Thursday, 16 March 2017

ಉದ್ಯೋಗಖಾತ್ರಿಯಲ್ಲಿ ಕೂಲಿಕಾರರ ಆರೋಗ್ಯ ತಪಾಸಣೆಗೂ ಒತ್ತುಕೊಪ್ಪಳ, ಮಾ.16 (ಕರ್ನಾಟಕ ವಾರ್ತೆ): ಕೂಲಿಕಾರರಿಗೆ ಕೆಲಸದ ಬಗ್ಗೆ ಮಾತ್ರ ಕಾಳಜಿ ಇರುತ್ತದೆಯೇ ಹೊರತು, ತಮ್ಮ ಆರೋಗ್ಯದ ಬಗ್ಗೆ ಅರಿವು ಇರುವುದಿಲ್ಲ.  ಈ ಹಿನ್ನೆಲೆಯಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸಕ್ಕಾಗಿ ಬರುವ ಕೂಲಿಕಾರರ ಆರೋಗ್ಯ ತಪಾಸಣೆಗೂ ಒತ್ತು ನೀಡಲಾಗುತ್ತಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತಿಯ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಸಹಾಯಕ ಕಾರ್ಯಕ್ರಮ ಸಂಯೋಜಕ ಮಹಾಂತಸ್ವಾಮಿ ಅವರು ಹೇಳಿದರು.

         ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಆರೋಗ್ಯ ಇಲಾಖೆ ವತಿಯಿಂದ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬುಡಶೆಟ್ನಾಳ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರಿಗೆ   ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

       ಕೂಲಿಕಾರರಿಗೆ ಕೆಲಸದ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆಯೇ ಹೊರತು, ತಮ್ಮ ಆರೋಗ್ಯದ ಬಗ್ಗೆ ಅರಿವು ಇರುವುದಿಲ್ಲ.  ಸಣ್ಣ-ಪುಟ್ಟ ಕಾಯಿಲೆಗಳಿದ ಬಳಲುತ್ತಿರುವವರಿಗೂ ಸಹ ಆರೋಗ್ಯದ ಬಗ್ಗೆ ನಿಗಾ ವಹಿಸುವುದಿಲ್ಲ.  ಉದ್ಯೋಗಾಖಾತ್ರಿ ಯೋಜನೆಯಡಿ ಕೆಲಸ ಮಾಡಲು ಬರುವ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸುವ ಮೂಲಕ, ಸರ್ಕಾರ ಕೂಲಿಕಾರರ ಬಗ್ಗೆ ಸಾಮಾಜಿಕ ಕಳಕಳಿ ಮನೋಭಾವನೆ ಹೊಂದಬೇಕೆಂಬುದಾಗಿದೆ.  
ಜಮೀನು ಇದ್ದಲ್ಲಿ, ಕೂಲಿಕಾರರು ಬರುವ ಏಪ್ರೀಲ್-01 ರಿಂದ ತಮ್ಮ ಜಮೀನಿನಲ್ಲಿ ಕೃಷಿಹೊಂಡ ಕಾಮಗಾರಿ ಅನುಷ್ಠಾನ ಮಾಡಿಕೊಳ್ಳಬಹುದು. ಜೊತೆಗೆ ಜಾನುವಾರು, ಮೇಕೆಗಳು ಇದ್ದರೆ ದನದದೊಡ್ಡಿ, ಕುರಿದೊಡ್ಡಿ ಸಹ ನಿರ್ಮಿಸಿಕೊಳ್ಳಲು ಈ ಯೋಜನೆಯಲ್ಲಿ ಅವಕಾಶವಿದೆ.  ಕೂಲಿಕಾರರು ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುದು.  ಎಲ್ಲಾ ಕೂಲಿಕಾರರು ವಯಕ್ತಿಕ ಬ್ಯಾಂಕ್ ಖಾತೆ ಹೊಂದಿದ್ದರೆ  ಮಾತ್ರ ಸಕಾಲದಲ್ಲಿ ಕೆಲಸ ನೀಡಲು ಮತ್ತು ಕೂಲಿ ಪಾವತಿಸಲು ಸಾಧ್ಯವಾಗಲಿದ್ದು, ಇದನ್ನು ಕಡ್ಡಾಯಗೊಳಿಸಲಾಗಿದೆ.  ಉದ್ಯೋಗ ಚೀಟಿಯಲ್ಲಿರುವ ಕೂಲಿಕಾರರು ತಮ್ಮ ವಯಕ್ತಿಕ ಬ್ಯಾಂಕ್ ಖಾತೆಯೊಂದಿಗೆ ಆಧಾರ ಸಂಕ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಿಸಬೇಕು ಎಂದರು.
ಕಿನ್ನಾಳ ಗ್ರಾ.ಪಂ. ಸದಸ್ಯ ಬಸವರಾಜ ಪರಗಿ ಮಾತನಾಡಿ, ಈ ವರ್ಷ ಬರಗಾಲ ಇದ್ದು, ಪಂಚಾಯತಿಗಳು ಕೂಲಿಕಾರರಿಗೆ ಸತತವಾಗಿ ಕೂಲಿ ಕೆಲಸ ನೀಡುತ್ತಿದೆ.  ಬರುವ ಮಳೆಗಾಲದವರೆಗೆ ಎಲ್ಲ ಕೂಲಿಕಾರರು ಗ್ರಾಮ ಪಂಚಾಯತಿಯಿಂದ ಅನುಷ್ಠಾನಗೊಳ್ಳುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಕೂಲಿ ಕೆಲಸ ನಿರ್ವಹಿಸಿ, ಕೂಲಿ ಹಣವನ್ನು ಬ್ಯಾಂಕ್ ಮುಖಾಂತರ ಪಡೆಯಬಹುದಾಗಿದೆ.      ಗ್ರಾ.ಪಂ. ವತಿಯಿಂದ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿದ್ದು ಶ್ಲ್ಯಾಘನಿಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿನ್ನಾಳ ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ ಬನ್ನಿಕೊಪ್ಪ ವಹಿಸಿದ್ದರು.  ಸದಸ್ಯರುಗಳಾದ ಪರಸಪ್ಪ ಗಡಗಿ, ಸುಭಾನಸಾಬ ಹಿರ್ಹಾಳ, ಪರಸಪ್ಪ ವಾಲ್ಮೀಕಿ, ಮಂಜುನಾಥ ಕುರುಬರ, ಲಲಿತಾ ಘೋರ್ಪಡೆ, ವಿಡಬ್ಲ್ಯೂಎಸ್‍ಸಿ ಸದಸ್ಯ ಮಹೇಶ ವಾಲ್ಮೀಕಿ, ಈರಪ್ಪ ಹರಿಜನ್, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇರ್ಫಾನಾ ಅಂಜುಂ, ಧೂಳಪ್ಪ, ಮಂಜುನಾಥ, ಶೂಶ್ರೂಷಕಿ ಶಾರಮ್ಮ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವೀರನಗೌಡ ಚನ್ನವೀರಗೌಡ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
Post a Comment