Thursday, 28 September 2017

ಭರ್ಜರಿ ಯಶಸ್ಸಿಯೊಂದಿಗೆ ತೆರೆಕಂಡ ಮಧು ಮೇಳ : ಸುಮಾರು 05 ಸಾವಿರ ಜನರ ಭೇಟಿಕೊಪ್ಪಳ ಸೆ. 28 (ಕರ್ನಾಟಕ ವಾರ್ತೆ): ಕೊಪ್ಪಳದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ತೋಟಗಾರಿಕೆ ಇಲಾಖೆಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಮಧು ಮೇಳ ಸುಮಾರು 5 ರಿಂದ 6 ಲಕ್ಷ ರೂ. ವಹಿವಾಟು ಕಂಡಿದ್ದು, ಭರ್ಜರಿ ಯಶಸ್ವಿಯೊಂದಿಗೆ ತೆರೆಕಂಡಿದೆ.  

     ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಜೇನು ಪ್ರದರ್ಶನ ಮತ್ತು ಮೂರು ದಿನಗಳ ಮಾರಾಟ ಮೇಳದಲ್ಲಿ ಸುಮಾರು 4-5 ಸಾವಿರ ಜನರು ಮಧುಮೇಳವನ್ನು ಸಂದರ್ಶಿಸಿದ್ದಾರೆ.  ಈ ಮೇಳದಲ್ಲಿ ಜೇನುತುಪ್ಪವಷ್ಟೇ ಅಲ್ಲದೇ  ಜೇನಿನ ಇತರೆ ಉಪ ಉತ್ಪನ್ನಗಳಾದ ಜೇನು ಪರಾಗ, ಜೇನು ಮೇಣ, ಜೇನು ಅಂಟು, ಜೇನು ವಿಷ ಮತ್ತು ರಾಯಲ್ ಜೆಲ್ಲಿ ಮುಂತಾದವುಗಳು ಮತ್ತು ಜೇನು ಸಾಕಾಣಿಕೆಗೆ ಅಗತ್ಯ ಪರಿಕರಗಳಾದ ಜೇನುಪೆಟ್ಟಿಗೆ, ಸ್ಟ್ಯಾಂಡ್, ಹೊಗೆತಿದಿ, ಮುಖಪರದೆ ಮತ್ತು ಜೇನುತುಪ್ಪ ತೆಗೆಯುವ ಸರಳ ಯಂತ್ರಗಳನ್ನು ಪ್ರದರ್ಶಿಸಿ ಹಾಗೂ ಶುದ್ಧಜೇನು ಮತ್ತು ಕಲಬೆರೆಕೆ ಜೇನು ತುಪ್ಪ ವ್ಯತ್ಯಾಸ ಕಂಡುಹಿಡಿಯುವ ಬಗ್ಗೆ ಮಾಹಿತಿ ನೀಡಲಾಯಿತು.                               
ಜೇನು ಸಾಕಣೆ ಬಗ್ಗೆ ತೋಟಗಾರಿಕೆ ಬೆಳೆಗಾರರಲ್ಲಿ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಕೊಪ್ಪಳ ತೋಟಗಾರಿಕೆ ಇಲಾಖೆ (ಜಿಪಂ) ವತಿಯಿಂದ ಕಛೇರಿ ಆವರಣದಲ್ಲಿ ಸೆ.25 ರಿಂದ 27 ರವರೆ ಮೂರು ದಿನಗಳ ಕಾಲ ಜೇನು ಮೇಳವನ್ನು ಆಯೋಜಿಸಲಾಗಿತ್ತು.  ಇದೊಂದು ಅವೀಸ್ಮರಣೀಯ ಕಾರ್ಯಕ್ರಮವಾಗಿ ರೂಪುಗೊಂಡಿತು.
ತೋಟಗಾರಿಕೆಗೆ ಪೂರಕವಾಗಿರುವ ಒಂದು ಲಾಭದಾಯಕ ಉಪಕಸುಬು “ಜೇನು ಸಾಕಣೆ”.   ಜೇನು ಸಾಕಣೆಯಿಂದ ರೈತರು ಹೆಚ್ಚಿನ ಆದಾಯ ಪಡೆಯಲು ಸಹಕಾರ ಒಂದೆಡೆ ಆದರೆ, ಇನ್ನೊಂದೆಡೆ ತೋಟಗಾರಿಕೆ ಬೆಳೆಗಳಲ್ಲಿ ಪರಾಗಸ್ಪರ್ಶದಿಂದಾಗಿ ಇಳುವರಿ ವೃದ್ಧಿಸುವುದು.  ಹೀಗಾಗಿ ತೋಟಗಾರಿಕೆ ಇಲಾಖೆಯಿಂದ ಜೇನು ಸಾಕಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.  ಅಷ್ಟೇ ಅಲ್ಲದೇ “ಮಧುವನ ಅಭಿವೃದ್ಧಿ ಯೋಜನೆ” ಅಡಿ ತೋಟಗಾರಿಕೆ ಬೆಳೆಗಾರರು ಜೇನು ಸಾಕಣೆ ಮಾಡಿ ಹೆಚ್ಚಿನ ಆದಾಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಮೇಳ ಆಯೋಜಿಸಲು ಸುಮಾರು 2 ತಿಂಗಳಿಂದಲೇ ಸಿದ್ದತೆ ನಡೆಸಲಾಗಿತ್ತು.  ಇದಕ್ಕಾಗಿ ರಾಜ್ಯದಲ್ಲಿ ಜೇನು ಸಾಕಣೆ ಮಾಡುತ್ತಿರುವ ವಿವಿಧ ಯಶಸ್ವಿ ಜೇನು ಕೃಷಿಕರನ್ನು ಮತ್ತು ವಿಜ್ಞಾನಿಗಳನ್ನು ಸಂಪರ್ಕಿಸಿ 2 ಬಾರಿ ಪೂರ್ವಭಾವಿ ಸಭೆಗಳನ್ನು ಏರ್ಪಡಿಸಿ   ಸಷ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ಈ ಮೇಳವನ್ನು ಆಯೋಜಿಸಲು ನಿರ್ಧರಿಸಲಾಗಿತ್ತು.  ಅದರಂತೆ ಮೂರು ದಿನಗಳ ಕಾಲ ಆಯೋಜಿಸಿದ ಈ ಮೇಳ ಅತ್ಯಂತ ಫಲಪ್ರದವಾಗಿದೆ ಮತ್ತು ರೈತರು ಹಾಗೂ ಸಾರ್ವಜನಿಕರನ್ನು ತಲುಪವಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದೆ.
ಮಧು ಮೇಳಕ್ಕೆ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಚಾಲನೆ ನೀಡುವ ಮೂಲಕ ಮೇಳಕ್ಕೆ ಭರ್ಜರಿ ಓಪನ್ ಕೊಟ್ಟಿದ್ದರು.  ಕೊಪ್ಪಳ ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ ಅವರು ಮೇಳದಲ್ಲಿ ಪಾಲ್ಗೊಂಡು ರೈತರಿಗೆ ಉತ್ತೇಜನ ನೀಡಿದರು.  ಚಿತ್ರದುರ್ಗದ ನಿವೃತ್ತ ಕೃಷಿ ಅಧಿಕಾರಿ ಶಾಂತವೀರಯ್ಯ,  ಶಿರಸಿಯ ಮಧುಕೇಶ್ವರ ಹೆಗಡೆ, ಹಾಗೂ ರಾಮಾ ಮರಾಠಿ, ಬೆಳಗಾವಿ ಜಿಲ್ಲೆಯ ಯಶಸ್ವಿ ಜೇನು ಕೃಷಿಕರು ಹಾಗೂ ತಜ್ಞರು ಆಗಮಿಸಿ ರೈತರಿಗೆ, ಸಾರ್ವಜನಿಕರಿಗೆ ಮತ್ತು ತೋಟಗಾರಿಕೆ ಮಹಾವಿದ್ಯಾಲಯ, ಮುನಿರಾಬಾದ್‍ನಿಂದ ಆಗಮಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಜೇನು ಸಾಕಣೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಬದರಿ ಪ್ರಸಾದ ಅವರು ಜೇನು ಹುಳದ ಜೀವನ ಚಕ್ರ, ವಿವಿಧ ಬಗೆಯ ಜೇನು ನೊಣಗಳು, ಜೇನು ನೊಣದ ಶತ್ರುಗಳು ಮತ್ತು ಅವುಗಳ ಹತೋಟಿ ಬಗ್ಗೆ ವಿವರಣೆ ನೀಡಿದರು.  ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಇಂದರಗಿ ಗ್ರಾಮದ ಜೇನು ಕೃಷಿಕರಾದ ಲಿಂಗಪ್ಪ ಕುಂಬಾರ ಜೇನು ಪೆಟ್ಟಿಗೆ ನಿರ್ವಹಣೆಯ ಬಗ್ಗೆ ತಿಳುವಳಿಕೆ ನೀಡಿದರು.  ಪ್ರದರ್ಶನದಲ್ಲಿ ಶರಣು ಸಜ್ಜನ ಅವರು ನಿರ್ಮಿಸಿದ "ಮಧು ಹೀರುವ ದುಂಬಿ" ಕಲಾಕೃತಿ ಜನರ ಮನ್ನಣೆ ಪಡೆಯಿತು.  
ಈ ಮೂರು ದಿನಗಳಲ್ಲಿ ಒಟ್ಟಾರೆಯಾಗಿ 500 ಕ್ಕೂ ಹೆಚ್ಚಿನ ರೈತರು ಹಾಗೂ ಸಾರ್ವಜನಿಕರು  ಜೇನು ಸಾಕಣೆಕೆ ಬಗ್ಗೆ ಸಮಗ್ರ ಮಾಹಿತಿ ಪಡೆದಿದ್ದಾರೆ ಮತ್ತು ಜೇನು ಸಾಕಣಿಕೆ ಮಾಡುವ ಆಸಕ್ತಿಯನ್ನೂ ವ್ಯಕ್ತ ಪಡಿಸಿದ್ದಾರೆ.  ಈ ಮೇಳದಲ್ಲಿ ಸಂಜೀವಿನಿ ಕೃಷಿಕರ ಸಂಘ, ಬಸಾಪಟ್ಟಣ, ಗಂಗಾವತಿ ತಾಲೂಕು, ಕೊಪ್ಪಳ ಜಿಲ್ಲೆ, ಹಾಗೂ ಸವಿಮಧು ಇಂಡಸ್ಟ್ರೀಸ್, ಕಲ್ಲಳ್ಳಿ ಮನೆ ತಾರಗೋಡ ಶಿರಸಿ (ಉ.ಕ) ಮತ್ತು ತಮಿಳುನಾಡಿನ ಮಧುರೈಯಿಂದ :ವಿವಿಬ್ಸ್" ಎನ್ನುವ ಕಂಪನಿಯವರು ಜೇನು ಮತ್ತು ಜೇನು ಆಧಾರಿತ ಉತ್ಪನ್ನಗಳು, ಸಂಸ್ಕರಿಸಿದ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಾದ "ಆಮ್ಲಹನಿ" ಜೇನುಜಾಮ್, ಜೇನು ಲೇಹ್ಯ ಅಲ್ಲದೇ ವಿವಿಧ ಬೆಳೆಗಳಿಂದ ಪಡೆದ, ವಿವಿಧ ಔಷಧಿ ಗುಣಗಳಿಂದ ಕೂಡಿದ ಬಗೆ ಬಗೆಯ ಜೇನು ತುಪ್ಪ ಮಾರಾಟ ಮಾಡಿದ್ದಾರೆ.  ಅವರೆ ಹೇಳುವಂತೆ ಈ ಮೂರು ದಿನಗಳ ಮಾರಾಟ ಮೇಳದಲ್ಲಿ 800 ರಿಂದ 1000 ಕಿ. ಗ್ರಾಂ ಜೇನು, ಜೇನಿನ ಉತ್ಪನ್ನಗಳು ಮತ್ತು ಇತರೆ ಔಷಧಿ ಉತ್ಪನ್ನಗಳು ಮಾರಾಟವಾಗಿದ್ದು, ರೂ,  5-6 ಲಕ್ಷ ವಹಿವಾಟು ಆಗಿರುವ ಅಂದಾಜಿದೆ. 
ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ಮಧು ಮೇಳವನ್ನು ಆಯೋಜಿಸಿದ್ದು, ಮೇಳಕ್ಕೆ ಭೇಟಿ ನೀಡಿದ ಸಾಕಷ್ಟು ರೈತರು ಜೇನು ಸಾಕಾಣಿಕೆ ಬಗ್ಗೆ ಆಸಕ್ತಿ ತೋರಿದ್ದಾರೆ.  ಅಲ್ಲದೆ ಜೇನು ಸಾಕಾಣಿಕೆ ರೈತರಿಗೆ ಎಷ್ಟೊಂದು ಉಪಯುಕ್ತ ಎಂಬುದು ಅವರಿಗೂ ಮನವರಿಕೆಯಾಗಿದೆ. ಇಲಾಖೆಯಿಂದ ಆಯೋಜಿಸಿದ್ದ ಮಧು ಮೇಳದಲ್ಲಿ ಶುದ್ಧ ಜೇನು ತುಪ್ಪ ದೊರೆಯುತ್ತದೆ ಎಂಬುದು ಜನರಿಗೆ ಮನವರಿಕೆಯಾದ ಬಳಿಕ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಜೇನು ತುಪ್ಪ ಖರೀದಿಸಿದ್ದಾರೆ. ಸದ್ಯಕ್ಕೆ ಗ್ರಾಹಕರಿಂದ ಇನ್ನೂ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದ್ದು, ಮುಂಬರುವ ದಿನಗಳಲ್ಲಿ ಶುದ್ಧವಾದ ಜೇನು ತುಪ್ಪವನ್ನು ಮತ್ತು ಇತರೆ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎನ್ನುತ್ತಾರೆ ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು.
Post a Comment