Tuesday, 28 March 2017

ಮಾಧ್ಯಮಗಳಿಗೆ ಸ್ವಯಂ ನಿಯಂತ್ರಣ ಮಾರ್ಗಸೂಚಿ ರಚನೆ ಸೂಕ್ತ- ಬಸವರಾಜ ರಾಯರಡ್ಡಿ ಸಲಹೆ

ಕೊಪ್ಪಳ ಮಾ. 28 (ಕರ್ನಾಟಕ ವಾರ್ತೆ): ಮಾಧ್ಯಮಗಳ ನಿಯಂತ್ರಣಕ್ಕೆ ಸದನ ಸಮಿತಿ ರಚನೆಯ ಬದಲಿಗೆ ಮಾಧ್ಯಮಗಳು ಸ್ವಯಂ ನಿಯಂತ್ರಣ ವಿಧಿಸಬಲ್ಲ ಆಚಾರ ಸಂಹಿತೆ ರೂಪಿಸಿಕೊಳ್ಳುವುದು ಅಥವಾ ಮಾಧ್ಯಮಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ, ಮಾರ್ಗಸೂಚಿಗಳನ್ನು ರಚಿಸುವುದು ಸೂಕ್ತ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಿಗೆ ಪತ್ರ ಬರೆದು ಕೋರಿಕೆ ಸಲ್ಲಿಸಿದ್ದಾರೆ.
     ರಾಜ್ಯ ವಿಧಾನಸಭೆಯಲ್ಲಿ ಮಾಧ್ಯಮಗಳ ನಿಯಂತ್ರಣ ಕುರಿತಂತೆ ಸದನ ಸಮಿತಿ ರಚಿಸಬೇಕೆಂಬ ಬಗ್ಗೆ ಇತ್ತೀಚೆಗೆ ಚರ್ಚೆಯಾಗಿದ್ದು, ಮಾಧ್ಯಮಗಳ ಮೇಲೆ ಸೂಕ್ತ ಕಡಿವಾಣ ಹೇರುವಂತಹ ಕ್ರಮಗಳನ್ನು ಶಿಫಾರಸ್ಸು ಮಾಡಲು ಸದನ ಸಮಿತಿ ರಚಿಸಬೇಕೆಂದು ಸಭಾಧ್ಯಕ್ಷರಿಗೆ ಒತ್ತಾಯಿಸುವುದರಿಂದ, ಚರ್ಚೆಯ ದಿನದಂದು ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಾಗದ ಕಾರಣಕ್ಕಾಗಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಿಗೆ ಪತ್ರ ಬರೆದು ಸಲಹೆ ನೀಡಿದ್ದಾರೆ.
     ಪತ್ರಿಕಾ ಸ್ವಾತಂತ್ರ್ಯವೇ ಪ್ರಜಾಪ್ರಭುತ್ವದ ಜೀವಾಳ.  ಯಾವುದೇ ಕಾರಣಕ್ಕೂ ಪತ್ರಿಕೆಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಚಕಾರ ತರುವಂತಹ ಕ್ರಮಕ್ಕೆ ಜನಪ್ರತಿನಿಧಿಗಳಾದ ನಾವು ಕೈ ಹಾಕಬಾರದು.  ನಮ್ಮ ಸಂವಿಧಾನದ ಅನುಬಂಧ 19 ರಲ್ಲಿ ನೀಡಲಾದ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳೆಂಬ ಮೂಲಭೂತ ಹಕ್ಕುಗಳ ವ್ಯಾಪ್ತಿಯಲ್ಲಿಯೇ ಪತ್ರಿಕಾ ಸ್ವಾತಂತ್ರ್ಯವನ್ನು ಅನುಗ್ರಹಿಸಲಾಗಿದೆ.  ಹಾಗೆಯೇ ಓರ್ವ ಸಾಮಾನ್ಯ ಪ್ರಜೆಗೆ ಲಭ್ಯವಿರುವಷ್ಟೇ ಸ್ವಾತಂತ್ರ್ಯವನ್ನು ಒಂದು ಪತ್ರಿಕಾ ಮಾಧ್ಯಮಕ್ಕೆ ಅಥವಾ ಓರ್ವ ಪತ್ರಕರ್ತನಿಗೆ ನೀಡಲಾಗಿದ್ದು, ಇದನ್ನು ಯಾರೂ ದುರ್ಬಳಕೆ ಮಾಡಿಕೊಳ್ಳದಂತೆ ಹಲವು ನಿರ್ಬಂಧಗಳನ್ನು ಸಹ ವಿಧಿಸಲಾಗಿದೆ.  ಸಂವಿಧಾನದ 44ನೇ ತಿದ್ದುಪಡಿಯ ಮೂಲಕ ಅಳವಡಿಸಲಾದ ಅನುಬಂಧ 361ಎ ಅಡಿಯಲ್ಲಿ ಸುದ್ದಿ ಮಾಧ್ಯಮಗಳ ಮೇಲೆ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಸಕಾರಣೀಯವಾದ ನಿರ್ಬಂಧಗಳನ್ನು ವಿಧಿಸುವ ಅಧಿಕಾರ ಸರ್ಕಾರಕ್ಕಿದೆ.  ಆದರೆ, ಯಾವುದೇ ಕಾರಣಕ್ಕೂ (ತುರ್ತು ಪರಿಸ್ಥಿತಿ ಹೊರತುಪಡಿಸಿ) ಪತ್ರಿಕಾ ಸ್ವಾತಂತ್ರ್ಯ ಮೊಟಕುಗೊಳಿಸುವಂತಹ ಯಾವುದೇ ಅಧಿಕಾರವನ್ನು ರಾಜ್ಯಾಂಗದಲ್ಲಿ ನೀಡಿಲ್ಲ.  ಹಾಗೆಂದ ಮಾತ್ರಕ್ಕೆ ಕಳೆದ ಮಾ. 23 ರಂದು ಸದನದಲ್ಲಿ ಪಕ್ಷಬೇಧವಿಲ್ಲದೆ ಹಲವು ಶಾಸಕರು ವ್ಯಕ್ತಪಡಿಸಿದ ನೋವು, ಅಸಹಾಯಕತೆ ಮತ್ತು ಆಕ್ರೋಶಭರಿತ ಭಾವನೆಗಳು ತಪ್ಪು ಎಂದು ಹೇಳುತ್ತಿಲ್ಲ.  ಮಾಧ್ಯಮಗಳ ಒಂದು ವಲಯದಲ್ಲಿ ಈ ರೀತಿ ಆಧಾರ ರಹಿತವಾದ ಹಾಗೂ ತೇಜೋವಧೆಯ ಉದ್ದೇಶದ ಅಭಿಪ್ರಾಯಗಳು ಆಗಾಗ್ಗೆ ಪ್ರಕಟಗೊಳ್ಳುತ್ತಿರುವುದನ್ನು ತಾವೂ ಸಹ ಖುದ್ದು, ಗಮನಿಸಿ, ಬೇಸರಿಸಿಕೊಂಡಿದ್ದು ಇದೆ.  ರಾಜಕಾರಣಕ್ಕೂ ಮತ್ತು ಮಾಧ್ಯಮ ರಂಗಕ್ಕೂ ಇರುವ ಅವಿನಾಭಾವ ಸಂಬಂಧವನ್ನು ಆರೋಗ್ಯಕರವಾಗಿ ಪೋಷಿಸಿಕೊಂಡು ಹೋಗುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇರುವವರೆಲ್ಲರ ಆದ್ಯ ಕರ್ತವ್ಯ ಎಂದು ಭಾವಿಸುತ್ತೇವೆ.  ಇಂದಿನ ದಿನಮಾನಗಳಲ್ಲಿ ಸಾರ್ವಜನಿಕ ಜೀವನದ ಆದರ್ಶಯುತ ಮೌಲ್ಯಗಳು ಕುಸಿಯುತ್ತಾ ಸಾಗಿರುವುದರಿಂದ, ರಾಜಕಾರಣದಲ್ಲಾದಂತೆ ಪತ್ರಿಕಾ ರಂಗದಲ್ಲಿ ಸಹ ವ್ಯಕ್ತಿಗತವಾದ ದ್ವೇಷ, ಪೂರ್ವಾಗ್ರಹ ಮತ್ತು ಪ್ರತೀಕಾರದಂತಹ ಅನಪೇಕ್ಷಣೀಯ ಅಂಶಗಳು ಪ್ರವೇಶಿಸಿರುವುದು ಸಹಜವಾಗಿದೆ.  ಆದರೆ ಅಂತಹ ಅನಿಷ್ಟಕಾರಿ ಪ್ರವೃತ್ತಿಗಳು ತೀರ ವಿರಳವೆನ್ನಬಹುದಾದ ಒಂದು ಸಣ್ಣ ಗುಂಪಿನಲ್ಲಿ ಮಾತ್ರ ಗೋಚರಿಸುತ್ತಿದ್ದು, ಉಳಿದಂತೆ ಬಹುಪಾಲು ಪತ್ರಿಕೆಗಳು ಹಾಗೂ ದೃಶ್ಯವಾಹಿನಿಗಳು ಎಂದಿನಂತೆ ಶ್ರದ್ಧೆಯಿಂದ ತಮ್ಮ ವೃತ್ತಿ ಧರ್ಮವನ್ನು ಎತ್ತಿ ಹಿಡಿಯುತ್ತಲೇ ಬಂದಿರುವುದನ್ನು ನಾವು ಗೌರವಿಸಲೇಬೇಕಿದೆ.  ಜನಪ್ರತಿನಿಧಿಗಳ ಕುರಿತು ಆಧಾರರಹಿತವಾದ, ಕಪೋಲಕಲ್ಪಿತ ಹಾಗೂ ದುರುದ್ದೇಶಪೂರಿತ ವರದಿ ಅಥವಾ ಅಭಿಪ್ರಾಯ ಅಥವಾ ಟೀಕೆ ಟಿಪ್ಪಣಿಗಳು ಬಿತ್ತರಿಸಲ್ಪಟ್ಟಲ್ಲಿ ಅಂತಹ ಸಂಸ್ಥೆ ಮತ್ತು ಪತ್ರಕರ್ತರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ, ಕಾನೂನಾತ್ಮಕವಾಗಿ ಹೋರಾಡುವ ಅವಕಾಶ ಇದ್ದೇ ಇದೆ.  ಹಾಗೆಯೇ ನೇರವಾಗಿ ಭಾರತೀಯ ಪತ್ರಿಕಾ ಮಂಡಳಿ (ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ) ಎಂಬ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ ಕ್ರಮ ಜರುಗಿಸಬಹುದಾದ ಪರ್ಯಾಯ ಮಾರ್ಗವೂ ಇದೆ.  ಸಾರ್ವಜನಿಕ ರಂಗದಲ್ಲಿರುವ ಚುನಾಯಿತ ಪ್ರತಿನಿಧಿಗಳು ತಮ್ಮ ಖಾಸಗಿ ಬದುಕು ಮತ್ತು ಬಹಿರಂಗ ಚಟುವಟಿಕೆಗಳಲ್ಲಿ ನಾಗರಿಕ ಸಮಾಜ ಅಪೇಕ್ಷಿಸುವ ಸಭ್ಯತೆ, ಸೌಜನ್ಯ ಮತ್ತು ವಿನಯವಂತಿಕೆಯ ಕಟ್ಟುಪಾಡುಗಳನ್ನು ಆದಷ್ಟು ಮಟ್ಟಿಗೆ ಪಾಲಿಸಿಕೊಂಡು ಬರಬೇಕಾದದ್ದು ಅನಿವಾರ್ಯ.  ಆದರೂ ಮಾನವ ಸಹಜ ಗುಣದೋಷಗಳು ಕಂಡುಬಂದಲ್ಲಿ, ಅವುಗಳನ್ನು ಸಮಯೋಚಿತವಾಗಿ ಎತ್ತಿ ಹೇಳಿ ತಿದ್ದುವುದು ಮತ್ತು ಎಚ್ಚರಿಕೆ ನೀಡುವುದು ಪತ್ರಿಕೆಗಳ ಕರ್ತವ್ಯವೇ ಆಗಿದೆ.  ಇದೇ ರೀತಿ ಪತ್ರಿಕೆಗಳು ಮತ್ತು ಪತ್ರಕರ್ತರು ಸಹ ನಾಗರಿಕ ಬದುಕಿನ ಸಭ್ಯತೆಯ ಎಲ್ಲೆ ಮೀರದಂತಹ ಪದಬಳಕೆ ಮತ್ತು ಪರಿಭಾಷೆಯನ್ನು ರೂಢಿಸಿಕೊಳ್ಳುವುದು ಅನಿವಾರ್ಯವಾಗಿದೆ.  ಆದ್ದರಿಂದ ಮಾಧ್ಯಮಗಳನ್ನು ನಿಯಂತ್ರಿಸುವ ಸದನ ಸಮಿತಿ ರಚನೆಯ ನಿರ್ಧಾರವನ್ನು ಕೈಬಿಟ್ಟು, ಸೌಹಾರ್ದಯುತವಾದ ಪರಿಹಾರ ಕಂಡುಕೊಳ್ಳಬೇಕಾಗಿದೆ.  ಆದ್ದರಿಂದ ಸಭಾಧ್ಯಕ್ಷರು, ರಾಜ್ಯದ ಪ್ರಮುಖ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಹಿರಿಯ ಸಂಪಾದಕರಿಗೆ ಸದನದ ಸದಸ್ಯರ ಭಾವನೆಗಳನ್ನು ಮನದಟ್ಟು ಮಾಡಿಕೊಟ್ಟು, ಮಾಧ್ಯಮ ವೃತ್ತಿ ನಿರತ ಸಹದ್ಯೋಗಿಗಳಿಗೆ ಒಂದು ಸ್ವಯಂ ನಿಯಂತ್ರಣ ವಿಧಿಸಬಲ್ಲ ಆಚಾರ ಸಂಹಿತೆಯನ್ನು ರೂಪಿಸುವಂತೆ ಸೂಚಿಸುವುದು.  ಅಥವಾ ರಾಜ್ಯದ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಹಿರಿಯ ಸಂಪಾದಕರುಗಳನ್ನು ಆಹ್ವಾನಿಸಿ, ಒಂದು ಸಮಾಲೋಚನಾ ಸಭೆಯನ್ನು ಜರುಗಿಸುವುದು.  ಅಲ್ಲಿ ವಿಸ್ತøತವಾದ ಚರ್ಚೆಯ ಮೂಲಕ ಮುಂಬರುವ ದಿನಗಳಲ್ಲಿ ಸುದ್ದಿ-ಮಾಧ್ಯಮಗಳಲ್ಲಿ ಬಳಸಲಾಗುವ ಭಾಷೆ ಮತ್ತು ಅನುಸರಿಸಲಾಗುವ ಧೋರಣೆಯ ಕುರಿತು ಸರ್ವಸಮ್ಮತವೆನಿಸುವ ಮಾರ್ಗಸೂಚಿಗಳನ್ನು ರಚಿಸುವುದು ಸೂಕ್ತ ಎಂಬುದಾಗಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಿಗೆ ಪತ್ರ ಬರೆದು ಕೋರಿದ್ದಾರೆ.
Post a Comment