Friday, 10 March 2017

ಮಾನಸಿಕ ಮತ್ತು ದೈಹಿಕ ಆರೋಗ್ಯದಿಂದ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ : ಸಿ.ಎಸ್. ಚಂದ್ರಮೌಳಿಕೊಪ್ಪಳ, ಮಾ.10 (ಕರ್ನಾಟಕ ವಾರ್ತೆ):  ಕೇವಲ ಆರ್ಥಿಕ ಪ್ರಗತಿ ಒಂದೇ ದೇಶದ ಅಭಿವೃದ್ಧಿ ಅಲ್ಲ, ಸಮಾಜದ ಪ್ರತಿಯೊಬ್ಬ ಪ್ರಜೆ ಮಾನಸಿಕ ಮತ್ತು ದೈಹಿಕ ಆರೋಗ್ಯವಂತರಾದಾಗ ಮಾತ್ರ ಭಾರತ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಸಿ.ಎನ್. ಚಂದ್ರಮೌಳಿ ಹೇಳಿದರು.

    ಕೇಂದ್ರ ಸರಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಧಾರವಾಡ ಮತ್ತು ಚಿತ್ರದುರ್ಗ ಘಟಕದ ವತಿಯಿಂದ ಶುಕ್ರವಾರದಂದು ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾದ ತಾಯಿ, ನವಜಾತ ಶಿಶು, ಮಕ್ಕಳ ಮತ್ತು ಹದಿಹರೆಯದವರ ಆರೋಗ್ಯ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

    ದೇಶದ ಪ್ರತಿಯೊಬ್ಬ ನಾಗರೀಕನ ರಕ್ಷಣೆಗೆ ಸರಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಇದರ ಅನುಷ್ಠಾನಕ್ಕೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು.  ಇದರ ಜೊತೆಯಲ್ಲಿ ಸಾರ್ವಜನಿಕರು ಸಹ ಸದ್ಬಳಕೆಗೆ ಮುಂದಾಗಬೇಕು ಎಂದು ಚಂದ್ರಮೌಳಿ ಅವರು ಮನವಿ ಮಾಡಿದರು.
ಸಂತಾನೋತ್ಪತ್ತಿ, ತಾಯಿ, ನವಜಾತ ಶಿಶು, ಮಕ್ಕಳ ಮತ್ತು ಹದಿಹರೆಯದವರ ಆರೋಗ್ಯ ಕುರಿತು ಹಿಟ್ನಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದಾಧಿಕಾರಿ ಡಾ. ಮಹೇಶ ಅವರು ವಿಶೇಷ ಉಪನ್ಯಾಸ ನೀಡಿ, ಮಹಿಳೆಯರು ತಾನು ಗರ್ಭವತಿ ಎಂದು ತಿಳಿದಾಕ್ಷಣ ವೈದ್ಯರನ್ನು ಸಂಪರ್ಕಿಸಿ, ತಾಯಿ ಕಾರ್ಡ್ ಪಡೆಯಬೇಕು.  ವೈದ್ಯರ ಸಲಹೆಯಂತೆ 3 ಬಾರಿ ಸ್ಕ್ಯಾನಿಂಗ್, 4 ಬಾರಿ ತಪಾಸಣೆ ಮತ್ತು ಚುಚ್ಚುಮದ್ದು ಹಾಗೂ ಔಷೊಧೋಪಚರಗಳನ್ನು ತಪ್ಪದೇ ಪಡೆದುಕೊಳ್ಳಬೇಕು.  ಜೆ.ಎಸ್.ಎಸ್.ವಾಯ್. ಯೋಜನೆಯಡಿ ಈ ಎಲ್ಲಾ ಸೇವೆಗಳು ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಭ್ಯವಿದ್ದು, ಹಾರೈಕೆ, ಹೆರಿಗೆ ಭತ್ಯಗಳನ್ನು ಸರಕಾರದ ವತಿಯಿಂದ ನೀಡಲಾಗುತ್ತದೆ.  35 ವರ್ಷದ ವಯಸ್ಸಿನ ಗರ್ಭಿಣಿಯರು, ಅವಳಿ ಮಕ್ಕಳನ್ನು ಹೊಂದಿರುವವರು, ಕಾಯಿಲೆ ಸಮಸ್ಯೆ ಹೊಂದಿದವವರನ್ನು ಗಂಡಾಂತರ ಗರ್ಭೀಣಿಯರು ಎಂದು ಗುರುತಿಸಲಾಗಿದ್ದು, ಇದರ ಸುರಕ್ಷಿತ ಹೆರಿಗೆಯನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಮಾಡಬಾರದು.  ಅದಕ್ಕಾಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಇವರಿಗೆ ಪ್ರೋತ್ಸಾಹಿಸಬೇಕು.  ಇದರಿಂದ ಖಂಡಿತವಾಗಿಯೂ ತಾಯಿ ಮತ್ತು ಮಗುವನ್ನು ರಕ್ಷಿಸ ಬಹುದಾಗಿದೆ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಿ. ಇಮಲಾಪುರ ಅವರು ಮಾತನಾಡಿ, ಗರ್ಭೀಣಿಯರಿಗೆ ಅಂಗನವಾಡಿ ಮೂಲಕ ಪೌಷ್ಠಿಕ ಆಹಾರವನ್ನು ನೀಡಲಾಗುತ್ತದೆ.  ಮಕ್ಕಳಿಗೆ ಪೂರ್ವ ಶಾಲಾ ಶಿಕ್ಷಣದ ಜೊತೆಗೆ ಮಾನಸಿಕ ಸಮಸ್ಯೆಯುಳ್ಳ ಮಕ್ಕಳಿಗೆ ಇಲಾಖೆಯ ಮೂಲಕ ವಿಶೇಷ ಮಾಹಿತಿ ಸೇವೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಹುಲಿಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಣುಕಾ ರಾಮಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾ.ಪಂ. ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿ ಪ್ರಕಾಶ ಸಜ್ಜನ, ಕ್ಷೇತ್ರ ಪ್ರಚಾರ ನಿರ್ದೇಶಕ ಸಿ.ಕೆ. ಸುರೇಶ, ಸಿ.ಬಿ. ಲಕ್ಷ್ಮೀಕಾಂತ, ಭುವನೇಶ್ವರಿ, ಈರಣ್ಣ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.  ಅಲ್ಲದೆ ತುಂಗಭದ್ರಾ ಪ್ರೌಢ ಶಾಲೆ ವಿದ್ಯಾರ್ಥಿಗಳಿಂದ ತಾಯಿ ಮಗುವಿನ ರಕ್ಷಣೆ ಬಗ್ಗೆ ವಿಶೇಷ ಜಾಗೃತಿ ಜಾಥಾ ನಡೆಯಿತು.
Post a Comment