Tuesday, 12 September 2017

ವಿಶ್ವ ಆತ್ಮಹತ್ಯೆ ತಡೆಗಟ್ಟುವ ಸಪ್ತಾಹ : ಸೆ. 13 ರಂದು ಕೊಪ್ಪಳದಲ್ಲಿ ಜಾಥಾ


ಕೊಪ್ಪಳ ಸೆ. 12 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲೆಯಲ್ಲಿ ‘ವಿಶ್ವ ಆತ್ಮಹತ್ಯೆ ತಡೆಗಟ್ಟುವ ಸಪ್ತಾಹ’ವನ್ನು ಆಚರಿಸಲಾಗುತ್ತಿದ್ದು, ‘ಒಂದು ನಿಮಿಷದ ಸಂಯಮದಿಂದ ಜೀವನ ಬದಲಿಸಿ ಎನ್ನುವ ಘೋಷವಾಕ್ಯದೊಂದಿಗೆ ಸೆ. 13 ರಿಂದ ಸಪ್ತಾಹ ಚಾಲನೆಗೊಳ್ಳಲಿದೆ.
     ವಿಶ್ವ ಆತ್ಮಹತ್ಯೆ ತಡೆಗಟ್ಟುವ ಸಪ್ತಾಹ ಅಂಗವಾಗಿ ಸೆ. 13 ರಂದು ಬೆಳಿಗ್ಗೆ 08 ಗಂಟೆಗೆ ಕೊಪ್ಪಳದ ಹಳೆ ಜಿಲ್ಲಾಸ್ಪತ್ರೆ ಆವರಣದಿಂದ ಜಾಗೃತಿ ಜಾಥಾ ನಡೆಯಲಿದೆ.
     ಪ್ರತಿವರ್ಷ ಆತ್ಮಹತ್ಯೆಯಿಂದ ಪ್ರಪಂಚದಾದ್ಯಂತ ಸುಮಾರು 8 ಲಕ್ಷ ಜನ ಮರಣ ಹೊಂದುತ್ತಿದ್ದಾರೆ.  ಇದರಲ್ಲಿ ಶೇ. 17 ರಷ್ಟು ಭಾರತೀಯರು ಎಂಬುದು ಆತಂಕಕಾರಿ ಸಂಗತಿ.  ಈ ವರ್ಷದ ‘ಅಂತರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವ ಸಂಘ’ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಸಂದರ್ಭದಲ್ಲಿ ‘ಒಂದು ನಿಮಿಷದ ಸಂಯಮದಿಂದ ಜೀವನ ಬದಲಿಸಿ’ ಎಂಬ ಘೋಷವಾಕ್ಯದಲ್ಲಿ ಜನರಲ್ಲಿ ಅರಿವು ಮೂಡಿಸಲು ನಿರ್ಧರಿಸಿದೆ.  ಅವಸರದ ಮನಸ್ಥಿತಿಯ ಆಲೋಚನೆಯಿಂದ ಅಥವಾ ಆಘಾತಕರ ಆಲೋಚನೆಯಿಂದ ಒಂದು ನಿಮಿಷ ಹೊರಬಂದು ಸಕಾರಾತ್ಮಕ ಮತ್ತು ಸಂಯಮದಿಂದ ಆಲೋಚಿಸಿದರೆ ಸುಂದರ ಜೀವನ ನಡೆಸಬಹುದು.  ಬದುಕುವುದೇ ಬೇಡ-ಸಾಯುವುದೇ ಲೇಸು ಎಂಬ ಆಲೋಚನೆ ಬಂದಾಗ ಒಂದು ನಿಮಿಷ ಆ ತೀರ್ಮಾನವನ್ನು ಮುಂದೂಡಿ, ನಂಬಿಕಸ್ಥ ವ್ಯಕ್ತಿಗಳಲ್ಲಿ ಸಂಪರ್ಕಿಸಿ, ಅವರ ಜೊತೆ ಮಾತನಾಡಿದರೆ ಸುಂದರ ಜೀವನ ನಡೆಸಬಹುದು.  ಅನುಭೂತಿಯ ಸಂಭಾಷಣೆಯಿಂದ ಒಂದು ಜೀವನವನ್ನು ಉಳಿಸಬಹುದು.
ಆತ್ಮಹತ್ಯೆ- ಎಚ್ಚರಿಕೆಯ ಲಕ್ಷಣಗಳು :
*********** ಇತ್ತೀಚಿನ ನಷ್ಟ, ಕುಟುಂಬದಲ್ಲಿ ನಿರಾಸಕ್ತಿ, ನಡವಳಿಕೆಯಲ್ಲಿ ಬದಲಾವಣೆ, ಮಾನಸಿಕ ಕಾಯಿಲೆ, ಜೀವನದಲ್ಲಿ ನಿರಾಸೆ, ಮದ್ಯಪಾನ/ದುಶ್ಚಟಗಳು ಹೆಚ್ಚಾಗುವುದು, ಕುಟುಂಬದಲ್ಲಿ ಆತ್ಮಹತ್ಯೆಯ ಇತಿಹಾಸ, ಸಾವಿನ ಬಗ್ಗೆ ಮಾತನಾಡುವುದು, ಸ್ವಂತ ಮಹತ್ವ ಸ್ವತ್ತುಗಳನ್ನು ದಾನ ನೀಡುವುದು.
ಆತ್ಮಹತ್ಯೆ ತಡೆಗಟ್ಟುವ ಬಗೆ :
********** ವ್ಯಕ್ತಿಗಳೊಂದಿಗೆ ಬೆರೆಯುವುದು, ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಅರಿವು ಮೂಡಿಸುವುದು, ಒಂಟಿಯಾಗಿ ಇರಲು ಬಿಡದಿರುವುದು, ಸಾಮಾಜಿಕ ಬೆಂಬಲ ದೊರೆಯುವಂತೆ ಮಾಡುವುದು, ಜೊತೆಗಿದ್ದು ಬೆಂಬಲಿಸುವುದು, ಸೂಕ್ತ ಮನೋವೈದ್ಯಕೀಯ ಗಮನ, ತುರ್ತು ಚಿಕಿತ್ಸೆ, ಮದ್ಯವ್ಯಸನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವುದು.
ಜನಸಮುದಾಯದ ಪಾತ್ರ :
*-****** ಆತ್ಮಹತ್ಯೆಯಿಂದ ಸಾವಿಗೀಡಾದ ಕುಟುಂಬದವರೊಂದಿಗೆ ಹಾಗೂ ಆತ್ಮಹತ್ಯೆಗೆ ಪ್ರಯತ್ನಪಟ್ಟವರೊಂದಿಗೆ ಉತ್ತಮ ಸಂಪರ್ಕ ಇಟ್ಟುಕೊಳ್ಳುವುದರಿಂದ ಮುಂದೆ ಇಂತಹ ಘಟನೆಗಳು ಆಗದಂತೆ ತಡೆಯಲು ಸಾಧ್ಯ.  ಸಮಾಜದ ಬೆಂಬಲ, ನಮ್ಮೊಂದಿಗೆ ಒಬ್ಬರಿದ್ದಾರೆ ಎಂಬ ಭಾವನೆಯೇ ಬಹಳ ಸಲ ಜೀವದ ರಕ್ಷಣೆಗೆ ಕಾರಣವಾಗುತ್ತದೆ.  ಔಪಚಾರಿಕ ಹಾಗೂ ಅನೌಪಚಾರಿಕ ಬೆಂಬಲವು ಬಹಳ ಅಗತ್ಯ.  ಆತ್ಮಹತ್ಯೆಯೂ ಒಂದು ಸಾಮಾಜಿಕ ಪಿಡುಗು.  ಈ ಬಗ್ಗೆ ಇರುವ ಅಪನಂಬಿಕೆಗಳು ಮತ್ತು ಕಳಂಕವನ್ನು ದೂರ ಮಾಡಬೇಕಿದೆ.  ಆತ್ಮಹತ್ಯೆ ತಡೆಗಟ್ಟುವ ಬಗ್ಗೆ ಯೋಚಿತವಾದ ಘೋಷಣೆಯೂ ಸಮಾಜದ ಮನೆ ಮನೆಗೆ ತಲುಪಬೇಕಿದೆ.
ಸಂವಹನ :
******ಆತ್ಮಹತ್ಯೆ ಮೊರೆಹೋಗುವ ಅಪಾಯದಂಚಿನಲ್ಲಿರುವವರ ಜೊತೆ ಉತ್ತಮ ಸಂವಹನ ಇಟ್ಟುಕೊಳ್ಳುವುದರಿಂದ ಇದನ್ನು ತಡೆಯಲು ಸಾಧ್ಯ.  ಸಹನೆ ಹಾಗೂ ಸಹಾನುಭೂತಿಯಿಂದ ಹೆಜ್ಜೆ ಇಡಲು ಪ್ರಯತ್ನಿಸಬೇಕು.  ಈ ನಿಟ್ಟಿನಲ್ಲಿ ಮಾಧ್ಯಮದವರು ಬಹುಮುಖ್ಯ.  ಕೆಲವೊಂದು ಪ್ರಕಟಣಗಳು ಮಾಧ್ಯಮದಲ್ಲಿ ಹೆಚ್ಚಾಗಿ ಬಿತ್ತರವಾದ ನಂತರ ಅದೇ ಆತ್ಮಹತ್ಯೆ ಪ್ರಯತ್ನಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿರುವುದು ಕಂಡುಬಂದಿವೆ.  ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಐಎಎಸ್‍ಪಿ ಇವರು ಮಾಧ್ಯಮಗಳಿಗೆ ಮಾರ್ಗಸೂಚಿಗಳನ್ನು ತಯಾರಿಸಿ ಬಿಡುಗಡೆ ಮಾಡಿವೆ.  ಇವುಗಳನ್ನು ಪಾಲಿಸುವುದರಿಂದಲೂ ಆತ್ಮಹತ್ಯೆ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಾಣಲು ಸಾಧ್ಯ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್. ರಾಮಕೃಷ್ಣ ಅವರು.
Post a Comment