Monday, 27 March 2017

ಮಕ್ಕಳನ್ನು ಭಿಕ್ಷಾಟಣೆಗೆ ಕಳುಹಿಸುವುದು ಶಿಕ್ಷಾರ್ಹ ಅಪರಾಧ


ಕೊಪ್ಪಳ, ಮಾ.27 (ಕರ್ನಾಟಕ ವಾರ್ತೆ): ಪಾಲಕರು ಮಗುವನ್ನು ಭಿಕ್ಷೆ ಬೇಡಲು ಕಳುಹಿಸುವುದು ಹಾಗೂ ಮಗುವಿನ ಭಿಕ್ಷೆಯಿಂದ ಜೀವನ ನಡೆಸುವ ಪ್ರಕ್ರಿಯೆ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತ ರವಿಕುಮಾರ ಪವಾರ   ಹೇಳಿದರು.
    ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಗೂ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಗಂಗಾವತಿ ತಾಲೂಕಿನ ಸಿದ್ಧಾಪುರ ಗ್ರಾಮದ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ಆಯೋಜಿಸಲಾದ ಮಕ್ಕಳ ಹಕ್ಕುಗಳ ಹಾಗೂ ಮಕ್ಕಳ ಪರವಾದ ಕಾನೂನುಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಭಾರತ ಸರ್ಕಾರವು ಹಲವಾರು ಕಾನೂನುಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತಂದಿದೆ.  ಅವುಗಳಲ್ಲಿ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ಮತ್ತು ಸಮಗ್ರ ಮಕ್ಕಳ ರಕ್ಷಣಾ ಯೋಜನೆ.  ಈ ಕಾಯ್ದೆಯನ್ವಯ ಯಾರೇ ಪಾಲಕರು, ಮಗುವನ್ನು ಭಿಕ್ಷೆ ಬೇಡಲು ಹಾಗೂ ಮಗುವಿನ ಭಿಕ್ಷೆಯಿಂದ ಜೀವನ ನಡೆಸುವ ಪ್ರಕ್ರಿಯನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿದೆ.  ಪಾಲಕರಿಗೆ ಅಥವಾ ಮಗುವಿಗೆ ಭಿಕ್ಷೆ ಬೇಡಲು ಕಳುಹಿಸಿದ ವ್ಯಕ್ತಿಗೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ  01ಲಕ್ಷ ರೂ.ಗಳವರೆಗೂ ದಂಡ ವಿಧಿಸಬಹುದಾಗಿದೆ.  ಸಿದ್ಧಾಪುರ ಗ್ರಾಮದಿಂದ ಮಕ್ಕಳು ಭಿಕ್ಷಾಟನೆಗೆ ಗಂಗಾವತಿ, ಶ್ರೀರಾಮನಗರ, ಕಾರಟಗಿ, ಹಾಗೂ ಕನಕಗಿರಿ ಪಟ್ಟಣಗಳಿಗೆ ತೆರಳುತ್ತಿರುವುದು ಕಂಡು ಬಂದಿದ್ದು, ಈ ಹಿನ್ನಲೆಯಲ್ಲಿ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  ಯಾವುದೇ ಕಾರಣಕ್ಕೂ ಮಕ್ಕಳನ್ನು ಭಿಕ್ಷಾಟಣೆಗೆ ಕಳುಹಿಸಬೇಡಿ ಎಂದು ತಿಳಿಸಿದರು.
ಮಕ್ಕಳ ಸಹಾಯವಾಣಿ ಸಂಯೋಜಕ ಶರಣಪ್ಪ ಹಿರೆತೆಮ್ಮಿನಾಳ ಅವರು ಮಾತನಾಡಿ, ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆಗಾಗಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿಯಲ್ಲಿ ಮಕ್ಕಳ ಸಹಾಯವಾಣಿ 1098 ಕಾರ್ಯಾನಿರ್ವಹಿಸುತ್ತಿದ್ದು, ಸಂಕಷ್ಟದಲ್ಲಿರುವ ಮಕ್ಕಳು ಕಂಡು ಬಂದಲ್ಲಿ ಈ ಉಚಿತ ದೂರವಾಣಿಗೆ ಕರೆಮಾಡಿ ಮಾಹಿತಿಯನ್ನು ನೀಡಿದಲ್ಲಿ ಮಾಹಿತಿ ಲಭ್ಯವಾದ 1 ಗಂಟೆಯೊಳಗಾಗಿ ಆ ಮಗುವನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಪೋಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗುವುದು.  ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ಧಾಪುರ ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ ನಾಗನಗೌಡ ಅವರು ವಹಿಸಿದ್ದರು.  ಉಪಾಧ್ಯಕ್ಷೆ ಅನಿತಾ ನಾಗರಾಜ, ಸದಸ್ಯರಾದ ಬಸಮ್ಮ ಯಂಕನಗೌಡ, ಮಾರೆಪ್ಪ, ಚನ್ನಬಸವ ಹಾಗೂ ಅಂಗನವಾಡಿ ಮೇಲ್ವಿಚಾರಕಿ ಮಹಾದೇವಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.  ರವಿ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.  ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯಮನಮ್ಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
Post a Comment