Wednesday, 6 September 2017

ವಿಮಾ ಪಾಲಿಸಿ ಮೊತ್ತ ಪಾವತಿಸಲು ಗ್ರಾಹಕರ ವೇದಿಕೆ ತೀರ್ಪು


ಕೊಪ್ಪಳ ಸೆ. 06 (ಕರ್ನಾಟಕ ವಾರ್ತೆ): ಜೀವ ವಿಮಾ ಪಾಲಿಸಿ ಮೊತ್ತವನ್ನು ಸಕಾರಣವಿಲ್ಲದೆ ಪಾವತಿಸುವುದನ್ನು ನಿರಾಕರಿಸಿದ ವಿಮಾ ಕಂಪನಿ, ಪಾಲಿಸಿದಾರರ ನಾಮಿನಿಗೆ ಜೀವ ವಿಮಾ ಪಾಲಿಸಿ ಮೊತ್ತವನ್ನು ಒಂದು ತಿಂಗಳ ಒಳಗಾಗಿ ಪಾವತಿಸಬೇಕು.  ಹಾಗೂ ಸೇವಾ ನ್ಯೂನತೆಗೆ ಪರಿಹಾರವನ್ನು ಒದಗಿಸಬೇಕು ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ತೀರ್ಪು ನೀಡಿದೆ.
     ಗಂಗಾವತಿ ತಾಲೂಕು ಸಿಂಗನಾಳ ಗ್ರಾಮದ ತಿಮ್ಮಣ್ಣ ಅವರು ಕಳೆದ 2013 ರ ಅಕ್ಟೋಬರ್ 04 ರಲ್ಲಿ ಹೆಚ್‍ಡಿಎಫ್‍ಸಿ ಸ್ಟ್ಯಾಂಡರ್ಡ್ ಲೈಫ್ ಇನ್ಸೂರೆನ್ಸ್ ಕಂ. ಲಿ., ಮುಂಬೈ ಇವರಲ್ಲಿ ವಾರ್ಷಿಕ ಪ್ರೀಮಿಯಂ 4898 ರೂ. ಗಳನ್ನು ಪಾವತಿಸಿ, 12 ಲಕ್ಷ ರೂ. ಗಳ ಮೊತ್ತಕ್ಕೆ ಜೀವವಿಮಾ ಪಾಲಿಸಿ ಪಡೆದುಕೊಂಡಿದ್ದರು.  ಜೀವವಿಮೆ ಪಾಲಿಸಿ ಪಡೆದಿದ್ದ ತಿಮ್ಮಣ್ಣ ಅವರು ಅದೇ ತಿಂಗಳ 29 ರಂದು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು.  ಮೃತ ತಿಮ್ಮಣ್ಣ ಅವರ ಪತ್ನಿ ಶಂಕರಮ್ಮ ಅವರು ಪಾಲಿಸಿಯ ನಾಮಿನಿ ಆಗಿದ್ದರಿಂದ, ದಾಖಲೆಗಳ ಸಹಿತವಾಗಿ ಇನ್ಸೂರೆನ್ಸ್ ಕಂಪನಿಗೆ ಜೀವ ವಿಮಾ ಮೊತ್ತ ಪಾವತಿಸುವಂತೆ ಕ್ಲೇಮ್ ಅನ್ನು ಸಲ್ಲಿಸಿದರು.  ವಿಮಾ ಕಂಪನಿಯವರು ಕ್ಲೇಮ್ ಸ್ವೀಕರಿಸಿ, ಸ್ವೀಕೃತಿಯನ್ನು ಕಳುಹಿಸಿದರು.  ಆದರೆ ಪಾಲಿಸಿದಾರರ ನಾಮಿನಿಗೆ ಪಾಲಿಸಿಯ ಮೊತ್ತ ಪಾವತಿಸಲಿಲ್ಲ.  ಈ ಕುರಿತು ಶಂಕರಮ್ಮ ಅವರು, ವಿಮಾ ಕಂಪನಿಯಿಂದ ಪಾಲಿಸಿಯ ವಿಮಾ ಮೊತ್ತವನ್ನು ಕೊಡಿಸುವಂತೆ ಕೊಪ್ಪಳದ ಗ್ರಾಹಕರ ವೇದಿಕೆಯ ಮೊರೆ ಹೋದರು.  ಗ್ರಾಹಕರ ವೇದಿಕೆ ನೀಡಿದ ನೋಟಿಸ್‍ನಂತೆ ವಿಚಾರಣೆಗೆ ಹಾಜರಾದ ಕಂಪನಿಯವರು, ತಿಮ್ಮಣ್ಣ ತಮ್ಮಲ್ಲಿ ಪಾಲಿಸಿಯನ್ನು ಪಡೆದಿರುವುದನ್ನು ಒಪ್ಪಿಕೊಂಡರು.  ಆದರೆ ಪಾಲಿಸಿದಾರರು ಪಾಲಿಸಿಯನ್ನು ಪಡೆದ ಕೆಲವೇ ದಿವಸಗಳಲ್ಲಿ ಮೃತಪಟ್ಟಿದ್ದು, ಸಾವಿನ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.  ಮೃತ ಪಾಲಿಸಿದಾರರ ಸುತ್ತಮುತ್ತಲಿನ ಮನೆಯವರಲ್ಲಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ, ಮೃತ ತಿಮ್ಮಣ್ಣ ಡಯಾಬಿಟೀಸ್ ಹಾಗೂ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಹಲವು ಕಡೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.  ಹೀಗಾಗಿ ಮೃತ ಪಾಲಿಸಿದಾರರು, ಪಾಲಿಸಿ ಮಾಡಿಸುವಾಗ, ತಮ್ಮ ಅನಾರೋಗ್ಯದ ಸತ್ಯ ಸಂಗತಿಯನ್ನು ಮರೆಮಾಚಿ ಪಾಲಿಸಿ ಪಡೆದಿದ್ದಾರೆ.  ಆದ್ದರಿಂದ ಪಾಲಿಸಿಯ ಮೊತ್ತವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಗ್ರಾಹಕರ ವೇದಿಕೆ ಮುಂದೆ ವಾದಿಸಿದರು. 
     ಪ್ರಕರಣದ ವಿಚಾರಣೆ ನಡೆಸಿದ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಏಕತಾ ಹೆಚ್.ಡಿ. ಹಾಗೂ ಮಹಿಳಾ ಸದಸ್ಯೆ ಸುಜಾತಾ ಅಕ್ಕಸಾಲಿ ಅವರು, ಪಾಲಿಸಿದಾರ ತಿಮ್ಮಣ್ಣನು ಡಯಾಬಿಟೀಸ್ ಹಾಗೂ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದನೆಂದು ಹಾಗೂ ಅದಕ್ಕಾಗಿ ಹಲವು ಕಡೆ ಚಿಕಿತ್ಸೆ ಪಡೆಯುತ್ತಿದ್ದನೆಂಬುದಕ್ಕೆ ವಿಮಾ ಕಂಪನಿ ಯಾವುದೇ ತರಹದ ದಾಖಲೆ ಅಥವಾ ಸಾಕ್ಷಿಗಳನ್ನು ವೇದಿಕೆಯ ಮುಂದೆ ಹಾಜರುಪಡಿಸದೇ ಇರುವುದರಿಂದ, ವಿಮಾ ಕಂಪನಿಯ ವಾದವನ್ನು ಒಪ್ಪಲು ಸಾಧ್ಯವಿಲ್ಲ.  ಆದ್ದರಿಂದ ವಿಮಾ ಕಂಪನಿಯವರು ಮೃತ ತಿಮ್ಮಣ್ಣನವರ ಪತ್ನಿ ಶಂಕರಮ್ಮ ಅವರಿಗೆ ಪಾಲಿಸಿಯ ಮೊತ್ತ 12 ಲಕ್ಷ ರೂ. ಗಳನ್ನು, ಸೇವಾ ನ್ಯೂನತೆಗೆ ಪರಿಹಾರವಾಗಿ 5000 ರೂ. ಹಾಗೂ ದೂರಿನ ಖರ್ಚು 2500 ರೂ. ಗಳನ್ನು ಒಂದು ತಿಂಗಳ ಒಳಗಾಗಿ ಪಾವತಿಸುವಂತೆ ಕಳೆದ ಆಗಸ್ಟ್ 31 ರಂದು ತೀರ್ಪು ನೀಡಿದ್ದಾರೆ.
Post a Comment