Thursday, 9 March 2017

ಮಾ. 10 ರಂದು ಅಳವಂಡಿ-ಬೆಟಗೇರಿ ಏತನೀರಾವರಿ ಯೋಜನೆಗೆ ಶಿಲಾನ್ಯಾಸ

ಕೊಪ್ಪಳ ಮಾ. 09 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನಲ್ಲಿ ನೂತನವಾಗಿ ಕರ್ನಾಟಕ ನೀರಾವರಿ ನಿಗಮ ನಿಯಮಿತದ ವತಿಯಿಂದ ಅನುಷ್ಟಾನಗೊಳ್ಳಲಿರುವ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಗೆ ಮಾ. 10 ರಂದು ಶಿಲಾನ್ಯಾಸ ನೆರವೇರಲಿದೆ.
     ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆ ಪ್ರಾರಂಭವಾಗಬೇಕು ಎನ್ನುವುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಇದೀಗ ಈ ಯೋಜನೆ ಕಾಮಗಾರಿಗೆ ಕಾಲ ಕೂಡಿಬಂದಿದ್ದು, ಮಾ. 10 ರಂದು ಬೆಳಿಗ್ಗೆ 11 ಗಂಟೆಗೆ ಬೆಟಗೇರಿಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.  ಕರ್ನಾಟಕ ನೀರಾವರಿ ನಿಗಮವು ಯೋಜನೆ ಅನುಷ್ಠಾನದ ಹೊಣೆ ಹೊತ್ತುಕೊಂಡಿದೆ.  ಒಟ್ಟು 87. 10 ಕೋಟಿ ರೂ. ಗಳ ಯೋಜನೆ ಇದಾಗಿದ್ದು, ತಾಲೂಕಿನ ಹನಕುಂಟಿ ಗ್ರಾಮದ ಬಳಿಯ ತುಂಗಭದ್ರಾ ನದಿ ಹಿನ್ನೀರಿನ ಪ್ರದೇಶದಿಂದ ಏತ ನೀರಾವರಿ ಯೋಜನೆಗೆ ನೀರು ಕಲ್ಪಿಸಲು ಯೋಜನೆ ರೂಪಿಸಲಾಗಿದೆ.  ಇದಕ್ಕಾಗಿ  0.5 ಟಿ.ಎಂ.ಸಿ. ನೀರಿನ ಹಂಚಿಕೆ ಮಾಡಲಾಗಿದ್ದು, ಯೋಜನೆ ಜಾರಿಯಿಂದ ಸುಮಾರು 06 ಸಾವಿರ ಎಕರೆ ಭೂಮಿ ನೀರಾವರಿಗೆ ಒಳಪಡಲಿದ್ದು, ಈ ಭಾಗದ ರೈತರ ಬದುಕು ಬಂಗಾರವಾಗಲಿದೆ.      
     ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯ ಶಿಲಾನ್ಯಾಸ ಸಮಾರಂಭ ಮಾ. 10 ರಂದು ಬೆಳಿಗ್ಗೆ 11 ಗಂಟೆಗೆ ಬೆಟಗೇರಿ ಗ್ರಾಮದಲ್ಲಿ ಆಯೋಜಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಉದ್ಘಾಟಿಸುವರು.  ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಶಿಲಾನ್ಯಾಸ ನೆರವೇರಿಸುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಬೆಟಗೇರಿ ಗ್ರಾ.ಪಂ. ಅಧ್ಯಕ್ಷೆ ಹನುಮವ್ವ ಭರಮಪ್ಪ ಕಂಬಳಿ ಪಾಲ್ಗೊಳ್ಳುವರು.
Post a Comment