Monday, 13 March 2017

ಅಗತ್ಯವಿರುವೆಡೆ ಮೇವು ಬ್ಯಾಂಕ್, ಗೋಶಾಲೆ- ಬಸವರಾಜ ರಾಯರಡ್ಡಿ


ಕೊಪ್ಪಳ, ಮಾ.13 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿನ ಭೀಕರ ಬರ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಜಾನುವಾರುಗಳಿಗೆ ರಕ್ಷಣೆ ನೀಡಲು ಅಗತ್ಯವಿರುವ ಕಡೆಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಿ, ರೈತರಿಗೆ ಮೇವು ಪೂರೈಕೆ ಮಾಡಬೇಕು.  ಅಲ್ಲದೆ ಅಗತ್ಯಕ್ಕನುಗುಣವಾಗಿ ಗೋಶಾಲೆ ತೆರೆಯುವಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಪಂಚಾಯತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ವಿಫಲಗೊಂಡ ಹಿನ್ನೆಲೆಯಲ್ಲಿ ಮೇವಿನ ತೀವ್ರ ಕೊರತೆಯನ್ನು ರೈತರು ಎದುರಿಸುತ್ತಿದ್ದಾರೆ.  ಹೀಗಾಗಿ ಜಿಲ್ಲೆಯ ಅಳವಂಡಿ, ಚಿಕ್ಕವಂಕಲಕುಂಟಾ, ತಲ್ಲೂರು, ವೆಂಕಟಗಿರಿ, ಕನಕಗಿರಿ ಮತ್ತು ಕಲಕೇರಿ ಗ್ರಾಮಗಳಲ್ಲಿ ಈಗಾಗಲೆ ಗೋಶಾಲೆಗಳನ್ನು ತೆರೆದು, ಜಾನುವಾರುಗಳಿಗೆ ಮೇವು ಪೂರೈಸಲಾಗುತ್ತಿದೆ.  ಅಲ್ಲದೆ ಕುಕನೂರು ಮತ್ತು ಬಂಡಿಹರ್ಲಾಪುರ ಗ್ರಾಮಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ.  ಬೇರೆ, ಬೇರೆ ಗ್ರಾಮಗಳಲ್ಲಿ ಗೋಶಾಲೆ ತೆರೆಯುವಂತೆ ಬೇಡಿಕೆಗಳು ಬರುತ್ತಿವೆ.  ಬರುವ ದಿನಗಳಲ್ಲಿ ಕೊಪ್ಪಳ ತಾಲೂಕಿನ ಇರಕಲ್ಲಗಡ ಮತ್ತು ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮಗಳಲ್ಲಿ ಗೋಶಾಲೆಯನ್ನು ಪ್ರಾರಂಭಿಸಲು ಸಿದ್ಧತೆಗಳನ್ನು ಕೈಗೊಳ್ಳಬೇಕು.  ಅದೇ ರೀತಿ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ, ಯಲಬುರ್ಗಾ ತಾಲೂಕಿನ ಮಂಗಳೂರು, ಕುಷ್ಟಗಿ ತಾಲೂಕಿನ ಹನುಮಸಾಗರ ಮತ್ತು ತಾವರಗೇರಾದಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ ಅವರು, ವರದಿಯ ಪ್ರಕಾರ ಜಿಲ್ಲೆಯಲ್ಲಿ 09 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ.  ಮೇವು ಬ್ಯಾಂಕ್‍ನಲ್ಲಿ ಪ್ರತಿ ಕೆ.ಜಿ.ಗೆ 06 ರೂ. ನಂತೆ ಮೇವನ್ನು ಖರೀದಿಸಲಾಗುತ್ತಿದ್ದು,  ಜಾನುವಾರುಗಳಿದ್ದು, ಮೇವು ಲಭ್ಯವಿಲ್ಲದಿರುವ ರೈತರಿಗೆ ಪ್ರತಿ ಕೆ.ಜಿ.ಗೆ ರೂ. 02 ರಂತೆ ಮೇವು ನೀಡಲಾಗುತ್ತಿದೆ.  ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿನ ಜಾನುವಾರುಗಳ ಸಂಖ್ಯೆ, ಲಭ್ಯವಿರುವ ಮೇವಿನ ಪ್ರಮಾಣದ ವಾಸ್ತವಾಂಶವನ್ನು ತಿಳಿಯಲು, ಪ್ರತಿ ಮನೆ, ಮನೆಗೆ ಭೇಟಿ ನೀಡಿ, ಜಾನುವಾರುಗಳು ಹಾಗೂ ಮೇವಿನ ಲಭ್ಯತೆಯ ಪ್ರಮಾಣದ ನಿಜಸ್ಥಿತಿಯನ್ನು ಅರಿಯುವ ಸಲುವಾಗಿ ಮನೆ-ಮನೆ ಸಮೀಕ್ಷೆಯನ್ನು ಕೈಗೊಂಡು, ತಿಂಗಳಾಂತ್ಯದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.  ಈ ವರದಿಯ ಆಧಾರದಲ್ಲಿ ಗೋಶಾಲೆ ಅಥವಾ ಮೇವು ಬ್ಯಾಂಕ್ ಸ್ಥಾಪಿಸುವ ಕುರಿತು ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದರು.
32. 75 ಕೋಟಿ ರೂ. ಮುಂಗಾರು ಪರಿಹಾರ :
***************ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಮಳೆ ವಿಫಲಗೊಂಡ ಕಾರಣದಿಂದ ಬೆಳೆ ನಷ್ಟವಾದ ನಂತರ, ರಾಜ್ಯ ಸರ್ಕಾರ ನೀಡಿದ ವರದಿಯ ಹೊರತಾಗಿಯೂ, ಕೇಂದ್ರ ಸರ್ಕಾರ ರಾಜ್ಯಕ್ಕೆ ಕಡಿಮೆ ಪರಿಹಾರ ಕೊಟ್ಟ ಕಾರಣದಿಂದ, ರೈತರಿಗೆ ಇನ್‍ಪುಟ್ ಸಬ್ಸಿಡಿ ನೀಡುವುದು ವಿಳಂಬವಾಗಿದೆ.  ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ 32. 75 ಕೋಟಿ ರೂ. ಇನ್‍ಪುಟ್ ಸಬ್ಸಿಡಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಒದಗಿಸಿದ್ದು, ಸಂಬಂಧಿಸಿದ ರೈತರ ಬ್ಯಾಂಕ್ ಖಾತೆಗಳಿಗೆ ರಾಜ್ಯ ಮಟ್ಟದಿಂದಲೇ ನೇರವಾಗಿ ಹಣ ಜಮಾ ಆಗಲಿದೆ.  ಈ ಮೊದಲು ಜಿಲ್ಲಾ ಮಟ್ಟದಲ್ಲಿ ರೈತರಿಗೆ ಹಣ ಪಾವತಿಸಲಾಗುತ್ತಿತ್ತು.  ಅನಗತ್ಯ ವಿಳಂಬವನ್ನು ತಪ್ಪಿಸಲು ‘ಪರಿಹಾರ’ ಎನ್ನುವ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ನೇರವಾಗಿ ಸಂಬಂಧಿಸಿದ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.  ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಇದುವರೆಗೂ ಜೋಡಿಸದೇ ಇರುವ ರೈತರು ಕೂಡಲೆ ಈ ಕಾರ್ಯವನ್ನು ಮಾಡಬೇಕು ಎಂದು ಮಂತ್ರಿಗಳು ಹೇಳಿದರು.
ಮಾಧ್ಯಮಗಳ ವರದಿಗೆ ಸ್ಪಂದಿಸಿ :
*********** ಜಿಲ್ಲೆಯಲ್ಲಿ ಬೇಸಿಗೆಯ ಅವಧಿಯಲ್ಲಿ ಕುಡಿಯುವ ನೀರು, ಉದ್ಯೋಗದ ತೊಂದರೆ, ಭ್ರಷ್ಟಾಚಾರ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತವೆ.  ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ತಿಳಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಕೆಲಸ ಮಾಡುತ್ತವೆ.  ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು, ದಿನನಿತ್ಯ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ವರದಿಗಳಿಗೆ ಕೂಡಲೆ ಸ್ಪಂದಿಸಿ, ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಯಾವುದೇ ನಗರ, ಪಟ್ಟಣ ಅಥವಾ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಕಂಡುಬಂದಲ್ಲಿ, ಅಧಿಕಾರಿಗಳು ಕೂಡಲೆ ಸ್ಪಂದಿಸಬೇಕು.  ಜಿಲ್ಲೆಯಲ್ಲಿ ಅಂತರ್ಜಲ ದಿನದಿಂದ, ದಿನಕ್ಕೆ ತೀವ್ರ ಕುಸಿತ ಕಾಣುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಬೇಕು.  ಆದಷ್ಟು ಶಾಶ್ವತ ಪರಿಹಾರ ಕೈಗೊಳ್ಳುವತ್ತ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಮಂತ್ರಿಗಳು ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕುವಾರು ಸಭೆ ಕೈಗೊಳ್ಳಿ :
************ ಜಿಲ್ಲೆಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸಂಬಂಧಿಸಿದಂತೆ ತೀವ್ರತರವಾದ ಸಮಸ್ಯೆಗಳನ್ನು ಅರಿತು, ಪರಿಹರಿಸುವ ನಿಟ್ಟಿನಲ್ಲಿ ಆಯಾ ತಾಲೂಕು ಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೈಗೊಳ್ಳಬೇಕು.  ಈ ಸಭೆಗೆ ಆಯಾ ತಾಲೂಕಿನ ಜಿ.ಪಂ. ಸದಸ್ಯರುಗಳು, ತಾ.ಪಂ. ಸದಸ್ಯರು, ಗ್ರಾಮ ಪಂಚಾಯತಿಗಳ ಅಧ್ಯಕ್ಷರು ಅಲ್ಲದೆ ಸಂಬಂಧಿಸಿದ ಅಧಿಕಾರಿಗಳನ್ನು ಕರೆದು ಸಭೆ ಕೈಗೊಳ್ಳಬೇಕು.  ಹೀಗಾದಾಗ ಮಾತ್ರ ಅಧಿಕಾರಿಗಳಿಗೆ ವಾಸ್ತವಾಂಶ ಗೊತ್ತಾಗಲಿದ್ದು, ಸಮಸ್ಯೆ ಪರಿಹರಿಸಲು ಸಾಧ್ಯವಾಗಲಿದೆ.  ಮಾರ್ಚ್ ತಿಂಗಳ ಒಳಗಾಗಿ ಎಲ್ಲ ತಾಲೂಕುಗಳಲ್ಲಿ ಸಭೆ ಕೈಗೊಳ್ಳುವಂತೆ ಮಂತ್ರಿಗಳು ತಿಳಿಸಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ. ಪ್ರವೀಣಕುಮಾರ್ ಜಿ.ಎಲ್. ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಹಲವು ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Post a Comment