Saturday, 25 March 2017

ಯಲಬುರ್ಗಾ ಕ್ಷೇತ್ರದಲ್ಲಿ 2017-18 ನೇ ವರ್ಷ ನೀರಾವರಿ ಪರ್ವ : ಬಸವರಾಜ ರಾಯರಡ್ಡಿ


ಕೊಪ್ಪಳ, ಮಾ.25 (ಕರ್ನಾಟಕ ವಾರ್ತೆ): ಯಲಬುರ್ಗಾ ಕ್ಷೇತ್ರದಲ್ಲಿ ಈಗಾಗಲೆ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಕಾಮಗಾರಿ, ಇಂಜಿನಿಯರಿಂಗ್ ಕಾಲೇಜು, ಸಿ.ಸಿ. ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, 2017-18 ನೇ ವರ್ಷವನ್ನು ಕ್ಷೇತ್ರದಲ್ಲಿ ನೀರಾವರಿ ಅಭಿವೃದ್ಧಿಗಾಗಿಯೇ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.

     ಕೊಪ್ಪಳ ಜಿಲ್ಲಾಡಳಿತ ಮತ್ತು ಯಲಬುರ್ಗಾ ಪಟ್ಟಣ ಪಂಚಾಯತ್ ಇವರ ಸಹಯೋಗದಲ್ಲಿ ಯಲಬುರ್ಗಾ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜ ಮೈದಾನದಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ, ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ, ಪಂಚಾಯತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಮತ್ತು ವಿವಿಧ ವೃತ್ತಗಳಲ್ಲಿ ಸಿ.ಸಿ. ಕ್ಯಾಮರಾಗಳ ಚಾಲನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

     ಯಲಬುರ್ಗಾ ಕ್ಷೇತ್ರದಲ್ಲಿ ಈಗಾಗಲೆ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾರ್ಯ, ಹೊಸ ರೈಲ್ವೆ ಮಾರ್ಗದ ಕಾರ್ಯ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಗ್ರಾಮ ಗ್ರಾಮಗಳಲ್ಲಿ ಸಿ.ಸಿ. ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು, ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸಲಾಗುತ್ತಿದೆ.  ಯಲಬುರ್ಗಾ ಕ್ಷೇತ್ರದಲ್ಲಿ ಕೃಷ್ಣ ಭಾಗ್ಯ ಜಲನಿಗಮದಿಂದ ಕೈಗೊಳ್ಳಾಗುವ ನೀರಾವರಿ ಯೋಜನೆಗಳಿಗೆ 1800 ಕೋಟಿ ರೂ. ಅನುದಾನ ದೊರಕಿಸಲು ಕ್ರಮ ಕೈಗೊಳ್ಳಲಾಗಿದೆ.  ಗ್ರಾಮಗಳಿಗೆ ಶುದ್ಧ ಕುಡಿಯುವ  ನೀರಿನ ಬೃಹತ್ ಯೋಜನೆಗಳು ಹೀಗೆ ಯಲಬುರ್ಗಾದಲ್ಲಿ 2017-18 ನೇ ವರ್ಷ ನೀರಾವರಿ ಪರ್ವದ ವರ್ಷವಾಗಲಿದೆ.   ನಮ್ಮ ಸರ್ಕಾರವು ನೀರಾವರಿಗಾಗಿ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಕೃಷಿ ಹೊಂಡಗಳ ನಿರ್ಮಾಣ, ಕೆರೆಗಳನ್ನು ತುಂಬಿಸುವ ಕಾರ್ಯಗಳನ್ನು ನಡೆಸುತ್ತಿದೆ.  ಯಲಬುರ್ಗಾ ತಾಲೂಕಿನ ನೀರಾವರಿ ಯೋಜನೆಗಳಿಗೆ 1800 ಕೋಟಿ. ರೂ. ಅನುದಾನ ನೀಡಿದ್ದಾರೆ.  ಬರುವ ದಿನಗಳಲ್ಲಿ ಮುಖ್ಯಮಂತ್ರಿಗಳೇ ಭೂಮಿ ಪೂಜೆ ನೆರೆವೇರಿಸಲಿದ್ದಾರೆ.  ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕಿನ ಒಟ್ಟು 36 ಕೆರೆಗಳನ್ನು ತುಂಬಿಸಲು 290 ಕೋಟಿ ರೂ. ಅನುಮೋದನೆಯಾಗಿದೆ   ಎಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.

ಶಿಕ್ಷಣ ಅಭಿವೃದ್ಧಿ : ಯಲಬುರ್ಗಾ ಕ್ಷೇತ್ರ ಶಿಕ್ಷಣ ಕ್ಷೇತ್ರದಲ್ಲಿ ಇದೀಗ ತಾನೆ ಹೆಚ್ಚು ಅಭಿವೃದ್ಧಿಯಾಗುತ್ತಿದೆ.  ತಳಕಲ್‍ನಲ್ಲಿ ಈಗಾಗಲೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ಎಲ್ಲ ಸಿದ್ಧತೆಗಳು ನಡೆದಿದ್ದು, ಕಾಮಗಾರಿ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ.  ತಳಕಲ್ ಹಾಗೂ ಬೇವೂರು ಗ್ರಾಮಗಳಲ್ಲಿ ತಲಾ 15 ಕೋಟಿ ರೂ. ವೆಚ್ಚದಲ್ಲಿ ವಸತಿ ಸಹಿತ ಪದವಿ ಕಾಲೇಜನ್ನು ಮಂಜೂರು ಮಾಡಿ, ಪ್ರಸಕ್ತ ವರ್ಷವೇ ಕಾಮಗಾರಿ ಪ್ರಾರಂಭಿಸಲಾಗುವುದು.  ಕ್ಷೇತ್ರದಲ್ಲಿ 12 ಹೊಸ ಪ್ರೌಢಶಾಲೆಗಳು ಹಾಗೂ 08 ಹೊಸ ಪದವಿಪೂರ್ವ ಕಾಲೇಜು ಪ್ರಾರಂಭಕ್ಕೆ ಕ್ರಮ ಜರುಗಿಸಲಾಗುವುದು ಎಂದು ಬಸವರಾಜ ರಾಯರಡ್ಡಿ ಅವರು ಹೇಳಿದರು.  ಜಿಲ್ಲೆಯಲ್ಲಿ ಕೈಗೊಂಡ ಜನಸಂಪರ್ಕ ಸಭೆಯಲ್ಲಿ ಅಂಗವಿಕಲರು ಮಾಡಿದ ಮನವಿಯಂತೆ ಯಲಬುರ್ಗಾ ಕ್ಷೇತ್ರ ಒಂದರಲ್ಲೇ ಒಟ್ಟು 110 ತ್ರಿಚಕ್ರ ವಾಹನಗಳನ್ನು ವಿತರಿಸಲಾಗುತ್ತಿದ್ದು, ಬರುವ ದಿನಗಳಲ್ಲಿ ಇನ್ನೂ 50 ರಿಂದ 60 ತ್ರಿಚಕ್ರ ವಾಹನಗಳನ್ನು ಒದಗಿಸಲಾಗುವುದು ಎಂದರು.  ಕಾರ್ಯಕ್ರಮದ ಸಂದರ್ಭದಲ್ಲಿ ಎಲ್ಲ ಅರ್ಹ ವಿಕಲಚೇತನರಿಗೆ ತ್ರಿಚಕ್ರ ಮೋಟಾರು ವಾಹನ ವಿತರಿಸಲಾಯಿತು.  ಪ.ಜಾತಿ ಮತ್ತು ಪ.ಪಂಗಡದವರಿಗೆ ಅಕ್ರಮ-ಸಕ್ರಮ ಯೋಜನೆಯಡಿ 320 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.  ಅಲ್ಲದೆ ಪ.ಜಾತಿ ಮತ್ತು ಪ.ಪಂಗಡದ 320 ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕದ ಸಿಲಿಂಡರ್ ಹಾಗೂ ಸ್ಟೋವ್ ವಿತರಿಸಲಾಯಿತು.

    ಸಮಾರಂಭದ ಅಧ್ಯಕ್ಷತೆಯನ್ನು ಯಲಬುರ್ಗಾ ಪಟ್ಟಣ ಪಂಚಾಯತಿಯ ಅಧ್ಯಕ್ಷೆ ಜಯಶ್ರೀ ಶರಣಪ್ಪ ಅರಕೇರಿ ವಹಿಸಿದ್ದರು.  ತಾ.ಪಂ. ಅಧ್ಯಕ್ಷೆ ಲಕ್ಷ್ಮೀ ದ್ಯಾಮಣ್ಣ ಗೌಡರ್, ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್, ತಹಶಿಲ್ದಾರ ರಮೇಶ ಅಳವಂಡಿಕರ್, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿ, ಜಿ.ಪಂ. ಸದಸ್ಯ ಹನುಮಂತ ಗೌಡ, ಜಿಲ್ಲಾ ಪಂಚಾಯತಿ ಸದಸ್ಯೆ ಗೀರಿಜಾ ಸಂಗಟಿ, ಗಣ್ಯರಾದ ಬಸವರಾಜ ಉಳಾಗಡ್ಡಿ, ಯಕ್ಕಣ್ಣ ಯರಾಶಿ, ಸೇರಿದಂತೆ ತಾ.ಪಂ. ಪ.ಪಂ ಸದಸ್ಯರುಗಳು ಉಪಸ್ಥಿತರಿದ್ದರು.
Post a Comment