Monday, 20 March 2017

ತೆರಿಗೆ ಸಂಗ್ರಹ ಸೋರಿಕೆ ತಡೆಗಟ್ಟಲು ನಿಯಮಗಳು ಇನ್ನಷ್ಟು ಕಟ್ಟುನಿಟ್ಟು- ಕೆ. ಲೋಕೇಶ್

ಕೊಪ್ಪಳ, ಮಾ.20 (ಕರ್ನಾಟಕ ವಾರ್ತೆ): ಆದಾಯ ತೆರಿಗೆ ಸಂಗ್ರಹದಲ್ಲಿ ಉಂಟಾಗುತ್ತಿರುವ ಸೋರಿಕೆಯನ್ನು ತಡೆಗಟ್ಟಲು ಬರುವ ದಿನಗಳಲ್ಲಿ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಲು ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಬಳ್ಳಾರಿಯ ಆದಾಯ ತೆರಿಗೆ ಇಲಾಖೆ (ಟಿಡಿಎಸ್) ಅಧಿಕಾರಿ ಕೆ. ಲೋಕೇಶ್ ಅವರು ಹೇಳಿದರು.

     ಆದಾಯ ತೆರಿಗೆ ಇಲಾಖೆ (ಟಿಡಿಎಸ್) ಹಾಗೂ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಸಹಯೋಗದಲ್ಲಿ ಕೊಪ್ಪಳದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾದ ಟಿಡಿಎಸ್ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಆದಾಯ ತೆರಿಗೆ ಇಲಾಖೆ ಎಂದಾಕ್ಷಣ ಯಾರೂ ಭಯಪಡುವ ಅಗತ್ಯವಿರುವುದಿಲ್ಲ.  ಪ್ರಾಮಾಣಿಕರ್ಯಾರೂ ಭಯಪಡುವುದಿಲ್ಲ.  ನಿಯಮಗಳನ್ನು ಸರಿಯಾಗಿ ಪಾಲಿಸುವವರು, ಪ್ರಾಮಾಣಿಕರು ಭಯ ಪಡುವುದೂ ಇಲ್ಲ.  ಇಲಾಖೆಯ ನಿಯಮಗಳ ಬಗ್ಗೆ ಜನರು ಸರಿಯಾದ ಮಾಹಿತಿ ಹೊಂದಿದಲ್ಲಿ, ತೊಂದರೆ ಬರುವುದಿಲ್ಲ.  ಬ್ಯಾಂಕ್‍ಗಳು, ಸರ್ಕಾರದ ವಿವಿಧ ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳಲ್ಲಿ ವಿವಿಧ ವ್ಯವಹಾರಗಳಿಗೆ ಟಿಡಿಎಸ್ ಕಡಿತವನ್ನು ಮಾಡಲಾಗುತ್ತಿದೆ.  ಆದರೆ ಟಿಡಿಎಸ್ ಕಡಿತಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ, ಸಮರ್ಪಕ ಮಾಹಿತಿಯ ಕೊರತೆಯಿಂದ, ನಿಯಮಗಳನ್ನು ಸರಿಯಾಗಿ ಪಾಲಿಸದಿರುವುದು ಕಂಡುಬರುತ್ತಿದೆ.  ಟಿಡಿಎಸ್ ಕಡಿತಗೊಳಿಸುವವರು   ಟ್ಯಾನ್ (ಟಿಎಎನ್) ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯ.  ಇಲ್ಲದಿದ್ದಲ್ಲಿ ಕನಿಷ್ಟ 10 ಸಾವಿರ ರೂ. ವರೆಗೂ ದಂಡ ವಿಧಿಸಲು ಅವಕಾಶವಿದೆ.  ಆದಾಯ ತೆರಿಗೆ ಇಲಾಖೆಯು ದೇಶದ ಅಭಿವೃದ್ಧಿ ದೃಷ್ಟಿಯಿಂದ ತೆರಿಗೆ ಸಂಗ್ರಹ ಸೋರಿಕೆಯನ್ನು ತಡೆಗಟ್ಟಲು ನಿಯಮಗಳನ್ನು  ಬರುವ ದಿನಗಳಲ್ಲಿ ಇನ್ನಷ್ಟು ಕಟ್ಟುನಿಟ್ಟುಗೊಳಿಸಲು ಕ್ರಮ ಕೈಗೊಳ್ಳುತ್ತಿದೆ.  ಟಿಡಿಎಸ್ ಕಡಿತಗೊಳಿಸುವವರಿಗೆ ಮೊದಲು ಸರಿಯಾದ ತರಬೇತಿ ನೀಡುವ ಉದ್ದೇಶದಿಂದ, ಜಾಗೃತಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ. ಜಾಗೃತಿ ಕಾರ್ಯಕ್ರಮಗಳ ನಂತರವೂ ತಪ್ಪೆಸಗಿದಲ್ಲಿ, ನಂತರದ ಕ್ರಮಗಳಿಗೆ ಅವರೇ ಹೊಣೆಗಾರರಾಗುತ್ತಾರೆ.  ಪ್ರಸಕ್ತ ವರ್ಷ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆ ಸೇರಿದಂತೆ ಟಿಡಿಎಸ್ ಮೂಲಕ 125 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯ ಬದಲಿಗೆ ಮಾ. 15 ರವರೆಗೆ 377 ಕೋಟಿ ರೂ. ಸಂಗ್ರಹವಾಗಿದ್ದು, ಶೇ. 200 ಕ್ಕಿಂತ ಹೆಚ್ಚಿನ ಸಂಗ್ರಹವಾಗಿದೆ.  ಮಾ. 31 ರ ಅಂತ್ಯದೊಳಗೆ ಒಟ್ಟು 500 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ ಇದೆ.  ಆದಾಯ ತೆರಿಗೆ ಸಂಗ್ರಹ ವಿಚಾರದಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ಉತ್ತಮ ಸಾಧನೆ ಮಾಡಿದೆ.  ಟಿಡಿಎಸ್‍ಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬೇಕಿದ್ದಲ್ಲಿ, ಅಧಿಕಾರಿಗಳು ಆದಾಯ ತೆರಿಗೆ ಇಲಾಖೆ ಬಳ್ಳಾರಿಯ ಟಿಡಿಎಸ್ ವಿಭಾಗಕ್ಕೆ ಭೇಟಿ ನೀಡಬಹುದಾಗಿದೆ ಎಂದರು.
     ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಬಳ್ಳಾರಿಯ ಜನರಲ್ ಮ್ಯಾನೇಜರ್ ಗೋಪಾಲ ನಾಯಕ್, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಕೊಪ್ಪಳದ ಪ್ರಾದೇಶಿಕ ಪ್ರಬಂಧಕ ಡಿ.ವಿ. ದೇಶಮುಖ್, ಸೇರಿದಂತೆ ಕೃಷ್ಣಮೂರ್ತಿ, ಚಂದ್ರಕಾಂತ್ ತಾಲೇಡ, ಶಿವಕುಮಾರ್, ನಾಗರಾಜ್ ಜೋಶಿ ಮುಂತಾದವರು ಉಪಸ್ಥಿತರಿದ್ದರು.  ವಿವಿಧ ಬ್ಯಾಂಕ್‍ಗಳು, ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Post a Comment