Wednesday, 8 March 2017

ಮಹಿಳೆಯರು ಕಾನೂನುಗಳ ಬಗ್ಗೆ ಸ್ಪಷ್ಟ ಅರಿವು ಪಡೆಯಿರಿ : ವಿಜಯಲಕ್ಷ್ಮೀ ಉಪನಾಳ

ಕೊಪ್ಪಳ, ಮಾ.08 (ಕರ್ನಾಟಕ ವಾರ್ತೆ):  ಮಹಿಳೆಯರು ಸಂವಿಧಾನಾತ್ಮಕವಾಗಿ ಒದಗಿಸಲಾಗಿರುವ ಸೌಲಭ್ಯಗಳನ್ನು ಸರಿಯಾಗಿ ಸದುಪಯೋಗ ಪಡೆದುಕೊಂಡು, ಕಾನೂನುಗಳ ಬಗ್ಗೆ ಸ್ಪಷ್ಟ ಅರಿವು ಹೊಂದಬೇಕು ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ವಿಜಯಲಕ್ಷ್ಮೀ ಎಸ್. ಉಪನಾಳ ಅವರು ಹೇಳಿದರು.
    ಜಿಲ್ಲಾಡಳಿತ, ಜಿ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾವಾದಿಗಳ ಸಂಘ ಹಾಗೂ ಸಾಂತ್ವಾನ ಕೇಂದ್ರ ಇವರ ಸಹಯೋಗದಲ್ಲಿ ಬುಧವಾರದಂದು ಕೊಪ್ಪಳ ನ್ಯಾಯಾಲಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಮಹಿಳೆಯರು ಕಾನೂನು ತಿಳುವಳಿಕೆಯಿಂದ ಕೌಟುಂಬಿಕ ದೌರ್ಜನ್ಯ ಮತ್ತು ಮಹಿಳಾ ದೌರ್ಜನ್ಯವನ್ನು ಪ್ರತಿಭಟಿಸುವ ಅಸ್ತ್ರಗಳಾಗಿ.  ಸಮಾಜದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರಬಹುದಾದಂತಹ ಸಾಮಾಥ್ರ್ಯವನ್ನು ಮೈಗೂಡಿಸಿಕೊಳ್ಳಬೇಕು.  ಅಲ್ಲದೆ, ಸಮಾನತೆಯ ಬದುಕನ್ನು ಕಂಡುಕೊಳ್ಳುವಂತಹ ಮತ್ತು ವಿವೇಚನೆ ಭರಿತ ನಿರ್ಣಯಗಳನ್ನು ತೆಗೆದುಕೊಳ್ಳುವಂತಹ ಉತ್ತಮ ಮಹಿಳಾ ಪ್ರಗತಿಪರ ವಿಚಾರಯುಳ್ಳ ಸ್ವಾವಲಂಬಿ ಮಹಿಳೆಯರಾಗಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಲಕ್ಷ್ಮೀ ಎಸ್. ಉಪನಾಳ ಹೇಳಿದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಬಸಪ್ಪ ಕಂಪ್ಲಿ ಮಾತನಾಡಿ, ಮಹಿಳೆಯರು ಸಂಘಟಿತರಾಗಬೇಕು.  ಸ್ವಾವಲಂಬಿ ಬದುಕಿಗೆ ಅವಶ್ಯವಿರುವ ಶಕ್ತಿ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು ಮತ್ತು ಮಹಿಳಾ ದೌರ್ಜನ್ಯವನ್ನು ಮೆಟ್ಟಿ ನಿಲ್ಲುವಂತಹ ಸಾಮಥ್ರ್ಯವನ್ನು ಹೊಂದಬೇಕು ಎಂದರು.
    ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ. ದಶರಥ, ಸಿವಿಲ್ ನ್ಯಾಯಾಧೀಶ ವಿಜಯ ಕನ್ನೂರು, ರಾಜ್ಯ ವಕೀಲರ ಪರಿಷತ್ತಿನ ಸದಸ್ಯೆ ಹಾಗೂ ವಕೀಲರಾದ ಸಂಧ್ಯಾ ಮಾದಿನೂರ, ಸರ್ಕಾರಿ ವಕೀಲ ಆಸೀಫ್ ಅಲಿ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಶಂಕರಪ್ಪ ಇಂಗಳದಾಳ, ಶಿಶು ಅಭಿವೃದ್ಧಿ ಯೋಜನೆ ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಾಲಪ್ಪ .ಡಿ. ಕಂದಳ್ಳಿ, ಹಾಗೂ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತರು, ಮಹಿಳಾ ಸಾಂತ್ವಾನ ಕೇಂದ್ರ ಸಿಬ್ಬಂದಿಗಳು ಮತ್ತು ಸ್ತ್ರೀ ಶಕ್ತಿ ಯೋಜನೆಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.
    ಕಾರ್ಯಕ್ರಮದ ಅಂಗವಾಗಿ ವಕೀಲರಾದ ಕಾಳಮ್ಮ ಪತ್ತಾರ ಅವರು ವಾಣಿಜ್ಯ ದೃಷ್ಟಿಯಲ್ಲಿ ಮಹಿಳೆಯ ಸಾಗಾಣಿಕೆ ಮತ್ತು ಲೈಂಗಿಕ ದೌರ್ಜನ್ಯ ಬಗ್ಗೆ ಮತ್ತು ವಕೀಲರು ಹಾಗೂ ಬಾಲ ನ್ಯಾಯಮಂಡಳಿ ಸದಸ್ಯರಾದ ಎನ್.ಎಸ್. ರಾಂಪುರ ಅವರು ಮಹಿಳೆಯರ ಹಕ್ಕುಗಳು ಮತ್ತು ಕೆಲಸದ ಸ್ಥಳಗಳಲ್ಲಿ ಮಹಿಳೆಯ ದೌರ್ಜನ್ಯ ತಡೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
Post a Comment