Thursday, 7 September 2017

ಗಂಗಾವತಿಯಲ್ಲಿ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮ


ಕೊಪ್ಪಳ ಸೆ. 07 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ಗಂಗಾವತಿ ನಗರದ ವಾರ್ಡ ನಂ-30 ರಲ್ಲಿ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. 

  ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗಂಗಾವತಿ ನಗರಠಾಣೆಯ ಎ.ಎಸ್.ಐ ಯಲ್ಲಪ್ಪನವರು, ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ರಡಿ ಯಾವುದೇ ಮಗುವಿಗೆ ದೈಹಿಕವಾಗಿ, ಮಾನಸಿಕವಾಗಿ ಹಿಂಸಿಸಿದಲ್ಲಿ ಅಥವಾ ಕಾನೂನಿನ ವಿರುದ್ಧವಾಗಿ ಪರಿತ್ಯಜಿಸಿದ್ದಲ್ಲಿ ಅಂಥಹ ವ್ಯಕ್ತಿಗಳಿಗೆ ಮೂರು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ರೂ. 1 ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶವಿದೆ. ಅಲ್ಲದೇ ಯಾರೇ ವ್ಯಕ್ತಿ, ಮಕ್ಕಳಿಗೆ ದೈಹಿಕ ಶಿಕ್ಷೆಯನ್ನು ನೀಡಿದಲ್ಲಿ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ರೂ 10000/-ದಂಡವನ್ನು ವಿಧಿಸಬಹುದಾಗಿದೆ ಆದ್ದರಿಂದ ಮಕ್ಕಳಿಗೆ ದೈಹಿಕ ಹಿಂಸೆ ನೀಡಬೇಡಿ.  ಈ ಕಾಯ್ದೆಯ ಮುಖ್ಯ ಉದ್ದೇಶ ಮಕ್ಕಳಸ್ನೇಹಿ ವಾತಾವರಣ ನಿರ್ಮಾಣ ಮಾಡುವುದಾಗಿದೆ ಎಂದರು. 
     ಮಕ್ಕಳ ವಿಶೇಷ ಪೊಲೀಸ್ ಘಟಕದ ಬಸಪ್ಪ ಹಾದಿಮನಿ ಅವರು ಮಾತನಾಡಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ರಡಿ 18 ವರ್ಷದೊಳಗಿನ ಯಾವುದೇ ಮಗುವಿಗೆ ಯಾರೇ ವ್ಯಕ್ತಿ ಲೈಂಗಿಕ ಉದ್ದೇಶದಿಂದ ಶಾಬ್ಧಿಕವಾಗಿ, ದೈಹಿಕವಾಗಿ ಅಥವಾ ಸಂಜ್ಞೆಯ ಮೂಲಕ ಅಶ್ಲೀಲ ಪದಗಳನ್ನು ಬಳಸಿ ಹಿಂಸಿಸುವದನ್ನು ಸಹ ಲೈಂಗಿಕ ಕಿರುಕುಳವೆಂದು ಪರಿಗಣಿಸಲಾಗುತ್ತದೆ. ಈ ಅಪರಾಧಕ್ಕೆ 3ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡರಿಂದಲೂ ದಂಡಿಸಬಹುದಾಗಿದೆ.  ಯಾವುದೇ ಮಗುವಿಗೆ ಚುಡಾಯಿಸುವದು, ಅಶ್ಲೀಲ ಪದಗಳನ್ನು ಬಳಸಿ ಕಿರುಕುಳವನ್ನು ನೀಡುತ್ತಿರುವುದು ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 100 ಗೆ ಕರೆಮಾಡಿ ದೂರು ನೀಡಬಹುದಾಗಿದೆ. ದೂರುದಾರರ ಮಾಹಿತಿಯನ್ನು ಯಾವುದೇ ಸಂದರ್ಭದಲ್ಲಿಯೂ ಬಹಿರಂಗಪಡಿಸಲಾಗುವದಿಲ್ಲಾ. ಸುಳ್ಳು ದೂರು ನೀಡಿದ್ದು ಕಂಡು ಬಂದಲ್ಲಿ ಸದರಿ ಕಾಯ್ದೆಯಡಿಯಲ್ಲಿ ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡೂ ವಿಧಿಸಲು ಅವಕಾಶವಿದೆ ಎಂದರು.
    ಜಿಲ್ಲಾ ಮಕ್ಕಳ ರಕ್ಷಣಾ ಘಟಕದ  ರವಿಕುಮಾರ ಪವಾರ ಮಾತನಾಡಿ, ಗಂಗಾವತಿ ನಗರ ವ್ಯಾಪ್ತಿಯಲ್ಲಿ ಒಟ್ಟು 3 ನವಜಾತ ಶಿಶುಗಳನ್ನು ತೂರೆದು ಹೋದ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 2 ಶಿಶುಗಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಿದೆ, ಒಂದು ಪ್ರಕರಣದಲ್ಲಿ ಮಗು ಮೃತಪಟ್ಟಿರುತ್ತದೆ. ಈ ರೀತಿಯಲ್ಲಿ ಶಿಶುಗಳನ್ನು ಎಲ್ಲೆಂದರಲ್ಲಿ ಬಿಸಾಕದೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಅಥವಾ ಹತ್ತಿರದ ಮಕ್ಕಳ ಕಲ್ಯಾಣಾಧಿಕಾರಿಗಳಿಗೆ(ಪಿ.ಎಸ್.ಐ) ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಹಸ್ತಾಂತರಿಸಿದಲ್ಲಿ, ಅಂತಹ ಮಕ್ಕಳ ಅರೈಕೆ ಮತ್ತು ಪೋಷಣೆಯನ್ನು ಸರ್ಕಾರವೇ ವಹಿಸಿ ಇಲಾಖೆಯಿಂದ ಸೂಕ್ತ ಪುನರ್‍ವಸತಿ ಕಲ್ಪಿಸಲಾಗುವದು ಎಂದರು.
     ಕಾರ್ಯಕ್ರಮದಲ್ಲಿ ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ ಸಂಯೋಜಕರು, ಸಮೂಹ ಸಂಪನ್ಮೂಲ ಅಧಿಕಾರಿ ಶೇಖರಪ್ಪ ಹಾಗೂ ಹಿರಿಯ ಆರೋಗ್ಯ ಸಹಾಯಕ ಮಹಾದೇವಪ್ಪ ಭಾಗವಹಿಸಿದ್ದರು.
    ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯಮುನಮ್ಮ ಸ್ವಾಗತಿಸಿ ನಿರೂಪಿಸಿದರು. ವಾರ್ಡಿನ ಸಾರ್ವಜನಿಕರು ಹಾಗೂ ಮಹಿಳೆಯರು, ಯುವಕ ಹಾಗೂ ಯುವತಿಯರು ಪಾಲ್ಗೊಂಡಿದ್ದರು.
Post a Comment