Friday, 8 September 2017

ಮಿಷನ್ 200- ಅಭಿಯಾನದಡಿ ಜಿಲ್ಲೆಯಲ್ಲಿ 20 ಸಾವಿರ ಶೌಚಾಲಯ- ರಾಜಶೇಖರ ಹಿಟ್ನಾಳಕೊಪ್ಪಳ ಸೆ. 08 (ಕರ್ನಾಟಕ ವಾರ್ತೆ): ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಶೌಚಾಲಯ ಜಾಗೃತಿಗೆ ಖ್ಯಾತಿ ಹೊಂದಿರುವ ಕೊಪ್ಪಳ ಜಿಲ್ಲೆಯಲ್ಲಿ ಸ್ವಚ್ಛ ಭಾರತ ಯೋಜನೆಯಡಿ ಮಿಷನ್-200 ಅಂದರೆ ಸೆ. 08 ರಿಂದ ಎರಡುನೂರು ಗಂಟೆಯ ಅವಧಿಯಲ್ಲಿ 20 ಸಾವಿರ ಶೌಚಾಲಯಗಳನ್ನು ಕಟ್ಟಿಸುವ ನೂತನ ದಾಖಲೆಯನ್ನು ಕೊಪ್ಪಳ ಜಿಲ್ಲೆ ನಿರ್ಮಿಸಲಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ್ ಅವರು ಹೇಳಿದರು.

     ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ಸೆ. 08 ರಿಂದ ಮಿಷನ್-200 ನಡಿ 20 ಸಾವಿರ ಶೌಚಾಲಯ ನಿರ್ಮಿಸುವ ಅಭಿಯಾನಕ್ಕೆ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಫಲಾನುಭವಿಯೊಬ್ಬರ ಶೌಚಾಲಯಕ್ಕೆ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.


     ಶೌಚಾಲಯ ನಿರ್ಮಾಣ ಹಾಗೂ ಜಾಗೃತಿ ವಿಷಯದಲ್ಲಿ ಕೊಪ್ಪಳ ಜಿಲ್ಲೆ ರಾಜ್ಯವಷ್ಟೇ ಅಲ್ಲ ಇಡೀ ರಾಷ್ಟ್ರದಲ್ಲಿಯೇ ತನ್ನದೇ ಆದ ಛಾಪು ಮೂಡಿಸಿದೆ.  ಜಿಲ್ಲೆಯಲ್ಲಿ ಈ ವರ್ಷ 56 ಸಾವಿರ ಶೌಚಾಲಯ ನಿರ್ಮಿಸುವ ಗುರಿಯನ್ನು ಹೊಂದಲಾಗಿತ್ತು.  ಈ ಪೈಕಿ ಆಗಸ್ಟ್ ತಿಂಗಳವರೆಗೆ 13 ಸಾವಿರ ಶೌಚಾಲಯ ನಿರ್ಮಿಸಿದಿದು, ಇನ್ನು 48 ಸಾವಿರ ಶೌಚಾಲಯ ನಿರ್ಮಿಸುವುದು ಬಾಕಿ ಇದೆ.  ಜಿಲ್ಲೆಯನ್ನು ಅಕ್ಟೋಬರ್ 02 ರ ಒಳಗಾಗಿ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ  ಕೊಪ್ಪಳ ಜಿಲ್ಲಾ ಪಂಚಾಯತ ವತಿಯಿಂದ ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಸೆ.08 ರಿಂದ 16 ರವರೆಗೆ 200 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ 20,000 ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಇದರ ಅಂಗವಾಗಿ ಜಿಲ್ಲೆಯಾದ್ಯಂತ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶುಕ್ರವಾರದಂದು ಮಿಷನ್ 200 ಆಂದೋಲನಕ್ಕೆ ಚಾಲನೆ ನೀಡಲಾಗಿದೆ.  ನಿಗದಿತ ಅವಧಿಯಲ್ಲಿ 20 ಸಾವಿರ ಶೌಚಾಲಯ ನಿರ್ಮಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿಯೇ ಹೊಸ ಇತಿಹಾಸ ಸೃಷ್ಟಿಯಾಗಲಿದ್ದು, ಗುರಿ ಮುಟ್ಟುವ ವಿಶ್ವಾಸ ಹೊಂದಲಾಗಿದೆ.  ಇದಕ್ಕೆಂದೆ ಕಳೆದ 15 ದಿನಗಳಿಂದ ಎಲ್ಲ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಸಿದ್ಧತೆ ಕೈಗೊಳ್ಳಲಾಗಿತ್ತು.  ಶೌಚಾಲಯ ನಿರ್ಮಾಣಕ್ಕೆ ಅಗತ್ಯವಿರುವ ರಿಂಗ್, ಪಿಟ್ ತಯಾರಿಕೆ, ಮರಳು ಸಂಗ್ರಹ ಸೇರಿದಂತೆ ಎಲ್ಲ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ, ತಯಾರಿ ಮಾಡಿಕೊಳ್ಳಲಾಗಿದೆ.  ಗಾಂಧೀಜಿಯವರ ಆಶಯದಂತೆ ಗ್ರಾಮ ಸ್ವರಾಜ್ಯ ನಿರ್ಮಾಣವಾಗಬೇಕೆಂದರೆ, ಸ್ವಚ್ಛತೆಯೇ ಇದರ ಮೊದಲ ಹೆಜ್ಜೆಯಾಗಿದೆ.  ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಬಯಲು ಬಹಿರ್ದೆಸೆಯೇ ಬಹುತೇಕ ಕಾರಣವಾಗಿದೆ.  ಶೌಚಾಲಯ ಜಾಗೃತಿಗೆ ಕಳೆದ ತಿಂಗಳು ಕೊಪ್ಪಳದಲ್ಲಿ 10 ಸಾವಿರ ವಿದ್ಯಾರ್ಥಿಗಳಿಂದ ಕೈಗೊಂಡ ಮಾನವ ಸರಪಳಿ ಅಭೂತಪೂರ್ವ ಯಶಸ್ಸು ಕಂಡಿದೆ.  ಇದೀಗ ಜಿಲ್ಲೆಯಲ್ಲಿ 200 ಗಂಟೆಗಳಲ್ಲಿ 20 ಸಾವಿರ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಕೊಪ್ಪಳ ಜಿಲ್ಲೆಯಲ್ಲಿನ ಶೌಚಾಲಯ ಜಾಗೃತಿಗೆ ಮಹತ್ವದ ದಾಖಲೆ ನಿರ್ಮಾಣವಾಗಲಿದೆ.  ಇದಕ್ಕೆ ಎಲ್ಲ ಜನಪ್ರತಿನಿಧಿಗಳು, ಸಾರ್ವಜನಿಕರು, ಇಲಾಖಾ ಸಿಬ್ಬಂದಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯೂ ಬಹುಮುಖ್ಯವಾಗಿದೆ ಎಂದು ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ್ ಹೇಳಿದರು.
     ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಿಷನ್-200 ಅಭಿಯಾನವು ರಾಷ್ಟ್ರಮಟ್ಟದಲ್ಲಿ ಜಿಲ್ಲೆಯ ಶೌಚಾಲಯದ ಕೀರ್ತಿ ಪತಾಕೆಗೆ ಇನ್ನೊಂದು ಮೈಲುಗಲ್ಲಾಗಲಿದೆ.  ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಇದೊಂದು ದಾಖಲೆ ಆಗಲಿದೆ.  ಗಂಗಾವತಿ ತಾಲೂಕು ಈಗಾಗಲೆ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಆಗುವತ್ತ ದಾಪುಗಾಲಿಟ್ಟಿದ್ದು, ನಂತರದ ದಿನಗಳಲ್ಲಿ ಕೊಪ್ಪಳ, ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕುಗಳಲ್ಲಿ ಬಾಕಿ ಇರುವ ಶೌಚಾಲಯಗಳನ್ನು ನಿರ್ಮಿಸಿ, ಸಂಪೂರ್ಣ ಬಯಲು ಬಹಿರ್ದೆಸೆ ಜಿಲ್ಲೆಯಾಗಿ ಘೋಷಣೆಯಾಗಲಿದೆ.  ಜಿಲ್ಲೆಯಲ್ಲಿ 48 ಸಾವಿರ ಶೌಚಾಲಯ ನಿರ್ಮಾಣ ಬಾಕಿ ಇದ್ದು, ಇದೀಗ ಮಿಷನ್ 200 ನಲ್ಲಿ 20 ಸಾವಿರ ಶೌಚಾಲಯ ನಿರ್ಮಾಣವಾಗಲಿದೆ.  ಬಾಕಿ ಉಳಿಯುವ 28 ಸಾವಿರ ಶೌಚಾಲಯ ನಿರ್ಮಾಣಕ್ಕೂ ಇದೇ ಮಾದರಿಯಲ್ಲಿ ಆಂದೋಲನವನ್ನು ಹಮ್ಮಿಕೊಂಡು, ಪೂರ್ಣಗೊಳಿಸಲಾಗುವುದು ಎಂದರು.
     ತಾಲೂಕಾ ಪಂಚಾಯತಿ ಸದಸ್ಯ ಮೂರ್ತೆಪ್ಪ ಗಿಣಿಗೇರಾ, ಗ್ರಾ.ಪಂ. ಅಧ್ಯಕ್ಷ ಧರ್ಮರಾಜ್ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.  ಹಿಟ್ನಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಪ್ರೋತ್ಸಾಹ ನೀಡಿ, ಸ್ವಂತ ಖರ್ಚಿನಲ್ಲಿ ಸುಮಾರು 50 ಶೌಚಾಲಯಗಳನ್ನು ನಿರ್ಮಿಸಿಕೊಟ್ಟ ಗ್ರಾಮ ಪಂಚಾಯತಿ ಸದಸ್ಯ ರಮೇಶಪ್ಪ ಅವರಿಗೆ ಹಾಗೂ ಕಂಪಸಾಗರದ ಮಂಜು ಒಡ್ಡರ ಅವರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
     ಸಮಾರಂಭದಲ್ಲಿ ಗ್ರಾ.ಪಂ. ಸದಸ್ಯರುಗಳಾದ ಬುಡೇನ್‍ಸಾಬ್, ನಿಂಗಜ್ಜ ನಾಯಕ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚಿದಾನಂದ, ಶರಣಯ್ಯ ಸೇರಿದಂತೆ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.  ಪಿಡಿಒ ಜಂಬಣ್ಣ ಸ್ವಾಗತಿಸಿ, ವಂದಿಸಿದರು.
Post a Comment