Friday, 10 March 2017

ಬಹದ್ದೂರಬಂಡಿ : ಕೂಲಿಕಾರರ ವೈಯಕ್ತಿಕ ಬ್ಯಾಂಕ್ ಖಾತೆ ತೆರೆಯುವ ಅಭಿಯಾನ ಪ್ರಾರಂಭ


ಕೊಪ್ಪಳ, ಮಾ.10 (ಕರ್ನಾಟಕ ವಾರ್ತೆ): ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ತಾ.ಪಂ. ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ ಕೊಪ್ಪಳ ಶಾಖೆ ಇವರ ಸಹಯೊಗದಲ್ಲಿ ಬಹದ್ದೂರಬಂಡಿ ಗ್ರಾಮ ಪಂಚಾಯತಿಯ ಆವರಣದಲ್ಲಿ ಕೂಲಿಕಾರರ ವೈಯಕ್ತಿಕ ಬ್ಯಾಂಕ್ ಖಾತೆ ತೆರೆಯುವ ಅಭಿಯಾನವನ್ನು ಗುರುವಾರದಂದು ಪ್ರಾರಂಭಿಸಲಾಯಿತು.

ಜಿಲ್ಲಾ ಸಹಾಯಕ ಸಮನ್ವಯ ಅಧಿಕಾರಿ ಮಹಾಂತಸ್ವಾಮಿ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನಿರ್ವಹಿಸುವ ಕೂಲಿಕಾರರ ವೈಯಕ್ತಿಕ ಬ್ಯಾಂಕ್ ಖಾತೆ ಹೊಂದುವುದು ಕಡ್ಡಾಯವಾಗಿದೆ.  ಬ್ಯಾಂಕ್ ಖಾತೆ ಹೊಂದಿರದ ಕುಟುಂಬದ ಸದಸ್ಯರ ಕೂಲಿ ಹಣ ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ.  ಇಲಾಖೆಯಿಂದ ನಿರ್ದೇಶನ ಬಂದಿರುವದರಿಂದ ಕೂಲಿಕಾರರ ವೈಯಕ್ತಿಕ ಬ್ಯಾಂಕ್ ಖಾತೆ ತೆರೆಯುವ ಕುರಿತು ಕೂಲಿಕಾರರಲ್ಲಿ ಅರಿವು ಮೂಡಿಸಲು ಈ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು, ಜಾಬಕಾರ್ಡ ಹೊಂದಿ, ಬ್ಯಾಂಕ್ ಖಾತೆ ಹೊಂದಿರದ ಕೂಲಿಕಾರರು ಈ ಅಭಿಯಾನದಲ್ಲಿ ಪಾಲ್ಗೊಂಡು ವೈಯಕ್ತಿಕ ಬ್ಯಾಂಕ್ ಖಾತೆ ಹೊಂದಲು ಅವಕಾಶ ಕಲ್ಪಿಸಲಾಗಿದ್ದು, ಅಗತ್ಯ ದಾಖಲೆಗಳೊಂದಿಗೆ ವೈಯಕ್ತಿಕ ಬ್ಯಾಂಕ್ ಖಾತೆ ತೆರೆದು  ಉದ್ಯೋಗಖಾತ್ರಿ ಯೋಜನೆಯಡಿ ಕಾಮಗಾರಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು 150 ದಿನಗಳಿಗೆ ಕೂಲಿ ಕೆಲಸ ನಿರ್ವಹಿಸಬಹುದಾಗಿದೆ ಎಂದು ತಿಳಿಸಿದರು.
ಅಭಿಯಾನದಲ್ಲಿ ಒಟ್ಟು 32 ಕೂಲಿಕಾರರ ವೈಯಕ್ತಿಕ ಬ್ಯಾಂಕ್ ಖಾತೆಯನ್ನು ತೆರೆಯಲು ಅರ್ಜಿಗಳನ್ನು ವಿತರಿಸಿ ನೊಂದಣಿ ಮಾಡಿಕೊಳ್ಳಲಾಯಿತು.  ಗ್ರಾ.ಪಂ. ಅಧ್ಯಕ್ಷ ಹನಮಪ್ಪ ಹರಿಜನ, ಉಪಾಧ್ಯಕ್ಷೆ ಕಾಸಿಂಬಿ ಬನ್ನಿಕೊಪ್ಪ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ಎಂಐಎಸ್ ಸಂಯೋಜಕ ಮೈನುದ್ದೀನ್ ಎಂ., ತಾಲೂಕ ಐಇಸಿ ಸಂಯೋಜಕ ದೇವರಾಜ್ ಪತ್ತಾರ, ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜ್ಯೋತಿ ರಡ್ಡೇರ, ದ್ವಿತೀಯ ದರ್ಜೆ ಲೆಕ್ಕ ಸಂಯೋಜಕ ಚಂದ್ರಪ್ಪ, ಪಿಡಿಒ ಹಾಗೂ ಗ್ರಾ.ಪಂ. ಸರ್ವಸದಸ್ಯರು ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment