Saturday, 29 July 2017

ಐ.ಟಿ.ಐ ಕಾಲೇಜು ಪ್ರವೇಶ : ಅವಧಿ ವಿಸ್ತರಣೆ


ಕೊಪ್ಪಳ, ಜು. 29 (ಕರ್ನಾಟಕ ವಾರ್ತೆ): ಸರ್ಕಾರಿ/ಅನಿಧಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಆಗಸ್ಟ್-2017ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಮಾಡಿ, ಉಳಿದಿರುವ ಸ್ಥಾನಗಳಿಗೆ ಮೆರಿಟ್ ಆಧಾರದ ಮೇಲೆ ಎಸ್.ಎಸ್.ಎಲ್.ಸಿ ಉತ್ತಿರ್ಣರಾದ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಜು. 31 ರವರೆಗೆ ವಿಸ್ತರಿಸಲಾಗಿದೆ.
    ಈ ಮೊದಲು ಅರ್ಜಿ ಸಲ್ಲಿಸಲು ಜು. 26 ಕೊನೆಯ ದಿನವಾಗಿತ್ತು,  ಇದೀಗ ಅರ್ಜಿ ಸಲ್ಲಿಕೆ ಅವಧಿಯನ್ನು ಜು. 31 ರವರೆಗೆ ವಿಸ್ತರಿಸಲಾಗಿದೆ.  ಅರ್ಜಿ ಸಲ್ಲಿಸಿದವರಿಗೆ ಆಗಸ್ಟ್. 03 ರಂದು ಮಧ್ಯಹ್ನ 03-00 ಗಂಟೆಗೆ ಸಮಾಲೋಚನೆ ನಿಗದಿಪಡಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ (ಐ.ಟಿ.ಐ), ಟಣಕನಕಲ್, ಕೊಪ್ಪಳ, ದೂರವಾಣಿ ಸಂಖ್ಯೆ 9620896909/ 7411483699 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. 

ಬಾಲಮಂದಿರ ಸಂಸ್ಥೆಗಳಿಗೆ ಅರೆಕಾಲಿಕ ಸಿಬ್ಬಂದಿಗಳ ನೇಮಕ : ಅರ್ಜಿ ಆಹ್ವಾನ


ಕೊಪ್ಪಳ, ಜು. 29 (ಕರ್ನಾಟಕ ವಾರ್ತೆ): ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಎರಡು ಸುಧಾರಣಾ ಸಂಸ್ಥೆಗಳಾದ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಬಾಲಮಂದಿರಗಳಿಗೆ ಅರೆಕಾಲಿಕ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
    ಅರೆಕಾಲಿಕ ಸಿಬ್ಬಂದಿಗಳ ವಿವರ ಇಂತಿದೆ, ಬಾಲಕಿಯರ ಬಾಲಮಂದಿರದಲ್ಲಿ ಬಿ.ಎಸ್.ಸಿ ಬಿ.ಎಡ್ ವಿದ್ಯಾರ್ಹತೆ ಹೊಂದಿದ ಗಣಿತ, ವಿಜ್ಞಾನ ಶಿಕ್ಷಕರು – 01, ಸಿ.ಪಿ.ಎಡ್ ಅಥವಾ ಬಿ.ಪಿ.ಎಡ್ ವಿದ್ಯಾರ್ಹತೆ ಹೊಂದಿದ ದೈಹಿಕ ಹಾಗೂ ಯೋಗ ಶಿಕ್ಷಕರು – 01, ಬಾಲಕರ/ ಬಾಲಕಿಯರ ಬಾಲಮಂದಿರದಲ್ಲಿ ಸಂಗೀತ/ ವಾಧ್ಯ, ಸಂಗೀತ ಹಾಗೂ ಕಲೆ ವಿಷಯದಲ್ಲಿ ಅಂಗೀಕೃತ ಸಂಸ್ಥೆಯಿಂದ ಸರ್ಟಿಫೀಕೇಟ್ ಕೋರ್ಸ್ ವಿದ್ಯಾರ್ಹತೆ ಹೊಂದಿದ ಕಲೆ, ಕ್ರಾಪ್ಟ್ ಹಾಗೂ ಸಂಗೀತ ಶಿಕ್ಷಕರು – 02, ಹುದ್ದೆಗಳಾಗಿದ್ದು, ಮೂರು ವರ್ಷ ಅನುಭವ ಹೊಂದಿರುವ ಹಾಗೂ 18 ರಿಂದ 38 ವರ್ಷ ವಯೋಮಿತಿಯಲ್ಲಿರಬೇಕು.  ರೂ. 4000/-ಗಳ ಗೌರವಧನ ನೀಡಲಾಗುವುದು. 
    ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆ ಹಾಗೂ ವಿಶ್ವವಿದ್ಯಾನಿಲಯಗಳಿಂದ ಸಂಬಂಧಿಸಿದ ತರಬೇತಿ/ ಪದವಿ ಪಡೆದಿರಬೇಕು.  ಬಾಲಕಿಯರ ಬಾಲಮಂದಿರದ ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.  ಗೌರವಧನದ ಆಧಾರದ ಮೇಲೆ ಪ್ರಸಕ್ತ ಸಾಲಿನಲ್ಲಿ ಒಂದು ವರ್ಷದ ಅವಧಿಗೆ ಅರೆಕಾಲಿಕ ಆಧಾರದ ಮೇಲೆ ಕಾರ್ಯ ನಿರ್ವಹಿಸಬೇಕಾಗಿರುತ್ತದೆ.  ಆಯ್ಕೆಯಾದ ಅಭ್ಯರ್ಥಿಗಳ ಹುದ್ದೆಯು ಅರೆಕಾಲಿಕ ಹಾಗೂ ತಾತ್ಕಾಲಿಕ ಆಧಾರದ ಹುದ್ದೆಯಾಗಿರುತ್ತದೆ.  ಸ್ಥಳೀಯ ಅಭ್ಯರ್ಥಿ ಹಾಗೂ ಹೆಚ್ಚಿನ ಶೈಕ್ಷಣಿಕ ಅರ್ಹತೆಗೆ ಆಧ್ಯತೆ ಇರುತ್ತದೆ.  ಅಭ್ಯರ್ಥಿಗಳ ಆಯ್ಕೆಯಲ್ಲಿ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. 
    ಆಸಕ್ತರು ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಸ್ವವಿವರವನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಇಲ್ಲಿಗೆ ಆಗಸ್ಟ್. 16 ರೊಳಗಾಗಿ ಸಲ್ಲಿಸಬೇಕು ಎಂದು ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮಾದಕ-ಮಾರಕ : ಜು. 31 ರಂದು ಕೊಪ್ಪಳದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ


ಕೊಪ್ಪಳ, ಜು. 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಮಾದಕ ವಸ್ತುಗಳಿಂದ ಬಾಧಿತರಾದವರಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮ ಜುಲೈ. 31 ರಂದು ಬೆಳಿಗ್ಗೆ 10-00 ಗಂಟೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. 
    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ. ಶ್ರೀನಿವಾಸ ಅವರು ಉದ್ಘಾಟನೆ ನೆರೆವೇರಿಸುವರು.  ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಶುಂಪಾಲ ತಿಮ್ಮಾರೆಡ್ಡಿ ಮೇಟಿ ಅವರು ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಸಿವಿಲ್ ನ್ಯಾಯಾಧೀಶ ವಿಜಯ ಕುಮಾರ ಕನ್ನೂರು, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ದಾನರೆಡ್ಡಿ, ಜಿಲ್ಲಾ ಸರ್ಕಾರಿ ವಕೀಲ ಆಸೀಫ್ ಅಲಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಬಸಪ್ಪ ಎಸ್. ಕಂಪ್ಲಿ, ಕಾರ್ಯದರ್ಶಿ ಕೊಟ್ರೇಶ ಯು. ಪೋಚಗುಂಡಿ  ಅವರು ಪಾಲ್ಗೊಳ್ಳುವರು. 
    ಕಾರ್ಯಕ್ರಮದ ಅಂಗವಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಮಾನಸಿಕ ರೋಗ ತಜ್ಞ ಡಾ. ಕೃಷ್ಣ ಓಂಕಾರ ಅವರು ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಮಾನಸಿಕ ಅವ್ಯವಸ್ಥೆ ಹಾಗೂ ದುಷ್ಟಪರಿಣಾಮಗಳ ಕುರಿತು, ಹಾಗೂ ವಕೀಲರಾದ ಎಂ.ಎ. ಹನುಮಂತರಾವ್ ಅವರು ರಾಷ್ಟ್ರ ಕಟ್ಟುವಲ್ಲಿ ಯುವಕರ ಪಾತ್ರ ಹಾಗೂ ರ್ಯಾಗಿಂಗ್ ತಡೆಗಟ್ಟುವ ಕುರಿತು ವಿಶೇಷ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.  

ಇಂಡಿಯನ್ ಆರ್ಮಿ ಹಾಗೂ ವಿವಿಧ ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ತರಬೇತಿ


ಕೊಪ್ಪಳ, ಜು. 29 (ಕರ್ನಾಟಕ ವಾರ್ತೆ): ಕಲಬುರ್ಗಿಯ ಫೋರ್ರ್ಸ್ ಅಕಾಡೆಮಿ ಎ ಯುನಿಟ್ ಆಫ್ ಲತಾ ಎಜ್ಯುಕೇಶನ್ & ಚಾರಿಟೆಬಲ್ ಟ್ರಸ್ಟ್ ಇವರು ಇಂಡಿಯನ್ ಆರ್ಮಿ, ಎನ್.ಎ.ವಿ.ವೈ., ಏರ್ ಫೋರ್ರ್ಸ್, ಬಿ.ಎಸ್.ಎಫ್., ಸಿ.ಆರ್.ಪಿ.ಎಫ್., ಸಿ.ಐ.ಎಸ್.ಎಫ್., ಐ.ಟಿ.ಬಿ.ಪಿ., ಎಸ್.ಎಸ್.ಬಿ., ಆರ್.ಪಿ.ಎಫ್., ರಾಜ್ಯ ಪೊಲೀಸ್ ನೇಮಕಾತಿಯ ಪೂರ್ವಭಾವಿ ತರಬೇತಿಯನ್ನು ಕಲಬುರ್ಗಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.  
    ಹೈದ್ರಾಬಾದ – ಕರ್ನಾಟಕ ಪ್ರದೇಶದ ಉತ್ಸಾಹಿ ಯುವಕ ಹಾಗೂ ಯುವತಿಯರಿಗೆ ತರಬೇತಿಯನ್ನು ಆಯೋಜಿಸಲಾಗಿದ್ದು, ಬಾಗಲಕೋಟ ಹಾಗೂ ಕೊಪ್ಪಳ ಜಿಲ್ಲೆಯ ಮಾಜಿ ಸೈನಿಕರು, ವಿಧವೆಯರು, ಯುದ್ಧ ಸಂತ್ರಸ್ಥರ ಮಕ್ಕಳಿಗೆ ಇಂಡಿಯನ್ ಆರ್ಮಿ, ಎನ್.ಎ.ವಿ.ವೈ., ಏರ್ ಫೋರ್ರ್ಸ್, ಬಿ.ಎಸ್.ಎಫ್., ಸಿ.ಆರ್.ಪಿ.ಎಫ್., ಸಿ.ಐ.ಎಸ್.ಎಫ್., ಐ.ಟಿ.ಬಿ.ಪಿ., ಎಸ್.ಎಸ್.ಬಿ., ಆರ್.ಪಿ.ಎಫ್., ರಾಜ್ಯ ಪೊಲೀಸ್ ಇಲಾಖೆಗಳಲ್ಲಿ ಸೇರ ಬಯಸುವ ಅಭ್ಯರ್ಥಿಗಳು ಈ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ.
    ತರಬೇತಿಯಲ್ಲಿ ದೈಹಿಕ ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆ ಬಗ್ಗೆ ನುರಿತ ಶಿಕ್ಷಕರಿಂದ ಸಮಗ್ರವಾದ ಬೋಧನೆ ನೀಡಲಾಗುತ್ತದೆ.  ತರಬೇತಿಯನ್ನು ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8884455288, 8884455299 ಕ್ಕೆ ಸಂಪರ್ಕಿಸಬಹುದು ಎಂದು ಬಾಗಲಕೋಟ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಕರು/ಸಿಬ್ಬಂದಿಗಳ ಪರಿಷ್ಕøತ ಜೇಷ್ಠತಾ ಪಟ್ಟಿ : ಆಕ್ಷೇಪಣೆಗೆ ಆಹ್ವಾನ


ಕೊಪ್ಪಳ, ಜು. 29 (ಕರ್ನಾಟಕ ವಾರ್ತೆ): ಸರ್ವೋಚ್ಛ ನ್ಯಾಯಾಲಯದ ಆದೇಶದನ್ವಯ ಶಿಕ್ಷಕರು/ಸಿಬ್ಬಂದಿಗಳ ಪರಿಷ್ಕøತ ಜೇಷ್ಠತಾ ಪಟ್ಟಿಯನ್ನು ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಬಾಧಿತ ಶಿಕ್ಷಕರು/ ಸಿಬ್ಬಂದಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
    ಸುಪ್ರಿಂ ಕೊರ್ಟ ಅರ್ಜಿ ಸಂಖ್ಯೆ 2368/2011 ಬಿ.ಕೆ ಪವಿತ್ರ ಹಾಗೂ ಇತರರ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸವೋಚ್ಚ ನ್ಯಾಯಾಲಯ ಆದೇಶ ದಿನಾಂಕ. 09-02-2017 ರ ಹಿನ್ನಲೆಯಲ್ಲಿ ಪರಿಷ್ಕøತ ಜೇಷ್ಠತಾ ಪಟ್ಟಿಯನ್ನು 1978 ರಿಂದ ತಯಾರಿಸಬೇಕಾಗಿರುವುದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಗಂಗಾವತಿಯಲ್ಲಿ ಸೂಚನಾ ಫಲಕದಲ್ಲಿ ಪ್ರಕಟಿಸಲಾದ  ಜೇಷ್ಠತಾ ಪಟ್ಟಿಯಲಿ,್ಲ ಭಾದಿತ ಶಿಕ್ಷಕರು/ ಸಿಬ್ಬಂದಿಯವರಿಂದ ಯವುದೇ ಆಕ್ಷೇಪಣೆಗಳಿದ್ದಲ್ಲಿ ಆಗಸ್ಟ್. 05 ಸಂಜೆ 5-00 ಗಂಟೆಯೊಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಗಂಗಾವತಿ ಇಲ್ಲಿಗೆ ಸಲ್ಲಿಸಬಹುದು ಎಂದು ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ


ಕೊಪ್ಪಳ, ಜು. 29 (ಕರ್ನಾಟಕ ವಾರ್ತೆ): ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
    ಜನವರಿ-2015 ರಿಂದ ಡಿಸೆಂಬರ್-2015 ರ ವರೆಗೆ ಮತ್ತು 2016 ರ ಜನವರಿ ಯಿಂದ ಡಿಸೆಂಬರ್-2016 ರ ವರೆಗೆ ಮಕ್ಕಳ ಕ್ಷೇತ್ರದಲ್ಲಿ ಪ್ರಕಟಣೆಗೊಂಡ ಸ್ವರಚಿತ ಕವನ ಸಂಕಲನ, ಕಥಾ ಸಂಕಲನ, ನಾಟಕ (ಪಠ್ಯಧಾರಿತ ಬಿಟ್ಟು), ಮಕ್ಕಳ ಜನಪದ (ಸೃಜನಾತ್ಮಕ ಅಥವಾ ಸಂಪಾದಿತ), ವೈಜ್ಞಾನಿಕ ಕೃತಿ, ಅನುವಾದಿತ (ಯಾವುದೇ ಪ್ರಕಾರದ ಮಕ್ಕಳ ಸಾಹಿತ್ಯ), ಸಂಕೀರ್ಣ (ವಿಮರ್ಶೆ, ಲೇಖನ ಇತ್ಯಾದಿ) ಪುಸ್ತಕಗಳನ್ನು ಹಾಗೂ ಪುಸ್ತಕ ರೂಪದಲ್ಲಿ ಪ್ರಕಟವಾದ ಮಕ್ಕಳ ಕಾವ್ಯ, ಕಥೆ, ಕೃತಿಗಳನ್ನು ಸಹ ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ.
ಆಯ್ಕೆಯಾದ ಕೃತಿಗಳಿಗೆ ರೂ. 10,000/- ನಗದು ಬಹುಮಾನ ನೀಡಿ ಲೇಖಕರನ್ನು ಗೌರವಿಸಲಾಗುವುದು.  ಅರ್ಜಿ ಸಲ್ಲಿಸಲು ಈಗಾಗಲೇ ಅಕಾಡೆಮಿಯಿಂದ ಪ್ರಶಸ್ತಿಯನ್ನು ಪಡೆದಿರಬಾರದು.  ಪುಸ್ತಕ ಕಳುಹಿಸಲು ಆಗಸ್ಟ್. 17 ಕೊನೆಯ ದಿನವಾಗಿದ್ದು, ಕೃತಿಯ 4 ಪ್ರತಿಗಳನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ಇವರ ಕಛೇರಿಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08539-222703 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ನಿತ್ಯ ಉಚಿತ ಅನ್ನದಾಸೋಹ ಪ್ರಾರಂಭ


ಕೊಪ್ಪಳ ಜು. 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ, ಗಂಗಾವತಿ ತಾಲೂಕಿನ, ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ನಿತ್ಯ ಉಚಿತ ಅನ್ನದಾಸೋಹ ವ್ಯವಸ್ಥೆಯನ್ನು ಕಳೆದ ಜು. 24 ರಿಂದ ಪ್ರಾರಂಭಿಸಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ತಿಳಿಸಿದ್ದಾರೆ.
        ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ಅಧಿಸೂಚಿತ ‘ಎ’ವರ್ಗದ ದೇವಸ್ಥಾನವಾಗಿದೆ. ಈ ದೇವಸ್ಥಾನದಲ್ಲಿ ಜು. 24 ರಂದು ಶ್ರಾವಣ ಮಾಸದಿಂದ ಪ್ರತಿ ನಿತ್ಯ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ. ಇನ್ನು ಮುಂದೆ ಈ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಪ್ರತಿ ನಿತ್ಯ ಮದ್ಯಾಹ್ನ 12-30 ರಿಂದ 2-30 ಗಂಟೆಯವರೆಗೆ ಉಚಿತ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ. ಅಲ್ಲದೆ ಈ ಕ್ಷೇತ್ರದಲ್ಲಿ ದೇವಸ್ಥಾನದ ಮೇಲೆ ಇರುವ ಶಿಥಿಲಾವಸ್ಥೆಯಲ್ಲಿದ್ದ ಕೈಪಿಡಿ ಗೊಂಬೆಗಳು ಮತ್ತು ಎರಡು ಗೋಪುರಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಹೊಸದಾಗಿ ನಿರ್ಮಾಣ ಮಾಡುವುದು ಮತ್ತು ರಥದ ಶೆಡ್‍ನ್ನು ಸ್ಥಳಾಂತರಿಸಿ ಶೆಡ್ ನಿರ್ಮಾಣ ಮಾಡಲು 101 ಲಕ್ಷಗಳಲ್ಲಿ ಕಾಮಗಾರಿ ಸಹಾ ಹಮ್ಮಿಕೊಳ್ಳಲಾಗಿದೆ.   ಭಕ್ತರು ಕ್ಷೇತ್ರದ ಅಭಿವೃದ್ದಿಗೆ ಹಾಗೂ ಪ್ರತಿನಿತ್ಯ ಹಮ್ಮಿಕೊಳ್ಳಲು ಉದ್ದೇಶಿಸಿರುವ ಉಚಿತ ಅನ್ನ ಪ್ರಸಾದದ ವ್ಯವಸ್ಥೆಗೆ ತಮ್ಮ ತನು, ಮನದಿಂದ ಕಾಣಿಕೆ, ಮುಡುಪು, ಬೆಳ್ಳಿ, ಬಂಗಾರ ಮತ್ತು ದವಸ ದಾನ್ಯಗಳನ್ನು ದೇವಸ್ಥಾನದ ಗಣಕೀಕೃತ ಕೌಂಟರ್‍ನಲ್ಲಿ ಸಲ್ಲಿಸಿ ಸೂಕ್ತ ರಶೀದಿ ಪಡೆಯಬಹುದು ಅಥವಾ ಹುಂಡಿಯಲ್ಲಿ ಹಾಕಬಹುದಾಗಿದೆ. ದೇವಸ್ಥಾನದ ವತಿಯಿಂದ ದವಸ ದಾನ್ಯವನ್ನಾಗಲೀ ಅಥವಾ ಮುಡುಪು ಕಾಣಿಕೆ ವಸೂಲಿಗಾಗಿ ದೇವಸ್ಥಾನದ ವತಿಯಿಂದ ಯಾರನ್ನು ನೇಮಿಸಿರುವುದಿಲ್ಲ. ಯಾವುದೇ ಮದ್ಯವರ್ತಿಗಳು ದೇವಸ್ಥಾನದ ಹೆಸರಿನಲ್ಲಿ ಕಾಣಿಕೆ ಅಥವಾ ದವಸಧಾನ್ಯಗಳ ವಸೂಲಾತಿಗೆ ಬಂದಲ್ಲಿ, ಅಂತಹವರ ವಿರುದ್ದ ಕ್ರಮ ಜರುಗಿಸಲು  ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತರುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ನಿತ್ಯ ಉಚಿತ ಅನ್ನದಾಸೋಹ ಪ್ರಾರಂಭ


ಕೊಪ್ಪಳ ಜು. 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ, ಗಂಗಾವತಿ ತಾಲೂಕಿನ, ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ನಿತ್ಯ ಉಚಿತ ಅನ್ನದಾಸೋಹ ವ್ಯವಸ್ಥೆಯನ್ನು ಕಳೆದ ಜು. 24 ರಿಂದ ಪ್ರಾರಂಭಿಸಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ತಿಳಿಸಿದ್ದಾರೆ.
        ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ಅಧಿಸೂಚಿತ ‘ಎ’ವರ್ಗದ ದೇವಸ್ಥಾನವಾಗಿದೆ. ಈ ದೇವಸ್ಥಾನದಲ್ಲಿ ಜು. 24 ರಂದು ಶ್ರಾವಣ ಮಾಸದಿಂದ ಪ್ರತಿ ನಿತ್ಯ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ. ಇನ್ನು ಮುಂದೆ ಈ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಪ್ರತಿ ನಿತ್ಯ ಮದ್ಯಾಹ್ನ 12-30 ರಿಂದ 2-30 ಗಂಟೆಯವರೆಗೆ ಉಚಿತ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ. ಅಲ್ಲದೆ ಈ ಕ್ಷೇತ್ರದಲ್ಲಿ ದೇವಸ್ಥಾನದ ಮೇಲೆ ಇರುವ ಶಿಥಿಲಾವಸ್ಥೆಯಲ್ಲಿದ್ದ ಕೈಪಿಡಿ ಗೊಂಬೆಗಳು ಮತ್ತು ಎರಡು ಗೋಪುರಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಹೊಸದಾಗಿ ನಿರ್ಮಾಣ ಮಾಡುವುದು ಮತ್ತು ರಥದ ಶೆಡ್‍ನ್ನು ಸ್ಥಳಾಂತರಿಸಿ ಶೆಡ್ ನಿರ್ಮಾಣ ಮಾಡಲು 101 ಲಕ್ಷಗಳಲ್ಲಿ ಕಾಮಗಾರಿ ಸಹಾ ಹಮ್ಮಿಕೊಳ್ಳಲಾಗಿದೆ.   ಭಕ್ತರು ಕ್ಷೇತ್ರದ ಅಭಿವೃದ್ದಿಗೆ ಹಾಗೂ ಪ್ರತಿನಿತ್ಯ ಹಮ್ಮಿಕೊಳ್ಳಲು ಉದ್ದೇಶಿಸಿರುವ ಉಚಿತ ಅನ್ನ ಪ್ರಸಾದದ ವ್ಯವಸ್ಥೆಗೆ ತಮ್ಮ ತನು, ಮನದಿಂದ ಕಾಣಿಕೆ, ಮುಡುಪು, ಬೆಳ್ಳಿ, ಬಂಗಾರ ಮತ್ತು ದವಸ ದಾನ್ಯಗಳನ್ನು ದೇವಸ್ಥಾನದ ಗಣಕೀಕೃತ ಕೌಂಟರ್‍ನಲ್ಲಿ ಸಲ್ಲಿಸಿ ಸೂಕ್ತ ರಶೀದಿ ಪಡೆಯಬಹುದು ಅಥವಾ ಹುಂಡಿಯಲ್ಲಿ ಹಾಕಬಹುದಾಗಿದೆ. ದೇವಸ್ಥಾನದ ವತಿಯಿಂದ ದವಸ ದಾನ್ಯವನ್ನಾಗಲೀ ಅಥವಾ ಮುಡುಪು ಕಾಣಿಕೆ ವಸೂಲಿಗಾಗಿ ದೇವಸ್ಥಾನದ ವತಿಯಿಂದ ಯಾರನ್ನು ನೇಮಿಸಿರುವುದಿಲ್ಲ. ಯಾವುದೇ ಮದ್ಯವರ್ತಿಗಳು ದೇವಸ್ಥಾನದ ಹೆಸರಿನಲ್ಲಿ ಕಾಣಿಕೆ ಅಥವಾ ದವಸಧಾನ್ಯಗಳ ವಸೂಲಾತಿಗೆ ಬಂದಲ್ಲಿ, ಅಂತಹವರ ವಿರುದ್ದ ಕ್ರಮ ಜರುಗಿಸಲು  ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತರುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

Friday, 28 July 2017

ಶಾಲಾ ಕಟ್ಟಡ ಪರವಾನಿಗೆ : ಆಕ್ಷೇಪಣೆಗೆ ಆಹ್ವಾನ


ಕೊಪ್ಪಳ, ಜು. 28 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವ್ಯಾಪ್ತಿಯ ತೋಟದಭಾವಿ ಏರಿಯಾದಲ್ಲಿ ಬರುವ ಭೀಮಸೇನರಾವ್ ಬನ್ನಿಗೋಳ ಇವರ ಆಸ್ತಿಯ ಎಂ.ಬಿ. ನಂಬರ್ 4-2-128, 4-2-149, ರಲ್ಲಿ ಶಾಲಾ ಕಟ್ಟಡವನ್ನು ಕಟ್ಟಲು ಪರವಾನಿಗೆ ಕೋರಿ ಅರ್ಜಿ ಸಲ್ಲಿಸಿದ್ದು, ಆಕ್ಷೇಪಣೆಗಳಿಗೆ ಆಹ್ವಾನಿಸಲಾಗಿದೆ. 
    ಶಾಲಾ ಕಟ್ಟಡದ ಪರವಾನಿಗೆ ನೀಡುವ ಪೂರ್ವದಲ್ಲಿ ಸರ್ಕಾರದ ನಿರ್ದೇಶನದಂತೆ ಆಕ್ಷೇಪಣೆ ಪ್ರಕಟಣೆಯನ್ನು ಕರೆಯಲಾಗಿದೆ.  ಶಾಲಾ ಕಟ್ಟಡ ಕಟ್ಟುವುದಕ್ಕೆ ಸಂಬಂಧಿಸಿದಂತೆ ಯಾವುದೆ ಆಕ್ಷೇಪಣೆಗಳಿದ್ದಲ್ಲಿ ಸಮರ್ಪಕ ಕಾರಣಗಳೊಂದಿಗೆ ಲಿಖಿತ ರೂಪದಲ್ಲಿ 15 ದಿವಸಗಳೊಳಗಾಗಿ ಅಂದರೆ ಆಗಸ್ಟ್ 10 ರೊಳಗಾಗಿ ಕೊಪ್ಪಳ ನಗರಸಭೆ ಕಾರ್ಯಾಲಯಕ್ಕೆ ಸಲ್ಲಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಎಸ್.ಎಸ್.ಎಲ್.ಸಿ ಅನುತ್ತೀರ್ಣ ಅಭ್ಯರ್ಥಿಗಳಿಗೆ ವೆಲ್ಡರ್ ವೃತ್ತಿ


ಕೊಪ್ಪಳ, ಜು. 28 (ಕರ್ನಾಟಕ ವಾರ್ತೆ): ಕೊಪ್ಪಳ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ (ಐ.ಟಿ.ಐ) ಯಲ್ಲಿ ಪಿ.ಪಿ.ಪಿ ಅಡಿಯಲ್ಲಿ ಪ್ರಸಕ್ತ ಸಾಲಿಗೆ ಎಸ್.ಎಸ್.ಎಲ್.ಸಿ ಅನುತ್ತೀರ್ಣರಾದ ಅಭ್ಯರ್ಥಿಗಳಿಗೆ ಒಂದು ವರ್ಷದ ವೆಲ್ಡರ್ ವೃತ್ತಿ ಕೋರ್ಸ್‍ಗೆ ನೇರವಾಗಿ ಪ್ರವೇಶ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರಾದ ಗವಿಶಂಕರ್ .ಕೆ. ಅವರು ತಿಳಿಸಿದ್ದಾರೆ.
    ಆಸಕ್ತರು  ಈ ಸುವರ್ಣಾವಕಾಶದ ಸದುಪಯೋಗ ಪಡೆದುಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ (ಐ.ಟಿ.ಐ), ಟಣಕನಕಲ್, ಕೊಪ್ಪಳ-583231.  ದೂರವಾಣಿ ಸಂಖ್ಯೆ – 9986707080 ಕ್ಕೆ ಅಥವಾ ಇ-ಮೇಲ್  principal.koppaliti@yahoo.in ನಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಐಟಿಐ ಪಾಸಾದವರಿಗೆ 3ನೇ ಸೆಮಿಸ್ಟರ್ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ


ಕೊಪ್ಪಳ, ಜು. 27 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನಲ್ಲಿ 3ನೇ ಸೆಮಿಸ್ಟರ್/ 2ನೇ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ 02 ವರ್ಷಗಳ ಐಟಿಐ ಪಾಸಾದ ಅರ್ಹ ಅಭ್ಯರ್ಥಿಗಳಿಗೆ ಖಾಲಿ ಉಳಿದಿರುವ ಸೀಟುಗಳಿಗೆ ಆಫ್-ಲೈನ್ ಮುಖಾಂತರ ಡಿಪ್ಲೋಮಾ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
    ಅರ್ಜಿ ನಮೂನೆ ಹಾಗೂ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‍ಸೈಟ್  www.kea.kar.nic.in & www.dte.kar.nic.in ಗಳ ಮೂಲಕ ಡೌನ್‍ಲೋಡ್ ಮಾಡಿಕೊಂಡು ಅರ್ಜಿಯನ್ನು ಸಂಪೂರ್ಣ ಭರ್ತಿ ಮಾಡಿ, ನಿಗದಿಪಡಿಸಿದ ಅರ್ಜಿ ಶುಲ್ಕವನ್ನು (ಜಿ.ಎಂ./ 2ಎ/ 2ಬಿ/ 3ಎ/3ಬಿ ರೂ. 100/- & ಎಸ್‍ಸಿ/ ಎಸ್‍ಟಿ/ ಸಿಎಟಿ-1 ರೂ. 50/-) ರಾಜ್ಯದ ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಲ್ಲಿನ ಖಾತೆ ಸಂಖ್ಯೆ:  ED-KEA-DCET-2017  ಅಪ್ಲಿಕೇಶನ್ ಫೀ ಕಲೇಕ್ಷನ್ ಅಕೌಂಟ್ ನಂ. 36843662415 ಐಎಫ್‍ಸಿ ಕೊಡ್- SBIN0007080 ಗೆ ಪಾವತಿಸಿ, ಬ್ಯಾಂಕ್ ಚಲನ್ (ಕೌಂಟರ್‍ಫೈಲ್) ನೊಂದಿಗೆ ಸರ್ಕಾರಿ ಪಾಲಿಟೆಕ್ನಿಕ್ ಕೊಪ್ಪಳ, ಸಂಸ್ಥೆಗೆ ಎಲ್ಲಾ ಮೂಲ ದಾಖಲಾತಿಗಳು ಮತ್ತು ಅವುಗಳ ಧೃಢೀಕರಿಸಿದ ನಕಲು ಪ್ರತಿಗಳೊಂದಿಗೆ ಆಗಸ್ಟ್. 03 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಪ್ರಿನ್ಸಿಪಾಲರ ಕಛೇರಿ, ಕೊಪ್ಪಳ ಸರ್ಕಾರಿ ಪಾಲಿಟೆಕ್ನಿಕ್ ದೂರವಾಣಿ ಸಂಖ್ಯೆ 9448715325 ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಎಸ್.ಎಸ್.ಎಲ್.ಸಿ ಪಾಸಾದವರಿಗೆ ಡಿಪ್ಲೋಮಾ ಪ್ರವೇಶ : ಅರ್ಜಿ ಆಹ್ವಾನ


ಕೊಪ್ಪಳ, ಜು. 27 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನಲ್ಲಿ ಪ್ರಥಮ ಡಿಪ್ಲೋಮಾ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ ಪಾಸಾದ ಅಭ್ಯರ್ಥಿಗಳಿಗೆ ಖಾಲಿ ಉಳಿದಿರುವ ಸೀಟುಗಳಿಗೆ ಆಫ್-ಲೈನ್ ಮುಖಾಂತರ ಡಿಪ್ಲೋಮಾ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆ ಹಾಗೂ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‍ಸೈಟ್ www.kea.kar.nic.in & www.dte.kar.nic.in ಗಳ ಮೂಲಕ ಡೌನ್‍ಲೋಡ್ ಮಾಡಿಕೊಂಡು ಅರ್ಜಿಯನ್ನು ಸಂಪೂರ್ಣ ಭರ್ತಿ ಮಾಡಿ, ನಿಗದಿಪಡಿಸಿದ ಅರ್ಜಿ ಶುಲ್ಕವನ್ನು (ಜಿ.ಎಂ./ 2ಎ/ 2ಬಿ/ 3ಎ.3ಬಿ ರೂ. 100/- & ಎಸ್‍ಸಿ/ ಎಸ್‍ಟಿ/ ಸಿಎಟಿ-1 ರೂ. 50/-) ರಾಜ್ಯದ ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಲ್ಲಿನ ಖಾತೆ ಸಂಖ್ಯೆ: ED-KEA-DCET-2017 ಅಪ್ಲಿಕೇಶನ್ ಫೀ ಕಲೇಕ್ಷನ್ ಅಕೌಂಟ್ ನಂ. 36843662415 ಐಎಫ್‍ಸಿ ಕೊಡ್- SBIN0007080  ಗೆ ಪಾವತಿಸಿ, ಬ್ಯಾಂಕ್ ಚ್ಯಾನೆಲ್ (ಕೌಂಟರ್‍ಫೈಲ್) ನೊಂದಿಗೆ ಸರ್ಕಾರಿ ಪಾಲಿಟೆಕ್ನಿಕ್ ಕೊಪ್ಪಳ, ಸಂಸ್ಥೆಗೆ ಎಲ್ಲಾ ಮೂಲ ದಾಖಲಾತಿಗಳು ಮತ್ತು ಅವುಗಳ ಧೃಢೀಕರಿಸಿದ ನಕಲು ಪ್ರತಿಗಳೊಂದಿಗೆ ಆಗಸ್ಟ್. 02 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಪ್ರಿನ್ಸಿಪಾಲರ ಕಛೇರಿ, ಕೊಪ್ಪಳ ಸರ್ಕಾರಿ ಪಾಲಿಟೆಕ್ನಿಕ್ ದೂರವಾಣಿ ಸಂಖ್ಯೆ 9448715325 ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ನೇಮಕ ಅಧಿಸೂಚನೆ ರದ್ದು


ಕೊಪ್ಪಳ, ಜು. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸ್ಥಾಪಿಸುತ್ತಿರುವ ಹೈ.ಕ.ಪ್ರ.ಅ. ಮಂಡಳಿಯ ಕೋಶದಲ್ಲಿ ಕೆಲಸ ನಿರ್ವಹಿಸಲು ವಿವಿಧ ಹುದ್ದೆಗಳ ನೇಮಕಾತಿಗಾಗಿ ಕಳೆದ ಜೂನ್ ತಿಂಗಳಿನಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ರದ್ದುಪಡಿಸಲಾಗಿದೆ.
         ಹೈದ್ರಾಬಾದ-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಹಾಗೂ ಭಾರತ ಸಂವಿಧಾನದ ಅನುಚ್ಛೇದ 371(ಜೆ) ಕಲಂ ಅನ್ವಯ ಕಾರ್ಯ ಚಟುವಟಿಕೆಗಾಗಿ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸ್ಥಾಪಿಸುತ್ತಿರುವ ಹೈ.ಕ.ಪ್ರ.ಅ. ಮಂಡಳಿಯ ಕೋಶದಲ್ಲಿ ಕೆಲಸ ನಿರ್ವಹಿಸಲು ನಿವೃತ್ತ ಅಧಿಕಾರಿ/ ಸಿಬ್ಬಂದಿ, ನಿವೃತ್ತ ತಾಂತ್ರಿಕ ಸಿಬ್ಬಂದಿ ಹಾಗೂ ಡಾಟಾ ಎಂಟ್ರಿ ಆಪರೇಟರಗಳನ್ನು ತಾತ್ಕಾಲಿಕವಾಗಿ ಗೌರವಧನ ಮೇರಗೆ ನೇಮಕಾತಿ ಮಾಡಿಕೊಳ್ಳಲು ಹೊರಡಿಸಿದ ಅಧಿಸೂಚನೆಯನ್ನು ಕಾರಣಾಂತರಗಳಿಂದ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ತಿಳಿಸಿದ್ದಾರೆ.

ನೀರಿನ ಟ್ಯಾಂಕರ್ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ, ಜು. 27 (ಕರ್ನಾಟಕ ವಾರ್ತೆ): ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ರಾಜ್ಯ ವಲಯ ಯೋಜನೆಯಡಿ ನೀರಿನ ಟ್ಯಾಂಕರ್ ಖರೀದಿಸಲು ಸಹಾಯಧನಕ್ಕಾಗಿ ತೋಟಗಾರಿಕೆಯಲ್ಲಿ ತೊಡಗಿರುವ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. 
    ಬರಗಾಲದ ಸಮಯದಲ್ಲಿ ಹಾಗೂ ಸಂದಿಗ್ಧ ಪರಿಸ್ಥಿತಿಯಲ್ಲಿ ನೀರಿನ ಅಭಾವವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಮಾನ್ಯ ರೈತರಿಗೆ ಶೇ. 50 ರಂತೆ ಗರಿಷ್ಠ ರೂ. 50,000/-ಗಳನ್ನು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿದ ರೈತರಿಗೆ ಶೇ.90 ರಂತೆ ಗರಿಷ್ಠ ರೂ. 90,000/-ಗಳ ವರೆಗೆ ಸಹಾಯಧನ ನೀಡಲು ಅವಕಾಶವಿರುತ್ತದೆ. 
ಅರ್ಜಿ ಸಲ್ಲಿಸಲು ತೋಟಗಾರಿಕೆಯಲ್ಲಿ ತೊಡಗಿರುವ ರೈತ ಫಲಾನುಭವಿಗಳು ಬಹು ವಾರ್ಷಿಕ ತೋಟಗಾರಿಕೆ ಬೆಳೆಗಳನ್ನು ಬೆಳೆಯುವವರಾಗಿದ್ದು, ಸಾಮಾನ್ಯ ವರ್ಗದ ರೈತರು ಕನಿಷ್ಠ 1 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯುತ್ತಿರಬೇಕು.  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು, ಕನಿಷ್ಠ 1 ಎಕರೆ ಪ್ರದೇಶದಲ್ಲಿ ಬಹು ವಾರ್ಷಿಕ ತೋಟಗಾರಿಕೆ ಬೆಳೆ ಬೆಳೆಯುತ್ತಿರಬೇಕು.  ನಿಗದಿಪಡಿಸಿದ ಅರ್ಜಿ ನಮೂನೆಗಾಗಿ ಹಾಗೂ ಸಲ್ಲಿಸಬೇಕಾಗಿರುವ ದಾಖಲೆಗಳಿಗಾಗಿ ಸಂಬಂಧಪಟ್ಟ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ಇಲಾಖೆ ನಿರ್ದೇಶಕರು ಹಾಗೂ ಸಹಾಯಕ ತೋಟಗಾರಿಕಾ ಇಲಾಖೆ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ, ಮಾಹಿತಿ ಪಡೆಯಬಹುದಾಗಿದೆ ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜು. 30 ರಂದು ಹನಮಸಾಗರದಲ್ಲಿ ಐಟಿಐ ಅಭ್ಯರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ


ಕೊಪ್ಪಳ, ಜು. 27 (ಕರ್ನಾಟಕ ವಾರ್ತೆ): ಐಟಿಐ ತರಬೇತಾರ್ಥಿಗಳಿಗೆ ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನವನ್ನು ಎಸ್.ಆರ್ ಎಂಟರ್‍ಪ್ರೈಸಸ್ ಫ್ಲೇಸ್‍ಮೆಂಟ್ ಸೆಲ್ ಗುಲಬರ್ಗಾ ರವರಿಂದ ಜುಲೈ. 30 ರಂದು ಬೆಳಿಗ್ಗೆ 10-00 ಗಂಟೆಗೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನಮಸಾಗರದ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಲಾಗಿದೆ.
ಎಸ್.ಆರ್ ಎಂಟರ್‍ಪ್ರೈಸಸ್ ಫ್ಲೇಸ್‍ಮೆಂಟ್ ಸೆಲ್ ಗುಲಬರ್ಗಾ ರವರಿಂದ ಹೋಂಡಾ ಮೋಟಾರ್ಸ & ಸ್ಕೂಟರ್ಸ್ ಲಿಮಿಟೆಡ್ ಇಲ್ಲಿಗೆ ಅಂತಿಮ ವರ್ಷದ ಐ.ಟಿ.ಐ ಪರೀಕ್ಷೆಗೆ ಹಾಜರಾಗಿರುವ ಹಾಗೂ ಈಗಾಗಲೇ ಐ.ಟಿ.ಐ ಪಾಸಾಗಿರುವ 24 ವರ್ಷ ವಯೋಮಾನವುಳ್ಳ ಎಲ್ಲಾ ವೃತ್ತಿಗಳ (ಕೋಪಾ ವೃತ್ತಿ ಹೊರತುಪಡಿಸಿ) ಅಭ್ಯರ್ಥಿಗಳಿಗೆ ನೇರ ನೇಮಕಾತಿಯ ಸಲುವಾಗಿ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಗಿದೆ.  
ಹೆಚ್ಚಿನ ಮಾಹಿತಿಗಾಗಿ ಹನಮಸಾಗರ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ತರಬೇತಿ ಅಧಿಕಾರಿ/ ಫ್ಲೇಸ್‍ಮೆಂಟ್ ಆಫೀಸರ್ ರಾಮಚಂದ್ರ ಕುಲಕರ್ಣಿ ಅವರನ್ನು ಮೋಬೈಲ್ ಸಂಖ್ಯೆ 9740713006 ಅಥವಾ 9945922764 ಕ್ಕೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, 27 July 2017

ಐಟಿಐ ವೃತ್ತಿಗಳಲ್ಲಿ ಖಾಲಿ ಸ್ಥಾನಗಳಿಗೆ ಪ್ರವೇಶ : ಅರ್ಜಿ ಆಹ್ವಾನ


ಕೊಪ್ಪಳ, ಜು. 27 (ಕರ್ನಾಟಕ ವಾರ್ತೆ): ಉದ್ಯೋಗ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರಿಂದ ರಾಜ್ಯದ ಸರಕಾರಿ/ ಅನುದಾನಿತ ಕೈಗಾರಿಕ ತರಬೇತಿ ಸಂಸ್ಥೆಗಳಲ್ಲಿ ವಿವಿಧ ಐ.ಟಿ.ಐ. ವೃತ್ತಿಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಸಂಪೂರ್ಣವಾಗಿ ಮೆರಿಟ್ ಆಧಾರದ ಮೇಲೆ ಪ್ರವೇಶ ಕಲ್ಪಿಸಲು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಆಸಕ್ತ ಅಭ್ಯರ್ಥಿಗಳು ಸರಕಾರಿ/ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಿಂದ ನಿಗದಿತ ಅರ್ಜಿ ಪಡೆದು ಜುಲೈ. 31 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ 08534-230470 ಕ್ಕೆ ಅಥವಾ ಹತ್ತಿರದ ಸರಕಾರಿ/ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಭೇಟಿ ನೀಡಬಹುದು ಎಂದು ಕುಕುನೂರು ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಡಿಮೆ ನೀರಿನಲ್ಲಿ ಕೃಷಿ : ರೈತರಿಗೆ ಸಲಹೆಗಳು


ಕೊಪ್ಪಳ ಜು. 27 (ಕರ್ನಾಟಕ ವಾರ್ತೆ):  ಆರಂಭದ ದಿನಗಳಲ್ಲಿ ಉತ್ತಮ ಭರವಸೆ ಮೂಡಿಸಿದ್ದ ಮುಂಗಾರು, ಜುಲೈ ತಿಂಗಳಾಂತ್ಯದಲ್ಲಿ ಕ್ಷೀಣವಾಗಿದೆ.  ಬಿತ್ತಿದ, ನಾಟಿ ಮಾಡಿದ ಸಸಿಗಳ ನಿರ್ವಹಣೆ ನಿಟ್ಟಿನಲ್ಲಿ ಕೊಪ್ಪಳದ ಹಾರ್ಟಿ ಕ್ಲಿನಿಕ್ ತಜ್ಞರು ರೈತರಿಗೆ ಸಲಹೆಗಳನ್ನು ನೀಡಿದ್ದಾರೆ.
      ಮಳೆ ಕಡಿಮೆಯಾದ ಪರಿಸ್ಥಿತಿಯಲ್ಲಿ ಬಿತ್ತಿದ, ನಾಟಿ ಮಾಡಿದ ಸಸಿಗಳ ನಿರ್ವಹಣೆ ಒಂದು ಸವಾಲೆಂದೇ ಹೇಳಬಹುದು. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಹೊಂಡಗಳು ಮಳೆ ನೀರು ಸಂಗ್ರಹಿಸುವಲ್ಲಿ ಸಹಕಾರಿಯಾಗಿವೆ. ಮಳೆ ನೀರು ಕೊಯ್ಲು, ನೀರು ಸಂಗ್ರಹಣಾ ತೊಟ್ಟಿಗಳು ಇಂದಿನ ಕೃಷಿಯಲ್ಲಿ ಅನಿವಾರ್ಯವೆಂದೇ ಹೇಳಬಹುದು. ಅದಕ್ಕಾಗಿಯೇ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಲಭ್ಯವಿದ್ದು, ರೈತರು ಇದರ ಸದುಪಯೋಗ ಮಾಡಿಕೊಳ್ಳಬಹುದಾಗಿದೆ. ಹರಿಯುವ ನೀರು ನಿಲ್ಲುವಂತೆ, ನಿಂತ ನೀರು ಭೂಮಿಯಲ್ಲಿ ಇಂಗುವಂತೆ ಮಾಡುವುದೇ ಬರದಲ್ಲಿ ಬೆಳೆಗಳ ನಿರ್ವಹಣೆ ಮಾಡುವಲ್ಲಿ ಸಹಕಾರಿಯಾಗಿದೆ. ಒಂದೆರಡು ಬಾರಿ ಪೊಟ್ಯಾಷ್, ತರಕಾರಿ ಸ್ಪೆಷಲ್ ನಂತಹ ಪೋಷಕಾಂಶಗಳ  ಸಿಂಪರಣೆ ಗಿಡಗಳಿಗೆ ಬರ ನಿರೋಧಕ ಶಕ್ತಿ ನೀಡಬಲ್ಲ ಉಪಯುಕ್ತ ಕ್ರಮವಾಗಿದೆ.
   ಕುಂಟೆ, ರಂಟೆ ಹೊಡೆದು ಭೂಮಿಯನ್ನು ಅಣಿಗೊಳಿಸಿದಲ್ಲಿ, ಆಗಾಗ ಬೀಳುವ ಅಲ್ಪ- ಸ್ವಲ್ಪ ಮಳೆನೀರು ಇಂಗಿಸಲ್ಪಟ್ಟು, ಬೆಳೆಗಳಿಗೆ ರಕ್ಷಣಾತ್ಮಕ ನೀರಾವರಿ ಒದಗಿಸುವಲ್ಲಿ ಸಹಕಾರಿಯಾಗಲಿದೆ. ಗಿಡಗಳ ಸುತ್ತ ಅರ್ಧ ಚಂದ್ರಾಕೃತಿ ಪಾತಿ ಮಾಡುವುದು, ಇಳಿಜಾರಿಗೆ ಅಡ್ಡವಾಗಿ ಬಿತ್ತನೆ / ನಾಟಿ ಮಾಡುವುದು, ಪ್ಲಾಸ್ಟಿಕ, ಸಾವಯವ ಹೊದಿಕೆ ಮಾಡುವುದು, ನೀರು ಆವಿಯಾಗದಂತೆ ನೋಡಿಕೊಳ್ಳಲು ಸಹಕಾರಿಯಾಗಿವೆ.
     ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ಮಳೆಗಳಿರುವುದರಿಂದ ರೈತರು ಧೃತಿಗೆಡದೇ, ಆತ್ಮವಿಶ್ವಾಸದಿಂದ ಕೃಷಿ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವಂತೆ ಮತ್ತು ಸೂಕ್ತ ಬೆಳೆಗಳಾದ ನುಗ್ಗೆ, ಸೊಪ್ಪಿನ ತರಕಾರಿಗಳು ಅಲ್ಲದೇ ಹೂವಿನ ಬೆಳೆಗಳಾದ ಚೆಂಡು ಹೂ, ಗಲಾಟೆ  ಹೂ ಮುಂತಾದ ಬೆಳೆಗಳು ಬರದಲ್ಲೂ ರೈತರ ಕೈ ಹಿಡಿಯುವಲ್ಲಿ ಸಹಕಾರಿಯಾಗಿವೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಕಛೇರಿಯಿಂದ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  ಹೆಚ್ಚಿನ ಮಾಹಿತಿಗಾಗಿ, ಆಯಾ ತಾಲೂಕ ಕಛೇರಿಗಳನ್ನಾಗಲೀ, ಜಿಲ್ಲಾ ಹಾರ್ಟಿ ಕ್ಲಿನಿಕನ್ನಾಗಲಿ, ಸಂಪರ್ಕಿಸಬಹುದಾಗಿದೆ.

ಕೈಚಾಲಿತ ಯಂತ್ರದಿಂದ ಸಸಿ ನಾಟಿಮಾಡುವ ತರಬೇತಿ ಹಾಗೂ ಪ್ರಾತ್ಯಕ್ಷತೆ


ಕೊಪ್ಪಳ ಜು. 27 (ಕರ್ನಾಟಕ ವಾರ್ತೆ): ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ಮೈನಳ್ಳಿ ಗ್ರಾಮದ ಸುರೇಶ ಹ್ಯಾಟಿ ರವರ ಹೊಲದಲ್ಲಿ ಮೆಣಸಿನ ಕಾಯಿ ಸಸಿಗಳನ್ನು ಕೈಚಾಲಿತ ಯಂತ್ರದಿಂದ ನಾಟಿ ಮಾಡುವ ತರಬೇತಿ ಹಾಗೂ ಪ್ರಾತ್ಯಕ್ಷತೆಯನ್ನು ಹಮ್ಮಿಕೊಳ್ಳಲಾಯಿತು.
     ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ತೋಟಗಾರಿಕೆ ವಿಷಯ ತಜ್ಞ ಪ್ರದೀಪ ಬಿರಾದರ ರವರು ರೈತರನ್ನು ಉದ್ದೇಶಿಸಿ ಕೈಚಾಲಿತ ಯಂತ್ರವನ್ನು ತರಕಾರಿ ಸಸಿನಾಟಿಗಳನ್ನು ಮಾಡಲು ಉಪಯೋಗಿಸುವುದರಿಂದ ಕೂಲಿ ಆಳುಗಳ ಸಮಸ್ಯೆ ಹಾಗೂ ಸಮಯವನ್ನು ಉಳಿತಾಯ ಮಾಡಬಹುದು ಅಲ್ಲದೇ, ನಿಖರವಾದ ಆಳದಲ್ಲಿ ಸಸಿಗಳನ್ನು ನಾಟಿ ಮಾಡಬಹುದೆಂದು ಸಸಿಗಳನ್ನು ಯಂತ್ರದಿಂದ ನಾಟಿಮಾಡುವ ಪ್ರಾತ್ಯಕ್ಷತೆಯ ಮುಖಾಂತರ ತೋರಿಸಿಕೊಟ್ಟರು.   ಇತ್ತೀಚಿನ ದಿನಗಳಲ್ಲಿ ಕೂಲಿ ಆಳುಗಳ ಸಮಸ್ಯೆ ಹಾಗೂ ಕೂಲಿಯ ವೆಚ್ಚ ಅಧಿಕವಾಗಿರುವುದನ್ನು ಮನಗಂಡು ಕೃಷಿ ವಿಶ್ವವಿದ್ಯಾಲಯ, ರಾಯಚೂರಿನ ವಿಜ್ಞಾನಿಗಳು ಈ ನೂತನ ಯಂತ್ರ ಆವಿಷ್ಕರಿಸಿದ್ದು, ರೈತರು ಈ ನಾಟಿಮಾಡುವ ಯಂತ್ರದ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
     ತರಬೇತಿಯಲ್ಲಿ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಮ್.ಬಿ. ಪಾಟೀಲ, ಪ್ರಗತಿಪರ ರೈತರಾದ ವಿದ್ಯಾಧರ ಹಿರೇಗೌಡ್ರು, ತಾಲೂಕ ಕೃಷಿಕ ಸಮಾಜದ ನಿರ್ದೇಶಕ ಈಶಪ್ಪ ಹಳ್ಳಿ, ಗ್ರಾಮಪಂಚಾಯತ ಸದಸ್ಯರು, ಮೈನಳ್ಳಿ, ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.
ಈ ಯಂತ್ರದ ಹೆಚ್ಚಿನ ಮಾಹಿತಿಗಾಗಿ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ತೋಟಗಾರಿಕೆ ವಿಷಯ ತಜ್ಞ ಪ್ರದೀಪ ಬಿರಾದರ ರವರ ಮೊಬೈಲ್ ಸಂ.9743064405 ಕ್ಕೆ ಸಂಪರ್ಕಿಸಬಹುದು ಎಂದು ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಸರು ಬೆಳೆಯಲ್ಲಿ ಸ್ಪಿಟಲ್ (ನೊರೆ) ಕೀಟ ಮತ್ತು ಕರಿಹೇನಿನ ಬಾಧೆ : ನಿರ್ವಹಣೆಗೆ ಸಲಹೆಗಳು


ಕೊಪ್ಪಳ ಜು. 27 (ಕರ್ನಾಟಕ ವಾರ್ತೆ): ಕೃಷಿ ಇಲಾಖೆ ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ವಿಜ್ಞಾನಿಗಳು ಕೊಪ್ಪಳ ಜಿಲ್ಲೆಯಾದ್ಯಂತ ಹೆಸರು ಬೆಳೆಯ ಸ್ಥಿತಿಗತಿ ಅರಿಯಲು ಸಮೀಕ್ಷೆ ಕೈಗೊಂಡ ಸಂದರ್ಭದಲ್ಲಿ ಹೆಸರು ಬೆಳೆಯಲ್ಲಿ ಸ್ಪಿಟಲ್ (ನೊರೆ) ಕೀಡೆ ಮತ್ತು ಕರಿಹೇನಿನ ಬಾಧೆ ಕಂಡುಬಂದಿದ್ದು, ಅವುಗಳ ನಿಯಂತ್ರಣಕ್ಕೆ ರೈತರಿಗೆ ಸಲಹೆ ನೀಡಲಾಗಿದೆ.
ನೊರೆ ಕೀಟ / ಸ್ಪಿಟಲ್ ಬಗ್ :  ಈ ಕೀಟವು ಹೆಸರು ಕಾಯಿಯ ಮೇಲೆ ನೊರೆಯಂತಹ ಅಂಟನ್ನು ಸ್ರವಿಸಿ ಕಾಯಿಯ ಬೆಳವಣಿಗೆಯನ್ನು ಕುಂಟಿತಗೊಳಿಸುತ್ತದೆ.  ಈ ಕೀಟದ ನಿಯಂತ್ರಣಕ್ಕೆ 2 ಗ್ರಾಂ. ಪ್ರತಿ ಲೀಟರ್ ನೀರಿಗೆ ಸೋಪಿನ (ಬಟ್ಟೆ ತೊಳೆಯುವ) ದ್ರಾವಣದೊಂದಿಗೆ ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿ ಕಷಾಯವನ್ನು ಮಿಶ್ರಣ ಮಾಡಿ ಪಾವರ್ ಸ್ಪ್ರೇಯರ್‍ನಿಂದ ಸಿಂಪಡಿಸಬೇಕು.  ಒಂದು ದಿವಸ ಬಿಟ್ಟು ಇಮಿಡಾಕ್ಲೋಪ್ರಿಡ್‍ನ್ನು ಪ್ರತಿ 10 ಲೀಟರ್ ನೀರಿಗೆ 3 ಮಿ.ಲೀ. ಅಥವಾ ಡೈಯೋಮೆಥಾಕ್ಸಿವ್ 3 ಗ್ರಾಂ. ಬೆರೆಸಿ ಸಿಂಪಡಿಸಬೇಕು.
ಹೇನು ಮತ್ತು ತ್ರಿಪ್ಸ್ ಬಾಧೆ : ಇದರ ನಿವಾರಣೆಗೆ ಪ್ರತಿ ಲೀಟರ್ ನೀರಿಗೆ 1 ಮಿ.ಲಿ. ಮಿಥೈಲ್ ಪ್ಯಾರಾಥಿಯಾನ್ 50 ಇಸಿ ಅಥವಾ 1 ಮಿ.ಲೀ. ಮೊನೊಕ್ರೋಟೊಫಾಸ್ 36 ಎಸ್.ಎಲ್. ಅಥವಾ 1.7 ಮಿ.ಲೀ. ಡೈಮಿಥೋಯೇಟ್ 30 ಇ.ಸಿ. ಬೆರೆಸಿ ಸಿಂಪಡಿಸಬೇಕು.
    ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೈತರು ಪ್ರತಿ ಎಕರೆಗೆ 5 ರಂತೆ ಮೋಹಕ ಮತ್ತು ಅಂಟುಬಲೆಗಳನ್ನು ಹೊಲದಲ್ಲಿ ಹಾಕಬೇಕು.  ಇದರಿಂದ ಹೇನು, ಥ್ರ್ರಿಪ್ಸ್ ಮತ್ತು ಬಿಳಿ ನೊಣಗಳ ಬಾಧೆ ಕಡಿಮೆಯಾಗುತ್ತದೆ ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ದ ವಿಜ್ಞಾನಿಗಳು ತಿಳಿಸಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ (08539-220305) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Wednesday, 26 July 2017

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಲು ಸೂಚನೆ


ಕೊಪ್ಪಳ, ಜು. 26 (ಕರ್ನಾಟಕ ವಾರ್ತೆ): ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿಯಲ್ಲಿ ಯುವ ಮತದಾರರ ನೊಂದಣಿ ಕಾರ್ಯ ಜಿಲ್ಲೆಯಲ್ಲಿ ಈಗಾಗಲೆ ಪ್ರಾರಂಭಿಸಲಾಗಿದ್ದು, ಎಲ್ಲಾ ಯುವ ಮತದಾರರು ತಮ್ಮ ಹೆಸರುಗಳನ್ನು ಜುಲೈ.31 ರೊಳಗಾಗಿ ನೊಂದಣಿ ಮಾಡಿಕೊಳ್ಳಲು ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಪ್ರಸ್ತುತ ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿಯಲ್ಲಿ ವಿಶೇಷವಾಗಿ 18 ರಿಂದ 21 ರ ವರೆಗಿನ ವಯೋಮಾನದ ಮತದಾರರ (ಯುವ ಮತದಾರರ) ಸೇರ್ಪಡೆಗೆ ವಿಶೇಷ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ ಯುವ ಮತದಾರರ ಸೇರ್ಪಡೆ ಕಾರ್ಯದ ಅಭಿಯಾನವನ್ನು ಜುಲೈ. 01 ರಿಂದ ಆರಂಭಿಸಲಾಗಿದ್ದು, ನೊಂದಣಿ ಕಾರ್ಯವನ್ನು ಪ್ರಾರಂಭಿಸಲಾಗಿದೆ. 
ಕೊಪ್ಪಳ ಜಿಲ್ಲೆಯ 18 ರಿಂದ 21 ರ ವರೆಗಿನ ವಯೋಮಾನದ ಅರ್ಹ ಮತದಾರರು, ಮತದಾರರ ಪಟ್ಟಿಗಳಲ್ಲಿ ಹೆಸರು ನೊಂದಣಿಗಾಗಿ ಫಾರಂ-6 ಅನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಬೂತ ಮಟ್ಟದ ಅಧಿಕಾರಿಗಳಿಗಾಗಲಿ ಅಥವಾ ತಹಶಿಲ್ದಾರ ಕಾರ್ಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಿ, ಭಾರತ ಚುನಾವಣಾ ಆಯೋಗವು ಉದ್ದೇಶಿಸಿದ ಯುವ ಮತದಾರರ ಸೇರ್ಪಡೆ ಕಾರ್ಯದ ಅಭಿಯಾನವನ್ನು ಯಶಸ್ವಿಗೊಳಿಸಿ, ಅರ್ಹ ಮತದಾರರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಪ್ರಕಟಣೆ ತಿಳಿಸಿದೆ.

ಕಾಲೇಜು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ


ಕೊಪ್ಪಳ, ಜು. 26 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ವಿಶೇಷ ಚಿಕಿತ್ಸಾ ಘಟಕ (ನಿರ್ಭಯ ಕೇಂದ್ರ)-181 ವತಿಯಿಂದ ಗಂಗಾವತಿ ನಗರದ ವಿವಿಧ ಪದವಿ ಪೂರ್ವ ಕಾಲೇಜುಗಳಲ್ಲಿ ಹಾಗೂ ಪದವಿ ಮಹಾವಿದ್ಯಾಲಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಕಾಲೇಜು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು  
    ಗಂಗಾವತಿಯ ಕಾರುಣ್ಯ ಸ್ವಾತಂತ್ರ ಪದವಿ ಪೂರ್ವ ಕಾಲೇಜು, ಲಯನ್ಸ ಪದವಿ ಪೂರ್ವ ಕಾಲೇಜು ಹಾಗೂ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕಾಲೇಜುಗಳಲ್ಲಿ  ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಜಾಗೃತಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಯಿತು.
    ಕಾರ್ಯಕ್ರಮದಲ್ಲಿ ಮಹಿಳಾ ವಿಶೇಷ ಚಿಕಿತ್ಸಾ ಘಟಕದ ಉದ್ದೇಶ ಮತ್ತು ದೊರೆಯುವ ಉಚಿತ ದೂರವಾಣಿ ಸೇವೆ 08539-225181 ಬಗ್ಗೆ ಮತ್ತು ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಾದ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ವರದಕ್ಷಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ತಡೆ ಕುರಿತಂತೆ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಯಿತು.   ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ, ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಸಮಾಲೋಚಕರಾದ ಶಿಲ್ಪಾ ಬಾರಕೇರ, ಕಾನೂನು ಸಲಹೆಗಾರರಾದ ಉಮಾ ಹಿರೇಮಠ ಕಾಲೇಜುಗಳ ಪ್ರಾಚಾರ್ಯರು, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರು, ಅಂಗನವಾಡಿ ವಲಯ ವೃತ್ತ ಮೇಲ್ವಿಚಾರಕಿಯರು, ಸೇರಿದಂತೆ ಮಹಿಳಾ ವಿಶೇಷ ಚಿಕಿತ್ಸಾ ಘಟಕದ (ನಿರ್ಭಯ ಕೇಂದ್ರ) ಸಿಬ್ಬಂದಿಗಳು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬ್ಯೂಟಿ ಪಾರ್ಲರ್ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ, ಜು. 26 (ಕರ್ನಾಟಕ ವಾರ್ತೆ): ಕೊಪ್ಪಳ ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಜಿಲ್ಲೆಯ ಯುವತಿಯರಿಗೆ 30 ದಿನಗಳ ಉಚಿತ “ಬ್ಯೂಟಿ ಪಾರ್ಲರ್” ತರಬೇತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
ಅರ್ಜಿ ಸಲ್ಲಿಸಲು 18 ರಿಂದ 45 ವರ್ಷ ವಯೋಮಿತಿಯಲ್ಲಿರಬೇಕು.  ಕನಿಷ್ಠ ಎಂಟನೇ ತರಗತಿ ಪಾಸ್ ಆಗಿರಬೇಕು.  ಕೊಪ್ಪಳ ಜಿಲ್ಲೆಯವರಾಗಿರಬೇಕು.  ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು.  ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು.  ಅರ್ಜಿ ವಿತರಿಸುವ ಹಾಗೂ ಸ್ವೀಕರಿಸುವ ಕೊನೆಯ ದಿನಾಂಕ ಆಗಸ್ಟ್. 08 ಆಗಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆಗಸ್ಟ್. 09 ರಂದು ಬೆಳಿಗ್ಗೆ 10-30ಕ್ಕೆ ಸಂದರ್ಶನ ನಡೆಸಲಾಗುವುದು.  ಆಗಸ್ಟ್. 10 ರಿಂದ ತರಬೇತಿಗಳು ಪ್ರಾರಂಭಗೊಳ್ಳಲಿದೆ.  ಅರ್ಜಿಯನ್ನು ನಿರ್ದೇಶಕರು, ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ದೂ. 08539-231038, ಇಲ್ಲಿಗೆ ಸಲ್ಲಿಸಬಹುದು ಎಂದು ಕೊಪ್ಪಳ ಎಸ್.ಬಿ.ಐ. ಆರ್‍ಸೆಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಯುವ ಸಂಘ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ


ಕೊಪ್ಪಳ, ಜು. 26 (ಕರ್ನಾಟಕ ವಾರ್ತೆ): ಭಾರತ ಸರಕಾರದ ನೆಹರು ಯುವ ಕೇಂದ್ರ, ಕೊಪ್ಪಳ ಇವರ ವತಿಯಿಂದ ಪ್ರಸಕ್ತ ಸಾಲಿನ ಜಿಲ್ಲಾ ಯುವ ಸಂಘ ಪ್ರಶಸ್ತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
    ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಒಂದು ಯುವ ಸಂಘಕ್ಕೆ ರೂ. 25,000/- ಬಹುಮಾನ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.  ರಾಜ್ಯ ಮಟ್ಟದಲ್ಲಿ ರೂ. 1,00,00/-, ರಾಷ್ಟ್ರ ಮಟ್ಟದಲ್ಲಿ ಪ್ರಥಮ ರೂ. 5,00,000/-, ದ್ವಿತೀಯ ರೂ. 3,00,000/-, ತೃತಿಯ ರೂ. 2,00,000/- ಬಹುಮಾನ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. 
    ಅರ್ಜಿ ಸಲ್ಲಿಸಲು ಯುವ ಸಂಘವು ಕರ್ನಾಟಕ ರಾಜ್ಯ ಸಂಘ ಸಂಸ್ಥೆ ನೊಂದಣಿ ಕಾಯ್ದೆ ಪ್ರಕಾರ ನೊಂದಣಿಯಾಗಿರಬೇಕು.  ಹಾಗೂ ನೆಹರು ಯುವ ಕೇಂದ್ರದಲ್ಲಿ ಸಂಯೋಜನೆಗೊಂಡಿರಬೇಕು.  ಯುವ ಸಂಘ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರು ಯುವ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರಬೇಕು.  ಮತ್ತು ಅವಶ್ಯ ದಾಖಲಾತಿಗಳಾದ ಪೋಟೋ, ಪ್ರಶಸ್ತಿ ಪತ್ರ, ಪತ್ರಿಕಾ ವರದಿಗಳು ಇತರೆ ಪ್ರಸಕ್ತ ಸಾಲಿನ (01-04-2016 ರಿಂದ 31-03-2017) ದಾಖಲೆಗಳನ್ನು ಲಗತ್ತಿಸಬೇಕು.
ಕ್ರೀಡೆ, ಸಾಂಸ್ಕøತಿಕ, ಯುವ ಮುಂದಾಳತ್ವ ತರಬೇತಿಗಳು, ವೃತ್ತಿ ತರಬೇತಿಗಳು, ಶ್ರಮದಾನ, ಸಮುದಾಯ ಅಭಿವೃದ್ಧಿ, ಆರೋಗ್ಯ ತಪಾಸಣೆ, ಸಸಿ ನಡುವ ಕಾರ್ಯಕ್ರಮ, ದಿನಾಚರಣೆಗಳು, ಸಾಮಾಜಿಕ ಅರಿವು ಮುಡಿಸುವ ಪ್ರಚಾರಾಂದೋಲನ ಕಾರ್ಯಕ್ರಮಗಳು, ಶೌಚಾಲಯ ನಿರ್ಮಾಣ ಕುರಿತು ಕಾರ್ಯಕ್ರಮ, ಸಾಕ್ಷರತೆ, ಇತರೆ ಕಾರ್ಯಕ್ರಮಗಳು ಅರ್ಜಿ ನಮೂನೆಯಲ್ಲಿ ಇದ್ದಂತೆ.   ಯುವ ಸಂಘ ಪ್ರಶಸ್ತಿಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಆಯ್ಕೆ ಸಮಿತಿ ಮೂಲಕ ಪ್ರಶಸ್ತಿಯನ್ನು ಆಯ್ಕೆ ಮಾಡಲಾಗುತ್ತಿದ್ದು, ಅರ್ಜಿ ಯನ್ನು ಆಗಸ್ಟ್. 25 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಸಮನ್ವಯಾಧಿಕಾರಿಗಳು, ನೆಹರು ಯುವ ಕೇಂದ್ರ, ಬನ್ನಿಕಟ್ಟಿ, ರಾಮಕೃಷ್ಣ ಆಶ್ರಮ ಹತ್ತಿರ ಗದಗ ರಸ್ತೆ ಕೊಪ್ಪಳ-583231, ದೂರವಾಣಿ ಸಂಖ್ಯೆ 08539-230116 ಕ್ಕೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ. 

ಬೆಂಗಳೂರಿನಲ್ಲಿ ಸೇನಾ ಭರ್ತಿ ರ್ಯಾಲಿ


ಕೊಪ್ಪಳ, ಜು. 25 (ಕರ್ನಾಟಕ ವಾರ್ತೆ): ಬೆಂಗಳೂರಿನ ಯುನಿಟ್ ಹೆಡ್‍ಕ್ವಾಟರ್ಸ್ ಮದ್ರಾಸ್ ಇಂಜಿನೀರ್ ಗ್ರೂಪ್ & ಸೇಂಟರ್ ಇವರ ವತಿಯಿಂದ ಸೆಪ್ಟೆಂಬರ್. 06 ರಿಂದ 08 ರವರೆಗೆ ಸೇನಾ ಭರ್ತಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಾಗಲಕೋಟ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. 
    ಸೈನಿಕ ಸಾಮಾನ್ಯ, ಸೈನಿಕ ಸಾಮಾನ್ಯ (ಕ್ರೀಡಾಪಟು), ಸೈನಿಕ ಕ್ಲಾರ್ಕ, ಎಸ್.ಕೆ.ಟಿ., ಸೈನಿಕ ಟ್ರೇಡ್ರ್ಸಮೆನ್ (ಸಂಗೀತಗಾರ) ಹುದ್ದೆಗಳಿಗೆ ಸೇನಾ ಭರ್ತಿ ನಡೆಸಲಾಗುತ್ತಿದ್ದು, ಮದ್ರಾಸ್ ಇಂಜಿನಿಯರ್ ಗ್ರೂಪ್ & ಸೇಂಟರ್ ಬೆಂಗಳೂರು ಕೋರ್‍ದಿಂದ ನಿವೃತ್ತರಾದ ಮಾಜಿ ಸೈನಿಕರ ಮಕ್ಕಳು ಮತ್ತು ಸಹೋದರರು, ವಿಧವೆಯರ, ಯುದ್ಧ ಸಂತ್ರಸ್ಥರ ಮಕ್ಕಳು ಭಾಗವಹಿಸಬಹುದಾಗಿದೆ. 
    ಅಭ್ಯರ್ಥಿಗಳು ಟ್ರೈನಿಂಗ್ ಬಟಾಲಿಯನ್ – 3, (ಮಾರುತಿ ನಗರ, ಸೇವಾ ನಗರ ಗೇಟ್) ಮದ್ರಾಸ್ ಇಂಜಿನೀರ್ ಗ್ರೂಪ್ & ಸೆಂಟರ್ ಬೆಂಗಳೂರು, ಇಲ್ಲಿಗೆ ಸೆಪ್ಟೆಂಬರ್ 06 ರಂದು 05-30 ಗಂಟೆಗೆ ಹಾಜರಾಗಬೇಕು.  ಸೇನಾ ಭರ್ತಿಯಲ್ಲಿ ಸೈನಿಕ ಸಾಮಾನ್ಯ ಕ್ರೀಡಾಪಟು ಹುದ್ದೆಗಳಿಗೆ ಆಗಸ್ಟ್ 21 ರಿಂದ 26 ರವರೆಗೆ ವಿವಿಧ ರಾಜ್ಯಗಳಲ್ಲಿ ಹಾಗೂ ಅಂತರರಾಷ್ಟ್ರೀಯದಲ್ಲಿ ಸಾಧನೆ ಮಾಡಿದ ಕೌಶಲ್ಯಗಳ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಪರೀಕ್ಷಿಸಲಾಗುವುದು.  ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬಾಗಲಕೋಟ ಇವರ ದೂರವಾಣಿ ಸಂಖ್ಯೆ 08354-235434 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಹೆಸರು ಬೆಳೆಯಲ್ಲಿ ರೋಗ ನಿರ್ವಹಣಾ ಕ್ರಮಗಳು


ಕೊಪ್ಪಳ, ಜು. 25 (ಕರ್ನಾಟಕ ವಾರ್ತೆ): ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹೆಸರು ಬೆಳೆಗೆ ಅಲ್ಲಲ್ಲಿ ಹಳದಿ ನಂಜು ರೋಗ ಬಾಧೆ ಕಂಡುಬಂದಿದ್ದು, ಇದರ ನಿರ್ವಹಣೆಗೆ ಕೃಷಿ ಇಲಾಖೆಯು ರೈತರಿಗೆ ಸಲಹೆಗಳನ್ನು ನೀಡಿದೆ.
     ಮುಂಗಾರು ಹಂಗಾಮಿನಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ಸುಮಾರು 17308 ಹೆಕ್ಟರ್ ಕ್ಷೇತ್ರದಲ್ಲಿ ಹೆಸರು ಬಿತ್ತನೆಯಾಗಿದ್ದು, 30 ರಿಂದ 60 ದಿವಸದ ಬೆಳೆಯಿದ್ದು, ಬೆಳೆಗೆ ಅಲ್ಲಲ್ಲಿ ಹಳದಿ ನಂಜು ರೋಗದ ಭಾದೆ ಕಂಡುಬಂದಿದ್ದು, ರೋಗದ ಪ್ರಮುಖ ಲಕ್ಷಣಗಳು ಹಾಗೂ ನಿರ್ವಹಣಾ ಕ್ರಮಗಳು ಇಂತಿವೆ.
ಲಕ್ಷಣಗಳು :
******ಎಲೆಗಳ ಮೇಲೆ ತಿಳಿ ಹಳದಿ ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.  ನಂತರ ಹಳದಿ ಬಣ್ಣದ ಭಾಗ ಬೆಳಯುತ್ತಾ ಹೋಗುವುದು.  ಇಂತಹ ರೋಗ ಪೀಡಿತ ಸಸಿಗಳು ತಡವಾಗಿ ಮಾಗುವುದಲ್ಲದೇ, ಹೂ ಕಾಯಿಗಳ ಸಂಖ್ಯೆ ಕಡಿಮೆ ಇರುವುದು.  ಕಾಯಿಗಳ ಗಾತ್ರ ಚಿಕ್ಕದಾಗಿ ಕಾಳುಗಳು ಸಣ್ಣದಾಗುವುದು.  ಈ ರೋಗವು ಬೀಜಗಳ ಮುಖಾಂತರ ಪ್ರಸಾರ ಆಗುವುದಿಲ್ಲ.  ಆದರೆ ಇದರ ಪ್ರಸಾರ ಬಿಳಿನೊಣಗಳ ಮುಖಾಂತರ ಆಗುವುದು.  ಬಾಡುತ್ತಿರುವ ಮತ್ತು ರೋಗಕ್ಕೆ ತುತ್ತಾದ ಸಸಿಗಳನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಕಿತ್ತು ನೆಲದಲ್ಲಿ ಹೂಳಬೇಕು. 
ರೋಗ ನಿರ್ವಹಣಾ ಕ್ರಮಗಳು :
************** ಪ್ರತಿ ಲೀಟರ್ ನೀರಿಗೆ 1 ಮೀ.ಲೀ ಪ್ಯಾರಾಥಿಯಾನ್ 50 ಇಸಿ ಅಥವಾ 1 ಮೀ.ಲೀ. ಮೊನೋಕ್ರೋಟೋಫಾಸ್ 36 ಎಸ್.ಎಲ್. ಅಥವಾ 1.7 ಮೀ.ಲೀ. ಡೈಮಿಥೋಯೇಟ್ 30 ಇಸಿ ಬೆರೆಸಿ ಸಿಂಪಡಿಸಬೇಕು.  ಅಥವಾ ಪ್ರತಿ ಲೀಟರ್ ನೀರಿಗೆ 0.25 ಮೀ.ಲೀ. ಇಮಿಡಾಕ್ಲೋಪ್ರಿಡ್ 17.80 ಎಸ್.ಎಲ್ ಅಥವಾ 0.3 ಮೀ.ಲೀ. ಥಯಾಮಿಥಾಕ್ಸಾಮ್ 25 ಡಬ್ಲೂಜಿ ಅಥವಾ 1.7 ಮೀ.ಲೀ. ಡೈಮೆಥೋಯೆಟ್ 30 ಇಸಿ ಬೆರಸಿ ಸಿಂಪಡಿಸಬೇಕು.  ಪ್ರತಿ ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು. 
    ಹೆಚ್ಚಿನ ಮಾಹಿತಿಗಾಗಿ ರೈತ ಬಾಂಧವರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಗಳ ಮುಖ್ಯಸ್ಥರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಹನಮಸಾಗರ ಐಟಿಐ ಕಾಲೇಜಿನಲ್ಲಿ ಐಎಂಸಿ ಕೋಟಾದಲ್ಲಿ ಸೀಟುಗಳ ಭರ್ತಿ


ಕೊಪ್ಪಳ, ಜು. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಹನಮಸಾಗರ ಗ್ರಾಮದ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ (ಐಟಿಐ)ಯಲ್ಲಿ ಪ್ರಸಕ್ತ ಸಾಲಿನ ಸರ್ಕಾರದ ನಿಯಮಾವಳಿಗಳಂತೆ ಐ.ಎಂ.ಸಿ ಕೋಟಾದಡಿ ಖಾಲಿ ಇರುವ ಸೀಟುಗಳಿಗೆ ಜುಲೈ. 29 ರಂದು ಬೆಳಿಗ್ಗೆ 10-30 ಗಂಟೆಗೆ ಬಹಿರಂಗ ಹರಾಜಿನ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ. 
    ಸಂಸ್ಥೆಯಲ್ಲಿ ಫಿಟ್ಟರ ಮತ್ತು ಎಲೆಕ್ಟ್ರಿಷೀಯನ್ ವೃತ್ತಿಗಳಲ್ಲಿ ತಲಾ 05, ಹಾಗೂ ಎಲೆಕ್ಟ್ರಾನಿಕ್ ಮೆಕ್ಯಾನಿಕಲ್ ವೃತ್ತಿಯಲ್ಲಿ 06 ಸೀಟುಗಳು ಖಾಲಿ ಇದ್ದು, ಬಹಿರಂಗ ಹರಾಜಿನ (ಬಿಡ್ಡಿಂಗ್) ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತರು ಸಂಸ್ಥೆಯ ಕಛೇರಿಯಲ್ಲಿ ರೂ. 100/- ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಜು. 28 ರೊಳಗಾಗಿ  ಸಲ್ಲಿಸಬೇಕು.  ಬಹಿರಂಗ ಹರಾಜಿನ ಮೂಲಕ ಸೀಟು ಪಡೆದ ಅಭ್ಯರ್ಥಿಗಳು ಸ್ಥಳದಲ್ಲಿಯೇ ಹರಾಜು ಹಣ ಮತ್ತು ಸರ್ಕಾರಿ ಶುಲ್ಕ ರೂ. 2200/-ಗಳನ್ನು ಭರಿಸಬೇಕು.  ತಪ್ಪಿದ್ದಲ್ಲಿ ಮುಂದಿನ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಲಾಗುವುದು.  ಹರಾಜಿನ ಪ್ರಾರಂಭಿಕ ಮೊತ್ತ (ಸರ್ಕಾರ ನಿಗದಿಪಡಿಸಿದ ಕನಿಷ್ಠ ಮೊತ್ತ) ರೂ. 10,000/- ಗಳಾಗಿದ್ದು, ಎರಡನೇ ವರ್ಷದಲ್ಲಿ ಆಗಸ್ಟ-2018 ರೊಳಗಾಗಿ ರೂ. 1200/- ಗಳ ಸರ್ಕಾರಿ ಶುಲ್ಕವನ್ನು ಭರಿಸಬೇಕು.  ಸಂಸ್ಥೆಯಲ್ಲಿ ನಡೆಯುವ ಬಹಿರಂಗ ಹರಾಜನ್ನು ಐ.ಎಂ.ಸಿ ಕಮೀಟಿಯಿಂದ ನಡೆಸಲಾಗುವುದು ಹಾಗೂ ಐ.ಎಂ.ಸಿ ನಿಯಮಾವಳಿಗಳ ಪ್ರಕಾರ ಇರುತ್ತದೆ. 
    ಬಹಿರಂಗ ಹರಾಜನ್ನು ಐ.ಎಂ.ಸಿ ಕೋಟಾದಡಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ನಡೆಸಲಾಗುವುದು.  ಹೆಚ್ಚಿನ ಮಾಹಿತಿಗಾಗಿ ಹನಮಸಾಗರ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಪ್ರಾಚಾರ್ಯರು, ದೂರವಾಣಿ ಸಂಖ್ಯೆ 08536-270633 ಅಥವಾ 9740713006 ಕ್ಕೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಉದ್ಯೋಗ ಖಾತ್ರಿ ಯೋಜನೆಗೆ ಆಧಾರ್ ಜೋಡಣೆ: ಗ್ರಾ.ಪಂ. ಮಟ್ಟದಲ್ಲಿ ಶಿಬಿರ


ಕೊಪ್ಪಳ, ಜು. 26 (ಕರ್ನಾಟಕ ವಾರ್ತೆ): ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವ ಕುಟುಂಬದ ಸದಸ್ಯರ ಆಧಾರ್ ಜೋಡಣೆ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಇದಕ್ಕಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಶಿಬಿರಗಳನ್ನು ಪ್ರಾರಂಭಿಸಲಾಗಿದೆ ಎಂದು ಕೊಪ್ಪಳ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
    ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನೊಂದಾಯಿಸಿದ ಉದ್ಯೋಗ ಚೀಟಿಯಲ್ಲಿರುವ ಕುಟುಂಬದ ಎಲ್ಲಾ ಸದಸ್ಯರ ಆಧಾರ ಜೋಡಣೆ ಕಡ್ಡಾಯವಾಗಿದ್ದು, ಡಿಸೇಂಬರ್. 31ರ ನಂತರ ಕೂಲಿಕಾರರ ಆಧಾರ ಕಾರ್ಡ ಜೋಡಣೆ ಆಗಿದ್ದಲ್ಲಿ ಮಾತ್ರ ಅಂತವರಿಗೆ ಸಕಾಲದಲ್ಲಿ ಕೂಲಿ ಕೆಲಸ ಒದಗಿಸಿ ಅವರ ಖಾತೆಗೆ ಕೂಲಿ ಹಣ ಪಾವತಿಸಲಾಗುವುದು.  ನರೇಗಾ ಸಾಫ್ಟ್‍ನಲ್ಲಿ ಆಧಾರ ಜೋಡಣೆಯಾಗದ ಸಕ್ರಿಯ ಕೂಲಿಕಾರರಿಂದ ಆಧಾರ ಜೋಡಣೆ ಮಾಡುವದು ಮತ್ತು ಆಧಾರ ಹೊಂದಿಲ್ಲದ ಕೂಲಿಕಾರರಿಗೆ ಆಧಾರ ಸಂಖ್ಯೆ ಕಡ್ಡಾಯವಾಗಿದ್ದು, ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಾಗೃತಿ ಮೂಡಿಸುವಂತೆ ಆಯುಕ್ತರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಇವರು ಕಟ್ಟು ನಿಟ್ಟಿನ ನಿರ್ದೇಶನ ನೀಡಿರುವುದರಿಂದ ಕೊಪ್ಪಳ ತಾಲೂಕಿನಲ್ಲಿರುವ ಎಲ್ಲ ನೊಂದಾಯಿತ ಕೂಲಿಕಾರರು ಇದುವರೆಗೆ ತಮ್ಮ ಉದ್ಯೋಗ ಚೀಟಿಗೆ ಆಧಾರ ಸಂಖ್ಯೆಯನ್ನು ಜೋಡಣೆ ಮಾಡದಿದ್ದಲ್ಲಿ, ಆಧಾರ ಜೆರಾಕ್ಸ್ ಪ್ರತಿ ಮೇಲೆ ಸ್ವಸಹಿಯೊಂದಿಗೆ ಖಾತೆ ಹೊಂದಿರುವ ಪಾಸ್ ಬುಕ್ ಜೆರಾಕ್ಸ್ ಪ್ರತಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಗ್ರಾಮ ಪಂಚಾಯತಿಗೆ ಸಲ್ಲಿಸಬೇಕು. 
ಈಗಾಗಲೇ ಕೊಪ್ಪಳ ತಾಲೂಕಿನ 38 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕೂಲಿಕಾರರ ಆಧಾರ ಸಂಗ್ರಹಣೆ, ಜೋಡಣೆ, ಒಪ್ಪಿಗೆ ಪತ್ರವನ್ನು ಮತ್ತು ವೈಯಕ್ತಿಕ ಬ್ಯಾಂಕ್ ಖಾತೆ ತೆರೆಯುವ ಶಿಬಿರಗಳನ್ನು ಜು.25 ರಿಂದ ಪ್ರಾರಂಭಿಸಲಾಗಿದ್ದು, ಸೆಪ್ಟೆಂಬರ್. 10 ರವರೆಗೆ ಗ್ರಾಮ ವಾರು ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವೀತಿಯ ದರ್ಜೆ ಲೆಕ್ಕ ಸಹಾಯಕರು, ಕರವಸೂಲಿಗರರು, ನೀರಗಂಟಿಗಳು, ಗಣಕಯಂತ್ರ ನಿರ್ವಾಹಕರು, ಸ್ವಚ್ಛತಾಧೂತರು, ಇತರೇ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸಹ ಮನೆ ಭೇಟಿ ಮೂಲಕ ಆಧಾರ ಸಂಗ್ರಹಣೆ ಕೈಗೊಳ್ಳುವರು.  ಅಲ್ಲದೇ ಕೂಲಿಕಾರರ ಅನುಕೂಲಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ, ಕಾಮಗಾರಿಗಳ ಸ್ಥಳದಲ್ಲಿ ಶಿಬಿರಗಳನ್ನು ಸಹ ಏರ್ಪಡಿಸಿದ್ದು, ಶಿಬಿರಗಳಿಗೆ ಬ್ಯಾಂಕ್ ಸಿಬ್ಬಂದಿಗಳು ಹಾಜರಿರುತ್ತಾರೆ. 
ಶಿಬಿರದ ಮಾಹಿತಿಯನ್ನು ತಲುಪಲು ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಡಂಗುರ, ತಮಟೆ ಮೂಲಕ ಪ್ರಚಾರ ಕೈಗೊಂಡು ಶಿಬಿರಗಳನ್ನು ಯಶಸ್ವಿಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ಈಗಾಗಲೇ ನೀಡಲಾಗಿದೆ.  ಆಧಾರ ಸಂಗ್ರಹಣೆ ಸಂಬಂಧಿಸಿದ ಶಿಬಿರಗಳು ಜರುಗದಿದ್ದಲ್ಲಿ ತಾಲೂಕ ಪಂಚಾಯತಿಯ ಕಾರ್ಯಾಲಯದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ವಿಭಾಗದ ದೂರವಾಣಿ ಸಂಖ್ಯೆ 08539-220175 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವಾವಲಂಬನೆ ಆರೋಗ್ಯ ವಿಮಾ ಯೋಜನೆ : ಅರ್ಜಿ ಆಹ್ವಾನ


ಕೊಪ್ಪಳ, ಜು. 26 (ಕರ್ನಾಟಕ ವಾರ್ತೆ): ಕೊಪ್ಪಳ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಪ್ರಸ್ತಕ ಸಾಲಿನ ಸ್ವಾವಲಂಬನೆ ಆರೋಗ್ಯ ವಿಮಾ ಯೋಜನೆಗೆ ಅರ್ಹ ವಿಕಲಚೇತನ ರಿಂದ ಅರ್ಜಿ ಆಹ್ವಾನಿಸಲಾಗಿದೆ. 
    ಅರ್ಜಿ ಸಲ್ಲಿಸಲು ಅಂಧ, ದೃಷ್ಟಿದೋಷ, ಕುಷ್ಠರೋಗದಿಂದ ಗುಣಮುಖರಾದವರು, ವಾಕ್ ಮತ್ತು ಶ್ರವಣದೋಷ ಅಂಗವೈಕಲ್ಯ, ಮಂದಬುದ್ದಿ, ಮಾನಸಿಕ ಅಸ್ವಸ್ಥತೆ ಹೊದಿದ 18 ರಿಂದ 65 ವರ್ಷ ವಯೋಮಿತಿಯಲ್ಲಿರಬೇಕು.  ವಾರ್ಷಿಕ ಆದಾಯ ರೂ. 3 ಲಕ್ಷ ಒಳಗಿರಬೇಕು.  ನಿಗದಿತ ಅರ್ಜಿ ಫಾರಂ ಅನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ ಯಿಂದ ಪಡೆದು, ನಿಗದಿತ ಅರ್ಜಿ ನಮೂನೆ, ಅಂಗವಿಕಲರ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್, ಆಧಾರ ಕಾರ್ಡ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಭಾವಚಿತ್ರ ಇತ್ಯಾದಿ ದಾಖಲೆಗಳೊಂದಿಗೆ ಆಗಸ್ಟ್. 31 ರೊಳಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ ಕೊಪ್ಪಳ, ಇವರಿಗೆ ಸಲ್ಲಿಸಬೇಕು. 
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08539-221460 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ನರ್ಸಿಂಗ್ ಕೋರ್ಸ್‍ಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ


ಕೊಪ್ಪಳ, ಜು. 26 (ಕರ್ನಾಟಕ ವಾರ್ತೆ): ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿ/ ಪಂಗಡದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ನರ್ಸಿಂಗ್ (ಡಿ.ಜಿ.ಎನ್.ಎಂ ಮತ್ತು ಬಿ.ಎಸ್.ಇ) ಕೋರ್ಸ್‍ಗಳಿಗೆ ಆಯ್ಕೆ ಮಾಡಲು ಅರ್ಹರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 
    ಅರ್ಜಿ ಸಲ್ಲಿಸಲು ರಾಜ್ಯದ ಪರಿಶಿಷ್ಟ ಜಾತಿ/ ಪಂಗಡದ ಅಭ್ಯರ್ಥಿಗಳಾಗಿರಬೇಕು.  ಅರ್ಜಿ ಸಲ್ಲಿಸಲು ಆಗಸ್ಟ್. 15 ರಂದು ಸಂಜೆ 05-30 ಗಂಟೆಯ ವರೆಗೆ ಕಾಲಾವಕಾಶ ಕಲ್ಪಿಸಲಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಇಲಾಖೆ ವೆಬ್‍ಸೈಟ್  www.sw.kar.nic.in ನ್ನು ನೋಡಬಹುದು ಎಂದು ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tuesday, 25 July 2017

ಡಿ.ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ ಯೋಜನೆ : ಅರ್ಜಿ ಆಹ್ವಾನ


ಕೊಪ್ಪಳ, ಜು. 25 (ಕರ್ನಾಟಕ ವಾರ್ತೆ): ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೊತ್ತರ ಪದವಿ/ ಪಿ.ಹೆಚ್.ಡಿ/ ಸಂಶೋಧನೆ ಮಾಡುವ ಹಿಂದುಳಿದ ವರ್ಗಗಳ ಅರ್ಹ ವಿದ್ಯಾರ್ಥಿಗಳಿಗೆ “ಡಿ. ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ” ಒದಗಿಸಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 
ಅರ್ಜಿ ಸಲ್ಲಿಸಲು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, ಹಾಗೂ 3ಬಿ ಗಳಿಗೆ ಸೇರಿರಬೇಕು.  ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ. 31 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್‍ಸೈಟ್  www.backwardclasses.kar.nic.in  ನ್ನು ನೋಡಬಹುದು.  ಮಾಹಿತಿಯನ್ನು ಪಡೆಯಲು  ದೂರವಾಣಿ ಸಂಖ್ಯೆ 080-65970004 ಕ್ಕೆ ಕಛೇರಿ ವೇಳೆಯಲ್ಲಿ ಸಂಪರ್ಕಿಸ ಬಹುದು ಎಂದು ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧನಶ್ರೀ ಯೋಜನೆ : ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ, ಜು. 24 (ಕರ್ನಾಟಕ ವಾರ್ತೆ): ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ  ವತಿಯಿಂದ ಪ್ರಸಕ್ತ ಸಾಲಿಗೆ ಧನಶ್ರೀ ಯೋಜನೆಯಡಿ ಪ್ರೋತ್ಸಾಹಧನಕ್ಕಾಗಿ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕರ ಸೂಚನೆಯಂತೆ ಧನಶ್ರೀ ಯೋಜನೆಯಡಿ ಹೆಚ್.ಐ.ವಿ ಸೋಂಕಿತ ಮತ್ತು ಬಾಧಿತ ಮಹಿಳೆಯರಿಗೆ ತಲಾ ಫಲಾನುಭವಿಗೆ ರೂ. 40,000/- ಗಳ ನೇರ ಸಾಲ ಹಾಗೂ ರೂ. 10,000/- ಗಳ ಸಹಾಧನದಂತೆ ಕೊಪ್ಪಳ ಜಿಲ್ಲೆಗೆ 27 ಗುರಿ ನಿಗದಿ ಪಡಿಸಿದ್ದು, ಯೋಜನೆಗಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು 18 ರಿಂದ 50 ವರ್ಷ ವಯೋಮಿತಿಯಲ್ಲಿರಬೇಕು.  ರಾಷ್ಟ್ರೀಕೃತ ಬ್ಯಾಂಕ್ ಖಾತೆ ಹೊಂದಿರಬೇಕು.  ಯಾವುದೇ ಆರ್ಥಿಕ ಸಂಸ್ಥೆ/ ಬ್ಯಾಂಕುಗಳಲ್ಲಿ ಸಾಲಗಾರರಾಗಿರಬಾರದು.  ಗಂಡ, ಹೆಂಡತಿ, ಎರಡು ಮಕ್ಕಳು ಹೊಂದಿರುವ ಕುಟುಂಬದಲ್ಲಿ ಒಬ್ಬ ಮಹಿಳೆ ಮಾತ್ರ ಯೋಜನೆಯ ಸೌಲಭ್ಯ ಹೊಂದಲು ಅರ್ಹರು.  ಕುಟುಂಬದಲ್ಲಿ (5:1) ಮಹಿಳೆ ಹೆಚ್.ಐ.ವಿ ಸೋಂಕಿತಳಾಗಿದ್ದರೆ, (5:2) ಮಹಿಳೆ ಹೆಚ್.ಐ.ವಿ ಯಿಂದ ಬಾಧಿತಳಾಗಿದ್ದರೆ (ಹೆಂಡತಿ ಅಥವಾ 18 ವರ್ಷ ಮೀರಿದ ಅವಿವಹಿತ ಮಗಳು) ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದ್ದು, ಈ ಕುರಿತಾಗಿ ವೈದ್ಯಕೀಯ ವರದಿಯನ್ನು ಜಿಲ್ಲಾ ಆರೋಗ್ಯ ಕೇಂದ್ರದಿಂದ ಪಡೆಯಬೇಕು.  ಐ.ಸಿ.ಟಿ.ಸಿ/ ಪಿ.ಪಿ.ಸಿ.ಟಿ.ಸಿ ಕೇಂದ್ರಗಳಲ್ಲಿ ಪಡೆದ ಹೆಚ್.ಐ.ವಿ ಸೋಂಕು ಇರುವ ಸಂಬಂಧ ವೈದ್ಯಕೀಯ ವರದಿ ಪಡೆದಿರಬೇಕು. 
ಸಾಲ ಪಡೆಯಲು ಉದ್ದೇಶಿಸಿದ ಆದಾಯೋತ್ಪನ್ನ ಚಟುವಟಿಕೆಯ ಯೋಜನಾ ವರದಿಯೊಂದಿಗೆ, ಇತ್ತಿಚಿನ ನಾಲ್ಕು ಭಾವಚಿತ್ರ, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ, ಗುರುತಿನ ಚೀಟಿ, ಆಧಾರ ಕಾರ್ಡ, ಪಡಿತರ ಚೀಟಿ, ಅರ್ಜಿದಾರರ ಮತ್ತು ನಿಗಮದೊಂದಿಗೆ ಸಾಲದ ಕುರಿತಾಗಿ ರೂ. 20 ಛಾಪಾ ಕಾಗದದಲ್ಲಿ ಮಾಡಿಕೊಳ್ಳುವ ಒಪ್ಪಂದ (ಎಂ.ಓ.ಯು) ಇತ್ಯಾದಿಗಳೊಂದಿಗೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಭವನ ಕೊಪ್ಪಳ, ಇವರ ಕಛೇರಿಗೆ ಆಗಸ್ಟ್. 19 ರೊಳಗಾಗಿ ಸಲ್ಲಿಸಬೇಕು ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಯೋಗಿನಿ ಯೋಜನೆಯಡಿ ಅರ್ಜಿ ಆಹ್ವಾನ


ಕೊಪ್ಪಳ, ಜು. 24 (ಕರ್ನಾಟಕ ವಾರ್ತೆ): ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ  ಪ್ರಸಕ್ತ ಸಾಲಿನ ಉದ್ಯೋಗಿನಿ ಯೋಜನೆಯಡಿ ಅರ್ಹ ಮಹಿಳಾ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಬೆಂಗಳೂರು ಇವರ ಆದೇಶದಂತೆ ಉದ್ಯೋಗಿನಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು 18 ರಿಂದ 45 ವರ್ಷ ವಯೋಮಿತಿಯಲ್ಲಿರಬೇಕು.   ಖಾಯಂ ಕರ್ನಾಟಕದ ನಿವಾಸಿಯಾಗಿರಬೇಕು.  ಮಹಿಳಾ ಫಲಾನುಭವಿಗಳ ವಾರ್ಷಿಕ ವರಮಾನ ರೂ. 40,000   ಮೀರಿರಬಾರದು.  ಯಾವುದೇ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ.  ಅರ್ಜಿಗಳನ್ನು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಪಡೆದು, ಇತ್ತಿಚಿನ 3 ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚುನಾವಣಾ ಗುರುತಿನ ಚೀಟಿ (ಅಥವಾ ಆಧಾರ ಕಾರ್ಡ), ಪಡಿತರ ಚೀಟಿ, ಯೋಜನಾ ವರದಿಗಳನ್ನು ಲಗತ್ತಿಸಿ ಆಗಸ್ಟ್. 17 ರೊಳಗಾಗಿ ಸಲ್ಲಿಸಬೇಕು ಎಂದು ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು   ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಸಮೃದಿ ಯೋಜನೆಯಡಿ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ, ಜು. 24 (ಕರ್ನಾಟಕ ವಾರ್ತೆ): ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಬೆಂಗಳೂರು ಇವರ ಸೂಚನೆಯಂತೆ ಪ್ರಸಕ್ತ ಸಾಲಿಗೆ ಸಮೃದಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ತಲಾ 10,000 ರೂ. ಪ್ರೋತ್ಸಾಹಧನ ನೀಡುವ ಯೋಜನೆಗೆ ಅರ್ಹ ಮಹಿಳಾ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
    ಈ ಯೋಜನೆಯಡಿ ಜಿಲ್ಲೆಯಲ್ಲಿ 400 ಫಲಾನುಭವಿಗಳ ಗುರಿ ನಿಗದಿ ಪಡಿಸಿದ್ದು,  ಅರ್ಜಿ ಸಲ್ಲಿಸಲು 18 ರಿಂದ 60 ವರ್ಷ ವಯೋಮಿತಿಯಲ್ಲಿರಬೇಕು.  ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಖಾತೆ ಹೊಂದಿರಬೇಕು.  ಅರ್ಜಿಗಳನ್ನು ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಅಥವಾ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಛೇರಿಗಳಲ್ಲಿ ಪಡೆದು, ಇತ್ತೀಚಿನ 4 ಭಾವಚಿತ್ರ, ಬ್ಯಾಂಕ್ ಪಾಸ್‍ಬುಕ್ ಝರಾಕ್ಸ್, ಚುನಾವಣಾ ಗುರುತಿನ ಚೀಟಿ, ಆಧಾರ ಕಾರ್ಡ್, ಪಡಿತರ ಚೀಟಿ, ಬೀದಿ ಬದಿ ವ್ಯಾಪಾರಿ ಎಂದು ಪೌರಾಡಳಿತ ಇಲಾಖೆಯಿಂದ ನೊಂದಣಿ ಮಾಡಿಸಿರುವ/ ನಗರಸಭೆ/ ಪಟ್ಟಣ ಪಂಚಾಯತ್ ಇಲಾಖೆಯಿಂದ ನೊಂದಣಿ ಮಾಡಿಸಿರುವ ಗುರುತಿನ ಚೀಟಿ, ಗ್ರಾಮೀಣ ಪ್ರದೇಶದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ನೋಂದಣಿ ಮಾಡಿಸಿರುವ ದೃಢೀಕರಿಸಿದ ಗುರುತಿನ ಚೀಟಿ, ಅರ್ಜಿದಾರರ ವಯಸ್ಸು ದೃಢೀಕರಿಸುವ ದಾಖಲೆ, ಟಿ.ಸಿ ಅಥವಾ ಸರ್ಕಾರಿ ವೈದ್ಯರಿಂದ ವಯಸ್ಸಿನ ದೃಢೀಕರಣ ಪತ್ರ, ಫಲಾನುಭವಿಯನ್ನೊಳಗೊಂಡ ವ್ಯಾಪಾರ ಮಾಡುತ್ತಿರುವ ಸ್ಥಳದ ಭಾವಚಿತ್ರ ಇತ್ಯಾದಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ, ಆಗಸ್ಟ್. 17 ರೊಳಗಾಗಿ ಸಲ್ಲಿಸಬೇಕು ಎಂದು ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Monday, 24 July 2017

ಆದಾಯ ತೆರಿಗೆ ಸಂಗ್ರಹದಲ್ಲಿ ಕರ್ನಾಟಕಕ್ಕೆ ಮೂರನೆ ಸ್ಥಾನ- ಕೆ. ಲೋಕೇಶ್


ಕೊಪ್ಪಳ ಜು. 24 (ಕರ್ನಾಟಕ ವಾರ್ತೆ): ದೇಶದ ಸರ್ವತೋಮುಖ ಅಭಿವೃದ್ಧಿಗೆ ಆದಾಯ ತೆರಿಗೆ ಸಂಗ್ರಹ ಬಹುಮುಖ್ಯವಾಗಿದ್ದು, ಈ ದಿಸೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಮೂರನೆ ಸ್ಥಾನ ಗಳಿಸುವ ಮೂಲಕ ಮುಂಚೂಣಿಯಲ್ಲಿದೆ ಎಂದು ಕೊಪ್ಪಳದ ಆದಾಯ ತೆರಿಗೆ ಇಲಾಖೆ ಅಧಿಕಾರಿ ಕೆ. ಲೋಕೇಶ್ ಹೇಳಿದರು.
     ನಗರದ ಆದಾಯ ತೆರಿಗೆ ಇಲಾಖೆಯ ಕಚೇರಿ ಆವರಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಆದಾಯ ತೆರಿಗೆ ದಿನ ಆಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
     ದೇಶದ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಿಗೂ ಹಣಕಾಸಿನ ಅಗತ್ಯವಿರುತ್ತದೆ.  ಇದನ್ನು ಭರಿಸಲು ತೆರಿಗೆ ಹಣವೇ ಪ್ರಮುಖ ಮೂಲವಾಗಿರುತ್ತದೆ.  ಹೀಗಾಗಿ ದೇಶದ ಯಾವುದೇ ಅಭಿವೃದ್ಧಿ ಕಾರ್ಯದಲ್ಲಿ ಪ್ರತಿಯೊಬ್ಬರದೂ ಪಾತ್ರವಿರುತ್ತದೆ.  ಕಳೆದ 2016-17 ರಲ್ಲಿ ದೇಶದ ಒಟ್ಟಾರೆ ಆದಾಯ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಮೂರನೆ ಸ್ಥಾನದಲ್ಲಿದೆ.  ರಾಜ್ಯದಲ್ಲಿ 85 ಸಾವಿರ ಕೋಟಿ ರೂ. ಗುರಿಯ ಬದಲಿಗೆ 90 ಸಾವಿರ ಕೋಟಿ ರೂ. ಆದಾಯ ತೆರಿಗೆ ಸಂಗ್ರಹಣೆಯಾಗಿದೆ.  ಜಿಲ್ಲೆಯಲ್ಲಿ ಕಳೆದ 2016-17 ರಲ್ಲಿ 12. 15 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಗೆ ಬದಲಿಗೆ 13.43 ಕೋಟಿ ರೂ. ಆದಾಯ ತೆರಿಗೆ ಸಂಗ್ರಹ ಮಾಡಲಾಗಿದೆ.  ಆದಾಯ ತೆರಿಗೆ ಪಾವತಿ ಮಾಡುವುದನ್ನು ಯಾರೂ ಕೂಡ ಹೊರೆ ಎಂದು ಭಾವಿಸಬಾರದು.   ಆದಾಯ ತೆರಿಗೆ ಪಾವತಿಯಿಂದ, ದೇಶದ ಅಭಿವೃದ್ಧಿಯಲ್ಲಿ ತಮ್ಮದೂ ಒಂದು ಕೊಡುಗೆ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.  ಸಕ್ರಮ ವ್ಯವಹಾರ ಮಾಡಿಕೊಂಡು, ಸರಿಯಾದ ರೀತಿಯಲ್ಲಿ ತೆರಿಗೆ ಪಾವತಿಸುವವರು, ನೆಮ್ಮದಿಯುತ ಜೀವನ ಸಾಗಿಸಬಹುದು ಎಂದು ಆದಾಯ ತೆರಿಗೆ ಅಧಿಕಾರಿ ಕೆ. ಲೋಕೇಶ್ ಹೇಳಿದರು.
     ಆದಾಯ ತೆರಿಗೆ ನಿರೀಕ್ಷಕ ಮಲ್ಲಿಕಾರ್ಜುನ್ ಅವರು ಮಾತನಾಡಿ, ಆದಾಯ ತೆರಿಗೆ ಇಲಾಖೆಯನ್ನು ಇತ್ತೀಚಿನ ದಿನಗಳಲ್ಲಿ ಗಣಕೀಕೃತಗೊಳಿಸಲಾಗುತ್ತಿದೆ.  ಆನ್‍ಲೈನ್ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ಪಾವತಿ ಹಾಗೂ ರಿಟನ್ರ್ಸ್ ಸಲ್ಲಿಕೆಯನ್ನು ಸರಳೀಕರಣ ಮಾಡಲಾಗಿದೆ.  ಆದಾಯ ತೆರಿಗೆ ವ್ಯವಸ್ಥೆ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಇಲಾಖೆ ಕೈಗೊಳ್ಳಲಿದೆ ಎಂದರು.
     ಆದಾಯ ತೆರಿಗೆ ದಿನಾಚರಣೆ ಅಂಗವಾಗಿ ಆದಾಯ ತೆರಿಗೆಯನ್ನು ಸಮರ್ಪಕ ರೀತಿಯಲ್ಲಿ ಪಾವತಿಸಿದ್ದಕ್ಕಾಗಿ ಕಾರಟಗಿಯ ವೀರೇಶಪ್ಪ ಹಾಗೂ ಗುರುರಾಜ ಅವರನ್ನು ಇಲಾಖೆ ಪರವಾಗಿ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.  ಅಲ್ಲದೆ ಆದಾಯ ತೆರಿಗೆ ಕುರಿತಂತೆ ಏರ್ಪಡಿಸಿದ ಕ್ವಿಜ್ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
     ಕಾರ್ಯಕ್ರಮದಲ್ಲಿ ಜಿಲ್ಲೆಯ ಆದಾಯ ತೆರಿಗೆ ಪಾವತಿದಾರರು, ತೆರಿಗೆ ಸಲಹೆಗಾರರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಸುಸ್ಥಿರ ಅಭಿವೃದ್ಧಿ ಗುರಿಗಾಗಿ ಪಂಚ ಯೋಜನೆಗಳು- ವಾಸುದೇವ ಶರ್ಮಾ


ಕೊಪ್ಪಳ, ಜು. 24 (ಕರ್ನಾಟಕ ವಾರ್ತೆ): ಸುಸ್ಥರ ಅಭಿವೃದ್ಧಿಗಾಗಿ ಜನ, ಭೂಮಿ, ಸಮೃದ್ಧಿ, ಶಾಂತಿ ಹಾಗೂ ಸಹಯೋಗ ಎಂಬ ಯೋಜನೆ (ಫೈ ಪ್ಲಾನ್ಸ್) ಗಳನ್ನು ಹಮ್ಮಿಕೊಳ್ಳಲಾಗಿದೆ.  ಈ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ನಮ್ಮ ಸುತ್ತಮುತ್ತಲಿನ ಸ್ಥಳೀಯ ಸರ್ಕಾರಗಳು, ಆಡಳಿತ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿವಿಧ ಸೇವಾವಲಯಗಳನ್ನು ಮಕ್ಕಳ ಹಕ್ಕುಗಳ ದೃಷ್ಟಿಕೋನದಲ್ಲಿ ಗಮನಿಸಬೇಕಿರುವ ಅವಶ್ಯಕತೆ ಇರುತ್ತದೆ ಎಂದು ಬೆಂಗಳೂರಿನ ಮಕ್ಕಳ ಹಕ್ಕುಗಳ ಟ್ರಸ್ಟ್ ನಿರ್ದೇಶಕ ವಾಸುದೇವ ಶರ್ಮಾ ಅವರು ಹೇಳಿದರು.
     ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಸೋಮವಾರದಂದು ಏರ್ಪಡಿಸಲಾದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಯುನಿಸೆಫ್- ಮಕ್ಕಳ ರಕ್ಷಣಾ ಯೋಜನೆ ಸಹಯೋಗದೊಂದಿಗೆ ಕಲಬುರಗಿ ವಿಭಾಗಮಟ್ಟದ “ಸುಸ್ಥಿರ ಅಭಿವೃದ್ಧಿ ಗುರಿ”ಗಳ ಕುರಿತು ವಿಭಾಗ ಮಟ್ಟದ ಒಂದು ದಿನದ “ಸಾಮಥ್ರ್ಯ ವರ್ಧನಾ” ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
    ಬೆಂಗಳೂರು ಚೈಲ್ಡ್ ರೈಟ್ ಟ್ರಸ್ಟ್ ನಿರ್ದೇಶಕ ವಾಸುದೇವ ಶರ್ಮಾ ಅವರು ಕಾರ್ಯಾಗಾರದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ ಬಗ್ಗೆ ಮಾತನಾಡಿ, ಮುಂದಿನ 15 ವರ್ಷಗಳಲ್ಲಿ ಜಗತ್ತಿನ ಜನರೆಲ್ಲರ ಒಳಿತಿಗಾಗಿ ಉತ್ತಮ ವಿಶ್ವವನ್ನು ರೂಪಿಸಲು ಸಾಧಿಸಲೇಬೆಕಾದ ಕೆಲವು ಗುರಿಗಳನ್ನು ವಿಶ್ವ ಸಂಸ್ಥೆಯು ರೂಪಿಸಿ ಅವುಗಳನ್ನು “ಸುಸ್ಥಿರ ಅಭಿವೃದ್ಧಿ ಗುರಿಗಳು” ಎಂದು ಹೆಸರಿಸಿದೆ.  ಮಕ್ಕಳು ಮತ್ತು ಯುವಜನರೂ ಸೇರಿದಂತೆ ಕೋಟ್ಯಾಂತರ ಜನರ ಮತ್ತು ಸಂಸ್ಥೆಗಳ ಭಾಗವಹಿಸುವಿಕೆಯೊಂದಿಗೆ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳ ಪ್ರತಿನಿಧಿಗಳು ಸೇರಿ ತೀರ್ಮಾನಿಸಲಾದ ಗುರಿಗಳನ್ನು ವಿಶ್ವದ ಎಲ್ಲ ದೇಶಗಳು ಒಪ್ಪಿಕೊಂಡಿವೆ ಎಂದು ವಿಶ್ವಸಂಸ್ಥೆ ಹೇಳಿದೆ.  ಇಲ್ಲಿರುವ ಗುರಿಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರುವಂತಹುಗಳೇ ಸುಸ್ಥಿರ ಅಭಿವೃದ್ಧಿಗಳಾಗಿವೆ.  
    2030 ರೊಳಗಾಗಿ ಸುಸ್ಥರ ಅಭಿವೃದ್ಧಿಗಾಗಿ ಜನ, ಭೂಮಿ, ಸಮೃದ್ಧಿ, ಶಾಂತಿ ಹಾಗೂ ಸಹಯೋಗ ಎಂಬ ಯೋಜನೆ (ಫೈ ಪ್ಲಾನ್ಸ್) ಗಳನ್ನು ಹಮ್ಮಿಕೊಳ್ಳಲಾಗಿದೆ.  ಈ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ನಮ್ಮ ಸುತ್ತಮುತ್ತಲಿನ ಸ್ಥಳೀಯ ಸರ್ಕಾರಗಳು, ಆಡಳಿತ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿವಿಧ ಸೇವಾವಲಯಗಳನ್ನು ಮಕ್ಕಳ ಹಕ್ಕುಗಳ ದೃಷ್ಟಿಕೋನದಲ್ಲಿ ಗಮನಿಸಬೇಕಿರುವ ಅವಶ್ಯಕತೆ ಇರುತ್ತದೆ.  ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ, ಭಾರತದಲ್ಲಿ ಒಟ್ಟು ಜನಸಂಖ್ಯೆಯಲ್ಲಿ (2011 ಜನಗಣತಿ) ಶೇ. 40 ರಷ್ಟು ಜನ 18 ವರ್ಷದೊಳಗಿನ ಮಕ್ಕಳಾಗಿದ್ದಾರೆ.  ಈ ಮಕ್ಕಳ ಪರಿಸ್ಥಿತಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೇಗಿದೆ, ವಿವಿಧ ಅಭಿವೃದ್ಧಿ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಆರೋಗ್ಯ, ಮರಣ ಪರಿಸ್ಥಿತಿ, ರಕ್ಷಣೆ, ಶಿಕ್ಷಣ, ಶೋಷಣೆ, ಭಾಗವಹಿಸುವಿಕೆಯೇ ಮೊದಲಾದ ವಿಚಾರಗಳಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಹೋಲಿಸಿ ನೋಡಿದಾಗ ಭಾರತ ಮತ್ತು ಕರ್ನಾಟಕದಲ್ಲಿ ಮಕ್ಕಳ ಪರಿಸ್ಥಿತಿ ಹೇಗಿದೆ ಎಂಬುದು ತಿಳಿಯುತ್ತದೆ.  
    ಸುಸ್ಥಿರ ಅಭಿವೃದ್ಧಿಯು ಎಲ್ಲೆಡೆಯಲ್ಲಿಯೂ ಎಲ್ಲಾ ವಿಧದ, ಹಸಿವು ಮುಕ್ತ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಗುಣ ಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಸ್ವಚ್ಛ ನೀರು ಮತ್ತು ನೈರ್ಮಲ್ಯ, ಕೈಗೆಟುಕಬಹುದಾದ ಮತ್ತು ಶುದ್ಧ ಇಂಧನ ಶಕ್ತಿ, ಗೌರವಯುತ ಕೆಲಸ ಮತ್ತು ಆರ್ಥಿಕ ಬೆಳವಣಿಗೆ, ಉದ್ಯಮ, ಆವಿಷ್ಕಾರ ಮತ್ತು ಮೂಲಸೌಕರ್ಯ, ಅಸಮಾನತೆಗಳ ಇಳಿಕೆ ಮುಂತಾದ ಗುರಿಗಳನ್ನು ಹೊಂದಿದ್ದು, ಬಡತನವನ್ನು ಕೊನೆಗಾಣಿಸುವುದು.  ಹಸಿವನ್ನು ಕೊನೆಗಾಣಿಸಿ, ಆಹಾರ ಭದ್ರತೆ ಮತ್ತು ಸುಧಾರಿತ ಪೌಷ್ಟಿಕತೆಯನ್ನು ಸಾಧಿಸಿ ಹಾಗೂ ಸುಸ್ಥಿರ ಕೃಷಿಯನ್ನು ಉತ್ತೇಜಿಸುವುದು.  ಎಲ್ಲರಿಗೂ ಎಲ್ಲ ವಯೋಮಾನದಲ್ಲೂ ಆರೋಗ್ಯಕರ ಜೀವನವನ್ನು ಖಾತ್ರಿಪಡಿಸಿ ಯೋಗಕ್ಷೇಮವನ್ನು ಉತ್ತೇಜಿಸುವುದು.  ಸಮನ್ವಯ ಮತ್ತು ಸಮಾನ ಗುಣಮಟ್ಟದ ಶಿಕ್ಷಣ ಮತ್ತು ಜೀವನದುದ್ದಕ್ಕೂ ಕಲಿಕೆಯ ಅವಕಾಶಗಳಿಗೆ ಉತ್ತೇಜನವನ್ನು ಖಾತ್ರಿಪಡಿಸುವುದು.   ಲಿಂಗ ಸಮಾನತೆಯನ್ನು ಸಾಧಿಸಿ ಮತ್ತು ಮಹಿಳೆಯರು ಹಾಗೂ ಹೆಣ್ಣುಮಕ್ಕಳನ್ನು ಸಶಕ್ತರನ್ನಾಗಿಸುವುದು.  ನೀರು ಮತ್ತು ನೈರ್ಮಲ್ಯದ ಲಭ್ಯತೆ ಮತ್ತು ಅದರ ಸುಸ್ಥಿರ ನಿರ್ವಹಣೆಯನ್ನು ಖಾತ್ರಿಗೊಳಿಸುವುದು.  ಎಲ್ಲರಿಗೂ ಕೈಗೆಟುಕಬಲ್ಲ, ವಿಶ್ವಾಸಾರ್ಹ, ಸುಸ್ಥಿರ ಮತ್ತು ಆಧುನಿಕ ಇಂಧನದ ಲಭ್ಯತೆಯನ್ನು ಖಾತ್ರಿಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು  ಬೆಂಗಳೂರು ಚೈಲ್ಡ್ ರೈಟ್ ಟ್ರಸ್ಟ್ ನಿರ್ದೇಶಕರಾದ ವಾಸುದೇವ ಶರ್ಮಾ ಅವರು ಕಾರ್ಯಾಗಾರದಲ್ಲಿ ತಿಳಿಸಿದರು.  
    ಕಾರ್ಯಾಗಾರದಲ್ಲಿ ಬಳ್ಳಾರಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಘವೇಂದ್ರ, ಕೊಪ್ಪಳ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶೇಖರಗೌಡ ರಾಮತ್ನಾಳ, ಮಕ್ಕಳ ರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ರಾಘವೇಂದ್ರ ಭಟ್, ಯುನೆಸೆಫ್ ಸಂಯೋಜಕ ಹರೀಶ ಜೋಗಿ ಸೇರಿದಂತೆ ಬೀದರ್, ಗುಲಬರ್ಗಾ, ಯಾದಗಿರಿ, ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕದ ಪ್ರತಿನಿಧಿಗಳು ಭಾಗವಹಿಸಿದ್ದರು. 

Saturday, 22 July 2017

ಜು. 24 ರಂದು ಆದಾಯ ತೆರಿಗೆ ದಿನಾಚರಣೆ : ತೆರಿಗೆ ಪಾವತಿದಾರರಿಗೆ ಕ್ವಿಜ್


ಕೊಪ್ಪಳ ಜು. 22 (ಕರ್ನಾಟಕ ವಾರ್ತೆ): ಭಾರತ ಸರ್ಕಾರದ ಆದಾಯ ತೆರಿಗೆ ಇಲಾಖೆ ಕೊಪ್ಪಳ ಕಚೇರಿಯ ವತಿಯಿಂದ ಆದಾಯ ತೆರಿಗೆ ದಿನಾಚರಣೆ ಅಂಗವಾಗಿ ವಿಶೇಷ ಜಾಗೃತಿ ಮೂಡಿಸಲು ತೆರಿಗೆ ಪಾವತಿದಾರರಿಗಾಗಿ ಕ್ವಿಜ್ ಕಾರ್ಯಕ್ರಮವನ್ನು ಜು. 24 ರಂದು 10-30 ಗಂಟೆಗೆ ಕೊಪ್ಪಳದ ಆದಾಯ ತೆರಿಗೆ ಅಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದೆ.
     ಆದಾಯ ತೆರಿಗೆ ಇಲಾಖೆಯು ಜು. 24 ರಂದು ಆದಾಯ ತೆರಿಗೆ ದಿನವನ್ನು ಆಚರಿಸುತ್ತಿದ್ದು, ಆದಾಯ ತೆರಿಗೆ ವ್ಯವಸ್ಥೆ ದೇಶದಲ್ಲಿ ಅಸ್ತಿತ್ವಕ್ಕೆ ಬಂದು 157 ನೇ ವರ್ಷ ಪೂರ್ಣಗೊಂಡಿದೆ.  ಆದಾಯ ತೆರಿಗೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ, ಜಿಲ್ಲೆಯ ತೆರಿಗೆ ಪಾವತಿದಾರರಿಗಾಗಿ ಕ್ವಿಜ್ ಕಾರ್ಯಕ್ರಮವನ್ನು ಆಯೋಜಿಸಿದೆ.  ಕ್ವಿಜ್ ಕಾರ್ಯಕ್ರಮ ಅಂದು ಬೆಳಿಗ್ಗೆ 10-30 ಗಂಟೆಯಿಂದ 11-30 ರವರೆಗೆ ಕೊಪ್ಪಳ ನಗರದ ಹೊಸಪೇಟೆ ರಸ್ತೆಯಲ್ಲಿನ ಶಿವಬೆಳಗು ಬಿಲ್ಡಿಂಗ್‍ನಲ್ಲಿರುವ ಆದಾಯ ತೆರಿಗೆ ಅಧಿಕಾರಿಗಳ ಕಚೇರಿಯಲ್ಲಿ ನಡೆಯಲಿದೆ.  ಜಿಲ್ಲೆಯ ಎಲ್ಲ ತೆರಿಗೆ ಪಾವತಿದಾರರು ಮುಕ್ತವಾಗಿ ಈ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.  ಕ್ವಿಜ್ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು.  ಅಲ್ಲದೆ, ಆದಾಯ ತೆರಿಗೆ ದಿನದ ಅಂಗವಾಗಿ ಅಂದು ಜಿಲ್ಲೆಯಲ್ಲಿ ಹೆಚ್ಚಿನ ತೆರಿಗೆ ಪಾವತಿಸುವ 10 ಜನ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಗುವುದು.  ಆದಾಯ ತೆರಿಗೆ ಪಾವತಿ ಮಾಡುವುದನ್ನು ಯಾರೂ ಕೂಡ ಹೊರೆ ಎಂದು ಭಾವಿಸಬಾರದು.   ಆದಾಯ ತೆರಿಗೆ ಪಾವತಿಯಿಂದ, ದೇಶದ ಅಭಿವೃದ್ಧಿಯಲ್ಲಿ ತಮ್ಮದೂ ಒಂದು ಕೊಡುಗೆ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.  ಕಷ್ಟಪಟ್ಟು ದುಡಿದು, ಹಣ ಸಂಪಾದಿಸುವವರಿಗೆ ಸಮಾಜದಲ್ಲಿ ಹೇಗೆ ಗೌರವ ಲಭಿಸುವುದೋ, ಅದೇ ರೀತಿ ಆದಾಯ ತೆರಿಗೆ ಪಾವತಿಸುವವರಿಗೆ ದೇಶ ಗೌರವಿಸಲಿದೆ.  ಅಲ್ಲದೆ ಅಂತಹವರು ನೆಮ್ಮದಿಯುತವಾಗಿ ಜೀವನ ನಡೆಸಲು ಸಹಕಾರಿಯಾಗಲಿದೆ.  ಜಿಲ್ಲೆಯಲ್ಲಿ ಕಳೆದ 2016-17 ರಲ್ಲಿ ವಿವಿಧ ಕಂಪನಿಗಳಿಂದ 15 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯ ಬದಲಿಗೆ 15. 26 ಲಕ್ಷ ರೂ. ತೆರಿಗೆ ಸಂಗ್ರಹಿಸಲಾಗಿದೆ.  ಕಂಪನಿಯೇತರ, ವಯಕ್ತಿಕ ಮತ್ತು ಸಂಸ್ಥೆಗಳ ವತಿಯಿಂದ 1200 ಲಕ್ಷ ರೂ. ತೆರಿಗೆ ಸಂಗ್ರಹದ ಗುರಿಗೆ ಬದಲಿಗೆ 1327. 90 ಲಕ್ಷ ರೂ. ತೆರಿಗೆ ಸಂಗ್ರಹ ಮಾಡಲಾಗಿದ್ದು, ಒಟ್ಟಾರೆ ಕಳೆದ ವರ್ಷ 1343. 16 ಲಕ್ಷ ರೂ. ಆದಾಯ ತೆರಿಗೆ ಸಂಗ್ರಹ ಕೊಪ್ಪಳ ಜಿಲ್ಲೆಯಲ್ಲಾಗಿದೆ.  ಆದಾಯ ತೆರಿಗೆ ಇಲಾಖೆಯನ್ನು ಜನಸ್ನೇಹಿಯನ್ನಾಗಿಸಲು ಇಲಾಖೆ ಶ್ರಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಜನಜಾಗೃತಿಗಾಗಿ ಕ್ವಿಜ್ ನಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ಜಿಲ್ಲೆಯ ತೆರಿಗೆ ಪಾವತಿದಾರರು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೊಪ್ಪಳ ಆದಾಯ ತೆರಿಗೆ ಇಲಾಖೆಯ ಆದಾಯ ತೆರಿಗೆ ಅಧಿಕಾರಿ ಲೋಕೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಯಮಶೀಲತಾ ತರಬೇತಿ : ಹೆಸರು ನೋಂದಣಿಗೆ ಸೂಚನೆ


ಕೊಪ್ಪಳ, ಜು. 22(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಾದ ಪಿ.ಡಿ.ಓ., ಪಿ.ಎಸ್.ಐ., ಬ್ಯಾಂಕಿಂಗ್ ಮತ್ತು ಪೊಲೀಸ್ ಇತ್ಯಾದಿ ಹುದ್ದೆಗಳ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ನಿರುದ್ಯೋಗಿ ಯುವಕ/ ಯುವತಿಯರಿಗೆ ಉದ್ಯಮಶೀಲತಾ ತರಬೇತಿಯನ್ನು ಆಗಸ್ಟ್. 02 ರಿಂದ 12 ರವರೆಗೆ ಉಚಿತವಾಘಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಹೆಸರನ್ನು ನೊಂದಾಯಿಸಿಕೊಳ್ಳಲು ಸೂಚನೆ ನೀಡಲಾಗಿದೆ.
    ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅರ್ಹ ಅಭ್ಯರ್ಥಿಗಳು, ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾಡಳಿತ ಭವನ ಕೊಪ್ಪಳ, ಇಲ್ಲಿಗೆ ಜುಲೈ. 29 ರೊಳಗಾಗಿ ನೊಂದಾಯಿಸಿಕೊಳ್ಳಬೇಕು.   ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ನೆರವು ನೀಡಲಾಗುವುದು.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9742498368, 08539-220859 ಕ್ಕೆ ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಹನ ಖರೀದಿಗೆ ಸಹಾಯಧನ : ಅರ್ಜಿ ಆಹ್ವಾನ


ಕೊಪ್ಪಳ, ಜು. 22(ಕರ್ನಾಟಕ ವಾರ್ತೆ): ಕೊಪ್ಪಳ ಮೀನುಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಮೀನುಗಾರಿಕೆ, ಮೀನು ಮಾರಾಟ ಹಾಗೂ ಸಾಗಾಣಿಕೆಗಾಗಿ ನಾಲ್ಕು ಚಕ್ರ ವಾಹನವನ್ನು ಖರೀದಿಸಲು ಸಹಾಯಧನಕ್ಕಾಗಿ ವೃತ್ತಿಪರ ಮೀನುಗಾರ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  
    ಇಲಾಖೆ ವತಿಯಿಂದ ಮೀನುಗಾರಿಕೆ, ಮೀನು ಮಾರಾಟ ಹಾಗೂ ಸಾಗಾಣಿಕೆಗಾಗಿ ನಾಲ್ಕು ಚಕ್ರ ವಾಹನವನ್ನು ಖರೀದಿಸಲು ಶೇ. 80 ರಷ್ಟು ಸಹಾಯಧನ ನೀಡುವ ಯೋಜನೆ ಜಾರಿಗೊಳಿಸಲಾಗಿದೆ.   ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವೃತ್ತಿಪರ ಮೀನುಗಾರ ಫಲಾನುಭವಿಗಳಿಗೆ ಅವಕಾಶವಿದೆ.  ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ಕೊಪ್ಪಳ, ದೂರವಾಣಿ ಸಂಖ್ಯೆ 08539-225016 ಕ್ಕೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.  

Friday, 21 July 2017

ಕಲಾಜಾಥಾ-ಸರ್ಕಾರಿ ಯೋಜನೆಗಳ ಪ್ರಚಾರಾಂದೋಲನಕ್ಕೆ ಡಿಸಿ ಕನಗವಲ್ಲಿ ಚಾಲನೆ


ಕೊಪ್ಪಳ ಜು. 21 (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರ ಜನಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ಜಾರಿಗೊಳಿಸಿರುವ ಯೋಜನೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜು. 21 ರಿಂದ ಆಗಸ್ಟ್ 13 ರವರೆಗೆ ಆಯೋಜಿಸಿರುವ ‘ಕಲಾಜಾಥಾ’ ವಿಶೇಷ ಪ್ರಚಾರಾಂದೊಲನಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಶುಕ್ರವಾರದಂದು ಜಿಲ್ಲಾಡಳಿತ ಭವನ ಆವರಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು
     ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ವಿದ್ಯಾಸಿರಿ, ಮೈತ್ರಿ-ಮನಸ್ವಿನಿ ಯೋಜನೆಗಳು ಸೇರಿದಂತೆ ಹಲವು ಯೋಜನೆಗಳನ್ನು ಜನಸಾಮಾನ್ಯರ ಶ್ರೇಯೋಭಿವೃದ್ಧಿಯ ಉದ್ದೇಶವನ್ನಿಟ್ಟುಕೊಂಡು ಜಾರಿಗೊಳಿಸಿದೆ.  ಈ ಯೋಜನೆಗಳ ಬಗ್ಗೆ ಬೀದಿನಾಟಕಗಳ ಮೂಲಕ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಪ್ರಸ್ತುತಪಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಕಲಾಜಾಥಾ- ವಿಶೇಷ ಪ್ರಚಾರಾಂದೋಲನ ಉತ್ತಮ ಪ್ರಯತ್ನವಾಗಿದೆ ಎಂದರು.
      ಐಎಎಸ್ ಪ್ರೊಬೆಷನರಿ ಅಧಿಕಾರಿ ಪ್ರಾವಿಣ್ಯ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ತುಕಾರಾಂರಾವ್, ಇಲಾಖೆಯ ಅವಿನಾಶ್, ಪಾಂಡುರಂಗ ಸೇರಿದಂತೆ ಚೇತನ ಕಲಾ ತಂಡದ ಮುಖ್ಯಸ್ಥ ಶಿವಮೂರ್ತಿ ಮೇಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಲಾಜಾಥಾ ಕಾರ್ಯಕ್ರಮ ವಿವರ :
**************  ಜುಲೈ 21 ರಿಂದ ಆಗಸ್ಟ್ 13 ರವರೆಗೆ 24 ದಿನಗಳ ಕಾಲ ಪ್ರತಿ ನಿತ್ಯ ಎರಡು ಗ್ರಾಮಗಳಲ್ಲಿ ವಿಶೇಷ ವಿನ್ಯಾಸ ಹೊಂದಿರುವ ಸಂಚಾರಿ ವಾಹನದ ಮೂಲಕ ಕಲಾಜಾಥಾ ಪ್ರಚಾರಾಂದೋಲನ ನಡೆಯಲಿದೆ.  ಜು. 21 ರಂದು ಯಲಬುರ್ಗಾ ತಾಲೂಕಿನ ಬೇವೂರ, ಹಿರೇಅರಳಿಹಳ್ಳಿ, 22 ರಂದು ವಜ್ರಬಂಡಿ, ಗೆದಿಗೇರಿ, 23 ರಂದು ಮಂಗಳೂರು, ಬಳಗೇರಿ, 24 ರಂದು ಕುಕನೂರು, ಯರೇಹಂಚಿನಾಳ, 25 ರಂದು ಮುಧೋಳ, ಬಳ್ಳೂಟಗಿ.  26 ರಂದು ತುಮ್ಮರಗುದ್ದಿ, ಬಂಡಿ, 27 ರಂದು ಕುಷ್ಟಗಿ ತಾಲೂಕಿನ ಹಿರೇಗೊಣ್ಣಾಗರ, ಮಾಲಗಿತ್ತಿ, 28 ರಂದು ನಿಲೋಗಲ್, ಜಹಗೀರಗುಡದೂರ, 29 ರಂದು ಬೆನಕನಾಳ, ಹಿರೇನಂದಿಹಾಳ, 30 ರಂದು ಹಿರೇಬನ್ನಿಗೋಳ, ಕೊರಡಕೇರಾ, 31 ರಂದು ತಾವರಗೇರಾ, ಕಿಲ್ಲಾರಹಟ್ಟಿ, ಆ. 01 ರಂದು ಸಂಗನಾಳ, ಕನಕಗಿರಿ.  02 ರಂದು ಗಂಗಾವತಿ ತಾಲೂಕಿನ ಹಿರೇಖೇಡ, ಕರಡೋಣ,  03 ರಂದು ನವಲಿ, ಕಾರಟಗಿ, 04 ರಂದು ಬೂದಗುಂಪಾ, ಹುಳ್ಕಿಹಾಳ.  05 ರಂದು ಶ್ರೀರಾಮನಗರ, ಬರಗೂರ.  06 ರಂದು ಮುಸ್ಟೂರ, ಡಣಾಪುರ.  07 ರಂದು ಹೊಸಕೇರಾ, ಆನೆಗೊಂದಿ.  08 ರಂದು ಕೊಪ್ಪಳ ತಾಲೂಕಿನ ಬಂಡಿಹರ್ಲಾಪುರ, ಹುಲಿಗಿ.  09 ರಂದು ಮುನಿರಾಬಾದ್, ಹಿಟ್ನಾಳ.  10 ರಂದು ಬೂದಗುಂಪಾ, ಇಂದರಗಿ.  11 ರಂದು ವಣಬಳ್ಳಾರಿ, ಕಲ್‍ತಾವರಗೇರಾ, 12 ರಂದು ಗಿಣಿಗೇರಾ, ಮಾದಿನೂರ.  13 ರಂದು ಹಲಗೇರಾ ಮತ್ತು ಕವಲೂರ ಗ್ರಾಮಗಳಲ್ಲಿ ಕಲಾಜಾಥ ಕಾರ್ಯಕ್ರಮ ಜರುಗಲಿದೆ.

ಬಾಲಕಾರ್ಮಿಕ ಸಮೀಕ್ಷಾ ವರದಿ ಮರು ಪರಿಶೀಲಿಸಲು ಡಿಸಿ ಕನಗವಲ್ಲಿ ಸೂಚನೆ


ಕೊಪ್ಪಳ ಜು. 12 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಕಳೆದ ವರ್ಷ ಕೈಗೊಂಡ ಸಮೀಕ್ಷೆಯಲ್ಲಿ 14 ವರ್ಷದೊಳಗಿನ ಬಾಲಕಾರ್ಮಿಕರ ಸಂಖ್ಯೆ 1315 ಎಂಬುದಾಗಿ ವರದಿ ಸಲ್ಲಿಸಲಾಗಿತ್ತು.  ಸಮೀಕ್ಷಾ ವರದಿಯ ಬಗ್ಗೆ ಸಾಕಷ್ಟು ಗೊಂದಲಗಳಿದ್ದು, ಆಯಾ ತಾಲೂಕು ಮಟ್ಟದಲ್ಲಿ ತಹಸಿಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪಿಡಿಒ ಗಳಿಂದ ವರದಿಯನ್ನು ಮರು ಪರಿಶೀಲಿಸಿ ವರದಿ ಸಲ್ಲಿಸಲು ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಕೊಪ್ಪಳ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಲ್ಲಿ ಒಂದು ಬಗೆಯ ವರದಿಯಿದ್ದರೆ, ಯುನಿಸೆಫ್‍ನವರ ಬಳಿ ಇನ್ನೊಂದು ಬಗೆ ಇದೆ.  ಅದೇ ರೀತಿ ಬಾಲಕಾರ್ಮಿಕರ ಸಂಖ್ಯೆಗೆ ಸಂಬಂಧಿಸಿದಂತೆ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದವರು ಕೈಗೊಂಡ ಸಮೀಕ್ಷೆ ವರದಿಯಲ್ಲಿಯೂ ಸಾಕಷ್ಟು ಗೊಂದಲವಿದೆ.  ಶಾಲೆಗೆ ದಾಖಲಾತಿ ಆದವರ ಪೈಕಿ, ನಂತರದ ದಿನಗಳಲ್ಲಿ ಕೆಲವರು ಶಾಲೆಯಿಂದ ಹೊರಗುಳಿದಲ್ಲಿ, ಅಂತಹ ಮಕ್ಕಳು ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಗೆ ಸೇರ್ಪಡೆಯಾಗಬೇಕಾಗುತ್ತದೆ.  ಮಕ್ಕಳು ಸತತವಾಗಿ 07 ದಿನಗಳ ಕಾಲ ಶಾಲೆಗೆ ಗೈರಾದರೆ, ಅಂತಹ ಮಕ್ಕಳನ್ನು ಶಾಲೆಯಿಂದ ಹೊರಗುಳಿದ ಮಕ್ಕಳು ಎಂದೇ ಪರಿಗಣಿಸಬೇಕು.  ಶಾಲೆಗೆ ದಾಖಲಾದ ತಕ್ಷಣ ಮಕ್ಕಳು ಶಾಲೆಗೆ ನಿರಂತರವಾಗಿ ಬರುತ್ತಿದ್ದಾರೋ, ಇಲ್ಲವೋ ಎನ್ನುವುದರ ಬಗ್ಗೆ ನಿಯಮಿತವಾಗಿ ಪರಿಶೀಲನೆ ನಡೆಸಬೇಕಾಗುತ್ತದೆ.  ಶಾಲೆಯಿಂದ ಮಕ್ಕಳು ಹೊರಗುಳಿದಾಕ್ಷಣ, ಅಂತಹ ಮಕ್ಕಳನ್ನು ಬಾಲಕಾರ್ಮಿಕರೆಂದು ಹೇಳಲು ಸಾಧ್ಯವಿಲ್ಲ.  ಕುರಿಗಾಹಿಗಳು ಹಾಗೂ ತಮ್ಮ ಹೊಲದಲ್ಲಿ ಕೆಲಸ ಮಾಡುವವರು ಕೂಡ ಶಾಲೆಯಿಂದ ಹೊರಗುಳಿದಿರುವ ಸಾಧ್ಯತೆ ಇರುತ್ತದೆ.  ಬಾಲಕಾರ್ಮಿಕತೆ ಬಗ್ಗೆ ಕಾರ್ಮಿಕ ಇಲಾಖೆ ನೀಡುವ ವ್ಯಾಖ್ಯಾನವನ್ನು ಸಮರ್ಪಕವಾಗಿ ಪಡೆದುಕೊಂಡು, ಜಿಲ್ಲೆಯಲ್ಲಿನ ಬಾಲಕಾರ್ಮಿಕರ ಸಂಖ್ಯೆಗೆ ಸಂಬಂಧಿಸಿದಂತೆ ಆಯಾ ಗ್ರಾಮ ಪಂಚಾಯತಿ ಹಾಗೂ ತಾಲೂಕು ಮಟ್ಟದಲ್ಲಿ ತಹಸಿಲ್ದಾರರು, ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗೂ ಪಿಡಿಒ ಗಳು ಮರು ಪರಿಶೀಲಿಸಿ, ಸಮರ್ಪಕ ವರದಿಯನ್ನು ಮರು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
     ಜಿಲ್ಲಾ ಬಾಲಕಾರ್ಮಿಕ ಯೋಜನಾ  ಸಂಘವನ್ನು ಕ್ರಿಯಾಶೀಲಗೊಳಿಸಿ, ವಿವಿಧ ಇಲಾಖೆಗಳ ಸಹಯೋಗದೊಂದಿಗೆ, ಪ್ರತಿ ಗ್ರಾಮ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿ ಸಭೆಗಳಲ್ಲಿ ಬಾಲಕಾರ್ಮಿಕ ವಿಷಯವನ್ನು ಸೇರಿಸಿ, ಪ್ರತಿ ತಿಂಗಳು ಸಭೆ ನಡೆಸಬೇಕು.  ಇಂತಹ ಸಭೆಗೆ ಆಯಾ ಗ್ರಾಮದಲ್ಲಿನ ಶಾಲೆಗಳ ಮುಖ್ಯ ಶಿಕ್ಷಕರನ್ನು ಸಹ ಸೇರ್ಪಡೆಗೊಳಿಸಿಕೊಳ್ಳಬೇಕು.  ಜಿಲ್ಲೆಯಲ್ಲಿ ಮಾದರಿ ಬಾಲಕಾರ್ಮಿಕ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಸೂಕ್ತ ನಿವೇಶನ ಗುರುತಿಸಬೇಕು.  ಬಾಲಕಾರ್ಮಿಕ ಕಾಯ್ದೆ ಹಾಗೂ ಇತರೆ ಕಾಯ್ದೆಗಳಡಿ ಜಿಲ್ಲೆಯಲ್ಲಿ ಹಠಾತ್ ದಾಳಿ ಕಾರ್ಯವನ್ನು ನಿಯಮಿತವಾಗಿ ಕೈಗೊಂಡು, ಬಾಲಕಾರ್ಮಿಕರನ್ನು ಗುರುತಿಸುವ ಕಾರ್ಯ ನಿರಂತರವಾಗಿ ನಡೆಯಬೇಕು.  ಜಿಲ್ಲೆಯ ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕುಗಳಲ್ಲಿ ಬಾಲಕಾರ್ಮಿಕ ಅನಿಷ್ಠ ಪದ್ಧತಿ ಕುರಿತಂತೆ ಗ್ರಾಮೀಣ ಪ್ರದೇಶಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಆಯಾ ತಹಸಿಲ್ದಾರರ ಸಹಯೋಗದಲ್ಲಿ ಆಯೋಜಿಸಬೇಕು.  ಬಾಲಕಾರ್ಮಿಕರನ್ನು ಪತ್ತೆ ಹಚ್ಚುವುದು ಕೇವಲ ಬಾಲಕಾರ್ಮಿಕ ಯೋಜನಾ ಸಂಘ ಅಥವಾ ಕಾರ್ಮಿಕ ಇಲಾಖೆಯದ್ದು ಮಾತ್ರವಲ್ಲ, ಬಾಲಕಾರ್ಮಿಕ ಕಾಯ್ದೆ ಕಲಂ 17 ರ ಅಡಿಯಲ್ಲಿ ತಾಲೂಕು ಮತ್ತು ಗ್ರಾಮ ಮಟ್ಟದ ಒಟ್ಟು 11 ಅಧಿಕಾರಿಗಳನ್ನು ನಿರೀಕ್ಷಕರನ್ನಾಗಿ ಅಧಿಸೂಚಿಸಿ ಸರ್ಕಾರ ಆದೇಶ ಹೊರಡಿಸಿದೆ.  ಇಂತಹ ಅಧಿಕಾರಿಗಳು ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಜವಾಬ್ದಾರಿಯುತ ಕರ್ತವ್ಯವನ್ನು ತಪ್ಪದೆ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದರು.
     ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡರ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ಯಾಮರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ರೀದೇವಿ ಗದ್ದಿನಕೇರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

 

Thursday, 20 July 2017

ಹೆಚ್ಚಿನ ಶಬ್ದ ಹೊರಸೂಸುವ ಧ್ವನಿವರ್ಧಕಗಳ ನಿಷೇಧ : ಎಂ. ಕನಗವಲ್ಲಿ


ಕೊಪ್ಪಳ, ಜು. 20(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಹೆಚ್ಚಿನ ಶಬ್ದ ಹೊರಸೂಸುವ ಧ್ವನಿವರ್ಧಕಗಳನ್ನು 2017 ರ ಜುಲೈ 19 ರಿಂದ ಡಿಸೆಂಬರ್ 31 ರವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
    ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಕಳೆದ ಜು. 15 ರಂದು ಸಲ್ಲಿಸಿರುವ ಕೋರಿಕೆಯನ್ವಯ ಜಿಲ್ಲಾ ವ್ಯಾಪ್ತಿಯಲ್ಲಿ ಹೆಚ್ಚಿನ ಶಬ್ದ ಹೊರಸೂಸುವ ಧ್ವನಿವರ್ಧಕಗಳನ್ನು ನಿಷೇಧಿಸಲಾಗಿದೆ.  ಕೊಪ್ಪಳ ಜಿಲ್ಲೆಯಾದ್ಯಂತ ಯಾವುದೇ ಹಬ್ಬ, ರಾಷ್ಟ್ರೀಯ ಹಬ್ಬಗಳು, ಮೆರವಣಿಗೆ, ಸಮಾರಂಭ, ರಾಜಕೀಯ ನಾಯಕರುಗಳ ಕಾರ್ಯಕ್ರಮಗಳು ಸೇರಿದಂತೆ ಇತರೆ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಶಬ್ದ ಹೊರಸೂಸುವ ಧ್ವನಿವರ್ಧಕಗಳನ್ನು ಉಪಯೋಗಿಸುತ್ತಿರುವುದರಿಂದ, ಗರ್ಭಿಣಿಯರಿಗೆ, ನವಜಾತ ಶಿಶುಗಳಿಗೆ, ಬಾಣಂತಿಯರಿಗೆ, ವಯೋವೃದ್ಧರಿಗೆ, ಹೃದಯ ಸಂಬಂಧಿತ ಖಾಯಿಲೆ ಇರುವ ರೋಗಿಗಳಿಗೆ ಮತ್ತು ಅನಾರೋಗ್ಯದಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಸೇರಿದಂತೆ ಎಲ್ಲರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವುದಲ್ಲದೆ ಕೆಲವು ಸಂದರ್ಭಗಳಲ್ಲಿ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ಸಹಾ ವರದಿಯಾಗಿರುತ್ತವೆ.  ಹೆಚ್ಚಿನ ಶಬ್ದದ ಸೌಂಡ್ ಸಿಸ್ಟಮ್ ಹಚ್ಚುವುದರಿಂದ ವಿದ್ಯಾರ್ಥಿಗಳಲ್ಲಿ ಎಕಾಗ್ರತೆ ಕೊರತೆಯಾಗಿ ವಿದ್ಯಾಬ್ಯಾಸಕ್ಕೆ ತೊಂದರೆಯಾಗುತ್ತಿದ್ದು, ಹೃದಯ ಸಂಬಂಧಿತ ರೋಗಿಗಳಿಗೆ ಶಬ್ದ ಮಾಲಿನ್ಯದ ಸಮಸ್ಯೆ (ಹೈಡೆಸಿಬೆಲ್ ಎಫೆಕ್ಟ್) ಉಂಟಾಗಿ ಹೃದಯಗಳಲ್ಲಿ ಅಳವಡಿಸಿರುವ ಸಾಧನೆಗಳಿಗೆ ಧಕ್ಕೆಯಾಗುವ ಸಂಭವವಿರುತ್ತದೆ.  ಹಾಗೂ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತದೆ.  ಈ ಹಿಂದೆ ಗಂಗಾವತಿ ನಗರದಲ್ಲಿ  ಹೋಳಿ ಹಬ್ಬದ ಆಚರಣೆ ಸಮಯದಲ್ಲಿ ಹಾಗೂ ಪ್ರತಿ ವರ್ಷದ ಗಣೇಶ ಹಬ್ಬದ ಆಚರಣೆ ಸಮಯದಲ್ಲಿ ಕೊಪ್ಪಳ ಮತ್ತು ಗಂಗಾವತಿ ನಗರದಲ್ಲಿ ಡಿ.ಜೆ ಸೌಂಡ್ ಸಿಸ್ಟಮ್ ಹಾಕಿ ಉತ್ಸವ ಆಚರಿಸುವ ನೆಪದಲ್ಲಿ ಕಿಡಿಗೇಡಿಗಳು ಗಲಾಟೆ ಸೃಷ್ಟಿಸಿ, ಕಾನೂನು ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡಿದ ಘಟನೆಗಳು ಜರುಗಿವೆ.  ಡಿ.ಜೆ ಸಾಧನಗಳನ್ನು ಬಳಸುವುದರಿಂದ ಕಿವಿಯ ತಮಟೆಯ ಮೆಲೆ ದುಷ್ಪರಿಣಾಮ ಉಂಟಾಗಿ ಶ್ರವಣ ದೋಷ ಉಂಟಾಗುವ ಸಾಧ್ಯತೆಗಳು ಇರುತ್ತವೆ.  ಹಗಲು ವೇಳೆಯಲ್ಲಿ ಹೆಚ್ಚಿನ ಶಬ್ದವಿರುವ ಸಾಧನಗಳನ್ನು ಬಳಸುವುದರಿಂದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಸಂಭವವಿರುತ್ತದೆ.  ರಾತ್ರಿ ವೇಳೆಯಲ್ಲಿ ಶಬ್ದ ಸಾಧನಗಳನ್ನು ಬಳಸುವುದರಿಂದ ವೃದ್ಧರು/ ರೋಗಿಗಳು ನಿದ್ರಾಹೀನತೆ ಸಮಸ್ಯೆಯಿಂದ ಬಳಲುವ ಸಾಧ್ಯತೆ ಇರುತ್ತದೆ.  ಹೆಚ್ಚಿನ ಡೆಸಿಬಲ್ ಶಬ್ದವಿರುವ ಸೌಂಡ್ ಸಿಸ್ಟಮ್‍ನಿಂದ ವ್ಯಾಪ್ತಿ ಪ್ರದೇಶದ ನಿವಾಸಿಗರ ಮೇಲೆ ಕೌಟುಂಬಿಕ ಮತ್ತು ಮಾನಸಿಕ ನೆಮ್ಮದಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆಗಳು ಇರುವುದರಿಂದ, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಬ್ಬಗಳು ಹಾಗೂ ಇತರೆ ಹಬ್ಬಗಳು ಬರುತ್ತಿದ್ದು, ಹಬ್ಬಗಳ ಆಚರಣೆ ಸಮಯದಲ್ಲಿ ಕೋಮು ಸಾಮರಸ್ಯ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಹೆಚ್ಚಿನ ಶಬ್ದ ಹೊರಸೂಸುವ ಎಲ್ಲಾ ಧ್ವನಿವರ್ಧಕ ಸಾಧನಗಳ ಬಳಕೆಯನ್ನು ನಿಷೇಧಿಸುವ ಅವಶ್ಯಕತೆ ಇರುತ್ತದೆ.  ಈ ಅಂಶಗಳನ್ನು ಪರಿಗಣಿಸಿ, ಕರ್ನಾಟಕ ಪೊಲೀಸ್ ಅಧಿನಿಯಮ ಕಲಂ 36, ವೈಸ್ ಪಲುಷನ್ (ರೆಗುಲೇಷನ್ & ಕಂಟ್ರೋಲ್) ರೂಲ್ಸ್ 2000 & ಎನ್ವಿರೋನ್‍ಮೆಂಟ್ (ಪ್ರೋಟೆಕ್ಷನ್) ಯಾಕ್ಟ್ 1986ರಲ್ಲಿ ನಿಯಮಗಳನ್ನು ಪರಿಗಣಿಸಿ ಹೆಚ್ಚಿನ ಶಬ್ದ ಹೊರಸೂಸುವ ಎಲ್ಲಾ ಧ್ವನಿವರ್ಧಕ ಸಾಧನಗಳ ಬಳಕೆಯನ್ನು ಕೊಪ್ಪಳ ಜಿಲ್ಲಾ ವ್ಯಾಪ್ತಿ ಪ್ರದೇಶದಲ್ಲಿ ನಿಷೇಧಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿಲ್ಲಾಧಿಕಾರಿಗಳ ಕಚೇರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದರು. 
ಜಿಲ್ಲಾ ಪೊಲೀಸ್ ಅಧೀಕ್ಷರು ಸಲ್ಲಿಸಿದ ಮನವಿಯನ್ನು ಪರಿಶೀಲಿಸಿದ್ದು,  ಅವರ ಕೋರಿಕೆಯನ್ನು ಪರಿಗಣಿಸಿ, ರಾಷ್ಟ್ರೀಯ ಹಬ್ಬಗಳಂದು, ಕೋಮು ಸಾಮರಸ್ಯ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಹೆಚ್ಚಿನ ಶಬ್ದ ಹೊರಸೂಸುವ ಎಲ್ಲಾ ಧ್ವನಿವರ್ಧಕ ಸಾಧನಗಳ ಬಳಕೆಯನ್ನು ನಿಷೇಧಿಸುವುದು ಸೂಕ್ತವೆಂದು ಕಂಡುಬಂದಿದೆ. ಮಾನ್ಯ ಸರ್ವೋಚ್ಛ ನ್ಯಾಯಾಲಯವು ರಿಟ್ ಪಿಟಿಷನ್.72/1998 ರಲ್ಲಿ ದಿನಾಂಕ: 18-17-2005 ರಂದು ಆದೇಶ ಹೊರಡಿಸಿ ಎಷ್ಟು ಡೆಸಿಬಲ್ ಶಬ್ದ ಹೊರಸೂಸುವ ಸಾಧನಗಳನ್ನು ಅಳವಡಿಸಿಕೊಳ್ಳಬೇಕೆಂದು ತೀರ್ಪು ನೀಡಿದ್ದು, ತೀರ್ಪಿನಲ್ಲಿಯ ವಿಷಯ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಪ್ಪಳ ಇವರ ಪತ್ರದಲ್ಲಿ ಕಾಣಿಸಿರುವ ವಿಷಯಗಳನ್ನು ಗಮನಿಸಿ ಹೆಚ್ಚಿನ ಶಬ್ದ ಹೊರಸೂಸುವ ಧ್ವನಿವರ್ಧಕಗಳನ್ನು ಜಿಲ್ಲೆಯಾದ್ಯಂತ ನಿಷೇಧಿಸುವುದು ಸೂಕ್ತವೆಂದು ಕಂಡುಬಂದ ಪ್ರಯುಕ್ತ, ಕರ್ನಾಟಕ ಪೊಲೀಸ್ ಅಧಿನಿಯಮ ಕಲಂ 36, ನಾಯ್ಸ್ ಪಲ್ಯೂಷನ್ (ರೆಗುಲೇಷನ್ & ಕಂಟ್ರೋಲ್) ರೂಲ್ಸ್ 2000 & ಎನ್ವಿರೋನ್‍ಮೆಂಟ್ (ಪ್ರೊಟೆಕ್ಷನ್) ಆ್ಯಕ್ಟ್ 1986 ರನ್ವಯ ಆದೇಶವನ್ನು ಹೊರಡಿಸಲಾಗಿದೆ. 
ಕೊಪ್ಪಳ ಜಿಲ್ಲೆಯಾದ್ಯಂತ ಜಿಲ್ಲೆಯ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿ, ಆರೋಗ್ಯ ಹಾಗೂ ಪರಿಸರ ಮಾಲಿನ್ಯವನ್ನು ಕಾಪಾಡುವ ದೃಷ್ಟಿಯಿಂದ ಮೇಲೆ ವಿವರಿಸಿದ ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಹೆಚ್ಚಿನ ಶಬ್ದ ಹೊರಸೂಸುವ ಸಾಧನ ಸಲಕರಣೆಗಳನ್ನು ಉಪಯೋಗಿಸುವುದನ್ನು ದಿನಾಂಕ: 19-07-2017 ರಿಂದ 31-12-2017 ರವರೆಗೆ ನಿಷೇಧಿಸಲಾಗಿದೆ.  ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು  ಆದೇಶದಲ್ಲಿ ತಿಳಿಸಿದ್ದಾರೆ.

ತುಂಗಭದ್ರಾ: ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕಾರಗಳ ನೇಮಕ


ಕೊಪ್ಪಳ, ಜು. 20(ಕರ್ನಾಟಕ ವಾರ್ತೆ): ತಂಗಭದ್ರಾ ಜಲಾಶಯದ ಎಡದಂಡೆ ನಾಲೆಯಲ್ಲಿ ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಪೊಲೀಸ್, ಕಂದಾಯ ಹಾಗೂ ನೀರಾವರಿ ಇಲಾಖೆಯ ಸಿಬ್ಬಂದಿ/ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ. 
     ಉಪವಿಭಾಗಾಧಿಕಾರಿಗಳು, ಕೊಪ್ಪಳ ತಹಸಿಲ್ದಾರರು ಹಾಗೂ ಗಂಗಾವತಿ ತಹಸಿಲ್ದಾರರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ.
      ತುಂಗಭದ್ರಾ  ಜಲಾಶಯದಿಂದ ರಾಯಚೂರು ಜಿಲ್ಲೆಗೆ ಜನ/ ಜಾನುವಾರುಗಳಿಗೆ ಕುಡಿಯುವ ಸಲುವಾಗಿ ತಂಗಭದ್ರಾ ಎಡದಂಡೆ ನಾಲೆಗೆ ಜುಲೈ. 17 ರಿಂದ 27 ರವರೆಗೆ ಸುಮಾರು 1000 ಕ್ಯೂಸೆಕ್ಸ್ ನಂತೆ 10 ದಿನಗಳವರೆಗೆ ಮಾತ್ರ, ನೀರು ಹರಿಸಬೇಕಾಗಿರುತ್ತದೆ.  ಈ ಹಿನ್ನಲೆಯಲ್ಲಿ ನೀರು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ತುಂಗಭದ್ರಾ ಎಡದಂಡೆ ನಾಲೆಯಲ್ಲಿ ನೀರನ್ನು ರೈತರು ಅನಧಿಕೃತವಾಗಿ ಬಳಸದಂತೆ ಮತ್ತು ವಿತರಣಾ ಕಾಲುವೆಗಳ ಗೇಟಗಳನ್ನು ಆಪರೇಟ ಮಾಡದಂತೆ ಕಾರ್ಯ ನಿರ್ವಹಿಸಲು ಪೊಲೀಸ್ ಸಿಬ್ಬಂದಿಯನ್ನು ಹಾಗೂ ಕಂದಾಯ ಅಧಿಕಾರಿಗಳನ್ನು ತಂಗಭದ್ರಾ ಎಡದಂಡೆ ನಾಲೆಯ 0 ಮೈಲು ನಿಂದ 47 ರ ಮೈಲಿಗೆ ನಿಯೋಜಿಸಲು ಕೋರಿದ್ದು, ಈ ನಿಟ್ಟಿನಲ್ಲಿ ನೀರು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ತುಂಗಭದ್ರಾ ಎಡದಂಡೆ ನಾಲೆಯ 0 ಮೈಲು ನಿಂದ 47 ರವರೆಗೆ ಪೊಲೀಸ್, ಕಂದಾಯ ಹಾಗೂ ನೀರಾವರಿ ಇಲಾಖೆಯ ಸಿಬ್ಬಂದಿ/ ಅಧಿಕಾರಿಗಳನ್ನು ನೇಮಿಸಲಾಗಿದೆ.  ಮೈಲ್ 0 ರಿಂದ 16 ರವರೆಗೆ ಕೊಪ್ಪಳ ತಹಸಿಲ್ದಾರರ ನೇತೃತ್ವದ ತಂಡ.  ಮೈಲ್ 17 ರಿಂದ 25 ರವರೆಗೆ ಗಂಗಾವತಿ ತಹಸಿಲ್ದಾರರ ನೇತೃತ್ವದ ತಂಡ ಹಾಗೂ ಮೈಲ್ 26 ರಿಂದ 32 ರವರೆಗೆ ಉಪವಿಭಾಗಾಧಿಕಾರಿಗಳ ನೇತೃತ್ವದ ತಂಡ ಕಾರ್ಯ ನಿರ್ವಹಿಸಲಿದೆ.
    ನಿಯೋಜಿಸಲಾಗಿರುವ ಅಧಿಕಾರಿ, ಸಿಬ್ಬಂದಿಗಳು, ನೀರಾವರಿ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಜೆಸ್ಕಾಂ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಪ್ರತಿದಿನ ಕಾಲುವೆಯ ಎಡಭಾಗದಲ್ಲಿ ತಪ್ಪದೇ ಗಸ್ತು ಹಾಕಬೇಕು.  ಅನಧಿಕೃತವಾಗಿ ನೀರಿನ ಪೈಪುಗಳನ್ನು ಮತ್ತು ಪಂಪ್‍ಸೆಟ್‍ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು.  ತುಂಗಭದ್ರಾ ಎಡದಂಡೆ ಕಾಲುವೆಯ ಎಡಭಾಗದಿಂದ ಸುಮಾರು 100 ಮೀಟರ್ ಅಂತರದಲ್ಲಿರುವ ಎಲ್ಲಾ ಮೊಟರ್ ಹಾಗೂ ಪಂಪಸೆಟ್‍ಗಳ ವಿದ್ಯುತ್ ಸರಬರಾಜುನ್ನು ಜೆಸ್ಕಾಂ ಇಲಾಖೆಯವರು ತಕ್ಷಣವೇ ಕಡಿತಗೊಳಿಸಬೇಕು.  ತುಂಗಭದ್ರಾ ಎಡದಂಡೆ ಕಾಲುವೆಯ ನೀರನ್ನು ಅನಧಿಕೃತವಾಗಿ ಸಂಗ್ರಹಿಸಿ ಆ ನೀರನ್ನು ಪಂಪ್‍ಸೆಟ್‍ಗಳ ಮೂಲಕ ಸರಬರಾಜು ಮಾಡುತ್ತಿರುವುದನ್ನು ತೆರವುಗೊಳಿಸಬೇಕು.  ಪ್ರಥಮವಾಗಿ ಮುಖ್ಯ ಕಾಲುವೆಯಲ್ಲಿ ಹಾಗೂ ಉಪ ಕಾಲುವೆಯಲ್ಲಿ ಅನಧೀಕೃತವಾಗಿ ಉಪಯೋಗಿಸುತ್ತಿರುವ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಬೇಕು. 
    ತಂಗಭದ್ರಾ ಜಲಾಶದ ಎಡದಂಡೆ ನಾಲೆಯಲ್ಲಿ ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಪೊಲೀಸ್, ಕಂದಾಯ ಹಾಗೂ ನೀರಾವರಿ ಇಲಾಖೆಯ ಸಿಬ್ಬಂದಿ/ ಅಧಿಕಾರಿಗಳನ್ನು ನಿಯೋಜಿಸಿದ ತಂಡದವರು ತಮಗೆ ವಹಿಸಲಾದ ಸರಹದ್ದಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಲು ಹಾಗೂ ಇದರಲ್ಲಿ ಯಾವುದೇ ರೀತಿಯ ನಿರ್ಲಕ್ಷತನವನ್ನು ತೋರಿದಲ್ಲಿ ಅಂತಹವರ ವಿರುದ್ಧ ಶಿಸ್ತಿನ ಕ್ರಮಕ್ಕಾಗಿ ಸರಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ : ಅರ್ಜಿ ಆಹ್ವಾನ


ಕೊಪ್ಪಳ, ಜು. 20(ಕರ್ನಾಟಕ ವಾರ್ತೆ): ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗಾಗಿ ಅಸಾಧಾರಣ ಧೈರ್ಯ ಸಾಹಸ ಪ್ರದರ್ಶಿಸಿದ ಬಾಲಕರಿಗೆ ಹೊಯ್ಸಳ ಪ್ರಶಸ್ತಿ ಹಾಗೂ ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
       ಜಿಲ್ಲೆಯ 05 ರಿಂದ 18 ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಇತರರ ಪ್ರಾಣ ರಕ್ಷಣೆಗಾಗಿ ಅಸಾಧಾರಣ ಧೈರ್ಯ ಸಾಹಸ ಪ್ರದರ್ಶಿಸಿದ  ಬಾಲಕರಿಗೆ ಹೊಯ್ಸಳ ಪ್ರಶಸ್ತಿ ಹಾಗೂ ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಲು ಉದ್ದೇಶಿಸಿದೆ.  ಕಲೆ, ಸಾಂಸ್ಕøತಿಕ, ಕ್ರೀಡೆ, ಸಮಾಜ ಸೇವೆ, ಸಂಗೀತ, ನಾವಿನ್ಯತೆ (ಇನ್ನೊವೇಷನ್), ತಾರ್ಕಿಕ (ಸ್ಕೋಲಾಸ್ಟಿಕ್) ಸಾಧನೆ ಮಾಡಿದ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ. 
    ಅರ್ಜಿ ಸಲ್ಲಿಸಲು ಸಾಧನೆ ಮಾಡಿದ ಪ್ರಕರಣ, ಆಗಸ್ಟ್-2016 ರಿಂದ ಪ್ರಸಕ್ತ ಸಾಲಿನ ಜುಲೈ ತಿಂಗಳ ಒಳಗೆ ನಡೆದಿರಬೇಕು.  ಪ್ರಶಸ್ತಿಗಾಗಿ ಜಿಲ್ಲಾ ಮಟ್ಟದ ಪ್ರತಿಭೆಯನ್ನು ಗುರುತಿಸಿರಬೇಕು.  ಈ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡ ಪ್ರಕಟಣೆಯ ತುಣುಕುಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.  ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಉಪ ನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಪತ್ರಾಂಕಿತ ಅಧಿಕಾರಿಗಳಿಂದ ಧೃಢೀಕರಿಸಿ ಆಗಸ್ಟ್. 05 ರೊಳಗಾಗಿ ಸಲ್ಲಿಸಬೇಕು ಎಂದು ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತ ಸಾರಥಿ ಯೋಜನೆ : ಚಾಲನಾ ಅನುಜ್ಞಾ ಪತ್ರ ಪಡೆದುಕೊಳ್ಳಲು ಅವಕಾಶ


ಕೊಪ್ಪಳ, ಜು. 20 (ಕರ್ನಾಟಕ ವಾರ್ತೆ): ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ರೈತ ಸಾರಥಿ ಯೋಜನೆಯಡಿ ಕೃಷಿ ಬಳಕೆ ಟ್ರ್ಯಾಕ್ಟರ್-ಟ್ರೇಲರ್ ಹೊಂದಿರುವ ರೈತರಿಗೆ ಚಾಲನಾ ತರಬೇತಿ ನೀಡಿ, ಚಾಲನಾ ಅನುಜ್ಞಾ ಪತ್ರ ನೀಡುವ ಯೋಜನೆಯನ್ನು ಜಾರಿಗೊಳಿಸಿದ್ದು, ಆಸಕ್ತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ. ನೂರ ಮಹ್ಮದ ಬಾಷಾ ತಿಳಿಸಿದ್ದಾರೆ.
     ರೈತ ಸಾರಥಿ ಯೋಜನೆಯು ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್‍ನಲ್ಲಿ ಘೋಷಿಸಿರುವ ಯೋಜನೆಯಾಗಿದ್ದು, ಕೃಷಿ ಬಳಕೆ ಟ್ರ್ಯಾಕ್ಟರ್-ಟ್ರೇಲರ್ ಹೊಂದಿರುವ ರೈತರು ಈ ಯೋಜನೆಯ ಸವಲತ್ತು ಪಡೆಯಬಹುದಾಗಿದೆ.  ಕೊಪ್ಪಳ ಜಿಲ್ಲೆಗೆ ಈ ವರ್ಷ 760 ರೈತರಿಗೆ ಟ್ರ್ಯಾಕ್ಟರ್-ಟ್ರೇಲರ್ ಚಾಲನೆ ತರಬೇತಿ ನೀಡಿ, ಚಾಲನಾ ಅನುಜ್ಞಾ ಪತ್ರ ನೀಡುವ ಗುರಿಯನ್ನು ನಿಗದಿಪಡಿಸಲಾಗಿದೆ. 
      ಮೋಟಾರ ವಾಹನ ಕಾಯ್ದೆ 1988 ಮತ್ತು ಅದರಡಿ ರಚಿತವಾದ ನಿಯಮಗಳ ಮೇರೆಗೆ ಅಧಿಕೃತ ಲೈಸೆನ್ಸ್ ಪಡೆದು ಸ್ಥಾಪಿತವಾಗಿರುವ ಚಾಲನಾ ತರಬೇತಿ ಶಾಲೆ/ ಸಂಸ್ಥೆಗಳಿಂದ ತರಬೇತಿ ನೀಡಲು ಸರ್ಕಾರದಿಂದ ಪ್ರತಿ ಅಭ್ಯರ್ಥಿಗೆ 500 ರೂ. ಗಳನ್ನು ತರಬೇತಿ ಶಾಲೆಗೆ ಪಾವತಿಸಲಿದೆ.  ಚಾಲನಾ ತರಬೇತಿ ಪಡೆದು ಚಾಲನಾ ಅನುಜ್ಞಾ ಪತ್ರ ಪಡೆಯಲು ಸರ್ಕಾರ ನಿಗದಿ ಪಡಿಸಿರುವ ಅವಶ್ಯಕ ಶುಲ್ಕವನ್ನು ಅಭ್ಯರ್ಥಿಗಳೇ ಪಾವತಿಸಬೇಕು.
ಕೊಪ್ಪಳ ಪ್ರಾದೇಶಿಕ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೃಷಿ ಬಳಕೆ ಟ್ರ್ಯಾಕ್ಟರ್-ಟ್ರೈಲರ್ ಹೊಂದಿರುವ ರೈತ ಮಾಲೀಕರು/ ಅವರ ಕುಟುಂಬದ ಸದಸ್ಯರು/ ಟ್ರ್ಯಾಕ್ಟರ್-ಟ್ರೈಲರ್ ಚಲಾಯಿಸಲು ನೇಮಿಸಿಕೊಂಡಿರುವ ಚಾಲಕರುಗಳು ಚಾಲನಾ ಅನುಜ್ಞಾ ಪತ್ರ ಪಡೆದುಕೊಳ್ಳಲು ಅವಕಾಶವಿದ್ದು, ಅನುಜ್ಞಾ ಪತ್ರ ಪಡೆಯಲಿಚ್ಛಿಸುವ ರೈತಭಾಂದವರು ಕೊಪ್ಪಳ ಪ್ರಾದೇಶಿಕ ಸಾರಿಗೆ ಸಂಸ್ಥೆ ಕಛೇರಿಗೆ ಆಗಸ್ಟ್. 16 ರೊಳಗಾಗಿ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಇಡೀ ಜಗತ್ತು ಅಂಬೇಡ್ಕರ್ ಅವರ ಜ್ಞಾನವನ್ನು ಅಪ್ಪಿಕೊಂಡಿದೆ- ಡಾ. ಲಿಂಗಣ್ಣ


ಕೊಪ್ಪಳ  ಜು. 20 (ಕ.ವಾ): ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಭೆ ಮತ್ತು ಜ್ಞಾನಕ್ಕೆ ಹಲವು ಮುಖಗಳಿದ್ದು, ಇಡೀ ಜಗತ್ತು ಅಂಬೇಡ್ಕರ್ ಅವರ ಜ್ಞಾನವನ್ನು ಅಪ್ಪಿಕೊಂಡಿದ್ದರಿಂದಲೇ ಅವರು ವಿಶ್ವ ರತ್ನ ಅಂಬೇಡ್ಕರ್ ಎನಿಸಿಕೊಂಡಿದ್ದಾರೆ ಎಂದು ಬಳ್ಳಾರಿ ತಾಲೂಕು ಎಮ್ಮಿಗನೂರು ಸರ್ಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ, ಗಂಗಾವತಿಯ ಡಾ. ಲಿಂಗಣ್ಣ ಜಂಗಮರಹಳ್ಳಿ ಅವರು ಹೇಳಿದರು.

     ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಡಾ. ಅಂಬೇಡ್ಕರ್ ಅವರ 126 ನೇ ಜನ್ಮ ವರ್ಷಾಚರಣೆ ಅಂಗವಾಗಿ ನಗರದ ಶಾದಿ ಮಹಲ್ ನಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ  ‘ತಮಗಿದೋ ನಮ್ಮ ಗೌರವ ನಮನ’ ಕಾರ್ಯಕ್ರಮದಡಿ ಶಿಕ್ಷಣ-ಸಂಘಟನೆ-ಹೋರಾಟದ ‘ಮೂರು ನುಡಿ-ನೂರು ದುಡಿ’ ನುಡಿನಮನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.


     ಡಾ. ಅಂಬೇಡ್ಕರ್ ಅವರ ಹೋರಾಟದ ಫಲವನ್ನು ಎಲ್ಲ ದಲಿತರು, ಮಹಿಳೆಯರು ಅನುಭವಿಸುತ್ತಿದ್ದೇವೆ.  ಪ್ರಬುದ್ಧ ಭಾರತ ದೇಶದ ನಿರ್ಮಾಣಕ್ಕೆ ಶಿಕ್ಷಣ-ಹೋರಾಟ-ಸಂಘಟನೆ ಈ ಮೂರು ನುಡಿಗಳ ವ್ಯಾಖ್ಯಾನವನ್ನು ಕಲಿಸಿಕೊಟ್ಟರು.  ಶಿಕ್ಷಣ ಎಂದರೆ ಕೇವಲ ವೇದ-ಉಪನಿಷತ್ತುಗಳ ಅಧ್ಯಯನವಲ್ಲ, ಬದಲಿಗೆ ಎಲ್ಲರೂ ಸಮಾನರಾಗಿ ಬದುಕಲು ಕಲಿಯುವುದು ಮತ್ತು ಕಲಿಸುವುದು ನಿಜವಾದ ಶಿಕ್ಷಣ ಎಂದು ತೋರಿಸಿಕೊಟ್ಟರು.  ದೇಶದಲ್ಲಿ ನಿಜವಾದ ಪ್ರಜೆಗಳು, ನಾಗರೀಕರಾಗಬೇಕು ಎಂದರೆ, ಎಲ್ಲರೂ ಅಂಬೇಡ್ಕರ್ ಅವರನ್ನು ಹೃದಯದಲ್ಲಿ, ಮನಸ್ಸಿನಲ್ಲಿಟ್ಟು ಪೂಜಿಸಬೇಕು.  ಕೆಲವರು ಅಂಬೇಡ್ಕರ್ ಅವರ ಹೆಸಿನಲ್ಲಿ ತಮ್ಮ ಹೊಟ್ಟೆಪಾಡಿನ ಜೀವನ ನಡೆಸಿಕೊಳ್ಳುತ್ತಿದ್ದಾರೆ.  ಅವರನ್ನು, ದಲಿತ ಮೀಸಲಾತಿಗೆ ಮಾತ್ರ ಸೀಮಿತಗೊಳಿಸುತ್ತಿದ್ದಾರೆ.  ಆದರೆ ಇದು ತಪ್ಪು, ಅಂಬೇಡ್ಕರ್ ಅವರು ಇಡೀ ಜಗತ್ತಿಗೆ ಸಲ್ಲಬೇಕಾದವರು, ಅವರು ಕೇವಲ ಒಂದು ಜಾತಿ, ಸಮುದಾಯಕ್ಕೆ ಸೀಮಿತರಲ್ಲ.  ಪಂಚಭೂತ ಸಂಪನ್ಮೂಲಗಳನ್ನು ಸಮಾನವಾಗಿ ಪಡೆಯುವ ಹಕ್ಕು ದೇಶದ ಎಲ್ಲ ಜನರಿಗೂ ಇದೆ ಎಂಬುದನ್ನು ಮೊಟ್ಟ ಮೊದಲ ಬಾರಿಗೆ ಹಕ್ಕು ಪ್ರತಿಪಾದನೆ ಮಾಡಿದವರು ಅಂಬೇಡ್ಕರ್ ಅವರು.  ಅಂಬೇಡ್ಕರ್ ಅವರ ಅಗಾಧ ಪ್ರತಿಭೆ, ಜ್ಞಾನದಿಂದಾಗಿಯೇ ಇಡೀ ಜಗತ್ತು ಅವರನ್ನು ಅಪ್ಪಿಕೊಂಡಿದೆ.  ಅಂತಹ ಮಹಾ ಜ್ಞಾನಿ ಅಂಬೇಡ್ಕರ್ ಅವರ ಕುರಿತ ಪುಸ್ತಕಗಳನ್ನು ಇಂದಿನ ಯುವಪೀಳಿಗೆ ಓದಬೇಕು.  ಅಂದಾಗ ಮಾತ್ರ ಭವಿಷ್ಯದ ಭಾರತ ಜಾತಿ ವ್ಯವಸ್ಥೆಯಿಂದ ಮುಕ್ತವಾಗಲು ಸಾಧ್ಯ ಎಂದು ಡಾ. ಲಿಂಗಣ್ಣ ಅಭಿಪ್ರಾಯಪಟ್ಟರು.   
     ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ನೆರವೇರಿಸಿದರು.  ಪ್ರೊಬೆಷನರಿ ಐಎಎಸ್ ಅಧಿಕಾರಿ ಪ್ರಾವಿಣ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ತುಕಾರಾಂರಾವ್, ಗಣ್ಯರಾದ ಡಾ. ಜ್ಞಾನಸುಂದರ್, ಭರಮಪ್ಪ ಬೆಲ್ಲದ, ಪ್ರಕಾಶ್ ಉಪಸ್ಥಿತರಿದ್ದರು.  ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚಿದಾನಂದ್ ಸ್ವಾಗತಿಸಿದರು.  ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಸುಮಾರು 50 ಕಲಾವಿದರು ಏಕಕಾಲಕ್ಕೆ ವೇದಿಕೆ ಮೇಲೆ ಪ್ರಸ್ತುತಪಡಿಸಿದ ಹಲಗೆ ವಾದನ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎನಿಸಿತು.  ಕುಣಿಕೇರಿ ತಾಂಡಾದ ಜಂಬಣ್ಣ ಹಾಗೂ ಸಂಗಡಿಗರು ನಗಾರಿ ವಾದ್ಯದೊಂದಿಗೆ ಲಂಬಾಣಿ ಹಾಡುಗಳು, ಮುದುಕವ್ವ ತಂಡದಿಂದ ಗೀಗೀ ಪದ ಕಾರ್ಯಕ್ರಮ ನಡೆಸಲಾಯಿತು.   ಕೊಪ್ಪಳದ ಮಂಜುನಾಥ ದೊಡ್ಡಮನಿ ಹಾಗೂ ಸಂಗಡಿಗರಿಂದ ಪ್ರಗತಿಪರ ಹಾಡುಗಳು, ಕುಷ್ಟಗಿಯ ಶರಣಪ್ಪ ವಡಿಗೇರಿ ಅವರಿಂದ ಹೋರಾಟದ ಹಾಡುಗಳು ಪ್ರಸ್ತುತಗೊಂಡವು.  ಒಟ್ಟಾರೆ ಜಿಲ್ಲೆಯ 150 ಕಲಾವಿದರಿಂದ ನಡೆಸಿದ ವಿವಿಧ ಚರ್ಮವಾದ್ಯ ಮೇಳ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

Wednesday, 19 July 2017

ಅಲೆಮಾರಿ ಜನಾಂಗದ ಗರ್ಭಿಣಿಯರಿಗೆ ಪೂರಕ ಪೌಷ್ಠಿಕ ಆಹಾರ ಕಿಟ್ ವಿತರಣೆ


ಕೊಪ್ಪಳ ಜು. 19 (ಕರ್ನಾಟಕ ವಾರ್ತೆ):  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕೊಪ್ಪಳ ತಾಲೂಕು ಗಿಣಿಗೇರಾ ಗ್ರಾಮದ ಬೈಪಾಸ್ ರಸ್ತೆಯಲ್ಲಿ ಟೆಂಟ್‍ಗಳಲ್ಲಿ ವಾಸವಿರುವ ಹೊರ ರಾಜ್ಯದ ಅಲೆಮಾರಿ ಜನಾಂಗ ಕುಟುಂಬದ ಗರ್ಭಿಣಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಪೂರಕ ಪೌಷ್ಠಿಕ ಆಹಾರದ ಕಿಟ್ ವಿತರಣೆ ಮಾಡಲಾಯಿತು.
       ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳದಿಂದ ಅಲೆಮಾರಿ ಜನಾಂಗ ಗರ್ಭಿಣಿ ತಾಯಂದಿರಿಗೆ ಮತ್ತು ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮವನ್ನು ಬುಧವಾರದಂದು ಆಯೋಜಿಸಲಾಯಿತು.    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ ಅವರು ಪೌಷ್ಠಿಕ ಆಹಾರ ಕಿಟ್ ವಿತರಣೆ ಮಾಡಿ ಮಾತನಾಡಿದರು.  ಗಿಣಿಗೇರ ಗ್ರಾಮದಲ್ಲಿ ವಾಸವಾಗಿರುವ ಹೊರ ರಾಜ್ಯದಿಂದ ಬಂದಂತಹ ಅಲೆಮಾರಿ ಜನಾಂಗ ಕುಟುಂಬದ ಗರ್ಭಿಣಿ ಮಹಿಳೆಯರಿಗೆ ಮತ್ತು 6 ವರ್ಷದೊಳಗಿನ ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆ ಮಾಡುವ ಕುರಿತು ಗಿಣಿಗೇರ ಗ್ರಾಮದ ಬೈ ಪಾಸ್ ರಸ್ತೆಯಲ್ಲಿ ಟೆಂಟ್‍ಗಳಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗದ ಕುಟುಂಬಗಳನ್ನು ಸಮೀಕ್ಷೆ ನಡೆಸಲಾಗಿದ್ದು ಇದರಲ್ಲಿ ಒಟ್ಟು 53 ಕುಟುಂಬಗಳಿವೆ. ಇದರಲ್ಲಿ ಗರ್ಭಿಣಿಯರು 7 ಜನ ಮತ್ತು ಬಾಣಂತಿಯರು 3 ಜನ, ಇದರಲ್ಲಿ 0-3 ವರ್ಷದೊಳಗಿನ ಮಕ್ಕಳ ಸಂಖ್ಯೆ 21 ಮತ್ತು 03 ರಿಂದ 6 ವರ್ಷದೊಳಗಿನ ಮಕ್ಕಳ ಸಂಖ್ಯೆ 22.  ಈ ಎಲ್ಲ ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳು ಪೌಷ್ಠಿಕ ಆಹಾರ ಸೇವಿಸಿ ಸದೃಢವಾಗಿ ಬೆಳೆÉಯಲು ಪೌಷ್ಠಿಕ ಆಹಾರವನ್ನು ಇಲಾಖೆ ವತಿಯಿಂದ ವಿತರಿಸುತ್ತಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
  ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಾಲಪ್ಪ ಡಿ ಕಂದಳ್ಳಿ ಮಾತನಾಡಿ ಕರ್ನಾಟಕದಲ್ಲಿ ವಾಸವಾಗಿರುವ ಮಕ್ಕಳು ಯಾರೇ ಆಗಿರಲಿ ಕರ್ನಾಟಕದವರೇ ಆಗಿರಲಿ ಅಥವಾ ಹೊರ ರಾಜ್ಯದಿಂದ ಬಂದಂತಹ ಮಕ್ಕಳೇ ಆಗಿರಲಿ ಎಲ್ಲಾ ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗುವಂತಾಗಬೇಕು ಮತ್ತು ಮಕ್ಕಳು ಸದೃಢವಾಗಿ ಬೆಳೆಯಬೇಕು ಎಂಬುದು ಇಲಾಖೆಯ ಆಶಯವಾಗಿದೆ ಎಂದರು. 
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿ ಬಡಿಗೇರ ಮಾತನಾಡಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಪೊಲೀಸ್ ಇಲಾಖೆಯಿಂದ ಅಲೇಮಾರಿ ಜನಾಂಗದ ಮಕ್ಕಳ ಶಿಕ್ಷಣದ ಕುರಿತು ಸ್ಥಳ ಭೇಟಿ ಪರಿಶೀಲನೆ ನಡೆಸಲಾಗಿದೆ.  ಅಂತಹ ಮಕ್ಕಳ ಶಿಕ್ಷಣ ಸಲುವಾಗಿ ಟೆಂಟ್ ಶಾಲೆಯನ್ನು ಪ್ರಾರಂಭಿಸಲು ನಿರ್ಧರಿಸಿ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.  ಶಿಕ್ಷಣ ಇಲಾಖೆಯಿಂದ ಟೆಂಟ್ ಶಾಲೆ ಪ್ರಾರಂಭವಾದ ನಂತರ ಎಲ್ಲ ಮಕ್ಕಳಿಗೆ ಶಿಕ್ಷಣ ನೀಡಲಾಗುವುದು ಎಂದರು.
ಮೇಲ್ವಿಚಾರಕಿ ರೆಹಮತ್ ಬಿ ಪ್ರಾಸ್ಥಾವಿಕ ಮಾತನಾಡಿದರು, ಪ್ರಾಥಮಿಕ ಆರೋಗ್ಯ ಕೇಂದ್ರದ ಶ್ರೀಧರ್, ಅಂಗನವಾಡಿ ಕಾರ್ಯಕರ್ತೆಯರಾದ ಯಮನಕ್ಕ, ಪುಷ್ಪಾ, ಜ್ಯೋತಿ, ಮಂಜುಳಾ, ಯಲ್ಲಮ್ಮ ಹಾಜರಿದ್ದರು.  ದೇವರಾಜ ಕಿನ್ನಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಖಾಸಗಿ ಸೆಂಟರ್‍ಗಳಲ್ಲಿ ಬಡವರಿಗೆ ಉಚಿತ ಸ್ಕ್ಯಾನಿಂಗ್ ವ್ಯವಸ್ಥೆ : ಡಾ. ರಾಮಕೃಷ್ಣ . ಹೆಚ್


ಕೊಪ್ಪಳ, ಜು. 19(ಕರ್ನಾಟಕ ವಾರ್ತೆ): ಸರ್ಕಾರಿ ವೈದ್ಯಾಧಿಕಾರಿಗಳ ಶಿಫಾರಸು ಆಧಾರದಲ್ಲಿ ಬಡ ಮಹಿಳೆಯರಿಗೆ ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ಜನನಿ ಶಿಶು ಸುರಕ್ಷಾ ಯೋಜನೆಯಡಿ ಉಚಿತವಾಗಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವಂತಹ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದೆ.  ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ನವರು ಸಹಕಾರ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹೆಚ್. ಅವರು ಹೇಳಿದರು. 
    ಹೆಣ್ಣು ಭ್ರೂಣ ಹತ್ಯೆ ತಡೆ ಕಾಯ್ದೆಯಡಿ ಪಿ.ಪಿ. & ಪಿ.ಎನ್.ಡಿ.ಟಿ -1995ರ ಕಾಯ್ದೆಯಡಿ ಬುಧವಾರದಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಛೇರಿಯಲ್ಲಿ ಜರುಗಿದ ಕೊಪ್ಪಳ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ರೋಗಿಗಳಿಗೆ ಯಾವುದೇ ಸ್ಕ್ಯಾನಿಂಗ್‍ಗಳಿಗಾಗಿ ಕನಿಷ್ಠ 500 ರೂ.ಗಳನ್ನು ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ಗಳು ಪಡೆಯುತ್ತಿದ್ದು, ಬಡ ಕುಟುಂಬದವರಿಗೆ ಈ ಹಣ ಭರಿಸುವುದು ಕಷ್ಟಕರ.  ಅರ್ಹ ಬಡ ಕುಟುಂಬದ ಫಲಾನುಭವಿಗಳ ಹಿತದೃಷ್ಠಿಯಿಂದ ಅಂತಹ ಬಡ ರೋಗಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜನನಿ ಶಿಶು ಸುರಕ್ಷಾ ಯೋಜನೆಯಡಿ ಲಭ್ಯವಿರುವ ಅನುದಾನವನ್ನು ಬಳಸಿಕೊಂಡು, ಬಡ ಕುಟುಂಬಗಳ ರೋಗಿಗಳಿಗೆ ಉಚಿತವಾಗಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.  ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆ ಕಾಯ್ದೆಯಡಿ ಪಿ.ಪಿ. & ಪಿ.ಎನ್.ಡಿ.ಟಿ -1995ರ ಕಾಯ್ದೆಯಡಿ ಎಲ್ಲ ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ಗಳು ಆರೋಗ್ಯ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ.  ಈ ರೀತಿ ನೋಂದಣಿಯಾಗಿರುವ ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ಗಳೊಂದಿಗೆ ಆರೋಗ್ಯ ಇಲಾಖೆಯು ಒಡಂಬಡಿಕೆ ಮಾಡಿಕೊಂಡು,  ಸರ್ಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು, ರೋಗಿಗಳಿಗೆ ಎಂ.ಐ., ಇ.ಎನ್.ಸಿ. ಮುಂತಾದ ಸ್ಕ್ಯಾನಿಂಗ್‍ಗಾಗಿ ಶಿಫಾರಸು ಮಾಡಿದ ಸಂದರ್ಭದಲ್ಲಿ, ಅಂತಹ ಪತ್ರದ ಆಧಾರದಲ್ಲಿ ಬಡ ರೋಗಿಗಳಿಂದ ಯಾವುದೇ ಹಣ ಪಡೆಯದೆ, ಉಚಿತವಾಗಿ ಸ್ಕ್ಯಾನಿಂಗ್ ಮಾಡಿಕೊಡಬೇಕು.  ಆರೋಗ್ಯ ಇಲಾಖೆಯು ಇಂತಹ ಪ್ರತಿ ಸ್ಕ್ಯಾನಿಂಗ್‍ಗೆ 360 ರೂ.ಗಳನ್ನು ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ನವರಿಗೆ ಪಾವತಿಸಲಿದೆ.  ಹೀಗಾಗಿ ರೋಗಿಗಳಿಗೆ ಉಚಿತವಾಗಿ ಸ್ಕ್ಯಾನಿಂಗ್ ಸೇವೆ ನೀಡಿದಂತಾಗಲಿದೆ.  ಜಿಲ್ಲೆಯ ಎಲ್ಲ ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಇಲಾಖೆಯೊಂದಿಗೆ ವೈದ್ಯರು ಸಹಕರಿಸಿ,  ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
    ಜಿಲ್ಲಾ ಮಟ್ಟದ ಸಲಹ ಸಮಿತಿಯ ಅಧ್ಯಕ್ಷರು ಹಾಗೂ ಕಾರಟಗಿ ಸರಕಾರಿ ಆರೋಗ್ಯ ಕೇಂದ್ರದ ಮಕ್ಕಳ ತಜ್ಞರಾದ ಡಾ. ಶರಣಪ್ಪ ಚಕೋತಿ, ಸಮಿತಿಯ ಸದಸ್ಯರುಗಳಾದ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಅಲಕಾನಂದಾ ಮಳಗಿ, ವಕೀಲರಾದ ಎ.ಕೆ. ಪಾಟೀಲ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಜಂಬಯ್ಯ ಉಪಸ್ಥಿತರಿದ್ದರು.  

ಖಾಲಿ ಇರುವ ಭೋದಕ ಹುದ್ದೆಗಳಿಗೆ ನಿವೃತ್ತ/ ಅತಿಥಿ ಶಿಕ್ಷರಿಂದ ಅರ್ಜಿ ಆಹ್ವಾನ


ಕೊಪ್ಪಳ, ಜು. 19(ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ನಡೆಯುವ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಹಾಗೂ ಗಂಗಾವತಿ ತಾಲೂಕಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜುಗಳಲ್ಲಿ ಖಾಲಿ ಇರುವ ಭೋದಕರ ಹುದ್ದೆಗಳಿಗೆ ನಿವೃತ್ತ/ ಅತಿಥಿ ಉಪನ್ಯಾಸಕರಿಂದ ಅರ್ಜಿ ಆಹ್ವಾನಿಸಲಾಗಿದೆ. 
    ಖಾಲಿ ಇರುವ ಹುದ್ದೆಗಳ ವಿವರ ಇಂತಿದೆ, ಎಂ.ಎ ಬಿ.ಇಡಿ ಪದವಿಧರ ಕನ್ನಡ ಶಿಕ್ಷಕರು - 02, ಎಂ.ಎ, ಬಿ.ಇಡಿ ಪದವಿಧರ ಹಿಂದಿ ಶಿಕ್ಷಕರು – 02, ಎಂ.ಎ, ಬಿ.ಇಡಿ ಪದವಿಧರ ಆಂಗ್ಲ ಶಿಕ್ಷಕರು – 02, ಎಂ.ಎಸ್.ಇ ಬಿ.ಇಡಿ. ಪದವಿಧರ ಭೌತಶಾಸ್ತ್ರ (ಫಿಜಿಕ್ಸ್) ಶಿಕ್ಷಕರು – 02, ಎಂ.ಎಸ್‍ಸಿ ಬಿ.ಇಡಿ. ಪದವಿಧರ ರಸಯನಶಾಸ್ತ್ರ (ಕೆಮೆಸ್ಟ್ರೀ) ಶಿಕ್ಷಕರು – 02,  ಎಂ.ಎಸ್.ಇ ಬಿ.ಇಡಿ. ಪದವಿಧರ ಜೀವಶಾಸ್ತ್ರ (ಬಯೊಲೋಜಿ - ಜಿಯೊಲೋಜಿ & ಬಾಟ್ನಿ) ಶಿಕ್ಷಕರು – 02, ಎಂ.ಎಸ್.ಇ ಬಿ.ಇಡಿ. ಪದವಿಧರ ಗಣಿತ ಶಿಕ್ಷಕರು – 02, ಎಂ.ಎ, ಬಿ.ಇಡಿ ಪದವಿಧರ ಇತಿಹಾಸ ಶಿಕ್ಷಕರು – 02, ಎಂ.ಎ, ಬಿ.ಇಡಿ ಪದವಿಧರ ಅರ್ಥಶಾಸ್ತ್ರ ಶಿಕ್ಷಕರು – 02, ಎಂ.ಎ, ಬಿ.ಇಡಿ ಪದವಿಧರ ವ್ಯಾಪಾರ ಅಧ್ಯಾಯನ (ಬಿಜಿನೇಸ್ ಸ್ಟೆಡೀಸ್) ಶಿಕ್ಷಕರು – 02, ಎಂ.ಎ, ಬಿ.ಇಡಿ ಪದವಿಧರ ಲೆಕ್ಕಶಾಸ್ತ್ರ (ಅಕೌಂಟೆನ್ಸಿ) ಶಿಕ್ಷಕರು – 02, ಯಲಬುರ್ಗಾ ಮತ್ತು ಗಂಗಾವತಿಯ ಮೊರಾರ್ಜಿ ದೇಸಾಯಿ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜುಗಳಲ್ಲಿ ಹುದ್ದೆಗಳು ಖಾಲಿ ಇದ್ದು, ಗೌರವಧನ ಆಧಾರದ ಮೇಲೆ ನಿವೃತ್ತ/ ಅತಿಥಿ ಉಪನ್ಯಾಸಕರಿಗೆ ಭರ್ತಿ ಮಾಡಿಕೊಳ್ಳಲಾಗುವದು. 
    ಪದವಿ ಪೂರ್ವ ವಸತಿ ಕಾಲೇಜಿನ ಅತಿಥಿ ಶಿಕ್ಷಕರ/ ಉಪನ್ಯಾಸಕರ ಗೌರವಧನ ಮಾಹೆಯಾನ ರೂ. 9000/- ಗಳನ್ನು ನಿಗದಿಪಡಿಸಿದೆ.    ನೇರ ನೆಮಕಾತಿ ಮೂಲಕ ಶಿಕ್ಷಕರ/ ಉಪನ್ಯಾಸಕರನ್ನು ಭರ್ತಿ ಮಾಡಿಕೊಳ್ಳವವರೆಗೆ ಅಥವಾ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಅಂತ್ಯದ ವರೆಗೆ ಅಂದರೆ ಮಾರ್ಚ-2018 ರವರೆಗೆ ಮಾತ್ರ ಸೀಮಿತವಾಗಿರುತ್ತದೆ.  ಅತಿಥಿ ಶಿಕ್ಷಕರ/ ಉಪನ್ಯಾಸಕರ ಸೇವೆ ತಾತ್ಕಾಲಿಕವಾಗಿದ್ದು ಸೇವೆ ಖಾಯಂ ನೇಮಕಾತಿ ಅಥವಾ ಯಾವುದೇ ತರಹದ ಸೇವಾ ಕೃಪಾಂಕಕ್ಕೆ ಅರ್ಹರಿರುವುದಿಲ್ಲ.  ನೇಮಕಾತಿ ಅಧಿಸೂಚಿಸಿದ (ನೇರ ನೇಮಕಾತಿ) ವಸತಿ ಶಾಲೆ/ ಕಾಲೇಜಿನ ಶಿಕ್ಷಕರು ಹಾಗೂ ಉಪನ್ಯಾಸಕರು ನೇಮಕಗೊಂಡ ಕರ್ತವ್ಯಕ್ಕೆ ಹಾಜರಾದ ತಕ್ಷಣ ಅತಿಥಿ ಶಿಕ್ಷಕರ/ ಉಪನ್ಯಾಸಕರ ಹುದ್ದೆಗಳು ತಂತಾನೆ ರದ್ದಾಗುವುದು.  ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಜುಲೈ. 29 ರೊಳಗಾಗಿ  ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಆಡಳಿತ ಭವನ ಕೊಪ್ಪಳ ಇವರಿಗೆ ಸಲ್ಲಿಸಬೇಕು ಎಂದು ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ : ನಿಷೇದಾಜ್ಞೆ ಜಾರಿ


ಕೊಪ್ಪಳ, ಜು. 19(ಕರ್ನಾಟಕ ವಾರ್ತೆ): ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆ ಮೈಲು:0 ರಿಂದ 47 ರವರೆಗೆ ಮುಖ್ಯಕಾಲುವೆ ಎಡ ಮತ್ತು ಬಲದಡದಿಂದ 100 ಮೀಟರ ಅಂತರದ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ. 
    ಅಧೀಕ್ಷಕ ಅಭಿಯಂತರು, ತುಂಗಭದ್ರಾ ಯೋಜನಾ ವೃತ್ತ, ಮುನಿರಾಬಾದ್ ಇವರು ರಾಯಚೂರು ಜಿಲ್ಲೆಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ, ಜಲಾಶಯದಿಂದ ತುಂಗಭದ್ರಾ ಎಡದಂಡೆ ನಾಲೆಗೆ ಜುಲೈ. 17 ರಿಂದ 27 ರವರೆಗೆ ಸುಮಾರು 1000 ಕ್ಯೂಸೆಕ್ ನಂತೆ 10 ದಿನಗಳವರೆಗೆ ಮಾತ್ರ, ನೀರು ಹರಿಸಬೇಕಾಗಿರುವ ಹಿನ್ನಲೆಯಲ್ಲಿ ನೀರು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಮೈಲು:0 ರಿಂದ 47 ರವರೆಗೆ ಮುಖ್ಯ ಕಾಲುವೆ ಎಡ ಮತ್ತು ಬಲದಡದಿಂದ 100 ಮೀಟರ ಅಂತರದ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.
    ತುಂಗಭದ್ರಾ ಎಡದಂಡೆ ಕಾಲುವೆಯ ನಿಷೇದಾಜ್ಞೆ ಜಾರಿಗೊಳಿಸಿದ ಪ್ರದೇಶದ 100 ಮೀಟರ ಅಂತರದ ವ್ಯಾಪ್ತಿಯಲ್ಲಿ ದಡದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರು ಎರಡು ಜನಕ್ಕಿಂತ ಹೆಚ್ಚಾಗಿ ಒಡಾಡುವುದನ್ನು, ಕಾಲುವೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಲಾಗಿದೆ.  ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ.  ಈ ಆದೇಶವು ಜುಲೈ. 27 ರವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ  ಆದೇಶದಲ್ಲಿ ತಿಳಿಸಿದ್ದಾರೆ.

ಜು. 20 ರಂದು ಕೊಪ್ಪಳ ನಗರದ ನೀರು ಸರಬರಾಜಿನಲ್ಲಿ ವ್ಯತ್ಯಯ


ಕೊಪ್ಪಳ, ಜು. 19(ಕರ್ನಾಟಕ ವಾರ್ತೆ): ಕೊಪ್ಪಳ ನಗರಕ್ಕೆ ನೀರು ಸರಬರಾಜು ಆಗುವ ಕಾತರಕಿ ಜಾಕವೆಲ್ ಹಾಗೂ ಬೇಳೂರ ಗ್ರಾಮದ ಹತ್ತಿರವಿರುವ ಹಳ್ಳದಲ್ಲಿರುವ ಮುಖ್ಯ ಪೈಪ್‍ಲೈನ್ ಲೀಕೇಜ್ ಇದ್ದು, ಜು. 20 ರಂದು ಪೈಪ್‍ಲೈನ್‍ನ ದುರಸ್ಥಿ ಕಾರ್ಯ ನಡೆಯಲಿದೆ.  ಆದ್ದರಿಂದ ಅಂದು ಕೊಪ್ಪಳ ನಗರಕ್ಕೆ ನೀರು ಸರಬರಾಜು ಆಗುವುದಿಲ್ಲ.  ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Tuesday, 18 July 2017

ಡಾ. ಬಿ.ಆರ್. ಅಂಬೇಡ್ಕರ್ ರವರ 126ನೇ ಜನ್ಮ ವರ್ಷಾಚರಣೆ : ಜುಲೈ. 20 ಕೊಪ್ಪಳದಲ್ಲಿ “ತಮಗಿದೋ ನಮ್ಮ ಗೌರವ ನಮನ”


ಕೊಪ್ಪಳ, ಜು. 18(ಕರ್ನಾಟಕ ವಾರ್ತೆ): ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರ 126ನೇ ಜನ್ಮ ವರ್ಷಾಚರಣೆ ಅಂಗವಾಗಿ ಜುಲೈ. 20 ರಂದು ಕೊಪ್ಪಳದಲ್ಲಿ “ತಮಗಿದೋ ನಮ್ಮ ಗೌರವ ನಮನ” ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸರ್ವರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.
ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರ 126ನೇ ವರ್ಷಾಚರಣೆ ಅಂಗವಾಗಿ ಬೆಂಗಳೂರಿನ ಜೆ.ಕೆ.ವಿ.ಕೆ. ಸಭಾಂಗಣದಲ್ಲಿ ಜುಲೈ. 21, 22 ಹಾಗೂ 23 ರಂದು ಅಂತರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. ಅಲ್ಲದೆ ಇದಕ್ಕೂ ಮುನ್ನ ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ಜುಲೈ. 20 ರಂದು ಸಂಜೆ 5-00 ಗಂಟೆಗೆ “ತಮಗಿದೋ ನಮ್ಮ ಗೌರವ ನಮನ” ಕಾರ್ಯಕ್ರಮ ಕೊಪ್ಪಳದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಸಂದರ್ಭದಲ್ಲಿ ಹೋರಾಟದ ಹಾಡುಗಳು, ಪ್ರಗತಿಪರ ಹಾಡುಗಳು, ಸ್ಥಳೀಯ ಜಾನಪದ ಕಲೆ ಪ್ರದರ್ಶನ, ಹಾಗೂ ಸಂಜೆ 06 ರಿಂದ 06-30 ರವರೆಗೆ 125 ಚರ್ಮವಾದ್ಯ ಮೇಳ, ಹೀಗೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಅಂದು ಕೊಪ್ಪಳದಲ್ಲಿ ನಡೆಯಲಿವೆ. ಇದೊಂದು ಅಪರೂಪದ ಕಾರ್ಯಕ್ರಮವಾಗಿದ್ದು, ರಾಜ್ಯದ 30 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಚರ್ಮವಾದ್ಯ ಮೇಳಗಳ ವಾದ್ಯ ನಿನಾದ ಮೋಳಗಲಿದೆ.
ಡಾ. ಬಿ.ಆರ್. ಅಂಬೇಡ್ಕರ್ ರವರ ಆಶಯಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು, ದಲಿತ ಅಸ್ಮಿತೆಯನ್ನು ಉಳಿಸಿಕೊಂಡು, ಇಡೀ ಕರ್ನಾಟಕದ ಜನತೆ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 126 ನೇ ಜನ್ಮ ವರ್ಷಾಚರಣೆ ಅಂಗವಾಗಿ ಜು. 20 ರಂದು ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಗಂಗಾವತಿ: ಪ್ರಥಮ ಪಿಯುಸಿ ಪ್ರವೇಶಕ್ಕೆ ಅರ್ಜಿ ಆಹ್ವಾನ


ಕೊಪ್ಪಳ, ಜು. 18(ಕರ್ನಾಟಕ ವಾರ್ತೆ): ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಪ್ರಾರಂಭವಾಗುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಬಾಲಕಿಯರ ವಸತಿ ಕಾಲೇಜಿನ ಪ್ರಥಮ ಪಿ.ಯು.ಸಿ. ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 
    ವಸತಿ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪಿ.ಸಿ.ಎಂ.ಬಿ. ಮತ್ತು ವಾಣಿಜ್ಯದಲ್ಲಿ ಹೆಚ್.ಇ.ಬಿ.ಎ. ವ್ಯಾಸಂಗಕ್ಕೆ ಅವಕಾಶವಿದ್ದು, ಅರ್ಜಿ ಸಲ್ಲಿಸಲು ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.  ಪ್ರಥಮ ಪಿಯುಸಿಯ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ತಲಾ 60 ಸ್ಥಾನಗಳನ್ನು ನಿಗದಿಪಡಿಸಲಾಗಿದ್ದು, ಶೇ.75% ಅಲ್ಪಸಂಖ್ಯಾತರ ಮತ್ತು ಶೇ.25% ಇತರೆ ವರ್ಗದ ವಿದ್ಯಾರ್ಥಿಗಳಿಗೆ ನೀಡಲಾಗುವುದು.  ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ. 1 ಲಕ್ಷ ಮೀರಿರಬಾರದು.  ಅಂಗವಿಕಲ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು. 
ಧೃಢೀಕರಿಸಿದ ಜಾತಿ ಆದಾಯ ಪ್ರಮಾಣ ಪತ್ರ, ಹಿಂದಿನ ತರಗತಿಯಲ್ಲಿ ಉತ್ತೀರ್ಣರಾದ ಅಂಕಪಟ್ಟಿ, ವಾಸಸ್ಥಳ ಪ್ರಮಾಣ ಪತ್ರ, ಆಧಾರ ಕಾರ್ಡ ಹಾಗೂ ವಿದ್ಯಾರ್ಥಿ ಪಾಸ್ ಪೊರ್ಟ್ ಅಳತೆಯ ಇತ್ತೀಚಿನ 2 ಭಾವಚಿತ್ರಗಳೊಂದಿಗೆ ಜುಲೈ. 25 ರೊಳಗಾಗಿ ಗಂಗಾವತಿ ಅಲ್ಪಸಂಖ್ಯಾತರ ತಾಲೂಕ ಮಾಹಿತಿ ಕೇಂದ್ರ ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕೊಪ್ಪಳದಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಹಿಮೂದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಂಗಾವತಿ: ಐ.ಎಂ.ಸಿ. ಪಿಪಿಪಿ ಯೋಜನೆಯಡಿ ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ, ಜು. 18(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ (ಐಟಿಐ)ಯಲ್ಲಿ ಐ.ಎಂ.ಸಿ. ಪಿಪಿಪಿ ಯೋಜನೆಯಡಿ ವಿವಿಧ ವೃತ್ತಿಗಳಿಗೆ ಪ್ರಸಕ್ತ ಸಾಲಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
    ಸಂಸ್ಥೆಯಲ್ಲಿ ಎಲೆಕ್ಟ್ರಿಷಿಯನ್ (ಎನ್.ಸಿ.ವಿ.ಟಿ) – 05, ಫಿಟ್ಟರ್ (ಎನ್.ಸಿ.ವಿ.ಟಿ) – 05, ಎಲೆಕ್ಟ್ರಾನಿಕಲ್ ಮೆಕ್ಯಾನಿಕ್ (ಎನ್.ಸಿ.ವಿ.ಟಿ) – 06, ಟರ್ನರ್ (ಎನ್.ಸಿ.ವಿ.ಟಿ) – 04, ಮೆಕ್ ಅಗ್ರೀ (ಎಸ್.ಸಿ.ವಿ.ಟಿ) – 05, ಎಂ.ಎಂ.ವಿ (ಎಸ್.ಸಿ.ವಿ.ಟಿ) – 05, ವೆಲ್ಡ್‍ರ್ (ಎಸ್.ಸಿ.ವಿ.ಟಿ) – 42, ಎಲೆಕ್ಟ್ರಿಷಿಯನ್ (ಎಸ್.ಸಿ.ವಿ.ಟಿ) – 21, ಫಿಟ್ಟರ್ (ಎಸ್.ಸಿ.ವಿ.ಟಿ) – 21, ಎಂ.ಆರ್.ಎ.ಸಿ. (ಎಸ್.ಸಿ.ವಿ.ಟಿ) – 21, ಸ್ಥಾನಗಳು ಲಭ್ಯವಿದ್ದು, ಪ್ರವೇಶ ಪಡೆಯಬಹುದು.   
    ಅರ್ಜಿ ಸಲ್ಲಿಸಲು ಮೊದಲು ಬಂದವರಿಗೆ ಮೊದಲ ಪ್ರಾಶಸ್ಥ್ಯದ ಮೇರೆಗೆ ಆಯ್ಕೆ ಮಾಡಲಾಗುವುದು.  ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ, ಆನೆಗುಂದಿ ರಸ್ತೆ, ಗಂಗಾವತಿ – 583227,   ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಗಂಗಾವತಿ: ಐ.ಟಿ.ಐ ಕಾಲೇಜಿನಲ್ಲಿ ಅತಿಥಿ ಬೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ


ಕೊಪ್ಪಳ, ಜು. 18(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ (ಐಟಿಐ ಕಾಲೇಜು) ಪ್ರಸಕ್ತ ಸಾಲಿಗೆ ವಿವಿಧ ವೃತ್ತಿಗಳಲ್ಲಿ ತಾತ್ಕಾಲಿಕವಾಗಿ ಬೋಧನೆ ಮಾಡಲು ಅತಿಥಿ ಬೋಧಕರು ಬೇಕಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.  
    ಸಂಸ್ಥೆಯಲ್ಲಿ ವಿದ್ಯುನ್ಮಾನ ದುರುಸ್ತಿಗಾರ (ಎಲೆಕ್ಟ್ರಾನಿಕ್ಸ್ ಮೆಕಾನಿಕ್) - 02 (ಎನ್‍ಓಎಸ್), ಕಾರ್ಯಾಗಾರ ಲೆಕ್ಕ ಮತ್ತು ವಿಜ್ಞಾನ (ವರ್ಕಶಾಪ್ ಕಲೆಕ್ಷನ್ & ಸೈನ್ಸ್) – 01 (ಎನ್‍ಓ), ಎಂ.ಎಂ.ವಿ - 02 (ಎನ್‍ಓಸ್), ಮೆಕ್ ಅಗ್ರಿ – 01 (ಎನ್‍ಓ), ವೃತ್ತಿಗಳಲ್ಲಿ ಬೋಧನೆ ಮಾಡಲು ಖಾಯಂ ಸಿಬ್ಬಂದಿ ನೇಮಕಾತಿ ಆಗುವವರೆಗೆ ತಾತ್ಕಾಲಿಕವಾಗಿ ಅತಿಥಿ ಬೋಧಕರನ್ನು ಆಯ್ಕೆ ಮಾಡಿಕೊಳ್ಳಲಾಗುವುದು. 
    ಅರ್ಜಿ ಸಲ್ಲಿಸಲು ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೋಬೈಲ್ ನಲ್ಲಿ ಅಥವಾ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.  ಆಯಾ ವಿಭಾಗಗಳಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.  ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಸೇವೆಯಿಂದ ನಿವೃತ್ತರಾಗಿರುವ ನೌಕರರೂ ಸಹ ಅರ್ಜಿ ಸಲ್ಲಿಸಲು ಅರ್ಹರು.  ಆಸಕ್ತರು ಎಲ್ಲಾ ದಾಖಲೆಗಳ 2 ಸೆಟ್ ಜೆರಾಕ್ಸ್ ಪ್ರತಿಯೊಂದಿಗೆ ಜುಲೈ. 31 ರೊಳಗಾಗಿ ಅರ್ಜಿ ಸಲ್ಲಿಸಬಹುದು.  ಅಥವಾ ಖುದ್ದಾಗಿ ಸಂಸ್ಥೆಯ ಪ್ರಾಚಾರ್ಯರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸರ ಸಂಭಾವನೆ ನೀಡಲಾಗುವುದು ಎಂದು ಗಂಗಾವತಿ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನಕಗಿರಿ: ಐ.ಟಿ.ಐ ಕಾಲೇಜಿನಲ್ಲಿ ಅತಿಥಿ ಬೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ


ಕೊಪ್ಪಳ, ಜು. 18(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕನಕಗಿರಿ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ (ಐಟಿಐ ಕಾಲೇಜ್) ಯಲ್ಲಿ ಪ್ರಸಕ್ತ ಸಾಲಿಗೆ ವಿದ್ಯುತ್ ಶಿಲ್ಪಿ (ಎಲೆಕ್ಟ್ರಿಷಿಯನ್) ಹಾಗೂ ಜೋಡಣೆಗಾರ (ಫಿಟ್ಟರ್) ವೃತ್ತಿಗಳಲ್ಲಿ ತಾತ್ಕಾಲಿಕವಾಗಿ ಬೋಧನೆ ಮಾಡಲು ಅತಿಥಿ ಬೋಧಕರು ಬೇಕಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. 
    ಸಂಸ್ಥೆಯಲ್ಲಿ ವಿದ್ಯುನ್ಮಾನ್ ವಿದ್ಯುತ್ ಶಿಲ್ಪಿ (ಎಲೆಕ್ಟ್ರೀಷಿಯನ್) - 01 (ಎನ್‍ಓ),  ಹಾಗೂ ಜೋಡಣೆಗಾರ (ಫಿಟ್ಟರ್) - 02 (ಎನ್‍ಓಎಸ್), ವೃತ್ತಿಗಳಲ್ಲಿ ಬೋಧನೆಮಾಡಲು ಖಾಯಂ ಸಿಬ್ಬಂದಿ ನೇಮಕಾತಿ ಆಗುವವರೆಗೆ ತಾತ್ಕಾಲಿಕವಾಗಿ ಅತಿಥಿ ಬೋಧಕರನ್ನು ಆಯ್ಕೆಮಾಡಿಕೊಳ್ಳಲಾಗುವುದು.  
    ಅರ್ಜಿ ಸಲ್ಲಿಸಲು ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್‍ನಲ್ಲಿ ಪದವಿ ಅಥವಾ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.  ಆಯಾ ವಿಭಾಗಗಳಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.  ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಸೇವೆಯಿಂದ ನಿವೃತ್ತರಾಗಿರುವ ನೌಕರರೂ ಸಹ ಅರ್ಜಿ ಸಲ್ಲಿಸಲು ಅರ್ಹರು.  ಆಸಕ್ತರು ಎಲ್ಲಾ ದಾಖಲೆಗಳ 2 ಸೆಟ್ ಜೆರಾಕ್ಸ್ ಪ್ರತಿಯೊಂದಿಗೆ ಜುಲೈ. 31 ರೊಳಗಾಗಿ ಅರ್ಜಿ ಸಲ್ಲಿಸಬಹುದು.  ಅಥವಾ ಖುದ್ದಾಗಿ ಸಂಸ್ಥೆಯ ಪ್ರಾಚಾರ್ಯರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು.  ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸರ ಸಂಭಾವನೆ ನೀಡಲಾಗುವುದು ಎಂದು ಕನಕಗಿರಿ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಿಟ್ ಬ್ಯಾಗ್ ಮೂಲಕ ಪೂರಕ ಪೌಷ್ಠಿಕ ಆಹಾರ ವಿತರಣೆ ಪ್ರಾರಂಭ- ಎಂ. ಕನಗವಲ್ಲಿ


ಕೊಪ್ಪಳ ಜು. 18 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿಯರು, ಬಾಣಂತಿಯರಿಗೆ ವಿತರಿಸಲಾಗುತ್ತಿದ್ದ ಪೂರಕ ಪೌಷ್ಠಿಕ ಆಹಾರವನ್ನು ಇನ್ನು ಮುಂದೆ ಮಾಸ್ಟರ್ ಕಿಟ್ ಬ್ಯಾಗ್ ಮೂಲಕ ವಿತರಿಸುವ ನೂತನ ವ್ಯವಸ್ಥೆಯನ್ನು ಕೊಪ್ಪಳ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜಾರಿಗೆ ತರಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
ಕೊಪ್ಪಳ ನಗರದ ಕಾಳಿದಾಸ ನಗರ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರು, ಬಾಣಂತಿಯರಿಗೆ ಕಿಟ್ ಬ್ಯಾಗ್ ಮೂಲಕ ಪೂರಕ ಪೌಷ್ಠಿಕ ಆಹಾರ ವಿತರಿಸುವ ಮೂಲಕ ನೂತನ ವ್ಯವಸ್ಥೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆರಲ್ಲಿನ ಅಪೌಷ್ಠಿಕತೆ ದೂರವಾದಲ್ಲಿ, ಆರೋಗ್ಯವಂತ ಮಗು ಜನಿಸಲು ಸಾಧ್ಯವಾಗಲಿದೆ. ಇದಕ್ಕೆಂದೇ, ಸರ್ಕಾರದ ವತಿಯಿಂದ ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿಯರಿಗೆ, ಬಾಣಂತಿಯರಿಗೆ ಉತ್ತಮ ಗುಣಮಟ್ಟದ ಪೂರಕ ಪೌಷ್ಠಿಕ ಆಹಾರವನ್ನು ವಿತರಿಸಲಾಗುತ್ತಿದೆ. ಮಹಿಳೆಯರಿಗೆ ನೀಡಲಾಗುವ ಅಕ್ಕಿ, ಗೋಧಿ, ರಾಗಿಹಿಟ್ಟು, ರವ, ಬೆಲ್ಲ, ಶೇಂಗಾ ಹಾಗೂ ಹೆಸರುಕಾಳು ಆಹಾರ ಧಾನ್ಯವನ್ನು ಸದ್ಯ ಪ್ರತ್ಯೇಕವಾಗಿ ನೀಡಲಾಗುತ್ತಿದೆ. ಈ ರೀತಿ ನೀಡಲಾಗುವ ಆಹಾರ ಕೆಲವೆಡೆ ಕೆಲವೇ ಸಾಮಗ್ರಿ ವಿತರಿಸಲಾಗುತ್ತಿದೆ, ಗುಣಮಟ್ಟ, ತೂಕದಲ್ಲಿ ವ್ಯತ್ಯಾಸ ಹೀಗೆ ಹಲವು ಬಗೆಯ ದೂರುಗಳು ಕೇಳಿ ಬರುತ್ತಿತ್ತು. ಇಂತಹ ದೂರುಗಳು ಬಾರದಂತೆ ಹಾಗೂ ಎಲ್ಲ ಆಹಾರ ಸಾಮಗ್ರಿಗಳು ನಿಗದಿತ ತೂಕದಲ್ಲಿ, ನಿಗದಿತ ಪ್ರಮಾಣದಲ್ಲಿ ಮಹಿಳಾ ಫಲಾನುಭವಿಗಳಿಗೆ ತಲುಪಿಸಿದಾಗ ಮಾತ್ರ ಸರ್ಕಾರದ ಯೋಜನೆ ಸಾಕಾರವಾಗಲು ಸಾಧ್ಯ ಎಂಬುದನ್ನು ಮನಗಂಡು, ಕಿಟ್ ಬ್ಯಾಗ್ ಮೂಲಕ ಪೂರಕ ಪೌಷ್ಠಿಕ ಆಹಾರವನ್ನು ಮಹಿಳಾ ಫಲಾನುಭವಿಗಳಿಗೆ ವಿತರಿಸಲು ಕೊಪ್ಪಳ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ಕೊಪ್ಪಳ ತಾಲೂಕಿನಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದ್ದು, ಶೀಘ್ರದಲ್ಲಿಯೇ ಇದು ಜಿಲ್ಲೆಯ ಎಲ್ಲ ತಾಲೂಕುಗಳಿಗೂ ವಿಸ್ತರಣೆಯಾಗಲಿದೆ. ಮಹಿಳೆಯರಿಗೆ ನೀಡಲಾಗುವ ಮಾಸ್ಟರ್ ಕಿಟ್ ಬ್ಯಾಗ್ 02 ಕೆ.ಜಿ. ಅಕ್ಕಿ, 02 ಕೆ.ಜಿ. ಗೋಧಿ, 01 ಕೆ.ಜಿ. ರಾಗಿಹಿಟ್ಟು, 01 ಕೆ.ಜಿ. ರವ, 500 ಗ್ರಾಂ ಬೆಲ್ಲ, 250 ಗ್ರಾಂ ಶೇಂಗಾ ಹಾಗೂ 450 ಗ್ರಾಂ ಹೆಸರುಕಾಳು ಸೇರಿದಂತೆ ಒಟ್ಟು 7 ಕೆ.ಜಿ, 200 ಗ್ರಾಂ ತೂಕದ ಪೂರಕ ಪೌಷ್ಠಿಕ ಆಹಾರವನ್ನು ಒಳಗೊಂಡಿರುತ್ತದೆ. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳ ಮೂಲಕ ಪ್ರತಿ ತಿಂಗಳು ಇಂತಹ ಮಾಸ್ಟರ್ ಕಿಟ್ ಬ್ಯಾಗ್ ವಿತರಿಸಲಾಗುವುದು. ಗರ್ಭಿಣಿಯರು, ಬಾಣಂತಿಯರು ಈ ಆಹಾರ ಪದಾರ್ಥಗಳನ್ನು ಸರಿಯಾಗಿ ಸೇವಿಸಬೇಕು ಅಲ್ಲದೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವುದರ ಜೊತೆಗೆ, ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳಬೇಕು. ಹೆಚ್ಚು ಪೋಷಕಾಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ, ಸದೃಢ ಮತ್ತು ಆರೋಗ್ಯವಂತ ಮಗು ಜನಿಸಲು ಸಾಧ್ಯವಾಗಲಿದೆ ಎಂದು ಮಹಿಳಾ ಫಲಾನುಭವಿಗಳಿಗೆ ಹೇಳಿದರು. ಎಲ್ಲ ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ಸಕಾಲಕ್ಕೆ ಈ ಮಾಸ್ಟರ್ ಆಹಾರ ಕಿಟ್ ಬ್ಯಾಗ್‍ಗಳನ್ನು ನಿಗದಿತ ಸಮಯದಲ್ಲಿ ವಿತರಿಸಲು ಕ್ರಮ ಕೈಗೊಳ್ಳಬೇಕು ಮತ್ತು ಅಂಗನವಾಡಿ ಕೇಂದ್ರದ ಸಮೀಕ್ಷಾ ದಾಖಲಾತಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಕೊಪ್ಪಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದರು.ಲ
ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಾಲಪ್ಪ ಕಂದಳ್ಳಿ, ಅಂಗನವಾಡಿ ಮೇಲ್ವಿಚಾರಕಿ ಬಸಮ್ಮ ಹಡಪದ ಸೇರಿದಂತೆ ಕಾಳಿದಾಸ ನಗರದ ಗರ್ಭಿಣಿಯರು, ಬಾಣಂತಿಯರು, ತಾಯಂದಿರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಾದೇಶಿಕ ಆಯುಕ್ತ ಹರ್ಷಗುಪ್ತರಿಂದ ಜಿಲ್ಲೆಯ ವಿವಿಧ ಕಾಮಗಾರಿಗಳ ಪರಿಶೀಲನೆಕೊಪ್ಪಳ ಜು. 18 (ಕರ್ನಾಟಕ ವಾರ್ತೆ): ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಹಾಗೂ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಅವರು ಕೊಪ್ಪಳ ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಸೋಮವಾರದಂದು ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಿದರು.

     ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ತಳಕಲ್ ಬಳಿ ನಿರ್ಮಾಣವಾಗುತ್ತಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಕಟ್ಟಡ, ವರ್ಕ್‍ಶಾಪ್, ಬಾಲಕಿಯರ ವಸತಿ ನಿಲಯ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಕಟ್ಟಡ ನಿರ್ಮಾಣ ಕಾರ್ಯವನ್ನು ಪರಿಶೀಲಿಸಿದರು.  ನಿರ್ಮಾಣ ಸಂದರ್ಭದಲ್ಲಿ ಅಳವಡಿಸಲಾದ ಶಿಸ್ತು, ತಾಂತ್ರಿಕತೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ವಿಚಾರಣೆ ನಡೆಸಿದರು.  ತ್ವರಿತವಾಗಿ ಕೈಗೊಳ್ಳಲಾಗುತ್ತಿರುವ ಕಾಮಗಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  ಯೋಜನೆಯ ಸಮಗ್ರ ವಿವರಣೆಯನ್ನು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಬಿ.ವೈ. ಬಂಡಿವಡ್ಡರ್ ಅವರು ನೀಡಿದರು.  ಯಲಬುರ್ಗಾ ಎಇಇ ಉಮಾಪತಿ ಶೆಟ್ಟರ್ ಹಾಗೂ ಮೆ: ಬಿ.ಜಿ. ಸಿರ್ಕೆ ಕಂಪನಿಯ ಯೋಜನಾ ಅಭಿಯಂತರ ಜೆ.ಎಸ್. ಪಾಟೀಲ್ ಉಪಸ್ಥಿತರಿದ್ದು, ಪೂರಕ ಮಾಹಿತಿಯನ್ನು ಹರ್ಷಗುಪ್ತ ಅವರಿಗೆ ನೀಡಿದರು.

     ತಳಕಲ್‍ನ ಸಿ.ಸಿ. ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ವೀಕ್ಷಿಸಿದ ಹರ್ಷಗುಪ್ತಾ ಅವರು ರಸ್ತೆ ಬದಿಯಲ್ಲಿ ಸರ್ವಿಸ್ ಲೇನ್‍ಗಳಿಗೆ ಅಳವಡಿಸಲಾದ ಪೇವೇರ್‍ಗಳನ್ನು ಪರಿಶೀಲಿಸಿದರು.  ನಂತರ ಭಾನಾಪುರದ ಸಿಸಿ ರಸ್ತೆಗಳಿಗೆ ಎರಡೂ ಬದಿಯಲ್ಲಿ ನಿರ್ಮಿಸಿದ ಚರಂಡಿಗಳನ್ನು ಗಮನಿಸಿದ ಅವರು, ಸಾರ್ವಜನಿಕ ಕುಂದುಕೊರತೆ ವಿಚಾರಿಸಿದರು. ಕೊಪ್ಪಳ ನಗರದಲ್ಲಿ ನಿರ್ಮಿಸಲಾಗುತ್ತಿರುವ ರಂಗ ಮಂದಿರದ ಕಾಮಗಾರಿ ಪರಿಶೀಲಿಸಿದ ಅವರು, ಕಾಮಗಾರಿ ಪೂರ್ಣಗೊಳ್ಳಲು ಅಗತ್ಯವಿರುವ ಅನುದಾನದ ಕುರಿತು ವಿವರಣೆ ಪಡೆದುಕೊಂಡರು.  ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ, ನೂತನವಾಗಿ ಪ್ರಾರಂಭಿಸಲಾದ ಈಜುಕೊಳ, ಸ್ಟೇಡಿಯಂ ಪ್ರೇಕ್ಷಕರ ಗ್ಯಾಲರಿ ಕಾಮಗಾರಿ ವೀಕ್ಷಿಸದರು.  ಅಲ್ಲದೆ ಕೊಪ್ಪಳ ಶಾಸಕರ ಕೋರಿಕೆಯಂತೆ ಬರುವ ದಿನಗಳಲ್ಲಿ ಕೈಗೊಳ್ಳಲಾಗುವ ಹಸನ್ ರಸ್ತೆ, ಗಡಿಯಾರ ಕಂಬದಿಂದ ಮುದ್ದಾಬಳ್ಳಿ ಕ್ರಾಸ್‍ವರೆಗಿನ ರಸ್ತೆ ಅಭಿವೃದ್ಧಿಗೊಳಿಸುವ ಕಾಮಗಾರಿ ಕುರಿತಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
     ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ನಿರ್ಮಿತಿ ಕೇಂದ್ರದ ಅಧಿಕಾರಿ ಶಶಿಧರ್ ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Monday, 17 July 2017

ಜಿಲ್ಲಾ ಪಂಚಾಯತಿ ನೂತನ ಅಧ್ಯಕ್ಷರಾಗಿ ರಾಜಶೇಖರ ಹಿಟ್ನಾಳ ಆಯ್ಕೆಕೊಪ್ಪಳ ಜು. 17 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪಂಚಾಯತಿ ನೂತನ ಅಧ್ಯಕ್ಷರಾಗಿ ಗಿಣಿಗೇರಾ ಕ್ಷೇತ್ರದ ಜಿ.ಪಂ. ಸದಸ್ಯ ರಾಜಶೇಖರ ಹಿಟ್ನಾಳ್ ಅವರು ಆಯ್ಕೆಯಾದರು.

     ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿದ್ದ ಶೇಖರಪ್ಪ ನಾಗರಳ್ಳಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರದಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ಜರುಗಿತು.  ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿತ್ತು.  ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ನಿಗದಿಪಡಿಸಲಾಗಿದ್ದ ಕಾಲಮಿತಿಯಲ್ಲಿ ರಾಜಶೇಖರ ಹಿಟ್ನಾಳ್ ಅವರು ಮಾತ್ರ ಎರಡು ನಾಮಪತ್ರವನ್ನು ಸಲ್ಲಿಸಿದರು.  ಮಧ್ಯಾಹ್ನ 3-30 ಗಂಟೆಗೆ ಚುನಾವಣಾಧಿಕಾರಿ ಹಾಗೂ ಕಲಬುರಗಿ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅವರು ನಾಮಪತ್ರ  ಪರಿಶೀಲಿಸಿ, ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಪ್ರಕಟಿಸಿದರು.  ಒಬ್ಬರೇ ಅಭ್ಯಥಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ರಾಜಶೇಖರ ಹಿಟ್ನಾಳ್ ಅವರು ಜಿಲ್ಲಾ ಪಂಚಾಯತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹರ್ಷ ಗುಪ್ತ ಅವರು ಘೋಷಿಸಿ, ನೂತನ ಅಧ್ಯಕ್ಷರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.  ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್‍ರಾಜಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಚುನಾವಣೆ ಸಂದರ್ಭದಲ್ಲಿ ಒಟ್ಟು 29 ಜಿ.ಪಂ. ಸದಸ್ಯರುಗಳ ಪೈಕಿ 17 ಸದಸ್ಯರು ಹಾಜರಿದ್ದರು.  ಜಿಲ್ಲಾ ಪಂಚಾಯತಿಯಲ್ಲಿ ಪಕ್ಷಗಳ ಬಲಾಬಲ ಇಂತಿದೆ.  ಕಾಂಗ್ರೆಸ್-17, ಬಿಜೆಪಿ-11 ಹಾಗೂ ಪಕ್ಷೇತರ-01.
     ಜಿ.ಪಂ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಜಶೇಖರ ಹಿಟ್ನಾಳ್ ಅವರು ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ಅರ್ಹ ವ್ಯಕ್ತಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಆಡಳಿತ ನಡೆಸಬೇಕಿದ್ದು, ಸರ್ವರನ್ನೂ ಒಗ್ಗೂಡಿಸಿಕೊಂಡು, ಉತ್ತಮ ಸೇವೆ ಸಲ್ಲಿಸುವುದಾಗಿ ಹೇಳಿದರು.  ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ ಸೇರಿದಂತೆ ಜಿ.ಪಂ. ಸದಸ್ಯರುಗಳು ನೂತನ ಅಧ್ಯಕ್ಷರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.

ಜು. 19 ರಂದು ಕೊಪ್ಪಳದಲ್ಲಿ ಮಿನಿ ಉದ್ಯೋಗ ಮೇಳ


ಕೊಪ್ಪಳ ಜು. 17 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಮಿನಿ ಉದ್ಯೋಗ ಮೇಳ ಜು. 19 ರಂದು ಬೆಳಿಗ್ಗೆ 10-30 ಗಂಟೆಯಿಂದ ಮಧ್ಯಾಹ್ನ 2-30 ಗಂಟೆಯವರೆಗೆ ನಡೆಯಲಿದೆ.
     ಉದ್ಯೋಗ ಮೇಳದಲ್ಲಿ ನವ ಭಾರತ ಫರ್ಟಿಲೈಜರ್ಸ್, ಅನ್ನದಾತ ಬಯೋ ಪ್ಲಾಂಟೆಕ್ ಮುಂತಾದ ಕಂಪನಿಗಳು ಭಾಗವಹಿಸಲಿದ್ದು, ತಮ್ಮಲ್ಲಿನ ಖಾಲಿ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಿಕೊಳ್ಳುವರು.  ಉದ್ಯೋಗ ಮೇಳದಲ್ಲಿ ಯಾವುದೇ ಇತರೆ ಕಂಪನಿಗಳು ಭಾಗವಹಿಸಲು ಮುಕ್ತ ಅವಕಾಶ ಇರುತ್ತದೆ.  ಅಲ್ಲದೆ ಇದಕ್ಕೆ ಯಾವುದೇ ಶುಲ್ಕವಿರುವುದಿಲ್ಲ.  ಎಲ್ಲರಿಗೂ ಉಚಿತ ಪ್ರವೇಶವಿರುತ್ತದೆ.  ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಪದವಿ ಮುಂತಾದ ವಿದ್ಯಾರ್ಹತೆ ಹೊಂದಿದ ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ಸ್ವಯಂ ವಿವರದೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಉದ್ಯೋಗದ ನೆರವು ಪಡೆಯಬಹುದಾಗಿದೆ.  ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾಡಳಿತ ಭವನ, ಮೊದಲನೆ ಮಹಡಿ, ಕೊಪ್ಪಳ, 08539-220853 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ರಾಜ್ಯ ಪ್ರಶಸ್ತಿ : ಅರ್ಜಿ ಆಹ್ವಾನ


ಕೊಪ್ಪಳ, ಜು. 17 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ ನೀಡುವ ರಾಜ್ಯ ಮಟ್ಟದ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದ್ದು, ಅರ್ಹ ವ್ಯಕ್ತಿ ಹಾಗೂ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
    ಪ್ರಶಸ್ತಿಯಲ್ಲಿ ವ್ಯಕ್ತಿಗಳಿಗೆ ತಲಾ 25 ಸಾವಿರ ರೂ. ಹಾಗೂ ಸಂಸ್ಥೆಗಳಿಗೆ ತಲಾ 1 ಲಕ್ಷ ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ಮಕ್ಕಳ ದಿನಾಚರಣೆಯಂದು ಪ್ರದಾನ ಮಾಡಿ ಗೌರವಿಸಲಾಗುವುದು.  ಅರ್ಜಿ ಸಲ್ಲಿಸಲು ಕನಿಷ್ಠ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರಬೇಕು.  ಆಸಕ್ತರು ಅರ್ಜಿ ನಮೂನೆಗಳನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ದ್ವಿಪ್ರತಿಯಲ್ಲಿ ಆಗಸ್ಟ್. 31 ರೊಳಗಾಗಿ ಸಲ್ಲಿಸಬೇಕು. 
ಅರ್ಜಿಯನ್ನು ಕನ್ನಡ ಭಾಷೆಯಲ್ಲಿಯೇ ಸಲ್ಲಿಸಬೇಕು.  ಅರ್ಜಿಯನ್ನು ಪತ್ರಾಕಿಂತ ಅಧಿಕಾರಿಗಳಿಂದ ಧೃಢೀಕರಿಸಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08539-222703 ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.