Thursday, 30 March 2017

ಏ. 02 ರಿಂದ ಜಿಲ್ಲೆಯಾದ್ಯಂತ ಪಲ್ಸ್-ಪೋಲಿಯೋ : ಜಿಲ್ಲೆಯ 194138 ಮಕ್ಕಳಿಗೆ ಪೋಲಿಯೋ ಲಸಿಕೆ : ವೆಂಕಟರಾಜಾ ಸೂಚನೆ


ಕೊಪ್ಪಳ, ಮಾ.30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಏ. 02 ರಿಂದ 05 ರವರೆಗೆ ನಾಲ್ಕು ದಿನಗಳ ಕಾಲ, ಮೊದಲ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ ಐದು ವರ್ಷದೊಳಗಿನ 194138 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿಯನ್ನು ತಪ್ಪದೆ ಸಾಧಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿ ವೆಂಕಟರಾಜಾ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾ ಪಂಚಾಯತಿಯ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಿದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಕೊಪ್ಪಳ ಜಿಲ್ಲೆಯಲ್ಲಿ ಏ. 02 ರಿಂದ 05 ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಮೊದಲ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳು ಸಹಕರಿಸಬೇಕು.  ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಲಸಿಕಾ ಕಾರ್ಯಕ್ರಮದ ಮೊದಲನೇ ದಿನ ಏ.01 ರಂದು ಶಾಲೆಯ ಮಕ್ಕಳಿಂದ ಪಲ್ಸ್-ಪೋಲಿಯೊ ಕಾರ್ಯಕ್ರಮದ ಜಾಥಾ ಮಾಡಿಸಬೇಕು.  ಸ್ಕೌಟ್ಸ್ & ಗೈಡ್ಸ್ ಇರುವಂತಹ ಶಾಲೆಗಳು ಏ. 02 ರಂದು ಸಕ್ರಿಯವಾಗಿ ಭಾಗವಹಿಸಬೇಕು.  ಹಾಗೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು.
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಅಲಕನಂದಾ ಮಳಗಿ ಅವರು ಮಾತನಾಡಿ, ಪ್ರಸಕ್ತ ಸಾಲಿನ ಈ ಕಾರ್ಯಕ್ರಮದಲ್ಲಿ 0-5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಜೀವರಕ್ಷಕ ಪೋಲಿಯೊ ಹಾಕಲಾಗುವುದು.  ಕ್ರಿಯಾ ಯೋಜನೆಯ ಪ್ರಕಾರ ಜಿಲ್ಲೆಯ ಜನಸಂಖ್ಯೆ 1500662 ಇದ್ದು, 0-5 ವರ್ಷದೊಳಗಿನ ಮಕ್ಕಳ ಸಂಖ್ಯೆ 194138 ಆಗಿದೆ.  ಈ ಮಕ್ಕಳಿಗೆ ಲಸಿಕೆ ಹಾಕಲು ಒಟ್ಟು 960 ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡದಲ್ಲಿ ಇಬ್ಬರು ಲಸಿಕಾಕರ್ತರುಗಳಂತೆ ಒಟ್ಟು 1920 ಲಸಿP ಕರ್ತರು ಕ್ಷೇತ್ರದಲ್ಲಿ ಕಾರ್ಯನಿರ್ವಸಲಿದ್ದಾರೆ.
ಕಳೆದ ವರ್ಷ ಕೈಗೊಂಡ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ 195121 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗಿದೆ.  ಪ್ರಸಕ್ತ-2017ರ ಸಾಲಿನಲ್ಲಿಯೂ ಸಹ ನಿಗದಿತ ಅವಧಿಯೊಳಗೆ ಶೇ. 100 ರಷ್ಟು ಸಾಧನೆಯನ್ನು ಮಾಡುವಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಾಧ್ಯಮದ ಪ್ರತಿನಿಧಿಗಳ ಸಹಕಾರವು ಅತ್ಯಮೂಲ್ಯವಾಗಿದೆ ಎಂದರು.
ಬಳ್ಳಾರಿ ಎಸ್.ಎಮ್.ಒ. ಡಾ. ಆರ್.ಎಸ್. ಶ್ರೀಧರ ಅವರು ಪೋಲಿಯೊ ನಿರ್ಮೂಲನೆ ಪ್ರಸ್ತುತ ಸ್ಥಿತಿ-ಗತಿ ಕುರಿತು ವಿವರಿಸಿದರು.  ಸಭೆಯಲ್ಲಿ ಡಿ.ಹೆಚ್.ಒ. ರಾಮಕೃಷ್ಣ, ಡಿ.ಎಸ್. ಲಕ್ಷ್ಮೀನಾರಾಯಣರಾವ್, ಡಿ.ಎಫ್.ಡಬ್ಲ್ಯೂ.ಒ. ಡಾ. ಜಂಬಯ್ಯ, ಡಿ.ಎಂ.ಒ. ವಿರುಪಾಕ್ಷ ಎಂ., ಟಿ.ಹೆಚ್.ಒ. ಡಾ. ರಾಮಾಂಜನೇಯ, ಕುಷ್ಟಗಿ ಟಿ.ಹೆಚ್.ಒ. ಡಾ. ಆನಂದ ಗೋಟೂರ, ಗಂಗಾವತಿ ಟಿ.ಹೆಚ್.ಒ. ಡಾ. ಗೌರಿಶಂಕರ, ಯಲಬುರ್ಗಾ ಟಿ.ಹೆಚ್.ಒ. ಡಾ. ಪ್ರಕಾಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
Post a Comment