Friday, 24 March 2017

ಕನ್ನಡ ಕಟ್ಟುವ ಕಾಯಕಕ್ಕೆ ಕನ್ನಡಾಭಿಮಾನ ಬೆಳೆಸುವುದು ಅಗತ್ಯ : ಡಾ. ಮನು ಬಳಿಗಾರ್

ಕೊಪ್ಪಳ, ಮಾ.24 (ಕರ್ನಾಟಕ ವಾರ್ತೆ):   ಕನ್ನಡಿಗರಲ್ಲಿ ಅಭಿಮಾನದ ಕೊರತೆಯಿದ್ದು, ಕನ್ನಡ ಕಟ್ಟುವ ಕಾಯಕಕ್ಕೆ ಕನ್ನಡಾಭಿಮಾನವನ್ನು ಹೆಚ್ಚಿಸುವಂತಹ ಕಾರ್ಯ ನಿರಂತರ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಮನುಬಳಿಗಾರ್ ಹೇಳಿದರು.

    ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ವತಿಯಿಂದ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜ ಆವರಣದಲ್ಲಿನ ಅನ್ನದಾನಯ್ಯ ಪುರಾಣಿಕ್ ಮಹಾವೇದಿಕೆಯಲ್ಲಿ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದ್ದ ಕೊಪ್ಪಳ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೆಳನ ಉದ್ಘಾಟಿಸಿ ಮಾತನಾಡಿದರು.

    ಉತ್ತರ ಕರ್ನಾಟಕದ ಈ ಭಾಗವೇ ನಿಜವಾದ ತಿರುಳುಗನ್ನಡ ನಾಡು. ಇಲ್ಲಿನ ಜನ ಅತ್ಯಂತ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಇಲ್ಲಿಯ ಜನರು ಕನ್ನಡ, ಅಭಿಮಾನ, ಸಾಹಿತ್ಯ, ಭಾಷಾಭಿಮಾನದ ಬಗ್ಗೆ ತೋರುವ ಪ್ರೀತಿ ನೋಡಿದರೆ ನಮಗೆ ಹೆಮ್ಮೆ ಎನಿಸುತ್ತದೆ. ಬೇರೆ ಕಡೆ ಎಲ್ಲಿಯೂ ಇಷ್ಟೊಂದು ಕನ್ನಡದ ಬಗ್ಗೆ ಅಭಿಮಾನ ಕಾಣುತ್ತಿಲ್ಲ.  ಭಾಷೆ ಉಳಿದರಷ್ಟೆ ನಾವು ಉಳಿಯುತ್ತೇವೆ. ಮುಂದಿನ ಪೀಳಿಗೆಗೂ ನಾವು ಕನ್ನಡ ಭಾಷೆ ಉಳಿಸಿ, ಬೆಳೆಸಬೇಕಿದೆ. ನಮ್ಮ ಭಾಷೆ ಮೂಲಕ ದೇಶವನ್ನೆ ಗೆಲ್ಲುವ ಮನೋಭಾವ ಬೆಳೆಸಿಕೊಳ್ಳಬೇಕಿದೆ ಎಂದು ಡಾ. ಮನುಬಳಿಗಾರ್ ಹೇಳಿದರು.

       ದ್ರಾವಿಡ ಭಾಷೆಗಳ ಬೆಳವಣಿಗೆಗೆ ಕನ್ನಡ ಭಾಷೆಯೇ ಪೂರಕವಾಗಿತ್ತು.  ಒಂದನೇ ಶತಮಾನದಿಂದ ಹತ್ತನೆ ಶತಮಾನದ ಕಾಲಾವಧಿಯಲ್ಲಿ ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆ ಅತಿ ಹೆಚ್ಚು ಬಳಕೆಯಲ್ಲಿತ್ತು.  ಹೀಗಾಗಿ ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆ ಎಂಬುದಕ್ಕೆ ಒಂದನೇ ಶತಮಾನದಲ್ಲಿಯೇ ದೊರೆತ ಶಿಲಾ ಶಾಸನಗಳು ಸಾಕ್ಷಿಯಾಗಿವೆ.  ಸುಮಾರು ಒಂದು ಸಾವಿರ ವರ್ಷಗಳ ಹಿಂದೆಯೇ ದಕ್ಷಿಣ ಭಾರತದ ವಿವಿಧ ಸ್ಥಳಗಳಲ್ಲ್ಲಿ ಕನ್ನಡ ಲಿಪಿ ಲಭ್ಯವಿದ್ದು, ಎಲ್ಲಾ ಲಿಪಿಗಳಲ್ಲಿ ಕನ್ನಡ ಲಿಪಿ ಶ್ರೇಷ್ಠವಾಗಿದೆ.  12ನೇ ಶತಮಾನ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಸುವರ್ಣಕಾಲವೆಂದೇ ಹೇಳಲಾಗಿದೆ.  ಶರಣರು ಕನ್ನಡ ಭಾಷೆಯ ಬೆಳವಣಿಗೆಗೆ ಮಹತ್ವವಾದ ಕೊಡುಗೆಯನ್ನು ನೀಡಿದ್ದಾರೆ.  ಕನ್ನಡ ನಾಡಿನ ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಮುಂತಾದ ಸ್ಮಾರಕಗಳು ಇಡಿ ವಿಶ್ವದಲ್ಲಿಯೇ ಹೆಚ್ಚಿನ ಪ್ರಸಿದ್ಧಿ ಪಡೆದಿವೆ.  ಇಮ್ಮಡಿ ಪುಲಕೇಶಿಯು ಉತ್ತರ ಭಾರತದ ರಾಜರುಗಳ  ಮೇಲೆ ದಾಳಿ ನಡೆಸಿ, ಅವರನ್ನು ಸೋಲಿಸಿ, ಪುನಾಃ ಅವರ ರಾಜ್ಯವನ್ನು ಅವರಿಗೆ ಒಪ್ಪಿಸಿ, ಮಾನವೀಯತೆ ಮೆರೆದಿರುವುದು ಇತಿಹಾಸದ ಪುಟಗಳಲ್ಲಿ ದಾಖಲೆಯಾಗಿದೆ.  ಕನ್ನಡದ ಸಂಗೀತಕ್ಕೆ ಕರ್ನಾಟಕದ ಕೊಡುಗೆ ಅಪಾರ, ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತದಲ್ಲಿ ಕನ್ನಡಿಗರೆ ಅತಿಹೆಚ್ಚಿನ ಪ್ರಖ್ಯಾತಿ ಪಡೆದಿದ್ದಾರೆ.  ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ, ಇನ್ಯಾವ ರಾಜ್ಯಕ್ಕೂ ಇಷ್ಟು ಪ್ರಶಸ್ತಿಗಳು ದೊರೆತಿಲ್ಲ.  ಶಿಲ್ಪಕಲೆಯಲ್ಲಿ ಗೊಮ್ಮಟೇಶ್ವರ ಪ್ರಖ್ಯಾತಿಯಲ್ಲಿದೆ.  ಆದ್ದರಿಂದ ಕನ್ನಡಿಗರಿಗೆ ಸರಿಸಾಟಿ ಯಾರು ಇಲ್ಲ.  ನಮ್ಮ ನಾಡು, ನೆಲ, ಜಲ, ಭಾಷೆ, ಸಂಸ್ಕøತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ.   ಇಂದಿನ ದಿನಮಾನಗಳಲ್ಲಿ ಇಂಗ್ಲೀಷ್ ಭಾಷೆಯ ವ್ಯಾಮೋಹಕ್ಕೆ ಸಿಲುಕಿ, ಕನ್ನಡ ಮರೆಯಾಗುತ್ತಿರುವ ಪರಿಸ್ಥಿತಿ ಬಂದಿದೆ. ಇಂಗ್ಲೀಷ್ ಮಾಧ್ಯಮದಲ್ಲಿಯೇ ಮಕ್ಕಳನ್ನು ಓದಿಸಿದರೆ ಅವರು ದೊಡ್ಡ ವಿಜ್ಞಾನಿ ಯಾಗಬಹುದು ಎಂಬ ತಪ್ಪು ಕಲ್ಪನೆಯಿಂದ ಪಾಲಕರು ತಮ್ಮ ಮಕ್ಕಳಿಗೆ ಇಂಗ್ಲೀಷ್ ಶಾಲೆಗಳಲ್ಲಿ ಓದಿಸುತ್ತಿದ್ದಾರೆ.  ಆದರೆ ಕನ್ನಡ ಮಾಧ್ಯಮದಲ್ಲಿಯೇ ಕಲಿತು ಭಾರತ ರತ್ನ ಪಡೆದ ಸರ್ ಎಂ.ವಿಶ್ವೇಶ್ವರಯ್ಯ ರಂತಹ ಮಹನಿಯರು ನಮಗೆ ಮಾದರಿ.  ಪಂಪ, ರನ್ನ, ಕುಮಾರವ್ಯಾಸ, ಮುಂತಾದ ಕವಿಗಳು ಕನ್ನಡದ ಆಸ್ತಿ.  ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡಿಗನಾಗಿರು ಎಂಬ ಹಿರಿಯರು ಹಾಕಿಕೊಟ್ಟಂತಹ ಹಾದಿಯಲ್ಲಿ ನಾವು ಸಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಡಾ. ಮನು ಬಳಿಗಾರ್ ಹೇಳಿದರು.

     ಕೊಪ್ಪಳ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೆಳನದ ಸರ್ವಾಧ್ಯಕ್ಷರಾದ ರಂ.ರಾ. ನಿಡಗುಂದಿ ಅವರ ಭಾಷಣದ ಆಶಯ ನುಡಿಗಳನ್ನು ಕಾರ್ಯಕ್ರಮದಲ್ಲಿ ವಾಚನ ಮಾಡಲಾಯಿತು.

    ಕೇಂದ್ರ ಸಂಘ ಸಂಸ್ಥೆ ಪ್ರತಿನಿಧಿ ಡಾ. ಶೇಖರಗೌಡ ಮಾಲಿಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಇದು ಕೊಪ್ಪಳ ಜಿಲ್ಲೆಯ ಐತಿಹಾಸಿಕ ಸಂಭ್ರಮ.  ಭಾಷೆಯನ್ನು ಹೆಚ್ಚು-ಹೆಚ್ಚು, ಬೆಳಸಿ, ಪೋಷಿಸಿದಾಗ ಮಾತ್ರ ಅದು ಬೆಳೆಯಲು ಸಾಧ್ಯವಾಗುತ್ತದೆ.  ಸರ್ಕಾರ ಕನ್ನಡ ಭಾಷೆಗೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದು, ಇನ್ನೂ ಹೆಚ್ಚಿನ ಒತ್ತು ನೀಡಬೇಕಾಗಿದೆ.  ಕೊಪ್ಪಳ ಜಿಲ್ಲೆ ಬರಪೀಡಿತ ಪ್ರದೇಶದವಾಗಿದ್ದು, ಈ ಸಮ್ಮೆಳನವನ್ನು ರೈತರಿಗಾಗಿ ಅರ್ಪಿಸಿದೆ, ಹಾಗೂ ರೈತರಿಗೆ ಹೆಚ್ಚು ಒತ್ತುಕೊಟ್ಟಿದೆ ಎಂದರು.
ಧ್ವಜಾರೋಹಣ : ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಬಿ. ನಾಗರಳ್ಳಿ ಅವರು ಬೆಳಿಗ್ಗೆ ರಾóಷ್ಟ್ರಧ್ವಜಾರೋಹಣವನ್ನು ನೆರೆವೇರಿಸಿದರು.  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳ ಅಧ್ಯಕ್ಷ ರಾಜಶೇಖರ ಅಂಗಡಿ ಪರಿಷತ್ ಧ್ವಜಾರೋಹಣ, ಹಾಗೂ ಯಲಬುರ್ಗಾ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಕ್ಷ್ಮಣ ಹಿರೇಮನಿ ಕನ್ನಡ ಧ್ವಜಾರೋಹಣವನ್ನು ನೆರೆವೇರಿಸಿದರು.  
ಭುವನೇಶ್ವರಿ ಮೆರವಣಿಗೆ : ಜಿ.ಪಂ. ಸದಸ್ಯೆ ಹೊಳಿಯಮ್ಮ ಎಸ್. ಪೊ.ಪಾಟೀಲ್ ಅವರು ಸಮ್ಮೇಳನ ಸರ್ವಾಧ್ಯಕ್ಷರ ನೇತೃತ್ವದ ಕನ್ನಡ ಭುವನೇಶ್ವರಿ ಮೆರವಣಿಗೆಗೆ ಚಾಲನೆ ನೀಡಿದರು.   ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು,  ಕರಡಿ ಮಜಲು, ಹಗಲು ವೇಷ, ಕೋಲಾಟ ತಂಡ, ಡೊಳ್ಳು ಕುಣಿತ, ನೃತ್ಯ,  ರಾಮ, ಲಕ್ಷಣ, ಹನುಮಂತ ಸೇರಿ ರಾಮಾಯಣ ತಂಡದ ಹಗಲುವೇಷಧಾರಿಗಳು ಮೆರವಣಿಗೆಯನ್ನು ಆಕರ್ಷಕಗೊಳಿಸಿದರು.  
    ಹಿರಿಯ ಸಾಹಿತಿ ರಂ.ರಾ. ನಿಡಗುಂದಿ ಅವರು ಸಮ್ಮೇಳದ ಅಧ್ಯಕ್ಷತೆಯನ್ನು ವಹಿಸಿದ್ದರು.  ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಕೆ.ಬಿ. ಬ್ಯಾಳಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳ ಅಧ್ಯಕ್ಷ ರಾಜಶೇಖರ ಅಂಗಡಿ, ಯಲಬುರ್ಗಾ ತಾಲೂಕ ಕನ್ನಡ ಸಾಹಿತ್ಯ ಸಮ್ಮೆಳ ಅಧ್ಯಕ್ಷ ಲಕ್ಷ್ಮಣ ಹಿರೇಮನಿ, ಯಕ್ಕಣ್ಣ ಯರಾಶಿ, ಈರಣ್ಣ ನಿಂಗೂಜಿ, ಶರಣೆಗೌಡರ, ಶಿವಪ್ಪ ಜೋಗಿ, ಷಣ್ಮುಕ ಬಳ್ಳಾರಿ, ನಜರಮೀಯಾ ಕುಷ್ಟಗಿ, ಹಿರೇವಂಕಲಕುಂಟಾ ಗ್ರಾ.ಪಂ. ಅಧ್ಯಕ್ಷ ಮಂಜುನಾಥ ಸಜ್ಜನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  ಆರಂಭದಲ್ಲಿ ಹಿರೇವಂಕಲಕುಂಟಾ ಶಾಲೆಯ ವಿದ್ಯಾಥಿಗಳಿಂದ ನಾಡಗೀತೆ, ಹಾಗೂ ಸದಾಶಿವ ಪಾಟೀಲ್ ತಂಡದಿಂದ ರೈತಗೀತೆ ನಡೆಯಿತು.  ಸಮಾರಂಭದಲ್ಲಿ ರೈತರಿಗೆ, ಎಲ್ಲಾ ಕಲಾವಿದರಿಗೆ ಸನ್ಮಾನಿಸಲಾಯಿತು.  ನಂತರ ವಿವಿಧ ಗೋಷ್ಠಿಗಳು ಜರುಗಿದವು.
Post a Comment