Friday, 17 March 2017

ಕಾರಟಗಿ : ಉದ್ದಿಮೆಗಳಿಗೆ ಪರವಾನಿಗೆ ಪಡೆದುಕೊಳ್ಳಲು ಸೂಚನೆ


ಕೊಪ್ಪಳ ಮಾ. 17 (ಕರ್ನಾಟಕ ವಾರ್ತೆ): ಕಾರಟಗಿ ಪುರಸಭೆ ವ್ಯಾಪ್ತಿಯಲ್ಲಿನ ಉದ್ದಿಮೆಗಳು, ವ್ಯಾಪಾರಸ್ಥರು ಉದ್ದಿಮೆ ಪರವಾನಿಗೆ ಪಡೆದುಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸೂಚನೆ ನೀಡಿದ್ದಾರೆ.
     ಕಾರಟಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ  ಗಿರಣಿ ಮಾಲೀಕರು, ಹೋಟಲ್ ಮತ್ತು ಟೀ ಸ್ಟಾಲ್ ಮಾಲೀಕರು, ವೆಲ್ಡಿಂಗ್ ಶಾಪ್ ಮತ್ತು ಇತರೆ ಔಷಧಿ ಅಂಗಡಿ ವ್ಯಾಪಾರಿಗಳು ಮತ್ತಿತರ ವಹಿವಾಟುಗಳ ಮಾಲೀಕರು  1964ನೇ ಕರ್ನಾಟಕ ಪುರಸಭೆ ಅಧಿನಿಯಮ ಕಲಂ 256 ರ ಅಡಿಯಲ್ಲಿ 13ನೇ ಅಧಿಸೂಚನೆಯಲ್ಲಿ ಸೂಚಿಸಿರುವಂತಹ ಯಾವುದೇ ಅಂಗಡಿ ವ್ಯಾಪಾರ ಉದ್ದಿಮೆ, ಆಯಿಲ್ ಮಿಲ್, ರೈಸ್ ಮಿಲ್, ಫ್ಲೋರ್ ಮಿಲ್, ವರ್ಕಶಾಪ್, ಹೋಟಲ್, ಟೀಸ್ಟಾಲ್, ಲಾಡ್ಜಿಂಗ್, ಸ್ವೀಟ್ ಸ್ಟಾಲ್, ಕಾಂಡಿಮೆಂಟ್ಸ ಮುಂತಾದ ವಹಿವಾಟು ನಡೆಸುತ್ತಿದ್ದಲ್ಲಿ ಪುರಸಭೆಯಿಂದ ಅಧಿಕೃತ ಉದ್ದಿಮೆ ಪರವಾನಿಗೆ ಪಡೆಯುವುದು ಕಡ್ಡಾಯವಾಗಿರುತ್ತದೆ.  ಆದರೆ ಅನೇಕರು ಪರವಾನಿಗೆ ಪಡೆಯದೇ ಉದ್ದಿಮೆ (ವ್ಯಾಪಾರ) ಮುಂದುವರೆಸುತ್ತಿರುವುದು ಕಂಡುಬಂದಿದೆ.   ಪರವಾನಿಗೆ ನವೀಕರಿಸದೇ ಇರುವುವವರು ಮಾ. 31 ರ ಒಳಗಾಗಿ ಪರವಾನಿಗೆ ಪಡೆದುಕೊಳ್ಳಬೇಕು.  ತಪ್ಪಿದ್ದಲ್ಲಿ ಪುರಸಭೆಯ ಅಧಿನಿಯಮ ಕಲಂ 256(6) ಪ್ರಕಾರದ ಅನ್ವಯ ದಂಡ ವಿಧಿಸುವುದಲ್ಲದೆ 257(7) ಪ್ರಕಾರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು ಮಾಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment