Thursday, 27 April 2017

ಕುಷ್ಟಗಿ : ಕುಡಿಯುವ ನೀರು ಸಮಸ್ಯೆ ತುರ್ತು ನಿವಾರಣೆಗೆ 6. 04 ಕೋಟಿ ರೂ.


ಕೊಪ್ಪಳ ಏ. 27 (ಕರ್ನಾಟಕ ವಾರ್ತೆ): ಕುಷ್ಟಗಿ ತಾಲೂಕಿನಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಸಮಸ್ಯಾತ್ಮಕ ಗ್ರಾಮಗಳಿಗೆ ತುರ್ತಾಗಿ ಕುಡಿಯುವ ನೀರು ಪೂರೈಕೆಗಾಗಿ 6. 04 ಕೋಟಿ ರೂ. ಗಳ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಕೂಡಲೆ ಕಾಮಗಾರಿ ಪ್ರಾರಂಭಿಸುವಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಕುಷ್ಟಗಿ ತಾಲೂಕಿನ ಬರ ಪರಿಹಾರ ಕಾರ್ಯಗಳ ಕುರಿತು ಕುಷ್ಟಗಿ ಸರ್ಕಿಟ್ ಹೌಸ್‍ನಲ್ಲಿ ಏರ್ಪಡಿಸಲಾಗಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕುಷ್ಟಗಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರು ಪೂರೈಕೆಯ ಸ್ಥಿತಿ ಗತಿ ಕುರಿತು ವಿವರಣೆ ನೀಡಿದ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಸಹಾಯಕ ಇಂಜಿನಿಯರ್ ಅರವಿಂದ ಜೋಶಿ ಅವರು, ಕುಷ್ಟಗಿ ತಾಲೂಕಿನಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಮತೆ 116 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳನ್ನಾಗಿ ಗುರುತಿಸಲಾಗಿದ್ದು, ಈಗಾಗಲೆ 17 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.  ಅಲ್ಲದೆ ಕುಡಿಯುವ ನೀರಿನ ಮೂಲ ಲಭ್ಯವಾಗದ ಕಾರಣದಿಂದ 35 ಗ್ರಾಮಗಳಲ್ಲಿ 46 ಖಾಸಗಿ ಬೋರ್‍ವೆಲ್‍ಗಳನ್ನು ಮಾಸಿಕ ಬಾಡಿಗೆ ಆಧಾರದಲ್ಲಿ ಪಡೆದುಕೊಂಡು, ಸಾರ್ವಜನಿಕರಿಗೆ ನೀರು ಪೂರೈಕೆ ಮಾಡಲಾಗುತ್ತಿದೆ.  ಬರುವ ಮೇ, ಜೂನ್ ಮತ್ತು ಜುಲೈ ಸೇರಿದಂತೆ ಒಟ್ಟು 03 ತಿಂಗಳುಗಳಿಗೆ ಸಮಸ್ಯಾತ್ಮಕ ಗ್ರಾಮಗಳಲ್ಲಿ ಸಮರ್ಪಕ ನೀರು ಪೂರೈಕೆ ಮಾಡುವ ಸಲುವಾಗಿ 6. 04 ಕೋಟಿ ರೂ. ಗಳ ಕ್ರಿಯಾ ಯೋಜನೆ ಸಿದ್ಧವಾಗಿದೆ.  ಇದರಲ್ಲಿ ಖಾಸಗಿ ಬೋರ್‍ವೆಲ್ ಮೂಲಕ ನೀರು ಸರಬರಾಜು, ಟ್ಯಾಂಕರ್ ಮೂಲಕ ನೀರು ಪೂರ್ಯಕೆ, ಹೊಸದಾಗಿ ಕೊಳವೆ ಬಾವಿ ಕೊರೆಯಿಸುವುದು, ಅಲ್ಲದೆ ಪೈಪ್‍ಲೈನ್ ಹಾಕಿ ಮೋಟಾರು ಅಳವಡಿಸುವುದು ಹೀಗೆ 314 ಕಾಮಗಾರಿಗಳಿಗೆ 604. 85 ಲಕ್ಷ ರೂ. ಗಳ ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ಮಂತ್ರಿಗಳು, ಕ್ರಿಯಾ ಯೋಜನೆಗೆ ಕೂಡಲೆ ಅನುಮೊದನೆ ಪಡೆದು, ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಬೇಕು.  ಕಾಮಗಾರಿ ಕೈಗೊಳ್ಳುವಾಗ ಉತ್ತಮ ಗುಣಮಟ್ಟದ ಪೈಪ್ ಹಾಗೂ ಉಪಕರಣಗಳನ್ನು ಅಳವಡಿಸಬೇಕು.  ಜೆಸ್ಕಾಂ ಅಧಿಕಾರಿಗಳು, ಕುಡಿಯುವ ನೀರು ಯೋಜನೆಗಳಿಗೆ ಕೂಡಲೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು.  ಸಮಸ್ಯಾತ್ಮಕ ಗ್ರಾಮಗಳ ಪೈಕಿ ಯಾವುದೇ ಗ್ರಾಮಗಳಲ್ಲಿ ಅಗತ್ಯವಿದೆಯೋ, ಅಂತಹ ಗ್ರಾಮಗಳ ಕುಡಿಯುವ ನೀರು ಯೋಜನೆಯನ್ನು ನಿರಂತರ ಜ್ಯೋತಿ ಮಾರ್ಗಕ್ಕೆ ಜೋಡಣೆ ಮಾಡಿಕೊಡಬೇಕು.   ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು, ಕುಡಿಯುವ ನೀರು ಪೂರೈಕೆ, ಕೂಲಿಕಾರರಿಗೆ ಉದ್ಯೋಗ, ಜಾನುವಾರುಗಳಿಗೆ ಮೇವು ಒದಗಿಸುವ ವಿಚಾರದಲ್ಲಿ ಇಲ್ಲಿನ ಅಧಿಕಾರಿಗಳು ಮಾನವೀಯ ನೆಲೆಗಟ್ಟಿನಲ್ಲಿ, ಆತ್ಮಸಾಕ್ಷಿಗೆ ಅನುಗುಣವಾಗಿ ಪ್ರಾಮಾಣಿಕ ಕೆಲಸ ಮಾಡಿ ಎಂದರು.
ಆರ್.ಓ ಘಟಕಗಳ ಸ್ಥಿತಿ-ಗತಿ ಸಮಗ್ರ ವರದಿ ಸಲ್ಲಿಸಿ :
********************ಜಿಲ್ಲೆಯಲ್ಲಿ ವಿವಿಧ ಏಜೆನ್ಸಿಗಳು ಶುದ್ಧ ಕುಡಿಯುವ ನೀರು ಘಟಕಗಳನ್ನು ಅಳವಡಿಸುವ ಗುತ್ತಿಗೆಯನ್ನು ಪಡೆದುಕೊಂಡಿದ್ದು, ಕುಷ್ಟಗಿ ತಾಲೂಕಿನಲ್ಲಿ ಕೆಲ ಏಜೆನ್ಸಿಗಳು ಇದುವರೆಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸದೇ ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ, ಜನರು ನೀರಿಗಾಗಿ ಪರಿತಪಿಸುವಂತಾಗಿದೆ.  ಕೆಲ ಘಟಕಗಳ ನೀರು ಗುಣಮಟ್ಟದ್ದಾಗಿಲ್ಲ, ಜನಪ್ರತಿನಿಧಿಗಳ ಮಾತು ಕೇಳುತ್ತಿಲ್ಲ.  ಕೆಲ ಘಟಕಗಳ ಛತ್ತು ಗಾಳಿ, ಮಳೆಗೆ ಹಾರಿಹೋಗಿದ್ದು, ದುರಸ್ತಿಗೊಂಡಿಲ್ಲ ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಜಿ.ಪಂ. ಸದಸ್ಯ ಕೆ. ಮಹೇಶ್ ಅವರು ಮಂತ್ರಿಗಳ ಗಮನಕ್ಕೆ ತಂದರು.  ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಸವರಾಜ ರಾಯರಡ್ಡಿ ಅವರು, ಈ ಹಿಂದೆಯೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ.  ಜಿಲ್ಲೆಯಲ್ಲಿ ಸದ್ಯ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿ-ಗತಿ ಕುರಿತು ಆಯಾ ಗ್ರಾಮ ಪಂಚಾಯತಿಯ ಪಿಡಿಓ ಗಳಿಂದ ದೃಢೀಕರಣ ಪತ್ರ ಪಡೆದು, ತಾಲೂಕುವಾರು ವಿವರವನ್ನು ಒಂದು ವಾರದೊಳಗೆ ಸಲ್ಲಿಸಬೇಕು.  ಶುದ್ಧ ಕುಡಿಯುವ ನೀರು ಘಟಕಗಳನ್ನು ಅಳವಡಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಬೇಕು ಎಂದು   ಅಧಿಕಾರಿಗಳಿಗೆ ಸೂಚನೆ ನೀಡಿದರು.  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ 558 ಆರ್.ಓ ಘಟಕಗಳ ಪೈಕಿ 408 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.  ವಿಳಂಬ ಮಾಡಿರುವ ಏಜೆನ್ಸಿಯ ಟೆಂಡರ್ ರದ್ದುಪಡಿಸಿ, ಕಪ್ಪು ಪಟ್ಟಿಗೆ ಸೇರಿಸುವಂತೆ ಈಗಾಗಲೆ ಮುಖ್ಯ ಇಂಜಿನಿಯರ್ ಅವರಿಗೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ ಎಂದರು.
ನೀರು ಸಂಗ್ರಹಗಾರಗಳ ಸ್ವಚ್ಛತೆ ಆಂದೋಲನ :
**************ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ ನಿರ್ಮಿಸಲಾಗಿರುವ ಕೆಳಮಟ್ಟದ ಹಾಗೂ ಮೇಲ್ಮಟ್ಟದ ನೀರು ಸಂಗ್ರಹಗಾರಗಳಲ್ಲಿ ಬಹಳಷ್ಟು ಸಂಗ್ರಹಗಾರಗಳು ಸೊರಿಕೆಯಾಗುತ್ತಿದ್ದು, ಕೆಲವು ಅತ್ಯಂತ ಕೆಟ್ಟ ಸ್ಥಿತಿಯಲ್ಲಿವೆ. ಅವುಗಳನ್ನು ದುರಸ್ತಿಗೊಳಿಸುವುದು ಹಾಗೂ ಸ್ವಚ್ಛಗೊಳಿಸುವುದು ಅಗತ್ಯವಾಗಿದೆ ಎಂದು ಜಿ.ಪಂ. ಸದಸ್ಯರು ಮಂತ್ರಿಗಳ ಗಮನಕ್ಕೆ ತಂದರು.  ಜಿಲ್ಲೆಯಾದ್ಯಂತ ಎಲ್ಲ ಕೆಳಮಟ್ಟದ ಹಾಗೂ ಮೇಲ್ಮಟ್ಟದ ನೀರು ಸಂಗ್ರಹಗಾರಗಳನ್ನು ಸ್ವಚ್ಛಗೊಳಿಸಲು ವಿಶೇಷ ಆಂದೋಲನ ರೂಪಿಸಿ, ನೀರು ಸಂಗ್ರಹಗಾರಗಳ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡು, ರಾಜ್ಯಕ್ಕೆ ಮಾದರಿಯಾಗುವಂತಹ ಕಾರ್ಯ ಕೈಗೊಳ್ಳುವಂತೆ ಮಂತ್ರಿಗಳು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, , ಜಿ.ಪಂ. ಸದಸ್ಯರುಗಳಾದ ಕೆ. ಮಹೇಶ್, ಭೀಮಪ್ಪ ಅಗಸಿಮುಂದಿನ, ನೇಮಣ್ಣ ಮೇಲುಸಕ್ರಿ, ವಿಜಯ ನಾಯಕ್, ಕುಷ್ಟಗಿ ಪುರಸಭೆ ಅಧ್ಯಕ್ಷ ಮೊಯ್ನುದ್ದೀನ್ ಮುಲ್ಲ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಟ್ಟೂರ, ತಹಸಿಲ್ದಾರ್ ಗಂಗಪ್ಪ, ಸಹಾಯಕ ಕೃಷಿ ನಿರ್ದೇಶಕ ವಿ. ಕಮತರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
Post a Comment