Thursday, 28 September 2017

ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಸೆ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅ. 02 ರಂದು ಒಂದು ದಿನದ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಬಸವರಾಜ ರಾಯರಡ್ಡಿ ಅವರು  ಅ. 02 ರಂದು ಹಂಪಿ ಎಕ್ಸ್‍ಪ್ರೆಸ್ ರೈಲು ಮೂಲಕ ಬೆಳಿಗ್ಗೆ 8 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು.  ನಂತರ ಯಲಬುರ್ಗಾ ತಾಲೂಕಿನ ಕುದರಿಕೊಟಗಿ ಗ್ರಾಮದಲ್ಲಿ ಶ್ರೀ ಸತ್ಯಸಾಯಿ ಸೇವಾನಿಕೇತನ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿರುವ ವಸತಿಶಾಲೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ನಂತರ ಕೊಪ್ಪಳಕ್ಕೆ ಆಗಮಿಸಿ, ಜಿಲ್ಲಾಡಳಿತ ಆಯೋಜಿಸಿರುವ ಗಾಂಧಿಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಮಧ್ಯಾಹ್ನ 12-30 ಗಂಟೆಗೆ ಜಿಲ್ಲಾಡಳಿತ, ಜಿ.ಪಂ. ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿರುವ ಮಾತೃಪೂರ್ಣ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಮಂತ್ರಿಗಳು ಅದೇ ದಿನ ಮಧ್ಯಾಹ್ನ 02 ಗಂಟೆಗೆ ಹುಬ್ಬಳ್ಳಿಗೆ ತೆರಳಿ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

ಪರಿಶಿಷ್ಠರಿಗೆ ವಿವಿಧ ಸೌಲಭ್ಯ : ಅರ್ಜಿ ಆಹ್ವಾನ


ಕೊಪ್ಪಳ ಸೆ. 27 (ಕರ್ನಾಟಕ ವಾರ್ತೆ): ಬೆಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ ಅನುಷ್ಠಾನಗೊಳಿಸುವ ವಿವಿಧ ಕಾರ್ಯಕ್ರಮಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 
    ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳ ವಿವರ ಇಂತಿದೆ.  ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕ್ರೀಡಾಪಟುಗಳಿಗೆ ಸಹಾಯಧನ ನೀಡುವುದು.  ಸಂಘ-ಸಂಸ್ಥೆಗಳಿಗೆ ಫಿಟ್‍ನೆಸ್/ಜಿಮ್ ಸಾಮಾಗ್ರಿಗಳನ್ನು ಖರೀದಿಸಲು ಸಹಾಯಧನ ನೀಡುವುದು.  ಯುವಜನರಿಗೆ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಮುಖಾಂತರ ಸಾಹಸ ಕ್ರೀಡೆಗಳಲ್ಲಿ ತರಬೇತಿಯನ್ನು ನೀಡುವುದು.  ಯುವಜನರಿಗೆ ರಾಷ್ಟ್ರೀಯ ವೈಮಾನಿಕ ತರಬೇತಿ ಸಂಸ್ಥೆಯ ಮುಖಾಂತರ ಪಬ್ಲಿಕ್ ಪ್ರೈವೇಟ್ ಲೈಸೆನ್ಸ್ (ಪಿ.ಪಿ.ಎಲ್ ತರಬೇತಿ) ತರಬೇತಿಯನ್ನು ನೀಡುವುದು.  ಹಾಗೂ ಯುವಜನರಿಗೆ ವೃತ್ತಿಕೌಶಲ್ಯ ತರಬೇತಿಯನ್ನು ಕೊಡಿಸಲಾಗುವುದು.
    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅ. 15 ಕೊನೆಯ ದಿನವಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿರುವ ಕ್ರೀಡಾಪಟುಗಳು, ಯುವಜನರು, ಸಂಘ-ಸಂಸ್ಥೆಗಳು ಅಗತ್ಯ ಮಾಹಿತಿಯನ್ನು   https://dyes.kar.nic.in  ನಲ್ಲಿ ಆನ್‍ಲೈನ್ ಮೂಲಕ ನೀಡಿ ಅರ್ಜಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.  

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಾಲಸೌಲಭ್ಯ ಹಾಗೂ ಸಹಾಯಧನ : ಅರ್ಜಿ ಆಹ್ವಾನ


ಕೊಪ್ಪಳ ಸೆ. 27 (ಕರ್ನಾಟಕ ವಾರ್ತೆ): ಕೊಪ್ಪಳದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿನಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣ ಖರೀದಿಸಲು ಮತ್ತು ನಿರುದ್ಯೋಗಿ ಯುವಕ/ ಯುವತಿಯರಿಗೆ ಅಟೋಮೊಬೈಲ್ಸ್ ಸರ್ವೀಸ್ ಯೋಜನೆಯಡಿ ತರಬೇತಿ ನೀಡಿ, ಸ್ವಂತ ಉದ್ಯೋಗ ಕಲ್ಪಿಸಲು ಸಾಲ ಸೌಲಭ್ಯ ಹಾಗೂ ಸಹಾಯಧನ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ. 
ರೈತರಿಗಾಗಿ ಕೃಷಿ ಯಂತ್ರೋಪಕರಣ ಖರೀದಿಸಲು ಸಾಲ ಯೋಜನೆ : ಮತೀಯ ಅಲ್ಪಸಂಖ್ಯಾತರ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆರ್ಥಿಕವಾಗಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹಿಸಲು ಉಳುಮೆಯಿಂದ ಕೊಯ್ಲುವರೆಗೆ ಕೃಷಿ ಸಂಬಂಧಿತ ಉಪಯುಕ್ತ ವಿವಿಧ ಮಾದರಿಯ ಉಪಕರಣಗಳಾದ ಸಣ್ಣ ಟ್ರ್ಯಾಕ್ಟರ್, ಪವರ್ ಟ್ರೇಲ್ಲರ್, ಭೂಮಿ ಸಿದ್ದತೆ ಉಪಕರಣ, ನಾಟಿ/ ಬಿತ್ತನೆ, ಡಿಸೇಲ್ ಪಂಪಸೆಟ್, ಕೃಷಿ ಸಂಬಂಧಿತ ಮುಂತಾದ ಉಪಕರಣಗಳ ಖರೀದಿಗಾಗಿ ಘಟಕ ವೆಚ್ಚ ರೂ. 1 ಲಕ್ಷ ಸಾಲ ಸೌಲಭ್ಯ.  ಇದರಲ್ಲಿ ಶೇಕಡಾ 50 ರಷ್ಟು ಸಹಾಯಧನ ಮತ್ತು ಶೇ. 50 ರಷ್ಟು ಸಾಲದ ಮೊತ್ತವನ್ನು ಶೇ. 3ರ ಬಡ್ಡಿದರದಲ್ಲಿ 36 ಮಾಹೆಗಳ ಕಂತುಗಳಲ್ಲಿ ಮರುಪಾವತಿಗೆ ಅವಕಾಶವಿರುತ್ತದೆ.  ಶೇ. 50 ರಷ್ಟು ಸಾಲದ ಮೊತ್ತವನ್ನು ಮರುಪಾವತಿಸಿದ ನಂತರ ಶೇ. 50 ರ ಸಹಾಯಧನವನ್ನು ಬ್ಯಾಕ್ & ಸಬ್ಸಿಡಿಯಾಗಿ ಹೊಂದಾಣಿಕೆ ಮಾಡಿಕೊಂಡು ಸಾಲದ ಖಾತೆಯನ್ನು ಮುಕ್ತಾಯಗೊಳಿಸಲಾಗುವುದು.  ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡದೆ ಇದ್ದ ಪಕ್ಷದಲ್ಲಿ ಶೇ. 50 ರ ಸಹಾಯಧನ ಮೊತ್ತವನ್ನು ಸಾಲದ ಖಾತೆಗೆ ಸೇರಿಸಿ ಸಂಪೂರ್ಣ ಮೊತ್ತವನ್ನು ಮರುಪಾವತಿಗೆ ಕ್ರಮ ಕೈಗೊಳ್ಳಲಾಗುವುದು. 
ಅಟೋಮೊಬೈಲ್ ಸರ್ವೀಸ್ : ಮತೀಯ ಅಲ್ಪಸಂಖ್ಯಾತರ ಅಶಿಕ್ಷಿತ ನಿರುದ್ಯೋಗಿ ಯುವಕ/ ಯುವತಿಯರಿಗೆ ಅಟೋಮೊಬೈಲ್ಸ್ ಸರ್ವೀಸ್‍ನಲ್ಲಿ ಪ್ರತಿಷ್ಠಿತ ಅಟೋಮೊಬೈಲ್ಸ್ ಸರ್ವೀಸ್ ಸಂಸ್ಥೆಗಳ ಸಹಯೋಗದೊಂದಿಗೆ ತರಬೇತಿಯನ್ನು ನೀಡಿ, ತರಬೇತಿಯ ನಂತರ ಸ್ವಂತ ಉದ್ಯೋಗ ಕಲ್ಪಿಸಲು ರಾಷ್ಟ್ರೀಕೃತ/ ಶೆಡ್ಯೂಲ್/ ಗ್ರಾಮೀಣ ಬ್ಯಾಂಕ್‍ಗಳಿಂದ ರೂ. 2 ಲಕ್ಷಗಳಿಂದ 5 ಲಕ್ಷಗಳವರೆಗೆ ನೀಡಲಾಗುವ ಸಾಲಕ್ಕೆ ನಿಗಮದಿಂದ ಶೇ. 35 ರಷ್ಟು ಅಂದರೆ ಕನಿಷ್ಠ ರೂ. 70,000/- ಗಳಿಂದ ಗರಿಷ್ಠ ರೂ. 1,25,000/- ಗಳವರೆಗೆ ಸಹಾಯಧನವನ್ನು ನೀಡಲಾಗುವುದು. 
    ಅರ್ಜಿ ಸಲ್ಲಿಸಲು ಮತಿಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರೀಶ್ಚಿಯನ್, ಜೈನ್, ಬೌದ್ಧರು, ಸಿಖ್ಖರು, ಫಾರ್ಸಿಗಳು ಮತ್ತು ಆಂಗ್ಲೋ ಇಂಡಿಯನ್ ಸಮುದಾಯದಕ್ಕೆ ಸೇರಿದ್ದು, ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು.  18 ರಿಂದ 45 ವರ್ಷ ವಯೋಮಿತಿಯಲ್ಲಿರಬೇಕು.  ಆಸಕ್ತರು ನಿಗಮದ ಅಂತರಜಾಲ  www.kmdc.kar.nic.in ದಿಂದ ಅರ್ಜಿಯನ್ನು ಪಡೆದು ಅಗತ್ಯ ದಾಖಲಾತಿಗಳಾದ ಆಧಾರ, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಯೋಜನಾ ವರದಿ, ಬ್ಯಾಂಕ್ ಪಾಸ್‍ಬುಕ್ ಝರಾಕ್ಸ್, ಇತ್ಯದಿಗಳನ್ನು ಲಗತ್ತಿಸಿ, ಅಕ್ಟೋಬರ್. 28 ರೊಳಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಕೊಪ್ಪಳ ಇಲ್ಲಿಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾಡಳಿತ ಭವನ ಕೊಪ್ಪಳ, ದೂರವಾಣಿ ಸಂಖ್ಯೆ 08539-225008 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಭರ್ಜರಿ ಯಶಸ್ಸಿಯೊಂದಿಗೆ ತೆರೆಕಂಡ ಮಧು ಮೇಳ : ಸುಮಾರು 05 ಸಾವಿರ ಜನರ ಭೇಟಿಕೊಪ್ಪಳ ಸೆ. 28 (ಕರ್ನಾಟಕ ವಾರ್ತೆ): ಕೊಪ್ಪಳದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ತೋಟಗಾರಿಕೆ ಇಲಾಖೆಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಮಧು ಮೇಳ ಸುಮಾರು 5 ರಿಂದ 6 ಲಕ್ಷ ರೂ. ವಹಿವಾಟು ಕಂಡಿದ್ದು, ಭರ್ಜರಿ ಯಶಸ್ವಿಯೊಂದಿಗೆ ತೆರೆಕಂಡಿದೆ.  

     ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಜೇನು ಪ್ರದರ್ಶನ ಮತ್ತು ಮೂರು ದಿನಗಳ ಮಾರಾಟ ಮೇಳದಲ್ಲಿ ಸುಮಾರು 4-5 ಸಾವಿರ ಜನರು ಮಧುಮೇಳವನ್ನು ಸಂದರ್ಶಿಸಿದ್ದಾರೆ.  ಈ ಮೇಳದಲ್ಲಿ ಜೇನುತುಪ್ಪವಷ್ಟೇ ಅಲ್ಲದೇ  ಜೇನಿನ ಇತರೆ ಉಪ ಉತ್ಪನ್ನಗಳಾದ ಜೇನು ಪರಾಗ, ಜೇನು ಮೇಣ, ಜೇನು ಅಂಟು, ಜೇನು ವಿಷ ಮತ್ತು ರಾಯಲ್ ಜೆಲ್ಲಿ ಮುಂತಾದವುಗಳು ಮತ್ತು ಜೇನು ಸಾಕಾಣಿಕೆಗೆ ಅಗತ್ಯ ಪರಿಕರಗಳಾದ ಜೇನುಪೆಟ್ಟಿಗೆ, ಸ್ಟ್ಯಾಂಡ್, ಹೊಗೆತಿದಿ, ಮುಖಪರದೆ ಮತ್ತು ಜೇನುತುಪ್ಪ ತೆಗೆಯುವ ಸರಳ ಯಂತ್ರಗಳನ್ನು ಪ್ರದರ್ಶಿಸಿ ಹಾಗೂ ಶುದ್ಧಜೇನು ಮತ್ತು ಕಲಬೆರೆಕೆ ಜೇನು ತುಪ್ಪ ವ್ಯತ್ಯಾಸ ಕಂಡುಹಿಡಿಯುವ ಬಗ್ಗೆ ಮಾಹಿತಿ ನೀಡಲಾಯಿತು.                               
ಜೇನು ಸಾಕಣೆ ಬಗ್ಗೆ ತೋಟಗಾರಿಕೆ ಬೆಳೆಗಾರರಲ್ಲಿ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಕೊಪ್ಪಳ ತೋಟಗಾರಿಕೆ ಇಲಾಖೆ (ಜಿಪಂ) ವತಿಯಿಂದ ಕಛೇರಿ ಆವರಣದಲ್ಲಿ ಸೆ.25 ರಿಂದ 27 ರವರೆ ಮೂರು ದಿನಗಳ ಕಾಲ ಜೇನು ಮೇಳವನ್ನು ಆಯೋಜಿಸಲಾಗಿತ್ತು.  ಇದೊಂದು ಅವೀಸ್ಮರಣೀಯ ಕಾರ್ಯಕ್ರಮವಾಗಿ ರೂಪುಗೊಂಡಿತು.
ತೋಟಗಾರಿಕೆಗೆ ಪೂರಕವಾಗಿರುವ ಒಂದು ಲಾಭದಾಯಕ ಉಪಕಸುಬು “ಜೇನು ಸಾಕಣೆ”.   ಜೇನು ಸಾಕಣೆಯಿಂದ ರೈತರು ಹೆಚ್ಚಿನ ಆದಾಯ ಪಡೆಯಲು ಸಹಕಾರ ಒಂದೆಡೆ ಆದರೆ, ಇನ್ನೊಂದೆಡೆ ತೋಟಗಾರಿಕೆ ಬೆಳೆಗಳಲ್ಲಿ ಪರಾಗಸ್ಪರ್ಶದಿಂದಾಗಿ ಇಳುವರಿ ವೃದ್ಧಿಸುವುದು.  ಹೀಗಾಗಿ ತೋಟಗಾರಿಕೆ ಇಲಾಖೆಯಿಂದ ಜೇನು ಸಾಕಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.  ಅಷ್ಟೇ ಅಲ್ಲದೇ “ಮಧುವನ ಅಭಿವೃದ್ಧಿ ಯೋಜನೆ” ಅಡಿ ತೋಟಗಾರಿಕೆ ಬೆಳೆಗಾರರು ಜೇನು ಸಾಕಣೆ ಮಾಡಿ ಹೆಚ್ಚಿನ ಆದಾಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಮೇಳ ಆಯೋಜಿಸಲು ಸುಮಾರು 2 ತಿಂಗಳಿಂದಲೇ ಸಿದ್ದತೆ ನಡೆಸಲಾಗಿತ್ತು.  ಇದಕ್ಕಾಗಿ ರಾಜ್ಯದಲ್ಲಿ ಜೇನು ಸಾಕಣೆ ಮಾಡುತ್ತಿರುವ ವಿವಿಧ ಯಶಸ್ವಿ ಜೇನು ಕೃಷಿಕರನ್ನು ಮತ್ತು ವಿಜ್ಞಾನಿಗಳನ್ನು ಸಂಪರ್ಕಿಸಿ 2 ಬಾರಿ ಪೂರ್ವಭಾವಿ ಸಭೆಗಳನ್ನು ಏರ್ಪಡಿಸಿ   ಸಷ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ಈ ಮೇಳವನ್ನು ಆಯೋಜಿಸಲು ನಿರ್ಧರಿಸಲಾಗಿತ್ತು.  ಅದರಂತೆ ಮೂರು ದಿನಗಳ ಕಾಲ ಆಯೋಜಿಸಿದ ಈ ಮೇಳ ಅತ್ಯಂತ ಫಲಪ್ರದವಾಗಿದೆ ಮತ್ತು ರೈತರು ಹಾಗೂ ಸಾರ್ವಜನಿಕರನ್ನು ತಲುಪವಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದೆ.
ಮಧು ಮೇಳಕ್ಕೆ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಚಾಲನೆ ನೀಡುವ ಮೂಲಕ ಮೇಳಕ್ಕೆ ಭರ್ಜರಿ ಓಪನ್ ಕೊಟ್ಟಿದ್ದರು.  ಕೊಪ್ಪಳ ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ ಅವರು ಮೇಳದಲ್ಲಿ ಪಾಲ್ಗೊಂಡು ರೈತರಿಗೆ ಉತ್ತೇಜನ ನೀಡಿದರು.  ಚಿತ್ರದುರ್ಗದ ನಿವೃತ್ತ ಕೃಷಿ ಅಧಿಕಾರಿ ಶಾಂತವೀರಯ್ಯ,  ಶಿರಸಿಯ ಮಧುಕೇಶ್ವರ ಹೆಗಡೆ, ಹಾಗೂ ರಾಮಾ ಮರಾಠಿ, ಬೆಳಗಾವಿ ಜಿಲ್ಲೆಯ ಯಶಸ್ವಿ ಜೇನು ಕೃಷಿಕರು ಹಾಗೂ ತಜ್ಞರು ಆಗಮಿಸಿ ರೈತರಿಗೆ, ಸಾರ್ವಜನಿಕರಿಗೆ ಮತ್ತು ತೋಟಗಾರಿಕೆ ಮಹಾವಿದ್ಯಾಲಯ, ಮುನಿರಾಬಾದ್‍ನಿಂದ ಆಗಮಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಜೇನು ಸಾಕಣೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಬದರಿ ಪ್ರಸಾದ ಅವರು ಜೇನು ಹುಳದ ಜೀವನ ಚಕ್ರ, ವಿವಿಧ ಬಗೆಯ ಜೇನು ನೊಣಗಳು, ಜೇನು ನೊಣದ ಶತ್ರುಗಳು ಮತ್ತು ಅವುಗಳ ಹತೋಟಿ ಬಗ್ಗೆ ವಿವರಣೆ ನೀಡಿದರು.  ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಇಂದರಗಿ ಗ್ರಾಮದ ಜೇನು ಕೃಷಿಕರಾದ ಲಿಂಗಪ್ಪ ಕುಂಬಾರ ಜೇನು ಪೆಟ್ಟಿಗೆ ನಿರ್ವಹಣೆಯ ಬಗ್ಗೆ ತಿಳುವಳಿಕೆ ನೀಡಿದರು.  ಪ್ರದರ್ಶನದಲ್ಲಿ ಶರಣು ಸಜ್ಜನ ಅವರು ನಿರ್ಮಿಸಿದ "ಮಧು ಹೀರುವ ದುಂಬಿ" ಕಲಾಕೃತಿ ಜನರ ಮನ್ನಣೆ ಪಡೆಯಿತು.  
ಈ ಮೂರು ದಿನಗಳಲ್ಲಿ ಒಟ್ಟಾರೆಯಾಗಿ 500 ಕ್ಕೂ ಹೆಚ್ಚಿನ ರೈತರು ಹಾಗೂ ಸಾರ್ವಜನಿಕರು  ಜೇನು ಸಾಕಣೆಕೆ ಬಗ್ಗೆ ಸಮಗ್ರ ಮಾಹಿತಿ ಪಡೆದಿದ್ದಾರೆ ಮತ್ತು ಜೇನು ಸಾಕಣಿಕೆ ಮಾಡುವ ಆಸಕ್ತಿಯನ್ನೂ ವ್ಯಕ್ತ ಪಡಿಸಿದ್ದಾರೆ.  ಈ ಮೇಳದಲ್ಲಿ ಸಂಜೀವಿನಿ ಕೃಷಿಕರ ಸಂಘ, ಬಸಾಪಟ್ಟಣ, ಗಂಗಾವತಿ ತಾಲೂಕು, ಕೊಪ್ಪಳ ಜಿಲ್ಲೆ, ಹಾಗೂ ಸವಿಮಧು ಇಂಡಸ್ಟ್ರೀಸ್, ಕಲ್ಲಳ್ಳಿ ಮನೆ ತಾರಗೋಡ ಶಿರಸಿ (ಉ.ಕ) ಮತ್ತು ತಮಿಳುನಾಡಿನ ಮಧುರೈಯಿಂದ :ವಿವಿಬ್ಸ್" ಎನ್ನುವ ಕಂಪನಿಯವರು ಜೇನು ಮತ್ತು ಜೇನು ಆಧಾರಿತ ಉತ್ಪನ್ನಗಳು, ಸಂಸ್ಕರಿಸಿದ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಾದ "ಆಮ್ಲಹನಿ" ಜೇನುಜಾಮ್, ಜೇನು ಲೇಹ್ಯ ಅಲ್ಲದೇ ವಿವಿಧ ಬೆಳೆಗಳಿಂದ ಪಡೆದ, ವಿವಿಧ ಔಷಧಿ ಗುಣಗಳಿಂದ ಕೂಡಿದ ಬಗೆ ಬಗೆಯ ಜೇನು ತುಪ್ಪ ಮಾರಾಟ ಮಾಡಿದ್ದಾರೆ.  ಅವರೆ ಹೇಳುವಂತೆ ಈ ಮೂರು ದಿನಗಳ ಮಾರಾಟ ಮೇಳದಲ್ಲಿ 800 ರಿಂದ 1000 ಕಿ. ಗ್ರಾಂ ಜೇನು, ಜೇನಿನ ಉತ್ಪನ್ನಗಳು ಮತ್ತು ಇತರೆ ಔಷಧಿ ಉತ್ಪನ್ನಗಳು ಮಾರಾಟವಾಗಿದ್ದು, ರೂ,  5-6 ಲಕ್ಷ ವಹಿವಾಟು ಆಗಿರುವ ಅಂದಾಜಿದೆ. 
ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ಮಧು ಮೇಳವನ್ನು ಆಯೋಜಿಸಿದ್ದು, ಮೇಳಕ್ಕೆ ಭೇಟಿ ನೀಡಿದ ಸಾಕಷ್ಟು ರೈತರು ಜೇನು ಸಾಕಾಣಿಕೆ ಬಗ್ಗೆ ಆಸಕ್ತಿ ತೋರಿದ್ದಾರೆ.  ಅಲ್ಲದೆ ಜೇನು ಸಾಕಾಣಿಕೆ ರೈತರಿಗೆ ಎಷ್ಟೊಂದು ಉಪಯುಕ್ತ ಎಂಬುದು ಅವರಿಗೂ ಮನವರಿಕೆಯಾಗಿದೆ. ಇಲಾಖೆಯಿಂದ ಆಯೋಜಿಸಿದ್ದ ಮಧು ಮೇಳದಲ್ಲಿ ಶುದ್ಧ ಜೇನು ತುಪ್ಪ ದೊರೆಯುತ್ತದೆ ಎಂಬುದು ಜನರಿಗೆ ಮನವರಿಕೆಯಾದ ಬಳಿಕ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಜೇನು ತುಪ್ಪ ಖರೀದಿಸಿದ್ದಾರೆ. ಸದ್ಯಕ್ಕೆ ಗ್ರಾಹಕರಿಂದ ಇನ್ನೂ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದ್ದು, ಮುಂಬರುವ ದಿನಗಳಲ್ಲಿ ಶುದ್ಧವಾದ ಜೇನು ತುಪ್ಪವನ್ನು ಮತ್ತು ಇತರೆ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎನ್ನುತ್ತಾರೆ ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು.

ಯಲಬುರ್ಗಾದಲ್ಲಿ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಕಾರ್ಯಕ್ರಮ


ಕೊಪ್ಪಳ ಸೆ. 28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸರಕಾರಿ ಬಾಲಕೀಯರ ವಸತಿನಿಲಯದಲ್ಲಿ ಮಕ್ಕಳ ಹಕ್ಕುಗಳ ಮತ್ತು ಮಕ್ಕಳ ಪರವಾದ ಕಾನೂನುಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಯಿತು.  
 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಕ್ಕಳ ವಿಶೇಷ ಪೊಲೀಸ್ ಘಟಕದ ಬಸಪ್ಪ ಹಾದಿಮನಿ ಅವರು ಮಾತನಾಡಿ, ಭಾರತ ದೇಶವು ಸಹ ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿಹಾಕಿದ್ದು, ದೇಶದ ಎಲ್ಲಾ ಮಕ್ಕಳಿಗೂ ಅವರ ಹಕ್ಕುಗಳನ್ನು ಅವರಿಗೆ ಒದಗಿಸಲು ಕಟಿಬದ್ದವಾಗಿದೆ.  ಮಕ್ಕಳಿಗೆ ಬದುಕುವ ಹಕ್ಕು, ಅಭಿವೃದ್ಧಿ ಮತ್ತು ವಿಕಾಸ ಹೊಂದುವ ಹಕ್ಕು, ಶೋಷಣೆಯ ವಿರುದ್ಧ ಸಂರಕ್ಷಣೆ ಹಕ್ಕು ಮತ್ತು ಭಾಗವಹಿಸುವ ಹಕ್ಕುಗಳನ್ನು ನೀಡಿರುವುದಷ್ಟೇ ಅಲ್ಲದೇ ಈ ಹಕ್ಕುಗಳನ್ನು ಅವರಿಗೆ ತಲುಪಿಸಲು ಹಲವಾರು ಕಾನೂನುಗಳನ್ನು  ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.  ಬಾಲ ನ್ಯಾಯ (ಆರೈಕೆ ಮತ್ತು ಪೋಷಣೆ) ಕಾಯ್ದೆ-2000ರನ್ವಯ ಜಿಲ್ಲೆಯಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕವನ್ನು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ  ಸ್ಥಾಪಿಸಲಾಗಿದೆ.  ಅಲ್ಲದೇ ಪೊಲೀಸ್ ಠಾಣೆಯ ಠಾಣಾಧಿಕಾರಿಗಳನ್ನು ಮಕ್ಕಳ ಕಲ್ಯಾಣಾಧಿಕಾರಿಗಳೆಂದು ನೇಮಿಸಿದ್ದು, ಆರೈಕೆ ಮತ್ತು ಪೋಷಣೆ ಅವಶ್ಯಕತೆಯಿರುವ ಯಾವುದೇ ಮಗುವನ್ನು ಯಾರೇ ವ್ಯಕ್ತಿಗಳು ಆರೈಕೆ ಮತ್ತು ಪೋಷಣೆಗಾಗಿ ಮಕ್ಕಳನ್ನು ಹಾಜರುಪಡಿಸಬಹುದಾಗಿದೆ. ನಂತರ ಮಕ್ಕಳಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ಸೂಕ್ತ ಪುರ್ನವಸತಿಯನ್ನು ಕಲ್ಪಿಸಲಾಗುತ್ತದೆ.   ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2012 (ಪಿ.ಓ.ಸಿ.ಎಸ್.ಓ-2012) ಪ್ರಕಾರ ಯಾವುದೇ 18 ವರ್ಷದೊಳಗಿನವರ ಮೇಲೆ ದೌರ್ಜನ್ಯಗಳಂತಹ ಪ್ರಕರಣಗಳು ಕಂಡುಬಂದರೆ ಕನಿಷ್ಟ 3 ವರ್ಷದಿಂದ ಜೀವಾವಧಿವರೆಗಿನ ಶಿಕ್ಷೆಯನ್ನು ಸಹ ಈ ಕಾನೂನಿನಡಿ ವಿಧಿಸಬಹುದಾಗಿದೆ.  ಆದ ಕಾರಣ ಎಲ್ಲರೂ ಜಾಗೃತರಾಗಿರಲು ಕರೆ ನೀಡಿದರು.
ಮಕ್ಕಳ ಪ್ರಶ್ನೆಗಳು : ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳಂತಹ ಪ್ರಕರಗಳು ತಡೆಯಲು ಏನು  ಮಾಡಬೇಕು? ಎಂದು ಮಕ್ಕಳು ಪ್ರಶ್ನೆ ಕೇಳಿದರು.  ಇದಕ್ಕೆ ಸಂಪನ್ಮೂಲ ವ್ಯಕ್ತಿಗಳು ಉತ್ತರಿಸಿ, ಮಕ್ಕಳು ಯಾವಾಗಲೂ  ಜನನಿಬಿಡ ಪ್ರದೇಶದಲ್ಲಿ ಸಂಚರಿಸಬೇಕು, ಅಪರಿಚಿತ ಸ್ಥಳಕ್ಕೆ ಮತ್ತು ಅಪರಿಚಿತರು ಕರೆದಾಗ ತೆರಳಬಾರದು ಎಂದು ತಿಳಸಿದರು. ಹೀಗೆ ಮಕ್ಕಳ ಮೇಲಿನ ಹಲವಾರು ರೀತಿಯಲ್ಲಿ ಲೈಂಗಿಕ ದೌರ್ಜನ್ಯಗಳಂತಹ ಪ್ರಕರಣಗಳ ಕುರಿತು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡರು.
ಕಾರ್ಯಕ್ರಮದಲ್ಲಿ ಯಲಬುರ್ಗಾ ಆರೋಗ್ಯ ಇಲಾಖೆ ಮಂಜುಳಾ ರಾಟಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಜಯಶ್ರೀ ಪಾಟೀಲ, ಮಹಿಳಾ ಸಾಂತ್ವನ ಕೇಂದ್ರದ ವಿಜಯಲಕ್ಷ್ಮೀ, ಸಹ ಶೀಕ್ಷಕರಾದ ಜೆ.ವೈ.ಗದ್ಯಾಳ,

ಸಮಗ್ರ ಅಭಿವೃದ್ಧಿಗೆ ವಿಷನ್ 2025 : ತಯಾರಿ ಪ್ರಕ್ರಿಯೆಗೆ ಅ.3 ರಿಂದ ಚಾಲನೆ- ಎಂ. ಕನಗವಲ್ಲಿ


ಕೊಪ್ಪಳ ಸೆ.28 (ಕರ್ನಾಟಕ ವಾರ್ತೆ) : ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ರಾಜ್ಯ ಸರ್ಕಾರ ಕೈಗೊಳ್ಳಲು ಉದ್ದೇಶಿಸಿರುವ ಮಹತ್ವಾಕಾಂಕ್ಷಿ ವಿಷನ್ 2025 ಡಾಕ್ಯುಮೆಂಟ್ ತಯಾರಿ ಕುರಿತಂತೆ ಅ.3 ರಿಂದ ಸಿದ್ಧತೆಗಳನ್ನು ಪ್ರಾರಂಭಿಸಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ಜಿಲ್ಲಾ ವಾರು ಸಂವಾದ ಕಾರ್ಯಕ್ರಮಗಳ ಪೂರ್ವಭಾವಿಯಾಗಿ ಇಂದು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ವಿಷನ್ 2025 ರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ರೇಣುಕಾ ಚಿದಂಬರಂ ಅವರ ನೇತೃತ್ವದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಗುರುವಾರದಂದು ಏರ್ಪಡಿಸಲಾದ ವಿಡಿಯೋ ಕಾನ್ಫರೆನ್ಸ್ ಬಳಿಕ ಅವರು ಮಾತನಾಡಿದರು.
     ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ದೂರದೃಷ್ಟಿ ಚಿಂತನೆಯೊಂದಿಗೆ ವಿಷನ್ 2025 ಡಾಕ್ಯುಮೆಂಟ್ ತಯಾರಿಗೆ ಸರ್ಕಾರ ಮುಂದಾಗಿದ್ದು ಇದಕ್ಕೆ ತಂಡಗಳನ್ನು ರಚಿಸಿದೆ. ಸಮಾಜದ ಎಲ್ಲಾ ವರ್ಗದ ಜನಸಮುದಾಯಗಳು ಹಾಗೂ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಆಯಾಯ ಕ್ಷೇತ್ರದಲ್ಲಿನ ಅನುಭವಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು, ಸಾಧಕರನ್ನು ಒಗ್ಗೂಡಿಸಿ, ಕ್ಷೇತ್ರವಾರು ಗುಂಪುಗಳನ್ನು ರಚಿಸಿ, ಸಂವಾದದ ಮೂಲಕ ಅಭಿವೃದ್ಧಿಯ ಆಧ್ಯತೆ, ಸಾಧ್ಯತೆ ಅದಕ್ಕಿರುವ ಸಾಧನ ಸಂಪನ್ಮೂಲಗಳನ್ನು ಗುರುತಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಎಲ್ಲಾ ಅಧಿಕಾರಿಗಳು ಸರ್ಕಾರದ ಆಶಯವನ್ನು ಅರಿತು ಜಿಲ್ಲೆಯಲ್ಲಿ ಗಂಭೀರವಾದಂತಹ ಚಿಂತನಾ, ಸಮಾಲೋಚನಾ ಸಭೆ ಆಯೋಜಿಸಿ ಎಂದು ವಿಷನ್ 2025 ರ ಸಿಇಒ ರೇಣುಕಾ ಚಿದಂಬರಂ ಅವರು ತಿಳಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ಅ. 03 ರಂದು ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಕೈಗೊಂಡು, ವಿಷನ್ 2025 ಡಾಕ್ಯುಮೆಂಟ್ ತಯಾರಿಕೆಗೆ ಚಾಲನೆ ನೀಡಲಾಗುವುದು.  ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಸುಮಾರು 12 ಆದ್ಯತಾ ವಲಯಗಳನ್ನು ನಿಗದಿಪಡಿಸಲಾಗಿದ್ದು, ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ, ಕೃಷಿ ಮತ್ತು ಕೃಷಿಗೆ ಸಂಬಂಧಿತ ಕ್ಷೇತ್ರಗಳು, ಉದ್ಯೋಗ ಮತ್ತು ಕೌಶಲ್ಯ, ಆಡಳಿತ, ಆರೋಗ್ಯ, ಕೈಗಾರಿಕೆ, ಮೂಲಭೂತ ಸೌಕರ್ಯ, ಕಾನೂನು ಮತ್ತು ಸುವ್ಯವಸ್ಥೆ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ನಗರಾಭಿವೃದ್ಧಿ, ಸ್ಮಾರ್ಟ್ ಸಿಟಿ ಸೇರಿದಂತೆ ಅಭಿವೃದ್ಧಿಯ ಆದ್ಯತೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರಗತಿಪರ ಚಿಂತಕರು, ಸಾಹಿತಿಗಳು, ಸಂಪನ್ಮೂಲ ವ್ಯಕ್ತಿಗಳು, ತಜ್ಞರು ಸೇರಿದಂತೆ ಎಲ್ಲ ನಿಟ್ಟಿನಿಂದಲೂ, ಅಭಿವೃದ್ಧಿಗಾಗಿ ಚಿಂತನೆಗಳನ್ನು, ಸಲಹೆಗಳನ್ನು ಕ್ರೋಢೀಕರಿಸುವ ಕಾರ್ಯ ಆಗಲಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್, ಸರ್ಕಾರ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. 
     ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಂಡಿವಡ್ಡರ್ ಸೇರಿದಂತೆ ಹಲವು ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‍ನಲ್ಲಿ ಪಾಲ್ಗೊಂಡಿದ್ದರು.  

Wednesday, 27 September 2017

ವೃತ್ತಿ ನಿರೂಪಣಾ ಕೌಶಲ್ಯತೆಗಾಗಿ ತರಬೇತಿ : ಅವಧಿ ವಿಸ್ತರಣೆ


ಕೊಪ್ಪಳ ಸೆ. 27 (ಕರ್ನಾಟಕ ವಾರ್ತೆ): ಬೆಂಗಳೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪತ್ರಿಕೋದ್ಯಮ ಪದವಿ, ಸ್ನಾತಕೋತ್ತರ, ವಿದ್ಯುನ್ಮಾನ ಮಾಧ್ಯಮದಲ್ಲಿ ಪದವಿ/ ಪಿ.ಜಿ. ಡಿಪ್ಲೊಮಾ/ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಗಾಗಿ ಆರು ದಿವಸಗಳ ವೃತ್ತಿ ನಿರೂಪಣಾ ಕೌಶಲ್ಯತೆಗಾಗಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಅಕ್ಟೋಬರ್. 03 ರವರೆಗೆ ವಿಸ್ತರಿಸಲಾಗಿದೆ.
    ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‍ಸೈಟ್  www.karnatakainformation.gov.in ನಿಂದ ಪಡೆದುಕೊಳ್ಳಬಹುದು.  ಅಥವಾ ಸುದ್ದಿ ಮತ್ತು ಪತ್ರಿಕಾ ವಿಭಾಗದ ಉಪ ನಿದೇಶಕರು ಇವರನ್ನು ದೂರವಾಣಿ ಸಂಖ್ಯೆ 080-22028037/ 87 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಅಕ್ಟೋಬರ್. 02 ರಂದು ಕೊಪ್ಪಳದಲ್ಲಿ ಮಾತೃಪೂರ್ಣ ಯೋಜನೆ ಉದ್ಘಾಟನೆ


ಕೊಪ್ಪಳ ಸೆ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಾತೃಪೂರ್ಣ ಯೋಜನೆಯ ಉದ್ಘಾಟನೆ ಕಾರ್ಯಕ್ರಮವನ್ನು ಅಕ್ಟೋಬರ್. 02 ರಂದು ಬೆಳಿಗ್ಗೆ 10-00 ಗಂಟೆಗೆ ನಗರದ ಹಮಾಲರ ಕಾಲೋನಿಯಲ್ಲಿ ಹಮ್ಮಿಕೊಳ್ಳಲಾಗಿದೆ.     
    ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದರ ಖಾದ್ರಿ, ನಗರಸಭೆ ಸದಸ್ಯ ಅಮ್ಜದ್ ಪಟೇಲ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಉಮಾ ಮಹದೇವನ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಪಾಲ್ಗೊಳ್ಳುವರು.
    ಕೊಪ್ಪಳ ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್ ಮತ್ತು ನಗರಸಭೆಯ ಎಲ್ಲಾ ಸದಸ್ಯರುಗಳು ವಿಶೇಷ ಆಹ್ವಾನೀತರಾಗಿ ಭಾಗವಹಿಸಲಿದ್ದಾರೆ.  ಮಾತೃಪೂರ್ಣ ಯೋಜನೆಯ ಫಲಾನುಭವಿಗಳಿಗೆ ಬಿಸಿಊಟ ಬಡಿಸುವಿಕೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. 

ದ್ರಾಕ್ಷಿ ಬೆಳೆಯಲು ಉತ್ತೇಜನ : ರೈತರಿಗೆ ತರಬೇತಿ


ಕೊಪ್ಪಳ ಸೆ. 27 (ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆ ವತಿಯಿಂದ ರೈತರು ದ್ರಾಕ್ಷಿ ಬೆಳೆ ಬೆಳೆಯುವಂತೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಮಗ್ರ ತೋಟಗಾರಿಕೆ ಅಬಿsವೃದ್ದಿ ಯೋಜನೆಯಡಿ ದ್ರಾಕ್ಷಿ ಬೆಳೆಯಲು ಆಯ್ಕೆಯಾದ ಮಂಗಳೂರು ಹೋಬಳಿಯ ಫಲಾನುಭವಿ ರೈತರಿಗೆ ಒಂದು ದಿನದ ಪ್ರಥಮ ಹಂತದ ತರಬೇತಿ ಕಾರ್ಯಕ್ರಮವನ್ನು ಇತ್ತೀಚೆಗೆ ಯಲಬುರ್ಗಾ ತಾಲೂಕು ವಣಗೇರಿ ಗ್ರಾಮದ ಶರಣಪ್ಪ ಹುಣಸ್ಯಾಳ ಇವರ ತೋಟದಲ್ಲಿ  ಹಮ್ಮಿಕೊಳ್ಳಲಾಯಿತು.
      ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಲ್ಲೂಕು ಪಂಚಾಯತ ಸದಸ್ಯ ಶಂಕರೇಗೌಡ ತಳಕಲ್ಲ ಅವರು ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ಉತ್ತಮ ರೈತಪರ ಯೋಜನೆಗಳು ರೈತರ ಮನೆ ಬಾಗಿಲಿಗೆ  ತಲುಪುತ್ತಿದ್ದು, ನಾವೆಲ್ಲ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
       ಯಲಬುರ್ಗಾ ರೈತ ಉತ್ಪಾದಕ ಕಂಪನಿ ಅದ್ಯಕ್ಷ ಮಲ್ಲಣ್ಣಾ  ಕೋನನಗೌಡರು ಕಂಪನಿ ಬಗ್ಗೆ ವಿವರವಾಗಿ ತಿಳಿಸಿ, ರೈತರು ಗುಂಪು ರಚನೆ ಮಾಡಿಕೊಂಡಲ್ಲಿ ರೈತರಿಗೆ ಆಗುವ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಿದರು.
      ತೋಟಗಾರಿಕೆ ವಿಷಯತಜ್ಞ ವಾಮನಮೂರ್ತಿರವರು ದ್ರಾಕ್ಷಿ ಬೆಳೆಯ ಬೇಸಾಯ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.  ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ  ಮಂಜುನಾಥ ಲಿಂಗಣ್ಣವರ ಅವರು ಮಾತನಾಡಿ, ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಫಸಲಿನಿಂದ ಲಾಭ ಪಡೆದು ಆರ್ಥಿಕವಾಗಿ ಮುಂದು ಬರಬೇಕೆಂದು  ರೈತರಿಗೆ ಕರೆ ನೀಡಿದರು.
     ಪ್ರಗತಿ ಪರ ರೈತ ಅಶೋಕ ಯರಾಸಿ ಅವರು ದ್ರಾಕ್ಷಿ ಬೆಳೆ ಬೇಸಾಯ ಕುರಿತಂತೆ ಅನುಭವ ಹಂಚಿಕೊಂಡರು. ತೋಟಗಾರಿಕೆ ಅಧಿಕಾರಿ ಉಮೇಶ ಕಾಳೆ, ಸಹಾಯಕ ತೋಟಗಾರಿಕೆ ಅದಿsಕಾರಿ ರಮೇಶ ಗುಡಿಸಾಗರ ಕಾರ್ಯಕ್ರಮ ನಿರೂಪಿಸಿದರು. ದ್ರಾಕ್ಷಿ ಬೆಳೆಯ ತೋಟಗಾರಿಕೆ ಸಹಾಯಕ ವಿಜಯಭಾಸ್ಕರ, ಪ್ರಗತಿಪರ ರೈತರಾದ ಶೇಖರಪ್ಪ, ವೆಂಕಪ್ಪ, ರಾಮಣ್ಣಾ ಮುಂತಾದವರು ಉಪಸ್ಥಿತರಿದ್ದರು.

ವಿದ್ಯುತ್ ಮಗ್ಗ ಸ್ಥಾಪಿಸಲು ಪರಿಶಿಷ್ಟ ನೇಕಾರರಿಗೆ ಶೇ90 ಸಹಾಯಧನ : ಅರ್ಜಿ ಆಹ್ವಾನ


ಕೊಪ್ಪಳ ಸೆ. 27 (ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಪ್ರಸಕ್ತ ಸಾಲಿನ ಯೋಜನೆಯಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕೈಮಗ್ಗ/ ವಿದ್ಯುತ್ ಮಗ್ಗ ಕೂಲಿ ನೇಕಾರರಿಗೆ ಎರಡು ವಿದ್ಯುತ್ ಮಗ್ಗ ಖರೀದಿಸಲು ಶೇ.90 ರಷ್ಟು ಸಹಾಯಧನ ನೀಡಲು ನೇಕಾರರಿಂದ ಅರ್ಜಿ ಆಹ್ವಾನಿಸಲಾಗಿದೆ. 
     ಗರಿಷ್ಟ ಯೋಜನಾ ಮೊತ್ತ ರೂ. 3.00 ಲಕ್ಷಗಳಿದ್ದು ಶೇ.10 ರಷ್ಟು ಫಲಾನುಭವಿಯ ವಂತಿಕೆ ಭರಿಸಲು ಆರ್ಥಿಕವಾಗಿ ಸಾಮಥ್ರ್ಯರಿರಬೇಕು ಅಥವಾ ಬ್ಯಾಂಕಿನಿಂದ ಸಾಲ ಮಂಜೂರಾತಿ ಪಡೆಯಬೇಕು.  ಅರ್ಜಿ ಸಲ್ಲಿಸಲು ಕೊಪ್ಪಳ ಜಿಲ್ಲೆಯ ವ್ಯಾಪ್ತಿಯ ನಿವಾಸಿಯಾಗಿರಬೇಕು.  ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕೈಮಗ್ಗ ಅಥವಾ ವಿದ್ಯುತ್ ಮಗ್ಗ ಅನುವಂಶಿಕ ನೇಕಾರರಾಗಿರಬೇಕು. ಅಥವಾ ಇಲಾಖೆಯಿಂದ ಅನುಮೋದನೆ ಪಡೆದ ತರಬೇತಿ ಕೇಂದ್ರದಲ್ಲಿ ಇಲಾಖೆಯ ತರಬೇತಿ ಯೋಜನೆಯಡಿಯಲ್ಲಿ ವಿದ್ಯುತ್ ಮಗ್ಗ ನೇಕಾರಿಕೆ ವೃತ್ತಿಯಲ್ಲಿ ತರಬೇತಿ ಪಡೆದಿರಬೇಕು. ಸ್ವಂತ ಮನೆಯಲ್ಲಿ 2 ವಿದ್ಯುತ್ ಮಗ್ಗ ಸ್ಥಾಪಿಸಲು ಸ್ಥಳಾವಕಾಶ ಹೊಂದಿರಬೇಕು.  2 ವಿದ್ಯುತ್ ಮಗ್ಗ ಸ್ಥಾಪಿಸುವ ಕಟ್ಟಡಕ್ಕೆ  ದಿನದ 24 ಘಂಟೆ 3ಪೆಸ್ ಲೈನ್ ವಿದ್ಯುತ್ ಪೂರೈಕೆ ಇರಬೇಕು  ವಯೋಮಿತಿ 18 ರಿಂದ 35 ವರ್ಷದೊಳಗಿನವರಾಗಿರಬೇಕು.  ಈ ಹಿಂದೆ ಇದೇ ಯೋಜನೆಯಡಿ ಸಹಾಯಧನ ಪಡೆದಿರಬಾರದು.  ಅರ್ಹತೆ ಹೊಂದಿರುವ ನೇಕಾರರು ಜಾತಿ ಮತ್ತು  ಆದಾಯ ಪ್ರಮಾಣ ಪತ್ರ, ನಿವೇಶನದ ದಾಖಲಾತಿ, ವಿದ್ಯುತ್ ಸಂಪರ್ಕ ದೃಢೀಕರಣ ಪತ್ರ, ಯಂತ್ರೋಪಕರಣಗಳ ಕೋಟೆಶನ್, ಯೋಜನಾ ವರದಿ ಹಾಗೂ ಇತ್ತೀಚಿನ ಭಾವ ಚಿತ್ರದೊಂದಿಗೆ ನಿಗದಿಪಡಿಸಿದ ದಾಖಲಾತಿಗಳೊಂದಿಗೆ ಅರ್ಜಿಯನ್ನು ದ್ವಿಪ್ರತಿಯಲ್ಲಿ ಭರ್ತಿ ಮಾಡಿ, ಉಪ ನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಡಿ.ಐ.ಸಿ.ಕಂಪೌಂಡ್, ಅಶೋಕ್ ಸರ್ಕಲ್, ಕೊಪ್ಪಳ  ಇವರಿಗೆ ಅ. 13 ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08539-230069 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಅಂತರಕಾಲೇಜು ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆ : ಅರ್ಜಿ ಆಹ್ವಾನ


ಕೊಪ್ಪಳ ಸೆ. 27 (ಕರ್ನಾಟಕ ವಾರ್ತೆ): ಕಲಬುರಗಿ ರಂಗಾಯಣ ವತಿಯಿಂದ ಕಾಲೇಜುಗಳಲ್ಲಿ ದೇಶಿಯ ಸಾಂಸ್ಕøತಿಕ ವಾತಾವರಣವನ್ನು ಪುನರ್ ಸ್ಥಾಪಿಸಲು ಜಿಲ್ಲಾ ಮಟ್ಟ, ವಿಭಾಗ ಮಟ್ಟ ಹಾಗೂ ರಾಜ್ಯ ಮಟ್ಟ ಹೀಗೆ 3 ಹಂತಗಳಲ್ಲಿ ಅಂತರ ಕಾಲೇಜುಗಳ ನಾಟಕ ಹಾಗೂ ಜಾನಪದ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲು ಉದ್ದೇಶಿಸಿದ್ದು, ಆಸಕ್ತ ಕಾಲೇಜುಗಳ ಮುಖ್ಯಸ್ಥರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕನ್ನಡ ಆಧುನಿಕ ರಂಗಭೂಮಿಗೆ 60 ಮತ್ತು 70ರ ದಶಕದಲ್ಲಿ ‘ಕಾಲೇಜು ರಂಗಭೂಮಿ’ ಮಹತ್ವದ ಕೊಡುಗೆಯನ್ನು ನೀಡಿದೆ. ಈ ದಶಕಗಳಲ್ಲಿ ಕಾಲೇಜು ಆವರಣದಲ್ಲಿ ವೈಜಾರಿಕ ಪ್ರಜ್ಞೆ ಪ್ರಧಾನ ಸ್ಥಾನವನ್ನು ಪಡೆದುಕೊಂಡಿತ್ತು. ವಿದ್ಯಾರ್ಥಿಗಳಲ್ಲಿ ಸಾಮುದಾಯಿಕ ಚಿಂತನೆ ಸಮಾಜಮುಖಿಯಾದ ಆಲೋಚನೆಗಳನ್ನು ಬಿತ್ತುವ ಕಾರ್ಯ ರಂಗಭೂಮಿಯಿಂದಲೇ ಆಗುತ್ತಿತ್ತು. ಕಾಲೇಜು ಆವರಣದಲ್ಲಿ ಆರೋಗ್ಯಪೂರ್ಣವಾದ ಸಾಂಸ್ಕøತಿಕ ವಾತಾವರಣ ಸದಾ ನಳನಳಿಸುತ್ತಿತ್ತು. ಈ ಸಂದರ್ಭದಲ್ಲಿ ಕಾಲೇಜು ರಂಗಭೂಮಿಯಲ್ಲಿ ಅನೇಕಾನೇಕ ರಂಗ ಪ್ರಯೋಗಗಳು ನಡೆದವು. ಇದರಿಂದಾಗಿ ರಂಗಭೂಮಿಯಲ್ಲಿ ಉತ್ತಮ ನಟರ ಪಡೆ, ಬಹುಮುಖ ಪ್ರತಿಭೆಯ ನಾಟಕಕಾರ, ಕ್ರಿಯಾಶೀಲ ನಿರ್ದೇಶಕರು ಕಾಣಿಸಿಕೊಂಡು ಕನ್ನಡ ರಂಗಭೂಮಿಯನ್ನು ಉತ್ತುಂಗಕ್ಕೇರಿಸಿತ್ತು ಆ ಕಾರಣಕ್ಕಾಗಿ ಕನ್ನಡ ಆಧುನಿಕ ರಂಗಭೂಮಿಗೆ ಕಾಲೇಜು ರಂಗಭೂಮಿಯ ಕೊಡುಗೆ ಅಪಾರ. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಕವಾಗಿದ್ದ ಪ್ರತಿಭೆಯ ಅನಾವರಣಕ್ಕೆ ಕಾಲೇಜು ರಂಗಭೂಮಿ ಒಂದು ಉತ್ತಮ ವೇದಿಕೆಯಾಗಿತ್ತು.
    ಆದರೆ ಇತ್ತಿಚಿನ ವಿದ್ಯುನ್ಮಾನಯುಗದ ಸ್ಪರ್ಧಾ ಪ್ರಪಂಚದ ಓಟದಲ್ಲಿ ಕಾಲೇಜು ಆವರಣದಲ್ಲಿ ಸಾಂಸ್ಕøತಿಕ ವಾತಾವರಣ ಕಲುಷಿತಗೊಳ್ಳುತ್ತಿದೆ. ಆದ್ದರಿಂದ ನಾಡಿನ ಕಾಲೇಜುಗಳಲ್ಲಿ ದೇಶಿಯ ಸಾಂಸ್ಕøತಿಕ ವಾತಾವರಣವನ್ನು ಪುನರ್ ಸ್ಥಾಪಿಸಲು ಜಿಲ್ಲಾ ಮಟ್ಟ, ವಿಭಾಗ ಮಟ್ಟ ಹಾಗೂ ರಾಜ್ಯ ಮಟ್ಟ ಹೀಗೆ 3 ಹಂತಗಳಲ್ಲಿ ಅಂತರ ಕಾಲೇಜುಗಳ ನಾಟಕ ಹಾಗೂ ಜಾನಪದ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲು ಉದ್ದೇಶಿಸಲಾಗಿರುತ್ತದೆ.
    ಕೊಪ್ಪಳ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ನಾಟಕ ಹಾಗೂ ಜಾನಪದ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಜಿಲ್ಲೆಯ ಕಾಲೇಜುಗಳ ಮುಖ್ಯಸ್ಥರು ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಹಾಯಕ ನಿರ್ದೇಶಕರ ಕಛೇರಿಯಿಂದ ಸಂಬಂಧಪಟ್ಟ ಮಾಹಿತಿಗಳ ಸಮೇತ ನಿಗದಿತ ನಮೂನೆ ಅರ್ಜಿಯನ್ನು ಪಡೆದು  ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಗೆ ಅಕ್ಟೋಬರ್ 07 ಒಳಗಾಗಿ ಎಲ್ಲಾ ಅಗತ್ಯ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ  ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮೊದಲನೆ ಮಹಡಿ, ಜಿಲ್ಲಾಡಳಿತ ಭವನ, ಕೊಪ್ಪಳ ಕಛೇರಿಗೆ ಸಂಪರ್ಕಿಸಬಹುದಾಗಿದೆ ಎಂದು ಕಲಬುರಗಿ ರಂಗಾಯಣದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರದ್ಧಾ-ಭಕ್ತಿಯಿಂದ ವಾಲ್ಮೀಕಿ ಜಯಂತಿ ಆಚರಣೆಗೆ ನಿರ್ಧಾರಕೊಪ್ಪಳ ಸೆ. 27 (ಕರ್ನಾಟಕ ವಾರ್ತೆ) : ಆದಿಕವಿ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಅ. 09 ರಂದು ಜಿಲ್ಲಾ ಕೇಂದ್ರದಲ್ಲಿ ಎಲ್ಲ ಸಮುದಾಯದ ಸಹಭಾಗಿತ್ವದಲ್ಲಿ ಶ್ರದ್ಧಾ-ಭಕ್ತಿಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು  ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಆಚರಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
      ಅಕ್ಟೋಬರ್ 09 ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಜಿಲ್ಲಾಡಳಿತವು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುವುದು.   ವಾಲ್ಮೀಕಿ ಜಯಂತಿಯ ಅಂಗವಾಗಿ ಅಂದು ಬೆಳಿಗ್ಗೆ 8-30 ಗಂಟೆಗೆ ನಗರದ ಸಿರಸಪ್ಪಯ್ಯನ ಮಠ ಆವರಣದಿಂದ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ಏರ್ಪಡಿಸಲಾಗುವುದು.  ವಾಲ್ಮೀಕಿಯವರ ಭಾವಚಿತ್ರದ ಮೆರವಣಿಗೆ ವೈಭವದ ಸಾರೋಟ್‍ನಲ್ಲಿ ಗಡಿಯಾರ ಕಂಬ, ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದವರೆಗೆ ನಡೆಸಲಾಗುವುದು.  ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಸೇರಿದಂತೆ ವಿವಿಧ ಸಾಂಸ್ಕøತಿಕ ಕಲಾತಂಡಗಳು, ಸ್ತಬ್ಧ ಚಿತ್ರಗಳು ಪಾಲ್ಗೊಂಡು ಮೆರವಣಿಗೆಯನ್ನು ಆಕರ್ಷಕಗೊಳಿಸಲಿವೆ.  ಮೆರವಣಿಗೆಯಲ್ಲಿ ಎಲ್ಲಾ ಸಂಘಟನೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು, ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಬೇಕು.  ಮೆರವಣಿಗೆಯ ನಂತರ ಬೆಳಿಗ್ಗೆ 11-30 ಗಂಟೆಗೆ ಸಾಹಿತ್ಯ ಭವನದಲ್ಲಿ ಸಮಾರಂಭ ಏರ್ಪಡಿಸಲಾಗಿದ್ದು, ಸಮಾರಂಭದಲ್ಲಿ ಗಣ್ಯಾತಿಗಣ್ಯರೆಲ್ಲರು ಭಾಗವಹಿಸಲಿದ್ದಾರೆ.  ಸಮಾರಂಭದಲ್ಲಿ ಭಾಗವಹಿಸುವ ಗಣ್ಯರಿಗೆ ಹೂವಿನ ಹಾರದ ಬದಲಿಗೆ “ವಾಲ್ಮೀಕಿ ರಾಮಾಯಣ” ಪುಸ್ತಕಗಳನ್ನು ಕಾಣಿಕೆಯಾಗಿ ನೀಡಲಾಗುವುದು.  ಮಹರ್ಷಿ ವಾಲ್ಮೀಕಿಯವರ ಕುರಿತು ಹಾಗೂ ಜಯಂತಿ ಕಾರ್ಯಕ್ರಮದ ಮಹತ್ವ ಕುರಿತಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.    ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಗಣನೀಯ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಗುವುದು.  ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗುವುದು. ಸಾರ್ವಜನಿಕರು, ಸಂಘಟನೆಗಳ ಪದಾಧಿಕಾರಿಗಳು ವಾಲ್ಮೀಕಿ ಜಯಂತಿಯನ್ನು ನಗರದ ಪ್ರಮುಖ ವೃತ್ತಗಳಿಗೆ ದೀಪಾಲಂಕಾರ ಸೇರಿದಂತೆ ಹಬ್ಬದ ವಾತಾವರಣದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.  ವಾಲ್ಮೀಕಿ ಜಯಂತಿ ದಿನದಂದು ಹಾಗೂ ಮುನ್ನಾ ದಿನದಂದು, ನಗರದ ಜವಾಹರ ರಸ್ತೆ ಹಾಗೂ ನಗರದ ಪ್ರಮುಖ ರಸ್ತೆಯನ್ನು ಸ್ವಚ್ಛಗೊಳಿಸಲು ಅಲ್ಲದೆ ಮೆರವಣಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
     ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ಪ್ರಾವಿಣ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಕಾಂತ, ತಹಶಿಲ್ದಾರ ಗುರುಬಸವರಾಜ, ನಗರಸಭೆ ಪೌರಾಯುಕ್ತರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಮಾಜದ ಮುಖಂಡರಾದ ಹನುಮಂತಪ್ಪ ಮಾದಿನೂರ, ಡಾ. ಜ್ಞಾನಸುಂದರ್, ಮಂಜುನಾಥ ಗೊಂಡಬಾಳ, ಶರಣಪ್ಪ ನಾಯಕ, ಶಿವಮೂರ್ತಿ ಗುತ್ತೂರ, ರಮೇಶ ಪಾಟೀಲ, ವಸಂತ ನಾಯಕ, ಚಂದ್ರಕಾಂತ ಅಗಸಿ, ಸುರೇಶ ಡೊಣ್ಣಿ, ಶಾಂತಪ್ಪ ಪೂಜಾರ, ಶ್ರೀನಿವಾಸ ಪೂಜಾರ ಗಿಣಿಗೇರಾ, ಶಂಕರಗೌಡ ಬೆಳಗಟ್ಟಿ, ಗಿರಿಯಪ್ಪ ಡಂಬ್ರಳ್ಳಿ ಹಾಗೂ ಹಲವು ಮುಖಂಡರು, ಗಣ್ಯರಾದ ಶಿವಾನಂದ ಹೊದ್ಲೂರ್, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. 

Saturday, 23 September 2017

ಪೊಲೀಸ್ ಪೇದೆ ನೇಮಕಾತಿ : ಸೆ. 25 ರಿಂದ ಸಹಿಷ್ಣುತೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ


ಕೊಪ್ಪಳ ಸೆ. 23 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪೆÇಲೀಸ್ ಇವರ ವತಿಯಿಂದ ಖಾಲಿ ಇರುವ 120 ನಾಗರೀಕ ಪೊಲೀಸ್ ಕಾನ್ಸ್‍ಸ್ಟೇಬಲ್/ ಮಹಿಳಾ ಪೊಲೀಸ್ ಕಾನ್ಸ್‍ಸ್ಟೇಬಲ್‍ರ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಸಹಿಷ್ಣುತೆ ಮತ್ತು ದೇಹದಾಢ್ರ್ಯತೆ ಪರೀಕ್ಷೆಯನ್ನು ಸೆ. 25 ಮತ್ತು 26 ರಂದು ಬೆಳಿಗ್ಗೆ 06-00 ಗಂಟೆಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. 
    ಹೈದ್ರಾಬಾದ್-ಕರ್ನಾಟಕ ಪ್ರದೇಶದ ಸ್ಥಳೀಯ/ ಸ್ಥಳೀಯೇತರ ಅಭ್ಯರ್ಥಿಗಳಿಗಾಗಿ ಕೊಪ್ಪಳ ಜಿಲ್ಲಾ ಪೊಲೀಸ್ ಘಟಕದಲ್ಲಿ ಖಾಲಿ ಇರುವ 120 ನಾಗರೀಕ ಪೊಲೀಸ್ ಕಾನ್ಸ್‍ಸ್ಟೇಬಲ್/ ಮಹಿಳಾ ಪೆÇಲೀಸ್ ಕಾನ್ಸ್‍ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಪುರುಷ/ ಮಹಿಳಾ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಿ, ನಂತರ ಲಿಖಿತ ಪರೀಕ್ಷೆಯನ್ನು ಈಗಾಗಲೇ ಏರ್ಪಡಿಸಿದ್ದು, ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ 1:5 ಅನುಪಾತದಂತೆ ಅರ್ಹ ಅಭ್ಯರ್ಥಿಗಳಿಗೆ ಸಹಿಷ್ಣುತೆ ಮತ್ತು ದೇಹದಾಢ್ರ್ಯ ಪರೀಕ್ಷೆಯನ್ನು ಆಯೋಜಿಸಲಾಗಿದೆ. 
    ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಕರೆಪತ್ರಗಳನ್ನು ಪೊಲೀಸ್ ಇಲಾಖೆಯ ಅಧಿಕೃತ ವೆಬ್‍ಸೈಟ್  www.ksp.gov.in  ನಿಂದ ಪಡೆದು ಹಾಜರಾಗಬೇಕು.  ಕರೆಪತ್ರವನ್ನು ಪಡೆಯದೇ ಪರೀಕ್ಷೆಗೆ ಹಾಜರಾದಲ್ಲಿ ಅಂತಹವರಿಗೆ ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ.  ದೈಹಿಕ ಪರೀಕ್ಷೆಗೆ ಬರುವಾಗ ಕರೆಪತ್ರದ ಜೊತೆಗೆ, ಪತ್ರದಲ್ಲಿ ನಮೂದಿಸಿದ ಎಲ್ಲಾ ದಾಖಲಾತಿಯೊಂದಿಗೆ ಹಾಜರಾಗಬೇಕು.  ಮತ್ತು ಆನ್‍ಲೈನ್ ಮುಖಾಂತರ ಸಲ್ಲಿಸಿದ ಅರ್ಜಿಯ ಝರಾಕ್ಸ್ ಪ್ರತಿ, ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.  ತಪ್ಪಿದಲ್ಲಿ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗುವುದಿಲ್ಲ.  ಅಭ್ಯರ್ಥಿಗಳು ವಿದ್ಯಾರ್ಹತೆಗೆ ಹಾಗೂ ಮೀಸಲಾತಿಗೆ ಸಂಬಂಧಿಸಿದಂತೆ ದಿನಾಂಕ 22-06-2017 ರೊಳಗೆ ಪಡೆದ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ದೃಢೀಕೃತ ಝರಾಕ್ಸ್ ಪ್ರತಿಗಳ ಒಂದು ಸೆಟ್ ತರಬೇಕು ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ನೇಮಕಾತಿ ಅಧ್ಯಕ್ಷರು ಆಗಿರುವ ಡಾ. ಅನೂಪ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 25 ರಿಂದ ಕೊಪ್ಪಳದಲ್ಲಿ ಮಧು ಮೇಳ : ಜೇನು ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಜೇನು ಕೃಷಿ ತಾಂತ್ರಿಕ ಕಾರ್ಯಗಾರ


ಕೊಪ್ಪಳ ಸೆ. 23 (ಕರ್ನಾಟಕ ವಾರ್ತೆ): ಕೊಪ್ಪಳ ತೋಟಗಾರಿಕೆ ಇಲಾಖೆ (ಜಿ.ಪಂ) ವತಿಯಿಂದ “ಮಧು ಮೇಳ” ಜೇನು ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಜೇನು ಕೃಷಿ ತಾಂತ್ರಿಕ ಕಾರ್ಯಗಾರವನ್ನು ಸೆ. 25 ರಿಂದ 27 ರವರೆಗೆ ಕೊಪ್ಪಳ ತೋಟಗಾರಿಕೆ ಇಲಾಖೆ (ಜಿ.ಪಂ) ಕಛೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸೆ. 25 ರಂದು ಬೆಳಿಗ್ಗೆ 11-00 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
    ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸುವರು.  ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು “ಜೇನು ಕೃಷಿ ಕೈಪಿಡಿ” ಬಿಡುಗಡೆ ಮಾಡುವರು.  ಮುಖ್ಯ ಅತಿಥಿಗಳಾಗಿ ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದರ ಖಾದ್ರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಉಮಾ ಮಹದೇವನ್, ಕೃಷಿ ಮತ್ತು ಕೈಗಾರಿಕ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮಣ್ಣ ಅಗಸಿಮುಂದಿನ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವಣ್ಣ ಮೂಲಿಮನಿ, ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ ಪಾಲ್ಗೊಳ್ಳುವರು.
    ರಾಯಚೂರಿನ ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ (ಕೀಟ ಶಾಸ್ತ್ರ) ಪಿ.ಆರ್ ಬದ್ರಿಪ್ರಸಾದ್, ಶಿರಸಿ ತಾಲೂಕಿನ ತಾರಗೋಡದ ನಾಟಿ ವೈದ್ಯರು, ಪ್ರಗತಿ ಪರ ರೈತರು ಹಾಗೂ ಜೆನು ಕೃಷಿಕರಾದ ಮಧುಕೇಶ್ವರ್ ಹೆಗಡೆ, ಹಿರಿಯೂರಿನ ಪ್ರಗತಿಪರ ಜೇನು ಕೃಷಿಕರಾದ ಶಾಂತವೀರಯ್ಯ ಅವರು ಜೇನು ಕೃಷಿ ಕುರಿತು ತಾಂತ್ರಿಕ ಉಪನ್ಯಾಸ ನೀಡುವರು.  
ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಂ.ಆರ್. ಮಹೇಶ್ವರ್ ರಾವ್, ಲಾಲ್‍ಬಾಗ್ ತೋಟಗಾರಿಕೆ ಆಯುಕ್ತ ಪ್ರಭಾಸ ಚಂದ್ರ ರೇ, ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಲಾಲ್‍ಬಾಗ್ ತೋಟಗಾರಿಕೆ ಅಪರ ನಿರ್ದೇಶಕ (ತಾಳೆ ಬೆಳೆ) ಹೆಚ್.ಎಸ್. ಶಿವಕುಮಾರ, ರಾಷ್ಟ್ರೀಯ ತೋಟಗಾರಿಕೆ ಮಿಷನ್ (ಏ) ಕಾರ್ಯನಿರ್ವಾಹಕ ನಿರ್ದೇಶಕ ಕೆ.ಬಿ ದುಂಡಿ, ಲಾಲ್‍ಬಾಗ್ ತೋಟಗಾರಿಕೆ ಜಂಟಿ ನಿರ್ದೇಶಕರು ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಲಕ್ಷ್ಮಿ ಡಿ. ರಾಜು, ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಪಿ.ಎಂ. ಗಂಗಾಧರಪ್ಪ, ಕೃಷಿ ವಿಸ್ತರಣೆ ಮತ್ತು ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಎಂ.ಬಿ. ಪಾಟೀಲ್, ಹಿರಿಯ ವಿಜ್ಞಾನಿ ಹಾಗೂ ಗಂಗಾವತಿ ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ರೂಪಶ್ರೀ ಡಿ.ಹೆಚ್., ಹಾಗೂ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಅಕ್ಟೋಬರ್. 03 ರಂದು ಕೊಪ್ಪಳದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ


ಕೊಪ್ಪಳ ಸೆ. 23 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವಾನಿರತ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಅಕ್ಟೋಬರ್. 03 ರಂದು ಬೆಳಿಗ್ಗೆ 10-00 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದೆ.   
    ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದರ ಖಾದ್ರಿ, ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಮಹೇಶ ನವಲಹಳ್ಳಿ, ಕೃಷಿ ಮತ್ತು ಕೈಗಾರಿಕ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮಣ್ಣ ಅಗಸಿಮುಂದಿನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ ಪಾಲ್ಗೊಳ್ಳುವರು.
ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ ಭಾಗವಹಿಸುವರು.  ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕೊಪ್ಪಳದ ಹಿರಿಯ ನ್ಯಾಯವಾದಿಗಳಾದ ವ್ಹಿ.ಎಂ. ಭೂಸನೂರಮಠ ಅವರು ಕಾರ್ಯಕ್ರಮದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

ಅಂಗವಿಕಲರ ಕ್ಷೇತ್ರದಲ್ಲಿನ ಉತ್ತಮ ಸೇವೆಗೆ ರಾಜ್ಯ ಪ್ರಶಸ್ತಿ : ಅರ್ಜಿ ಆಹ್ವಾನ


ಕೊಪ್ಪಳ ಸೆ. 23 (ಕರ್ನಾಟಕ ವಾರ್ತೆ): ಕೊಪ್ಪಳ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ವತಿಯಿಂದ ಪ್ರಸಕ್ತ ಸಾಲಿಗೆ ಅಂಗವಿಕಲರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ, ಸಂಸ್ಥೆಗಳಿಗೆ ಮತ್ತು ವಿಶೇಷ ಶಾಲೆಗಳಲ್ಲಿ ಸೇವೆ ಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ ಶಿಕ್ಷಕರಿಗೆ 
ರಾಜ್ಯ ಪ್ರಶಸ್ತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.  
    ಡಿಸೆಂಬರ್. 03 ರಂದು ಆಚರಿಸುವ ವಿಶ್ವ ಅಂಗವಿಕಲರ ದಿನಾಚರಣೆಯಂದು ಅಂಗವಿಕಲರ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಸಂಸ್ಥೆ, ವ್ಯಕ್ತಿ ಮತ್ತು ವಿಶೇಷ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿಯನ್ನು ನೀಡಲು ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲಿಯೂ ಸಹ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಉದ್ದೇಶಿಸಿದೆ. 
    ಅರ್ಜಿ ಸಲ್ಲಿಸಲು ಕೊಪ್ಪಳ ಜಿಲ್ಲೆಯಲ್ಲಿ ಅಂಗವಿಕಲರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ, ಸಂಸ್ಥೆ ಮತ್ತು ವಿಶೇಷ ಶಾಲೆಗಳಲ್ಲಿ 15 ವರ್ಷಗಳಿಗೂ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ/ ಸಲ್ಲಿಸಿರುವವರಾಗಿರಬೇಕು.  ನಿಗದಿತ ಅರ್ಜಿ ನಮೂನೆಗಳನ್ನು ಇಲಾಖಾ ವೆಬ್‍ಸೈಟ್  www.welfareofdisabled.kar.nic.in  ಅಥವಾ  www.dwdsc.kar.nic.in ನಲ್ಲಿ ಪಡೆದು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ಕೊಪ್ಪಳ ಇವರಿಗೆ ಅಕ್ಟೋಬರ್. 25 ರೊಳಗಾಗಿ ಸಲ್ಲಿಸಬೇಕು ಎಂದು ಕೊಪ್ಪಳ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 26 ರಂದು ಕೈಗಾರಿಕ ಸ್ಪಂದನ ಕಾರ್ಯಕ್ರಮ


ಕೊಪ್ಪಳ ಸೆ. 23 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಕೈಗಾರಿಕೋದ್ಯಮಿಗಳ ಕುಂದುಕೊರತೆಗಳನ್ನು ನಿವಾರಿಸಲು ಕೈಗಾರಿಕಾ ಸ್ಪಂದನ ಕಾರ್ಯಕ್ರಮದ ಸಭೆಯನ್ನು ಸೆ. 26 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
      ಕೈಗಾರಿಕೋದ್ಯಮಿಗಳು ಜಿಲ್ಲೆಯಲ್ಲಿ ಕೈಗಾರಿಕಾ ಸ್ಥಾಪನೆಗೆ ಇರುವ ಸಮಸ್ಯೆಗಳ ಬಗ್ಗೆ ಲಿಖಿತ ರೂಪದಲ್ಲಿ ಜಂಟಿ ನಿರ್ದೇಶಕರವರ ಕಛೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ ಕೊಪ್ಪಳ ಇವರಿಗೆ ಸೆ. 25 ರೊಳಗಾಗಿ ಅಥವಾ ಸಭೆಯಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ತಿಳಿಸಲು ಸಹ ಕೋರಲಾಗಿದೆ ಎಂದು ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಟಣಕನಕಲ್: ಐ.ಟಿ.ಐ ಕಾಲೇಜಿನಲ್ಲಿ ಅತಿಥಿ ಬೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ


ಕೊಪ್ಪಳ ಸೆ. 23 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಟಣಕನಕಲ್ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ (ಐಟಿಐ ಕಾಲೇಜಿನಲ್ಲಿ) ಯಲ್ಲಿ ಪ್ರಸಕ್ತ ಸಾಲಿಗೆ ಐಟಿಐ ವೃತ್ತಿಗಳಲ್ಲಿ ತಾತ್ಕಾಲಿಕವಾಗಿ ಬೋಧನೆ ಮಾಡಲು ಬೋಧಕರು ಬೇಕಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.  
    ಸಂಸ್ಥೆಯಲ್ಲಿ ಐಟಿಐ ಇನ್ ಎಂ.ಎಂ.ವಿ ಟ್ರೇಡ್ & ಒಂದು ವರ್ಷದ ಅಪ್ರೇಂಟಿಸ್‍ಶಿಪ್ ಟ್ರೈನಿಂಗ್ ಪೂರ್ಣಗೊಳಿಸಿ ಎಲ್.ಎಂ.ಇ ಪರವಾನಿಗೆ ಪಡೆದಿದ್ದು, ಕನಿಷ್ಟ 03 ವರ್ಷಗಳ ಇಂಡಸ್ಟ್ರಿಯಲ್ /ಟೀಚಿಂಗ್ ಅನುಭವ ಹೊಂದಿರಬೇಕು.   ಅಥವಾ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಡಿಪ್ಲೋಮಾ ಇನ್ ಆಟೋಮೋಬೈಲ್ ಇಂಜಿನಿಯರಿಂಗ್ ವಿದ್ಯಾರ್ಹತೆ, ಎಲ್.ಎಂ.ವಿ ಪರವಾನಿಗೆಯೊಂದಿಗೆ ಕನಿಷ್ಟ 02 ವರ್ಷಗಳ ಇಂಡಸ್ಟ್ರೀಯಲ್/ ಟೀಚಿಂಗ್ ಅನುಭವ ಹೊಂದಿದ ಅಭ್ಯರ್ಥಿಯನ್ನು ಗರಿಷ್ಠ 11 ತಿಂಗಳಿಗೆ ಮಾತ್ರ ಅತಿಥಿ ಬೋಧಕರಾಗಿ ಕಾರ್ಯ ನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ.  ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.  ಆಸಕ್ತರು ಅರ್ಜಿ ಹಾಗೂ ದಾಖಲಾತಿಗಳೊಂದಿಗೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಟಣಕನಕಲ್, ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೋಟಗಾರಿಕೆಯಲ್ಲಿ ಕೃಷಿಭಾಗ್ಯ : ಅರ್ಜಿ ಆಹ್ವಾನ


ಕೊಪ್ಪಳ ಸೆ. 23 (ಕರ್ನಾಟಕ ವಾರ್ತೆ): ಕೃಷಿಭಾಗ್ಯ ಯೋಜನೆಯನ್ನು ಸದ್ಯ ತೋಟಗಾರಿಕೆ ಇಲಾಖೆಗೂ ವಿಸ್ತರಿಸಲಾಗಿದ್ದು,  ಪಾಲಿಹೌಸ್, ನೆರಳು ಪರದೆ, ಮತ್ತಿತರೆ ಸೌಲಭ್ಯ ಪಡೆಯಲು ಸಹಾಯಧನ ನೀಡಲಾಗುತ್ತಿದ್ದು, ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಕೃಷಿಭಾಗ್ಯ ಯೋಜನೆಯಡಿ ಪಾಲಿಹೌಸ್, ನೆರಳು ಪರದೆ, ಪಾಲಿಹೌಸ್‍ನಲ್ಲಿ ನೀರು ಸಂಗ್ರಹಣಾ ಘಟಕದಲ್ಲಿ ಬಳಸಲು ಡೀಸೆಲ್/ಸೋಲಾರ್ ಮೋಟಾರ್ ಮತ್ತು ಕೃಷಿಹೊಂಡ ಘಟಕಗಳನ್ನು ನಿರ್ಮಿಸಿಕೊಳ್ಳಲು ಸಾಮಾನ್ಯ ರೈತರಿಗೆ ಶೇ.50 ರಂತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಶೇ.90% ರವರೆಗೆ ಸಹಾಯಧನ ನೀಡಲಾಗುತ್ತದೆ.   ಈ ಘಟಕಗಳನ್ನು ಅನುಷ್ಠಾನಗೊಳಿಸಲು ಸರ್ಕಾರದಿಂದ ಅನುಮೋದಿತ ಸರಬರಾಜುದಾರರನ್ನು ನೇಮಿಸಿರುತ್ತಾರೆ.  ಅರ್ಜಿ ಸಲ್ಲಿಸಲು ಅಕ್ಟೋಬರ್ 19 ಕೊನೆಯ ದಿನವಾಗಿರುತ್ತದೆ.
ಆಸಕ್ತ ರೈತರು ಯೋಜನೆ ಕುರಿತು ಆಯಾ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಕೇಂದ್ರ ಕಛೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. 
      ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ .ಸಿ. ಉಕ್ಕುಂದ – 08539-231530, ಕೇಂದ್ರ ಸ್ಥಾನಿಯ ಸಹಾಯಕರು ತೋಟಗಾರಿಕೆ ಉಪನಿರ್ದೇಶಕ ಶಿವಯೋಗಪ್ಪ – 9743518608, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳಾದ ಕೊಪ್ಪಳ ನಜೀರ್ ಅಹ್ಮದ್ ಸೋಂಪೂರ – 8861294104, ಕುಷ್ಟಗಿ ಕೆ.ರಮೇಶ್ – 8310291867, ಗಂಗಾವತಿಯ ವಂಕಾ ದುರ್ಗಾ ಪ್ರಸಾದ್ – 8861697989, ಯಲಬುರ್ಗಾ ಮಂಜುನಾಥ ಲಿಂಗಣ್ಣನವರ – 9900929063 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ನಿರುದ್ಯೋಗಿಗಳಿಗೆ ವಿವಿಧ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ ಸೆ. 23 (ಕರ್ನಾಟಕ ವಾರ್ತೆ): ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯ ವತಿಯಿಂದ ನಿರುದ್ಯೋಗಿ ಯುವಕ, ಯುವತಿಯರಿಗೆ ಫಾಸ್ಟ್ ಫುಡ್ ಉದ್ಯಮ, ಶಾಪ್ ಕೀಪರ್, ಕಂಪ್ಯೂಟರ್ ಡಿ.ಟಿ.ಪಿ., ಕೋಳಿ ಸಾಕಾಣಿಕೆ ಹಾಗೂ ಗೃಹೋಯೋಗಿ ವಿದ್ಯತ್ ಉಪಕರಣಗಳ ದುರಸ್ಥಿ ತರಬೇತಿಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯು ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಮಾಡಲು ಅನುಕೂಲವಾಗಲಿದ್ದು, ತರಬೇತಿ ಪಡೆಯಲಿಚ್ಚಿಸುವವರು 18 ರಿಂದ 45 ವರ್ಷ ವಯೋಮಿತಿಯಲ್ಲಿಬೇಕು.  ತರಬೇತಿ ಕಾರ್ಯಕ್ರಮಗಳು ಊಟ ವಸತಿಯೊಂದಿಗೆ ಉಚಿತವಾಗಿದ್ದು, ಆಸಕ್ತರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ, ಉದ್ಯೋಗ ವಿದ್ಯಾ ನಗರ, ದಾಂಡೆಲಿ ರಸ್ತೆ, ಹಳಿಯಾಳ (ಉತ್ತರ ಕನ್ನಡ ಜಿಲ್ಲೆ), ವಿಳಾಸಕ್ಕೆ ಕೂಡಲೇ ಸಂಪರ್ಕಿಸಲು ಕೋರಲಾಗಿದೆ.  ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ 08284-220807, 9483485489, 9482188780 ಕ್ಕೆ ಸಂಪರ್ಕಿಸಲು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಡಗು : ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ


ಕೊಪ್ಪಳ ಸೆ. 23 (ಕರ್ನಾಟಕ ವಾರ್ತೆ): ರಾಷ್ಟ್ರೀಯ ರಕ್ಷಣಾ ಅಕಾಡೆಮಿ/ ಭಾರತೀಯ ನೌಕಾ ಅಕಾಡೆಮಿಗೆ ಸೇರಿಸಲು ಶೈಕ್ಷಣಿಕವಾಗಿ, ಮನಸಿಕವಾಗಿ ಮತ್ತು ದೈಹಿಕ ಸದೃಢವಾಗಿ ತರಬೇತಿಗೊಳಿಸುವ ಉದ್ದೇಶದಿಂದ ಕೊಡುಗು ಸೈನಿಕ ಶಾಲೆಯ 6ನೇ ಮತ್ತು 9ನೇ ತರಗತಿಯ ಪ್ರವೇಶಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
    ಪಠ್ಯಾಕ್ರಮ 10+2 ಸಿ.ಬಿ.ಎಸ್.ಸಿ (ವಿಜ್ಞಾನ ವಿಭಾಗ) ವಾಗಿದ್ದು, ದಾಖಲಾತಿ ಅಖಿಲ ಭಾರತ ಮಟ್ಟದ ಸೈನಿಕ ಶಾಲಾ ಪ್ರವೇಶ ಪರೀಕ್ಷೆ, ಮೌಖಿಕ ಸಂದರ್ಶನ ಮತ್ತು ವೈದ್ಯಕೀಯ ತಪಾಸಣೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗುವುದು.  6ನೇ ಹಾಗೂ 9ನೇ ತರಗತಿಯ ಪ್ರಶ್ನೆಪತ್ರಿಕೆಗಳು ಕ್ರಮವಾಗಿ 5ನೇ ಹಾಗೂ 8ನೇ ತರಗತಿಯ ಸಿ.ಬಿ.ಎಸ್.ಸಿ ಪಠ್ಯಾಕ್ರಮದ ಆಧಾರದಲ್ಲಿರುತ್ತದೆ.  ಸೈನಿಕ ಶಾಲೆಯಲ್ಲಿ 6ನೇ ತರಗತಿಗೆ 90-100, 9ನೇ ತರಗತಿಗರ 15-20 ಸೀಟುಗಳು ಖಾಲಿ ಇದ್ದು, ಎಸ್.ಸಿ - 15%, ಎಸ್.ಟಿ - 7.5% ಮತ್ತು ರಕ್ಷಣಾ ಇಲಾಖೆ – 25% ಮೀಸಲಾತಿಯಲ್ಲಿ ಪ್ರವೇಶ ಪಡೆಯಬಹುದು. 
    ದಾಖಲಾತಿಗೆ ಸಂಬಂಧಿಸಿದಂತೆ ವಯೋಮಿತಿ 6ನೇ ತರಗತಿಗೆ 2007ರ ಜುಲೈ. 02 ರಿಂದ 2008ರ ಜುಲೈ. 01 ರೊಳಗೆ, ಹಾಗೂ 9ನೇ ತರಗತಿಗೆ 2004ರ ಜುಲೈ. 02 ರಿಂದ 2005ರ ಜುಲೈ. 01 ರೊಳಗೆ ಅಭ್ಯರ್ಥಿಗಳು ಜನಿಸಿರಬೇಕು.  ಪ್ರವೇಶ ಪರೀಕ್ಷೆಯನ್ನು 2018ರ ಜನವರಿ 07 ರಂದು ನಡೆಯಲಿದ್ದು, 6ನೇ ಮತ್ತು 9ನೇ ತರಗತಿ ಪ್ರವೇಶ ಪರೀಕ್ಷೆ ಕೊಡಗಿನ ಸೈನಿಕ ಶಾಲೆಯಲ್ಲಿ ಹಾಗೂ 9ನೇ ತರಗತಿಗೆ ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆಗಳು ನಡೆಯಲಿವೆ.
    ಅರ್ಜಿ ಸಲ್ಲಿಸಲು ಅಕ್ಟೋಬರ್/ ನವೆಂಬರ್ ನಲ್ಲಿ ಶಾಲೆಯ ವೆಬ್‍ಸೈಟ್  www.sainikschoolkodaguedu.in  ನ್ನು ಸಂಪರ್ಕಿಸಿ ಮಾಹಿತಿ ಪುಸ್ತಕ/ ಅರ್ಜಿಯನ್ನು ಡೌನ್‍ಲೊಡ್ ಮಾಡಬಹುದು ಅಥವಾ ಶಾಲೆಯಿಂದ ಖುದ್ದಾಗಿ ಪಡೆಯಬಹುದು.  ಹೆಚ್ಚಿನ ಮಾಹಿತಿಗಾಗಿ ಶಾಲೆಯ ದೂರವಾಣಿ ಸಂಖ್ಯೆ 08276-278963 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. 

ಕಲಬುರಗಿ ವಿಭಾಗ ಮಟ್ಟದ ಪ್ರಕೃತಿ ಅಧ್ಯಯನ ಮತ್ತು ಚಾರಣ ಶಿಬಿರ : ನೋಂದಣಿಗೆ ಸೆ. 25 ಕೊನೆ ದಿನ


ಕೊಪ್ಪಳ ಸೆ. 23 (ಕರ್ನಾಟಕ ವಾರ್ತೆ): ಭಾರತ ಸ್ಕಾಟ್ ಮತ್ತು ಗೈಡ್ಸ್ ಕರ್ನಾಟಕ, ರಾಜ್ಯ ಸಂಸ್ಥೆಯ ವತಿಯಿಂದ ರೋವರ್ಸ್- ರೇಂಜರ್ಸ್‍ಗಳಿಗೆ ಕಲಬುರಗಿ ವಿಭಾಗ ಮಟ್ಟದ ಪ್ರಕೃತಿ ಅಧ್ಯಯನ ಮತ್ತು ಚಾರಣ ಶಿಬಿರವನ್ನು ಕೊಪ್ಪಳ ಜಿಲ್ಲಾ ಸಂಸ್ಥೆಯ ಸಹಭಾಗಿತ್ವದಲ್ಲಿ ಅಕ್ಟೋಬರ್. 10 ರಿಂದ 14 ರವರೆ ಗದಗ ರಸ್ತೆಯ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದು, ನೋಂದಣಿಗೆ ಸೆ. 25 ಕೊನೆಯ ದಿನವಾಗಿರುತ್ತದೆ.
    ಶಿಬಿರವನ್ನು ಅ. 10 ರಿಂದ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಭಾಗವಹಿಸುವವರು ಅಂದು ಬೆಳಿಗ್ಗೆ 11-00 ಗಂಟೆಗೆ ಕಡ್ಡಾಯವಾಗಿ ಹಾಜರಾಗಬೇಕು.  ಪ್ರತಿಯೊಬ್ಬರಿಗೆ ರೂ. 25/- ನೊಂದಾವಣಿ ಶುಲ್ಕ, ರೋವರ್ಸ್- ರೇಂಜರ್ಸ್ ಘಟಕಕ್ಕೆ ವಾರ್ಷಿಕ ನೊಂದಣಿ ಶುಲ್ಕ ರೂ. 194/- ಪಾವತಿಸಬೇಕು (ಪಾವತಿಯ ರಶೀದಿಯನ್ನು ತರುವುದು).  ಪಾವತಿಸದೇ ಇರುವ ದಳಗಳು ಶಿಬಿರ ಸ್ಥಳದಲ್ಲಿ ದಳದ ನೊಂದಾವಣೆ ಶುಲ್ಕ ಪಾವತಿಸಬೇಕು.  ಸಂಪೂರ್ಣ ಸಮವಸ್ತ್ರ, ಪುಸ್ತಕ, ಪೆನ್ನು, ಸ್ವೆಟರ್, ಛತ್ರಿ, ರೈನ್ ಕೋಟ್, ಟಾರ್ಚ್, ತಟ್ಟೆ, ಲೋಟ, ನೀರಿನ ಬಾಟಲ್, ಬದಲಿ ಉಡುಪು, ಬೆಚ್ಚನೆಯ ಲಘು ಹಾಸಿಗೆ, ನೂಲಿನ ಹಗ್ಗ, ಸೂಜಿ, ದಾರ, ಪ್ರಥಮ ಚಿಕಿತ್ಸೆ ವಸ್ತು ಇತ್ಯಾದಿ ವೈಯಕ್ತಿಕ ವಸ್ತುಗಳನ್ನು ತರಬೇಕು.  ಕಲಬುರಗಿ ವಿಭಾಗದ ಪ್ರತಿ ಜಿಲ್ಲಾ ಸಂಸ್ಥೆಗಳಿಂದ ಕನಿಷ್ಠ ನಿಪುಣ ತರಬೇತಿ ಪಡೆದಿರುವ 15 ರೋವೆರ್ಸ್, 15 ರೇಂಜರ್ಸ್ ಭಾಗವಹಿಸಲು ನಿಗದಿಗೊಳಿಸಲಾಗಿದೆ.  ರಾಜ್ಯ ಸಂಸ್ಥೆಯು ಊಟ ಮತ್ತು ವಸತಿ ಸೌಕರ್ಯವನ್ನು ಕೊಪ್ಪಳ ಜಿಲ್ಲಾ ಸಂಸ್ಥೆಯ ಸಹಕಾರದಲ್ಲಿ ಏರ್ಪಡಿಸಲಾಗಿದೆ.
    ಅರ್ಹ ರೋವರ್ಸ್ ಮತ್ತು ರೇಂಜರ್ಸ್‍ಗಳನ್ನು ಮತ್ತು ಸ್ಕೌಟರ್ಸ್-ಗೈಡರ್ಸ್‍ಗಳನ್ನು ಆಯ್ಕೆ ಮಾಡಿ ಶಿಬಿರಕ್ಕೆ ನಿಯೋಜಿಸಬೇಕಾಗಿದ್ದು, ನಿಯೋಜಿಸಲ್ಪಡುವ ರೋವರ್ಸ್/ ರೇಂಜರ್ಸ್‍ಗಳ ಹೆಸರು ಮತ್ತು ವಿಳಾಸವನ್ನು ರಾಜ್ಯ ಕಾರ್ಯದರ್ಶಿ shq@bsgkarnatka.org ಹಾಗೂ ಮತ್ತೊಂದು ಪ್ರತಿಯನ್ನು ಜಿಲ್ಲಾ ಕಾರ್ಯದರ್ಶಿ, ಭಾರತ್ ಸ್ಕೌಟ್ಸ್ & ಗೌಟ್ಸ್, ಬಿ.ಇ.ಓ ಆಫೀಸ್, ಹಳೆಯ ಬಸ್ ಸ್ಟ್ಯಾಂಡ್ ಹತ್ತಿರ, ಜಿಲ್ಲಾ ಸಂಸ್ಥೆ ಕೊಪ್ಪಳ ಇವರಿಗೆ ಸೆ. 25 ರೊಳಗಾಗಿ ತಿಳಿಸಬೇಕು.  ಶಿಬಿರಕ್ಕೆ ಬರುವಾಗ ರಿಸ್ಕ್ ಸರ್ಟೀಫಿಕೇಟ್ ತರಬೇಕು.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ಎಸ್.ಓ.ಸಿ(ಎಸ್) ಎಂ. ಪ್ರಭಾಕರ್ ಭಟ್ – 9448914540, ಎಸ್.ಓ.ಸಿ(ಗೈ) ಸಿ. ಮಂಜುಳಾ – 9844366941, ಜಿಲ್ಲಾ ಕಾರ್ಯದರ್ಶಿ ಸುದರ್ಶನ್ ರಾವ್ – 9482404848, ಹಾಗೂ ಡಿ.ಓ.ಸಿ(ಗೈ) ಮಲ್ಲೇಶ್ವರಿ – 7259115730 ಕ್ಕೆ ಸಂಪರ್ಕಿಸಬಹುದು ಎಂದು ಭಾರತ ಸ್ಕಾಟ್ ಮತ್ತು ಗೈಡ್ಸ್ ಕರ್ನಾಟಕ, ರಾಜ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Friday, 22 September 2017

ಕೃಷ್ಣಾ-ಬಿ ಸ್ಕೀಂ ಯೋಜನೆಗೆ 2265 ಕೋಟಿ ರೂ. ಅನುದಾನ- ಮುಖ್ಯಮಂತ್ರಿ ಸಿದ್ದರಾಮಯ್ಯ

ಕೊಪ್ಪಳ ಸೆ. 22 (ಕರ್ನಾಟಕ ವಾರ್ತೆ): ಕೃಷ್ಣಾ-ಬಿ ಸ್ಕೀಂ ಯೋಜನೆಯಡಿ ಕೊಪ್ಪಳ ಏತನೀರಾವರಿ ಯೋಜನೆಯ ಮೂರನೆ ಹಂತದ ಕಾಮಗಾರಿಗಳಿಗೆ 2265 ಕೋಟಿ ರೂ. ಅನುದಾನವನ್ನು ಶೀಘ್ರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

     ಕೊಪ್ಪಳ ನಗರದ ಹೊರ ವಲಯದಲ್ಲಿ, ಶುಕ್ರವಾರದಂದು ಏರ್ಪಡಿಸಲಾಗಿದ್ದ ಕೊಪ್ಪಳ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಸರ್ಕಾರದ ಜನಪರ ಯೋಜನೆ ಫಲಾನುಭವಿಗಳ ಸಮಾವೇಶದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

     ಕೊಪ್ಪಳ ಜಿಲ್ಲೆಯಲ್ಲಿ ಇಂದು ಆಯೋಜಿಸಲಾಗಿರುವ ವಿವಿಧ ಯೋಜನೆ ಫಲಾನುಭವಿಗಳ ಸಮಾವೇಶವು ಜಿಲ್ಲೆಯ ಪಾಲಿಗೆ ಐತಿಹಾಸಿಕ ಸಮಾವೇಶವಾಗಿದೆ.  ಸರ್ಕಾರದ ಜನಪರ ಯೋಜನೆಗಳನ್ನು ಬೆಂಬಲಿಸಿ, ಬಂದಿರುವ ಜನ ಸಾಗರವನ್ನು ನೋಡಿ ಸಂತಸವಾಗುತ್ತಿದೆ.  ನಾವು ಅಧಿಕಾರಕ್ಕೆ ಬರುವ ಮುನ್ನ ಹೊಸಪೇಟೆಯಿಂದ ಕೂಡಲಸಂಗಮದ ವರೆಗೆ ಪಾದಯಾತ್ರೆ ಮಾಡಿದಾಗ, ನಮ್ಮ ಸರ್ಕಾರ ಬಂದರೆ ಪ್ರತಿ ವರ್ಷ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ ಹತ್ತು ಸಾವಿರ ಕೋಟಿ ರೂ. ವೆಚ್ವ ಮಾಡುವುದಾಗಿ ಹೇಳಿದ್ದೆವು.   ಐದು ವರ್ಷದಲ್ಲಿ 60 ಸಾವಿರ ಕೋಟಿ ಖರ್ಚು ಮಾಡುತ್ತೇವೆ. ನುಡಿದಂತೆ ನಡೆಯುತ್ತೇವೆ. 


ರಾಜ್ಯದಲ್ಲಿ ನೀರಾವರಿ, ವಿದ್ಯುತ್, ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಆದ್ಯತಾ ವಲಯವನ್ನಾಗಿಸಿ, ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ.  ರಾಜ್ಯದಲ್ಲಿ ಎಲ್ಲೆಲ್ಲಿ ಕೆರೆಗಳನ್ನು ತುಂಬಿಸಲು ಸಾಧ್ಯವೋ, ಅಂತಹ ಯೋಜನೆಗಳನ್ನು ಗುರುತಿಸಿ, ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ.  ರಾಜ್ಯದಲ್ಲಿ 7 ಸಾವಿರ ಕೋಟಿ ರೂ. ಖರ್ಚು ಮಾಡಿ, ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ರೂಪಿಸಲಾಗಿದೆ.  ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕೊಪ್ಪಳ ತಾಲೂಕುಗಳು ಮಳೆ ಆಶ್ರಿತ ಕ್ಷೇತ್ರಗಳಾಗಿದ್ದು, ಈ ಎರಡೂ ತಾಲೂಕುಗಳ ಆಯ್ದ ಕೆರೆಗಳಿಗೆ 290 ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾ ನದಿಯ ನೀರನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.  ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಏತ ನೀರಾವರಿ ಯೋಜನೆಗೂ ಇದೇ ವರ್ಷ ಚಾಲನೆ ನೀಡಲಾಗುವುದು.  ಸತತ ಬರದಿಂದ ಕಂಗೆಟ್ಟಿದ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ನಮ್ಮ ಸರ್ಕಾರ ಸಹಕಾರಿ ಬ್ಯಾಂಕ್‍ಗಳಲ್ಲಿ ರೈತರು ಮಾಡಿದ ಸಾಲವನ್ನು 50 ಸಾವಿರ ರೂ. ಗಳವರೆಗೆ ಮನ್ನಾ ಮಾಡಿದೆ.  ರಾಜ್ಯದ 2227506 ರೈತರ 8165 ಕೋಟಿ ರೂ. ಸಾಲ ಮನ್ನಾ ಮಾಡಿದೆ.  ರಾಷ್ಟ್ರೀಕೃತ ಬ್ಯಾಂಕ್‍ಗಳು ಹಾಗೂ ವಾಣಿಜ್ಯ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ ಸಾಲದ ಪ್ರಮಾಣ ಸುಮಾರು 42 ಸಾವಿರ ಕೋಟಿ ರೂ. ಗಳಿದ್ದು, ಕೇಂದ್ರ ಸರ್ಕಾರ ಈ ಸಾಲವನ್ನು ಮನ್ನಾ ಮಾಡುತ್ತಿಲ್ಲ.  ಆದರೆ ಉದ್ಯಮಿಗಳು, ಬಂಡವಾಳ ಶಾಹಿಗಳ ಸಾಲವನ್ನು ಮನ್ನಾ ಮಾಡಿದೆ ಎಂದರು.
     ಮಳೆ ಆಶ್ರಿತ ರೈತರ ಹಿತ ಕಾಯಲು ನಮ್ಮ ಸರ್ಕಾರ ಕೃಷಿಭಾಗ್ಯ ಯೋಜನೆ ಜಾರಿಗೊಳಿಸಿದ್ದು, ರಾಜ್ಯದಲ್ಲಿ ಸುಮಾರು 1. 67 ಲಕ್ಷ ಕೃಷಿ ಹೊಂಡಗಳ ನಿರ್ಮಾಣವಾಗಿದೆ.  ಸದ್ಯ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಹೊಂಡಗಳು ತುಂಬಿರುವುದು, ರೈತರಲ್ಲಿ ಭರವಸೆಯನ್ನು ಮೂಡಿಸಿದೆ..  ರೈತರಿಗೆ 03 ಲಕ್ಷ ರೂ. ಗಳವರೆಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತಿದ್ದು,  ಪದವಿ ವ್ಯಾಸಂಗ ಹಾಗೂ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಜಾತಿ ಬೇಧವಿಲ್ಲದೆ ಎಲ್ಲರಿಗೂ ಉಚಿತ ಲ್ಯಾಪ್‍ಟಾಪ್ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
1500 ಕೋಟಿ ರೂ. ಅಭಿವೃದ್ಧಿ ಕಾರ್ಯಕ್ರಮ:  ಕೊಪ್ಪಳದಲ್ಲಿ ಇಂದು ಒಟ್ಟು 1500 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತಿದೆ.  ರಾಜ್ಯದಲ್ಲಿಯೇ ಇಷ್ಟೊಂದು ಬೃಹತ್ ಮೊತ್ತದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿರುವುದು ಬಹುಶಃ ಇದೇ ಮೊದಲು ಎನಿಸುತ್ತಿದೆ.  ನಿಜವಾಗಿಯೂ ಕೊಪ್ಪಳದಲ್ಲಿ ನಡೆಯುತ್ತಿರುವುದು ಐತಿಹಾಸಿಕ ಸಮಾವೇಶವಾಗಿದೆ.  ಕುಷ್ಟಗಿ ಮತ್ತು ಯಲಬುಗಾ ತಾಲೂಕಿನ ಗ್ರಾಮಗಳಿಗೆ 763 ಕೋಟಿ ರೂ. ವೆಚ್ಚದಲ್ಲಿ ಎಲ್ಲ 331 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಈ ಹಿಂದೆ ಜಿಲ್ಲೆಯಲ್ಲಿ ಇಂತಹ ಯಾವುದೇ ಯೋಜನೆ ಜಾರಿಗೊಂಡಿಲ್ಲ.  ನಮ್ಮ ಸರ್ಕಾರ ಇಂತಹ ಬೃಹತ್ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದರು.
ಹಳ್ಳಿ ಮಕ್ಕಳೂ ವೈದ್ಯರಾಗಬೇಕು: ಕೇವಲ ಆರ್ಥಿಕವಾಗಿ ಸಬಲರಾಗಿರುವವರು ಮಾತ್ರ ವೈದ್ಯರಾಗುವ ಕಾಲವಿತ್ತು.  ಆದರೆ ನಮ್ಮ ಸರ್ಕಾರ ಹಳ್ಳಿ ಮಕ್ಕಳೂ, ಬಡವರ ಮಕ್ಕಳೂ ವೈದ್ಯರಾಗಬೇಕೆಂಬ ಜನಪರ ನೀತಿಯೊಂದಿಗೆ ಪ್ರತಿ ಜಿಲ್ಲೆಯಲ್ಲಿಯೂ ಸರ್ಕಾರಿ ಮೆಡಿಕಲ್ ಕಾಲೇಜು ಪ್ರಾರಂಭಿಸಬೇಕು ಎನ್ನುವ ನಿಲುವಿನೊಂದಿಗೆ ಹೆಜ್ಜೆ ಇರಿಸಿದೆ.  ಹೀಗಾಗಿಯೇ ಕೊಪ್ಪಳಕ್ಕೆ ಮೆಡಿಕಲ್ ಕಾಲೇಜನ್ನು ನಮ್ಮ ಸರ್ಕಾರವೇ ಮಂಜೂರು ಮಾಡಿ, ಕಟ್ಟಡವನ್ನು ನಿರ್ಮಿಸಿ, ಉದ್ಘಾಟನೆಯನ್ನೂ ನಮ್ಮ ಸರ್ಕಾರದ ವತಿಯಿಂದಲೇ ನೆರವೇರಿಸುತ್ತಿದ್ದೇವೆ.  ಹೊಸದಾಗಿ ರಾಜ್ಯಾದ್ಯಂತ 13 ಮೆಡಿಕಲ್ ಕಾಲೇಜುಗಳನ್ನು ಹೊಸದಾಗಿ ಆರಂಭಿಸಲು ನಿರ್ಧರಿಸಲಾಗಿದೆ. ಈಗಾಗಲೇ ಆರಂಭವಾಗಿರುವುದೂ ಸೇರಿದಂತೆ ಒಟ್ಟು 23 ಮೆಡಿಕಲ್ ಕಾಲೇಜುಗಳು ಸಿಗಲಿವೆ ಎಂದರು.
04 ಕೋಟಿ ಜನರಿಗೆ ಅನ್ನಭಾಗ್ಯ : ರಾಜ್ಯದಲ್ಲಿ ಬಡವರು, ತುತ್ತು ಅನ್ನಕ್ಕಾಗಿ ಯಾರ ಬಳಿಯೂ ಕೈ ಚಾಚಬಾರದು.  ಸ್ವಾಭಿಮಾನಿಗಳಾಗಿ ಬದುಕಬೇಕು ಎಂಬ ಆಶಯದೊಂದಿಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದೇವೆ.  ರಾಜ್ಯದಲ್ಲಿ ಸುಮಾರು 1. 10 ಕೋಟಿ ಕುಟುಂಬಗಳಿಗೆ ಪ್ರತಿ ಸದಸ್ಯರಿಗೆ 07 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೇವೆ.  ಇಂತಹ ಬಡವರ ಪರವಾದ ಯೋಜನೆ ದೇಶದ ಯಾವುದೇ ರಾಜ್ಯದಲ್ಲಿ ಜಾರಿಗೊಂಡಿಲ್ಲ.  ಅಕ್ಟೋಬರ್ ಒಳಗಾಗಿ ಇನ್ನೂ 15 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆ ಲಭ್ಯವಾಗಲಿದ್ದು, ರಾಜ್ಯದ 04 ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆಯಲ್ಲಿ ಉಚಿತವಾಗಿ ಅಕ್ಕಿ ದೊರೆಯಲಿದೆ.  ರಾಜ್ಯವನ್ನು ಹಸಿವು ಮುಕ್ತ ಕರ್ನಾಟಕವನ್ನಾಗಿಸುವ ಆಶಯದೊಂದಿಗೆ ನಮ್ಮ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.
1.5 ಕೋಟಿ ಮಕ್ಕಳಿಗೆ ಹಾಲು : ರಾಜ್ಯದಲ್ಲಿನ ಮಕ್ಕಳಲ್ಲಿ ಅಪೌಷ್ಠಿಕತೆ ತಡೆಗಟ್ಟಲು ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದೇವೆ.  ರಾಜ್ಯದ 1. 5 ಕೋಟಿ ಮಕ್ಕಳಿಗೆ ಶಾಲೆಯಲ್ಲಿ ವಾರದಲ್ಲಿ ಐದು ದಿನ ಹಾಲು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ : ಕೊಪ್ಪಳ ಜಿಲ್ಲೆಯ ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನ ಗ್ರಾಮಗಳಿಗೆ 763 ಕೋಟಿ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕೊಪ್ಪಳ ತಾಲೂಕಿನ ಆಯ್ದ ಕೆರೆಗಳಿಗೆ 290 ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾ ನದಿಯ ನೀರನ್ನು ತುಂಬಿಸುವ ಯೋಜನೆ,  ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ 103 ಕೋಟಿ ರೂ. ವೆಚ್ಚದಲ್ಲಿ ಬನ್ನಿಕೊಪ್ಪ ಏತ ನೀರಾವರಿ ಯೋಜನೆ, ಯಲಬುರ್ಗಾ ತಾಲೂಕು ತಳಕಲ್ ಬಳಿ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡ, ಕುಕನೂರು ಪಟ್ಟಣದಲ್ಲಿ 09 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ 60 ಹಾಸಿಗೆಗಳ ಮಹಿಳಾ ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆ ಕಾಮಗಾರಿಗಳಿಗೆ ಶಂಕುಸ್ಥಾಪನೆ.   32 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಆನೆಗೊಂದಿ ಸೇತುವೆಯ ಉದ್ಘಾಟನೆ.  ಗಂಗಾವತಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡ, ಗಂಗಾವತಿ ತಾಲೂಕು ಚಿಕ್ಕಬೆಣಕಲ್‍ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹಾಸ್ಟೆಲ್ ಕಟ್ಟಡ,  ಗಂಗಾವತಿ ಮತಕ್ಷೇತ್ರ ಕೊಪ್ಪಳ ತಾಲೂಕಿನ ಹಿರೇಹಳ್ಳ ಯೋಜನೆಯ ಮುದ್ಲಾಪುರ ಗ್ರಾಮ ಬಳಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೇತುವೆಯ ಉದ್ಘಾಟನೆಯನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನೆರವೇರಿಸಿದರು.
     ಸಮಾರಂಭದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಸಚಿವ ಆರ್.ವಿ. ದೇಶಪಾಂಡೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕರುಗಳಾದ ರಾಘವೇಂದ್ರ ಹಿಟ್ನಾಳ್, ಶಿವರಾಜ ಎಸ್ ತಂಗಡಗಿ, ದೊಡ್ಡನಗೌಡ ಪಾಟೀಲ್, ಇಕ್ಬಾಲ್ ಅನ್ಸಾರಿ, ವಿಧಾನಪರಿಷತ್ ಸದಸ್ಯರಾದ ಬಸವರಾಜ ಪಾಟೀಲ್ ಇಟಗಿ, ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ್, ಸಂಸದ ಕರಡಿ ಸಂಗಣ್ಣ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಜನಪರ ಯೋಜನೆಗಳ ರೂಪಕ ಪ್ರದರ್ಶನ ಹಾಗೂ ಫಲಾನುಭವಿಗಳ ಅಭಿಪ್ರಾಯಕ್ಕೆ ಸಿಎಂ ಮೆಚ್ಚುಗೆ

ಕೊಪ್ಪಳ ಸೆ. 22 (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಹತ್ವಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆ ಅಲ್ಲದೆ, ರೈತರ ಹಿತಕಾಯಲು ಇತ್ತೀಚೆಗೆ ರೈತರ ಸಾಲ ಮನ್ನಾ ಮಾಡಿರುವ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಶುಕ್ರವಾರದಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಪ್ರದರ್ಶಿಸಲಾದ ಕಿರು ರೂಪಕ ಕಾರ್ಯಕ್ರಮ ಹಾಗೂ ಫಲಾನುಭವಿಗಳು ತಮ್ಮ ಅನಿಸಿಕೆಯನ್ನು ವೇದಿಕೆಯಲ್ಲಿ ವ್ಯಕ್ತಪಡಿಸಲು ಅನುವು ಮಾಡಿಕೊಟ್ಟ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಹಲವು ಸಚಿವರುಗಳು, ಅಧಿಕಾರಿಗಳು, ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.
 
ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ರೂಪಕ ಪ್ರದರ್ಶನ ಮಾಡುವ ಮೂಲಕ ವಿಶೇಷ ಕಾರ್ಯಕ್ರಮ ಆಯೋಜಿಸಲು ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಆಶಯ ವ್ಯಕ್ತಪಡಿಸಿ, ಈ ಕಾರ್ಯಕ್ರಮದ ಪರಿಕಲ್ಪನೆ ಕೈಗೊಂಡರು. ಮುಖ್ಯಮಂತ್ರಿಗಳ ಪಾತ್ರಧಾರಿಯಾಗಿದ್ದ ಬೆಂಗಳೂರಿನ ಮಿಮಿಕ್ರಿ ಗೋಪಿ ಅವರು ರೂಪಕ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು.
 
ರೈತರ ಸಾಲ ಮನ್ನಾ :
**********ಸತತ ಬರದಿಂದ ರೈತರು ಅನುಭವಿಸುತ್ತಿದ್ದ ನೋವು, ಕೌಟುಂಬಿಕ ತೊಂದರೆ, ಮನೆಯ ಆರ್ಥಿಕ ದುಸ್ಥಿತಿಯನ್ನು ಕಲಾವಿದರು ರೂಪಕದಲ್ಲಿ ಬಿಚ್ಚಿಟ್ಟ ಬಗೆ ಮನಕಲುಕುವಂತೆ ಮಾಡಿತು. ಆರ್ಥಿಕ ತೊಂದರೆಯಿಂದ ಕಂಗೆಟ್ಟಿದ್ದ ರೈತರನ್ನು ಸಂಕಷ್ಟದಿಂದ ಕಾಪಾಡಲು ಸರ್ಕಾರ ಕೈಗೊಂಡ ನಿರ್ಧಾರವನ್ನು ಮುಖ್ಯಮಂತ್ರಿಗಳ ಪಾತ್ರಧಾರಿ ರೈತರಿಗೆ ತಿಳಿಸುತ್ತಾರೆ. ನಂತರ ರೈತರ 50 ಸಾವಿರ ರೂ. ವರೆಗಿನ ಸಾಲವನ್ನು ಸರ್ಕಾರ ಮನ್ನಾ ಮಾಡಿದ ಸುದ್ದಿ ಕೇಳಿ, ರೈತ ಕುಟುಂಬ ಸಂತಸಪಡುತ್ತದೆ. ರೈತರನ್ನು ಸಂಕಷ್ಟದಿಂದ ಪಾರು ಮಾಡಿದ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತಾರೆ.
ಅನ್ನಭಾಗ್ಯ :
*************** ತುಂಬು ಕುಟುಂಬದಲ್ಲಿ ದುಡಿಯುವವರು ಒಬ್ಬರೇ ಇದ್ದು, ಬಡತನದಿಂದ ಪತ್ನಿ ಹಾಗೂ ಮಕ್ಕಳನ್ನು ನಿರ್ಲಕ್ಷಿಸುವ ಕುಟುಂಬದ ಯಜಮಾನನಿಗೆ, ಬುದ್ದಿ ಹೇಳುವ ಪತ್ನಿ. ಆರ್ಥಿಕ ತೊಂದರೆಯ ಕಾರಣ, ತುತ್ತು ಅನ್ನಕ್ಕೂ ತೊಂದರೆ ಎದುರಿಸುತ್ತಿದ್ದ ಕುಟುಂಬಕ್ಕೆ ಅನ್ನಭಾಗ್ಯ ಯೋಜನೆಯಿಂದಾಗಿ, ನೆಮ್ಮೆದಿಯಾಗಿ ಜೀವನ ನಡೆಸಲು ಸಾಧ್ಯವಾಗುತ್ತಿದೆ ಎನ್ನುವ ಅಂಶವನ್ನು ಈ ರೂಪಕ ಬಿಂಬಿಸಿತು.
ಕ್ಷೀರಭಾಗ್ಯ :
****** ಬಡತನದ ಕುಟುಂಬದಲ್ಲಿ, ಮನೆಯ ಯಜಮಾನನೂ ದುಡಿಯಬೇಕು, ಮಕ್ಕಳೂ ಶಾಲೆಗೆ ಹೋಗುವ ಬದಲು ಕೂಲಿ ಕೆಲಸಕ್ಕೆ ಹೋಗಬೇಕು ಎನ್ನುವ ಸ್ಥಿತಿಯಲ್ಲಿನ ಕುಟುಂಬದ ಮಕ್ಕಳ ಆರೋಗ್ಯ ಸ್ಥಿತಿಗತಿಯನ್ನು ವಿವರಿಸುವ ತಾಯಿ, ಮಕ್ಕಳೂ ಶಾಲೆಯ ಬದಲು ದುಡಿಯಲು ಹೋಗಬೇಕು ಎನ್ನುವ ಮನಸ್ಥಿತಿಯ ತಂದೆ. ಕೊನೆಗೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಕೆನೆಭರಿತ ಹಾಲನ್ನು ನೀಡುತ್ತಿದ್ದಾರೆ ಎಂದು, ನಾವು ಶಾಲೆಗೆ ನಿತ್ಯ ಹೋಗುತ್ತಿದ್ದೇವೆ ಎನ್ನುವ ವಿದ್ಯಾರ್ಥಿಗಳು. ಹೀಗೆ ಈ ರೂಪಕ ಸಾಗಿಬರುತ್ತದೆ. ಮುಖ್ಯಮಂತ್ರಿಗಳ ಪಾತ್ರಧಾರಿ ಕೊನೆಗೆ ಎಲ್ಲ ಮಕ್ಕಳನ್ನು ದುಡಿಯಲು ಕಳುಹಿಸದೆ, ಶಾಲೆಗೆ ಕಳುಹಿಸಿ ಎನ್ನುವ ಸಂದೇಶದೊಂದಿಗೆ ಈ ರೂಪಕ ತೆರೆ ಕಾಣುತ್ತದೆ.
ಮೇಲಿನ ಎಲ್ಲ ಯೋಜನೆಗಳ ಫಲಾನುಭವಿಗಳು ಯೋಜನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ವೇದಿಕೆಯ ಮೇಲೆ ಅವಕಾಶ ಕಲ್ಪಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಮಕ್ಕಳಿಗೆ ಹಾಲಿನ ಗ್ಲಾಸ್ ಅನ್ನು ನೀಡಿ, ಹಾಲು ಕುಡಿಯಲು ಕೊಟ್ಟಿದ್ದು, ವೇದಿಕೆಯ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರವಾಯಿತು. ಮುಖ್ಯಮಂತ್ರಿಗಳು ಈ ರೂಪಕದ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಶಂಸೆಯ ಮಾತುಗಳನ್ನಾಡಿದರು.
ಮುಖ್ಯಮಂತ್ರಿಗಳು ಪಾಲ್ಗೊಂಡ ಈ ಸಮಾರಂಭದಲ್ಲಿ ಇಂತಹ ರೂಪಕವನ್ನು ಏರ್ಪಡಿಸಬೇಕು ಎನ್ನುವ ಪರಿಕಲ್ಪನೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಮೂಡಿಸಿದರೆ, ಇದಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ತುಕಾರಾಂರಾವ್ ಅವರು ಕೈಜೋಡಿಸಿ, ರೂಪಕದ ನಿರ್ದೇಶನದ ಹೊಣೆ ಹೊತ್ತಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕಲಾವಿದ ಕುಷ್ಟಗಿಯ ಶರಣಪ್ಪ ವಡಿಗೇರಿ ಅವರು ರೂಪಕದ ಸಾಹಿತ್ಯವನ್ನು ರಚಿಸಿದ್ದರು. ರೂಪಕ ಆಯೋಜನೆಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರ ಪಡೆಯಲಾಯಿತು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡ ಈ ರೂಪಕ ಆಯೋಜನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿ, ರೂಪಕ ಉತ್ತಮವಾಗಿ ಮೂಡಿ ಬರಲು ಪ್ರೋತ್ಸಾಹ ನೀಡಿದರು.

ರೈತರ ಬೆನ್ನೆಲಬು ಮುರಿಯೋದನ್ನ ತಡೆದ ಸಾಲಮನ್ನಾ : ಫಲಾನುಭವಿಯ ಮನದಾಳ ಮಾತುಕೊಪ್ಪಳ ಸೆ. 22 (ಕರ್ನಾಟಕ ವಾರ್ತೆ) ರೈತರ ಬೆನ್ನಲಬು ಮುರಿಯೋದನ್ನ ತಡೆದಿದ್ದು, ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯಾಗಿದೆ ಎಂದು ಸಹಕಾರಿ ಸಂಘದಲ್ಲಿ ತಾನು ಪಡೆದ ಸಾಲ ಮನ್ನಾ ಆದ ಫಲಾನುಭವಿಯಾದ ಕೊಪ್ಪಳ ಜಿಲ್ಲೆಯ ಮಂಗಳೂರು ಗ್ರಾಮದ ರೈತ ನಿಂಗಪ್ಪ ಕಿನ್ನಾಳ ಅವರು ತಮ್ಮ ಮನದಾಳ ಮಾತನ್ನು ಹೇಳಿದರು.

    ಕೊಪ್ಪಳ ಜಿಲ್ಲಾಡಳಿತ ಹಾಗೂ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಹಯೋಗದಲ್ಲಿ ಕರ್ನಾಟಕ ಸರ್ಕಾರ ಕೊಪ್ಪಳ ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ/ ಉದ್ಘಾಟನೆ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶದಲ್ಲಿ ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯ ಫಲಾನುಭವಿಯಾಗಿ ರೈತ ನಿಂಗಪ್ಪ ಕಿನ್ನಾಳ ಅವರು ಮಾತನಾಡಿದರು.  

    ನಾನು ಸೊಸೈಟಿಯಲ್ಲಿ 20,000 ರೂ. ಗಳನ್ನು ಸಾಲ ಪಡೆದು ನನ್ನ ಹೊಲದಲ್ಲಿ ಉಳಿಮೆ ಮಾಡಿದ್ದೆ.  ಈ ಸಾಲವನ್ನು ನನಗೆ ತೀರಿಸಲು ಆಗಲಿಲ್ಲ.  ಏಕೇಂದರೆ ಸತತ 02 ವರ್ಷ ತೀವ್ರ ಬರಗಾಲದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಳೆ ಬಾರದೇ ಇರುವ ಕಾರಣ ಬೆಳೆ ಸಂಪೂರ್ಣ ನಾಶಗೊಂಡು ಸಂಕಷ್ಟಕ್ಕೆ ಸಿಲುಕಿದ್ದೆ.  ಈ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವು ಸೂಸೈಟಿಗಳಲ್ಲಿ 50,000 ಗಳ ವರೆಗಿನ ಸಾಲವನ್ನು ಮನ್ನಾ ಮಾಡಿದ್ದು, ನಾನು ಮಾಡಿದ ಸಾಲವೂ ಮನ್ನಾ ಆಗಿದ್ದರಿಂದ ಸರ್ಕಾರದ ಈ  ಸಾಲಮನ್ನಾ ಯೋಜನೆ ನಮ್ಮಂತಹ ರೈತರ ಬೆನ್ನೆಲಬನ್ನು ಮುರಿಯೋದನ್ನು ತಡೆದಿದೆ. 
    “ಕ್ಷೀರಭಾಗ್ಯ” ಯೋಜನೆ ನಮಗೆ ಬಹಳ ಉಪಯೋಗವಾಗಿದೆ.  ನಮ್ಮ ಮನೆಯಲ್ಲಿ ಬಡತನ ಇರುವುದರಿಂದ ಸರಿಯಾದ ಸಮಯದಲ್ಲಿ ಊಟಮಾಡಲು ಆಗುತ್ತಿರಲಿಲ್ಲ.  ಶಾಲೆಗೆ ಬಂದಾಗ ಹಸಿವು ತಾಳಲಾರದೆ ಊಟದ ಸಮಯ ಯಾವಾಗ ಆಗುತ್ತದೆ ಎಂದು ಕಾಯುತ್ತಿದ್ದೆವು.  ಸರ್ಕಾರದ “ಕ್ಷೀರಭಾಗ್ಯ” ಯೋಜನೆಯಲ್ಲಿ ನಮಗೆ ಹಾಲು ಕೊಡುವುದರಿಂದ ನಮಗೆ ಹಸಿವು ತಡೆಯಲು ಅನುಕೂಲವಾಗಿದೆ.  ಮೊದಲು ವಾರದಲ್ಲಿ ಮೂರು ದಿನ ಹಾಲು ಕೊಡುತ್ತಿದ್ದರು.  ಈಗ ವಾರದಲ್ಲಿ 05 ದಿನ ಹಾಲು ಕೊಡುತ್ತಿದ್ದಾರೆ.  ವಾರದ ಆರೂ ದಿನಗಳಲ್ಲಿ ಹಾಲು ಸಿಕ್ಕರೆ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಕ್ಷೀರಭಾಗ್ಯ ಯೋಜನೆಯ ಬಗ್ಗೆ   ಕೊಪ್ಪಳ ಸರ್ಕಾರಿ ಶಾಲೆಯ ವಿದ್ಯಾರ್ಥಿ ಐಶ್ವರ್ಯ ಸಮಾರಂಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದಳು.
    “ಅನ್ನಭಾಗ್ಯ” ಯೋಜನೆ ನಮಗೆ ಬಹಳ ಉಪಯೋಗವಾಗಿದೆ.  ಮಗ ಮನೆ ಬಿಟ್ಟು ಹೋಗಿದ್ದು, ಮನೆಯಲ್ಲಿ ದುಡಿಯೋರು ಯಾರೂ ಇಲ್ಲ.  ನಾನು ಮತ್ತು ನಮ್ಮ ತಾಯಿ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಸಹೋದರ ಸೇರಿದಂತೆ ನಮ್ಮ ಕುಟುಂಬವೀಗ ಅನ್ನಭಾಗ್ಯ ಯೋಜನೆಯಿಂದ ಬರುವ ಆಹಾರ ಪದಾರ್ಥಗಳಿಂದ ಜೀವನ ಸಾಗಿಸುತ್ತಿದ್ದೇವೆ.  ತೋಗರಿಬೆಳೆ ಅಂಗಡಿಗಳಲ್ಲಿ 70 ರಿಂದ 80 ರೂ. ಗಳಿಗೆ ಸಿಗುತ್ತಿದ್ದು, ನಮಗೆ ಈ ಯೋಜನೆಯಲ್ಲಿ ಕೇವಲ 38 ರೂ. ಗಳಿಗೆ ಸಿಗುತ್ತಿದೆ ಎಂದು ಕೊಪ್ಪಳ ತಾಲೂಕಿನ ಭಾಗ್ಯನಗರದ ನೀಲಮ್ಮ ಅವರು ಅನ್ನಭಾಗ್ಯ ಯೋಜನೆಯ ಬಗ್ಗೆ ತಮ್ಮ ಮನದಾಳ ಮಾತುಗಳನ್ನು ಆಡಿದರು. 
       ಅನ್ನಭಾಗ್ಯ, ಕ್ಷೀರಭಾಗ್ಯ ಹಾಗೂ ಸಾಲ ಮನ್ನಾ ಯೋಜನೆಯ ಬಗ್ಗೆ ಕಿರು ರೂಪಕ ಪ್ರದರ್ಶನ ಏರ್ಪಡಿಸಲಾಗಿತ್ತು.  ಈ ಸಂದರ್ಭದಲ್ಲಿ ಪ್ರತಿ ಯೋಜನೆಗೊಬ್ಬರು ಫಲಾನುಭವಿಗಳು ಯೋಜನೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗಿತ್ತು.  ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು, ಫಲಾನುಭವಿಗಳು ವ್ಯಕ್ತಪಡಿಸಿದ ಅನಿಸಿಕೆಗಳನ್ನು ಆಲಿಸಿದರು, ಬಳಿಕ ತಮ್ಮ ಭಾಷಣ ಸಂದರ್ಭದಲ್ಲಿ ಫಲಾನುಭವಿಗಳ ಅನಿಸಿಕೆಗಳನ್ನು ಪ್ರಸ್ತಾಪಿಸಿದರು. 
        ಸಮಾರಂಭದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಸಚಿವ ಆರ್.ವಿ. ದೇಶಪಾಂಡೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕರುಗಳಾದ ರಾಘವೇಂದ್ರ ಹಿಟ್ನಾಳ್, ಶಿವರಾಜ ಎಸ್ ತಂಗಡಗಿ, ದೊಡ್ಡನಗೌಡ ಪಾಟೀಲ್, ಇಕ್ಬಾಲ್ ಅನ್ಸಾರಿ, ವಿಧಾನಪರಿಷತ್ ಸದಸ್ಯರಾದ ಬಸವರಾಜ ಪಾಟೀಲ್ ಇಟಗಿ, ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ್, ಸಂಸದ ಕರಡಿ ಸಂಗಣ್ಣ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು : ರಾಜ್ಯದ 2ನೇ ಅತೀ ದೊಡ್ಡ ಯೋಜನೆಯಾಗಿದೆ : ಬಸವರಾಜ ರಾಯರಡ್ಡಿ


ಕೊಪ್ಪಳ ಸೆ. 22 (ಕರ್ನಾಟಕ ವಾರ್ತೆ) ಕೊಪ್ಪಳ ಜಿಲ್ಲೆಯ ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನ ಎಲ್ಲ 331 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಈ ಯೋಜನೆಯು ರಾಜ್ಯದ ಅತಿ ದೊಡ್ಡ ಯೋಜನೆಗಳಲ್ಲಿ ಎರಡನೇ ಬಹುದೊಡ್ಡ ಯೋಜನೆಯಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ ಹಾಗೂ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಹಯೋಗದಲ್ಲಿ ಕರ್ನಾಟಕ ಸರ್ಕಾರ ಕೊಪ್ಪಳ ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ/ ಉದ್ಘಾಟನೆ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನ ಎಲ್ಲ 331 ಗ್ರಾಮಗಳಿಗೆ ರೂ. 763 ಕೋಟಿ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಈ ಯೋಜನೆ ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಅತ್ಯಂತ ಜನಪರ ಬೃಹತ್ ಯೋಜನೆಯಾಗಿದೆ.  ನಾರಾಯಣಪೂರ ಜಲಾಶಯದ ಹಿನ್ನೀರನ್ನು ಬಳಸಿಕೊಂಡು, ಎರಡೂ ತಾಲೂಕುಗಳ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ಪ್ರತಿ ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ 85 ಲೀಟರ್ ಶುದ್ಧ ಕುಡಿಯುವ ನೀರನ್ನು ಕಲ್ಪಿಸಲಾಗುವುದು.  ಈ ಯೋಜನೆ ಸುಮಾರು 6 ಲಕ್ಷ 50 ಸಾವಿರ ಜನಸಂಖ್ಯೆಗೆ ಅನುಕೂಲವಾಗಲಿದೆ.  ಇದನ್ನು ಭವಿಷ್ಯದ 2048 ನೇ ಇಸವಿಯ ವೇಳೆಗೆ ಆಗಲಿರುವ ಜನಸಂಖ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಯೋಜನೆ ರೂಪಿಸಲಾಗಿದೆ.  ಇನ್ನು ತಳಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ಯಾಗಿದ್ದು, ಇದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದೆ.  ಗಂಗಾವತಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡ ಉದ್ಘಾಟನೆಯಾಗಿದ್ದು,   ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ.  ಕೊಪ್ಪಳ ಜಿಲ್ಲೆಯಲ್ಲಿ ಪ್ರಸೂತಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಕೊರತೆ ಇದ್ದು, ಈ ಕಾರಣಕ್ಕಾಗಿ ಇಂದು ಕುಕನೂರು ಪಟ್ಟಣದಲ್ಲಿ 60 ಹಾಸಿಗೆಗಳ ಮಹಿಳಾ ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನಿರ್ಮಾಣ ಮಾಡಲು 09 ಕೋಟಿ ರೂ. ಅನುದಾನ ಒದಗಿಸಲಾಗುತ್ತಿದೆ.   ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಕೊಪ್ಪಳ ಜಿಲ್ಲೆಯ 45-50 ಸಾವಿರ ಕುಟುಂಬಗಳು ಒಳಗೊಂಡಿದ್ದು, ಒಟ್ಟು 9 ಲಕ್ಷ ಜನರಿಗೆ ಈ ಯೋಜನೆ ಸಹಕಾರಿಯಾಗಿದೆ.  ರೈತರ ಸಾಲ ಮನ್ನಾ ಈ ಯೋಜನೆಯಲ್ಲಿ 8165 ಕೋಟಿ ರೈತರ ಸಾಲ ಮನ್ನಾ ಮಾಡಲಾಗಿದ್ದು, ಜಿಲ್ಲೆಯ 33 ಸಾವಿರ ರೈತರಿಗೆ ಅನುಕೂಲ ವಾಗಿದೆ.  ಕೃಷಿಗಾಗಿ ಸರ್ಕಾರದಿಂದ ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕಿನ ಗ್ರಾಮಗಳಲ್ಲಿ ಒಟ್ಟು 7 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದ್ದು, ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಕೊಟ್ಟ ಮಾತಿನಂತೆ ನಡೆಯುತ್ತಿದ್ದೆವೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.   
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಮಂತ್ರಿಗಳಾದ ಆರ್.ವಿ. ದೇಶಪಾಂಡೆ ಅವರು ಮಾತನಾಡಿ, ಉದ್ಯೋಗ ಸೃಷ್ಟಿಯಲ್ಲಿ  ರಾಜ್ಯ ಸರ್ಕಾರವು ಸುಮಾರು 5 ಲಕ್ಷ ಯುವಕ/ ಯುವತಿಯರಿಗೆ ಉದ್ಯೋಗ ತರಬೇತಿಯನ್ನು ನೀಡುತ್ತಿದೆ.  ಮುನಿರಾಬಾದ್-ಮಹೆಬೂಬನಗರ  ಹಾಗೂ ಗದಗ- ವಾಡಿ ರೈಲ್ವೆ ಮಾರ್ಗಕ್ಕೆ ರಾಜ್ಯ ಸರ್ಕಾರದಿಂದ ಜಮೀನು ಮತ್ತು ಶೇ.50 ರಷ್ಟು ಅನುದಾನವನ್ನು ನೀಡಲಾಗಿದೆ.  ರೈತರ ಸಾಲ ಮನ್ನಾ ಯೋಜನೆ, ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರದಾರೆ, ಋಣಮುಕ್ತ, ಶ್ಯೂಭಾಗ್ಯ, ಇತ್ಯಾದಿ ಜನಪರ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದ್ದು, ಅವುಗಳು ಜನಪರ ಯೋಜನೆಗಳಾಗಿವೆ ಎನ್ನುವುದಕ್ಕೆ ಈ ಸಮಾರಂಭ ಸಾಕ್ಷಿಯಾಗಿದೆ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಮಂತ್ರಿಗಳಾದ ಹೆಚ್.ಕೆ ಪಾಟೀಲ್ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಸರ್ಕಾರದ ಜನಪರ ಯೋಜನೆಗಳ ಫಲನಾನುಭವಿಗಳ ಸಮಾವೇಶವನ್ನು ಏರ್ಪಡಿಸಲಾಗಿದ್ದು, ಇದೊಂದು ಐತಿಹಾಸಿಕ ಸಮಾವೇಶವಾಗಿದೆ.  ಕಿರು-ನಾಟಕ ಪ್ರದರ್ಶನಗಳ ಮೂಲಕ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಗಿದ್ದು ಉತ್ತಮ ಸಂಗತಿಯಾಗಿದೆ.  ಕೊಪ್ಪಳ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಕೊಪ್ಪಳ ಜಿಲ್ಲಾ ಪಂಚಾಯತಿ ವತಿಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು “ಮಿಷನ್-200” ಕಾರ್ಯಕ್ರಮದಡಿಯಲ್ಲಿ ಸುಮಾರು 20 ಸಾವಿರ ಶೌಚಾಲಯಗಳ ನಿರ್ಮಾಣದ ಈ ಕಾರ್ಯವು ರಾಜ್ಯ ಹಾಗೂ ರಾಷ್ಟ್ರಾದ್ಯಂತ ಗಮನ ಸೆಳೆದಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ವಹಿಸಿ ಸ್ವಾಗತಿಸಿದರು.   ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್, ಕಾನೂನು ಸಚಿವ ಟಿ.ಬಿ ಜಯಚಂದ್ರ ಜೈನ್, ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ್, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ್ ಎಸ್. ತಂಗಡಗಿ, ಇಕ್ಬಾಲ್ ಅನ್ಸಾರಿ ಹಾಗೂ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಗಿ, ಜಿ.ಪಂ  ಅಧ್ಯಕ್ಷ ರಾಜಶೇಖರ ಹಿಟ್ನಾಳ್, ಉಪಾಧ್ಯಕ್ಷೆ ಲಕ್ಷಮ್ಮ ಎಸ್. ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ ಅಧ್ಯಕ್ಷ ಬಾಲಚಂದ್ರನ್ ಸೇರಿಂದತೆ ಅನೆಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Thursday, 21 September 2017

ಮುಖ್ಯಮಂತ್ರಿಗಳ ಸ್ವಾಗತಕ್ಕೆ ಕೊಪ್ಪಳ ಸಜ್ಜು : ಸಿಂಗಾರಗೊಂಡ ಬೃಹತ್ ವೇದಿಕೆ

ಕೊಪ್ಪಳ ಸೆ. 21 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯಲ್ಲಿನ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಅಲ್ಲದೆ ಜನಪರ ಯೋಜನೆಗಳ ಫಲಾನುಭವಿಗಳ ಸಮಾವೇಶ ಸಮಾರಂಭದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿಗಳು ಸೆ. 22 ರಂದು ಕೊಪ್ಪಳಕ್ಕೆ ಆಗಮಿಸಲಿದ್ದು, ಸಮಾರಂಭಕ್ಕಾಗಿ ಕೊಪ್ಪಳ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬೃಹತ್ ಮೈದಾನದಲ್ಲಿ ವೇದಿಕೆ ಸಜ್ಜುಗೊಂಡಿದೆ.

     ಮುಖ್ಯಮಂತ್ರಿಗಳ ಸ್ವಾಗತಕ್ಕೆ ಕೊಪ್ಪಳ ಜಿಲ್ಲೆ ಸಜ್ಜುಗೊಂಡಿದ್ದು, ಕೊಪ್ಪಳ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬೃಹತ್ ಮೈದಾನದಲ್ಲಿ ವೇದಿಕೆ ನಿರ್ಮಾಣಗೊಂಡಿದೆ.  ಸಮಾರಂಭಕ್ಕೆ ಸುಮಾರು 01 ಲಕ್ಷ ಫಲಾನುಭವಿಗಳು ಹಾಗೂ ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇದ್ದು, ಸಮಾರಂಭಕ್ಕಾಗಿ 700 ಅಡಿ ಉದ್ದ ಹಾಗೂ 400 ಅಡಿ ಅಗಲದ ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ.  ವೇದಿಕೆ ನಿರ್ಮಾಣದ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ವೇದಿಕೆ ನಿರ್ಮಾಣದ ಅಂತಿಮ ಸಿದ್ಧತೆಯ ಪರಿಶೀಲನೆಯನ್ನು ಗುರುವಾರದಂದು ಬೆಳಿಗ್ಗೆ ನಡೆಸಿದರು.  ವೇದಿಕೆಯ ವ್ಯವಸ್ಥೆ ಕುರಿತು ತೃಪ್ತಿ ವ್ಯಕ್ತಪಡಿಸಿದ ಮಂತ್ರಿಗಳು, ಸಾರ್ವಜನಿಕರ ಆಸನ ವ್ಯವಸ್ಥೇ, ಗಣ್ಯರ ಗ್ಯಾಲರಿ, ಮಾಧ್ಯಮ ಗ್ಯಾಲರಿ ಹಾಗೂ ವೇದಿಕೆಯ ನಿರ್ವಹಣೆ ಅಲ್ಲದೆ ಸಾರ್ವಜನಿಕರ ಊಟದ ವ್ಯವಸ್ಥೆಗಾಗಿ ಕೈಗೊಂಡಿರುವ ಕೌಂಟರ್‍ಗಳು ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.  

     ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ವೇದಿಕೆ ನಿರ್ಮಾಣ ಪರಿಶೀಲನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸೆ. 22 ರಂದು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿಗಳು ಕೊಪ್ಪಳಕ್ಕೆ ಆಗಮಿಸಲಿದ್ದಾರೆ.  ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.  ಸಮಾರಂಭದಲ್ಲಿ ಸುಮಾರು 01 ಲಕ್ಷ ಜನ ವಿವಿಧ ಯೋಜನೆಗಳ ಫಲಾನುಭವಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವರು.  ಕಾರ್ಯಕ್ರಮದ ಯಶಸ್ವಿಗೆ ಅಗತ್ಯ ಕ್ರಮಗಳನ್ನು ಈಗಾಗಲೆ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಪಾಲ್ಗೊಂಡು, ಯಶಸ್ವಿಗೊಳಿಸುವಂತೆ ಮನವಿ ಮಾಡಿಕೊಂಡರು.

     ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ, ಸಮಾರಂಭಕ್ಕೆ ಆಗಮಿಸುವ ಸಾರ್ವಜನಿಕರಿಗೆ ಉತ್ತಮ ಊಟದ ವ್ಯವಸ್ಥೆ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಸಾವಕಾಶವಾಗಿ ಊಟದ ಕೌಂಟರ್‍ಗೆ ತೆರಳಿ, ಭೋಜನವನ್ನು ಸವಿಯಬೇಕು.  ಕುಡಿಯುವ ನೀರಿನ ವ್ಯವಸ್ಥೆಯನ್ನು ಊಟ ಪೂರೈಸುವ ಗುತ್ತಿಗೆದಾರರಿಗೇ ವಹಿಸಲಾಗಿದ್ದು, ಇದರ ಜೊತೆಗೆ ನಗರಸಭೆಯಿಂದ ನೀರಿನ ಟ್ಯಾಂಕರ್‍ಗಳು, ಬೋರ್‍ವೆಲ್ ನೀರು ಹಾಗೂ ಹೈ-ಕ ಅಭಿವೃದ್ಧಿ ಮಂಡಳಿ ಒದಗಿಸಿರುವ ಸುಮಾರು 13 ಟ್ಯಾಂಕರ್‍ಗಳನ್ನೂ ಸಹ ಬಳಸಲಾಗುತ್ತಿದೆ.  ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಪೊಲೀಸ್ ಬಂದೋಬಸ್ತ್ : ಸಮಾರಂಭದಲ್ಲಿ ಸುಮಾರು ಒಂದು ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಸ್ಥಳದಲ್ಲಿ   ಫಲಾನುಭವಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ, ಜನರಿಗೆ ಯಾವುದೇ ಗೊಂದಲ ಉಂಟಾಗದಂತೆ ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುವುದು.  ವಾಹನ ಸಂಚಾರ ದಟ್ಟಣೆಯಾಗಿ ಟ್ರಾಫಿಕ್‍ಜಾಮ್ ಆಗದಂತೆ ಸೂಕ್ತ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು.  ಮುಖ್ಯಮಂತ್ರಿಗಳ ಸಮಾರಂಭವಾಗಿರುವುದರಿಂದ, ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುವುದು.  ಇದಕ್ಕಾಗಿ ಸುಮಾರು 1500 ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು, ಗೃಹರಕ್ಷಕ ದಳ, ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ ತಿಳಿಸಿದರು.

ಸಮಾರಂಭ ವೇದಿಕೆ ವ್ಯವಸ್ಥೆ : ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದ್ದು, ವೇದಿಕೆಯೇ 100 ಅಡಿ ಅಗಲ ಹಾಗೂ 60 ಅಡಿ ಉದ್ದ ಹೊಂದಿದ್ದು, 24 ಅಡಿ ಎತ್ತರ ಹೊಂದಿದೆ.  ವೇದಿಕೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಗಣ್ಯರು ಆಸೀನರಾಗುವ ವೇದಿಕೆ 40 ಅಡಿ ಉದ್ದ, ಹಾಗೂ ರೂಪಕಗಳ ಪ್ರದರ್ಶನಕ್ಕೆ 20 ಅಡಿ ಉದ್ದದ ವೇದಿಕೆಯನ್ನು ಮೇಲೆ ಹಾಗೂ ಕೆಳಗಿನ ಹಂತದಲ್ಲಿ ನಿರ್ಮಿಸಲಾಗಿದೆ.  ವೇದಿಕೆಗೆ 12 ಅಡಿ ಎತ್ತರ ಹಾಗೂ 80 ಅಡಿ ಅಗಲದ ಎಲ್‍ಇಡಿ ವಾಲ್ ಅನ್ನು ಅಳವಡಿಸಲಾಗುತ್ತಿದ್ದು, ಸರ್ಕಾರದ ಯೋಜನೆಗಳನ್ನು ಬಿಂಬಿಸುವ ದೃಶ್ಯಗಳನ್ನು ಇದರಲ್ಲಿ ಪ್ರದರ್ಶಿಸಲಾಗುವುದು.   700 ಅಡಿ ಉದ್ದ ಹಾಗೂ 400 ಅಡಿ ಅಗಲದ ಬೃಹತ್ ಪೆಂಡಾಲ್ ಅನ್ನು ನಿರ್ಮಿಸಲಾಗಿದ್ದು,  ಇದರಲ್ಲಿ ಸುಮಾರು 70 ಸಾವಿರದಷ್ಟು ಆಸನಗಳ ವ್ಯವಸ್ಥೆ ಕೈಗೊಳ್ಳಲಾಗಿದೆ.  ಅದರ ಜೊತೆಗೆ ಸುಮರು 2500 ದಷ್ಟು ಗಣ್ಯರಿಗೆ ಆಸನ ವ್ಯವಸ್ಥೆ, ಮಾಧ್ಯಮದವರಿಗಾಗಿ ಪ್ರತ್ಯೇಕ ಗ್ಯಾಲರಿ ನಿರ್ಮಿಸಲಾಗಿದೆ.  ಸಮಾರಂಭಕ್ಕೆ ವಿದ್ಯುತ್ ವ್ಯವಸ್ಥೆಗಾಗಿ ಒಟ್ಟು 05 ಜನರೇಟರ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಇದರಲ್ಲಿ 125 ಕೆ.ವಿ. ಸಾಮಥ್ರ್ಯದ 03 ಹಾಗೂ 62 ಕೆ.ವಿ. ಸಾಮಥ್ರ್ಯದ 02 ಬೃಹತ್ ಜನರೇಟರ್‍ಗಳನ್ನು ಬಳಸಲಾಗುತ್ತಿದೆ.  ವೇದಿಕೆ ನಿರ್ಮಾಣಕ್ಕಾಗಿ ಬೆಂಗಳೂರು, ಹುಬ್ಬಳ್ಳಿ ಅಲ್ಲದೆ ಸ್ಥಳೀಯರು ಕೂಡ ಕೈಜೋಡಿಸಿದ್ದಾರೆ.  

ಕೊಪ್ಪಳ ನಗರ ಸಜ್ಜು : ಸೆ. 22 ರಂದು ಕೊಪ್ಪಳದಲ್ಲಿ ಜರುಗುವ ಸಮಾರಂಭಕ್ಕಾಗಿ ಇಡೀ ನಗರ ಸಿಂಗಾರಗೊಂಡಿದ್ದು, ಮುಖ್ಯಮಂತ್ರಿಗಳು ಸೇರಿದಂತೆ ಹಲವು ಸಚಿವರು, ಶಾಸಕರುಗಳು, ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.  ಕೊಪ್ಪಳ ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಹಾಳಾಗಿದ್ದ ರಸ್ತೆಗಳ ದುರಸ್ತಿ ಕಾರ್ಯವೂ ಕೂಡ ಭರದಿಂದ ಸಾಗಿದೆ.  ಅಲ್ಲದೆ ಸ್ವಚ್ಛತಾ ಕಾರ್ಯಕ್ಕೆ ನಗರಸಭೆಯ ಸಿಬ್ಬಂದಿಗಳು ಶ್ರಮ ವಹಿಸುತ್ತಿದ್ದಾರೆ.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಡಿವೈಎಸ್‍ಪಿಗಳಾದ ಶ್ರೀಕಾಂತ್ ಕಟ್ಟಿಮನಿ, ಸಂದಿಗವಾಡ ಸೇರಿದಂತೆ ಹಲವು ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಸೆ. 22 ರಂದು ಕೊಪ್ಪಳಕ್ಕೆ ಮುಖ್ಯಮಂತ್ರಿಗಳ ಆಗಮನ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ, ಉದ್ಘಾಟನೆ


ಕೊಪ್ಪಳ ಸೆ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಇವರ ಸಹಯೋಗದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶ ಸೆ. 22 ರಂದು ಬೆಳಿಗ್ಗೆ ಕೊಪ್ಪಳ ನಗರದ ಹೊರವಲಯದಲ್ಲಿ ಹೊಸಪೇಟೆ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಬದಿಯ ಬೃಹತ್ ಮೈದಾನದಲ್ಲಿ ಆಯೋಜಿಸಲಾಗಿದೆ.
     ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಮಾರಂಭದ ಉದ್ಘಾಟನೆ ನೆರವೇರಿಸುವರು.  ಅಲ್ಲದೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು.  ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಸಚಿವ ಆರ್.ವಿ. ದೇಶಪಾಂಡೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಹೆಚ್.ಕೆ. ಪಾಟೀಲ್, ಲೋಕೋಪಯೋಗಿ ಸಚಿವ ಹೆಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ, ಇಂಧನ ಸಚಿವ ಡಿ.ಕೆ. ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವೆ ಉಮಾಶ್ರೀ, ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಸಂತೋಷ್ ಎಸ್ ಲಾಡ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಔಕಾಫ್ ಸಚಿವ ತನ್ವೀರ್ ಸೇಠ್, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಗೋವಿಂದರಾಜು ಸೇರಿದಂತೆ ಹಲವು ಸಚಿವರುಗಳು, ಗಣ್ಯಾತಿ ಗಣ್ಯರು, ಉನ್ನತ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಅಭಿವೃದ್ಧಿಯ ಪರ್ವ : ಸೆ. 22 ರಂದು ಮುಖ್ಯಮಂತ್ರಿಗಳಿಂದ ಜಿಲ್ಲೆಯ ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಲಿದೆ.  ಕೊಪ್ಪಳ ಜಿಲ್ಲೆಯ ಕುಷ್ಟಗಿ ಮತ್ತು ಯಲಬುಗಾ ತಾಲೂಕಿನ ಗ್ರಾಮಗಳಿಗೆ 763 ಕೋಟಿ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಶಂಕುಸ್ಥಾಪನೆ.  ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕೊಪ್ಪಳ ತಾಲೂಕಿನ ಆಯ್ದ ಕೆರೆಗಳಿಗೆ 290 ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾ ನದಿಯ ನೀರನ್ನು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ.  ಕೊಪ್ಪಳದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಕಟ್ಟಡದ ಉದ್ಘಾಟನೆ.  ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ 103 ಕೋಟಿ ರೂ. ವೆಚ್ಚದಲ್ಲಿ ಬನ್ನಿಕೊಪ್ಪ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ.  ಯಲಬುರ್ಗಾ ತಾಲೂಕು ತಳಕಲ್ ಬಳಿ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡದ ಶಂಕುಸ್ಥಾಪನೆ.  32 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಆನೆಗೊಂದಿ ಸೇತುವೆಯ ಉದ್ಘಾಟನೆ.  ಗಂಗಾವತಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡದ ಉದ್ಘಾಟನೆ.  ಗಂಗಾವತಿ ತಾಲೂಕು ಚಿಕ್ಕಬೆಣಕಲ್‍ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹಾಸ್ಟೆಲ್ ಕಟ್ಟಡದ ಉದ್ಘಾಟನೆ.  ಗಂಗಾವತಿ ಮತಕ್ಷೇತ್ರ ಕೊಪ್ಪಳ ತಾಲೂಕಿನ ಹಿರೇಹಳ್ಳ ಯೋಜನೆಯ ಮುದ್ಲಾಪುರ ಗ್ರಾಮ ಬಳಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೇತುವೆಯ ಉದ್ಘಾಟನೆ.  ಯಲಬುರ್ಗಾ ತಾಲೂಕು ಕುಕನೂರು ಪಟ್ಟಣದಲ್ಲಿ 09 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ 60 ಹಾಸಿಗೆಗಳ ಮಹಿಳಾ ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆಯ ಶಂಕುಸ್ಥಾಪನೆ.  ಹಾಗೂ ಯಲಬುರ್ಗಾ ತಾಲೂಕು ಕುಕನೂರಿನಲ್ಲಿ 05 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಪ್ರವಾಸಿ ಮಂದಿರದ ಉದ್ಘಾಟನೆಯನ್ನು ಸೆ. 22 ರಂದು ಮುಖ್ಯಮಂತ್ರಿಗಳು ನೆರವೇರಿಸುವರು.

ಸೆ. 22 ರಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ಸಮಾರಂಭಕ್ಕೆ ಆಗಮಿಸುವ ಬಸ್ ಸಂಚಾರ ಮಾರ್ಗ ಹಾಗೂ ಪಾರ್ಕಿಂಗ್ ವ್ಯವಸ್ಥೆ


ಕೊಪ್ಪಳ ಸೆ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿನ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಸೆ. 22 ರಂದು ಕೊಪ್ಪಳದಲ್ಲಿ ನೆರವೇರಿಸಲಿದ್ದು, ಈ ಸಮಾರಂಭಕ್ಕೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸರ್ಕಾರಿ ಯೋಜನೆಗಳ ಫಲಾನುಭವಿಗಳು ಬಸ್ ಹಾಗೂ ವಿವಿಧ ವಾಹನಗಳಲ್ಲಿ ಆಗಮಿಸಲಿದ್ದು, ವಾಹನಗಳ ಸಂಚಾರ ಹಾಗೂ ಪಾರ್ಕಿಂಗ್‍ಗಾಗಿ ಕೊಪ್ಪಳದಲ್ಲಿ ಅಗತ್ಯ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. 
         ಈಲ್ಲೆಯ ವಿವಿಧ ತಾಲೂಕುಗಳಿಂದ ಸೆ. 22 ರಂದು ಕೊಪ್ಪಳದಲ್ಲಿ ಜರುಗುವ ಸಮಾರಂಭಕ್ಕೆ ಆಗಮಿಸುವ ಬಸ್‍ಗಳ ಸಂಚಾರಮಾರ್ಗ ಹಾಗೂ ಈ ವಾಹನಗಳಿಗೆ ಪಾರ್ಕಿಂಗ್‍ಗಾಗಿ ಕೈಗೊಂಡಿರುವ ಸ್ಥಳದ ವಿವರ ಈ ಕೆಳಗಿನಂತಿದೆ.
ಕುಷ್ಟಗಿ : ಕುಷ್ಟಗಿ ತಾಲೂಕಿನ ಹನಮನಾಳ, ಹನಮಸಾಗರ, ಚಳಗೇರಿ, ಕೊರಡಕೇರಾ, ಹಿರೇಮನ್ನಾಪುರ, ಯರಗೇರಾ ಮತ್ತು ಮೆಣದಾಳ ಜಿ.ಪಂ. ಕ್ಷೇತ್ರಗಳಿಂದ ಬರುವ ಬಸ್‍ಗಳು ಕುಷ್ಟಗಿ, ಎನ್.ಹೆಚ್-50 ಮಾರ್ಗವಾಗಿ ಬೂದಗುಂಪಾ ಕ್ರಾಸ್ ಗಿಣಿಗೇರಿ ಬೈಪಾಸ್ ರಸ್ತೆ ಮುಖಾಂತರ ಸಮಾರಂಭ ಸ್ಥಳಕ್ಕೆ ಬರಬೇಕು  ಈ ವಾಹನಗಳಿಗೆ ಕೊಪ್ಪಳ ಹೊಸಪೇಟೆ ರಸ್ತೆ ಹಾಲವರ್ತಿ ಕ್ರಾಸ್ ಹತ್ತಿರ ಓಲ್ಡ್ ಡೆಮೊಲೆಶನ್ ಬಿಲ್ಡಿಂಗ್ ರೈಲ್ವೇ ಟ್ರ್ಯಾಕ್ ಸೈಡ್, ಹೊಸಪೇಟ್ ರವರ ಹೊಲದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.    
ಕೊಪ್ಪಳ : ಕೊಪ್ಪಳ ತಾಲೂಕಿನ ಅಳವಂಡಿ, ಹಿರೇಸಿಂದೋಗಿ ಮತ್ತು ಗೊಂಡಬಾಳ ಜಿ.ಪಂ. ಕ್ಷೇತ್ರಗಳಿಂದ ಬರುವ ಬಸ್‍ಗಳು ಸಿಂದೋಗಿ-ಕೊಪ್ಪಳ ರಸ್ತೆ ಮುಖಾಂತರ ಬೈಪಾಸ್ ಹೊಸ ರಸ್ತೆ ಮೂಲಕ ಆಗಮಿಸಬೇಕು.  ಈ ವಾಹನಗಳಿಗೆ ಹೊಸ ಫೋರ್ ವೇ, ಬೈ ಪಾಸ್ ರಸ್ತೆಯ ಬಲಬದಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.  ಲೇಬಗೇರಿ ಮತ್ತು ಇರಕಲ್ಲಗಡ ಜಿ.ಪಂ. ಕ್ಷೇತ್ರಗಳಿಂದ ಬರುವ ಬಸ್‍ಗಳು ಕೊಪ್ಪಳ-ಕುಷ್ಟಗಿ ರಸ್ತೆ, ಹಟ್ಟಿ ಕ್ರಾಸ್, ಕಾಮನೂರ ಕ್ರಾಸ್, ಭೀಮನೂರ ಗಿಣಿಗೇರಿ ಬೈಪಾಸ ರಸ್ತೆ ಮುಖಾಂತರ.  ಬಂಡಿಹರ್ಲಾಪುರ ಜಿ.ಪಂ. ಕ್ಷೇತ್ರದಿಂದ ಬರುವ ಬಸ್‍ಗಳು ಹಿಟ್ನಾಳ್ ಕ್ರಾಸ್, ಎನ್.ಹೆಚ್-63 ಗಿಣಿಗೇರಿ ಬೈಪಾಸ ರಸ್ತೆ ಮುಖಾಂತರ.  ಹಿಟ್ನಾಳ ಕ್ಷೇತ್ರದಿಂದ ಬರುವ ಬಸ್‍ಗಳು ಸಿಮ್ಲಾ ಟೋಲ್ ಗೇಟ್ ಎನ್.ಹೆಚ್-63 ಗಿಣಗೇರಿ ಬೈಪಾಸ್ ರಸ್ತೆ ಮುಖಾಂತರ.  ಗಿಣಿಗೇರಿ ಕ್ಷೇತ್ರದಿಂದ ಬರುವ ಬಸ್‍ಗಳು ಎನ್.ಹೆಚ್-63 ಗಿಣಿಗೇರಿ ಬೈಪಾಸ್ ರಸ್ತೆ ಮುಖಾಂತರ ಸಮಾರಂಭ ಸ್ಥಳಕ್ಕೆ ಆಗಮಿಸಬೇಕು.  ಈ ವಾಹನಗಳಿಗೆ ಕೊಪ್ಪಳ ಹೊಸಪೇಟೆ ರಸ್ತೆಯ ಹಾಲವರ್ತಿ ಕ್ರಾಸ್ ಹತ್ತಿರ ಇರುವ ಗವಿ ಕನಸ್ಟ್ರಕ್ಷನ್ ಕಂಪನಿಯ ಜಾಗೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.
ಗಂಗಾವತಿ : ಗಂಗಾವತಿ ತಾಲೂಕಿನ ಆನೆಗುಂದಿ, ಮರಳಿ, ಸಿದ್ದಾಪುರ, ಹೆರೂರ, ಹುಲಿಹೈದರ, ನವಲಿ, ಯರಡೋಣ ಮತ್ತು ಚಿಕ್ಕಮಾದಿನಾಳ ವೆಂಕಟಗಿರಿ ಜಿ.ಪಂ. ಕ್ಷೇತ್ರಗಳಿಂದ ಬರುವ ಬಸ್‍ಗಳು ಕೊಪ್ಪಳ-ಗಂಗಾವತಿ ಎಸ್.ಹೆಚ್-23 ಮಾರ್ಗವಾಗಿ ಬೂದಗುಂಪಾ ಕ್ರಾಸ್ ಎನ್.ಹೆಚ್-63 ಗಿಣಿಗೇರಿ ಬೈಪಾಸ್ ರಸ್ತೆ ಮುಖಾಂತರ ಸಮಾರಂಭ ಸ್ಥಳಕ್ಕೆ ಆಗಮಿಸಬೇಕು.  ಈ ವಾಹನಗಳಿಗೆ ಎನ್.ಹೆಚ್-63 ರಸ್ತೆಯ ಎರಡೂ ಬದಿಯಲ್ಲಿ, ಹಳ್ಳಕ್ಕೆ ಹೊಂದಿಕೊಂಡು ಬಲಬದಿಗೆ ಬಸ್ಸುಗಳು ಮತ್ತು ಎಡಬದಿಗೆ ಕಾರು, ಕ್ರಷರ್, ಇತರೆ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.   
ಯಲಬುರ್ಗಾ : ಯಲಬುರ್ಗಾ ತಾಲೂಕಿನ ಹಿರೆವಂಕಲಕುಂಟ ಜಿ.ಪಂ. ಕ್ಷೇತ್ರದಿಂದ ಬರುವ ಬಸ್‍ಗಳು ಎನ್.ಹೆಚ್-50, ಬೂದಗುಂಪಾ ಕ್ರಾಸ್, ಗಿಣಿಗೇರಿ ಬೈಪಾಸ್ ರಸ್ತೆ ಮುಖಾಂತರ.  ಚಿಕ್ಕಮ್ಯಾಗೇರಿ ಮತ್ತು ಮಂಗಳೂರ ಜಿ.ಪಂ. ಕ್ಷೇತ್ರದಿಂದ ಬರುವ ಬಸ್‍ಗಳು ಕೊಪ್ಪಳ-ಕುಷ್ಟಗಿ ರಸ್ತೆ, ಹಟ್ಟಿ ಕ್ರಾಸ್, ಕಾಮನೂರ ಕ್ರಾಸ್, ಭೀಮನೂರ ಗಿಣಿಗೇರಿ ಬೈಪಾಸ ರಸ್ತೆ ಮುಖಾಂತರ ಸಮಾರಂಭ ಸ್ಥಳಕ್ಕೆ ಆಗಮಿಸಬೇಕು. ಈ ವಾಹನಗಳಿಗೆ ಕೊಪ್ಪಳ-ಹೊಸಪೇಟೆ ರಸ್ತೆಯ ಹಾಲವರ್ತಿ ಕ್ರಾಸ್ ಹತ್ತಿರದ ಕೆ.ಕೆ ಸ್ವಾಮಿಯವರ ಫಾರ್ಮ ಹೌಸ್ ಮುಂದೆ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.  ತಳಕಲ್, ಇಟಗಿ, ಮುಧೋಳ, ಕುಕನೂರ ಕ್ಷೇತ್ರಗಳಿಂದ ಮತ್ತು ಯಲಬುರ್ಗಾದಿಂದ ಬರುವ ಬಸ್‍ಗಳು ಯಲಬುರ್ಗಾ-ಕೊಪ್ಪಳ ರಸ್ತೆಯ ಬಾನಾಪುರ ಕ್ರಾಸ್ ಮುಖಾಂತರ ಎನ್.ಹೆಚ್-63 ಹಲಗೇರಿ, ಗುಳಗಣ್ಣವರ ಕಾಲೇಜ, ಹೊಸ ಬೈಪಾಸ 4ವೇ ರಸ್ತೆ ಮಾರ್ಗವಾಗಿ ಸಮಾರಂಭ ಸ್ಥಳಕ್ಕೆ ಆಗಮಿಸಬೇಕು.  ಈ ವಾಹನಗಳಿಗೆ  ಹೊಸ 4ವೇ ಹತ್ತಿರದ ಹೊಸಪೇಟಿಯವರ ಹೊಲ, ಅಗ್ನಿಶಾಮಕ ದಳದ ಕಚೇರಿಗೆ ಹೊಂದಿಕೊಂಡ ಹಿಂದಿನ ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ. 

ನಿರುದ್ಯೋಗಿಗಳಿಗೆ ವಿವಿಧ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ ಸೆ. 21 (ಕರ್ನಾಟಕ ವಾರ್ತೆ): ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯ ವತಿಯಿಂದ ನಿರುದ್ಯೋಗಿ ಯುವಕ, ಯುವತಿಯರಿಗೆ ಫಾಸ್ಟ್ ಫುಡ್ ಉದ್ಯಮ, ಶಾಪ್ ಕೀಪರ್, ಕಂಪ್ಯೂಟರ್ ಡಿ.ಟಿ.ಪಿ., ಕೋಳಿ ಸಾಕಾಣಿಕೆ ಹಾಗೂ ಗೃಹೋಯೋಗಿ ವಿದ್ಯತ್ ಉಪಕರಣಗಳ ದುರಸ್ಥಿ ತರಬೇತಿಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯು ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಮಾಡಲು ಅನುಕೂಲವಾಗಲಿದ್ದು, ತರಬೇತಿ ಪಡೆಯಲಿಚ್ಚಿಸುವವರು 18 ರಿಂದ 45 ವರ್ಷ ವಯೋಮಿತಿಯಲ್ಲಿಬೇಕು.  ತರಬೇತಿ ಕಾರ್ಯಕ್ರಮಗಳು ಊಟ ವಸತಿಯೊಂದಿಗೆ ಉಚಿತವಾಗಿದ್ದು, ಆಸಕ್ತರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ, ಉದ್ಯೋಗ ವಿದ್ಯಾ ನಗರ, ದಾಂಡೆಲಿ ರಸ್ತೆ, ಹಳಿಯಾಳ (ಉತ್ತರ ಕನ್ನಡ ಜಿಲ್ಲೆ), ವಿಳಾಸಕ್ಕೆ ಕೂಡಲೇ ಸಂಪರ್ಕಿಸಲು ಕೋರಲಾಗಿದೆ.  ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ 08284-220807, 9483485489, 9482188780 ಕ್ಕೆ ಸಂಪರ್ಕಿಸಲು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಡಗು : ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ


ಕೊಪ್ಪಳ ಸೆ. 20 (ಕರ್ನಾಟಕ ವಾರ್ತೆ): ರಾಷ್ಟ್ರೀಯ ರಕ್ಷಣಾ ಅಕಾಡೆಮಿ/ ಭಾರತೀಯ ನೌಕಾ ಅಕಾಡೆಮಿಗೆ ಸೇರಿಸಲು ಶೈಕ್ಷಣಿಕವಾಗಿ, ಮನಸಿಕವಾಗಿ ಮತ್ತು ದೈಹಿಕ ಸದೃಢವಾಗಿ ತರಬೇತಿಗೊಳಿಸುವ ಉದ್ದೇಶದಿಂದ ಕೊಡುಗು ಸೈನಿಕ ಶಾಲೆಯ 6ನೇ ಮತ್ತು 9ನೇ ತರಗತಿಯ ಪ್ರವೇಶಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
    ಪಠ್ಯಾಕ್ರಮ 10+2 ಸಿ.ಬಿ.ಎಸ್.ಸಿ (ವಿಜ್ಞಾನ ವಿಭಾಗ) ವಾಗಿದ್ದು, ದಾಖಲಾತಿ ಅಖಿಲ ಭಾರತ ಮಟ್ಟದ ಸೈನಿಕ ಶಾಲಾ ಪ್ರವೇಶ ಪರೀಕ್ಷೆ, ಮೌಖಿಕ ಸಂದರ್ಶನ ಮತ್ತು ವೈದ್ಯಕೀಯ ತಪಾಸಣೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗುವುದು.  6ನೇ ಹಾಗೂ 9ನೇ ತರಗತಿಯ ಪ್ರಶ್ನೆಪತ್ರಿಕೆಗಳು ಕ್ರಮವಾಗಿ 5ನೇ ಹಾಗೂ 8ನೇ ತರಗತಿಯ ಸಿ.ಬಿ.ಎಸ್.ಸಿ ಪಠ್ಯಾಕ್ರಮದ ಆಧಾರದಲ್ಲಿರುತ್ತದೆ.  ಸೈನಿಕ ಶಾಲೆಯಲ್ಲಿ 6ನೇ ತರಗತಿಗೆ 90-100, 9ನೇ ತರಗತಿಗರ 15-20 ಸೀಟುಗಳು ಖಾಲಿ ಇದ್ದು, ಎಸ್.ಸಿ - 15%, ಎಸ್.ಟಿ - 7.5% ಮತ್ತು ರಕ್ಷಣಾ ಇಲಾಖೆ – 25% ಮೀಸಲಾತಿಯಲ್ಲಿ ಪ್ರವೇಶ ಪಡೆಯಬಹುದು. 
    ದಾಖಲಾತಿಗೆ ಸಂಬಂಧಿಸಿದಂತೆ ವಯೋಮಿತಿ 6ನೇ ತರಗತಿಗೆ 2007ರ ಜುಲೈ. 02 ರಿಂದ 2008ರ ಜುಲೈ. 01 ರೊಳಗೆ, ಹಾಗೂ 9ನೇ ತರಗತಿಗೆ 2004ರ ಜುಲೈ. 02 ರಿಂದ 2005ರ ಜುಲೈ. 01 ರೊಳಗೆ ಅಭ್ಯರ್ಥಿಗಳು ಜನಿಸಿರಬೇಕು.  ಪ್ರವೇಶ ಪರೀಕ್ಷೆಯನ್ನು 2018ರ ಜನವರಿ 07 ರಂದು ನಡೆಯಲಿದ್ದು, 6ನೇ ಮತ್ತು 9ನೇ ತರಗತಿ ಪ್ರವೇಶ ಪರೀಕ್ಷೆ ಕೊಡಗಿನ ಸೈನಿಕ ಶಾಲೆಯಲ್ಲಿ ಹಾಗೂ 9ನೇ ತರಗತಿಗೆ ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆಗಳು ನಡೆಯಲಿವೆ.
    ಅರ್ಜಿ ಸಲ್ಲಿಸಲು ಅಕ್ಟೋಬರ್/ ನವೆಂಬರ್ ನಲ್ಲಿ ಶಾಲೆಯ ವೆಬ್‍ಸೈಟ್  www.sainikschoolkodaguedu.in  ನ್ನು ಸಂಪರ್ಕಿಸಿ ಮಾಹಿತಿ ಪುಸ್ತಕ/ ಅರ್ಜಿಯನ್ನು ಡೌನ್‍ಲೊಡ್ ಮಾಡಬಹುದು ಅಥವಾ ಶಾಲೆಯಿಂದ ಖುದ್ದಾಗಿ ಪಡೆಯಬಹುದು.  ಹೆಚ್ಚಿನ ಮಾಹಿತಿಗಾಗಿ ಶಾಲೆಯ ದೂರವಾಣಿ ಸಂಖ್ಯೆ 08276-278963 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನ ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು : 762 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸೆ. 22 ರಂದು ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ


ಕೊಪ್ಪಳ ಸೆ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕುಗಳ ಎಲ್ಲ 331 ಗ್ರಾಮಗಳಿಗೂ ಕೃಷ್ಣಾ ನದಿಯಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಬೃಹತ್ ಯೋಜನೆ ಕಾಮಗಾರಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸೆ. 22 ರಂದು ಕೊಪ್ಪಳದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
     ಜಿಲ್ಲೆಯ ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಂದರೆ ಆಗಾಗ್ಗೆ ಕಾಡುವುದು ಸಹಜ.  ಈ ಎರಡೂ ತಾಲೂಕುಗಳಲ್ಲಿ ಅಂತರ್ಜಲ ಪಾತಾಳ ಕಂಡಿದೆ.  ಬೋರ್‍ವೆಲ್ ನೀರು ಕುಡಿಯಲು ಯೋಗ್ಯವಿಲ್ಲ.  ಕೆಲವೆಡೆ ಬೋರ್‍ವೆಲ್ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದೆ.  ಹೀಗಾಗಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಈ ಎರಡೂ ತಾಲೂಕುಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.  ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕುಗಳ ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಶಾಶ್ವತ ವ್ಯವಸ್ಥೆಗೆ ಇದೀಗ ಸರ್ಕಾರ ಮುಂದಾಗಿದೆ.  ಜಿಲ್ಲೆಯ ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನ ಎಲ್ಲ 331 ಗ್ರಾಮಗಳಿಗೂ ಡಿಸೈನ್ ಬಿಲ್ಡ್ ಆಪರೇಟ್ ಅಂಡ್ ಟ್ರಾನ್ಸ್‍ಫರ್ ಆಧಾರದ ಮೇಲೆ ನಾರಾಯಣಪೂರ ಜಲಾಶಯದ ಕೃಷ್ಣೆಯ ಹಿನ್ನೀರಿನಿಂದ ನೀರು ಒದಗಿಸುವ 762. 30 ಕೋಟಿ ರೂ. ಗಳ ಬೃಹತ್ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದೆ.  ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕು ಕೌಜಗನೂರು ಗ್ರಾಮದ ಹತ್ತಿರ ಇದಕ್ಕಾಗಿ ಜಾಕ್‍ವೆಲ್ ನಿರ್ಮಿಸಿ, ಜಿಲ್ಲೆಯ ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ.  ಕಾಮಗಾರಿಯನ್ನು ಕೈಗೊಳ್ಳಲು ಈಗಾಗಲೆ ಎಲ್ & ಟಿ ಕಂಪನಿಗೆ ಏಜೆನ್ಸಿ ನೀಡಲಾಗಿದೆ.  ಕಾಮಗಾರಿಯನ್ನು 36 ತಿಂಗಳುಗಳಲ್ಲಿ ಪೂರ್ಣಗೊಳಿಸಲು ಕಾಲಮಿತಿಯನ್ನು ನಿಗದಿಪಡಿಸಲಾಗಿದ್ದು, ಈ ಕಾಮಗಾರಿಗೆ ಮುಖ್ಯಮಂತ್ರಿಗಳು ಸೆ. 22 ರಂದು ಕೊಪ್ಪಳದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.  ಯೋಜನೆಯನ್ನು ಮುಂದಿನ 2048 ಇಸವಿಯಷ್ಟೊತ್ತಿಗೆ ಆಗಲಿರುವ ಅಂದಾಜು 6. 62 ಲಕ್ಷ ಜನಸಂಖ್ಯೆಯನ್ನು ಆಧಾರವಾಗಿಸಿಕೊಂಡು, ರೂಪಿಸಲಾಗಿದೆ.  ಈ ಯೋಜನೆಯ ಜಾರಿಯಿಂದಾಗಿ ಜಿಲ್ಲೆಯಲ್ಲಿ ತೀವ್ರ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿರುವ ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನ 331 ಗ್ರಾಮಗಳ ಜನರಿಗೆ ಪ್ರತಿಯೊಬ್ಬರಿಗೂ 85 ಎಲ್‍ಪಿಸಿಡಿ ಯಷ್ಟು ಪ್ರಮಾಣದ ನೀರು ಪೂರೈಸಲು ಯೋಜಿಸಲಾಗಿದ್ದು, ನಿತ್ಯ 63 ಎಂಎಲ್‍ಡಿ ನೀರಿನ ಪ್ರಮಾಣದಂತೆ ಲೆಕ್ಕಾಚಾರ ಮಾಡಲಾಗಿದೆ.  ಕಾಮಗಾರಿಯನ್ನು ಪೂರ್ಣಗೊಳಿಸಿದ ಬಳಿಕ ಕಂಪನಿಯೇ 05 ವರ್ಷಗಳ ಕಾಲ ನಿರ್ವಹಣೆ ಮಾಡುವಂತೆ ಯೋಜನೆ ರೂಪಿಸಲಾಗಿದೆ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಶಂಕರ ಮಳಗಿ ಅವರು.

Wednesday, 20 September 2017

ಆನೆಗೊಂದಿ-ಹಂಪಿ ಪಾರಂಪರಿಕ ತಾಣಗಳ ಸಂಪರ್ಕ : ಕಡೇಬಾಗಿಲು-ಬುಕ್ಕಸಾಗರ ಸೇತುವೆ ಸೆ. 22 ರಂದು ಮುಖ್ಯಮಂತ್ರಿಗಳಿಂದ ಉದ್ಘಾಟನೆಗೆ ಸಿದ್ಧ


ಕೊಪ್ಪಳ ಸೆ. 20 (ಕರ್ನಾಟಕ ವಾರ್ತೆ): ವಿಜಯನಗರ ಸಾಮ್ರಾಜ್ಯದ ಪಾರಂಪರಿಕ ತಾಣಗಳೆನಿಸಿರುವ ಕೊಪ್ಪಳ ಜಿಲ್ಲೆಯ ಆನೆಗೊಂದಿ ಪ್ರದೇಶ ಹಾಗೂ ಬಳ್ಳಾರಿ ಜಿಲ್ಲೆಯ ಹಂಪಿಯ ಪ್ರದೇಶಕ್ಕೆ ನೇರ ಸಂಪರ್ಕ ಕಲ್ಪಿಸುವ ಸಲುವಾಗಿ ತುಂಗಭದ್ರಾ ನದಿಗೆ ಗಂಗಾವತಿ ತಾಲೂಕು ಕಡೇಬಾಗಿಲು ಬಳಿ ಸೇತುವೆ ನಿರ್ಮಾಣದ ಕಾರ್ಯ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ. 22 ರಂದು ಉದ್ಘಾಟನೆಗೊಳಿಸಲಿದ್ದಾರೆ.

      ಉತ್ತರ ಕರ್ನಾಟಕ ಜನರ ಜೀವನಾಡಿ ಎನಿಸಿರುವ ತುಂಗಭದ್ರಾ ನದಿ ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳನ್ನು ಬೇರ್ಪಡಿಸುವ ಗಡಿಯಾಗಿಯೂ ಗುರುತಿಸಿಕೊಂಡಿದೆ.  ಅಲ್ಲದೆ ಇದೇ ನದಿಗೆ ಮುನಿರಾಬಾದ್‍ನಲ್ಲಿ ನಿರ್ಮಿಸಿರುವ ತುಂಗಭದ್ರಾ ಜಲಾಶಯ ಮೂರೂ ಜಿಲ್ಲೆಗಳ ಕೃಷಿಕರ ಆರ್ಥಿಕ ಪ್ರಗತಿಗೆ ಮುನ್ನಡಿ ಬರೆದಿದೆ.  ಹೀಗಾಗಿ ಈ ತ್ರಿವಳಿ ಜಿಲ್ಲೆಗಳ ಮಧ್ಯೆ ಸಂಪರ್ಕ ಸಾಧಿಸುವುದು ಸಂಪರ್ಕ, ವಾಣಿಜ್ಯ ಹಾಗೂ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಅತೀ ಅವಶ್ಯಕವಾಗಿದೆ. ಈಗ ಮುನಿರಾಬಾದ್ ಬಳಿ ಎನ್.ಹೆಚ್-13 ಕ್ಕೆ ಹೊಂದಿಕೊಂಡು ಇರುವ ಸೇತುವೆಯನ್ನು ಹೊರತುಪಡಿಸಿದರೆ ತುಂಗಭದ್ರಾ ನದಿ ದಾಟಲು 54.00 ಕಿ.ಮೀ ದೂರದ ಕಂಪ್ಲಿ ಸಮೀಪದ ಸೇತುವೆಯನ್ನೇ ಪ್ರಯಾಣಿಕರು ಬಳಸಬೇಕಾಗಿತ್ತು.  ಇದರಿಂದ ಸಾಕಷ್ಟು ಪ್ರಯಾಣ ದೂರವನ್ನು ಕ್ರಮಿಸಬೇಕಾಗಿದ್ದರಿಂದ ಪ್ರಯಾಣಿಕರಿಗೆ ಹೆಚ್ಚುವರಿ ಸಮಯ ಹಾಗೂ ಆರ್ಥಿಕ ಹೊರೆ ಬೀಳುವಂತಾಗಿತ್ತು.  ಸುವರ್ಣಯುಗ ಎಂದೇ ಬಣ್ಣಿಸಲ್ಪಟ್ಟಿರುವ ವಿಜಯನಗರ ಸಾಮ್ರಾಜ್ಯದ ಇತಿಹಾಸ ಸಾರುವ ತಾಣಗಳು ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಅಲ್ಲಲ್ಲಿ ಹರಡಿಕೊಂಡಿದ್ದು, ಇದಕ್ಕಾಗಿಯೇ ಈ ಪಾರಂಪರಿಕ ತಾಣವನ್ನು ಬೃಹತ್ ಬಯಲು ವಸ್ತು ಸಂಗ್ರಹಾಲವೆಂದೇ ಕರೆಯಲಾಗುತ್ತದೆ.  ಹಂಪಿಯ ವಿರುಪಾಕ್ಷ ದೇವಾಲಯ, ವಿಜಯವಿಠಲ ದೇವಾಲಯ, ಕಲ್ಲಿನ ರಥ ಹೀಗೆ ಬಳ್ಳಾರಿ ಜಿಲ್ಲೆಯ ಹಂಪಿ ಪ್ರದೇಶವನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ, ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಎನಿಸಿರುವ ಕೊಪ್ಪಳ ಜಿಲ್ಲೆ ಆನೆಗೊಂದಿ ಬಳಿಯ ಪಂಪಾ ಸರೋವರ, ಅಂಜನಾದ್ರಿ ಬೆಟ್ಟ, ಗಗನಮಹಲ್ ಹೀಗೆ ಖ್ಯಾತ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಮನಸಾಗದೇ ಇರಲು ಸಾದ್ಯವಿಲ್ಲ.  ಆದರೆ, ಹಂಪಿ ವೀಕ್ಷಿಸಿದವರು, ಆನೆಗೊಂದಿಗೆ ತೆರಳಬೇಕು ಎಂದರೆ ಸುತ್ತಿ ಬಳಸಿ ಬಹುದೂರ ಪ್ರಯಾಣಿಸಿ ತಲುಪಬೇಕಿತ್ತು.  ಆದರೆ ಇದೀಗ ಇಂತಹ ತೊಂದರೆ ಇಲ್ಲ.  ಹಂಪಿ ವೀಕ್ಷಿಸಿದವರು, ಆನೆಗೊಂದಿಗೆ ಆಗಮಿಸಿ ಪ್ರವಾಸಿ ತಾಣ ವೀಕ್ಷಿಸಲು ಕಷ್ಟಪಡಬೇಕಿಲ್ಲ. ಇದಕ್ಕೆ ಕಾರಣ ಕಡೇಬಾಗಿಲು ಬಳಿ ಬುಕ್ಕಸಾಗರವನ್ನು ಸಂಪರ್ಕಿಸುವ ಬೃಹತ್ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡು, ಲೋಕಾರ್ಪಣೆಗೊಳ್ಳುತ್ತಿದೆ.
ಹಿನ್ನೆಲೆ : ಹಂಪಿ-ಆನೆಗೊಂದಿ ಪಾರಂಪರಿಕ ತಾಣಗಳನ್ನು ಸಂಪರ್ಕಿಸುವ ಸಲುವಾಗಿ ಆನೆಗೊಂದಿ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ತೂಗು ಸೇತುವೆಯೊಂದರ ನಿರ್ಮಾಣ ಕಾರ್ಯ ಹಿಂದೆ ಪ್ರಾರಂಭವಾಯಿತು.  ಆದರೆ ಪಾರಂಪರಿಕ ತಾಣಗಳ ಸುರಕ್ಷತಾ ದೃಷ್ಟಿಯಿಂದ ಈ ಸೇತುವೆ ನಿರ್ಮಾಣ ಸಾಧುವಲ್ಲ ಎಂದು ಯುನೆಸ್ಕೋ ಆಕ್ಷೇಪಿಸಿದ ಪರಿಣಾಮವಾಗಿ, ಪೂರ್ಣಗೊಳ್ಳುವ ಹಂತ ತಲುಪಿದ್ದ ತೂಗು ಸೇತುವೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು.  ಹಲವು ವರ್ಷಗಳ ಬಳಿಕ, ಇದೇ ತೂಗುಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ನಿರ್ಧರಿಸಿದ ಸರ್ಕಾರ, ಕಾಮಗಾರಿಯನ್ನು ಪುನಃ ಪ್ರಾರಂಬಿಸಿ, ಇನ್ನೇನು ಸೇತುವೆ ಕಾಮಗಾರಿ ಪೂರ್ಣಗೊಂಡಿತು ಎನ್ನುವ ಹಂತ ತಲುಪಿದ ಸಂದರ್ಭದಲ್ಲಿ, ಸಂಪೂರ್ಣ ಕುಸಿದು, ಜನರ ಪ್ರಾಣಹಾನಿಯೂ ಸಂಭವಿಸಿತು.  ಹೀಗಾಗಿ ಈ ತೂಗು ಸೇತುವೆ ನಿರ್ಮಾಣವನ್ನು ಇಲ್ಲಿಗೇ ಕೈಬಿಡಲಾಯಿತು.
ಪಾರಂಪರಿಕ ತಾಣಗಳ ಸಂಪರ್ಕ : ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಆಗಲೇಬೇಕು ಎನ್ನುವ ಮಹತ್ವವನ್ನು ಅರಿತಿದ್ದ ರಾಜ್ಯ ಸರ್ಕಾರ  ಲೋಕೋಪಯೋಗಿ ಇಲಾಖೆಯಿಂದ ಸೂಕ್ತ ಸ್ಥಳ ತನಿಖೆ ಮಾಡಿಸಿ, ಎಲ್ಲ ಜನಸಾಮಾನ್ಯರಿಗೂ ಒಪ್ಪಿಗೆಯಾಗುವಂತೆ ಗಂಗಾವತಿಯಿಂದ ಮುನಿರಾಬಾದ್ (ವೈಕೆಎಂ ರೋಡ್, ಎಸ್.ಹೆಚ್-130) ರಸ್ತೆಯಿಂದ ಹೊಸಪೇಟೆ-ಶಿರಗುಪ್ಪ (ರಾ.ಹೆ-49) ರಸ್ತೆಯನ್ನು ಸಂಪರ್ಕಿಸುವ ಮಹದುದ್ದೇಶದಿಂದ ಕಡೇಬಾಗಿಲು ಮತ್ತು ಬುಕ್ಕಸಾಗರ ಗ್ರಾಮಗಳ ಮಧ್ಯೆ ಹೊಸ ಸೇತುವೆಯ ನಿರ್ಮಾಣವನ್ನು ಕೈಗೊಂಡು ಪೂರ್ಣಗೊಳಿಸಿದೆ.   ಇದರಿಂದ, ಗಂಗಾವತಿಯಿಂದ ಹೊಸಪೇಟೆಗೆ ಹೋಗುವ ದೂರ 14.00 ಕಿ.ಮೀ ಗಳಷ್ಟು ಕಡಿಮೆಯಾಗುತ್ತಿದ್ದು, ಸಾಕಷ್ಟು ಅನುಕೂಲವಾಗಿದೆ.  ಈ ಭಾಗದ ವಿಶ್ವ ಪಾರಂಪರಿಕ ಸ್ಥಳವಾದ ಹಂಪಿಯನ್ನು ಬಹು ಶೀಘ್ರವಾಗಿ ಸಂಪರ್ಕಿಸಲು ಸಾಧ್ಯವಾಗುತ್ತಿದ್ದು, ನದಿಯ ಇನ್ನೊಂದು ಪಾಶ್ರ್ವದ ಆನೆಗುಂದಿ, ಅಂಜನಾದ್ರಿ ಬೆಟ್ಟ, ಪಂಪಾ ಸರೋವರ ಹಾಗೂ ಹುಲಗಿ ದೇವಸ್ಥಾನವನ್ನು ಸಂಪರ್ಕಿಸಲು ಪ್ರವಾಸಿಗರಿಗೆ ಅತಿ ಅನುಕೂಲಕರವಾಗಿದೆ.  ಈ ಸೇತುವೆಯ ಕಾಮಗಾರಿ ನಬಾರ್ಡ-18 ರ ಯೋಜನೆ ಅಡಿಯಲ್ಲಿ ರೂ. 4028.00 ಲಕ್ಷಕ್ಕೆ ನಿರ್ಮಾಣಗೊಂಡಿದೆ.  ಈ ಕಾಮಗಾರಿಯನ್ನು ಮೆ//ಕೆ.ಎನ್.ಆರ್ ಕನ್ಸ್‍ಷ್ರಕ್ಷನ್ ಕಂಪನಿ, ಹೈದ್ರಾಬಾದ ಇವರಿಗೆ ವಹಿಸಲಾಗಿತ್ತು.  ಕಾಮಗಾರಿಯನ್ನು 2014 ರ ಮಾರ್ಚ್ 04 ರಂದು ಪ್ರಾರಂಭಿಸಿ, 2016 ರ ಡಿಸೆಂಬರ್ 31 ರಂದು ಪೂರ್ಣಗೊಳಿಸಲಾಗಿದೆ. 


ಸೇತುವೆಯ ವೈಶಿಷ್ಟ್ಯ : ಕಡೇಬಾಗಿಲು-ಬುಕ್ಕಸಾಗರ ಮಧ್ಯದ ಈ ಸೇತುವೆಯನ್ನು 4028 ಲಕ್ಷ ರೂ. ಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸೇತುವೆ ಒಟ್ಟು ಉದ್ದ 487. 50 ಮೀ. ಹೊಂದಿದೆ.  ಕಡೇಬಾಗಿಲು ಬಳಿ 1. 430 ಕಿ.ಮೀ. ಅಪ್ರೋಚ್ ರಸ್ತೆ ಹೊಂದಿದ್ದು, ಬುಕ್ಕಸಾಗರದ ಕಡೆ 2.275 ಕಿ.ಮೀ. ಅಪ್ರೋಚ್ ರಸ್ತೆ ಹೊಂದಿದೆ.  12 ಮೀ. ಡೆಕ್ ಅಗಲ ಹೊಂದಿದ್ದು, 1.50 ಮೀ. ಫುಟ್‍ಪಾತ್ ಸ್ಲಾಬ್ ಇದೆ.
     ತುಂಗಭದ್ರಾ ನದಿಗೆ ಕಟ್ಟಲಾಗಿರುವ ಈ ಸೇತುವೆ ಯೋಜನೆಯು ಲೋಕೋಪಯೋಗಿ ಇಲಾಖೆಯ ಹೆಮ್ಮೆಯ ಯೋಜನೆಯಾಗಿದ್ದು, ರಾಜ್ಯದ ಮುಖ್ಯಮಂತ್ರಿಗಳಿಂದ ಸೆ. 22 ರಂದು ಉದ್ಘಾಟನೆಗೊಳ್ಳಲಿದ್ದು, ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರ ಸೇವೆಗೆ ಅಣಿಯಾಗಲಿದೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಂಡಿವಡ್ಡರ್ ಅವರು.

ಸೆ. 22 ರಂದು ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ : ರಾಜ್ಯಕ್ಕೆ ಮಾದರಿಯಾಗಲಿದೆ ತಳಕಲ್ ಸರ್ಕಾರಿ ಇಂಜಿನೀಯರಿಂಗ್ ಕಾಲೇಜು


ಕೊಪ್ಪಳ ಸೆ. 20 (ಕರ್ನಾಟಕ ವಾರ್ತೆ): ಹೈದ್ರಾಬಾದ್-ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿಯನ್ನು ತೊಡೆದುಹಾಕುವ ದಿಸೆಯಲ್ಲಿ ಸರ್ಕಾರ ಇತ್ತೀಚೆಗೆ ಈ ಪ್ರದೇಶದಲ್ಲಿ ಉನ್ನತ ಶಿಕ್ಷಣ, ಕಾಲೇಜು ಶಿಕ್ಷಣ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಈ ಪ್ರದೇಶದಲ್ಲಿ ಇತ್ತೀಚೆಗೆ ನಿರ್ಮಾಣಗೊಂಡಿರುವ ಹಲವು ಸರ್ಕಾರಿ ಮೆಡಿಕಲ್ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಪ್ರಥಮ ದರ್ಜೆ ಕಾಲೇಜುಗಳು ಇದಕ್ಕೆ ನಿದರ್ಶನವಾಗಿದೆ.
     ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಹಂತವನ್ನು ಪೂರ್ಣಗೊಳಿಸುವ ವಿದ್ಯಾರ್ಥಿಗಳು, ಕಾಲೇಜು ಮತ್ತು ಉನ್ನತ ಶಿಕ್ಷಣದ ಹಂತಕ್ಕೆ ತಲುಪುವ ಪ್ರಮಾಣ ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಕಡಿಮೆ ಇದೆ.  ಇದಕ್ಕೆ ಈ ಭಾಗದಲ್ಲಿ ಕಾಲೇಜು ಮತ್ತು ಉನ್ನತ ಶಿಕ್ಷಣದ ವ್ಯವಸ್ಥೆಯ ಕೊರತೆಯೇ ಬಹುತೇಕ ಕಾರಣ ಎಂದು ಹೇಳಲಾಗುತ್ತಿತ್ತು.  ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದ್ದು, ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಕಾಲೇಜು ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆ ಸುಧಾರಿತಗೊಳ್ಳುತ್ತಿದೆ.  ಸಂವಿಧಾನದ 371 ಜೆ ಕಲಂ ತಿದ್ದುಪಡಿಯಿಂದಾಗಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಮೀಸಲಾತಿ ದೊರೆಯುತ್ತಿದ್ದು, ಉದ್ಯೋಗಾಕಾಂಕ್ಷಿಗಳಲ್ಲಿ ಭರವಸೆಯ ಬೆಳಕು ಮೂಡಿದಂತಾಗಿದೆ.  ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಕೊಪ್ಪಳ ನಗರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣಗೊಂಡು, ಈಗಾಗಲೆ ಇಲ್ಲಿ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣ ಪ್ರಾರಂಭಗೊಂಡಿದೆ.  ಅಲ್ಲದೆ ಜಿಲ್ಲೆಯಲ್ಲಿ ಉನ್ನತ ವ್ಯಾಸಂಗಕ್ಕಾಗಿ ಕೊಪ್ಪಳದಲ್ಲಿ ಸ್ನಾತಕೋತ್ತರ ಶಿಕ್ಷಣ ಕೇಂದ್ರ ಪ್ರಾರಂಭಗೊಂಡಿವೆ.  ಜಿಲ್ಲೆಯಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಐಟಿಐ ಮತ್ತು ಪಾಲಿಟೆಕ್ನಿಕ್‍ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು.  ಇಂಜಿನಿಯರಿಂಗ್ ಶಿಕ್ಷಣಕ್ಕೆ ಇಲ್ಲಿನ ವಿದ್ಯಾರ್ಥಿಗಳು ಮತ್ತೆ ಬೇರೆ ಜಿಲ್ಲೆಯ ಕಡೆಗೆ ಮುಖ ಮಾಡುವ ಪರಿಸ್ಥಿತಿ ಇದೆ.  ಇದನ್ನರಿತೇ ಸರ್ಕಾರ, ಜಿಲ್ಲೆಯಲ್ಲಿಯೂ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಲು ಕ್ರಮ ಕೈಗೊಂಡಿದ್ದು, ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿರುವ ಬಸವರಾಜ ರಾಯರಡ್ಡಿ ಅವರೇ ಉನ್ನತ ಶಿಕ್ಷಣ ಇಲಾಖೆಯ ಖಾತೆಯನ್ನು ಪಡೆದಿದ್ದರಿಂದ, ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯ ಕನಸು ಶೀಘ್ರ ನನಸಾಗುವತ್ತ ಮುಂದಡಿಯಿಡಲು ಸಾಧ್ಯವಾಗಿದೆ.  ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್ ಬಳಿ ರಾಜ್ಯದಲ್ಲಿಯೇ ಮಾದರಿಯಾಗಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ಸರ್ಕಾರ ಮಂಜೂರಾತಿ ನೀಡಿ, 100 ಕೋಟಿ ರೂ. ಅನುದಾನ ಒದಗಿಸಿದೆ.  ಈ ಪೈಕಿ ಉನ್ನತ ಶಿಕ್ಷಣ ಇಲಾಖೆ 50 ಕೋಟಿ ರೂ. ಒದಗಿಸಿದರೆ, ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ 50 ಕೋಟಿ ರೂ. ನೀಡಿದೆ.  ತಳಕಲ್‍ನ ಇಂಜಿನಿಯರಿಂಗ್ ಕಾಲೇಜನ್ನು ರಾಜ್ಯದಲ್ಲಿಯೇ ಮಾದರಿ ಕಾಲೇಜನ್ನಾಗಿಸಲು ವಿಶೇಷ ಗಮನ ನೀಡಲಾಗುತ್ತಿದೆ.  ಕಾಲೇಜು ಕ್ಯಾಂಪಸ್ ಆವರಣದಲ್ಲಿಯೇ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗುತ್ತಿದೆ.  ಅಲ್ಲದೆ ಬೋಧಕ, ಬೋಧಕೇತರ ಸಿಬ್ಬಂದಿಗಳ ವಸತಿ ಗೃಹಗಳನ್ನು ಸಹ ಇಲ್ಲಿಯೇ ನಿರ್ಮಿಸಲಾಗುತ್ತಿದೆ.
        ಡಾ. ನಂಜುಂಡಪ್ಪ ವರದಿಯನುಸಾರ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದ ತಾಲೂಕು ಎಂದು ಗುರುತಿಸಲ್ಪಟ್ಟಿರುವ ಯಲಬುರ್ಗಾ ತಾಲೂಕಿನಲ್ಲಿಯೇ ಇಂಜಿನಿಯರಿಂಗ್ ಕಾಲೇಜು ನಿರ್ಮಾಣವಾಗುತ್ತಿರುವುದು ವಿಶೇಷ.  ಇಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ.  ಕಟ್ಟಡ ನಿರ್ಮಾಣಕ್ಕೆ 32 ಎಕರೆ 21 ಗುಂಟೆ ಭೂಮಿಯನ್ನು ಈಗಾಗಲೆ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ.  
ಕಾಲೇಜು ಕಟ್ಟಡದ ವೈಶಿಷ್ಟ್ಯ : ತಳಕಲ್‍ನಲ್ಲಿ ನಿರ್ಮಾಣವಾಗಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಮುಖ್ಯ ಕಟ್ಟಡ (ಅಕಾಡೆಮಿ ಬ್ಲಾಕ್), ಕಾರ್ಯಾಗಾರ (ವಕ್ರ್ಸ್‍ಶಾಪ್), ವಿದ್ಯಾರ್ಥಿನಿಯರ ವಸತಿ ನಿಲಯ (ಗಲ್ರ್ಸ್ ಹಾಸ್ಟೇಲ್), ಬೋಧಕೇತರ ಸಿಬ್ಬಂದಿ ವಸತಿ ಗೃಹಗಳು (ನಾನ್ ಟೀಚಿಂಗ್ ಸ್ಟಾಫ್ ಕ್ವಾಟ್ರಸ್), ಬೋಧಕ ಸಿಬ್ಬಂದಿ ವಸತಿ ಗೃಹಗಳು (ಟೀಚಿಂಗ್ ಸ್ಟಾಫ್ ಕ್ವಾಟ್ರಸ್) ಹೊಂದಿದೆ.  ಇದರ ಜೊತೆಗೆ  ಮೂಲಭೂತ ಸೌಕರ್ಯಗಳಾಗಿರುವ ರಸ್ತೆ, ಚರಂಡಿ, ವಿದ್ಯುತ್, ನೀರು ಸರಬರಾಜು ಅವಶ್ಯಕ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ.
    ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಟೆಂಡರ್ ಆಧಾರದ ಮೇಲೆ ಪುಣೆಯ ಮೆ: ಬಿ.ಜಿ. ಶಿರ್ಕೆ ಕಂಪನಿ ಇವರಿಗೆ ವಹಿಸಲಾಗಿದೆ. ಟೆಂಡರ್ ಮೊತ್ತ 111. 89 ಕೋಟಿ ರೂ. ನಿಗದಿಪಡಿಸಿದೆ.  ಕಾಮಗಾರಿ ಪೂರ್ಣಗೊಳಿಸಲು 24 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದೆ.  ಸುಸಜ್ಜಿತ ಮತ್ತು ಸುಂದರ ಕಟ್ಟಡ ನಿರ್ಮಾಣಕ್ಕೆ ಬೇಕಾದ ಎಲ್ಲಾ ವಾಸ್ತು ಶಿಲ್ಪ, ತಾಂತ್ರಿಕ ಮತ್ತು ಅವಶ್ಯಕ ಅಂಶಗಳನ್ನು ಅಳವಡಿಸಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ತಾಂತ್ರಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಲ್ಲಿ ತುಂಬಾ ಸಹಕಾರಿಯಾಗಲಿದೆ.

ಸೆ. 22 ರಂದು ಕೊಪ್ಪಳಕ್ಕೆ ಮುಖ್ಯಮಂತ್ರಿಗಳ ಆಗಮನ : ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಜನಪರ ಯೋಜನೆ ಫಲಾನುಭವಿಗಳ ಬೃಹತ್ ಸಮಾವೇಶ


ಕೊಪ್ಪಳ ಸೆ. 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಇವರ ಸಹಯೋಗದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶ ಸೆ. 22 ರಂದು ಬೆಳಿಗ್ಗೆ ಕೊಪ್ಪಳ ನಗರದ ಹೊರವಲಯದಲ್ಲಿ ಹೊಸಪೇಟೆ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಬದಿಯ ಬೃಹತ್ ಮೈದಾನದಲ್ಲಿ ಆಯೋಜಿಸಲಾಗಿದೆ.
     ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಮಾರಂಭದ ಉದ್ಘಾಟನೆ ನೆರವೇರಿಸುವರು.  ಅಲ್ಲದೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು.  ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಸಚಿವ ಆರ್.ವಿ. ದೇಶಪಾಂಡೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಹೆಚ್.ಕೆ. ಪಾಟೀಲ್, ಲೋಕೋಪಯೋಗಿ ಸಚಿವ ಹೆಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ, ಇಂಧನ ಸಚಿವ ಡಿ.ಕೆ. ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವೆ ಉಮಾಶ್ರೀ, ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಸಂತೋಷ್ ಎಸ್ ಲಾಡ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಔಕಾಫ್ ಸಚಿವ ತನ್ವೀರ್ ಸೇಠ್, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಗೋವಿಂದರಾಜು, ಕೊಪ್ಪಳ ಜಿ.ಪಂ. ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸುವರು.  ಶಾಸಕರುಗಳಾದ ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಕರಿಸಿದ್ದಪ್ಪ, ಕೊಪ್ಪಳ ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದರ್ ಖಾದ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್, ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಹಾಗೂ ಕಲಬುರಗಿ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.
ಅಭಿವೃದ್ಧಿ ಕಾರ್ಯಕ್ರಮಗಳ ವಿವರ :
************** ಸೆ. 22 ರಂದು ಮುಖ್ಯಮಂತ್ರಿಗಳಿಂದ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೊಳ್ಳಲಿರುವ ವಿವಿಧ ಅಭಿವೃದ್ಧಿ ಯೋಜನೆಗಳ ವಿವರ ಇಂತಿದೆ.  ಕೊಪ್ಪಳ ಜಿಲ್ಲೆಯ ಕುಷ್ಟಗಿ ಮತ್ತು ಯಲಬುಗಾ ತಾಲೂಕಿನ ಗ್ರಾಮಗಳಿಗೆ 763 ಕೋಟಿ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಶಂಕುಸ್ಥಾಪನೆ.  ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕೊಪ್ಪಳ ತಾಲೂಕಿನ ಆಯ್ದ ಕೆರೆಗಳಿಗೆ 290 ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾ ನದಿಯ ನೀರನ್ನು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ.  ಕೊಪ್ಪಳದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಕಟ್ಟಡದ ಉದ್ಘಾಟನೆ.  ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ 103 ಕೋಟಿ ರೂ. ವೆಚ್ಚದಲ್ಲಿ ಬನ್ನಿಕೊಪ್ಪ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ.  ಯಲಬುರ್ಗಾ ತಾಲೂಕು ತಳಕಲ್ ಬಳಿ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡದ ಶಂಕುಸ್ಥಾಪನೆ.  32 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಆನೆಗೊಂದಿ ಸೇತುವೆಯ ಉದ್ಘಾಟನೆ.  ಗಂಗಾವತಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡದ ಉದ್ಘಾಟನೆ.  ಗಂಗಾವತಿ ತಾಲೂಕು ಚಿಕ್ಕಬೆಣಕಲ್‍ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹಾಸ್ಟೆಲ್ ಕಟ್ಟಡದ ಉದ್ಘಾಟನೆ.  ಗಂಗಾವತಿ ಮತಕ್ಷೇತ್ರ ಕೊಪ್ಪಳ ತಾಲೂಕಿನ ಹಿರೇಹಳ್ಳ ಯೋಜನೆಯ ಮುದ್ಲಾಪುರ ಗ್ರಾಮ ಬಳಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೇತುವೆಯ ಉದ್ಘಾಟನೆ.  ಯಲಬುರ್ಗಾ ತಾಲೂಕು ಕುಕನೂರು ಪಟ್ಟಣದಲ್ಲಿ 09 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ 60 ಹಾಸಿಗೆಗಳ ಮಹಿಳಾ ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆಯ ಶಂಕುಸ್ಥಾಪನೆ.  ಹಾಗೂ ಯಲಬುರ್ಗಾ ತಾಲೂಕು ಕುಕನೂರಿನಲ್ಲಿ 05 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಪ್ರವಾಸಿ ಮಂದಿರದ ಉದ್ಘಾಟನೆಯನ್ನು ಸೆ. 22 ರಂದು ಮುಖ್ಯಮಂತ್ರಿಗಳು ನೆರವೇರಿಸುವರು.

ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಸೆ. 20 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಸೆ. 21 ಮತ್ತು 22 ರಂದು ಎರಡು ದಿನಗಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಬಸವರಾಜ ರಾಯರಡ್ಡಿ ಅವರು ಸೆ. 21 ರಂದು ಬೆಳಿಗ್ಗೆ 8 ಗಂಟೆಗೆ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಕೊಪ್ಪಳಕ್ಕೆ ಆಗಮಿಸುವರು.  ನಂತರ ಬೆಳಿಗ್ಗೆ 10-30 ಗಂಟೆಗೆ ಯಲಬುರ್ಗಾ ತಾಲೂಕು ಕುಕನೂರಿಗೆ ತೆರಳಿ ವಿದ್ಯಾನಂದ ಗುರುಕುಲದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಮಧ್ಯಾಹ್ನ 1-30 ಗಂಟೆಗೆ ಯಲಬುರ್ಗಾಕ್ಕೆ ತೆರಳುವರು.  ಮಧ್ಯಾಹ್ನ 3-30 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ಮುಖ್ಯಮಂತ್ರಿಗಳ ಕಾರ್ಯಕ್ರಮ ಸಿದ್ಧತೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸುವರು.  ರಾತ್ರಿ 09 ಗಂಟೆಗೆ ಬಳ್ಳಾರಿಗೆ ತೆರಳಿ ವಾಸ್ತವ್ಯ ಮಾಡುವರು.
     ಸೆ. 22 ರಂದು ಬೆಳಿಗ್ಗೆ 10 ಗಂಟೆಗೆ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘ, ಈ ಸಂಸ್ಥೆಯ ಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ಪಾಲ್ಗೊಳ್ಳುವರು.  ನಂತರ ಮುಖ್ಯಮಂತ್ರಿಗಳೊಂದಿಗೆ ಹೆಲಿಕಾಪ್ಟರ್ ಮೂಲಕ ಕೊಪ್ಪಳಕ್ಕೆ ಮಧ್ಯಾಹ್ನ 12 ಗಂಟೆಗೆ ಆಗಮಿಸಿ, ಕೊಪ್ಪಳದಲ್ಲಿ ಆಯೋಜಿಸಲಾಗಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ಭಾಗವಹಿಸುವರು.   ಮಂತ್ರಿಗಳು ಅದೇ ದಿನ ಸಂಜೆ 5 ಗಂಟೆಗೆ ಧಾರವಾಡಕ್ಕೆ ಪ್ರಯಾಣ ಬೆಳೆಸುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಸೆ. 20 (ಕರ್ನಾಟಕ ವಾರ್ತೆ): ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸೆ. 22 ರಂದು ಕೊಪ್ಪಳ ಜಿಲ್ಲೆಯಲ್ಲಿ ಒಂದು ದಿನದ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
    ಮುಖ್ಯಮಂತ್ರಿಗಳು ಅಂದು ಬೆಳಿಗ್ಗೆ 9 ಗಂಟೆಗೆ ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಹೊರಟು, 10 ಗಂಟೆಗೆ ಬಳ್ಳಾರಿ ಜಿಲ್ಲೆ ತೋರಣಗಲ್‍ನ ಜಿಂದಾಲ್ ಏರ್‍ಸ್ಟ್ರಿಪ್‍ಗೆ ಆಗಮಿಸುವರು.  ನಂತರ ಹೆಲಿಕಾಪ್ಟರ್ ಮೂಲಕ ಬಳ್ಳಾರಿಗೆ ತೆರಳಿ, ಇಲ್ಲಿನ ವೀರಶೈವ ವಿದ್ಯಾವರ್ಧಕ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಬೆ. 11-30 ಗಂಟೆಗೆ ಬಳ್ಳಾರಿ ಜಿಲ್ಲೆಯ ವಿಮ್ಸ್ ಹೆಲಿಪ್ಯಾಡ್‍ನಿಂದ ಹೆಲಿಕ್ಯಾಪ್ಟರ್ ಮೂಲಕ ಹೊರಟು, ಬೆಳಿಗ್ಗೆ 11-55 ಗಂಟೆಗೆ ಕೊಪ್ಪಳ ತಾಲೂಕಿನ ಗಿಣಿಗೇರಾ ಏರ್‍ಸ್ಟ್ರಿಪ್‍ಗೆ (ಎಂಎಸ್‍ಪಿಎಲ್ ವಿಮಾನ ನಿಲ್ದಾಣಕ್ಕೆ) ಆಗಮಿಸುವರು.  ನಂತರ ಕೊಪ್ಪಳಕ್ಕೆ ಆಗಮಿಸಿ, ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಿಲಾನ್ಯಾಸ ಮತ್ತು ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ ಉದ್ಘಾಟನೆ ಹಾಗೂ ವಿವಿಧ ಯೋಜನೆ ಫಲಾನುಭವಿಗಳ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ನಂತರ ಮುಖ್ಯಮಂತ್ರಿಗಳು ಮಧ್ಯಾಹ್ನ 04-00 ಗಂಟೆಗೆ ಗಿಣಿಗೇರಾ ಏರ್‍ಸ್ಟ್ರಿಪ್‍ಗೆ ತೆರಳಿ ವಿಶೇಷ ವಿಮಾನ ಮೂಲಕ ಬೆಂಗಳೂರು ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸುವರು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಚಿವ ಆರ್.ವಿ. ದೇಶಪಾಂಡೆ ಅವರ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಸೆ. 20 (ಕರ್ನಾಟಕ ವಾರ್ತೆ): ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಮಂತ್ರಿಗಳಾದ ಆರ್.ವಿ. ದೇಶಪಾಂಡೆ ಅವರು ಕೊಪ್ಪಳ ಜಿಲ್ಲೆಯಲ್ಲಿ ಒಂದು ದಿನದ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
    ಮಂತ್ರಿಗಳು ಅಂದು ಹಳಿಯಾಳ ದಿಂದ ಹೊರಟು, ಹುಬ್ಬಳಿ-ಗದಗ ಮಾರ್ಗವಾಗಿ ಬೆಳಿಗ್ಗೆ 11-30 ಗಂಟೆಗೆ ಕೊಪ್ಪಳ ಜಿಲ್ಲೆಗೆ ಆಗಮಿಸಿ, ಸಾರ್ವಜನಿಕರ ಭೇಟಿ ಮಾಡುವರು.  ಮಧ್ಯಾಹ್ನ 12 ಗಂಟೆಗೆ ಕೊಪ್ಪಳದಲ್ಲಿ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ/ ಉದ್ಘಾಟನೆ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿಗಳೊಂದಿಗೆ ಭಾಗವಹಿಸುವರು.  ನಂತರ ಮಂತ್ರಿಗಳು ಅಂದು ಮಧ್ಯಾಹ್ನ 02-00 ಗಂಟೆಗೆ ಧಾರವಾಡ ಜಿಲ್ಲೆಗೆ ಪ್ರಮಾಣ ಬೆಳೆಸುವರು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.