Wednesday, 22 March 2017

ಬಾಲ್ಯ ವಿವಾಹದಲ್ಲಿ ಪಾಲ್ಗೊಂಡವರೆಲ್ಲರೂ ಅಪರಾಧಿಗಳು : ಶೇಖರಗೌಡ ಜಿ. ರಾಮತ್ನಾಳ


ಕೊಪ್ಪಳ, ಮಾ.22 (ಕರ್ನಾಟಕ ವಾರ್ತೆ): ಬಾಲ್ಯ ವಿವಾಹ ಅನಿಷ್ಠ ಪದ್ಧತಿಯ ಬಗ್ಗೆ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದರೂ, ಕೆಲವೆಡೆ ಪಾಲಕರು ಕದ್ದು ಮುಚ್ಚಿ ಅಪ್ರಾಪ್ತ ವಯಸ್ಸಿನ ಮಕ್ಕಳ ಮದುವೆ ಮಾಡಿಸುತ್ತಿದ್ದಾರೆ.  ಬಾಲ್ಯ ವಿವಾಹದಲ್ಲಿ ಪಾಲ್ಗೊಂಡವರೆಲ್ಲರೂ ಕಾನೂನು ದೃಷ್ಟಿಯಲ್ಲಿ ಅಪರಾಧಿಗಳೇ ಆಗುತ್ತಾರೆ ಎಂದು ಕೊಪ್ಪಳ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ  ಶೇಖರಗೌಡ ಜಿ. ರಾಮತ್ನಾಳ ಅವರು ಹೇಳಿದರು.

       ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ಯಲಬುರ್ಗಾ ತಾಲೂಕಿನ ಚನ್ನಪ್ಪನ ಹಳ್ಳಿ ಗ್ರಾಮದಲ್ಲಿ ಮಂಗಳವಾರದಂದು ಬಾಲ್ಯ ವಿವಾಹ ತಡೆಗಾಗಿ ಹಮ್ಮಿಕೊಳ್ಳಲಾಗಿದ್ದ   ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.
ಯಾವುದೇ ಅಪ್ರಾಪ್ತ ವಯಸ್ಸಿನ ಮಕ್ಕಳ ಮದುವೆಯನ್ನು ಮಾಡಿದ ಬಗ್ಗೆ ದೂರುಗಳು ಬಂದಾಗ,  ಅಪ್ರಾಪ್ತರು, ವಯಸ್ಕರಾದ 2 ವರ್ಷದೊಳಗೆ ಅಂದರೆ 20 ವರ್ಷ ತುಂಬುವ ಪೂರ್ವದಲ್ಲಿ, ಯಾವುದೇ ಸಂದರ್ಭದಲ್ಲಿಯೂ ಸಹ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರಡಿಯಲ್ಲಿ ದೂರನ್ನು ದಾಖಲಿಸಬಹುದಾಗಿದೆ.  ಬಾಲ್ಯ ವಿವಾಹದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ಕಾನೂನು ದೃಷ್ಟಿಯಲ್ಲಿ ಅಪರಾಧಿಗಳೇ ಆಗುತ್ತಾರೆ.  ಹೀಗಾಗಿ, ಯಾವುದೇ ಸಂದರ್ಭದಲ್ಲಿಯೂ, ಯಾವುದೇ ಕಾರಣಗಳಿಗಾಗಿಯೂ ಬಾಲ್ಯ ವಿವಾಹವನ್ನು ಮಾಡಬೇಡಿ, ತಪ್ಪಿದ್ದಲ್ಲಿ ಅಂತಹ ಪಾಲಕರ ವಿರುದ್ಧ ಪ್ರಕರಣವನ್ನು ದಾಖಲಿಸಲು ಸಮಿತಿಯು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಅವಕಾಶವಿದೆ ಎಂದು ಶೇಖರಗೌಡ ರಾಮತ್ನಾಳ ಹೇಳಿದರು.
  ಪೊಲೀಸ್ ತರಬೇತುದಾರ ಸೋಮಶೇಖರ ಜಿ.ಎಸ್. ಅವರು ಮಾತನಾಡಿ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 9, 10, 11ರಡಿಯಲ್ಲಿ ಬಾಲ್ಯ ವಿವಾಹವನ್ನು ಮಾಡಿದ ಅಥವಾ ಮಾಡಿಕೊಂಡ ವ್ಯಕ್ತಿಗಳು, ಆಯೋಜಕರು ಹಾಗೂ ಬಾಲ್ಯ ವಿವಾಹದಲ್ಲಿ ಭಾಗವಹಿಸಿದ ಪೂಜಾರಿ, ವಾದ್ಯ ನುಡಿಸಿದವರು, ಊಟ ತಯಾರಕರು ಹಾಗೂ ಅತಿಥಿಗಳು ಸಹ ಅಪರಾಧಿಗಳಾಗಿದ್ದು, ಇದು ಶಿಕ್ಷಾರ್ಹ ಅಪರಾಧ. ಇದಕ್ಕೆ ಎರಡು ವರ್ಷ ಜೈಲು ಮತ್ತು ರೂ.1 ಲಕ್ಷ ದಂಡ ವಿಧಿಸಲಾಗುತ್ತದೆ ಎಂದು ವಿವರಿಸಿದರು.  ಈ ಹಿಂದೆ ಕೊಪ್ಪಳ ಜಿಲ್ಲೆ ಬಾಲ್ಯ ವಿವಾಹ ಮಾಡುವ ಪ್ರಕರಣಗಳಲ್ಲಿ ಮೊದಲನೇ ಸ್ಥಾನದಲ್ಲಿತ್ತು.  ಆದರೆ ಇತ್ತೀಚೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಹಾಗೂ ಇನ್ನಿತರ ಹಲವಾರು ಇಲಾಖೆಗಳ ಕಾರ್ಯಾಚರಣೆಯ ಪರಿಣಾಮವಾಗಿ, ಕೊಪ್ಪಳ ಜಿಲ್ಲೆಯು ಬಾಲ್ಯ ವಿವಾಹಗಳನ್ನು ತಡೆಗಟ್ಟುವಲ್ಲಿ ಕರ್ನಾಟಕದಲ್ಲೇ ಮೊದಲನೇ ಸ್ಥಾನದಲ್ಲಿದೆ.  ಇಲಾಖೆ ಜೊತೆಗೆ ಶಿಕ್ಷಕರು, ಮಕ್ಕಳು ಕೈಜೋಡಿಸಿದಲ್ಲಿ ಬಾಲ್ಯ ವಿವಾಹ ಎಂಬ ಸಾಮಾಜಿಕ ಪಿಡುಗನ್ನು ಜಿಲ್ಲೆಯಿಂದ ತೊಲಗಿಸಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಟಗೇರಿ ಗ್ರಾ.ಪಂ. ಸದಸ್ಯ ನಾಗಯ್ಯ ಹಿರೇಮಠ ವಹಿಸಿದ್ದರು.  ಮಕ್ಕಳ ವಿಶೇಷ ಪೊಲೀಸ್ ಘಟಕದ ಬಸಪ್ಪ ಹಾದಿಮನಿ, ಅಂಗನವಾಡಿ ಮೇಲ್ವಿಚಾರಕಿ ಮಾಧವಿ ವೈದ್ಯ, ಕುಕನೂರು ಆಂಗ್ಲ ಪ್ರೌಢ ಶಾಲೆ ಮುಖ್ಯೋಪಾಧ್ಯಯ ಎ.ಪಿ. ಮುಧೋಳ, ಪ್ರಥಮ ದರ್ಜೆ ಕಾಲೇಜಿನ ಆಡಳಿತಾಧಿಕಾರಿ ಆರ್.ಪಿ. ರಾಜೂರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.  ಭರಮಪ್ಪ ಸಾಬಳ್ಳಿ ನಿರೂಪಿಸಿದರು.  ರೋಹಿಣಿ ಕೊಟಗಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ರವಿಕುಮಾರ ಪವಾರ ಸ್ವಾಗತಿಸಿದರು.  ರವಿ ಬಡಿಗೇರ ಕೊನೆಯಲ್ಲಿ ವಂದಿಸಿದರು.
Post a Comment