Saturday, 18 March 2017

ಕೆಲಸ ಮಾಡಿದ 15 ದಿನಗಳೊಳಗೆ ಕೂಲಿ ಹಣ ಪಾವತಿಸಿ- ಎಚ್.ಕೆ. ಪಾಟೀಲ್ಕೊಪ್ಪಳ, ಮಾ.18 (ಕರ್ನಾಟಕ ವಾರ್ತೆ): ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳಲ್ಲಿ ಕೆಲಸ ಮಾಡಿದ 15 ದಿನಗಳ ಒಳಗಾಗಿ ತಪ್ಪದೆ ಕೂಲಿಕಾರರ ಬ್ಯಾಂಕ್ ಖಾತೆಗೆ ಹಣ ಪಾವತಿಯಾಗಬೇಕು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಖಾತೆ ಸಚಿವ ಎಚ್.ಕೆ. ಪಾಟೀಲ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

     ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ ಬರ ಪರಿಹಾರ ಕಾರ್ಯಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಪ್ರಸಕ್ತ ವರ್ಷ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದೆ.  ಅದರಲ್ಲೂ, ಕೊಪ್ಪಳ ಜಿಲ್ಲೆಯಲ್ಲಿ ತೀವ್ರ ಬರ ತಲೆದೋರಿದ್ದು, ಇಲ್ಲಿನ ಜನ ಉದ್ಯೋಗಕ್ಕಾಗಿ ಗುಳೇ ಹೋಗುವುದರ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ.  ಈ ವರ್ಷದ ಬೇಸಿಗೆಯಲ್ಲಿ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವುದರ ಕಡೆ ಅಧಿಕಾರಿಗಳು ಗಮನ ನೀಡಬೇಕಿದೆ.  ಜೂನ್ ತಿಂಗಳಿನವರೆಗೂ ಸಂಕಷ್ಟದ ಕಾಲವೆಂದೇ ಭಾವಿಸಬೇಕಾಗುತ್ತದೆ.  ಉದ್ಯೋಗಖಾತ್ರಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕನಿಷ್ಟ 03 ದೊಡ್ಡ ಪ್ರಮಾಣದ ಕಾಮಗಾರಿಗಳನ್ನು ಪ್ರಾರಂಭಿಸಿದರೆ, ಜನರಿಗೆ ಕೂಲಿ ತಪ್ಪದೆ ಸಿಗುವ ಬಗ್ಗೆ ವಿಶ್ವಾಸ ಮೂಡುತ್ತದೆ. ಕೆಲಸ ಮಾಡಿದ 15 ದಿನಗಳ ಒಳಗಾಗಿ ಕೂಲಿಕಾರರ ಬ್ಯಾಂಕ್ ಖಾತೆಗೆ ಕೂಲಿ ಹಣ ಜಮಾ ಆಗಬೇಕು.  ತಪ್ಪಿದಲ್ಲಿ ಅವರ ಕೂಲಿ ಹಣಕ್ಕೆ ಶೇ. 0. 05 ರಷ್ಟು ಬಡ್ಡಿಯನ್ನು ಸೇರಿಸಿ, ಹಣ ಪಾವತಿಸಬೇಕಾಗುತ್ತದೆ.    ವಿಳಂಬಕ್ಕೆ ಕಾರಣರಾದ ಅಧಿಕಾರಿಗಳಿಗೆ ದಂಡ ಹಾಕಿ, ಬಡ್ಡಿ ಹಣವನ್ನು ಪಾವತಿಸಬೇಕು.  ಸಮಯಕ್ಕೆ ಸರಿಯಾಗಿ ಉದ್ಯೋಗ ಹಾಗೂ ಕೂಲಿ ಹಣವನ್ನು ಕೂಲಿಕಾರರಿಗೆ ನೀಡಿದರೆ, ಉದ್ಯೋಗಖಾತ್ರಿ ಯೋಜನೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿ, ಗುಳೇ ಹೋಗುವುದು ತಪ್ಪಲಿದೆ.   100 ಕ್ಕಿಂತ ಹೆಚ್ಚು ಜನರು ಒಂದೆಡೆ ಕೆಲಸ ಮಾಡುತ್ತಿದ್ದಲ್ಲಿ, ಅವರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬೇಕು.  ಕೂಲಿಕಾರರ ಮಕ್ಕಳಿಗೆ ನೆರಳು ಒದಗಿಸಿ, 05 ಕ್ಕಿಂತಲೂ ಹೆಚ್ಚು ಮಕ್ಕಳಿದ್ದಲ್ಲಿ, ಅವರನ್ನು ನೋಡಿಕೊಳ್ಳಲು ಒಬ್ಬರನ್ನು ನಿಯೋಜಿಸಬೇಕು.  ಮಕ್ಕಳಿಗೆ ಆಟಿಕೆ ವಸ್ತುಗಳನ್ನು ನೀಡಿ, ಶಿಕ್ಷಣಕ್ಕೂ ವ್ಯವಸ್ಥೆ ಕೈಗೊಳ್ಳಬೇಕು.  ಕೂಲಿಕಾರರ ಆರೋಗ್ಯ ತಪಾಸಣೆಗೆ ಸರ್ಕಾರಿ ವೈದ್ಯರನ್ನು ನಿಯೋಜಿಸಬೇಕು.  ಸರ್ಕಾರಿ ವೈದ್ಯರು ಲಭ್ಯರಿಲ್ಲದ ಪಕ್ಷದಲ್ಲಿ, ಖಾಸಗಿ ವೈದ್ಯರ ಸೇವೆಯನ್ನು ಪಡೆಯಬೇಕು.  ಉದ್ಯೋಗಖಾತ್ರಿ ಸೇರಿದಂತೆ ಯಾವುದೇ ಯೋಜನೆಯ ಬಗ್ಗೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಚಿವ ಎಚ್.ಕೆ. ಪಾಟೀಲ್ ಅವರು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರಿಗೆ ಸೂಚನೆ ನೀಡಿದರು.
ಉದ್ಯೋಗಖಾತ್ರಿಯಲ್ಲಿ 90. 88 ಕೋಟಿ ರೂ. ವೆಚ್ಚ :
********************* ಪ್ರಸಕ್ತ ವರ್ಷದ ಬರ ಪರಿಸ್ಥಿತಿ ನಿರ್ವಹಣೆಗಾಗಿಯೇ ಜಿಲ್ಲಾ ಪಂಚಾಯತಿಯು ಉದ್ಯೋಗಖಾತ್ರಿ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸಿದೆ.  ಪ್ರಸಕ್ತ ವರ್ಷ ಈವರೆಗೆ 197197 ಉದ್ಯೋಗ ಚೀಟಿಗಳನ್ನು ವಿತರಿಸಲಾಗಿದ್ದು, ಈವರೆಗೆ 90. 88 ಕೋಟಿ ರೂ. ವೆಚ್ಚ ಮಾಡಲಾಗಿದೆ.  ಇದರಲ್ಲಿ ಕೂಲಿ ಹಣ ಹಾಗೂ ಸಾಮಗ್ರಿ ವೆಚ್ಚವೂ ಸೇರಿದೆ.  ಈವರೆಗೆ ಜಿಲ್ಲೆಯಲ್ಲಿ 27. 59 ಲಕ್ಷ ಮಾನವ ದಿನಗಳನ್ನು ಸೃಜಿಸಿದ್ದು, ಶೇ. 82 ರಷ್ಟು ಗುರಿ ಸಾಧನೆ ಮಾಡಲಾಗಿದೆ.  ಉದ್ಯೋಗಖಾತ್ರಿ ಯೋಜನೆ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಪ್ರಚಾರ, ಡಂಗುರ ಹಾಕುವ ಮೂಲಕ ಅರಿವು ಮೂಡಿಸಲಾಗುತ್ತಿದೆ.  ಅಲ್ಲದೆ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಶಿಬಿರ, ಮಕ್ಕಳಿಗೆ ಆಟದ ಜೊತೆಗೆ ಪಾಠದ ವ್ಯವಸ್ಥೆಯೂ ಮಾಡಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ವಿವರ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಚ್.ಕೆ. ಪಾಟೀಲರು, ಜಿಲ್ಲೆಯಲ್ಲಿ ಹೆಚ್ಚಿನ ಉದ್ಯೋಗ ಸೃಜನೆ ಆಗುವಂತಹ ಕಾಮಗಾರಿಗಳ ಜೊತೆಗೆ ದನದ ದೊಡ್ಡಿ, ಕುರಿದೊಡ್ಡಿ, ಇಂಗುಗುಂಡಿ ನಿರ್ಮಾಣದ ಜೊತೆಗೆ ಸಿ.ಸಿ. ರಸ್ತೆ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುದ್ಧ ಕುಡಿಯುವ ನೀರಿನ ಘಟಕ :
*************ಜಿಲ್ಲೆಯಲ್ಲಿ 558 ಶುದ್ಧ ಕುಡಿಯುವ ನೀರಿನ ಘಟಕಗಳು ಮಂಜೂರಾಗಿದ್ದು, ಈ ಪೈಕಿ 430 ಘಟಕಗಳನ್ನು ಅಳವಡಿಸಲಾಗಿದೆ.  ಇದರಲ್ಲಿ 400 ಶುದ್ಧ ಕುಡಿಯುವ ನೀರಿನ ಘಟಕಗಳು ಸದ್ಯ ಕಾರ್ಯ ನಿರ್ವಹಿಸುತ್ತಿವೆ.  ಕೆಲವೆಡೆ ವಿದ್ಯುತ್ ವೋಲ್ಟೇಜ್ ಸಮಸ್ಯೆ ಇದ್ದರೆ, ಕೆಲವೆಡೆ ನೀರಿನ ತೊಂದರೆ ಇದೆ.  ಮೆ: ಪ್ಯಾನ್ ಏಷಿಯಾ ಏಜೆನ್ಸಿಯವರು ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆಯಲ್ಲಿ ಹೆಚ್ಚು ವಿಳಂಬ ಮಾಡುತ್ತಿದ್ದು, ತೊಂದರೆ ಉಂಟಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹೇಳಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಹೆಚ್.ಕೆ. ಪಾಟೀಲರು, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಮರ್ಪಕವಾಗಿ, ಕಾಲಕ್ಕೆ ಸರಿಯಾಗಿ ಅಳವಡಿಸದ ಏಜೆನ್ಸಿಯವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುವಂತೆ ಸೂಚನೆ ನೀಡಿದರು.
ಆಂಬುಲೆನ್ಸ್ ಮಾದರಿ ದುರಸ್ತಿ ವಾಹನ :
************** ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯ ನಿರ್ವಹಣೆ ಹಾಗೂ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಅನುಕೂಲವಾಗುವಂತೆ ಸಹಾಯವಾಣಿ ಪ್ರಾರಂಭಿಸಬೇಕು. ಈಗಾಗಲೆ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆ ಉಚಿತ ಸಹಾಯವಾಣಿಯನ್ನು ಪ್ರಾರಂಭಿಸಿದೆ.  ಅದೇ ರೀತಿ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯು ಕೂಡ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲು, ಆ್ಯಂಬುಲೆನ್ಸ್ ಮಾದರಿಯಲ್ಲಿ ಸಂಚಾರಿ ಆರ್.ಓ ಘಟಕ ದುರಸ್ತಿ ವಾಹನವನ್ನು ಪ್ರಾರಂಭಿಸಬೇಕು ಎಂದು ಸಚಿವ ಎಚ್.ಕೆ. ಪಾಟೀಲ್ ಅವರು ಸೂಚನೆ ನೀಡಿದರು.
     ಸಭೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಉಪಕಾರ್ಯದರ್ಶಿ ಎನ್.ಕೆ. ತೊರವಿ, ಉಪವಿಭಾಗಾದಿಕಾರಿ ಗುರುದತ್ ಹೆಗ್ಡೆ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
Post a Comment