Wednesday, 8 March 2017

ಮಹಿಳೆಯರ ಆಡಳಿತದಲ್ಲಿ ಪುರುಷರ ಹಸ್ತಕ್ಷೇಪ ಸರಿಯಲ್ಲ- ದೊಡ್ಡನಗೌಡ ಪಾಟೀಲ್


ಕೊಪ್ಪಳ, ಮಾ. 08 (ಕರ್ನಾಟಕ ವಾರ್ತೆ): ಮಹಿಳಾ ಜನಪ್ರತಿನಿಧಿಗಳ ಗಂಡಂದಿರು, ಆಡಳಿತ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಹೇಳಿದರು.

     `ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಕೊಪ್ಪಳ ಜಿಲ್ಲಾ ಮಟ್ಟದ ಸ್ವಚ್ಛ ಶಕ್ತಿ ಸಪ್ತಾಹ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

     ಮಹಿಳಾ ಸಮಾನತೆಯ ಉದ್ದೇಶದಿಂದ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳು, ಪಂಚಾಯತಿಗಳಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿಯನ್ನು ಒದಗಿಸಿದೆ.  ಹೀಗಾಗಿ ಹಲವೆಡೆ ಮಹಿಳೆಯರೇ ಜನಪ್ರತಿನಿಧಿಗಳಾಗಿದ್ದಾರೆ.  ನಗರ ಸ್ಥಳೀಯ ಸಂಸ್ಥೆಗಳು, ಪಂಚಾಯತಿಗಳಲ್ಲಿ ಮಹಿಳೆಯರೇ ಅಧ್ಯಕ್ಷರಾಗಿದ್ದಾರೆ.  ಇದು ನಮ್ಮ ಕಾನೂನು ಮಹಿಳೆಯರಿಗೆ ನೀಡಿರುವ ಅವಕಾಶ.  ಆದಾಗ್ಯೂ ಆಡಳಿತ ಕಾರ್ಯಗಳಲ್ಲಿ ಗಂಡಂದಿರು ಹಸ್ತಕ್ಷೇಪ ಮಾಡುತ್ತಿರುವುದು ಸಾಮಾನ್ಯವಾಗಿದ್ದು, ಇದು ಸಮಂಜಸವಲ್ಲ.  ಪುರುಷರಿಗಿಂತ ಮಹಿಳೆಯರು ಉತ್ತಮ ಆಡಳಿತ ನಡೆಸಬಲ್ಲರು ಎಂಬುದಕ್ಕೆ ನಮ್ಮ ದೇಶವೇ ಉದಾಹರಣೆಯಾಗಿದೆ.  ಕೊಪ್ಪಳ ಜಿಲ್ಲೆಯ ಈಗಿನ ಜಿಲ್ಲಾಧಿಕಾರಿ ಮಹಿಳೆಯೇ ಆಗಿದ್ದರೂ, ಹಿಂದಿನ ಎಲ್ಲ ಜಿಲ್ಲಾಧಿಕಾರಿಗಳಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಪುರುಷರ ಹಸ್ತಕ್ಷೇಪ, ಮಹಿಳೆಯರ ಆತ್ಮಸ್ಥೈರ್ಯ ಕುಸಿಯಲು ಕಾರಣವಾಗುತ್ತದೆ.  ಮಹಿಳಾ ಸಮಾನತೆಗಾಗಿ 12 ನೇ ಶತಮಾನದಲ್ಲಿಯೇ, ಬಸವಣ್ಣನವರು ಹೋರಾಟದ ಕಿಚ್ಚು ಹಚ್ಚಿದ್ದರು.  ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯರು, ಪುರುಷ ಪ್ರಧಾನ ಸಮಾಜದಲ್ಲಿ ತಮ್ಮ ಹಕ್ಕಿಗಾಗಿ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ.  12ನೇ ಶತಮಾನದಲ್ಲಿ ಬಸವಣ್ಣನವರು ಕಂಡಂತಹ ಕನಸು, ಈಗ ತಾನೇ ನನಸಾಗುವತ್ತ ಸಾಗಿದೆ.  ಮಹಿಳೆಯರು ರಾಜಕೀಯ, ಸಾಮಾಜಿಕ, ಆರ್ಥಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ.  ಪುರುಷರೂ ಕೂಡ ಸಂಕುಚಿತ ಮನೋಭಾವ ತೊರೆಯಬೇಕು.  ಮಹಿಳಾ ಸಮಾನತೆಯನ್ನು ಗೌರವಿಸಬೇಕು.  ಮಹಿಳೆಯರು ಎಲ್ಲ ಬಗೆಯ ಅಳುಕನ್ನು ತೊರೆದು, ಸ್ವಾಭಿಮಾನದಿಂದ ಬಾಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಅವರು ಹೇಳಿದರು.
     ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ, ಮನೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲ ಮಹಿಳೆಯರು, ಆಡಳಿತವನ್ನೂ ಕೂಡ ಉತ್ತಮವಾಗಿ ನಿಭಾಯಿಸಬಲ್ಲ ಸಾಮಥ್ರ್ಯ ಹೊಂದಿರುತ್ತಾರೆ.  ಮನೆಯ ಪ್ರತಿಯೊಬ್ಬ ಸದಸ್ಯರ ಜವಾಬ್ದಾರಿಯನ್ನು ಹೊತ್ತು ಅವರ ಬೇಕು, ಬೇಡಗಳನ್ನು ತಿಳಿದುಕೊಳ್ಳುವ ಸಾಮಥ್ರ್ಯವಿರುವ ಮಹಿಳೆ, ತನ್ನ ಬಗ್ಗೆ ಹೆಚ್ಚು ಆಲೋಚಿಸುವುದಿಲ್ಲ.  ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪಾತ್ರ ಇರುತ್ತದೆ ಎಂಬ ಮಾತು ಹಿಂದಿನಿಂದಲೂ ರೂಢಿಯಲ್ಲಿದೆ.  ಈ ಮಾತನ್ನು ಬದಲಾಯಿಸುವ ಕಾಲ ಬಂದಿದೆ.   ಮಹಿಳೆಯರು ಹಿಂದೆ ಉಳಿದಿದ್ದು, ಇನ್ನು ಸಾಕು.  ಯಶಸ್ವಿಯ ಪಾತ್ರವನ್ನು ಮಹಿಳೆಯರೇ ಮುಂಚೂಣಿಯಲ್ಲಿದ್ದು ನಿರ್ವಹಿಸುವ ಕಾಲ ಇದೀಗ ಬಂದಿದೆ.  ಮಹಿಳೆಯರನ್ನು ಗೌರವಿಸುವ ಸಂಸ್ಕøತಿ ಮನೆಯಿಂದಲೇ ಪ್ರಾರಂಭವಾಗಬೇಕು.  ಆಗ ಮಾತ್ರ ಸಮಾಜದಲ್ಲೂ ಮಹಿಳೆಯರನ್ನು ಗೌರವಿಸುವ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿದರು.

     ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಮಾತನಾಡಿ, ಪುರುಷ ಪ್ರಧಾನವಾಗಿರುವ ನಮ್ಮ ದೇಶದಲ್ಲಿ, ಯಾವುದೇ ಬಗೆಯ ಕ್ಷೇತ್ರವಿರಲಿ, ಅದರಲ್ಲಿ ಉತ್ತಮ ಸಾಧನೆ ತೋರಿದವರು, ಮಹಿಳೆಯರೇ ಇದ್ದಾರೆ.  ಕ್ರೀಡಾ ಕ್ಷೇತ್ರ, ವಿಜ್ಞಾನ ಕ್ಷೇತ್ರ, ರಾಜಕೀಯ ಕ್ಷೇತ್ರ ಹೀಗೆ ಎಲ್ಲ ರಂಗಗಳಲ್ಲೂ ಪುರುಷರು ಮಾಡದ ಸಾಧನೆಯನ್ನು ಮಹಿಳೆಯರೇ ಸಾಧಿಸಿದ್ದಾರೆ.  ಸ್ತ್ರೀಶಕ್ತಿಗೆ ಮಿಗಿಲಾದ ಶಕ್ತಿ ಜಗತ್ತಿನಲ್ಲಿ ಇನ್ನೊಂದಿಲ್ಲ ಎಂದರು.
     ಜಿಲ್ಲಾ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ್ ಅವರು ಮಾತನಾಡಿ, ಮಹಿಳೆಯರನ್ನು ಗೌರವಿಸುವ ಕಡೆ, ದೇವೆತೆಗಳು ನೆಲೆಸುತ್ತಾರೆ.  ತೊಟ್ಟಿಲು ತೂಗುವ ಕೈ, ಜಗತ್ತನ್ನೂ ತೂಗಬಲ್ಲದು ಎನ್ನುವ ಮಾತು ಜನಪದರಲ್ಲಿದೆ.  ಮಹಿಳೆಯರಿಗೆ ಗೌರವ ಕೊಡುವುದರ ಜೊತೆಗೆ, ಯಾವುದೇ ಕಾರ್ಯವನ್ನು ಮಹಿಳೆ ಸಮರ್ಥವಾಗಿ ನಿರ್ವಹಿಸಬಲ್ಲಳು ಎಂಬುದಕ್ಕೆ ಈ ಮಾತುಗಳೇ ನಿದರ್ಶನವಾಗಿದೆ.  ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮನೆಗಳಲ್ಲಿ ಹೆಚ್ಚಿನ ಆದ್ಯತೆ ಕೊಡಿ ಎಂದು ಅವರು ಮನವಿ ಮಾಡಿದರು.
     ಸ್ವಚ್ಛ ಶಕ್ತಿ ಸಪ್ತಾಹದ ಅಂಗವಾಗಿ ಜಿಲ್ಲೆಯಲ್ಲಿ ಮಹಿಳೆಯರ ಆರೋಗ್ಯ, ನೈರ್ಮಲ್ಯ ಜಾಗೃತಿ ವಿಷಯದಲ್ಲಿ ಉತ್ತಮ ಸಾಧನೆ ತೋರಿರುವ ಜಿಲ್ಲೆಯ ವಿವಿಧ ಗ್ರಾ.ಪಂ. ಗಳ ಮಹಿಳಾ ಅಧ್ಯಕ್ಷರು, ಪಿಡಿಓ ಗಳು ಹಾಗೂ ಗ್ರಾಮೀಣ ಮಹಿಳೆಯರಿಗೆ ಅಲ್ಲದೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
     ಕೊಪ್ಪಳ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನ ಉಪ ಪ್ರಾಚಾರ್ಯರಾದ ಡಾ. ಭಾಗ್ಯಜ್ಯೋತಿ ಬಸವರಾಜ ಅವರು ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದರು.  ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದ್ರಿ, ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮಪ್ಪ ಅಗಸಿಮುಂದಿನ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.  ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. 
Post a Comment