Thursday, 23 March 2017

“ನನ್ನ ಮನೆಯಲ್ಲಿ ಶೌಚಾಲಯ ಇದೆ-ನನಗೆ ಹೆಮ್ಮೆ ಇದೆ”


ಕೊಪ್ಪಳ, ಮಾ.23 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮದ ಪಂಚಾಯತ್  ವ್ಯಾಪಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪತ್ರ ಚಳುವಳಿಯ ಮುಖಾಂತರ ಕಳೆದ ಜನೆವರಿ 26ರ ನಂತರ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಂಡ ಶಾಲಾ ಮಕ್ಕಳಿಗೆ “ನನ್ನ ಮನೆಯಲ್ಲಿ ಶೌಚಾಲಯ ಇದೆ-ನನಗೆ ಹೆಮ್ಮೆ ಇದೆ” ಎಂಬ ಘೋಷಣೆಯುಳ್ಳ ಕ್ಯಾಪ್‍ಗಳನ್ನು ಗುರುವಾರದಂದು ವಿವಿಧ ಗ್ರಾಮಗಳಲ್ಲಿನ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು.

    ಕೊಪ್ಪಳ ತಾಲೂಕು ಹಿಟ್ನಾಳ್‍ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಎ. ಧರ್ಮರಾಜ್ ಮತನಾಡಿ, ಶೌಚಾಲಯ ನಿರ್ಮಾಣದ ಕಾರ್ಯದಲ್ಲಿ ಕೇವಲ ಅಧಿಕಾರಿಗಳು ಮಾತ್ರವಲ್ಲದೇ ಸಾರ್ವಜನಿಕರು ಕೂಡ ಆಸಕ್ತಿಯನ್ನು ವಹಿಸಿ ಜನರಿಗೆ ಮಾಹಿತಿ ನೀಡುತ್ತಾ ಈ ಒಂದು ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
  ಮುಖ್ಯ ಅತಿಥಿಗಳಾಗಿ ಜಿ.ಪಂ. ನೋಡಲ್ ಅಧಿಕಾರಿ ರವಿ ಬಸರಿಹಳ್ಳಿ ಭಾಗವಹಿಸಿದ್ದರು.  ಯೋಜನಾ ನಿರ್ದೇಶಕರು ಮಾತನಾಡಿ, ಶೌಚಾಲಯ ನಿರ್ಮಾಣದ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಪಾತ್ರ ಬಹುಮುಖ್ಯವಾಗಿದೆ.  ಮುಖ್ಯವಾಗಿ ಶಿಕ್ಷಕರ ಮಾತನ್ನು ಮಕ್ಕಳು ಪಾಲಿಸುತ್ತಾರೆ.  ಅದಕ್ಕಾಗಿ ವರ್ಗದ ಶಿಕ್ಷಕರನ್ನು ಗುರಿಯನ್ನಾಗಿ ಮಾಡಿಕೊಂಡು, ಶೌಚಾಲಯ ಇಲ್ಲದ ಮಕ್ಕಳನ್ನು ಗುರುತಿಸಿ ಅವರ ಮನವೊಲಿಸಿ ಪತ್ರ ಚಳುವಳಿಯ ಮೂಲಕ ಪಾಲಕರಿಗೆ ಪತ್ರ ಬರೆಯಿಸಿ, ಜಿಲ್ಲೆಯಲ್ಲಿ ಶೌಚಾಲಯ ಕ್ರಾಂತಿಯನ್ನು ಆರಂಭಿಸಿದೆ. ಇದು ಶ್ಲ್ಯಾಘನಿಯವಾಗಿದೆ.  ಬಿಆರ್‍ಸಿ ಮತ್ತು  ಸಿಆರ್‍ಪಿಗಳು ಹೆಚ್ಚು ಗಮನ ನೀಡಿ ಶಾಲೆಗಳನ್ನು ಒಡಿಎಫ್ ಮಾಡಿ ಎಲ್ಲರಿಗೂ ಮಾದರಿಯಾಗಬೇಕು.  ತಮ್ಮ ಮನೆಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಂಡ ಶಾಲಾ ಮಕ್ಕಳಿಗೆ ಮೊದಲ ಹಂತದಲ್ಲಿ ಕ್ಯಾಪ್‍ಗಳನ್ನು ನೀಡಲಾಗಿದೆ.  ನಂತರದಲ್ಲಿ ಬ್ಯಾಡ್ಜ್ ಮತ್ತು ಬ್ಯಾಂಡ್‍ಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. 
       ಗಂಗಾವತಿ ತಾಲೂಕಿನ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕಸ್ತೂರಿಬಾ ಗಾಂಧಿ ಬಾಲಕಿಯರ ಶಾಲೆಯಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.  ಅಧ್ಯಕ್ಷತೆಯನ್ನು ಗಂಗಮ್ಮ ವಹಿಸಿದ್ದರು.  ಅತಿಥಿಗಳಾಗಿ ಜಿ.ಪಂ. ಸದಸ್ಯ ವಿಶ್ವನಾಥ ರೆಡ್ಡಿ, ತಾ.ಪಂ. ಉಪಾಧ್ಯಕ್ಷ ಗವಿಸಿದ್ದಪ್ಪ, ಸದಸ್ಯ ಪ್ರಕಾಶ ಭಾವಿ, ಗ್ರಾ.ಪಂ. ಉಪಾಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.  ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ವೆಂಕೊಬಪ್ಪ ಉಪಸ್ಥಿತರಿದ್ದರು.  ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾ.ಪಂ. ವ್ಯಾಪ್ತಿಯ ಬಾಲಕಿಯರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.  ದ್ರಾಕ್ಷಾಯಣಿ ವಿರೇಶ ಕಟಗಿ ಅವರು ಅಧ್ಯಕ್ಷತೆ ವಹಿಸಿದ್ದರು.
Post a Comment