Wednesday, 31 May 2017

ತಂಬಾಕು ನಿಯಂತ್ರಣ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕ : ವಿಜಯಲಕ್ಷ್ಮೀ ಉಪನಾಳ


ಕೊಪ್ಪಳ, ಮೇ. 31 (ಕರ್ನಾಟಕ ವಾರ್ತೆ): ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಹಾಗೂ ಅಭಿವೃದ್ಧಿಗೆ ಮಾರಕವಾಗಿದ್ದು, ತಂಬಾಕು ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ವಿಜಯಲಕ್ಷ್ಮೀ ಎಸ್. ಉಪನಾಳ ಹೇಳಿದರು.
    ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಇವರ ಸಹಯೋಗದಲ್ಲಿ ಬುಧವಾರದಂದು ಜಿಲ್ಲಾ ನ್ಯಾಯಾಲಯದ ಸಾಕ್ಷಿದಾರರ ಮೊಗಸಾಲೆ ಆವರಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಸಮಾಜದಲ್ಲಿ ನಾವು ವಿದ್ಯಾವಂತರಾಗಿದ್ದೇವೆ ಅಂದುಕೊಂಡರೆ ಸಾಲದು, ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ, ಕುಟುಂಬ, ಸಮಾಜದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ತಂಬಾಕು ಸೇವೇನೆಯನ್ನು ತಡೆಗಟ್ಟಲು ಸಹಕರಿಸಬೇಕು.  ಅಂದಾಗ ಮಾತ್ರ ನಾವು ವಿದ್ಯಾವಂತರು ಎನಿಸಿಕೊಳ್ಳಲು ಸಾಧ್ಯ.  ಒಬ್ಬರು ಕನಿಷ್ಠ 2 ವ್ಯಕ್ತಿಗಳನ್ನು ಸುಧಾರಿಸುವ ಕಾರ್ಯವೆಸಗಿದಲ್ಲಿ, ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ತ್ವರಿತವಾಗಿ ಸುಧಾರಿಸಬಹುದು.  ಜೀವನ ಆಯ್ದುಕೊಳ್ಳಿ ತಂಬಾಕನ್ನಲ್ಲ ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ವಿಜಯಲಕ್ಷ್ಮೀ ಎಸ್. ಉಪನಾಳ ಹೇಳಿದರು.
    ತಂಬಾಕು ಉತ್ಪನ್ನಗಳ ಅಧಿನಿಯಮ-2003 ಹಾಗೂ ತಂಬಾಕು ಸೇವೆನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಎಂ.ಎಂ. ಕಟ್ಟಿಮನಿ ಅವರು ವಿಶೇಷ ಉಪನ್ಯಾಸ ನೀಡಿ, ತಂಬಾಕು ಸೇವನೆಯಲ್ಲಿ ಹೊಗೆ ರಹಿತ ಹಾಗೂ ಹೊಗೆ ಸಹಿತ ಎರಡು ಪ್ರಕಾರಗಳಲ್ಲಿವೆ.  ಹೊಗೆ ರಹಿತ ತಂಬಾಕು ಸೇವನೆಗಳಲ್ಲಿ ತಂಬಾಕು, ಗುಟ್ಕಾ, ಇತ್ಯಾದಿ, ಹಾಗೂ ಹೊಗೆ ಸಹಿತ ತಂಬಾಕು ಸೇವನೆಯಲ್ಲಿ ಬೀಡಿ, ಸಿಗ್‍ರೇಟ್ ಇತ್ಯಾದಿಗಳ ಸೇವನೆಯಾಗಿವೆ.  ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶದ ಖಾಯಿಲೆಗಳಿಗೆ ತಂಬಾಕು ಸೇವನೆಯೇ ಪ್ರಮುಖ ಕಾರಣವಾಗಿದೆ.  ತಂಬಾಕು ಸೇವನೆಯಿಂದ ಪ್ರತಿದಿನ ಸುಮಾರು 6 ಲಕ್ಷ ಜನರು ಸಾವನ್ನಪ್ಪುತ್ತಾರೆ.    ಇದರ ನಿಯಂತ್ರಣಕ್ಕಾಗಿ ತಂಬಾಕು ನಿಯಂತ್ರಣ ಕಾನೂನು- ಕೋಟ್ಪಾ 2003 ಕಾಯ್ದೆ ಜಾರಿಗೆ ಬಂದಿದೆ.  ಸೆಕ್ಷನ್-4 ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದು ನಿóಷೇಧ.  ಸೆಕ್ಷನ್-5 ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು, ಉತ್ತೇಜನ, ಪ್ರಾಯೋಜಕತೆ ನಿಷೇಧ.  ಸೆಕ್ಷನ್-6 ತಂಬಾಕು ಉತ್ಪನ್ನಗಳು ಅಪ್ರಾಪ್ತ ವಯಸ್ಕರಿಗೆ (18 ವರ್ಷದೊಳಗಿನ ಮಕ್ಕಳಿಗೆ) ಸಿಗದಂತೆ ನಿಯಂತ್ರಣ ಮಾಡುವುದು.  ಹಾಗೂ ಧೂಮಪಾನ ಮಾಡುವುದರಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ವಿವರಿಸಿದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್.ರಾಮಕೃಷ್ಣ ಅವರು ವಹಿಸಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಟಿ. ಶ್ರೀನಿವಾಸ, ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ವಿಜಯ ಕುಮಾರ ಕನ್ನೂರು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ದಾನರಡ್ಡಿ, ಡಾ. ಜಂಬಯ್ಯ, ಡಾ. ಯುವರಾಜ ಸೇರಿದಂತೆ   ಇತರರು ಪಾಲ್ಗೊಂಡಿದ್ದರು.
Post a Comment