Wednesday, 30 August 2017

ಸಂಕಲ್ಪದಿಂದ ಸಿದ್ಧಿ- ರೈತರ ಆದಾಯ ದ್ವಿಗುಣಗೊಳಿಸುವ ಜಾಗೃತಿ ಕಾರ್ಯಕ್ರಮ


ಕೊಪ್ಪಳ  ಆ. 30 (ಕರ್ನಾಟಕ ವಾರ್ತೆ) : ಕೃಷಿ ಹಾಗೂ ರೈತರ ಕಲ್ಯಾಣ ಮಂತ್ರಾಲಯ, ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೃಷಿ ಇಲಾಖೆ ಇವರ ಸಹಯೋಗದಲ್ಲಿ ‘ಸಂಕಲ್ಪದಿಂದ ಸಿದ್ದಿ’ ರೈತರ ಆದಾಯವನ್ನು ದ್ವಿಗುಣಗೊಳಿಸುವ ಏಳು ಅಂಶಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಮಾರಂಭ ಆ. 31 ರಂದು ಗಂಗಾವತಿ ತಾಲೂಕು ಹೇಮಗುಡ್ಡದ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ನಡೆಯಲಿದೆ.
     ಸಂಸದ ಕರಡಿ ಸಂಗಣ್ಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ತಜ್ಞರ ಭಾಷಣವನ್ನು ಭಾರತೀಯ ಭೂ ಮತ್ತು ಜಲ ಸಂರಕ್ಷಣಾ ಸಂಸ್ಥೆ ಸಂಶೋಧನಾ ಕೇಂದ್ರ ಬಳ್ಳಾರಿಯ ಮುಖ್ಯಸ್ಥ ಡಾ. ಎಸ್.ಎಲ್. ಪಾಟೀಲ್ ಅವರು ನೆರವೇರಿಸುವರು.  ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ಅಧ್ಯಕ್ಷತೆ ವಹಿಸಲಿದ್ದು, ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ್, ಶಾಸಕರುಗಳಾದ ಶಿವರಾಜ ತಂಗಡಗಿ, ದೊಡ್ಡನಗೌಡ ಪಾಟೀಲ್, ರಾಘವೇಂದ್ರ ಹಿಟ್ನಾಳ್, ವಿಧಾನಪರಿಷತ್ ಸದಸ್ಯರುಗಳಾದ ಶರಣಪ್ಪ ಮಟ್ಟೂರ, ಅಮರನಾಥ ಪಾಟೀಲ್, ಬಸವರಾಜ ಪಾಟೀಲ್ ಇಟಗಿ, ರಾಯಚೂರು ಕೃಷಿ ವಿವಿ ಕುಲಪತಿ ಡಾ. ಪಿ.ಎಂ. ಸಾಲಿಮಠ, ಜಿ.ಪಂ. ಉಪಾಧ್ಯಕ್ಷೆ ಲಕ್ಮಮ್ಮ ನೀರಲೂಟಿ, ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಎಸ್.ಕೆ. ಮೇಟಿ, ತಾ.ಪಂ. ಅಧ್ಯಕ್ಷ ಬಸವಂತಗೌಡ ಪೊಲೀಸ್ ಪಾಟೀಲ್, ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮಣ್ಣ ಅಗಸಿಮುಂದಿನ, ತಾ.ಪಂ. ಸದಸ್ಯೆ ಗೀತಾ ಪೊಲೀಸ್ ಪಾಟೀಲ್, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ಶಿವಣ್ಣ ಮೂಲಿಮನಿ, ಚಿಕ್ಕಬೆಣಕಲ್ ಗ್ರಾ.ಪಂ. ಅಧ್ಯಕ್ಷ ಅಮರೇಶ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಚನ್ನಪ್ಪ ಮಾಳಗಿ ಸೇರಿದಂತೆ ಹಲವು ಗಣ್ಯರು, ಉನ್ನತ ಅಧಿಕಾರಿಗಳು ಪಾಲ್ಗೊಳ್ಳುವರು.
     ರೈತರ ಆದಾಯವನ್ನು 2022 ರೊಳಗೆ ದ್ವಿಗುಣಗೊಳಿಸುವ ಏಳು ಅಂಶಗಳ ಕಾರ್ಯಕ್ರಮಗಳನ್ನು ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯ ಸಿದ್ಧಪಡಿಸಿದ್ದು, ವಿವರ ಇಂತಿದೆ.  ನೀರಾವರಿ ಸಂಪನ್ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ನೀರಾವರಿ ಕ್ಷೇತ್ರವನ್ನು ಹೆಚ್ಚಿಸುವುದು.  ಸುಧಾರಿತ ಬೀಜ, ಸಸಿಗಳ ಬಳಕೆ, ಸಾವಯವ ಕೃಷಿ ಅಳವಡಿಕೆ ಹಾಗೂ ಮಣ್ಣು ಆರೋಗ್ಯ ಕಾಪಾಡುವ ಮುಖಾಂತರ ಉತ್ಪಾದಕತೆ ಹೆಚ್ಚಿಸುವುದು.  ಕೊಯ್ಲೋತ್ತರ ನಷ್ಟವನ್ನು ಕಡಿಮೆ ಮಾಡಲು ಗೋದಾಮು ಹಾಗೂ ಶೀತಲ ಗೃಹ ಸೌಲಭ್ಯವನ್ನು ಬಲಪಡಿಸುವುದು.  ಆಹಾರ ಸಂಸ್ಕರಣೆಯ ಮುಖಾಂತರ ಕೃಷಿ ಉತ್ಪಾದನೆಯ ಮೌಲ್ಯ ವರ್ಧನೆ ಮಾಡುವುದು.  ವಿದ್ಯುನ್ಮಾನ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಮುಖಾಂತರ ಕೃಷಿ ಮಾರುಕಟ್ಟೆಯ ನೂನ್ಯತೆಗಳನ್ನು ಸರಿಪಡಿಸುವುದು.  ಕೃಷಿ ಕ್ಷೇತ್ರದಲ್ಲಿ ನಷ್ಟವನ್ನು ಕಡಿಮೆ ಮಾಡಲು ಕೃಷಿ ಬೆಳವಣಿಗೆ ಹೆಚ್ಚಿಸಲು ಸಾಂಸ್ಥಿಕ ಸಾಲದ ವ್ಯವಸ್ಥೆ ಬಲಪಡಿಸುವುದು ಹಾಗೂ ಕೃಷಿ ಪೂರಕ ಚಟುವಟಿಕೆಗಳಾದ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಜೇನು ಕೃಷಿ, ಮೀನುಗಾರಿಕೆ, ಕೃಷಿ ಅರಣ್ಯ ಹಾಗೂ ಸಮಗ್ರ ಕೃಷಿ ಪದ್ಧತಿಗಳನ್ನು ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಪೂರಕ ಕ್ಷೇತ್ರಗಳನ್ನಾಗಿ ಅಭಿವೃದ್ಧಿಪಡಿಸುವುದು.  ಇಂತಹ ಮಹತ್ವದ ವಿಷಯಗಳ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥೆ ಡಾ. ರೂಪಶ್ರೀ ಡಿ.ಹೆಚ್. ತಿಳಿಸಿದ್ದಾರೆ.
Post a Comment