Thursday, 7 September 2017

ಕಲಬುರ್ಗಿ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟ : ಹೆಸರು ನೊಂದಾಯಿಸಿಕೊಳ್ಳಲು ಸೂಚನೆ


ಕೊಪ್ಪಳ ಸೆ. 07 (ಕರ್ನಾಟಕ ವಾರ್ತೆ): ಕಲಬುರ್ಗಿ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟವನ್ನು ಆಯೋಜಿಸಲಾಗಿದ್ದು, ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ಅಥ್ಲೆಟಿಕ್ಸ್‍ನಲ್ಲಿ ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಸಂಘಟಕರಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
    ಕಲಬುರ್ಗಿ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟ ಸೆ. 13 ರಿಂದ 15 ರವರೆಗೆ ಕಲಬುರ್ಗಿ ಜಿಲ್ಲೆ ಚಂದ್ರಶೇಖರ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಘಟಿಸಲಿದ್ದು, ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಕಬಡ್ಡಿ, ಖೋಖೋ, ಹ್ಯಾಂಡ್‍ಬಾಲ್, ಟೆನ್ನಿಸ್, ಟೇಬಲ್ ಟೆನ್ನಿಸ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳು ಜರುಗಲಿವೆ.  ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‍ನಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಸೆ. 13 ರಂದು ಸಂಜೆ 05-00 ಗಂಟೆಯೊಳಗಾಗಿ ಹಾಜರಾಗಿ ಸಂಘಟಕರಲ್ಲಿ ಕಡ್ಡಾಯವಾಗಿ ಆಧಾರ ಕಾರ್ಡ ಝರಾಕ್ಸ್ ಪ್ರತಿಯೊಂದಿಗೆ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು.
    ಸೆ. 14 ರಂದು ಕಲಬುರ್ಗಿ ವಿಭಾಗ ಮಟ್ಟದ ದಸರಾ ಕ್ರೀಟಾ ಕೂಟಗಳನ್ನು ಪ್ರಾರಂಭಿಸಲಿದ್ದು, ತಂಡದ ನಾಯಕರು ತಮ್ಮ ತಂಡದೊಂದಿಗೆ ನೇರವಾಗಿ ಆಯಾ ಅಂಕಣದ ತೀರ್ಪುಗಾರರಲ್ಲಿ ವರದಿ ಮಾಡಿಕೊಳ್ಳಬೇಕು.  ಕ್ರೀಡಾ ಪಟುಗಳು ತಮ್ಮ ಹಾಸಿಗೆ ಹೊದಿಕೆ ಮತ್ತು ರೂಮ್ ಬೀಗದ ಕೀಗಳನ್ನು ತೆಗೆದುಕೊಂಡು ಹೋಗಬೇಕು.  ಕ್ರೀಡಾ ಪಟುಗಳು ಶಿಸ್ತಿನಿಂದ ವರ್ತಿಸಿ, ಯಾವುದೇ ಗದ್ದಲ ಗಲಾಟೆಯಾಗದೆ ಕ್ರೀಡಾ ಕೂಟವನ್ನು ಯಶಸ್ವಿಗೊಳಿಸಬೇಕು.  ಮಹಿಳಾ ಸ್ಪರ್ಧಾಳುಗಳು ಯಾವುದೇ ತರಹದ ಬೆಲೆ ಬಾಳುವ ವಸ್ತುಗಳನ್ನು ಹಾಕಿಕೊಂಡು ಬರಬಾರದು.  ಅದಕ್ಕೆ ತಾವೇ ಜವಾಬ್ದಾರರಾಗಿರುತ್ತಾರೆ.  ಊಟೋಪಹಾರದ ವ್ಯವಸ್ಥೆಯನ್ನು ಹಾಗೂ ವಸತಿ ವ್ಯವಸ್ಥೆಯನ್ನು ಸಂಘಟಕರು ಮಾಡಿದ್ದು, ಭಾಗವಹಿಸುವ ಸ್ಪರ್ಧಾಳುಗಳಿಗೆ ಕೊಪ್ಪಳ ಜಿಲ್ಲೆ ಕೇಂದ್ರ ಸ್ಥಾನದಿಂದ ಕಲಬುರ್ಗಿ ಜಿಲ್ಲೆ ಸಂಘಟನೆ ನಡೆಯುವ ಸ್ಥಳದವರೆಗೆ ಸಾಮಾನ್ಯ ಬಸ್ ಪ್ರಯಾಣ ಭತ್ಯೆಯನ್ನು ನೀಡಲಾಗುವುದು.   
    ಭಾಗವಹಿಸುವ ಸ್ಪರ್ಧಾಳುಗಳು ವಿಭಾಗ ಮಟ್ಟಕ್ಕೆ ಆಯ್ಕೆಯಾದ ತಂಡಗಳು ಸೆ. 13ರ ಸಂಜೆ 05-00 ಗಂಟೆಯೊಳಗಾಗಿ ತಮ್ಮ ತಂಡವನ್ನು ನೊಂದಾಯಿಸಿ, ಸೆ. 14 ರಂದು ಬೆಳಿಗ್ಗೆ 10-30 ಗಂಟೆಗೆ ಉದ್ಘಾಟನಾ ಸಮಾರಂಭಕ್ಕೆ ಕಡ್ಡಾಯವಾಗಿ ಹಾಜರಾಗಬೇಕು.  ಹೆಚ್ಚಿನ ಮಾಹಿತಿಗಾಗಿ ಅಧಿಕಾರಿಗಳ ಮೊ. ನಂ - 9482404848 ಮತ್ತು – 7899432227 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Post a Comment