Tuesday, 12 September 2017

ಕೊಪ್ಪಳದ ಹಸನ್ ಹಾಗೂ ಸಾಲಾರಜಂಗ್ ರಸ್ತೆ ಕಾಮಗಾರಿಗೆ ಭೂಮಿಪೂಜೆ : ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಚಾಲನೆಕೊಪ್ಪಳ ಸೆ. 12 (ಕರ್ನಾಟಕ ವಾರ್ತೆ): ಕೊಪ್ಪಳದ ಪ್ರಮುಖ ರಸ್ತೆಗಳಾಗಿರುವ ಹಸನ್ ರಸ್ತೆ ಹಾಗೂ ಸಾಲಾರ್‍ಜಂಗ್ ರಸ್ತೆಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡಬೇಕು.  ಈ ಕುರಿತು ಅಧಿಕಾರಿಗಳು ಸೂಕ್ತ ನಿಗಾ ವಹಿಸಬೇಕು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ ಮ್ಯಾಕ್ರೋ ಯೋಜನೆಯಡಿ, 6. 61 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಕೊಪ್ಪಳ ನಗರದ ಹಸನ್ (ಸಿಂಪಿಲಿಂಗಣ್ಣ) ರಸ್ತೆ ಮತ್ತು ಸಾಲಾರಜಂಗ ರಸ್ತೆ ಕಾಮಗಾರಿಗೆ ಮಂಗಳವಾರದಂದು ಕೊಪ್ಪಳದಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸರ್ಕಾರವು ಸಾರ್ವಜನಿಕರಿಗಾಗಿ ಹಲವಾರು ಯೋಜನೆ, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಜಾರಿಗೊಳಿಸುತ್ತಿದ್ದು, ಅವುಗಳು ಯಶಸ್ವಿಯಾಗಬೇಕಾದರೆ ಅಧಿಕಾರಿಗಳು, ಜನಪ್ರದಿನಿಧಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು.  ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ  ಹೈದ್ರಾಬಾದ್ ಕರ್ನಾಟಕದ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅನುದಾನ ಬಿಡುಗಡೆ ಮಾಡಲಾಗಿದ್ದು, ಉತ್ತಮ ಗುಣಮಟ್ಟದ ಸಿಸಿ ರಸ್ತೆ ನಿರ್ಮಾಣವಾಗಬೇಕು.  ರಸ್ತೆಗಳು ಹಾಳಾಗಲು ಅಲಕ್ಷತೆಯೆ ಕಾರಣ.  ಆದ್ದರಿಂದ ರಸ್ತೆಗಳ ನಿರ್ಮಾಣದ ಸಂದರ್ಭದಲ್ಲಿ ಗುಣಮಟ್ಟದ ಸಿಮೆಂಟ್,  ಮರಳು ಹಾಗೂ ಗುಣಮಟ್ಟದ ವಸ್ತುಗಳನ್ನು ಬಳಕೆಯಾಗಿ, ಸಮರ್ಪಕ ಕ್ಯೂರಿಂಗ್ ಕೂಡ ಆಗಬೇಕು.  ಕೊಪ್ಪಳ ನಗರದ ಹಸನ (ಸಿಂಪಿಲಿಂಗಣ್ಣ) ರಸ್ತೆ ಮತ್ತು ಸಾಲಾರಜಂಗ ರಸ್ತೆ ಅಲ್ಲದೇ ಜಿಲ್ಲಾಡಳಿತ ಭವನದಿಂದ ಹಿರೇಹಳ್ಳದ ವರೆಗೆನ ರಾಷ್ಟ್ರೀಯ ಹೆದ್ದಾರಿಯನ್ನು ಸಿಸಿ ರಸ್ತೆ ಮಾಡಲಾಗುವುದು.     
  ಇದೇ ಸೆ. 22 ರಂದು ಕೊಪ್ಪಳದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಮ್ಮಿಕೊಂಡಿದ್ದು, ರಾಜ್ಯದ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಲಿದ್ದಾರೆ.  ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.  ಸಮಾವೇಶದಲ್ಲಿ ಫಲಾನುಭವಿಗಳಿಗೆ ಮಾತನಾಡಲು ಅವಕಾಶ ಕಲ್ಪಿಸಲಾಗುವುದು.  ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕುಗಳ ಕೆರೆಗಳಿಗೆ ನೀರು ತುಂಬಿಲು 290 ಕೋಟಿ ರೂ. ಹಾಗೂ ಪಿ.ಜಿ ಸೆಂಟರ್ ನಿರ್ಮಾಣಕ್ಕಾಗಿ 25 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.  ಗದಗ-ವಾಡಿ ರೈಲ್ವೇ ಮಾರ್ಗ ಹೀಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಸರ್ಕಾರದಿಂದ ಜಾರಿಗೊಳಿಸಲಾಗಿದೆ.  ಕೊಪ್ಪಳ ನಗರದ ರಾಜ್ಯ ಕಾಲುವೆಯ ಬಗ್ಗೆ ನಗರಸಭೆಯ ಅಧ್ಯಕ್ಷರು, ಸದಸ್ಯರು ಮುತುವರ್ಜಿ ವಹಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಸೂಚನೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಶಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಕೊಪ್ಪಳ ನಗರದ ಮುಖ್ಯ ರಸ್ತೆಯನ್ನು 83 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು.  ಹಸನ (ಸಿಂಪಿಲಿಂಗಣ್ಣ) ರಸ್ತೆ ಮತ್ತು ಸಾಲಾರಜಂಗ ರಸ್ತೆಗಳ ಅಭಿವೃದ್ಧಿಯಿಂದ ನಗರದಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡಬಹುದಾಗಿದೆ.  ಈ ಕಾಮಗಾರಿಯು ಡಿಸೆಂಬರ್ ಕೊನೆಯ ಹಂತದಲ್ಲಿ ಪೂರ್ಣಗೊಳ್ಳಲಿದೆ.  ಬಸ್ ನಿಲ್ದಾಣದದಲ್ಲಿ, ರೈಲ್ವೆ ಸ್ಟೇಶನ್ ರಸ್ತೆ, ಬಸವೇಶ್ವರ ಸರ್ಕಲ್‍ದಿಂದ ಗಡಿಯಾರ ಕಂಬದ ವರೆಗೆ, ಗಡಿಯಾರ ಕಂಬದಿಂದ ಸಿಂದೋಗಿ ರಸ್ತೆಯವರೆಗೂ, ಹೀಗೆ ನಗರದ ಎಲ್ಲಾ ವಾರ್ಡಗಳಲ್ಲಿ ಸಿ.ಸಿ ರಸ್ತೆ ನಿರ್ಮಾಣ ಮಾಡಲಾಗುವುದು.  ಈಗಾಗಲೇ 100 ಫಲಾನುಭವಿಗಳಿಗೆ ಸಿಂದೋಗಿ ರಸ್ತೆಯಲ್ಲಿ ನಿವೇಶನಗಳನ್ನು ನೀಡಲಾಗಿದ್ದು, ಇನ್ನುಳಿದ ಫಲಾನುಭವಿಗಳಿಗೆ ಸೆ. 22 ರಂದು ಜಿಲ್ಲೆಯಲ್ಲಿ ನಡೆಯಲಿರುವ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮದ ಸಂದರ್ಭದಲ್ಲಿ ನೀಡಲಾಗುವುದು.  ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳಿಗೆ ಅಂದು ವಿಶೇಷ ಮನವಿ ಸಲ್ಲಿಸಲಾಗುವುದು.  ರಾಜ್ಯ ಸರ್ಕಾರ ಮೌಲಾನಾ ಅಬ್ದುಲ್ ಕಲಾಂ ಆಜಾದ ಮಾದರಿಯ ಶಾಲೆಗಳಿಗೆ 3 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ.  ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲು ನಿರ್ಧರಿಸಲಾಗಿದೆ.  ಸಣ್ಣ-ಸಣ್ಣ ಸಮುದಾಯಗಳ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.  ಬಡತನ ನಿರ್ಮೂಲನೆ ಮಾಡತಕ್ಕಂತಹ ಕಾರ್ಯ ಸರ್ಕಾರ ಮಾಡಿದೆ.  ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಕ್ಷೀರಧಾರೆ ಹೀಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ರೂಪಿಸುವುದರ ಮೂಲಕ ನಾಡಿನ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.  ಹಸಿವು ಮುಕ್ತ ಕರ್ನಾಟಕಕ್ಕೆ ಸದ್ಯ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟಿನ್‍ಗಳನ್ನು ಸ್ಥಾಪಿಸಲಿದ್ದು, ಎಲ್ಲಾ ಜಿಲ್ಲಾ ಹಾಗೂ ತಾಲೂಕಾ ಕೇಂದ್ರಗಳಲ್ಲಿ ಶೀಘ್ರದಲ್ಲಿಯೇ ಇಂದಿರಾ ಕ್ಯಾಂಟಿನ್ ಪ್ರಾರಂಭಗೊಳ್ಳಲಿವೆ.  ಐವತ್ತು ವರ್ಷಗಳ ಅಭಿವೃದ್ಧಿ ಕೇವಲ ಐದು ವರ್ಷಗಳಲ್ಲಿ ಆಗಿದೆ.  ಕೊಪ್ಪಳ ನಗರಕ್ಕೆ 24*7 ಮಾದರಿಯಲ್ಲಿ ನೀರು ಪೂರೈಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 

  ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಉಪಾಧ್ಯಾಕ್ಷೆ ಮೀನಾಕ್ಷಮ್ಮ, ತಾಲೂಕ ಪಂಚಾಯತ್ ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ ಖಾದ್ರಿ,  ಸೇರಿದಂತೆ ನಗರಸಭೆ ಸದಸ್ಯರುಗಳು ಹಾಗೂ ಗಣ್ಯರು, ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. 
Post a Comment