Tuesday, 21 March 2017

ಎಸ್‍ಎಸ್‍ಎಲ್‍ಸಿ ಪರೀಕ್ಷೆ : ಪ್ರಶ್ನೆಪತ್ರಿಕೆಗಳ ಸುರಕ್ಷತೆಗೆ ಹೆಚ್ಚಿನ ನಿಗಾವಹಿಸಿ- ವೆಂಕಟರಾಜಾ


ಕೊಪ್ಪಳ ಮಾ. 21 (ಕ.ವಾ): ಜಿಲ್ಲೆಯಲ್ಲಿ ಮಾ. 30 ರಿಂದ ಏ. 12 ರವರೆಗೆ ನಡೆಯಲಿರುವ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆಗಳ ಭದ್ರತೆ  ಕುರಿತಂತೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು.  ಪರೀಕ್ಷಾ ಕಾರ್ಯದಲ್ಲಿ ಬೇಜವಾಬ್ದಾರಿತನ ತೋರುವವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಸಮರ್ಪಕವಾಗಿ ಕೈಗೊಳ್ಳಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.  ಈ ಬಾರಿ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಜಿಲ್ಲೆಯ 05 ಪರೀಕ್ಷಾ ಕೇಂದ್ರಗಳು ಇದುವರೆಗೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸದಿರುವುದು ಗಮನಕ್ಕೆ ಬಂದಿದ್ದು, ಮಾ. 30 ರ ಒಳಗಾಗಿ ಸಿಸಿ ಕ್ಯಾಮೆರಾ ಅಳವಡಿಕೆ ಪೂರ್ಣಗೊಳಿಸಬೇಕು.  ತಪ್ಪಿದಲ್ಲಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು.  ಈ ಬಾರಿ ಒಟ್ಟು 19289 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಇದಕ್ಕಾಗಿ ಒಟ್ಟು 59 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ರಾಜ್ಯದ ವಿವಿಧೆಡೆ ಪ್ರಶ್ನೆಪತ್ರಿಕೆಗಳ ಬಹಿರಂಗದ ಬಗ್ಗೆ ಇತ್ತೀಚೆಗೆ ಹಲವಾರು ಅಕ್ರಮಗಳು ನಡೆಯುತ್ತಿರುವ ಬಗ್ಗೆ ವರದಿಗಳು ಕೇಳಿಬರುತ್ತಿದ್ದು, ಪ್ರಶ್ನೆಪತ್ರಿಕೆಗಳ ಸುರಕ್ಷತೆ ಬಗ್ಗೆ ಅಧಿಕಾರಿಗಳು ಇಲಾಖೆಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸೂಕ್ತ ಆಸನ, ಗಾಳಿ, ಬೆಳಕು ಹಾಗೂ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇರಬೇಕು.  ಪರೀಕ್ಷೆ ಪ್ರಾರಂಭವಾದ ಬಳಿಕ ಕೊಠಡಿಯೊಳಗೆ ಮಾಧ್ಯಮದವರಿಗೆ ಪ್ರವೇಶ ನೀಡುವಂತಿಲ್ಲ ಆದರೆ ಪರೀಕ್ಷಾ ಕೇಂದ್ರದ ಹೊರಗಿನ ಫೋಟೋ ಅಥವಾ ಚಿತ್ರೀಕರಣ ನಡೆಸಬಹುದು ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಅದರಂತೆ ಕಾರ್ಯ ನಿರ್ವಹಿಸಬೇಕು. ಅಲ್ಲದೆ ಸೂಕ್ತ ಪೊಲೀಸ್ ಬಿಗಿ ಬಂದೋಬಸ್ತ್‍ಗೆ ಕ್ರಮ ಕೈಗೊಳ್ಳಬೇಕು.  ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಅಥವಾ ನಕಲಿಗೆ ಅವಕಾಶ ನೀಡದಂತೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಪರೀಕ್ಷೆ ನಡೆಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪರೀಕ್ಷಾ ಕೊಠಡಿಗೆ ಯಾರೂ ಕೂಡ ಮೊಬೈಲ್‍ನೊಂದಿಗೆ ಪ್ರವೇಶಿಸುವಂತಿಲ್ಲ.  ಪರೀಕ್ಷಾ ಕೇಂದ್ರದ ಮುಖ್ಯಸ್ಥರೂ ಕೂಡ, ತಮ್ಮ ಕಚೇರಿಯಲ್ಲಿ ಮಾತ್ರ ಮೊಬೈಲ್ ಬಳಸಬಹುದೇ ಹೊರತು, ಪರೀಕ್ಷಾ ಕೊಠಡಿಗೆ ಒಯ್ಯುವಂತಿಲ್ಲ.  ಜಾಗೃತ ದಳದವರೂ ಕೂಡ ಪರೀಕ್ಷಾ ಕೊಠಡಿಯೊಳಗೆ ಮೊಬೈಲ್‍ನೊಂದಿಗೆ ಪ್ರವೇಶಿಸುವಂತಿಲ್ಲ. ಈ ನಿರ್ದೇಶನವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಯಾವುದೇ ಪರೀಕ್ಷಾ ಅಕ್ರಮಗಳಿಗೆ ಅವಕಾಶ ಕೊಡುವುದು ಅಥವಾ ಸಹಕರಿಸುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.  ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೆ ಕ್ರಮ ವಹಿಸಬೇಕು.  ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿಗಳಿಗೆ ಪರೀಕ್ಷೆ ಮುಕ್ತಾಯವಾಗುವವರೆಗೂ ಯಾವುದೇ ಕಾರಣಕ್ಕೂ ರಜೆ ಮಂಜೂರು ಮಾಡುವಂತಿಲ್ಲ.  ತುರ್ತು ಸಂದರ್ಭದಲ್ಲಿ ಡಿಡಿಪಿಐ ಅವರು ಮಾತ್ರ ರಜೆ ಮಂಜೂರು ಮಾಡಬಹುದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ  ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಮಾತನಾಡಿ, ಕೇಂದ್ರ ಕಚೇರಿಯಿಂದ ಕೊಪ್ಪಳ ಜಿಲ್ಲೆಗೆ ಪ್ರಶ್ನೆಪತ್ರಿಕೆಗಳು ಬಂದ ಬಳಿಕ, ಸ್ವೀಕೃತಿ ಹಾಗೂ ವಿತರಣೆ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಚಿತ್ರೀಕರಿಸಬೇಕು.  ಪ್ರಶ್ನೆಪತ್ರಿಕೆಯ ಸಾಗಾಣಿಕೆ ಕಡ್ಡಾಯವಾಗಿ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಪೊಲೀಸ್ ಬಂದೋಬಸ್ತ್‍ನಲ್ಲಿಯೇ ಆಗಬೇಕು.  ಪ್ರಶ್ನೆಪತ್ರಿಕೆ ಇರುವ ಸ್ಥಳದಿಂದ, ಪರೀಕ್ಷಾ ಕೇಂದ್ರಕ್ಕೆ ಇರುವ ದೂರಕ್ಕೆ ಅನುಗುಣವಾಗಿ, ಸಾಕಷ್ಟು ಮುಂಚಿತವಾಗಿ ವಾಹನ ಹೊರಟು, ನಿಗದಿತ ಸಮಯಕ್ಕೂ ಮುನ್ನ ಪರೀಕ್ಷಾ ಕೇಂದ್ರ ತಲುಪುವ ರೀತಿ ಕ್ರಮ ಕೈಗೊಳ್ಳುವ ಸಂಪೂರ್ಣ ಹೊಣೆಗಾರಿಕೆ ಮಾರ್ಗಾಧಿಕಾರಿಗಳಿಗೆ ನೀಡಲಾಗಿದೆ.  ಜಿಲ್ಲೆಯಲ್ಲಿ ಕೊಪ್ಪಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಭಾಗ್ಯನಗರದ ಸರ್ಕಾರಿ ಪ.ಪೂ. ಕಾಲೇಜು ಪರೀಕ್ಷಾ ಕೇಂದ್ರವನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರವನ್ನಾಗಿ ಗುರುತಿಸಲಾಗಿದ್ದು, ಇಲ್ಲಿಗೆ ಹೆಚ್ಚುವರಿಯಾಗಿ ಸ್ಥಾನಿಕ ಜಾಗೃತ ದಳ ಹಾಗೂ ಪೊಲೀಸ್ ಬಂದೋಬಸ್ತ್ ನೇಮಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
     ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜಿಲ್ಲಾ ನೋಡಲ್ ಅಧಿಕಾರಿ ರಾಹತ್ ನವಾಜ್ ಖಾನಂ ಅವರು ಪರೀಕ್ಷೆಯ ಕುರಿತು ಸಭೆಗೆ ವಿವರಣೆ ನೀಡಿ, ಈ ವರ್ಷ ಒಟ್ಟು 17995 ರೆಗ್ಯುಲರ್ ವಿದ್ಯಾರ್ಥಿಗಳು, 703 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 591 ಖಾಸಗಿ ಅಭ್ಯರ್ಥಿಗಳು ಹೀಗೆ ಒಟ್ಟಾರೆ  19289 ವಿದ್ಯಾರ್ಥಿಗಳು  ಪರೀಕ್ಷೆಗೆ ಹಾಜರಾಗಲಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ 5431, ಗಂಗಾವತಿ-5483, ಕುಷ್ಟಗಿ-3779 ಮತ್ತು ಯಲಬುರ್ಗಾ ತಾಲೂಕಿನಲ್ಲಿ 3302 ಸೇರಿದಂತೆ ಒಟ್ಟು 17995 ರೆಗ್ಯುಲರ್ ವಿದ್ಯಾರ್ಥಿಗಳಿದ್ದಾರೆ.  ಕೊಪ್ಪಳ-20, ಗಂಗಾವತಿ-19, ಕುಷ್ಟಗಿ-08 ಮತ್ತು ಯಲಬುರ್ಗಾ ತಾಲೂಕಿನಲ್ಲಿ 12 ಸೇರಿದಂತೆ ಒಟ್ಟು 59 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ಪರೀಕ್ಷಾ ನಕಲು ತಡೆಗೆ ರಾಜ್ಯ ಮಟ್ಟದಿಂದ ಜಾಗೃತ ದಳ ಆಗಮಿಸಲಿದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ ಜಾಗೃತ ದಳ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ತಾಲೂಕು ಮಟ್ಟದ ಜಾಗೃತ ದಳ ರಚಿಸಲಾಗಿದೆ.  ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ರವಾನೆಗಾಗಿ ಒಟ್ಟು 22 ಮಾರ್ಗಗಳನ್ನು ನಿಗದಿ ಮಾಡಲಾಗಿದ್ದು, ಎಲ್ಲ ಮಾರ್ಗಗಳಿಗೆ ಪ್ರತ್ಯೇಕ ವಾಹನ ಬಳಸಲಾಗುವುದು.  ವಿದ್ಯಾರ್ಥಿಗಳು ಮೊಬೈಲ್ ಅಥವಾ ಕ್ಯಾಲುಕುಲೇಟರ್ ಅನ್ನು ಪರೀಕ್ಷಾ ಕೊಠಡಿಗೆ ತರುವಂತಿಲ್ಲ ಎಂದರು.
     ಸಭೆಯಲ್ಲಿ  ಸರ್ವಶಿಕ್ಷಣ ಅಭಿಯಾನ ಉಪಸಮನ್ವಯಾಧಿಕಾರಿ ವೆಂಕಟೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಖಜಾನೆ ಇಲಾಖೆ ಅಧಿಕಾರಿ ಕಳ್ಳೇರ್,  ಸೇರಿದಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಶಾಲಾ ಮುಖ್ಯಸ್ಥರು ಭಾಗವಹಿಸಿದ್ದರು.
ಫೋಟೋ ಕಳುಹಿಸಿದೆ.
Post a Comment