Wednesday, 20 September 2017

ಆನೆಗೊಂದಿ-ಹಂಪಿ ಪಾರಂಪರಿಕ ತಾಣಗಳ ಸಂಪರ್ಕ : ಕಡೇಬಾಗಿಲು-ಬುಕ್ಕಸಾಗರ ಸೇತುವೆ ಸೆ. 22 ರಂದು ಮುಖ್ಯಮಂತ್ರಿಗಳಿಂದ ಉದ್ಘಾಟನೆಗೆ ಸಿದ್ಧ


ಕೊಪ್ಪಳ ಸೆ. 20 (ಕರ್ನಾಟಕ ವಾರ್ತೆ): ವಿಜಯನಗರ ಸಾಮ್ರಾಜ್ಯದ ಪಾರಂಪರಿಕ ತಾಣಗಳೆನಿಸಿರುವ ಕೊಪ್ಪಳ ಜಿಲ್ಲೆಯ ಆನೆಗೊಂದಿ ಪ್ರದೇಶ ಹಾಗೂ ಬಳ್ಳಾರಿ ಜಿಲ್ಲೆಯ ಹಂಪಿಯ ಪ್ರದೇಶಕ್ಕೆ ನೇರ ಸಂಪರ್ಕ ಕಲ್ಪಿಸುವ ಸಲುವಾಗಿ ತುಂಗಭದ್ರಾ ನದಿಗೆ ಗಂಗಾವತಿ ತಾಲೂಕು ಕಡೇಬಾಗಿಲು ಬಳಿ ಸೇತುವೆ ನಿರ್ಮಾಣದ ಕಾರ್ಯ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ. 22 ರಂದು ಉದ್ಘಾಟನೆಗೊಳಿಸಲಿದ್ದಾರೆ.

      ಉತ್ತರ ಕರ್ನಾಟಕ ಜನರ ಜೀವನಾಡಿ ಎನಿಸಿರುವ ತುಂಗಭದ್ರಾ ನದಿ ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳನ್ನು ಬೇರ್ಪಡಿಸುವ ಗಡಿಯಾಗಿಯೂ ಗುರುತಿಸಿಕೊಂಡಿದೆ.  ಅಲ್ಲದೆ ಇದೇ ನದಿಗೆ ಮುನಿರಾಬಾದ್‍ನಲ್ಲಿ ನಿರ್ಮಿಸಿರುವ ತುಂಗಭದ್ರಾ ಜಲಾಶಯ ಮೂರೂ ಜಿಲ್ಲೆಗಳ ಕೃಷಿಕರ ಆರ್ಥಿಕ ಪ್ರಗತಿಗೆ ಮುನ್ನಡಿ ಬರೆದಿದೆ.  ಹೀಗಾಗಿ ಈ ತ್ರಿವಳಿ ಜಿಲ್ಲೆಗಳ ಮಧ್ಯೆ ಸಂಪರ್ಕ ಸಾಧಿಸುವುದು ಸಂಪರ್ಕ, ವಾಣಿಜ್ಯ ಹಾಗೂ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಅತೀ ಅವಶ್ಯಕವಾಗಿದೆ. ಈಗ ಮುನಿರಾಬಾದ್ ಬಳಿ ಎನ್.ಹೆಚ್-13 ಕ್ಕೆ ಹೊಂದಿಕೊಂಡು ಇರುವ ಸೇತುವೆಯನ್ನು ಹೊರತುಪಡಿಸಿದರೆ ತುಂಗಭದ್ರಾ ನದಿ ದಾಟಲು 54.00 ಕಿ.ಮೀ ದೂರದ ಕಂಪ್ಲಿ ಸಮೀಪದ ಸೇತುವೆಯನ್ನೇ ಪ್ರಯಾಣಿಕರು ಬಳಸಬೇಕಾಗಿತ್ತು.  ಇದರಿಂದ ಸಾಕಷ್ಟು ಪ್ರಯಾಣ ದೂರವನ್ನು ಕ್ರಮಿಸಬೇಕಾಗಿದ್ದರಿಂದ ಪ್ರಯಾಣಿಕರಿಗೆ ಹೆಚ್ಚುವರಿ ಸಮಯ ಹಾಗೂ ಆರ್ಥಿಕ ಹೊರೆ ಬೀಳುವಂತಾಗಿತ್ತು.  ಸುವರ್ಣಯುಗ ಎಂದೇ ಬಣ್ಣಿಸಲ್ಪಟ್ಟಿರುವ ವಿಜಯನಗರ ಸಾಮ್ರಾಜ್ಯದ ಇತಿಹಾಸ ಸಾರುವ ತಾಣಗಳು ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಅಲ್ಲಲ್ಲಿ ಹರಡಿಕೊಂಡಿದ್ದು, ಇದಕ್ಕಾಗಿಯೇ ಈ ಪಾರಂಪರಿಕ ತಾಣವನ್ನು ಬೃಹತ್ ಬಯಲು ವಸ್ತು ಸಂಗ್ರಹಾಲವೆಂದೇ ಕರೆಯಲಾಗುತ್ತದೆ.  ಹಂಪಿಯ ವಿರುಪಾಕ್ಷ ದೇವಾಲಯ, ವಿಜಯವಿಠಲ ದೇವಾಲಯ, ಕಲ್ಲಿನ ರಥ ಹೀಗೆ ಬಳ್ಳಾರಿ ಜಿಲ್ಲೆಯ ಹಂಪಿ ಪ್ರದೇಶವನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ, ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಎನಿಸಿರುವ ಕೊಪ್ಪಳ ಜಿಲ್ಲೆ ಆನೆಗೊಂದಿ ಬಳಿಯ ಪಂಪಾ ಸರೋವರ, ಅಂಜನಾದ್ರಿ ಬೆಟ್ಟ, ಗಗನಮಹಲ್ ಹೀಗೆ ಖ್ಯಾತ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಮನಸಾಗದೇ ಇರಲು ಸಾದ್ಯವಿಲ್ಲ.  ಆದರೆ, ಹಂಪಿ ವೀಕ್ಷಿಸಿದವರು, ಆನೆಗೊಂದಿಗೆ ತೆರಳಬೇಕು ಎಂದರೆ ಸುತ್ತಿ ಬಳಸಿ ಬಹುದೂರ ಪ್ರಯಾಣಿಸಿ ತಲುಪಬೇಕಿತ್ತು.  ಆದರೆ ಇದೀಗ ಇಂತಹ ತೊಂದರೆ ಇಲ್ಲ.  ಹಂಪಿ ವೀಕ್ಷಿಸಿದವರು, ಆನೆಗೊಂದಿಗೆ ಆಗಮಿಸಿ ಪ್ರವಾಸಿ ತಾಣ ವೀಕ್ಷಿಸಲು ಕಷ್ಟಪಡಬೇಕಿಲ್ಲ. ಇದಕ್ಕೆ ಕಾರಣ ಕಡೇಬಾಗಿಲು ಬಳಿ ಬುಕ್ಕಸಾಗರವನ್ನು ಸಂಪರ್ಕಿಸುವ ಬೃಹತ್ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡು, ಲೋಕಾರ್ಪಣೆಗೊಳ್ಳುತ್ತಿದೆ.
ಹಿನ್ನೆಲೆ : ಹಂಪಿ-ಆನೆಗೊಂದಿ ಪಾರಂಪರಿಕ ತಾಣಗಳನ್ನು ಸಂಪರ್ಕಿಸುವ ಸಲುವಾಗಿ ಆನೆಗೊಂದಿ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ತೂಗು ಸೇತುವೆಯೊಂದರ ನಿರ್ಮಾಣ ಕಾರ್ಯ ಹಿಂದೆ ಪ್ರಾರಂಭವಾಯಿತು.  ಆದರೆ ಪಾರಂಪರಿಕ ತಾಣಗಳ ಸುರಕ್ಷತಾ ದೃಷ್ಟಿಯಿಂದ ಈ ಸೇತುವೆ ನಿರ್ಮಾಣ ಸಾಧುವಲ್ಲ ಎಂದು ಯುನೆಸ್ಕೋ ಆಕ್ಷೇಪಿಸಿದ ಪರಿಣಾಮವಾಗಿ, ಪೂರ್ಣಗೊಳ್ಳುವ ಹಂತ ತಲುಪಿದ್ದ ತೂಗು ಸೇತುವೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು.  ಹಲವು ವರ್ಷಗಳ ಬಳಿಕ, ಇದೇ ತೂಗುಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ನಿರ್ಧರಿಸಿದ ಸರ್ಕಾರ, ಕಾಮಗಾರಿಯನ್ನು ಪುನಃ ಪ್ರಾರಂಬಿಸಿ, ಇನ್ನೇನು ಸೇತುವೆ ಕಾಮಗಾರಿ ಪೂರ್ಣಗೊಂಡಿತು ಎನ್ನುವ ಹಂತ ತಲುಪಿದ ಸಂದರ್ಭದಲ್ಲಿ, ಸಂಪೂರ್ಣ ಕುಸಿದು, ಜನರ ಪ್ರಾಣಹಾನಿಯೂ ಸಂಭವಿಸಿತು.  ಹೀಗಾಗಿ ಈ ತೂಗು ಸೇತುವೆ ನಿರ್ಮಾಣವನ್ನು ಇಲ್ಲಿಗೇ ಕೈಬಿಡಲಾಯಿತು.
ಪಾರಂಪರಿಕ ತಾಣಗಳ ಸಂಪರ್ಕ : ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಆಗಲೇಬೇಕು ಎನ್ನುವ ಮಹತ್ವವನ್ನು ಅರಿತಿದ್ದ ರಾಜ್ಯ ಸರ್ಕಾರ  ಲೋಕೋಪಯೋಗಿ ಇಲಾಖೆಯಿಂದ ಸೂಕ್ತ ಸ್ಥಳ ತನಿಖೆ ಮಾಡಿಸಿ, ಎಲ್ಲ ಜನಸಾಮಾನ್ಯರಿಗೂ ಒಪ್ಪಿಗೆಯಾಗುವಂತೆ ಗಂಗಾವತಿಯಿಂದ ಮುನಿರಾಬಾದ್ (ವೈಕೆಎಂ ರೋಡ್, ಎಸ್.ಹೆಚ್-130) ರಸ್ತೆಯಿಂದ ಹೊಸಪೇಟೆ-ಶಿರಗುಪ್ಪ (ರಾ.ಹೆ-49) ರಸ್ತೆಯನ್ನು ಸಂಪರ್ಕಿಸುವ ಮಹದುದ್ದೇಶದಿಂದ ಕಡೇಬಾಗಿಲು ಮತ್ತು ಬುಕ್ಕಸಾಗರ ಗ್ರಾಮಗಳ ಮಧ್ಯೆ ಹೊಸ ಸೇತುವೆಯ ನಿರ್ಮಾಣವನ್ನು ಕೈಗೊಂಡು ಪೂರ್ಣಗೊಳಿಸಿದೆ.   ಇದರಿಂದ, ಗಂಗಾವತಿಯಿಂದ ಹೊಸಪೇಟೆಗೆ ಹೋಗುವ ದೂರ 14.00 ಕಿ.ಮೀ ಗಳಷ್ಟು ಕಡಿಮೆಯಾಗುತ್ತಿದ್ದು, ಸಾಕಷ್ಟು ಅನುಕೂಲವಾಗಿದೆ.  ಈ ಭಾಗದ ವಿಶ್ವ ಪಾರಂಪರಿಕ ಸ್ಥಳವಾದ ಹಂಪಿಯನ್ನು ಬಹು ಶೀಘ್ರವಾಗಿ ಸಂಪರ್ಕಿಸಲು ಸಾಧ್ಯವಾಗುತ್ತಿದ್ದು, ನದಿಯ ಇನ್ನೊಂದು ಪಾಶ್ರ್ವದ ಆನೆಗುಂದಿ, ಅಂಜನಾದ್ರಿ ಬೆಟ್ಟ, ಪಂಪಾ ಸರೋವರ ಹಾಗೂ ಹುಲಗಿ ದೇವಸ್ಥಾನವನ್ನು ಸಂಪರ್ಕಿಸಲು ಪ್ರವಾಸಿಗರಿಗೆ ಅತಿ ಅನುಕೂಲಕರವಾಗಿದೆ.  ಈ ಸೇತುವೆಯ ಕಾಮಗಾರಿ ನಬಾರ್ಡ-18 ರ ಯೋಜನೆ ಅಡಿಯಲ್ಲಿ ರೂ. 4028.00 ಲಕ್ಷಕ್ಕೆ ನಿರ್ಮಾಣಗೊಂಡಿದೆ.  ಈ ಕಾಮಗಾರಿಯನ್ನು ಮೆ//ಕೆ.ಎನ್.ಆರ್ ಕನ್ಸ್‍ಷ್ರಕ್ಷನ್ ಕಂಪನಿ, ಹೈದ್ರಾಬಾದ ಇವರಿಗೆ ವಹಿಸಲಾಗಿತ್ತು.  ಕಾಮಗಾರಿಯನ್ನು 2014 ರ ಮಾರ್ಚ್ 04 ರಂದು ಪ್ರಾರಂಭಿಸಿ, 2016 ರ ಡಿಸೆಂಬರ್ 31 ರಂದು ಪೂರ್ಣಗೊಳಿಸಲಾಗಿದೆ. 


ಸೇತುವೆಯ ವೈಶಿಷ್ಟ್ಯ : ಕಡೇಬಾಗಿಲು-ಬುಕ್ಕಸಾಗರ ಮಧ್ಯದ ಈ ಸೇತುವೆಯನ್ನು 4028 ಲಕ್ಷ ರೂ. ಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸೇತುವೆ ಒಟ್ಟು ಉದ್ದ 487. 50 ಮೀ. ಹೊಂದಿದೆ.  ಕಡೇಬಾಗಿಲು ಬಳಿ 1. 430 ಕಿ.ಮೀ. ಅಪ್ರೋಚ್ ರಸ್ತೆ ಹೊಂದಿದ್ದು, ಬುಕ್ಕಸಾಗರದ ಕಡೆ 2.275 ಕಿ.ಮೀ. ಅಪ್ರೋಚ್ ರಸ್ತೆ ಹೊಂದಿದೆ.  12 ಮೀ. ಡೆಕ್ ಅಗಲ ಹೊಂದಿದ್ದು, 1.50 ಮೀ. ಫುಟ್‍ಪಾತ್ ಸ್ಲಾಬ್ ಇದೆ.
     ತುಂಗಭದ್ರಾ ನದಿಗೆ ಕಟ್ಟಲಾಗಿರುವ ಈ ಸೇತುವೆ ಯೋಜನೆಯು ಲೋಕೋಪಯೋಗಿ ಇಲಾಖೆಯ ಹೆಮ್ಮೆಯ ಯೋಜನೆಯಾಗಿದ್ದು, ರಾಜ್ಯದ ಮುಖ್ಯಮಂತ್ರಿಗಳಿಂದ ಸೆ. 22 ರಂದು ಉದ್ಘಾಟನೆಗೊಳ್ಳಲಿದ್ದು, ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರ ಸೇವೆಗೆ ಅಣಿಯಾಗಲಿದೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಂಡಿವಡ್ಡರ್ ಅವರು.
Post a Comment