆಗಾಗಿಯೇ ಸರ್ಕಾರ “ಬೀದಿಬದಿ ವ್ಯಾಪಾರಿಗಳ ಸಂರಕ್ಷಣೆ, ಜೀವನೋಪಾಯ ಹಾಗೂ ನಿಯಂತ್ರಣ ಕಾಯ್ದೆ 2014 ಮತ್ತು 2016” ಯನ್ನು ಜಾರಿಗೊಳಿಸಿದ್ದು, ಈ ಕಾಯ್ದೆಯ ಕುರಿತು ಬೀದಿ ಬದಿ ವ್ಯಾಪಾರಿಗಳೂ ಅರಿಯಬೇಕು.  ಅಧಿಕಾರಿಗಳು ಜಾಗೃತಿ ಮೂಡಿಸಲು ಮುಂದಾಗಬೇಕು.  ವ್ಯಾಪಾರಿಗಳಿಗೆ ಈ ಕಾಯ್ದೆಯ ಕುರಿತು ಮಾಹಿತಿಯನ್ನು ಅಧಿಕಾರಿಗಳು ನೀಡಬೇಕು.  ಕಾಯ್ದೆಯ ಸಂಪೂರ್ಣ ಅನುಷ್ಠಾನ ಹಾಗೂ ಜಾರಿಗೊಳ್ಳಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಹೇಳಿದರು.     
    ಕಾರ್ಯಗಾರದಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಮೈಸೂರು ರಾಜ್ಯ ನಗರಾಭಿವೃದ್ಧಿ ತರಬೇತಿ ಸಂಸ್ಥೆಯ ಮಂಜುನಾಥ, ಬೆಂಗಳೂರು ಉನ್ನತಿ ಮಾನವನ ಹಕ್ಕುಗಳ ಸೊಸೈಟಿಯ ವಿಶ್ವನಾಥ ಹಾಗೂ ಕೊಪ್ಪಳ ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಎಂ. ವಿಜಯಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗಣಕೀಕೃತ ಸೇವಾ ವಿವರ ಪರಿಶೀಲನೆಗಾಗಿ ಶಿಕ್ಷಕರಿಗೆ ಸೂಚನೆ


ಕೊಪ್ಪಳ ಅ. 25 (ಕರ್ನಾಟಕ ವಾರ್ತೆ): ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವೃಂದದ ಶಿಕ್ಷಕರು “ಟೀಚರ್ಸ್ ಡಾಟಾ ಕ್ಯಾಪ್ಚರ್ ಫಾರ್‍ಮೇಟ್” ನಲ್ಲಿನ ತಮ್ಮ ಸೇವಾ ವಿವರವನ್ನು ಪರಿಶೀಲನೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.   
ಕೊಪ್ಪಳ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವೃಂದದ ಶಿಕ್ಷಕರು ತಮ್ಮ ಸೇವಾ ವಿವರವನ್ನು “ಟಿಚರ್ಸ್ ಡಾಟಾ ಕ್ಯಾಪ್ಚರ್ ಫಾರ್‍ಮೇಟ್” ನಲ್ಲಿ ಅಳವಡಿಸಿರುವದನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಹಂತದಿಂದ ಅನುಮೋದನೆ ಮಾಡಲಾಗಿರುತ್ತದೆ.  ಈಗಾಗಲೇ ಈ ತಂತ್ರಾಂಶದಲ್ಲಿ ಅಳವಡಿಸಿರುವ ಶಿಕ್ಷಕರ ವಿವರವನ್ನು ಪರಿಶೀಲಿಸಿಕೊಂಡು, ಮಾಹಿತಿಯನ್ನು ಸರಿಯಾಗಿದೆ ಎಂದು ಶಿಕ್ಷಕರು ದೃಢೀಕರಿಸುವದು ಅತ್ಯವಶ್ಯಕವಾಗಿದೆ.  ಇದೂವರೆಗೂ ಸೇವಾ ವಿವರವನ್ನು ಅಳವಡಿಸದ ಮತ್ತು ಸರಿಯಾಗಿದೆ ಎಂದು ದೃಢೀಕರಿಸದ ಶಿಕ್ಷಕರುಗಳು ಕೂಡಲೇ ಕ್ರಮ ವಹಿಸಬೇಕು.  ತಪ್ಪಿದಲ್ಲಿ ಅಂತಹ ಶಿಕ್ಷಕರ ಡಿಸೆಂಬರ್ ತಿಂಗಳ ವೇತನವನ್ನು ತಡೆಹಿಡಿಯಲಾಗುವುದು ಎಂದು ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಹೆಚ್. ಗೋನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ವಿಷನ್-2025 : ವಿಷಯ ತಜ್ಞರು, ಸಾರ್ವಜನಿಕರ ಸಲಹೆಗಳಿಗೆ ಮನ್ನಣೆ- ಎಂ. ಕನಗವಲ್ಲಿ


ಕೊಪ್ಪಳ ಅ. 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಉದ್ದೇಶವನ್ನಿಟ್ಟುಕೊಂಡು, ವಿಷನ್ 2025 ಡಾಕ್ಯುಮೆಂಟ್ ತಯಾರಿಕೆಗಾಗಿ ವಿಷಯ ತಜ್ಞರು, ಸಾರ್ವಜನಿಕರು ನೀಡುವ ಸಲಹೆ, ಸೂಚನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ವಿಷನ್ 2025 ಡಾಕ್ಯುಮೆಂಟ್ ಸಿದ್ಧಪಡಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಈಗಾಗಲೆ ವಿಷನ್ 2025 ಡಾಕ್ಯುಮೆಂಟ್ ಪ್ರಾಜೆಕ್ಟ್‍ಗಾಗಿ ಹಲವು ಕ್ಷೇತ್ರಗಳನ್ನು ಗಮನದಲ್ಲಿರಿಸಿಕೊಂಡು, ಒಟ್ಟು 05 ವಲಯಗಳನ್ನಾಗಿ ರಚನೆ ಮಾಡಲಾಗಿದ್ದು, ಪ್ರತಿಯೊಂದು ವಲಯ ಹಾಗೂ ಕ್ಷೇತ್ರಗಳಿಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.  ನಗರ, ಮೂಲಭೂತ ಸೌಕರ್ಯ ಹಾಗೂ ಸ್ಮಾರ್ಟ್ ಸಿಟಿ ರಚನೆ ಸೇರಿದಂತೆ ಒಂದು ವಲಯ.  ಹೀಗೆ, ಸಾಮಾಜಿಕ ನ್ಯಾಯ, ಆರೋಗ್ಯ ಮತ್ತು ಶಿಕ್ಷಣ.  ಕೃಷಿ ಹಾಗೂ ಕೃಷಿಯಾಧಾರಿತ ಚಟುವಟಿಕೆಗಳು ಮತ್ತು ಗ್ರಾಮೀಣಾಭಿವೃದ್ಧಿ.  ಕೈಗಾರಿಕಾ ಅಭಿವೃದ್ಧಿ, ಸೇವೆಗಳು, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ.  ಆಡಳಿತ, ಕಾನೂನು ಮತ್ತು ನ್ಯಾಯ ಹೀಗೆ ಒಟ್ಟು 05 ವಲಯಗಳನ್ನಾಗಿ ರಚನೆ ಮಾಡಲಾಗಿದ್ದು, ಪ್ರತಿಯೊಂದು ವಲಯಗಳಿಗೂ ವಿಷಯ ತಜ್ಞರು, ಮಾಧ್ಯಮದವರು, ಸಾರ್ವಜನಿಕರ ಸಲಹೆ, ಸೂಚನೆಗಳನ್ನು ಪಡೆಯಲಾಗುವುದು.  ಅಲ್ಲದೆ ಇವರು ನೀಡುವ ಸಲಹೆಗಳಿಗೇ ಅಧಿಕಾರಿಗಳು ಮನ್ನಣೆ ನೀಡಬೇಕು.  ಪ್ರತಿ ವಲಯದ ಚರ್ಚೆ ಸಂದರ್ಭದಲ್ಲಿ ಶಾಸಕರುಗಳು, ವಿಧಾನಪರಿಷತ್ ಸದಸ್ಯರುಗಳು, ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ, ನಗರಸಭೆ, ಪುರಸಭೆ ಅಲ್ಲದೆ ಎಪಿಎಂಸಿಗಳ ಅಧ್ಯಕ್ಷರುಗಳನ್ನೂ ಆಹ್ವಾನಿಸಬೇಕು.  ವಿಷಯಾಧಾರಿತ ಚರ್ಚೆಗಾಗಿ ಶಿಕ್ಷಣ ತಜ್ಞರು, ನೀರಾವರಿ ತಜ್ಞರು, ಕಾಲೇಜು ವಿದ್ಯಾರ್ಥಿಗಳು, ಹೋಟೆಲ್ ಮಾಲೀಕರ ಸಂಘಗಳು, ವರ್ತಕರ ಸಂಘ, ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು, ರೈಲ್ವೆ ಹೋರಾಟ ಸಮಿತಿಗಳು, ಮಹಿಳಾ ಸಂಘಟನೆ, ವಿವಿಧ ಸಂಘ ಸಂಸ್ಥೆಗಳು, ವಕೀಲರು, ರೋಟರಿ-ಲಯನ್ಸ್ ಕ್ಲಬ್, ಆರೋಗ್ಯ ಕ್ಷೇತ್ರದ ತಜ್ಞರು, ಸಿಂಡಿಕೇಟ್ ಸದಸ್ಯರು, ಮಾಧ್ಯಮದವರು ಮುಂತಾದವರು ಪಾಲ್ಗೊಳ್ಳುವಂತಾಗಲು ಆಯಾ ನೋಡಲ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
     ವಿಷನ್-2025 ಡಾಕ್ಯುಮೆಂಟ್ ಸಿದ್ಧಪಡಿಸುವ ಸಂಬಂಧ ಅ. 28 ರಂದು ಕೊಪ್ಪಳದಲ್ಲಿ ಕಾರ್ಯಗಾರ ಜರುಗಲಿದ್ದು, ವಿಷನ್ 2025 ಕಾರ್ಯಕ್ರಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ರೇಣುಕಾ ಚಿದಂಬರಂ ಅವರು ಅಂದು ಕೊಪ್ಪಳಕ್ಕೆ ಆಗಮಿಸುವರು.  ಅಂದು ಐದೂ ವಲಯಗಳ ವಿಷಯಾಧಾರಿತ ಚರ್ಚೆಯನ್ನು ನಡೆಸಲು ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಲಾಗುವುದು.  ಒಟ್ಟಾರೆ ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನವನ್ನಿಟ್ಟುಕೊಂಡು, ವಿಷನ್-2025 ಡಾಕ್ಯುಮೆಂಟ್ ತಯಾರಿಕೆಯಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ತೊಡಗಿಸಿಕೊಂಡು, ಅಗತ್ಯ ಸಲಹೆ-ಸೂಚನೆಗಳನ್ನು ದಾಖಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಬಂಡಿವಡ್ಡರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ದಾನರೆಡ್ಡಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

ಕುಕನೂರು : ಜವಾಹರ ನವೋದಯ ಶಾಲೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ ಅ. 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಕನೂರು ಜವಾಹರ ನವೋದಯ ವಿದ್ಯಾಲಯದಲ್ಲಿ 2018-19 ನೇ ಶೈಕ್ಷಣಿಕ ಸಾಲಿಗೆ 6ನೇ ತರಗತಿಗೆ ಪ್ರವೇಶಾತಿಯನ್ನು ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.  
    ಪ್ರವೇಶ ಬಯಸುವವರು ಜಿಲ್ಲೆಯ 105 ಸಾಮಾನ್ಯ ಸೇವಾ ಕೇಂದ್ರಗಳ ಮುಖಾಂತರ ಆನ್‍ಲೈನ್ ಅರ್ಜಿ ಸಲ್ಲಿಸಬಹುದು.  ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಕುಕನೂರಿನ ವಿದ್ಯಾಲಯದ ಆವರಣದಲ್ಲಿ ವಿಶೇಷ ಸಾಮಾನ್ಯ ಕೇಂದ್ರವನ್ನು ಪ್ರಾರಂಭಿಸಲಾಗಿದೆ.  ಆಸಕ್ತರು ವಿದ್ಯಾಲಯಕ್ಕೆ ಬಂದು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ: 2018 ರ ಫೆಬ್ರವರಿ 10.  ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ನ. 25 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಜವಾಹರ ನವೋದಯ ವಿದ್ಯಾಲಯ ಕುಕನೂರು, ವೆಬ್‍ಸೈಟ್  www.nvshq.org  ನ್ನು ಅಥವಾ ದೂರವಾಣಿ ಸಂಖ್ಯೆ 08534-230444, 7892617849 ಕ್ಕೆ ಸಂಪರ್ಕಿಸಬಹುದು ಎಂದು ಶಾಲಾ ಪ್ರಾಚಾರ್ಯರಾದ ಬಿ.ಎನ್.ಟಿ ರೆಡ್ಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜನಜಾಗೃತಿ : ಅ. 26 ರಂದು ಸಭೆ


ಕೊಪ್ಪಳ ಅ. 25 (ಕರ್ನಾಟಕ ವಾರ್ತೆ): ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಭೆ ಅ. 26 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಲಿದೆ. 
     ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಹೆಚ್.ಸಿ. ರುದ್ರಪ್ಪ ಅವರು ವಹಿಸುವರು.  ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳುವರು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ತಿಳಿಸಿದ್ದಾರೆ.

ಹೈ-ಕ ಪ್ರದೇಶಾಭಿವೃದ್ಧಿ ಯೋಜನೆಯ ಕಾಮಗಾರಿಗಳನ್ನು ಕೂಡಲೆ ಪ್ರಾರಂಭಿಸಿ- ಎಂ. ಕನಗವಲ್ಲಿ


ಕೊಪ್ಪಳ ಅ. 25 (ಕರ್ನಾಟಕ ವಾರ್ತೆ): ಹೈದ್ರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿ ನಿಗದಿಪಡಿಸಲಾಗಿರುವ ಕಾಮಗಾರಿಗಳನ್ನು ಕೂಡಲೆ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಜಿಲ್ಲೆಯ ಅನುಷ್ಠಾನಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಹೈ-ಕ ಪ್ರದೇಶಾಭಿವೃದ್ಧಿ ಯೋಜನೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ 2017-18 ನೇ ಸಾಲಿಗೆ ಹೈದ್ರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯ ಮೈಕ್ರೋ ಯೋಜನೆಯಡಿ 85. 83 ಕೋಟಿ ರೂ. ಗಳಲ್ಲಿ ಒಟ್ಟು 428 ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ.  ಕೊಪ್ಪಳ ತಾಲೂಕಿನಲ್ಲಿ 96 ಕಾಮಗಾರಿಗಳಿಗೆ 16. 69 ಕೋಟಿ ರೂ., ಗಂಗಾವತಿ ತಾಲೂಕಿನಲ್ಲಿ 36 ಕಾಮಗಾರಿಗಳಿಗೆ 6. 19 ಕೋಟಿ, ಕುಷ್ಟಗಿ ತಾಲೂಕಿನಲ್ಲಿ 157 ಕಾಮಗಾರಿಗಳಿಗೆ 30. 16 ಕೋಟಿ ಹಾಗೂ ಯಲಬುರ್ಗಾ ತಾಲೂಕಿನಲ್ಲಿ 139 ಕಾಮಗಾರಿಗಳಿಗೆ  32. 78 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ.  ಈಗಾಗಲೆ ತಳಕಲ್ ಇಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.  ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಸಿ.ಸಿ. ರಸ್ತೆ ನಿರ್ಮಾಣ, ಶಾಲಾ ಕಟ್ಟಡಗಳ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿವೆ.  ಜಿಲ್ಲೆಯಲ್ಲಿ ಈ ಯೋಜನೆಯಡಿಯಲ್ಲಿನ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಪಂಚಾಯತಿ ರಾಜ್ ಇಂಜಿನಿಯರಿಂಗ್ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕೂಡಲೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುವ ಯೋಜನೆಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೂಡಲೆ ಪ್ರಾರಂಭಿಸಬೇಕು.  ಇನ್ನೂ ಟೆಂಡರ್ ಪ್ರಕ್ರಿಯೆ ಕೈಗೊಳ್ಳದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ತಕ್ಷಣ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿ, ಶೀಘ್ರ ಕಾಮಗಾರಿಗಳನ್ನು ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಬಂಡಿವಡ್ಡರ್, ಕೆಆರ್‍ಐಡಿಎಲ್ ಕಾರ್ಯಪಾಲಕ ಅಭಿಯಂತರ ಎಂ. ಕೊರಬು, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.

Tuesday, 24 October 2017

ವಿಷನ್-2025 : ಅ. 25 ರಂದು ಪೂರ್ವಭಾವಿ ಸಭೆ


ಕೊಪ್ಪಳ ಅ. 24 (ಕರ್ನಾಟಕ ವಾರ್ತೆ): ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ವಿಷನ್ 2025 ಡಾಕ್ಯುಮೆಂಟ್ ಸಿದ್ಧಪಡಿಸುವ ಸಂಬಂಧ ಅ. 28 ರಂದು ಕೊಪ್ಪಳದಲ್ಲಿ ಕಾರ್ಯಗಾರ ಜರುಗಲಿದ್ದು, ಈ ಕುರಿತಂತೆ ಸಿದ್ಧತೆ ಕೈಗೊಳ್ಳಲು ಪೂರ್ವಭಾವಿ ಸಭೆ ಅ. 25 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಲಿದೆ.
     ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಹಿಸುವರು.  ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪಾಲ್ಗೊಳ್ಳುವರು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ತಿಳಿಸಿದ್ದಾರೆ.

ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಅ. 24 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಹೆಚ್.ಸಿ. ರುದ್ರಪ್ಪ ಅವರು ಅ. 25 ಮತ್ತು 26 ರಂದು ಕೊಪ್ಪಳ ಜಿಲ್ಲೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಹೆಚ್.ಸಿ. ರುದ್ರಪ್ಪ ಅವರು ಅ. 25 ರಂದು ಸಂಜೆ 6-30 ರಂದು ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ಅ. 26 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮದ್ಯ ಮತ್ತು ಮಾದಕ ವಸ್ತುಗಳ ಬಗ್ಗೆ ಸ್ತ್ರೀಶಕ್ತಿ, ಸ್ವ-ಸಹಾಯ ಸಂಘ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರುಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳ ವಿಷಯದಲ್ಲಿ ಜಿಲ್ಲೆಯಲ್ಲಿ ಈವರೆಗೆ ಕೈಗೊಂಡ ಕ್ರಮಗಳ ಕುರಿತು ಸಭೆ ನಡೆಸುವರು.  ಮಧ್ಯಾಹ್ನ 12-30 ಗಂಟೆಗೆ ಪತ್ರಿಕಾಗೋಷ್ಠಿ ನಡೆಸುವರು.  ನಂತರ ಬಳ್ಳಾರಿ ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ಮಂಡಳಿಯ ಕಾರ್ಯದರ್ಶಿ ತಿಳಿಸಿದ್ದಾರೆ.

ಕಿನ್ನಾಳ ಗ್ರಾ.ಪಂ : ಅ. 26 ರಿಂದ ವಾರ್ಡ/ ಗ್ರಾಮ ಸಭೆ


ಕೊಪ್ಪಳ ಅ. 24 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಪ್ರಸಕ್ತ ಸಾಲಿನ ವಾರ್ಡ/ ಗ್ರಾಮ ಸಭೆಯನ್ನು ಅ. 26 ಮತ್ತು 27 ರಂದು ಕಿನ್ನಾಳ ಗ್ರಾಮದ ವಿವಿಧ ವಾರ್ಡಗಳಲ್ಲಿ ವಾರ್ಡ ಸಭೆ ಹಾಗೂ ಅ. 28 ರಂದು ಗ್ರಾಮ ಸಭೆಯನ್ನು ಏರ್ಪಡಿಸಲಾಗಿದೆ.
     ಕಿನ್ನಾಳ ಗ್ರಾಮ ಪಂಚಾಯತ ಸಾಮಾನ್ಯ ಸಭೆಯ ನಿರ್ಣಯದಂತೆ ವಾರ್ಡ/ ಗ್ರಾಮ ಸಭೆಯನ್ನು ಏರ್ಪಡಿಸಲಾಗಿದ್ದು, ಅ. 26 ರಂದು ಬೆಳಿಗ್ಗೆ 10-15 ಗಂಟೆಗೆ 1ನೇ ವಾರ್ಡಿನ ಹಿರೇ ಮಸೀದಿಯಲ್ಲಿ, 11-30 ಕ್ಕೆ 2ನೇ ವಾರ್ಡಿನ ಭರಮದೇವರ ಗುಡಿ ಆವರಣದಲ್ಲಿ, ಮಧ್ಯಾಹ್ನ 12-30 ಕ್ಕೆ 3ನೇ ವಾರ್ಡಿನ ಭೀರಲಿಂಗೆಶ್ವರ ಗುಡಿ ಆವರಣ, ಮಧ್ಯಾಹ್ನಾ 3 ಗಂಟೆಗೆ 4ನೇ ವಾರ್ಡಿನ ರಾಜಾಭಕ್ಷಿ ದರಗಾದ ಹತ್ತಿರ.  ಅ. 27 ರಂದು ಬೆಳಿಗ್ಗೆ 10-15 ಗಂಟೆಗೆ 5ನೇ ವಾರ್ಡಿನ ಚೌಕಿ ಗುಡಿ ಆವರಣದಲ್ಲಿ, 11-30 ಕ್ಕೆ 6ನೇ ವಾರ್ಡಿನ ಮಡ್ಡಿ ದುರ್ಗಮ್ಮನ ಗುಡಿಯಲ್ಲಿ, ಮಧ್ಯಾಹ್ನ 12-30 ಕ್ಕೆ 7ನೇ ವಾರ್ಡಿನ ನಿಮಿಷಾಂಬ ದೇವಸ್ಥಾನ ಹತ್ತಿರ, ಮಧ್ಯಾಹ್ನಾ 3 ಗಂಟೆಗೆ 8ನೇ ವಾರ್ಡಿನ ಕನಕಮ್ಮನ ಗುಡಿಯಲ್ಲಿ, ಮಧ್ಯಾಹ್ನಾ 4 ಕ್ಕೆ 9ನೇ ವಾರ್ಡಿನ ಕೌಲಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಡ ಸಭೆಯನ್ನು ನಡೆಸಲಾಗುವುದು.  ಅ. 28 ರಂದು ಬೆಳಿಗ್ಗೆ 11 ಗಂಟೆಗೆ ಕಿನ್ನಾಳ ಗ್ರಾ.ಪಂ ಆವರಣದಲ್ಲಿ ಗ್ರಾಮ ಸಭೆಯನ್ನು ಆಯೋಜಿಸಲಾಗಿದೆ.  ಉದ್ಯೋಗಖಾತ್ರಿ ಯೋಜನೆಯಡಿ ಕಾಮಗಾರಿಗಳ ಗುಚ್ಛ ತಯಾರಿಕೆ, ಬಸವ ವಸತಿ ಯೋಜನೆ ಫಲಾನುಭವಿಗಳ ಆಯ್ಕೆ, ವಿಶೇಷ ಘಟಕ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಕಿನ್ನಾಳ ಗ್ರಾ.ಪಂ. ಪಿಡಿಒ ವೀರನಗೌಡ ತಿಳಿಸಿದ್ದಾರೆ.     

Saturday, 21 October 2017

ಸಮಗ್ರ ಅಭಿವೃದ್ಧಿಗೆ ವಿಷನ್-2025 : ಸಲಹೆ, ಸೂಚನೆಗಳಿಗೆ ಆಹ್ವಾನ


ಕೊಪ್ಪಳ ಅ. 21 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಸರ್ಕಾರವು ವಿಷನ್-2025 ಡಾಕ್ಯುಮೆಂಟ್ ಎಂಬ ಹೆಸರಿನಲ್ಲಿ ನೀಲಿ ನಕ್ಷೆ ಮತ್ತು ಅನುಷ್ಠಾನ ಕಾರ್ಯಗಳ ಯೋಜನೆ ಸಿದ್ಧಪಡಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಕೊಪ್ಪಳ ಜಿಲ್ಲೆಯ ವಿವಿಧ ಕ್ಷೇತ್ರಗಳ ತಜ್ಞರು, ಕೃಷಿಕರು, ಬುದ್ದಿಜೀವಿಗಳು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು, ಮಾಧ್ಯಮದವರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಂದ ಅಗತ್ಯ ಸಲಹೆ, ಸೂಚನೆಗಳನ್ನು ಕೊಪ್ಪಳ ಜಿಲ್ಲಾಡಳಿತ ಆಹ್ವಾನಿಸಿದೆ.
     ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ರಾಜ್ಯ ಸರ್ಕಾರವು ವಿಷನ್-2025 ಡಾಕ್ಯುಮೆಂಟ್ ಎಂಬ ಹೆಸರಿನಲ್ಲಿ ನೀಲಿ ನಕ್ಷೆ ಮತ್ತು ಅನುಷ್ಠಾನ ಕಾರ್ಯಗಳ ಬಗ್ಗೆ ಯೋಜನೆ ಸಿದ್ಧಪಡಿಸಲು ಕಾರ್ಯಾರಂಭ ಮಾಡಿದೆ.  ಇದಕ್ಕಾಗಿ ಸರ್ಕಾರ ಪ್ರಮುಖ ಇಲಾಖೆಗಳನ್ನು ಒಳಗೊಂಡ 13 ವಲಯಗಳನ್ನು ಗುರುತಿಸಿದೆ.  ಈ ವಲಯಗಳ ವಿವರ ಇಂತಿದೆ.  ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಹೀಗೆ ಇದಕ್ಕೆ ಸಂಬಂಧಿಸಿದ ಕ್ಷೇತ್ರಗಳು, ಮೂಲ ಸೌಕರ್ಯಗಳು (ರಸ್ತೆ, ವಿದ್ಯುಚ್ಛಕ್ತಿ, ಕುಡಿಯುವ ನೀರಿನ ಸೌಲಭ್ಯ ಮತ್ತು ನೈರ್ಮಲ್ಯೀಕರಣ), ಉದ್ಯೋಗ ಮತ್ತು ಕೌಶಲ್ಯ, ಕೈಗಾರಿಕಾ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಆರೋಗ್ಯ ಮತ್ತು ಪೋಷಣೆ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ, ಸೇವೆಗಳು, ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ/ನ್ಯಾಯಾಧಿಕಾರ.  ಇವೆಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಸಲಹೆಗಳನ್ನು ಕೊಪ್ಪಳ ಜಿಲ್ಲಾಡಳಿತ ಆಹ್ವಾನಿಸಿದೆ.
     ಇಂತಹ ಪ್ರಮುಖ ವಲಯಗಳಲ್ಲಿ ಅಭಿವೃದ್ಧಿಗಾಗಿ ರಾಜ್ಯದ ಎಲ್ಲ ಜಿಲ್ಲೆಗಳನ್ನು ಒಳಗೊಂಡಂತೆ ಎಲ್ಲೆಡೆಯಿಂದಲೂ ಜನರ ಅಭಿಪ್ರಾಯ ಮತ್ತು ಪ್ರತಿಕ್ರಿಯೆಗಳನ್ನು ಸೇರಿಸಿಕೊಳ್ಳಲು ಸರ್ಕಾರ ಉದ್ದೇಶಿಸಿದೆ.  ಈ ಹಿನ್ನೆಲೆಯಲ್ಲಿ ಮುಂದಿನ 07 ವರ್ಷಗಲ್ಲಿ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸಲಹೆಗಳು, ಸೂಚನೆಗಳನ್ನು ಆಹ್ವಾನಿಸಲಾಗಿದೆ.  ಜಿಲ್ಲೆಯ ವಿವಿಧ ಕ್ಷೇತ್ರಗಳ ತಜ್ಞರು, ಕೃಷಿಕರು, ಬುದ್ದಿಜೀವಿಗಳು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು, ಮಾಧ್ಯಮದವರು, ವಿದ್ಯಾರ್ಥಿಗಳು ತಮ್ಮ ಸಲಹೆಗಳು, ಸೂಚನೆಗಳು, ಪ್ರತಿಕ್ರಿಯೆಗಳನ್ನು  vision2025koppal@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದಾಗಿದೆ.  ಆಸಕ್ತರು ತಮ್ಮ ಸಲಹೆ, ಸೂಚನೆಗಳನ್ನು ಯಾವ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಲ್ಲಿಸುತ್ತಿದ್ದೀರಿ ಎಂಬುದನ್ನು ಶೀರ್ಷಿಕೆಯಲ್ಲಿ ನಮೂದಿಸಿ, ಇ-ಮೇಲ್ ವಿಳಾಸಕ್ಕೆ ಅಕ್ಟೋಬರ್ 27 ರ ಒಳಗಾಗಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ


ಕೊಪ್ಪಳ ಅ. 21 (ಕರ್ನಾಟಕ ವಾರ್ತೆ): ರಾಷ್ಟ್ರೀಯ ರಕ್ಷಣಾ ಅಕಾಡೆಮಿ/ ಭಾರತೀಯ ನೌಕಾ ಅಕಾಡೆಮಿಗೆ ಸೇರಿಸಲು ಶೈಕ್ಷಣಿಕವಾಗಿ, ಮಾನಸಿಕವಾಗಿ ಮತ್ತು ದೈಹಿಕ ಸದೃಢವಾಗಿ ತರಬೇತಿಗೊಳಿಸುವ ಉದ್ದೇಶದಿಂದ ಕೊಡುಗು ಸೈನಿಕ ಶಾಲೆಯ 6ನೇ ಮತ್ತು 9ನೇ ತರಗತಿಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
    ಪಠ್ಯಕ್ರಮ 10+2 ಸಿ.ಬಿ.ಎಸ್.ಸಿ (ವಿಜ್ಞಾನ ವಿಭಾಗ) ವಾಗಿದ್ದು, ದಾಖಲಾತಿ ಅಖಿಲ ಭಾರತ ಮಟ್ಟದ ಸೈನಿಕ ಶಾಲಾ ಪ್ರವೇಶ ಪರೀಕ್ಷೆ, ಮೌಖಿಕ ಸಂದರ್ಶನ ಮತ್ತು ವೈದ್ಯಕೀಯ ತಪಾಸಣೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.  6ನೇ ಹಾಗೂ 9ನೇ ತರಗತಿಯ ಪ್ರಶ್ನೆಪತ್ರಿಕೆಗಳು ಕ್ರಮವಾಗಿ 5ನೇ ಹಾಗೂ 8ನೇ ತರಗತಿಯ ಸಿ.ಬಿ.ಎಸ್.ಸಿ ಪಠ್ಯಕ್ರಮದ ಆಧಾರದಲ್ಲಿರುತ್ತದೆ.  ಸೈನಿಕ ಶಾಲೆಯಲ್ಲಿ 6ನೇ ತರಗತಿಗೆ 80-100, 9ನೇ ತರಗತಿಗೆ 10-20 ಸೀಟುಗಳು ಖಾಲಿ ಇದ್ದು, ಎಸ್.ಸಿ - 15%, ಎಸ್.ಟಿ - 7.5% ಮತ್ತು ರಕ್ಷಣಾ ಇಲಾಖೆ – 25% ಮೀಸಲಾತಿಯಲ್ಲಿ ಪ್ರವೇಶ ಪಡೆಯಬಹುದು. 
    ದಾಖಲಾತಿಗೆ ಸಂಬಂಧಿಸಿದಂತೆ ವಯೋಮಿತಿ 6ನೇ ತರಗತಿಗೆ 2007ರ ಜುಲೈ. 02 ರಿಂದ 2008ರ ಜುಲೈ. 01 ರೊಳಗೆ, ಹಾಗೂ 9ನೇ ತರಗತಿಗೆ 2004ರ ಜುಲೈ. 02 ರಿಂದ 2005ರ ಜುಲೈ. 01 ರೊಳಗೆ ಅಭ್ಯರ್ಥಿಗಳು ಜನಿಸಿರಬೇಕು.  ಪ್ರವೇಶ ಪರೀಕ್ಷೆ 2018ರ ಜನವರಿ 07 ರಂದು ನಡೆಯಲಿದ್ದು, 6ನೇ ಮತ್ತು 9ನೇ ತರಗತಿ ಪ್ರವೇಶ ಪರೀಕ್ಷೆ ಕೊಡಗಿನ ಸೈನಿಕ ಶಾಲೆಯಲ್ಲಿ ಹಾಗೂ 9ನೇ ತರಗತಿಗೆ ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆಗಳು ನಡೆಯಲಿವೆ.
    ಅರ್ಜಿ ಸಲ್ಲಿಸಲು ಶಾಲೆಯ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಆನ್‍ಲೈನ್ ಅರ್ಜಿಯನ್ನು ಭರ್ತಿ ಮಾಡಿದ ನಂತರ ಪಿ.ಡಿ.ಎಫ್‍ನಲ್ಲಿ ಪ್ರಿಂಟ್ ತೆಗೆದು ಅಗತ್ಯ ದಾಖಲೆ ಹಾಗೂ ಅರ್ಜಿ ಶುಲ್ಕದ ಡಿ.ಡಿ.ಯೊಂದಿಗೆ ಸಲ್ಲಿಸಬೇಕು.  ಮಾದರಿ ಪುಸ್ತಕ ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಡೌನ್‍ಲೊಡ್ ಮಾಡಲು ಶಾಲೆಯ ವೆಬ್‍ಸೈಟ್  www.sainikschoolkodaguedu.in  ನ್ನು ಅಕ್ಟೋಬರ್. 16 ರಿಂದ ನವೆಂಬರ್. 17 ರವರೆಗೆ ಸಂಪರ್ಕಿಸಬಹುದು.  ಮಾಹಿತಿ ಪುಸ್ತಕ/ ಅರ್ಜಿಯನ್ನು ಶಾಲಾ ಕೆಲಸದ ವೇಳೆಯೊಳಗೆ ಖುದ್ದಾಗಿ ಅರ್ಜಿ ಶುಲ್ಕದ ಡಿಡಿ.ಯನ್ನು ಸಲ್ಲಿಸಿ ಪಡೆದುಕೊಳ್ಳಬಹುದು.  ಮಾಹಿತಿ ಪುಸ್ತಕ/ ಅರ್ಜಿಯನ್ನು ಖುದ್ದಾಗಿ ಪಡೆಯುವವರು ಅಧಿಕೃತ ದಾಖಲೆಗಳಾದ ಆಧಾರ್ ಕಾರ್ಡ್/ ಮತದಾನ ಗುರುತಿನ ಚೀಟಿ/ ಪಾನ್ ಕಾರ್ಡ್/ ವಾಹನ ಚಾಲನ ಪರವಾನಿಗೆಯನ್ನು ತೋರಿಸಬೇಕು.  ಅರ್ಜಿ ಶುಲ್ಕ ಸಾಮಾನ್ಯ ವರ್ಗ ಮತ್ತು ರಕ್ಷಣಾ ಇಲಾಖೆಯವರಿಗೆ ರೂ. 500/- ಮತ್ತು ಪ.ಜಾ/ ಪಂಗಡಕ್ಕೆ ರೂ. 350/- ಗಳನ್ನು ನಿಗದಿಪಡಿಸಲಾಗಿದ್ದು, ಇದನ್ನು ಪ್ರಾಶುಂಪಾಲರು, ಸೈನಿಕ ಶಾಲೆ ಕೊಡಗು, ಕುಶಾಲನಗರದಲ್ಲಿ ಸಂದಾಯವಾಗುವಂತೆ ಡಿಮ್ಯಾಂಡ್ ಡ್ರಾಫ್ಟ್‍ನ್ನು ತೆಗೆದು ಕಳುಹಿಸಬೇಕು.  ಹಾಗೂ ಪ್ರತಿ ಡಿ.ಡಿಯನ್ನು ಪಡೆದು ಲಗತ್ತಿಸಬೇಕು.
    ಅರ್ಜಿಯನ್ನು ಭರ್ತಿ ಮಾಡಿ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣ ಪತ್ರದ ಪ್ರತಿಯನ್ನು ಲಗತ್ತಿಸಿ ಡಿಸೆಂಬರ್. 05 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಶಾಲೆಯ ವೆಬ್‍ಸೈಟ್ ಅಥವಾ ದೂರವಾಣಿ ಸಂಖ್ಯೆ 08276-278963 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಗಂಗಾವತಿ ನಗರಸಭೆ ವತಿಯಿಂದ ವಿವಿಧ ಸೌಲಭ್ಯ : ಅರ್ಜಿ ಆಹ್ವಾನ


ಕೊಪ್ಪಳ ಅ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ ವತಿಯಿಂದ ಪ್ರಸಕ್ತ ಸಾಲಿನ ದೀನ್‍ದಯಾಳ ಅಂತ್ಯೋದಯ (ಡೇ-ನಲ್ಮ) ಬಿ.ಪಿ.ಎಲ್. ರಹಿವಾಶಿಗಳಿಗೆ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಿವಿಧ ವಾರ್ಡ್ ಮತ್ತು ಪ್ರದೇಶಮಟ್ಟದ ಒಕ್ಕೂಟಗಳಲ್ಲಿ ಸ್ವಯಂ ಉದ್ಯೋಗ ಪ್ರಾರಂಭಿಸಿಕೊಳ್ಳಲು ಮತ್ತು ಗುಂಪು ಚಟುವಟಿಕೆ ನಿರ್ವಹಿಸುವವರಿಗೆ ಸಾಲ ಸೌಲಭ್ಯಕ್ಕಾಗಿ, ವಿವಿಧ ತರಬೇತಿಗಳಿಗಾಗಿ ಹಾಗೂ ಸ್ವ-ಸಹಾಯ ಸಂಘಗಳನ್ನು ರಚಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
    ಯೋಜನೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಮೂಲಕ ಉದ್ಯೋಗ ನಿಯುಕ್ತಿಗಾಗಿ 310, ಸ್ವ-ಸಹಾಯ ಗುಂಪುಗಳ ರಚನೆ 33, ಹಾಗೂ 250 ನಗರ ಬೀದಿಬದಿ ವ್ಯಾಪಾರಿಗಳಿಗೆ ಬೆಂಬಲ (ಸಮಿಕ್ಷೆ ಮೂಲಕ ಗುರಿತಿಸಲಾದ) ಗುರಿಯನ್ನು ನಿಗದಿ ಪಡಿಸಲಾಗಿದ್ದು, ಅರ್ಜಿಯನ್ನು ನಗರಸಭೆ ಕಾರ್ಯಾಲಯದಿಂದ ಪಡೆದು ಭರ್ತಿ ಮಾಡಿ, ಜಾತಿ, ಆದಾಯ, ವಿದ್ಯಾರ್ಹತೆ ಪ್ರಮಾಣ ಪತ್ರಗಳು, ಮತದಾರರ ಭಾವಚಿತ್ರ ವಿರುವ ಕಾರ್ಡ್, ಬಿ.ಪಿ.ಎಲ್. ರೇಶನ್ ಕಾರ್ಡ್, ಆಧಾರ ಕಾರ್ಡ್ ಹಾಗೂ ಅನ್ವಯಿಸುವ ಇತರೆ ದಾಖಲೆಗಳನ್ನು ಸ್ವಯಂ ದೃಢೀಕರಿಸಿ  ಲಗತ್ತಿಸಿ, ದ್ವಿ ಪ್ರತಿಯಲ್ಲಿ ಅಕ್ಟೋಬರ್. 31 ರೊಳಗಾಗಿ ಸಲ್ಲಿಸಬೇಕು ಎಂದು  ಗಂಗಾವತಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಘ ಅಥವಾ ಒಕ್ಕೂಟಗಳನ್ನು ಸಂಪನ್ಮೂಲ ಸಂಸ್ಥೆಯಾಗಿ ಪರಿಗಣನೆ : ಪ್ರಸ್ತಾವನೆಗಳ ಆಹ್ವಾನ


ಕೊಪ್ಪಳ ಅ. 21 (ಕರ್ನಾಟಕ ವಾರ್ತೆ): ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಡೇ-ನಲ್ಮ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುವ ಎಸ್.ಜೆ.ಎಸ್.ಆರ್.ವೈ ಯೋಜನೆಯಡಿ ಸ್ಥಾಪಿಸಿರುವ ಸಮುದಾಯ ಅಭಿವೃದ್ಧಿ ಸಂಘ, ಅಥವಾ ಡೇ-ನಲ್ಮ ಯೋಜನೆಯಲ್ಲಿ ರಚಿಸಲಾಗಿರುವ ಕ್ಷೇತ್ರ ಮಟ್ಟದ ಒಕ್ಕೂಟಗಳನ್ನು ಸಂಪನ್ಮೂಲ ಸಂಸ್ಥೆಯನ್ನಾಗಿ ಪರಿಗಣಿಸಲು ಆಸಕ್ತರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ. 
ಡೇ-ನಲ್ಮ ಸಾಮಾಜಿಕ ದೃಢೀಕರಣ ಮತ್ತು ಸಾಂಸ್ಥಿಕ ಅಭಿವೃದ್ಧಿ ಉಪಘಟಕದಡಿ, ಗಂಗಾವತಿ ನಗರಸಭೆಯ ಕಾರ್ಯವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಂಪನ್ಮೂಲ ಸಂಸ್ಥೆಗಳನ್ನು ತೊಡಗಿಸಿಕೊಳ್ಳುವ ಉದ್ದೇಶವಿರುತ್ತದೆ.  ಈ ಸಂಸ್ಥೆಗಳನ್ನು ನಲ್ಮ ಯೋಜನೆಯ ಅನುಷ್ಠಾನದಡಿ ಮಾರ್ಗಸೂಚಿಯಂತೆ ಸ್ವ-ಸಹಾಯ ಗುಂಪುಗಳ ರಚನೆ, ಪ್ರದೇಶ ಮಟ್ಟದ ಒಕ್ಕೂಟ ರಚನೆ, ನಗರ ಮಟ್ಟದ ಒಕ್ಕೂಟ ರಚನೆ, ಬ್ಯಾಂಕ್ ಲಿಂಕೇಜ್ ಮಾಡುವುದು ಹಾಗೂ ಆರ್ಥಿಕ ಒಳಗೊಳ್ಳುವಿಕೆ ಯೊಂದಿಗೆ ಸಾಮಥ್ರ್ಯ ಅಭಿವೃದ್ಧಿ ಹಾಗೂ ಇತರೆ ತರಬೇತಿಗಳು ನೀಡುವುದು ನಗರದ ಎಲ್ಲ ಅರ್ಹ ಕುಟುಂಬಗಳನ್ನು ಸದಸ್ಯರ ಮೂಲಕ ಸ್ವ-ಸಹಾಯ ಸಂಘ ಹಾಗೂ ಒಕ್ಕೂಟಕ್ಕೆ ಸೇರ್ಪಡಿಸಿ ಸಾಮಾಜಿಕ ಸಂರಚನೆಯನ್ನು ಭದ್ರಗೊಳಿಸುವುದಾಗಿದ್ದು, ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಡೇ-ನಲ್ಮ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುವ ಕುರಿತು ಎಸ್.ಜೆ.ಎಸ್.ಆರ್.ವೈ ಯೋಜನೆಯಡಿಯಲ್ಲಿ ಸ್ಥಾಪಿಸಿರುವ ಸಮುದಾಯ ಅಭಿವೃದ್ಧಿ ಸಂಘ, ಅಥವಾ ಡೇ-ನಲ್ಮ ಯೋಜನೆಯಲ್ಲಿ ರಚಿಸಲಾಗಿರುವ ಕ್ಷೇತ್ರ ಮಟ್ಟದ ಒಕ್ಕೂಟಗಳನ್ನು ಸಂಪನ್ಮೂಲ ಸಂಸ್ಥೆಯನ್ನಾಗಿ ಪರಿಗಣಿಸುವ ಕುರಿತು ಆಸಕ್ತರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.  ಸಿ.ಡಿ.ಎಸ್/ ಎ.ಎಲ್.ಎಫ್ ರವರು ಅಕ್ಟೋಬರ್. 31 ರೊಳಗಾಗಿ ಗಂಗಾವತಿ ನಗರಸಭೆಯ ಕಾರ್ಯಾಲಯಕ್ಕೆ ನಿಯಮಾನುಸಾರ ಪ್ರಸ್ತಾವನೆಗಳನ್ನು ಕಛೇರಿ ಸಮಯದಲ್ಲಿ ಸಲ್ಲಿಸಬಹುದು. 
ಹೆಚ್ಚಿನ ಮಾಹಿತಿಗಾಗಿ ಸಮುದಾಯ ಅಭಿವೃದ್ಧಿ ತಜ್ಞರಾದ ಸಂಜಯ ಕೋರೆ ಮೊಬೈಲ್ ಸಂಖ್ಯೆ 9880652783 ಕ್ಕೆ ಸಂಪರ್ಕಿಸಬಹುದು ಎಂದು  ಗಂಗಾವತಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಗಮ ಸಂಗೀತ ತರಬೇತಿ ಶಿಬಿರ : ಅರ್ಜಿ ಆಹ್ವಾನ


ಕೊಪ್ಪಳ ಅ. 21 (ಕರ್ನಾಟಕ ವಾರ್ತೆ): ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಕಲಬುರಗಿಯಲ್ಲಿ ಸುಗಮ ಸಂಗೀತ ತರಬೇತಿ ಶಿಬಿರವನ್ನು ನವೆಂಬರ್. 8 ರಿಂದ ಏರ್ಪಡಿಸಲಾಗಿದ್ದು, ಭಾಗವಹಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
    ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ನವೆಂಬರ್. 8 ರಿಂದ 11 ರವರೆಗೆ ನಾಲ್ಕು ದಿನಗಳ ಸುಗಮ ಸಂಗೀತ ತರಬೇತಿ ಶಿಬಿರವನ್ನು ಪ್ರತಿದಿನ ಸಂಜೆ 4 ರಿಂದ 6 ಗಂಟೆವರೆಗೂ ಅಕಾಡೆಮಿಯ ಸದಸ್ಯರಾದ ಶಿವಣ್ಣ ಹೂಗಾರ ದೇಸಾಯಿ ಕಲ್ಲೂರ ಅವರ ಸಂಚಾಲಕತ್ವದಲ್ಲಿ ನೂತನ ವಿದ್ಯಾಲಯ ಸಂಸ್ಥೆ ಸ್ನಾತಕೋತ್ತರ ಸಂಗೀತ ಕೇಂದ್ರ ಕಲಬುರಗಿಯಲ್ಲಿ ಏರ್ಪಡಿಸಿದೆ.  ಶಿಬಿರದಲ್ಲಿ ಭಾಗವಹಿಸಲು 16 ರಿಂದ 24 ವರ್ಷ ವಯೋಮಿತಿಯಲ್ಲಿರಬೇಕು.  ಸಂಗೀತ ಕ್ಷೇತ್ರದಲ್ಲಿ 4 ವರ್ಷ ಅಭ್ಯಾಸ ಮಾಡಿರಬೇಕು.  ಕನ್ನಡದಲ್ಲಿ ಹಾಡಲು, ಓದಲು, ಬರೆಯಲು ಬರಬೇಕು. 
    ಅರ್ಜಿ ಸಲ್ಲಿಸಲು ಕಲಬುರಗಿ ವಿಭಾಗದ ವ್ಯಾಪ್ತಿಗೆ ಒಳಪಡುವ ಕೊಪ್ಪಳ, ಬಳ್ಳಾರಿ, ಬೀದರ್, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ಸ್ವವಿವರಗಳೊಂದಿಗೆ (ಹೆಸರು, ವಿಳಾಸ, ದೂರವಾಣಿ, ಮೊಬೈಲ್, ಜನ್ಮದಿನಾಂಕ ಪತ್ರದೊಂದಿಗೆ) ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ ಜೆ.ಸಿ ರಸ್ತೆ ಬೆಂಗಳೂರು – 2 ಅಥವಾ ಸದಸ್ಯ ಸಂಚಾಲಕರಾದ ಶಿವಣ್ಣ ಹೂಗಾರ ದೇಸಾಯಿ ಕಲ್ಲೂರ ಮೊ. ಸಂಖ್ಯೆ 9901572097, ಮೂಲಕ ಸಂಪರ್ಕಿಸಬಹುದು.  ಶಿಬಿರಾರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.  

ಖಾಲಿ ಇರುವ ನಗರ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೇಮಕ : ಅರ್ಜಿ ಆಹ್ವಾನ


ಕೊಪ್ಪಳ ಅ. 21 (ಕರ್ನಾಟಕ ವಾರ್ತೆ): ಕೊಪ್ಪಳ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಲ್ಲಿ ಖಾಲಿ ಇರುವ ನಗರ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಗೌರವಧನದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ 3 ಜನ, ಗಂಗಾವತಿ ನಗರ ಸಭೆ ವ್ಯಾಪ್ತಿಯಲ್ಲಿ 3 ಜನ, ಕುಷ್ಟಗಿ ಮತ್ತು ಕಾರಟಗಿ - ಪುರಸಭೆ ವ್ಯಾಪ್ತಿಯಲ್ಲಿ ತಲಾ ಒಬ್ಬರು, ಯಲಬುರ್ಗಾ ಪಟ್ಟಣ ಪಂಚಾಯತಿ, ಕುಕನೂರು ಪಟ್ಟಣ ಪಂಚಾಯತಿ  ಹಾಗೂ ಗಂಗಾವತಿ ತಾಲೂಕಿನ ಬೆನ್ನೂರು, ಬಸಾಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಲಾ ಒಬ್ಬರನ್ನು ನೇಮಕ ಮಾಡಿಕೊಳ್ಳಲಾಗುವುದು. 
ಅರ್ಜಿ ಸಲ್ಲಿಸಲು ನಗರ/ ಪಟ್ಟಣ/ ಗ್ರಾ.ಪಂ (ಯು.ಆರ್.ಡಬ್ಲ್ಯೂ ಮತ್ತು ವಿಆರ್.ಡಬ್ಲ್ಯೂ) ಕಾರ್ಯಕರ್ತರ ಹುದ್ದೆಗೆ ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸ ಹೊಂದಿರಬೇಕು.  ಸ್ಥಳೀಯರಿಗೆ ಹಾಗೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.  ವಿಕಲಚೇತನ ಅಭ್ಯರ್ಥಿಗಳು  ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.  18 ರಿಂದ 45 ವರ್ಷ ವಯೋಮಿತಿಯಲ್ಲಿರಬೇಕು.  ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ ಕೊಪ್ಪಳ, ಇವರಿಂದ ಪಡೆದು, ಸಕ್ಷಮ ಪ್ರಾಧಿಕಾರದಿಂದ ಪಡೆದ ವಾಸಸ್ಥಳ, ಎಸ್‍ಎಸ್‍ಎಲ್‍ಸಿ ಶೈಕ್ಷಣಿಕ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ವೈsದ್ಯಕೀಯ ಪ್ರಮಾಣ ಪತ್ರ/ ಅಂಗವಿಕಲರ ಗುರುತಿನ ಚೀಟಿ, ಆಧಾರ ಕಾರ್ಡ, ಅಂಗವಿಕಲತೆ ತೊರುವ ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ನವೆಂಬರ್. 13 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಎಂ.ಆರ್.ಡಬ್ಲ್ಯೂ.ಗಳನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡಾ ಕೂಟ : ಕೊಪ್ಪಳಕ್ಕೆ ದ್ವಿತೀಯ ಚಿಕ್ಕಬೊಮ್ಮನಾಳ ಶಾಲೆಯ 5 ವಿದ್ಯಾಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ


ಕೊಪ್ಪಳ ಅ. 21 (ಕರ್ನಾಟಕ ವಾರ್ತೆ): ರಾಮನಗರ ಜಿಲ್ಲೆಯಲ್ಲಿ ನಡೆದ ಪ್ರಾಥಮಿಕ ಶಾಲೆಗಳ ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡಾ ಕೂಟದಲ್ಲಿ ಕೊಪ್ಪಳಕ್ಕೆ ದ್ವಿತೀಯ ಸ್ಥಾನ ದೊರೆತಿದೆ.  ಅಲ್ಲದೇ ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ 5 ಜನ ವಿದ್ಯಾಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 
    ಪ್ರಾಥಮಿಕ ಶಾಲೆಗಳ ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡಾ ಕೂಟದಲ್ಲಿ ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾಥಿಗಳು ಭಾಗವಹಿಸಿ ರನ್ನರ್ ಆಫ್ (ದ್ವಿತೀಯ) ಆಗಿದ್ದಾರೆ.  ಹಾಗೂ ಶಾಲೆಯ 5 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಚಿಕ್ಕಬೊಮ್ಮನಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ. 

ಗಂಗಾವತಿಗೆ ಅಮೃತ್ ನಗರ ಯೋಜನೆ : ಅ. 23 ರಂದು ಕಾಮಗಾರಿಗೆ ಭೂಮಿಪೂಜೆ


ಕೊಪ್ಪಳ ಅ. 21 (ಕರ್ನಾಟಕ ವಾರ್ತೆ): ಅಮೃತ್ ನಗರ ಯೋಜನೆಯನ್ನು ಕೇಂದ್ರ ಸರ್ಕಾರವು ಗಂಗಾವತಿ ನಗರಕ್ಕೆ ಮಂಜೂರು ಮಾಡಿದ್ದು ಕಾಮಗಾರಿಗಳಿಗೆ ಅ. 23 ರಂದು ಬೆಳಿಗ್ಗೆ 11 ಗಂಟೆಗೆ ಗಂಗಾವತಿಯಲ್ಲಿ ಭೂಮಿ ಪೂಜೆ ನೆರವೇರಲಿದೆ ಎಂದು ಸಂಸದ ಕರಡಿ ಸಂಗಣ್ಣ ಅವರು ತಿಳಿಸಿದ್ದಾರೆ.
     ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಹಂಚಿಕೆ ಆಧಾರದಲ್ಲಿ ಅಮೃತ್ ನಗರ ಯೋಜನೆ ಅನುಷ್ಠಾನಗೊಳ್ಳಲಿದೆ.  ಕಾಮಗಾರಿಗಳಿಗೆ ಅಗತ್ಯ ಅನುದಾನದ ಪೈಕಿ ಶೇ. 50 ರಷ್ಟು ಕೇಂದ್ರ ಸರ್ಕಾರ ಭರಿಸಿದರೆ, ಶೇ. 20 ರಷ್ಟು ರಾಜ್ಯ ಸರ್ಕಾರ ಭರಿಸಲಿದೆ.  ಉಳಿದ ಅನುದಾನವನ್ನು ನಗರಸಭೆ ಹಾಗೂ ಸಾಲ ಸೌಲಭ್ಯ ಮೂಲಕ ಭರಿಸಲಾಗುತ್ತಿದೆ.  ಒಟ್ಟು 110. 78 ಕೋಟಿ ರೂ. ಗಳ ವೆಚ್ಚದಲ್ಲಿ ಅಮೃತ್ ನಗರ ಯೋಜನೆಯಡಿ ಗಂಗಾವತಿ ನಗರದಲ್ಲಿ ಕುಡಿಯುವ ನೀರಿನ ಪೂರೈಕೆ, ಒಳಚರಂಡಿ, ಫುಟ್‍ಪಾತ್, ಉದ್ಯಾನವನ ಮುಂತಾದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಅ. 23 ರಂದು ಬೆಳಿಗ್ಗೆ 11 ಗಂಟಗೆ ಗಂಗಾವತಿಯಲ್ಲಿ ಭೂಮಿ ಪೂಜೆ ನೆರವೇರಲಿದೆ.  ಕಾರ್ಯಕ್ರಮದಲ್ಲಿ ಸಂಸದ ಕರಡಿ ಸಂಗಣ್ಣ ಸೇರಿದಂತೆ, ಶಾಸಕರುಗಳು ಇತರೆ ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

Thursday, 19 October 2017

ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆ : ಅರ್ಜಿ ಸಲ್ಲಿಕೆಗೆ ಸೂಚನೆ


ಕೊಪ್ಪಳ ಅ. 19 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರರ ಮತಕ್ಷೇತ್ರ, ಕಲಬುರಗಿ ಮತದಾರರ ಪಟ್ಟಿಗಳನ್ನು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಹೊಸದಾಗಿ ತಯಾರಿಸಲಾಗುತ್ತಿದ್ದು, ಅರ್ಹ ಪದವೀಧರರು ನಿಗದಿತ ಅರ್ಜಿ ನಮೂನೆ-18 ರಲ್ಲಿ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
        ಪದವೀಧರ ಕ್ಷೇತ್ರದ ಮತದಾರ ಪಟ್ಟಿಯನ್ನು ಪ್ರತಿ ಚುನಾವಣೆಯ ಮೊದಲು ಹೊಸದಾಗಿ ತಯಾರಿಸಬೇಕಾಗಿದ್ದು, ಈಶಾನ್ಯ ಪದವೀಧರರ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ, ಈ ಹಿಂದೆ ಅಸ್ತಿತ್ವದಲ್ಲಿದ್ದ ಮತದಾರರ ಪಟ್ಟಿಯನ್ನು ಪರಿಗಣಿಸಲಾಗುವುದಿಲ್ಲ.  ಹೀಗಾಗಿ ಎಲ್ಲಾ ಅರ್ಹ ವ್ಯಕ್ತಿಗಳು, ಇದೀಗ ನಿಗದಿತ ನಮೂನೆಯಲ್ಲಿ, ಹೊಸದಾಗಿ ಅರ್ಜಿ ಸಲ್ಲಿಸಬೇಕು. 
        ಅರ್ಜಿ ಸಲ್ಲಿಸಲು ಭಾರತದ ಪ್ರಜೆಯಾಗಿರಬೇಕು.  ಆಯಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು.  2017 ನೇ ನವೆಂಬರ್ 01 ರ ದಿನಾಂಕಕ್ಕೆ ಮುಂಚೆ (ಅರ್ಹತಾ ದಿನಾಂಕ) ಕನಿಷ್ಠ ಮೂರು ವರ್ಷಗಳಷ್ಟು ಮೊದಲು ಭಾರತದಲ್ಲಿರುವ ಯಾವುದಾದರೊಂದು ವಿಶ್ವವಿದ್ಯಾಲಯದ ಪದವೀಧರರಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಅರ್ಹರಾಗಿರುತ್ತಾರೆ.  ತತ್ಸಮಾನ ವಿದ್ಯಾರ್ಹತೆಗಳ ಪಟ್ಟಿಯು ಆಯಾ ತಹಶೀಲ್ದಾರ ಕಾರ್ಯಾಲಯಗಳಲ್ಲಿ ಲಭ್ಯವಿರುತ್ತದೆ.  ಅರ್ಹತಾ ಪದವಿ ಪರೀಕ್ಷೆಯ ಫಲಿತಾಂಶವನ್ನು ವಿಶ್ವವಿದ್ಯಾಲಯ ಅಥವಾ ಸಂಬಂಧಪಟ್ಟ ಇತರೆ ಪ್ರಾಧಿಕಾರವು ಘೋಷಿಸಿ ಪ್ರಕಟಿಸಿದ ದಿನಾಂಕದಿಂದ 3 ವರ್ಷಗಳ ಅವಧಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. 
        ಮತದಾರರ ಪಟ್ಟಿ ತಯಾರಿಕೆ ವೇಳಾಪಟ್ಟಿ ಇಂತಿದೆ.  ಅರ್ಹ ಪದವೀಧರರು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ನವೆಂಬರ್ 07.  ಕರಡು ಮತದಾರರ ಪಟ್ಟಿ ಪ್ರಕಟಣೆ ದಿನಾಂಕ ನವೆಂಬರ್ 21, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿ ನವೆಂಬರ್ 21 ರಿಂದ ಡಿಸೆಂಬರ್ 21 ರವರೆಗೆ.  ಮತದಾರರ ಅಂತಿಮ ಪಟ್ಟಿಯನ್ನು 2018 ಜನವರಿ 19 ರಂದು ಪ್ರಕಟಿಸಲಾಗುವುದು.  ಪದವೀಧರರು ವೇಳಾ ಪಟ್ಟಿಯಂತೆ ನಿಗದಿತ ಸಮಯದಲ್ಲಿ ಅರ್ಜಿ ಸಲ್ಲಿಸಿ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಯಕ್ಷಗಾನ ಅಕಾಡೆಮಿಯಿಂದ ಫೆಲೋಶಿಪ್ : ಅರ್ಜಿ ಆಹ್ವಾನ


ಕೊಪ್ಪಳ ಅ. 19 (ಕರ್ನಾಟಕ ವಾರ್ತೆ): ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಪ್ರಸಕ್ತ ಸಾಲಿನ ಗಿರಿಜನ ಉಪಯೋಜನೆಯಡಿ ಸಂಶೋಧನಾ ಅಧ್ಯಯನಕ್ಕಾಗಿ (ಫೆಲೋಶಿಪ್) ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  
    ಕರ್ನಾಟಕ ಯಕ್ಷಗಾನ ಅಕಾಡೆಮಿಯು ಗಿರಿಜನ ಉಪಯೋಜನೆಯಡಿ ಅಕಾಡೆಮಿಯ ವ್ಯಾಪ್ತಿಗೆ ಒಳಪಡುವ ಯಕ್ಷಗಾನ ಕ್ಷೇತ್ರದಲ್ಲಿ 5 ತಿಂಗಳ ಕಾಲ ಸಂಶೋಧನಾ ಅಧ್ಯಯನ ಮಾಡಿ ಪ್ರಬಂಧ ಮಂಡಿಸುವವರಿಗೆ ಫೆಲೋಶಿಪ್ ನೀಡುವ ಯೋಜನೆಯೊಂದನ್ನು ಹಮ್ಮಿಕೊಂಡಿದೆ.  ಈ ಸಂಶೋಧನಾ ಕಾರ್ಯಕ್ಕಾಗಿ ಒಬ್ಬ ಸಂಶೋಧನಾ ಅಭ್ಯರ್ಥಿಗೆ 90,000/- ಹಾಗೂ ಮಾರ್ಗದರ್ಶಕರ ಗೌರವ ಸಂಭಾವನೆ ರೂ. 10,000/- ಗಳನ್ನು ನಿಗದಿಪಡಿಸಿದೆ.
     ಯಕ್ಷಗಾನದ ತೆಂಕುತಿಟ್ಟು, ಬಡಗುತಿಟ್ಟು, ಬಡಾಬಡಗುತಿಟ್ಟು, ತಾಳಮದ್ದಳೆ, ಮೂಡಲಪಾಯ, ಯಕ್ಷಗಾನ, ಬೊಂಬೆಯಾಟ, ಯಕ್ಷಗಾನದ ಇತರೆ ಪ್ರಕಾರಗಳಾಗಿದ್ದು,  ಅರ್ಜಿ ಸಲ್ಲಿಸಲು ಪರಿಶಿಷ್ಟ  ಪಂಗಡಕ್ಕೆ ಸೇರಿದವರಾಗಿರಬೇಕು.  ವಯೋಮಿತಿ 45 ವರ್ಷ ಮೀರಿರಬಾರದು.  ಕನ್ನಡ ಭಾಷಾ ವಿಜ್ಞಾನ, ಜಾನಪದ, ಸಮಾಜ ವಿಜ್ಞಾನ, ರಾಜ್ಯ ಶಾಸ್ತ್ರ , ಅರ್ಥಶಾಸ್ತ್ರ, ಮಹಿಳಾ ಅಧ್ಯಯನ, ಇತಿಹಾಸ, ಮಾನವಶಾಸ್ತ್ರ, ಪತ್ರಿಕೋದ್ಯಮ, ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ, ಇಂಗ್ಲೀಷ್, ಹಿಂದಿ ಇತ್ಯಾದಿ ಮಾನವಿಕ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿರುವವರು ಅರ್ಜಿ ಸಲ್ಲಿಸಬಹುದಾಗಿದೆ. 
         ಆಸಕ್ತರು ಆಯ್ಕೆ ಮಾಡಿಕೊಳ್ಳುವ ಅಧ್ಯಯನದ ವಿಷಯದ ಬಗ್ಗೆ ನಾಲ್ಕು ಪುಟಗಳ ಸಾರಲೇಖ (ಸಾರಾಂಶ) ಹಾಗೂ ತಮ್ಮ  ಸಾಧನೆಯ ಕಿರುಪರಿಚಯ ಹಾಗೂ ಜಾತಿ ಪ್ರಮಾಣ ಪತ್ರದೊಂದಿಗೆ ಅಕ್ಟೋಬರ್. 31 ರೊಳಗಾಗಿ ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, 2ನೇ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-2 ಇವರಿಗೆ ಅರ್ಜಿಯನ್ನು ಅಂಚೆ ಮೂಲಕ ಅಥವಾ ಇಮೇಲ್  kybabangalore@gmail.com ಮೂಲಕ ಕಳುಹಿಸಿಕೊಡಬೇಕು.  ಫೆಲೋಶಿಪ್ ಅರ್ಜಿ ನಮೂನೆಯನ್ನು ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.