Sunday, 30 April 2017

ಬಸವ ತತ್ವಗಳ ಪಾಲನೆಯಿಂದ ಮಾತ್ರ ಜಗತ್ತು ಉಳಿಯಲು ಸಾಧ್ಯ- ರಂಜಾನ್ ದರ್ಗಾ


ಕೊಪ್ಪಳ  ಏ. 30 (ಕ.ವಾ): ಜಗತ್ತಿನಲ್ಲಿ ಮುಂದುವರಿದ ರಾಷ್ಟ್ರಗಳ ಅರ್ಥ ವ್ಯವಸ್ಥೆ ಶೋಷಣೆಯ ಅರ್ಥ ವ್ಯವಸ್ಥೆಯಾಗಿದ್ದು, ಜಗತ್ತು ದೀರ್ಘಕಾಲ ಉಳಿಯಬೇಕಾದರೆ ಬಸವ ತತ್ವಗಳ ಪಾಲನೆಯಿಂದ ಮಾತ್ರ ಸಾಧ್ಯ ಎಂದು ಧಾರವಾಡದ ಸಾಹಿತಿ ರಂಜಾನ್ ದರ್ಗಾ ಅವರು ಹೇಳಿದರು.
     ಜಿಲ್ಲಾಡಳಿತ ಹಾಗೂ ಬಸವ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ನಗರದ ಗವಿಮಠ ಆವರಣದಲ್ಲಿ ಏರ್ಪಡಿಸಲಾಗಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಭೂಮಿ ಬದುಕಬೇಕಾದರೆ, ಮನುಕುಲ ಯಾವ ರೀತಿ ಬದುಕಬೇಕು ಎಂಬುದನ್ನು ಬಸವಣ್ಣನವರು 12 ನೇ ಶತಮಾನದಲ್ಲಿಯೇ ತಮ್ಮ ವಚನಗಳಲ್ಲಿ ಸಾರಿದ್ದಾರೆ.  ವಿಶ್ವಗುರು ಬಸವಣ್ಣನವರು ರಾಜನೀತಿಜ್ಞ ಮಾತ್ರವಲ್ಲಿ ಅರ್ಥ ಶಾಸ್ತ್ರಜ್ಞ, ಮನೋಶಾಸ್ತ್ರಜ್ಞರೂ ಆಗಿದ್ದರು.   ಯುದ್ಧಗಳನ್ನು ಮಾಡದೆ ಅಮೆರಿಕಾ ತನ್ನ ಅರ್ಥ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ.  ಫ್ರಾನ್ಸ್, ಬ್ರಿಟನ್ ಹೀಗೆ ಮುಂದುವರೆದ ರಾಷ್ಟ್ರಗಳಲ್ಲಿನ ಅರ್ಥ ವ್ಯವಸ್ಥೆ ಶೋಷಣೆಯ ಅರ್ಥ ವ್ಯವಸ್ಥೆಯಾಗಿದೆ.  ಇಡೀ ಜಗತ್ತು ಇಂದು ಅರ್ಥ ವ್ಯವಸ್ಥೆಯನ್ನು ರೂಪಿಸುವಲ್ಲಿ ಸೋತಿದೆ.  ಜಗತ್ತು ದೀರ್ಘಕಾಲ ಉಳಿಯಬೇಕಾದರೆ, ಬಸವ ತತ್ವಗಳನ್ನು ಪಾಲಿಸಲೇಬೇಕಿದೆ.  ಇದರಿಂದಾಗಿಯೇ ಬಸವಣ್ಣನವರು ವಿಶ್ವಮಾನ್ಯ ದಾರ್ಶನಿಕರಾಗಿದ್ದಾರೆ.  12ನೇ ಶತಮಾನದಿಂದ ನಾವು 21 ನೇ ಶತಮಾನಕ್ಕೆ ಬಂದಿದ್ದೇವೆ.  12 ನೇ ಶತಮಾನದಲ್ಲಿಯೇ ನಡೆದಂತಹ ಸಾಮಾಜಿಕ ಕ್ರಾಂತಿಯ ಚಿಂತನೆಗಳನ್ನು ಇದುವರೆಗೂ ನಾವು ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ.  ಹೀಗಾಗಿ ಪುನಃ ನಾವು 12 ನೇ ಶತಮಾನಕ್ಕೆ ಹೋಗಿ ಬಂದ ನಂತರವೇ 22 ನೇ ಶತಮಾನಕ್ಕೆ ಮುಂದಡಿ ಇಡಬೇಕಿದೆ.  ಆರ್ಥಿಕ ಅಭಿವೃದ್ಧಿ ಎಂದರೆ ಅದು ಬರಿ ಹಣವಲ್ಲ.  ಮುಂದೊಂದು ದಿನ ಹಣವಿದ್ದ ದೇಶ ಶ್ರೀಮಂತವಾಗಲಾರದು.  ಹೆಚ್ಚು ನೀರು ಇರುವ ದೇಶವೇ ಶ್ರೀಮಂತ ದೇಶವಾಗಲಿದೆ.  ನಮ್ಮ ಪರಿಸರವನ್ನು ನಾವು ಸಂರಕ್ಷಿಸುತ್ತಿಲ್ಲ.  ನಿಸರ್ಗದ ಪಾಲನೆಯ ಬಗ್ಗೆ ಬಸವಣ್ಣನವರು ತಮ್ಮ ವಚನಗಳಲ್ಲಿ ಅದ್ಭುತವಾಗಿ ವಿವರಿಸಿದ್ದು, ಅವರ ಚಿಂತನಾ ಕ್ರಮಗಳನ್ನು ಬದುಕಿನಲ್ಲಿ ಅಳವಡಿಸದಿದ್ದಲ್ಲಿ, ಬರಡು ಭೂಮಿ ಮಾತ್ರ ಉಳಿಯಲಿದೆ.  ಬಸವಣ್ಣನವರು ಒಂದು ಜಾತಿ, ಪ್ರದೇಶಕ್ಕೆ ಮಾತ್ರ ಸೀಮಿತವಲ್ಲ.  ಸೂರ್ಯ ಹೇಗೆ ಇಡೀ ಜಗತ್ತಿಗೆ ಬೇಕೋ, ಹಾಗೆ ಬಸವಣ್ಣನವರು ಇಡೀ ಜಗತ್ತಿಗೆ ಬೆಳಕಾಗಿ ಬೇಕಾಗಿದ್ದಾರೆ.  ಬಸವಣ್ಣನವರು ಯಾವ ಧರ್ಮ, ಜನರನ್ನೂ ದ್ವೇಷಿಸಲಿಲ್ಲ.  ಸತ್ಯ ಮಾರ್ಗವನ್ನಷ್ಟೇ ಅವರು ಹೇಳಿಕೊಟ್ಟಿದ್ದಾರೆ.  ಆ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕಿದೆ.  ಸ್ತ್ರೀ ಸಮಾನತೆ, ಕಾರ್ಮಿಕರಿಗೆ ನ್ಯಾಯ, ಮಾನವ ಹಕ್ಕುಗಳ ಕುರಿತು 12 ನೇ ಶತಮಾನದಲ್ಲಿಯೇ ಅವರು ಕಾರ್ಯಗತಗೊಳಿಸಿದ್ದರು.  ನಮ್ಮ ಸಂವಿಧಾನದ ಬಹುತೇಕ ಅಂಶಗಳು ಅವರ ವಚನಗಳಲ್ಲಿಯೇ ಅಡಗಿವೆ.  ವಿಶ್ವ ಸಂಸ್ಥೆ ಮಾನವ ಹಕ್ಕುಗಳ 30 ಅಂಶಗಳನ್ನು ಪಟ್ಟಿ ಮಾಡಿ ಬಿಡುಗಡೆ ಮಾಡಿತು.  ಈ ಎಲ್ಲ ಅಂಶಗಳು ಬಸವಣ್ಣನವರ ವಚನಗಳಲ್ಲಿಯೇ ಇವೆ.  ಕೋಟ್ಯಾಂತರ ಜನರನ್ನು ತತ್ವದಡಿ ಹಿಡಿದಿಡುವ ಶಕ್ತಿ ಬಸವಣ್ಣನವರ ವಚನಗಳಲ್ಲಿದೆ.  ಕಲ್ಯಾಣ ಕ್ರಾಂತಿಯ ನಂತರದಲ್ಲಿ ದಾರ್ಶನಿಕರ ಕೇವಲ 15 ಸಾವಿರ ವಚನಗಳು ಮಾತ್ರ ದೊರೆತಿದ್ದು, ಇವು ಶೇ. 10 ರಷ್ಟು ಮಾತ್ರ ಎಂಬುದು ಗಮನಾರ್ಹ ಎಂದರು.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ ಜಗಜ್ಯೋತಿ ಬಸವೇಶ್ವರರ ಭಾವಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು, ನೇರ ಮಾತುಗಳಿಂದ, ಸಮಾಜದ ಸುಧಾರಣೆಗೆ, ಮೂಢ ನಂಬಿಕೆಗಳನ್ನು ತೊಡೆದುಹಾಕಲು ಹಾಗೂ ಸಾಮಾಜಿಕ ಸಮಾನತೆಗೆ ಶ್ರಮಿಸಿದವರು ಬಸವಣ್ಣನವರು.  ಸಾಮಾಜಿಕ ನೆಲೆಗಟ್ಟಿನಲ್ಲಿ ಜಾತಿ ವ್ಯವಸ್ಥೆಯನ್ನು ಬಲವಾಗಿ ಅಲ್ಲಗೆಳೆದಿದ್ದರು.  12 ನೇ ಶತಮಾನದಿಂದ ಈಗಿನವರೆಗೂ ಸಮಾಜದಲ್ಲಿ ಬಲವಾಗಿ ಬೇರೂರಿರುವ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಸಾಧ್ಯವಾಗದಿರುವುದು ವಿಪರ್ಯಾಸ.  ಬಸವಣ್ಣನವರ ಆಚಾರ-ವಿಚಾರಗಳನ್ನು ಅಳವಡಿಸಿಕೊಳ್ಳದಿದ್ದಲ್ಲಿ, ಮನುಕುಲ ದೊಡ್ಡ ತೊಂದರೆಗೆ ಸಿಲುಕಲಿದೆ.  ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಸಿದ್ಧಾಂತವನ್ನು ನಂಬಿರುವ ನಮ್ಮ ಸರ್ಕಾರ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂಬುದಾಗಿ ಆದೇಶ ಹೊರಡಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
     ಸಂಸದ ಕರಡಿ ಸಂಗಣ್ಣ ಮಾತನಾಡಿ, ವಿಶ್ವಗುರು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಇಡೀ ಜಗತ್ತು ಸಮಗ್ರವಾಗಿ ಅರಿಯುವಂತಾಗಲು, ಬಸವಣ್ಣನವರ ವಚನಗಳನ್ನು 23 ಭಾಷೆಗಳಿಗೆ ತರ್ಜುಮೆ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೂಚಿಸಿರುವುದು ನಿಜಕ್ಕೂ ಸಂತಸ ತಂದಿದೆ ಎಂದರು.
     ಬಸವರಾಜ ಬಳ್ಳೊಳ್ಳಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.  ಸಮಾರಂಭದಲ್ಲಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು, ಅಕ್ಕ ಅನ್ನಪೂರ್ಣ ತಾಯಿ, ಡಾ. ಮೈತ್ರಾಯಿಣಿ ಗದ್ದೆಪ್ಪಗೌಡರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂಗಮೇಶ ಉಪಾಸೆ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ತಹಸಿಲ್ದಾರ್ ಗುರುಬಸವರಾಜ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಉಪಸ್ಥಿತರಿದ್ದರು.  ರೈತ ಮಹಿಳೆ ಯಲ್ಲಮ್ಮ ಭಜಂತ್ರಿ, ಜಯಶ್ರೀ ಮಕಾಳೆ, ಪೊಲೀಸ್ ಕಾನ್ಸಟೆಬಲ್ ಚಾಂದ್‍ಪಾಶಾ ಅವರಿಗೆ ಬಸವ ಕಾರುಣ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಸಮಾರಂಭಕ್ಕೂ ಪೂರ್ವದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಕೋಟೆ ಈಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ, ಕಿತ್ತೂರರಾಣಿ ಚೆನ್ನಮ್ಮ ಸರ್ಕಲ್ ಮೂಲಕ ಗವಿಮಠ ಆವರಣದವರೆಗೂ ಸಾಗಿಬಂದಿತು.

Friday, 28 April 2017

ಒಣಬೇಸಾಯ ಸಂಶೋಧನಾ ಕೇಂದ್ರ ಮಂಜೂರು- ಸಂಸದ ಕರಡಿ ಸಂಗಣ್ಣ ಹರ್ಷ


ಕೊಪ್ಪಳ ಏ. 28 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಗುಳದಳ್ಳಿ ಗ್ರಾಮದಲ್ಲಿ ನೂತನವಾಗಿ ಒಣ ಬೇಸಾಯ ಸಂಶೋಧನಾ ಕೇಂದ್ರವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದ್ದು, ಇದಕ್ಕಾಗಿ ರಾಜ್ಯ ಸರ್ಕಾರದಿಂದ ಜಮೀನು ಒದಗಿಸಿದ್ದಕ್ಕಾಗಿ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
     ಕೊಪ್ಪಳ ಜಿಲ್ಲೆಗೆ ಒಣ ಬೇಸಾಯ ಸಂಶೋಧನಾ ಕೇಂದ್ರವನ್ನು ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.  ಇದೀಗ ಕೇಂದ್ರ ಸರ್ಕಾರ ಇದನ್ನು ಮಂಜೂರು ಮಾಡಿದೆ.  ರಾಜ್ಯ ಸರ್ಕಾರವೂ ಕೂಡ ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದು, ಒಣ ಬೇಸಾಯ ಸಂಶೋಧನಾ ಕೇಂದ್ರ ಸ್ಥಾಪನೆಗೆ ಗುಳದಳ್ಳಿಯಲ್ಲಿ ಜಮೀನು ಮಂಜೂರು ಮಾಡಿದೆ.  ಈ ಭಾಗದಲ್ಲಿ ಮುಂಗಾರು ಹಂಗಾಮಿನ ಕೆಂಪು ಮಣ್ಣಿನ ಕೃಷಿಕರಿಗೆ,  ಮಣ್ಣಿಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಲು ಮತ್ತು ರಸಗೊಬ್ಬರ ಬಳಕೆ ಕುರಿತಂತೆ ನೂತನ ಸಂಶೋಧನಾ ಕೇಂದ್ರದಿಂದ ಕೃಷಿಕರಿಗೆ ಉತ್ತಮ ಮಾರ್ಗದರ್ಶನ ದೊರೆಯಲು ಸಹಕಾರಿಯಾಗಲಿದೆ ಎಂದು ಸಂಸದ ಕರಡಿ ಸಂಗಣ್ಣ ಅವರು ತಿಳಿಸಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ಪೊಲೀಸ್ ವಿರುದ್ಧ ದೂರಿದ್ದಲ್ಲಿ ಪ್ರಾಧಿಕಾರಕ್ಕೆ ಸಲ್ಲಿಸಿ


ಕೊಪ್ಪಳ, ಏ. 28  (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರವು ಕರ್ನಾಟಕ ಪೊಲೀಸ್ ಕಾಯ್ದೆ 2012 ರ ತಿದ್ದುಪಡಿ ಪ್ರಕಾರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮೇಲಿನ ದೂರುಗಳ ವಿಚಾರಣೆಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ದೂರು ಪ್ರಾಧಿಕಾರಗಳನ್ನು ರಚಿಸಿದ್ದು, ಜಿಲ್ಲೆಯ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿಗಳ ವಿರುದ್ಧ ದೂರುಗಳಿದ್ದಲ್ಲಿ, ಸಾರ್ವಜನಿಕರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ತ್ಯಾಗರಾಜ್ ತಿಳಿಸಿದ್ದಾರೆ.
    ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವು ಡಿಎಸ್‍ಪಿ ಮತ್ತು ಅದಕ್ಕಿಂತ ಕೆಳದರ್ಜೆ ಅಧಿಕಾರಿ/ಸಿಬ್ಬಂದಿಗಳ ವಿರುದ್ಧದ ಆರೋಪ ಅಂದರೆ ಯಾವುದೇ ಸಾರ್ವಜನಿಕ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ, ಪೊಲೀಸ್ ವಶದಲ್ಲಿದ್ದಾಗ ಮರಣ, ಐಪಿಸಿ ಸೆಕ್ಷನ್-320 ರಲ್ಲಿ ತಿಳಿಸಲಾದಂತಹ ಗಂಭೀರ ಗಾಯ, ಮಾನಭಂಗ, ಅಥವಾ ಮಾನಭಂಗಕ್ಕೆ ಯತ್ನ ಅಥವಾ ಕಾನೂನು ಪ್ರಕಾರವಲ್ಲದ ಬಂಧನ ಇಲ್ಲವೇ ವಶದಲ್ಲಿರಿಸಿಕೊಳ್ಳುವುದು, ಇತರ ಗಂಭೀರ ದುರ್ನಡತೆ ದೂರುಗಳ ವಿಚಾರಣೆ ಮಾಡಲಿದೆ.
    ಪೊಲೀಸ್ ಉಪಾಧೀಕ್ಷರು ಮತ್ತು ಅದಕ್ಕಿಂತ ಕೆಳ ಹಂತದ ಅಧಿಕಾರಿ/ಸಿಬ್ಬಂಧಿಗಳ ವಿರುದ್ದದ ದೂರುಗಳನ್ನು, ಸಾರ್ವಜನಿಕರು  ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಕೊಪ್ಪಳ ಇವರಿಗೆ ಸಲ್ಲಿಸಬಹುದು.
     ಡಿಎಸ್‍ಪಿ ಹುದ್ದೆಯ ಅಧಿಕಾರಿಗಿಂತ ಮೇಲಿನ ದರ್ಜೆಯ ಅಧಿಕಾರಿಗಳ ವಿರುದ್ದದ ದೂರುಗಳನ್ನು ಅಧ್ಯಕ್ಷರು, ರಾಜ್ಯ ಪೊಲೀಸ್ ದೂರು ಪ್ರಾಧಿಕಾರ, ಕೊಠಡಿ ಸಂ.36, ನೆಲಮಹಡಿ, ವಿಕಾಸ ಸೌಧ, ಬೆಂಗಳೂರು-01, ದೂರವಾಣಿ- 080-22386063 ಅಥವಾ 22034220 ಇಲ್ಲಿಗೆ ಸಲ್ಲಿಸಬಹುದಾಗಿದೆ.   
     ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದಿಂದ ಸಾರ್ವಜನಿಕರಿಗಾಗಿ ವೆಬ್‍ಸೈಟ್ ಪ್ರಾರಂಭಿಸಿದೆ  www.karnataka.gov.in/spcablr@ ಸಾರ್ವಜಿನಿಕರು ವೀಕ್ಷಿಸಬಹುದು. ಹಾಗೂ ಕೊಪ್ಪಳ ಪೊಲೀಸ್ ದೂರು ಪ್ರಾಧಿಕಾರದ ಇ-ಮೇಲ್  dpcakpl@karnataka.gov.in    ಮೂಲಕ ಸಂಪರ್ಕಿಸಿ ದೂರು ಸಲ್ಲಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ


ಕೊಪ್ಪಳ, ಏ. 28 (ಕರ್ನಾಟಕ ವಾರ್ತೆ): ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ 2017-18ನೇ ಸಾಲಿಗಾಗಿ ಸ್ವಯಂ ಉದ್ಯೋಗ, ನೇರ ಸಾಲ, ಉದ್ಯಮ ಶೀಲತೆ, ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ಕೊಪ್ಪಳ ಜಿಲ್ಲೆಯ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
    ಸ್ವಯಂ ಉದ್ಯೋಗ ಕೈಗೊಳ್ಳಲು- ಸ್ವಯಂ ಉದ್ಯೋಗ ಯೋಜನೆ, ನೇರ ಸಾಲ ಯೋಜನೆ, ಉದ್ಯಮ ಶೀಲತಾ ಯೋಜನೆ, ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಕೊಳವೆ ಬಾವಿ ಯೋಜನೆ, ಗಂಗಾ ಕಲ್ಯಾಣ ಏತ ನೀರಾವರಿ ಯೋಜನೆ, ಮೈಕ್ರೋ ಕ್ರೆಡಿಟ ಕಿರುಸಾಲ ಯೋಜನೆ, ಭೂ ಒಡೆತನ ಯೋಜನೆಗಳ ಸೌಲಭ್ಯ ಪಡೆಯಲು ಆಯಾ ಯೋಜನೆಗೆ ಅನುಗುಣವಾಗಿ ಅರ್ಜಿ ಆಹ್ವಾನಿಸಲಾಗಿದೆ.
    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪರಿಶಿಷ್ಟ ಪಂಗಡದವರಾಗಿರಬೇಕು, ಹಾಗೂ ಕಳೆದ 15 ವರ್ಷದಿಂದ ಜಿಲ್ಲೆಯ ನಿವಾಸಿಯಾಗಿರಬೇಕು.  18 ರಿಂದ 60 ವರ್ಷ ವಯೋಮಿತಿಯಲ್ಲಿರಬೇಕು.  ವಾರ್ಷಿಕ ಆದಾಯ ಗ್ರಾಮೀಣ 150000 ರೂ, ನಗರ ಪ್ರದೇಶ 200000 ರೂ, ಮಿತಿಯಲ್ಲಿರಬೇಕು.  ಅರ್ಜಿದಾರರು ಅಥವಾ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿರಬಾರದು.  ಜಾತಿ, ಆದಾಯ ಪತ್ರ, ವಾಸಸ್ಥಳದ ದೃಡೀಕರಣ, ರೇಶನಕಾರ್ಡ ಅಥವಾ ಚುನಾವಣೆ ಗುರುತಿನ ಚೀಟಿ, 2 ಭಾವಚಿತ್ರ ಲಗತ್ತಿಸಬೇಕು.  ಈ ಹಿಂದೆ ಅರ್ಜಿಸಲ್ಲಿಸಿ ಸೌಲಭ್ಯ ಪಡೆಯದೆ ಇದ್ದಲ್ಲಿ ಪುನಃ ಅರ್ಜಿ ಸಲ್ಲಿಸಬಹುದು.  ಭೂ ಒಡೆತನ ಯೋಜನೆಯಡಿ ಈಗಾಲೇ ಅರ್ಜಿಗಳನ್ನು ಸ್ವೀಕರಿಸಿದ್ದು, ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.  ಅಪೂರ್ಣ ದಾಖಲಾತಿಗಳನ್ನು ಸಲ್ಲಿಸಿದ್ದಲ್ಲಿ, ಪರಿಗಣಿಸಲಾಗುವುದಿಲ್ಲ.  ಗಂಗಾ ಕಲ್ಯಾಣ ಕೊಳವೆ ಬಾವಿ ಯೋಜನೆಯಡಿ ಅರ್ಜಿಸಲ್ಲಿಸಲು, 1.20 ಎಕರೆ ಯಿಂದ 5-00 ಎಕರೆ ವರೆಗೂ ಸ್ವಂತ ಭೂ ಹಿಡುವಳಿ ಹೊಂದಿರಬೇಕು.  ಚಾಲ್ತಿ ವರ್ಷದ ಪಹಣಿ, ಪಟ್ಟ, ಉತ್ತಾರ, ಭೂಮಿಯ ಚೆಕ್ಕಬಂದಿ, ಸಣ್ಣ ಭೂ ಹಿಡುವಳಿ ಧೃಡಿಕರಣ, ವಂಶ ವೃಕ್ಷ, ಎಲ್ಲಾ ಯೋಜನೆಗಳ ಅರ್ಜಿಗಳನ್ನು ಜಿಲ್ಲಾ ಕಛೇರಿಯಲ್ಲಿ ಪಡೆಯಬಹುದು.  ವಾಹನ ಸೌಲಭ್ಯಗಳಿಗೆ ಸಾಲ ಸೌಲಭ್ಯ ಪಡೆಯಲು ಡ್ರೈವಿಂಗ್ ಲೈಸನ್ಸ್‍ನೊಂದಿಗೆ ಬ್ಯಾಡ್ಜ್ ಹೊಂದಿರಬೇಕು.  ಮಧ್ಯವರ್ತಿಗಳಿಂದ ಪಡೆದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.  ಅರ್ಜಿಯನ್ನು ಮೇ. 31 ರೊಳಗಾಗಿ ಸಲ್ಲಿಸಲುಬೇಕು.  ಹೆಚ್ಚಿನ ಮಾಹಿತಿಗಾಗಿ  ವ್ಯವಸ್ಥಾಪಕರು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ ಕೊಪ್ಪಳ, ಕಛೇರಿ ದೂರವಾಣಿ ಸಂಖ್ಯೆ 08539-221176 ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ


ಕೊಪ್ಪಳ, ಏ. 28 (ಕರ್ನಾಟಕ ವಾರ್ತೆ): ಡಾ. ಬಿ.ಆರ್. ಅಂಬೇಡ್ಕರ್ ನಿಗಮ ವತಿಯಿಂದ 2017-18ನೇ ಸಾಲಿಗಾಗಿ ಸ್ವಯಂ ಉದ್ಯೋಗ, ಉದ್ಯಮ ಶೀಲತಾ, ಭೂ ಒಡೆತನ, ಕಿರುಸಾಲ ಯೋಜನೆ, ಮಹಿಳಾ ಸಮೃದ್ಧಿ, ವಿಕಲ ಚೇತನ ನೆರವು, ಗಂಗಾ ಕಲ್ಯಾಣ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಕೊಪ್ಪಳ ಜಿಲ್ಲೆಯ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳಿಂದ   ಅರ್ಜಿ ಆಹ್ವಾನಿಸಲಾಗಿದೆ.
    ಸ್ವಯಂ ಉದ್ಯೋಗ ಕೈಗೊಳ್ಳಲು- ಸ್ವಯಂ ಉದ್ಯೋಗ ಯೋಜನೆ, ಉದ್ಯಮ ಶೀಲತಾ ಯೋಜನೆ, ಭೂ ಒಡೆತನ ಯೋಜನೆ, ಮೈಕ್ರೋ ಕ್ರೆಡಿಟ ಕಿರುಸಾಲ ಯೋಜನೆ, ಮೈಕ್ರೋ ಕ್ರೆಡಿಟ ಯೋಜನೆ/ ಮಹಿಳಾ ಸಮೃದ್ಧಿ ಯೋಜನೆ, ವಿಕಲ ಚೇತನ ನೆರವು ಯೋಜನೆ, ಗಂಗಾ ಕಲ್ಯಾಣ ಯೋಜನೆ, ಏತ ನೀರಾವರಿ ಯೋಜನೆ, ನೇರ ಸಾಲ ಯೋಜನೆ, ಹಾಗೂ ಕೌಶಲ್ಯ ತರಬೇತಿ ಹೊಂದಿದ ನಿರುದ್ಯೋಗಿಗಳಿಗೆ ಘಟಕ ವೆಚ್ಚ 5 ಲಕ್ಷಗಳ ವರೆಗಿನ ಸಹಾಯಧನ 2.55 ಲಕ್ಷ ಅಥವಾ ಶೇ% 50 ರಷ್ಟು ಯೋಜನಾ ವೆಚ್ಚ ಯಾವುದು ಕಡಿಮೆಯೋ ಅಷ್ಟು ಸಹಾಯಧನ ನೀಡಲಾಗುವುದು.  ಸೌಲಭ್ಯ ಪಡೆಯಲು ಆಯಾ ಯೋಜನೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಲು ಮಾಹಿತಿ ಇಂತಿದೆ.
    ಪರಿಶಿಷ್ಟ ಜಾತಿಯವರಾಗಿರಬೇಕು, ಹಾಗೂ ಕಳೆದ 15 ವರ್ಷದಿಂದ ಜಿಲ್ಲೆಯ ನಿವಾಸಿಯಾಗಿರಬೇಕು.  18 ರಿಂದ 60 ವರ್ಷ ವಯೋಮಿತಿಯಲ್ಲಿರಬೇಕು.  ವಾರ್ಷಿಕ ಆದಾಯ ಗ್ರಾಮೀಣ 150000 ರೂ, ನಗರ ಪ್ರದೇಶ 200000 ರೂ, ಮಿತಿಯಲ್ಲಿರಬೇಕು.  ಅರ್ಜಿದಾರರು ಅಥವಾ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿರಬಾರದು.  ಜಾತಿ, ಆದಾಯ ಪತ್ರ, ವಾಸಸ್ಥಳದ ದೃಡೀಕರಣ, ರೇಶನಕಾರ್ಡ ಅಥವಾ ಚುನಾವಣೆ ಗುರುತಿನ ಚೀಟಿ, 2 ಭಾವಚಿತ್ರ ಲಗತ್ತಿಸಬೇಕು.  ಈ ಹಿಂದೆ ಅರ್ಜಿಸಲ್ಲಿಸಿ ಸೌಲಭ್ಯ ಪಡೆಯದೆ ಇದ್ದಲ್ಲಿ ಪುನಃ ಅರ್ಜಿ ಸಲ್ಲಿಸಬಹುದು.  ಭೂ ಒಡೆತನ ಯೋಜನೆಯಡಿ ಈಗಾಲೇ ಅರ್ಜಿಗಳನ್ನು ಸ್ವೀಕರಿಸಿದ್ದು, ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.  ಅಪೂರ್ಣ ದಾಖಲಾತಿಗಳನ್ನು ಸಲ್ಲಿಸಿದ್ದಲ್ಲಿ, ಪರಿಗಣಿಸಲಾಗುವುದಿಲ್ಲ.  ಗಂಗಾ ಕಲ್ಯಾಣ ಕೊಳವೆ ಬಾವಿ ಯೋಜನೆಯಡಿ ಅರ್ಜಿಸಲ್ಲಿಸಲು, 1-20 ಎಕರೆ ಯಿಂದ 5-00 ಎಕರೆ ವರೆಗೂ ಸ್ವಂತ ಭೂ ಹಿಡುವಳಿ ಹೊಂದಿರಬೇಕು.  ಚಾಲ್ತಿ ವರ್ಷದ ಪಹಣಿ, ಪಟ್ಟ, ಉತ್ತಾರ, ಭೂಮಿಯ ಚೆಕಬಂದಿ, ಸಣ್ಣ ಭೂ ಹಿಡುವಳಿ ಧೃಡಿಕರಣ, ವಂಶ ವೃಕ್ಷ, ಎಲ್ಲಾ ಯೋಜನೆಗಳ ಅರ್ಜಿಗಳನ್ನು ಜಿಲ್ಲಾ ಕಛೇರಿಯಲ್ಲಿ ಪಡೆಯಬಹುದು.  ವಾಹನ ಸೌಲಭ್ಯಗಳಿಗೆ ಸಾಲ ಸೌಲಭ್ಯ ಪಡೆಯಲು ಡ್ರೈವಿಂಗ್ ಲೈಸನ್ಸ್‍ನೊಂದಿಗೆ ಬ್ಯಾಡ್ಜ್ ಹೊಂದಿರಬೇಕು.  ಮಧ್ಯವರ್ತಿಗಳಿಂದ ಪಡೆದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. 
ವಾಹನ ಚಾಲನಾ ಪರವಾನಿಗೆ ಹಾಗೂ ಬ್ಯಾಡ್ಜ್ ಹೊಂದಿದ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕರಿಗೆ ಪ್ರವಾಸಿ (ಟೂರಿಸ್ಟ್) ಟ್ಯಾಕ್ಸಿಗಳನ್ನು ಖರೀದಿಸಲು ರೂ. 3 ಲಕ್ಷ ಅಥವಾ ಶೇ% 50 ರಷ್ಟು ಸಹಾಯಧನವನ್ನು ನೀಡಲಾಗುವುದು.  ಅರ್ಜಿಯನ್ನು ಮೇ. 31 ರೊಳಗಾಗಿ ಸಲ್ಲಿಸಲುಬೇಕು.  ಹೆಚ್ಚಿನ ಮಾಹಿತಿಗಾಗಿ ಡಾ. ಬಿ.ಆರ್. ಅಂಬೇಡ್ಕರ್ ನಿಗಮ ಕೊಪ್ಪಳ, ಕಛೇರಿ ದೂರವಾಣಿ ಸಂಖ್ಯೆ 08539-221176 ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಹೇಮರಡ್ಡಿ ಮಲ್ಲಮ್ಮ ಜಯಂತಿ : ಮೇ. 03 ರಂದು ಪೂರ್ವಭಾವಿ ಸಭೆ


ಕೊಪ್ಪಳ, ಏ.28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸುವ ಸಂಬಂಧ ಪೂರ್ವಭಾವಿ ಸಭೆ ಮೇ. 03 ರಂದು ಬೆಳಿಗ್ಗೆ 10-00 ಗಂಟೆಗೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
    ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಸಂಬಂಧ ಎಲ್ಲ ಸಮಾಜದ ಮುಖಂಡರು ಸಭೆಗೆ ಆಗಮಿಸಿ, ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಮನವಿ ಮಾಡಿದ್ದಾರೆ.

ಮಹಿಳೆಯರಿಗೆ ಹೊಲಿಗೆ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ, ಏ.28 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯಿಂದ ಕೊಪ್ಪಳ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಹೊಲಿಗೆ ತರಬೇತಿ ಕೇಂದ್ರಗಳಲ್ಲಿ, ಹೊಲಿಗೆ ತರಬೇತಿ ಪಡೆಯಲು ಆಸಕ್ತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 
    ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುವ ಪ್ರತಿ ಅಭ್ಯರ್ಥಿಗೆ ಹಾಜರಾತಿಗನುಗುಣವಾಗಿ ತಿಂಗಳಿಗೆ ರೂ. 300 ರಂತೆ 10 ತಿಂಗಳಿಗೆ ತರಬೇತಿ ಭತ್ಯೆ ನೀಡಲಾಗುವುದು.  ಪ್ರವರ್ಗ-1 ಹಾಗೂ ಪ.ಜಾತಿ/ ಪ.ಪಂಗಡ ಹೊರತುಪಡಿಸಿ ಇತರೆ ಪ್ರವರ್ಗಕ್ಕೆ ಸೇರಿದವರಿಗೆ ರೂ. 44500 ಆದಾಯ ಮಿತಿ ನಿಗದಿಪಡಿಸಿದೆ.  ಕನಿಷ್ಠ 7ನೇ ತರಗತಿ ಕಡ್ಡಾಯವಾಗಿ ತೇರ್ಗಡೆಯಾಗಿರಬೇಕು.  ತರಬೇತಿ ಅಂತ್ಯದಲ್ಲಿ ಅನುತ್ತೀರ್ಣರಾಗುವ ಅಭ್ಯರ್ಥಿಗಳು 2 ವರ್ಷದೊಳಗೆ ಮತ್ತೊಮ್ಮೆ ಪರೀಕ್ಷೆಗೆ ಹಾಜರಾಗಬಹುದು.  ವಿಧವೆ, ಅಂಗವಿಕಲ, ನಿರ್ಗತಿಕರಿಗೆ ಆದ್ಯತೆ ನೀಡಲಾಗುವುದು (ಸಂಬಂಧಪಟ್ಟ ಪ್ರಮಾಣ ಪತ್ರಗಳನ್ನು ಲಗತ್ತಿಸಬೇಕು).  ಈಗಾಗಲೇ ತರಬೇತಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಲ್ಲಿ, ಅವರ ಅರ್ಜಿಯನ್ನು ತಿರಸ್ಕರಿಸಲಾಗುವುದು.  ತರಬೇತಿಯ ನಂತರ ತರಬೇತಿ ಕೇಂದ್ರದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಒಂದು ಹೊಲಿಗೆ ಯಂತ್ರವನ್ನು ಉಚಿತವಾಗಿ ನೀಡಲಾಗುವುದು.  ಅರ್ಜಿ ನಮೂನೆಯ ಜೊತೆಗೆ ಜಾತಿ ಆದಾಯ ಪ್ರಮಾಣ ಪತ್ರ, ಶೈಕ್ಷಣಿಕ ದಾಖಲಾತಿ ಪತ್ರ, ಅಂಕಪಟ್ಟಿ, ಶಾಲಾ ವರ್ಗಾವಣಿ ಪ್ರಮಾಣ ಪತ್ರದ ಧೃಡೀಕರಣ ನಕಲುಗಳನ್ನು ಲಗತ್ತಿಸಬೇಕು.  18 ರಿಂದ 35 ವರ್ಷ ವಯೋಮಿತಿಯಲ್ಲಿರಬೇಕು.  ಯಾವುದೇ ಶಾಲಾ ಕಾಲೇಜುಗಳಲ್ಲಿ ಅರ್ಜಿದಾರರು ಪ್ರವೇಶ ಪಡೆದಿರಬಾರದು. 
    ಕಾರ್ಯಲಯದಿಂದ ನಿಗದಿತ ನಮೂನೆಯ ಅರ್ಜಿಯನ್ನು ಪಡೆದು, ಮೇ.24 ರೊಳಗಾಗಿ ಕೊಪ್ಪಳ ತಾಲೂಕ ಹಿಂದುಳಿದ ವರ್ಗಗಳ ವಿಸ್ತೀಣಾಧಿಕಾರಿಗಳ ಕಛೇರಿಗೆ ಸಲ್ಲಿಸಬೇಕು.  ಸರ್ಕಾರದ ಮೀಸಲಾತಿ ಆದೇಶದನ್ವಯ ಪ್ರವರ್ಗವಾರು 20 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.  ನಿಗದಿತ ವೇಳೆಯ ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ತಾಲೂಕ ಹಿಂದುಳಿದ ವರ್ಗಗಳ ವಿಸ್ತೀರ್ಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Thursday, 27 April 2017

ಭಾಗ್ಯನಗರ : ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸಲು ಸೂಚನೆ


ಕೊಪ್ಪಳ, ಏ. 27 (ಕರ್ನಾಟಕ ವಾರ್ತೆ): ಕೊಳವೆ ಬಾವಿಗಳಲ್ಲಿ ದುರ್ಘಟನೆಗಳು ಸಂಭವಿಸುತ್ತಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ 2005ರಲ್ಲಿ ಸೂಚನೆ ನೀಡಿದ್ದು ಸಹ ಇಂತಹ ಘಟನೆಗಳು ಮರುಕಳುಹಿಸುತ್ತಿವೆ.  ಕುಡಿಯುವ ನೀರಿಗಾಗಿ ಹಾಗೂ ಇತರೆ ಕೆಲಸಗಳಿಗಾಗಿ ಕೊರೆಯಿಸಲಾಗಿರುವ ಕೊಳವೆ ಬಾವಿಗಳು ವಿಫಲವಾಗಿದ್ದಲ್ಲಿ ಕೂಡಲೇ ಅವುಗಳನ್ನು ಮುಚ್ಚಿಸುವಂತೆ ಭಾಗ್ಯನಗರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸೂಚಿಸಿದ್ದಾರೆ.
    ಕೊಪ್ಪಳ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಗೂ ಇತರೆ ಕೆಲಸಗಳಿಗಾಗಿ ಕೊರೆಯಿಸಲಾಗಿರುವ ಕೊಳವೆಬಾವಿಗಳು ವಿಫಲವಾಗಿದ್ದಲ್ಲಿ ಕೂಡಲೇ ಅವುಗಳನ್ನು ಮುಚ್ಚಿಸುವಂತೆ ಜಿಲ್ಲಾಧಿಕಾರಿ ಮತ್ತು ಯೋಜನಾ ನಿರ್ದೇಶಕರು ಸೂಚನೆಯನ್ನು ನೀಡಿದ್ದು, ಭಾಗ್ಯನಗರ ಪ.ಪಂ. ದಿಂದ ಇಂತಹ ವಿಫಲ ಕೊಳವೆ ಬಾವಿಗಳ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ವಹಿಸಲಾಗುತ್ತಿದೆ.  ಖಾಸಗಿ ಮಾಲೀಕರು ಕೊಳವೆ ಬಾವಿಗಳನ್ನು ಕೊರೆಯಿಸಿ ಅವುಗಳು ವಿಫಲವಾದಲ್ಲಿ, ಅವುಗಳನ್ನು ಮುಚ್ಚಿಸುವ ಜವಾಬ್ದಾರಿ ಅವರದ್ದಾಗಿದೆ.  ಆರ್‍ಟಿಓ ಲೇಔಟ್‍ನಲ್ಲಿ ಇಂತಹ ವಿಫಲ ಮೂರು ಕೊಳವೆ ಬಾವಿಗಳನ್ನು ಮುಚ್ಚಿಸಲು ಸೂಚನೆ ನೀಡಲಾಗಿದೆ.  ಇನ್ನೂ ಯಾರಾದರೂ ಕೊಳವೆ ಬಾವಿಗಳನ್ನು ಕೊರೆಯಿಸಿ ಮುಚ್ಚಿಸದೇ ಇದ್ದರೆ ಕೋಡಲೇ ಅವುಗಳನ್ನು ಮುಚ್ಚಿಸಿ, ದುರ್ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಿ.  ಪಂಚಾಯತಿಯ ಅಥವಾ ಯಾವುದೇ ಖಾಸಗಿ ವಿಫಲ ಕೊಳವೆ ಬಾವಿ ಕಂಡುಬಂದಲ್ಲಿ ಕೂಡಲೇ ಭಾಗ್ಯನಗರ ಪ.ಪಂ.ಗೆ ಮಾಹಿತಿ ನೀಡಿ, ಸುರಕ್ಷತಾ ಕ್ರಮಗಳಿಗೆ ಸಾರ್ವಜನಿಕರು ಸಹಕರಿಸಿ ಎಂದು ಪ್ರಕಟಣೆ ತಿಳಿಸಿದೆ.

ಕುಷ್ಟಗಿ : ಕುಡಿಯುವ ನೀರು ಸಮಸ್ಯೆ ತುರ್ತು ನಿವಾರಣೆಗೆ 6. 04 ಕೋಟಿ ರೂ.


ಕೊಪ್ಪಳ ಏ. 27 (ಕರ್ನಾಟಕ ವಾರ್ತೆ): ಕುಷ್ಟಗಿ ತಾಲೂಕಿನಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಸಮಸ್ಯಾತ್ಮಕ ಗ್ರಾಮಗಳಿಗೆ ತುರ್ತಾಗಿ ಕುಡಿಯುವ ನೀರು ಪೂರೈಕೆಗಾಗಿ 6. 04 ಕೋಟಿ ರೂ. ಗಳ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಕೂಡಲೆ ಕಾಮಗಾರಿ ಪ್ರಾರಂಭಿಸುವಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಕುಷ್ಟಗಿ ತಾಲೂಕಿನ ಬರ ಪರಿಹಾರ ಕಾರ್ಯಗಳ ಕುರಿತು ಕುಷ್ಟಗಿ ಸರ್ಕಿಟ್ ಹೌಸ್‍ನಲ್ಲಿ ಏರ್ಪಡಿಸಲಾಗಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕುಷ್ಟಗಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರು ಪೂರೈಕೆಯ ಸ್ಥಿತಿ ಗತಿ ಕುರಿತು ವಿವರಣೆ ನೀಡಿದ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಸಹಾಯಕ ಇಂಜಿನಿಯರ್ ಅರವಿಂದ ಜೋಶಿ ಅವರು, ಕುಷ್ಟಗಿ ತಾಲೂಕಿನಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಮತೆ 116 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳನ್ನಾಗಿ ಗುರುತಿಸಲಾಗಿದ್ದು, ಈಗಾಗಲೆ 17 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.  ಅಲ್ಲದೆ ಕುಡಿಯುವ ನೀರಿನ ಮೂಲ ಲಭ್ಯವಾಗದ ಕಾರಣದಿಂದ 35 ಗ್ರಾಮಗಳಲ್ಲಿ 46 ಖಾಸಗಿ ಬೋರ್‍ವೆಲ್‍ಗಳನ್ನು ಮಾಸಿಕ ಬಾಡಿಗೆ ಆಧಾರದಲ್ಲಿ ಪಡೆದುಕೊಂಡು, ಸಾರ್ವಜನಿಕರಿಗೆ ನೀರು ಪೂರೈಕೆ ಮಾಡಲಾಗುತ್ತಿದೆ.  ಬರುವ ಮೇ, ಜೂನ್ ಮತ್ತು ಜುಲೈ ಸೇರಿದಂತೆ ಒಟ್ಟು 03 ತಿಂಗಳುಗಳಿಗೆ ಸಮಸ್ಯಾತ್ಮಕ ಗ್ರಾಮಗಳಲ್ಲಿ ಸಮರ್ಪಕ ನೀರು ಪೂರೈಕೆ ಮಾಡುವ ಸಲುವಾಗಿ 6. 04 ಕೋಟಿ ರೂ. ಗಳ ಕ್ರಿಯಾ ಯೋಜನೆ ಸಿದ್ಧವಾಗಿದೆ.  ಇದರಲ್ಲಿ ಖಾಸಗಿ ಬೋರ್‍ವೆಲ್ ಮೂಲಕ ನೀರು ಸರಬರಾಜು, ಟ್ಯಾಂಕರ್ ಮೂಲಕ ನೀರು ಪೂರ್ಯಕೆ, ಹೊಸದಾಗಿ ಕೊಳವೆ ಬಾವಿ ಕೊರೆಯಿಸುವುದು, ಅಲ್ಲದೆ ಪೈಪ್‍ಲೈನ್ ಹಾಕಿ ಮೋಟಾರು ಅಳವಡಿಸುವುದು ಹೀಗೆ 314 ಕಾಮಗಾರಿಗಳಿಗೆ 604. 85 ಲಕ್ಷ ರೂ. ಗಳ ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ಮಂತ್ರಿಗಳು, ಕ್ರಿಯಾ ಯೋಜನೆಗೆ ಕೂಡಲೆ ಅನುಮೊದನೆ ಪಡೆದು, ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಬೇಕು.  ಕಾಮಗಾರಿ ಕೈಗೊಳ್ಳುವಾಗ ಉತ್ತಮ ಗುಣಮಟ್ಟದ ಪೈಪ್ ಹಾಗೂ ಉಪಕರಣಗಳನ್ನು ಅಳವಡಿಸಬೇಕು.  ಜೆಸ್ಕಾಂ ಅಧಿಕಾರಿಗಳು, ಕುಡಿಯುವ ನೀರು ಯೋಜನೆಗಳಿಗೆ ಕೂಡಲೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು.  ಸಮಸ್ಯಾತ್ಮಕ ಗ್ರಾಮಗಳ ಪೈಕಿ ಯಾವುದೇ ಗ್ರಾಮಗಳಲ್ಲಿ ಅಗತ್ಯವಿದೆಯೋ, ಅಂತಹ ಗ್ರಾಮಗಳ ಕುಡಿಯುವ ನೀರು ಯೋಜನೆಯನ್ನು ನಿರಂತರ ಜ್ಯೋತಿ ಮಾರ್ಗಕ್ಕೆ ಜೋಡಣೆ ಮಾಡಿಕೊಡಬೇಕು.   ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು, ಕುಡಿಯುವ ನೀರು ಪೂರೈಕೆ, ಕೂಲಿಕಾರರಿಗೆ ಉದ್ಯೋಗ, ಜಾನುವಾರುಗಳಿಗೆ ಮೇವು ಒದಗಿಸುವ ವಿಚಾರದಲ್ಲಿ ಇಲ್ಲಿನ ಅಧಿಕಾರಿಗಳು ಮಾನವೀಯ ನೆಲೆಗಟ್ಟಿನಲ್ಲಿ, ಆತ್ಮಸಾಕ್ಷಿಗೆ ಅನುಗುಣವಾಗಿ ಪ್ರಾಮಾಣಿಕ ಕೆಲಸ ಮಾಡಿ ಎಂದರು.
ಆರ್.ಓ ಘಟಕಗಳ ಸ್ಥಿತಿ-ಗತಿ ಸಮಗ್ರ ವರದಿ ಸಲ್ಲಿಸಿ :
********************ಜಿಲ್ಲೆಯಲ್ಲಿ ವಿವಿಧ ಏಜೆನ್ಸಿಗಳು ಶುದ್ಧ ಕುಡಿಯುವ ನೀರು ಘಟಕಗಳನ್ನು ಅಳವಡಿಸುವ ಗುತ್ತಿಗೆಯನ್ನು ಪಡೆದುಕೊಂಡಿದ್ದು, ಕುಷ್ಟಗಿ ತಾಲೂಕಿನಲ್ಲಿ ಕೆಲ ಏಜೆನ್ಸಿಗಳು ಇದುವರೆಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸದೇ ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ, ಜನರು ನೀರಿಗಾಗಿ ಪರಿತಪಿಸುವಂತಾಗಿದೆ.  ಕೆಲ ಘಟಕಗಳ ನೀರು ಗುಣಮಟ್ಟದ್ದಾಗಿಲ್ಲ, ಜನಪ್ರತಿನಿಧಿಗಳ ಮಾತು ಕೇಳುತ್ತಿಲ್ಲ.  ಕೆಲ ಘಟಕಗಳ ಛತ್ತು ಗಾಳಿ, ಮಳೆಗೆ ಹಾರಿಹೋಗಿದ್ದು, ದುರಸ್ತಿಗೊಂಡಿಲ್ಲ ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಜಿ.ಪಂ. ಸದಸ್ಯ ಕೆ. ಮಹೇಶ್ ಅವರು ಮಂತ್ರಿಗಳ ಗಮನಕ್ಕೆ ತಂದರು.  ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಸವರಾಜ ರಾಯರಡ್ಡಿ ಅವರು, ಈ ಹಿಂದೆಯೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ.  ಜಿಲ್ಲೆಯಲ್ಲಿ ಸದ್ಯ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿ-ಗತಿ ಕುರಿತು ಆಯಾ ಗ್ರಾಮ ಪಂಚಾಯತಿಯ ಪಿಡಿಓ ಗಳಿಂದ ದೃಢೀಕರಣ ಪತ್ರ ಪಡೆದು, ತಾಲೂಕುವಾರು ವಿವರವನ್ನು ಒಂದು ವಾರದೊಳಗೆ ಸಲ್ಲಿಸಬೇಕು.  ಶುದ್ಧ ಕುಡಿಯುವ ನೀರು ಘಟಕಗಳನ್ನು ಅಳವಡಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಬೇಕು ಎಂದು   ಅಧಿಕಾರಿಗಳಿಗೆ ಸೂಚನೆ ನೀಡಿದರು.  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ 558 ಆರ್.ಓ ಘಟಕಗಳ ಪೈಕಿ 408 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.  ವಿಳಂಬ ಮಾಡಿರುವ ಏಜೆನ್ಸಿಯ ಟೆಂಡರ್ ರದ್ದುಪಡಿಸಿ, ಕಪ್ಪು ಪಟ್ಟಿಗೆ ಸೇರಿಸುವಂತೆ ಈಗಾಗಲೆ ಮುಖ್ಯ ಇಂಜಿನಿಯರ್ ಅವರಿಗೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ ಎಂದರು.
ನೀರು ಸಂಗ್ರಹಗಾರಗಳ ಸ್ವಚ್ಛತೆ ಆಂದೋಲನ :
**************ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ ನಿರ್ಮಿಸಲಾಗಿರುವ ಕೆಳಮಟ್ಟದ ಹಾಗೂ ಮೇಲ್ಮಟ್ಟದ ನೀರು ಸಂಗ್ರಹಗಾರಗಳಲ್ಲಿ ಬಹಳಷ್ಟು ಸಂಗ್ರಹಗಾರಗಳು ಸೊರಿಕೆಯಾಗುತ್ತಿದ್ದು, ಕೆಲವು ಅತ್ಯಂತ ಕೆಟ್ಟ ಸ್ಥಿತಿಯಲ್ಲಿವೆ. ಅವುಗಳನ್ನು ದುರಸ್ತಿಗೊಳಿಸುವುದು ಹಾಗೂ ಸ್ವಚ್ಛಗೊಳಿಸುವುದು ಅಗತ್ಯವಾಗಿದೆ ಎಂದು ಜಿ.ಪಂ. ಸದಸ್ಯರು ಮಂತ್ರಿಗಳ ಗಮನಕ್ಕೆ ತಂದರು.  ಜಿಲ್ಲೆಯಾದ್ಯಂತ ಎಲ್ಲ ಕೆಳಮಟ್ಟದ ಹಾಗೂ ಮೇಲ್ಮಟ್ಟದ ನೀರು ಸಂಗ್ರಹಗಾರಗಳನ್ನು ಸ್ವಚ್ಛಗೊಳಿಸಲು ವಿಶೇಷ ಆಂದೋಲನ ರೂಪಿಸಿ, ನೀರು ಸಂಗ್ರಹಗಾರಗಳ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡು, ರಾಜ್ಯಕ್ಕೆ ಮಾದರಿಯಾಗುವಂತಹ ಕಾರ್ಯ ಕೈಗೊಳ್ಳುವಂತೆ ಮಂತ್ರಿಗಳು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, , ಜಿ.ಪಂ. ಸದಸ್ಯರುಗಳಾದ ಕೆ. ಮಹೇಶ್, ಭೀಮಪ್ಪ ಅಗಸಿಮುಂದಿನ, ನೇಮಣ್ಣ ಮೇಲುಸಕ್ರಿ, ವಿಜಯ ನಾಯಕ್, ಕುಷ್ಟಗಿ ಪುರಸಭೆ ಅಧ್ಯಕ್ಷ ಮೊಯ್ನುದ್ದೀನ್ ಮುಲ್ಲ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಟ್ಟೂರ, ತಹಸಿಲ್ದಾರ್ ಗಂಗಪ್ಪ, ಸಹಾಯಕ ಕೃಷಿ ನಿರ್ದೇಶಕ ವಿ. ಕಮತರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕುಷ್ಟಗಿ-ಯಲಬುರ್ಗಾ ತಾಲೂಕುಗಳ 357 ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು : ಬೃಹತ್ ಯೋಜನೆ ಕಾಮಗಾರಿ ಜೂನ್ ನಲ್ಲಿ ಪ್ರಾರಂಭ- ಬಸವರಾಜ ರಾಯರಡ್ಡಿ


ಕೊಪ್ಪಳ ಏ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕುಗಳ 357 ಜನವಸತಿ ಪ್ರದೇಶಗಳಿಗೆ ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಶುದ್ಧ ಕುಡಿಯುವ ನೀರು ಪೂರೈಸುವ ಸುಮಾರು 670 ಕೋಟಿ ರೂ. ಗಳ ಬೃಹತ್ ಯೋಜನೆಯ ಕಾಮಗಾರಿ ಜೂನ್ ತಿಂಗಳಿನಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.

     ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕುಗಳು ತೀವ್ರ ನೀರಿನ ಸಮಸ್ಯೆ ಎದುರಿಸುವ ಪ್ರದೇಶವಾಗಿದ್ದು, ಇಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಶಾಶ್ವತ ಯೋಜನೆ ರೂಪಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ.  ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕುಗಳ 357 ಜನವಸತಿ ಪ್ರದೇಶಗಳಿಗೆ ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಶುದ್ಧ ಕುಡಿಯುವ ನೀರು ಪೂರೈಸುವ ಸುಮಾರು 670 ಕೋಟಿ ರೂ. ಗಳ ಬೃಹತ್ ಯೋಜನೆಗೆ ಈಗಾಗಲೆ ಟೆಂಡರ್ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, 15 ದಿನಗಳೊಳಗೆ ಅರ್ಹ ಕಂಪನಿಗೆ ಕಾಮಗಾರಿಯ ಕಾರ್ಯಾದೇಶ ನೀಡಲಾಗುವುದು. ಸುಮಾರು 8 ಲಕ್ಷ ಜನರಿಗೆ ನಿತ್ಯ 85 ಲೀ. ನೀರು ಒದಗಿಸುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ. ಜೂನ್ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ, ಕಾಮಗಾರಿಗೆ ಚಾಲನೆ ನೀಡಲಾಗುವುದು.  ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗುವುದು.  ಕಾಮಗಾರಿ ಪೂರ್ಣಗೊಂಡ ನಂತರ 05 ವರ್ಷಗಳ ಕಾಲ ಕಂಪನಿಯೇ ನಿರ್ವಹಣೆ ಮಾಡಲಿದೆ.  ತ್ವರಿತವಾಗಿ ಕಾಮಗಾರಿ ಪೂರ್ಣಗೊಂಡಲ್ಲಿ, ಎರಡೂ ತಾಲೂಕುಗಳ 357 ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನೀಗಲಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
ಪಟ್ಟಣಗಳಿಗೂ ಉದ್ಯೋಗಖಾತ್ರಿ ವಿಸ್ತರಣೆಗೆ ಪ್ರಸ್ತಾವನೆ :
****************** ಪಟ್ಟಣ ಪಂಚಾಯತಿ ಹಾಗೂ ಪುರಸಭೆಗಳಾಗಿ ಇತ್ತೀಚೆಗಷ್ಟೇ ಮೇಲ್ದರ್ಜೆಗೇರಿರುವ ಪಟ್ಟಣಗಳ ಕೂಲಿ ಕಾರ್ಮಿಕರಿಗೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಕೊಡಲು ಅವಕಾಶ ಕಲ್ಪಿಸುವಂತೆ ಉದ್ಯೋಗಖಾತ್ರಿ ಯೋಜನೆ ನಿಯಮಗಳಿಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆಸಿದ್ದು, ಈ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಶೀಘ್ರವೇ ಚರ್ಚಿಸಲಾಗುವುದು.  ಮೇಲ್ದರ್ಜೆಗೇರಿರುವ ಪಟ್ಟಣಗಳು ಇನ್ನೂ ಗ್ರಾಮೀಣ ಪ್ರದೇಶದ ಸ್ವರೂಪವೇ ಹೊಂದಿದ್ದು, ಇದುವರೆಗೂ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಕೈಗೊಳ್ಳುತ್ತಿದ್ದು, ಈ ಭಾಗದ ಬಡ ಕೂಲಿ ಕಾರ್ಮಿಕರು ಇದೀಗ ಉದ್ಯೋಗಕ್ಕಾಗಿ ತೊಂದರೆ ಎದುರಿಸುತ್ತಿದ್ದಾರೆ.  ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪಟ್ಟಣ ಪ್ರದೇಶದ ಕೂಲಿಕಾರರಿಗೆ ಉದ್ಯೋಗ ಒದಗಿಸಲು ನಿಯಮಗಳಲ್ಲಿ ಅವಕಾಶ ಇಲ್ಲ.  ಕಳೆದ 20 ವರ್ಷಗಳ ಅಂಕಿ-ಅಂಶ ನೋಡಿದಾಗ, ಜಿಲ್ಲೆಯಲ್ಲಿ ಸುಮಾರು 12 ವರ್ಷ ಬರ ಪರಿಸ್ಥಿತಿ ತಲೆದೋರಿದೆ.  ಇಲ್ಲಿನ ರೈತರು, ಕೂಲಿಕಾರರು ಸಂಕಷ್ಟದಲ್ಲಿದ್ದಾರೆ.  ಮೇಲಾಗಿ, ಈ ಭಾಗ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಈ ಎಲ್ಲ ಅಂಶಗಳನ್ನು ಪ್ರಸ್ತಾವನೆಯಲ್ಲಿ ವಿವರಿಸಿ, ಪಟ್ಟಣಗಳ ಕೂಲಿ ಕಾರ್ಮಿಕರಿಗೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಟ ವರ್ಷಕ್ಕೆ 100 ದಿನಗಳ ಕೂಲಿ ಕೆಲಸ ಕೊಡಲು ಅವಕಾಶ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು.  ಕೊಪ್ಪಳ ಜಿಲ್ಲಾಧಿಕಾರಿಗಳು ಕೂಡ, ಜಿಲ್ಲೆಯ ಅಂಕಿ-ಅಂಶಗಳನ್ನು ವಿವರಿಸಿ, ಸರ್ಕಾರಕ್ಕೆ ತಮ್ಮ ಕೋರಿಕೆಯನ್ನು ಸಲ್ಲಿಸುವಂತೆ ತಿಳಿಸಿದರು.
     ಸಭೆಯಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, , ಜಿ.ಪಂ. ಸದಸ್ಯರುಗಳಾದ ಕೆ. ಮಹೇಶ್, ಭೀಮಪ್ಪ ಅಗಸಿಮುಂದಿನ, ನೇಮಣ್ಣ ಮೇಲುಸಕ್ರಿ, ವಿಜಯ ನಾಯಕ್, ಕುಷ್ಟಗಿ ಪುರಸಭೆ ಅಧ್ಯಕ್ಷ ಮೊಯ್ನುದ್ದೀನ್ ಮುಲ್ಲ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಟ್ಟೂರ, ತಹಸಿಲ್ದಾರ್ ಗಂಗಪ್ಪ, ಸಹಾಯಕ ಕೃಷಿ ನಿರ್ದೇಶಕ ವಿ. ಕಮತರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾವರಗೇರಾದಲ್ಲಿ ಗೋಶಾಲೆಗೆ ಜಿಲ್ಲಾ ಉಸ್ತುವಾರಿ ಮಂತ್ರಿ ಬಸವರಾಜ ರಾಯರಡ್ಡಿ ಚಾಲನೆ


ಕೊಪ್ಪಳ ಏ. 27 (ಕರ್ನಾಟಕ ವಾರ್ತೆ): ಜಾನುವಾರುಗಳ ಸಂರಕ್ಷಣೆಗಾಗಿ ಕುಷ್ಟಗಿ ತಾಲೂಕು ತಾವರಗೇರಾ ಗ್ರಾಮದಲ್ಲಿ ಸರ್ಕಾರದ ವತಿಯಿಂದ ತೆರೆಯಲಾದ ಗೋಶಾಲೆಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಚಾಲನೆ ನೀಡಿದರು.
     ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿ.ಪಂ. ಸದಸ್ಯರುಗಳು ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಏ. 29 ರಂದು ಕೊಪ್ಪಳದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ


ಕೊಪ್ಪಳ, ಏ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ ವತಿಯಿಂದ ಜಗಜ್ಯೋತಿ ಬಸವೇಶ್ವರ ಅವರ ಜಯಂತಿಯನ್ನು ಏ. 29 ರಂದು ಸಂಜೆ 6-00 ಗಂಟೆಗೆ ನಗರದ ಗವಿಮಠ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
    ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಉದ್ಘಾಟನೆ ನೆರೆವೇರಿಸುವರು.  ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿ.ಪ.ಂ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ್ ಎಸ್. ತಂಗಡಗಿ, ಇಕ್ಬಾಲ್ ಅನ್ಸಾರಿ ಹಾಗೂ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ ಹಾಗೂ ಶರಣಪ್ಪ ಮಟ್ಟೂರ, ಜಿ.ಪಂ ಉಪಾಧ್ಯಕ್ಷೆ ಲಕ್ಷಮ್ಮ ಎಸ್. ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ ಖಾದ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹಾದೇವನ್ ಪಾಲ್ಗೊಳ್ಳುವರು.  ಧಾರವಾಡ ಜಿಲ್ಲೆಯ ಶರಣ ಸಾಹಿತಿಗಳಾದ ರಂಜಾನ ದರ್ಗಾ ಅವರು ಜಗಜ್ಯೋತಿ ಬಸವೇಶ್ವರ ಕುರಿತು ವಿಶೇಷ ಉಪನ್ಯಾಸ ನೀಡುವರು. 
    ಕಾರ್ಯಕ್ರಮದ ಅಂಗವಾಗಿ ಅಂದು ಸಂಜೆ 4-00 ಗಂಟೆಗೆ ಜಗಜ್ಯೋತಿ ಬಸವೇಶ್ವರ ರವರ ಭಾವಚಿತ್ರದ ಮೆರವಣಿಗೆ ಕೊಪ್ಪಳ ಕೋಟೆ ರಸ್ತೆ ಮಹೇಶ್ವ ದೇವಸ್ಥಾನದಿಂದ ಪ್ರಾರಂಭಗೊಂಡು, ಜವಾಹರ ರಸ್ತೆಯ ಮೂಲಕ ಆಝಾದ್ ವೃತ್ತದ ಮಾರ್ಗವಾಗಿ ಗವಿಮಠ ಆವರಣದ ವರೆಗೆ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ.

ಮೇ. 02 ರಂದು ಕೊಪ್ಪಳದಲ್ಲಿ ಭಗೀರಥ ಜಯಂತಿ ಆಚರಣೆ


ಕೊಪ್ಪಳ, ಏ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ ವತಿಯಿಂದ ಭಗೀರಥ ಅವರ ಜಯಂತಿಯನ್ನು ಮೇ. 02 ರಂದು ಬೆಳಿಗ್ಗೆ 11-00 ಗಂಟೆಗೆ ಕೊಪ್ಪಳ ನಗರದ ಶಾದಿ ಮಹಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.
    ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಉದ್ಘಾಟನೆ ನೆರೆವೇರಿಸುವರು.  ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿ.ಪ.ಂ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ್ ಎಸ್. ತಂಗಡಗಿ, ಇಕ್ಬಾಲ್ ಅನ್ಸಾರಿ ಹಾಗೂ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ ಹಾಗೂ ಶರಣಪ್ಪ ಮಟ್ಟೂರ, ಜಿ.ಪಂ ಉಪಾಧ್ಯಕ್ಷೆ ಲಕ್ಷಮ್ಮ ಎಸ್. ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ ಖಾದ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹಾದೇವನ್ ಪಾಲ್ಗೊಳ್ಳುವರು.  ತಳಕಲ್ ಸರಕಾರಿ ಪದವಿ ಪೂರ್ವ  ಕಾಲೇಜಿನ ಉಪನ್ಯಾಸಕರಾದ ಫಕೀರಪ್ಪ ವಜ್ರಬಂಡಿ ಅವರು ಭಗೀರಥ ಕುರಿತು ವಿಶೇಷ ಉಪನ್ಯಾಸ ನೀಡುವರು. 
    ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ 9-00 ಗಂಟೆಗೆ ಭಗೀರಥ ರವರ ಭಾವಚಿತ್ರದ ಮೆರವಣಿಗೆ ನಗರದ ಸಿರಸಪ್ಪಯ್ಯನಮಠದಿಂದ ಪ್ರಾರಂಭಗೊಂಡು, ಗಡಿಯಾರ ಕಂಬದ ಮೂಲಕ ಜವಾಹರ ರಸ್ತೆ ಮಾರ್ಗವಾಗಿ ಶಾದಿ ಮಹಲ್ ವರೆಗೆ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ.

ಟೀಚರ್ಸ್ ಡಾಟಾ ಕಂಪ್ಯೂಟರ್ ಫಾರ್‍ಮೇಟ್ : ಮಾಹಿತಿ ನೀಡಲು ಶಿಕ್ಷಕರಿಗೆ ಸೂಚನೆ


ಕೊಪ್ಪಳ, ಏ. 27 (ಕರ್ನಾಟಕ ವಾರ್ತೆ): ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಮತ್ತು ಇಲಾಖೆಯ ವಿವಿಧ ಹಂತದ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವೃಂದದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸೇವಾ ವಿವರಗಳ ಮಾಹಿತಿಯನ್ನು “ಟಿಚರ್ಸ್ ಡಾಟಾ ಕಂಪ್ಯೂಟರ್ ಫಾರ್‍ಮೇಟ್” ತಂತ್ರಾಂಶದಲ್ಲಿ ಅಳವಡಿಸಲು, ಶಿಕ್ಷಕರಿಗೆ ಸೂಚಿಸಲಾಗಿದೆ.
ಶಾಲೆಗಳಿಗೆ ಬೇಸಿಗೆ ರಜೆ ಇರುವ ಪ್ರಯುಕ್ತ ಸ್ವ-ಗ್ರಾಮಕ್ಕೆ ತೆರಳಿರುವ ಶಿಕ್ಷಕರು ಕೂಡಲೇ ಕೇಂದ್ರ ಸ್ಥಾನಕ್ಕೆ ಬಂದು, ಮಾಹಿತಿಯನ್ನು ಭರ್ತಿಮಾಡಿ ಸಂಬಂಧಿಸಿದ ಶಾಲಾ ಕಛೇರಿಗೆ ಮುಖ್ಯಸ್ಥರಿಗೆ, ಡಿ.ಡಿ.ಓ ಗಳಿಗೆ ಸಲ್ಲಿಸಲುಬಹುದು.  “ಟಿಚರ್ಸ್ ಡಾಟಾ ಕಂಪ್ಯೂಟರ್ ಫಾರ್‍ಮೇಟ್” ಇಲಾಖೆಯ ಪ್ರಮುಖ ಕಾರ್ಯಕ್ರಮವಾಗಿರುವದರಿಂದ ವಿಳಂಬಕ್ಕೆ ಅವಕಾಶವಿರುವದಿಲ್ಲಾ ಎಂಬ ಅಂಶ ಸ್ಪಷ್ಟಪಡಿಸಲಾಗಿದೆ ಎಂದು ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Wednesday, 26 April 2017

ಏ. 30 ರಂದು ಅಬಕಾರಿ ಉಪ ನಿರೀಕ್ಷಕರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ

ಕೊಪ್ಪಳ ಏ. 26 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯದ ಅಬಕಾರಿ ಇಲಾಖೆಯಲ್ಲಿನ 177 ಅಬಕಾರಿ ಉಪನಿರೀಕ್ಷಕರ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ಏ. 30 ರಂದು ಏರ್ಪಡಿಸಿರುವ ಸ್ಪರ್ಧಾತ್ಮಕ ಪರೀಕ್ಷೆ ಕೊಪ್ಪಳ ಜಿಲ್ಲೆಯ 09 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಂತೆ, ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಸೂಚನೆ ನೀಡಿದರು.
     ಅಬಕಾರಿ ಉಪನಿರೀಕ್ಷಕರ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
      ಕರ್ನಾಟಕ ಲೋಕಸೇವಾ ಆಯೋಗವು ಅಬಕಾರಿ ಉಪನಿರೀಕ್ಷಕರ ಹುದ್ದೆ ಭರ್ತಿಗಾಗಿ ಏ. 30 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಜಿಲ್ಲೆಯ 09 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.  ಜಿಲ್ಲೆಯ 3000 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ.  ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆಯದಂತೆ, ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಬೇಕು.  ಈ ನಿಟ್ಟಿನಲ್ಲಿ ಪ್ರಶ್ನೆಪತ್ರಿಕೆ ಖಜಾನೆ ಇಲಾಖೆಗೆ ಠೇವಣಿಯಾಗುವುದರಿಂದ ಮೊದಲುಗೊಂಡು, ವಿತರಣೆಯಾಗುವವರೆಗೂ ಎಲ್ಲವನ್ನೂ ವಿಡಿಯೋ ಚಿತ್ರೀಕರಣ ಆಗಬೇಕು.  ಇದಕ್ಕಾಗಿ ಮೂವರು ಹಿರಿಯ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದ್ದು, ಇವರು ಇದರ ಮೇಲ್ವಿಚಾರಣೆ ನಡೆಸಬೇಕು.  ಖಜಾನೆಯಿಂದ   ಪ್ರಶ್ನೆಪತ್ರಿಕೆಗಳನ್ನು ತೆಗೆದುಕೊಂಡು ನಿಗದಿತ ಅವಧಿಯೊಳಗೆ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ಹೊಣೆ ಆಯಾ ಮಾರ್ಗಾಧಿಕಾರಿಗಳಿಗೆ ವಹಿಸಲಾಗಿದ್ದು, ವಿಳಂಬಕ್ಕೆ ಅವಕಾಶವಿಲ್ಲದಂತೆ ಪ್ರಶ್ನೆಪತ್ರಿಕೆಯನ್ನು ನಿಗದಿತ ಅವಧಿಯೊಳಗೆ ತಲುಪಿಸಬೇಕು.  ಪರೀಕ್ಷೆ ಪ್ರಾರಂಭದ ನಂತರ ಪರೀಕ್ಷಾ ಕೊಠಡಿಯೊಳಗೆ ಮಾಧ್ಯಮದವರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.  ಪರೀಕ್ಷಾ ಕೇಂದ್ರದೊಳಗೆ ಯಾವುದೇ ಬಗೆಯ ಮೊಬೈಲ್ ಫೋನ್, ಕ್ಯಾಲ್ಕುಲೇಟರ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ.  ಅಲ್ಲದೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಯಾವುದೇ ಬಗೆಯ ಬ್ಯಾಗ್, ಪುಸ್ತಕ ತರುವಂತಿಲ್ಲ.  ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೂಕ್ತ ಆಸನದ ವ್ಯವಸ್ಥೆ, ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಅಲ್ಲದೆ ಪರೀಕ್ಷಾ ದಿನದಂದು ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು.  ಪ್ರತಿ ಕೇಂದ್ರಕ್ಕೆ ಕಡ್ಡಾಯವಾಗಿ ಒಬ್ಬರು ಮಹಿಳಾ ಪೊಲೀಸ್ ಪೇದೆಯನ್ನು ನಿಯೋಜಿಸಬೇಕು.  ಕೇಂದ್ರದ 200 ಮೀ. ವ್ಯಾಪ್ತಿ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ತಿಳಿಸಿದರು.
     ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್ ಮಾತನಾಡಿ, ಅಬಕಾರಿ ಉಪನಿರೀಕ್ಷಕರ ಹುದ್ದೆಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು ಕೊಪ್ಪಳ ಜಿಲ್ಲೆಯ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ, ಗವಿಸಿದ್ದೇಶ್ವರ ಪಿಯು ಕಾಲೇಜು, ಗವಿಸಿದ್ದೇಶ್ವರ ಮಹಾವಿದ್ಯಾಲಯ, ಬಾಲಕರ ಸರ್ಕಾರಿ ಪ.ಪೂ. ಕಾಲೇಜು, ಎಸ್.ಎಫ್.ಎಸ್. ಶಾಲೆ, ಭಾಗ್ಯನಗರದ ಸರ್ಕಾರಿ ಪ.ಪೂ. ಕಾಲೇಜು ಹಾಗೂ ನಿವೇಧಿತ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ನಡೆಯಲಿವೆ.  ಏ. 30 ರಂದು ಬೆಳಿಗ್ಗೆ 10 ರಿಂದ 11-30 ರವರೆಗೆ ವಿವರಣಾತ್ಮಕ ಪತ್ರಿಕೆ ಹಾಗೂ ಮಧ್ಯಾಹ್ನ 2 ರಿಂದ 3-30 ರವರೆಗೆ ವಸ್ತುನಿಷ್ಟ ಬಹು ಆಯ್ಕೆ ಮಾದರಿ ಪರೀಕ್ಷೆ ನಡೆಯಲಿದೆ.  ಪರೀಕ್ಷೆ ಪ್ರಾರಂಭವಾದ 10 ನಿಮಿಷಗಳ ನಂತರ ಬರುವ ಅಂದರೆ ವಿಳಂಬವಾಗಿ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿಲ್ಲ.  ಪರೀಕ್ಷಾ ಅವಧಿ ಮುಗಿಯುವವರೆಗೂ, ಯಾವುದೇ ಅಭ್ಯರ್ಥಿ ಪರೀಕ್ಷಾ ಕೇಂದ್ರದಿಂದ ಹೊರಗೆ ಬರುವಂತಿಲ್ಲ ಎಂದರು.
    ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂಗಮೇಶ್ ಉಪಾಸೆ, ಖಜಾನೆ ಇಲಾಖೆ ಅಧಿಕಾರಿ ಕಳ್ಳೇರ್ ಸೇರಿದಂತೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಮಾರ್ಗಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರ

ಮೇ. 02, 03 ರಂದು ಸಿಇಟಿ ಪರೀಕ್ಷೆ : 05 ಕೇಂದ್ರಗಳು, 1440 ವಿದ್ಯಾರ್ಥಿಗಳು

ಕೊಪ್ಪಳ ಏ. 26 (ಕರ್ನಾಟಕ ವಾರ್ತೆ): ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆ ಮೇ. 02 ಮತ್ತು 03 ರಂದು ಜಿಲ್ಲೆಯ 05 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, 1440 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.  ಪರೀಕ್ಷೆಯನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಸೂಚನೆ ನೀಡಿದರು.
     ಸಿಇಟಿ ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಮರ್ಪಕ ಆಸನದ ವ್ಯವಸ್ಥೆ, ಗಾಳಿ, ಬೆಳಕಿನ ವ್ಯವಸ್ಥೆ ಇರಬೇಕು.  ಬೇಸಿಗೆಯ ಕಾಲವಾಗಿರುವುದರಿಂದ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು.  ಪರೀಕ್ಷಾ ಕೇಂದ್ರಗಳಿಗೆ ನಿಗಧಿತ ಅವಧಿಯೊಳಗೆ ಪ್ರಶ್ನೆ ಪತ್ರಿಕೆ ತಲುಪಿಸಿ, ಪರೀಕ್ಷೆಯ ನಂತರ ಉತ್ತರ ಪತ್ರಿಕೆಗಳನ್ನು ಪುನಃ ಖಜಾನೆಗೆ ಠೇವಣಿ ಮಾಡುವ ಜವಾಬ್ದಾರಿ ಮಾರ್ಗಾಧಿಕಾರಿಗಳಿಗೆ ವಹಿಸಲಾಗಿದೆ.  ಪ್ರತಿ ಮಾರ್ಗಾಧಿಕಾರಿಗಳಿಗೆ ತಲಾ 02 ಪೊಲೀಸ್ ಪೇದೆಗಳನ್ನು ಭದ್ರತೆಗಾಗಿ ನೀಡಲಾಗುವುದು.  ಪ್ರತಿ ಪರೀಕ್ಷಾ ಕೇಂದ್ರಕ್ಕೆ ಮಹಿಳಾ ಅಭ್ಯರ್ಥಿಯ ತಪಾಸಣೆಗಾಗಿ ಕಡ್ಡಾಯವಾಗಿ ಮಹಿಳಾ ಪೊಲೀಸ್ ಪೇದೆಯನ್ನು ನಿಯೋಜಿಸಲಾಗುವುದು.  ಪರೀಕ್ಷೆ ಪ್ರಾರಂಭದ ನಂತರ ಪರೀಕ್ಷಾ ಕೊಠಡಿಯೊಳಗೆ ಮಾಧ್ಯಮದವರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.  ಪರೀಕ್ಷಾ ಕೇಂದ್ರದೊಳಗೆ ಯಾವುದೇ ಬಗೆಯ ಮೊಬೈಲ್ ಫೋನ್, ಗಡಿಯಾರ, ಕ್ಯಾಲ್ಕುಲೇಟರ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ.  ಆದ್ದರಿಂದ ಪರೀಕ್ಷಾ ಕೊಠಡಿಯಲ್ಲಿ ಆಯಾ ಕೇಂದ್ರದ ಕಾಲೇಜಿನ ವತಿಯಿಂದಲೇ ಗೋಡೆ ಗಡಿಯಾರವನ್ನು ಅಳವಡಿಸಬೇಕು.  ಅಲ್ಲದೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಯಾವುದೇ ಬಗೆಯ ಬ್ಯಾಗ್, ಪುಸ್ತಕ ತರುವಂತಿಲ್ಲ.  ಕೇಂದ್ರದ 200 ಮೀ. ವ್ಯಾಪ್ತಿ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ತಿಳಿಸಿದರು.
     ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜಾಸಾಬ್ ಮಾತನಾಡಿ, ಸಿಇಟಿ ಪರೀಕ್ಷೆ ಮೇ. 02 ರಂದು ಬೆಳಿಗ್ಗೆ 10-30 ರಿಂದ 11-50 ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 02-30 ರಿಂದ 3-50 ರವರೆಗೆ ಗಣಿತಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ.  ಮೇ. 03 ರಂದು ಬೆಳಿಗ್ಗೆ 10-30 ರಿಂದ 11-50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 02-30 ರಿಂದ 3-50 ರವರೆಗೆ ರಸಾಯನಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ.  ಕೊಪ್ಪಳದ ಗವಿಸಿದ್ದೇಶ್ವರ ಪ.ಪೂ. ಕಾಲೇಜು, ಬಾಲಕರ ಸರ್ಕಾರಿ ಪ.ಪೂ. ಕಾಲೇಜು, ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು, ಬಿ.ಎನ್.ಆರ್.ಕೆ. ಕಾಲೇಜು ಹಾಗೂ ಲಯನ್ಸ್ ಸ್ವಾಮಿ ವಿವೇಕಾನಂದ ಪ.ಪೂ. ಕಾಲೇಜು ಸೇರಿದಂತೆ ಒಟ್ಟು 05 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
     ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸಿ.ಡಿ. ಗೀತಾ, ಖಜಾನೆ ಇಲಾಖೆ ಅಧಿಕಾರಿ ಕಳ್ಳೇರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂಗಮೇಶ್ ಉಪಾಸೆ, ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್, ನಗರಠಾಣೆ ಪಿಐ ರವಿ ಉಕ್ಕುಂದ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಏ. 30 ರಿಂದ ಎರಡನೆ ಹಂತದ ಪಲ್ಸ್-ಪೋಲಿಯೋ : ಜಿಲ್ಲೆಯ 194138 ಮಕ್ಕಳಿಗೆ ಪೋಲಿಯೋ ಲಸಿಕೆ : ವೆಂಕಟರಾಜಾ ಸೂಚನೆ


ಕೊಪ್ಪಳ, ಏ. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಏ. 30 ರಿಂದ ಮೇ. 03 ರವರೆಗೆ ನಾಲ್ಕು ದಿನಗಳ ಕಾಲ, ಎರಡನೆ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ ಐದು ವರ್ಷದೊಳಗಿನ 194138 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿಯನ್ನು ತಪ್ಪದೆ ಸಾಧಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿ ವೆಂಕಟರಾಜಾ ಅಧಿಕಾರಿಗಳಿಗೆ ಸೂಚಿಸಿದರು.
    ಜಿಲ್ಲಾ ಪಂಚಾಯತಿಯ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಿದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಕೊಪ್ಪಳ ಜಿಲ್ಲೆಯಲ್ಲಿ ಏ. 30 ರಿಂದ ಮೇ. 03 ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಎರಡನೆ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳು ಸಹಕರಿಸಬೇಕು.   05 ವರ್ಷದೊಳಗಿನ ಜಿಲ್ಲೆಯ 194138 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುತ್ತಿದ್ದು, ಈ ಪೈಕಿ ನಗರ ಪ್ರದೇಶದ 31719 ಹಾಗೂ ಗ್ರಾಮೀಣ ಪ್ರದೇಶದ 162419 ಮಕ್ಕಳಿದ್ದಾರೆ.  ಒಟ್ಟು 1920 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಏ. 30 ರಂದು ಲಸಿಕಾ ಕೇಂದ್ರಕ್ಕೆ ತಮ್ಮ 05 ವರ್ಷದೊಳಗಿನ ಎಲ್ಲ ಮಕ್ಕಳನ್ನು ಕರೆತಂದು ಲಸಿಕೆ ಹಾಕಿಸಬೇಕು.  ಈ ಹಿಂದೆ ಎಷ್ಟೇ ಬಾರಿ ಪೊಲೀಸ್ ಲಸಿಕೆ ಹಾಕಿಸಿದ್ದರೂ, ಈಗ ಕೈಗೊಳ್ಳಲಾಗುತ್ತಿರುವ ಪೊಲೀಯೋ ಲಸಿಕಾ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ತಪ್ಪದೆ ಲಸಿಕೆ ಹಾಕಿಸಬೇಕು.  ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಅವರು ಮಾತನಾಡಿ, ಪ್ರಸಕ್ತ ಸಾಲಿನ ಈ ಕಾರ್ಯಕ್ರಮದಲ್ಲಿ 0-5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಜೀವರಕ್ಷಕ ಪೋಲಿಯೊ ಹಾಕಲಾಗುವುದು.  ಕ್ರಿಯಾ ಯೋಜನೆಯ ಪ್ರಕಾರ ಜಿಲ್ಲೆಯ ಜನಸಂಖ್ಯೆ 1500662 ಇದ್ದು, 0-5 ವರ್ಷದೊಳಗಿನ ಮಕ್ಕಳ ಸಂಖ್ಯೆ 194138 ಆಗಿದೆ.  ಈ ಮಕ್ಕಳಿಗೆ ಲಸಿಕೆ ಹಾಕಲು ಒಟ್ಟು 960 ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡದಲ್ಲಿ ಇಬ್ಬರು ಲಸಿಕಾಕರ್ತರುಗಳಂತೆ ಒಟ್ಟು 1920 ಲಸಿಕಾಕರ್ತರು ಕ್ಷೇತ್ರದಲ್ಲಿ ಕಾರ್ಯನಿರ್ವಸಲಿದ್ದಾರೆ ಎಂದರು.
   ಸಭೆಯಲ್ಲಿ ಡಿ.ಹೆಚ್.ಒ. ರಾಮಕೃಷ್ಣ,  ಟಿ.ಹೆಚ್.ಒ. ಡಾ. ರಾಮಾಂಜನೇಯ, ಕುಷ್ಟಗಿ ಟಿ.ಹೆಚ್.ಒ. ಡಾ. ಆನಂದ ಗೋಟೂರ,  ಡಾ. ಎಸ್.ಕೆ. ದೇಸಾಯಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ದಾನರೆಡ್ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರ

“ಅನಿಲ ಭಾಗ್ಯ” ಮತ್ತು “ಪುನರ್ಬೆಳಕು” ಯೋಜನೆ : ಅರ್ಜಿ ಆಹ್ವಾನ

ಕೊಪ್ಪಳ, ಏ. 26 (ಕರ್ನಾಟಕ ವಾರ್ತೆ): ಸರ್ಕಾರದ ನಿರ್ದೇಶನದಂತೆ “ಅನಿಲ ಭಾಗ್ಯ” ಯೋಜನೆಯಡಿಯಲ್ಲಿ ಆರ್ಥಿಕವಾಗಿ ದುರ್ಬಲರಿಗೆ, ಅನಿಲ ರಹಿತ ಪಡಿತರ ಚೀಟಿದಾರರಿಗೆ ಉಚಿತ ಅನಿಲ ಸಂಪರ್ಕ ಒದಗಿಸಲು.  ಮತ್ತು “ಪುನರ್ಬೆಳಕು” ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ ಅನಿಲ ಪಡಿತರ ಚೀಟಿಗಳಿಗೆ ಅವರ ಆಯ್ಕೆ ಮೇರಗೆ ಪಡಿತರ ಸೀಮೆಎಣ್ಣೆ ಬದಲು ಪುನರ್‍ಭರ್ತಿ (ರೀಚಾರ್ಜಬಲ್) ಮಾಡಬಹುದಾದ ಎಲ್‍ಇಡಿ ಬಲ್ಫ್ ಸೆಟ್ ನೀಡಲು ಉದ್ದೇಶಿಸಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
    ಅರ್ಹ ಕುಟುಂಬಗಳು ಸಹಾಯಧನ ಸೀಮೆಎಣ್ಣೆಯನ್ನು ಆಧ್ರ್ಯರ್ಪಣೆ (ಸೆರೆಂಡರ್) ಮಾಡಲು ತಮ್ಮ ಇಚ್ಚೆಯನ್ನು ಇಲಾಖೆಯ ಸೇವಾ ಕ್ರೇಂದ್ರಗಳಾದ ಗ್ರಾಮ ಪಂಚಾಯತಿಗಳು, ಖಾಸಗಿ ಪ್ರಾಂಚೈಸಿ, ಜನಸ್ನೇಹಿ ಕೇಂದ್ರ ಇತ್ಯಾದಿಗಳಲ್ಲಿ ಅರ್ಜಿ ಸಲ್ಲಿಸಿ ಪ್ರಯೋಜನೆಯನ್ನು ಪಡೆಯಬಹುದು ಎಂದು ಕೊಪ್ಪಳ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುಳದಳ್ಳಿಯಲ್ಲಿ ನೂತನ ಒಣ ಬೇಸಾಯ ಸಂಶೋಧನಾ ಕೇಂದ್ರ ಸ್ಥಾಪನೆ : ರೈತರಿಗೆ ವರದಾನ


ಕೊಪ್ಪಳ ಏ. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗುಳದಳ್ಳಿಯಲ್ಲಿ ನೂತನ ಒಣಬೇಸಾಯ ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿದ್ದು, ಪ್ರಸಕ್ತ ವರ್ಷದಿಂದ ಈ ಸಂಶೊಧನಾ ಕೇಂದ್ರ ಕಾರ್ಯಾರಂಭ ಮಾಡಲಿದೆ.  ಈ ಸಂಶೋಧನಾ ಕೇಂದ್ರವು ಈ ಭಾಗದ ರೈತರಿಗೆ ವರದಾನವಾಗಲಿದೆ ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
     ಆಹಾರ ಉತ್ಪಾದನೆಯಲ್ಲಿ ಒಣ ಬೇಸಾಯದ ಸಂಶೋಧನೆ ಕುರಿತು ಹೆಚ್ಚುತ್ತಿರುವ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ನವದೆಹಲಿ  ಇವರು ಒಣಬೇಸಾಯ (ಂIಅಖP-ಆಂ) ಕುರಿತು ಸಂಶೋಧನಾ ಕೇಂದ್ರವೊಂದನ್ನು 2015-16ನೇ ಸಾಲಿನಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಮಂಜೂರು ಮಾಡಿದ್ದಾರೆ.  ರಾಜ್ಯದ ಕೃಷಿ ಇಲಾಖೆ ಇದಕ್ಕಾಗಿ ಕೊಪ್ಪಳ ಜಿಲ್ಲೆಯ ಗುಳದಳ್ಳಿ ಬಳಿ ಸುಮಾರು 34. 35 ಎಕರೆ ಭೂಮಿ ಮಂಜೂರು ಮಾಡಿದೆ.  ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಿಂದ ಗುಳದಳ್ಳಿಯಲ್ಲಿರುವ ಕೃಷಿ ಇಲಾಖೆಯ ಬೀಜೊತ್ಪಾದನಾ ಕೇಂದ್ರದ ಆವರಣದಲ್ಲಿ ಈ ಸಂಶೋಧನಾ ಕೇಂದ್ರವು ಕಾರ್ಯಾರಂಭ ಮಾಡಲಿದೆ.   ಸದರಿ ಸಂಶೋಧನಾ ಕೇಂದ್ರದ ಸ್ಥಾಪನೆಗಾಗಿ ರಾಜ್ಯ ಸರಕಾರದ ಕೃಷಿ ಇಲಾಖೆಯು ಕೃಷಿ ವಿಶ್ವವಿದ್ಯಾಲಯ, ರಾಯಚೂರಿಗೆ ಸುಮಾರು 34.35 ಎಕರೆ ಜಮೀನನ್ನು ಮಂಜೂರು ಮಾಡಿದೆ.  ಸಂಶೋಧನಾ ಕೇಂದ್ರಕ್ಕೆ ಕೆಂಪು ಮಣ್ಣಿನ ಮಳೆಯಾಶ್ರಿತ ಕ್ಷೇತ್ರದ ಅವಶ್ಯಕತೆ ಇದ್ದು,  ರಾಜ್ಯ ಸರಕಾರದ ಕೃಷಿ ಇಲಾಖೆಯ ಅಧೀನದಲ್ಲಿರುವ ಗುಳದಳ್ಳಿ ಬೀಜೊತ್ಪಾದನೆ ಕೇಂದ್ರವು ಸೂಕ್ತವಾಗಿದೆ.  ಈ ಸಂಶೋಧನಾ ಕೆಂದ್ರವು ಮಣ್ಣು ಮತ್ತು ನೀರು ಸಂರಕ್ಷಣೆ, ಮಳೆ ನೀರು ಕೊಯ್ಲು, ಮಣ್ಣಿನ ಫಲವತ್ತತೆ ನಿರ್ವಹಣೆಯನ್ನು ಮತ್ತು ಮಳೆಯಾಶ್ರಿತ ಬೆಳೆಗಳಲ್ಲಿ ಸಂಶೋಧನೆಯನ್ನು ಕೈಗೊಳ್ಳಲಿದೆ.  ಸಂಶೋಧನಾ ಕೇಂದ್ರ ಮಂಜೂರಾತಿಗೆ ಸಹಕರಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ ಎಂ ಸಾಲಿಮಠ ಅವರು ಧನ್ಯವಾದಗಳನ್ನು ಸಲ್ಲಿಸಿದ್ದು, ಕೇಂದ್ರದ ಸ್ಥಾಪನೆಗೆ ಶ್ರಮಿಸಿದ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳಿಗೆ, ಕೃಷಿ ಹಾಗೂ ಇತರೆ ಅಭಿವೃದ್ದಿ ಇಲಾಖೆಗಳ ಅಧಿಕಾರಿಗಳಿಗೆ ಕೃಷಿ ವಿವಿಯ ಕುಲಪತಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳು ಅಭಿನಂದನೆ ಸಲ್ಲಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ  ಕೇಂದ್ರ, ಅಖಿಲ ಭಾರತ ಭತ್ತ ಹಾಗೂ ಸವಳು ಮತ್ತು ಜವಳು ಭೂಮಿ ನಿರ್ವಹಣಾ ಸಂಶೋಧನಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಕೊಪ್ಪಳದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವು ಚಾಲನೆಯಲ್ಲಿದ್ದು, ನೂತನ ಒಣ ಬೇಸಾಯ ಸಂಶೋಧನಾ ಕೇಂದ್ರವು ಜಿಲ್ಲೆಯ ಮಳೆಯಾಶ್ರಿತ ರೈತರಿಗೆ ವರದಾನವಾಗಲಿದೆ ಎನ್ನುತ್ತಾರೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಎಂ.ಬಿ. ಪಾಟೀಲ್ ಅವರು.

ಏ. 28 ರಿಂದ ಬೆಂಗಳೂರಿನಲ್ಲಿ ಸಿರಿಧಾನ್ಯ ಮೇಳ : ಜಿಲ್ಲೆಯ ರೈತರಿಗೆ ಸೂಚನೆ


ಕೊಪ್ಪಳ ಏ. 26 (ಕರ್ನಾಟಕ ವಾರ್ತೆ): ರಾಜ್ಯ ಕೃಷಿ ಇಲಾಖೆಯು ಏ. 28 ರಿಂದ 30 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾವಯವ ಹಾಗೂ ಸಿರಿಧಾನ್ಯ ರಾಷ್ಟ್ರೀಯ ವಾಣಿಜ್ಯ ಮೇಳ ಆಯೋಜಿಸಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ಜಂಟಿಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.
     ಈ ಮೇಳದಲ್ಲಿ ರೈತ ಗುಂಪುಗಳು, ಮಾರುಕಟ್ಟೆದಾರರು, ರಫ್ತುದಾರರು ಹಾಗೂ ಇತರೆ ಭಾಗೀದಾರರಿಗೆ ಸಾವಯವ ಹಾಗೂ ಸಿರಿಧಾನ್ಯ ಉತ್ಪನ್ನಗಳನ್ನು ಪ್ರದರ್ಶಿಸಲು ಅಥವಾ ಖರೀದಿಸಲು ಅಧ್ಭುತ ಅವಕಾಶ ಇರುತ್ತದೆ.  ರೈತರು ಏ. 28 ರಿಂದ 30 ರವರೆಗೆ ನಾಲ್ಕು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಸಾವಯವ ಹಾಗೂ ಸಿರಿಧಾನ್ಯ ರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಭಾಗವಹಿಸಿ, ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಏ. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಏ. 27 ರಂದು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಬಸವರಾಜ ರಾಯರಡ್ಡಿ ಅವರು ಏ. 27 ರಂದು ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಕೊಪ್ಪಳಕ್ಕೆ ಆಗಮಿಸಲಿದ್ದು, ಬೆಳಿಗ್ಗೆ 11-30 ಗಂಟೆಗೆ ಕುಷ್ಟಗಿ ಪಟ್ಟಣಕ್ಕೆ ತೆರಳುವರು.  ಕುಷ್ಟಗಿ ತಾಲೂಕಿನ ಬರ ಪರಿಹಾರ ಕಾರ್ಯಗಳ ಕುರಿತು ಕುಷ್ಟಗಿಯಲ್ಲಿ ಪರಿಶೀಲನಾ ಸಭೆ ನಡೆಸುವರು.  ಮಧ್ಯಾಹ್ನ 3-30 ಗಂಟೆಗೆ ಗಂಗಾವತಿಗೆ ತೆರಳಿ, ಗಂಗಾವತಿ ತಾಲೂಕಿನ ಬರ ಪರಿಹಾರ ಕಾರ್ಯ ಕುರಿತು ಗಂಗಾವತಿಯಲ್ಲಿ ಸಭೆ ನಡೆಸುವರು.  ಮಂತ್ರಿಗಳು ಅಂದು ಸಂಜೆ 06 ಗಂಟೆಗೆ ಬಳ್ಳಾರಿ ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

Friday, 14 April 2017

ಭಾರತಕ್ಕಷ್ಟೇ ಅಲ್ಲ ವಿಶ್ವಕ್ಕೇ ಹೆಮ್ಮೆಯ ಪುತ್ರ ಡಾ. ಬಿ.ಆರ್. ಅಂಬೇಡ್ಕರ್- ಕರಡಿ ಸಂಗಣ್ಣ

ಕೊಪ್ಪಳ  ಏ. 14 (ಕ.ವಾ): ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನವನ್ನು ವಿಶ್ವದ ಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿರುವುದರಿಂದ, ಅಂಬೇಡ್ಕರ್ ಅವರು ಭಾರತಕ್ಕಷ್ಟೇ ಅಲ್ಲ ಇಡೀ ವಿಶ್ವದ ಹೆಮ್ಮೆಯ ಪುತ್ರ ಎಂದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ ಎಂದು ಸಂಸದ ಕರಡಿ ಸಂಗಣ್ಣ ಅವರು ಹೇಳಿದರು. 

       ಕೊಪ್ಪಳ ನಗರದ ಶಾದಿಮಹಲ್ ನಲ್ಲ್ಲಿ ಜಿಲ್ಲಾಡಳಿತದ ವತಿಯಿಂದ ಶುಕ್ರವಾರದಂದು ಆಯೋಜಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 126 ನೇ ಜಯಂತಿ ಆಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.


     ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಏ. 14 ರಂದು ಮಾತ್ರ ನೆನಪಿಸುವುದಲ್ಲ, ವರ್ಷದ ಇಡೀ 365 ದಿನವೂ ನೆನೆಯುವಂತಾಗಬೇಕು.  ವಿಶ್ವಕ್ಕೆ ಸೂರ್ಯ ಬೆಳಕನ್ನು ನೀಡಿದರೆ, ಭಾರತ ದೇಶದ ಕೋಟಿಗಟ್ಟಲೆ ಜನರ ಬಾಳಿಗೆ ಬೆಳಕನ್ನು ನೀಡಿದ ಅಂಬೇಡ್ಕರ್ ಅವರು ಕೂಡ ಸೂರ್ಯಕ್ಕೆ ಸಮ.  ಭಾರತ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ದೇಶದ ಮತದಾರರ ಸಂಖ್ಯೆ ಕೇವಲ 20 ಕೋಟಿ ಮಾತ್ರ ಇತ್ತು.  ಜಮೀನ್ದಾರರು, ಅಧಿಕಾರಿಗಳು, ತೆರಿಗೆ ಪಾವತಿದಾರರಿಗೆ ಮಾತ್ರ ಮತದಾನದ ಹಕ್ಕು ಇತ್ತು.  ದೇಶದ ಪ್ರತಿಯೊಬ್ಬ ಭಾರತೀಯನಿಗೂ ಮತದಾನದ ಹಕ್ಕು ದೊರೆಯುವಂತೆ ಮಾಡಿದ್ದು, ಅಂಬೇಡ್ಕರ್ ಅವರು.  ಸಾಮಾಜಿಕ ಸಮಾನತೆ, ಮಹಿಳಾ ಸಮಾನತೆ, ಮಹಿಳೆಯರಿಗೂ ಆಸ್ತಿಯ ಹಕ್ಕು ಸಿಗಲೇಬೇಕು ಎಂದು ಹಕ್ಕೊತ್ತಾಯನ್ನು ಮಂಡಿಸಿದವರು ಅಂಬೇಡ್ಕರ್ ಅವರು.  ದೇಶದ ಆರ್ಥಿಕ ವ್ಯವಸ್ಥೆಯನ್ನು ರೂಪಿಸುವ ಆರ್.ಬಿ.ಐ. ಸ್ಥಾಪನೆಗೂ ಅಂಬೇಡ್ಕರ್ ಅವರೇ ಕಾರಣಕರ್ತರು.  ಅಂಬೇಡ್ಕರ್ ಅವರ ದೂರದೃಷ್ಟಿಯಿಂದಾಗಿಯೇ ದೇಶದಲ್ಲಿ ವಿದ್ಯುತ್, ನೀರಾವರಿ ಮುಂತಾದ ಬೃಹತ್ ಯೋಜನೆಗಳು ರೂಪುಗೊಳ್ಳಲು ಸಾಧ್ಯವಾಯಿತು.  ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡ, ಇಂತಹ ದೂರದೃಷ್ಟಿಯ ಯೋಜನೆಗಳಿಂದಲೇ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.  ನಗದು ರಹಿತ ವ್ಯವಹಾರವನ್ನು ಉತ್ತೇಜಿಸಲು ಆಧಾರ್ ಲಿಂಕ್ ಆಧಾರಿತ ಭೀಮ್ ಆಪ್‍ಅನ್ನು ಅಂಬೇಡ್ಕರ್ ಜನ್ಮ ದಿನದಂದೇ ಜಾರಿಗೊಳಿಸಿದ್ದಾರೆ.  ದೇಶದ ಯುವ ಪೀಳಿಗೆ ದುಶ್ಚಟಗಳಿಗೆ ಒಳಗಾಗದೆ, ಅಂಬೇಡ್ಕರ್ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವಂತಾಗಬೇಕು ಎಂದು ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.
     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಅಂಬೇಡ್ಕರ್ ಅವರು ಜನಿಸದೇ ಇದ್ದಿದ್ದರೆ, ದಲಿತರು ಸಮಾಜದಲ್ಲಿ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ.  ಭಾರತೀಯ ಸಮಾಜದ ಅವಕಾಶ ವಂಚಿತ ಸಮುದಾಯದ ಹಿನ್ನೆಲೆಯಿಂದ ಹುಟ್ಟಿಬಂದ ಅಂಬೇಡ್ಕರ್ ಅವರು, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮಾಡಿದ ಸಾಧನೆ ಅನನ್ಯ.  ಸಮಾನತೆ ಮತ್ತು ಮಾನವೀಯತೆಯನ್ನು ಗೌರವಿಸುವ ಅವರ ಚಿಂತನೆ ಎಲ್ಲರಿಗೂ ಆದರ್ಶವಾದುದು.  ಸಂವಿಧಾನದ ಕಲಂ 371(ಜೆ) ತಿದ್ದುಪಡಿ ತರುವ ಮೂಲಕ ನಮ್ಮ ಸರ್ಕಾರ ಪ್ರಾದೇಶಿಕ ಅಸಮಾನತೆಯನ್ನು ನೀಗಿಸುವ ಮಹತ್ವದ ಕಾರ್ಯ ನಿರ್ವಹಿಸಿದೆ.  ಅಂಬೇಡ್ಕರ್ ಅವರ ಜನ್ಮ ದಿನದ ಅಂಗವಾಗಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಲ್ಲಿ ನಮ್ಮ ಸರ್ಕಾರ ಬೆಂಗಳೂರಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಗೆ ಇಂದು ಚಾಲನೆ ನೀಡಿದೆ.  ಪ.ಜಾತಿ ಮತ್ತು ಪ.ವರ್ಗದ ಜನರ ಶ್ರೇಯೋಭಿವೃದ್ಧಿಗೆ ಸರ್ಕಾರ 18 ಸಾವಿರ ಕೋಟಿ ರೂ. ಅನುದಾನವನ್ನು ಮೀಸಲಿರಿಸಿದೆ.  ಪ್ರವಾಸಿ ಟ್ಯಾಕ್ಸಿ ಯೋಜನೆ ಜಾರಿಯ ಮೂಲಕ ಪರಿಶಿಷ್ಟರ ಸ್ವಾವಲಂಬಿ ಬದುಕಿಗೆ ಸರ್ಕಾರ ಶ್ರಮಿಸುತ್ತಿದೆ.  ಅಂಬೇಡ್ಕರ್ ಅವರು ಈ ದೇಶದ ಪ್ರತಿಯೊಂದು ಸಮುದಾಯಕ್ಕೂ ಸಲ್ಲಬೇಕಾದವರು.  ಮಹಿಳೆಯರಿಗೆ ಸಮಾನ ಹಕ್ಕು ನೀಡುವ ನಿಟ್ಟಿನಲ್ಲಿ ಶ್ರಮಿಸಿದರು.  ಅಂಬೇಡ್ಕರ್ ಅವರು ನಡೆದು ಬಂದ ದಾರಿ, ಅವರ ಆದರ್ಶಗಳನ್ನು ಅರಿತುಕೊಂಡು ನಾವು ಸಮಾಜದಲ್ಲಿ ಬದಲಾವಣೆ ತರಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
      ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಹೊಸಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಕೆ. ವೆಂಕಟೇಶ್ ಮಾತನಾಡಿ, ಪ್ರತಿಭೆ ಮೂಲಕ ಅಗಾಧ ಪಾಂಡಿತ್ಯ ಹೊಂದಿದ್ದ ಅಂಬೇಡ್ಕರ್ ಅವರು, ಸ್ವಾತಂತ್ರ್ಯಾ ನಂತರದ ದೇಶದಲ್ಲಿ ಮಹಿಳಾ ಸಮಾತೆ ಮತ್ತು ಹಕ್ಕಿಗಾಗಿ ಹೋರಾಡಿದ ಮೊದಲಿಗರು.  ದಲಿತರು ಈ ದೇಶದ ಚುಕ್ಕಾಣಿ ಹಿಡಿಯಬೇಕು ಎನ್ನುವುದು ಅಂಬೇಡ್ಕರ್ ಅವರ ಕನಸಾಗಿತ್ತು.  ಚೌಡಕೆರೆ ಪ್ರವೇಶ ಚಳುವಳಿಯು ವಿಶ್ವದ ಮೊಟ್ಟ ಮೊದಲ ನಾಗರಿಕ ಹಕ್ಕಿನ ಪರವಾದ ಹೋರಾಟವಾಗಿತ್ತು.  ಅಂಬೇಡ್ಕರ್ ಅವರು ಬುದ್ಧನ ಮಾರ್ಗದಲ್ಲಿ ನಡೆದ ಅಹಿಂಸಾವಾದಿಯಾಗಿದ್ದರು.  ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು, ದೇಶದ ಆತ್ಮಗೌರವವನ್ನು ಹೆಚ್ಚಿಸಿಕೊಂಡಂತೆ ಎಂದರು.
    ಕಾರ್ಯಕ್ರಮದಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಜಿ.ಪಂ. ಸದಸ್ಯರುಗಳಾದ ಗೂಳಪ್ಪ ಹಲಗೇರಿ, ರಾಮಣ್ಣ ಚೌಡ್ಕಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದ್ರಿ, ಗಣ್ಯರಾದ ಮುತ್ತುರಾಜ್ ಕುಷ್ಟಗಿ, ಸಿದ್ದು ಮ್ಯಾಗೇರಿ, ಗಾಳೆಪ್ಪ ಪೂಜಾರ್, ಡಾ. ಜ್ಞಾನಸುಂದರ್, ಸಿದ್ದಪ್ಪ ಕಿಡದಾಳ, ಮಾರುತೆಪ್ಪ ಹಲಗೇರಿ, ಶಂಕ್ರಪ್ಪ ದೊಡ್ಡಮನಿ, ಸಿದ್ರಾಮಪ್ಪ ಹೊಸಮನಿ, ಕೃಷ್ಣ ಇಟ್ಟಂಗಿ, ಕಾಶೆಪ್ಪ, ಗಾಳೆಪ್ಪ, ಸರಿತಾ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.  2015-16 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕ ಗಳಿಸಿದ ಜಿಲ್ಲಾ ಮಟ್ಟದ 03 ಹಾಗೂ ಕೊಪ್ಪಳ ತಾಲೂಕು ಮಟ್ಟದ 03 ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಲ್ಯಾಪ್‍ಟಾಪ್‍ಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.  ಅಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.  ಅಂಬೇಡ್ಕರ್ ಜಯಂತಿ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ‘ಅಂಬೇಡ್ಕರ್ ಹಾಗೂ ಭಾರತ’ ವಿಷಯ ಕುರಿತು ಹಿರಿಯ ಹಾಗೂ ಕಿರಿಯ ವಿಭಾಗದಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ವಿತರಿಸಲಾಯಿತು.  ಅಂಬೇಡ್ಕರ್ ಅವರ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಕಿರುಹೊತ್ತಿಗೆಯನ್ನು ಸಾರ್ವಜನಿಕರಿಗೆ ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
       ಕಾರ್ಯಕ್ರಮಕ್ಕೂ ಮುನ್ನ ನಗರದ ತಹಸಿಲ್ದಾರರ ಕಚೇರಿ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆಗೆ ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಚಾಲನೆ ನೀಡಿದರು.  ಅಂಬೇಡ್ಕರ್ ಅವರ ಭಾವಚಿತ್ರದ ಭವ್ಯ ಮೆರವಣಿಗೆ ಅಂಬೇಡ್ಕರ್ ವೃತ್ತ, ಜವಾಹರ ರಸ್ತೆ ಮಾರ್ಗವಾಗಿ ಶಾದಿ ಮಹಲ್‍ವರೆಗೆ ಅದ್ಧೂರಿಯಾಗಿ ನೆರವೇರಿತು. ಹಲವಾರು ಜಾನಪದ ಕಲಾ ತಂಡಗಳು ಮೆರವಣಿಗೆಗೆ ಆಕರ್ಷಕಗೊಳಿಸಿದವು. 

ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಏ. 14 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಏ. 20 ಮತ್ತು 24 ರವರೆಗೆ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಬಸವರಾಜ ರಾಯರಡ್ಡಿ ಅವರು. ಏ. 20 ರಂದು ಬೆಳಗಾವಿಯಿಂದ ಹೊರಟು, ರಾತ್ರಿ 08 ಗಂಟೆಗೆ ಯಲಬುರ್ಗಾಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ಏ. 21 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2017-18 ನೇ ಸಾಲಿನ ಕ್ರಿಯಾ ಯೋಜನೆ ಕುರಿತಂತೆ ಹಾಗೂ ಬರ ಪರಿಹಾರ ಕಾಮಗಾರಿಗಳ ಪರಾಮರ್ಶೆ ಸಭೆಯಲ್ಲಿ ಪಾಲ್ಗೊಳ್ಳುವರು.  ಸಂಜೆ 05 ಗಂಟೆಗೆ ಹಂಪಿಗೆ ತೆರಳಿ ಕನ್ನಡ ವಿಶ್ವವಿದ್ಯಾಲಯದ 25ನೇ ನುಡಿಹಬ್ಬದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ರಾತ್ರಿ 10-30 ಗಂಟೆಗೆ ಯಲಬುರ್ಗಾಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ಏ. 22 ಮತ್ತು 23 ರಂದು ಎರಡು ದಿನಗಳ ಕಾಲ ಯಲಬುರ್ಗಾ ತಾಲೂಕಿನಲ್ಲಿ ಪ್ರವಾಸ ಕೈಗೊಂಡು ಯಲಬುರ್ಗಾದಲ್ಲಿ ವಾಸ್ತವ್ಯ ಮಾಡುವರು.  ಏ. 24 ರಂದು ಯಲಬುರ್ಗಾ ತಾಲೂಕಿನಲ್ಲಿ ಪ್ರವಾಸ ಕೈಗೊಂಡು, ಸಂಜೆ 4-30 ಗಂಟೆಗೆ ಹುಬ್ಬಳ್ಳಿಗೆ ತೆರಳಿ, ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

Thursday, 13 April 2017

ಮೊಬೈಲ್ ರಿಪೇರಿ ತರಬೇತಿಗಾಗಿ ಅರ್ಜಿ ಆಹ್ವಾನ


ಕೊಪ್ಪಳ ಏ. 14 (ಕರ್ನಾಟಕ ವಾರ್ತೆ): ಕೊಪ್ಪಳದ ಸ್ಟೇಟ್ ಬ್ಯಾಂಕ್ ಆಪ್ ಹೈದ್ರಾಬಾದ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಕೊಪ್ಪಳ ಜಿಲ್ಲೆಯ ಯುವಕ/ಯುವತಿಯರಿಗೆ 30 ದಿನಗಳ ಅವಧಿಯ ಮೊಬೈಲ್ ಫೋನ್ ಉಚಿತ  ತರಬೇತಿ ಆಯೋಜಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ತರಬೇತಿಗೆ ಆಯ್ಕೆಯಾದವರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗುವುದು.  ಅರ್ಜಿ ಸಲ್ಲಿಸಲು ವಯೋಮಿತಿ 18 ರಿಂದ 45 ವರ್ಷದೊಳಗಿರಬೇಕು.  ಕನಿಷ್ಟ 08 ನೇ ತರಗತಿ ಪಾಸ್ ಆಗಿರಬೇಕು.  ಕೊಪ್ಪಳ ಜಿಲ್ಲೆಯವರಾಗಿರಬೇಕು.  ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು.  ಅರ್ಜಿ ಸಲ್ಲಿಸಲು ಏ. 27 ಕೊನೆಯ ದಿನಾಂಕವಾಗಿದ್ದು, ಅರ್ಜಿ ಸಲ್ಲಿಸಿದವರಿಗೆ ಏ. 28 ರಂದು ಬೆಳಿಗ್ಗೆ 10-30 ಗಂಟೆಗೆ ಸಂದರ್ಶನ ನಡೆಸಲಾಗುವುದು.  ಏ. 29 ರಿಂದ ತರಬೇತಿ ಪ್ರಾರಂಭವಾಗಲಿದೆ.  ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗೆ ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಹೈದ್ರಾಬಾದ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ, ದೂರವಾಣಿ ಸಂ: 08539-231038 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ


ಕೊಪ್ಪಳ ಏ. 14 (ಕರ್ನಾಟಕ ವಾರ್ತೆ): ಕೊಪ್ಪಳದ ಸ್ಟೇಟ್ ಬ್ಯಾಂಕ್ ಆಪ್ ಹೈದ್ರಾಬಾದ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಕೊಪ್ಪಳ ಜಿಲ್ಲೆಯ ಯುವಕ/ಯುವತಿಯರಿಗೆ 30 ದಿನಗಳ ಅವಧಿಯ ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕಾ ಉಚಿತ  ತರಬೇತಿ ಆಯೋಜಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ತರಬೇತಿಗೆ ಆಯ್ಕೆಯಾದವರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗುವುದು.  ಅರ್ಜಿ ಸಲ್ಲಿಸಲು ವಯೋಮಿತಿ 18 ರಿಂದ 45 ವರ್ಷದೊಳಗಿರಬೇಕು.  ಕನಿಷ್ಟ 08 ನೇ ತರಗತಿ ಪಾಸ್ ಆಗಿರಬೇಕು.  ಕೊಪ್ಪಳ ಜಿಲ್ಲೆಯವರಾಗಿರಬೇಕು.  ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು.  ಅರ್ಜಿ ಸಲ್ಲಿಸಲು ಮೇ. 02 ಕೊನೆಯ ದಿನಾಂಕವಾಗಿದ್ದು, ಅರ್ಜಿ ಸಲ್ಲಿಸಿದವರಿಗೆ ಮೇ. 03 ರಂದು ಬೆಳಿಗ್ಗೆ 10-30 ಗಂಟೆಗೆ ಸಂದರ್ಶನ ನಡೆಸಲಾಗುವುದು.  ಮೇ. 04 ರಿಂದ ತರಬೇತಿ ಪ್ರಾರಂಭವಾಗಲಿದೆ.  ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗೆ ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಹೈದ್ರಾಬಾದ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ, ದೂರವಾಣಿ ಸಂ: 08539-231038 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಗಂಗಾವತಿ ಎಪಿಎಂಸಿ ಒಂದು ಸ್ಥಾನಕ್ಕೆ ಚುನಾವಣೆ


ಕೊಪ್ಪಳ ಏ. 13 (ಕರ್ನಾಟಕ ವಾರ್ತೆ): ಗಂಗಾವತಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ ಒಂದು ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.
     ಗಂಗಾವತಿ ಎಪಿಎಂಸಿಯ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ 01 ಸದಸ್ಯ ಸ್ಥಾನಕ್ಕೆ (ಸಾಮಾನ್ಯ) ಚುನಾವಣೆ ನಡೆಸಲು ಧಾರವಾಡ ಹೈಕೊರ್ಟ್‍ನ ನಿರ್ದೇಶನದಂತೆ ಚುನಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.  ಈ ಚುನಾವಣೆಯು ಧಾರವಾಡ ಹೈಕೋರ್ಟ್‍ನಲ್ಲಿನ ರಿಟ್ ಅಪೀಲುಗಳ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.  ಚುನಾವಣಾ ವೇಳಾಪಟ್ಟಿಯನ್ವಯ ನಾಮಪತ್ರಗಳನ್ನು ಏ. 18 ರಿಂದ 25 ರವರೆಗೆ ಬೆ. 11 ರಿಂದ ಮ. 03 ರೊಳಗಾಗಿ (ಸಾರ್ವಜನಿಕ ರಜೆ ದಿನಗಳನ್ನು ಹೊರತುಪಡಿಸಿ) ಸಲ್ಲಿಸಬಹುದಾಗಿದ್ದು, ಉಮೇದುವಾರರು ನಾಮಪತ್ರಗಳನ್ನು ಗಂಗಾವತಿ ತಹಸಿಲ್ದಾರರ ಕಚೇರಿಯಲ್ಲಿ ಪಡೆದು, ಉಮೇದುವಾರ ಅಥವಾ ಸೂಚಕರಾಗಲಿ, ಗಂಗಾವತಿ ಎಪಿಎಂಸಿ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿಗಳಿಗೆ ನಿಗದಿತ ಅವಧಿಯೊಳಗೆ ಸಲ್ಲಿಸಬೇಕು.  ಏ. 26 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.  ಉಮೇದುವಾರಿಕೆ ಹಿಂಪಡೆಯಲು ಏ. 28 ಮಧ್ಯಾಹ್ನ 03 ಗಂಟೆಯವರೆಗೆ ಅವಕಾಶವಿರುತ್ತದೆ.  ಮತದಾನದ ಅಗತ್ಯವಿದ್ದಲ್ಲಿ, ಮೇ. 08 ರಂದು ಬೆ. 07 ಗಂಟೆಯಿಂದ 05 ರವರೆಗೆ ಮತದಾನ ನಡೆಸಲಾಗುವುದು.  ಮೇ. 10 ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ಮೇ. 12 ರೊಳಗಾಗಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.

ಅಖಿಲ ಕರ್ನಾಟಕ ಉದಯೋನ್ಮುಖ ವಿಜ್ಞಾನ ಲೇಖಕರ ತರಬೇತಿ ಶಿಬಿರ

ಕೊಪ್ಪಳ, ಏ.12 (ಕರ್ನಾಟಕ ವಾರ್ತೆ): ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯದ ಉದಯೋನ್ಮುಖ ವಿಜ್ಞಾನ ಬರಹಗಾರರಿಗೆ, ಕಾರ್ಯನಿರತ ವಿಜ್ಞಾನ ಪತ್ರಿಕೋದ್ಯಮಿಗಳು- ವರದಿಗಾರರಿಗೆ 31ನೇ ಅಖಿಲ ಕರ್ನಾಟಕ ಉದಯೋನ್ಮುಖ ವಿಜ್ಞಾನ ಲೇಖಕರ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
    ವಿಜ್ಞಾನ ಬರವಣಿಗೆಯಲ್ಲಿ ಆಸಕ್ತಿ ಇರುವ ವಿಜ್ಞಾನ ಶಿಕ್ಷಕರು, ಯುವ ಪತ್ರಿಕಾ ವರದಿಗಾರರು, ಪತ್ರಿಕೋದ್ಯಮ ವಿದ್ಯಾರ್ಥಿಗಳು, ಚಿತ್ರ ನಿರೂಪಕರು, ರೇಡಿಯೋ ಭಾಷಣಕಾರರು, ಶಿಬಿರದಲ್ಲಿ ಭಾಗವಹಿಸಬಹುದು.  ಶಿಬಿರವನ್ನು ಮೇ ತಿಂಗಳ ಕೊನೆಯ ವಾರದಲ್ಲಿ ಆಯೋಜಿಸಲಾಗುತ್ತಿದ್ದು, ಶಿಬಿರದಲ್ಲಿ ನುರಿತ ವಿಜ್ಞಾನ ಬರಹಗಾರರು, ಸಂವಹನಕಾರರಿಂದ ಶಿಬಿರಾರ್ಥಿಗಳಿಗೆ ವಿಜ್ಞಾನ ಬರವಣಿಗೆಯ ಕುರಿತು ವಿವಿಧ ಕೌಶಲ್ಯ, ಆಕರ, ಶಬ್ದ ಬಳಕೆ, ಅನುವಾದ, ವಿಜ್ಞಾನ ಪತ್ರಿಕೋದ್ಯಮ ಮುಂತಾದ ಅಂಶಗಳಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ. 
ಶಿಬಿರಾರ್ಥಿಗಳಾಗಿ ಭಾಗವಹಿಸಲಿಚ್ಛಿಸುವವರು ವಿಜ್ಞಾನ ಸಂವಹನದಲ್ಲಿ ಆಸಕ್ತಿ ಹೊಂದಿರುವುದು ಅಪೇಕ್ಷಣೀಯ.  ಆಸಕ್ತರು ತಮ್ಮ ಕಿರುಪರಿಚಯ, ಸಂಪರ್ಕ ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್ ಐಡಿ ಇತ್ಯಾದಿ ವಿವರಗಳು ಮತ್ತು ಎಲ್ಲೂ ಪ್ರಕಟಗೊಳ್ಳದ 800 ಮತ್ತು 250 ಪದಗಳ 2 ಕನ್ನಡ ವೈಜ್ಞಾನಿಕ ಲೇಖನಗಳ ಸ್ವ ರಚಿತ ಪತ್ರಿಯೊಂದಿಗೆ ಅರ್ಜಿಯನ್ನು ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಭವನ, ನಂ.24/2, 21ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು 560070 ಇ-ಮೇಲ್  krvp.info@gmail.com ಈ ವಿಳಾಸಕ್ಕೆ ಮೇ. 05 ರೊಳಗಾಗಿ ಸಲ್ಲಿಸಬೇಕು. 
ಶಿಬಿರದಲ್ಲಿ ಭಾಗವಹಿಸಲು 20 ರಿಂದ 45 ವಯೋಮಾನದವರಿಗೆ ಆದ್ಯತೆ ನೀಡಲಾಗುವುದು.  ಆಯ್ಕೆಯಾದ ಅಭ್ಯರ್ಥಿಗಳಿಗೆ ನೋಂದಣಿ ಉಚಿತವಾಗಿದ್ದು, ವಿಜ್ಞಾನ ಪರಿಷತ್ತಿನಿಂದ ಊಟೋಪಚಾರ, ವಾಸ್ತವ್ಯ ಹಾಗೂ ಕರ್ತವ್ಯಸಹಿತ ರಜೆ (ಓ.ಓ.ಡಿ.) ಸೌಲಭ್ಯವನ್ನು ಒದಗಿಸಲಾಗುವುದು.  ಶಿಬಿರದ ನಿಖರವಾದ ದಿನಾಂಕ ಮತ್ತು ಸ್ಥಳವನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು.  ಹೆಚ್ಚಿನ ಮಾಹಿತಿಗಾಗಿ ಪರಿಷತ್ತಿನ ಕಛೇರಿ (080- 26718939 / 26718962) ಅಥವಾ 31ನೇ ಅಖಿಲ ಕರ್ನಾಟಕ ಉದಯೋನ್ಮುಖ ವಿಜ್ಞಾನ ಲೇಖಕರ ತರಬೇತಿ ಶಿಬಿರದ ರಾಜ್ಯ ಸಂಯೋಜಕ ದಾನಿ ಬಾಬುರಾವ್ 9448568360 ಇವರಿಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಯಲಬುರ್ಗಾ : ಪಕ್ಕಾ ಮನೆ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನ


ಕೊಪ್ಪಳ, ಏ.12 (ಕರ್ನಾಟಕ ವಾರ್ತೆ): ಯಲಬುರ್ಗಾ ಪಟ್ಟಣ ಪಂಚಾಯತಿಯ ಶೇ.24.10 ರ ಯೋಜನೆಯಡಿ 2007-08ನೇ ಸಾಲಿನಿಂದ 2010-11ನೇ ಸಾಲಿನವರೆಗೆ ಬಾಕಿ ಉಳಿದ ಅನುದಾನದಲ್ಲಿ ಪಕ್ಕಾ ಮನೆ ನಿರ್ಮಿಸಿಕೊಳ್ಳಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಂದ ಅರ್ಜಿ ಆಹ್ವಾನಿಸಲಾಗಿದೆ.
      2007-08ನೇ ಸಾಲಿನಿಂದ 2010-11ನೇ ಸಾಲಿನವರೆಗೆ ಬಾಕಿ ಉಳಿದ ಶೇ.24.10 ರ ಅನುದಾನದಲ್ಲಿ ಪಕ್ಕಾ ಮನೆ ನಿರ್ಮಿಸಿಕೊಳ್ಳಲು ಸಹಾಯಧನ ಒದಗಿಸಲು, ಸಲ್ಲಿಸಿದ ಕ್ರಿಯಾ ಯೋಜನೆಗೆ ಮಂಜೂರಾತಿ ಪಡೆಯಲಾಗಿದ್ದು, ಯಲಬುರ್ಗಾ ಪಟ್ಟಣದ ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಸಹಾಯಧನ (ಪ್ರತಿ ಫಲಾನುಭವಿಗೆ ರೂ. 70,000 ರಂತೆ) ಮಂಜೂರು ಮಾಡಲಾಗುವುದು. 
    ಅರ್ಜಿ ಸಲ್ಲಿಸಲು, ಆಸ್ತಿ ದಾಖಲಾತಿ, ಆಧಾರ ಕಾರ್ಡ, ಮತದಾರರ ಗುರುತಿನ ಪತ್ರ, ಬ್ಯಾಂಕ್ ಪಾಸ್ ಪುಸ್ತಕ, ಪಡಿತರ ಚೀಟಿ, 4 ಸ್ಟಾಂಪ್ ಸೈಜ್ ಭಾವಚಿತ್ರಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕಚ್ಚಾಮನೆಯ ಭಾವಚಿತ್ರದೊಂದಿಗೆ, ಪ್ರಕಟಣೆಗೊಂಡ ದಿನಾಂಕದಿಂದ 7 ದಿನಗಳೊಳಗಾಗಿ ಯಲಬುರ್ಗಾ ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ಸಲ್ಲಿಸಬಹುದು.  ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ವೇಳೆಯಲ್ಲಿ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಪ.ಪಂ. ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾಗ್ಯನಗರ : ದೂರವಾಣಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ದೂರು ಸಲ್ಲಿಕೆ


ಕೊಪ್ಪಳ, ಏ.12 (ಕರ್ನಾಟಕ ವಾರ್ತೆ): ಭಾಗ್ಯನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಮೂಲಭೂತ ಸೇವೆಗಳಾದ ರಸ್ತೆ, ಕುಡಿಯುವ ನೀರು, ಬೀದಿ-ದೀಪ, ಚರಂಡಿಗಳ ಸ್ವಚ್ಛತೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ದೂರುಗಳನ್ನು ಸಲ್ಲಿಸಲು ಮತ್ತು ದೂರು ಪರಿಹಾರ ಮಾಡಲು ನೂತನ ಜನಹಿತ ವ್ಯವಸ್ಥೆಯನ್ನು ಈಗಾಗಲೇ ಜಾರಿಗೆ ತರಲಾಗಿದ್ದು, ನಾಗರೀಕರು ದೂರವಾಣಿ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ದೂರುಗಳನ್ನು ಸಲ್ಲಿಸಬಹುದು.
    ಕಾಲ್ ಸೆಂಟರ್ ಸಹಾಯವಾಣಿ ಸಂಖ್ಯೆ: 080- 23108108, ವಾಟ್ಸ್‍ಆಪ್ ಸೆಂಟರ್ ನಂಬರ: 8277777728, ಟ್ವೀಟರ್:  http//twitter.com/janahita.mrc ಫೇಸ್‍ಬುಕ್:  http//www.facebook.com/janahita.mrc ಇ-ಮೇಲ್:  janahita@mrc.gov.in, ವೇಬ್‍ಸೈಟ್:  http//www.mrc.gov.in/janahita,  ಇದಲ್ಲದೇ ಇತ್ತೀಚಿಗಷ್ಟೆ “ಜನಹಿತ ಮೊಬೈಲ್ ಅಪ್ಲೀಕೇಷನ್” ಸಹ ಲೋಕಾರ್ಪಣೆಗೆಗೊಳಿಸಲಾಗಿದ್ದು, ಈ ಅಂಡ್ರಾಯಿಡ್ ಮೊಬೈಲ್ ಆಫ್ ಗೂಗಲ್ ಪ್ಲೇ-ಸ್ಟೋರ್ ಮತ್ತು ವೇಬ್‍ಸೈಟ್  http//www.mrc.gov.in/janahita,, ಈ  ಎರಡೂ ಕಡೆ ಲಭ್ಯವಿದ್ದು, ನಾಗರೀಕರು ಈ ತಂತ್ರಾಂಶವನ್ನು ತಮ್ಮ ಸ್ಮಾರ್ಟಪೋನ್‍ನಲ್ಲಿ ಅಳವಡಿಸಿಕೊಂಡು, ಇದರ ಮೂಲಕವೂ ಸಹ ತಮ್ಮ ಪಟ್ಟಣಕ್ಕೆ ಸಂಬಂಧಿಸಿದಂತೆ ಮೂಲಭೂತ ಅವಶ್ಯಕತೆಗಳಿಗೆ ದೂರು ಸಲ್ಲಿಸಬಹುದಾಗಿದೆ, ಮತ್ತು ತಮ್ಮ ದೂರಿನ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ.  ಪ್ರಯುಕ್ತ ಭಾಗ್ಯನಗರದ ನಿವಾಸಿಗಳು ಇದರ ಪ್ರಯೋಜನ ಪಡೆಯಲು ಪ.ಪಂ. ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಶ್ರಯ ಹಕ್ಕು ಪತ್ರ ಶೀಘ್ರ ವಿತರಣೆ- ಇಕ್ಬಾಲ್ ಅನ್ಸಾರಿಕೊಪ್ಪಳ ಏ. 13 (ಕರ್ನಾಟಕ ವಾರ್ತೆ) : ದಶಕದಿಂದ ನೆನೆಗುದಿಗೆ ಬಿದ್ದಿರುವ ಯಲಮಗೇರಿಯ ನೂರಾರು ಆಶ್ರಯ ಫಲಾನುಭವಿಗಳಿಗೆ ಶೀಘ್ರ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ತಾಲೂಕು ಪಂಚಾಯತ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು.
     ಕೊಪ್ಪಳ ತಾಲೂಕು ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ   ಯಲಮಗೇರಿಯ ಎಸ್‍ಸಿ ಕಾಲೋನಿಯಲ್ಲಿ 20 ಲಕ್ಷ ವೆಚ್ಚದಲ್ಲಿ ಸಿ ಸಿ ರಸ್ತೆ ನಿರ್ಮಿಸುವ ಕಾಮಗಾರಿಗೆ ಬುಧವಾರದಂದು ಭೂಮಿ ಪೂಜೆ ನೆರವೇರಿಸಿ  ಮಾತನಾಡಿದರು.
     ಕಲಕೇರಿಯಿಂದ ಬುಡಶೆಟ್ನಾಳ ಹಾಗೂ ತಾಳಕನಕಾಪುರದಿಂದ ವಯಾ ಬುಡಶೆಟ್ನಾಳ ಕಿನ್ನಾಳವರೆಗೆ ಎರಡೂ ರಸ್ತೆ ಕಾಮಗಾರಿಗಳಿಗೆ ಆರು ಕೋಟಿ ವೆಚ್ಚದ ಕಾಮಗಾರಿಗೆ ಎರಡು ವಾರದಲ್ಲಿ ಚಾಲನೆ ನೀಡಲಾಗುವುದು. ಬುಡಶೆಟ್ನಾಳ ಪುನರ್ ವಸತಿ ಗ್ರಾಮದ ರಸ್ತೆ ಸಮಸ್ಯೆಯನ್ನೂ ಪರಿಹರಿಸಲಾಗುವುದು  ಎಂದು ಶಾಸಕ ಇಕ್ಬಾಲ್ ಅನ್ಸಾರಿ ಅವರು ಹೇಳಿದರು.
     ನಂತರ ಚಾಮಲಾಪುರ ಗ್ರಾಮದ ಎಸ್‍ಸಿ ಕಾಲೋನಿಯಲ್ಲಿ 20 ಲಕ್ಷ ವೆಚ್ಚದ ಸಿ ಸಿ ರಸ್ತೆ, ಇರಕಲ್ಲಗಡದ ಎಸ್‍ಟಿ ಕಾಲೋನಿಯಲ್ಲಿ 30 ಲಕ್ಷ ವೆಚ್ಚದ ಸಿ ಸಿ ರಸ್ತೆ, ಬುಡಶೆಟ್ನಾಳ ಎಸ್‍ಟಿ ಕಾಲೋನಿಯಲ್ಲಿ 20 ಲಕ್ಷ ವೆಚ್ಚದ ಸಿ ಸಿ ರಸ್ತೆ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
     ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲೇಶಪ್ಪ ಗುಮಗೇರಿ, ಸಂಗಮೇಶ ಬಾದವಾಡಗಿ, ಬಸವಕುಮಾರ ಪಟ್ಟಣ ಶೆಟ್ಟರ್, ಕೊಟ್ರೇಶ ಸಂಗನಾಳ, ಬಸವರಾಜ ಚಿಲವಾಡಗಿ, ಹನುಮಂತ ವನಬಳ್ಳಾರಿ ಇತರರು ಉಪಸ್ಥಿತರಿದ್ದರು.

ಕೈಮಗ್ಗ ಗಣತಿ : ಫೋಟೋ ಗುರುತಿನ ಚೀಟಿ ಸಲ್ಲಿಸಲು ಸೂಚನೆ


ಕೊಪ್ಪಳ, ಏ.13 (ಕರ್ನಾಟಕ ವಾರ್ತೆ): ಭಾರತ ಸರ್ಕಾರದ ಜವಳಿ ಮಂತ್ರಾಲಯವು ದೇಶದಾದ್ಯಂತ 4ನೇ ಕೈಮಗ್ಗ ಹಾಗೂ ಕೈಮಗ್ಗ ಸಂಬಂಧಿತ ಕಾರ್ಮಿಕರ ಗಣತಿ ಹಾಗೂ ಫೋಟೋ ಗುರುತಿನ ಚೀಟಿ ನೀಡುವ ಕಾರ್ಯಕ್ರಮವನ್ನು ಏಪ್ರಿಲ್ ಮಾಹೆಯಿಂದ ಹಮ್ಮಿಕೊಳ್ಳಲಾಗಿದ್ದು, ನೇಕಾರರು ತಮ್ಮ ಸೂಕ್ತ ಮಾಹಿತಿ ಒದಗಿಸಲು ಕೋರಿದೆ.
     ಗಣತಿ ಕಾರ್ಯಕ್ರಮವನ್ನು ಮೆ: ಕಾರ್ವಿ ಡೇಟಾ ಮ್ಯಾನೇಜ್‍ಮೆಂಟ್ ಏಜೆನ್ಸಿ ರವರಿಗೆ ವಹಿಸಲಾಗಿದೆ.  ನೇಕಾರರು ಇದರ ಸದುಪಯೋಗ ಪಡೆಯಲು ಸಂಸ್ಥೆಯವರು ತಮ್ಮ ಪ್ರದೇಶಕ್ಕೆ ಭೇಟಿ ಕೊಟ್ಟಾಗ ಸ್ಥಳಿಯವಾಗಿ ಲಭ್ಯವಿದ್ದು, ಅವರಿಗೆ ಸೂಕ್ತ ಮಾಹಿತಿ ಒದಗಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಉಪ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಕೊಪ್ಪಳ, ದೂರವಾಣಿ ಸಂ:08539-230069 ಕ್ಕೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಬಿಆರ್‍ಸಿ ಹುದ್ದೆ : ಕೌನ್ಸಿಲಿಂಗ್‍ಗೆ ಹಾಜರಾಗಲು ಸೂಚನೆ


ಕೊಪ್ಪಳ ಏ. 13 (ಕರ್ನಾಟಕ ವಾತರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆಯು 2016-17 ನೇ ಸಾಲಿನಲ್ಲಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ (ಬಿ.ಆರ್.ಸಿ) ಹುದ್ದೆಗಳಿಗೆ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ನಿಗದಿತ ಅಂಕ ಪಡೆದು ಬಿ.ಆರ್.ಸಿ ಹುದ್ದೆಗೆ ಒಳಬರುವ ಅರ್ಹ ಅಧಿಕಾರಿಗಳ ಪಟ್ಟಿ ಮತ್ತು ಬಿ.ಆರ್.ಸಿ ಹುದ್ದೆಯಲ್ಲಿ ಮೂರು ವರ್ಷಗಳನ್ನು ಪೂರ್ಣಗೊಳಿಸಿ ಹೊರಹೋಗುವ ಅಧಿಕಾರಿಗಳ ಅಂತಿಮ ತಾತ್ಕಾಲಿಕ ಪಟ್ಟಿಯನ್ನು ಇಲಾಖಾ ಅಂತರ್ಜಾಲ  www.cpigulbarga.kar.nic.in  ದಲ್ಲಿ ಪ್ರಕಟಿಸಿದ್ದು, ಕೌನ್ಸಿಲಿಂಗ್‍ಗೆ ಹಾಜರಾಗಲು ಸೂಚನೆ ನೀಡಲಾಗಿದೆ.
    ತಾತ್ಕಾಲಿಕ ಪಟ್ಟಿಯಲ್ಲಿರುವ ಬಿ.ಆರ್.ಸಿ ಹುದ್ದೆಗೆ ಒಳಬರುವ ಮತ್ತು ಹೊರಹೋಗುವ ಅಧಿಕಾರಿಗಳಿಗೆÉ ಏ. 17 ರಂದು ಬೆಳಿಗ್ಗೆ 10:30 ಗಂಟೆಗೆ ಅಪರ ಆಯುಕ್ತರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಐವಾನ್-ಎ-ಷಾಹಿ ಬಡಾವಣೆ, ಕಲಬುರಗಿ ಇಲ್ಲಿ ಕೌನ್ಸಲಿಂಗ್ ಏರ್ಪಡಿಸಲಾಗಿದ್ದು ಅರ್ಹ ಅಧಿಕಾರಿಗಳು ಕೌನ್ಸಲಿಂಗ್‍ಗೆ ಹಾಜರಾಗುವಂತೆ ಅಪರ ಆಯುಕ್ತ ಸಿ.ವಿ. ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tuesday, 11 April 2017

ಗೋಶಾಲೆಗೆ ಬರುವ ರೈತರಿಗೆ ಉದ್ಯೋಗಖಾತ್ರಿಯಡಿ ಕೆಲಸ ನೀಡುವ ಬಗ್ಗೆ ಪರಿಶೀಲನೆ : ಶೇಖರಪ್ಪ ನಾಗರಳ್ಳಿಕೊಪ್ಪಳ, ಏ.11 (ಕರ್ನಾಟಕ ವಾರ್ತೆ): ಜಿಲ್ಲೆಯ ಗೊಶಾಲೆಗಳಿಗೆ ಜಾನುವಾರುಗಳನ್ನು ಕರೆತರುವ ರೈತರಿಗೆ ಅದೇ ಪ್ರದೇಶದ ವ್ಯಾಪ್ತಿಯಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಉದ್ಯೋಗ ಒದಗಿಸುವ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಜಿ.ಪಂ. ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿ ಇದ್ದು, ಜಾನುವಾರುಗಳ ರಕ್ಷಣೆಗಾಗಿ ಸರ್ಕಾರ ಗೋಶಾಲೆಗಳನ್ನು ಪ್ರಾರಂಭಿಸಿ, ಜಾನುವಾರುಗಳಿಗೆ ಮೇವು ಒದಗಿಸುತ್ತಿದೆ.  ಗೋಶಾಲೆಗಳಿಗೆ ಜಾನುವಾರುಗಳನ್ನು ತರುವವರು ಸಾಮಾನ್ಯವಾಗಿ ಬಡ ರೈತರೇ ಇದ್ದು, ಬೆಳಿಗ್ಗೆಯಿಂದ ಸಂಜೆವರೆಗೆ ಗೋಶಾಲೆಯಲ್ಲಿಯೇ ಉಳಿಯುತ್ತಾರೆ.  ಅಂತಹ ರೈತರಿಗೆ ಗೋಶಾಲೆಯ ಸುತ್ತಮುತ್ತ ಸಮೀಪದ ಪ್ರದೇಶದಲ್ಲಿಯೇ ಉದ್ಯೋಗಖಾತ್ರಿ ಯೋಜನೆಯಡಿ ಉದ್ಯೋಗ ದೊರಕಿಸಿಕೊಟ್ಟರೆ, ರೈತರೂ ಬದುಕುತ್ತಾರೆ, ಜಾನುವಾರುಗಳಿಗೂ ಅನುಕೂಲವಾಗುತ್ತದೆ ಎಂದು ಜಿ.ಪಂ. ಸದಸ್ಯ ಮಹೇಶ್ ಅವರು ಮನವಿ ಮಾಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು, ಗೋಶಾಲೆಗೆ ಬರುವ ರೈತರಿಗಾಗಿಯೇ ಉದ್ಯೋಗಖಾತ್ರಿ ಯೋಜನೆಯಡಿ ಉದ್ಯೋಗ ದೊರಕಿಸುವ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಲಾಗುವುದು.  ಸಂಬಂಧಪಟ್ಟ ಗ್ರಾಮ ಪಂಚಾಯತಿಯವರು ಇದಕ್ಕಾಗಿ ವಿಶೇಷ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ, ಸಲ್ಲಿಸಿದಲ್ಲಿ, ಯೋಜನೆಗೆ ಅನುಮೋದನೆ ನೀಡಲಾಗುವುದು.  ಈ ಕುರಿತು ಅಧಿಕಾರಿಗಳು ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಎಲ್ಲ ಗೋಶಾಲೆಗಳಿಗೆ ಮೇವು ಕತ್ತರಿಸುವ ಯಂತ್ರ :
************ ಜಿಲ್ಲೆಯಲ್ಲಿ ಈ ಬಾರಿ ಒಟ್ಟು 07 ಗೋಶಾಲೆಗಳನ್ನು ತೆರೆಯಲಾಗಿದ್ದು, ಕೆಲ ಗೋಶಾಲೆಗಳಿಗೆ ಮೇವು ಕತ್ತರಿಸುವ ಯಂತ್ರ ಒದಗಿಸಲಾಗಿತ್ತು.  ಕೆಲವೆಡೆ ಕಡಿಮೆ ಸಾಮಥ್ರ್ಯದ ಯಂತ್ರ ಒದಗಿಸಿದ ಕಾರಣಕ್ಕಾಗಿ ಅವುಗಳನ್ನು ಗೋಶಾಲೆಗೆ ನೀಡಿರಲಿಲ್ಲ.  ಇದೀಗ 05 ಹೆಚ್.ಪಿ ಸಾಮಥ್ರ್ಯದ ಮೇವು ಕತ್ತರಿಸುವ ಯಂತ್ರಗಳ ಪೂರೈಕೆಯಾಗಿದ್ದು, ಶೀಘ್ರ ಗೋಶಾಲೆಗೆ ಒದಗಿಸಲಾಗುವುದು ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ ಅವರು ತಿಳಿಸಿದರು.  ಒಂದು ವಾರದೊಳಗಾಗಿ ಎಲ್ಲ ಗೋಶಾಲೆಗಳಿಗೆ ಮೇವು ಕತ್ತರಿಸುವ ಯಂತ್ರವನ್ನು ಒದಗಿಸುವಂತೆ ಜಿ.ಪಂ. ಅಧ್ಯಕ್ಷರು ಸೂಚನೆ ನೀಡಿದರು.
ಬರ ಕಾರಣ ಮೀನುಗಾರಿಕೆ ಗುತ್ತಿಗೆ ಮುಂದುವರಿಕೆ :
************** ಜಿಲ್ಲೆಯ ಹಲವು ಕೆರೆಗಳಲ್ಲಿ ಮೀನುಗಾರಿಕೆ ಕೈಗೊಳ್ಳಲು, 2016-17 ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯಿಂದ ಟೆಂಡರ್ ಕರೆದು, ಗುತ್ತಿಗೆ ಶುಲ್ಕವನ್ನು ಪಾವತಿಸಿಕೊಂಡು, ಗುತ್ತಿಗೆಯನ್ನು ನೀಡಲಾಗಿತ್ತು.  ಆದರೆ ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಯ ವೈಫಲ್ಯದಿಂದಾಗಿ ಮೀನುಗಾರಿಕೆ ಗುತ್ತಿಗೆ ಪಡೆದವರಿಗೆ ತೀವ್ರ ನಷ್ಟ ಉಂಟಾಗಿದೆ.  ಹೀಗಾಗಿ 2017-18 ನೇ ಸಾಲಿಗೆ ಯಾವುದೇ ಗುತ್ತಿಗೆ ಶುಲ್ಕವನ್ನು ಪಡೆಯದೆ, ಅದೇ ಸಂಘದವರಿಗೆ ಮೀನುಗಾರಿಕೆ ಗುತ್ತಿಗೆಯನ್ನು ಮುಂದುವರಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕರು ಸಭೆಯ ಗಮನಕ್ಕೆ ತಂದರು.  ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲು ಜಿ.ಪಂ. ಅಧ್ಯಕ್ಷರು ಅಧಿಕಾರಿಗೆ ಸೂಚನೆ ನೀಡಿದರು.
ಕೃಷಿಭಾಗ್ಯದಲ್ಲಿ ಕೊಪ್ಪಳ ಜಿಲ್ಲೆಯ ಉತ್ತಮ ಸಾಧನೆ :
************ ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ವರದಾನವಾಗಿರುವಂತಹ ಕೃಷಿ ಹೊಂಡ ಕಾರ್ಯಕ್ರಮ ಕೊಪ್ಪಳ ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನಗೊಂಡಿದೆ.  2016-17 ನೇ ಸಾಲಿನಲ್ಲಿ 2302 ಕೃಷಿ ಹೊಂಡ ನಿರ್ಮಾಣದ ಗುರಿಯನ್ನು ಸರ್ಕಾರ ನಿಗದಿಪಡಿಸಿತ್ತು.  ಜಿಲ್ಲೆಯಲ್ಲಿ 2876 ಕೃಷಿ ಹೊಂಡಗಳನ್ನು ನಿರ್ಮಿಸಿ ಗುರಿ ಮೀರಿ ಸಾಧನೆ ಮಾಡಲಾಗಿದೆ.  ಪ್ರಸಕ್ತ ವರ್ಷ 3000 ಕೃಷಿ ಹೊಂಡಗಳ ಗುರಿಯನ್ನು ನಿಗದಿಪಡಿಸಲಾಗಿದೆ.  ಕೃಷಿಹೊಂಡಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ, ಇನ್ನೂ 1500 ಹೆಚ್ಚುವರಿ ಕೃಷಿ ಹೊಂಡಗಳನ್ನು ಜಿಲ್ಲೆಗೆ ಮಂಜೂರು ಮಾಡುವಂತೆ ಈಗಾಗಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.  ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಅನುಷ್ಠಾನದಲ್ಲಿ ಕೊಪ್ಪಳ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್ ಅವರು ಹೇಳಿದರು.
89 ಗ್ರಾಮಗಳಲ್ಲಿ ಖಾಸಗಿ ಬೋರ್‍ವೆಲ್ :
********** ಜಿಲ್ಲೆಯಲ್ಲಿ ತೀವ್ರ ಅಂತರ್ಜಲ ಕುಸಿತದ ಪರಿಣಾಮವಾಗಿ ಹೊಸ ಬೋರ್‍ವೆಲ್‍ಗಳನ್ನು ಕೊರೆಯಿಸಿದರೂ, ನೀರು ದೊರೆಯುತ್ತಿಲ್ಲ.  ಜಿಲ್ಲೆಯಲ್ಲಿ 710 ಹೊಸ ಬೋರ್‍ವೆಲ್‍ಗಳನ್ನು ಕೊರೆಯಿಸಲಾಗಿದ್ದು, ಈ ಪೈಕಿ 239 ಮಾತ್ರ ಸಫಲವಾಗಿದ್ದು, 371 ಬೋರ್‍ವೆಲ್‍ಗಳು ವಿಫಲವಾಗಿವೆ.  ನೀರಿನ ಮೂಲ ಲಭ್ಯವಾಗದ ಕಾರಣದಿಂದಾಗಿ ಜಿಲ್ಲೆಯ 89 ಗ್ರಾಮಗಳಲ್ಲಿ 110 ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆಗೆ ಪಡೆದು, ಜನರಿಗೆ ನೀರು ಪೂರೈಸಲಾಗುತ್ತಿದೆ.  26 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ.  ಸದ್ಯ ಜಿಲ್ಲೆಯಲ್ಲಿ 344 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳನ್ನಾಗಿ ಗುರುತಿಸಲಾಗಿದ್ದು, ನೀರು ಪೂರೈಸಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ.  ನೆನೆಗುದಿಗೆ ಬಿದ್ದಿದ್ದ ಶುದ್ಧ ಕುಡಿಯುವ ನೀರಿನ ಹೊಸ ಘಟಕಗಳ ಸ್ಥಾಪನೆ ಕಾರ್ಯ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಇಂಜಿನಿಯರ್ ಹೇಳಿದರು.
ಸಹಕಾರ ಇಲಾಖೆಯ ಅಲ್ಪ ಸಾಧನೆಗೆ ಅತೃಪ್ತಿ :
*********** ಕೃಷಿಕರಿಗೆ ಸಾಕಷ್ಟು ಯೋಜನೆಗಳನ್ನು ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಕಾರ್ಯಕ್ರಮಗಳನ್ನು ಸಹಕಾರ ಇಲಾಖೆ ಅನುಷ್ಠಾನಗೊಳಿಸಬೇಕಿದೆ.  ಆದರೆ ಜಿಲ್ಲೆಯಲ್ಲಿ ಸಹಕಾರ ಇಲಾಖೆ 2016-17 ನೇ ಸಾಲಿನಲ್ಲಿ ಶೇ. 58 ರಿಂದ 67 ರಷ್ಟು ಮಾತ್ರ ಸಾಧನೆ ಮಾಡಿದ್ದು, ಈ ಅಲ್ಪ ಸಾಧನೆಗೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ಕೃಷಿ ಸಹಕಾರಿ ಸಾಲಗಳ ವಿತರಣೆಯಲ್ಲಿ ಶೇ. 58 ರಷ್ಟು, ಮಧ್ಯಮಾವಧಿ ಸಾಲ ನೀಡಿಕೆಯಲ್ಲಿ ಶೇ. 67, ದೀರ್ಘಾವಧಿ ಸಾಲ ನೀಡಿಕೆಯಲ್ಲಿ ಶೇ. 80, ಎಣ್ಣೆ ಬೀಜಗಳ ವಿತರಣೆಯಲ್ಲಿ ಶೇ. 57 ರಷ್ಟು ಸಾಧನೆಯಾಗಿದೆ.  ಕೃಷಿಕರಿಗೆ ನೇರ ನೆರವು ಒದಗಿಸಬೇಕಾಗಿರುವ ಸಹಕಾರ ಇಲಾಖೆ, ಸಮರ್ಪಕ ಕಾರ್ಯ ನಿರ್ವಹಿಸದಿರುವುದು ಈ ಅಲ್ಪ ಸಾಧನೆಗೆ ಕಾರಣವಾಗಿದ್ದು, ಸಹಕಾರ ಸಂಘಗಳ ಉಪನಿಬಂಧಕರಿಗೆ ಕಾರಣ ಕೇಳುವ ನೋಟಿಸ್ ಜಾರಿಗೊಳಿಸುವಂತೆ ಜಿ.ಪಂ. ಸಿಇಒ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
       ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಮುಖ್ಯ ಯೋಜನಾಧಿಕಾರಿ ಎಂ. ನಿಂಗಪ್ಪ, ಜಿ.ಪಂ. ಸದಸ್ಯರುಗಳಾದ ಮಹೇಶ್, ಭೀಮಣ್ಣ ಅಗಸಿಮುಂದಿನ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು : ನಿಷೇಧಾಜ್ಞೆ ಜಾರಿ


ಕೊಪ್ಪಳ ಏ. 11 (ಕರ್ನಾಟಕ ವಾರ್ತೆ): ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗೆ ಕುಡಿಯುವ ನೀರು ಪೂರೈಕೆಯ ಉದ್ದೇಶಕ್ಕಾಗಿ ತುಂಗಭದ್ರಾ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲಾಗಿದ್ದು, ಎಡದಂಡೆ ಕಾಲುವೆ 0.00 ಮೈಲಿನಿಂದ 47 ರವರೆಗೆ ಕಾಲುವೆಯ ಎಡ ಮತ್ತು ಬಲ ದಡಗಳ 100 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
      ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗೆ ಕುಡಿಯುವ ನೀರು ಪೂರೈಕೆಯ ಉದ್ದೇಶಕ್ಕಾಗಿ ತುಂಗಭದ್ರಾ ಜಲಾಶಯದಿಂದ ಏ. 10 ರಿಂದ 20 ರವರೆಗೆ ನೀರು ಹರಿಸಲಾಗುತ್ತಿದ್ದು, ತುಂಗಭದ್ರಾ ಎಡದಂಡೆ ಕಾಲುವೆ 0.00 ಮೈಲಿನಿಂದ 47 ರವರೆಗೆ ಮುಖ್ಯ ಕಾಲುವೆಯ ಎಡ ಮತ್ತು ಬಲ ದಡಗಳಿಂದ 100 ಮೀ. ಅಂತರದ ವ್ಯಾಪ್ತಿ ಪ್ರದೇಶದಲ್ಲಿ ಏ. 10 ರಿಂದ 20 ರವರೆಗೆ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.  ಇದರನ್ವಯ ನಿಷೇಧಿತ ವ್ಯಾಪ್ತಿಯಲ್ಲಿ ಕಾಲುವೆಯ ಎಡ ಮತ್ತು ಬಲ ದಡದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರು ಎರಡು ಜನಕ್ಕಿಂತ ಹೆಚ್ಚಾಗಿ ಒಡಾಡುವುದನ್ನು ನಿಷೇಧಿಸಲಾಗಿದೆ. ನಿಷೇಧಿತ ಪ್ರದೇಶ ವ್ಯಾಪ್ತಿಯಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬೋಗಸ್ ಪಡಿತರ ಚೀಟಿ ಪತ್ತೆಹಚ್ಚುವವರಿಗೆ ಸಹಾಯಧನ


ಕೊಪ್ಪಳ ಏ. 11 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಬೋಗಸ್ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವವರಿಗೆ ಅಥವಾ ಪಡಿತರ ವಸ್ತುಗಳು ಕಾಳಸಂತೆಗೆ ಪೂರೈಕೆಯಾಗುವುದನ್ನು ತಡೆಗಟ್ಟುವವರಿಗೆ ಸಹಾಯಧನ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸಿ.ಡಿ. ಗೀತಾ ಅವರು ತಿಳಿಸಿದ್ದಾರೆ.
      ಜಿಲ್ಲೆಯಲ್ಲಿ ಬೋಗಸ್ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲು ಮತ್ತು ಪಡಿತರ ಧಾನ್ಯಗಳು ಕಾಳಸಂತೆಗೆ ಪೂರೈಕೆಯಾಗುವುದನ್ನು ತಡೆಗಟ್ಟಲು ಸಾಮಾಜಿಕ ಸರ್ಕಾರೇತರ ಸಂಘ ಸಂಸ್ಥೆಗಳು ಇಲಾಖೆಯೊಂದಿಗೆ ಸಹಕರಿಸಬೇಕು.  ಬೋಗಸ್ ಪಡಿತರ ಚೀಟಿಯನ್ನು ಪತ್ತೆ ಹಚ್ಚುವವರಿಗೆ ಪ್ರತಿ ಕಾರ್ಡಿಗೆ 400 ರೂ. ಗಳ ಸಹಾಯಧನವನ್ನು ನೀಡಲಾಗುವುದು.
      ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಯನ್ನು ಒಂದು ನ್ಯಾಯಬೆಲೆ ಅಂಗಡಿಯಿಂದ, ಇನ್ನೊಂದು ನ್ಯಾಯಬೆಲೆ ಅಂಗಡಿಗೆ ಸ್ಥಳಾಂತರ ಮಾಡಿಸಿಕೊಳ್ಳಲು ಬಯಸಿದಲ್ಲಿ, ಅಂತಹವರು ಏಪ್ರಿಲ್ ತಿಂಗಳ ಪಡಿತರ ಹಂಚಿಕೆಯ ನಂತರ ಹಾಗೂ ಮೇ ತಿಂಗಳ ಪಡಿತರ ಎತ್ತುವಳಿ ಆಗುವುದಕ್ಕೂ ಮೊದಲು ಆಯಾ ತಾಲೂಕು ತಹಸಿಲ್ದಾರರು, ಶಿರಸ್ತೆದಾರರು ಅಥವಾ ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ಮನವಿ ಸಲ್ಲಿಸಬೇಕು.  ಹೆಚ್ಚಿನ ವಿವರಗಳಿಗೆ ಗಂಗಾವತಿ-08533-230929, ಕೊಪ್ಪಳ-08539-220381, ಯಲಬುರ್ಗಾ-08534-220130, ಕುಷ್ಟಗಿ-08536-267031 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸಿ.ಡಿ. ಗೀತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೇಸಿಗೆಯ ನಿರ್ವಹಣೆ : ಸಾರ್ವಜನಿಕರಿಗೊಂದಿಷ್ಟು ಸಲಹೆಗಳು


ಕೊಪ್ಪಳ ಏ. 11 (ಕರ್ನಾಟಕ ವಾರ್ತೆ): ಬಿರು ಬೇಸಿಗೆ ಬಂದಾಗಿದೆ.  ಸೂರ್ಯನ ಕೆಂಡದಂತಹ ಬಿಸಿಲಿಗೆ ಭೂಮಿ ಅಕ್ಷರಶಃ ಕಾದ ಕಾವಲಿಯಂತಾಗಿದೆ.  ಸೂರ್ಯನ ಪ್ರತಾಪಕ್ಕೆ ಜನರು ಬಸವಳಿಯುತ್ತಿದ್ದು, ಸದ್ಯ ತೀವ್ರ ಸೆಖೆಗೆ ಮನೆಯೊಳಗೂ ಇರಲಾರದೆ, ಮನೆಯ ಹೊರಗೂ ಬರಲಾಗದೆ ಜನರು ಸಂಕಟ ಅನುಭವಿಸುವ ಸ್ಥಿತಿ ತಲೆದೋರಿದೆ.  ಬೇಸಿಗೆಯಲ್ಲಿ ಸಾರ್ವಜನಿಕರು ಯಾವ ಕ್ರಮವನ್ನು ಅನುಸರಿಸಬೇಕು, ಯಾವುದನ್ನು ಮಾಡಬಾರದು ಎಂಬುದರ ಕುರಿತು ಆರೋಗ್ಯ ಇಲಾಖೆ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದೆ.
ಬೇಸಿಗೆಯಲ್ಲಿ ವಹಿಸಬೇಕಾದ ಕಾಳಜಿ :
•    ಸಡಿಲವಾದ, ತೆಳು ಬಣ್ಣದ ಹತ್ತಿಯ ಬಟ್ಟೆ ಧರಿಸುವುದು ಉತ್ತಮ
•    ಬಿಸಿಲಿನಲ್ಲಿ ಬಯಲು ಮತ್ತು ಹೊಲದಲ್ಲಿ ಕೆಲಸ ಮಾಡುವ ಜನರು ಸದಾ ಕೈಗೆಟಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಬೇಕು
•    ಆಗಾಗ್ಗೆ ಉಪ್ಪು ಸಕ್ಕರೆ ಮಿಶ್ರಿತ ನೀರನ್ನು ನಿಧಾನವಾಗಿ ಧಾರಾಳವಾಗಿ ಕುಡಿಯಬೇಕು, ಹಣ್ಣಿನ ರಸ ಅಥವಾ ಪಾನಕಗಳಾದರೆ ಇನ್ನೂ ಉತ್ತಮ.  ಆದಷ್ಟು ಕಾರ್ಬೋನೇಟೆಡ್ ಪಾನೀಯಗಳು, ಕಾಫಿ/ಟೀ ಇಂತಹವುಗಳ ಬಳಕೆ ಕಡಿಮೆಗೊಳಿಸಿ
•    ಹತ್ತಿಯ ನುಣುಪಾದ ಬಟ್ಟೆ, ಕರವಸ್ತ್ರದಿಂದ ಬೆವರನ್ನು ಒರೆಸಿಕೊಳ್ಳಬೇಕು
•    ನೀರು ಮಜ್ಜಿಗೆ/ ಎಳೆನೀರು ಅತ್ಯುತ್ತಮ
•    ಬೆಚ್ಚಗಿನ ಮಸಾಲೆ ರಹಿತ, ಶುದ್ಧ ಸಾತ್ವಿಕ ಆಹಾರ ಸೇವಿಸಬೇಕು
•    ಗಾಳಿಯಾಡುವಂತಿರುವ ಪಾದರಕ್ಷೆಯನ್ನು ಧರಿಸಬೇಕು
ತೊಂದರೆಗೊಳಗಾದ ವ್ಯಕ್ತಿ ಕಂಡುಬಂದರೆ : ಆಪತ್ಕಾಲದಲ್ಲಿ ಕೈಗೊಳ್ಳುವ ಶೀಘ್ರ ಸಮಯೋಚಿತ, ಪ್ರಜ್ಞಾಪೂರ್ವಕ ಕ್ರಮದಿಂದ ಆಘಾತಕ್ಕೊಳಗಾದ ವ್ಯಕ್ತಿಯ ಪ್ರಾಣವನ್ನು ಉಳಿಸಲು ಸಾಧ್ಯವಿದೆ.
•    ವ್ಯಕ್ತಿ ತೊದಲು ಮಾತು ಅಥವಾ ಅರ್ಥರಹಿತವಾಗಿ ಬಡಬಡಿಸುವುದು ಕಂಡುಬಂದಲ್ಲಿ ಕೂಡಲೆ ಅಂತಹ ವ್ಯಕ್ತಿಯನ್ನು ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಬೇಕು.  ವ್ಯಕ್ತಿಯನ್ನು ಕೆಳಗೆ ಮಲಗಿಸಿ, ಕಾಲುಗಳನ್ನು ಮೇಲಕ್ಕೆತ್ತಬೇಕು.  ವ್ಯಕ್ತಿಯ ಹಣೆ, ಕತ್ತು, ಪಾದ, ತೊಡೆಯ ಸಂದುಗಳನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು (ತಂಪಾದ ಅಥವಾ ಐಸ್ ನೀರಿನಿಂದ ಬೇಡ).  ನಿಧಾನವಾಗಿ ಸ್ಪಲ್ಪ ಸಕ್ಕರೆ, ಉಪ್ಪು ಬೆರೆತ ನೀರನ್ನು ಕುಡಿಸಬೇಕು.  ಹತ್ತಿರದ ವೈದ್ಯರನ್ನು ಕರೆಸಿ ಅಥವಾ 108 ಕ್ಕೆ ಕರೆ ಮಾಡಿ. 
ಬೇಸಿಗೆ ತೊಂದರೆಯ ಲಕ್ಷಣಗಳು : ಚರ್ಮ ಕೆಂಪಾಗುವುದು, ಬೆವರಿನ ಪ್ರಮಾಣ ಕಡಿಮೆಯಾಗುವುದು, ದೇಹದ ಉಷ್ಣತೆ ಜಾಸ್ತಿಯಾಗುವುದು, ದೀರ್ಘವಾದ ತೀವ್ರ ಉಸಿರಾಟ.  ಇಂತಹ ಲಕ್ಷಣಗಳು ಕಂಡುಬಂದಲ್ಲಿ, ಪ್ರಥಮ ಚಿಕಿತ್ಸೆಯಾಗಿ, ಆಘಾತಕ್ಕೊಳಗಾದ ವ್ಯಕ್ತಿಯ ಬಟ್ಟೆ, ಪಾದರಕ್ಷೆಗಳನ್ನು ಸಡಿಲಿಸಿ, ತೆಗೆಯಬೇಕು.  ತಂಪಾದ ನೆರಳಿನ ಜಾಗಕ್ಕೆ ಸ್ಥಳಾಂತರಿಸಿ, ಗಾಳಿ ಹಾಕಬೇಕು.  ತಣ್ಣಗಿನ ನೀರನ್ನು ವ್ಯಕ್ತಿಯ ಮೇಲೆ ಸಿಂಪಡಿಸಬೇಕು.  ಯಾವುದೇ ಔಷಧ ತಕ್ಷಣ ನೀಡಬಾರದು.  ದೇಹವನ್ನು ಅತಿಯಾಗಿ ತಕ್ಷಣ ತಂಪು ಮಾಡುವುದೂ ಬೇಡ.  ಪ್ರಜ್ಞೆ ಬಂದ ನಂತರ ನಿಧಾನವಾಗಿ ಶುದ್ಧ ನೀರನ್ನು ಸ್ವಲ್ಪ ಸ್ವಲ್ಪವಾಗಿ ಕುಡಿಸುವುದು ಉತ್ತಮ.
ಬೇಸಿಗೆಯಲ್ಲಿ ಇದು ಬೇಡ :
•    ಬಿಗಿಯಾದ ಗಾಢ ಬಣ್ಣದ ಬಟ್ಟೆ ಧರಿಸಬಾರದು.
•    ಕುಷನ್ ಯುಕ್ತ ಕುರ್ಚಿಯಲ್ಲಿ ಕೂಡಬಾರದು
•    ಬಾಯಾರಿದಾಗಲೆಲ್ಲ ಕಡ್ಡಾಯವಾಗಿ ನೀರನ್ನು ಕುಡಿಯಬೇಕೆ ಹೊರತು ಕಾರ್ಬೋನೇಟೆಡ್ ತಂಪು ಪಾನೀಯ ಕುಡಿಯುವುದು ಸೂಕ್ತವಲ್ಲ
•    ಬೆವರನ್ನು ಒರೆಸಲು ಒರಟಾದ ಬಟ್ಟೆಯ ಉಪಯೋಗ ಬೇಡ
•    ಕಾಫಿ/ಟೀ, ಅತಿ ಸಕ್ಕರೆ ಅಂಶವುಳ್ಳ ಪಾನೀಯವನ್ನು ಅತಿಯಾಗಿ ಸೇವಿಸುವುದು ಬೇಡ
•    ಬಿಸಿಯಾದ, ಹೆಚ್ಚು ಮಸಾಲೆಯುಕ್ತ ಆಹಾರ ತಿನ್ನುವುದು ಬೇಡ
•    ಮಾಂಸಾಹಾರ ಸೇವನೆ ಆದಷ್ಟು ಕಡಿಮೆ ಮಾಡಿ ಮತ್ತು  ಮದ್ಯಪಾನ ನಿಷೇಧಿಸಿ
•    ಬಿಗಿಯಾದ ಗಾಳಿಯಾಡದ ಪಾದರಕ್ಷೆ ಅಥವಾ ಶೂ ಧರಿಸುವುದು ಬೇಡ

     ಇದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಸಲಹೆಗಳಾಗಿದ್ದು, ಯಾವುದೇ ತೊಂದರೆ ಕಂಡುಬಂದಲ್ಲಿ, ಹತ್ತಿರದ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆಯುವುದು ಸೂಕ್ತ.

Monday, 10 April 2017

ತೋಟಗಾರಿಕೆ ತರಬೇತಿ : ರೈತ ಮಕ್ಕಳಿಂದ ಅರ್ಜಿ ಆಹ್ವಾನ


ಕೊಪ್ಪಳ, ಏ.10 (ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆಯು ಜಿಲ್ಲೆಯ ಆಸಕ್ತ ರೈತರ ಮಕ್ಕಳಿಗೆ ಕೊಪ್ಪಳ ತಾಲೂಕು ಮುನಿರಾಬಾದಿನಲ್ಲಿ ಮೇ. 02 ರಿಂದ ಹತ್ತು ತಿಂಗಳ ಅವಧಿಯ ತೋಟಗಾರಿಕೆ ತರಬೇತಿ ಆಯೋಜಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
             ತೋಟಗಾರಿಕೆ ಇಲಾಖೆಯು 2017-18 ನೇ ಸಾಲಿಗೆ ಕೊಪ್ಪಳ ತಾಲೂಕಿನ  ಮುನಿರಾಬಾದಿನ  ತೋಟಗಾರಿಕೆ ತರಬೇತಿ  ಕೇಂದ್ರದಲ್ಲಿ  2017 ರ ಮೇ. 02 ರಿಂದ 2018 ರ ಫೆಬ್ರವರಿ 28 ರವರೆಗೆ 10  ತಿಂಗಳ ತೋಟಗಾರಿಕೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.   ಸಾಮಾನ್ಯ ಅಭ್ಯರ್ಥಿ-16 , ಪರಿಶಿಷ್ಠ ಜಾತಿ-03 ಪರಿಶಿಷ್ಠ ಪಂಗಡ-01  ಗಳಂತೆ ಒಟ್ಟು  20 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿ ನಿಗದಿ ಪಡಿಸಲಾಗಿದೆ.   ಅರ್ಜಿ ಸಲ್ಲಿಸಲು ವಯೋಮಿತಿ, ಪರಿಶಿಷ್ಠ ಜಾತಿ ಮತ್ತು  ಪರಿಶಿಷ್ಠ ಪಂಗಡದವರಿಗೆ  18 ರಿಂದ 33 ವರ್ಷ, ಇತರರಿಗೆ 18 ರಿಂದ 30 ವರ್ಷ.  ಕನ್ನಡ ವಿಷಯಗಳೊಂದಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ  ತೇರ್ಗಡೆಯಾಗಿರಬೇಕು. ಅಭ್ಯರ್ಥಿಯು ಚೆನ್ನಾಗಿ  ಕನ್ನಡ ಓದುವುದು, ಬರೆಯುವುದು  ಮತ್ತು ಮಾತನಾಡುವುದನ್ನು ಬಲ್ಲವರಾಗಿರಬೇಕು. ಈ ತರಬೇತಿಯು  ರೈತರ ಮಕ್ಕಳಿಗಾಗಿ ಇರುವುದರಿಂದ ಅಭ್ಯರ್ಥಿಯು ತಂದೆ/ತಾಯಿ  ಅಥವಾ  ಪೋಷಕರು (ತಂದೆ/ತಾಯಿ ಇಲ್ಲದ ಪಕ್ಷದಲ್ಲಿ)  ಕಡ್ಡಾಯವಾಗಿ  ಜಮೀನು ಹೊಂದಿರಬೇಕು  ಹಾಗೂ  ಸ್ವಂತ ಸಾಗುವಳಿ ಮಾಡುತ್ತಿರಬೇಕು,  ಈ ಬಗ್ಗೆ ದಾಖಲೆಗಾಗಿ  ಪಹಣಿ  ನೀಡುವುದು  ಕಡ್ಡಾಯ. ಅಭ್ಯರ್ಥಿಗಳು  ತೋಟದ ಕೆಲಸಗಳನ್ನು  ಮಾಡುವಷ್ಟು  ದೃಢಕಾಯರಾಗಿರಬೇಕು.   ಅರ್ಜಿಶುಲ್ಕ : ಸಾಮಾನ್ಯ ಆಭ್ಯರ್ಥಿಗಳಿಗೆ ರೂ. 30,  ಪರಿಶಿಷ್ಠ ಜಾತಿ ಮತ್ತು  ಪರಿಶಿಷ್ಠ ಪಂಗಡದವರಿಗೆ ರೂ.15 ನಿಗದಿಪಡಿಸಿದ್ದು, ಅರ್ಜಿ ಶುಲ್ಕವನ್ನು ಫೋಸ್ಟಲ್ ಆರ್ಡರ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಅನ್ನು ತೋಟಗಾರಿಕೆ ಉಪನಿರ್ದೇಶಕರು(ಜಿ.ಪಂ)ಕೊಪ್ಪಳ ರವರ ಹೆಸರಿನಲ್ಲಿ ಪಡೆದು ಅರ್ಜಿ ಜೊತೆಗೆ ಲಗತ್ತಿಸಬೇಕು.  ನಿಗದಿತ ಅರ್ಜಿಯನ್ನು ಏ. 12 ರಿಂದ 24 ರವರೆಗೆ  ತೋಟಗಾರಿಕೆ     ಉಪನಿರ್ದೇಶಕರು(ಜಿ.ಪಂ) ಕೊಪ್ಪಳ ಅಥವಾ ಸಹಾಯಕ ತೋಟಗಾರಿಕೆ ನಿರ್ದೇಕರು ಕೊಪ್ಪಳ ಇವರ ಕಛೇರಿಯಲ್ಲಿ ಪಡೆಯಬಹುದು.   ಅರ್ಜಿ ನಮೂನೆಯನ್ನು ಇಲಾಖೆಯ ವೆಬ್ ಸೈಟ್  www.horticulture.kar.nic.in ಮುಖಾಂತರವೂ ಡೌನ್‍ಲೋಡ್ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಯನ್ನು  ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ)ಕೊಪ್ಪಳ   ಅಥವಾ ಸಹಾಯಕ ತೋಟಗಾರಿಕೆ ನಿರ್ದೇಕರು ಕೊಪ್ಪಳ ಇವರಿಗೆ ಏ. 24 ರ ಒಳಗಾಗಿ ಸಲ್ಲಿಸಬೇಕು.
          ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಏ. 26 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳದ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ಸಂದರ್ಶನವನ್ನು ಏರ್ಪಡಿಸಲಾಗಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸಂದರ್ಶನಕ್ಕೆ  ಎಲ್ಲಾ  ಮೂಲ ದಾಖಾಲಾತಿಗಳೊಂದಿಗೆ ಹಾಜರಾಗಬೇಕು.  ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ  ಸಂದರ್ಶನ ಪತ್ರವನ್ನು ಕಳುಹಿಸಲಾಗುವುದಿಲ್ಲ ಎಂದು ಕೊಪ್ಪಳ ತೋಟಗಾರಿಕೆ ಉಪನಿರ್ದೇಶಕರು   ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮಾಜಿ ಸೈನಿಕರಿಗೆ ತರಬೇತಿ : ಆಹ್ವಾನ

ಕೊಪ್ಪಳ, ಏ.10 (ಕರ್ನಾಟಕ ವಾರ್ತೆ):  ಬಾಗಲಕೋಟ ಹಾಗೂ ಕೊಪ್ಪಳ ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆ ಉಪನಿರ್ದೇಶಕರು, ಇವರ ವತಿಯಿಂದ ಅರ್ಹ ಮಾಜಿ ಸೈನಿಕರಿಗೆ ಪ್ರಸಕ್ತ ಸಾಲಿನ ಉಚಿತ ಪುನರ್ವಸತಿ (ಜ್ವಾಬ್ ಓರಿಯಂಟಲ್ ಕೋರ್ಸಸ್) ತರಬೇತಿಯನ್ನು ಉಚಿತವಾಗಿ ಜಿಲ್ಲೆಯಲ್ಲಿರುವ ಅತ್ಯುತ್ತಮ ತರಬೇತಿ ಕೇಂದ್ರಗಳಲ್ಲಿ ನೀಡಲಾಗುತ್ತಿದೆ.
       ದಿ. 01-01-2013ರ ನಂತರ ಸೈನ್ಯದಿಂದ ಪಿಂಚಣಿಯೊಂದಿಗೆ ನಿವೃತ್ತರಾದ ಆಸಕ್ತ ನಿರುದ್ಯೋಗಿ ಮಾಜಿ ಸೈನಿಕರು ಈ ತರಬೇತಿಯ ಸದುಪಯೋಗವನ್ನು ಪಡೆಯಬಹುದಾಗಿದೆ.  ತರಬೇತಿ ಪಡೆಯಲಿಚ್ಚಿಸುವರು, ಜಿಲ್ಲೆಯ ಅತ್ಯುತ್ತಮ ತರಬೇತಿ ಕೇಂದ್ರಗಳಲ್ಲಿ ತಮ್ಮ ಗಣತಿ ಗುರುತಿನ ಚೀಟಿ ಹಾಗೂ ಸೇವಾ ಬಿಡುಗಡೆ ಪ್ರಮಾಣ ಪತ್ರದೊಂದಿಗೆ ಖದ್ದಾಗಿ ಭೇಟಿ ನೀಡಿ ತಮ್ಮ ಹೆಸರುಗಳನ್ನು ನೋದಾಯಿಸಿಕೊಳ್ಳಲು ಬಾಗಲಕೋಟ ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆ ಉಪನಿರ್ದೇಶಕರು ತಿಳಿಸಿದೆ.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08354- 235434 ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಜಿನುಗು ಕೆರೆಗಾಗಿ ಭೂಸ್ವಾಧೀನ : ಏ. 15 ರಂದು ಸಾರ್ವಜನಿಕ ಅಹವಾಲು ಕಾರ್ಯಕ್ರಮ

ಕೊಪ್ಪಳ ಏ. 10 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಹುಚ್ಚೇಶ್ವರ ಕ್ಯಾಂಪ್ ಹತ್ತಿರ ಜಿನುಗು ಕೆರೆ ನಿರ್ಮಿಸುವ ಸಲುವಾಗಿ ಯತ್ನಟ್ಟಿ ಗ್ರಾಮದ ಜಮೀನುಗಳನ್ನು ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದು, ಈ ಕುರಿತಂತೆ ಏ. 15 ರಂದು ಬೆ. 11 ಗಂಟೆಗೆ ಯತ್ನಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಅಹವಾಲು ಕಾರ್ಯಕ್ರಮ ಏರ್ಪಡಿಸಲಾಗಿದೆ.
      ಹುಚ್ಚೇಶ್ವರ ಕ್ಯಾಂಪ್ ಹತ್ತಿರ ಜಿನುಗು ಕೆರೆ ನಿರ್ಮಿಸುವ ಸಲುವಾಗಿ ಯತ್ನಟ್ಟಿ ಗ್ರಾಮದ ಜಮೀನುಗಳನ್ನು ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದು, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಕಾಯ್ದೆಯನ್ವಯ ಪುನರ್ ವಸತಿ ಮತ್ತು ಪುನರ್ ನಿರ್ಮಾಣದ ಕರಡು ಯಾದಿಯನ್ನು ತಯಾರಿಸಲು ಉದ್ದೇಶಿಸಲಾಗಿದೆ. ಈ ಕುರಿತಂತೆ ಏ. 15 ರಂದು ಬೆ. 11 ಗಂಟೆಗೆ ಯತ್ನಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಅಹವಾಲು ಕಾರ್ಯಕ್ರಮ ಏರ್ಪಡಿಸಲಾಗಿದೆ. ಪ್ರಸ್ತಾಪಿತ ಜಮೀನುಗಳ ಭೂಮಾಲೀಕರ ಬಾಧಿತಗೊಳ್ಳುವ ಕುಟುಂಬದ ಎಲ್ಲ ವಯಸ್ಕ ಸದಸ್ಯರು  ಸಾರ್ವಜನಿಕ ಅಹವಾಲು ಕಾರ್ಯಕ್ರಮಕ್ಕೆ ಹಾಜರಾಗಿ ತಮ್ಮ ಕ್ಲೇಮುಗಳು ಹಾಗೂ ಆಕ್ಷೇಪಣೆ ಇದ್ದಲ್ಲಿ ಲಿಖಿತವಾಗಿ ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ. ತೃತೀಯ ಭಾಷಾ ಪರೀಕ್ಷೆ : 546 ವಿದ್ಯಾರ್ಥಿಗಳು ಗೈರು


ಕೊಪ್ಪಳ ಏ. 10 (ಕ.ವಾ): ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಸೋಮವಾರ ನಡೆದ ತೃತೀಯ ಭಾಷೆ (ಹಿಂದಿ/ಕನ್ನಡ/ಇಂಗ್ಲೀಷ್/ಸಂಸ್ಕøತ) ವಿಷಯದ ಪರೀಕ್ಷೆಗೆ ಜಿಲ್ಲೆಯ 17366 ವಿದ್ಯಾರ್ಥಿಗಳು ಹಾಜರಾಗಿದ್ದು, 551 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
     ಎಸ್.ಎಸ್.ಎಲ್.ಸಿ. ಪರೀಕ್ಷೆಯ ತೃತೀಯ ಭಾಷೆ (ಹಿಂದಿ/ಕನ್ನಡ/ಇಂಗ್ಲೀಷ್/ಸಂಸ್ಕøತ) ವಿಷಯಕ್ಕೆ ಬಾಲಕರು- 9287, ಬಾಲಕಿಯರು- 8630 ಸೇರಿದಂತೆ ಒಟ್ಟು 17917 ವಿದ್ಯಾರ್ಥಿಗಳು ದಾಖಲಾಗಿದ್ದರು.  ಇದರಲ್ಲಿ ಬಾಲಕರು- 8943, ಬಾಲಕಿಯರು-8423 ಸೇರಿದಂತೆ ಒಟ್ಟು 17366 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,   344-ಬಾಲಕರು, 207- ಬಾಲಕಿಯರು, ಒಟ್ಟು 551 ಗೈರು ಹಾಜರಾಗಿದ್ದಾರೆ.   ಕೊಪ್ಪಳ ತಾಲೂಕಿನಲ್ಲಿ 121, ಗಂಗಾವತಿ- 227, ಕುಷ್ಟಗಿ-102 ಮತ್ತು ಯಲಬುರ್ಗಾ ತಾಲೂಕಿನಲ್ಲಿ 101 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮ- ಡಾ. ಶಿವಣ್ಣ

ಕೊಪ್ಪಳ ಏ. 10 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ರಕ್ಷಣೆಗಾಗಿ ಈಗಾಗಲೆ 07 ಗೋಶಾಲೆಗಳು ಹಾಗೂ 06 ಮೇವು ನಿಧಿಯನ್ನು ಸ್ಥಾಪಿಸಲಾಗಿದ್ದು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ ಅವರು ತಿಳಿಸಿದ್ದಾರೆ.

     ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಯ ಕೊರತೆಯಿಂದಾಗಿ ಬರ ಪರಿಸ್ಥಿತಿ ತಲೆದೋರಿದ್ದು, ಜಾನುವಾರುಗಳಿಗೆ ಬೇಸಿಗೆಯ ಕಾಲದಲ್ಲಿ ಮೇವಿನ ತೊಂದರೆಯಾಗದಂತೆ ಮೇವು ಪೂರೈಕೆಗೆ ಇಡೀ ರಾಜ್ಯದಲ್ಲಿಯೇ ಕೊಪ್ಪಳ ಜಿಲ್ಲೆಯು ಟೆಂಡರ್ ಪ್ರಕ್ರಿಯೆ ಕೈಗೊಂಡ ಮೊದಲ ಜಿಲ್ಲೆಯಾಗಿದೆ.  ಟೆಂಡರ್‍ದಾರರು ಗೋಶಾಲೆಗೆ ಅಥವಾ ಮೇವು ನಿಧಿಗೆ ನೇರವಾಗಿ ಮೇವು ಪೂರೈಕೆ ಮಾಡುವ ರೀತಿಯಲ್ಲಿ ಪಾರದರ್ಶಕವಾಗಿ ಟೆಂಡರ್ ಮೂಲಕ ಮೇವು ಖರೀದಿ  ಮಾಡಿಕೊಂಡ ಪರಿಣಾಮವಾಗಿ, ಜಿಲ್ಲೆಯ ಗೋಶಾಲೆ ಅಥವಾ ಮೇವು ನಿಧಿಗೆ ಯಾವುದೇ ಅಡೆ-ತಡೆ ಇಲ್ಲದಂತೆ ವ್ಯವಸ್ಥಿತ ರೀತಿಯಲ್ಲಿ ಮೇವು ಪೂರೈಕೆಯಾಗುತ್ತಿದೆ.  ಈ ಒಪ್ಪಂದವು ಮೇವು ಖರೀದಿ ಹಾಗೂ ಸಾಗಾಣಿಕೆ ವೆಚ್ಚವನ್ನೂ ಒಳಗೊಂಡಿರುವುದರಿಂದ, ಇತರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ,   ಕಡಿಮೆ ವೆಚ್ಚದಲ್ಲಿ ಹೆಚ್ಚು ಮೇವು ಖರೀದಿ ಸಾಧ್ಯವಾಗುತ್ತಿದೆ.  ಪ್ರತಿ ಟನ್‍ಗೆ ರೂ. 5500 ರಿಂದ 6500 ರವರೆಗೆ ಪಾವತಿ ಮಾಡಲಾಗುತ್ತಿದ್ದು, ಸರ್ಕಾರದ ಹಣ ಪೋಲಾಗದಂತೆ ಹಾಗೂ ದುರುಪಯೋಗ ಆಗದಂತೆ ಎಚ್ಚರಿಕೆ ಕ್ರಮ ವಹಿಸಲಾಗಿದೆ.  ಕೊಪ್ಪಳ ಜಿಲ್ಲೆಯಲ್ಲಿನ ಮೇವು ಪೂರೈಕೆ ಮಾದರಿಯನ್ನು ರಾಜ್ಯದ ಹಲವು ಜಿಲ್ಲೆಗಳು ಅನುಸರಿಸುತ್ತಿವೆ.  

07 ಗೋಶಾಲೆಗಳು :
*********** ಕೊಪ್ಪಳ ಜಿಲ್ಲೆಯ ಅಳವಂಡಿ, ಕನಕಗಿರಿ, ವೆಂಕಟಗಿರಿ, ಕಲಕೇರಿ, ಹನುಮನಾಳ, ತಲ್ಲೂರ ಮತ್ತು ಚಿಕ್ಕವಂಕಲಕುಂಟಾ ಸೇರಿದಂತೆ 07 ಕಡೆ ಗೋಶಾಲೆಯನ್ನು ತೆರೆದು, ಜಾನುವಾರುಗಳನ್ನು ರಕ್ಷಿಸುವ ಕಾರ್ಯ ಮಾಡಲಾಗಿದ್ದು, ಗೋಶಾಲೆಗಳಲ್ಲಿ ಸಮರ್ಪಕವಾಗಿ ಮೇವು ಪೂರೈಕೆಯ ಜೊತೆಗೆ, ರೈತರು ಹಾಗೂ ಜಾನುವಾರುಗಳಿಗೂ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಲಾಗಿದೆ.  ಜೊತೆಗೆ ಜಾನುವಾರುಗಳಿಗೆ ಯಾವುದೇ ರೋಗ ಹರಡದಂತೆ, ನಿಯಮಿತ ತಪಾಸಣೆಯಂತಹ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಗೋಶಾಲೆಗೆ ಪ್ರತಿನಿತ್ಯ ಬರುವ ಜಾನುವಾರುಗಳ ಸಂಖ್ಯೆಯ ವಿವರವನ್ನು ದಾಖಲಾತಿಗಳ ಸಹಿತ ಆಯಾ ದಿನದಂದೇ ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿಗೆ ವರದಿ ಸಲ್ಲಿಸಲಾಗುತ್ತಿದೆ.  ಅಳವಂಡಿಯ ಗೋಶಾಲೆಯಲ್ಲಿ ನಿತ್ಯ ಸರಾಸರಿ 300 ರಿಂದ 360 ಜಾನುವಾರುಗಳಿಗೆ ಮೇವು ಒದಗಿಸಲಾಗುತ್ತಿದ್ದು, ಜ. 25 ರಿಂದ ಈವರೆಗೆ 170.27 ಮೆ.ಟನ್ ಮೇವು ಖರೀದಿಸಿದ್ದು, 136 ಟನ್ ಮೇವು ಬಳಕೆಯಾಗಿದೆ.  ಕನಕಗಿರಿ ಗೋಶಾಲೆಗೆ ನಿತ್ಯ ಸರಾಸರಿ 300 ರಿಂದ 350 ಜಾನುವಾರು ಬರುತ್ತಿವೆ.  ಇಲ್ಲಿ ಈವರೆಗೆ 155.87 ಮೆ.ಟನ್ ಮೇವು ಖರೀದಿಸಿದ್ದು, 153 ಟನ್ ಮೇವು ಬಳಕೆಯಾಗಿದೆ.  ವೆಂಕಟಗಿರಿ ಗೋಶಾಲೆಯಲ್ಲಿ ನಿತ್ಯ ಬರುವ ಜಾನುವಾರುಗಳ ಸರಾಸರಿ ಸಂಖ್ಯೆ 120 ರಿಂದ 130 ಇದೆ.  60 ಮೆ.ಟನ್ ಮೇವು ಖರೀದಿಸಿದ್ದು, 59 ಮೆ.ಟನ್ ಬಳಕೆಯಾಗಿದೆ.  ಕಲಕೇರಿ ಗೋಶಾಲೆಗೆ ಬರುವ ಜಾನುವಾರುಗಳ ಸಂಖ್ಯೆ ಸರಾಸರಿ 120 ರಿಂದ 150 ಇದೆ.  92.49 ಮೆ.ಟನ್ ಮೇವು ಖರೀಸಿದ್ದು, 88.73 ಟನ್ ಬಳಕೆಯಾಗಿದೆ.  ಕಳೆದ ಮಾ. 27 ರಿಂದ ಹನುಮನಾಳ ಗೋಶಾಲೆ ಪ್ರಾರಂಭಿಸಿದ್ದು, ನಿತ್ಯ ಬರುವ ಜಾನುವಾರುಗಳ ಸಂಖ್ಯೆ ಸುಮಾರು 400 ರಿಂದ 500 ಇದೆ.  ಈವರೆಗೆ 38. 89 ಮೆ.ಟನ್ ಮೇವು ಖರೀದಿಸಿದ್ದು, 32. 50 ಮೆ.ಟನ್ ಬಳಕೆಯಾಗಿದೆ.  ತಲ್ಲೂರು ಗೋಶಾಲೆಗೆ ನಿತ್ಯ ಬರುವ ಜಾನುವಾರುಗಳ ಸಂಖ್ಯೆ ಸುಮಾರು 450 ರಿಂದ 500 ಇದ್ದು, ಈವರೆಗೆ 245. 92 ಮೆ.ಟನ್ ಖರೀದಿಸಿದ್ದು, 244 ಮೆ.ಟನ್ ಉಪಯೋಗಿಸಲಾಗಿದೆ.  ಚಿಕ್ಕವಂಕಲಕುಂಟಾದ ಗೋಶಾಲೆಗೆ ನಿತ್ಯ ಸುಮಾರು 120 ರಿಂದ 130 ಜಾನುವಾರುಗಳು ಬರುತ್ತಿದ್ದು, ಇಲ್ಲಿ 26. 93 ಮೆ.ಟನ್ ಮೇವು ಖರೀದಿಸಿದ್ದು, 22. 52 ಮೆ.ಟನ್ ಮೇವು ಬಳಕೆಯಾಗಿದೆ.

06 ಮೇವು ನಿಧಿ ಸ್ಥಾಪನೆ :
************ ಕೊಪ್ಪಳ ಜಿಲ್ಲೆಯ ಬಂಡಿಹರ್ಲಾಪುರ, ಹಿರೇಸಿಂದೋಗಿ, ಗಂಗಾವತಿ, ಕಲಕೇರಿ, ಹನುಮಸಾಗರ ಮತ್ತು ಕುಕನೂರು ಸೇರಿದಂತೆ 06 ಕಡೆ ಮೇವು ನಿಧಿಯನ್ನು ಸ್ಥಾಪಿಸಲಾಗಿದೆ.  06 ಮೇವು ನಿಧಿಗಳಲ್ಲಿ ಈವರೆಗೆ 64. 50 ಮೆ.ಟನ್ ಮೇವು ಸಂಗ್ರಹಿಸಿದ್ದು, 7. 832 ಮೆ.ಟನ್ ಮೇವನ್ನು ರಿಯಾಯಿತಿ ದರದಲ್ಲಿ ರೈತರಿಗೆ ಮಾರಾಟ ಮಾಡಿದ್ದು, 56. 668 ಮೆ.ಟನ್ ಮೇವು ದಾಸ್ತಾನು ಉಳಿದಿದೆ.  ಮೇವು ನಿಧಿಯಲ್ಲಿ ರೈತರಿಂದ ಮತ್ತು ಮೇವು ಸರಬರಾಜುದಾರರಿಂದ ಸರ್ಕಾರಿ ದರದಲ್ಲಿ ಮೇವು ಖರೀದಿಸಿ ಸಂಗ್ರಹಿಸಲಾಗುತ್ತಿದ್ದು, ಸಂಗ್ರಹಿತ ಮೇವನ್ನು ಮೇವು ಅವಶ್ಯವಿರುವ ರೈತರಿಗೆ ಪ್ರತಿ ಕೆ.ಜಿ.ಗೆ ಕೇವಲ ರೂ. 02 ರಂತೆ ಮೇವು ನೀಡಲಾಗುತ್ತಿದೆ.  ಬಂಡಿಹರ್ಲಾಪುರದ ಮೇವು ನಿಧಿಯಲ್ಲಿ ಈವರೆಗೆ 10. 50 ಮೆ.ಟನ್ ಸಂಗ್ರಹಿಸಿದ್ದು, ಇದು ನೀರಾವರಿ ಪ್ರದೇಶವಾಗಿರುವುದರಿಂದ, ಯಾವುದೇ ರೈತರು ಮೇವು ಖರೀದಿಸಲು ಮುಂದಾಗಿಲ್ಲ.  ಹೀಗಾಗಿ ಸಂಗ್ರಹಿತ ಮೇವನ್ನು ದಾಸ್ತಾನಿರಿಸಿದೆ.  ಹಿರೇಸಿಂದೋಗಿ ಮೇವು ನಿಧಿಯಲ್ಲಿ 20 ಮೆ.ಟನ್ ಮೇವು ಸಂಗ್ರಹಿಸಿದ್ದು, ಈವರೆಗೆ 27 ರೈತರಿಗೆ 1500 ಕೆ.ಜಿ ಮೇವು ಮಾರಾಟ ಮಾಡಲಾಗಿದೆ.  ಗಂಗಾವತಿ ಮೇವು ನಿಧಿಯಲ್ಲಿ 3 ಮೆ.ಟನ್ ಸಂಗ್ರಹಿಸಿದ್ದು, ಇಲ್ಲಿ ಪೂರ್ಣ 3 ಮೆ.ಟನ್ ಮೇವನ್ನು ರೈತರಿಗೆ ಮಾರಾಟ ಮಾಡಲಾಗಿದೆ.  ಕಲಕೇರಿಯಲ್ಲಿನ ಮೇವು ನಿಧಿಯಲ್ಲಿ 3 ಟನ್ ಮೇವು ಸಂಗ್ರಹಿಸಿದ್ದು, ಯಾರೂ ಖರೀದಿ ಮಾಡಿಲ್ಲ.  ಹನುಮಸಾಗರದ ಮೇವು ನಿಧಿಯಲ್ಲಿ 20 ಟನ್ ಮೇವು ಸಂಗ್ರಹಿಸಿದ್ದು, 0.332 ಟನ್ ಮಾತ್ರ ರಿಯಾಯಿತಿ ದರದಲ್ಲಿ ರೈತರು ಖರೀದಿಸಿದ್ದಾರೆ.  ಕುಕನೂರಿನಲ್ಲಿನ ಮೇವು ನಿಧಿಯಲ್ಲಿ 08 ಮೆ.ಟನ್ ಮೇವು ಸಂಗ್ರಹಿಸಿದ್ದು, ಈವರೆಗೆ 03 ಮೆ.ಟನ್ ಮೇವನ್ನು ರಿಯಾಯಿತಿ ದರದಲ್ಲಿ ರೈತರಿಗೆ ಮಾರಾಟ ಮಾಡಲಾಗಿದೆ.

ಮೇವು ಗುಣಮಟ್ಟ ಪರಿಶೀಲನೆ :
************ ಕೊಪ್ಪಳ ಜಿಲ್ಲೆಯಲ್ಲಿ ಕಳೆದ 77 ದಿನಗಳಿಂದ ಗೋಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು, ಟೆಂಡರ್‍ದಾರರಿಂದ ಸರಬರಾಜಾದ ಮೇವನ್ನು ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕರು ಮತ್ತು ಗೋಶಾಲೆಗೆ ನಿಯೋಜಿಸಲಾದ ಪಶುವೈದ್ಯಾಧಿಕಾರಿಗಳು ಪರೀಕ್ಷಿಸಿ, ಮೇವಿನ ಗುಣಮಟ್ಟದ ಬಗ್ಗೆ ದೃಢೀಕರಣ ನೀಡಿದ ನಂತರವೇ ಖರೀದಿಸಿ, ದಾಸ್ತಾನಿಗೆ ತೆಗೆದುಕೊಂಡು, ಜಾನುವಾರುಗಳಿಗೆ ವಿತರಣೆ ಮಾಡಲಾಗುತ್ತಿದೆ. 
     ಜಿಲ್ಲೆಯ ಗೋಶಾಲೆಗಳನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದ್ದು, ಜಾನುವಾರುಗಳಿಗೆ ನೀರು, ನೆರಳಿನ ವ್ಯವಸ್ಥೆ ಸಮರ್ಪಕವಾಗಿ ಕೈಗೊಳ್ಳಲಾಗಿದೆ. ಯಾವುದೇ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈವರೆಗೆ ಮೇವಿನ ಸೇವನೆಯಿಂದ ಯಾವುದೇ ಜಾನುವಾರುಗಳು ಪೌಷ್ಠಿಕಾಂಗಳ ಕೊರತೆಯಿಂದ ಬಳಲಿದ್ದು, ಕಂಡುಬಂದಿಲ್ಲ ಅಲ್ಲದೆ ಯಾವುದೇ ರೋಗದಿಂದ ಗೋಶಾಲೆಯಲ್ಲಿ ಸೇರ್ಪಡೆಯಾದ ಜಾನುವಾರುಗಳು ಮರಣ ಹೊಂದಿರುವ ಪ್ರಕರಣ ಕಂಡುಬಂದಿಲ್ಲ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sunday, 9 April 2017

ಅಹಿಂಸಾ ತತ್ವ ಪಾಲನೆ ಮಹಾವೀರರ ಸರ್ವಕಾಲಿಕ ಸತ್ಯ ಸಂದೇಶ : ರಾಘವೇಂದ್ರ ಹಿಟ್ನಾಳ

ಕೊಪ್ಪಳ, ಏ.09 (ಕರ್ನಾಟಕ ವಾರ್ತೆ): ಅಹಿಂಸೆಯೇ ಪರಮ ಧರ್ಮ ಎಂಬ ಭಗವಾನ್ ಮಹಾವೀರರ ಅಹಿಂಸಾ ತತ್ವ ಪಾಲನೆಯು ಸರ್ವಕಾಲಕ್ಕೂ ಪ್ರಸ್ತುತವೆನಿಸುವ ಸಂದೇಶವಾಗಿದೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.

     ನಗರದ ಮಹಾವೀರ ಜೈನ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಭಾನುವಾರದಂದು ಆಯೋಜಿಸಲಾಗಿದ್ದ ಭಗವಾನ್ ಮಹಾವೀರರ 2616 ನೇ ಜಯಂತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

     ಅಹಿಂಸೆಯೇ ಪರಮ ಧರ್ಮ ಎಂಬುದು ಭಗವಾನ್ ಮಹಾವೀರರ ಸರ್ವಕಾಲಿಕ ಸತ್ಯವಾದ   ಸಂದೇಶವಾಗಿದೆ.   ಅಹಿಂಸಾ ತತ್ವ ಹಾಗೂ ಮಾನವೀಯ ಮೌಲ್ಯಗಳನ್ನು ನಾವು ಜೈನ ಸಮುದಾಯದಲ್ಲಿ ಹೆಚ್ಚು ಕಾಣಲು ಸಾಧ್ಯ.  ಕರ್ನಾಟಕ ರಾಜ್ಯ, ಇಡೀ ದೇಶದಲ್ಲಿಯೇ ಭಗವಾನ್ ಮಹಾವೀರರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುತ್ತಿರುವ ಮೊದಲ ರಾಜ್ಯವಾಗಿದೆ.  ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಮಹಾವೀರರ ಅಹಿಂಸಾ ತತ್ವಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಿದ್ದಾರೆ.  ಕೊಪ್ಪಳ ನಗರದಲ್ಲಿ ನಿರ್ಮಿಸಲಾಗುತ್ತಿರುವ ಮಹಾವೀರ ಜೈನ ಬೃಹತ್ ಭವನಕ್ಕೆ ಈಗಾಗಲೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂ. ಅನುದಾನವನ್ನು ನೀಡಿದ್ದು, ಇನ್ನೂ 10 ಲಕ್ಷ ರೂ. ಗಳ ಅನುದಾನವನ್ನು ಒದಗಿಸಿ, ಉತ್ತಮ ಭವನ ನಿರ್ಮಿಸಲು ಸಹಕರಿಸಲಾಗುವುದು.  ಅಲ್ಲದೆ ಇಲ್ಲಿನ ಗೋಶಾಲಾ ರಸ್ತೆಗೆ ಭಗವಾನ್ ಮಹಾವೀರ ರಸ್ತೆ ಎಂಬುದಾಗಿ ಹಾಗೂ ಬಹದ್ದೂರಬಂಡಿ-ಚುಕ್ಕನಕಲ್ ಕೂಡು ರಸ್ತೆಯ ವೃತ್ತಕ್ಕೆ ಭಗವಾನ ಮಹಾವೀರ ವೃತ್ತ ಎಂದು ನಾಮಕರಣಗೊಳಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಭರವಸೆ ನೀಡಿದರು.

     ಕಾರ್ಯಕ್ರಮ ಕುರಿತು ಮಾತನಾಡಿದ ನಗರಸಭೆ ಸದಸ್ಯ ಅಮ್ಜದ್ ಪಟೇಲ್ ಅವರು, ಗೋಶಾಲಾ ರಸ್ತೆಗೆ ಭಗವಾನ ಮಹಾವೀರ ರಸ್ತೆ ಎಂಬುದಾಗಿ ಹಾಗೂ ಬಹದ್ದೂರಬಂಡಿ ಸರ್ಕಲ್‍ಗೆ ಭಗವಾನ್ ಮಹಾವೀರ ವೃತ್ತ ಎಂದು ನಾಮಕರಣಗೊಳಿಸಲು, ಶೀಘ್ರದಲ್ಲಿಯೇ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಠರಾವು ಮಂಡಿಸಿ, ಕ್ರಮ ಕೈಗೊಳ್ಳಲಾಗುವುದು.  ಅಲ್ಲದೆ ಈ ವಾರ್ಡ್ ಅನ್ನು ನಗರೋತ್ಥಾನ ಯೋಜನೆಯಡಿ 25 ಲಕ್ಷ ರೂ. ಅನುದಾನ ವೆಚ್ಚಗೊಳಿಸಿ, ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

     ಭಗವಾನ ಮಹಾವೀರರ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಎಸ್.ಎಂ. ಕಂಬಾಳಿಮಠ ಅವರು,  ಅಹಿಂಸಾ ತತ್ವವು ಮಾನವ ಸಮಾಜಕ್ಕೆ ನೀಡಿದ ಅನನ್ಯ ಸಂದೇಶವಾಗಿದೆ.  ಹಿಂದೂ, ಜೈನ್, ಬೌದ್ಧ, ಸಿಖ್ ಸೇರಿದಂತೆ ಎಲ್ಲ ಧರ್ಮಗಳು ಮಾನವನ ಒಳಿತನ್ನೇ ಬಯಸಿ, ವಿಚಾರಗಳನ್ನು ಹೊಂದಿವೆ.  ಈ ನಾಡಿನ ಬಹುತೇಕ ಶರಣರು, ಮಹನೀಯರು ಅಹಿಂಸಾ ತತ್ವವನ್ನೇ ಮನುಕುಲಕ್ಕೆ ಬೋಧಿಸಿದ್ದಾರೆ.  ಶರಣರ ವಚನಗಳೂ ಕೂಡ ‘ದಯವೇ ಧರ್ಮದ ಮೂಲವಯ್ಯ’, ‘ಕಳಬೇಡ-ಕೊಲಬೇಡ ಹುಸಿಯ ನುಡಿಯಲು ಬೇಡ’ ಮುಂತಾದ ಅಹಿಂಸೆಯ ಸಂದೇಶವನ್ನೇ ನೀಡಿವೆ.   ಧರ್ಮಗಳಲ್ಲಿನ ಮೌಢ್ಯತೆಗಳು, ಅಜ್ಞಾನ, ಮೂಢ ನಂಬಿಕೆಗಳಿಂದ ನಲುಗಿದ್ದ ಸಮಾಜಕ್ಕೆ ಮಹಾವೀರರು, ಅಹಿಂಸೆಯ ತತ್ವಗಳನ್ನು ಬೋಧಿಸಿ, ಸುಧಾರಣೆಗೆ ಶ್ರಮಿಸಿದರು.  ಮಹಾವೀರರು,  ರಾಜಮನೆತನದಲ್ಲಿ ಹುಟ್ಟಿದರೂ, ಮನುಷ್ಯ-ಮನುಷ್ಯನಂತೆ ಬದುಕಲು, ವ್ಯಸನ ಮುಕ್ತ ಜೀವನ ನಡೆಸಲು, ಸಕಲ ಸುಖ ವೈಭೋಗಗಳನ್ನು ತ್ಯಜಿಸಿ ಅವರು ಸನ್ಯಾಸಿಯಾದರು.  ತ್ಯಾಗಮೂರ್ತಿಗಳಾಗಿದ್ದ ಮಹಾವೀರರು, ಅಹಿಂಸಾ ತತ್ವಗಳ ಬಗ್ಗೆ ದಾಖಲೀಕರಣ ಮಾಡಿದ್ದರಿಂದ, ಅವರ ಸಂದೇಶಗಳನ್ನು ಇತರರು ಅರಿತುಕೊಳ್ಳಲು ಸಾಧ್ಯವಾಗಿದೆ.   ಕೊಪ್ಪಳ ಜಿಲ್ಲೆಯೂ ಕೂಡ ಬೌದ್ಧ ಧರ್ಮದ ವಿಕಾಸಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ.  ಜೈನ ಕಾಶಿ ಎಂದೇ ಖ್ಯಾತವಾಗಿರುವ ಈ ಜಿಲ್ಲೆಯಲ್ಲಿ ಭೌದ್ಧ ಧರ್ಮ ಸ್ವೀಕರಿಸಿದ್ದ ಅಶೋಕ ಚಕ್ರವರ್ತಿಯ ಶಿಲಾ ಶಾಸನಗಳು ಇಲ್ಲಿ ಕಂಡುಬಂದಿರುವುದು, ಇದಕ್ಕೆ ಸಾಕ್ಷಿಯಾಗಿದೆ.   ಜೈನಧರ್ಮದ ತತ್ವ, ಸಂದೇಶಗಳು ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪೂರಕವಾಗಿವೆ ಎಂದರು.
      ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ನಗರಸಭೆ ಸದಸ್ಯರುಗಳಾದ ಪ್ರಾಣೇಶ್ ಮಾದಿನೂರ, ಗವಿಸಿದ್ದಪ್ಪ ಚಿನ್ನೂರ, ರಾಮಣ್ಣ ಹದ್ದಿನ, ಮಹೇಶ್ ಭಜಂತ್ರಿ, ಗಣ್ಯರಾದ ರಾಮಲಾಲ್ ಜಿ ಬಾಗಡೇಕರ್, ಅಭಯಕುಮಾರ್ ಮೆಹ್ತಾ, ಸುರೇಂದ್ರ ಜೈನ್ ಪಾಟೀಲ್, ಮನೋಹರಚಂದ್ ಗಾಂಧಿಮೆಹ್ತಾ, ನಯನ್ ಸುತ್, ರಮೇಶ್ ಜಾಂಗಡ, ತಹಸಿಲ್ದಾರ್ ಗುರುಬಸವರಾಜ್ ಮುಂತಾದವರು ಉಪಸ್ಥಿತರಿದ್ದರು.  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಸ್ವಾಗತಿಸಿದರು, ಸಿ.ವಿ. ಜಡಿಯವರ್ ನಿರೂಪಿಸಿ, ವಂದಿಸಿದರು.  ಸದಾಶಿವ ಪಾಟೀಲ್ ಅವರು ನಾಡಗೀತೆ ಮತ್ತು ರೈತಗೀತೆ ಪ್ರಸ್ತುತಪಡಿಸಿದರು.  ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಜೈನ ಸಮಾಜದ ವತಿಯಿಂದ ರಕ್ತದಾನ ಶಿಬಿರವನ್ನು ಜೈನ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.  ಕಾರ್ಯಕ್ರಮಕ್ಕೂ ಮುನ್ನ ನಗರದ ಅಶೋಕ ವೃತ್ತದ ಬಳಿಯಿಂದ ಭಗವಾನ್ ಮಹಾವೀರರ ಭಾವಚಿತ್ರದ ಮೆರವಣಿಗೆಗೆ ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಚಾಲನೆ ನೀಡಿದರು.  ಜವಾಹರ ರಸ್ತೆ, ಗಡಿಯಾರ ಕಂಭ ಮೂಲಕ ಮಹಾವೀರ ಜೈನ ಭವದವರೆಗೆ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.  ಮೆರವಣಿಗೆಯಲ್ಲಿ ಹಲವು ಕಲಾತಂಡಗಳು ಪಾಲ್ಗೊಂಡು, ಮೆರವಣಿಗೆಯನ್ನು ಆಕರ್ಷಕಗೊಳಿಸಿದವು.

Friday, 7 April 2017

ಕೊಪ್ಪಳದಲ್ಲಿ ಸಸ್ಯರೋಗ ತಜ್ಞರ ಜಂಟಿ ವಾರ್ಷಿಕ ತಾಂತ್ರಿಕ ಸಭೆ


ಕೊಪ್ಪಳ ಏ. 07 (ಕರ್ನಾಟಕ ವಾರ್ತೆ): ಕೃಷಿ ವಿಶ್ವವಿದ್ಯಾಲಯ ರಾಯಚೂರು ಮತ್ತು ಧಾರವಾಡದ ಸಸ್ಯರೋಗ ತಜ್ಞರ ಜಂಟಿ ವಾರ್ಷಿಕ ತಾಂತ್ರಿಕ ಸಭೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಗುರುವಾರದಿಂದ ಆರಂಭಗೊಂಡಿದೆ.
     ಸಭೆಯು ಮೂರು ದಿನಗಳ ಕಾಲ ಜರುಗಲಿದ್ದು,  ಈ ಸಭೆಯಲ್ಲಿ ಎರಡೂ ವಿಶ್ವವಿದ್ಯಾಲಯಗಳ ಸುಮಾರು 60 ಸಸ್ಯರೋಗ ತಜ್ಞರು ಭಾಗವಹಿಸಿದ್ದಾರೆ. ವಿಜ್ಞಾನಿಗಳು ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿರುವ ಬೆಳೆಗಳಲ್ಲಿ ತೆಗೆದುಕೊಂಡ ಸಸ್ಯರೋಗಳ ಪ್ರಾತ್ಯಕ್ಷಿಕೆಗಳು ಹಾಗು ಸಂಶೋಧನೆ ಬಗ್ಗೆ ಸವಿಸ್ತಾರವಾಗಿ ಮಂಡನೆ ಮಾಡಲಿದ್ದಾರೆ.  ನಂತರ ಸಸ್ಯರೋಗದಲ್ಲಿ ಶಿಕ್ಷಣ ಮತ್ತು ವಿಸ್ತರಣಾ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯಲಿದ್ದು ಮುಂದಿನ ವರ್ಷದ ತಾಂತ್ರಿಕ ರೂಪರೇಷ ಕಾರ್ಯಕ್ರಮಗಳ ಬಗ್ಗೆ ತಿರ್ಮಾನ ತೆಗೆದುಕೊಳ್ಳಲಾಗುವುದು.  ಈ ಸಂರ್ದಭದಲ್ಲಿ ಈ ವಿಜ್ಞಾನಿಗಳು ಡಾ.ಎಮ್.ಬಿ.ಪಾಟೀಲ, ಡಾ ಎ.ಸ್.ಬ್ಯಾಡಗಿ, ಡಾ. ಚಿತ್ತಾಪುರ, ಡಾ.ವಿ.ಬಿ.ನರೆಗಲ್, ಡಾ.ಎಸ್.ಟಿ.ನಾಯಕ, ಡಾ.ಬಿ.ಎಸ್.ಅಡಿವೆರ್, ಇಫ್ಕೋ ಕಂಪನಿಯ  ಚಿದಂಬರಮೂರ್ತಿ ಹಾಗೂ ಬೇಯರ್ ಕಂಪನಿಯ ಕಮಲರಗಿ ಉಪಸ್ಥಿತರಿದ್ದರು.

ಎಸ್.ಎಸ್.ಎಲ್.ಸಿ. ವಿಜ್ಞಾನ ಪರೀಕ್ಷೆ : 546 ವಿದ್ಯಾರ್ಥಿಗಳು ಗೈರು


ಕೊಪ್ಪಳ ಮಾ. 30 (ಕ.ವಾ): ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶುಕ್ರವಾರ ನಡೆದ ವಿಜ್ಞಾನ ವಿಷಯದ ಪರೀಕ್ಷೆಗೆ ಜಿಲ್ಲೆಯ 17386 ವಿದ್ಯಾರ್ಥಿಗಳು ಹಾಜರಾಗಿದ್ದು, 546 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
     ಎಸ್.ಎಸ್.ಎಲ್.ಸಿ. ಪರೀಕ್ಷೆಯ ವಿಜ್ಞಾನ ವಿಷಯಕ್ಕೆ ಬಾಲಕರು- 9292, ಬಾಲಕಿಯರು- 8640 ಸೇರಿದಂತೆ ಒಟ್ಟು 17932 ವಿದ್ಯಾರ್ಥಿಗಳು ದಾಖಲಾಗಿದ್ದರು.  ಇದರಲ್ಲಿ ಬಾಲಕರು- 8941, ಬಾಲಕಿಯರು-8445 ಸೇರಿದಂತೆ ಒಟ್ಟು 17386 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,   351-ಬಾಲಕರು, 195- ಬಾಲಕಿಯರು, ಒಟ್ಟು 546 ಗೈರು ಹಾಜರಾಗಿದ್ದಾರೆ.   ಕೊಪ್ಪಳ ತಾಲೂಕಿನಲ್ಲಿ 120, ಗಂಗಾವತಿ- 224, ಕುಷ್ಟಗಿ-101 ಮತ್ತು ಯಲಬುರ್ಗಾ ತಾಲೂಕಿನಲ್ಲಿ 101 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೇಸಿಗೆ ರಜೆಯಲ್ಲಿಯೂ ಶಾಲಾ ಮಕ್ಕಳಿಗೆ ಬಿಸಿಯೂಟ- ಸಿಇಒ ವೆಂಕಟರಾಜಾ

ಕೊಪ್ಪಳ ಏ. 07 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕುಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 08 ನೇ ತರಗತಿಯ ಮಕ್ಕಳಿಗೆ ಬೇಸಿಗೆ ರಜೆ ಅವಧಿಯಲ್ಲಿಯೂ ಮಧ್ಯಾಹ್ನದ ಬಿಸಿಯೂಟ ನೀಡುವ ಕಾರ್ಯಕ್ರಮವನ್ನು ಏ. 11 ರಿಂದ ಪ್ರಾರಂಭಿಸಲಾಗುತ್ತಿದ್ದು, ಮೇ. 27 ರವರೆಗೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತಿಳಿಸಿದ್ದಾರೆ.
     ಜಿಲ್ಲೆಯ ಮಕ್ಕಳಿಗೆ ಬೇಸಿಗೆ ರಜೆ ಅವಧಿಯಲ್ಲಿಯೂ ಮಧ್ಯಾಹ್ನದ ಬಿಸಿಯೂಟ ನೀಡುವ ಕಾರ್ಯಕ್ರಮವನ್ನು ಏ. 11 ರಿಂದಲೇ ಜಾರಿಗೆ ತರಲಾಗುವುದು.  ಬೇಸಿಗೆ ರಜಾ ಅವಧಿಯಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನಿಷ್ಠಾನಗೊಳಿಸುವ ಎಲ್ಲಾ ಸಿದ್ದತೆಗಳನ್ನು  ಮಾಡಿಕೊಳ್ಳಲಾಗಿದೆ.
986 ಶಾಲೆಗಳ 99,166 ಮಕ್ಕಳಿಗೆ ಪ್ರಯೋಜನ :
*************** ಬರ ಪೀಡಿತ ಪ್ರದೇಶದಲ್ಲಿನ ಒಟ್ಟು 986 ಶಾಲೆಗಳನ್ನು ರಜಾ ಅವಧಿಯಲ್ಲಿ ಮಧ್ಯಾಹ್ನದ ಉಪಹಾರ ನೀಡುವ ಕಾರ್ಯಕ್ರಮಕ್ಕೆ ಗುರುತಿಸಲಾಗಿದೆ.  ಒಂದು ಗ್ರಾಮದಲ್ಲಿ ಒಂದಕ್ಕಿಂತ ಹೆಚ್ಚು ಶಾಲೆಗಳಿದ್ದಲ್ಲಿ, ಹೆಚ್ಚಿನ ಮಕ್ಕಳ ಸಂಖ್ಯೆ ಹೊಂದಿರುವ ಶಾಲೆಯನ್ನು ಬಿಸಿಯೂಟ ನೀಡುವ ಶಾಲೆ ಕೇಂದ್ರವನ್ನಾಗಿಸಿ, ಉಳಿದ ಶಾಲೆಗಳನ್ನು ಬಿಸಿಯೂಟ ಶಾಲಾ ಕೇಂದ್ರಕ್ಕೆ ಹೊಂದಿಸಲಾಗುವುದು.  ಇದರನ್ವಯ ಜಿಲ್ಲೆಯಲ್ಲಿ ಒಟ್ಟು 852 ಶಾಲೆಗಳನ್ನು ಬಿಸಿಯೂಟ ನೀಡುವ ಶಾಲಾ ಕೇಂದ್ರವನ್ನಾಗಿ ಗುರುತಿಸಲಾಗಿದ್ದು, ಉಳಿದ 134 ಶಾಲೆಗಳನ್ನು ಕೇಂದ್ರ ಶಾಲೆಯೊಂದಿಗೆ ಸೇರ್ಪಡೆಗೊಳಿಸಿ, ಆ ಶಾಲೆಯ ಮಕ್ಕಳಿಗೆ ಕೇಂದ್ರ ಶಾಲೆಯಲ್ಲಿಯೇ ಬಿಸಿಯೂಟ ವಿತರಿಸಲಾಗುವುದು.  ಗಂಗಾವತಿ ತಾಲೂಕಿನಲ್ಲಿ 34484 ಮಕ್ಕಳು ಕೊಪ್ಪಳ-19144, ಕುಷ್ಟಗಿ-29159 ಮತ್ತು ಯಲಬುರ್ಗಾ ತಾಲೂಕಿನಲ್ಲಿ 16379 ಮಕ್ಕಳು ಸೇರಿದಂತೆ ಒಟ್ಟು 99,166 ಮಕ್ಕಳು ಈ ಸೌಲಭ್ಯದ ಪ್ರಯೋಜನ ಪಡೆಯಲಿದ್ದಾರೆ.
ಆಹಾರ ವ್ಯರ್ಥವಾಗದಂತೆ ಕ್ರಮ :
************ ಬೇಸಿಗೆ ರಜಾ ಅವಧಿಯಲ್ಲಿ ಎಲ್ಲಾ ಅರ್ಹ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಪಡೆಯಲು ಅವಕಾಶವಿದೆ.  ಆದರೆ ಸಿದ್ದಪಡಿಸಿದ ಆಹಾರವು ವ್ಯರ್ಥವಾಗದಂತೆ ಕ್ರಮ ವಹಿಸುವ ಸಲುವಾಗಿ ಆಯಾ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಡುಗೆ ಕೇಂದ್ರಗಳ ಶಾಲೆಯನ್ನು ಗುರುತಿಸಿದ ನಂತರ ಆಯಾ ಅಡುಗೆ ಕೇಂದ್ರಗಳ ಮುಖ್ಯ ಶಿಕ್ಷಕರು ಮಕ್ಕಳ ಪಟ್ಟಿಯನ್ನು ದೃಡೀಕರಿಸಿ ಸಿ.ಆರ್.ಸಿ ಅಥವಾ ಶಿಕ್ಷಣ ಸಂಯೋಜಕರ ಮೂಲಕ ತಾಲೂಕ ಅಕ್ಷರ ದಾಸೋಹ ಕಛೇರಿಗೆ ತಲುಪಿಸಬೇಕು.  ನಂತರ ನಿಗದಿತ ನಮೂನೆಗಳಲ್ಲಿ ಬಿಸಿಯೂಟ ಪಡೆಯುವ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರ ಒಪ್ಪಗೆ ಪತ್ರ ಪಡೆಯುವುದ ಸಹ ಕಡ್ಡಾಯವಾಗಿರುತ್ತದೆ. ಅದರನ್ವಯ ಹಾಜರಾತಿಗೆ ತಕ್ಕಂತೆ ಬಿಸಿಯೂಟ ನೀಡುವುದು ಶಿಕ್ಷಕರ ಕರ್ತವ್ಯವಾಗಿರುತ್ತದೆ.
ಕರ್ತವ್ಯ ನಿರ್ವಹಣೆ :
*********ಮಧ್ಯಾಹ್ನ ಬಿಸಿಯೂಟಕ್ಕಾಗಿ ಗುರುತಿಸಲ್ಪಟ್ಟ ಅಡುಗೆ ಕೇಂದ್ರಗಳು/ಶಾಲೆಗಳಲ್ಲಿ ಕಾರ್ಯಕ್ರಮದ ಉಸ್ತುವಾರಿಗಾಗಿ ಮುಖ್ಯ ಶಿಕ್ಷಕರು ಅಥವಾ ಒಬ್ಬರು ಶಿಕ್ಷಕರನ್ನು ಗೊತ್ತುಪಡಿಸಲಾಗಿದ್ದು, ಪ್ರಸ್ತುತ ಸಾಲಿನಲ್ಲಿ ಈ ಅವಧಿಯಲ್ಲಿ ಕಾರ್ಯ ನಿರ್ವಹಿಸಲು ಅಡುಗೆ ಕೇಂದ್ರವಾರು ಶಾಲೆಯ ಮುಖ್ಯ ಶಿಕ್ಷಕರು ಅಥವಾ ಒಬ್ಬರು ಶಿಕ್ಷಕರನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಯೋಜಿಸಬೇಕು.   ಗುರುತಿಲ್ಪಟ್ಟ ಶಾಲೆಯಲ್ಲಿ 250 ಕ್ಕಿಂತ ಹೆಚ್ಚು ಮಕ್ಕಳು ನಿರಂತರಗಾಗಿ ಬಿಸಿಯೂಟಕ್ಕೆ ಬರುತ್ತಿದ್ದಲ್ಲಿ ಅಂತಹ ಶಾಲೆಯಲ್ಲಿ ಮಾತ್ರ ಹೆಚ್ಚುವರಿಯಾಗಿ ಒಬ್ಬ ಶಿಕ್ಷಕರನ್ನು ನೇಮಿಸಲಾಗುವುದು.  ಬೇಸಿಗೆಯ ರಜಾ ಅವಧಿಯಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ಗಳಿಕೆ ರಜೆ ಸೌಲಭ್ಯ ದೊರಕಲಿದೆ.  ಪ್ರತಿ ದಿನದ ಹಾಜರಾತಿಯನ್ನು ಆಯಾ ಶಿಕ್ಷಕರಿಂದ ಎಸ್‍ಎಂಎಸ್ ಸಂದೇಶ ಮೂಲಕ ಪಡೆಯಲು ಸೂಚನೆ ನೀಡಲಾಗಿದೆ.
ಕುಡಿಯುವ ನೀರು :
********* ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಬಹುದಾಗಿದ್ದು ಕುಡಿಯುವ ನೀರು ಮತ್ತು ಅಡುಗೆ ಮಾಡಲು ನೀರಿನ ತಂದರೆ ಉಂಟಾಗುವ ಸಂಭವವಿರುತ್ತದೆ. ಆಯಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಅಧಿಕಾರಿಗಳ ಜೊತೆ ಚರ್ಚಿಸಿ ಬೇಸಿಗೆಯಲ್ಲಿ ನಡೆಯುವ ಮಧ್ಯಾಹ್ನ ಉಪಹಾರ ಯೋಜನೆಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿವುದು ಮತ್ತು ಅಡುಗೆ ತಯಾರಿಸಲು ನೀರಿನ ತೊಂದರೆ ಉಂಟಾದರೆ ಆಯಾ ಗ್ರಾಮ ಪಂಚಾಯತ ಪಿ.ಡಿ.ಓ ಮುಖಾಂತರ ಪರ್ಯಾಯ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು.
1906 ಅಡುಗೆ ಸಿಬ್ಬಂದಿ ನೇಮಕ :
************  ಅಡುಗೆ ಸಿಬ್ಬಂದಿಯನ್ನು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಂದರೆ ಮಕ್ಕಳ ಸಂಖ್ಯೆ 25 ಕ್ಕೆ ಒಬ್ಬರು, 100 ಮಕ್ಕಳಿಗೆ ಇಬ್ಬರು ಅಡುಗೆಯವರನ್ನು ಮತ್ತು ನಂತರದಲ್ಲಿ ಪ್ರತಿ 100 ಮಕ್ಕಳಿಗೆ ಒಬ್ಬರಂತೆ ಅಡುಗೆಯವರನ್ನು ನೇಮಕ ಮಾಡಿಕೊಳ್ಳಲು ಕೇಂದ್ರ ಹೊಂದಿರುವ ಶಾಲಾ ಮುಖ್ಯ ಶಿಕ್ಷಕರಿಗೆ ಅಧಿಕಾರ ನೀಡಲಾಗಿದೆ. ಆಹಾರ ಧಾನ್ಯ ಬೇಡಿಕೆಯನ್ನು ಪ್ರತಿ ತಿಂಗಳಂತೆ ಸಿ.ಆರ್.ಸಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ರವರ ಮೂಲಕ ಅಕ್ಷರ ದಾಸೋಹ ವಿಭಾಗಕ್ಕೆ ಸಲ್ಲಿಸಬೇಕು. ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಅಧಿಕಾರಿಗಳು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಹಾರ ಧಾನ್ಯಗಳನ್ನು ಶಾಲಾವಾರು ಸರಬರಾಜು ಆಗುವಂತೆ ನೋಡಿಕೊಳ್ಳಲಿದ್ದಾರೆ. ಗಂಗಾವತಿ ತಾಲೂಕಿನಲ್ಲಿ 639 ಅಡುಗೆ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಕೊಪ್ಪಳ-381, ಕುಷ್ಟಗಿ-573 ಮತ್ತು ಯಲಬುರ್ಗಾ-313 ಸೇರಿದಂತೆ ಜಿಲ್ಲೆಯಲ್ಲಿ ಬೇಸಿಗೆ ಬಿಸಿಯೂಟ ಕಾರ್ಯಕ್ಕೆ  ನೇಮಿಸಿದ ಅಡುಗೆ ಸಿಬ್ಬಂದಿ ಸಂಖ್ಯೆ 1,906.
ಪ್ರತಿ ದಿನ ಮಕ್ಕಳ ಹಾಜರಾತಿ ನಮೂದಿಸುವುದು ಕಡ್ಡಾಯ :
************** ಪ್ರತಿದಿನ ಶಾಲೆಗೆ ಹಾಜರಾದ ಮಕ್ಕಳ ಸಂಖ್ಯೆ ಫಲಾನುಭವಿಗಳ ಮಕ್ಕಳ ಮಾಹಿತಿಯನ್ನು  ಸ್ಟಷ್ಟವಾಗಿ ಹಾಗೂ ನಿಖರವಾಗಿ ಎಸ್.ಎಂ.ಎಸ್. ಕಳುಹಿಸಬೇಕು.    
     ಬರ ಪೀಡಿತ ಪ್ರದೇಶದಲ್ಲಿನ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಸರ್ಕಾರದ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ, ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತಿಳಿಸಿದ್ದಾರೆ.

ವಿಶ್ವ ಆರೋಗ್ಯ ದಿನಾಚರಣೆ : ಜಾಗೃತಿ ಜಾಥಾಕ್ಕೆ ಜಿ.ಪಂ. ಅಧ್ಯಕ್ಷರಿಂದ ಚಾಲನೆ


ಕೊಪ್ಪಳ, ಏ.07 (ಕರ್ನಾಟಕ ವಾರ್ತೆ): ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಶುಕ್ರವಾರ ಹಮ್ಮಿಕೊಂಡ ಜನ ಜಾಗೃತಿ ಜಾಥಾಕ್ಕೆ ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಕೊಪ್ಪಳದ ಹಳೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.   
     ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳ ಕಾರ್ಯಾಲಯ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ “ಖಿನ್ನತೆ (ಬೇಜಾರು ಖಾಯಿಲೆ)- ನಾವು ಮಾತನಾಡೋಣ” ಎಂಬ ಘೋಷಣಾ ವಾಕ್ಯದೊಂದಿಗೆ ಜಾಥಾ ಏರ್ಪಡಿಸಲಾಯಿತು
     ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ, ಶಸ್ತ್ರ ಚಿಕಿತ್ಸಕ ಎಸ್.ಬಿ. ದಾನರೆಡ್ಡಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಎಸ್.ಕೆ. ದೇಸಾಯಿ, ಡಾ. ಎಂ.ಎಂ. ಕಟ್ಟಿಮನಿ, ಡಾ. ವಿ. ಮಾದಿನೂರ, ಡಾ. ಜಂಬಯ್ಯ, ಡಾ. ರಾಮಾಂಜನೇಯ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಮತ್ತು ನಗರ ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.

ಖಿನ್ನತೆ (ಬೇಜಾರು ಖಾಯಿಲೆ) ಕುರಿತು ಎಚ್ಚರ ವಹಿಸುವುದು ಅಗತ್ಯ


ಕೊಪ್ಪಳ, ಏ.07 (ಕರ್ನಾಟಕ ವಾರ್ತೆ) : ಖಿನ್ನತೆ ಎನ್ನುವುದು ಜನರಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಮಾನಸಿಕ ಸಮಸ್ಯೆ.  ಈ ಸಮಸ್ಯೆ ಇಂದಿನ ಒತ್ತಡದ ಜೀವನದಲ್ಲಿ ಜನರಿಗೆ ಸರ್ವೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಒಂದು ಮಾನಸಿಕ ಸ್ಥಿತಿ.  ಇದನ್ನು ನಿರ್ಲಕ್ಷಿಸಿದಲ್ಲಿ ಆ ವ್ಯಕ್ತಿ ತೊಂದರೆಗೀಡಾಗುವುದಂತೂ ನಿಜ.  ಆರೋಗ್ಯ ಇಲಾಖೆ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಈ ವರ್ಷ ಖಿನ್ನತೆ/ಬೇಜಾರು ಖಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.
       ಖಿನ್ನತೆಯು ಒಂದು ಪ್ರಮುಖ ಮಾನಸಿಕ ಖಾಯಿಲೆಯಾಗಿದ್ದು, ಕನಿಷ್ಟ 2 ವಾರಗಳ ನಿರಂತರ ದುಃಖ ಹಾಗೂ ಸಾಮಾನ್ಯವಾಗಿ ಸಂತೋಷಪಡುವ ಕೆಲಸ-ಕಾರ್ಯಗಳಲ್ಲಿ ನಿರಾಸಕ್ತಿಯ ಜೊತೆಗೆ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ಆಗದೇ ಇರುವ ಲಕ್ಷಣಗಳನ್ನು ಹೊಂದಿರುತ್ತದೆ.    
ಖಿನ್ನತೆಯ ಲಕ್ಷಣಗಳು : ನಿಶಕ್ತಿ, ಅತೀ ಕಡಿಮೆ ಅಥವಾ ಅತೀ ಹೆಚ್ಚು ನಿದ್ರೆ ಮಾಡುವುದು, ಅನಿರ್ಧಾರತೆ (ತೀರ್ಮಾನ ತಗೆದುಕೊಳ್ಳುವಲ್ಲಿ ತೊಂದರೆ), ಚಡಪಡಿಕೆ, ಆಶಾರಹಿತ, ನಿಷ್ಟ್ರಯೋಜನೆ ಅಥವಾ ತಪ್ಪಿತಸ್ಥ ಮನೋಭಾವನೆ, ಹಸಿವಿನಲ್ಲಾಗುವ ಬದಲಾವಣೆಗಳು, ಆತಂಕ, ಏಕಾಗ್ರತೆಯ ಕೊರತೆ, ಆತ್ಮಹತ್ಯೆ ಆಲೋಚನೆ ಅಥವಾ ಪ್ರಯತ್ನ. ಇವು ಖಿನ್ನತೆಯ ಪ್ರಮುಖ ಲಕ್ಷಣಗಳು.
ಪ್ರಮುಖ ಸಂದೇಶ : ಖಿನ್ನತೆ ಖಾಯಿಲೆಯು ಅತೀ ಸಾಮಾನ್ಯ ಮಾನಸಿಕ ಖಾಯಿಲೆಯಾಗಿದ್ದು, ಪ್ರಪಂಚದ ಎಲ್ಲಾ ದೇಶಗಳ ಸ್ಥರಗಳ ಹಾಗೂ ಎಲ್ಲಾ ವಯಸ್ಸಿನ ವ್ಯಕ್ತಿಗಳನ್ನು ಭಾಧಿಸಬಹುದು.  ಖಿನ್ನತೆಯು ಬಲಹಿನತೆಯ ಚಿಹ್ನೆ ಅಲ್ಲ.  ಬಡತನ, ನಿರುದ್ಯೋಗ, ಜೀವನದ ಘಟನೆಗಳು (ಪ್ರೀತಿ ಪಾತ್ರರ ಸಾವು/ಮರಣ, ಸಂಬಂಧಗಳಲ್ಲಿ ಬಿರುಕು), ದೈಹಿಕ ಖಾಯಿಲೆಗಳು ಹಾಗೂ ಕುಡಿತ ಅಥವಾ ಮಧ್ಯಪಾನ, ಮಾದಕ ದ್ರವ್ಯ ವ್ಯಸನಗಳಿಂದ ಉಂಟಾಗುತ್ತದೆ.
          ಖಿನ್ನತೆಯಿಂದ ಮಾನಸಿಕ ದುಃಖ ಉಂಟಾಗಿ, ವ್ಯಕ್ತಿಗಳ ಸಾಮಾಥ್ರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.  ದೈನಂದಿನ ಸರಳ ಕಾರ್ಯಗಳನ್ನೂ ಸಹ ನಿರ್ವಹಿಸಲು ಸಾಧ್ಯವಾಗದೇ, ಕುಟುಂಬ ಹಾಗೂ ಸ್ನೇಹಿತರೊಡಗಿನ ಸಂಬಂಧಗಳ ಮೇಲೆ ಕೆಲವೊಮ್ಮೆ ವಿನಾಶಕಾರಿ ಪರಿಣಾಮ ಬೀರಬಹುದು.  ಚಿಕಿತ್ಸೆ ನೀಡುವ ಖಾಯಿಲೆಯು ಕೆಲಸ ಅಥವಾ ಕರ್ತವ್ಯ ನಿರ್ವಹಿಸುವುದನ್ನು ಅಡ್ಡಿಪಡಿಸುವುದಲ್ಲದೇ, ಕೌಟುಂಬಿಕ ಹಾಗೂ ಸಾಮಾಜಿಕ ಕರ್ತವ್ಯಗಳಲ್ಲಿ ಭಾಗವಹಿಸುವುದನ್ನು ತಡೆಗಟ್ಟುತ್ತದೆ.  ಖಿನ್ನತೆಯು ಅತೀ ಕೆಟ್ಟ ಪರಿಣಾಮವಾದ ಅತ್ಮಹತ್ಯೆಗೆ ದಾರಿಯಾಗಬಹುದು.  15 ರಿಂದ 29 ವಯೋಮಾನದವರ ಸಾವುಗಳಲ್ಲಿ ಎರಡನೇ ಕಾರಣವಾಗಿದೆ.
      ಕೆಲ ಜನರು ಖಿನ್ನತೆಯನ್ನು “ಕತ್ತಲೆಯಲ್ಲಿದ್ದಂತೆ” ವರ್ಣಿಸಿದರೆ, ಇನ್ನೂ ಕೆಲವರು ತೂಗುತ್ತಿರುವ ದಂಡನೆ ಅಥವಾ ಶಿಕ್ಷೆಯ ಮನೋಭಾವ ಎಂದೂ, ಬೇರೆ ಕೆಲವರು, ಜೀವವಿಲ್ಲದ ಖಾಲಿ ಭಾವನಾರಹಿತ ಅನುಭವ ಎಂದು ವಿವರಿಸುತ್ತಾರೆ.  ಅದರಲ್ಲೂ ಗಂಡಸರು ಕೋಪ ಹಾಗೂ ಚಡಪಡಿಕೆಯನ್ನು  ವ್ಯಕ್ತಪಡಿಸುತ್ತಾರೆ.  ನೀವು ಹೇಗಾದರೂ ವಿವರಿಸಿ ಅಥವಾ ಅನುಭವಿಸಿರಿ, ಖಿನ್ನತೆಯು, ಮಾಮೂಲಿ ಬೇಜಾರಿಗಿಂತ ಭಿನ್ನವಾಗಿದ್ದು, ನಿಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ತಿಂದು ಹಾಕಿ, ನಿಮ್ಮ ಕಾರ್ಯ ಕ್ಷಮತೆಯನ್ನು ವ್ಯಾಸಂಗ, ಊಟ, ನಿದ್ರೆ, ಹಾಸ್ಯ ಹಾಗೂ ವಿನೋದಗಳಿಗೆ ಅಡ್ಡಿಪಡಿಸುತ್ತದೆ.  ಖಿನ್ನತೆಯಿದ್ದವರು ಯಾವುದೂ ಎಂದೂ ಬದಲಾಗುವುದಿಲ್ಲ ಎಂಬ ಮನೋಭಾವನೆಯನ್ನು ಹೊಂದಿರುತ್ತಾರೆ.  ಆದರೆ ನಿಷ್ಟ್ರಯೋಜಕತೆಯ ಮತ್ತು ಆಶಾರಹಿತ ಭಾವನೆಗಳು ಖಿನ್ನತೆಯ ಲಕ್ಷಣಗಳಾಗಿವೆ.  ಖಿನ್ನತೆಯ ಖಾಯಿಲೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಹಾಗೂ ಗುಣಪಡಿಸಬುದು.  ಇದರ ಚಿಕಿತ್ಸೆಯು ಸಾಮಾನ್ಯವಾಗಿ ಮಾತನಾಡುವ ಚಿಕಿತ್ಸೆ (ಆಪ್ತ ಸಮಾಲೋಚನೆ), ಖಿನ್ನತೆ ಶಮನಕಾರಿ ಔಷದೋಪಚಾರ ಅಥವಾ ಈ ಎರಡನ್ನೂ ಒಳಗೊಂಡಿರಬಹುದು.  ಖಿನ್ನತೆ ಖಾಯಿಲೆಗೆ ಸಾಮಾನ್ಯವಾಗಿ ಅಂಟಿರುವ ಸಾಮಾಜಿಕ ಕಳಂಕವನ್ನು ತೊಡೆದು ಹಾಕುವುದರಿಂದ ಅನೇಕ ಜನರು ಲಭ್ಯವಿರುವ ಚಿಕಿತ್ಸೆಯ ಸಹಾಯವನ್ನು ಪಡೆಯಬಹುದು.
ಖಿನ್ನತೆ/ಬೇಜಾರು ಖಾಯಿಲೆ ಗುಣಪಡಿಸುವ ಅಂಶಗಳು : ನಿಮ್ಮ ಮನಸ್ಸಿನ ಭಾವನೆಗಳನ್ನು ನಿಮ್ಮ ನಂಬಿಕಸ್ಥರೊಡನೆ ಮಾತನಾಡಿ.  ತಜ್ಞರ ಅಥವಾ ವೃತ್ತಿಪರರ ಸಹಾಯ ಪಡೆಯಿರಿ, ನಿಮ್ಮ ಊರಿನ ಆರೋಗ್ಯ ಕಾರ್ಯಕರ್ತರು ಅಥವಾ ವೈದ್ಯರಿಂದ ಪ್ರಾರಂಭಿಸಿ.  ಸರಿಯಾದ ಸಹಾಯದಿಂದ ನೀವು ಗುಣಹೊಂದಬಹುದು ಎಂಬುವುದನ್ನು ನೆನಪಿಡಿ.  ನೀವು ಆರೋಗ್ಯವಂತರಾಗಿದ್ದಾಗ ಮಾಡುತ್ತಿದ್ದ ಸಂತೋಷ ತರುವ ಚಟುವಟಿಕೆಗಳನ್ನು ಮುಂದುವರಿಸಿ.  ನಿಮ್ಮ ಕುಟುಂಬ ಮತ್ತು ಸ್ನೇಹಿತರೊಡನೆ ಸಂಪರ್ಕದಲ್ಲಿರಿ.  ನಿಯಮಿತ ಆಹಾರ ಸೇವನೆ ಹಾಗೂ ನಿದ್ರೆಯ ಹವ್ಯಾಸ ಬೆಳಸಿಕೊಳ್ಳಿ.  ಕುಡಿತ ಅಥಮಾ ಮಾದಕ ದ್ರವ್ಯ ವಸ್ತು ಸೇವನೆಯಿಂದ ದೂರವಿರಿ, ಇವುಗಳು ಖಿನ್ನತೆಯನ್ನು ಹೆಚ್ಚಿಸಬಹುದು.  ನಿಮಗೆ ಬೇಜಾರು ಖಾಯಿಲೆ ಇರಬಹುದು ಎಂದು ಒಪ್ಪಿಕೊಂಡು ನಿಮ್ಮ ನಿರೀಕ್ಷೆಗಳನ್ನು ಹೊಂದಾಣಿಕೆ ಮಾಡಿ, ನೀವು ಆರೋಗ್ಯವಂತರಾಗಿದ್ದಾಗ ಸಾಧಿಸಿದ್ದಷ್ಟನ್ನು ಈಗ ಸಾಧಿಸಲು ಸಾಧ್ಯವಿಲ್ಲದೇ ಇರಬಹುದು.  ಆತ್ಮಹತ್ಯೆಯ ಆಲೋಚನೆ ಬಂದಲ್ಲಿ, ಆಪ್ತರನ್ನು ಅಥವಾ ಸಹಾಯ ಮಾಡುವವರನ್ನು ಕೂಡಲೇ ಸಂಪರ್ಕಿಸುವುದು ಉತ್ತಮ ಎನ್ನುತ್ತಾರೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಎಸ್.ಕೆ. ದೇಸಾಯಿ ಅವರು.