Thursday, 30 March 2017

ಅಂಬೇಡ್ಕರ್ ಹಾಗೂ ಜಗಜೀವನರಾಂ ಜನ್ಮದಿನಾಚರಣೆ : ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ


ಕೊಪ್ಪಳ, ಮಾ.30 (ಕರ್ನಾಟಕ ವಾರ್ತೆ): ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ. ಬಾಬು ಜಗಜೀವನರಾಂ ರವರ 110ನೇ ಜನ್ಮ ದಿನಾಚರಣೆ ಅಂಗವಾಗಿ ಏ. 03 ರಂದು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ರವರ 126ನೇ ಜನ್ಮದಿನಾಚರಣೆಯ ನಿಮಿತ್ಯ ಏ. 12 ರಂದು ಎರಡು ಹಂತದಲ್ಲಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
    ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಜ್ಯೂನಿಯರ್ ಹಾಗೂ ಸೀನಿಯರ್ ಎರಡು ವಿಭಾಗಗಳಲ್ಲಿ ಏರ್ಪಡಿಸಲಾಗುವುದು. ಬಾಬು ಜಗಜೀವನರಾಂ ಜಯಂತಿ ಅಂಗವಾಗಿ, ಏ. 03 ರಂದು ಬೆಳಿಗ್ಗೆ 11-00 ರಿಂದ 12-00 ರವರೆಗೆ ‘ಪ್ರಸ್ತುತ ಸಂದರ್ಭಕ್ಕೆ ಡಾ. ಬಾಬು ಜಗಜೀವನರಾಂ ಅವರ ಕೊಡುಗೆಗಳು’ ವಿಷಯದ ಕುರಿತು ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.  ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ  ಏ. 12 ರಂದು ಬೆಳಿಗ್ಗೆ 11-00 ರಿಂದ 12-00 ರವರೆಗೆ, ‘ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಭಾರತ’ ಎಂಬ ವಿಷಯದ ಬಗ್ಗೆ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ, ಹೀಗೆ ಎರಡು ಹಂತಗಳಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದ್ದು, ಪ್ರಥಮ ಬಹುಮಾನ 5000ರೂ. ಹಾಗೂ ದ್ವೀತಿಯ 2000ರೂ ಆಗಿದೆ.  25 ವರ್ಷಕ್ಕಿಂತ ಕಡಿಮೆ ಇರುವವರು ಜೂನಿಯರ್ ವಿಭಾಗದಲ್ಲಿ ಹಾಗೂ 25 ವರ್ಷಕ್ಕಿಂತ ಮೇಲ್ಪಟ್ಟವರು ಸೀನಿಯರ್ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು.  ಎರಡೂ ವಿಭಾಗಗಳಿಗೆ ಪ್ರತ್ಯೇಕ ಬಹುಮಾನ ನೀಡಲಾಗುವುದು. ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ತಮ್ಮ ವಯಸ್ಸಿಗೆ ಸಂಬಂಧಿಸಿದ ಯಾವುದಾದರೂ ಒಂದು ದಾಖಲೆಯನ್ನು ಕಡ್ಡಾಯವಾಗಿ ಹಾಜರುಪಡಿಸಿ, ಪಾಲ್ಗೊಳ್ಳಬಹುದು.  ಸರ್ಕಾರಿ/ಖಾಸಗಿ ಶಾಲೆ, ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಹಾಗೂ ಸರ್ಕಾರಿ ನೌಕರರು ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹರಲ್ಲ.  ಕೊಪ್ಪಳ ಜಿಲ್ಲೆಯ ಯಾವುದೇ ತಾಲೂಕುಗಳ ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment