Wednesday, 20 September 2017

ಸೆ. 22 ರಂದು ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ : ರಾಜ್ಯಕ್ಕೆ ಮಾದರಿಯಾಗಲಿದೆ ತಳಕಲ್ ಸರ್ಕಾರಿ ಇಂಜಿನೀಯರಿಂಗ್ ಕಾಲೇಜು


ಕೊಪ್ಪಳ ಸೆ. 20 (ಕರ್ನಾಟಕ ವಾರ್ತೆ): ಹೈದ್ರಾಬಾದ್-ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿಯನ್ನು ತೊಡೆದುಹಾಕುವ ದಿಸೆಯಲ್ಲಿ ಸರ್ಕಾರ ಇತ್ತೀಚೆಗೆ ಈ ಪ್ರದೇಶದಲ್ಲಿ ಉನ್ನತ ಶಿಕ್ಷಣ, ಕಾಲೇಜು ಶಿಕ್ಷಣ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಈ ಪ್ರದೇಶದಲ್ಲಿ ಇತ್ತೀಚೆಗೆ ನಿರ್ಮಾಣಗೊಂಡಿರುವ ಹಲವು ಸರ್ಕಾರಿ ಮೆಡಿಕಲ್ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಪ್ರಥಮ ದರ್ಜೆ ಕಾಲೇಜುಗಳು ಇದಕ್ಕೆ ನಿದರ್ಶನವಾಗಿದೆ.
     ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಹಂತವನ್ನು ಪೂರ್ಣಗೊಳಿಸುವ ವಿದ್ಯಾರ್ಥಿಗಳು, ಕಾಲೇಜು ಮತ್ತು ಉನ್ನತ ಶಿಕ್ಷಣದ ಹಂತಕ್ಕೆ ತಲುಪುವ ಪ್ರಮಾಣ ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಕಡಿಮೆ ಇದೆ.  ಇದಕ್ಕೆ ಈ ಭಾಗದಲ್ಲಿ ಕಾಲೇಜು ಮತ್ತು ಉನ್ನತ ಶಿಕ್ಷಣದ ವ್ಯವಸ್ಥೆಯ ಕೊರತೆಯೇ ಬಹುತೇಕ ಕಾರಣ ಎಂದು ಹೇಳಲಾಗುತ್ತಿತ್ತು.  ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದ್ದು, ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಕಾಲೇಜು ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆ ಸುಧಾರಿತಗೊಳ್ಳುತ್ತಿದೆ.  ಸಂವಿಧಾನದ 371 ಜೆ ಕಲಂ ತಿದ್ದುಪಡಿಯಿಂದಾಗಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಮೀಸಲಾತಿ ದೊರೆಯುತ್ತಿದ್ದು, ಉದ್ಯೋಗಾಕಾಂಕ್ಷಿಗಳಲ್ಲಿ ಭರವಸೆಯ ಬೆಳಕು ಮೂಡಿದಂತಾಗಿದೆ.  ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಕೊಪ್ಪಳ ನಗರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣಗೊಂಡು, ಈಗಾಗಲೆ ಇಲ್ಲಿ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣ ಪ್ರಾರಂಭಗೊಂಡಿದೆ.  ಅಲ್ಲದೆ ಜಿಲ್ಲೆಯಲ್ಲಿ ಉನ್ನತ ವ್ಯಾಸಂಗಕ್ಕಾಗಿ ಕೊಪ್ಪಳದಲ್ಲಿ ಸ್ನಾತಕೋತ್ತರ ಶಿಕ್ಷಣ ಕೇಂದ್ರ ಪ್ರಾರಂಭಗೊಂಡಿವೆ.  ಜಿಲ್ಲೆಯಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಐಟಿಐ ಮತ್ತು ಪಾಲಿಟೆಕ್ನಿಕ್‍ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು.  ಇಂಜಿನಿಯರಿಂಗ್ ಶಿಕ್ಷಣಕ್ಕೆ ಇಲ್ಲಿನ ವಿದ್ಯಾರ್ಥಿಗಳು ಮತ್ತೆ ಬೇರೆ ಜಿಲ್ಲೆಯ ಕಡೆಗೆ ಮುಖ ಮಾಡುವ ಪರಿಸ್ಥಿತಿ ಇದೆ.  ಇದನ್ನರಿತೇ ಸರ್ಕಾರ, ಜಿಲ್ಲೆಯಲ್ಲಿಯೂ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಲು ಕ್ರಮ ಕೈಗೊಂಡಿದ್ದು, ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿರುವ ಬಸವರಾಜ ರಾಯರಡ್ಡಿ ಅವರೇ ಉನ್ನತ ಶಿಕ್ಷಣ ಇಲಾಖೆಯ ಖಾತೆಯನ್ನು ಪಡೆದಿದ್ದರಿಂದ, ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯ ಕನಸು ಶೀಘ್ರ ನನಸಾಗುವತ್ತ ಮುಂದಡಿಯಿಡಲು ಸಾಧ್ಯವಾಗಿದೆ.  ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್ ಬಳಿ ರಾಜ್ಯದಲ್ಲಿಯೇ ಮಾದರಿಯಾಗಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ಸರ್ಕಾರ ಮಂಜೂರಾತಿ ನೀಡಿ, 100 ಕೋಟಿ ರೂ. ಅನುದಾನ ಒದಗಿಸಿದೆ.  ಈ ಪೈಕಿ ಉನ್ನತ ಶಿಕ್ಷಣ ಇಲಾಖೆ 50 ಕೋಟಿ ರೂ. ಒದಗಿಸಿದರೆ, ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ 50 ಕೋಟಿ ರೂ. ನೀಡಿದೆ.  ತಳಕಲ್‍ನ ಇಂಜಿನಿಯರಿಂಗ್ ಕಾಲೇಜನ್ನು ರಾಜ್ಯದಲ್ಲಿಯೇ ಮಾದರಿ ಕಾಲೇಜನ್ನಾಗಿಸಲು ವಿಶೇಷ ಗಮನ ನೀಡಲಾಗುತ್ತಿದೆ.  ಕಾಲೇಜು ಕ್ಯಾಂಪಸ್ ಆವರಣದಲ್ಲಿಯೇ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗುತ್ತಿದೆ.  ಅಲ್ಲದೆ ಬೋಧಕ, ಬೋಧಕೇತರ ಸಿಬ್ಬಂದಿಗಳ ವಸತಿ ಗೃಹಗಳನ್ನು ಸಹ ಇಲ್ಲಿಯೇ ನಿರ್ಮಿಸಲಾಗುತ್ತಿದೆ.
        ಡಾ. ನಂಜುಂಡಪ್ಪ ವರದಿಯನುಸಾರ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದ ತಾಲೂಕು ಎಂದು ಗುರುತಿಸಲ್ಪಟ್ಟಿರುವ ಯಲಬುರ್ಗಾ ತಾಲೂಕಿನಲ್ಲಿಯೇ ಇಂಜಿನಿಯರಿಂಗ್ ಕಾಲೇಜು ನಿರ್ಮಾಣವಾಗುತ್ತಿರುವುದು ವಿಶೇಷ.  ಇಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ.  ಕಟ್ಟಡ ನಿರ್ಮಾಣಕ್ಕೆ 32 ಎಕರೆ 21 ಗುಂಟೆ ಭೂಮಿಯನ್ನು ಈಗಾಗಲೆ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ.  
ಕಾಲೇಜು ಕಟ್ಟಡದ ವೈಶಿಷ್ಟ್ಯ : ತಳಕಲ್‍ನಲ್ಲಿ ನಿರ್ಮಾಣವಾಗಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಮುಖ್ಯ ಕಟ್ಟಡ (ಅಕಾಡೆಮಿ ಬ್ಲಾಕ್), ಕಾರ್ಯಾಗಾರ (ವಕ್ರ್ಸ್‍ಶಾಪ್), ವಿದ್ಯಾರ್ಥಿನಿಯರ ವಸತಿ ನಿಲಯ (ಗಲ್ರ್ಸ್ ಹಾಸ್ಟೇಲ್), ಬೋಧಕೇತರ ಸಿಬ್ಬಂದಿ ವಸತಿ ಗೃಹಗಳು (ನಾನ್ ಟೀಚಿಂಗ್ ಸ್ಟಾಫ್ ಕ್ವಾಟ್ರಸ್), ಬೋಧಕ ಸಿಬ್ಬಂದಿ ವಸತಿ ಗೃಹಗಳು (ಟೀಚಿಂಗ್ ಸ್ಟಾಫ್ ಕ್ವಾಟ್ರಸ್) ಹೊಂದಿದೆ.  ಇದರ ಜೊತೆಗೆ  ಮೂಲಭೂತ ಸೌಕರ್ಯಗಳಾಗಿರುವ ರಸ್ತೆ, ಚರಂಡಿ, ವಿದ್ಯುತ್, ನೀರು ಸರಬರಾಜು ಅವಶ್ಯಕ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ.
    ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಟೆಂಡರ್ ಆಧಾರದ ಮೇಲೆ ಪುಣೆಯ ಮೆ: ಬಿ.ಜಿ. ಶಿರ್ಕೆ ಕಂಪನಿ ಇವರಿಗೆ ವಹಿಸಲಾಗಿದೆ. ಟೆಂಡರ್ ಮೊತ್ತ 111. 89 ಕೋಟಿ ರೂ. ನಿಗದಿಪಡಿಸಿದೆ.  ಕಾಮಗಾರಿ ಪೂರ್ಣಗೊಳಿಸಲು 24 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದೆ.  ಸುಸಜ್ಜಿತ ಮತ್ತು ಸುಂದರ ಕಟ್ಟಡ ನಿರ್ಮಾಣಕ್ಕೆ ಬೇಕಾದ ಎಲ್ಲಾ ವಾಸ್ತು ಶಿಲ್ಪ, ತಾಂತ್ರಿಕ ಮತ್ತು ಅವಶ್ಯಕ ಅಂಶಗಳನ್ನು ಅಳವಡಿಸಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ತಾಂತ್ರಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಲ್ಲಿ ತುಂಬಾ ಸಹಕಾರಿಯಾಗಲಿದೆ.
Post a Comment