Tuesday, 12 September 2017

ಸಾಮಾಜಿಕ ಚಿಂತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು- ಬಸವರಾಜ ರಾಯರಡ್ಡಿ


ಕೊಪ್ಪಳ, ಸೆ.12  (ಕರ್ನಾಟಕ ವಾರ್ತೆ): ದೀನ ದಲಿತರ, ಹಿಂದುಳಿದವರ ಏಳಿಗೆಗೆ ಶ್ರಮಿಸಿದ,  ಬ್ರಹ್ಮಶ್ರೀ ನಾರಾಯಣ ಗುರುಗಳು ಸಾಮಾಜಿಕ ಚಿಂತನೆಯ ಹರಿಕಾರರು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಬಣ್ಣಿಸಿದರು.
        ಕೊಪ್ಪಳ ಜಿಲ್ಲಾಡಳಿತದಿಂದ ನಗರದ ಸಾಹಿತ್ಯ ಭವನದಲ್ಲಿ ಮಂಗಳವಾರದಂದು ಸರ್ಕಾರಿ ಕಾರ್ಯಕ್ರಮವನ್ನಾಗಿ ಏರ್ಪಡಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
        ಕೇರಳ ರಾಜ್ಯದಲ್ಲಿ ಹುಟ್ಟಿ, ದಕ್ಷಿಣ ಭಾರತದ ದೀನ ದಲಿತರು, ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸಿದ ಅದ್ಭುತ ದಾರ್ಶನಿಕರು ಬ್ರಹ್ಮಶ್ರೀ ನಾರಾಯಣ ಗುರುಗಳು.  ಇತಿಹಾಸವನ್ನು ಗಮನಿಸಿದಾಗ ಮುಸ್ಲಿಂ, ಬೌದ್ಧ, ಜೈನ್, ಸಿಖ್ ಧರ್ಮಗಳನ್ನು ಮಹನೀಯರುಗಳು ಸ್ಥಾಪಿಸಿದ್ದಾರೆ.  ಆದರೆ, ಹಿಂದೂ ಧರ್ಮ ಸ್ಥಾಪನೆ ಮಾಡಿದವರು ಯಾರು ಎಂಬುದಕ್ಕೆ ಇದುವರೆಗೂ ಉತ್ತರ ಸಿಕ್ಕಿಲ್ಲ.  ವೇದ ಪುರಾಣಗಳು ಜನರಿಂದ, ಋಷಿಮುನಿಗಳಿಂದ ಬಂದವುಗಳು.  ಕಾಲಘಟದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು, ನಮಗಿಂತ ಶ್ರೇಷ್ಠರಿಲ್ಲ ಎಂಬ ಮನೋಭಾವ ಹೊಂದಿದವರ ಕಾರಣದಿಂದ ಜಾತಿ, ಉಪಜಾತಿಗಳು ಆಯಾ ಕಸುಬಿಗೆ ತಕ್ಕಂತೆ ಸೃಷ್ಟಿಸಿದ್ದ ಪರಿಣಾಮವಾಗಿ ಜಾತಿ ವ್ಯವಸ್ಥೆ ಬೆಳೆದುಬಂದು, ನಮ್ಮ ದೇಶದಲ್ಲಿ ಬಲವಾರಿ ಬೇರೂರಿದೆ.  ರಾಜಕೀಯ ಮುಖಂಡರುಗಳೇ ಜಾತೀಯತೆ ಮಾಡುತ್ತಿರುವುದು ವಾಸ್ತವ ಸಂಗತಿಯಾಗಿದೆ.  ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆ ತಂದು ಶೋಷಣೆ ನಡೆಸುವ ಷಡ್ಯಂತ್ರ ನಡೆಯುತ್ತಾ ಬಂದಿದೆ.   ಎಲ್ಲ ಜನಾಂಗ ಒಂದೇ ಎಂಬುದನ್ನು ವಿಚಾರವಾದಿಗಳು ಯೋಚಿಸುವ ಅಗತ್ಯವಿದೆ.  ಬ್ರಹ್ಮಶ್ರೀ ನಾರಾಯಣ ಗುರುಗಳು ಕೇರಳದಲ್ಲಿ ಹುಟ್ಟಿ, ಜಾತಿಭೇದ, ಲಿಂಗಭೇದವನ್ನು ನಿವಾರಿಸುವ ನಿಟ್ಟಿನಲ್ಲಿ ಮನುಕುಲಕ್ಕೇ ಕೊಡುಗೆ ನೀಡಿದ್ದಾರೆ.  ಸಂತರು, ಶರಣರು ಯಾವುದೇ ಜಾತಿಗೆ ಸೇರಿದವರಲ್ಲ, ಇಡೀ ಮನುಕುಲದ ಉದ್ಧಾರಕ್ಕೆ ಹುಟ್ಟಿಬಂದವರು, ಇವರು ಸಮಾಜದ ಆಸ್ತಿ.  ಇಂತಹ ಸಂತರ ಆದರ್ಶ, ಚಿಂತನೆಗಳನ್ನು ಎಲ್ಲರೂ ಮೆಚ್ಚಿಕೊಂಡು, ಅದರಂತೆ ನಡೆದಲ್ಲಿ ಅವರನ್ನು ಗೌರವಿಸಿದಂತೆ.   ಸಮಾಜ ಸುಧಾರಣೆಯ ನಿಟ್ಟಿನಲ್ಲಿ ದಿಟ್ಟತನದಿಂದ ನಾರಾಯಣ ಗುರುಗಳು ಕೈಗೊಂಡ ಮಹತ್ವದ ಕಾರ್ಯಗಳೇ, ಇಂದಿಗೂ ಅವರನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
        ನಾರಾಯಣ ಗುರುಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಉಡುಪಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ದಯಾನಂದ ಕುಮಾರ್ ಅವರು, ಹಿಂದೊಮ್ಮೆ ಅಸ್ಪøಷ್ಯತೆ, ಮೌಢ್ಯತೆ ಅತಿ ಹೆಚ್ಚು ಇದ್ದ ಕೇರಳ ರಾಜ್ಯ, ಇಂದು ಶೈಕ್ಷಣಿಕವಾಗಿ ಮುಂದುವರೆದಿದೆ ಎಂದರೆ ಅದಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಕೊಡುಗೆ, ಸಾಮಾಜಿಕ ಪರಿವರ್ತನೆ ಮಹತ್ವದ್ದಾಗಿದೆ.  1854 ರಲ್ಲಿ ಕೇರಳದಲ್ಲಿ ನಾರಾಯಣ ಗುರುಗಳು ಜನಿಸಿದ ಕಾಲಘಟ್ಟದಲ್ಲಿ, ದೇಶದಲ್ಲಿ ಬ್ರಿಟೀಷರ ಆಳ್ವಿಕೆಯಿತ್ತು.  ಕೆಲ ರಾಜಮನೆತನಗಳು ಬ್ರಿಟೀಷರ ಆಜ್ಞಾ ಪಾಲಕರಾಗಿದ್ದರು.  ಜನರ ಮೇಲೆ ಸುಮಾರು 200 ಬಗೆಯ ತೆರಿಗೆಗಳನ್ನು ವಿಧಿಸಲಾಗುತ್ತಿತ್ತು.  ಕೇರಳ ರಾಜ್ಯದಲ್ಲಿ ಆಗಿನ ಸಂದರ್ಭದಲ್ಲಿ ಸ್ತ್ರೀಯರು ಕುಪ್ಪಸ ತೊಡಲೂ ಸಹ ಅನುಮತಿ ಪಡೆಯುವಂತಹ ಸ್ಥಿತಿ ಹಾಗೂ ಅಸ್ಪøಷ್ಯತೆ ವ್ಯವಸ್ಥೆ, ಮೌಡ್ಯತೆ ತಾಂಡವವಾಡುತ್ತಿತ್ತು.  ಇವುಗಳ ಮಧ್ಯೆಯೇ ಬೆಳೆದ ನಾರಾಯಣ ಗುರುಗಳು, ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯವೆಂದರಿತು. ವೇದ, ಸಂಸ್ಕøತ, ಜ್ಯೋತಿಷ್ಯ, ನಾಟಕ, ಕಾವ್ಯ ಎಲ್ಲವನ್ನೂ ಅಧ್ಯಯನ ಮಾಡುವುದರ ಜೊತೆಗೆ, ಆಯುರ್ವೇದಲ್ಲೂ ಪಾಂಡಿತ್ಯವನ್ನು ಪಡೆದುಕೊಂಡರು.  ಸಾಮಾಜಿಕ ಪರಿವರ್ತನೆಗೆ ಮುಂದಾದ ನಾರಾಯಣ ಗುರುಗಳು 79 ದೇವಾಲಯಗಳನ್ನು ಸ್ಥಾಪಿಸುತ್ತಾರೆ.  ದೇವಾಲಯಗಳೆಂದರೆ ಆರಾಧನಾ ಕೇಂದ್ರ, ಸೌಹಾರ್ದತೆ, ಸಾಮರಸ್ಯ ಸಾರುವ ಕೇಂದ್ರಗಳಾಗಬೇಕು ಎಂಬುದು ಅವರ ಆಶಯವಾಗಿತ್ತು.  12 ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಶ್ರಮಿಸಿದ ಬಸವಣ್ಣನವರು ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳಲ್ಲಿ ಸಾಮಿಪ್ಯವಿದೆ. ಇದಕ್ಕಾಗಿಯೇ ನಾರಾಯಣ ಗುರುಗಳನ್ನು ಕೇರಳದ ಬಸವಣ್ಣ ಎನ್ನುತ್ತಾರೆ. ಮನುಕುಲದ ಒಳಿತಿಗಾಗಿ ದುಡಿದ ಯಾವುದೇ ಮಹನೀಯರನ್ನು ಒಂದೇ ಜಾತಿಗೆ ಸೀಮಿತರನ್ನಾಗಿಸಬಾರದು.  ಆಧುನಿಕತೆಯ ಭರಾಟೆಯಲ್ಲಿ ನಾರಾಯಣ ಗುರುಗಳ ತತ್ವಗಳು ಗೌಣವಾಗುತ್ತಿವೆ ಎಂಬ ಆತಂಕವಿದೆ.  ಸತ್ಯ, ಧರ್ಮ ಹಾಗೂ ನ್ಯಾಯದ ಸ್ಥಾಪನೆಯಾಗಬೇಕು ಎಂಬ ಅವರ ಆಶಯವನ್ನು ಈಡೇರಿಸಲು ನಾವು ಪಣತೊಡಬೇಕಿದೆ ಎಂದರು.
       ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ತಾಲೂಕಾ ಪಂಚಾಯತಿ ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದ್ರಿ, ಜಿ.ಪಂ. ಸದಸ್ಯ ರಾಮಣ್ಣ ಚೌಡ್ಕಿ, ನಗರಸಭೆ ಉಪಾಧ್ಯಕ್ಷೆ ಮೀನಾಕ್ಷಮ್ಮ,, ಮುತ್ತು ಕುಷ್ಟಗಿ, ತುಕಾರಾಮಪ್ಪ, ಸೂರಿಬಾಬು, ರವಿ ಈಳಿಗೇರ, ಈರಣ್ಣ ಅಂಗಡಿ, ರವಿ ಗಿಣಿಗೇರ, ಹೆಚ್.ಎಲ್. ಹಿರೇಗೌಡರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.   ಸಮಾರಂಭಕ್ಕೂ ಮುನ್ನ ನಗರದ  ಗವಿ ಮಠದ ಆವರಣದಿಂದ ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದವರೆಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆ ಅದ್ಧೂರಿಯಿಂದ ನೆರವೇರಿತು. ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಕಲಾತಂಡಗಳನ್ನು ಒಳಗೊಂಡಂತೆ ವಿವಿಧ ವೇಷಧಾರಿಗಳ ನೃತ್ಯವು ಮೆರವಣಿಗೆಯನ್ನು ಆಕರ್ಷಕವಾಗಿಸಿತು. 
Post a Comment