Friday, 10 March 2017

ಬೆಳೆ ಹಾನಿ ರೈತರಿಗೆ ಇನ್‍ಪುಟ್ ಸಬ್ಸಿಡಿ : ಆಧಾರ್ ಕಡ್ಡಾಯ

ಕೊಪ್ಪಳ, ಮಾ.10 (ಕರ್ನಾಟಕ ವಾರ್ತೆ): ಬರಪರಿಸ್ಥಿತಿಯ ಹಿನ್ನಲೆಯಲ್ಲಿ ಬೆಳೆ ಹಾನಿ ಹೊಂದಿರುವ ಫಲಾನುಭವಿ ರೈತರು ಇನ್‍ಪುಟ್ ಸಬ್ಸಿಡಿ ಪಡೆಯಲು, ಸಂಬಂಧಿಸಿದ ಬ್ಯಾಂಕಿಗೆ ಭೇಟಿ ನೀಡಿ ತಮ್ಮ ಆಧಾರ್ ಸಂಖ್ಯೆಯನ್ನು ನೀಡಬೇಕು ಅಥವಾ ಆಯಾ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗೆ ಆಧಾರ್ ಸಂಖ್ಯೆಯ ದಾಖಲೆ ನೀಡುವಂತೆ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಮನವಿ ಮಾಡಿದ್ದಾರೆ.  
ಪ್ರಸಕ್ತ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಿನಲ್ಲಿ ಬರ ಪರಿಸ್ಥಿತಿಯಿಂದ ಬೆಳೆ ಹಾನಿ ಹೊಂದಿರುವ ಫಲಾನುಭವಿ ರೈತರಿಗೆ ಇನ್‍ಪುಟ್ ಸಬ್ಸಿಡಿ ವಿತರಣೆಯನ್ನು ಮಾಡಲು ರಾಜ್ಯ ಸರ್ಕಾರವು ‘ಪರಿಹಾರ’ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.  ಕೇಂದ್ರ ಸರ್ಕಾರದ ನೇರ ಹಣ ಸಂದಾಯ ಯೋಜನೆಯಡಿ (ಡಿ.ಬಿ.ಟಿ.) ಪ್ರತಿ ಫಲಾನುಭವಿ ರೈತರು, ಇನ್‍ಪುಟ್ ಸಬ್ಸಿಡಿ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಜೋಡಿಸಲು ಒಪ್ಪಿಗೆ ನೀಡುವುದು ಕಡ್ಡಾಯವಾಗಿದೆ.  ಈ ಹಿನ್ನೆಲೆಯಲ್ಲಿ ರೈತರು ಇನ್‍ಪುಟ್ ಸಬ್ಸಿಡಿ ಪಡೆಯುವ ಸಲುವಾಗಿ ಆಧಾರ್ ಸಂಖ್ಯೆಯನ್ನು ಸಂಬಂಧಪಟ್ಟ ಬ್ಯಾಂಕಿಗೆ ಖುದ್ದಾಗಿ ಭೇಟಿ ನೀಡಿ, ಮಾಹಿತಿಯನ್ನು ಸಲ್ಲಿಸಬೇಕು ಅಥವಾ ಆಯಾ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗಳಿಗೆ ದಾಖಲೆಯನ್ನು ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
Post a Comment