Sunday, 30 April 2017

ಬಸವ ತತ್ವಗಳ ಪಾಲನೆಯಿಂದ ಮಾತ್ರ ಜಗತ್ತು ಉಳಿಯಲು ಸಾಧ್ಯ- ರಂಜಾನ್ ದರ್ಗಾ


ಕೊಪ್ಪಳ  ಏ. 30 (ಕ.ವಾ): ಜಗತ್ತಿನಲ್ಲಿ ಮುಂದುವರಿದ ರಾಷ್ಟ್ರಗಳ ಅರ್ಥ ವ್ಯವಸ್ಥೆ ಶೋಷಣೆಯ ಅರ್ಥ ವ್ಯವಸ್ಥೆಯಾಗಿದ್ದು, ಜಗತ್ತು ದೀರ್ಘಕಾಲ ಉಳಿಯಬೇಕಾದರೆ ಬಸವ ತತ್ವಗಳ ಪಾಲನೆಯಿಂದ ಮಾತ್ರ ಸಾಧ್ಯ ಎಂದು ಧಾರವಾಡದ ಸಾಹಿತಿ ರಂಜಾನ್ ದರ್ಗಾ ಅವರು ಹೇಳಿದರು.
     ಜಿಲ್ಲಾಡಳಿತ ಹಾಗೂ ಬಸವ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ನಗರದ ಗವಿಮಠ ಆವರಣದಲ್ಲಿ ಏರ್ಪಡಿಸಲಾಗಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಭೂಮಿ ಬದುಕಬೇಕಾದರೆ, ಮನುಕುಲ ಯಾವ ರೀತಿ ಬದುಕಬೇಕು ಎಂಬುದನ್ನು ಬಸವಣ್ಣನವರು 12 ನೇ ಶತಮಾನದಲ್ಲಿಯೇ ತಮ್ಮ ವಚನಗಳಲ್ಲಿ ಸಾರಿದ್ದಾರೆ.  ವಿಶ್ವಗುರು ಬಸವಣ್ಣನವರು ರಾಜನೀತಿಜ್ಞ ಮಾತ್ರವಲ್ಲಿ ಅರ್ಥ ಶಾಸ್ತ್ರಜ್ಞ, ಮನೋಶಾಸ್ತ್ರಜ್ಞರೂ ಆಗಿದ್ದರು.   ಯುದ್ಧಗಳನ್ನು ಮಾಡದೆ ಅಮೆರಿಕಾ ತನ್ನ ಅರ್ಥ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ.  ಫ್ರಾನ್ಸ್, ಬ್ರಿಟನ್ ಹೀಗೆ ಮುಂದುವರೆದ ರಾಷ್ಟ್ರಗಳಲ್ಲಿನ ಅರ್ಥ ವ್ಯವಸ್ಥೆ ಶೋಷಣೆಯ ಅರ್ಥ ವ್ಯವಸ್ಥೆಯಾಗಿದೆ.  ಇಡೀ ಜಗತ್ತು ಇಂದು ಅರ್ಥ ವ್ಯವಸ್ಥೆಯನ್ನು ರೂಪಿಸುವಲ್ಲಿ ಸೋತಿದೆ.  ಜಗತ್ತು ದೀರ್ಘಕಾಲ ಉಳಿಯಬೇಕಾದರೆ, ಬಸವ ತತ್ವಗಳನ್ನು ಪಾಲಿಸಲೇಬೇಕಿದೆ.  ಇದರಿಂದಾಗಿಯೇ ಬಸವಣ್ಣನವರು ವಿಶ್ವಮಾನ್ಯ ದಾರ್ಶನಿಕರಾಗಿದ್ದಾರೆ.  12ನೇ ಶತಮಾನದಿಂದ ನಾವು 21 ನೇ ಶತಮಾನಕ್ಕೆ ಬಂದಿದ್ದೇವೆ.  12 ನೇ ಶತಮಾನದಲ್ಲಿಯೇ ನಡೆದಂತಹ ಸಾಮಾಜಿಕ ಕ್ರಾಂತಿಯ ಚಿಂತನೆಗಳನ್ನು ಇದುವರೆಗೂ ನಾವು ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ.  ಹೀಗಾಗಿ ಪುನಃ ನಾವು 12 ನೇ ಶತಮಾನಕ್ಕೆ ಹೋಗಿ ಬಂದ ನಂತರವೇ 22 ನೇ ಶತಮಾನಕ್ಕೆ ಮುಂದಡಿ ಇಡಬೇಕಿದೆ.  ಆರ್ಥಿಕ ಅಭಿವೃದ್ಧಿ ಎಂದರೆ ಅದು ಬರಿ ಹಣವಲ್ಲ.  ಮುಂದೊಂದು ದಿನ ಹಣವಿದ್ದ ದೇಶ ಶ್ರೀಮಂತವಾಗಲಾರದು.  ಹೆಚ್ಚು ನೀರು ಇರುವ ದೇಶವೇ ಶ್ರೀಮಂತ ದೇಶವಾಗಲಿದೆ.  ನಮ್ಮ ಪರಿಸರವನ್ನು ನಾವು ಸಂರಕ್ಷಿಸುತ್ತಿಲ್ಲ.  ನಿಸರ್ಗದ ಪಾಲನೆಯ ಬಗ್ಗೆ ಬಸವಣ್ಣನವರು ತಮ್ಮ ವಚನಗಳಲ್ಲಿ ಅದ್ಭುತವಾಗಿ ವಿವರಿಸಿದ್ದು, ಅವರ ಚಿಂತನಾ ಕ್ರಮಗಳನ್ನು ಬದುಕಿನಲ್ಲಿ ಅಳವಡಿಸದಿದ್ದಲ್ಲಿ, ಬರಡು ಭೂಮಿ ಮಾತ್ರ ಉಳಿಯಲಿದೆ.  ಬಸವಣ್ಣನವರು ಒಂದು ಜಾತಿ, ಪ್ರದೇಶಕ್ಕೆ ಮಾತ್ರ ಸೀಮಿತವಲ್ಲ.  ಸೂರ್ಯ ಹೇಗೆ ಇಡೀ ಜಗತ್ತಿಗೆ ಬೇಕೋ, ಹಾಗೆ ಬಸವಣ್ಣನವರು ಇಡೀ ಜಗತ್ತಿಗೆ ಬೆಳಕಾಗಿ ಬೇಕಾಗಿದ್ದಾರೆ.  ಬಸವಣ್ಣನವರು ಯಾವ ಧರ್ಮ, ಜನರನ್ನೂ ದ್ವೇಷಿಸಲಿಲ್ಲ.  ಸತ್ಯ ಮಾರ್ಗವನ್ನಷ್ಟೇ ಅವರು ಹೇಳಿಕೊಟ್ಟಿದ್ದಾರೆ.  ಆ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕಿದೆ.  ಸ್ತ್ರೀ ಸಮಾನತೆ, ಕಾರ್ಮಿಕರಿಗೆ ನ್ಯಾಯ, ಮಾನವ ಹಕ್ಕುಗಳ ಕುರಿತು 12 ನೇ ಶತಮಾನದಲ್ಲಿಯೇ ಅವರು ಕಾರ್ಯಗತಗೊಳಿಸಿದ್ದರು.  ನಮ್ಮ ಸಂವಿಧಾನದ ಬಹುತೇಕ ಅಂಶಗಳು ಅವರ ವಚನಗಳಲ್ಲಿಯೇ ಅಡಗಿವೆ.  ವಿಶ್ವ ಸಂಸ್ಥೆ ಮಾನವ ಹಕ್ಕುಗಳ 30 ಅಂಶಗಳನ್ನು ಪಟ್ಟಿ ಮಾಡಿ ಬಿಡುಗಡೆ ಮಾಡಿತು.  ಈ ಎಲ್ಲ ಅಂಶಗಳು ಬಸವಣ್ಣನವರ ವಚನಗಳಲ್ಲಿಯೇ ಇವೆ.  ಕೋಟ್ಯಾಂತರ ಜನರನ್ನು ತತ್ವದಡಿ ಹಿಡಿದಿಡುವ ಶಕ್ತಿ ಬಸವಣ್ಣನವರ ವಚನಗಳಲ್ಲಿದೆ.  ಕಲ್ಯಾಣ ಕ್ರಾಂತಿಯ ನಂತರದಲ್ಲಿ ದಾರ್ಶನಿಕರ ಕೇವಲ 15 ಸಾವಿರ ವಚನಗಳು ಮಾತ್ರ ದೊರೆತಿದ್ದು, ಇವು ಶೇ. 10 ರಷ್ಟು ಮಾತ್ರ ಎಂಬುದು ಗಮನಾರ್ಹ ಎಂದರು.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ ಜಗಜ್ಯೋತಿ ಬಸವೇಶ್ವರರ ಭಾವಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು, ನೇರ ಮಾತುಗಳಿಂದ, ಸಮಾಜದ ಸುಧಾರಣೆಗೆ, ಮೂಢ ನಂಬಿಕೆಗಳನ್ನು ತೊಡೆದುಹಾಕಲು ಹಾಗೂ ಸಾಮಾಜಿಕ ಸಮಾನತೆಗೆ ಶ್ರಮಿಸಿದವರು ಬಸವಣ್ಣನವರು.  ಸಾಮಾಜಿಕ ನೆಲೆಗಟ್ಟಿನಲ್ಲಿ ಜಾತಿ ವ್ಯವಸ್ಥೆಯನ್ನು ಬಲವಾಗಿ ಅಲ್ಲಗೆಳೆದಿದ್ದರು.  12 ನೇ ಶತಮಾನದಿಂದ ಈಗಿನವರೆಗೂ ಸಮಾಜದಲ್ಲಿ ಬಲವಾಗಿ ಬೇರೂರಿರುವ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಸಾಧ್ಯವಾಗದಿರುವುದು ವಿಪರ್ಯಾಸ.  ಬಸವಣ್ಣನವರ ಆಚಾರ-ವಿಚಾರಗಳನ್ನು ಅಳವಡಿಸಿಕೊಳ್ಳದಿದ್ದಲ್ಲಿ, ಮನುಕುಲ ದೊಡ್ಡ ತೊಂದರೆಗೆ ಸಿಲುಕಲಿದೆ.  ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಸಿದ್ಧಾಂತವನ್ನು ನಂಬಿರುವ ನಮ್ಮ ಸರ್ಕಾರ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂಬುದಾಗಿ ಆದೇಶ ಹೊರಡಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
     ಸಂಸದ ಕರಡಿ ಸಂಗಣ್ಣ ಮಾತನಾಡಿ, ವಿಶ್ವಗುರು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಇಡೀ ಜಗತ್ತು ಸಮಗ್ರವಾಗಿ ಅರಿಯುವಂತಾಗಲು, ಬಸವಣ್ಣನವರ ವಚನಗಳನ್ನು 23 ಭಾಷೆಗಳಿಗೆ ತರ್ಜುಮೆ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೂಚಿಸಿರುವುದು ನಿಜಕ್ಕೂ ಸಂತಸ ತಂದಿದೆ ಎಂದರು.
     ಬಸವರಾಜ ಬಳ್ಳೊಳ್ಳಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.  ಸಮಾರಂಭದಲ್ಲಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು, ಅಕ್ಕ ಅನ್ನಪೂರ್ಣ ತಾಯಿ, ಡಾ. ಮೈತ್ರಾಯಿಣಿ ಗದ್ದೆಪ್ಪಗೌಡರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂಗಮೇಶ ಉಪಾಸೆ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ತಹಸಿಲ್ದಾರ್ ಗುರುಬಸವರಾಜ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಉಪಸ್ಥಿತರಿದ್ದರು.  ರೈತ ಮಹಿಳೆ ಯಲ್ಲಮ್ಮ ಭಜಂತ್ರಿ, ಜಯಶ್ರೀ ಮಕಾಳೆ, ಪೊಲೀಸ್ ಕಾನ್ಸಟೆಬಲ್ ಚಾಂದ್‍ಪಾಶಾ ಅವರಿಗೆ ಬಸವ ಕಾರುಣ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಸಮಾರಂಭಕ್ಕೂ ಪೂರ್ವದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಕೋಟೆ ಈಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ, ಕಿತ್ತೂರರಾಣಿ ಚೆನ್ನಮ್ಮ ಸರ್ಕಲ್ ಮೂಲಕ ಗವಿಮಠ ಆವರಣದವರೆಗೂ ಸಾಗಿಬಂದಿತು.

Post a Comment