Friday, 8 September 2017

‘ಮಿಷನ್-200’ ಅಭಿಯಾನಕ್ಕೆ ಹಲಗೇರಿಯಲ್ಲಿ ಸಂಸದ ಕರಡಿ ಸಂಗಣ್ಣ ಚಾಲನೆ


ಕೊಪ್ಪಳ ಸೆ. 08 (ಕರ್ನಾಟಕ ವಾರ್ತೆ): ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕೊಪ್ಪಳ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾ ಪಂಚಾಯತಿ ವತಿಯಿಂದ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ “ಮಿಷನ್-200” ಕಾರ್ಯಕ್ರಮಕ್ಕೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಚಾಲನೆ ನೀಡಿದರು.  
    ಕೊಪ್ಪಳ ಜಿಲ್ಲೆಯನ್ನು ಅಕ್ಟೋಬರ್ 02 ರ ಒಳಗಾಗಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ನಿರ್ಮಿಸಲು ಜಿಲ್ಲಾ ಪಂಚಾಯತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಮಿಷನ್-200” ಅಂದರೆ ಜಿಲ್ಲೆಯಲ್ಲಿ ಸೆ. 08 ರಿಂದ  16 ರವರೆಗೆ 200 ಗಂಟೆಗಳಲ್ಲಿ 20 ಸಾವಿರ ಶೌಚಾಲಯ ನಿರ್ಮಿಸುವ ಗುರಿ ಹೊಂದಲಾಗಿದ್ದು, ಈ ಅಭಿಯಾನಕ್ಕೆ ಸಂಸದ ಕರಡಿ ಸಂಗಣ್ಣ ಅವರು ಚಾಲನೆ ನೀಡಿದರು.  ಬಳಿಕ ಮಾತನಾಡಿದ ಅವರು ಸಾರ್ವಜನಿಕರು ಬಯಲು ಬಹಿರ್ದೆಸೆ ಹೋಗುವುದರಿಂದ ಅನೇಕ ಮಾರಕ ರೋಗಗಳು ಹರಡುತ್ತವೆ.   ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ರೂ. 15,000/-, ಇತರೆ ಕುಟುಂಬಗಳಿಗೆ ರೂ. 12,000/-ಗಳ ಸಹಾಯಧನವನ್ನು ಸರ್ಕಾರದಿಂದ ನೀಡಲಾಗುತ್ತಿದೆ.  ಎಲ್ಲರೂ ವೈಯಕ್ತಿಕ ಶೌಚಾಲಯವನ್ನು ನಿರ್ಮಿಸಿಕೊಳ್ಳಿ. ಹಲಗೇರಿ ಗ್ರಾಮ ಪಂಚಾಯತಿಯು 1333 ಕುಟುಂಬಗಳು ಹೊಂದಿದ್ದು, 1249 ಕುಟುಂಬಗಳು ಈಗಾಗಲೆ ವೈಯಕ್ತಿಕ ಶೌಚಾಲಯಗಳನ್ನು ಹೊಂದಿವೆ. ಇನ್ನು ಕೇವಲ 84 ಕುಟುಂಬಗಳು ಹೊಂದಬೇಕಾಗಿರುತ್ತದೆ.  200 ಗಂಟೆಗಳ ಅವಧಿಯಲ್ಲಿ ಉಳಿದ ಕುಟುಂಬಗಳು ಶೌಚಾಲಯ ಹೊಂದಬೇಕೆಂಬ ಉದ್ದೇಶದಿಂದ “ಮಿಷನ್-200” ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲಾ ಪಂಚಾಯತಿಯಿಂದ ಹಮ್ಮಿಕೊಳ್ಳಲಾಗಿದ್ದು ಒಂದು ಶುಭ ಸಂಕೇತವಾಗಿದೆ ಎಂದರು.
    ಕೊಪ್ಪಳ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ. ಕೃಷ್ಣಮೂರ್ತಿ, ಹಲಗೇರಿ ಗ್ರಾ.ಪಂ. ಅಧ್ಯಕ್ಷ ದೇವಪ್ಪ ಓಜಿನಹಳ್ಳಿ, ಉಪಾಧ್ಯಕ್ಷ ಶರಣಯ್ಯ ಹಿರೇಮಠ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಸ್ವಸಹಾಯ ಸಂಘದ ಮಹಿಳಾ ಸದಸ್ಯರು, ಶಾಲಾ ಮುಖ್ಯೋಪಾಧ್ಯಯರುಗಳು, ಶಾಲಾ ಮಕ್ಕಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪಿಡಿಒ, ಜಿಲ್ಲಾ ಎಸ್.ಬಿ.ಎಂ ಸಮಾಲೋಚಕರು, ತಾಲೂಕ ಎಂ.ಜಿ.ಎನ್.ಆರ್.ಜಿ.ಎ ಸಿಬ್ಬಂದಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Post a Comment