Thursday, 31 August 2017

ವಿಜೃಂಭಣೆಯಿಂದ ಹುಲಿಗೆಮ್ಮ ದೇವಿ ದಸರಾ ಮಹೋತ್ಸವ ಆಚರಣೆ : ಸಿ.ಎಸ್ ಚಂದ್ರಮೌಳಿ


ಕೊಪ್ಪಳ ಆ. 31 (ಕರ್ನಾಟಕ ವಾರ್ತೆ): ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ತಾಲೂಕು ಹುಲಿಗಿಯ ಹುಲಿಗೆಮ್ಮ ದೇವಿ ದಸರಾ ಮಹೋತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಹೇಳಿದರು.
ಹುಲಿಗೆಮ್ಮ ದೇವಿ ದಸರಾ ಮಹೋತ್ಸವದ ಆಚರಣೆ ಕುರಿತು ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯಾನಿರ್ವಹಣಾಧಿಕಾರಿ ಕಛೇರಿಯಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧಕ್ಷತೆ ವಹಿಸಿ ಅವರು ಮಾತಾನಾಡಿದರು.
     ಈ ಬಾರಿಯ ದಸರಾ ಮಹೋತ್ಸವವನ್ನು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುವುದು.  ಈ ಬಾರಿ ವಿಶೇಷವಾಗಿ   ಸೆಪ್ಟೆಂಬರ್. 25 ರಂದು ಚಂಡಿಕಾ ಹೋಮ ಜರುಗಲಿದೆ.   ಉಳಿದಂತೆ  ಸೆ. 21 ರಂದು ಪ್ರತಿಪದ ಘಟಸ್ಥಾಪನ ಶರನ್ನವರಾತ್ರಿ ಆರಂಭ, 22 ರಂದು ದ್ವಿತೀಯ, 23 ರಂದು ತೃತೀಯ, 24 ರಂದು ಚತುರ್ಥಿ, 25 ರಂದು ಲಲಿತಾ ಪಂಚಮಿ ಅಂಗವಾಗಿ ಬೆಳಿಗ್ಗೆ ಚಂಡಿಕಾ ಹೋಮ ಹಾಗೂ ಸಂಜೆ 07-00 ಗಂಟೆಗೆ  ದೇವಿಗೆ ಶಾರ್ಧೂಲ ವಾಹನ ಸೇವೆ ಅಲಂಕಾರ.  26 ರಂದು ಷ್ರಷ್ಠೀ, ಸಂಜೆ 07-00 ಗಂಟೆಗೆ ದೇವಿಗೆ ಸಿಂಹವಾಹನ ಸೇವೆ ಅಲಂಕಾರ.  27 ರಂದು ಸಪ್ತಮಿ, ಸಂಜೆ 07-00 ಗಂಟೆಗೆ ದೇವಿಗೆ ಮಯೂರ ವಾಹನ ಸೇವೆ.  28 ರಂದು ಅಷ್ಟಮಿ (ದುರ್ಗಾಷ್ಟಮೀ ಸರಸ್ವತಿ ಪೂಜೆ), ಸಂಜೆ 07-00 ಗಂಟೆಗೆ ದೇವಿಗೆ ಗಜವಾಹನ ಸೇವೆ ಅಲಂಕಾರ.  29 ರಂದು ನವಮಿ (ಖಂಡಾ ಪೂಜಾ ಘಟವಿಸರ್ಜನೆ), ಸಂಜೆ 07-00 ಗಂಟೆಗೆ ದೇವಿಗೆ ಗಜವಾಹನ ಸೇವೆ ಅಲಂಕಾರ.  ಹಾಗೂ ಸೆ. 30 ರಂದು ದಶಮಿ, ಸಂಜೆ 05-00 ಗಂಟೆಗೆ ಶಮೀವೃಕ್ಷಕ್ಕೆ ತೆರಳುವುದು, ಶಮೀ ಪೂಜೆ, ತೊಟ್ಟಿಲ ಸೇವಾ, ಮಹಾಮಂಗಳಾರತಿ, ಮಂತ್ರ ಪುಷ್ಪಗಳೊಂದಿಗೆ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿವೆ. 
ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ದಸರಾ ಮಹೋತ್ಸವ ನಿಮಿತ್ಯ 10 ದಿನಗಳ ಕಾಲ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದ್ದು, ಪೆÇಲೀಸ್ ಭದ್ರತೆ, ಕುಡಿಯುವ ನೀರು ಪೂರೈಕೆ, ಸ್ವಚ್ಛತೆ ಹಾಗೂ ಭಕ್ತರಿಗೆ ಅನುಕೂಲವಾಗುವಂತೆ ಇತರೆ ವ್ಯವಸ್ಥೆಗಳನ್ನು ಒದಗಿಸಲಾಗುವುದು.  ದಸರಾ ಮಹೋತ್ಸವದ ಈ ಕಾರ್ಯಕ್ರಮಗಳನ್ನು ವಿಜ್ರಂಭಣೆಯಿಂದ ಹಾಗೂ ಯಶಸ್ವಿಯಾಗಿ ಜರುಗಿಸಲು ಭಕ್ತಾದಿಗಳನ್ನೊಡಗೂಡಿ, ಎಲ್ಲರೂ ಸಹಕರಿಸುವಂತೆ ಹುಲಿಗೆಮ್ಮ ದೇವಿ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯಾನಿರ್ವಹಣಾಧಿಕಾರಿ ಸಿ.ಎಸ್ ಚಂದ್ರಮೌಳಿ ಅವರು ಮನವಿ ಮಾಡಿದರು.
ಸಭೆಯಲ್ಲಿ ಗಣ್ಯರಾದ ರಮೇಶ ವೈದ್ಯ, ದತ್ತೂರಾವ್ ದೇಸಾಯಿ, ವಿಜಯಕುಮಾರ, ಅನಿಲ ಪೂಜಾರ, ಬಾಳಪ್ಪ ಪೂಜಾರ, ಬಾಳನಗೌಡ್ರ, ಬಾಳೆಪ್ಪ, ಹುಸೇನಪೀರಾ, ಸುರೇಶ ಕುಮಾರ, ನಿಂಗಪ್ಪ ಟಿ., ಅನಿಲ ಕುಮಾರ ದೇಸಾಯಿ, ಕೃಷ್ಣಪ್ಪ ಕಟ್ಟಿ, ಪ್ರಭುರಾಜ ಪಾಟೀಲ್, ಮಹೇಶ ಹಾಗೂ ವಾರ್ತಾ ಇಲಾಖೆಯ ಎಂ. ಅವಿನಾಶ ಸೇರಿದಂತೆ ಹುಲಿಗಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಕೃಷಿಯ ಉತ್ತೇಜನಕ್ಕೆ ರೈತರ ಆದಾಯ ದ್ವಿಗುಣಗೊಳಿಸುವುದು ಅಗತ್ಯ- ಕರಡಿ ಸಂಗಣ್ಣ


ಕೊಪ್ಪಳ  ಆ. 31 (ಕರ್ನಾಟಕ ವಾರ್ತೆ) : ಸತತ ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ಕೃಷಿ ಚಟುವಟಿಕೆಯನ್ನು ಉತ್ತೇಜಿಸಲು, ರೈತರ ಆದಾಯ ದ್ವಿಗುಣಗೊಳಿಸುವ ಮಾರ್ಗೋಪಾಯ ಕಂಡುಕೊಳ್ಳುವುದು ಅಗತ್ಯವಾಗಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.
     ಕೃಷಿ ಹಾಗೂ ರೈತರ ಕಲ್ಯಾಣ ಮಂತ್ರಾಲಯ, ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೃಷಿ ಇಲಾಖೆ ಇವರ ಸಹಯೋಗದಲ್ಲಿ ಗಂಗಾವತಿ ತಾಲೂಕು ಹೇಮಗುಡ್ಡದ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ‘ಸಂಕಲ್ಪದಿಂದ ಸಿದ್ದಿ’- ರೈತರ ಆದಾಯವನ್ನು ದ್ವಿಗುಣಗೊಳಿಸುವ ಏಳು ಅಂಶಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
     ಹವಾಮಾನ ವೈಪರಿತ್ಯಗಳಿಂದಾಗಿ, ರಾಜ್ಯದಲ್ಲಿ ಪದೇ ಪದೇ ಬರ ಪರಿಸ್ಥಿತಿ ಉಂಟಾಗುತ್ತಿದೆ.  ಸತತ ಬರದಿಂದಾಗಿ ಕೃಷಿ ಕುಂಠಿತಗೊಳ್ಳುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.  ರೈತರ ಆತ್ಮಹತ್ಯೆಯನ್ನು ತಡೆಗಟ್ಟುವುದು ಹಾಗೂ ಕೃಷಿಯನ್ನು ಉತ್ತೇಜಿಸುವ ಸಲುವಾಗಿ, ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಾರ್ಗೋಪಾಯವನ್ನು ಕಂಡುಕೊಳ್ಳುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ.  ಇಲ್ಲದಿದ್ದರೆ, ಯುವ ಪೀಳಿಗೆ ಕೃಷಿಯಿಂದ ವಿಮುಖಗೊಳ್ಳುವ ಅಪಾಯವಿದೆ.  ಈ ದಿಸೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಪ್ರೋತ್ಸಾಹಿಸುವ, ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ.  ಬರುವ 2022 ರ ಒಳಗಾಗಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಏಳು ಅಂಶಗಳ ಕಾರ್ಯಕ್ರಮಗಳಿಗೆ ಕೃಷಿ ಹಾಗೂ ರೈತರ ಕಲ್ಯಾಣ ಮಂತ್ರಾಲಯ, ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೃಷಿ ಇಲಾಖೆ ಇವರ ಸಹಯೋಗದಲ್ಲಿ ಚಾಲನೆ ದೊರೆತಿದೆ.  ನೀರಾವರಿ ಸಂಪನ್ಮೂಲ ಅಭಿವೃದ್ಧಿಪಡಿಸಿ ನೀರಾವರಿ ಕ್ಷೇತ್ರವನ್ನು ಹೆಚ್ಚಿಸುವುದು.  ಸುಧಾರಿತ ಬೀಜ, ಸಸಿಗಳ ಬಳಕೆ, ಸಾವಯವ ಕೃಷಿ ಅಳವಡಿಕೆ ಹಾಗೂ ಮಣ್ಣು ಆರೋಗ್ಯ ಕಾಪಾಡುವ ಮುಖಾಂತರ ಉತ್ಪಾದಕತೆ ಹೆಚ್ಚಿಸುವುದು.  ಕೊಯ್ಲೋತ್ತರ ನಷ್ಟವನ್ನು ಕಡಿಮೆ ಮಾಡಲು ಗೋದಾಮು ಹಾಗೂ ಶೀತಲ ಗೃಹ ಸೌಲಭ್ಯವನ್ನು ಬಲಪಡಿಸುವುದು.  ಆಹಾರ ಸಂಸ್ಕರಣೆಯ ಮುಖಾಂತರ ಕೃಷಿ ಉತ್ಪಾದನೆಯ ಮೌಲ್ಯ ವರ್ಧನೆ ಮಾಡುವುದು.  ವಿದ್ಯುನ್ಮಾನ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಮುಖಾಂತರ ಕೃಷಿ ಮಾರುಕಟ್ಟೆಯ ನೂನ್ಯತೆಗಳನ್ನು ಸರಿಪಡಿಸುವುದು.  ಕೃಷಿ ಕ್ಷೇತ್ರದಲ್ಲಿ ನಷ್ಟವನ್ನು ಕಡಿಮೆ ಮಾಡಲು ಕೃಷಿ ಬೆಳವಣಿಗೆ ಹೆಚ್ಚಿಸಲು ಸಾಂಸ್ಥಿಕ ಸಾಲದ ವ್ಯವಸ್ಥೆ ಬಲಪಡಿಸುವುದು ಹಾಗೂ ಕೃಷಿ ಪೂರಕ ಚಟುವಟಿಕೆಗಳಾದ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಜೇನು ಕೃಷಿ ಹಾಗೂ ಸಮಗ್ರ ಕೃಷಿ ಪದ್ಧತಿಗಳನ್ನು ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಪೂರಕ ಕ್ಷೇತ್ರಗಳನ್ನಾಗಿ ಅಭಿವೃದ್ಧಿಪಡಿಸಬೇಕಿದೆ ಎಂದರು.  ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಗಾಂಧೀಜಿ ಕಂಡಂತಹ ಸ್ವಚ್ಛ ಭಾರತದ ಕನಸನ್ನು ನನಸಾಗಿಸುವತ್ತ ಕೊಪ್ಪಳ ಜಿಲ್ಲೆ ಮುನ್ನಡೆದಿದ್ದು, ಇದರ ಯಶಸ್ಸಿಗೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯವಾಗಿದೆ.  ಜನಧನ ಯೋಜನೆ, ಉಜ್ವಲ ಯೋಜನೆ, ಬೇಟಿ ಪಢಾವೋ-ಬೇಟಿ ಬಚಾವೋ ಯೋಜನೆ ಹೀಗೆ ಅನೇಕ ಜನಪರ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ಇದರ ಸೌಲಭ್ಯ ಜನರಿಗೆ ತಲುಪಿಸುವ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
     ಭಾರತೀಯ ಭೂ ಮತ್ತು ಜಲ ಸಂರಕ್ಷಣಾ ಸಂಸ್ಥೆ ಬಳ್ಳಾರಿಯ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಎಸ್.ಎಲ್. ಪಾಟೀಲ್ ಅವರು ಮಾತನಾಡಿ, ಮಣ್ಣು ಹಾಗೂ ನೀರಿನ ಸಂರಕ್ಷಣೆ ಮಾಡದ ಹೊರತು, ಭವಿಷ್ಯದಲ್ಲಿ ಕೃಷಿ ಉಳಿಗಾಲವಿಲ್ಲ.  ದಕ್ಷಿಣ ಭಾರತದಲ್ಲಿ ಕಳೆದ ಎರಡ್ಮೂರು ವರ್ಷಗಳಿಂದಲೂ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ.  ಇದಕ್ಕೆ ಪ್ರಮುಖ ಕಾರಣ ಅರಣ್ಯದ ನಾಶ ಹಾಗೂ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಹವಾಮಾನ ಬದಲಾವಣೆಯಾಗಿದೆ.  ಒಣ ಭೂಮಿ ರೈತರಷ್ಟೇ ಅಲ್ಲ, ನೀರಾವರಿ ರೈತರೂ ಕೂಡ ಸಂಕಷ್ಟಕ್ಕೆ ಒಳಗಾಗುವಂತಾಗಿದೆ.  ಮಣ್ಣು ಮತ್ತು ನೀರಿನ ಸಂರಕ್ಷಣೆಯನ್ನು ಎಚ್ಚರಿಕೆಯಿಂದ ನಿರ್ವಹಿಸಿದಲ್ಲಿ, ಹನಿ ನೀರಾವರಿ, ಸುಧಾರಿತ ಬಿತ್ತನೆ ಬೀಜ ಬಳಕೆಯಿಂದ ರೈತರು ಉತ್ತಮ ಫಸಲು ಪಡೆಯಲು ಸಾಧ್ಯವಾಗಲಿದೆ.  ರೈತರು ಕೇವಲ ಕೃಷಿಯನ್ನಷ್ಟೇ ಅಲ್ಲದೆ ಹೈನುಗಾರಿಕೆ, ಕೋಳಿ ಸಾಕಾಣಿಕೆಯಂತಹ ಉಪಕಸುಬನ್ನು ಅಳವಡಿಸಿಕೊಂಡಾಗ ಮಾತ್ರ ಆರ್ಥಿಕ ಲಾಭ ಕಂಡುಕೊಳ್ಳಲು ಸಾಧ್ಯ ಎಂದರು.
     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಕೃಷಿ ವಿಶ್ವವಿದ್ಯಾಲಯ ವಿತರಣಾ ನಿರ್ದೇಶಕ ಡಾ. ಎಸ್.ಕೆ. ಮೇಟಿ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಕೆವಿಕೆ ಆವರಣ ಮುಖ್ಯಸ್ಥ ಡಾ. ಬಿ.ಜಿ. ಮಸ್ತಾನ ರೆಡ್ಡಿ, ಕೆವಿಕೆ ಹಿರಿಯ ವಿಜ್ಞಾನಿ ಡಾ. ರೂಪಶ್ರೀ, ಜಂಟಿಕೃಷಿ ನಿರ್ದೇಶಕ ವೀರೇಶ್ ಹುನಗುಂದ, ತಾ.ಪಂ. ಸದಸ್ಯೆ ಗೀತಾ ಪೊಲೀಸ್ ಪಾಟೀಲ್, ಗ್ರಾ.ಪಂ. ಅಧ್ಯಕ್ಷ ಅಮರೇಶ, ಸೇರಿದಂತೆ ಚನ್ನಪ್ಪ ಮಾಳಗಿ, ಹೇಮಾವತಿ ಲಂಕೇಶ, ಡಾ. ಎಂ. ಶೇಖರಗೌಡ, ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.  2022 ರೊಳಗೆ ನವಭಾರತ ನಿರ್ಮಾಣ ಹಾಗೂ ರೈತರ ಆದಾಯ ದ್ವಿಗುಣಗೊಳಿಸುವುದರ ಕುರಿತು ಇದೇ ಸಂದರ್ಭದಲ್ಲಿ ರೈತರು, ಗಣ್ಯರಿಂದ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.  ಹಾಗೂ ಸುಸ್ಥಿರ ಕೃಷಿಗಾಗಿ ರೈತರಲ್ಲಿ ಜಾಗೃತಿ ಮೂಡಿಸುವದರ ಕುರಿತ ಮಡಿಕೆ ಪತ್ರಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಸೆ. 03 ರಿಂದ ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟ : ಹೆಸರು ನೊಂದಾಯಿಸಲು ಸೂಚನೆ


ಕೊಪ್ಪಳ ಆ. 31 (ಕರ್ನಾಟಕ ವಾರ್ತೆ): ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಕೊಪ್ಪಳ ಜಿಲ್ಲಾ ದಸರಾ ಕ್ರೀಡಾ ಕೂಟ ಸೆ. 03 ಮತ್ತು 04 ರಂದು ಎರಡು ದಿನಗಳ ನಡೆಯಲಿದ್ದ್ದು, ಭಾಗವಹಿಸುವ ಸ್ಪರ್ಧಾಳುಗಳು ಕಡ್ಡಾಯವಾಗಿ ಆಧಾರ ಕಾರ್ಡ ಝರಾಕ್ಸ್ ಪ್ರತಿಯೊಂದಿಗೆ ತಮ್ಮ ಹೆಸರುಗಳನ್ನು ಸ್ಪರ್ಧೆಗಳೊಂದಿಗೆ ನೊಂದಾಯಿಸಿಕೊಳ್ಳಲು ಸೂಚನೆ ನೀಡಲಾಗಿದೆ.
ಕೊಪ್ಪಳ ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟವನ್ನು ಸೆ. 03 & 04 ರಂದು ಬೆಳಿಗ್ಗೆ 09-30 ಗಂಟೆಗೆ ಮಳೆಮಲ್ಲೇಶ್ವರ ದೇವಸ್ಥಾನ ರಸ್ತೆಯ ಜಿಲ್ಲಾ ಕ್ರೀಣಾಂಗಣದಲ್ಲಿ ಆಯೋಜಿಸಲಾಗಿದ್ದು, ತಾಲೂಕ ಮಟ್ಟದಲ್ಲಿ ಭಾಗವಹಿಸಿ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿರುವವರು ಮಾತ್ರ  ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.  ತಾಲೂಕು ಮಟ್ಟದ ಸಂಘಟನೆಯಲ್ಲಿ ಏರ್ಪಡಿಸಿದ ಸ್ಪರ್ಧೆಗಳನ್ನು ಮಾತ್ರ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು.  ತಾಲೂಕು ಮಟ್ಟದಲ್ಲಿ ಸಂಘಟನೆ ಮಾಡುವ ಕ್ರೀಡೆಗಳನ್ನು ಜಿಲ್ಲಾ ಮಟ್ಟದಲ್ಲಿ ನೇರವಾಗಿ ಸೌಲಭ್ಯಗಳು ಇರುವ ಕ್ರೀಡೆಗಳನ್ನು ಸಂಘಟಿಸಿ ವಿಭಾಗ ಮಟ್ಟಕ್ಕೆ ಕಳುಹಿಸಲಾಗುವುದು.  ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದ್ದು, ವಿವರ ಇಂತಿದೆ.
ಪುರುಷರ ವಿಭಾಗ :
*********** ಅಥ್ಲೆಟಿಕ್ಸ್‍ನಲ್ಲಿ 100, 200, 400, 800, 1500 & 5000 ಮೀ, ಓಟ, ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಭಲ್ಲೆ ಎಸೆತ, 110 ಮೀ ಹರ್ಡಲ್ಸ್, 4*100 ಮೀ ಹಾಗೂ 4*400 ಮೀ ರಿಲೇ.  ಗುಂಪು ಆಟಗಳಲ್ಲಿ ವ್ಹಾಲಿಬಾಲ್, ಕಬಡ್ಡಿ, ಖೋಖೋ, ಷಟಲ್ ಬ್ಯಾಡ್ಮಿಂಟನ್, ಬಾಸ್ಕೆಟ್‍ಬಾಲ್, ಹ್ಯಾಂಡ್‍ಬಾಲ್, ಟೇಬಲ್ ಟೆನ್ನಿಸ್, ಲಾನ್ ಟೆನ್ನಿಸ್, ಫುಟ್ಬಾಲ್, ಬಾಲ್ ಬ್ಯಾಡ್ಮಿಂಟನ್, ಥ್ರೋಬಾಲ್ ಹಾಗೂ ನೆಟ್‍ಬಾಲ್. 
ಮಹಿಳಾ ವಿಭಾಗ :
***********  ಅಥ್ಲೆಟಿಕ್ಸ್‍ನಲ್ಲಿ   100, 200, 400, 800, 1500 & 3000 ಮೀ, ಓಟ, ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಭಲ್ಲೇ ಎಸೆತ, 100 ಮೀ ಹರ್ಡಲ್ಸ್, 4*100 ಮೀ ಹಾಗೂ 4*400 ಮೀ ರಿಲೇ.  ಗುಂಪು ಆಟಗಳಲ್ಲಿ ವ್ಹಾಲಿಬಾಲ್ ಕಬಡ್ಡಿ, ಖೋಖೋ, ಬಾಸ್ಕೆಟ್‍ಬಾಲ್, ಷಟಲ್ ಬ್ಯಾಡ್ಮಿಂಟನ್, ಹ್ಯಾಂಡ್‍ಬಾಲ್, ಟೇಬಲ್‍ಟೆನ್ನಿಸ್, ಲಾನ್ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್ ಹಾಗೂ ನೆಟ್‍ಬಾಲ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
     ಕೊಪ್ಪಳ ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಾಳುಗಳು ಸೆ. 03 ರಂದು ಬೆಳಿಗ್ಗೆ 09-00 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಜರಾಗಿ ಕಡ್ಡಾಯವಾಗಿ ಆಧಾರ ಕಾರ್ಡ ಝರಾಕ್ಸ್ ಪ್ರತಿಯೊಂದಿಗೆ ತಮ್ಮ ಹೆಸರುಗಳನ್ನು ಸ್ಪರ್ಧೆಗಳೊಂದಿಗೆ ನೊಂದಾಯಿಸಿಕೊಳ್ಳಬೇಕು.  ವಿವಿಧ ತಾಲೂಕುಗಳಿಂದ ಬಂದ ಕ್ರೀಡಾ ಸ್ಪರ್ಧಾಳುಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುವುದು.  ಹಾಗೂ ಆಯಾ ತಾಲೂಕ ಕೇಂದ್ರ ಸ್ಥಾನದಿಂದ ಕೊಪ್ಪಳಕ್ಕೆ ಬಂದು ಹೋಗುವ ಸಾಮಾನ್ಯ ಬಸ್ ದರದ ಪ್ರಯಾಣ ಭತ್ಯೆಯನ್ನು ನೀಡಲಾಗುವುದು. 
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರ ಮೊ. ಸಂಖ್ಯೆ 9482404848, ಹಾಗೂ ವೀರಭದ್ರಯ್ಯ ದೈಶಿ. ಮೊ. ಸಂಖ್ಯೆ 9008949603, ತಾಲೂಕ ಯುವ ಸಬಲೀಕರಣ ಕ್ರೀಡಾಧಿಕಾರಿಗಳಾದ ಗಂಗಾವತಿ – 7975189364, ಕುಷ್ಟಗಿ – 9945501033, ಯಲಬುರ್ಗಾ – 8970288857 ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Wednesday, 30 August 2017

ಸಂಕಲ್ಪದಿಂದ ಸಿದ್ಧಿ- ರೈತರ ಆದಾಯ ದ್ವಿಗುಣಗೊಳಿಸುವ ಜಾಗೃತಿ ಕಾರ್ಯಕ್ರಮ


ಕೊಪ್ಪಳ  ಆ. 30 (ಕರ್ನಾಟಕ ವಾರ್ತೆ) : ಕೃಷಿ ಹಾಗೂ ರೈತರ ಕಲ್ಯಾಣ ಮಂತ್ರಾಲಯ, ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೃಷಿ ಇಲಾಖೆ ಇವರ ಸಹಯೋಗದಲ್ಲಿ ‘ಸಂಕಲ್ಪದಿಂದ ಸಿದ್ದಿ’ ರೈತರ ಆದಾಯವನ್ನು ದ್ವಿಗುಣಗೊಳಿಸುವ ಏಳು ಅಂಶಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಮಾರಂಭ ಆ. 31 ರಂದು ಗಂಗಾವತಿ ತಾಲೂಕು ಹೇಮಗುಡ್ಡದ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ನಡೆಯಲಿದೆ.
     ಸಂಸದ ಕರಡಿ ಸಂಗಣ್ಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ತಜ್ಞರ ಭಾಷಣವನ್ನು ಭಾರತೀಯ ಭೂ ಮತ್ತು ಜಲ ಸಂರಕ್ಷಣಾ ಸಂಸ್ಥೆ ಸಂಶೋಧನಾ ಕೇಂದ್ರ ಬಳ್ಳಾರಿಯ ಮುಖ್ಯಸ್ಥ ಡಾ. ಎಸ್.ಎಲ್. ಪಾಟೀಲ್ ಅವರು ನೆರವೇರಿಸುವರು.  ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ಅಧ್ಯಕ್ಷತೆ ವಹಿಸಲಿದ್ದು, ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ್, ಶಾಸಕರುಗಳಾದ ಶಿವರಾಜ ತಂಗಡಗಿ, ದೊಡ್ಡನಗೌಡ ಪಾಟೀಲ್, ರಾಘವೇಂದ್ರ ಹಿಟ್ನಾಳ್, ವಿಧಾನಪರಿಷತ್ ಸದಸ್ಯರುಗಳಾದ ಶರಣಪ್ಪ ಮಟ್ಟೂರ, ಅಮರನಾಥ ಪಾಟೀಲ್, ಬಸವರಾಜ ಪಾಟೀಲ್ ಇಟಗಿ, ರಾಯಚೂರು ಕೃಷಿ ವಿವಿ ಕುಲಪತಿ ಡಾ. ಪಿ.ಎಂ. ಸಾಲಿಮಠ, ಜಿ.ಪಂ. ಉಪಾಧ್ಯಕ್ಷೆ ಲಕ್ಮಮ್ಮ ನೀರಲೂಟಿ, ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಎಸ್.ಕೆ. ಮೇಟಿ, ತಾ.ಪಂ. ಅಧ್ಯಕ್ಷ ಬಸವಂತಗೌಡ ಪೊಲೀಸ್ ಪಾಟೀಲ್, ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮಣ್ಣ ಅಗಸಿಮುಂದಿನ, ತಾ.ಪಂ. ಸದಸ್ಯೆ ಗೀತಾ ಪೊಲೀಸ್ ಪಾಟೀಲ್, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ಶಿವಣ್ಣ ಮೂಲಿಮನಿ, ಚಿಕ್ಕಬೆಣಕಲ್ ಗ್ರಾ.ಪಂ. ಅಧ್ಯಕ್ಷ ಅಮರೇಶ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಚನ್ನಪ್ಪ ಮಾಳಗಿ ಸೇರಿದಂತೆ ಹಲವು ಗಣ್ಯರು, ಉನ್ನತ ಅಧಿಕಾರಿಗಳು ಪಾಲ್ಗೊಳ್ಳುವರು.
     ರೈತರ ಆದಾಯವನ್ನು 2022 ರೊಳಗೆ ದ್ವಿಗುಣಗೊಳಿಸುವ ಏಳು ಅಂಶಗಳ ಕಾರ್ಯಕ್ರಮಗಳನ್ನು ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯ ಸಿದ್ಧಪಡಿಸಿದ್ದು, ವಿವರ ಇಂತಿದೆ.  ನೀರಾವರಿ ಸಂಪನ್ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ನೀರಾವರಿ ಕ್ಷೇತ್ರವನ್ನು ಹೆಚ್ಚಿಸುವುದು.  ಸುಧಾರಿತ ಬೀಜ, ಸಸಿಗಳ ಬಳಕೆ, ಸಾವಯವ ಕೃಷಿ ಅಳವಡಿಕೆ ಹಾಗೂ ಮಣ್ಣು ಆರೋಗ್ಯ ಕಾಪಾಡುವ ಮುಖಾಂತರ ಉತ್ಪಾದಕತೆ ಹೆಚ್ಚಿಸುವುದು.  ಕೊಯ್ಲೋತ್ತರ ನಷ್ಟವನ್ನು ಕಡಿಮೆ ಮಾಡಲು ಗೋದಾಮು ಹಾಗೂ ಶೀತಲ ಗೃಹ ಸೌಲಭ್ಯವನ್ನು ಬಲಪಡಿಸುವುದು.  ಆಹಾರ ಸಂಸ್ಕರಣೆಯ ಮುಖಾಂತರ ಕೃಷಿ ಉತ್ಪಾದನೆಯ ಮೌಲ್ಯ ವರ್ಧನೆ ಮಾಡುವುದು.  ವಿದ್ಯುನ್ಮಾನ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಮುಖಾಂತರ ಕೃಷಿ ಮಾರುಕಟ್ಟೆಯ ನೂನ್ಯತೆಗಳನ್ನು ಸರಿಪಡಿಸುವುದು.  ಕೃಷಿ ಕ್ಷೇತ್ರದಲ್ಲಿ ನಷ್ಟವನ್ನು ಕಡಿಮೆ ಮಾಡಲು ಕೃಷಿ ಬೆಳವಣಿಗೆ ಹೆಚ್ಚಿಸಲು ಸಾಂಸ್ಥಿಕ ಸಾಲದ ವ್ಯವಸ್ಥೆ ಬಲಪಡಿಸುವುದು ಹಾಗೂ ಕೃಷಿ ಪೂರಕ ಚಟುವಟಿಕೆಗಳಾದ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಜೇನು ಕೃಷಿ, ಮೀನುಗಾರಿಕೆ, ಕೃಷಿ ಅರಣ್ಯ ಹಾಗೂ ಸಮಗ್ರ ಕೃಷಿ ಪದ್ಧತಿಗಳನ್ನು ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಪೂರಕ ಕ್ಷೇತ್ರಗಳನ್ನಾಗಿ ಅಭಿವೃದ್ಧಿಪಡಿಸುವುದು.  ಇಂತಹ ಮಹತ್ವದ ವಿಷಯಗಳ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥೆ ಡಾ. ರೂಪಶ್ರೀ ಡಿ.ಹೆಚ್. ತಿಳಿಸಿದ್ದಾರೆ.

ಗಂಗಾವತಿ: ವಿದ್ಯಾರ್ಥಿ ವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ


ಕೊಪ್ಪಳ ಆ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಪಂಗಡದ 9 ಮತ್ತು 10ನೇ ತರಗತಿ ಹಾಗೂ ಮೆಟ್ರಿಕ್ ನಂತರದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.  
ಅರ್ಜಿ ಸಲ್ಲಿಸಲು ಗಂಗಾವತಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸರಕಾರಿ/ ಅನುದಾನಿತ/ ಅನುದಾನ ರಹಿತ ಶಾಲೆ/ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ಪರಿಶಿಷ್ಟ ಪಂಗಡದ 9 ಮತ್ತು 10ನೇ ತರಗತಿ ಹಾಗೂ ಮೆಟ್ರಿಕ್ ನಂತರದ ಹೊಸ ವಿದ್ಯಾರ್ಥಿಗಳು ಅಥವಾ ನವೀಕರಣ (ಪ್ರೇಶ್ & ರೀನೆವಲ್) ವಿದ್ಯಾರ್ಥಿಗಳಾಗಿರಬೇಕು.  ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಆಧಾರ ಕಾರ್ಡ ಸಂಖ್ಯೆಯನ್ನು ಬ್ಯಾಂಕಿನ ಉಳಿತಾಯ ಖಾತೆಗೆ ಜೋಡಣೆ ಮಾಡಿಕೊಳ್ಳಬೇಕು.  ಅರ್ಜಿಯನ್ನು ವೆಬ್‍ಸೈಟ್  www.scholarships.gov.in ನಲ್ಲಿ ಸೆಪ್ಟೆಂಬರ್. 25 ರೊಳಗಾಗಿ ಆನ್‍ಲೈನ್ ಮೂಲಕ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ 08533-270187 ಕ್ಕೆ ಸಂಪರ್ಕಿಸಬಹುದು ಎಂದು ಗಂಗಾವತಿ ತಾಲೂಕ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿ : ಅರ್ಜಿ ಆಹ್ವಾನ


ಕೊಪ್ಪಳ ಆ. 30 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. 
    ಕೊಪ್ಪಳ ಜಿಲ್ಲೆಯಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6 ರಿಂದ 8ನೇ ತರಗತಿಗಳ) ಹುದ್ದೆಗಳಿಗೆ ಪ್ರಸಕ್ತ ಸಾಲಿನ ನೇಮಕಾತಿಯಲ್ಲಿ ಸಮಾಜ ಪಾಠಗಳು ವಿಷಯದಲ್ಲಿ ಸ್ಥಳೀಯ ವೃಂದಕ್ಕೆ (ಹೈದ್ರಾಬಾದ್ ಕರ್ನಾಟಕ) - 76 ಹಾಗೂ ಉಳಿದ ಮೂಲ ವೃಂದಕ್ಕೆ (ನಾನ್ ಹೈದ್ರಾಬಾದ್ ಕರ್ನಾಟಕ) - 20, ಗಣಿತ ವಿಜ್ಞಾನ ವಿಷಯದಲ್ಲಿ ಸ್ಥಳೀಯ ವೃಂದಕ್ಕೆ (ಹೈದ್ರಾಬಾದ್ ಕರ್ನಾಟಕ) – 225 ಹಾಗೂ ಉಳಿದ ಮೂಲ ವೃಂದಕ್ಕೆ (ನಾನ್ ಹೈದ್ರಾಬಾದ್ ಕರ್ನಾಟಕ) - 59, ಭಾಷೆ ಆಂಗ್ಲ ವಿಷಯದಲ್ಲಿ ಸ್ಥಳೀಯ ವೃಂದಕ್ಕೆ (ಹೈದ್ರಾಬಾದ್ ಕರ್ನಾಟಕ) – 222 ಹಾಗೂ ಉಳಿದ ಮೂಲ ವೃಂದಕ್ಕೆ (ನಾನ್ ಹೈದ್ರಾಬಾದ್ ಕರ್ನಾಟಕ) – 56, ಸೇರಿದಂತೆ ಸ್ಥಳೀಯ ವೃಂದದಲ್ಲಿ ಒಟ್ಟು 523 ಹುದ್ದೆ ಹಾಗೂ ಉಳಿದ ಮೂಲ ವೃಂದಗಳಲ್ಲಿ 133 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು.
    ಅರ್ಜಿಗಳನ್ನು ಆನ್‍ಲೈನ್ ಮೂಲಕ  ಸಲ್ಲಿಸಲು ಸೆಪ್ಟೆಂಬರ್. 25 ಕೊನೆಯ ದಿನವಾಗಿದ್ದು, ಖುದ್ದು ಮತ್ತು ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ಇರುವುದಿಲ್ಲ.  ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್‍ಸೈಟ್  schooleducation.kar.nic.in ನ್ನು ಅಥವಾ ಉಪನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೂ ವಿಶ್ವಕರ್ಮ ಜಯಂತಿ : ಪೂರ್ವಭಾವಿ ಸಭೆ


ಕೊಪ್ಪಳ ಆ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಸೆ. 06 ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯುಂತಿ ಹಾಗೂ ಸೆ. 17 ರಂದು ವಿಶ್ವಕರ್ಮ ಜಯಂತಿ ಆಚರಣೆ ಕುರಿತಂತೆ ಸಿದ್ಧತೆಗಳನ್ನು ಕೈಗೊಳ್ಳಲು ಪೂರ್ವಭಾವಿ ಸಭೆ ಸೆ. 01 ರಂದು ಪೂರ್ವಭಾವಿ ಸಭೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕುರಿತ ಪೂರ್ವಭಾವಿ ಸಭೆ ಸೆ. 01 ರಂದು ಮಧ್ಯಾಹ್ನ 03 ಗಂಟೆಗೆ. ಹಾಗೂ ವಿಶ್ವಕರ್ಮ ಜಯಂತಿ ಕುರಿತು ಪೂರ್ವಭಾವಿ ಸಭೆ ಸೆ. 01 ರಂದು ಮಧ್ಯಾಹ್ನ 03-30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಲಿದೆ. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಹಿಸುವರು. ಸಭೆಗೆ ಎಲ್ಲ ಸಮಾಜದ ಮುಖಂಡರು ಆಗಮಿಸಿ, ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಆ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಸೆ. 01 ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಮಂತ್ರಿಗಳು ಅಂದು ಬೆಳಿಗ್ಗೆ 8 ಗಂಟೆಗೆ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಕೊಪ್ಪಳಕ್ಕೆ ಆಗಮಿಸುವರು.  ನಂತರ ಸೆ. 22 ರಂದು ಮುಖ್ಯಮಂತ್ರಿಗಳು ಕೊಪ್ಪಳ ಜಿಲ್ಲೆಯಲ್ಲಿ ಕೈಗೊಳ್ಳಲಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ/ಉದ್ಘಾಟನೆ ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸುವರು.  ನಂತರ ಮುಖ್ಯಮಂತ್ರಿಗಳ ಕಾರ್ಯಕ್ರಮ ಕುರಿತಂತೆ ಮಧ್ಯಾಹ್ನ 12 ಗಂಟೆಗೆ ಕೊಪ್ಪಳದಲ್ಲಿ ಅಧಿಕಾರಿಗಳೊಂದಿಗೆ ಸಿದ್ಧತಾ ಸಭೆ ನಡೆಸುವರು.  ಮಧ್ಯಾಹ್ನ 03 ಗಂಟೆಗೆ ಯಲಬುರ್ಗಾಕ್ಕೆ ತೆರಳಿ, ಸಂಜೆ 6 ಗಂಟೆಗೆ ಧಾರವಾಡ ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

ಮುನಿರಾಬಾದ್‍ನಲ್ಲಿ ನುಗ್ಗೆ, ಕರಿಬೇವು ಸಸಿ ಹಾಗೂ ಈರುಳ್ಳಿ ಬೀಜ ಲಭ್ಯ


ಕೊಪ್ಪಳ ಆ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಮುನಿರಾಬಾದ್‍ನಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಉತ್ತಮ ಗುಣಮಟ್ಟದ ನುಗ್ಗೆ ಸಸಿಗಳು (ಭಾಗ್ಯ ತಳಿ), ಕರಿಬೇವು ಸಸಿಗಳು (ಸುವಾಸಿನಿ ತಳಿ) ಮತ್ತು ಈರುಳ್ಳಿ ಬಿತ್ತನೆ ಬೀಜ (ಆರ್ಕ ಕಲ್ಯಾಣ ತಳಿ) ಮಾರಾಟಕ್ಕೆ ಲಭ್ಯವಿರುತ್ತವೆ.
     ಆಸಕ್ತ ರೈತರು ಸಸಿಗಳನ್ನು ಖರೀದಿಸಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂ: 9741641881 ಕ್ಕೆ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಕನೂರು ಸರ್ಕಾರಿ ಐಟಿಐ ನಲ್ಲಿ ಸೆ. 05 ರಂದು ಉದ್ಯೋಗಕ್ಕಾಗಿ ಸಂದರ್ಶನ


ಕೊಪ್ಪಳ ಆ. 30 (ಕರ್ನಾಟಕ ವಾರ್ತೆ): ಬೆಂಗಳೂರಿನ ‘ಉತ್ತೇಜನ ಫೌಂಡೇಷನ್’ ಅವರ ವತಿಯಿಂದ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗ ಹಾಗೂ ಅಪ್ರೆಂಟಿಸ್ ತರಬೇತಿಗಾಗಿ ಸಂದರ್ಶನವನ್ನು ಸೆ. 05 ರಂದು ಬೆಳಿಗ್ಗೆ 10 ಗಂಟೆಗೆ ಯಲಬುರ್ಗಾ ತಾಲೂಕು ಕುಕನೂರು ಗುದ್ನೆಪ್ಪನಮಠ ಬಳಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಲಾಗಿದೆ.
     ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್ ಮತ್ತು ವೆಲ್ಡರ್ ವಿಷಯದಲ್ಲಿ ಐಟಿಐ ತರಬೇತಿ ಹೊಂದಿರುವ ಅಭ್ಯರ್ಥಿಗಳು, ಎಸ್‍ಎಸ್‍ಎಲ್‍ಸಿ, ಪಿಯುಸಿ, ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿದವರೂ ಕೂಡ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.  ವಯೋಮಿತಿ 18 ರಿಂದ 24 ವರ್ಷಗಳು.  ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.  ಅಭ್ಯರ್ಥಿಗಳು ವಿದ್ಯಾರ್ಹತೆಯ ಪ್ರಮಾಣಪತ್ರ ಹಾಗೂ ಅಂಕಪಟ್ಟಿಯ ಜೆರಾಕ್ಸ್ ಪ್ರತಿಗಳು ಹಾಗೂ ಭಾವಚಿತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.  ಹೆಚ್ಚಿನ ಮಾಹಿತಿಗೆ 9449517426 ಕ್ಕೆ ಸಂಪರ್ಕಿಸಬಹುದು ಎಂದು ಕುಕನೂರು ಸರ್ಕಾರಿ ಐಟಿಐ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪ್ಪ ರೈತನಾದರೆ ಮಕ್ಕಳು ರೈತೋದ್ಯಮಿಯಾಗಬೇಕು- ಡಾ. ಎಂ.ಬಿ. ಪಾಟೀಲ


ಕೊಪ್ಪಳ ಆ. 30 (ಕರ್ನಾಟಕ ವಾರ್ತೆ): ರೈತರ ಕುಟುಂಬದಲ್ಲಿನ ಅಪ್ಪ, ಅಮ್ಮ ರೈತರಾಗಿದ್ದರೆ, ಅವರ ಮಕ್ಕಳು ಹೆಚ್ಚಿನ ಆರ್ಥಿಕ ಭದ್ರತೆ ತರುವ ರೀತಿಯಲ್ಲಿ ರೈತೋದ್ಯಮಿಗಳಾಗಿ ಬೆಳೆಯಬೇಕು ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಲ ಡಾ. ಎಂ.ಬಿ. ಪಾಟೀಲ್ ಅವರು ಕರೆ ನೀಡಿದರು.
     ಕೃಷಿ ಇಲಾಖೆ, ಯಲಬುರ್ಗಾ ಇವರ ವತಿಯಿಂದ ಪ್ರಸಕ್ತ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಯೋಜನೆಯಡಿ ಯಲಬುರ್ಗಾ ತಾಲೂಕು ಯಡಿಯಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಮುಂಗಾರು ಹಂಗಾಮಿನಲ್ಲಿ ತೊಗರಿಬೆಳೆ ಪ್ರಾತ್ಯಕ್ಷಿಕೆ ತಾಕಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
     ರೈತ ಕುಟುಂಬದಲ್ಲಿ ಅಪ್ಪ / ಅಮ್ಮ ರೈತರಾಗಿದ್ದರೆ, ಅವರ ಮಕ್ಕಳು, ಕೃಷಿಯಲ್ಲಿಯೇ ಆರ್ಥಿಕ ಭದ್ರತೆ ಹಾಗೂ ಲಾಭದಾಯಕವನ್ನಾಗಿಸುವ ರೈತೋದ್ಯಮಿಗಳಾಗಬೇಕು.  ಗ್ರಾಮೀಣ ಯುವಕರು ಸೋಮಾರಿಗಳಾಗದೆ ಮನೆತನ ಕುಲಕಸುಬಾದ ವ್ಯವಸಾಯದಲ್ಲಿ ಆಗುತ್ತಿರುವ ಹೊಸ ಹೊಸ ಬೆಳವಣಿಗೆಗಳು, ಮೌಲ್ಯವರ್ಧನ ಕೃಷಿಯತ್ತ ಚಿಂತನೆ ನಡೆಸಿ, ಸಕ್ರಿಯಗೊಳ್ಳಬೇಕು.  ಅಂದರೆ ಮಾತ್ರ ಕೃಷಿ ಉಳಿಯುತ್ತದೆ ಎಂದು ಹೇಳಿದರು. 
     ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಯೋಜನೆಯ ಜಿಲ್ಲಾ ಸಂಚಾಲಕ ಎಸ್.ಬಿ. ಕೋಣಿ, ಕೃಷಿ ಅಧಿಕಾರಿಗಳು, ಗ್ರಾಮ ಪಂಚಾಯತ ಸದಸ್ಯರು ಭಾಗವಹಿಸಿದ್ದರು.

ಪತ್ರಿಕೋದ್ಯಮ ಅಭ್ಯರ್ಥಿಗಳಿಗೆ ತರಬೇತಿ : ಅರ್ಜಿ ಸಲ್ಲಿಕೆಗೆ ಸೆ. 04 ಕೊನೆಯ ದಿನ


ಕೊಪ್ಪಳ ಆ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸಕ್ತ ಸಾಲಿನ ಎಸ್‍ಸಿಎಸ್‍ಪಿ ವಿಶೇಷ ಘಟಕ ಯೋಜನೆಯಡಿ ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಸೆ. 04 ಕೊನೆಯ ದಿನವಾಗಿದೆ.
        ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಇಬ್ಬರು ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.  ಅಪ್ರೆಂಟಿಸ್ ತರಬೇತಿ ಅವಧಿಯು 2017 ರ ಸೆಪ್ಟಂಬರ್ ನಿಂದ 2018 ರ ಮಾರ್ಚ್ ವರೆಗೆ 07 ತಿಂಗಳ ಅವಧಿಯದಾಗಿರುತ್ತದೆ.  ಈ ಅವಧಿಗೆ ಪ್ರತಿ ಅಭ್ಯರ್ಥಿಗೆ ಮಾಹೆಯಾನ ರೂ. 20000 ರೂ. ಸ್ಟೈಫೆಂಡ್ ನೀಡಲಾಗುವುದು.  ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.   ಕನ್ನಡ ಭಾಷೆಯ ಹಾಗೂ ಗಣಕ ಯಂತ್ರದ ಜ್ಞಾನ ಹೊಂದಿರಬೇಕು.  ವಯೋಮಿತಿ 22 ರಿಂದ 38 ವರ್ಷಗಳಾಗಿದ್ದು, ಇತರೆ ಯಾವುದೇ ಉದ್ಯೋಗದಲ್ಲಿ ತೊಡಗಿರಬಾರದು. ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.  ಸ್ವೀಕೃತ ಅರ್ಜಿಗಳನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯು ಪರಿಶೀಲಿಸಿ, ಮೆರಿಟ್ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಲಿದೆ.  ನಿಗದಿತ ಅರ್ಜಿ ನಮೂನೆಯನ್ನು ಕೊಪ್ಪಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಉಚಿತವಾಗಿ ಪಡೆಯಬಹುದಾಗಿದೆ.   ಅರ್ಹ ಅಭ್ಯರ್ಥಿಗಳು ತಮ್ಮ ಪೂರ್ಣ ವಿವರದೊಂದಿಗೆ, ಜಾತಿ ಪ್ರಮಾಣ ಪತ್ರ, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಪದವಿ ಅಥವಾ ಸ್ನಾತಕೋತ್ತರ ಪದವಿ ಅಂಕಪಟ್ಟಿ, ಗಣಕಯಂತ್ರದ ಸಾಮಾನ್ಯ ತರಬೇತಿ ಪ್ರಮಾಣ ಪತ್ರ, ಇತ್ತೀಚಿನ ಎರಡು ಭಾವಚಿತ್ರವನ್ನು ಲಗತ್ತಿಸಿ, ದ್ವಿ-ಪ್ರತಿಯಲ್ಲಿ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಗೆ ಸೆ. 04 ರ ಒಳಗಾಗಿ ಸಲ್ಲಿಸಬೇಕು.  ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂ: 08539-220607 ಕ್ಕೆ ಸಂಪರ್ಕಿಸಬಹುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಪ್ಲೋಮಾದಲ್ಲಿ ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಕೊನೆಯ ಅವಕಾಶ


ಕೊಪ್ಪಳ ಆ. 30 (ಕರ್ನಾಟಕ ವಾರ್ತೆ): ಪಾಲಿಟೆಕ್ನಿಕ್‍ನಲ್ಲಿ 2009-10 ನೇ ಸಾಲಿನಲ್ಲಿ ಸಿ-09 ಪಠ್ಯಕ್ರಮದಲ್ಲಿ ಪ್ರವೇಶ ಪಡೆದ ಡಿಪ್ಲೋಮಾ ವಿದ್ಯಾರ್ಥಿಗಳು, ಬಾಕಿ ಉಳಿಸಿಕೊಂಡಿದ್ದಲ್ಲಿ, ಅಂತಹ ವಿದ್ಯಾರ್ಥಿಗಳಿಗೆ 2018 ರ ಏಪ್ರಿಲ್/ಮೇ ನಲ್ಲಿ ನಡೆಯುವ ಸೆಮಿಸ್ಟರ್ ಪರೀಕ್ಷೆಯೇ ಕೊನೆಯ ಅವಕಾಶವಿರುತ್ತದೆ.  ನಂತರ ಡಿಪ್ಲೋಮಾ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿರುವುದಿಲ್ಲವೆಂದು ಕೊಪ್ಪಳದ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯರು ತಿಳಿಸಿದ್ದಾರೆ.
     2003 ರಲ್ಲಿ ಅಳವಡಿಸಲಾಗಿದ್ದ ಸಿ-03 ಡಿಪ್ಲೋಮಾ ಸೆಮಿಸ್ಟರ್ ಪಠ್ಯಕ್ರಮದ ಸಿ-09 ಮತ್ತು ಸಿ-15 ಪಠ್ಯಕ್ರಮದಲ್ಲಿ ಸಮಾನತೆ/ಪರ್ಯಾಯ ಇಲ್ಲದಿರುವ ಎಲ್ಲ ಸೆಮಿಸ್ಟರ್ ವಿಷಯಗಳಿಗೆ 2017 ರ ನವೆಂಬರ್/ಡಿಸೆಂಬರ್ ಪರೀಕ್ಷೆಯೇ ಕೊನೆಯ ಅವಕಾಶವಾಗಿರುತ್ತದೆ.  ನಂತರ ಮುಂದಿನ ಡಿಪ್ಲೋಮಾ ಪರೀಕ್ಷೆಗಳಿಗೆ ಹಾಜರಾಗಲು ಅನುಮತಿ ಇರುವುದಿಲ್ಲ ಎಂದು ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tuesday, 29 August 2017

ಹುಲಿಗೆಮ್ಮ ದೇವಿ ದಸರಾ ಮಹೋತ್ಸವ : ಆ. 30 ರಂದು ಪೂರ್ವಭಾವಿ ಸಭೆ


ಕೊಪ್ಪಳ  ಆ. 29 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ  2017ನೇ ಸಾಲಿನ ದಸರಾ ಮಹೋತ್ಸವ ಆಚರಣೆ ಸಂಬಂಧ ಸಿದ್ಧತೆಗಳನ್ನು ಕೈಗೊಳ್ಳಲು ಪೂರ್ವಭಾವಿ ಸಭೆ ಆ. 30 ರಂದು ಸಂಜೆ 04 ಗಂಟೆಗೆ ಹುಲಿಗಿಯ ದೇವಸ್ಥಾನದ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
        ಹುಲಿಗೆಮ್ಮ ದೇವಿ ದಸರಾ ಮಹೋತ್ಸವ ಆಚರಣೆ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಿದ್ಧತೆಗಳ  ಬಗ್ಗೆ  ಚರ್ಚಿಸಲು  ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳೊಂದಿಗೆ ಪೂರ್ವಭಾವಿ ಸಭೆಯನ್ನು ಆ. 30 ರಂದು ಸಂಜೆ 04 ಗಂಟೆಗೆ ದೇವಸ್ಥಾನದ ಕಚೇರಿ ಮೇಲ್ಭಾಗದ ಸಭಾಂಗಣದಲ್ಲಿ ನಡೆಯಲಿದೆ.  ಸಾರ್ವಜನಿಕರು, ಭಕ್ತಾದಿಗಳು, ಜನಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡು ದಸರಾ ಮಹೋತ್ಸವ ಆಚರಣೆ ಕುರಿತಂತೆ ತಮ್ಮ ಅತ್ಯಮೂಲ್ಯವಾದ  ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 01 ರಿಂದ ತುಂಗಭದ್ರಾ ಕಾಲುವೆಗಳಿಗೆ ನೀರು


ಕೊಪ್ಪಳ ಆ. 29 (ಕರ್ನಾಟಕ ವಾರ್ತೆ): ತುಂಗಭದ್ರಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಸೆ. 01 ರಿಂದ ನೀರು ಹರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು  ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ತಿಳಿಸಿದ್ದಾರೆ.
     ಬೆಂಗಳೂರಿನ ವಿಧಾನಸೌಧದ ಸಭಾಂಗಣದಲ್ಲಿ ಮಂಗಳವಾರದಂದು ಜರುಗಿದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
     ಪ್ರಸಕ್ತ ಸಾಲಿಗೆ ಮುಂಗಾರು ಹಂಗಾಮಿನ ಮಳೆ ಕ್ಷೀಣಿಸಿದ್ದರಿಂದ, ಒಟ್ಟಾರೆ ದೊರಕಬಹುದಾದ 42. 850 ಟಿಎಂಸಿ ಗೆ ಅನುಗುಣವಾಗಿ ವಿವಿಧ ಕಾಲುವೆಗಳಿಗೆ ಹಂಚಿಕೆಯಾದ ನೀರಿನ ಪ್ರಮಾಣ ಹಾಗೂ ಕುಡಿಯುವ ನೀರಿಗಾಗಿ ಜೂನ್-2018 ರವರೆಗೆ ನೀರನ್ನು ಕಾಯ್ದಿರಿಸಿ, ಲಭ್ಯವಾಗುವ ನೀರಿನ ಪ್ರಮಾಣ ಆಧರಿಸಿ, ವಿವಿಧ ಕಾಲುವೆಗಳಡಿ ಹರಿಸಬಹುದಾದ ನೀರಿನ ಪ್ರಮಾಣ ಮತ್ತು ಅವಧಿಯನ್ನು ನಿರ್ಧರಿಸಲಾಗಿದೆ.  ನೀರಾವರಿ ಸಲಹಾ ಸಮಿತಿಯಲ್ಲಿ ಕೈಗೊಂಡ ನಿರ್ಣಯದ ವಿವರ ಇಂತಿದೆ. 
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ :
*************** ಸೆ. 01 ರಿಂದ ಸೆ. 30 ರವರೆಗೆ 2800 ಕ್ಯೂಸೆಕ್‍ನಂತೆ 7. 257 ಟಿಎಂಸಿ ನೀರು ಹರಿಸಲಾಗುವುದು.  ಉಳಿದ 16. 740 ಟಿಎಂಸಿ ನೀರನ್ನು 3800 ಕ್ಯೂಸೆಕ್‍ನಂತೆ ಅಕ್ಟೋಬರ್ 01 ರಿಂದ ನವೆಂಬರ್ 20 ರವರೆಗೆ ಹರಿಸಲಾಗುವುದು, ಅಥವಾ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೊ ಅದು ಅನ್ವಯವಾಗುತ್ತದೆ.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ :
************ ಸೆ. 01 ರಿಂದ ಸೆ. 20 ರವರೆಗೆ 600 ಕ್ಯೂಸೆಕ್‍ನಂತೆ 1. 036 ಟಿ.ಎಂ.ಸಿ., ಅಕ್ಟೋಬರ್ 01 ರಿಂದ ಅಕ್ಟೋಬರ್ 20 ರವರೆಗೆ 600 ಕ್ಯೂಸೆಕ್‍ನಂತೆ 1. 036 ಟಿ.ಎಂ.ಸಿ., ನವೆಂಬರ್ 01 ರಿಂದ ನ. 20 ರವರೆಗೆ 600 ಕ್ಯೂಸೆಕ್‍ನಂತೆ 1. 036 ಟಿ.ಎಂ.ಸಿ., ಹೀಗೆ ಒಟ್ಟು 3. 110 ಟಿಎಂಸಿ ಅಥವಾ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೋ ಅದು ಅನ್ವಯಿಸುತ್ತದೆ.
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ :
************* ಸೆ. 05 ರಿಂದ ಸೆ. 25 ರವರೆಗೆ 1200 ಕ್ಯೂಸೆಕ್‍ನಂತೆ 2 ಟಿಎಂಸಿ., ಅಕ್ಟೋಬರ್ 05 ರಿಂದ ಅಕ್ಟೋಬರ್ 25 ರವರೆಗೆ 1200 ಕ್ಯೂಸೆಕ್‍ನಂತೆ 02 ಟಿಎಂಸಿ., ನವೆಂಬರ್ 05 ರಿಂದ ನ. 25 ರವರೆಗೆ 1200 ಕ್ಯೂಸೆಕ್‍ನಂತೆ 2 ಟಿಎಂಸಿ., ಸೇರಿದಂತೆ ಒಟ್ಟಾರೆ 06 ಟಿ.ಎಂಸಿ ಅಥವಾ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ, ಹಾಗೂ ಕಾಲುವೆಯ ಮಟ್ಟ ತಲುಪುವವರೆಗೆ, ಇದರಲ್ಲಿ ಯಾವುದು ಮೊದಲೋ ಅದು ಅನ್ವಯಿಸುತ್ತದೆ (ಮಿತ ಬೆಳೆಗಳಿಗಾಗಿ ಮಾತ್ರ).
ರಾಯ ಬಸವಣ್ಣ ಕಾಲುವೆ :
*********** ಸೆ. 10 ರಿಂದ ಸೆ. 30 ರವರೆಗೆ 200 ಕ್ಯೂಸೆಕ್‍ನಂತೆ 0. 345 ಟಿಎಂಸಿ., ಅಕ್ಟೋಬರ್ 10 ರಿಂದ ಅಕ್ಟೋಬರ್ 30 ರವರೆಗೆ 200 ಕ್ಯೂಸೆಕ್‍ನಂತೆ 0. 345 ಟಿಎಂಸಿ., ನವೆಂಬರ್ 10 ರಿಂದ ನವೆಂಬರ್ 30 ರವರೆಗೆ 200 ಕ್ಯೂಸೆಕ್‍ನಂತೆ 0. 345 ಟಿಎಂಸಿ., ಉಳಿದ ಪ್ರಮಾಣದ ನೀರನ್ನು 2018 ರ ಜನವರಿ 01 ರಿಂದ ಏಪ್ರಿಲ್ 01 ರವರೆಗೆ ಆನ್ ಅಂಡ್ ಆಫ್ ಆಧಾರದ ಮೇಲೆ 200 ಕ್ಯೂಸೆಕ್‍ನಂತೆ 0. 960 ಟಿ.ಎಂ.ಸಿ., ಒಟ್ಟಾರೆ 120 ದಿವಸ ಪೂರೈಸಲಾಗುವುದು.  ಅಥವಾ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೋ ಅದು ಅನ್ವಯಿಸುತ್ತದೆ.
ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ :
************** ಸೆ. 01 ರಿಂದ ನವೆಂಬರ್ 30 ರವರೆಗೆ 33 ಕ್ಯೂಸೆಕ್‍ನಂತೆ 0. 250 ಟಿಎಂಸಿ, ಹಾಗೂ ಎಡದಂಡೆ ವಿಜಯನಗರ ಕಾಲುವೆಗಳಿಗೆ ಸೆ. 01 ರಿಂದ ನ. 30 ರವರೆಗೆ 150 ಕ್ಯೂಸೆಕ್‍ನಂತೆ 0. 116 ಟಿಎಂಸಿ, ಅಥವಾ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೋ ಅದು ಅನ್ವಯಿಸುತ್ತದೆ.
     ತುಂಗಭದ್ರಾ ಎಡದಂಡೆ ನಾಲೆಯ 0 ಮೈಲ್‍ನಿಂದ 104 ಮೈಲ್‍ವರೆಗೆ ಬರುವ ಎಲ್ಲಾ ವಿತರಣಾ ಕಾಲುವೆಗಳಿಗೆ ಪೊಲೀಸ್ ಬಂದೋಬಸ್ತ್ ಅನ್ನು ಒದಗಿಸಲು ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ಅವರಿಗೆ ವಹಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.  ಅನಧಿಕೃತ ಪಂಪ್‍ಸೆಟ್‍ಗಳನ್ನು ತಕ್ಷಣ ತೆರವುಗೊಳಿಸ ಹೊಣೆಯನ್ನು ಆಯಾ ಜಿಲ್ಲಾಧಿಕಾರಿಗೆ ವಹಿಸಲಾಗಿದೆ ಎಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ತಿಳಿಸಿದ್ದಾರೆ.

ನೇರಸಾಲ ಯೋಜನೆಯಡಿ ಸಾಲಸೌಲಭ್ಯ : ಅರ್ಜಿ ಆಹ್ವಾನ


ಕೊಪ್ಪಳ ಆ. 29 (ಕರ್ನಾಟಕ ವಾರ್ತೆ): ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಪ್ರಸಕ್ತ ಸಾಲಿಗೆ ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಎನ್.ಎಂ.ಡಿ.ಎಫ್.ಸಿ) ನೇರಸಾಲ ಯೋಜನೆಯಡಿ ಮತಿಯ ಅಲ್ಪಸಂಖ್ಯಾತರಿಗೆ ಅವಧಿ ಸಾಲ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉನ್ನತ ಮತ್ತು ವಿದೇಶಿ ವ್ಯಾಸಂಗಕ್ಕಾಗಿ ಸಾಲ ಸೌಲಭ್ಯವನ್ನು ಒದಗಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. 
    ಅರ್ಜಿ ಸಲ್ಲಿಸಲು ಮತಿಯ ಅಲ್ಪಸಂಖ್ಯಾತರಾದ  ಮುಸ್ಲಿಂ, ಕ್ರಿಶ್ಚಿಯನ್ ಜೈನ್, ಭೌದ್ಧರು, ಸಿಖ್ಖರು, ಫಾರ್ಸಿಗಳು, ಮತ್ತು ಆಂಗ್ಲೋ ಇಂಡಿಯನ್ ಸಮುದಾಯದವರಾಗಿರಬೇಕು.  ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದ ಜನರಿಗೆ ರೂ. 81.000 ಹಾಗೂ ನಗರ ಪ್ರದೇಶದ ಜನರಿಗೆ. ರೂ. 1,03,000 ಒಳಗಿರಬೇಕು.  ಅಲ್ಪಸಂಖ್ಯಾತರಿಗೆ ನೇರಸಾಲ ಯೋಜನೆಯಡಿ ಅವಧಿ ಸಾಲ ರೂ. 10. ಲಕ್ಷ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉನ್ನತ ಮತ್ತು ವಿದೇಶಿ ವ್ಯಾಸಂಗಕ್ಕಾಗಿ ರೂ. 4 ಲಕ್ಷ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು, ಅವಧಿ ಸಾಲ, ಉನ್ನತ ಹಾಗೂ ವಿದೇಶಿ ವ್ಯಾಸಂಗ ಮಾಡಲಿಚ್ಛಿಸುವ ವಿದ್ಯಾರ್ಥಿಗಳ ಪೊಷಕರು ಸಾಲದ ಭದ್ರತೆಗಾಗಿ ಸ್ಥಿರಾಸ್ತಿಯನ್ನು ನಿಗಮಕ್ಕೆ ಅಡಮಾನ (ಹೈಪಾಥಿಕೆಷನ್) ಮಾಡಬೇಕು.
ನಿಗದಿತ ಅರ್ಜಿಗಳನ್ನು ನಿಗಮದ ವೆಬ್‍ಸೈಟ್   www.kmdc.kar.nic.in   ನಿಂದ ಪಡೆದು, ಇತ್ತಿಚಿನ ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಐಡಿ/ ಆಧಾರ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಮತ್ತು ಯೋಜನಾವರದಿ ಸಂಬಂಧಿಸಿದ ಇಲಾಖೆಯಿಂದ ಪಡೆದ ಪರವಾನಿಗೆ ಪತ್ರ ಇತ್ಯಾದಿ ಗಳನ್ನು  ಅರ್ಜಿಯೊಂದಿಗೆ  ಲಗತ್ತಿಸಿ, ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಜಿಲ್ಲಾ ಆಡಳಿತ ಭವನ, ಕೊಪ್ಪಳ ಇವರಿಗೆ ಸೆಪ್ಟೆಂಬರ್. 23 ರೊಳಗಾಗಿ  ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 08539-225008 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾವ್ಯವಸ್ಥಾಪಕರಾದ ಝಾಕೀರಹುಸೇನ ಕುಕನೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Monday, 28 August 2017

ವಚನ ಮಹಾ ಸಂಪುಟಗಳ ಮಾರಾಟ : ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಲಭ್ಯ


ಕೊಪ್ಪಳ ಆ. 28 (ಕರ್ನಾಟಕ ವಾರ್ತೆ): ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬಸವಯುಗದ ವಚನಗಳ ಮಹಾಸಂಪುಟ ಹಾಗೂ ಬಸವೋತ್ತರ ಯುಗದ ವಚನ ಮಹಾ ಸಂಪುಟಗಳನ್ನು ಮುದ್ರಿಸಿ, ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಚೇರಿಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ಆಸಕ್ತರು ಖರೀದಿಸಬಹುದಾಗಿದೆ.
ಕನ್ನಡ ನಾಡಿನ ಪ್ರಥಮ ಪ್ರಜಾ ಸಾಹಿತ್ಯವಾಗಿರುವ ವಚನಗಳು ನಮ್ಮ ಪರಂಪರೆಯ ಅಪೂರ್ವ ಆಸ್ತಿ ಎನಿಸಿದೆ.  ಪ್ರಸ್ತುತ ಕನ್ನಡ ಸಾಹಿತ್ಯ ಲೋಕದಲ್ಲಿ ಹತ್ತಾರು ವಚನಗಳು ಲಭ್ಯವಿದೆ.  ಇಂತಹ ವಚನಗಳು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಹಾಗೂ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹವುಗಳಾಗಿದ್ದು, ಸಮಾಜಕ್ಕೆ ಅತ್ಯಂತ ಪ್ರಸ್ತುತ ಸಾಹಿತ್ಯವಾಗಿದೆ.
    ಇಂತಹ ಸಾವಿರಾರು ವಚನಗಳನ್ನು ಒಟ್ಟುಗೂಡಿಸಿ, ಕನ್ನಡ ಪುಸ್ತಕ ಪ್ರಾಧಿಕಾರವು ಬಸವಯುಗದ ವಚನ ಮಹಾಸಂಪುಟ-1952 ಪುಟಗಳು ಹಾಗೂ ಬಸವೋತ್ತರ ಯುಗದ ವಚನ ಮಹಾ ಸಂಪುಟ-1536 ಪುಟಗಳನ್ನು ಹೊಂದಿದಂತೆ 3ನೇಯ ಮುದ್ರಣವಾಗಿ ಎರಡು ಮಹಾ ಸಂಪುಟಗಳನ್ನು ಮುದ್ರಣ ಮಾಡಿಸಿ ಬಿಡುಗಡೆ ಮಾಡಿದೆ. 
    ಬಸವಯುಗದ ಹಾಗೂ ಬಸವೋತ್ತರ ಯುಗದ ವಚನಗಳ ಈ ಎರಡು ಸಂಪುಟಗಳ ಒಟ್ಟಾರೆ ಖರೀದಿ ಮೌಲ್ಯ ರೂ. 600-00 ಗಳು.  ಈ ಸಂಪುಟಗಳು ರಾಜ್ಯದ ಎಲ್ಲ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳ ಜಿಲ್ಲಾ ಕಚೇರಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ.  ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಸಂಪುಟಗಳನ್ನು ಖರೀಸಿಸಬಹುದಾಗಿದೆ ಎಂದು ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೆಟ್ರಿಕ್‍ಪೂರ್ವ ವಿದ್ಯಾರ್ಥಿ ವೇತನ : ಅವಧಿ ವಿಸ್ತರಣೆ


ಕೊಪ್ಪಳ ಆ. 28 (ಕರ್ನಾಟಕ ವಾರ್ತೆ): ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಮೆಟ್ರಿಕ್‍ಪೂರ್ವ ವಿದ್ಯಾರ್ಥಿ ವೇತನ”ವನ್ನು ಮಂಜೂರಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಸೆಪ್ಟೆಂಬರ್. 30 ರವರೆಗೆ ವಿಸ್ತರಿಸಲಾಗಿದೆ.
    ವಿದ್ಯಾರ್ಥಿಗಳು ಅರ್ಜಿಗಳನ್ನು ವೆಬ್‍ಸೈಟ್  www.shcolarships.gov.in ನಲ್ಲಿ ಆನ್‍ಲೈನ್ ಮೂಲಕ ಸಲ್ಲಿಸಬೇಕಾಗಿದ್ದು, ದಾಖಲೆಗಳೊಂದಿಗೆ (ಹಾರ್ಡ ಕಾಪಿ) ಮೂಲ ಪ್ರತಿಯನ್ನು ಶಾಲೆಯಿಂದ ದೃಢೀಕರಿಸಿ, ಶಾಲೆಯ ಮುಖ್ಯೋಪಾಧ್ಯಾಯರಿಗೆ ಮೂಲ ಅರ್ಜಿಯನ್ನು ಸಲ್ಲಿಸಬೇಕು.  ಮುಖ್ಯೋಪಾಧ್ಯಾಯರು ಈ ಅರ್ಜಿಗಳನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೆಪ್ಟೆಂಬರ್. 30 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ  www.gokdom.kar.nic.in  ಮೂಲಕ ಸಂಪರ್ಕಿಸಬಹುದು ಎಂದು ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಹೆಮೂದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೆಟ್ರಿಕ್ ನಂತರದ ಮತ್ತು ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿ ವೇತನ : ಅವಧಿ ವಿಸ್ತರಣೆ


ಕೊಪ್ಪಳ ಆ. 28 (ಕರ್ನಾಟಕ ವಾರ್ತೆ): ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ಮತ್ತು ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿ ವೇತನವನ್ನು ಮಂಜೂರಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಸೆಪ್ಟೆಂಬರ್. 30 ರವರೆಗೆ ವಿಸ್ತರಿಸಲಾಗಿದೆ.
    ಅರ್ಜಿಗಳನ್ನು ವೆಬ್‍ಸೈಟ್ www.shcolarships.gov.in ನಲ್ಲಿ ಆನ್‍ಲೈನ್ ಮೂಲಕ ಸಲ್ಲಿಸಬೇಕು.  ವಿದ್ಯಾರ್ಥಿಗಳು ದಾಖಲೆಗಳೊಂದಿಗೆ (ಹಾರ್ಡ ಕಾಪಿ) ಮೂಲ ಪ್ರತಿಯನ್ನು ಕಾಲೇಜಿ ನಿಂದ ದೃಢೀಕರಿಸಿ, ಪ್ರಾಶುಂಪಾಲರಿಗೆ ಮೂಲ ಅರ್ಜಿಯನ್ನು ಸಲ್ಲಿಸಬೇಕು.  ಪ್ರಾಚಾರ್ಯರು ಈ ಅರ್ಜಿಗಳನ್ನು ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಯಲಬುರ್ಗಾ/ ಗಂಗಾವತಿ/ ಕುಷ್ಟಗಿಗಳಲ್ಲಿ ಪರಿಶೀಲಿಸಿ, ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಪ್ಪಳ, ಜಿಲ್ಲಾ ಆಡಳಿತ ಭವನ, ಇವರಿಗೆ ಸೆಪ್ಟೆಂಬರ್. 30 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ www.gokdom.kar.nic.in ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಹೆಮೂದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮೀಡಿಯಾ ಕಿಟ್‍ಗಾಗಿ ಮಾನ್ಯತೆ ಹೊಂದಿರುವ ಪತ್ರಕರ್ತರಿಂದ ಅರ್ಜಿ ಆಹ್ವಾನ


ಕೊಪ್ಪಳ ಆ.28(ಕರ್ನಾಟಕ ವಾರ್ತೆ)- ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿರುವ ಪತ್ರಕರ್ತರನ್ನು ಪ್ರೋತ್ಸಾಹಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮಾಧ್ಯಮ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ ಮೀಡಿಯಾ ಕಿಟ್ ವಿತರಿಸುವ ಯೋಜನೆ ಹಮ್ಮಿಕೊಂಡಿದ್ದು, ಇದಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಇಲಾಖೆಯ ನಿರ್ದೇಶಕ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಾನ್ಯತೆ ಪಡೆದ ಪತ್ರಕರ್ತರು ಅರ್ಜಿ ನಮೂನೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ವಿಭಾಗದಿಂದ ಅಥವಾ ಇಲಾಖೆಯ ವೆಬ್‍ಸೈಟ್  www.karnatakainformation.gov.in  ನಿಂದ ಪಡೆಯಬಹುದಾಗಿದೆ.
ನೋಂದಾಯಿತ ಪತ್ರಕರ್ತರು ತಮ್ಮ ಹೆಸರು, ಜನ್ಮ ದಿನಾಂಕ, ಖಾಯಂ ವಿಳಾಸ, ವಿದ್ಯಾರ್ಹತೆ, ಜಾತಿ (ಉಪಜಾತಿ), ಪತ್ರಿಕಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇವಾನುಭವ, ವೇತನ ವಿವರಗಳನ್ನೊಳಗೊಂಡ ಮಾಹಿತಿಯನ್ನು ಭರ್ತಿ ಮಾಡಿ ಸ್ವ-ವಿಳಾಸವಿರುವ ಲಕೋಟೆಯೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
ಸದರಿ ಅರ್ಜಿಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಯ ವಿವರ, ಪ್ರಸಾರ ಸಂಖ್ಯೆ, ಪತ್ರಿಕೆಯ ಮಾಧ್ಯಮ ಪಟ್ಟಿಯ ವಿವರ, ಜಾತಿ ಪ್ರಮಾಣಪತ್ರ, ವಿಳಾಸ ಹಾಗೂ ವಯಸ್ಸನ್ನು ದೃಢೀಕರಿಸುವ ದಾಖಲೆಗಳ ಪ್ರತಿಯನ್ನು ಲಗತ್ತಿಸಿ ಸೆಪ್ಟೆಂಬರ್ 27ರ ಸಂಜೆ 5 ಗಂಟೆಯೊಳಗಾಗಿ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, # ನಂ. 17, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು-560001 ವಿಳಾಸಕ್ಕೆ ಸಲ್ಲಿಸಬೇಕು.  ಲಕೋಟೆಯ ಮೇಲ್ಭಾಗದಲ್ಲಿ “ನೋಂದಾಯಿತ ಪತ್ರಕರ್ತರಿಗೆ ಮೀಡಿಯಾ ಕಿಟ್‍ಗಾಗಿ ಅರ್ಜಿ” ಎಂದು ನಮೂದಿಸಿರಬೇಕು.  ಹೆಚ್ಚಿನ ಮಾಹಿತಿಗಾಗಿ ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ವಿಭಾಗದ ಉಪ ನಿರ್ದೇಶಕರನ್ನು ಹಾಗೂ ದೂರವಾಣಿ ಸಂಖ್ಯೆ 080-22028037/87 ಕ್ಕೆ ಸಂಪರ್ಕಿಸಲು ಕೋರಲಾಗಿದೆ.

ವಿದ್ಯಾರ್ಥಿ ವೇತನ : ಬಾಂಕ್ ಪಾಸ್‍ಬುಕ್ ಪ್ರತಿಯನ್ನು ಸಲ್ಲಿಸಲು ಸೂಚನೆ


ಕೊಪ್ಪಳ ಆ. 28 (ಕರ್ನಾಟಕ ವಾರ್ತೆ): ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಎನ್.ಎಸ್.ಪಿ ಯಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ಹಾಗೂ ವಿದ್ಯಾರ್ಥಿ ವೇತನ ಬಾರದೇ ಇರುವ ವಿದ್ಯಾರ್ಥಿಗಳ ಪಟ್ಟಿಯನ್ನು ಇಲಾಖಾ ಅಧಿಕೃತ ವೆಬ್‍ಸೈಟ್‍ನಲ್ಲಿ ಫ್ಯೆಲೂರ್ ಲಿಸ್ಟ್ ಬಿಡುಗಡೆ ಮಾಡಿದ್ದು, ಇದರಲ್ಲಿ ಐ.ಡಿ ನಂಬರ ನವರು ತಮ್ಮ ರಾಷ್ಟ್ರಿಕೃತ ಬ್ಯಾಂಕ್‍ನ ಪಾಸ್ ಪುಸ್ತಕದ ಮೊದಲ ಪುಟದ ಝರಾಕ್ಸ್ ಪ್ರತಿಯನ್ನು ಇ-ಮೇಲ್ ಮಾಡುವಂತೆ ಇಲಾಖೆಯ ಜಿಲ್ಲಾ ಅಧಿಕಾರಿ ಮಹೆಮೂದ್ ಅವರು ತಿಳಿಸಿದ್ದಾರೆ. 
    ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಮತ್ತು ಬೌದ್ದ ಸಮುದಾಯದ ವಿದ್ಯಾರ್ಥಿಗಳು ಆನ್‍ಲೈನ್ ಮುಖಾಂತರ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಹಾಗೂ ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ, ಇದುವರೆಗೂ ನಿರ್ದೇಶನಾಲಯದಿಂದ ವಿದ್ಯಾರ್ಥಿವೇತನ ಬಾರದೆ ಇರುವ ಹಾಗೂ ವಿದ್ಯಾರ್ಥಿಗಳ ಫ್ಯೆಲೂರ್ ಲಿಸ್ಟ್ ಅನ್ನು ನಿರ್ದೇಶನಾಲಯದ ಅಧೀಕೃತ ವೆಬ್‍ಸೈಟ್ www.gokdom.kar.nic.in ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಲಿಸ್ಟ್‍ನಲ್ಲಿ ಹೆಸರನ್ನು ಪರಿಶೀಲಿಸಿ ವಿದ್ಯಾರ್ಥಿವೇತನದ ಮೊತ್ತ ಪಾವತಿಯಾಗಲು ಸಹಕಾರಿಯಾಗುವಂತೆ ಬ್ಯಾಂಕ್ ಪಾಸ್ ಪುಸ್ತಕ ಮೊದಲ ಪುಟವನ್ನು ಪ್ರಸಕ್ತ ಸಾಲಿನ ಸ್ಕಾಲರ್ ಶಿಪ್ ಐಡಿ ಸಂಖ್ಯೆಯೊಂದಿಗೆ  ಮೆರಿಟ್-ಕಂ-ಮೀನ್ಸ್, ಮೆರಿಟ್ ನಂತರದ ವಿದ್ಯಾರ್ಥಿವೇತನ ಹಾಗೂ ಶುಲ್ಕ ಮರುಪಾವತಿಯನ್ನು ಇ-ಮೇಲ್ ಮಾಡಬೇಕು.
    ಹೆಚ್ಚಿನ ಮಾಹಿತಿಗಾಗಿ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಾದ ಯಲಬುರ್ಗಾ, ಕುಷ್ಟಗಿ, ಗಂಗಾವತಿ ಅಥವಾ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಆಡಳಿತ ಭವನ, ಕೊಪ್ಪಳ ಇವರಿಗೆ, ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಸಿದೆ.

ತುಂಗಭದ್ರಾ ಅಚ್ಚುಕಟ್ಟು ರೈತರೊಂದಿಗೆ ಸಮಾಲೋಚನೆ : ಮಿತ ನೀರಾವರಿ ಬೆಳೆಗಳನ್ನು ಬೆಳೆಯಲು ಡಿಸಿ ಕನಗವಲ್ಲಿ ಮನವಿ


ಕೊಪ್ಪಳ ಆ. 28 (ಕರ್ನಾಟಕ ವಾರ್ತೆ): ತುಂಗಭದ್ರಾ ಜಲಾಶಯದಲ್ಲಿ ಈ ಬಾರಿ ನೀರಿನ ಸಂಗ್ರಹಣೆ ಕಡಿಮೆ ಇರುವ ನಿಮಿತ್ಯ, ರೈತರು ಭತ್ತದ ಬದಲು ಪರ್ಯಾಯವಾದ ಮಿತ ನೀರಾವರಿ ಬೆಳೆಗಳನ್ನು ಬೆಳೆಯಬೇಕು.  ಜೊತೆಗೆ ರೈತರ ಅಭಿಪ್ರಾಯವನ್ನು ಮಂಗಳವಾರದಂದು ಬೆಂಗಳೂರಿನಲ್ಲಿ ಜರುಗುವ ನೀರಾವರಿ ಸಲಹಾ ಸಮಿತಿ ಸಭೆಯ ಗಮನಕ್ಕೆ ತರಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಮಿತ ನೀರಾವರಿ ಬೆಳೆಗಳನ್ನು ಬೆಳೆಯುವ ಕುರಿತು, ಹಾಗೂ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಜನರ ಅಭಿಪ್ರಾಯವನ್ನು ಪಡೆಯುವ ಸಲುವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾದ ರೈತರೊಂದಿಗಿನ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ತುಂಗಭದ್ರಾ ಜಲಾಶಯದಲ್ಲಿ ಈ ವರ್ಷ ನೀರಿನ ಸಂಗ್ರಹ ಕಡಿಮೆ ಇದ್ದು, ಮಿತ ನೀರಾವರಿ ಬೆಳೆ ಬೆಳೆಯುವ ಕುರಿತಂತೆ ರೈತರೊಂದಿಗೆ ಸಮಾಲೋಚನೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರ ಸೂಚನೆಯ ಮೇರೆಗೆ ಈ ಸಭೆ ಆಯೋಜಿಸಲಾಗಿದೆ.  ಜಲಾಶಯದಲ್ಲಿ ಸದ್ಯ ಸಂಗ್ರಹವಿರುವ ನೀರನ್ನು ನ್ಯಾಯಾಧೀಕರಣದ ನಿರ್ಧಾರದಂತೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಹಂಚಿಕೊಳ್ಳಬೇಕಿದೆ.  ಜೊತೆಗೆ ಕುಡಿಯುವ ನೀರಿನ ಬಳಕೆಗಾಗಿಯೂ ನೀರು ಮೀಸಲಿರಿಸಬೇಕಿದೆ.  ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಪ್ರಕಾರ, ಭತ್ತದ ಸಸಿ ಮಡಿಗಳಲ್ಲಿ ಈಗ ಲಭ್ಯವಿರುವ ಸಸಿಗಳು ನಾಟಿ ಮಾಡಲು ಯೋಗ್ಯವಲ್ಲ.  ಅಲ್ಲದೆ ಸದ್ಯಕ್ಕೆ ಭತ್ತ ನಾಟಿ ಮಾಡಲು ಇದು ಸೂಕ್ತ ಕಾಲವಲ್ಲ.  ಒಂದು ವೇಳೆ ಈ ತಿಂಗಳು ಭತ್ತ ನಾಟಿ ಮಾಡಿದಲ್ಲಿ, ಕಾಳು ಕಟ್ಟುವ ಕಾಲಕ್ಕೆ ಚಳಿಗಾಲ ಬರಲಿದೆ ಅಲ್ಲದೆ, ನೀರಿನ ಕೊರತೆ ಉಂಟಾಗಿ ನೀರು ಲಭ್ಯವಾಗದಿದ್ದಲ್ಲಿ, ಇಡೀ ಭತ್ತದ ಬೆಳೆ ಹಾಳಾಗಿ, ರೈತರು ತೀವ್ರ ನಷ್ಟಕ್ಕೆ ಗುರಿಯಾಗಬೇಕಾಗುತ್ತದೆ.  ಹೀಗಾಗಿ ರೈತರು ಭತ್ತದ ಬದಲು ಮೆಕ್ಕೆಜೋಳ, ಕಡಲೆ, ಹಿಂಗಾರಿ ಜೋಳ, ನವಣೆ, ಸೇರಿದಂತೆ ಪರ್ಯಾಯ ಬೆಳೆಯನ್ನು ಬೆಳೆಯಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿದರು.
     ಕೃಷಿ ವಿಜ್ಞಾನಿ ಕರೀಗೌಡರ್ ಅವರು ಮಾತನಾಡಿ, ಕಳೆದೆರಡು ವರ್ಷಗಳಿಂದಲೂ ಜಲಾಶಯದಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ.  
ಕೊಪ್ಪಳ ಜಿಲ್ಲೆಯಲ್ಲಿ 40 ಸಾವಿರ ಹೆ., ಬಳ್ಳಾರಿ ಜಿಲ್ಲೆಯಲ್ಲಿ 90 ಸಾವಿರ ಹೆ., ರಾಯಚೂರು ಜಿಲ್ಲೆಯಲ್ಲಿ ಸುಮಾರು 1.20 ಲಕ್ಷ ಹೆ. ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ.  ಕಾಲುವೆಗೆ ನೀರು ಲಭ್ಯವಾದರೂ ಸಹ, ಮುಂಗಾರು ಹಂಗಾಮಿಗೆ ಭತ್ತ ಬೆಳೆಯುವುದು ಸೂಕ್ತವಲ್ಲ.  ಭತ್ತ ಬೆಳೆ ಬೆಳೆಯುವ ರೈತರು, ಕಡಿಮೆ ನೀರು ಬಳಸಿಕೊಂಡು ಬೆಳೆಯಬಹುದಾದ ಭತ್ತ ಕೃಷಿ ಪದ್ಧತಿಯನ್ನು (ಕೂರಿಗೆ ಬಿತ್ತನೆ) ಅನುಸರಿಸುವುದು ಸೂಕ್ತ.  ಜೊತೆಗೆ ಅಲ್ಪಾವಧಿ ಭತ್ತದ ತಳಿಯನ್ನು ಬಳಸುವುದಕ್ಕೆ ರೈತರು ಗಮನ ನೀಡಬೇಕಾಗುತ್ತದೆ.  ಕಳೆದ 10 ವರ್ಷಗಳ ಸಂಶೋಧನೆ ಪ್ರಕಾರ ಭೂಮಿಯಲ್ಲಿ ಸತತವಾಗಿ ಭತ್ತ ಬೆಳೆಯುತ್ತಿರುವುದರಿಂದ, ಪ್ರತಿ ಎಕರೆಗೆ 350 ಕೆ.ಜಿ. ಯಷ್ಟು ಲವಣಾಂಶ ಪ್ರತಿ ಬೆಳೆ ಬೆಳೆಯುವಾಗಲೂ ಭೂಮಿಗೆ ಸೇರ್ಪಡೆಯಾಗುತ್ತಿದೆ.  ಸತತವಾಗಿ ಭತ್ತ ಬೆಳೆಯುತ್ತಿರುವುದರಿಂದ, ಭೂಮಿ ಸವಳಾಗಿ ಕೆಡುತ್ತಿದೆ.  ಈ ವರ್ಷ ಅಲ್ಪ ನೀರಿರುವದರಿಂದ, ಭತ್ತದ ಬದಲಿಗೆ ಮೆಕ್ಕೆಜೋಳ, ಸಿರಿಧಾನ್ಯಗಳನ್ನು ಬೆಳೆಯಬಹುದಾಗಿದ್ದು, ಈ ಸಂದರ್ಭಕ್ಕೆ ಈ ಬೆಳೆಗಳನ್ನು ಬೆಳೆಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
     ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಮಾತನಾಡಿ, ಸದ್ಯ ಜಲಾಶಯದಲ್ಲಿ 56 ಟಿ.ಎಂಸಿ ನೀರು ಸಂಗ್ರಹವಿದ್ದು, ಕಳೆದ ವರ್ಷಕ್ಕೂ ಈ ವರ್ಷಕ್ಕೂ 17 ಟಿ.ಎಂಸಿ ಯಷ್ಟು ನೀರಿನ ಕೊರತೆ ಇದೆ.  ಒಳ ಹರಿವಿನ ಪ್ರಮಾಣದ ಆಧಾರದಲ್ಲಿ ಇನ್ನೂ 09 ಟಿಎಂಸಿ ನೀರು ಸಂಗ್ರಹವಾಗುವ ಸಂಭವನೀಯತೆ ಇದ್ದು, ಒಟ್ಟು 65 ಟಿಎಂಸಿ ನೀರು ಮಾತ್ರ ಲಭ್ಯವಾಗುವ ಸಾಧ್ಯತೆಗಳಿದೆ.  ಇದರಲ್ಲಿ ಮೂರು ರಾಜ್ಯಗಳಿಗೆ ನೀರಿನ ಹಂಚಿಕೆ ಹಾಗೂ ಆವಿಯಾಗುವ ಪ್ರಮಾಣ, ಕುಡಿಯುವ ನೀರಿಗಾಗಿ ಮೀಸಲಿರಿಸುವುದು ಸೇರಿದಂತೆ ನೀರಿನ ಲಭ್ಯತೆಯನ್ನು ಗಮನಿಸಿ ನಿರ್ಧಾರವನ್ನು ನೀರಾವರಿ ಸಲಹಾ ಸಮಿತಿ ಕೈಗೊಳ್ಳಲಿದೆ.  ಆದಾಗ್ಯೂ ರೈತರಿಗೆ ಭತ್ತದ ಬದಲಿಗೆ ಪರ್ಯಾಯವಾದ ಮಿತ ನೀರಾವರಿ ಬೆಳೆಗಳನ್ನು ಬೆಳೆಯಲು ಸಲಹೆ ನೀಡಲಾಗುತ್ತಿದೆ ಎಂದರು.
     ಜಲಾಶಯದಲ್ಲಿ ಸದ್ಯ ಲಭ್ಯವಾಗುವ ನೀರಿನ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು, ಕಾಲುವೆಗಳಿಗೆ ಯಾವಾಗ ನೀರು ಹರಿಸಲಾಗುತ್ತದೆ, ಎಷ್ಟು ಪ್ರಮಾಣದಲ್ಲಿ, ಎಷ್ಟು ದಿನಗಳ ಕಾಲ ನೀರು ಹರಿಸಲಾಗುತ್ತದೆ ಎಂಬ ವಿವರಗಳನ್ನು ಸ್ಪಷ್ಟವಾಗಿ ತಿಳಿಸಿದಲ್ಲಿ, ಅದಕ್ಕನುಗುಣವಾಗಿ ರೈತರು, ಯಾವ ಬೆಳೆಯನ್ನು ಬೆಳೆಯಬೇಕು ಎಂಬುದನ್ನು ನಿರ್ಧರಿಸಲು ಅನುಕೂಲವಾಗುತ್ತದೆ.  ಈ ಬಗ್ಗೆ ಜಿಲ್ಲಾಡಳಿತ ಸ್ಪಷ್ಟಪಡಿಸಲಿ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲ ರೈತರು ಅಭಿಪ್ರಯಾಪಟ್ಟರು.
     ಸಭೆಯಲ್ಲಿ ಕೊಪ್ಪಳ ಜಿ.ಪಂ. ಮಾಜಿ ಅಧ್ಯಕ್ಷ ಜನಾರ್ಧನ ಹುಲಿಗಿ ಸೇರಿದಂತೆ ಜಿಲ್ಲೆಯ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಪಾಲ್ಗೊಂಡು, ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

Saturday, 26 August 2017

ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ ಆ. 26 (ಕರ್ನಾಟಕ ವಾರ್ತೆ): ಕೊಪ್ಪಳ ಸಜಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಗೆ “ಆಡಳಿತ ನ್ಯಾಯಾಧೀಕರಣ ತರಬೇತಿ” ನೀಡಲು ಸರ್ಕಾರಿ ಆದೇಶದಂತೆ ಆಯ್ಕೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.    
    ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪರಿಶಿಷ್ಟ ಜಾತಿ/ ವರ್ಗದವರಾಗಿರಬೇಕು.  ವಯೋಮಿತಿ 40 ವರ್ಷಕ್ಕೆ ಮೀರಿರಬಾರದು.  ಅಭ್ಯರ್ಥಿಗಳು ಕಾನೂನು ಪದವಿ ತೇರ್ಗಡೆ ಹೊಂದಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ 2 ವರ್ಷ ಮೀರಿರಬಾರದು.  ತರಬೇತಿಯು ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದು, ಜಿಲ್ಲಾ ವಕೀಲರ ಸಂಘದಲ್ಲಿ ನೊಂದಾಯಿಸಲ್ಪಟ್ಟಿರುವವರಾಗಿರಬೇಕು.  ತರಬೇತಿಯು 4 ವರ್ಷ ಅವಧಿಯಾಗಿದ್ದು, ತರಬೇತಿ ಅವಧಿಯಲ್ಲಿ ಮಾಸಿಕ ರೂ. 5,000/- ತರಬೇತಿ ಭತ್ಯೆ ನೀಡಲಾಗುವುದು.  ಜಿಲ್ಲಾ ಹಾಗೂ ತಾಲೂಕು ಕೇಂದ್ರಲ್ಲಿ ತರಬೇತಿಯನ್ನು ನೀಡಲಾಗುವುದು.      ತರಬೇತಿಗಾಗಿ ಅಭ್ಯರ್ಥಿಗಳನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಲಾಗುವುದು.  ಆಯ್ಕೆಯಾದ ಅಭ್ಯರ್ಥಿಗಳು ತರಬೇತಿಯನ್ನು ಬಿಟ್ಟು ಹೋಗುವುದಿಲ್ಲವೆಂದು ರೂ. 20/-ಗಳ ಬಾಂಡ್ ಪೇಪರ್ ಮೇಲೆ ಮುಚ್ಚಳಿಕೆ ಪತ್ರ ಬರೆದು ಕೊಡಬೇಕು. 
ಅರ್ಜಿಗಳನ್ನು ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಇವರ ಕಾರ್ಯಾಲಯದಿಂದ ಪಡೆದು,  ಭರ್ತಿ ಮಾಡಿದ ಅರ್ಜಿಗಳೊಡನೆ ತಹಶಿಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕಾನೂನು ಪದವಿಯ ಎಲ್ಲಾ ಸೆಮಿಸ್ಟರ್ ಅಂಕಪಟ್ಟಿ ಹಾಗೂ ಪದವಿಗೆ ಸಂಬಂಧಿಸಿದ ದಾಖಲೆಗಳು ಮತ್ತು ನೊಂದಣಿ ಪ್ರಮಾಣ ಪತ್ರ, ವಾಸಸ್ಥಳ ಹಾಗೂ ಹುಟ್ಟಿದ ದಿನಾಂಕ ಸಮರ್ಥಿಸುವ ಪ್ರಮಾಣ ಪತ್ರಗಳ ದೃಢೀಕರಿಸಿದ ಝರಾಕ್ಸ್ ಪ್ರತಿಗಳೊಂದಿಗೆ ಸೆಪ್ಟೆಂಬರ್. 15 ರೊಳಾಗಾಗಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ. 

ಪತ್ರಿಕೋದ್ಯಮ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ ಆ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸಕ್ತ ಸಾಲಿನ ಎಸ್‍ಸಿಎಸ್‍ಪಿ ವಿಶೇಷ ಘಟಕ ಯೋಜನೆಯಡಿ ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
        ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಇಬ್ಬರು ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.  ಅಪ್ರೆಂಟಿಸ್ ತರಬೇತಿ ಅವಧಿಯು 2017 ರ ಸೆಪ್ಟಂಬರ್ ನಿಂದ 2018 ರ ಮಾರ್ಚ್ ವರೆಗೆ 07 ತಿಂಗಳ ಅವಧಿಯದಾಗಿರುತ್ತದೆ.  ಈ ಅವಧಿಗೆ ಪ್ರತಿ ಅಭ್ಯರ್ಥಿಗೆ ರೂ. 20000 ರೂ. ಸ್ಟೈಫೆಂಡ್ ನೀಡಲಾಗುವುದು.  ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.   ಕನ್ನಡ ಭಾಷೆಯ ಹಾಗೂ ಗಣಕ ಯಂತ್ರದ ಜ್ಞಾನ ಹೊಂದಿರಬೇಕು.  ವಯೋಮಿತಿ 22 ರಿಂದ 38 ವರ್ಷಗಳಾಗಿದ್ದು, ಇತರೆ ಯಾವುದೇ ಉದ್ಯೋಗದಲ್ಲಿ ತೊಡಗಿರಬಾರದು. ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.  ಸ್ವೀಕೃತ ಅರ್ಜಿಗಳನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯು ಪರಿಶೀಲಿಸಿ, ಮೆರಿಟ್ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಲಿದೆ.  ನಿಗದಿತ ಅರ್ಜಿ ನಮೂನೆಯನ್ನು ಕೊಪ್ಪಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಉಚಿತವಾಗಿ ಪಡೆಯಬಹುದಾಗಿದೆ.   ಅರ್ಹ ಅಭ್ಯರ್ಥಿಗಳು ತಮ್ಮ ಪೂರ್ಣ ವಿವರದೊಂದಿಗೆ, ಜಾತಿ ಪ್ರಮಾಣ ಪತ್ರ, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಪದವಿ ಅಥವಾ ಸ್ನಾತಕೋತ್ತರ ಪದವಿ ಅಂಕಪಟ್ಟಿ, ಗಣಕಯಂತ್ರದ ಸಾಮಾನ್ಯ ತರಬೇತಿ ಪ್ರಮಾಣ ಪತ್ರ, ಇತ್ತೀಚಿನ ಎರಡು ಭಾವಚಿತ್ರವನ್ನು ಲಗತ್ತಿಸಿ, ದ್ವಿ-ಪ್ರತಿಯಲ್ಲಿ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಗೆ ಸೆ. 04 ರ ಒಳಗಾಗಿ ಸಲ್ಲಿಸಬೇಕು.  ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂ: 08539-220607 ಕ್ಕೆ ಸಂಪರ್ಕಿಸಬಹುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ದತ್ತಿ ಪ್ರಶಸ್ತಿಗೆ ಆಯ್ಕೆಗೊಂಡ ಲೇಖಕರ ಪಟ್ಟಿ ಪ್ರಕಟ


ಕೊಪ್ಪಳ ಆ. 26 (ಕರ್ನಾಟಕ ವಾರ್ತೆ):  ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ 2016ರ ವಿವಿಧ ದತ್ತಿ ಪ್ರಶಸ್ತಿಗಳಿಗೆ ಲೇಖಕರ ಕೃತಿಗಳು ಆಯ್ಕೆಗೊಂಡಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ತಿಳಿಸಿದ್ದಾರೆ. 
     ಆಯ್ಕೆಯಾದ ಕೃತಿಗಳು ಹಾಗೂ ಆ ಕೃತಿಗಳ ಲೇಖಕರ ವಿವರ ಇಂತಿದೆ.   ಮಲ್ಲಿಕಾ ದತ್ತಿ ಪ್ರಶಸ್ತಿಗೆ ವಸುಮತಿ ಉಡುಪ ಅವರ “ಬಾಕಿ ಸಂಗ್ತಿ ಮೊಕ್ತಾ...” ಕೃತಿ ಆಯ್ಕೆಯಾಗಿದೆ.  ಅಂತರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿಗೆ ರೇಣುಕಾ ದೇಶಪಾಂಡೆ ಅವರ ಕಾವ್ಯ ಗುಚ್ಛ, ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿಗೆ ವಿಜಯಾ ಶ್ರೀಧರ್ ಅವರ ಚೌತಿ ಚಂದ್ರ ಬಿದಿಗೆ ಇಂದ್ರ, ಲಿಂ. ಲೀಲಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿಗೆ  ಡಾ. ಗುರುದೇವಿ ಹುಲ್ಲೆಪ್ಪನವರಮಠ ಅವರ ಭುವಿಯ ಬೆಳಕು, ನೀಲಗಂಗಾ ದತ್ತಿ ಪ್ರಶಸ್ತಿಗೆ ಅಕ್ಷತಾ ಕೃಷ್ಣಮೂರ್ತಿ ಅವರ ಕೋಳ್ಗಂಬ, ಕೆ.ಎಸ್. ಭಾರತಿ ರಾಜಾರಾಮ್ ಮಧ್ಯಸ್ಥ ದತ್ತಿ ಪ್ರಶಸ್ತಿಗೆ ಸುರೇಖಾ ಕುಲಕರ್ಣಿ ಅವರ ಗಣದ ಬೆಂಡಗಿ ಅಕ್ಕಾದೇವಿ, ಶಾರದಾ ಆರ್.ರಾವ್ ದತ್ತಿ ಪ್ರಶಸ್ತಿಗೆ ಬಿ.ಕೆ ಮೀನಾಕ್ಷಿ ಅವರ ಮರುಹುಟ್ಟು, ಗೌರಮ್ಮ ಹಾರ್ನಹಳ್ಳಿ ಕೆ. ಮಂಜಪ್ಪ ದತ್ತಿ ಪ್ರಶಸ್ತಿಗೆ ಮಧುರಾ ಕರ್ಣಮ್ ಅವರ ಆಲದ ನೆರಳು, ಎಚ್. ಕರಿಯಣ್ಣ ದತ್ತಿ ಪ್ರಶಸ್ತಿಗೆ ಅರುಣಾ ನರೇಂದ್ರ ಅವರ ಚುಕ್ಕಿ ಹಾಡು, ಡಾ. ಎಚ್. ನರಸಿಂಹಯ್ಯ ದತ್ತಿ ಪ್ರಶಸ್ತಿಗೆ ಎಂ. ಅಬ್ದುಲ್ ರೆಹಮಾನ್ ಪಾಷ ಅವರ ಸರ್ವಾಂಗೀಣ ಬೆಳವಣಿಗೆಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಪೋಷಕರ ಜವಾಬ್ದಾರಿ, ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ ದತ್ತಿ ಪ್ರಶಸ್ತಿಗೆ ಡಾ. ಕೆ.ಎಸ್. ಪವಿತ್ರ ಅವರ ಕನಕದಾಸರ ಕಾವ್ಯ ಮತ್ತು ಸಂಗೀತ, ಕೆ.ವಿ. ರತ್ನಮ್ಮ ದತ್ತಿ ಪ್ರಶಸ್ತಿಗೆ ನಿರ್ಮಲಾ ಮೃತ್ಯುಂಜಯಸ್ವಾಮಿ ಅವರ ಭಾವ ಚಿತ್ತಾರ, ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿ ಪ್ರಶಸ್ತಿಗೆ ಡಾ. ನಟರಾಜ ತಲಘಟ್ಟಪುರ ಅವರ ಗುರುತಿನ ದೀವಟಿಗಿ ಹಾಗೂ ಚನ್ನಪ್ಪ ಕಟ್ಟಿ ಅವರ ಸೂರ್ಯನಿಗೆ ಸಾವ ನೋಡಲು ಬೇಸರವಿಲ್ಲ, ಪಿ. ಶಾಂತಿಲಾಲ್ ದತ್ತಿ ಪ್ರಶಸ್ತಿಗೆ ಪ್ರಭಾ ಬೋರಗಾವಂಕರ ಅವರ ಕರ್ಮವೀರ ಬಾವೂರಾವ ಪಾಟೀಲ, ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ ಪ್ರಶಸ್ತಿಗೆ ಕೇಳು ಮಾಸ್ತರ್ ಅಗಲ್ಪಾಡಿ ಅವರ ಕಥಕ್ಕಳಿ, ಜಯಲಾಕ್ಷಮ್ಮ ಬಿ.ಎಸ್ ಸಣ್ಣಯ್ಯ ದತ್ತಿ ಪ್ರಶಸ್ತಿಗೆ ಪ್ರೋ. ಜಿ. ಅಶ್ವತ್ಥನಾರಾಯಣ ಅವರ ಸೌಂದರ್ಯ ಲಹರೀ ಸ್ತೋತ್ರ ದೀಪಿಕ, ಕುಂಬಾಸ ದತ್ತಿ ಪ್ರಶಸ್ತಿಗೆ ಶ್ರೀಧರ ರಾಯಸಂ ಅವರ ಹಾಸ್ಯ ದುಂದುಭಿ, ಪ್ರೋ. ಡಿ.ಸಿ ಅನಂತಸ್ವಾಮಿ ಸಂಸ್ಮರಣ ದತ್ತಿ ಪ್ರಶಸ್ತಿಗೆ ನ. ಗುರುಮೂರ್ತಿ ಅವರ ಹೆಬ್ಬೆರಳ ಬೆವರು.  ಜಿ.ಆರ್ ರೇವಯ್ಯ ದತ್ತಿ ಪ್ರಶಸ್ತಿಗೆ ಶಂಭುಲಿಂಗ ವಾಲ್ದೊಡ್ಡಿ ಅವರ ಮಹಾ ತಾಯಿ, ‘ಸಿಸು’ ಸಂಗಮೇಶ ದತ್ತಿ ಪ್ರಶಸ್ತಿಗೆ ಚಿ. ಅಂತಃಕರಣ ಅವರ ಮಿಂಚಿನ ಚಿಲುಮೆ, ಪಂಪಮ್ಮ-ಶರಣೇಗೌಡ ವಿರುಪಾಪುರ ದತ್ತಿ ಪ್ರಶಸ್ತಿಗೆ ವೀರಹನುಮಾನ ಅವರ ಜ್ಞಾನದರಿವೆ ನೇಯ್ದ ಕಬೀರ, ಕೆ. ವಾಸುದೇವಾಚಾರ್ ದತ್ತಿ ಪ್ರಶಸ್ತಿಗೆ ಶಿ.ಜು. ಪಾಶಾ ಅವರ ಕೆರೆಯಂಗಳದ ಜನಾಬ, ಡಾ. ಆರ್.ಕೆ ಗಲಿಗಲಿ ದತ್ತಿ ಪ್ರಶಸ್ತಿಗೆ ಸಂಜಯ ಜಿ. ಕರಣೆ ಅವರ ಭರವಸೆಯ ಬದುಕು, ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ. ಮದನಕೇಸರಿ ಜೈನ್ ದತ್ತಿ ಪ್ರಶಸ್ತಿಗೆ ಸಂಜಯ ಎನ್. ಹಂಜೆ ಅವರ ಗೋಕಾಕ ಪರಿಸರದಲ್ಲಿ ಜೈನಧರ್ಮ ಕೃತಿ ಆಯ್ಕೆಯಾಗಿದೆ.
ಬಿಜಾಪುರ ಜಿಲ್ಲಾ ಸಮೀರವಾಡಿಯಲ್ಲಿ ನಡೆದ 7ನೇಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ಕಾವ್ಯ ಪ್ರಶಸ್ತಿಗೆ ಆನಂದ ಈ ಕುಂಚನೂರ ಅವರ ವ್ಯೋಮ ತಂಬೂರಿ ನಾದ, ಮಕ್ಕಳ ಸಾಹಿತ್ಯ ಪ್ರಶಸ್ತಿಗೆ ಪಿ.ಡಿ. ವಾಲೀಕಾರ ಅವರ ಪ್ರವಾಸ-ಬಾದಾಮಿ, ಕಾದಂಬರಿ  ಪ್ರಶಸ್ತಿಗೆ ಸುರೇಖಾ ಕುಲಕರ್ಣಿ ಅವರ ಗುಣದ ಬೆಂಡಗಿ ಅಕ್ಕಾದೇವಿ, ಸಣ್ಣಕತೆ ಪ್ರಶಸ್ತಿಗೆ ತಿರುಪತಿ ಭಂಗಿ ಅವರ ಕೈ ರೊಟ್ಟಿ ಹಾಗೂ ನಾಟಕ  ಪ್ರಶಸ್ತಿಗೆ ಎಸ್.ಆರ್ ಹೂಗಾರ್ ಅವರ ಬಾಲಾಭಿನಯ ಡಿಂಡಿಮ ಕೃತಿಗಳು ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿವೆ.  ವಸುದೇವ ಭೂಪಾಲಂ ದತ್ತಿ ಪ್ರಶಸ್ತಿಯಲ್ಲಿ ಕಾದಂಬರಿ ಪ್ರಶಸ್ತಿಗೆ ಕೆ. ಆನಂತರಾಮು ಅವರ ಕಗ್ಗತ್ತಲೆ, ಸಣ್ಣಕತೆ ಪ್ರಶಸ್ತಿಗೆ ಫಕೀರ ಅವರ ಬ್ರಿಟಿಷ್ ಬಂಗ್ಲೆ, ಮಕ್ಕಳ ಸಹಿತ್ಯ ಕೃತಿ ಪ್ರಶಸ್ತಿಗೆ ಹಾ.ಸ ಬ್ಯಾಕೋಡ ಅವರ ಹಾರಿಹೋದ ಪಾರಿವಾಳ, ಅನುವಾದಿತ ಕೃತಿ/ ವೈಚಾರಿಕ ಲೇಖನಗಳ ಕೃತಿ ಪ್ರಶಸ್ತಿಗೆ ಸ. ರಘುನಾಥ ಅವರ ಒಂಟಿ ಸೇತುವೆ ಕೃತಿಗಳು ಆಯ್ಕೆಯಾಗಿವೆ.
ಡಿ. ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿಗೆ ಭಾರತಿ ಬಿ.ವಿ ಅವರ ಮಿಸಳ್ ಭಾಜಿ, ಕಾಕೋಳು ಸರೋಜಮ್ಮ ದತ್ತಿ ಪ್ರಶಸ್ತಿಗೆ ಕುಮಾರ ಬೇಂದ್ರೆ ಅವರ ಋಣ, ಡಾ. ಎ.ಎಸ್ ಧರಣೇಂದ್ರಯ್ಯ-ಮನೋವಿಜ್ಞಾನ ದತ್ತಿ ಪ್ರಶಸ್ತಿಗೆ ಡಾ. ಮಹಾಬಲೇಶ್ವರ ರಾವ್ ಅವರ ಅಪರಾಧಿಯ ಅಂತರಂಗ, ನಾ.ಕು ಗಣೇಶ್ ದತ್ತಿ ಪ್ರಶಸ್ತಿಗೆ ಸುರೇಶ ಹಡಪದ ಬಳಗಾನೂರ ಅವರ ನಿನ್ನೊಳಗ ನೀನಿಲ್ಲ, ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿಗೆ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಬೇವಿಂಜೆ ಅವರ ಆರೋಗ್ಯ ಆಶಯ, ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ದತ್ತಿ ಪ್ರಶಸ್ತಿಗೆ ಲಲಿತಾ ಕೆ. ಹೊಸಪ್ಯಾಟಿ ಅವರ ಚಂದ್ರ ಚುಕ್ಕಿಗಳು, ಪಳಕಳ ಸೀತಾರಾಮಭಟ್ಟ ದತ್ತಿ ಪ್ರಶಸ್ತಿಗೆ ಸಿದ್ದಲಿಂಗಪ್ಪ ಮ. ಹದಿಮೂರ ಅವರ ಮಾತೃ ವಾತ್ಸಲ್ಯ, ಪೂಜ್ಯ ಸ್ವಸ್ತಶ್ರೀ ದೇವೇಂದ್ರಕೀರ್ತಿ ದತ್ತಿ ಪ್ರಶಸ್ತಿಗೆ ಪ್ರೊ. ಜೀವಂಧರಕುಮಾರ ಕೆ. ಹೋತಪೇಟ ಅವರ ಪರ್ಯೂಷಣ ಪಾನ ದಶಲಕ್ಷಣ ಪರ್ವ, ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿಗೆ ಟಿ.ಎಸ್. ಗೊರವರ ಅವರ ರೊಟ್ಟಿ ಮುಟಗಿ, ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿಗೆ ಸುಮಂಗಲಾ ಅವರ ಹನ್ನೊಂದನೇ ಅಡ್ಡರಸ್ತೆ, ಪ್ರಕಾಶ ಆರ್.ಎನ್ ಹಬ್ಬು ದತ್ತಿ ಪ್ರಶಸ್ತಿಗೆ ಕರ್ಕಿ ಕೃಷ್ಣಮೂರ್ತಿ ಅವರ ಗಾಳಿಗೆ ಮೆತ್ತಿದ ಬಣ್ಣ, ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿನೆನಪಿ ದತ್ತಿ ಪ್ರಶಸ್ತಿಗೆ ಡಾ. ಜಿ. ಪ್ರಕಾಶ ನಾಯಕ ಅವರ ಅಂಬೇಡ್ಕರ್ ಮತ್ತು ಕುವೆಂಪು, ಕನ್ನಡ ಸಾಹಿತ್ಯ ಪರಿಷತ್ತು ಬೀಳಗಿ ಘಟಕ ದತ್ತಿ ಪ್ರಶಸ್ತಿಗೆ ಡಾ. ಪ್ರಕಾಶ ಗ. ಖಾಡೆ ಅವರ ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ, ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ  ದತ್ತಿ ಪ್ರಶಸ್ತಿಗೆ ಮುಹಮ್ಮದ್ ಕುಳಾಯಿ ಅವರ ಪರ್ಷಿಯಾ ಪರಿಮಳ, ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ದತ್ತಿ ಪ್ರಶಸ್ತಿಗೆ ಡಾ. ರಾಜಶೇಖರ ಇಚ್ಚಂಗಿ ಅವರ ಡಾ. ಶಿ.ಚ. ನಂದೀಮಠ, ಜಯಲಕ್ಷ್ಮಿ ಮತ್ತು ಬಾಪು ರಾಮಣ್ಣ ದತ್ತಿ ಪ್ರಶಸ್ತಿಗೆ ದಿನಮಣಿ ಹೇಮರಾಜ್ ಅವರ ದಾರವೋ..!ಜನಿವಾರವೋ!!, ಮತ್ತು ಸುಮನ್ ಸೋಮಶೇಖರ್ ಸೋಮವಾರಪೇಟೆ ದತ್ತಿ ಪ್ರಶಸ್ತಿಗೆ ಎಸ್. ಮಂಜುನಾಥ ಅವರ ಬೆಂಕಿ ಬಾಣಲೆ ಕೃತಿಯನ್ನು ದತ್ತಿ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಿಸಲು ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ ಆ. 26 (ಕರ್ನಾಟಕ ವಾರ್ತೆ): ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2016ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
    ಅರ್ಜಿ ಸಲ್ಲಿಸಲು ಕನಿಷ್ಠ 18 ರಿಂದ 35 ವರ್ಷ ವಯೋಮಿತಿಯಲ್ಲಿರಬೇಕು.  ಸ್ವ-ವಿವರವುಳ್ಳ ಮನವಿಯೊಂದಿಗೆ ದೃಢೀಕೃತ ಎಸ್.ಎಸ್.ಎಲ್.ಸಿ ಪ್ರಮಾಣ ಪತ್ರದ ಪ್ರತಿ ಅಥವಾ ಅಧಿಕೃತವಾದ, ದೃಢೀಕರಿಸಲ್ಪಟ್ಟ ಜನ್ಮ ದಾಖಲಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು.  ಅಲ್ಲದೆ ಪ್ರಸ್ತುತ ಸಲ್ಲಿಸಲ್ಪಡುತ್ತಿರುವ ಕೃತಿಯು ತಮ್ಮ ಚೊಚ್ಚಲ ಕೃತಿಯಾಗಿದ್ದು, ಎಲ್ಲಿಯೂ ಪ್ರಕಟವಾಗಿರುವುದಿಲ್ಲವೆಂದು ಸ್ವಯಂ ದೃಢೀಕರಣ ಪತ್ರ ನೀಡಬೇಕು. 
ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯು ಡಿ.ಟಿ.ಪಿ ಮಾಡಿಸಿದಾಗ 1/8 ಡೆಮ್ಮಿ ಅಳತೆಯಲ್ಲಿ ಕನಿಷ್ಠ 60 ಪುಟಗಳಿರಬೇಕು.  ಅನುವಾದ, ಪಠ್ಯಪುಸ್ತಕ ಹಾಗೂ ಬೇರಾವುದೇ ಪದವಿಗೆ ಸಿದ್ದಪಡಿಸಿದ ಪ್ರಬಂಧಗಳನ್ನು ಹೊರತುಪಡಿಸಿ, ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಮುಂತಾದ ಕನ್ನಡ ಸಾಹಿತ್ಯದ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಸ್ತಪ್ರತಿ ಇರಬೇಕು.  ಕೃತಿಯ ಪಠ್ಯದಲ್ಲಿ ಯಾವುದೇ ಧರ್ಮ, ದೇವರು, ಜಾತಿ, ಕೋಮು, ವೃತ್ತಿ, ಸಮುದಾಯ, ಭಾಷೆ, ಆಚರಣೆ, ಪದ್ಧತಿ, ಇತ್ಯಾದಿ ಸಂಗತಿಗಳಿಗೆ ಸಂಬಂಧಿಸಿದಂತೆ ಹಾಗೂ ರಾಷ್ಟ್ರೀಯ ನಾಯಕರುಗಳ ಕುರಿತಂತೆ ನೇರವಾಗಿಯೇ ಆಗಲಿ ಅಥವಾ ಪರೋಕ್ಷವಾಗಿಯೇ ಆಗಲಿ ಮನ ನೋಯಿಸುವವಂತಹ ವಿಷಯವಾಗಲಿ ಇರಬಾರದು. ಅಲ್ಲದೆ ರಾಷ್ಟ್ರೀಯ ಭಾವೈಕ್ಯತೆಗೆ ದಕ್ಕೆ ತರುವಂತಹ ವಿಷಯ/ ಸಂಗತಿಗಳು ಪ್ರಸ್ತಾಪವಾಗಿರಬಾರದು.  ಪ್ರಾಧಿಕಾರಕ್ಕೆ ಸಲ್ಲಿಸಲ್ಪಡುವ ಅರ್ಜಿಗಳ/ ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ.  ಆದ ಕಾರಣ ಹಸ್ತಪ್ರತಿಯ/ ಡಿ.ಟಿ.ಪಿ. ಪ್ರತಿಯ ಎರಡನೇ ಪ್ರತಿಯನ್ನು ಸಲ್ಲಿಸಬೇಕು. 
ಅರ್ಜಿಗಳನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು – 560 002, ಇವರಿಗೆ ಸೆಪ್ಟೆಂಬರ್. 11 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22454516/ 2201774 ಕ್ಕೆ ಸಂಪರ್ಕಿಸಬಹುದು ಎಂದು ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭತ್ತದ ಬದಲು ಅಲ್ಪ ನೀರಾವರಿ ಬೆಳೆಗಳನ್ನು ಬೆಳೆಯಲು ಸಹಕರಿಸಿ : ಎಂ. ಕನಗವಲ್ಲಿ


ಕೊಪ್ಪಳ ಆ. 26 (ಕರ್ನಾಟಕ ವಾರ್ತೆ):  ಕೊಪ್ಪಳ ಜಿಲ್ಲೆಯ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಎಡದಂಡೆ ಕಾಲುವೆ ಮುಖಾಂತರ ಬೆಳೆಗಳಿಗೆ ನೀರು ಹರಿಸದೆ ಇರುವ ಪ್ರಯುಕ್ತ ಭತ್ತದ ಬೆಳೆ ಬದಲಿಗೆ ಅಲ್ಪ ನೀರಾವರಿ ಬೆಳೆಗಳನ್ನು ಬೆಳೆಯಲು ಗಂಗಾವತಿ ಹಾಗೂ ಕೊಪ್ಪಳ ತಾಲೂಕಿನ ರೈತರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ರೈತರಲ್ಲಿ ಮನವಿ ಮಾಡಿದ್ದಾರೆ.
     ಭತ್ತ ಬೆಳೆಗೆ ಸಂದಿಗ್ಧ ಪರಿಸ್ಥಿತಿಗಳಲ್ಲಿ ಅಂದರೆ ತೆಂಡೆ ಹೊಡೆಯುವ ಸಮಯದಲ್ಲಿ, ಹೂ ಬಿಡುವ ಹಂತ ಮತ್ತು ಕಾಳು ಕಟ್ಟುವ ಹಂತಗಳಲ್ಲಿ ನೀರಿನ ಕೊರತೆ ಉಂಟಾಗಬಹುದಾದ ಸಂಭವ ಇರುವುದರಿಂದ ರೈತರು ಭತ್ತದ ಬೆಳೆ ಬೆಳೆಯಬಾರದು.  ಭತ್ತದ ಬೆಳೆಗೆ ಪರ್ಯಾಯವಾಗಿ ಸೆಪ್ಟೆಂಬರ್ ಮೊದಲ ಪಾಕ್ಷಿಕದಿಂದ ಅಕ್ಟೋಬರ್ ಮೊದಲನೇ ಪಾಕ್ಷಿಕದ ಅಂತ್ಯದವರೆಗೆ ಹಿಂಗಾರಿ ಜೋಳ ಬಿತ್ತನೆ ಮಾಡಬಹುದು.  ಅಕ್ಟೋಬರ್ ಮೊದಲನೇ ಪಾಕ್ಷಿಕದಿಂದ ನವೆಂಬರ್ ಮೊದಲನೇ ಪಾಕ್ಷಿಕದ ಅಂತ್ಯದವರೆಗೆ ಕಡಲೆ ಬಿತ್ತನೆ ಮಾಡಬಹುದು.  ಸೆಪ್ಟೆಂಬರ್ ಮೊದಲ ಪಾಕ್ಷಿಕದಿಂದ ಅಕ್ಟೋಬರ್ ಮೊದಲನೇ ಪಾಕ್ಷಿಕದ ಅಂತ್ಯದವರೆಗೆ ಮೆಕ್ಕೆಜೋಳ ಬಿತ್ತನೆ ಮಾಡಬಹುದು.  ನವಣೆ ಮತ್ತು ಹುಳ್ಳಿಯನ್ನು ತಡವಾದ ಮುಂಗಾರಿನಲ್ಲಿ ಸೆಪ್ಟೆಂಬರ್ ವರೆಗೆ ಬಿತ್ತನೆ ಮಾಡಬಹುದು.  ಆಗಸ್ಟ್. 15 ರ ನಂತರ ಸರ್ಯಾಕಾಂತಿ ಬಿತ್ತನೆ ಮಾಡಬಹುದು.  ಬೂದಿ ರೋಗದ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು.  ಅಲಸಂದೆಯನ್ನು ಕೆಂಪು ಮಣ್ಣಿನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಬಿತ್ತನೆ ಮಾಡಬಹುದು.  ಕುಸುಬೆಯನ್ನು ಅಕ್ಟೋಬರ್ 15 ರಿಂದ ನವೆಂಬರ್ ವರೆಗೆ ಬಿತ್ತನೆ ಮಾಡಬಹುದು. 
    ಕಡಲೆಯನ್ನು ಸವಳು ಭೂಮಿಯಲ್ಲಿ ಬೆಳೆಯಬಾರದು.  ಸವಳು ಭೂಮಿಯಲ್ಲಿ ಹಿಂಗಾರಿ ಜೋಳ, ಕುಸುಂಬೆ, ಸೂರ್ಯಕಾಂತಿ ಬೆಳೆಯಬಹುದು.  ಬೆಳೆಗಳನ್ನು ಬೋದು ಪದ್ದತಿಗಳಲ್ಲಿ ಬೆಳೆಯಬೇಕು.  ಕಪ್ಪು ಮಣ್ಣಿನಲ್ಲಿ ಸೂಕ್ತ ಬಸಿಗಾಲುವೆಗಳನ್ನು ಹಾಕಿ ಹೆಚ್ಚಾದ ನೀರು ಹೊರ ಹೋಗುವಂತೆ ಮಾಡಬೇಕು.  ರೋಗ ಮತ್ತು ಕೀಟ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಕ್ರಮಗಳನ್ನು ಜಂಟಿ ಕೃಷಿ ನಿರ್ದೇಶಕರು ಹಾಗೂ ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಶಿಫಾರಸು ಮಾಡಿರುತ್ತಾರೆ.   ಆದ್ದರಿಂದ ರೈತರು ಭತ್ತದ ಬದಲಿಗೆ ಅಲ್ಪ ನೀರಾವರಿ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಸೆಪ್ಟಂಬರ್‍ನಲ್ಲಿ ವಿವಿಧ ಯೋಜನೆ ಫಲಾನುಭವಿಗಳ ಬೃಹತ್ ಸಮಾವೇಶ : ಪೂರ್ವಭಾವಿ ಸಭೆ


ಕೊಪ್ಪಳ ಆ. 26 (ಕರ್ನಾಟಕ ವಾರ್ತೆ): ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸೆಪ್ಟಂಬರ್ ಎರಡನೆ ವಾರದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಜಿಲ್ಲೆಯಲ್ಲಿ ಸರ್ಕಾರದ ವಿವಿಧ ಯೋಜನೆ ಫಲಾನುಭವಿಗಳ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ಸೆಪ್ಟಂಬರ್ ಎರಡನೆ ವಾರದಲ್ಲಿ ಮುಖ್ಯಮಂತ್ರಿಗಳು ಕೊಪ್ಪಳ ಜಿಲ್ಲೆಯಲ್ಲಿ ಕೈಗೊಳ್ಳಲಿರುವ ಕಾರ್ಯಕ್ರಮ ಕುರಿತಂತೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರದಂದು ಏರ್ಪಡಿಸಲಾದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಸೆಪ್ಟಂಬರ್‍ನಲ್ಲಿ ಮುಖ್ಯಮಂತ್ರಿಗಳು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಕೈಗೊಳ್ಳಲಿದ್ದಾರೆ.  ಅಲ್ಲದೆ ಈ ಸಂದರ್ಭದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶ ನಡೆಸಲು ನಿರ್ಧಾರಿಸಲಾಗಿದೆ.  ಸಹಕಾರ ಇಲಾಖೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕೈಗೊಳ್ಳಬೇಕಿರುವ ಕಾರ್ಯಗಳ ಕುರಿತು ಅಧಿಕಾರಿಗಳು ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಸೂಚನೆ ನೀಡಿದರು.
     ಸಭೆಯಲ್ಲಿ ಸಹಕಾರ ಇಲಾಖೆಯ ಸಹಕಾರ ಸಂಘಗಳ ಉಪನಿಬಂಧಕ ಪಿ.ಎನ್. ಕಳಸಣ್ಣವರ್ ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕೊಪ್ಪಳ ತಾಲೂಕ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾ ಕೂಟ


ಕೊಪ್ಪಳ ಆ. 26 (ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಕೊಪ್ಪಳ ತಾಲೂಕ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಆ. 29 ರಂದು ಮತ್ತು ಪ್ರೌಢ ಶಾಲೆಗಳ ಕ್ರೀಡಾ ಕೂಟವನ್ನು, 30 ಮತ್ತು 31 ರಂದು ಮಳೆಮಲ್ಲೇಶ್ವರ ದೇವಸ್ಥಾನ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
    ಕೊಪ್ಪಳ ತಾಲೂಕ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟ ಆ. 29 ರಂದು ಹಾಗೂ ಪ್ರೌಢಶಾಲೆಗಳ ತಾಲೂಕ ಮಟ್ಟದ ಕ್ರೀಡಾ ಕೂಟವನ್ನು ಆ. 30 ಮತ್ತು 31 ರಂದು ಬೆಳಿಗ್ಗೆ 09-30 ಗಂಟೆಗೆ ಮಳೆಮಲ್ಲೇಶ್ವರ ದೇವಸ್ಥಾನ ರಸ್ತೆಯ ಜಿಲ್ಲಾ ಕ್ರಿಡಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ, ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

Thursday, 24 August 2017

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಕೊಪ್ಪಳ ಜಿಲ್ಲಾ ಪ್ರವಾಸ


ಕೊಪ್ಪಳ ಆ. 24 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಬಾಯಿ ಅವರು ಆ. 26 ಮತ್ತು 27 ರಂದು ಎರಡು ದಿನಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಮಹಿಳಾ ಆಯೋಗದ ಅಧ್ಯಕ್ಷರು ಆ. 26 ರಂದು ರಾತ್ರಿ ಕೊಪ್ಪಳ ನಗರಕ್ಕೆ ಆಗಮಿಸಿ, ಕೊಪ್ಪಳದಲ್ಲಿ ವಾಸ್ತವ್ಯ ಮಾಡುವರು.  ಆ. 27 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ನಡೆಯುವ ಕೊಪ್ಪಳ ಜಿಲ್ಲಾ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಅಧ್ಯಕ್ಷರು ಅದೇ ದಿನ ಮಧ್ಯಾಹ್ನ 02 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿವೇತನ : ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ


ಕೊಪ್ಪಳ ಆ. 24 (ಕರ್ನಾಟಕ ವಾರ್ತೆ): ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ ಪೂರ್ವ (9&10ನೇ ತರಗತಿ) ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಲು ಎನ್.ಎಸ್.ಪಿ 2.0 ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 
    ಅರ್ಜಿ ಸಲ್ಲಿಸಲು ಆಗಸ್ಟ್. 21 ರಿಂದ ಅವಕಾಶ ಕಲ್ಪಿಸಲಾಗಿದ್ದು, ವೆಬ್‍ಸೈಟ್  http://scholarships.gov.in ನಲ್ಲಿ ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗುವುದು.  ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಗ್ರೇಡ್-1 ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲಾ ಖಜಾನಾಧಿಕಾರಿಯಾಗಿ ಹರಿನಾಥಬಾಬು ಅಧಿಕಾರ ಸ್ವೀಕಾರ


ಕೊಪ್ಪಳ ಆ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ನೂತನ ಖಜಾನಾಧಿಕಾರಿಯಾಗಿ ಹರಿನಾಥಬಾಬು ಅವರು ಅಧಿಕಾರ ವಹಿಸಿಕೊಂಡರು.
     ಕೊಪ್ಪಳ ಖಜಾನೆ ಇಲಾಖೆ ಅಧಿಕಾರಿಯಾಗಿದ್ದ ಸುರೇಶ್ ಹಳ್ಯಾಳ ಅವರು ಗದಗ ಜಿಲ್ಲೆಗೆ ವರ್ಗಾವಣೆಗೊಂಡ ಕಾರಣದಿಂದ ತೆರವಾಗಿದ್ದ ಸ್ಥಾನಕ್ಕೆ ಹರಿನಾಥಬಾಬು ಅವರನ್ನು ಸರ್ಕಾರ ನೇಮಿಸಿದ್ದು, ಬುಧವಾರದಂದು ಜಿಲ್ಲಾ ಖಜಾನಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.  ಹರಿನಾಥಬಾಬು ಅವರು ಗಂಗಾವತಿ ಖಜಾನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ವಿದೇಶದಲ್ಲಿ ಕೃಷಿಸಾಲ ಹಾಗೂ ವ್ಯಾಪಾರ ತರಬೇತಿ: ಪಿಕೆಜಿಬಿಯ ಚಿನ್ನಪ್ಪ ಆಯ್ಕೆ


ಕೊಪ್ಪಳ ಆ. 24 : ನೆದರ್‍ಲ್ಯಾಂಡ್ ಹಾಗೂ ಜರ್ಮನಿ ದೇಶಗಳಲ್ಲಿ ಆಗಸ್ಟ 30 ರಿಂದ ಸೆಪ್ಟಂಬರ್ 10 ರವರೆಗೆ ನಡೆಯಲಿರುವ  ಕೃಷಿ ಸಾಲಗಳು ಮತ್ತು ಕೃಷಿ ವ್ಯಾಪಾರ ಕುರಿತ ತರಬೇತಿಯಲ್ಲಿ ಭಾಗವಹಿಸಲು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಚಿನ್ನಪ್ಪ ತಳವಾರ ಆಯ್ಕೆಯಾಗಿದ್ದಾರೆ.
     ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ಸಹಯೋಗದಲ್ಲಿ ದೇಶದ 19 ಜನ ಹಿರಿಯ ಬ್ಯಾಂಕ್ ಅಧಿಕಾರಿಗಳನ್ನು ಈ ತರಬೇತಿಗೆ ಆಯ್ಕೆ ಮಾಡಲಾಗಿದೆ. ಚಿನ್ನಪ್ಪ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ಶಿರೂರು ಗ್ರಾಮದವರಾಗಿದ್ದು, ಕೊಪ್ಪಳ, ಕುಕನೂರು ಶಾಖೆಗಳಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ರಾಯಚೂರಿನ ಪ್ರಾದೇಶಿಕ ಕಛೇರಿಯಲ್ಲಿ ಸೀನಿಯರ್ ಮ್ಯಾನೇಜರ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಬಾಲಗೌರವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ


ಕೊಪ್ಪಳ ಆ. 24 (ಕರ್ನಾಟಕ ವಾರ್ತೆ): ಕರ್ನಾಟಕ ಬಾಲವಿಕಾಸ ಅಕಾಡೆಮಿಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ನೀಡುವ ಬಾಲಗೌರವ ಪ್ರಶಸ್ತಿಗಾಗಿ ಅರ್ಹರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
    ಕರ್ನಾಟಕ ಬಾಲವಿಕಾಸ ಅಕಾಡೆಮಿಯು ಪ್ರಸಕ್ತ ಸಾಲಿಗೆ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸುವುದಕ್ಕಾಗಿ ಅಕಾಡೆಮಿ “ಬಾಲಗೌರವ” ಪ್ರಶಸ್ತಿ ನೀಡುವ ಯೋಜನೆ ಹೊಂದಿದ್ದು, ಜಿಲ್ಲೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಶೇಷ ಪ್ರತಿಭೆಯಲ್ಲಿ ಗುರುತಿಸಿಕೊಂಡ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾವಂತ ಅಸಾಧಾರಣ ಪ್ರತಿಭೆವುಳ್ಳ 8 ಮಕ್ಕಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ಸಲ್ಲಿಸಬೇಕಿದ್ದು, ಅರ್ಹರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. 
    ಅರ್ಜಿ ಸಲ್ಲಿಸಲು 18 ವರ್ಷದೊಳಗಿನ ಯಾವುದೇ ವರ್ಗದ ಮಗು, ಶಾಲೆಗೆ ಹೋಗುವ ಅಥವಾ ಹೋಗದೇ ಇರುವ ಮಗು, ಅದು ಗಂಡಾಗಿರಲಿ, ಹೆಣ್ಣಾಗಿರಲಿ, ಕರ್ನಾಟಕ ಸರ್ಕಾರ ಅಥವಾ ಕೇಂದ್ರ ಸರ್ಕಾರಗಳ ಯಾವುದೇ ಇಲಾಖೆಗಳು ನೇರವಾಗಿ ಇಲ್ಲವೇ ಅವುಗಳ ಅಂಗ ಸಂಸ್ಥೆಗಳು ಅಂದರೆ ವಿವಿಧ ಅಕಾಡೆಮಿಗಳು, ನಿಗಮ ಮಂಡಳಿಗಳು ಇತ್ಯಾದಿ, ಇವು ಮಕ್ಕಳ ಸಂಗೀತ, ನೃತ್ಯ ನಟನೆ, ಕ್ರೀಡೆ ಮತ್ತು ಚಿತ್ರಕಲೆ, ಕರಕುಶಲ, ಬರವಣಿಗೆ, ಸಂಶೋಧನೆ (ಹೊಸ ಅವಿಷ್ಕಾರ), ಈ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ತೋರಿಸಿದ್ದಕ್ಕೆ 2015-16ನೇ ಸಾಲಿನಲ್ಲಿ ಕೊಡಮಾಡಿದ ರಾಜ್ಯ ಅಥವಾ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಮಗುವಾಗಿರಬೇಕು. 
ಬಾಲಗೌರವ ಪ್ರಶಸ್ತಿಗಾಗಿ ಅಗತ್ಯ ದಾಖಲೆಗಳ ದೃಢೀಕೃತ ನಕಲು ಪ್ರತಿಗಳೊಂದಿಗೆ ಸ್ವವಿವರವುಳ್ಳ ಮನವಿಯನ್ನು ಜಿಲ್ಲಾ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಇಲ್ಲಿಗೆ ಸೆಪ್ಟೆಂಬರ್. 10 ರೊಳಗಾಗಿ ಸಲ್ಲಿಸಬೇಕು.  ಅರ್ಜಿ ಸಲ್ಲಿಸುವಾಗ ಅಕಾಡೆಮಿ ಬಾಲಗೌರವ ಪ್ರಶಸ್ತಿಗಾಗಿ ಅರ್ಜಿ ಎಂದು ಲಕೋಟೆ ಮೇಲೆ ನಮೂದಿಸಿರಬೇಕು ಎಂದು ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಖಜಾನೆ ಇಲಾಖೆ ಉಪನಿರ್ದೇಶಕ ಸುರೇಶ್ ಹಳ್ಯಾಳ್ ಅವರಿಗೆ ಬೀಳ್ಕೊಡುಗೆ


ಕೊಪ್ಪಳ ಆ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಖಜಾನೆ ಇಲಾಖೆ ಉಪನಿರ್ದೇಶಕರಾಗಿದ್ದ ಸುರೇಶ್ ಹಳ್ಯಾಳ್ ಅವರು ಗದಗ ಜಿಲ್ಲೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಖಜಾನೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಂದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
     ಸುರೇಶ್ ಹಳ್ಯಾಳ್ ಅವರು ಖಜಾನೆ ಇಲಾಖೆ ಉಪನಿರ್ದೇಶಕರಾಗಿ ಉತ್ತಮ ಸೇವೆ ಸಲ್ಲಿಸಿದ್ದು, ಖಜಾನೆ-2 ತಂತ್ರಾಂಶವನ್ನು ಅನುಷ್ಠಾನಕ್ಕೆ ತರುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ.  ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಅಲ್ಲಿನ ಜಿಲ್ಲಾ ಖಜಾನೆಗಳಲ್ಲಿ ಖಜಾನೆ-2 ತಂತ್ರಾಂಶ ಕುರಿತಂತೆ ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ರಾಜ್ಯದಲ್ಲಿಯೂ ಈ ತಂತ್ರಾಂಶ ಅನುಷ್ಠಾನಗೊಳಿಸುವಲ್ಲಿ ಇವರ ಸೇವೆ ಶ್ಲಾಘನೀಯವಾಗಿದೆ.  ಸುರೇಶ್ ಹಳ್ಯಾಳ್ ಅವರು ದಕ್ಷ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದು, ಅವರ ವೃತ್ತಿ ಬದುಕಿನಲ್ಲಿ ಇನ್ನಷ್ಟು ಹೆಚ್ಚಿನ ಪದೋನ್ನತಿ ಪಡೆಯಲಿ ಎಂದು ಖಜಾನೆ ಇಲಾಖೆ ಹಾಗೂ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು, ಸುರೇಶ್ ಹಳ್ಯಾಳ್ ಅವರ ಸೇವೆಯನ್ನು ಕೊಂಡಾಡಿದರು.
     ಆತ್ಮೀಯ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಸುರೇಶ್ ಹಳ್ಯಾಳ್ ಅವರು, ಮಾತನಾಡಿ, ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಖಜಾನೆ ಇಲಾಖೆ ಪಾತ್ರ ಬಹುಮುಖ್ಯವಾಗಿದ್ದು, ಸರ್ಕಾರಿ ಅನುದಾನವನ್ನು ನಿಗದಿತ ಅವಧಿಯಲ್ಲಿ ಆಯಾ ಇಲಾಖೆಗಳಿಗೆ ತಲುಪಿಸುವ ಕಾರ್ಯವನ್ನು ಖಜಾನೆ ಇಲಾಖೆ ಮಾಡುತ್ತಿದೆ.  ಅಧಿಕಾರಿಗಳು ಸರ್ಕಾರಿ ಸೇವೆಯಲ್ಲಿ ಸಮಯ ಮತ್ತು ಪ್ರಾಮಾಣಿಕತೆಗೆ ಆದ್ಯತೆ ನೀಡಬೇಕು ಎಂದರು.
     ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ನೂತನ ಖಜಾನಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಹರಿನಾಥಬಾಬು ಅವರನ್ನು ಖಜಾನೆ ಇಲಾಖೆ ಸಿಬ್ಬಂದಿಗಳು ಆತ್ಮೀಯವಾಗಿ ಸ್ವಾಗತಿಸಿಕೊಂಡರು.  ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ಜುಮ್ಮನ್ನವರ್, ನಿವೃತ್ತ ಖಜಾನಾಧಿಕಾರಿಗಳಾದ ಎ.ಎಂ. ಮದರಿ, ನಜೀರ್ ಅಹ್ಮದ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ತುಕಾರಾಂರಾವ್ ಸೇರಿದಂತೆ ಜಿಲ್ಲೆಯ ಎಲ್ಲ ಖಜಾನೆಗಳ ಅಧಿಕಾರಿ, ಸಿಬ್ಬಂದಿಗಳು, ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  ಸಹಾಯಕ ಖಜಾನಾಧಿಕಾರಿ ಕಳ್ಳೇರ್ ಸ್ವಾಗತಿಸಿದರು, ಗಂಗಾಧರ್ ಪ್ರಾರ್ಥಿಸಿದರು.

ವೃತ್ತಿ ನಿರೂಪಣಾ ಕೌಶಲ್ಯ/ವ್ಯಕ್ತಿ ವಿಕಸನ ತರಬೇತಿಗಾಗಿ ಅರ್ಜಿ ಆಹ್ವಾನ


ಕೊಪ್ಪಳ ಆ. 24(ಕರ್ನಾಟಕ ವಾರ್ತೆ):- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ವಿಶೇಷ ಘಟಕ ಯೋಜನೆ/ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪತ್ರಿಕೋದ್ಯಮ ಪದವಿ, ಸ್ನಾತಕೋತ್ತರ ಪದವಿ, ವಿದ್ಯುನ್ಮಾನ ಮಾಧ್ಯಮದಲ್ಲಿ ಪದವಿ, ಪಿ.ಜಿ. ಡಿಪ್ಲೊಮಾ ಪಡೆದ ಅಭ್ಯರ್ಥಿಗಳಿಗಾಗಿ ಆರು ದಿವಸಗಳ ವೃತ್ತಿ ನಿರೂಪಣಾ ಕೌಶಲ್ಯ/ವ್ಯಕ್ತಿ ವಿಕಸನ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ.

     ಅಭ್ಯರ್ಥಿಗಳು  ಅರ್ಜಿ ನಮೂನೆಯನ್ನು ಇಲಾಖೆಯ ವೆಬ್‍ಸೈಟ್  www.karnatakainforamtion.gov.in  ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು.  ಅಭ್ಯರ್ಥಿ ಹೆಸರು, ಜನ್ಮ ದಿನಾಂಕ, ಖಾಯಂ ವಿಳಾಸ, ವಿದ್ಯಾರ್ಹತೆ, ಜಾತಿ, ಶೇಕಡಾವಾರು ಅಂಕ, ಉದ್ಯೋಗ ವಿವರ ಈ ಹಿಂದೆ ಯಾವುದಾದರು ತರಬೇತಿ ಪಡೆದ ವಿವರ ಹಾಗೂ ವಿಶೇಷ ಸಾಧನೆಗಳನ್ನೊಳಗೊಂಡ ಸ್ವ ವಿವರಗಳ ಮಾಹಿತಿಗಳನ್ನು ಭರ್ತಿ ಮಾಡಿ ಸ್ವ ವಿಳಾಸ ಇರುವ ಲಕೋಟೆಯೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.

     ಅರ್ಜಿಯೊಂದಿಗೆ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ವಿಳಾಸ ಹಾಗೂ ವಯಸ್ಸನ್ನು ಧೃಢೀಕರಿಸುವ ದಾಖಲೆಗಳ ಪ್ರತಿಯನ್ನು ಲಗತ್ತಿಸಿ ಸೆ. 21 ರ ಸಂಜೆ 5-00 ಗಂಟೆಯೊಳಗೆ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. 17, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು 560001 ಇವರಿಗೆ ಸಲ್ಲಿಸಬೇಕು.

     ಲಕೋಟೆಯ ಮೇಲ್ಬಾಗದಲ್ಲಿ "ವೃತ್ತಿ ನಿರೂಪಣಾ ಕೌಶಲ್ಯ/ವ್ಯಕ್ತಿ ವಿಕಸನ ತರಬೇತಿಗಾಗಿ ಅರ್ಜಿ" ಎಂದು ನಮೂದಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ ಸುದ್ದಿ ಮತ್ತು ಪತ್ರಿಕಾ ವಿಭಾಗದ, ಉಪ ನಿರ್ದೇಶಕರು ಇವರನ್ನು ದೂರವಾಣಿ ಸಂಖ್ಯೆ 080- 22028037/87 ರ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕೊಪ್ಪಳ ತಾಲೂಕ ಮಟ್ಟದ ದಸರಾ ಕ್ರೀಡಾ ಕೂಟ : ಹೆಸರು ನೊಂದಾಯಿಸಿಕೊಳ್ಳಲು ಸೂಚನೆ


ಕೊಪ್ಪಳ ಆ. 24 (ಕರ್ನಾಟಕ ವಾರ್ತೆ): ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಕೊಪ್ಪಳ ತಾಲೂಕ ದಸರಾ ಕ್ರೀಡಾ ಕೂಟವನ್ನು ಆಯೋಜಿಸಲಾಗಿದ್ದು, ಭಾಗವಹಿಸುವ ತಂಡಗಳು ಸಂಘಟಕರಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ಇಲಾಖಾ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಕೊಪ್ಪಳ ತಾಲೂಕ ಮಟ್ಟದ ದಸರಾ ಕ್ರೀಡಾ ಕೂಟವನ್ನು ಆ. 27 ರಂದು ಬೆಳಿಗ್ಗೆ 09-30 ಗಂಟೆಗೆ ಮಳೆಮಲ್ಲೇಶ್ವರ ದೇವಸ್ಥಾನ ರಸ್ತೆಯ ಜಿಲ್ಲಾ ಕ್ರಿಡಾಂಗಣದಲ್ಲಿ ಆಯೋಜಿಸಲಾಗಿದ್ದು, ದಸರಾ ಕ್ರೀಡಾ ಕೂಟದಲ್ಲಿ ಪುರುಷರ ಮತ್ತು ಮಹಿಳಾ ವಿಭಾಗದ ಸ್ಪರ್ಧೆಗಳು ನಡೆಯಲಿವೆ.  ಸ್ಪರ್ಧೆಗಳ ವಿವರ ಇಂತಿದೆ. 
ಪುರುಷರ ವಿಭಾಗ : ಅಥೆಟಿಕ್ಸ್‍ನಲ್ಲಿ 100, 200, 400, 800 & 1500 ಮೀ, ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್‍ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, 110 ಮೀ ಹರ್ಡಲ್ಸ್, 4*100 ಮೀ ರಿಲೇ ಹಾಗೂ 4*400 ಮೀ ರಿಲೇ.  ಗುಂಪು ಆಟಗಳಲ್ಲಿ ವ್ಹಾಲಿಬಾಲ್ ಕಬಡ್ಡಿ, ಖೋಖೋ, ಬಾಲ್ ಬ್ಯಾಡ್ಮಿಂಟನ್, ಬಾಸ್ಕೆಟ್‍ಬಾಲ್, ಹ್ಯಾಂಡ್‍ಬಾಲ್, ಟೇಬಲ್‍ಟೆನ್ನಿಸ್, ಟೆನ್ನಿಸ್, ಫುಟ್ಬಾಲ್ ಬಾಲ್, ಬಾಲ್ ಬ್ಯಾಡ್ಮಿಂಟನ್, ಹಾಕಿ, ಶೆಟಲ್ ಬ್ಯಾಡ್ಮಿಂಟನ್, ಥ್ರೋಬಾಲ್ ಹಾಗೂ ನೆಟ್‍ಬಾಲ್. 
ಮಹಿಳಾ ವಿಭಾಗ :  ಅಥೆಟಿಕ್ಸ್‍ನಲ್ಲಿ   100, 200, 400, 800, 1500 & 3000 ಮೀ, ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್‍ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, 100 ಮೀ ಹರ್ಡಲ್ಸ್, 4*100 ಮೀ ರಿಲೇ ಹಾಗೂ 4*400 ಮೀ ರಿಲೇ.  ಗುಂಪು ಆಟಗಳಲ್ಲಿ ವ್ಹಾಲಿಬಾಲ್ ಕಬಡ್ಡಿ, ಖೋಖೋ, ಹಾಕಿ, ಬಾಸ್ಕೆಟ್‍ಬಾಲ್, ಶೆಟಲ್ ಬ್ಯಾಡ್ಮಿಂಟನ್, ಹ್ಯಾಂಡ್‍ಬಾಲ್, ಟೇಬಲ್‍ಟೆನ್ನಿಸ್, ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್ ಹಾಗೂ ನೆಟ್‍ಬಾಲ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 
ಕೊಪ್ಪಳ ತಾಲೂಕ ಮಟ್ಟದ  ದಸರಾ ಕ್ರೀಡಾ ಕೂಟದಲ್ಲಿ ಭಾಗವಹಿಸುವ ತಂಡಗಳು ಸಂಘಟಕರಲ್ಲಿ ತಮ್ಮ ಹೆಸರುಗಳನ್ನು ಆಗಸ್ಟ್. 26 ರ ಸಂಜೆ 05-00 ಗಂಟೆಯೊಳಗಾಗಿ ನೊಂದಾಯಿಸಿಕೊಳ್ಳಬೇಕು.  ಹೆಚ್ಚಿನ ಮಾಹಿತಿಗಾಗಿ ವೀರಭದ್ರಯ್ಯ-ಮೊ. ಸಂಖ್ಯೆ 9008949603 ಮತ್ತು ಅಥ್ಲೇಟಿಕ್ಸ್ ತರಬೇತಿದಾರ-8746933921, ಇವರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಷ್ಟಗಿ ಪುರಸಭೆ ವತಿಯಿಂದ ವಿವಿಧ ಸೌಲಭ್ಯ : ಅರ್ಜಿ ಆಹ್ವಾನ


ಕೊಪ್ಪಳ ಆ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಷ್ಟಗಿ ಪುರಸಭೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ದೀನ್‍ದಯಾಳ ಅಂತ್ಯೋದಯ ಯೋಜನೆ-ನಲ್ಮ್ ಅಭಿಯಾನದಡಿ ಕೌಶಲ್ಯ ತರಬೇತಿ, ಸ್ವಯಂ ಉದ್ಯೋಗ, ಸಾಲ ಸೌಲಭ್ಯ ಹಾಗೂ ಗುಂಪುಗಳಿಗೆ ಬ್ಯಾಂಕ್ ಲಿಂಕೇಜ್‍ಗಾಗಿ ಅರ್ಜಿ ಆಹ್ವಾನಿಸಲಾಗಿದೆ.
    ದೀನ್‍ದಯಾಳ ಅಂತ್ಯೋದಯ ಯೋಜನೆ-ನಲ್ಮ್ ಅಭಿಯಾನದಡಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗ/ ಮಹಿಳೆ ಮತ್ತು ವಿಕಲಚೇತನರಿಗಾಗಿ ಇ.ಎಸ್.ಟಿ.ಪಿ ಘಟಕದಡಿಯಲ್ಲಿ ಕೌಶಲ್ಯ ತರಬೇತಿ ಹಾಗೂ ಎಸ್.ಇ.ಪಿ (ಐ&ಜಿ) ಘಟಕದಲ್ಲಿ ಸಾಲ ಸೌಲಭ್ಯ ನೀಡಲಾಗುವುದು.  ಹಾಗೂ ಗುಂಪುಗಳಿಗೆ ಬ್ಯಾಂಕ್ ಲಿಂಕೇಜ್ ಮಾಡಲಾಗುವುದು. 
    ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 10 ಕೊನೆಯ ದಿನವಾಗಿದ್ದು, ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ, ಕುಷ್ಟಗಿ ಪುರಸಭೆ ಕಾರ್ಯಾಲಯಕ್ಕೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯ ಸಮುದಾಯ ಸಂಘಟಕರನ್ನು ಸಂಪರ್ಕಿಸಬಹುದು ಎಂದು ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಭತ್ತದ ಬದಲು ಅಲ್ಪ ನೀರಾವರಿ ಬೆಳೆಗಳನ್ನು ಬೆಳೆಯಲು ರೈತರಿಗೆ ಸಲಹೆ


ಕೊಪ್ಪಳ ಆ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಎಡದಂಡೆ ಕಾಲುವೆ ಮುಖಾಂತರ ಬೆಳೆಗಳಿಗೆ ನೀರು ಹರಿಸದೆ ಇರುವ ಪ್ರಯುಕ್ತ ಭತ್ತದ ಬೆಳೆ ಬದಲಿಗೆ ಅಲ್ಪ ನೀರಾವರಿ ಬೆಳೆಗಳನ್ನು ಬೆಳೆಯಬೇಕಾಗಿರುತ್ತದೆ. ಕೊಪ್ಪಳ ಮತ್ತು ಗಂಗಾವತಿ ತಾಲೂಕಿನಲ್ಲಿ ರೈತರಿಗೆ ಭತ್ತದ ಬೆಳೆ ಬದಲಿಗೆ ಲಘು ನೀರಾವರಿ ಬೆಳೆಗಳನ್ನು ಬೆಳೆಯುವಂತೆ ಮನವಿ ಮಾಡಲಾಗಿದೆ.
    ರೈತರು ಬೆಳೆಯಬೇಕಾದ ಲಘು ನೀರಾವರಿ ಬೆಳೆಗಳ ವಿವರ ಇಂತಿದೆ.  ಭತ್ತ ಬೆಳೆಗೆ ಸಂದಿಗ್ಧ ಪರಿಸ್ಥಿತಿಗಳಲ್ಲಿ ಅಂದರೆ ತೆಂಡೆ ಹೊಡೆಯುವ ಸಮಯದಲ್ಲಿ, ಹೂ ಬಿಡುವ ಹಂತ ಮತ್ತು ಕಾಳು ಕಟ್ಟುವ ಹಂತಗಳಲ್ಲಿ ನೀರಿನ ಕೊರತೆ ಉಂಟಾಗಬಹುದಾದ ಸಂಭವ ಇರುವುದರಿಂದ ರೈತರು ಭತ್ತದ ಬೆಳೆ ಬೆಳೆಯಬಾರದು.  ಭತ್ತದ ಬೆಳೆಗೆ ಪರ್ಯಾಯವಾಗಿ ಸೆಪ್ಟೆಂಬರ್ ಮೊದಲ ಪಾಕ್ಷಿಕದಿಂದ ಅಕ್ಟೋಬರ್ ಮೊದಲನೇ ಪಾಕ್ಷಿಕದ ಅಂತ್ಯದವರೆಗೆ ಹಿಂಗಾರಿ ಜೋಳ ಬಿತ್ತನೆ ಮಾಡಬಹುದು.  ಅಕ್ಟೋಬರ್ ಮೊದಲನೇ ಪಾಕ್ಷಿಕದಿಂದ ನವೆಂಬರ್ ಮೊದಲನೇ ಪಾಕ್ಷಿಕದ ಅಂತ್ಯದವರೆಗೆ ಕಡಲೆ ಬಿತ್ತನೆ ಮಾಡಬಹುದು.  ಸೆಪ್ಟೆಂಬರ್ ಮೊದಲ ಪಾಕ್ಷಿಕದಿಂದ ಅಕ್ಟೋಬರ್ ಮೊದಲನೇ ಪಾಕ್ಷಿಕದ ಅಂತ್ಯದವರೆಗೆ ಮೆಕ್ಕೆಜೋಳ ಬಿತ್ತನೆ ಮಾಡಬಹುದು.  ನವಣೆ ಮತ್ತು ಹುಳ್ಳಿಯನ್ನು ತಡವಾದ ಮುಂಗಾರಿನಲ್ಲಿ ಸೆಪ್ಟೆಂಬರ್ ವರೆಗೆ ಬಿತ್ತನೆ ಮಾಡಬಹುದು.  ಆಗಸ್ಟ್. 15 ರ ನಂತರ ಸೂರ್ಯಾಕಾಂತಿ ಬಿತ್ತನೆ ಮಾಡಬಹುದು.  ಬೂದಿ ರೋಗದ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು.  ಅಲಸಂದೆಯನ್ನು ಕೆಂಪು ಮಣ್ಣಿನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಬಿತ್ತನೆ ಮಾಡಬಹುದು.  ಕುಸುಬೆಯನ್ನು ಅಕ್ಟೋಬರ್ 15 ರಿಂದ ನವೆಂಬರ್ ವರೆಗೆ ಬಿತ್ತನೆ ಮಾಡಬಹುದು. 
ವಿಶೇಷ ಸೂಚನೆಗಳು : ಕಡಲೆಯನ್ನು ಸವಳು ಭೂಮಿಯಲ್ಲಿ ಬೆಳೆಯಬಾರದು.  ಸವಳು ಭೂಮಿಯಲ್ಲಿ ಹಿಂಗಾರಿ ಜೋಳ, ಕುಸುಬೆ, ಸೂರ್ಯಕಾಂತಿ ಬೆಳೆಯಬಹುದು.  ಬೆಳೆಗಳನ್ನು ಬೋದು ಪದ್ದತಿಗಳಲ್ಲಿ ಬೆಳೆಯಬೇಕು.  ಕಪ್ಪು ಮಣ್ಣಿನಲ್ಲಿ ಸೂಕ್ತ ಬಸಿಗಾಲುವೆಗಳನ್ನು ಹಾಕಿ ಹೆಚ್ಚಾದ ನೀರು ಹೊರ ಹೋಗುವಂತೆ ಮಾಡಬೇಕು.  ರೋಗ ಮತ್ತು ಕೀಟ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕು  ಎಂದು ಕೊಪ್ಪಳ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಹಾಗೂ ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ರೈತರಲ್ಲಿ ಮನವಿ ಮಾಡಿದ್ದಾರೆ.

ಗೌರಿ-ಗಣೇಶ ಹಬ್ಬದ ಆಚರಣೆ : ಮದ್ಯ ಮಾರಾಟ ನಿಷೇಧ


ಕೊಪ್ಪಳ ಆ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಾದ್ಯಂತ ಆ. 25 ರಂದು ಗೌರಿ-ಗಣೇಶ ಹಬ್ಬದ ಆಚರಣೆ ನಿಮಿತ್ಯ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಶಾಂತಿಪಾಲನೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಆದೇಶ ಹೊರಡಿಸಿದ್ದಾರೆ.
    ಗಣೇಶ ವಿಸರ್ಜನೆಯನ್ನು ಪ್ರತಿ ವರ್ಷದಂತೆ ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅಲ್ಲದೇ ಸೆಪ್ಟೆಂಬರ್. 02 ರಂದು ಮುಸ್ಲಿಂ ಬಾಂಧವರು ಬಕ್ರಿದ್ ಹಬ್ಬವನ್ನು ಆಚರಿಸಲಿದ್ದು, ಈ ಎರಡೂ ಹಬ್ಬಗಳ ಆಚರಣೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಮಧ್ಯಪಾನವನ್ನು ಈ ಕೆಳಕಂಡ ದಿನಗಳಂದು ನಿಷೇಧಿಸಲಾಗಿದೆ.  
ಗಣೇಶ ವಿಸರ್ಜನೆಯ 3ನೇ ದಿನದ ಅಂಗವಾಗಿ ಆ. 26 ರಂದು ರಾತ್ರಿ 12-00 ಗಂಟೆಯಿಂದ 27ರ ರಾತ್ರಿ 12-00 ಗಂಟೆಯವರೆಗೆ ಜಿಲ್ಲೆಯಾದ್ಯಂತ ಮದ್ಯಪಾನ ನಿಷೇಧಿಸಲಾಗಿದೆ.  5ನೇ ದಿನದ ವಿಸರ್ಜನೆ ಅಂಗವಾಗಿ  ಆ. 28 ರಂದು ರಾತ್ರಿ 12-00 ಗಂಟೆಯಿಂದ ಆ. 29ರ ರಾತ್ರಿ 12-00 ಗಂಟೆಯವರೆಗೆ ಜಿಲ್ಲೆಯಾದ್ಯಂತ ಮಧ್ಯಪಾನ ನಿಷೇಧಿಸಲಾಗಿದೆ.  ಗಣೇಶ ವಿಸರ್ಜನೆಯ 7ನೇ ದಿನದ ಅಂಗವಾಗಿ  ಆ. 30 ರಂದು  ರಾತ್ರಿ 12-00 ಗಂಟೆಯಿಂದ ಆ. 31ರ ರಾತ್ರಿ 12-00 ಗಂಟೆಯವರೆಗೆ ಗಂಗಾವತಿ ತಾಲೂಕಿನಲ್ಲಿ.  9ನೇ ದಿನದ ಅಂಗವಾಗಿ ಸೆಪ್ಟೆಂಬರ್. 01 ರಂದು ರಾತ್ರಿ 12-00 ಗಂಟೆಯಿಂದ ಸೆ. 02ರ ರಾತ್ರಿ 12-00 ಗಂಟೆಯವರೆಗೆ ಕೊಪ್ಪಳ ಮತ್ತು ಗಂಗಾವತಿ ತಾಲೂಕಿನಲ್ಲಿ.  11ನೇ ದಿನದ ಅಂಗವಾಗಿ ಸೆ. 03 ರಂದು ರಾತ್ರಿ 12-00 ಗಂಟೆಯಿಂದ ಸೆ. 04 ರ ರಾತ್ರಿ 12-00 ಗಂಟೆಯವರೆಗೆ ಗಂಗಾವತಿ ಮತ್ತು ಕೊಪ್ಪಳ ತಾಲೂಕುಗಳಲ್ಲಿ ಮಧ್ಯಪಾನ ನಿಷೇಧಿಸಲಾಗಿದೆ. ಗಣೇಶ ವಿಸರ್ಜನೆಯ 13ನೇ ದಿನದ ಅಂಗವಾಗಿ ಸೆ. 05 ರಂದು ರಾತ್ರಿ 12-00 ಗಂಟೆಯಿಂದ ಸೆ.06 ರ ರಾತ್ರಿ 12-00 ಗಂಟೆಯವರೆಗೆ ಗಂಗಾವತಿ ತಾಲೂಕಿನಲ್ಲಿ ಹಾಗೂ 15ನೇ ದಿನ ಸೆ. 07 ರಂದು ರಾತ್ರಿ 12-00 ಗಂಟೆಯಿಂದ ಸೆ. 08 ರ ರಾತ್ರಿ 12-00 ಗಂಟೆಯವರೆಗೆ ಗಂಗಾವತಿ ನಗರದಲ್ಲಿ ಮಧ್ಯಪಾನ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ : ಅರ್ಜಿ ಆಹ್ವಾನ


ಕೊಪ್ಪಳ ಆ. 24 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ರಾಷ್ಟ್ರೀಯ ಪ್ರತಿಭಾನ್ವೇಷಣೆ (ಎನ್.ಟಿ.ಎಸ್.ಇ/ ಎನ್.ಎಂ.ಎಂ.ಎಸ್) ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  
ಕೊಪ್ಪಳ ತಾಲೂಕಿನ ಎಲ್ಲಾ ರಾಜ್ಯ ಸರ್ಕಾರಿ ಮತ್ತು ಅನುದಾನಿತ, ವಸತಿ ರಹಿತ ಶಾಲೆಗಳಲ್ಲಿ ಪ್ರಸ್ತುತ 8ನೇ ತರಗತಿಯ ವಿದ್ಯಾರ್ಥಿಗಳು ಎನ್.ಎಂ.ಎಂ.ಎಸ್  ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.  ಹಾಗೂ ತಾಲೂಕಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ/ ಅನುದಾನರಹಿತ ಶಾಲೆಗಳಲ್ಲಿ ಪ್ರಸ್ತುತ 10ನೇ ತರಗತಿಯ ವಿದ್ಯಾರ್ಥಿಗಳು ಎನ್.ಟಿ.ಎಸ್.ಇ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.  
ಅರ್ಜಿಗಳು ಓ.ಎಂ.ಆರ್ ಶೀಟ್‍ನೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಲಭ್ಯವಿದ್ದು, ಅರ್ಜಿಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಮುಖ್ಯೋಪಾಧ್ಯಾಯರ ಮುಖಾಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಸೆಪ್ಟೆಂಬರ್. 21 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಶಾಲೆಯ ಮುಖ್ಯಗುರುಗಳನ್ನು ಹಾಗೂ ತಾಲೂಕು ನೋಡಲ್ ಅಧಿಕಾರಿ ಮಹಾಂತೇಶ ಕೆ. ಮೊಬೈಲ್ ಸಂಖ್ಯೆ 9739909367 ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆ- ಡಾ. ಅಲಕಾನಂದ ಮಳಗಿ


ಕೊಪ್ಪಳ ಆ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿನ ಶಿಶು ಮರಣ ಪ್ರಮಾಣವನ್ನು ಗಮನಿಸಿದಾಗ, ಶಿಶು ಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಅಲಕಾನಂದ ಮಳಗಿ ಸ್ಪಷ್ಟಪಡಿಸಿದ್ದಾರೆ.
     ಕೊಪ್ಪಳ ಜಿಲ್ಲೆಯಲ್ಲಿನ ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಭವಿಸಿದ ಶಿಶು ಮರಣ ಪ್ರಮಾಣದ ಅಂಕಿ-ಅಂಶಗಳನ್ನು ಗಮನಿಸಿದಾಗ, ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕೈಗೊಂಡ ಹಲವಾರು ಸುಧಾರಣಾ ಕ್ರಮಗಳಿಂದಾಗಿ ಶಿಶು ಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡಿರುವುದು ಅಂಕಿ-ಅಂಶಗಳಿಂದ ದೃಢಪಡುತ್ತದೆ.  2012-13 ರಲ್ಲಿ ಇದ್ದಂತಹ ಶಿಶು ಮರಣದ ಪ್ರಮಾಣ ಪ್ರತಿ ಒಂದು ಸಾವಿರ ಜನನಕ್ಕೆ 25. 45 ಇದ್ದರೆ, 2016-17 ರಲ್ಲಿ 14. 93 ಕ್ಕೆ ಇಳಿಕೆಯಾಗಿರುವುದು ಕಂಡುಬರುತ್ತದೆ.   2012-13 ರಲ್ಲಿ ಆದ ಸಜೀವ ಜನನಗಳ ಸಂಖ್ಯೆ 28332, ಶಿಶು ಮರಣ ಸಂಖ್ಯೆ 721.  ಮರಣ ಪ್ರಮಾಣ 1000 ಕ್ಕೆ 25. 45 ಆಗಿತ್ತು.  2013-14 ರಲ್ಲಿ 28990 ಸಜೀವ ಜನನವಾಗಿ, 653 ಮರಣವಾಗಿದ್ದರೆ ಮರಣ ಪ್ರಮಾಣ 22. 53.  2014-15 ರಲ್ಲಿ 30590 ಜನನವಾಗಿ 621 ಮರಣವಾಗಿದ್ದರೆ, ಮರಣ ಪ್ರಮಾಣ 20. 30.  2015-16 ರಲ್ಲಿ 29195 ಜನನವಾಗಿ, 528 ಮರಣವಾಗಿತ್ತು, ಮರಣ ಪ್ರಮಾಣ 18. 09.  2016-17 ರಲ್ಲಿ 29463 ಜನನವಾಗಿ, 440 ಮರಣ ಸಂಭವಿಸಿತ್ತು.  ಮರಣ ಪ್ರಮಾಣ ಪ್ರತಿ ಸಾವಿರಕ್ಕೆ 14. 93 ಕ್ಕೆ ಇಳಿಕೆಯಾಗಿದೆ.  2017-18 ರಲ್ಲಿ ಈವರೆಗೆ 9797 ಜೀವನ ಜನನವಾಗಿದ್ದು, 157 (0-01 ವರ್ಷ) ಶಿಶು ಮರಣ ಸಂಭವಿಸಿದೆ.  ಹುಟ್ಟು ಉಸಿರಾಟದ ತೊಂದರೆಯಿಂದ, ಕಡಿಮೆ ಹುಟ್ಟು ತೂಕದಿಂದ, ಹುಟ್ಟು ಹೃದಯದ ತೊಂದರೆಯಿಂದ ಶಿಶು ಮರಣಗಳು ಸಂಭವಿಸಿದ್ದು, ಶಿಶು ಮರಣ ಮತ್ತು ತಾಯಿ ಮರಣಗಳ ಸಂಖ್ಯೆಯನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.  ಶಿಶು-ಮರಣ ಪ್ರಕರಣಗಳ ಪರಿಶೀಲನೆಗಾಗಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ಸಭೆ ಜರುಗುತ್ತಿದ್ದು, ಈ ಸಭೆಯಲ್ಲಿ ಪ್ರತಿಯೊಂದು ಪ್ರಕರಣಗಳನ್ನೂ ಕೂಡ ಪರಿಶೀಲಿಸಿ, ಮರಣದ ಕಾರಣ ಹಾಗೂ ಪರಿಸ್ಥಿತಿಯ ಪರಾಮರ್ಶೆ ನಡೆಸಲಾಗುತ್ತಿದೆ.  ಸಭೆಯಲ್ಲಿ ತಾಲೂಕು ಅಧಿಕಾರಿಗಳು, ಶಿಶು ಮರಣ ಸಂಭವಿಸಿದ ಖಾಸಗಿ ಆಸ್ಪತ್ರೆಯ ಮಕ್ಕಳ ತಜ್ಞರು, ಸರ್ಕಾರಿ ಸೇವೆಯಲ್ಲಿರುವ ಮಕ್ಕಳ ತಜ್ಞರು ಭಾಗವಹಿಸಿ, ಶಿಶು ಮರಣಗಳ ಬಗ್ಗೆ ಪ್ರಕರಣವಾರು ತನಿಖೆ ನಡೆಸಲಾಗುತ್ತಿದೆ.  ಶಿಶು ಮರಣ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ತಿಂಗಳ 10 ನೇ ತಾರೀಕಿನಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರನ್ನೊಳಗೊಂಡಂತೆ ಶಿಶು ಮರಣಗಳ ತನಿಖೆಯನ್ನು ಪ್ರತ್ಯೇಕವಾಗಿ ಕೈಗೊಳ್ಳಲಾಗುತ್ತದೆ.
     ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿನ ಶಿಶು ಮರಣಗಳ ಪ್ರಮಾಣವನ್ನು ಗಮನಿಸಿದಾಗ, ಜಿಲ್ಲೆಯಲ್ಲಿ ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಮರಣ ಪ್ರಮಾಣವನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಪ್ರಾಮಾಣಿಕ ಯತ್ನ ಕೈಗೊಳ್ಳಲಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಅಲಕಾನಂದ ಮಳಗಿ ಸ್ಪಷ್ಟನೆ ನೀಡಿದ್ದಾರೆ.

ಹಬ್ಬಗಳ ಆಚರಣೆ : ಸಮಾಜಘಾತುಕ ಶಕ್ತಿಗಳ ಮೇಲೆ ತೀವ್ರ ನಿಗಾ- ಡಾ. ಅನೂಪ್ ಶೆಟ್ಟಿ


ಕೊಪ್ಪಳ ಆ. 24 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಆಚರಿಸಲಾಗುವ ಗೌರಿ-ಗಣೇಶ ಹಬ್ಬ ಹಾಗೂ ಬಕ್ರೀದ್ ಹಬ್ಬಗಳ ಸಮಯದಲ್ಲಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕಿಡಿಗೇಡಿಗಳ ಹಾಗೂ ವದಂತಿ ಹಬ್ಬಿಸುವವರ ಮತ್ತು ಸಮಾಜಘಾತುಕ ಶಕ್ತಿಗಳ ಚಲನವಲನಗಳ ಮೇಲೆ ಸೂಕ್ತ ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ ಅವರು ತಿಳಿಸಿದ್ದಾರೆ.
     ಇದೇ ಸೆ. 25 ರಿಂದ ಗೌರಿ-ಗಣೇಶ ಹಬ್ಬ ಹಾಗೂ ಸೆ. 02 ರಂದು ಬಕ್ರೀದ್ ಹಬ್ಬ ಆಚರಣೆಯನ್ನು ಜಿಲ್ಲೆಯಲ್ಲಿ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 800 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಹಾಗೂ 500 ಕ್ಕೂ ಹೆಚ್ಚು ಗೃಹ ರಕ್ಷಕ ದಳದವರನ್ನು ಅಲ್ಲದೆ ಹೆಚ್ಚುವರಿಯಾಗಿ ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.  ಜಿಲ್ಲೆಯ ಪ್ರಮುಖ ಹೆದ್ದಾರಿ ಹಾಗೂ ರಸ್ತೆಗಳಲ್ಲಿ ಪೊಲೀಸ್ ಇಲಾಖೆಯಿಂದ ಚೆಕ್‍ಪೋಸ್ಟ್ ಗಳನ್ನು ಸೃಜಿಸಲಾಗಿದ್ದು, ಜಿಲ್ಲೆಗೆ ಆಗಮಿಸುವ ಹಾಗೂ ಹೊರಹೋಗುವ ವಾಹನಗಳನ್ನು ತಪಾಸಣೆ ಮಾಡಲಾಗುವುದು.  ಹಬ್ಬಗಳ ಆಚರಣೆ ಸಮಯದಲ್ಲಿ ಮತೀಯ ಭಾವನೆಗಳನ್ನು ಕೆರಳಿಸುವ ಹಾಡುಗಳನ್ನು ಬಳಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದ್ದು, ಅಂತಹ ಹಾಡುಗಳನ್ನು ಬಳಸಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.  ಜಿಲ್ಲೆಯಾದ್ಯಂತ ಡಿ.ಜೆ. ಬಳಕೆಯನ್ನು ನಿಷೇಧಿಸಿ ಈಗಾಗಲೆ ಜಿಲ್ಲಾಧಿಕಾರಿಗಳ ಆದೇಶ ಹೊರಡಿಸಿದ್ದು, ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.  ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಆಯೋಜಕರು ಪೆಂಡಾಲಿನಲ್ಲಿ ಸಿಸಿ ಟಿವಿಗಳನ್ನು ಅಳವಡಿಸುವಂತೆ ಕೋರಲಾಗಿದೆ.  ಅಲ್ಲದೆ ಸ್ಥಳದಲ್ಲಿ ಒಬ್ಬರು ದಿನದ 24 ಗಂಟೆಯೂ ಇರುವ ರೀತಿಯಲ್ಲಿ ವ್ಯವಸ್ಥೆಗೊಳಿಸುವಂತೆ ಕೋರಲಾಗಿದೆ.  ಒಟ್ಟಾರೆ ಜಿಲ್ಲೆಯಲ್ಲಿ ಗೌರಿ-ಗಣೇಶ ಹಾಗೂ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಶಾಂತಿಯುತವಾಗಿ ಆಚರಣೆ ಮಾಡುವಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಆ. 27 ರಂದು ಕೊಪ್ಪಳದಲ್ಲಿ ತಾಲೂಕ ಮಟ್ಟದ ದಸರಾ ಕ್ರೀಡಾಕೂಟ


ಕೊಪ್ಪಳ ಆ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ  ಇಲಾಖೆ, ತಾಲೂಕ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಇವರ ಸಹಯೋಗದಲ್ಲಿ  ಕೊಪ್ಪಳ ತಾಲೂಕ ಮಟ್ಟದ ದಸರಾ ಕ್ರೀಡಾ ಕೂಟವನ್ನು ಆ. 27 ರಂದು ಬೆಳಿಗ್ಗೆ 10-00 ಗಂಟೆಗೆ ಮಳೆಮಲ್ಲೇಶ್ವರ ದೇವಸ್ಥಾನ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
    ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಉದ್ಘಾಟನೆ ನೆರೆವೇರಿಸುವರು.  ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಶಾಸಕ ಇಕ್ಬಾಲ ಅನ್ಸಾರಿ, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ ಹಾಗೂ ಶರಣಪ್ಪ ಮಟ್ಟೂರ, ಜಿ.ಪಂ ಉಪಾಧ್ಯಕ್ಷೆ ಲಕ್ಷಮ್ಮ ಎಸ್. ನೀರಲೂಟಿ, ಜಿ.ಪಂ. ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ,  ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಮಹೇಶ ನವಲಹಳ್ಳಿ,  ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮಪ್ಪ ಅಗಸಿಮುಂದಿನ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ಜಿ.ಪಂ ಸದಸ್ಯರುಗಳಾದ ಎಸ್.ಬಿ ನಾಗರಳ್ಳಿ, ರತ್ನವ್ವ ಭರಮಪ್ಪ ನಗರ, ಗವಿಸಿದ್ದಪ್ಪ ಕರಡಿ, ಚೌಡ್ಕಿ ರಾಮಣ್ಣ ಪಕೀರಪ್ಪ, ಗಾಯಿತ್ರಿ ವೆಂಕಟೇಶ, ಬೀನಾ ಗೌಸ್, ಗುಳಪ್ಪ ಹಲಗೇರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ ಖಾದ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹಾದೇವನ್ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

Wednesday, 23 August 2017

ಶಾಂತಿ-ಸೌಹಾರ್ದತೆಯಿಂದ ಗೌರಿ ಗಣೇಶ ಹಬ್ಬ ಆಚರಿಸಿ- ಡಿ.ಸಿ. ಕನಗವಲ್ಲಿ ಮನವಿಕೊಪ್ಪಳ ಆ. 23 (ಕ.ವಾ): ಗೌರಿ-ಗಣೇಶ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಜೊತೆಗೆ ಪರಿಸರ ಸ್ನೇಹಿಯನ್ನಾಗಿ ಆಚರಿಸುವ ಮೂಲಕ ದೇವರಿಗೆ ಭಕ್ತಿ-ಭಾವ ಸಮರ್ಪಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿದರು.

     ಕೊಪ್ಪಳ ಜಿಲ್ಲೆಯಾದ್ಯಂತ ಇದೇ ಆ. 25 ರಿಂದ 29 ರವರೆಗೆ ಗೌರಿ-ಗಣೇಶ ಹಬ್ಬ ಆಚರಿಸುವ ಕುರಿತು ಜಿಲ್ಲಾ ಆಡಳಿತ ಭವನದ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಶಾಂತಿಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಿಲ್ಲೆಯಲ್ಲಿ ಗೌರಿ-ಗಣೇಶ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು.  ಬಕ್ರೀದ್ ಹಬ್ಬವೂ ಕೂಡ ಗಣೇಶ ಹಬ್ಬದ ಸಂದರ್ಭದಲ್ಲಿಯೇ ಆಚರಿಸಲಾಗುವುದರಿಂದ ಹಬ್ಬವನ್ನು  ಎಲ್ಲ ಸಮುದಾಯದವರು ಸೌಹರ್ದತೆ ಹಾಗೂ ಭಾವೈಕ್ಯತೆಯಿಂದ ಆಚರಿಸಬೇಕು.  ಗಣೇಶ ಮೂರ್ತಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕೂರಿಸಬೇಕು.  ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸುವ ಸಂಘಟಕರು ನಗರಸಭೆ, ಜೆಸ್ಕಾಂ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು,  ಈ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಏಕ-ಗವಾಕ್ಷಿ ಪದ್ಧತಿಯಲ್ಲಿ ಪರವಾನಗಿ ಒದಗಿಸಲಾಗುವುದು.  ಸಾರ್ವಜನಿಕರಿಗೆ ತೊಂದರೆಯಾಗುವ ರೀತಿ ದೊಡ್ಡ ಗಾತ್ರದ ಮೂರ್ತಿಯನ್ನು ಇಡುವುದು ಸಮಂಜಸವಲ್ಲ. ಆದಷ್ಟು ಚಿಕ್ಕ ಗಾತ್ರದ ಪರಿಸರ ಸ್ನೇಹಿ ಗಣಪನನ್ನೇ ಕೂರಿಸಿ.  ವಿದ್ಯುತ್ ಸಂಪರ್ಕ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಲು ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿಯನ್ನು ಸಾರ್ವಜನಿಕರು ಬಳಸುವುದು ಸೂಕ್ತ.   ಕುಡಿಯುವ ನೀರಿನ ಮೂಲಗಳಾದ ಬಾವಿ, ಕರೆಗಳಲ್ಲಿ ರಾಸಾಯನಿಕ ಬಣ್ಣಯುಕ್ತ ಗಣೇಶ ಮೂರ್ತಿಗಳನ್ನು ವಿಸರ್ಜಿಸಬಾರದು.  ಇಲ್ಲದಿದ್ದಲ್ಲಿ, ಕುಡಿಯುವ ನೀರು ವಿಷಯುಕ್ತವಾಗಲಿದೆ.  ಹೆಚ್ಚು ಶಬ್ದ ಬರುವ ಪಟಾಕಿಗಳು ವೃದ್ಧರು ಹಾಗೂ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಅಂತಹ ಪಟಾಕಿಗಳನ್ನು ಬಳಸಬೇಡಿ  ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು  ಕಳಕಳಿಯ ಮನವಿ ಮಾಡಿಕೊಂಡರು.
     ಜಿಲ್ಲೆಯ ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಸಾಗುವ ರಸ್ತೆಗಳ ತೆಗ್ಗುಗಳನ್ನು ಮುಚ್ಚಿ, ರಸ್ತೆಯನ್ನು ಸಮರ್ಪಕವಾಗಿಸಬೇಕು.  ಕೊಪ್ಪಳ ನಗರದಲ್ಲಿ ಸಣ್ಣ ಪುಟ್ಟ ಗಣೇಶ ಮೂರ್ತಿಗಳ ವಿಸರ್ಜನೆಗೆ ಬ್ಯಾರೆಲ್‍ಗಳ ವ್ಯವಸ್ಥೆಯನ್ನು ನಗರಸಭೆಯ ವತಿಯಿಂದ ಮಾಡಬೇಕು.  ಶಾಂತಿ ಪಾಲನೆಯ ದೃಷ್ಟಿಯಿಂದ ಮದ್ಯಪಾನ ಮಾರಾಟವನ್ನು ನಿರ್ಬಂಧಿಸಬೇಕು.  ಗಣೇಶ ಪ್ರತಿಷ್ಠಾಪನೆ ದಿನದಿಂದ ವಿಸರ್ಜನೆ ದಿನದವರೆಗೂ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗಬಾರದು, ಅಲ್ಲದೆ ಗಣೇಶ ಸ್ಥಾಪಿಸುವ ಪೆಂಡಾಲ್‍ಗಳಲ್ಲಿ ವಿದ್ಯುತ್ ಸಂಪರ್ಕ ಸುರಕ್ಷಿತವಾಗಿರುವ ಬಗ್ಗೆ ಜೆಸ್ಕಾಂನವರು ತಂಡ ರಚಿಸಿಕೊಂಡು, ಪರಿಶೀಲನೆ ನಡೆಸಿ, ಅಗತ್ಯ ಸಲಹೆ, ಸೂಚನೆಗಳನ್ನು ನೀಡಬೇಕು.  ಜಿಲ್ಲೆಯಾದ್ಯಂತ ಗಣೇಶ ಹಬ್ಬ ಆಚರಣೆ ಅವಧಿಯಲ್ಲಿ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿಗಳು ಸಜ್ಜಾಗಿರಬೇಕು.  ಆಯಾ ತಾಲೂಕು ಕೇಂದ್ರ ಹಾಗೂ ಸ್ಥಳೀಯ ಸಂಸ್ಥೆಗಳು, ಗಣಪತಿ ವಿಸರ್ಜನೆಗೆ ಸ್ಥಳವನ್ನು ನಿಗದಿಪಡಿಸಿ, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.  ವಿಸರ್ಜನಾ ಸ್ಥಳದಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಇರುವಂತೆ ವಿದ್ಯುತ್ ದೀಪದ ವ್ಯವಸ್ಥೆ ಮಾಡಬೇಕು.  ಜಿಲ್ಲೆಯ ನಗರ ಮತ್ತು ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಹಬ್ಬದ ಶುಭಾಷಯ ಕೋರುವ ಬ್ಯಾನರ್‍ಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು.  ಅನುಮತಿ ನೀಡುವಾಗ ಬ್ಯಾನರ್ ಅಳವಡಿಸಲಾಗುವ ದಿನಗಳನ್ನು ನಿಗದಿಪಡಿಸಿ, ಅನುಮತಿ ನೀಡಬೇಕು.  ನಿಗದಿತ ದಿನದ ಒಳಗಾಗಿ ಬ್ಯಾನರ್ ತೆರವುಗೊಳಿಸದಿದ್ದಲ್ಲಿ, ಅಂತಹವುಗಳನ್ನು ಅಧಿಕಾರಿಗಳೇ ತೆರವುಗೊಳಿಸಿ, ತೆರವಿನ ವೆಚ್ಚ ಹಾಗೂ ದಂಡವನ್ನು ವಿಧಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
     ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ ಅವರು ಮಾತನಾಡಿ,  ಭಕ್ತಿ-ಭಾವದಿಂದ ಹಾಗೂ ಸಂಭ್ರಮದಿಂದ ಗೌರಿ-ಗಣೇಶ ಹಬ್ಬ ಆಚರಿಸಬೇಕಾಗಿದ್ದು, ಆದರೆ, ಗಣಪತಿ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ  ಸಾರ್ವಜನಿಕರು ಸಭ್ಯತೆಯ ಎಲ್ಲೆಯನ್ನು ಮೀರಬಾರದು.  ಮೆರವಣಿಗೆ ಸಂದರ್ಭದಲ್ಲಿ ಅನಗತ್ಯವಾಗಿ ಪೊಲೀಸರೊಂದಿಗೆ ವಾಗ್ವಾದ ಮಾಡುವಂತಿಲ್ಲ.  ಒಟ್ಟಾರೆಯಾಗಿ ಹಬ್ಬ ಶಾಂತಿಯುತವಾಗಿ ನಡೆಸಲು ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
     ಸಭೆಯಲ್ಲಿ ಭಾಗವಹಿಸಿದ್ದ ಗಣೇಶ ಉತ್ಸವ ಸಮಿತಿಗಳ ಪ್ರತಿನಿಧಿಗಳು ಮಾತನಾಡಿ, ಗಣೇಶ ಮೂರ್ತಿ ವಿಸರ್ಜನಾ ದಿನಗಳಲ್ಲಿ ಸಂಪೂರ್ಣವಾಗಿ ಮದ್ಯಮಾರಾಟ ಮತ್ತು ಮದ್ಯಪಾನ ನಿಷೇಧಿಸಬೇಕು.  ನಗರದಲ್ಲಿ ರಸ್ತೆಗಳು ಹಾಳಾಗಿದ್ದು, ತಾತ್ಕಾಲಿಕವಾಗಿಯಾದರೂ, ದುರಸ್ತಿಯಾಗಬೇಕು.   ಸಣ್ಣ-ಪುಟ್ಟ ಗಣೇಶ ಮೂರ್ತಿಗಳ ವಿಸರ್ಜನೆಗೆ ನಗರಸಭೆ ವತಿಯಿಂದ ನೀರಿನ ಟ್ಯಾಂಕ್‍ಗಳ ವ್ಯವಸ್ಥೆ ಮಾಡಬೇಕು.  ಸಂಜೆ 06 ರಿಂದ ರಾತ್ರಿ 10 ರವರೆಗೆ ನಿರಂತರ ವಿದ್ಯುತ್ ಪೂರೈಕೆಯಾಗಬೇಕು.  ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
    ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಡಿವೈಎಸ್‍ಪಿ ಶ್ರೀಕಾಂತ್ ಕಟ್ಟಿಮನಿ., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ್, ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳ ಮುಖ್ಯಾಧಿಕಾರಿಗಳು, ಜೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿ, ಅಬಕಾರಿ ಇಲಾಖೆಗಳ ಅಧಿಕಾರಿಗಳು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಶಿವಾನಂದ ಹೊದ್ಲೂರ, ನಾಗರಾಜ ಬಳ್ಳಾರಿ ಹಾಗೂ ವಿವಿಧ ಗಣೇಶ ಉತ್ಸವ ಸಮಿತಿಯ ಪದಾಧಿಕಾರಿಗಳು, ಗಣ್ಯರು, ಸಾರ್ವಜನಿಕರು ಭಾಗವಹಿಸಿದ್ದರು.
     ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿ ಆಚರಿಸುವಂತೆ ಸಾರ್ವಜನಿಕರಲ್ಲಿ ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಿದ್ಧಪಡಿಸಿರುವ ಜಾಗೃತಿ ಪೋಸ್ಟರ್ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ಕೊಪ್ಪಳ ನಗರದ ಸಮಗ್ರ ಅಭಿವೃದ್ಧಿಗೆ ಕ್ರಮ- ರಾಘವೇಂದ್ರ ಹಿಟ್ನಾಳ


 ಕೊಪ್ಪಳ ಆ. 23 (ಕ.ವಾ): ಕೊಪ್ಪಳ ನಗರದ ರಸ್ತೆ, ಚರಂಡಿ, ಕುಡಿಯುವ ನೀರು ಮತ್ತಿತರೆ ಸೌಕರ್ಯಗಳನ್ನು ವ್ಯವಸ್ಥಿತಗೊಳಿಸಿ, ಸಮಗ್ರ ಅಭಿವೃದ್ಧಿಗೆ ಈಗಾಗಲೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮೂರು ತಿಂಗಳ ಒಳಗಾಗಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು
 
     ಕೊಪ್ಪಳ ನಗರದಲ್ಲಿ ನವೀಕರಣಗೊಳಿಸಿರುವ ಸಾಹಿತ್ಯ ಭವನದ ಉದ್ಘಾಟನೆ, ಗೃಹಭಾಗ್ಯ ಯೋಜನೆಯಡಿ ನಗರಸಭೆ ಪೌರಕಾರ್ಮಿಕರಿಗೆ ಮನೆ ನಿರ್ಮಾಣದ ಕಾರ್ಯಾದೇಶ ಪತ್ರ ವಿತರಣೆ ಹಾಗೂ ವಿಕಲಚೇತನರಿಗೆ ತ್ರಿಚಕ್ರ ಮೋಟಾರು ವಿತರಣೆಗಾಗಿ ಬುಧವಾರದಂದು ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
 
     ಕೊಪ್ಪಳ ನಗರದಲ್ಲಿ ಪ್ರಮುಖ ರಸ್ತೆಗಳಾಗಿರುವ ಸಾಲಾರಜಂಗ್ ರಸ್ತೆ, ಹಸನ್ ರಸ್ತೆ, ಕಾತರಕಿ ರಸ್ತೆ ಸೇರಿದಂತೆ ಹಲವು ರಸ್ತೆಗಳನ್ನು ಉತ್ತಮವಾಗಿ ಅಭಿವೃದ್ಧಿಪಡಿಸಲು ಈಗಾಗಲೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮೂರು ತಿಂಗಳ ಒಳಗಾಗಿ ಕಾಮಗಾರಿಗಳು ಪ್ರಾರಂಭವಾಗಲಿವೆ.  ಕೊಪ್ಪಳ ನಗರಕ್ಕೆ 24*7 ಕುಡಿಯುವ ನೀರು ಪೂರೈಕೆ ಯೋಜನೆ ಈಗಾಗಲೆ ಪೂರ್ಣಗೊಳ್ಳುವ ಹಂತದಲ್ಲಿದ್ದು, ನಗರದಲ್ಲಿನ ಪ್ರತಿಯೊಂದು ವಾರ್ಡ್‍ಗೂ ಸಮರ್ಪಕವಾಗಿ ನೀರು ಪೂರೈಕೆ ಮಾಡುವ ಪೈಪ್‍ಲೈನ್ ವಿತರಣಾ ಜಾಲದ ಕಾಮಗಾರಿ ಚಾಲನೆಯಲ್ಲಿದೆ.  ನಗರಕ್ಕೆ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಮಾಡಲು, ಹುಲಿಕೆರೆಯನ್ನು ತುಂಬಿಸುವ ಕಾರ್ಯವನ್ನು ಕೈಗೊಳ್ಳಲಾಗುವುದು.  ಕೊಪ್ಪಳದ ಸಾಹಿತ್ಯ ಭವನವನ್ನು ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿಯ 72 ಲಕ್ಷ ರೂ. ಅನುದಾನದಲ್ಲಿ ನವೀಕರಿಸಲಾಗಿದ್ದು, ಇನ್ನೂ ಶೌಚಾಲಯ ಅಭಿವೃದ್ಧಿ ಕಾರ್ಯವನ್ನು ಮಾಡಬೇಕಿದೆ, ಅಲ್ಲದೆ ಸಾಹಿತ್ಯ ಭವನಕ್ಕೆ ಹವಾನಿಯಂತ್ರಿತ ವ್ಯವಸ್ಥೆ ಕೈಗೊಳ್ಳಲು ಉದ್ದೇಶಿಸಲಾಗಿದೆ.  ಹಂತ-ಹಂತವನ್ನು ಅಭಿವೃದ್ಧಿ ಕಾರ್ಯ ಮಾಡಲಾಗುವುದು.  ಕೊಪ್ಪಳ ನಗರವನ್ನು ಚಂಡೀಗಢ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ.  ಕಳೆದ ಅನೇಕ ದಶಕಗಳಲ್ಲಿ ಆಗದ ಅಭಿವೃದ್ಧಿ ಕಾರ್ಯಗಳು ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಕ್ಷೇತ್ರಕ್ಕೆ ಸುಮಾರು 2 ಸಾವಿರ ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ತರುವ ಕಾರ್ಯವನ್ನು ಕೈಗೊಳ್ಳಲಾಗಿದೆ.  ಬಡವರ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಕಡಿಮೆ ದರದಲ್ಲಿ ಉತ್ತಮ ಊಟೋಪಹಾರ ದೊರೆಯುವಂತೆ ಮಾಡಲು ಸರ್ಕಾರದ ವತಿಯಿಂದ ಬೆಂಗಳೂರಿನಲ್ಲಿ ಈಗಾಗಲೆ ಪ್ರಾರಂಭಿಸಲಾಗಿರುವ ಇಂದಿರಾ ಕ್ಯಾಂಟೀನ್ ಅನ್ನು ಕೊಪ್ಪಳದಲ್ಲಿಯೂ ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
 
     ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ ಅವರು ಮಾತನಾಡಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಲ್ಲಿನ ಶಾಸಕರು ನಗರದ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ.  ನಗರದ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಎರಡ್ಮೂರು ತಿಂಗಳಿನಲ್ಲಿ ಪ್ರಾರಂಭಿಸಲಾಗುವುದು.  ಕಳೆದ ಬೇಸಿಗೆಯಲ್ಲಿ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲಾಗಿದ್ದು, ನಗರಕ್ಕೆ ಬರುವ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆ ಆಗದ ರೀತಿಯಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು.  ಇದಕ್ಕಾಗಿ ಹುಲಿಕೆರೆ ಹೂಳೆತ್ತುವ ಕಾರ್ಯವನ್ನು ಪ್ರಾರಂಭಿಸಲಾಗಿದೆ ಎಂದರು.
     ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ್ ಅವರು ಮಾತನಾಡಿ, ನಗರದ ಸ್ವಚ್ಛತೆಯನ್ನು ಮಾಡುವ ಪೌರಕಾರ್ಮಿಕರು ಶ್ರಮಿಕ ನೌಕರರಾಗಿದ್ದು, ಅಂತಹವರಿಗೆ ಸರ್ಕಾರ ಗೃಹಭಾಗ್ಯ ಯೋಜನೆಯಡಿ 7.5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಳ್ಳುವ ಅವಕಾಶ ಕಲ್ಪಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.  ನಗರದಲ್ಲಿ ಬರುವ ದಿನಗಳಲ್ಲಿ ಕನಿಷ್ಟ 02 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸುವ ರೀತಿಯಲ್ಲಿ ಯೋಜನೆಯನ್ನು ಜಾರಿಗೊಳಿಸಬೇಕು.  295 ಕೋಟಿ ರೂ. ವೆಚ್ಚದಲ್ಲಿ ಕೊಪ್ಪಳ ಮತ್ತು ಯಲಬುರ್ಗಾ ತಾಲೂಕುಗಳ ಕೆರೆ ತುಂಬಿಸುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ.  ಕೊಪ್ಪಳ ನಗರದ ಪಾಲಿಟೆಕ್ನಿಕ್ ಬಳಿ 45 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಟೂಲ್ ಮತ್ತು ಡೈಮೇಕಿಂಗ್ ತರಬೇತಿ ಕಾಲೇಜು ಪ್ರಾರಂಭಿಸಲಾಗುವುದು ಎಂದರು.
     ನಗರಸಭೆ ಸದಸ್ಯ ಅಮ್ಜದ್ ಪಟೇಲ್ ಮಾತನಾಡಿ, ದಿನಗೂಲಿ ಪೌರಕಾರ್ಮಿಕರಿಗೂ ನಿವೇಶನ ನೀಡುವ ಕಾರ್ಯ ಶೀಘ್ರ ನೆರವೇರಲಿದೆ.  ಪ.ಜಾತಿ, ಪ.ಪಂಗಡದ ಸುಮಾರು 300 ಫಲಾನುಭವಿಗಳಿಗೆ 3.30 ಲಕ್ಷ ರೂ. ಗಳ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗುವುದು.  ಪ.ಜಾತಿ, ಪ.ಪಂಗಡ ಹಾಗೂ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ತಲಾ 04 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
     ಸಮಾರಂಭಕ್ಕೂ ಮುನ್ನ ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಪ್ರವಾಸೋದ್ಯಮ ಇಲಾಖೆ ತಯಾರಿಸಿರುವ ವಿಡಿಯೋ ಚಿತ್ರವನ್ನು ಪ್ರದರ್ಶಿಸಲಾಯಿತು.  
     ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ನಗರಸಭೆ ಉಪಾಧ್ಯಕ್ಷೆ ಮೀನಾಕ್ಷಮ್ಮ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಬಾಳಪ್ಪ ಬಾರಕೇರ, ಪ್ರಾಣೇಶ್ ಮಾದಿನೂರ, ಖಾಜಾವಲಿ ಬನ್ನಿಕೊಪ್ಪ, ನಿರ್ಮಲ ಕಾರಟಗಿ, ರೇಣುಕಾ ಸೇರಿದಂತೆ ನಗರಸಭೆ ಸದಸ್ಯರುಗಳು, ನಗರಸಭೆ ಪೌರಾಯುಕ್ತ ಪರಮೇಶಪ್ಪ, ಹಲವು ಗಣ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.  
     ಗೃಹಭಾಗ್ಯ ಯೋಜನೆಯಡಿ ನಗರಸಭೆಯ 32 ಪೌರಕಾರ್ಮಿಕರಿಗೆ 7.5 ಲಕ್ಷ ರೂ. ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸುವ ಕಾರ್ಯಾದೇಶ ಪತ್ರವನ್ನು ವಿತರಿಸಲಾಯಿತು.  ಅಲ್ಲದೆ ನಗರಸಭೆಯ ಶೇ. 03 ರ ಅನುದಾನದಲ್ಲಿ 09 ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ಮೋಟಾರು ವಾಹನವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

Tuesday, 22 August 2017

ಕೃಷಿ ಕಾರ್ಮಿಕನ ಕುಟುಂಬಕ್ಕೆ ಬದುಕು ಕಟ್ಟಿಕೊಟ್ಟ ಪಶುಭಾಗ್ಯ


ಕೊಪ್ಪಳ ಆ. 22 (ಕರ್ನಾಟಕ ವಾರ್ತೆ): ಕೃಷಿ ಕಾರ್ಮಿಕರಾಗಿ ದುಡಿದು ಅಲ್ಪ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದ ಯಲಬುರ್ಗಾ ತಾಲೂಕು ತಳಕಲ್ ಗ್ರಾಮದ ಕುಟುಂಬವೊಂದು, ರಾಜ್ಯ ಸರ್ಕಾರದ ಪಶು ಭಾಗ್ಯ ಯೋಜನೆಯಿಂದಾಗಿ ಹೈನುಗಾರಿಕೆ ಕೈಗೊಂಡು ನಿತ್ಯ ಆದಾಯ ಗಳಿಸುತ್ತಿದ್ದು, ಸುಖೀ ಜೀವನದ ಬದುಕು ಕಟ್ಟಿಕೊಳ್ಳಲು ನೆರವಾಗಿದೆ.
       ಕೃಷಿ ಕಾರ್ಮಿಕರಾಗಿ ದುಡಿಮೆ ಮಾಡಿಕೊಂಡಿದ್ದ, ಯಲಬುರ್ಗಾ ತಾಲೂಕು ತಳಕಲ್ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ದುರುಗಪ್ಪ ತಾಯಮ್ಮನವರ ಎಂಬುವವರು, ಆಯಾ ದಿನದ ದುಡಿಮೆಯಿಂದ ಬರುವ ಆದಾಯದಲ್ಲಿ ತಮ್ಮ ಕುಟುಂಬದ ನಿರ್ವಹಣೆ ಮಾಡುತ್ತಿದ್ದರು.  ಕೃಷಿ ಕಾರ್ಮಿಕ ವೃತ್ತಿಯಲ್ಲಿ ಬರುವ ಆದಾಯದಲ್ಲಿ ತಮ್ಮ ಕುಟುಂಬದ ನಿರ್ವಹಣೆಯ ಜೊತೆಗೆ ಮೂವರು ಮಕ್ಕಳ ವಿದ್ಯಾಭ್ಯಾಸ ಕೊಡಿಸುವುದು ಕಷ್ಟಕರವಾಗಿತ್ತು.  ಪಶುಸಂಗೋಪನಾ ಇಲಾಖೆಯ ಮೂಲಕ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಶುಭಾಗ್ಯ ಯೋಜನೆ, ಇದೀಗ ಈ ಕುಟುಂಬದ ನೆಮ್ಮದಿಯ ಬದುಕಿಗೆ ಆಧಾರವಾಗಿದೆ.  ದುರುಗಪ್ಪ ಅವರಿಗೆ ಪಶುಸಂಗೋಪನಾ ಇಲಾಖೆಯು ವಿಶೇಷ ಘಟಕ ಕಾರ್ಯಕ್ರಮದಲ್ಲಿ ಪಶು ಭಾಗ್ಯ ಯೋಜನೆಯಡಿ ಮಿಶ್ರತಳಿ ಆಕಳು ಕೊಡಿಸಿದೆ.  ಈ ಯೋಜನೆಯಡಿ ಫಲಾನುಭವಿಗೆ 60 ಸಾವಿರ ರೂ. ಸಹಾಯಧನ ಮತ್ತು 60 ಸಾವಿರ ರೂ. ಬ್ಯಾಂಕ್ ಸಾಲ ಸೇರಿದಂತೆ ಒಟ್ಟು 1. 20 ಲಕ್ಷ ರೂ. ಘಟಕ ವೆಚ್ಚವಾಗಿರುತ್ತದೆ.  ಈ ಯೋಜನೆಯಡಿ ದುರುಗಪ್ಪ ಅವರಿಗೆ ಸದ್ಯ ಒಂದು ಮಿಶ್ರತಳಿ ಆಕಳು ಕೊಡಿಸಲಾಗಿದ್ದು, ಪಶು ವೈದ್ಯರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಮಿಶ್ರತಳಿ ಆಕಳನ್ನು ಉತ್ತಮವಾಗಿ ಪಾಲನೆ ಮತ್ತು ಪೋಷಣೆ ಮಾಡಲಾಗುತ್ತಿದೆ.  ಈ ಆಕಳು ಒಂದು ಹೆಣ್ಣು ಕರು ಹಾಕಿರುವುದರಿಂದ, ದುರುಗಪ್ಪ ಕುಟುಂಬದ ಸಂತೋಷ ಇಮ್ಮಡಿಗೊಳಿಸಿದೆ.  ಸದ್ಯ ಆಕಳು ನಿತ್ಯ 08 ಲೀಟರ್ ಹಾಲು ಕೊಡುತ್ತಿದ್ದು, ಮನೆಯಲ್ಲಿ ಈ ಕುಟುಂಬ ಹಾಲು, ಮೊಸರಿನ ಸವಿ ಕಾಣಲು ಸಾಧ್ಯವಾಗಿದೆ.  ಮನೆಯ ಉಪಯೋಗಕ್ಕೆ ನಿತ್ಯ ಒಂದು ಲೀಟರ್ ಹಾಲು ಹಾಗೂ ಕರುವಿಗೆ 01 ಲೀಟರ್ ಬಿಟ್ಟು ಉಳಿದ 06 ಲೀಟರ್ ಹಾಲನ್ನು ಫಲಾನುಭವಿ ಮಾರಾಟ ಮಾಡುತ್ತಿದ್ದಾರೆ.  ಇದರಿಂದಾಗಿ ಮಕ್ಕಳಿಗೆ ಉತ್ತಮ ವಿಧ್ಯಾಭ್ಯಾಸ ಕೊಡಿಸಲು ಸಾಧ್ಯವಾಗಿದೆ ಅಲ್ಲದೆ, ಮನೆಯ ಆರ್ಥಿಕ ಸ್ಥಿತಿ-ಗತಿ ಸುಧಾರಣೆ ಕಂಡಿದೆ.  ಮಕ್ಕಳಿಗೂ ಮನೆಯಲ್ಲಿ ಪೌಷ್ಠಿಕ ಆಹಾರ ದೊರೆಯುವಂತಾಗಿದ್ದು, ದುರುಗಪ್ಪ ಅವರ ಕುಟುಂಬ ಸ್ವಾವಲಂಬಿ ಜೀವನ ನಡೆಸುವುದರ ಜೊತೆಗೆ ಸುಖೀ ಜೀವನ ನಡೆಸುವಂತಾಗಿದೆ. 
      ದುರುಗಪ್ಪ ಅವರಿಗೆ ಯೋಜನೆಯಡಿ ಸದ್ಯ ಒಂದು ಮಿಶ್ರತಳಿ ಆಕಳು ಕೊಡಿಸಲಾಗಿದ್ದು, ಬ್ಯಾಂಕ್‍ನವರ ಸಹಕಾರವನ್ನು ಪಡೆದು, ಶೀಘ್ರದಲ್ಲಿಯೇ ಇನ್ನೊಂದು ಮಿಶ್ರತಳಿ ಆಕಳನ್ನು ಕುಟುಂಬಕ್ಕೆ ಕೊಡಿಸಲಾಗುವುದು.  ಪಶುಭಾಗ್ಯ ಯೋಜನೆ ನಿಜಕ್ಕೂ ಕೃಷಿ ಕಾರ್ಮಿಕರ ಕುಟುಂಬಗಳಿಗೆ ವರದಾನವಾಗಿದೆ ಎನ್ನುತ್ತಾರೆ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ತಿಪ್ಪಣ್ಣ ಅವರು.
      ಕೇವಲ ಕೃಷಿ ಕಾರ್ಮಿಕರಾಗಿ ದುಡಿದು, ಬಂದ ಆದಾಯ ಕುಟುಂಬದ ನಿರ್ವಹಣೆಗೆ ಸಾಕಾಗದೆ, ಆರ್ಥಿಕ ಹಿನ್ನಡೆ ಅನುಭವಿಸುತ್ತಿದ್ದ ದುರುಗಪ್ಪ ಅವರಂತಹ ಅನೇಕ ಬಡ ಕುಟುಂಬಗಳಿಗೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಶುಭಾಗ್ಯ ಯೋಜನೆ ಆರ್ಥಿಕ ಸುಧಾರಣೆಯ ಜೊತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದೆ ಎನ್ನುತ್ತಾರೆ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ ಅವರು.

                                - ತುಕಾರಾಂರಾವ್ ಬಿ.ವಿ.,
                                   ಸಹಾಯಕ ನಿರ್ದೇಶಕರು,
                      ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ
     

ಕಾನೂನು ಪದವಿಧರರಿಗೆ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ ಆ. 22 (ಕರ್ನಾಟಕ ವಾರ್ತೆ): ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಜಿಲ್ಲೆಯ ಕಾನೂನು ಪದವಿ ಪಡೆದಿರುವ ಹಿಂದುಳಿದ ವರ್ಗಗಳಾದ ಪ್ರವರ್ಗ-1, 2ಎ, 3ಎ, ಹಾಗೂ 3ಬಿ ಜನಾಂಗದ ಅಭ್ಯರ್ಥಿಗಳಿಗೆ ಕಾನೂನು ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
    ಕಾನೂನು ತರಬೇತಿಗಾಗಿ ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳು ಅರ್ಜಿ ಸ್ವೀಕರಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕಕ್ಕೆ 2 ವರ್ಷಗಳ ಅವಧಿಯೊಳಗೆ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.  ಬಾರ್ ಕೌನ್ಸಿಲ್‍ನಲ್ಲಿ ಹೆಸರನ್ನು ನೊಂದಾಯಿಸಿರಬೇಕು.  ಪ್ರವರ್ಗ 1ಕ್ಕೆ ಗರಿಷ್ಠ 31 ವರ್ಷಗಳು ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 30 ವರ್ಷ ವಯೋಮಿತಿಯಲ್ಲಿರಬೇಕು.  ಪ್ರವರ್ಗ 1ರ ಅಭ್ಯರ್ಥಿಗಳ ವಾರ್ಷಿಕ ಆದಾಯ ರೂ. 3.50 ಲಕ್ಷ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ವಾರ್ಷಿಕ ಆದಾಯ ರೂ. 2.50 ಲಕ್ಷ ಮೀರಿರಬಾರದು. 
    ನಿಗದಿತ ಅರ್ಜಿಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಸಂಕೀರ್ಣ ಕಟ್ಟಡ, ಕೊಪ್ಪಳ ಇವರಿಂದ ಪಡೆದು, ಸಂಬಂಧಿಸಿದ ದಾಖಲೆಗಳ ನಕಲು ಪ್ರತಿಗಳನ್ನು ದೃಢೀಕರಿಸಿ, ಸೆಪ್ಟೆಂಬರ್. 20 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಅರ್ಜಿ ಆಹ್ವಾನ


ಕೊಪ್ಪಳ ಆ. 22 (ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆಯು 2018ನೇ ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನರಹಿತ ಶಾಲಾ/ ಕಾಲೇಜುಗಳಿಂದ ಹಾಜರಾಗುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.
    ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳು ಕೂಡ ಈ ಪರೀಕ್ಷೆ ತೆಗೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.  ಪರೀಕ್ಷಾ ಶುಲ್ಕ ಪಾವತಿಸಲು ದಿನಾಂಕವನ್ನು ನಿಗಧಿ ಪಡಿಸಲಾಗಿದ್ದು, ವಿವರ ಇಂತಿದೆ.  
     ಖಾಸಗಿ ಅಭ್ಯರ್ಥಿಗಳು ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ ಸೆಪ್ಟೆಂಬರ್. 01. ಶಾಲೆಯವರು ಶಾಲಾ/ ಖಾಸಗಿ/ ಪುನರಾವರ್ತಿತ ಅಭ್ಯರ್ಥಿಗಳಿಂದ ಪರೀಕ್ಷಾ ಶುಲ್ಕ ಸ್ವೀಕಾರಕ್ಕೆ ಕೊನೆಯ ದಿನಾಂಕ ಸೆಪ್ಟೆಂಬರ್. 06 ಆಗಿದ್ದು, ಖಾಸಗಿ ಅಭ್ಯರ್ಥಿಗಳು ನಿಗದಿತ ದಿನಾಂಕದ ಒಳಗಾಗಿ ಸಂಬಂಧಿಸಿದ ಶಾಲೆಯ ಮೂಲಕ ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡು, ಮಂಡಳಿಯಿಂದ ನಿಗದಿಪಡಿಸಿದ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು ಎಂದು ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಿ


ಕೊಪ್ಪಳ ಆ. 22 (ಕರ್ನಾಟಕ ವಾರ್ತೆ):  ಗಣೇಶ ಚತುರ್ಥಿ ಹಬ್ಬ ಬಂದಿದೆ. ಹಲವು ದಿನಗಳ ಕಾಲ ನಾಡಿನ ಎಲ್ಲೆಡೆ ಗಣೇಶ ಮೂರ್ತಿ ಸ್ಥಾಪಿಸಿ ಆರಾಧಿಸುವ ಸಾಂಸ್ಕøತಿಕ  ಪರಂಪರೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಹಬ್ಬವನ್ನು ಆಚರಿಸುವ ಎಲ್ಲಾ ನಾಗರಿಕರು ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಸ್ಥಾಪಿಸಿ ಆಚರಿಸಿದರೆ, ಪರಿಸರ ರಕ್ಷಣೆ ಮಾಡಿದ ಕೀರ್ತಿ ಹಾಗೂ ಭಗವಂತನ ಕೃಪೆ ಎಲ್ಲರಿಗೂ ದೊರೆಯಲಿದೆ. 
     ಗಣೇಶ ಹಬ್ಬದ ಸಂದರ್ಭದಲ್ಲಿ ನಮಗೆ ಅರಿವಿಲ್ಲದೆ ಪರಿಸರ ಮಾಲಿನ್ಯವಾಗುತ್ತಿದ್ದು, ಇದನ್ನು ತಡೆಗಟ್ಟಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಯತ್ನಿಸುತ್ತಿದೆ.
  ರಾಸಾಯನಿಕಯುಕ್ತ ಬಣ್ಣ ಬಳಕೆ ಮಾಡಿದ ಗಣೇಶ ಮೂರ್ತಿಯಿಂದಾಗ, ನೆಲ, ಜಲದ ಮಾಲಿನ್ಯ ಆಗುವುದಲ್ಲದೆ, ಅಂತಹ ನೀರು ಬಳಕೆಯಿಂದ, ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.  ಸಾಂಪ್ರದಾಯಿಕವಾಗಿ ಜೇಡಿ ಮಣ್ಣಿನಿಂದಲೇ ಪುಟ್ಟದಾಗಿ ಗಣೇಶನ ಮೂರ್ತಿಗಳನ್ನು ತಯಾರಿಸಲು ತಯಾರಕರು ಮುಂದಾಗಬೇಕು. ಇಂಥ ಮಣ್ಣಿನ ಮೂರ್ತಿಗಳನ್ನೇ ಖರೀದಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಬೇಕು. ರಾಸಾಯನಿಕಯುಕ್ತ ಬಣ್ಣ ಬಳಿದಿರುವ ಮೂರ್ತಿಗಳನ್ನು ಸಾರ್ವಜನಿಕರು ಆದಷ್ಟು ತಿರಸ್ಕರಿಸಬೇಕು. ವಿಷಯುಕ್ತ ಮತ್ತು ನೀರಿನಲ್ಲಿ ಕರಗದ ರಾಸಾಯನಿಕಗಳನ್ನು ಬಳಸಿದ ಗಣಪನ ಮೂರ್ತಿಗಳಿಂದ ಉಂಟಾಗುವ ಅಪಾಯ, ಜಲಮೂಲಗಳಿಗೆ ಒದಗುವ ಹಾನಿಯನ್ನು ಅರಿತು ಸಾರ್ವಜನಿಕರು ಇನ್ನಾದರೂ ಜಾಗೃತಗೊಳ್ಳಬೇಕು.
 ಗಣೇಶನ ಮೂರ್ತಿಗಳನ್ನು ವಿಜಸರ್ಜಿಸುವಾಗ ಮಾಲಿನ್ಯದ ಪ್ರಮಾಣವನ್ನು ಸಾಕಷ್ಟು ತಗ್ಗಿಸಬೇಕಿದೆ. ಹೆಚ್ಚಿನ ಜನದಟ್ಟಣೆಯಾಗದಂತೆ ನೋಡಿಕೊಂಡು, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಎಚ್ಚರಿಕೆ ವಹಿಸಬೇಕು.  ಈ ನಿಟ್ಟಿನಲ್ಲಿ ಪೊಲೀಸ್ ಹಾಗೂ ಸ್ಥಳೀಯ ಸಂಸ್ಥೆಗಳ ಪಾತ್ರ ಇದರಲ್ಲಿ ಮಹತ್ವದ್ದಾಗಿದೆ.
ಸ್ಥಳೀಯ ಸಂಸ್ಥೆಗಳು, ಕೆರೆ-ಬಾವಿಗಳಲ್ಲಿ ಮೂರ್ತಿ ವಿಸರ್ಜಿಸುವಾಗ ಗಣೇಶನಿಗೆ ಮಾಡಿದ ಪೂಜಾ ವಸ್ತುಗಳನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಸಾಕಷ್ಟು ಪ್ರಮಾಣದಲ್ಲಿ ತಾತ್ಕಾಲಿಕ ಹೊಂಡ ಮತ್ತು ತೊಟ್ಟಿಗಳನ್ನು ನಿರ್ಮಿಸಬಹುದಾಗಿದ್ದು, ಅಲಂಕಾರದ ವಸ್ತುಗಳನ್ನು (ಕಾಗದ, ಪ್ಲಾಸ್ಟಿಕ್‍ನಲ್ಲಿ ಮಾಡಿದ ಹೂವು, ವಸ್ತ್ರ, ಇತ್ಯಾದಿ) ಪ್ರತ್ಯೇಕ ಮಾಡಿ ಅವುಗಳ ಮರುಬಳಕೆ ಅಥವಾ ಜೈವಿಕ ಕರಗಿಸುವಿಕೆಗೆ ಮುಂದಾಗಬೇಕು. ಇಲ್ಲಿ ಜೈವಿಕವಾಗಿ ಕರಗದ ವಸ್ತುಗಳನ್ನು ವಿಸರ್ಜನೆಯಾದ 24 ಗಂಟೆಗಳ ಒಳಗೆ ಕಾನೂನು ರೀತ್ಯಾ ವಿಲೇವಾರಿ ಮಾಡಬೇಕಾಗುತ್ತದೆ. ವಿಸರ್ಜನಾ ಪ್ರದೇಶಗಳಲ್ಲಿ ಘನತ್ಯಾಜ್ಯ ವಸ್ತುಗಳನ್ನು ಸುಡುವುದಕ್ಕೆ ಅವಕಾಶ ನೀಡಬಾರದು.
ವಿಷಕಾರಿ ರಾಸಾಯನಿಕ ಲೋಹದ ಲೇಪದ, ಪ್ಲಾಸ್ಟರ್ ಆಫ್ ಪ್ಯಾರಿಸ್‍ನ ಗಣೇಶನ ಮೂರ್ತಿ ಬಳಕೆ ಮಾಡುವುದು ಸೂಕ್ತವಲ್ಲ. ಸಾದಾ ಜೇಡಿ ಮಣ್ಣಿನ ಮುದ್ದಾದ ಪುಟ್ಟ ಗಣೇಶ ಮೂರ್ತಿ ಸ್ಥಾಪಿಸಬೇಕು.  ಎಲೆ, ಹೂವುಗಳಿಂದ ಮಾಡಿದ ನೈಸರ್ಗಿಕ ಬಣ್ಣ ಹಚ್ಚಿದ ಗಣಪನನ್ನೇ ಪೂಜಿಸಿ. ಎಲ್ಲೂ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡದಂತೆ ನೋಡಿಕೊಳ್ಳಬೇಕು.
ಸಾಮೂಹಿಕವಾಗಿ ನಡೆಸುವ ಗಣೇಶನ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಿ. ಗಣೇಶ ಮೂರ್ತಿ ವಿಸರ್ಜಿಸುವ ಮುನ್ನ ಹೂವು, ವಸ್ತ್ರ, ಪ್ಲಾಸ್ಟಿಕ್ ಹಾರ ಎಲ್ಲವನ್ನೂ ತೆಗೆದು, ನಂತರವೇ ವಿಸರ್ಜನೆ ಮಾಡಬೇಕು.    ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಬೇಡಿ. ಪಟಾಕಿ ಹೊಗೆ ವಿಷಪೂರಿತವಾಗಿದೆ ಅಲ್ಲದೆ ರಸ್ತೆ ತುಂಬಾ ಕಸವಾಗುತ್ತದೆ.  ಗಡಚಿಕ್ಕುವ ಶಬ್ದವೂ ಕಿವಿಗೆ ಹಾಗೂ ಹೃದಯ ರೋಗಿಗಳಿಗೆ, ಮಕ್ಕಳಿಗೆ ಹಾನಿಕರ.  ಗಣೇಶ ಹಬ್ಬದಲ್ಲಿ ರಸ್ತೆ, ಚರಂಡಿಯಲ್ಲಿ ಹೂವಿನ ಹಾರ, ತಟ್ಟೆ, ಲೋಟ, ಎಲೆ ಎಸೆಯಬೇಡಿ, ಕಸದ ವಾಹನ ಬಳಸುವುದು ಸೂಕ್ತ.
     ಗಣೇಶ ಹಬ್ಬ ಎಲ್ಲ ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ಸಂಭ್ರಮವನ್ನು ಹಂಚಿಕೊಳ್ಳುವಂತಾಗಬೇಕು.  ಈ ನಿಟ್ಟಿನಲ್ಲಿ ಗಣೇಶ ಮೂರ್ತಿ ಸ್ಥಾಪಿಸುವವರು, ಸಾರ್ವಜನಿಕರ ಸಹಕಾರ ತುಂಬಾ ಅಗತ್ಯವಾಗಿದೆ. ಬನ್ನಿ, ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ ಹಾಗೂ ಪರಿಸರವನ್ನು ಸಂರಕ್ಷಿಸೋಣ ಎನ್ನುತ್ತಾರೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು.

ತುಂಗಭದ್ರಾ ಅಚ್ಚುಕಟ್ಟಿನಲ್ಲಿ ಅಲ್ಪ ನೀರಾವರಿ ಬೆಳೆ ಬೆಳೆಯಲು ರೈತರಿಗೆ ಮನವಿ


ಕೊಪ್ಪಳ ಆ. 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಬರುವ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆ ಬೆಳೆಯುವ ಬದಲು ಪರ್ಯಾಯವಾಗಿ ಅಲ್ಪ ನೀರಾವರಿ ಬೆಳೆಗಳನ್ನು ಬೆಳೆಯಬೇಕು ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ರೈತರಲ್ಲಿ ಮನವಿ ಮಾಡಿದ್ದಾರೆ.
    ಜಿಲ್ಲೆಯ ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ 37800 ಹೆಕ್ಟೇರ ಭತ್ತ ಬೆಳೆ ಬೆಳೆಯಲಾಗುತ್ತಿತ್ತು.  ಆದರೆ ತುಂಗಭದ್ರಾ ಜಲಾಶಯದಲ್ಲಿ ಈ ಬಾರಿ ಸಂಗ್ರಹಣೆಯಾದ ನೀರಿನ ಪ್ರಮಾಣ ಕಡಿಮೆ ಇದೆ.   ಜಿಲ್ಲೆಯಲ್ಲಿ ಇದುವರೆಗೂ ಭತ್ತ ಬೆಳೆ ನಾಟಿಯಾಗದೇ, ಸಸಿ ಮಡಿಗಳಲ್ಲಿ ಇದ್ದು, ಭತ್ತ ನಾಟಿ ಮಾಡಲು 25 ರಿಂದ 40 ದಿವಸಗಳ ಸಸಿ ಸೂಕ್ತ.  ಆದ್ದರಿಂದ ಈಗಿನ ಸಸಿ ಮಡಿಗಳು 45 ರಿಂದ 50 ದಿವಸಗಳದ್ದಾಗಿದ್ದು ನಾಟಿ ಮಾಡಲು ಯೋಗ್ಯವಿರುವುದಿಲ್ಲ. 
ಆದ್ದರಿಂದ ರೈತರು ಭತ್ತದ ಬೆಳೆಯನ್ನು ಬೆಳೆಯುವ ಬದಲಿಗೆ, ಅಲ್ಪ ನೀರಾವರಿ ಬೆಳೆಗಳಾದ ಮೆಕ್ಕೆಜೋಳ, ನವಣೆ, ಸೂರ್ಯಕಾಂತಿ, ಜೋಳ ಹಾಗೂ ಕಡಲೆ ಬೆಳೆಗಳನ್ನು ಬೆಳೆದು ಆರ್ಥಿಕ ನಷ್ಟದಿಂದ ಪಾರಾಗುವುದು ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಸೂಕ್ತ.  ರೈತರು ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭತ್ತ ಬೆಳೆ ಬದಲು ಪರ್ಯಾಯ ಅಲ್ಪ ನೀರಾವರಿ ಬೆಳೆಗಳನ್ನು ಬೆಳೆಯುವಂತೆ ಕೊಪ್ಪಳ ಜಂಟಿಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Monday, 21 August 2017

ಮಾವಿನ ಗಿಡಗಳ ಪುನಶ್ಚೇತನಕ್ಕೆ ರೈತರಿಗೆ ತೋಟಗಾರಿಕೆ ಇಲಾಖೆ ಸಲಹೆ

ಕೊಪ್ಪಳ ಆ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ತೋಟಗಾರಿಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ.  2015-16ನೇ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಮಾವನ್ನು ಸುಮಾರು 300 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಬೇನಿಶಾನ್, ಕೇಸರ್, ಮಲ್ಲಿಕಾ, ಆಪೂಸ್, ದಶಹರಿ ಮತ್ತು ಇತರೆ ತಳಿಗೆಳು ವರ್ಷದಿಂದ ವರ್ಷಕ್ಕೆ ವಿಸ್ತೀರ್ಣ ಹೆಚ್ಚುತ್ತಲೇ ಇದೆ.  ಆದರೆ ಉತ್ಪಾದನೆ 35,140 ಟನ್ ಮತ್ತು ಉತ್ಪಾದಕತೆ 12.70 ಟನ್/ ಹೆಕ್ಟರ್. ರಾಷ್ಟ್ರೀಯ ಅಂಕಿ ಅಂಶಗಳಿಗೆ ಹೊಲಿಸಿದರೆ ತುಂಬಾ ಕಡಿಮೆ ಇದೆ. 

    ಮಾವಿನ ತೋಪುಗಳಲ್ಲಿ ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆಯಾಗುತ್ತದೆ.  ಇಂತಹ ಮರಗಳು ರೋಗ/ ಕೀಟಗಳಿಗೆ ಆಶ್ರಯ ಮರಗಳಾಗುತ್ತವೆ.  ಇದರಿಂದಾಗಿ ಮತ್ತು ಕೆಲವು ಅನುವಂಶಿಕ ಕಾರಣಗಳಿಂದಾಗಿ ಇಳುವರಿ ಕುಸಿಯುತ್ತಿದೆ.  ಇವೆಲ್ಲಾ ಸಮಸ್ಯೆಗಳನ್ನು ಮೀರಿ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸಲು ಮಾವಿನಲ್ಲಿ ಸವರುವಿಕೆ ಇಂದಿನ ಅನಿವಾರ್ಯತೆಯಾಗಿದೆ.  ಈ ನಿಟ್ಟಿನಲ್ಲಿ ಮಾವಿನ ಗಿಡಗಳಿಗೆ ಪುನಶ್ಚೇತನ ಕೊಡಲು ತೋಟಗಾರಿಕೆ ಇಲಾಖೆಯು ರೈತರಿಗೆ ಸಲಹೆಗಳನ್ನು ನೀಡಿದೆ.
    ಮೇಲ್ಛಾವಣಿ ಅಥವಾ ಗಿಡದ ಚೌಕಟ್ಟಿನ ನಿರ್ವಹಣೆ ಎಂದರೆ ಕೆಲವು ರೆಂಬೆಗಳನ್ನು ಸವರುವುದರ ಮೂಲಕ ಚೌಕಟ್ಟಿನ ಮಾರ್ಪಾಟು ಮಾಡುವುದರಿಂದಾಗಿ ಐಚ್ಛಿಕ ಇಳುವರಿ ಮತ್ತು ಗುಣಮಟ್ಟದ ಹಣ್ಣುಗಳನ್ನು ಉತ್ಪಾದಿಸುವುದೇ ಮೇಲ್ಛಾವಣಿ ನಿರ್ವಹಣೆಯ ಮೂಲ ತತ್ವ ಇದರಿಂದಾಗಿ ಸೂರ್ಯ ರಶ್ಮಿಯ ಸದ್ಬಳಕೆಯಾಗಿ ಗಿಡದ ಹೆಚ್ಚಿನ ಭಾಗ ಸೂರ್ಯರಶ್ಮಿಗೆ ಮೈವೊಡ್ಡಿದಂತಾಗಿ “ಬಯೋಮಾಸ್” ವೃದ್ಧಿಯಾಗುತ್ತದೆ.  ಗಿಡಗಳಿಗೆ ಛತ್ರಿಯಂತೆ ಸುಂದರ ಆಕಾರ ಕೊಡುವುದೂ ಈ ಪ್ರಕ್ರಿಯೆಯ ಒಂದು ಭಾಗ.
    ಬೆಳಕು ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಅತ್ಯಂತ ಅವಶ್ಯಕ ಎಲೆಗಳು ಪತ್ರ ಹರಿತ್ತಿನ ಸಹಾಯದಿಂದ ಸೂರ್ಯರಶ್ಮಿಯನ್ನು (ಬೆಳಕು) ಉಪಯೋಗಿಸಿಕೊಂಡು ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಉತ್ಪಾದಿಸಿ ಅವುಗಳು ಅವಶ್ಯವಿರುವ ಸ್ಥಳಕ್ಕೆ, ಅಂದರೆ ಮೊಗ್ಗ, ಹೂ ಮತ್ತು ಹಣ್ಣುಗಳಿಗೆ ಕೊಂಡೊಯ್ಯತ್ತವೆ. ಉತ್ತಮ ಬೆಳಕು ಉತ್ತಮ ಮತ್ತು ಗುಣಮಟ್ಟದ ಉತ್ಪಾದನೆಗೆ ಸಹಕಾರಿ.  ಸಾಂದ್ರ ಪದ್ದತಿಯಲ್ಲಿ ನಾಟಿ ಮಾಡಿದಾಗ ಚೌಕಟ್ಟಿನ ನಿರ್ವಹಣೆ ಅತಿ ಮುಖ್ಯ.
ವಯಸ್ಸಾದ ಗಿಡಗಳ ಪುನಃಶ್ಚೇತನ :
************ ವಯಸ್ಸಾದ (25-30 ವರ್ಷಗಳ) ಮಾವಿನ ಮರಗಳಿಂದ ಕೊಯ್ಲು ಮಾಡುವುದು ಕಷ್ಟ.  ಅಲ್ಲದೆ ಇಚಿತಹ ಮರಗಳು ಕೀಟ/ ರೋಗಗಳಿಗೆ ಆಶ್ರಯ ನೀಡುತ್ತವೆ.  ಇಂತಹ ಮರಗಳಲ್ಲಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದೂ ಕಷ್ಟ.  ಆದ್ದರಿಂದ ಇಂತಹ ಮರಗಳನ್ನು ಕತ್ತರಿಸುವುದರ ಮೂಲಕ ಪುನಶ್ಚೇತನ ಗೊಳಿಸಿದರೆ ಉತ್ತಮ ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯ ಎಂಬುವುದು ಲಕ್ನೋ ಸಿ.ಎಸ್.ಆಯ್.ಎಚ್.ಎಸ್ ಸಂಸ್ಥೆ ನಡೆಸಿದ ಪ್ರಾತ್ಯಕ್ಷಿಕೆಗಳಿಂದ ರುಜುವಾತಾಗಿದೆ.
    ಇಂತಹ ಮರಗಳನ್ನು ಕತ್ತರಿಸಿ ಅಸ್ಥಿಪಂಜರದಂತೆ ಉಳಿಸಿಕೊಂಡು ನಂತರ ಶಿಫಾರಿತ ಗೊಬ್ಬರ ಪೋಷಕಾಂಶಗಳನ್ನು ನೀಡಿದಲ್ಲಿ ಚಿಗುರುಗಳು ಒತ್ತೊತ್ತಾಗಿ ಬರುತ್ತವೆ.  ಉತ್ತಮ ಆರೋಗ್ಯವಂತ ಚಿಗುರುಗಳನ್ನಿಟ್ಟುಕೊಂಡು ಉಳಿದವುಗಳನ್ನು ಕತ್ತರಿಸಿ ಹಾಕಬೇಕು.  ಇದರಂತೆಯೇ ಮೂರನೇ ಹಂತದಲ್ಲಿ ರೆಂಬೆಗಳಿಂದ ಬರುವ ಅನುಪಯುಕ್ತ ರೆಂಬೆಗಳನ್ನು ಕತ್ತರಿಸಿ ಹಾಕಬೇಕು.  ಇಂತಹ ಗಿಡಗಳು 2 ವರ್ಷಗಳ ನಂತರ ಫಲ ನೀಡಲು ಆರಂಭಿಸುತ್ತವೆ.  ಒಂದೆರಡು ವರ್ಷ ನಷ್ಟವಾದರೂ ಮುಂದಿನ ವರ್ಷಗಳಲ್ಲಿ ಲಾಭದಾಯಕ ಇಳುವರಿ ಪಡೆಯಬಹುದಾಗಿದೆ.  ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳಿದ್ದಾಗ ಒಂದು ಸಾಲು ಬಿಟ್ಟು ಇನ್ನೊಂದು ಸಾಲಿನಲ್ಲಿ ಗಿಡಗಳನ್ನು ಕತ್ತರಿಸಬೇಕು.  ನಂತರ ಇಂತಹ ಗಿಡಗಳು ಆರ್ಥಿಕ ಇಳುವರಿ ಕೊಡಲು ಆರಂಭಿಸಿದ ನಂತರ ಮೊತ್ತೊಂದು ಸಾಲಿನಲ್ಲಿನ ಗಿಡಗಳನ್ನು ಕತ್ತರಿಸಬೇಕು.  ಈ ವಿಧಾನವನ್ನು ಅನುಸರಿಸುವುದರ ಮೂಲಕ ಆರ್ಥಿಕ ನಷ್ಟವಾಗುವುದನ್ನು ತಡೆಯಬಹುದಾಗಿದೆ. 
ಮುಖ್ಯ ಉದ್ದೇಶಗಳು :
*********** ಒಣಗಿದ ರೋಗ ಮತ್ತು ಕೀಟ ಬಾಧೆಗೆ ಹಾಗೂ ಅನುಪಯುಕ್ತ ಕೊಂಬೆಗಳನ್ನು ಕತ್ತರಿಸಿ ತೆಗೆಯುವುದು.  ಒತ್ತಾಗಿ ಬೆಳೆದ ಹೊಸ ಚಿಗುರುಗಳನ್ನು ವಿರಳಗೊಳಿಸಿ ಸಾಧ್ಯವಾದರೆ ಮಧ್ಯದಲ್ಲಿ ಸೂರ್ಯನ ಕಿರಣಗಳು/ ಬೆಳಕು ಎಲ್ಲಾ ದಿಕ್ಕಿಗೂ ಬೀಳುವಂತೆ ಮಾಡುವುದು.  ಮರದ ಎತ್ತರವನ್ನು ಮಿತಿಗೊಳಿಸಿ ಎಲ್ಲಾ ಬೇಸಾಯ ಕ್ರಮ ಕೈಗೊಳ್ಳಲು ಸುಲಭವಾಗುವಂತೆ ಮಾಡುವುದು.  ಹಳೆಯ ರೆಂಬೆಗಳಿಂದ ಆಗುವ ಉತ್ಪಾದಕತೆ ನೇರವಾಗಿ ಬರುವ ರೆಂಬೆಗಳಿಗೆ ಹೋಲಿಸಿದರೆ ಹೆಚ್ಚಾಗಿರುತ್ತದೆ ಹಾಗೂ ಕೆಳಗೆ ಬರುವ ರೆಂಬೆಗಳನ್ನು ಬುಡದಿಂದ 4 ಅಡಿ ತನಕ ಕತ್ತರಿಸಿ ಉಳುಮೆ, ಗೊಬ್ಬರ ಹಾಕಲು, ಕಳೆ ತೆಗೆಯಲು ಸಹಕಾರಿಯಾಗುವಂತೆ ನೋಡಿಕೊಳ್ಳುವುದು. 
ಸವರುವಿಕೆ - ಫಸಲು ಬಿಡುತ್ತಿರುವ ಮಾವಿನ ಮರಗಳನ್ನು ಹಣ್ಣು ಕಟಾವು ಮಾಡಿದ ನಂತರ ಪ್ರತಿ ವರ್ಷವು ಸ್ವಲ್ಪ ಮಟ್ಟಿಗೆ ಸವರುವಿಕೆಯನ್ನು (ಶೇ. 25-30% ವನ್ನು ಕತ್ತರಿಸುವುದು) ಕೈಗೊಳ್ಳಬೇಕಾಗುತ್ತದೆ.  ಮರದ ಎತ್ತರ ಹಾಗೂ ಆಕಾರವನ್ನು ಕಾಪಾಡಬೇಕಾಗುತ್ತದೆ.  ಸಮರುವಿಕೆಯು ಮರದ ಆಕಾರ ಹಾಗೂ ಎತ್ತರವನ್ನು ಅವಲಂಭಿಸಿ ಮಧ್ಯದ ಹಾಗೂ ಒತ್ತಾದ ರೆಂಬೆಗಳನ್ನು ತೆಗೆಯುವುದರಿಂದ ಸಾಧಿಸಲಾಗುತ್ತದೆ.  ಗಾಳಿ ಹಾಗೂ ಸೂರ್ಯನ ಕಿರಣ ಬೀಳುವುದರಿಂದ ಉತ್ಪಾದಕತೆ ಹೆಚ್ಚಿಸಲು ಸಹಕಾರಿಯಾಗುತ್ತದೆ.
ಹೊಸ ಮಾವಿನ ಮರಗಳ ಸವರುವಿಕೆ :
*************ಆಕಾರ ನೀಡುವುದು, ಇದು ಅತ್ಯದಿಕ (ಹೈ-ಡೆನ್‍ಸಿಟಿ) ಬೇಸಯ ಪದ್ದತಿಯಲ್ಲಿ ಅತ್ಯವಶ್ಯಕ.  ನಾಟಿ ಮಾಡಿದ ಗಿಡವು 70-75 ಸೆಂ.ಮೀ ಉದ್ದ ಬೆಳೆದ ನಂತರ ತುದಿಯನ್ನು ಚಿವುಟುವುದರಿಂದ ಪ್ರಥಮ ರೆಂಬೆಗಳು ಬೆಳೆಯಲು ಪ್ರಾರಂಭಿಸುತ್ತವೆ.  ನಂತರ 2-3 ವಿವಿಧ ದಿಕ್ಕಿನಲ್ಲಿ ಬೆಳೆದ ಒಳ್ಳೆಯ ರೆಂಬೆಗಳನ್ನು ಉಳಿಸಿ, ಉಳಿದವುಗಳನ್ನು ತೆಗೆಯಬೇಕು.  ರೆಂಬೆಗಳು 15-20 ಸೆಂ.ಮೀ ಅಂತರದಲ್ಲಿರಬೇಕು.  4-6 ತಿಂಗಳಲ್ಲಿ ಈ ರೆಂಬೆಗಳು ಬೆಳೆಯಲು ಪ್ರಚೋದಿಸುವುದು.  ನಂತರ ತೃತೀಯ ರೆಂಬೆಗಳು ಬೆಳೆದು ಗಿಡವು ಛತ್ರಿ ಆಕಾರದಲ್ಲಿ ಬೆಳೆಯುತ್ತದೆ. 
ಸವರುವಿಕೆ ಮಾಡುವ ವಿಧಾನ - ಹಣ್ಣುಗಳನ್ನು ಕೊಯ್ಲು ಮಾಡಿದ ನಂತರ ಅಂದರೆ, ಜೂನ್ ನಿಂದ ಜುಲೈ ಮಾಹೆಯ ಅಂತ್ಯದೊಳಗೆ ಸವರುವಿಕೆಯನ್ನು ಮಾಡಬೇಕಾಗಿರುತ್ತದೆ.  ಫಸಲು ನೀಡುತ್ತಿರುವ ವಯಸ್ಸಾದ ಮರಗಳನ್ನು ಸವರುವಿಕೆಗೆಯನ್ನು ಕೈ ಕತ್ತರಿ, ಕೈ ಗರಗಸ, ರೆಂಬೆ ಕತ್ತರಿಸುವ ಕೈ ಕತ್ತರಿ ಹಾಗೂ ಯಾಂತ್ರೀಕೃತ ಗರಗಸಗಳಿಂದ ಸವರುವಿಕೆ ಮಾಡಬಹುದು. 
ತುದಿ ಸವರುವಿಕೆ :
********* ಹೊಸ ಚಿಗುರುಗಳನ್ನು 15 ಸೆಂ.ಮೀ ಹಿಂಬಾಗ ಅಥವಾ ಬಲಿತ ಭಾಗದವರೆಗೂ ಕತ್ತರಿಸುವುದರಿಂದ ಹೂ ಕಚ್ಚಲು ಹಾಗೂ ಮರದ ಎತ್ತರವನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ.  ದೊಡ್ಡ ಗಾತ್ರದ ರೆಂಬೆಯನ್ನು ಕತ್ತರಿಸುವಾಗ (ಒಡಗಿರುವ ಅಥವಾ ಒತ್ತಾಗಿರುವ) ರೆಂಬೆಯ ಬುಡದ ಪ್ರದೇಶವನ್ನು ಕನಿಷ್ಠ ಒಂದು ಅಂಗುಲ ಬಿಟ್ಟು ಕತ್ತರಿಸಬೇಕು.  ಹೀಗೆ ಮಾಡುವುದರಿಂದ ಕಾಲರ್ ನಲ್ಲಿ ಮರವು ಉತ್ಪಾದಿಸುವ ರಾಸಾಯನಿಕದಿಂದ ಕ್ರಿಮಿ/ ಕೀಟ/ ರೋಗಗಳು ಮರವನ್ನು ಪ್ರವೇಶಿಸುವುದನ್ನು ತಡೆಯುತ್ತದೆ ಹಾಗೂ ಗಾಯದ ಭಾಗವನ್ನು ಮುಚ್ಚುತ್ತದೆ.
ಸವರುವಿಕೆ ಮಾಡಿದ ನಂತರ ಮರಗಳ ನಿರ್ವಹಣೆ
************* ಕೊಂಬೆಯ ಕತ್ತರಿಸಿದ ಭಾಗಕ್ಕೆ ಬ್ಲೈಟ್ಯಾಕ್ಸ್ (ಒಂದು ಲೀಟರ್ 8-10 ಗ್ರಾಮ) ಶಿಲೀಂದ್ರ ನಾಶಕದಿಂದ ಅಂಟು ಮಾಡಿ, ಬಳಿಯುವುದರಿಂದ ರೋಗದ/ ಕೀಟದ ಹಾನಿ ತಡೆಯಬಹುದು.  ನಂತರ ಇಡೀ ಮರಕ್ಕೆ ಕ್ಲೋರೋಪಿರಫೆÇಸ್ (1 ಮಿ.ಲೀ/ 1ಲೀ) ಬ್ಯಾವಿಸ್ಟಿನ (1 ಗ್ರಾಂ/ ಲೀ) ಹಾಗೂ ಲ್ಯಾಂಬಡಿಸಲೋಥರಿನ್ (0.5ಮಿ.ಲೀ/ 1ಲೀ) ಪ್ರತಿ ಲೀಟರ್ ನೀರಿಗೆ ಬೆರಿಸಿ ಮರಗಳಿಗೆ ಸಿಂಪರಿಸುವುದು.  ಮರದ ಬುಡಗಳಿಗೆ ನೆಲದಿಂದ 2-3 ಅಡಿವರೆಗೂ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಹೀಲರ್ ಕಮ್ ಸೀಲರ್ (ಆರ್ಕಾರಕ್ಷಕ) ಔಷದಿಯನ್ನು ಲೇಪಿಸುವುದು.  ಪ್ರತಿ 10-15 ದಿನಗಳ ಅಂತರದಲ್ಲಿ ಲಭ್ಯವಿದ್ದಲ್ಲಿ ಪ್ರತಿ ಮರಕ್ಕೆ 50-60 ಲೀ ನೀರನ್ನು ನೀಡಬೇಕಾಗುತ್ತದೆ.  ಪ್ರತಿ ಮರಕ್ಕೆ ಶಿಫಾರಸ್ಸಿನಂತೆ ಮರಗಳ ವಯಸಿಗೆ ಅನುಗುಣವಾಗಿ ಗೊಬ್ಬರಗಳನ್ನು ನೀಡುವುದು.  ಇದಾದ ನಂತರ ಡಿಸೆಂಬರ ತಿಂಗಳಿನಲ್ಲಿ ಮತ್ತೊಮ್ಮೆ ಈ ಎಲ್ಲಾ ಚಟುವಟಿಕೆಗಳನ್ನು ಹಂತ ಹಂತವಾಗಿ 7-10 ದಿನಗಳ ಅಂತರದಲ್ಲಿ ಮಾಡಿ ಮುಗಿಸಬೇಕು. 
    ಪ್ರತಿವರ್ಷ ಮಾವಿನಲ್ಲಿ ಇಳುವರಿ ಪಡೆಯಲು ರಾಸಾಯನಿಕಗಳ ಬಳಕೆ – ಮಾವಿನ ಗಿಡಗಳಲ್ಲಿ ಪ್ರತಿ ವರ್ಷವೂ ಇಳುವರಿ ಪಡೆಯಲು ಪ್ಯಾಕ್ಲೋಬುಟ್ರಜಾಲ್ ಸಂಯುಕ್ತ ವಸ್ತುವನ್ನು (5 ಮಿ.ಲೀ 10 ಲೀಟರ್) ನೀರಿನಲ್ಲಿ ಬೆರೆಸಿ ಕಾಂಡದಿಂದ 90 ಸೆ.ಮೀ ದೂರದಲ್ಲಿ ಸೆಪ್ಟೆಂಬರ್/ ಅಕ್ಟೋಬರ್ ತಿಂಗಳುಗಳಲ್ಲಿ ವಯಸ್ಸಾದ ಗಿಡಗಳಿಗೆ ಉಚಪರಿಸಬೇಕು.  ಈ ರಾಸಾಯನಿಕ ಬಳಕೆಯನ್ನು ತಜ್ಞರ ಸಲಹೆ ಪಡೆದು ಮಾಡಬೇಕು.  ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.