Friday, 24 March 2017

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ- ಜಿ.ಪಂ. ಸದಸ್ಯರ ಒಕ್ಕೊರಲ ಮನವಿ


ಕೊಪ್ಪಳ ಮಾ. 24 (ಕರ್ನಾಟಕ ವಾರ್ತೆ): ಪ್ರಸಕ್ತ ವರ್ಷ ತೀವ್ರ ಬರ ಪರಿಸ್ಥಿತಿ ಇದ್ದು, ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ತೊಂದರೆಗಳಿಗೆ ಶೀಘ್ರ ಸ್ಪಂದಿಸಿ, ಸಮಸ್ಯೆ ಪರಿಹರಿಸಲು ಹೆಚ್ಚಿನ ಆದ್ಯತೆ ನೀಡುವಂತೆ ಕೊಪ್ಪಳ ಜಿಲ್ಲಾ ಪಂಚಾಯತಿಯ ಸದಸ್ಯರುಗಳು ಒಕ್ಕೊರಲ ಮನವಿ ಮಾಡಿದರು.

     ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಜಿ.ಪಂ. ಸದಸ್ಯರು ಮನವಿ ಮಾಡಿದರು.
     ಮುಂಗಾರು, ಹಿಂಗಾರು ಮಳೆಯ ವೈಫಲ್ಯದಿಂದ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದೆ.  ಅಂತರ್ಜಲ ಕುಸಿತದಿಂದ ಗ್ರಾಮೀಣ ಪ್ರದೇಶಗಳಲ್ಲಿನ ಬೋರ್‍ವೆಲ್‍ಗಳು ಕೂಡ ವಿಫಲವಾಗುತ್ತಿವೆ.  ಹೀಗಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಉದ್ಭವಿಸುವ ಸಾಧ್ಯತೆಗಳು ಹೆಚ್ಚಾಗಿದೆ.  ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಸದಸ್ಯರು ಅಧಿಕಾರಿಗಳ ಗಮನಕ್ಕೆ ತಂದಲ್ಲಿ, ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ, ಸಮಸ್ಯೆ ಪರಿಹರಿಸಲು ಹೆಚ್ಚಿನ ಆದ್ಯತೆ ನೀಡಬೇಕು.  ಅಧಿಕಾರಿಗಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಜಿ..ಪಂ. ಸದಸ್ಯರುಗಳು ಅಧ್ಯಕ್ಷರಿಗೆ ಒಕ್ಕೊರಲ ಮನವಿ ಮಾಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು, ಈಗಾಗಲೆ ತಾವು, ಅಧಿಕಾರಿಗಳೊಡಗೂಡಿ, ಪ್ರತಿ ತಾಲೂಕು ಮಟ್ಟದಲ್ಲಿ ಸಭೆಯನ್ನು ಕೈಗೊಂಡು, ಪರಿಸ್ಥಿತಿಯ ಪರಾಮರ್ಶೆ ನಡೆಸಿ, ಆಯಾ ತಾಲೂಕಿನ ಸಮಗ್ರ ಚಿತ್ರಣವನ್ನು ಪಡೆಯಲಾಗುತ್ತಿದೆ.  ಸಮಸ್ಯಾತ್ಮಕ ಗ್ರಾಮಗಳ ಮಾಹಿತಿ ಪಡೆದುಕೊಂಡು, ಅಂತಹ ಗ್ರಾಮಗಳಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಲಾಗುತ್ತಿದೆ.  ಹೀಗಾಗಿ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ತೀವ್ರ ನೀರಿನ ಸಮಸ್ಯೆ ಕಂಡುಬಂದಲ್ಲಿ, ತ್ವರಿತವಾಗಿ ಸ್ಪಂದಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಶುದ್ಧ ಕುಡಿಯುವ ನೀರು ಘಟಕ : ಜಿಲ್ಲೆಯಲ್ಲಿನ 558 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 437 ಘಟಕಗಳಿಗೆ ಕಮಿಷನರೇಟ್ ಮಾಡಲಾಗಿದ್ದು, ಇದರಲ್ಲಿ 402 ಕಾರ್ಯ ನಿರ್ವಹಿಸುತ್ತಿವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಟ್ಟೂರ ಅವರು ಹೇಳಿದರು.   ಶುದ್ಧ ಕುಡಿಯುವ ನೀರು ಘಟಕ ಅಳವಡಿಸಿ, ಸರಿಯಾಗಿ ಕಾರ್ಯ ನಿರ್ವಹಿಸದ ಹಾಗೂ ಅಳವಡಿಕೆಯಲ್ಲಿ ವಿಳಂಬ ಮಾಡಿದ ಏಜೆನ್ಸಿಯವರಿಗೆ ಮಾ. 30 ರವರೆಗೆ ಕಾಲಮಿತಿ ನಿಗದಿಪಡಿಸದ್ದು, ಅಷ್ಟರೊಳಗೆ ಎಲ್ಲ ಘಟಕಗಳು ಸಮರ್ಪಕವಾಗಿ ಕಾರ್ಯಾರಂಬವಾಗಬೇಕು.  ಇಲ್ಲದಿದ್ದಲ್ಲಿ ಅಂತಹ ಏಜೆನ್ಸಿಯವರ ಮೇಲೆ ಮಾ. 31 ರಂದೇ ದೂರು ದಾಖಲಿಸಲಾಗುವುದು ಎಂದು ಗಂಗಾವತಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಜಯಕುಮಾರ್ ಅವರು ಹೇಳಿದರು.  ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಎನ್. ಕೊರಬು ಅವರು ಮಾತನಾಡಿ, ಜಿಲ್ಲೆಯಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದ 264 ಆರ್.ಓ ಗಳಿದ್ದು, ಇದರಲ್ಲಿ 233 ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ.  ಕೆಲವೆಡೆ ಆರ್.ಓ. ಘಟಕಗಳ ಕಾಯಿನ್ ಬಾಕ್ಸ್‍ಗೆ ಕಿಡಿಗೇಡಿಗಳು ಕಬ್ಬಿಣದ ತುಂಡು, ಪ್ಲಾಸ್ಟಿಕ್, ತಂತಿ ಮುಂತಾದವುಗಳನ್ನು ಹಾಕುತ್ತಿರುವುದರಿಂದ, ಕೆಡುತ್ತಿವೆ.  ಜಿಲ್ಲೆಯಲ್ಲಿ ಈ ರೀತಿ ಕೆಟ್ಟುಹೋದ 33 ಕಾಯಿನ್ ಬಾಕ್ಸ್ ಉಪಕರಣಗಳನ್ನು ಬದಲಾಯಿಸಲಾಗಿದೆ ಎಂದರು.

ಖಾಸಗಿ ಬೋರ್‍ವೆಲ್‍ಗೆ ಬಾಡಿಗೆ : ಜಿಲ್ಲೆಯಲ್ಲಿ ನೀರಿನ ಮೂಲ ಲಭ್ಯವಿಲ್ಲದಿರುವ ಪ್ರದೇಶಗಳಲ್ಲಿ, ಬಾಡಿಗೆ ಆಧಾರದ ಮೇಲೆ ಖಾಸಗಿ ಬೋರ್‍ವೆಲ್‍ಗಳನ್ನು ಪಡೆದು, ನೀರು ಪೂರೈಸಲಾಗುತ್ತಿದೆ.  ಕೆಲವೆಡೆ ಹೆಚ್ಚು, ಬಾಡಿಗೆ ಕೊಡುತ್ತಿದ್ದು, ಕೆಲವು ಕಡೆ ಕಡಿಮೆ ಬಾಡಿಗೆ ಕೊಡುತ್ತಿದ್ದಾರೆ ಎಂದು ಜಿ.ಪಂ. ಸದಸ್ಯರೋರ್ವರು ಆರೋಪಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸಿಇಒ ವೆಂಕಟರಾಜಾ ಅವರು, ಖಾಸಗಿ ಬೋರ್‍ವೆಲ್‍ಗಳ ನೀರಿನ ಲಭ್ಯತೆಯ ಪ್ರಮಾಣಕ್ಕೆ ಅನುಗುಣವಾಗಿ ಬಾಡಿಗೆ ಮೊತ್ತವನ್ನು ನಿಗದಿಪಡಿಸಿ, ಪಾವತಿಸಲಾಗುತ್ತಿದ್ದು, ಗರಿಷ್ಟ 15 ಸಾವಿರ ರೂ. ಬಾಡಿಗೆ ನೀಡಲಾಗುತ್ತಿದೆ ಎಂದರು.
ಏಪ್ರಿಲ್‍ನಿಂದ 108 ಆ್ಯಬುಲೆನ್ಸ್ ಜಿಲ್ಲಾ ಸುಪರ್ದಿಗೆ : ಜಿಲ್ಲೆಯಲ್ಲಿ ಬೇಸಿಗೆಯ ಕಾರಣ ತಾಪಮಾನ ಹೆಚ್ಚುತ್ತಿದ್ದು,  ವಿವಿಧ ಕಾಯಿಲೆಗಳಿಗೆ  ಜನ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.  ಆದ್ದರಿಂದ ರೋಗಿಗಳಿಗೆ ತ್ವರಿತವಾಗಿ ಸ್ಪಂದಿಸುವುದು ಅಗತ್ಯವಾಗಿರುತ್ತದೆ.  ಆದ್ದರಿಂದ ಸರ್ಕಾರಿ ಆಸ್ಪತ್ರೆ ವೈದ್ಯರು ಕೇಂದ್ರ ಸ್ಥಾನದಲ್ಲೇ ಇರುವಂತೆ ಸೂಚಿಸಬೇಕು.  ಇನ್ನು 108 ಆ್ಯಂಬುಲೆನ್ಸ್ ಸಿಬ್ಬಂದಿ ತುರ್ತು ಸಂಧರ್ಭದಲ್ಲಿ ರೋಗಿಗಳಿಗೆ ದಾರಿ ತಪ್ಪಿಸಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ.  ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ಹೇಳಿದರೆ ತಡವಾಗಿ ಕರೆತರುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ ಎಂದು ಜಿ.ಪಂ. ಸದಸ್ಯ ಕೆ. ಮಹೇಶ್ ಅವರು ಸಭೆಯ ಗಮನಕ್ಕೆ ತಂದರು.   ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಅವರು, ಏಪ್ರೀಲ್ 1 ರಿಂದ 108 ಆ್ಯಂಬುಲೆನ್ಸ್‍ಗಳು, ಜಿಲ್ಲಾ ಆರೋಗ್ಯ ಇಲಾಖೆ ಸುಪರ್ದಿಗೆ ಬರಲಿದೆ. ರೋಗಿಗಳನ್ನು ಕಡ್ಡಾಯವಾಗಿ ಸರ್ಕಾರಿ ಸಂಸ್ಥೆಯಲ್ಲೇ ಚಿಕಿತ್ಸೆ ಕೊಡಿಸುವಂತೆ 108 ಸಿಬ್ಬಂದಿಗೆ ಸೂಚಿಸಲಾಗಿದೆ. ರೋಗಿಗಳಿಗೆ ದಾರಿ ತಪ್ಪಿಸುವ ಪ್ರಕರಣದ ದೂರು ಬಂದರೆ ಅಂತಹ 108 ಆ್ಯಂಬುಲೆನ್ಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಎಂದರು.
ಉದ್ಯೋಗಖಾತ್ರಿಯಡಿ 101. 80 ಕೋಟಿ ರೂ. ಖರ್ಚು : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಒಟ್ಟು 133. 87 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು.  ಜಿಲ್ಲೆಯಲ್ಲಿ ಸದ್ಯ ಬರ ಪರಿಸ್ಥಿತಿ ಇರುವುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು, ಹೆಚ್ಚು ಉದ್ಯೋಗ ನೀಡಲು ಆದ್ಯತೆ ನೀಡಲಾಗಿದ್ದು, ಈವರೆಗೆ 28. 96 ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ. 86 ರಷ್ಟು ಸಾಧನೆಯಾಗಿದೆ.  ಇದುವರೆಗೆ 6075 ಕುಟುಂಬಗಳು 100 ದಿನಗಳ ಉದ್ಯೋಗ, 255 ಕುಟುಂಬಗಳು 150 ದಿನಗಳ ಉದ್ಯೋಗ ಪಡೆದಿದ್ದು, 197378 ಕುಟುಂಬಗಳಿಗೆ ಉದ್ಯೋಗ ಚೀಟಿ ನೀಡಲಾಗಿದೆ.  ಕೂಲಿ, ಸಾಮಗ್ರಿ ಮತ್ತು ಆಡಳಿತ ವೆಚ್ಚ ಸೇರಿದಂತೆ ಒಟ್ಟು 101. 80 ಕೋಟಿ ರೂ. ಅನುದಾನ ವೆಚ್ಚವಾಗಿದ್ದು, ಉದ್ಯೋಗಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವಂತೆ ಉತ್ತೇಜನ ನೀಡಲು, ಜಿಲ್ಲಾ ಪಂಚಾಯತಿ ವತಿಯಿಂದ, ಕೂಲಿ ಸ್ಥಳದಲ್ಲಿಯೇ ಆರೋಗ್ಯ ತಪಾಸಣೆ ಅಭಿಯಾನ, ಬ್ಯಾಂಕ್ ಖಾತೆ ಅಭಿಯಾನ, ಕೂಲಿಕಾರರ ಮಕ್ಕಳಿಗೆ ಆಟದೊಂದಿಗೆ ಶಿಕ್ಷಣ ನೀಡುವಂತಹ ಉತ್ತೇಜನಕಾರಿ ಕ್ರಮಗಳನ್ನು ಅಳವಡಿಸಿದ್ದು, ಜನಮೆಚ್ಚುಗೆ ಪಡೆದುಕೊಳ್ಳುತ್ತಿದೆ ಎಂದು ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ತಿಳಿಸಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ ಸೇರಿದಂತೆ ಜಿಲ್ಲಾ ಪಂಚಾಯತಿಯ ಸದಸ್ಯರುಗಳು, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
Post a Comment