Wednesday, 30 August 2017

ಅಪ್ಪ ರೈತನಾದರೆ ಮಕ್ಕಳು ರೈತೋದ್ಯಮಿಯಾಗಬೇಕು- ಡಾ. ಎಂ.ಬಿ. ಪಾಟೀಲ


ಕೊಪ್ಪಳ ಆ. 30 (ಕರ್ನಾಟಕ ವಾರ್ತೆ): ರೈತರ ಕುಟುಂಬದಲ್ಲಿನ ಅಪ್ಪ, ಅಮ್ಮ ರೈತರಾಗಿದ್ದರೆ, ಅವರ ಮಕ್ಕಳು ಹೆಚ್ಚಿನ ಆರ್ಥಿಕ ಭದ್ರತೆ ತರುವ ರೀತಿಯಲ್ಲಿ ರೈತೋದ್ಯಮಿಗಳಾಗಿ ಬೆಳೆಯಬೇಕು ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಲ ಡಾ. ಎಂ.ಬಿ. ಪಾಟೀಲ್ ಅವರು ಕರೆ ನೀಡಿದರು.
     ಕೃಷಿ ಇಲಾಖೆ, ಯಲಬುರ್ಗಾ ಇವರ ವತಿಯಿಂದ ಪ್ರಸಕ್ತ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಯೋಜನೆಯಡಿ ಯಲಬುರ್ಗಾ ತಾಲೂಕು ಯಡಿಯಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಮುಂಗಾರು ಹಂಗಾಮಿನಲ್ಲಿ ತೊಗರಿಬೆಳೆ ಪ್ರಾತ್ಯಕ್ಷಿಕೆ ತಾಕಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
     ರೈತ ಕುಟುಂಬದಲ್ಲಿ ಅಪ್ಪ / ಅಮ್ಮ ರೈತರಾಗಿದ್ದರೆ, ಅವರ ಮಕ್ಕಳು, ಕೃಷಿಯಲ್ಲಿಯೇ ಆರ್ಥಿಕ ಭದ್ರತೆ ಹಾಗೂ ಲಾಭದಾಯಕವನ್ನಾಗಿಸುವ ರೈತೋದ್ಯಮಿಗಳಾಗಬೇಕು.  ಗ್ರಾಮೀಣ ಯುವಕರು ಸೋಮಾರಿಗಳಾಗದೆ ಮನೆತನ ಕುಲಕಸುಬಾದ ವ್ಯವಸಾಯದಲ್ಲಿ ಆಗುತ್ತಿರುವ ಹೊಸ ಹೊಸ ಬೆಳವಣಿಗೆಗಳು, ಮೌಲ್ಯವರ್ಧನ ಕೃಷಿಯತ್ತ ಚಿಂತನೆ ನಡೆಸಿ, ಸಕ್ರಿಯಗೊಳ್ಳಬೇಕು.  ಅಂದರೆ ಮಾತ್ರ ಕೃಷಿ ಉಳಿಯುತ್ತದೆ ಎಂದು ಹೇಳಿದರು. 
     ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಯೋಜನೆಯ ಜಿಲ್ಲಾ ಸಂಚಾಲಕ ಎಸ್.ಬಿ. ಕೋಣಿ, ಕೃಷಿ ಅಧಿಕಾರಿಗಳು, ಗ್ರಾಮ ಪಂಚಾಯತ ಸದಸ್ಯರು ಭಾಗವಹಿಸಿದ್ದರು.
Post a Comment