Saturday, 25 March 2017

ವಿಜೃಂಭಣೆಯಿಂದ ಜಗಜೀವನರಾಮ್, ಅಂಬೇಡ್ಕರ್ ಜಯಂತಿ ಆಚರಣೆ- ಎಂ. ಕನಗವಲ್ಲಿ


ಕೊಪ್ಪಳ ಮಾ. 25 (ಕರ್ನಾಟಕ ವಾರ್ತೆ) : ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಈ ಬಾರಿ ಅತ್ಯಂತ ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು

     ಬಾಬು ಜಗಜೀವನರಾಮ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಶನಿವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು.
     ಬಾಬು ಜಗಜೀವನರಾಮ್ ಅವರ 110 ನೇ ಜನ್ಮದಿನಾಚರಣೆಯನ್ನು ಏಪ್ರಿಲ್ 05 ರಂದು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ 126 ನೇ ಜನ್ಮದಿನಾಚರಣೆಯನ್ನು ಏ. 14 ರಂದು ಎಲ್ಲ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಅದ್ಧೂರಿಯಾಗಿ ಆಚರಿಸಲಾಗುವುದು.  ಈ ಬಾರಿ ವಿಶೇಷವಾಗಿ ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಸಾರ್ವಜನಿಕರಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗುವುದು.  ಜಿಲ್ಲೆಯ ಯಾವುದೇ ಸಾರ್ವಜನಿಕರು ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.  ಹಿರಿಯರು ಹಾಗೂ ಕಿರಿಯರು ಎಂಬ ಎರಡು ವಿಭಾಗಗಳಲ್ಲಿ ಬಾಬು ಜಗಜೀವನರಾಂ  ಹಾಗೂ ಡಾ. ಅಂಬೇಡ್ಕರ್ ಅವರ ಕುರಿತು ಪ್ರತ್ಯೇಕವಾಗಿ ಸ್ಪರ್ಧೆ ಆಯೋಜಿಸಲಾಗುವುದು.  ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಸಮಾಜ ಕಲ್ಯಾಣ ಇಲಾಖೆ ಕೈಗೊಳ್ಳಲಿದೆ ಎಂದರು.
ಬಾಬು ಜಗಜೀವನರಾಂ ಜಯಂತಿ :
************** ಬಾಬು ಜಗಜೀವನರಾಂ ಅವರ 110 ನೇ ಜನ್ಮ ದಿನಾಚರಣೆಯ ಅಂಗವಾಗಿ ಏ. 05 ರಂದು ಬೆಳಿಗ್ಗೆ 7-30 ಗಂಟೆಗೆ ನಗರದ ತಹಸಿಲ್ದಾರರ ಕಚೇರಿ ಆವರಣದಿಂದ ಬಾಬು ಜಗಜೀವನರಾಂ ಅವರ ಭಾವಚಿತ್ರ ಸಹಿತ ಮೆರವಣಿಗೆಯನ್ನು ಪ್ರಾರಂಭಿಸಲಾಗುವುದು.  ಮೆರವಣಿಗೆಯಲ್ಲಿ ವೈವಿಧ್ಯಮ ಜಾನಪದ ಕಲಾತಂಡಗಳು ಪಾಲ್ಗೊಳ್ಳಲಿವೆ.  ವೇದಿಕೆ ಕಾರ್ಯಕ್ರಮ ಕೈಗೊಳ್ಳುವ ಸ್ಥಳವನ್ನು ಶೀಘ್ರದಲ್ಲೇ ನಿಗದಿಪಡಿಸಲಾಗುವುದು.  ಬಾಬು ಜಗಜೀವನರಾಂ ಅವರ ಕುರಿತು ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ :
************** ಈ ಬಾರಿ ಅಂಬೇಡ್ಕರ್ ಅವರ 126 ನೇ ಜನ್ಮ ದಿನಾಚರಣೆ ಅಂಗವಾಗಿ ಏ. 14 ರಂದು ಬೆಳಿಗ್ಗೆ 7-30 ಗಂಟೆಗೆ ನಗರದ ತಹಸಿಲ್ದಾರರ ಕಚೇರಿ ಆವರಣದಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಸಹಿತ ಅದ್ಧೂರಿ ಮೆರವಣಿಗೆ ಪ್ರಾರಂಭವಾಗಲಿದೆ.  ಮೆರವಣಿಗೆಯಲ್ಲಿ ಹಲವು ಕಲಾ ತಂಡಗಳು ಪಾಲ್ಗೊಂಡು, ಮೆರವಣಿಗೆಯನ್ನು ಆಕರ್ಷಕಗೊಳಿಸಲಿವೆ.  ವೇದಿಕೆ ಸಮಾರಂಭದ ಸ್ಥಳವನ್ನು ಶೀಘ್ರ ನಿಗದಿಪಡಿಸಿ, ಮಾಧ್ಯಮಗಳಲ್ಲಿ ಪ್ರಕಟಿಸಲಾಗುವುದು.  ಕಾರ್ಯಕ್ರಮದ ಅಂಗವಾಗಿ ಡಾ. ಅಂಬೇಡ್ಕರ್ ಅವರ ಕುರಿತು ವಿಶೇಷ ಉಪನ್ಯಾಸ ಆಯೋಜಿಸಲಾಗುವುದು ಎಂದರು.
        ಬಾಬು ಜಗಜೀವನರಾಂ ಹಾಗೂ ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಯಶಸ್ವಿಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಎಲ್ಲ ಅಧಿಕಾರಿ ವರ್ಗದವರು, ಜನಪ್ರತಿನಿಧಿಗಳು. ಸಮಾಜದ ಮುಖಂಡರು ಸಹಕರಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕರೆ ನೀಡಿದರು.
      ಉಭಯ ಮಹನೀಯರ ಜಯಂತಿಯ ಅಂಗವಾಗಿ ಆಯಾ ದಿನಗಳಂದು ನಗರದ ಪ್ರಮುಖ ವೃತ್ತಗಳಿಗೆ ದೀಪಾಲಂಕಾರ ಕೈಗೊಳ್ಳಬೇಕು.  ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಮೆರವಣಿಗೆ ಸಾಗಿ ಬರುವ ದಾರಿಯಲ್ಲಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಕೈಗೊಳ್ಳಬೇಕು. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ವೈದ್ಯರ ಸಹಿತ ಆ್ಯಂಬುಲೆನ್ಸ್ ವ್ಯವಸ್ಥೆಗೊಳಿಸಬೇಕು.  ಮೆರವಣಿಗೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು. ಕಾರ್ಯಕ್ರಮಗಳ ಯಶಸ್ವಿಗೆ ವಹಿಸಲಾಗಿರುವ ಜವಾಬ್ದಾರಿಯನ್ನು ಆಯಾ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕೈಗೊಳ್ಳಬೇಕು ಅಲ್ಲದೆ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
       ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿ, ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಅಲ್ಲದೆ ಪಿಹೆಚ್‍ಡಿ ಪದವಿ ಪಡೆದ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಸಾಧಕರಿಗೆ ಕಾರ್ಯಕ್ರಮದ ಸಂದರ್ಭದಲ್ಲಿ ಸನ್ಮಾನಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
     ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ, ಜಿಲ್ಲಾ ಪಂಚಾಯತಿ ಸದಸ್ಯ ಗೂಳಪ್ಪ ಹಲಗೇರಿ, ನಗರಸಭೆ ಸದಸ್ಯ ಮುತ್ತುರಾಜ್ ಕುಷ್ಟಗಿ, ಸಮಾಜದ ಮುಖಂಡರುಗಳಾದ ಗವಿಸಿದ್ದಪ್ಪ ಕಂದಾರಿ, ಡಾ. ಜ್ಞಾನಸುಂದರ್, ಸುಧಾಕರ ಹೊಸಮನಿ, ಭರಮಪ್ಪ ಬೆಲ್ಲದ, ಸಿದ್ದೇಶ್ ಪೂಜಾರ್, ಓಬಳೇಶ್, ಗಾಳಪ್ಪ ಪೂಜಾರ್, ಸಿದ್ರಾಮ ಹೊಸಮನಿ, ರಮೇಶ್ ಬೆಲ್ಲದ, ಶಂಕರ ಬೆಲ್ಲದ, ನಾಗರಾಜ ಬೆಲ್ಲದ, ಶಿವಾನಂದ ಹೊದ್ಲೂರ್, ಮಂಜುನಾಥ ಗೊಂಡಬಾಳ, ಸೇರಿದಂತೆ ಹಲವಾರು ಗಣ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Post a Comment