Friday, 31 March 2017

ಬೇಸಿಗೆಯಲ್ಲಿ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ

ಕೊಪ್ಪಳ ಮಾ. 31 (ಕರ್ನಾಟಕ ವಾರ್ತೆ) ; ಬಿರು ಬೇಸಿಗೆ ಮಾಸಗಳಾದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಗಳು ಮತ್ತು ಬೆಳಗಾವಿ ವಿಭಾಗದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರಿ ಕಚೇರಿಗಳ ಕೆಲಸದ ವೇಳೆಯನ್ನು ಬೆಳಿಗ್ಗೆ 08 ರಿಂದ ಮಧ್ಯಾಹ್ನ 1-30 ರವರೆಗೆ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.
     ಸರ್ಕಾರಿ ನೌಕರರ ಹಿತದೃಷ್ಟಿಯಿಂದ ತೀವ್ರ ಬಿಸಿಲಿನ ತಾಪಮಾನವಿರುವ ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಕೊಪ್ಪಳ ಜಿಲ್ಲೆಯೂ ಸೇರಿದಂತೆ ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಗಳು ಮತ್ತು ಬೆಳಗಾವಿ ವಿಭಾಗದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಏ. 01 ರಿಂದ ಮೇ. 31 ರವರೆಗೆ ಸರ್ಕಾರಿ ಕಚೇರಿಗಳು ಬೆಳಿಗ್ಗೆ 08 ರಿಂದ ಮಧ್ಯಾಹ್ನ 1-30 ರವರೆಗೆ ಕಾರ್ಯನಿರ್ವಹಿಸಲಿವೆ.
           ಸರ್ಕಾರಿ ನೌಕರರು ಬದಲಾದ ಸಮಯದಲ್ಲಿ ತಮ್ಮ ಕರ್ತವ್ಯವನ್ನು ಯಾವುದೇ ಲೋಪ/ಅಡೆತಡೆ ಇಲ್ಲದೆ ಕರ್ತವ್ಯ ನಿರ್ವಹಿಸಬೇಕು.  ಸರ್ಕಾರದ ತುರ್ತು ಕೆಲಸವಿದ್ದರೆ ಜಿಲ್ಲಾಧಿಕಾರಿಗಳು/ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸರ್ಕಾರಿ ಕೆಲಸ ನಿರ್ವಹಿಸಲು ಆದೇಶ ಮಾಡಿದಲ್ಲಿ, ಅಂತಹ ಆದೇಶಗಳನ್ನು ತಪ್ಪದೆ ಪಾಲಿಸಿ, ಕಚೇರಿ ಕೆಲಸದ ಸಮಯ ಮೀರಿದರೂ, ಹಾಜರಾಗಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಕಂದಾಯ ಸಚಿವರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ


ಕೊಪ್ಪಳ, ಮಾ.31 (ಕರ್ನಾಟಕ ವಾರ್ತೆ): ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಏ. 02 ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
    ಸಚಿವರು ಅಂದು ಬೆಳಿಗ್ಗೆ ರಾಯಚೂರಿನಿಂದ ಹೊರಟು, ಕೊಪ್ಪಳಕ್ಕೆ ಬೆಳಿಗ್ಗೆ 10 ಗಂಟೆಗೆ ಆಗಮಿಸುವರು.  ನಂತರ ಜಿಲ್ಲೆಯಲ್ಲಿನ ಬರ ಪರಿಸ್ಥಿತಿ, ನಮೂನೆ 94ಸಿ- 94ಸಿಸಿ ಹಾಗೂ 50-53ರಡಿಯಲ್ಲಿ ವಿಲೇವಾರಿಯಾಗಿರುವ ಹಾಗೂ ಬಾಕಿಯಿರುವ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.  ಸಚಿವರು ಅದೇ ದಿನ ಮಧ್ಯಾಹ್ನ 02 ಗಂಟೆಗೆ ಬಳ್ಳಾರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ಬಡವರಿಗೆ ಹಾಗೂ ವಿಕಲಚೇತನರಿಗೆ ಅಡುಗೆ ಅನಿಲ ಸಿಲಿಂಡರ್ ಮತ್ತು ಸ್ಟೋವ್ ವಿತರಣೆ : ಅರ್ಜಿ ಆಹ್ವಾನ

ಕೊಪ್ಪಳ ಮಾ. 31 (ಕರ್ನಾಟಕ ವಾರ್ತೆ): ಯಲಬುರ್ಗಾ ಪಟ್ಟಣ ಪಂಚಾಯತಿ ವತಿಯಿಂದ 2017-18ನೇ ಸಾಲಿನ ಸಾಲಿನ ಎಸ್.ಎಫ್.ಸಿ. ಶೇ.7.25 ಮತ್ತು ಶೇ.3 ಯೋಜನೆಯಡಿ ಇತರೆ ಬಡಜನರಿಗೆ ಹಾಗೂ ವಿಕಲಚೇತನರಿಗೆ ಕಾಯ್ದಿರಿಸಿದ ಅನುದಾನದಲ್ಲಿ ಅಡುಗೆ ಅನಿಲ ಸಿಲೆಂಡರ್ ಮತ್ತು ಸ್ಟೋವ್ ಒದಗಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ ಅರ್ಹರು ಅಡುಗೆ ಅನಿಲ ಸಿಲಿಂಡರ್ ಮತ್ತು ಸ್ಟೋವ್ ಇತ್ಯಾದಿ ಸೌಲಭ್ಯ ಪಡೆಯಲು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ, ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ವಿಕಲಚೇತನರು, ಅಂಗವೈಕಲ್ಯದ ಪ್ರಮಾಣಪತ್ರ ಲಗತ್ತಿಸಿ ಏ. 17 ರ ಒಳಗಾಗಿ ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯತಿ, ಯಲಬುರ್ಗಾ ಇವರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ


ಕೊಪ್ಪಳ ಮಾ. 31 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2015 ರ ಅಡಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಕಂಪ್ಯೂರ್ ಆಪರೇಟರ್ ಹುದ್ದೆಯ ಅವಶ್ಯವಿರುತ್ತದೆ.  ಅರ್ಜಿ ಸಲ್ಲಿಸಲು ಯಾವುದೇ ಪದವಿ ವಿದ್ಯಾರ್ಹತೆ ಪಡೆದಿರಬೇಕು.  ಕಂಪ್ಯೂಟರ್ ಶಿಕ್ಷನ ತರಬೇತಿ ಪಡೆದಿರಬೇಕು, ಕೆಲಸ ಅನುಭವ ಅಪೇಕ್ಷಣೀಯ.  ಸ್ಥಳೀಯ ಮಹಿಳಾ ಅಭ್ಯರ್ಥಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.  ಈ ಹುದ್ದೆಯು ಸಂಪೂರ್ಣ ತಾತ್ಕಾಲಿಕ ಹುದ್ದೆಯಾಗಿರುತ್ತದೆ.  ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಸ್ವವಿವರ ಹಾಗೂ ಅಗತ್ಯ ದೃಢೀಕೃತ ದಾಖಲಾತಿಗಳೊಂದಿಗೆ ಅರ್ಜಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಹತ್ತಿರ, ಕಿನ್ನಾಳ ರೋಡ್, ಭಾಗ್ಯನಗರ ಕ್ರಾಸ್, ಕೊಪ್ಪಳ ಇವರಿಗೆ ಏಪ್ರಿಲ್ 07 ರ ಒಳಗಾಗಿ ಸಲ್ಲಿಸಬೇಕು ಎಂದು ಕೊಪ್ಪಳದ ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ. 31 ರಿಂದ ಹುಬ್ಬಳ್ಳಿ-ಚಿಕ್ಕಬೆಣಕಲ್ ನೂತನ ರೈಲು ಪ್ರಾರಂಭ

ಕೊಪ್ಪಳ ಮಾ. 31 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಗಿಣಿಗೇರಾದಿಂದ ಚಿಕ್ಕಬೆಣಕಲ್ ವರೆಗೆ ನೂತನವಾಗಿ   ರೈಲ್ವೆ ಲೈನ್ ಕಾಮಗಾರಿ ಪೂರ್ಣಗೊಂಡಿರುವುದರಿಂದ, ಇದೀಗ ನೈರುತ್ಯ ರೈಲ್ವೆಯು ಹುಬ್ಬಳ್ಳಿ-ಚಿಕ್ಕಬೆಣಕಲ್ ಮಾರ್ಗಕ್ಕೆ ಫಾಸ್ಟ್ ಪ್ಯಾಸೆಂಜರ್ ರೈಲನ್ನು ಮಾ. 31 ರಿಂದ ಪ್ರಾರಂಭ ಮಾಡಿದೆ.
     ಮಾ. 31 ರಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ನವದೆಹಲಿಯ ರೈಲ್ ಭವನ್‍ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.  ಕೊಪ್ಪಳ ಸಂಸದ ಕರಡಿ ಸಂಗಣ್ಣ, ಕೇಂದ್ರ ರಸಗೊಬ್ಬರಗಳ ಖಾತೆ ಸಚಿವ ಅನಂತಕುಮಾರ್ ಸೇರಿದಂತೆ ವಿವಿಧ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ನೂತನ ರೈಲಿಗೆ ಹಸಿರು ನಿಶಾನೆ ತೋರಿಸಿದರು. 
     ಹುಬ್ಬಳ್ಳಿ-ಚಿಕ್ಕಬೆಣಕಲ್ ಫಾಸ್ಟ್ ಪ್ಯಾಸೆಂಜರ್ ನೂತನ ರೈಲು (56927), ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ನಿತ್ಯ ಬೆಳಿಗ್ಗೆ 11 ಗಂಟೆಗೆ ಹೊರಡಲಿದ್ದು, ಅಣ್ಣಿಗೇರಿ(11-36), ಹುಲಕೋಟಿ(11-45), ಗದಗ (12), ಬನ್ನಿಕೊಪ್ಪ (12-48), ಬಾನಾಪುರ (ಮಧ್ಯಾಹ್ನ 01), ಕೊಪ್ಪಳ (01-17), ಗಿಣಿಗೇರಾ (01-30), ಬೂದಗುಂಪಾ (01-47), ಜಬ್ಬಲಗುಡ್ಡ (01-59) ಮಾರ್ಗವಾಗಿ ಚಿಕ್ಕಬೆಣಕಲ್ ಗ್ರಾಮಕ್ಕೆ ಮಧ್ಯಾಹ್ನ 02-30 ಗಂಟೆಗೆ ತಲುಪಲಿದೆ.
     ಚಿಕ್ಕಬೆಣಕಲ್-ಹುಬ್ಬಳ್ಳಿ ಫಾಸ್ಟ್ ಪ್ಯಾಸೆಂಜರ್ ರೈಲು (56928), ಚಿಕ್ಕಬೆಣಕಲ್ ರೈಲು ನಿಲ್ದಾಣದಿಂದ ನಿತ್ಯ ಮಧ್ಯಾಹ್ನ 03 ಗಂಟೆಗೆ ಹೊರಟು, ಜಬ್ಬಲಗುಡ್ಡ (03-12), ಬೂದಗುಂಪಾ (03-22), ಗಿಣಿಗೇರಾ (03-37), ಕೊಪ್ಪಳ (03-52), ಬಾನಾಪುರ (04-08), ಬನ್ನಿಕೊಪ್ಪ(04-20), ಗದಗ (05-03), ಹುಲಕೋಟಿ(05-31), ಅಣ್ಣಿಗೇರಿ (05-41) ಮಾರ್ಗವಾಗಿ ಹುಬ್ಬಳ್ಳಿಗೆ ಸಂಜೆ 06-45 ಗಂಟೆಗೆ ತಲುಪಲಿದೆ. 
     ಈ ರೈಲು 11 ಕೋಚಸ್ ಹೋದಿದ್ದು, 01-ಸ್ಲೀಪರ್ ಕ್ಲಾಸ್, 08- ಸಾಮಾನ್ಯ ಹಾಗೂ 02 ದ್ವಿತೀಯ ದರ್ಜೆ ಲಗೇಜ್ ಕಂ ಬ್ರೇಕೆವನ್ ಕೋಚ್ ಹೊಂದಿರುತ್ತದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, 30 March 2017

ಅಂಬೇಡ್ಕರ್ ಹಾಗೂ ಜಗಜೀವನರಾಂ ಜನ್ಮದಿನಾಚರಣೆ : ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ


ಕೊಪ್ಪಳ, ಮಾ.30 (ಕರ್ನಾಟಕ ವಾರ್ತೆ): ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ. ಬಾಬು ಜಗಜೀವನರಾಂ ರವರ 110ನೇ ಜನ್ಮ ದಿನಾಚರಣೆ ಅಂಗವಾಗಿ ಏ. 03 ರಂದು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ರವರ 126ನೇ ಜನ್ಮದಿನಾಚರಣೆಯ ನಿಮಿತ್ಯ ಏ. 12 ರಂದು ಎರಡು ಹಂತದಲ್ಲಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
    ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಜ್ಯೂನಿಯರ್ ಹಾಗೂ ಸೀನಿಯರ್ ಎರಡು ವಿಭಾಗಗಳಲ್ಲಿ ಏರ್ಪಡಿಸಲಾಗುವುದು. ಬಾಬು ಜಗಜೀವನರಾಂ ಜಯಂತಿ ಅಂಗವಾಗಿ, ಏ. 03 ರಂದು ಬೆಳಿಗ್ಗೆ 11-00 ರಿಂದ 12-00 ರವರೆಗೆ ‘ಪ್ರಸ್ತುತ ಸಂದರ್ಭಕ್ಕೆ ಡಾ. ಬಾಬು ಜಗಜೀವನರಾಂ ಅವರ ಕೊಡುಗೆಗಳು’ ವಿಷಯದ ಕುರಿತು ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.  ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ  ಏ. 12 ರಂದು ಬೆಳಿಗ್ಗೆ 11-00 ರಿಂದ 12-00 ರವರೆಗೆ, ‘ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಭಾರತ’ ಎಂಬ ವಿಷಯದ ಬಗ್ಗೆ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ, ಹೀಗೆ ಎರಡು ಹಂತಗಳಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದ್ದು, ಪ್ರಥಮ ಬಹುಮಾನ 5000ರೂ. ಹಾಗೂ ದ್ವೀತಿಯ 2000ರೂ ಆಗಿದೆ.  25 ವರ್ಷಕ್ಕಿಂತ ಕಡಿಮೆ ಇರುವವರು ಜೂನಿಯರ್ ವಿಭಾಗದಲ್ಲಿ ಹಾಗೂ 25 ವರ್ಷಕ್ಕಿಂತ ಮೇಲ್ಪಟ್ಟವರು ಸೀನಿಯರ್ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು.  ಎರಡೂ ವಿಭಾಗಗಳಿಗೆ ಪ್ರತ್ಯೇಕ ಬಹುಮಾನ ನೀಡಲಾಗುವುದು. ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ತಮ್ಮ ವಯಸ್ಸಿಗೆ ಸಂಬಂಧಿಸಿದ ಯಾವುದಾದರೂ ಒಂದು ದಾಖಲೆಯನ್ನು ಕಡ್ಡಾಯವಾಗಿ ಹಾಜರುಪಡಿಸಿ, ಪಾಲ್ಗೊಳ್ಳಬಹುದು.  ಸರ್ಕಾರಿ/ಖಾಸಗಿ ಶಾಲೆ, ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಹಾಗೂ ಸರ್ಕಾರಿ ನೌಕರರು ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹರಲ್ಲ.  ಕೊಪ್ಪಳ ಜಿಲ್ಲೆಯ ಯಾವುದೇ ತಾಲೂಕುಗಳ ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ. 02 ರಿಂದ ಜಿಲ್ಲೆಯಾದ್ಯಂತ ಪಲ್ಸ್-ಪೋಲಿಯೋ : ಜಿಲ್ಲೆಯ 194138 ಮಕ್ಕಳಿಗೆ ಪೋಲಿಯೋ ಲಸಿಕೆ : ವೆಂಕಟರಾಜಾ ಸೂಚನೆ


ಕೊಪ್ಪಳ, ಮಾ.30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಏ. 02 ರಿಂದ 05 ರವರೆಗೆ ನಾಲ್ಕು ದಿನಗಳ ಕಾಲ, ಮೊದಲ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ ಐದು ವರ್ಷದೊಳಗಿನ 194138 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿಯನ್ನು ತಪ್ಪದೆ ಸಾಧಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿ ವೆಂಕಟರಾಜಾ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾ ಪಂಚಾಯತಿಯ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಿದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಕೊಪ್ಪಳ ಜಿಲ್ಲೆಯಲ್ಲಿ ಏ. 02 ರಿಂದ 05 ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಮೊದಲ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳು ಸಹಕರಿಸಬೇಕು.  ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಲಸಿಕಾ ಕಾರ್ಯಕ್ರಮದ ಮೊದಲನೇ ದಿನ ಏ.01 ರಂದು ಶಾಲೆಯ ಮಕ್ಕಳಿಂದ ಪಲ್ಸ್-ಪೋಲಿಯೊ ಕಾರ್ಯಕ್ರಮದ ಜಾಥಾ ಮಾಡಿಸಬೇಕು.  ಸ್ಕೌಟ್ಸ್ & ಗೈಡ್ಸ್ ಇರುವಂತಹ ಶಾಲೆಗಳು ಏ. 02 ರಂದು ಸಕ್ರಿಯವಾಗಿ ಭಾಗವಹಿಸಬೇಕು.  ಹಾಗೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು.
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಅಲಕನಂದಾ ಮಳಗಿ ಅವರು ಮಾತನಾಡಿ, ಪ್ರಸಕ್ತ ಸಾಲಿನ ಈ ಕಾರ್ಯಕ್ರಮದಲ್ಲಿ 0-5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಜೀವರಕ್ಷಕ ಪೋಲಿಯೊ ಹಾಕಲಾಗುವುದು.  ಕ್ರಿಯಾ ಯೋಜನೆಯ ಪ್ರಕಾರ ಜಿಲ್ಲೆಯ ಜನಸಂಖ್ಯೆ 1500662 ಇದ್ದು, 0-5 ವರ್ಷದೊಳಗಿನ ಮಕ್ಕಳ ಸಂಖ್ಯೆ 194138 ಆಗಿದೆ.  ಈ ಮಕ್ಕಳಿಗೆ ಲಸಿಕೆ ಹಾಕಲು ಒಟ್ಟು 960 ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡದಲ್ಲಿ ಇಬ್ಬರು ಲಸಿಕಾಕರ್ತರುಗಳಂತೆ ಒಟ್ಟು 1920 ಲಸಿP ಕರ್ತರು ಕ್ಷೇತ್ರದಲ್ಲಿ ಕಾರ್ಯನಿರ್ವಸಲಿದ್ದಾರೆ.
ಕಳೆದ ವರ್ಷ ಕೈಗೊಂಡ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ 195121 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗಿದೆ.  ಪ್ರಸಕ್ತ-2017ರ ಸಾಲಿನಲ್ಲಿಯೂ ಸಹ ನಿಗದಿತ ಅವಧಿಯೊಳಗೆ ಶೇ. 100 ರಷ್ಟು ಸಾಧನೆಯನ್ನು ಮಾಡುವಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಾಧ್ಯಮದ ಪ್ರತಿನಿಧಿಗಳ ಸಹಕಾರವು ಅತ್ಯಮೂಲ್ಯವಾಗಿದೆ ಎಂದರು.
ಬಳ್ಳಾರಿ ಎಸ್.ಎಮ್.ಒ. ಡಾ. ಆರ್.ಎಸ್. ಶ್ರೀಧರ ಅವರು ಪೋಲಿಯೊ ನಿರ್ಮೂಲನೆ ಪ್ರಸ್ತುತ ಸ್ಥಿತಿ-ಗತಿ ಕುರಿತು ವಿವರಿಸಿದರು.  ಸಭೆಯಲ್ಲಿ ಡಿ.ಹೆಚ್.ಒ. ರಾಮಕೃಷ್ಣ, ಡಿ.ಎಸ್. ಲಕ್ಷ್ಮೀನಾರಾಯಣರಾವ್, ಡಿ.ಎಫ್.ಡಬ್ಲ್ಯೂ.ಒ. ಡಾ. ಜಂಬಯ್ಯ, ಡಿ.ಎಂ.ಒ. ವಿರುಪಾಕ್ಷ ಎಂ., ಟಿ.ಹೆಚ್.ಒ. ಡಾ. ರಾಮಾಂಜನೇಯ, ಕುಷ್ಟಗಿ ಟಿ.ಹೆಚ್.ಒ. ಡಾ. ಆನಂದ ಗೋಟೂರ, ಗಂಗಾವತಿ ಟಿ.ಹೆಚ್.ಒ. ಡಾ. ಗೌರಿಶಂಕರ, ಯಲಬುರ್ಗಾ ಟಿ.ಹೆಚ್.ಒ. ಡಾ. ಪ್ರಕಾಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Tuesday, 28 March 2017

ಏಪ್ರಿಲ್. 01 ರಂದು ಕೊಪ್ಪಳದಲ್ಲಿ ದೇವರದಾಸಿಮಯ್ಯ ಜಯಂತಿ ಆಚರಣೆ


ಕೊಪ್ಪಳ, ಮಾ.28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ ವತಿಯಿಂದ ಆದ್ಯ ವಚನಕಾರ ದೇವರದಾಸಿಮಯ್ಯ ಜಯಂತಿಯನ್ನು ಏ. 01 ರಂದು ಬೆಳಿಗ್ಗೆ 10-30 ಗಂಟೆಗೆ ಕೊಪ್ಪಳ ನಗರಸಭೆ ಎದುರುಗಡೆ ಇರುವ ಶಾದಿ ಮಹಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.
    ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಉದ್ಘಾಟನೆ ನೆರೆವೇರಿಸುವರು.  ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿ.ಪ.ಂ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ್ ಎಸ್. ತಂಗಡಗಿ, ಇಕ್ಬಾಲ್ ಅನ್ಸಾರಿ ಹಾಗೂ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ ಹಾಗೂ ಶರಣಪ್ಪ ಮಟ್ಟೂರ, ಜಿ.ಪಂ ಉಪಾಧ್ಯಕ್ಷೆ ಲಕ್ಷಮ್ಮ ಎಸ್. ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ ಖಾದ್ರಿ ಪಾಲ್ಗೊಳ್ಳುವರು. ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ಆದ್ಯ ವಚನಕಾರ ದೇವರದಾಸಿಮಯ್ಯ ಕುರಿತು ವಿಶೇಷ ಉಪನ್ಯಾಸ ನೀಡುವರು. 
    ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ 8-30 ಗಂಟೆಗೆ ದೇವರದಾಸಿಮಯ್ಯ ರವರ ಭಾವಚಿತ್ರದ ಮೆರವಣಿಗೆ ಕೊಪ್ಪಳ ಗವಿಮಠದಿಂದ ಪ್ರಾರಂಭಗೊಂಡು, ಜವಾಹರ ರಸ್ತೆ ಮೂಲಕ ಅಶೋಕ ವೃತ್ತ ಮಾರ್ಗವಾಗಿ ಶಾದಿ ಮಹಲ್ ವರೆಗೆ ಜರುಗುವುದು.  ಕಾರ್ಯಕ್ರಮಕ್ಕೆ ಎಲ್ಲ ಸಮಾಜದ ಮುಖಂಡರು, ಸಾರ್ವಜನಿಕರು ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.

ಮಾ. 30 ರಿಂದ ಕರ್ನಾಟಕ ಮುಕ್ತ ಶಾಲೆ (ಕೆ.ಓ.ಎಸ್.) ಪರೀಕ್ಷೆ : ನಿಷೇದಾಜ್ಞೆ ಜಾರಿ


ಕೊಪ್ಪಳ, ಮಾ.28 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಮಾ. 30 ರಿಂದ ಏ. 10 ರವರೆಗೆ ನಡೆಯುವ ಕರ್ನಾಟಕ ಮುಕ್ತ ಶಾಲೆ (ಕೆ.ಓ.ಎಸ್) ಪರೀಕ್ಷಾ ಕೇಂದ್ರಗಳಲ್ಲಿ ದೋಷರಹಿತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
    ಕರ್ನಾಟಕ ಮುಕ್ತ ಶಾಲೆ (ಕೆ.ಓ.ಎಸ್) ಪರೀಕ್ಷೆ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನಡೆಯಲಿದ್ದು, ಪರೀಕ್ಷೆಯನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಮಧ್ಯಾಹ್ನ 02 ರಿಂದ ಸಂಜೆ 05 ಗಂಟೆಯವರೆಗೆ ಕಲಂ 144 ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.  ಇದರನ್ವಯ ನಿಷೇಧಿತ ವ್ಯಾಪ್ತಿಯಲ್ಲಿ ಯಾವುದೇ ಎಸ್‍ಟಿಡಿ, ಮೊಬೈಲ್, ಜೆರಾಕ್ಸ್, ಟೈಪಿಂಗ್ ಮುಂತಾದವುಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ.  ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪತ್ರ ಹೊಂದಿದ ವಿದ್ಯಾರ್ಥಿಗಳು, ನಿಯೋಜಿತ ಶಿಕ್ಷಕರು, ಸಿಬ್ಬಂದಿ, ಜಾಗೃತ ದಳದವರನ್ನು ಹೊರತುಪಡಿಸಿ, ಉಳಿದವರ ಪ್ರವೇಶ ನಿಷೇಧಿಸಿದೆ.  ನಿಷೇಧಿತ ವ್ಯಾಪ್ತಿಯಲ್ಲಿ ಜನರು ಮಾರಕಾಸ್ತ್ರ ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಸ್ವ-ಉದ್ಯೋಗ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ, ಮಾ.28 (ಕರ್ನಾಟಕ ವಾರ್ತೆ): ಉತ್ತರಕನ್ನಡ ಜಿಲ್ಲೆ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ ಇವರ ವತಿಯಿಂದ ಏಪ್ರಿಲ್ ತಿಂಗಳಿನಲ್ಲಿ ಪ್ರಾರಂಭವಾಗಲಿರುವ, ವಿವಿಧ ತರಬೇತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
      ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ, ಎಲೆಕ್ಟ್ರಿಕಲ್ ಮೋಟರ್ ರಿವೈಡಿಂಗ್ & ಪಂಪ್‍ಸೆಟ್ ರಿಪೇರಿ, ಟಿವಿ ರಿಪೇರಿ, ಕೃಷಿ ಉದ್ಯಮಿ, ಪೇಪರ್ ಕವರ್, ಎನ್ವಲಪ್ & ಫೈಲ್ ತಯಾರಿಕೆ ಹಾಗೂ ರೆಫ್ರಿಜರೇಶನ್ & ಏರ್ ಕಂಡೀಶನಿಂಗ್ ತರಬೇತಿಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿ ಪಡೆಯಲು, ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು.  ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ, ಉದ್ಯೋಗ ವಿದ್ಯಾ ನಗರ, ದಾಂಡೆಲಿ ರಸ್ತೆ, ಹಳಿಯಾಳ (ಉತ್ತರ ಕನ್ನಡ ಜಿಲ್ಲೆ), ವಿಳಾಸಕ್ಕೆ  ಸಂಪರ್ಕಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08284-220807, 9483485489, 9482188780 ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಮಾಧ್ಯಮಗಳಿಗೆ ಸ್ವಯಂ ನಿಯಂತ್ರಣ ಮಾರ್ಗಸೂಚಿ ರಚನೆ ಸೂಕ್ತ- ಬಸವರಾಜ ರಾಯರಡ್ಡಿ ಸಲಹೆ

ಕೊಪ್ಪಳ ಮಾ. 28 (ಕರ್ನಾಟಕ ವಾರ್ತೆ): ಮಾಧ್ಯಮಗಳ ನಿಯಂತ್ರಣಕ್ಕೆ ಸದನ ಸಮಿತಿ ರಚನೆಯ ಬದಲಿಗೆ ಮಾಧ್ಯಮಗಳು ಸ್ವಯಂ ನಿಯಂತ್ರಣ ವಿಧಿಸಬಲ್ಲ ಆಚಾರ ಸಂಹಿತೆ ರೂಪಿಸಿಕೊಳ್ಳುವುದು ಅಥವಾ ಮಾಧ್ಯಮಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ, ಮಾರ್ಗಸೂಚಿಗಳನ್ನು ರಚಿಸುವುದು ಸೂಕ್ತ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಿಗೆ ಪತ್ರ ಬರೆದು ಕೋರಿಕೆ ಸಲ್ಲಿಸಿದ್ದಾರೆ.
     ರಾಜ್ಯ ವಿಧಾನಸಭೆಯಲ್ಲಿ ಮಾಧ್ಯಮಗಳ ನಿಯಂತ್ರಣ ಕುರಿತಂತೆ ಸದನ ಸಮಿತಿ ರಚಿಸಬೇಕೆಂಬ ಬಗ್ಗೆ ಇತ್ತೀಚೆಗೆ ಚರ್ಚೆಯಾಗಿದ್ದು, ಮಾಧ್ಯಮಗಳ ಮೇಲೆ ಸೂಕ್ತ ಕಡಿವಾಣ ಹೇರುವಂತಹ ಕ್ರಮಗಳನ್ನು ಶಿಫಾರಸ್ಸು ಮಾಡಲು ಸದನ ಸಮಿತಿ ರಚಿಸಬೇಕೆಂದು ಸಭಾಧ್ಯಕ್ಷರಿಗೆ ಒತ್ತಾಯಿಸುವುದರಿಂದ, ಚರ್ಚೆಯ ದಿನದಂದು ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಾಗದ ಕಾರಣಕ್ಕಾಗಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಿಗೆ ಪತ್ರ ಬರೆದು ಸಲಹೆ ನೀಡಿದ್ದಾರೆ.
     ಪತ್ರಿಕಾ ಸ್ವಾತಂತ್ರ್ಯವೇ ಪ್ರಜಾಪ್ರಭುತ್ವದ ಜೀವಾಳ.  ಯಾವುದೇ ಕಾರಣಕ್ಕೂ ಪತ್ರಿಕೆಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಚಕಾರ ತರುವಂತಹ ಕ್ರಮಕ್ಕೆ ಜನಪ್ರತಿನಿಧಿಗಳಾದ ನಾವು ಕೈ ಹಾಕಬಾರದು.  ನಮ್ಮ ಸಂವಿಧಾನದ ಅನುಬಂಧ 19 ರಲ್ಲಿ ನೀಡಲಾದ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳೆಂಬ ಮೂಲಭೂತ ಹಕ್ಕುಗಳ ವ್ಯಾಪ್ತಿಯಲ್ಲಿಯೇ ಪತ್ರಿಕಾ ಸ್ವಾತಂತ್ರ್ಯವನ್ನು ಅನುಗ್ರಹಿಸಲಾಗಿದೆ.  ಹಾಗೆಯೇ ಓರ್ವ ಸಾಮಾನ್ಯ ಪ್ರಜೆಗೆ ಲಭ್ಯವಿರುವಷ್ಟೇ ಸ್ವಾತಂತ್ರ್ಯವನ್ನು ಒಂದು ಪತ್ರಿಕಾ ಮಾಧ್ಯಮಕ್ಕೆ ಅಥವಾ ಓರ್ವ ಪತ್ರಕರ್ತನಿಗೆ ನೀಡಲಾಗಿದ್ದು, ಇದನ್ನು ಯಾರೂ ದುರ್ಬಳಕೆ ಮಾಡಿಕೊಳ್ಳದಂತೆ ಹಲವು ನಿರ್ಬಂಧಗಳನ್ನು ಸಹ ವಿಧಿಸಲಾಗಿದೆ.  ಸಂವಿಧಾನದ 44ನೇ ತಿದ್ದುಪಡಿಯ ಮೂಲಕ ಅಳವಡಿಸಲಾದ ಅನುಬಂಧ 361ಎ ಅಡಿಯಲ್ಲಿ ಸುದ್ದಿ ಮಾಧ್ಯಮಗಳ ಮೇಲೆ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಸಕಾರಣೀಯವಾದ ನಿರ್ಬಂಧಗಳನ್ನು ವಿಧಿಸುವ ಅಧಿಕಾರ ಸರ್ಕಾರಕ್ಕಿದೆ.  ಆದರೆ, ಯಾವುದೇ ಕಾರಣಕ್ಕೂ (ತುರ್ತು ಪರಿಸ್ಥಿತಿ ಹೊರತುಪಡಿಸಿ) ಪತ್ರಿಕಾ ಸ್ವಾತಂತ್ರ್ಯ ಮೊಟಕುಗೊಳಿಸುವಂತಹ ಯಾವುದೇ ಅಧಿಕಾರವನ್ನು ರಾಜ್ಯಾಂಗದಲ್ಲಿ ನೀಡಿಲ್ಲ.  ಹಾಗೆಂದ ಮಾತ್ರಕ್ಕೆ ಕಳೆದ ಮಾ. 23 ರಂದು ಸದನದಲ್ಲಿ ಪಕ್ಷಬೇಧವಿಲ್ಲದೆ ಹಲವು ಶಾಸಕರು ವ್ಯಕ್ತಪಡಿಸಿದ ನೋವು, ಅಸಹಾಯಕತೆ ಮತ್ತು ಆಕ್ರೋಶಭರಿತ ಭಾವನೆಗಳು ತಪ್ಪು ಎಂದು ಹೇಳುತ್ತಿಲ್ಲ.  ಮಾಧ್ಯಮಗಳ ಒಂದು ವಲಯದಲ್ಲಿ ಈ ರೀತಿ ಆಧಾರ ರಹಿತವಾದ ಹಾಗೂ ತೇಜೋವಧೆಯ ಉದ್ದೇಶದ ಅಭಿಪ್ರಾಯಗಳು ಆಗಾಗ್ಗೆ ಪ್ರಕಟಗೊಳ್ಳುತ್ತಿರುವುದನ್ನು ತಾವೂ ಸಹ ಖುದ್ದು, ಗಮನಿಸಿ, ಬೇಸರಿಸಿಕೊಂಡಿದ್ದು ಇದೆ.  ರಾಜಕಾರಣಕ್ಕೂ ಮತ್ತು ಮಾಧ್ಯಮ ರಂಗಕ್ಕೂ ಇರುವ ಅವಿನಾಭಾವ ಸಂಬಂಧವನ್ನು ಆರೋಗ್ಯಕರವಾಗಿ ಪೋಷಿಸಿಕೊಂಡು ಹೋಗುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇರುವವರೆಲ್ಲರ ಆದ್ಯ ಕರ್ತವ್ಯ ಎಂದು ಭಾವಿಸುತ್ತೇವೆ.  ಇಂದಿನ ದಿನಮಾನಗಳಲ್ಲಿ ಸಾರ್ವಜನಿಕ ಜೀವನದ ಆದರ್ಶಯುತ ಮೌಲ್ಯಗಳು ಕುಸಿಯುತ್ತಾ ಸಾಗಿರುವುದರಿಂದ, ರಾಜಕಾರಣದಲ್ಲಾದಂತೆ ಪತ್ರಿಕಾ ರಂಗದಲ್ಲಿ ಸಹ ವ್ಯಕ್ತಿಗತವಾದ ದ್ವೇಷ, ಪೂರ್ವಾಗ್ರಹ ಮತ್ತು ಪ್ರತೀಕಾರದಂತಹ ಅನಪೇಕ್ಷಣೀಯ ಅಂಶಗಳು ಪ್ರವೇಶಿಸಿರುವುದು ಸಹಜವಾಗಿದೆ.  ಆದರೆ ಅಂತಹ ಅನಿಷ್ಟಕಾರಿ ಪ್ರವೃತ್ತಿಗಳು ತೀರ ವಿರಳವೆನ್ನಬಹುದಾದ ಒಂದು ಸಣ್ಣ ಗುಂಪಿನಲ್ಲಿ ಮಾತ್ರ ಗೋಚರಿಸುತ್ತಿದ್ದು, ಉಳಿದಂತೆ ಬಹುಪಾಲು ಪತ್ರಿಕೆಗಳು ಹಾಗೂ ದೃಶ್ಯವಾಹಿನಿಗಳು ಎಂದಿನಂತೆ ಶ್ರದ್ಧೆಯಿಂದ ತಮ್ಮ ವೃತ್ತಿ ಧರ್ಮವನ್ನು ಎತ್ತಿ ಹಿಡಿಯುತ್ತಲೇ ಬಂದಿರುವುದನ್ನು ನಾವು ಗೌರವಿಸಲೇಬೇಕಿದೆ.  ಜನಪ್ರತಿನಿಧಿಗಳ ಕುರಿತು ಆಧಾರರಹಿತವಾದ, ಕಪೋಲಕಲ್ಪಿತ ಹಾಗೂ ದುರುದ್ದೇಶಪೂರಿತ ವರದಿ ಅಥವಾ ಅಭಿಪ್ರಾಯ ಅಥವಾ ಟೀಕೆ ಟಿಪ್ಪಣಿಗಳು ಬಿತ್ತರಿಸಲ್ಪಟ್ಟಲ್ಲಿ ಅಂತಹ ಸಂಸ್ಥೆ ಮತ್ತು ಪತ್ರಕರ್ತರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ, ಕಾನೂನಾತ್ಮಕವಾಗಿ ಹೋರಾಡುವ ಅವಕಾಶ ಇದ್ದೇ ಇದೆ.  ಹಾಗೆಯೇ ನೇರವಾಗಿ ಭಾರತೀಯ ಪತ್ರಿಕಾ ಮಂಡಳಿ (ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ) ಎಂಬ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ ಕ್ರಮ ಜರುಗಿಸಬಹುದಾದ ಪರ್ಯಾಯ ಮಾರ್ಗವೂ ಇದೆ.  ಸಾರ್ವಜನಿಕ ರಂಗದಲ್ಲಿರುವ ಚುನಾಯಿತ ಪ್ರತಿನಿಧಿಗಳು ತಮ್ಮ ಖಾಸಗಿ ಬದುಕು ಮತ್ತು ಬಹಿರಂಗ ಚಟುವಟಿಕೆಗಳಲ್ಲಿ ನಾಗರಿಕ ಸಮಾಜ ಅಪೇಕ್ಷಿಸುವ ಸಭ್ಯತೆ, ಸೌಜನ್ಯ ಮತ್ತು ವಿನಯವಂತಿಕೆಯ ಕಟ್ಟುಪಾಡುಗಳನ್ನು ಆದಷ್ಟು ಮಟ್ಟಿಗೆ ಪಾಲಿಸಿಕೊಂಡು ಬರಬೇಕಾದದ್ದು ಅನಿವಾರ್ಯ.  ಆದರೂ ಮಾನವ ಸಹಜ ಗುಣದೋಷಗಳು ಕಂಡುಬಂದಲ್ಲಿ, ಅವುಗಳನ್ನು ಸಮಯೋಚಿತವಾಗಿ ಎತ್ತಿ ಹೇಳಿ ತಿದ್ದುವುದು ಮತ್ತು ಎಚ್ಚರಿಕೆ ನೀಡುವುದು ಪತ್ರಿಕೆಗಳ ಕರ್ತವ್ಯವೇ ಆಗಿದೆ.  ಇದೇ ರೀತಿ ಪತ್ರಿಕೆಗಳು ಮತ್ತು ಪತ್ರಕರ್ತರು ಸಹ ನಾಗರಿಕ ಬದುಕಿನ ಸಭ್ಯತೆಯ ಎಲ್ಲೆ ಮೀರದಂತಹ ಪದಬಳಕೆ ಮತ್ತು ಪರಿಭಾಷೆಯನ್ನು ರೂಢಿಸಿಕೊಳ್ಳುವುದು ಅನಿವಾರ್ಯವಾಗಿದೆ.  ಆದ್ದರಿಂದ ಮಾಧ್ಯಮಗಳನ್ನು ನಿಯಂತ್ರಿಸುವ ಸದನ ಸಮಿತಿ ರಚನೆಯ ನಿರ್ಧಾರವನ್ನು ಕೈಬಿಟ್ಟು, ಸೌಹಾರ್ದಯುತವಾದ ಪರಿಹಾರ ಕಂಡುಕೊಳ್ಳಬೇಕಾಗಿದೆ.  ಆದ್ದರಿಂದ ಸಭಾಧ್ಯಕ್ಷರು, ರಾಜ್ಯದ ಪ್ರಮುಖ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಹಿರಿಯ ಸಂಪಾದಕರಿಗೆ ಸದನದ ಸದಸ್ಯರ ಭಾವನೆಗಳನ್ನು ಮನದಟ್ಟು ಮಾಡಿಕೊಟ್ಟು, ಮಾಧ್ಯಮ ವೃತ್ತಿ ನಿರತ ಸಹದ್ಯೋಗಿಗಳಿಗೆ ಒಂದು ಸ್ವಯಂ ನಿಯಂತ್ರಣ ವಿಧಿಸಬಲ್ಲ ಆಚಾರ ಸಂಹಿತೆಯನ್ನು ರೂಪಿಸುವಂತೆ ಸೂಚಿಸುವುದು.  ಅಥವಾ ರಾಜ್ಯದ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಹಿರಿಯ ಸಂಪಾದಕರುಗಳನ್ನು ಆಹ್ವಾನಿಸಿ, ಒಂದು ಸಮಾಲೋಚನಾ ಸಭೆಯನ್ನು ಜರುಗಿಸುವುದು.  ಅಲ್ಲಿ ವಿಸ್ತøತವಾದ ಚರ್ಚೆಯ ಮೂಲಕ ಮುಂಬರುವ ದಿನಗಳಲ್ಲಿ ಸುದ್ದಿ-ಮಾಧ್ಯಮಗಳಲ್ಲಿ ಬಳಸಲಾಗುವ ಭಾಷೆ ಮತ್ತು ಅನುಸರಿಸಲಾಗುವ ಧೋರಣೆಯ ಕುರಿತು ಸರ್ವಸಮ್ಮತವೆನಿಸುವ ಮಾರ್ಗಸೂಚಿಗಳನ್ನು ರಚಿಸುವುದು ಸೂಕ್ತ ಎಂಬುದಾಗಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಿಗೆ ಪತ್ರ ಬರೆದು ಕೋರಿದ್ದಾರೆ.

ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ : ಮಾ. 30 ರಂದು ಸಿದ್ಧತಾ ಸಭೆ


ಕೊಪ್ಪಳ ಮಾ. 28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಏ. 02 ರಿಂದ 05 ರವರೆಗೆ ನಾಲ್ಕು ದಿನಗಳ ಕಾಲ, ಮೊದಲ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಸಿದ್ಧತೆಗಾಗಿ ಪೂರ್ವಭಾವಿ ಸಭೆ ಮಾ. 30 ರಂದು ಸಂಜೆ 4-30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
     ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಹಿಸುವರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ತಿಳಿಸಿದ್ದಾರೆ.Monday, 27 March 2017

ಜೀವಂತ ಪ್ರಮಾಣಪತ್ರ ಸಲ್ಲಿಸಲು ಪಿಂಚಣಿದಾರರಿಗೆ ಸೂಚನೆ


ಕೊಪ್ಪಳ, ಮಾ.27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ ಪಿಂಚಣಿದಾರರು,   ಕಲಾವಿದ ಮತ್ತು ಪತ್ರಕರ್ತ ಪಿಂಚಣಿದಾರರು ಹಾಗೂ ಪ್ರಪಂಚದ ಎರಡನೇ ಮಹಾ ಯುದ್ದದ ಪಿಂಚಣಿದಾರರು ಅಥವಾ ಕುಟುಂಬ ಪಿಂಚಣಿದಾರರು, ತಮ್ಮ ಜೀವಂತ ಪ್ರಮಾಣಪತ್ರವನ್ನು ಏಪ್ರಿಲ್ 2017 ರೊಳಗೆ ಸಂಬಂಧಪಟ್ಟ ಖಜಾನೆ ಕಾರ್ಯಾಲಯಕ್ಕೆ ಖುದ್ದಾಗಿ ಹಾಜರಾಗಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
    ಪಿಂಚಣಿದಾರರು ತಮ್ಮ ಜೀವಂತ ಪ್ರಮಾಣಪತ್ರವನ್ನು ಒದಗಿಸದೇ ಇದ್ದಲ್ಲಿ ಮುಂದಿನ ಪಿಂಚಣಿ ಪಾವತಿಯನ್ನು ತಡೆಹಿಡಿಯಲಾಗುವುದು ಎಂದು ಕೊಪ್ಪಳ ಖಜಾನೆ ಇಲಾಖೆ ಉಪನಿರ್ದೇಶಕ ಸುರೇಶ ಹಳ್ಯಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾನೂನು ಪದವಿಧರರಿಗೆ ಪುಸ್ತಕ ಸೌಲಭ್ಯ : ಅರ್ಜಿ ಆಹ್ವಾನ

ಕೊಪ್ಪಳ, ಮಾ.27 (ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆಯು ಕಾನೂನು ಪದವೀಧರರಿಗೆ ಪ್ರಸಕ್ತ ಸಾಲಿನ ಪ್ರೋತ್ಸಾಹಧನ ನೀಡುವ ಯೋಜನೆಯಡಿ ಪುಸ್ತಕಗಳನ್ನು ಒದಗಿಸಲು ಆಸಕ್ತ ಅರ್ಹ ಕಾನೂನು ಪದವಿಧರರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಸಮಾಜ ಕಲ್ಯಾಣ ಇಲಾಖೆಯಲ್ಲಿನ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಕಾನೂನು ಪದವೀಧರರಿಗೆ ಕಾನೂನು ಪುಸ್ತಕಗಳನ್ನು ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.  2016-17ನೇ ಸಾಲಿನ ಪರಿಶಿಷ್ಟ ಪಂಗಡದ ನವ ಕಾನೂನು ಪದವೀಧರರಿಗೆ ಕಾನೂನು ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಒದಗಿಸಲು ಯೋಜಿಸಲಾಗಿದ್ದು, ಅರ್ಹ ಕಾನೂನು ಪದವೀಧರನನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಪರಿಶಿಷ್ಟ ಪಂಗಡದವರಾಗಿರಬೇಕು.  ರಾಜ್ಯದ ಬಾರ್ ಕೌನ್ಸಿಲ್‍ನಲ್ಲಿ 2015 ರ ಏಪ್ರಿಲ್ 01 ರಂದು ಹಾಗೂ ನಂತರ ನೊಂದಾಯಿಸಿದ ಕಾನೂನು ಪದವೀಧರರಿಗೆ ಮಾತ್ರ ಈ ಸೌಲಭ್ಯವನ್ನು ನೀಡಲಾಗುವುದು.  ಜಾತಿ ಪ್ರಮಾಣ ಪತ್ರ, 2 ಪಾಸ್‍ಪೋರ್ಟ್ ಅಳತೆಯ ಫೋಟೊ, ರಾಜ್ಯ ಬಾರ್ ಕೌನ್ಸಿಲ್‍ನಲ್ಲಿ ನೊಂದಾಯಿಸಿದ ಬಗ್ಗೆ ಪ್ರಮಾಣ ಪತ್ರ ಹಾಗೂ ಕಾನೂನು ಪದವಿಯ ಪ್ರಮಾಣ ಪತ್ರಗಳೊಂದಿಗೆ ಏಪ್ರಿಲ್ 05 ರೊಳಗಾಗಿ ಅರ್ಜಿ ಸಲ್ಲಿಸಲು ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳನ್ನು ಭಿಕ್ಷಾಟಣೆಗೆ ಕಳುಹಿಸುವುದು ಶಿಕ್ಷಾರ್ಹ ಅಪರಾಧ


ಕೊಪ್ಪಳ, ಮಾ.27 (ಕರ್ನಾಟಕ ವಾರ್ತೆ): ಪಾಲಕರು ಮಗುವನ್ನು ಭಿಕ್ಷೆ ಬೇಡಲು ಕಳುಹಿಸುವುದು ಹಾಗೂ ಮಗುವಿನ ಭಿಕ್ಷೆಯಿಂದ ಜೀವನ ನಡೆಸುವ ಪ್ರಕ್ರಿಯೆ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತ ರವಿಕುಮಾರ ಪವಾರ   ಹೇಳಿದರು.
    ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಗೂ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಗಂಗಾವತಿ ತಾಲೂಕಿನ ಸಿದ್ಧಾಪುರ ಗ್ರಾಮದ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ಆಯೋಜಿಸಲಾದ ಮಕ್ಕಳ ಹಕ್ಕುಗಳ ಹಾಗೂ ಮಕ್ಕಳ ಪರವಾದ ಕಾನೂನುಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಭಾರತ ಸರ್ಕಾರವು ಹಲವಾರು ಕಾನೂನುಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತಂದಿದೆ.  ಅವುಗಳಲ್ಲಿ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ಮತ್ತು ಸಮಗ್ರ ಮಕ್ಕಳ ರಕ್ಷಣಾ ಯೋಜನೆ.  ಈ ಕಾಯ್ದೆಯನ್ವಯ ಯಾರೇ ಪಾಲಕರು, ಮಗುವನ್ನು ಭಿಕ್ಷೆ ಬೇಡಲು ಹಾಗೂ ಮಗುವಿನ ಭಿಕ್ಷೆಯಿಂದ ಜೀವನ ನಡೆಸುವ ಪ್ರಕ್ರಿಯನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿದೆ.  ಪಾಲಕರಿಗೆ ಅಥವಾ ಮಗುವಿಗೆ ಭಿಕ್ಷೆ ಬೇಡಲು ಕಳುಹಿಸಿದ ವ್ಯಕ್ತಿಗೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ  01ಲಕ್ಷ ರೂ.ಗಳವರೆಗೂ ದಂಡ ವಿಧಿಸಬಹುದಾಗಿದೆ.  ಸಿದ್ಧಾಪುರ ಗ್ರಾಮದಿಂದ ಮಕ್ಕಳು ಭಿಕ್ಷಾಟನೆಗೆ ಗಂಗಾವತಿ, ಶ್ರೀರಾಮನಗರ, ಕಾರಟಗಿ, ಹಾಗೂ ಕನಕಗಿರಿ ಪಟ್ಟಣಗಳಿಗೆ ತೆರಳುತ್ತಿರುವುದು ಕಂಡು ಬಂದಿದ್ದು, ಈ ಹಿನ್ನಲೆಯಲ್ಲಿ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  ಯಾವುದೇ ಕಾರಣಕ್ಕೂ ಮಕ್ಕಳನ್ನು ಭಿಕ್ಷಾಟಣೆಗೆ ಕಳುಹಿಸಬೇಡಿ ಎಂದು ತಿಳಿಸಿದರು.
ಮಕ್ಕಳ ಸಹಾಯವಾಣಿ ಸಂಯೋಜಕ ಶರಣಪ್ಪ ಹಿರೆತೆಮ್ಮಿನಾಳ ಅವರು ಮಾತನಾಡಿ, ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆಗಾಗಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿಯಲ್ಲಿ ಮಕ್ಕಳ ಸಹಾಯವಾಣಿ 1098 ಕಾರ್ಯಾನಿರ್ವಹಿಸುತ್ತಿದ್ದು, ಸಂಕಷ್ಟದಲ್ಲಿರುವ ಮಕ್ಕಳು ಕಂಡು ಬಂದಲ್ಲಿ ಈ ಉಚಿತ ದೂರವಾಣಿಗೆ ಕರೆಮಾಡಿ ಮಾಹಿತಿಯನ್ನು ನೀಡಿದಲ್ಲಿ ಮಾಹಿತಿ ಲಭ್ಯವಾದ 1 ಗಂಟೆಯೊಳಗಾಗಿ ಆ ಮಗುವನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಪೋಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗುವುದು.  ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ಧಾಪುರ ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ ನಾಗನಗೌಡ ಅವರು ವಹಿಸಿದ್ದರು.  ಉಪಾಧ್ಯಕ್ಷೆ ಅನಿತಾ ನಾಗರಾಜ, ಸದಸ್ಯರಾದ ಬಸಮ್ಮ ಯಂಕನಗೌಡ, ಮಾರೆಪ್ಪ, ಚನ್ನಬಸವ ಹಾಗೂ ಅಂಗನವಾಡಿ ಮೇಲ್ವಿಚಾರಕಿ ಮಹಾದೇವಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.  ರವಿ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.  ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯಮನಮ್ಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

ಮಾ. 30 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ : ನಿಷೇಧಾಜ್ಞೆ ಜಾರಿ

ಕೊಪ್ಪಳ ಮಾ. 27 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಮಾ. 30 ರಿಂದ ಏ. 12 ರವರೆಗೆ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
     ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾ. 30 ರಿಂದ ಏ. 12 ರವರೆಗೆ ಜಿಲ್ಲೆಯ 59 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಬೆ. 09 ರಿಂದ ಮಧ್ಯಾಹ್ನ 02 ಗಂಟೆಯವರೆಗೆ ಕಲಂ 144 ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.  ಇದರನ್ವಯ ನಿಷೇಧಿತ ವ್ಯಾಪ್ತಿಯಲ್ಲಿ ಯಾವುದೇ ಎಸ್‍ಟಿಡಿ, ಮೊಬೈಲ್, ಜೆರಾಕ್ಸ್, ಟೈಪಿಂಗ್ ಮುಂತಾದವುಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ.  ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪತ್ರ ಹೊಂದಿದ ವಿದ್ಯಾರ್ಥಿಗಳು, ನಿಯೋಜಿತ ಶಿಕ್ಷಕರು, ಸಿಬ್ಬಂದಿ, ಜಾಗೃತ ದಳದವರನ್ನು ಹೊರತುಪಡಿಸಿ, ಉಳಿದವರ ಪ್ರವೇಶ ನಿಷೇಧಿಸಿದೆ.  ನಿಷೇಧಿತ ವ್ಯಾಪ್ತಿಯಲ್ಲಿ ಜನರು ಮಾರಕಾಸ್ತ್ರ ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಮಾ. 31 ರಂದು ಹಂಪಿ ಕನ್ನಡ ವಿವಿ ಯಲ್ಲಿ ವಿಚಾರಸಂಕಿರಣ

ಕೊಪ್ಪಳ ಮಾ. 27 (ಕರ್ನಾಟಕ ವಾರ್ತೆ): ಕರ್ನಾಟಕ ಮಾಧ್ಯಮ ಅಕಾಡೆಮಿ, ಕನ್ನಡ ವಿಶ್ವವಿದ್ಯಾಲಯ ಹಂಪಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬಳ್ಳಾರಿ ಇವರ ಸಹಯೋಗದಲ್ಲಿ ‘ಸರ್ಕಾರದ ಯೋಜನೆಗಳು-ಮಾಧ್ಯಮಗಳ ಹೊಣೆಗಾರಿಕೆ’ ವಿಷಯ ಕುರಿತ ಒಂದು ದಿನದ ವಿಚಾರಸಂಕಿರಣ ಮಾ. 31 ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ನಡೆಯಲಿದ್ದು, ಕೊಪ್ಪಳ ಜಿಲ್ಲೆಯ ಆಸಕ್ತ ಪತ್ರಕರ್ತರು ವಿಚಾರಸಂಕಿರಣದಲ್ಲಿ ಭಾಗವಹಿಸಬಹುದಾಗಿದೆ.
     ವಿಚಾರಸಂಕಿರಣವನ್ನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಉದ್ಘಾಟಿಸಲಿದ್ದು, ಹಂಪಿ ಕನ್ನಡ ವಿವಿ ಕುಲಪತಿ ಡಾ. ಮಲ್ಲಿಕಾ ಘಂಟಿ ಅವರು ಅಧ್ಯಕ್ಷತೆ ವಹಿಸುವರು.  ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ವಿಶೇಷಾಧಿಕಾರಿ ಪ್ರೊ. ಎಸ್. ಜಾಫೆಟ್ ಪ್ರಧಾನ ಭಾಷಣ ಮಾಡುವರು.  ನಾಡಿನ ಹಲವು ತಜ್ಞರು ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.  ಈ ವಿಚಾರಸಂಕಿರಣದಲ್ಲಿ ಕೊಪ್ಪಳ ಜಿಲ್ಲೆಯಲ್ಲಿನ ಆಸಕ್ತ ಪತ್ರಕರ್ತರು ಪಾಲ್ಗೊಳ್ಳಬಹುದಾಗಿದೆ.  ಹೆಚ್ಚಿನ ಸಂಖ್ಯೆಯಲ್ಲಿ ಕೊಪ್ಪಳ ಜಿಲ್ಲೆಯ ಪತ್ರಕರ್ತರು ವಿಚಾರಸಂಕಿರಣದಲ್ಲಿ ಪಾಲ್ಗೊಂಡು, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, 25 March 2017

ಯಲಬುರ್ಗಾ ಕ್ಷೇತ್ರದಲ್ಲಿ 2017-18 ನೇ ವರ್ಷ ನೀರಾವರಿ ಪರ್ವ : ಬಸವರಾಜ ರಾಯರಡ್ಡಿ


ಕೊಪ್ಪಳ, ಮಾ.25 (ಕರ್ನಾಟಕ ವಾರ್ತೆ): ಯಲಬುರ್ಗಾ ಕ್ಷೇತ್ರದಲ್ಲಿ ಈಗಾಗಲೆ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಕಾಮಗಾರಿ, ಇಂಜಿನಿಯರಿಂಗ್ ಕಾಲೇಜು, ಸಿ.ಸಿ. ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, 2017-18 ನೇ ವರ್ಷವನ್ನು ಕ್ಷೇತ್ರದಲ್ಲಿ ನೀರಾವರಿ ಅಭಿವೃದ್ಧಿಗಾಗಿಯೇ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.

     ಕೊಪ್ಪಳ ಜಿಲ್ಲಾಡಳಿತ ಮತ್ತು ಯಲಬುರ್ಗಾ ಪಟ್ಟಣ ಪಂಚಾಯತ್ ಇವರ ಸಹಯೋಗದಲ್ಲಿ ಯಲಬುರ್ಗಾ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜ ಮೈದಾನದಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ, ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ, ಪಂಚಾಯತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಮತ್ತು ವಿವಿಧ ವೃತ್ತಗಳಲ್ಲಿ ಸಿ.ಸಿ. ಕ್ಯಾಮರಾಗಳ ಚಾಲನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

     ಯಲಬುರ್ಗಾ ಕ್ಷೇತ್ರದಲ್ಲಿ ಈಗಾಗಲೆ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾರ್ಯ, ಹೊಸ ರೈಲ್ವೆ ಮಾರ್ಗದ ಕಾರ್ಯ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಗ್ರಾಮ ಗ್ರಾಮಗಳಲ್ಲಿ ಸಿ.ಸಿ. ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು, ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸಲಾಗುತ್ತಿದೆ.  ಯಲಬುರ್ಗಾ ಕ್ಷೇತ್ರದಲ್ಲಿ ಕೃಷ್ಣ ಭಾಗ್ಯ ಜಲನಿಗಮದಿಂದ ಕೈಗೊಳ್ಳಾಗುವ ನೀರಾವರಿ ಯೋಜನೆಗಳಿಗೆ 1800 ಕೋಟಿ ರೂ. ಅನುದಾನ ದೊರಕಿಸಲು ಕ್ರಮ ಕೈಗೊಳ್ಳಲಾಗಿದೆ.  ಗ್ರಾಮಗಳಿಗೆ ಶುದ್ಧ ಕುಡಿಯುವ  ನೀರಿನ ಬೃಹತ್ ಯೋಜನೆಗಳು ಹೀಗೆ ಯಲಬುರ್ಗಾದಲ್ಲಿ 2017-18 ನೇ ವರ್ಷ ನೀರಾವರಿ ಪರ್ವದ ವರ್ಷವಾಗಲಿದೆ.   ನಮ್ಮ ಸರ್ಕಾರವು ನೀರಾವರಿಗಾಗಿ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಕೃಷಿ ಹೊಂಡಗಳ ನಿರ್ಮಾಣ, ಕೆರೆಗಳನ್ನು ತುಂಬಿಸುವ ಕಾರ್ಯಗಳನ್ನು ನಡೆಸುತ್ತಿದೆ.  ಯಲಬುರ್ಗಾ ತಾಲೂಕಿನ ನೀರಾವರಿ ಯೋಜನೆಗಳಿಗೆ 1800 ಕೋಟಿ. ರೂ. ಅನುದಾನ ನೀಡಿದ್ದಾರೆ.  ಬರುವ ದಿನಗಳಲ್ಲಿ ಮುಖ್ಯಮಂತ್ರಿಗಳೇ ಭೂಮಿ ಪೂಜೆ ನೆರೆವೇರಿಸಲಿದ್ದಾರೆ.  ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕಿನ ಒಟ್ಟು 36 ಕೆರೆಗಳನ್ನು ತುಂಬಿಸಲು 290 ಕೋಟಿ ರೂ. ಅನುಮೋದನೆಯಾಗಿದೆ   ಎಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.

ಶಿಕ್ಷಣ ಅಭಿವೃದ್ಧಿ : ಯಲಬುರ್ಗಾ ಕ್ಷೇತ್ರ ಶಿಕ್ಷಣ ಕ್ಷೇತ್ರದಲ್ಲಿ ಇದೀಗ ತಾನೆ ಹೆಚ್ಚು ಅಭಿವೃದ್ಧಿಯಾಗುತ್ತಿದೆ.  ತಳಕಲ್‍ನಲ್ಲಿ ಈಗಾಗಲೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ಎಲ್ಲ ಸಿದ್ಧತೆಗಳು ನಡೆದಿದ್ದು, ಕಾಮಗಾರಿ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ.  ತಳಕಲ್ ಹಾಗೂ ಬೇವೂರು ಗ್ರಾಮಗಳಲ್ಲಿ ತಲಾ 15 ಕೋಟಿ ರೂ. ವೆಚ್ಚದಲ್ಲಿ ವಸತಿ ಸಹಿತ ಪದವಿ ಕಾಲೇಜನ್ನು ಮಂಜೂರು ಮಾಡಿ, ಪ್ರಸಕ್ತ ವರ್ಷವೇ ಕಾಮಗಾರಿ ಪ್ರಾರಂಭಿಸಲಾಗುವುದು.  ಕ್ಷೇತ್ರದಲ್ಲಿ 12 ಹೊಸ ಪ್ರೌಢಶಾಲೆಗಳು ಹಾಗೂ 08 ಹೊಸ ಪದವಿಪೂರ್ವ ಕಾಲೇಜು ಪ್ರಾರಂಭಕ್ಕೆ ಕ್ರಮ ಜರುಗಿಸಲಾಗುವುದು ಎಂದು ಬಸವರಾಜ ರಾಯರಡ್ಡಿ ಅವರು ಹೇಳಿದರು.  ಜಿಲ್ಲೆಯಲ್ಲಿ ಕೈಗೊಂಡ ಜನಸಂಪರ್ಕ ಸಭೆಯಲ್ಲಿ ಅಂಗವಿಕಲರು ಮಾಡಿದ ಮನವಿಯಂತೆ ಯಲಬುರ್ಗಾ ಕ್ಷೇತ್ರ ಒಂದರಲ್ಲೇ ಒಟ್ಟು 110 ತ್ರಿಚಕ್ರ ವಾಹನಗಳನ್ನು ವಿತರಿಸಲಾಗುತ್ತಿದ್ದು, ಬರುವ ದಿನಗಳಲ್ಲಿ ಇನ್ನೂ 50 ರಿಂದ 60 ತ್ರಿಚಕ್ರ ವಾಹನಗಳನ್ನು ಒದಗಿಸಲಾಗುವುದು ಎಂದರು.  ಕಾರ್ಯಕ್ರಮದ ಸಂದರ್ಭದಲ್ಲಿ ಎಲ್ಲ ಅರ್ಹ ವಿಕಲಚೇತನರಿಗೆ ತ್ರಿಚಕ್ರ ಮೋಟಾರು ವಾಹನ ವಿತರಿಸಲಾಯಿತು.  ಪ.ಜಾತಿ ಮತ್ತು ಪ.ಪಂಗಡದವರಿಗೆ ಅಕ್ರಮ-ಸಕ್ರಮ ಯೋಜನೆಯಡಿ 320 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.  ಅಲ್ಲದೆ ಪ.ಜಾತಿ ಮತ್ತು ಪ.ಪಂಗಡದ 320 ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕದ ಸಿಲಿಂಡರ್ ಹಾಗೂ ಸ್ಟೋವ್ ವಿತರಿಸಲಾಯಿತು.

    ಸಮಾರಂಭದ ಅಧ್ಯಕ್ಷತೆಯನ್ನು ಯಲಬುರ್ಗಾ ಪಟ್ಟಣ ಪಂಚಾಯತಿಯ ಅಧ್ಯಕ್ಷೆ ಜಯಶ್ರೀ ಶರಣಪ್ಪ ಅರಕೇರಿ ವಹಿಸಿದ್ದರು.  ತಾ.ಪಂ. ಅಧ್ಯಕ್ಷೆ ಲಕ್ಷ್ಮೀ ದ್ಯಾಮಣ್ಣ ಗೌಡರ್, ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್, ತಹಶಿಲ್ದಾರ ರಮೇಶ ಅಳವಂಡಿಕರ್, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿ, ಜಿ.ಪಂ. ಸದಸ್ಯ ಹನುಮಂತ ಗೌಡ, ಜಿಲ್ಲಾ ಪಂಚಾಯತಿ ಸದಸ್ಯೆ ಗೀರಿಜಾ ಸಂಗಟಿ, ಗಣ್ಯರಾದ ಬಸವರಾಜ ಉಳಾಗಡ್ಡಿ, ಯಕ್ಕಣ್ಣ ಯರಾಶಿ, ಸೇರಿದಂತೆ ತಾ.ಪಂ. ಪ.ಪಂ ಸದಸ್ಯರುಗಳು ಉಪಸ್ಥಿತರಿದ್ದರು.

ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮಾವು ಮೇಳ ಆಯೋಜನೆ- ಎಲ್. ಗೋಪಾಲಕೃಷ್ಣ


ಕೊಪ್ಪಳ ಮಾ. 25 (ಕರ್ನಾಟಕ ವಾರ್ತೆ): ಬೆಂಗಳೂರಿನಲ್ಲಿ ಮಾತ್ರ ಆಯೋಜಿಸಲಾಗುತ್ತಿರುವ ಮಾವು ಮೇಳವನ್ನು ಇದೀಗ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮದ ಅಧ್ಯಕ್ಷ ಎಲ್. ಗೋಪಾಲಕೃಷ್ಣ ಅವರು ಹೇಳಿದರು.

     ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತಿ ವತಿಯಿಂದ ಕೊಪ್ಪಳದ ಎ.ಆರ್. ಮೇಘರಾಜ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ಜಿಲ್ಲೆಯ ಮಾವು ಬೆಳೆಗಾರರಿಗೆ ಆಯೋಜಿಸಲಾಗಿದ್ದ ಗುಣಮಟ್ಟದ ಮಾವು ಬೇಸಾಯ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತು ಕುರಿತ ಒಂದು ದಿನದ ತಾಂತ್ರಿಕ ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

      ಉತ್ತಮ ಗುಣಮಟ್ಟದ ವೈವಿಧ್ಯಮಯ ತಳಿಗಳ ರಸಭರಿತ ಮಾವು ಹಣ್ಣುಗಳನ್ನು ಜನರಿಗೆ ತಲುಪಿಸುವ ಮತ್ತು ರೈತರಿಗೆ ಉತ್ತೇಜನ ಕೊಡುವಂತಹ ಮಾವು ಮೇಳವನ್ನು ಈ ಮೊದಲು ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಮಾತ್ರ ಆಯೋಜಿಸಲಾಗುತ್ತಿತ್ತು.  ಬೆಂಗಳೂರಿನ ನೆರೆಹೊರೆಯ ಜಿಲ್ಲೆಗಳ ಮಾವು ಬೆಳೆಗಾರರು, ಮಾವು ಮೇಳದಲ್ಲಿ ಪಾಲ್ಗೊಳ್ಳುವ ವ್ಯವಸ್ಥೆ ಇತ್ತು.  ಇದೀಗ ಬೆಂಗಳೂರಿನ ಆಯ್ದ 40 ಕಡೆಗಳಲ್ಲಿ ಮಾವು ಮೇಳವನ್ನು ಆಯೋಜಿಸಲು ನಿಗಮವು ಕ್ರಮ ಕೈಗೊಂಡಿದೆ.  ಇದೇ ವರ್ಷದಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಮಾವು ಮೇಳವನ್ನು ಏರ್ಪಡಿಸಲು ನಿಗಮವು ನಿರ್ಧರಿಸಿದ್ದು, ಇದಕ್ಕಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ವರದಿ ಸಲ್ಲಿಸುವಂತೆ ಎಲ್ಲ ಜಿಲ್ಲೆಗಳ ತೋಟಗಾರಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.  ಮಾವು ಮೇಳದಲ್ಲಿ ಅಪಾಯಕಾರಿ ರಾಸಾಯನಿಕ ಬಳಸಿ ಮಾಗಿಸಿದ ಹಣ್ಣುಗಳ ಮಾರಾಟಕ್ಕೆ ಅವಕಾಶ ನೀಡಲಾಗುವುದಿಲ್ಲ.  ಉತ್ತಮ ಗುಣಮಟ್ಟದ ಮಾವು ಗ್ರಾಹಕರಿಗೆ ಲಭ್ಯವಾಗಬೇಕು.  ರೈತರಿಗೆ ಲಾಭದಾಯಕವಾಗಬೇಕು ಎನ್ನುವ ಉದ್ದೇಶವನ್ನು ನಿಗಮವು ಹೊಂದಿದೆ.  ಎಲ್ಲ ಜಿಲ್ಲೆಗಳಲ್ಲೂ ಮಾವು ಮೇಳ ಆಯೋಜಿಸುವುದರಿಂದ, ರಾಜ್ಯದ ಎಲ್ಲ ಜನರಿಗೆ ಉತ್ತಮ ಗುಣಮಟ್ಟದ ಹಾಗೂ ವೈವಿಧ್ಯಮಯ ತಳಿಗಳ ಮಾವು ದೊರೆಯಲು ಸಾಧ್ಯವಾಗಲಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ರೈತರಿಗೂ ಆರ್ಥಿಕ ಬಲ ದೊರೆಯಲಿದೆ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮದ ಅಧ್ಯಕ್ಷ ಎಲ್. ಗೋಪಾಲಕೃಷ್ಣ ಅವರು ಹೇಳಿದರು.
ರಫ್ತು ಗುಣಮಟ್ಟದ ತಂತ್ರಜ್ಞಾನ ಪರಿಚಯ :
****************** ಜಗತ್ತಿನಲ್ಲಿಯೇ ಭಾರತದ ಮಾವಿಗೆ ಉತ್ತಮ ಬೇಡಿಕೆ ಇದೆ.  ಹೀಗಾಗಿ ವಿದೇಶಗಳಿಗೆ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ಮಾತ್ರ ರಫ್ತು ಮಾಡಲು ಅವಕಾಶ ಇರುವುದರಿಂದ, ಉತ್ತಮ ಗುಣಮಟ್ಟದ ಹಣ್ಣುಗಳನ್ನು ಬೆಳೆಸಲು ಅನುಸರಿಸಬೇಕಾದ ತಂತ್ರಜ್ಞಾನ, ಮಾವು ಉಪಚಾರ ವಿಧಾನಗಳು, ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್ ಮುಂತಾದ ಆಧುನಿಕ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಪರಿಚಯ ಮಾಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮವು ರಾಜ್ಯದ ಧಾರವಾಡ ಮತ್ತು ಬೆಂಗಳೂರಿನಲ್ಲಿ ರೈತರಿಗೆ ಮಾವು ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಕ್ರಮ ವಹಿಸಿದೆ ಎಂದರು.
ಮಾವು ಅಭಿವೃದ್ಧಿ ನಿಗಮಕ್ಕೆ 42 ಕೋಟಿ ರೂ. :
************* ರಾಜ್ಯದಲ್ಲಿ ಮಾವು ಬೆಳೆಯನ್ನು ರೈತರಿಗೆ ಲಾಭದಾಯಕ ಉದ್ಯಮವನ್ನಾಗಿ ಮಾಡುವ ನಿಟ್ಟಿನಲ್ಲಿ  ಈ ವರ್ಷ ನಿಗಮಕ್ಕೆ 42 ಕೋಟಿ ರೂ. ಗಳ ಅನುದಾನವನ್ನು ಸರ್ಕಾರ ಒದಗಿಸಿದೆ.  ಅಲ್ಲದೆ ತೋಟಗಾರಿಕೆ ಇಲಾಖೆ ಪುನಶ್ಚೇತನಕ್ಕಾಗಿಯೇ 10 ಕೋಟಿ ರೂ. ಅನುದಾನ ನಿಗದಿಪಡಿಸಿದೆ.  ಕೃಷಿ ಭಾಗ್ಯ ಯೋಜನೆಯನ್ನು ಸರ್ಕಾರ ತೋಟಗಾರಿಕೆ ಇಲಾಖೆಗೂ ವಿಸ್ತರಿಸಿದ್ದು, ತೋಟಗಾರಿಕೆ ಬೆಳೆಗಾರರು ಕೂಡ ಕೃಷಿ ಹೊಂಡ ನಿರ್ಮಿಸಿ, ಬೆಳೆಯನ್ನು ಸಂರಕ್ಷಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.  ಇದಕ್ಕಾಗಿ ಸರ್ಕಾರ 200 ಕೋಟಿ ರೂ. ಅನುದಾನವನ್ನು ಪ್ರಸಕ್ತ ವರ್ಷಕ್ಕೆ ಒದಗಿಸಿದೆ ಎಂದರು.
ಪ್ಯಾಕ್ ಹೌಸ್‍ಗೆ 2.5 ಲಕ್ಷ ರೂ. ಸಹಾಯಧನ :
**************ಮಾವು ಬೆಳೆಗಾರರು ಕೊಯ್ಲೋತ್ತರದಲ್ಲಿ ನಷ್ಟ ಅನುಭವಿಸುವುದನ್ನು ತಪ್ಪಿಸುವ ಸಲುವಾಗಿ ಉತ್ತಮ ತಂತ್ರಜ್ಞಾನದಲ್ಲಿ ಮಾವು ಬೆಳೆಗಾರರು ತಮ್ಮ ತೋಟದಲ್ಲಿ 20*30 ಅಡಿ ಅಳತೆಯಲ್ಲಿ ಪ್ಯಾಕ್ ಹೌಸ್ ನಿರ್ಮಿಸಿಕೊಳ್ಳಲು ನಿಗಮದ ವತಿಯಿಂದ 2.5 ಲಕ್ಷ ರೂ. ಗಳ ಸಹಾಯಧನ ನೀಡುವ ಯೋಜನೆಯನ್ನು ನೀಡಲಾಗುತ್ತಿದೆ.  ಮಾವು ಬೆಳೆಗೆ ಪ್ರಮುಖವಾಗಿ ಕಾಡುವ ರೋಗ ಅಥವಾ ಕೀಟಬಾಧೆಯನ್ನು ನಿಯಂತ್ರಿಸಲು ಸಬ್ಸಿಡಿ ದರದಲ್ಲಿ ಉತ್ತಮ ಕೀಟನಾಶಕ ಹಾಗೂ ಮೋಹಕ ಬಲೆಯನ್ನು ರೈತರಿಗೆ ನೀಡುವ ಯೋಜನೆಯನ್ನು ನಿಗಮವು ಜಾರಿಗೊಳಿಸಿದೆ.  ಭಾರತೀಯ ತೋಟಗಾರಿಕಾ ಸಂಶೊಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಮಾವು ಸ್ಪೆಷಲ್’ ಪೋಷಕಾಂಶಗಳ ಮಿಶ್ರಣವನ್ನು ಕೂಡ ಸಬ್ಸಿಡಿ ದರದಲ್ಲಿ ರೈತರಿಗೆ ನೀಡಲಾಗುತ್ತಿದೆ.  ಮಾವಿನ ಗಿಡಗಳು 30 ರಿಂದ 40 ದಿನಗಳ ಕಾಲ ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿರುವ ಹೊಸ ತಂತ್ರಜ್ಞಾನದ ಜೆಲ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ರೈತರಿಗೆ ಒದಗಿಸಲು ನಿಗಮವು ಕ್ರಮ ಕೈಗೊಳ್ಳಲಿದೆ.  ರೈತರು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಉತ್ತಮ ಗುಣಮಟ್ಟದ ಮಾವು ಬೆಳೆಯಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮದ ಅಧ್ಯಕ್ಷ ಎಲ್. ಗೋಪಾಲಕೃಷ್ಣ ಅವರು ಹೇಳಿದರು
     ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮದ ನಿರ್ದೇಶಕ ಜಿ.ಎಸ್. ಗೌಡರ್ ಅವರು ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚು ಮಾವು ಉತ್ಪಾದನೆ ಮಾಡುವ ರಾಜ್ಯಗಳಲ್ಲಿ ಕರ್ನಾಟಕ ಮೂರನೆ ಸ್ಥಾನದಲ್ಲಿದೆ.  ನಮ್ಮ ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಹಾಗೂ ವಿವಿಧ ತಳಿಯ ಮಾವು ಸಿಗುವುದರಿಂದ, ಉತ್ತರ ಭಾರತದ ಬಹುತೇಕ ರಾಜ್ಯಗಳ ಮಾವು ಮಾರಾಟಗಾರರು, ಕರ್ನಾಟಕ ರಾಜ್ಯಕ್ಕೆ ಬಂದು, ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ.  ಕಷ್ಟಪಟ್ಟು ಮಾವು ಬೆಳೆಯುವ ರೈತರು, ಮಾರುಕಟ್ಟೆಯ ದರಕ್ಕಿಂತಲೂ ಕಡಿಮೆ ಬೆಲೆಗೆ ಸಗಟಾಗಿ ತೋಟದಲ್ಲೇ ಮಾರಾಟ ಮಾಡುವುದರಿಂದ, ಹೆಚ್ಚು ಲಾಭ ಗಳಿಸಲು ಸಾಧ್ಯವಾಗುತ್ತಿಲ್ಲ,  ಬದಲಿಗೆ ಮದ್ಯವರ್ತಿಗಳೇ ಹೆಚ್ಚು ಲಾಭ ಪಡೆಯುತ್ತಿದ್ದಾರೆ.  ಶ್ರಮ ವಹಿಸಿ, ನೇರವಾಗಿ ಮಾರುಕಟ್ಟೆಗೆ ತಂದು ಮಾರಾಟ ಮಾಡಿದಲ್ಲಿ, ಉತ್ತಮ ಲಾಭ ಗಳಿಸಲು ಸಾಧ್ಯ.  ಮಾರುಕಟ್ಟೆಯ ದರಗಳ ಬಗ್ಗೆಯೂ ರೈತರು ಜಾಗೃತರಾಗಬೇಕು.  ಮಾವು ಬೇಸಾಯವು ಬರ ಪರಿಸ್ಥಿತಿಯಲ್ಲೂ ರೈತನ ಕೈಬಿಡದೆ, ಉತ್ತಮ ಲಾಭ ತರುವ ಏಕೈಕ ತೋಟಗಾರಿಕೆ ಬೆಳೆಯಾಗಿದೆ ಎಂದರು.
     ಪ್ರಾಸ್ತಾವಿಕವಾಗಿ ಮಾತನಾಡಿದ ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು, ಜಿಲ್ಲೆಯಲ್ಲಿ ಸದ್ಯ ಸುಮಾರು 7500 ಎಕರೆಯಲ್ಲಿ ಮಾವು ಬೆಳೆಯಲಾಗುತ್ತಿದ್ದು, ಸುಮಾರು 2500 ರೈತರು ಮಾವು ಬೇಸಾಯದಲ್ಲಿ ತೊಡಗಿದ್ದಾರೆ.  ಈಲ್ಲೆಯಲ್ಲಿ ಮಾವು ಬೆಳೆಯಲು ಸೂಕ್ತ ಮಣ್ಣು ಹಾಗೂ ಹವಾಗುಣ ಅನುಕೂಲಕರವಾಗಿದೆ.  ಇಡೀ ವರ್ಷ ಮಾವು ಬೆಳೆಯುವ ತಳಿಗಳೂ ಇದೀಗ ಬಂದಿವೆ.  ಮಾವು ಬೆಳೆಯಲ್ಲಿ ಸಂಸ್ಕರಣೆ, ಮೌಲ್ಯವರ್ಧನೆ ವ್ಯವಸ್ಥೆ ಅಳವಡಿಸಿಕೊಂಡಲ್ಲಿ, ಹೆಚ್ಚು ಲಾಭ ಗಳಿಸಲು ಸಾಧ್ಯವಿದೆ.  ರೈತರಿಗೆ ತೋಟಗಾರಿಕೆ ಇಲಾಖೆಯು ತಂತ್ರಜ್ಞಾನ, ಸಲಹೆ ಸೇರಿದಂತೆ ಎಲ್ಲ ಅಗತ್ಯ ನೆರವು ಒದಗಿಸಲು ಸಿದ್ಧವಿದೆ ಎಂದರು.
     ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಕಾರ್ಯಕ್ರಮದಲ್ಲಿ ನಿಗಮದ ನಿರ್ದೇಶಕರುಗಳಾದ ಹೆಚ್.ಸಿ. ಮೊರಬ್, ಮೊಹ್ಮದ್ ಇಸ್ಮಾಯಿಲ್, ಜಿ.ಎಸ್. ಗೌಡರ್, ಅಭಿನವಶ್ರೀ ತೋಟಗಾರಿಕೆ ಬೆಳೆಗಾರರ ರೈತ ಉತ್ಪಾದಕ ಸಂಸ್ಥೆ ಅಧ್ಯಕ್ಷ ಪ್ರಭುರಾಜ ಪಾಟೀಲ್, ಕಪಿಲತೀರ್ಥ ತೋಟಗಾರಿಕೆ ಬೆಳೆಗಾರರ ರೈತ ಉತ್ಪಾದಕ ಸಂಸ್ಥೆ ಅಧ್ಯಕ್ಷ ಸಿದ್ದನಗೌಡ ಹೆಚ್. ಪೊಲೀಸ್ ಪಾಟೀಲ್, ಕೃಷಿಕ ಸಮಾಜದ ಅಧ್ಯಕ್ಷ ಶಿವಣ್ಣ ಮೂಲಿಮನಿಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮದ ಉಪನಿರ್ದೇಶಕ ಡಾ. ಗುಣವಂತ, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಪಿ.ಎಂ. ಗಂಗಾಧರಪ್ಪ, ವಾರ್ತಾಧಿಕಾರಿ ತುಕಾರಾಂರಾವ್, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ್ ಸೇರಿದಂತೆ ಹಲವು ಉಪಸ್ಥಿತರಿದ್ದರು.  ಜಿಲ್ಲೆಯ ಸುಮಾರು 800 ಕ್ಕೂ ಹೆಚ್ಚು ಮಾವು ಬೆಳೆಗಾರರು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.  ಕಾರ್ಯಕ್ರಮದ ಅಂಗವಾಗಿ ತೋಟಗಾರಿಕೆ ಇಲಾಖೆ ಪ್ರಕಟಿಸಿರುವ ಮಾವು ಬೆಳೆ ಸಂಕ್ಷಿಪ್ತ ವಿವರದ ಕೈಪಿಡಿಯನ್ನು ಬಿಡುಗಡೆಗೊಳಿಸಿ, ರೈತರಿಗೆ ವಿತರಿಸಲಾಯಿತು.

ವಿಜೃಂಭಣೆಯಿಂದ ಜಗಜೀವನರಾಮ್, ಅಂಬೇಡ್ಕರ್ ಜಯಂತಿ ಆಚರಣೆ- ಎಂ. ಕನಗವಲ್ಲಿ


ಕೊಪ್ಪಳ ಮಾ. 25 (ಕರ್ನಾಟಕ ವಾರ್ತೆ) : ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಈ ಬಾರಿ ಅತ್ಯಂತ ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು

     ಬಾಬು ಜಗಜೀವನರಾಮ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಶನಿವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು.
     ಬಾಬು ಜಗಜೀವನರಾಮ್ ಅವರ 110 ನೇ ಜನ್ಮದಿನಾಚರಣೆಯನ್ನು ಏಪ್ರಿಲ್ 05 ರಂದು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ 126 ನೇ ಜನ್ಮದಿನಾಚರಣೆಯನ್ನು ಏ. 14 ರಂದು ಎಲ್ಲ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಅದ್ಧೂರಿಯಾಗಿ ಆಚರಿಸಲಾಗುವುದು.  ಈ ಬಾರಿ ವಿಶೇಷವಾಗಿ ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಸಾರ್ವಜನಿಕರಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗುವುದು.  ಜಿಲ್ಲೆಯ ಯಾವುದೇ ಸಾರ್ವಜನಿಕರು ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.  ಹಿರಿಯರು ಹಾಗೂ ಕಿರಿಯರು ಎಂಬ ಎರಡು ವಿಭಾಗಗಳಲ್ಲಿ ಬಾಬು ಜಗಜೀವನರಾಂ  ಹಾಗೂ ಡಾ. ಅಂಬೇಡ್ಕರ್ ಅವರ ಕುರಿತು ಪ್ರತ್ಯೇಕವಾಗಿ ಸ್ಪರ್ಧೆ ಆಯೋಜಿಸಲಾಗುವುದು.  ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಸಮಾಜ ಕಲ್ಯಾಣ ಇಲಾಖೆ ಕೈಗೊಳ್ಳಲಿದೆ ಎಂದರು.
ಬಾಬು ಜಗಜೀವನರಾಂ ಜಯಂತಿ :
************** ಬಾಬು ಜಗಜೀವನರಾಂ ಅವರ 110 ನೇ ಜನ್ಮ ದಿನಾಚರಣೆಯ ಅಂಗವಾಗಿ ಏ. 05 ರಂದು ಬೆಳಿಗ್ಗೆ 7-30 ಗಂಟೆಗೆ ನಗರದ ತಹಸಿಲ್ದಾರರ ಕಚೇರಿ ಆವರಣದಿಂದ ಬಾಬು ಜಗಜೀವನರಾಂ ಅವರ ಭಾವಚಿತ್ರ ಸಹಿತ ಮೆರವಣಿಗೆಯನ್ನು ಪ್ರಾರಂಭಿಸಲಾಗುವುದು.  ಮೆರವಣಿಗೆಯಲ್ಲಿ ವೈವಿಧ್ಯಮ ಜಾನಪದ ಕಲಾತಂಡಗಳು ಪಾಲ್ಗೊಳ್ಳಲಿವೆ.  ವೇದಿಕೆ ಕಾರ್ಯಕ್ರಮ ಕೈಗೊಳ್ಳುವ ಸ್ಥಳವನ್ನು ಶೀಘ್ರದಲ್ಲೇ ನಿಗದಿಪಡಿಸಲಾಗುವುದು.  ಬಾಬು ಜಗಜೀವನರಾಂ ಅವರ ಕುರಿತು ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ :
************** ಈ ಬಾರಿ ಅಂಬೇಡ್ಕರ್ ಅವರ 126 ನೇ ಜನ್ಮ ದಿನಾಚರಣೆ ಅಂಗವಾಗಿ ಏ. 14 ರಂದು ಬೆಳಿಗ್ಗೆ 7-30 ಗಂಟೆಗೆ ನಗರದ ತಹಸಿಲ್ದಾರರ ಕಚೇರಿ ಆವರಣದಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಸಹಿತ ಅದ್ಧೂರಿ ಮೆರವಣಿಗೆ ಪ್ರಾರಂಭವಾಗಲಿದೆ.  ಮೆರವಣಿಗೆಯಲ್ಲಿ ಹಲವು ಕಲಾ ತಂಡಗಳು ಪಾಲ್ಗೊಂಡು, ಮೆರವಣಿಗೆಯನ್ನು ಆಕರ್ಷಕಗೊಳಿಸಲಿವೆ.  ವೇದಿಕೆ ಸಮಾರಂಭದ ಸ್ಥಳವನ್ನು ಶೀಘ್ರ ನಿಗದಿಪಡಿಸಿ, ಮಾಧ್ಯಮಗಳಲ್ಲಿ ಪ್ರಕಟಿಸಲಾಗುವುದು.  ಕಾರ್ಯಕ್ರಮದ ಅಂಗವಾಗಿ ಡಾ. ಅಂಬೇಡ್ಕರ್ ಅವರ ಕುರಿತು ವಿಶೇಷ ಉಪನ್ಯಾಸ ಆಯೋಜಿಸಲಾಗುವುದು ಎಂದರು.
        ಬಾಬು ಜಗಜೀವನರಾಂ ಹಾಗೂ ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಯಶಸ್ವಿಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಎಲ್ಲ ಅಧಿಕಾರಿ ವರ್ಗದವರು, ಜನಪ್ರತಿನಿಧಿಗಳು. ಸಮಾಜದ ಮುಖಂಡರು ಸಹಕರಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕರೆ ನೀಡಿದರು.
      ಉಭಯ ಮಹನೀಯರ ಜಯಂತಿಯ ಅಂಗವಾಗಿ ಆಯಾ ದಿನಗಳಂದು ನಗರದ ಪ್ರಮುಖ ವೃತ್ತಗಳಿಗೆ ದೀಪಾಲಂಕಾರ ಕೈಗೊಳ್ಳಬೇಕು.  ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಮೆರವಣಿಗೆ ಸಾಗಿ ಬರುವ ದಾರಿಯಲ್ಲಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಕೈಗೊಳ್ಳಬೇಕು. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ವೈದ್ಯರ ಸಹಿತ ಆ್ಯಂಬುಲೆನ್ಸ್ ವ್ಯವಸ್ಥೆಗೊಳಿಸಬೇಕು.  ಮೆರವಣಿಗೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು. ಕಾರ್ಯಕ್ರಮಗಳ ಯಶಸ್ವಿಗೆ ವಹಿಸಲಾಗಿರುವ ಜವಾಬ್ದಾರಿಯನ್ನು ಆಯಾ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕೈಗೊಳ್ಳಬೇಕು ಅಲ್ಲದೆ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
       ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿ, ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಅಲ್ಲದೆ ಪಿಹೆಚ್‍ಡಿ ಪದವಿ ಪಡೆದ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಸಾಧಕರಿಗೆ ಕಾರ್ಯಕ್ರಮದ ಸಂದರ್ಭದಲ್ಲಿ ಸನ್ಮಾನಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
     ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ, ಜಿಲ್ಲಾ ಪಂಚಾಯತಿ ಸದಸ್ಯ ಗೂಳಪ್ಪ ಹಲಗೇರಿ, ನಗರಸಭೆ ಸದಸ್ಯ ಮುತ್ತುರಾಜ್ ಕುಷ್ಟಗಿ, ಸಮಾಜದ ಮುಖಂಡರುಗಳಾದ ಗವಿಸಿದ್ದಪ್ಪ ಕಂದಾರಿ, ಡಾ. ಜ್ಞಾನಸುಂದರ್, ಸುಧಾಕರ ಹೊಸಮನಿ, ಭರಮಪ್ಪ ಬೆಲ್ಲದ, ಸಿದ್ದೇಶ್ ಪೂಜಾರ್, ಓಬಳೇಶ್, ಗಾಳಪ್ಪ ಪೂಜಾರ್, ಸಿದ್ರಾಮ ಹೊಸಮನಿ, ರಮೇಶ್ ಬೆಲ್ಲದ, ಶಂಕರ ಬೆಲ್ಲದ, ನಾಗರಾಜ ಬೆಲ್ಲದ, ಶಿವಾನಂದ ಹೊದ್ಲೂರ್, ಮಂಜುನಾಥ ಗೊಂಡಬಾಳ, ಸೇರಿದಂತೆ ಹಲವಾರು ಗಣ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಜನಪರ-ಜನಪ್ರಿಯ ಬಜೆಟ್ ಪ್ರಚಾರಾಂದೋಲನಕ್ಕೆ ಡಿಸಿ ಕನಗವಲ್ಲಿ ಚಾಲನೆ


ಕೊಪ್ಪಳ ಮಾ. 25 (ಕರ್ನಾಟಕ ವಾರ್ತೆ): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಜನಪರ-ಜನಪ್ರಿಯ ಬಜೆಟ್ ಪ್ರಚಾರಾಂದೋಲನ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹಸಿರು ನಿಶಾನೆ ತೋರುವ ಮೂಲಕ ಜಿಲ್ಲಾಡಳಿತ ಭವನದ ಆವರಣದಲ್ಲಿ ಶನಿವಾರದಂದು ಚಾಲನೆ ನೀಡಿದರು.
     ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇತ್ತೀಚೆಗೆ ಮಂಡಿಸಿದ ಜನಪರ ಮತ್ತು ಜನಪ್ರಿಯ ಬಜೆಟ್ ಕುರಿತಂತೆ ಜಿಲ್ಲೆಯಾದ್ಯಂತ ಪ್ರಚಾರ ಕಾರ್ಯಕ್ರಮವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿದ್ದು, ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿರುವ ಪ್ರಮುಖ ಅಂಶಗಳಾದ ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ನೀಡುವ ಪ್ರಮಾಣವನ್ನು 07 ಕೆ.ಜಿ. ಗೆ ಏರಿಸಿರುವುದು.  ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ  ವಾರಕ್ಕೆ 05 ದಿನ ಉಚಿತವಾಗಿ ಹಾಲು ಪೂರೈಸುವುದು.  25 ಲಕ್ಷ ರೈತರಿಗೆ 13500 ಕೋಟಿ ರೂ. ಕೃಷಿ ಸಾಲ.  2500 ಹೊಸ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಕ್ರಮ.  ರಾಜ್ಯದಲ್ಲಿ 28 ಶೌಚಾಲಯಗಳ ನಿರ್ಮಾಣದ ಗುರಿ,  ಪ್ರತಿ ಜಿಲ್ಲೆಗೊಂದು ಗಾಂಧಿ ಭವನ ನಿರ್ಮಾಣ.  49 ಹೊಸ ತಾಲೂಕುಗಳ ಘೋಷಣೆ, ಕಡಿಮೆ ದರದಲ್ಲಿ ಉತ್ತಮ ಊಟೋಪಹಾರ ಪೂರೈಸುವ ನಮ್ಮ ಕ್ಯಾಂಟೀನ್ ಸ್ಥಾಪನೆ ಹೀಗೆ ಹಲವಾರು ಪ್ರಗತಿಪರ ಯೋಜನೆಗಳನ್ನು ಸರ್ಕಾರ ಪ್ರಸಕ್ತ ಬಜೆಟ್‍ನಲ್ಲಿ ಘೋಷಿಸಿದೆ.  05 ನೇ ವರ್ಷದೆಡೆಗೆ ಸರ್ಕಾರ ಭರವಸೆಯ ಹೆಜ್ಜೆಗಳನ್ನಿರಿಸಿದ್ದು, ಸರ್ಕಾರದ ಯೋಜನೆಗಳ ಕುರಿತು ಪ್ರಚಾರ ಕೈಗೊಳ್ಳಲು ಪ್ರಚಾರಾಂದೋಲನವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಇಲಾಖೆಯ ಅವಿನಾಶ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈಕರಸಾಸಂಸ್ಥೆ ಕೊಪ್ಪಳ ವಿಭಾಗಕ್ಕೆ ಅತಿ ಹೆಚ್ಚು ಇಂಧನ ಉಳಿತಾಯ ಪ್ರಶಸ್ತಿ

ಕೊಪ್ಪಳ ಮಾ. 25 (ಕರ್ನಾಟಕ ವಾರ್ತೆ): ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 09 ವಿಭಾಗಗಳ ಪೈಕಿ ಕೊಪ್ಪಳ ವಿಭಾಗವು ಅತಿ ಹೆಚ್ಚು ಇಂಧನ ಉಳಿತಾಯ ಪ್ರಗತಿ ಸಾಧಿಸಿದ್ದು, 2015-16 ನೇ ಸಾಲಿನ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
     ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಆಲ್ ಸ್ಟೇಟ್ ರೋಡ್ ಟ್ರಾನ್ಸ್‍ಪೋರ್ಟ್ ಯೂನಿಯನ್ (ಎಎಸ್‍ಆರ್‍ಟಿಯು) ರಸ್ತೆ ಸಾರಿಗೆ ಸಂಸ್ಥೆಗಳ 61 ನೇ ಸಮ್ಮೇಳನದಲ್ಲಿ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಜಂಟಿಕಾರ್ಯದರ್ಶಿ ಅಭಯ್ ದಾಮಲೆ ಅವರು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹೆಚ್.ಎಸ್. ಅಶೋಕಾನಂದ ಅವರಿಗೆ ಪ್ರದಾನ ಮಾಡಿದರು.  ಎಎಸ್‍ಆರ್‍ಟಿಯು ಕಾರ್ಯಕಾರಿ ನಿರ್ದೇಶಕ ಆನಂದರಾಮ, ಉಪಾಧ್ಯಕ್ಷ ಮತ್ತು ಕರಾರಸಾಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ, ಕೊಪ್ಪಳ ಘಟಕದ ವ್ಯವಸ್ಥಾಪಕ ಬಿ.ವಿ. ಬಟ್ಟೂರ, ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಬಿ. ಮುಕ್ಕಣ್ಣ, ವಿಭಾಗೀಯ ತಾಂತ್ರಿಕ ಶಿಲ್ಪಿ ನಾರಾಯಣ ಗೌಡಗೇರಿ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Friday, 24 March 2017

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ- ಜಿ.ಪಂ. ಸದಸ್ಯರ ಒಕ್ಕೊರಲ ಮನವಿ


ಕೊಪ್ಪಳ ಮಾ. 24 (ಕರ್ನಾಟಕ ವಾರ್ತೆ): ಪ್ರಸಕ್ತ ವರ್ಷ ತೀವ್ರ ಬರ ಪರಿಸ್ಥಿತಿ ಇದ್ದು, ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ತೊಂದರೆಗಳಿಗೆ ಶೀಘ್ರ ಸ್ಪಂದಿಸಿ, ಸಮಸ್ಯೆ ಪರಿಹರಿಸಲು ಹೆಚ್ಚಿನ ಆದ್ಯತೆ ನೀಡುವಂತೆ ಕೊಪ್ಪಳ ಜಿಲ್ಲಾ ಪಂಚಾಯತಿಯ ಸದಸ್ಯರುಗಳು ಒಕ್ಕೊರಲ ಮನವಿ ಮಾಡಿದರು.

     ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಜಿ.ಪಂ. ಸದಸ್ಯರು ಮನವಿ ಮಾಡಿದರು.
     ಮುಂಗಾರು, ಹಿಂಗಾರು ಮಳೆಯ ವೈಫಲ್ಯದಿಂದ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದೆ.  ಅಂತರ್ಜಲ ಕುಸಿತದಿಂದ ಗ್ರಾಮೀಣ ಪ್ರದೇಶಗಳಲ್ಲಿನ ಬೋರ್‍ವೆಲ್‍ಗಳು ಕೂಡ ವಿಫಲವಾಗುತ್ತಿವೆ.  ಹೀಗಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಉದ್ಭವಿಸುವ ಸಾಧ್ಯತೆಗಳು ಹೆಚ್ಚಾಗಿದೆ.  ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಸದಸ್ಯರು ಅಧಿಕಾರಿಗಳ ಗಮನಕ್ಕೆ ತಂದಲ್ಲಿ, ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ, ಸಮಸ್ಯೆ ಪರಿಹರಿಸಲು ಹೆಚ್ಚಿನ ಆದ್ಯತೆ ನೀಡಬೇಕು.  ಅಧಿಕಾರಿಗಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಜಿ..ಪಂ. ಸದಸ್ಯರುಗಳು ಅಧ್ಯಕ್ಷರಿಗೆ ಒಕ್ಕೊರಲ ಮನವಿ ಮಾಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು, ಈಗಾಗಲೆ ತಾವು, ಅಧಿಕಾರಿಗಳೊಡಗೂಡಿ, ಪ್ರತಿ ತಾಲೂಕು ಮಟ್ಟದಲ್ಲಿ ಸಭೆಯನ್ನು ಕೈಗೊಂಡು, ಪರಿಸ್ಥಿತಿಯ ಪರಾಮರ್ಶೆ ನಡೆಸಿ, ಆಯಾ ತಾಲೂಕಿನ ಸಮಗ್ರ ಚಿತ್ರಣವನ್ನು ಪಡೆಯಲಾಗುತ್ತಿದೆ.  ಸಮಸ್ಯಾತ್ಮಕ ಗ್ರಾಮಗಳ ಮಾಹಿತಿ ಪಡೆದುಕೊಂಡು, ಅಂತಹ ಗ್ರಾಮಗಳಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಲಾಗುತ್ತಿದೆ.  ಹೀಗಾಗಿ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ತೀವ್ರ ನೀರಿನ ಸಮಸ್ಯೆ ಕಂಡುಬಂದಲ್ಲಿ, ತ್ವರಿತವಾಗಿ ಸ್ಪಂದಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಶುದ್ಧ ಕುಡಿಯುವ ನೀರು ಘಟಕ : ಜಿಲ್ಲೆಯಲ್ಲಿನ 558 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 437 ಘಟಕಗಳಿಗೆ ಕಮಿಷನರೇಟ್ ಮಾಡಲಾಗಿದ್ದು, ಇದರಲ್ಲಿ 402 ಕಾರ್ಯ ನಿರ್ವಹಿಸುತ್ತಿವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಟ್ಟೂರ ಅವರು ಹೇಳಿದರು.   ಶುದ್ಧ ಕುಡಿಯುವ ನೀರು ಘಟಕ ಅಳವಡಿಸಿ, ಸರಿಯಾಗಿ ಕಾರ್ಯ ನಿರ್ವಹಿಸದ ಹಾಗೂ ಅಳವಡಿಕೆಯಲ್ಲಿ ವಿಳಂಬ ಮಾಡಿದ ಏಜೆನ್ಸಿಯವರಿಗೆ ಮಾ. 30 ರವರೆಗೆ ಕಾಲಮಿತಿ ನಿಗದಿಪಡಿಸದ್ದು, ಅಷ್ಟರೊಳಗೆ ಎಲ್ಲ ಘಟಕಗಳು ಸಮರ್ಪಕವಾಗಿ ಕಾರ್ಯಾರಂಬವಾಗಬೇಕು.  ಇಲ್ಲದಿದ್ದಲ್ಲಿ ಅಂತಹ ಏಜೆನ್ಸಿಯವರ ಮೇಲೆ ಮಾ. 31 ರಂದೇ ದೂರು ದಾಖಲಿಸಲಾಗುವುದು ಎಂದು ಗಂಗಾವತಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಜಯಕುಮಾರ್ ಅವರು ಹೇಳಿದರು.  ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಎನ್. ಕೊರಬು ಅವರು ಮಾತನಾಡಿ, ಜಿಲ್ಲೆಯಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದ 264 ಆರ್.ಓ ಗಳಿದ್ದು, ಇದರಲ್ಲಿ 233 ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ.  ಕೆಲವೆಡೆ ಆರ್.ಓ. ಘಟಕಗಳ ಕಾಯಿನ್ ಬಾಕ್ಸ್‍ಗೆ ಕಿಡಿಗೇಡಿಗಳು ಕಬ್ಬಿಣದ ತುಂಡು, ಪ್ಲಾಸ್ಟಿಕ್, ತಂತಿ ಮುಂತಾದವುಗಳನ್ನು ಹಾಕುತ್ತಿರುವುದರಿಂದ, ಕೆಡುತ್ತಿವೆ.  ಜಿಲ್ಲೆಯಲ್ಲಿ ಈ ರೀತಿ ಕೆಟ್ಟುಹೋದ 33 ಕಾಯಿನ್ ಬಾಕ್ಸ್ ಉಪಕರಣಗಳನ್ನು ಬದಲಾಯಿಸಲಾಗಿದೆ ಎಂದರು.

ಖಾಸಗಿ ಬೋರ್‍ವೆಲ್‍ಗೆ ಬಾಡಿಗೆ : ಜಿಲ್ಲೆಯಲ್ಲಿ ನೀರಿನ ಮೂಲ ಲಭ್ಯವಿಲ್ಲದಿರುವ ಪ್ರದೇಶಗಳಲ್ಲಿ, ಬಾಡಿಗೆ ಆಧಾರದ ಮೇಲೆ ಖಾಸಗಿ ಬೋರ್‍ವೆಲ್‍ಗಳನ್ನು ಪಡೆದು, ನೀರು ಪೂರೈಸಲಾಗುತ್ತಿದೆ.  ಕೆಲವೆಡೆ ಹೆಚ್ಚು, ಬಾಡಿಗೆ ಕೊಡುತ್ತಿದ್ದು, ಕೆಲವು ಕಡೆ ಕಡಿಮೆ ಬಾಡಿಗೆ ಕೊಡುತ್ತಿದ್ದಾರೆ ಎಂದು ಜಿ.ಪಂ. ಸದಸ್ಯರೋರ್ವರು ಆರೋಪಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸಿಇಒ ವೆಂಕಟರಾಜಾ ಅವರು, ಖಾಸಗಿ ಬೋರ್‍ವೆಲ್‍ಗಳ ನೀರಿನ ಲಭ್ಯತೆಯ ಪ್ರಮಾಣಕ್ಕೆ ಅನುಗುಣವಾಗಿ ಬಾಡಿಗೆ ಮೊತ್ತವನ್ನು ನಿಗದಿಪಡಿಸಿ, ಪಾವತಿಸಲಾಗುತ್ತಿದ್ದು, ಗರಿಷ್ಟ 15 ಸಾವಿರ ರೂ. ಬಾಡಿಗೆ ನೀಡಲಾಗುತ್ತಿದೆ ಎಂದರು.
ಏಪ್ರಿಲ್‍ನಿಂದ 108 ಆ್ಯಬುಲೆನ್ಸ್ ಜಿಲ್ಲಾ ಸುಪರ್ದಿಗೆ : ಜಿಲ್ಲೆಯಲ್ಲಿ ಬೇಸಿಗೆಯ ಕಾರಣ ತಾಪಮಾನ ಹೆಚ್ಚುತ್ತಿದ್ದು,  ವಿವಿಧ ಕಾಯಿಲೆಗಳಿಗೆ  ಜನ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.  ಆದ್ದರಿಂದ ರೋಗಿಗಳಿಗೆ ತ್ವರಿತವಾಗಿ ಸ್ಪಂದಿಸುವುದು ಅಗತ್ಯವಾಗಿರುತ್ತದೆ.  ಆದ್ದರಿಂದ ಸರ್ಕಾರಿ ಆಸ್ಪತ್ರೆ ವೈದ್ಯರು ಕೇಂದ್ರ ಸ್ಥಾನದಲ್ಲೇ ಇರುವಂತೆ ಸೂಚಿಸಬೇಕು.  ಇನ್ನು 108 ಆ್ಯಂಬುಲೆನ್ಸ್ ಸಿಬ್ಬಂದಿ ತುರ್ತು ಸಂಧರ್ಭದಲ್ಲಿ ರೋಗಿಗಳಿಗೆ ದಾರಿ ತಪ್ಪಿಸಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ.  ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ಹೇಳಿದರೆ ತಡವಾಗಿ ಕರೆತರುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ ಎಂದು ಜಿ.ಪಂ. ಸದಸ್ಯ ಕೆ. ಮಹೇಶ್ ಅವರು ಸಭೆಯ ಗಮನಕ್ಕೆ ತಂದರು.   ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಅವರು, ಏಪ್ರೀಲ್ 1 ರಿಂದ 108 ಆ್ಯಂಬುಲೆನ್ಸ್‍ಗಳು, ಜಿಲ್ಲಾ ಆರೋಗ್ಯ ಇಲಾಖೆ ಸುಪರ್ದಿಗೆ ಬರಲಿದೆ. ರೋಗಿಗಳನ್ನು ಕಡ್ಡಾಯವಾಗಿ ಸರ್ಕಾರಿ ಸಂಸ್ಥೆಯಲ್ಲೇ ಚಿಕಿತ್ಸೆ ಕೊಡಿಸುವಂತೆ 108 ಸಿಬ್ಬಂದಿಗೆ ಸೂಚಿಸಲಾಗಿದೆ. ರೋಗಿಗಳಿಗೆ ದಾರಿ ತಪ್ಪಿಸುವ ಪ್ರಕರಣದ ದೂರು ಬಂದರೆ ಅಂತಹ 108 ಆ್ಯಂಬುಲೆನ್ಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಎಂದರು.
ಉದ್ಯೋಗಖಾತ್ರಿಯಡಿ 101. 80 ಕೋಟಿ ರೂ. ಖರ್ಚು : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಒಟ್ಟು 133. 87 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು.  ಜಿಲ್ಲೆಯಲ್ಲಿ ಸದ್ಯ ಬರ ಪರಿಸ್ಥಿತಿ ಇರುವುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು, ಹೆಚ್ಚು ಉದ್ಯೋಗ ನೀಡಲು ಆದ್ಯತೆ ನೀಡಲಾಗಿದ್ದು, ಈವರೆಗೆ 28. 96 ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ. 86 ರಷ್ಟು ಸಾಧನೆಯಾಗಿದೆ.  ಇದುವರೆಗೆ 6075 ಕುಟುಂಬಗಳು 100 ದಿನಗಳ ಉದ್ಯೋಗ, 255 ಕುಟುಂಬಗಳು 150 ದಿನಗಳ ಉದ್ಯೋಗ ಪಡೆದಿದ್ದು, 197378 ಕುಟುಂಬಗಳಿಗೆ ಉದ್ಯೋಗ ಚೀಟಿ ನೀಡಲಾಗಿದೆ.  ಕೂಲಿ, ಸಾಮಗ್ರಿ ಮತ್ತು ಆಡಳಿತ ವೆಚ್ಚ ಸೇರಿದಂತೆ ಒಟ್ಟು 101. 80 ಕೋಟಿ ರೂ. ಅನುದಾನ ವೆಚ್ಚವಾಗಿದ್ದು, ಉದ್ಯೋಗಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವಂತೆ ಉತ್ತೇಜನ ನೀಡಲು, ಜಿಲ್ಲಾ ಪಂಚಾಯತಿ ವತಿಯಿಂದ, ಕೂಲಿ ಸ್ಥಳದಲ್ಲಿಯೇ ಆರೋಗ್ಯ ತಪಾಸಣೆ ಅಭಿಯಾನ, ಬ್ಯಾಂಕ್ ಖಾತೆ ಅಭಿಯಾನ, ಕೂಲಿಕಾರರ ಮಕ್ಕಳಿಗೆ ಆಟದೊಂದಿಗೆ ಶಿಕ್ಷಣ ನೀಡುವಂತಹ ಉತ್ತೇಜನಕಾರಿ ಕ್ರಮಗಳನ್ನು ಅಳವಡಿಸಿದ್ದು, ಜನಮೆಚ್ಚುಗೆ ಪಡೆದುಕೊಳ್ಳುತ್ತಿದೆ ಎಂದು ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ತಿಳಿಸಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ ಸೇರಿದಂತೆ ಜಿಲ್ಲಾ ಪಂಚಾಯತಿಯ ಸದಸ್ಯರುಗಳು, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಮಕ್ಕಳನ್ನು ದುಡಿಮೆಗೆ ಕಳುಹಿಸಬೇಡಿ- ಬಿ. ದಶರಥ

ಕೊಪ್ಪಳ ಮಾ. 24 (ಕರ್ನಾಟಕ ವಾರ್ತೆ): ಬಾಲಕಾರ್ಮಿಕರಲ್ಲಿ ಪರಿಶಿಷ್ಟರೇ ಹೆಚ್ಚಾಗಿ ಕಂಡುಬರುತ್ತಿದ್ದು, ಯಾವುದೇ ಮಕ್ಕಳನ್ನು ದುಡಿಮೆಗೆ ಕಳುಹಿಸದಂತೆ ಕೊಪ್ಪಳದ ಹಿರಿಯಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಬಿ. ದಶರಥ ಅವರು ಮನವಿ ಮಾಡಿಕೊಂಡರು. 
     ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ನ್ಯಾಯವಾದಿಗಳ ಸಂಘ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಹಾಗೂ ವಿವಿದ ಇಲಾಖೆಗಳ ಮತ್ತು ಸಿದ್ದರಾಮೇಶ್ವರ ಕಟ್ಟಡ ಕಾರ್ಮಿಕರ ಸಂಘ, ಕಿನ್ನಾಳ ಇವರ ಸಂಯುಕ್ತಾಶ್ರಯದಲ್ಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಕಿನ್ನಾಳದ ಉಪ್ಪಾರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಜನಜಾಗೃತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.   
     ಬಾಲಕಾರ್ಮಿಕತೆಗೆ ಕಟ್ಟಡ ಕಾರ್ಮಿಕರ ಮಕ್ಕಳು ಮತ್ತು ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಜನಾಂಗದ ಮಕ್ಕಳು ಹೆಚ್ಚು ತೊಡಗಿಕೊಳ್ಳುವುದು ಕಂಡುಬರುತ್ತಿದ್ದು ಯಾರೂ ಕೂಡ ತಮ್ಮ ಮಕ್ಕಳನ್ನು ದುಡಿಮೆಗೆ ಕಳುಹಿಸಬಾರದು.   ಕಟ್ಟಡ ಕಾರ್ಮಿಕರು, ಕಾರ್ಮಿಕ ಇಲಾಖೆಯೆಲ್ಲಿ ತಮಗೆ ಲಭ್ಯವಿರುವ ಸೌಲಭ್ಯಗಳನ್ನು ಪಡೆದುಕೊಂಡು, ಸರ್ಕಾರದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಿ. ದಶರಥ ಅವರು ಸಲಹೆ ನೀಡಿದರು
  ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ  ಅವರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕತೆಯ ಕುರಿತು ಉಪನ್ಯಾಸ ನೀಡಿದರು. ವಕೀಲರಾದ ಎಮ್.ಎನ್.ಮಂಗಳೂರು ರವರು ನೊಂದ ಮಹಿಳೆಯ ಪರಿಹಾರದ ಬಗ್ಗೆ ಹಾಗೂ ಪೋಲಿಸ್ ದೂರುಪೆಟ್ಟಿಗೆ ಬಗ್ಗೆ ಉಪನ್ಯಾಸ ನೀಡಿದರು.  ಕಾರ್ಮಿಕ ನಿರೀಕ್ಷಕ ಹೊನ್ನಪ್ಪ   ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಶ್ರೀ ಕೋಟ್ರೇಶ.ಯು.ಪೋಚಗುಂಡಿ, ಕಾರ್ಯದರ್ಶಿ ಜಿಲ್ಲಾ ವಕೀಲರ ಸಂಘ, ಪ್ರಾಣೇಶ ಬಡೀಗೆರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಬಸವರಾಜ ಚಿಲವಾಡಗಿ, ಅದ್ಯಕ್ಷರು, ಸಿದ್ದರಾಮೇಶ್ವರ ಕಟ್ಟಡ ಕಾರ್ಮಿಕರ ಸಂಘ, ಕಿನ್ನಾಳ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಬಾಗವಹಿಸಿ ಮಾತನಾಡಿದರು, ಮುಖಂಡರಾದ ಬಸವರಾಜ ಉಪಲಾಪುರ ಕಾರ್ಮಿಕ ಇಲಾಖೆಯ ರಾಜುಸಿಂಗ್ ರಮೇಶ ಜಿ ಘೊರ್ಪಡೆ ಬಸಣ್ಣ ವಡ್ಡರ ಹಾಗೂ ಇತರರು ಬಾಗವಹಿಸಿದ್ದರು.

ಮಹಿಳೆ ಮತ್ತು ಮಕ್ಕಳ ರಕ್ಷಣೆಯಲ್ಲಿ ಕುಟುಂಬದ ಪಾತ್ರ ಮಹತ್ವದ್ದು


ಕೊಪ್ಪಳ ಮಾ. 24 (ಕರ್ನಾಟಕ ವಾರ್ತೆ): ಇತ್ತೀಚಿನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಸಾಗಾಣಿಕ ಹೆಚ್ಚಾಗುತ್ತಿದ್ದು, ಪ್ರಾಥಮಿಕವಾಗಿ ಮಹಿಳೆ ಮತ್ತು ಮಕ್ಕಳ ರಕ್ಷಣೆಯ ವಿಷಯದಲ್ಲಿ ಕುಟುಂಬಗಳ ಪಾತ್ರ ಬಹು ಮುಖ್ಯವಾಗಿದೆ ಎಂದು ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿ ಜಗದೀಶ್ವರಯ್ಯ ಹಿರೇಮಠ ಹೇಳಿದರು.  
       ಜಿಲ್ಲಾಡಳಿತ,  ಜಿಲ್ಲಾ ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಇವರÀ ಸಂಯುಕ್ತಾಶ್ರಯದಲ್ಲಿ ಯಲಬುರ್ಗಾ ತಾಲೂಕು ದ್ಯಾಂಪುರ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ “ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಪರವಾದ ಕಾನೂನುಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
     ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ಸಂಗತಿಯಾಗಿದೆ.  ಇತ್ತೀಚಿನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಸಾಗಾಣಿಕ ಹೆಚ್ಚಾಗುತ್ತಿದ್ದು, ಪ್ರಾಥಮಿಕವಾಗಿ ಮಹಿಳೆ ಮತ್ತು ಮಕ್ಕಳ ರಕ್ಷಣೆ ಹೆಚ್ಚಿನ ಜವಬ್ದಾರಿ ಮೂಲತಃ ಕುಟುಂಬದ್ದಾಗಿದ್ದು, ಅವರ ಜವಾಬ್ದಾರಿಯೂ ಹೆಚ್ಚಾಗಿದೆ.  ಜಿಲ್ಲೆಯಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕವನ್ನು ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿಗಳ ಕಛೇರಿಯಲ್ಲಿ  ಸ್ಥಾಪಿಸಲಾಗಿದೆ. ಅಲ್ಲದೇ ಪೊಲೀಸ್ ಠಾಣೆಯ ಠಾಣಾಧಿಕಾರಿಗಳನ್ನು ಮಕ್ಕಳ ಕಲ್ಯಾಣಾಧಿಕಾರಿಗಳೆಂದು ನೇಮಿಸಿದ್ದು, ಆರೈಕೆ ಮತ್ತು ಪೋಷಣೆ ಅವಶ್ಯಕತೆಯಿರುವ ಯಾವುದೇ ಮಗುವನ್ನು ಯಾರೇ ವ್ಯಕ್ತಿಗಳು ಆರೈಕೆ ಮತ್ತು ಪೋಷಣೆಗಾಗಿ ಮಕ್ಕಳನ್ನು ಹಾಜರುಪಡಿಸಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ  ರೋಹಿಣಿ ಕೊಟಗಾರ ಮಾತನಾಡಿ,          ಮಕ್ಕಳ ಹಕ್ಕುಗಳಾದ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ವಿಕಾಸ ಮತ್ತು ಅಭಿವೃದ್ಧಿ ಹೊಂದುವ ಹಕ್ಕು, ಮತ್ತು ಭಾಗವಹಿಸುವ ಹಕ್ಕುಗಳನ್ನು ಮಕ್ಕಳು ತಮ್ಮ ಬಾಲ್ಯದಲ್ಲಿ ಅನುಭವಿಸುವಂತಾಗಬೇಕು ಎಂದು ತಿಳಿಸಿದರು. 
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಕಂ ಪ್ರೋಬೇಷನ್ ಅಧಿಕಾರಿ ಶಿವಲೀಲಾ ವನ್ನೂರರವರು ಕೌಟಂಬಿಕ ದೌರ್ಜನ್ಯ ಕಾಯ್ದೆಯಡಿ ನೊಂದಮಹಿಳೆಯರಿಗೆ ಆಪ್ತ ಸಮಾಲೋಚನೆ, ಉಚಿತ ಕಾನೂನು ನೆರವು, ತಾತ್ಕಾಲಿಕ ಆಶ್ರಯ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನುಷ್ಠಾನಗೊಳಿಸಿದ್ದು ಅಲ್ಲದೇ ಸಂಕಷ್ಠಕೊಳಗಾದ ಮಹಿಳೆಯರ ರಕ್ಷಣೆಗಾಗಿ ಮಹಿಳಾ ಸಹಾಯವಾಣಿ 1091, ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ ಸಂಕಷ್ಟದಲ್ಲಿರುವ ಮಹಿಳೆಯರು ಅಥವಾ ಮಕ್ಕಳ ನೆರವಿಗೆ ಸಹಕರಿಸಬಹುದಾಗಿದೆ ಎಂದರು.

ಕನ್ನಡ ಕಟ್ಟುವ ಕಾಯಕಕ್ಕೆ ಕನ್ನಡಾಭಿಮಾನ ಬೆಳೆಸುವುದು ಅಗತ್ಯ : ಡಾ. ಮನು ಬಳಿಗಾರ್

ಕೊಪ್ಪಳ, ಮಾ.24 (ಕರ್ನಾಟಕ ವಾರ್ತೆ):   ಕನ್ನಡಿಗರಲ್ಲಿ ಅಭಿಮಾನದ ಕೊರತೆಯಿದ್ದು, ಕನ್ನಡ ಕಟ್ಟುವ ಕಾಯಕಕ್ಕೆ ಕನ್ನಡಾಭಿಮಾನವನ್ನು ಹೆಚ್ಚಿಸುವಂತಹ ಕಾರ್ಯ ನಿರಂತರ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಮನುಬಳಿಗಾರ್ ಹೇಳಿದರು.

    ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ವತಿಯಿಂದ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜ ಆವರಣದಲ್ಲಿನ ಅನ್ನದಾನಯ್ಯ ಪುರಾಣಿಕ್ ಮಹಾವೇದಿಕೆಯಲ್ಲಿ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದ್ದ ಕೊಪ್ಪಳ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೆಳನ ಉದ್ಘಾಟಿಸಿ ಮಾತನಾಡಿದರು.

    ಉತ್ತರ ಕರ್ನಾಟಕದ ಈ ಭಾಗವೇ ನಿಜವಾದ ತಿರುಳುಗನ್ನಡ ನಾಡು. ಇಲ್ಲಿನ ಜನ ಅತ್ಯಂತ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಇಲ್ಲಿಯ ಜನರು ಕನ್ನಡ, ಅಭಿಮಾನ, ಸಾಹಿತ್ಯ, ಭಾಷಾಭಿಮಾನದ ಬಗ್ಗೆ ತೋರುವ ಪ್ರೀತಿ ನೋಡಿದರೆ ನಮಗೆ ಹೆಮ್ಮೆ ಎನಿಸುತ್ತದೆ. ಬೇರೆ ಕಡೆ ಎಲ್ಲಿಯೂ ಇಷ್ಟೊಂದು ಕನ್ನಡದ ಬಗ್ಗೆ ಅಭಿಮಾನ ಕಾಣುತ್ತಿಲ್ಲ.  ಭಾಷೆ ಉಳಿದರಷ್ಟೆ ನಾವು ಉಳಿಯುತ್ತೇವೆ. ಮುಂದಿನ ಪೀಳಿಗೆಗೂ ನಾವು ಕನ್ನಡ ಭಾಷೆ ಉಳಿಸಿ, ಬೆಳೆಸಬೇಕಿದೆ. ನಮ್ಮ ಭಾಷೆ ಮೂಲಕ ದೇಶವನ್ನೆ ಗೆಲ್ಲುವ ಮನೋಭಾವ ಬೆಳೆಸಿಕೊಳ್ಳಬೇಕಿದೆ ಎಂದು ಡಾ. ಮನುಬಳಿಗಾರ್ ಹೇಳಿದರು.

       ದ್ರಾವಿಡ ಭಾಷೆಗಳ ಬೆಳವಣಿಗೆಗೆ ಕನ್ನಡ ಭಾಷೆಯೇ ಪೂರಕವಾಗಿತ್ತು.  ಒಂದನೇ ಶತಮಾನದಿಂದ ಹತ್ತನೆ ಶತಮಾನದ ಕಾಲಾವಧಿಯಲ್ಲಿ ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆ ಅತಿ ಹೆಚ್ಚು ಬಳಕೆಯಲ್ಲಿತ್ತು.  ಹೀಗಾಗಿ ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆ ಎಂಬುದಕ್ಕೆ ಒಂದನೇ ಶತಮಾನದಲ್ಲಿಯೇ ದೊರೆತ ಶಿಲಾ ಶಾಸನಗಳು ಸಾಕ್ಷಿಯಾಗಿವೆ.  ಸುಮಾರು ಒಂದು ಸಾವಿರ ವರ್ಷಗಳ ಹಿಂದೆಯೇ ದಕ್ಷಿಣ ಭಾರತದ ವಿವಿಧ ಸ್ಥಳಗಳಲ್ಲ್ಲಿ ಕನ್ನಡ ಲಿಪಿ ಲಭ್ಯವಿದ್ದು, ಎಲ್ಲಾ ಲಿಪಿಗಳಲ್ಲಿ ಕನ್ನಡ ಲಿಪಿ ಶ್ರೇಷ್ಠವಾಗಿದೆ.  12ನೇ ಶತಮಾನ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಸುವರ್ಣಕಾಲವೆಂದೇ ಹೇಳಲಾಗಿದೆ.  ಶರಣರು ಕನ್ನಡ ಭಾಷೆಯ ಬೆಳವಣಿಗೆಗೆ ಮಹತ್ವವಾದ ಕೊಡುಗೆಯನ್ನು ನೀಡಿದ್ದಾರೆ.  ಕನ್ನಡ ನಾಡಿನ ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಮುಂತಾದ ಸ್ಮಾರಕಗಳು ಇಡಿ ವಿಶ್ವದಲ್ಲಿಯೇ ಹೆಚ್ಚಿನ ಪ್ರಸಿದ್ಧಿ ಪಡೆದಿವೆ.  ಇಮ್ಮಡಿ ಪುಲಕೇಶಿಯು ಉತ್ತರ ಭಾರತದ ರಾಜರುಗಳ  ಮೇಲೆ ದಾಳಿ ನಡೆಸಿ, ಅವರನ್ನು ಸೋಲಿಸಿ, ಪುನಾಃ ಅವರ ರಾಜ್ಯವನ್ನು ಅವರಿಗೆ ಒಪ್ಪಿಸಿ, ಮಾನವೀಯತೆ ಮೆರೆದಿರುವುದು ಇತಿಹಾಸದ ಪುಟಗಳಲ್ಲಿ ದಾಖಲೆಯಾಗಿದೆ.  ಕನ್ನಡದ ಸಂಗೀತಕ್ಕೆ ಕರ್ನಾಟಕದ ಕೊಡುಗೆ ಅಪಾರ, ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತದಲ್ಲಿ ಕನ್ನಡಿಗರೆ ಅತಿಹೆಚ್ಚಿನ ಪ್ರಖ್ಯಾತಿ ಪಡೆದಿದ್ದಾರೆ.  ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ, ಇನ್ಯಾವ ರಾಜ್ಯಕ್ಕೂ ಇಷ್ಟು ಪ್ರಶಸ್ತಿಗಳು ದೊರೆತಿಲ್ಲ.  ಶಿಲ್ಪಕಲೆಯಲ್ಲಿ ಗೊಮ್ಮಟೇಶ್ವರ ಪ್ರಖ್ಯಾತಿಯಲ್ಲಿದೆ.  ಆದ್ದರಿಂದ ಕನ್ನಡಿಗರಿಗೆ ಸರಿಸಾಟಿ ಯಾರು ಇಲ್ಲ.  ನಮ್ಮ ನಾಡು, ನೆಲ, ಜಲ, ಭಾಷೆ, ಸಂಸ್ಕøತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ.   ಇಂದಿನ ದಿನಮಾನಗಳಲ್ಲಿ ಇಂಗ್ಲೀಷ್ ಭಾಷೆಯ ವ್ಯಾಮೋಹಕ್ಕೆ ಸಿಲುಕಿ, ಕನ್ನಡ ಮರೆಯಾಗುತ್ತಿರುವ ಪರಿಸ್ಥಿತಿ ಬಂದಿದೆ. ಇಂಗ್ಲೀಷ್ ಮಾಧ್ಯಮದಲ್ಲಿಯೇ ಮಕ್ಕಳನ್ನು ಓದಿಸಿದರೆ ಅವರು ದೊಡ್ಡ ವಿಜ್ಞಾನಿ ಯಾಗಬಹುದು ಎಂಬ ತಪ್ಪು ಕಲ್ಪನೆಯಿಂದ ಪಾಲಕರು ತಮ್ಮ ಮಕ್ಕಳಿಗೆ ಇಂಗ್ಲೀಷ್ ಶಾಲೆಗಳಲ್ಲಿ ಓದಿಸುತ್ತಿದ್ದಾರೆ.  ಆದರೆ ಕನ್ನಡ ಮಾಧ್ಯಮದಲ್ಲಿಯೇ ಕಲಿತು ಭಾರತ ರತ್ನ ಪಡೆದ ಸರ್ ಎಂ.ವಿಶ್ವೇಶ್ವರಯ್ಯ ರಂತಹ ಮಹನಿಯರು ನಮಗೆ ಮಾದರಿ.  ಪಂಪ, ರನ್ನ, ಕುಮಾರವ್ಯಾಸ, ಮುಂತಾದ ಕವಿಗಳು ಕನ್ನಡದ ಆಸ್ತಿ.  ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡಿಗನಾಗಿರು ಎಂಬ ಹಿರಿಯರು ಹಾಕಿಕೊಟ್ಟಂತಹ ಹಾದಿಯಲ್ಲಿ ನಾವು ಸಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಡಾ. ಮನು ಬಳಿಗಾರ್ ಹೇಳಿದರು.

     ಕೊಪ್ಪಳ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೆಳನದ ಸರ್ವಾಧ್ಯಕ್ಷರಾದ ರಂ.ರಾ. ನಿಡಗುಂದಿ ಅವರ ಭಾಷಣದ ಆಶಯ ನುಡಿಗಳನ್ನು ಕಾರ್ಯಕ್ರಮದಲ್ಲಿ ವಾಚನ ಮಾಡಲಾಯಿತು.

    ಕೇಂದ್ರ ಸಂಘ ಸಂಸ್ಥೆ ಪ್ರತಿನಿಧಿ ಡಾ. ಶೇಖರಗೌಡ ಮಾಲಿಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಇದು ಕೊಪ್ಪಳ ಜಿಲ್ಲೆಯ ಐತಿಹಾಸಿಕ ಸಂಭ್ರಮ.  ಭಾಷೆಯನ್ನು ಹೆಚ್ಚು-ಹೆಚ್ಚು, ಬೆಳಸಿ, ಪೋಷಿಸಿದಾಗ ಮಾತ್ರ ಅದು ಬೆಳೆಯಲು ಸಾಧ್ಯವಾಗುತ್ತದೆ.  ಸರ್ಕಾರ ಕನ್ನಡ ಭಾಷೆಗೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದು, ಇನ್ನೂ ಹೆಚ್ಚಿನ ಒತ್ತು ನೀಡಬೇಕಾಗಿದೆ.  ಕೊಪ್ಪಳ ಜಿಲ್ಲೆ ಬರಪೀಡಿತ ಪ್ರದೇಶದವಾಗಿದ್ದು, ಈ ಸಮ್ಮೆಳನವನ್ನು ರೈತರಿಗಾಗಿ ಅರ್ಪಿಸಿದೆ, ಹಾಗೂ ರೈತರಿಗೆ ಹೆಚ್ಚು ಒತ್ತುಕೊಟ್ಟಿದೆ ಎಂದರು.
ಧ್ವಜಾರೋಹಣ : ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಬಿ. ನಾಗರಳ್ಳಿ ಅವರು ಬೆಳಿಗ್ಗೆ ರಾóಷ್ಟ್ರಧ್ವಜಾರೋಹಣವನ್ನು ನೆರೆವೇರಿಸಿದರು.  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳ ಅಧ್ಯಕ್ಷ ರಾಜಶೇಖರ ಅಂಗಡಿ ಪರಿಷತ್ ಧ್ವಜಾರೋಹಣ, ಹಾಗೂ ಯಲಬುರ್ಗಾ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಕ್ಷ್ಮಣ ಹಿರೇಮನಿ ಕನ್ನಡ ಧ್ವಜಾರೋಹಣವನ್ನು ನೆರೆವೇರಿಸಿದರು.  
ಭುವನೇಶ್ವರಿ ಮೆರವಣಿಗೆ : ಜಿ.ಪಂ. ಸದಸ್ಯೆ ಹೊಳಿಯಮ್ಮ ಎಸ್. ಪೊ.ಪಾಟೀಲ್ ಅವರು ಸಮ್ಮೇಳನ ಸರ್ವಾಧ್ಯಕ್ಷರ ನೇತೃತ್ವದ ಕನ್ನಡ ಭುವನೇಶ್ವರಿ ಮೆರವಣಿಗೆಗೆ ಚಾಲನೆ ನೀಡಿದರು.   ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು,  ಕರಡಿ ಮಜಲು, ಹಗಲು ವೇಷ, ಕೋಲಾಟ ತಂಡ, ಡೊಳ್ಳು ಕುಣಿತ, ನೃತ್ಯ,  ರಾಮ, ಲಕ್ಷಣ, ಹನುಮಂತ ಸೇರಿ ರಾಮಾಯಣ ತಂಡದ ಹಗಲುವೇಷಧಾರಿಗಳು ಮೆರವಣಿಗೆಯನ್ನು ಆಕರ್ಷಕಗೊಳಿಸಿದರು.  
    ಹಿರಿಯ ಸಾಹಿತಿ ರಂ.ರಾ. ನಿಡಗುಂದಿ ಅವರು ಸಮ್ಮೇಳದ ಅಧ್ಯಕ್ಷತೆಯನ್ನು ವಹಿಸಿದ್ದರು.  ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಕೆ.ಬಿ. ಬ್ಯಾಳಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳ ಅಧ್ಯಕ್ಷ ರಾಜಶೇಖರ ಅಂಗಡಿ, ಯಲಬುರ್ಗಾ ತಾಲೂಕ ಕನ್ನಡ ಸಾಹಿತ್ಯ ಸಮ್ಮೆಳ ಅಧ್ಯಕ್ಷ ಲಕ್ಷ್ಮಣ ಹಿರೇಮನಿ, ಯಕ್ಕಣ್ಣ ಯರಾಶಿ, ಈರಣ್ಣ ನಿಂಗೂಜಿ, ಶರಣೆಗೌಡರ, ಶಿವಪ್ಪ ಜೋಗಿ, ಷಣ್ಮುಕ ಬಳ್ಳಾರಿ, ನಜರಮೀಯಾ ಕುಷ್ಟಗಿ, ಹಿರೇವಂಕಲಕುಂಟಾ ಗ್ರಾ.ಪಂ. ಅಧ್ಯಕ್ಷ ಮಂಜುನಾಥ ಸಜ್ಜನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  ಆರಂಭದಲ್ಲಿ ಹಿರೇವಂಕಲಕುಂಟಾ ಶಾಲೆಯ ವಿದ್ಯಾಥಿಗಳಿಂದ ನಾಡಗೀತೆ, ಹಾಗೂ ಸದಾಶಿವ ಪಾಟೀಲ್ ತಂಡದಿಂದ ರೈತಗೀತೆ ನಡೆಯಿತು.  ಸಮಾರಂಭದಲ್ಲಿ ರೈತರಿಗೆ, ಎಲ್ಲಾ ಕಲಾವಿದರಿಗೆ ಸನ್ಮಾನಿಸಲಾಯಿತು.  ನಂತರ ವಿವಿಧ ಗೋಷ್ಠಿಗಳು ಜರುಗಿದವು.

Thursday, 23 March 2017

ಮಾಹಿತಿ ಹಕ್ಕು ಕಾಯ್ದೆಯಡಿ ನೌಕರರ ವಯಕ್ತಿಕ ಮಾಹಿತಿ ನೀಡುವಂತಿಲ್ಲ- ಕೆ.ಎಂ. ಚಂದ್ರೇಗೌಡಕೊಪ್ಪಳ ಮಾ. 23 (ಕರ್ನಾಟಕ ವಾರ್ತೆ): ಮಾಹಿತಿ ಹಕ್ಕು ಕಾಯ್ದೆಯಡಿ ಯಾವುದೇ ಸರ್ಕಾರಿ ಅಧಿಕಾರಿ, ನೌಕರರ ವಯಕ್ತಿಕ ಮಾಹಿತಿಯನ್ನು ಅರ್ಜಿದಾರರಿಗೆ ಕೊಡುವಂತಿಲ್ಲ ಎಂದು ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಕೆ.ಎಂ. ಚಂದ್ರೇಗೌಡ ಅವರು ಹೇಳಿದರು.

     ಕರ್ನಾಟಕ ಮಾಹಿತಿ ಆಯೋಗದ ವತಿಯಿಂದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗಾಗಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರದಂದು ಹಮ್ಮಿಕೊಳ್ಳಲಾದ ಮಾಹಿತಿ ಹಕ್ಕು ಕಾಯ್ದೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
     ಸರ್ಕಾರಿ ಕಚೇರಿಗಳ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಉದ್ದೇಶಕ್ಕಾಗಿಯೇ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿದೆ.  ಆದರೆ ಸರ್ಕಾರಿ ನೌಕರರ ವಯಕ್ತಿಕ ಮಾಹಿತಿಯನ್ನು ಕೇಳುವಂತಹ ಅರ್ಜಿಗಳು ಸಲ್ಲಿಕೆಯಾಗುತ್ತಿವೆ.  ಕೆಲವು ಇಲಾಖೆಗಳು ಮಾಹಿತಿಯನ್ನು ಕೂಡ ನೀಡುತ್ತಿವೆ.  ಆದರೆ ಇದು ಸರಿಯಲ್ಲ.  ಮಾಹಿತಿ ಹಕ್ಕು ಕಾಯ್ದೆಯಡಿ ನಿಯಮ 8(1)ಜೆ ಅನ್ವಯ ಸರ್ಕಾರಿ ನೌಕರರ ಯಾವುದೇ ವಯಕ್ತಿಕ ಮಾಹಿತಿಯನ್ನು ನೀಡುವಂತಿಲ್ಲ.  ಚರ, ಸ್ಥಿರಾಸ್ತಿ ವಿವರ, ಬಯೋಡೇಟಾ, ವಯಕ್ತಿಕ ದಾಖಲೆಗಳು, ನೇಮಕಾತಿ ದಾಖಲೆಗಳು, ಸೇವಾಪುಸ್ತಕ, ಅಂಕಪಟ್ಟಿ, ವಿದ್ಯಾರ್ಹತೆ ಕುರಿತ ದಾಖಲೆಗಳು, ಜಾತಿ ಪ್ರಮಾಣಪತ್ರ, ಪಾಸ್‍ಪೋರ್ಟ್, ಭವಿಷ್ಯನಿಧಿ ವಿವರ, ಸರ್ಕಾರಿ ವಸತಿ ಗೃಹ ಹೊರತುಪಡಿಸಿ ಖಾಸಗಿ ಮನೆಯ ವಿಳಾಸ ಸೇರಿದಂತೆ ವಯಕ್ತಿಕ ಮಾಹಿತಿಯನ್ನು ನೀಡುವಂತಿಲ್ಲ.  ಅರ್ಜಿದಾರರು, ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ತೊಂದರೆಯಾದಲ್ಲಿ, ಮೊದಲ ಮೇಲ್ಮನವಿ ಪ್ರಾಧಿಕಾರಕ್ಕೆ ಅಪೀಲು ಸಲ್ಲಿಸಬೇಕೆ ಹೊರತು, ನೇರವಾಗಿ ಆಯೋಗಕ್ಕೆ ಅಪೀಲು ಸಲ್ಲಿಸಬಾರದು,  ಮೇಲ್ಮನವಿ ಪ್ರಾಧಿಕಾರದಿಂದಲೂ ಮಾಹಿತಿ ಲಭ್ಯವಾಗದಿದ್ದಲ್ಲಿ ಮಾತ್ರ ಆಯೋಗಕ್ಕೆ ಅಪೀಲು ಸಲ್ಲಿಸಬೇಕು.  ಅರ್ಜಿಗೆ ಬಿಪಿಎಲ್ ಕಾರ್ಡ್ ಪ್ರತಿ ಸಲ್ಲಿಸಿ 100 ಪುಟ ಉಚಿತವಾಗಿ ಮಾಹಿತಿ ನೀಡಿ ಎಂದು ಅರ್ಜಿ ಸಲ್ಲಿಸಿದರೆ, ಕೊಡುವ ಅಗತ್ಯವಿಲ್ಲ.  ಚಾಲ್ತಿ ಸಾಲಿನ ಆದಾಯ ಪ್ರಮಾಣಪತ್ರ ಸಲ್ಲಿಸಿದಲ್ಲಿ ಮಾತ್ರ ಬಿಪಿಎಲ್ ಎಂಬುದಾಗಿ ಪರಿಗಣಿಸಬೇಕು.  ಕಾಯ್ದೆಯಡಿ ಯಾವ ಮಾಹಿತಿ ಕೊಡಬೇಕು, ಕೊಡಬಾರದು ಎಂಬುದರ ಬಗ್ಗೆ ಸುಪ್ರಿಂಕೋರ್ಟ್, ಹೈಕೋರ್ಟ್‍ಗಳು ಅನೇಕ ಆದೇಶಗಳನ್ನು ಹೊರಡಿಸಿವೆ.  ಸರ್ಕಾರವೂ ಕೂಡ ಸುತ್ತೋಲೆಗಳನ್ನು ಹೊರಡಿಸಿದೆ, ಇವೆಲ್ಲವುಗಳ ಬಗ್ಗೆ ಅಧಿಕಾರಿಗಳು ವೆಬ್‍ಸೈಟ್ ಮೂಲಕ ಮಾಹಿತಿ ಪಡೆಯಬಹುದು ಎಂದು ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಕೆ.ಎಂ. ಚಂದ್ರೇಗೌಡ ಅವರು ಹೇಳಿದರು.
     ಯಾವುದೇ ವ್ಯಕ್ತಿಗೆ ಜನನ ಮತ್ತು ಮರಣದ ದಾಖಲೆ ಹೇಗೆ ಇರುತ್ತದೆಯೋ, ಅದೇ ರೀತಿ ಕಡತಗಳಿಗೂ ಸಹ ಪ್ರಾರಂಭ ಹಾಗೂ ಮುಕ್ತಾಯದ ದಿನಾಂಕ ಇರುತ್ತದೆ.  ಸರ್ಕಾರವೇ ಕಡತಗಳ ನಿರ್ವಹಣೆಗೆ ವರ್ಗೀಕರಣಗೊಳಿಸಿದೆ.  ಆದರೆ ಕೆಲವು ಇಲಾಖೆಗಳು ಕಡತಗಳನ್ನು ರಾಶಿ, ರಾಶಿಯಾಗಿ ಜೋಡಿಸಿಟ್ಟುಕೊಳ್ಳುತ್ತಾರೆ.  ಕೆಲವು ಕಡತಗಳಿಗೆ ಒಂದು ವರ್ಷ, 02, 05, 10 ವರ್ಷ ಹೀಗೆ ವರ್ಗೀಕರಣಗೊಳಿಸಿದ್ದು, ನಿಗದಿತ ಅವಧಿ ಬಳಿಕ, ಕಡತಗಳನ್ನು ನಿಯಮಾನುಸಾರ ನಾಶಪಡಿಸಬೇಕು.  ಅದಕ್ಕೆ ಸಂಬಂಧಿಸಿದ ರಜಿಸ್ಟರ್ ನಿರ್ವಹಿಸಬೇಕು.  ಅರ್ಜಿದಾರರು ಇಡೀ ರಾಜ್ಯ ಅಥವಾ ಜಿಲ್ಲೆಗೆ ಸಂಬಂಧಿಸಿದ ಮಾಹಿತಿಯನ್ನು ಕೋರಿದಾಗ, ನಿಯಮ 6(3) ರಡಿ ಎಲ್ಲ ಜಿಲ್ಲೆಗಳು ಅಥವಾ ತಾಲೂಕು ಮಟ್ಟದ ಅಧಿಕಾರಿಗಳಿಗೆ ವರ್ಗಾಯಿಸುವುದು ಕಂಡುಬರುತ್ತಿದ್ದು, ಆದರೆ ಇದು ಸರಿಯಾದ ಕ್ರಮವಲ್ಲ.  ನಿಯಮದಡಿ, ಅರ್ಜಿಯನ್ನು ಒಂದಕ್ಕಿಂತ ಹೆಚ್ಚಿನ ಪ್ರಾಧಿಕಾರಗಳಿಗೆ ನಿಯಮ 6(3) ರಡಿ ವರ್ಗಾಯಿಸುವಂತಿಲ್ಲ.  ಅರ್ಜಿದಾರರು ಸಂಬಂಧಿಸಿದ ಪ್ರಾಧಿಕಾರಗಳಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕೆ ಹೊರತು, ಒಂದೇ ಪ್ರಾಧಿಕಾರದವರು, ಮಾಹಿತಿಯನ್ನು ಕ್ರೋಢೀಕರಿಸಿ ಕೊಡುವಂತಿಲ್ಲ. ಬೇರೆ ಯಾವುದೋ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಕೋರಿ ಇನ್ಯಾವುದೋ ಇಲಾಖೆಯ ಕಚೇರಿಗೆ ಅರ್ಜಿ ಕೊಡುವುದು ಸಹ ಕಂಡುಬರುತ್ತಿದ್ದು, ಇದೂ ಸಹ ಸರಿಯಾದ ಕ್ರಮವಲ್ಲ ಎಂದು ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಕೆ.ಎಂ. ಚಂದ್ರೇಗೌಡ ಅವರು ಹೇಳಿದರು.
     ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಪಾಲ್ಗೊಂಡಿದ್ದರು.

ಬಿಸರಳ್ಳಿ : ಕಾಮಗಾರಿ ಸ್ಥಳದಲ್ಲಿ ಕೂಲಿಕಾರ್ಮಿಕರಿಗೆ ಆರೋಗ್ಯ ತಪಾಸಣೆ

ಕೊಪ್ಪಳ, ಮಾ.23 (ಕರ್ನಾಟಕ ವಾರ್ತೆ): ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮ ಪಂಚಾಯಿತಿಯ ಮಟ್ಟಿಹಳ್ಳ ಕೆರೆ ಅಭಿವೃದ್ದಿಪಡಿಸುವ ಕಾಮಗಾರಿ ಸ್ಥಳದಲ್ಲಿಯೇ ಕೂಲಿಕಾರ್ಮಿಕರಿಗೆ ಆರೋಗ್ಯ ಇಲಾಖೆವತಿಯಿಂದ  ಆರೋಗ್ಯ ತಪಾಸಣೆ ಏರ್ಪಡಿಸಲಾಯಿತು.
           ಕೊಪ್ಪಳ ತಾಲೂಕಿನ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ,  ಪ್ರಸಕ್ತ ವರ್ಷ ಬಿಸಿಲನ ತಾಪಮಾನ  ಹೆಚ್ಚಾಗಿರುವದರಿಂದ   ಕೆಲಸದಲ್ಲಿ ತೊಡುಗುವ ಕೂಲಿಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ.  ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಸಮಾಜದಲ್ಲಿ ಎಲ್ಲರೂ ಆರೋಗ್ಯದಿಂದ ಇದ್ದಾಗ ಮಾತ್ರ ಸುಂದರವಾದ ಸಮಾಜ ಕಾಣಬಹುದು. ಏಪ್ರಿಲ್-1 ರಿಂದ ಅನ್ವಯವಾಗುವಂತೆ ಉದ್ಯೋಗಖಾತ್ರಿ ಯೋಜನೆಯಡಿ ಒಂದು ದಿನದ ಕೂಲಿ ವೇತನವನ್ನು ರೂ.236 ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
           ಬೆಟಗೇರಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದಾಧಿಕಾರಿ ಡಾ|| ದೀಪಾ ಅವರು ಕಾರ್ಯಕ್ರಮವನ್ನು  ಮಾತನಾಡಿ, ಕೂಲಿಕಾರ್ಮಿಕರ ಆರೋಗ್ಯ ತಪಾಸಣೆಯನ್ನು ಕೆಲಸದ ಸ್ಥಳದಲ್ಲಿಯೇ ನಡೆಸುವಂತೆ ಕ್ರಮ ಕೈಗೊಂಡಿರುವುದು ಪ್ರಶಂಸಾರ್ಹವಾಗಿದೆ.  ಆರೋಗ್ಯ   ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನಿಂಗನಗೌಡ ತೊಂಡಿಹಾಳ ಅವರು ತಪಾಸಣೆಯ ಶಿಬಿರದಲ್ಲಿ 126 ಕೂಲಿಕಾರ್ಮಿಕರು ಭಾಗವಹಿಸಿದ್ದಾರೆ ಎಂದು ತಿಳಿಸಿದರು.
     ಈ ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ಸಹಾಯಕರು,ಸಹಾಯಕಿಯರು,ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಭಾಗವಹಿಸಿದರು ಎಂದು ಬಿಸರಳ್ಳಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ.25 ರಂದು ಕೊಪ್ಪಳದಲ್ಲಿ ಮಾವು ಬೆಳೆಗಾರರಿಗೆ ತಾಂತ್ರಿಕ ಕಾರ್ಯಾಗಾರ

ಕೊಪ್ಪಳ, ಮಾ.23 (ಕರ್ನಾಟಕ ವಾರ್ತೆ): ಕೊಪ್ಪಳ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ಕೊಪ್ಪಳ ಜಿಲ್ಲೆಯ ಮಾವು ಬೆಳೆಗಾರರಿಗೆ ಗುಣಮಟ್ಟದ ಮಾವು ಬೇಸಾಯ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತು ಕುರಿತು ಒಂದು ದಿನದ ತಾಂತ್ರಿಕ ಕಾರ್ಯಾಗಾರವನ್ನು ಮಾ. 25 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳದ ಎ.ಆರ್. ಮೇಘರಾಜ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.
       ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಉದ್ಘಾಟನೆ ನೆರೆವೇರಿಸುವರು.  ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿ.ಪ.ಂ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ್ ಎಸ್. ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ, ಜಿ.ಪಂ ಉಪಾಧ್ಯಕ್ಷೆ ಲಕ್ಷಮ್ಮ ಎಸ್.ನೀರಲೂಟಿ, ಬೆಂಗಳೂರು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್. ಗೋಪಾಲ್ ಕೃಷ್ಣ, ಕೊಪ್ಪಳ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮಣ್ಣ ಅಗಸಿಮುಂದಿನ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಮಹೇಶ ನವಲಳ್ಳಿ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ವಿರುಪಣ್ಣ ಹಳ್ಳಿಕೇರಿ (ನಮೋದಯ), ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ, ಅಭಿನವಶ್ರೀ ತೋಟಗಾರಿಕೆ ಬೆಳೆಗಾರರ ರೈತ ಉತ್ಪಾದಕ ಸಂಸ್ಥೆ ಅಧ್ಯಕ್ಷ ಪ್ರಭುರಾಜ ವಿ.ಪಾಟೀಲ್, ಹಾಗೂ ಕುಷ್ಟಗಿ ಕಪಿಲತೀರ್ಥ ತೋಟಗಾರಿಕೆ ಬೆಳೆಗಾರರ ರೈತ ಉತ್ಪಾದಕ ಸಂಸ್ಥೆ ಅಧ್ಯಕ್ಷ ಸಿದ್ದನಗೌಡ ಹೆಚ್. ಪೋಲೀಸ್ ಪಾಟೀಲ್ ಪಾಲ್ಗೊಳ್ಳುವರು.
    ವಿಶೇಷ ಆಹ್ವಾನಿತರಾಗಿ ಕೊಪ್ಪಳ ಜಿಲ್ಲಾಧಿಕಾರಿಗಳಾದ ಎಂ. ಕನಗವಲ್ಲಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ಪರಿಷ್ಟಾಧಿಕಾರಿ ಡಾ. ಕೆ.ತ್ಯಾಗರಾಜನ್, ಬೆಂಗಳೂರು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಕದಿರೇಗೌಡ, ಲಾಲ್‍ಬಾಗ್ ತೋಟಗಾರಿಕೆ ಜಂಟಿ ನಿರ್ದೇಶಕ ಹಾಗೂ ಕೊಪ್ಪಳ ಜಿಲ್ಲಾ ನೋಡಲ್ ಅಧಿಕಾರಿ ಡಾ. ನಂದಾ, ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯ ಡೀನ್ ಡಾ. ಪಿ.ಎಮ್. ಗಂಗಾಧರಪ್ಪ, ಕೃಷಿ ವಿಸ್ತರಣೆ ಮತ್ತು ಶಿಕ್ಷಣ ಕೇಂದ್ರ ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ್, ಹಾಗೂ ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್ ಭಾಗವಹಿಸುವರು.
ಕಾರ್ಯಾಗಾರ ಕುರಿತು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳಾದ ಡಾ. ಸತೀಶ್ ಫತೆಪುರ, ಮಹ್ಮದ್ ಜಮೀಲ್ ಜಾಲಿಗಾರ್ ಹಾಗೂ ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯ ಪ್ರಾಧ್ಯಾಪಕರ ಡಾ. ಡಿ.ಪಿ. ಪ್ರಕಾಶ್, ಗಂಗಾವತಿ (ತೋಟಗಾರಿಕೆ) ಕೃಷಿ ವಿಜ್ಞಾನ ಕೇಂದ್ರದ ಡಾ. ಜ್ಯೋತಿ ಆರ್. ಅವರು ವಿಶೇಷ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ಭಾಗ್ಯನಗರ : ಉದ್ದಿಮೆ ಪರವಾನಿಗೆ ಪಡೆದುಕೊಳ್ಳಲು ಸೂಚನೆ


ಕೊಪ್ಪಳ, ಮಾ.22 (ಕರ್ನಾಟಕ ವಾರ್ತೆ): ಭಾಗ್ಯನಗರದಲ್ಲಿ ವಿವಿಧ ಉದ್ದಿಮೆಗಳನ್ನು ನಡೆಸುತ್ತಿರುವ ವ್ಯಾಪಾರಸ್ಥರು, ಉದ್ದಿಮೆಯ 2017-18ನೇ ಸಾಲಿಗೆ ಉದ್ದಿಮೆ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆದುಕೊಂಡು ಉದ್ದಿಮೆ ನಡೆಸಬೇಕೆಂದು ಭಾಗ್ಯನಗರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸೂಚನೆ ನೀಡಿದ್ದಾರೆ.
    ಈಗಾಗಲೇ ಉದ್ದಿಮೆ ಪರವಾನಿಗೆ ಪಡೆದುಕೊಂಡವರು ಚಾಲ್ತಿ ಸಾಲಿಗೆ ನವೀಕರಣ ಮಾಡಿಸಿಕೊಂಡು ಉದ್ದಿಮೆಯನ್ನು ನಡೆಸಬೇಕು.  ಒಂದು ವೇಳೆ ಲೈಸನ್ಸ್ ಪಡೆಯದೇ ಅಥವಾ ನವೀಕರಣ ಮಾಡಿಸಿಕೊಳ್ಳದೇ ಉದ್ದಿಮೆಯನ್ನು ನಡೆಸುತ್ತಿದ್ದಲ್ಲಿ, ಕರ್ನಾಟಕ ಪುರಸಭೆ ಕಾಯ್ದೆ 1964 ರನ್ವಯ ದಂಡವನ್ನು ವಿಧಿಸಲಾಗುವುದು.   ಉದ್ದಿಮೆ ಪರವಾನಿಗೆಯನ್ನು ಪಡೆದುಕೊಳ್ಳಲು, ನಿಗದಿತ ನಮೂನೆಯಲ್ಲಿ ಅರ್ಜಿ, ಚಾಲ್ತಿ ಸಾಲಿನ ಆಸ್ತಿಕರ ಹಾಗೂ ಚಾಲ್ತಿ ತಿಂಗಳಿನ ನೀರಿನ ಕರ ಪಾವತಿಸಿದ ರಶೀದಿಗಳನ್ನು, ವಿದ್ಯುತ್ ಬಿಲ್, ಆಧಾರ್ ಕಾರ್ಡ, ಮಳಿಗೆ ಅಥವಾ ಕಟ್ಟಡದ ಪೋಟೊ, ಅರ್ಜಿದಾರರ ಪಾಸ್ ಪೋರ್ಟಸೈಜ್ ಭಾವಚಿತ್ರ, ಬಾಡಿಗೆ ಕರಾರು ಪತ್ರ, ಒಪ್ಪಿಗೆ ಕರಾರು ಪತ್ರ ಇತರೆ ದಾಖಲೆಗಳೊಂದಿಗೆ ಲಗತ್ತಿಸಿ ಉದ್ದಿಮೆ ಪರವಾನಿಗೆಯನ್ನು ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

“ನನ್ನ ಮನೆಯಲ್ಲಿ ಶೌಚಾಲಯ ಇದೆ-ನನಗೆ ಹೆಮ್ಮೆ ಇದೆ”


ಕೊಪ್ಪಳ, ಮಾ.23 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮದ ಪಂಚಾಯತ್  ವ್ಯಾಪಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪತ್ರ ಚಳುವಳಿಯ ಮುಖಾಂತರ ಕಳೆದ ಜನೆವರಿ 26ರ ನಂತರ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಂಡ ಶಾಲಾ ಮಕ್ಕಳಿಗೆ “ನನ್ನ ಮನೆಯಲ್ಲಿ ಶೌಚಾಲಯ ಇದೆ-ನನಗೆ ಹೆಮ್ಮೆ ಇದೆ” ಎಂಬ ಘೋಷಣೆಯುಳ್ಳ ಕ್ಯಾಪ್‍ಗಳನ್ನು ಗುರುವಾರದಂದು ವಿವಿಧ ಗ್ರಾಮಗಳಲ್ಲಿನ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು.

    ಕೊಪ್ಪಳ ತಾಲೂಕು ಹಿಟ್ನಾಳ್‍ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಎ. ಧರ್ಮರಾಜ್ ಮತನಾಡಿ, ಶೌಚಾಲಯ ನಿರ್ಮಾಣದ ಕಾರ್ಯದಲ್ಲಿ ಕೇವಲ ಅಧಿಕಾರಿಗಳು ಮಾತ್ರವಲ್ಲದೇ ಸಾರ್ವಜನಿಕರು ಕೂಡ ಆಸಕ್ತಿಯನ್ನು ವಹಿಸಿ ಜನರಿಗೆ ಮಾಹಿತಿ ನೀಡುತ್ತಾ ಈ ಒಂದು ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
  ಮುಖ್ಯ ಅತಿಥಿಗಳಾಗಿ ಜಿ.ಪಂ. ನೋಡಲ್ ಅಧಿಕಾರಿ ರವಿ ಬಸರಿಹಳ್ಳಿ ಭಾಗವಹಿಸಿದ್ದರು.  ಯೋಜನಾ ನಿರ್ದೇಶಕರು ಮಾತನಾಡಿ, ಶೌಚಾಲಯ ನಿರ್ಮಾಣದ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಪಾತ್ರ ಬಹುಮುಖ್ಯವಾಗಿದೆ.  ಮುಖ್ಯವಾಗಿ ಶಿಕ್ಷಕರ ಮಾತನ್ನು ಮಕ್ಕಳು ಪಾಲಿಸುತ್ತಾರೆ.  ಅದಕ್ಕಾಗಿ ವರ್ಗದ ಶಿಕ್ಷಕರನ್ನು ಗುರಿಯನ್ನಾಗಿ ಮಾಡಿಕೊಂಡು, ಶೌಚಾಲಯ ಇಲ್ಲದ ಮಕ್ಕಳನ್ನು ಗುರುತಿಸಿ ಅವರ ಮನವೊಲಿಸಿ ಪತ್ರ ಚಳುವಳಿಯ ಮೂಲಕ ಪಾಲಕರಿಗೆ ಪತ್ರ ಬರೆಯಿಸಿ, ಜಿಲ್ಲೆಯಲ್ಲಿ ಶೌಚಾಲಯ ಕ್ರಾಂತಿಯನ್ನು ಆರಂಭಿಸಿದೆ. ಇದು ಶ್ಲ್ಯಾಘನಿಯವಾಗಿದೆ.  ಬಿಆರ್‍ಸಿ ಮತ್ತು  ಸಿಆರ್‍ಪಿಗಳು ಹೆಚ್ಚು ಗಮನ ನೀಡಿ ಶಾಲೆಗಳನ್ನು ಒಡಿಎಫ್ ಮಾಡಿ ಎಲ್ಲರಿಗೂ ಮಾದರಿಯಾಗಬೇಕು.  ತಮ್ಮ ಮನೆಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಂಡ ಶಾಲಾ ಮಕ್ಕಳಿಗೆ ಮೊದಲ ಹಂತದಲ್ಲಿ ಕ್ಯಾಪ್‍ಗಳನ್ನು ನೀಡಲಾಗಿದೆ.  ನಂತರದಲ್ಲಿ ಬ್ಯಾಡ್ಜ್ ಮತ್ತು ಬ್ಯಾಂಡ್‍ಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. 
       ಗಂಗಾವತಿ ತಾಲೂಕಿನ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕಸ್ತೂರಿಬಾ ಗಾಂಧಿ ಬಾಲಕಿಯರ ಶಾಲೆಯಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.  ಅಧ್ಯಕ್ಷತೆಯನ್ನು ಗಂಗಮ್ಮ ವಹಿಸಿದ್ದರು.  ಅತಿಥಿಗಳಾಗಿ ಜಿ.ಪಂ. ಸದಸ್ಯ ವಿಶ್ವನಾಥ ರೆಡ್ಡಿ, ತಾ.ಪಂ. ಉಪಾಧ್ಯಕ್ಷ ಗವಿಸಿದ್ದಪ್ಪ, ಸದಸ್ಯ ಪ್ರಕಾಶ ಭಾವಿ, ಗ್ರಾ.ಪಂ. ಉಪಾಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.  ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ವೆಂಕೊಬಪ್ಪ ಉಪಸ್ಥಿತರಿದ್ದರು.  ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾ.ಪಂ. ವ್ಯಾಪ್ತಿಯ ಬಾಲಕಿಯರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.  ದ್ರಾಕ್ಷಾಯಣಿ ವಿರೇಶ ಕಟಗಿ ಅವರು ಅಧ್ಯಕ್ಷತೆ ವಹಿಸಿದ್ದರು.

Wednesday, 22 March 2017

ಕೊಪ್ಪಳ ನಗರ ಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧ

ಕೊಪ್ಪಳ, ಮಾ.22 (ಕರ್ನಾಟಕ ವಾರ್ತೆ): ಕೊಪ್ಪಳ ನಗರ ಸಭೆ ವ್ಯಾಪ್ತಿಯಲ್ಲಿ ಸರ್ಕಾರದ ಆದೇಶದ ಪ್ರಕಾರ, ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಷೇಧಿಸಿದ್ದು, ಎಲ್ಲರೂ ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತರು ಮನವಿ ಮಾಡಿದ್ದಾರೆ.
      ಪರಿಸರ ಮಾಲಿನ್ಯವನ್ನು ತಡೆಗಟ್ಟವ ಹಿನ್ನಲೆಯಲ್ಲಿ ರಾಷ್ಟೀಯ ಹಸಿರು ನ್ಯಾಯ ಪೀಠವು ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಸರಬರಾಜು, ಮತ್ತು ಬಳಕೆಯನ್ನು ನಿಷೇಧಿಸಿ ಆದೇಶವನ್ನು ಜಾರಿಮಾಡಿದ್ದು, ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಲಾಗಿದೆ.  ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಪ್ಲಾಸ್ಟಿಕ್‍ನಿಂದ ತಯಾರಾದ ಕ್ಯಾರಿ ಬ್ಯಾಗ್, ಬಿತ್ತಿ ಪತ್ರಗಳು, ತೋರಣ, ಪ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ, ಕ್ಲಿಂಗ್ ಫೀಲ್ಡ್ ಮತ್ತು ಊಟದ ಮೇಜಿನ ಮೇಲೆ ಹಾಕುವ ಪ್ಲಾಸ್ಟಿಕ್ ಹಾಳೆ, ಥರ್ಮಕೋಲ್ ಇತ್ಯಾದಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು, ಹಾಗೂ ಮಾರಾಟ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.     ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ, ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸಹಕರಿಸಬೇಕೆಂದು ಕೊಪ್ಪಳ ನಗರ ಸಭೆ ಪೌರಾಯುಕ್ತ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಬಸ್‍ಪಾಸ್‍ನಲ್ಲಿ ಬೇರೆ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಅವಕಾಶ

ಕೊಪ್ಪಳ, ಮಾ.22 (ಕರ್ನಾಟಕ ವಾರ್ತೆ): ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ರಿಯಾಯಿತಿ ಬಸ್ ಪಾಸ್ ಪಡೆದಿರುವ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು 2016-17ನೇ ಸಾಲಿನ ಬಸ್‍ಪಾಸ್ ಬಳಸಿ, ಬೇರೆ ಪರೀಕ್ಷಾ ಕೇಂದ್ರಗಳಿಗೆ ತೆರಳುವ ಸಲುವಾಗಿ ಈಕರಸಾಸಂಸ್ಥೆ ಬಸ್‍ಗಳಲ್ಲಿ ಸಂಚರಿಸಲು ಮಾ.30 ರಿಂದ ಏಪ್ರಿಲ್ 12 ರವರೆಗೆ ಪರೀಕ್ಷಾ ದಿನದಂದು ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಈ ಕುರಿತಂತೆ ವಿಭಾಗದ ಎಲ್ಲ ಚಾಲಕ, ನಿರ್ವಾಹಕ ಹಾಗೂ ಸಂಬಂಧಿಸಿದ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಬೋರಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ.25 ರಂದು ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ

ಕೊಪ್ಪಳ, ಮಾ.22 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮೀಸಲು ಪೊಲೀಸ್, ಮಹಿಳಾ ಮತ್ತು ಪುರುಷ ಪೊಲೀಸ್ ಕಾನ್ಸ್‍ಟೆಬಲ್ ಪ್ರಶಿಕ್ಷಾಣಾರ್ಥಿಗಳ “ನಿರ್ಗಮನ ಪಥಸಂಚಲನ” ಕಾರ್ಯಕ್ರಮ ಮಾ.25 ರಂದು ಬೆಳಿಗ್ಗೆ 8-00 ಗಂಟೆಗೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಕೆ.ಎಸ್.ಆರ್.ಪಿ. ತರಬೇತಿ ಶಾಲೆಯಲ್ಲಿ ಆಯೋಜಿಸಲಾಗಿದೆ.
    ರಾಜ್ಯ ಗೃಹ ಮಂತ್ರಿಗಳಾದ ಡಾ. ಜಿ. ಪರಮೇಶ್ವರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಪಥಸಂಚಲನ ಪರಿವೀಕ್ಷಣೆ ಹಾಗೂ ಬಹುಮಾನ ವಿತರಣೆ ಮಾಡುವರು.  ವಿಶೇಷ ಅತಿಥಿಗಳಾಗಿ ಗೃಹ ಮಂತ್ರಿಗಳ ಸಲಹೆಗಾರರಾದ ಕೆಂಪಯ್ಯ ಅವರು ಭಾಗವಹಿಸುವರು.  ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರಾದ ರೂಪಕ್ ಕುಮಾರ್ ದತ್ ಅವರು ಉಪಸ್ಥಿತರಿರುವರು.
    “ನಿರ್ಗಮನ ಪಥಸಂಚಲನ” ಕಾರ್ಯಕ್ರಮದಲ್ಲಿ, ಶಸ್ತ್ರವಂದನೆ ಸ್ವೀಕಾರ, ಕವಾಯತು ಪರಿವೀಕ್ಷಣೆ, ಪಥ ಸಂಚಲನ,  ಪ್ರತಿಜ್ಞೆ ಸ್ವೀಕಾರ, ಬಹುಮಾನ ವಿತರಣೆ, ವಿದಳನ ಪಥ ಸಂಚಲನ ಮುಂತಾದ ಕಾರ್ಯಕ್ರಮಗಳು ಜರುಗಲಿವೆ ಎಂದು  ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ್ ರಾವ್  ಅವರು ತಿಳಿಸಿದ್ದಾರೆ.

ಬಾಲ್ಯ ವಿವಾಹದಲ್ಲಿ ಪಾಲ್ಗೊಂಡವರೆಲ್ಲರೂ ಅಪರಾಧಿಗಳು : ಶೇಖರಗೌಡ ಜಿ. ರಾಮತ್ನಾಳ


ಕೊಪ್ಪಳ, ಮಾ.22 (ಕರ್ನಾಟಕ ವಾರ್ತೆ): ಬಾಲ್ಯ ವಿವಾಹ ಅನಿಷ್ಠ ಪದ್ಧತಿಯ ಬಗ್ಗೆ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದರೂ, ಕೆಲವೆಡೆ ಪಾಲಕರು ಕದ್ದು ಮುಚ್ಚಿ ಅಪ್ರಾಪ್ತ ವಯಸ್ಸಿನ ಮಕ್ಕಳ ಮದುವೆ ಮಾಡಿಸುತ್ತಿದ್ದಾರೆ.  ಬಾಲ್ಯ ವಿವಾಹದಲ್ಲಿ ಪಾಲ್ಗೊಂಡವರೆಲ್ಲರೂ ಕಾನೂನು ದೃಷ್ಟಿಯಲ್ಲಿ ಅಪರಾಧಿಗಳೇ ಆಗುತ್ತಾರೆ ಎಂದು ಕೊಪ್ಪಳ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ  ಶೇಖರಗೌಡ ಜಿ. ರಾಮತ್ನಾಳ ಅವರು ಹೇಳಿದರು.

       ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ಯಲಬುರ್ಗಾ ತಾಲೂಕಿನ ಚನ್ನಪ್ಪನ ಹಳ್ಳಿ ಗ್ರಾಮದಲ್ಲಿ ಮಂಗಳವಾರದಂದು ಬಾಲ್ಯ ವಿವಾಹ ತಡೆಗಾಗಿ ಹಮ್ಮಿಕೊಳ್ಳಲಾಗಿದ್ದ   ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.
ಯಾವುದೇ ಅಪ್ರಾಪ್ತ ವಯಸ್ಸಿನ ಮಕ್ಕಳ ಮದುವೆಯನ್ನು ಮಾಡಿದ ಬಗ್ಗೆ ದೂರುಗಳು ಬಂದಾಗ,  ಅಪ್ರಾಪ್ತರು, ವಯಸ್ಕರಾದ 2 ವರ್ಷದೊಳಗೆ ಅಂದರೆ 20 ವರ್ಷ ತುಂಬುವ ಪೂರ್ವದಲ್ಲಿ, ಯಾವುದೇ ಸಂದರ್ಭದಲ್ಲಿಯೂ ಸಹ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರಡಿಯಲ್ಲಿ ದೂರನ್ನು ದಾಖಲಿಸಬಹುದಾಗಿದೆ.  ಬಾಲ್ಯ ವಿವಾಹದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ಕಾನೂನು ದೃಷ್ಟಿಯಲ್ಲಿ ಅಪರಾಧಿಗಳೇ ಆಗುತ್ತಾರೆ.  ಹೀಗಾಗಿ, ಯಾವುದೇ ಸಂದರ್ಭದಲ್ಲಿಯೂ, ಯಾವುದೇ ಕಾರಣಗಳಿಗಾಗಿಯೂ ಬಾಲ್ಯ ವಿವಾಹವನ್ನು ಮಾಡಬೇಡಿ, ತಪ್ಪಿದ್ದಲ್ಲಿ ಅಂತಹ ಪಾಲಕರ ವಿರುದ್ಧ ಪ್ರಕರಣವನ್ನು ದಾಖಲಿಸಲು ಸಮಿತಿಯು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಅವಕಾಶವಿದೆ ಎಂದು ಶೇಖರಗೌಡ ರಾಮತ್ನಾಳ ಹೇಳಿದರು.
  ಪೊಲೀಸ್ ತರಬೇತುದಾರ ಸೋಮಶೇಖರ ಜಿ.ಎಸ್. ಅವರು ಮಾತನಾಡಿ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 9, 10, 11ರಡಿಯಲ್ಲಿ ಬಾಲ್ಯ ವಿವಾಹವನ್ನು ಮಾಡಿದ ಅಥವಾ ಮಾಡಿಕೊಂಡ ವ್ಯಕ್ತಿಗಳು, ಆಯೋಜಕರು ಹಾಗೂ ಬಾಲ್ಯ ವಿವಾಹದಲ್ಲಿ ಭಾಗವಹಿಸಿದ ಪೂಜಾರಿ, ವಾದ್ಯ ನುಡಿಸಿದವರು, ಊಟ ತಯಾರಕರು ಹಾಗೂ ಅತಿಥಿಗಳು ಸಹ ಅಪರಾಧಿಗಳಾಗಿದ್ದು, ಇದು ಶಿಕ್ಷಾರ್ಹ ಅಪರಾಧ. ಇದಕ್ಕೆ ಎರಡು ವರ್ಷ ಜೈಲು ಮತ್ತು ರೂ.1 ಲಕ್ಷ ದಂಡ ವಿಧಿಸಲಾಗುತ್ತದೆ ಎಂದು ವಿವರಿಸಿದರು.  ಈ ಹಿಂದೆ ಕೊಪ್ಪಳ ಜಿಲ್ಲೆ ಬಾಲ್ಯ ವಿವಾಹ ಮಾಡುವ ಪ್ರಕರಣಗಳಲ್ಲಿ ಮೊದಲನೇ ಸ್ಥಾನದಲ್ಲಿತ್ತು.  ಆದರೆ ಇತ್ತೀಚೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಹಾಗೂ ಇನ್ನಿತರ ಹಲವಾರು ಇಲಾಖೆಗಳ ಕಾರ್ಯಾಚರಣೆಯ ಪರಿಣಾಮವಾಗಿ, ಕೊಪ್ಪಳ ಜಿಲ್ಲೆಯು ಬಾಲ್ಯ ವಿವಾಹಗಳನ್ನು ತಡೆಗಟ್ಟುವಲ್ಲಿ ಕರ್ನಾಟಕದಲ್ಲೇ ಮೊದಲನೇ ಸ್ಥಾನದಲ್ಲಿದೆ.  ಇಲಾಖೆ ಜೊತೆಗೆ ಶಿಕ್ಷಕರು, ಮಕ್ಕಳು ಕೈಜೋಡಿಸಿದಲ್ಲಿ ಬಾಲ್ಯ ವಿವಾಹ ಎಂಬ ಸಾಮಾಜಿಕ ಪಿಡುಗನ್ನು ಜಿಲ್ಲೆಯಿಂದ ತೊಲಗಿಸಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಟಗೇರಿ ಗ್ರಾ.ಪಂ. ಸದಸ್ಯ ನಾಗಯ್ಯ ಹಿರೇಮಠ ವಹಿಸಿದ್ದರು.  ಮಕ್ಕಳ ವಿಶೇಷ ಪೊಲೀಸ್ ಘಟಕದ ಬಸಪ್ಪ ಹಾದಿಮನಿ, ಅಂಗನವಾಡಿ ಮೇಲ್ವಿಚಾರಕಿ ಮಾಧವಿ ವೈದ್ಯ, ಕುಕನೂರು ಆಂಗ್ಲ ಪ್ರೌಢ ಶಾಲೆ ಮುಖ್ಯೋಪಾಧ್ಯಯ ಎ.ಪಿ. ಮುಧೋಳ, ಪ್ರಥಮ ದರ್ಜೆ ಕಾಲೇಜಿನ ಆಡಳಿತಾಧಿಕಾರಿ ಆರ್.ಪಿ. ರಾಜೂರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.  ಭರಮಪ್ಪ ಸಾಬಳ್ಳಿ ನಿರೂಪಿಸಿದರು.  ರೋಹಿಣಿ ಕೊಟಗಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ರವಿಕುಮಾರ ಪವಾರ ಸ್ವಾಗತಿಸಿದರು.  ರವಿ ಬಡಿಗೇರ ಕೊನೆಯಲ್ಲಿ ವಂದಿಸಿದರು.

ಏ. 09 ರಂದು ಮಹಾವೀರರ ಜಯಂತಿ : ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ

ಕೊಪ್ಪಳ ಮಾ. 22 (ಕರ್ನಾಟಕ ವಾರ್ತೆ): ಅಹಿಂಸಾ ತತ್ವಗಳ ಪ್ರತಿಪಾದಕ ಭಗವಾನ್ ಮಹಾವೀರರ ಜಯಂತಿಯನ್ನು ಸರ್ಕಾರಿ ಆದೇಶದನ್ವಯ ಸರ್ಕಾರಿ ಕಾರ್ಯಕ್ರಮವನ್ನಾಗಿ ಏ. 09 ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು.
     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಮಹಾವೀರ ಜಯಂತಿ ಆಚರಣೆ ಸಂಬಂಧ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಮಹಾವೀರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಏ. 09 ರಂದು ಆಚರಿಸಲಾಗುವುದು.  ಮಹಾವೀರರು ಅಹಿಂಸಾ ಪ್ರತಿಪಾದಕರಾಗಿದ್ದು, ಅವರ ಅಹಿಂಸಾ ತತ್ವ, ಸಂದೇಶಗಳ ಕುರಿತು ಅರಿವು ಮೂಡಿಸುವ ರೀತಿಯಲ್ಲಿ ಆಚರಿಸಲು ಆದ್ಯತೆ ನೀಡಲಾಗುವುದು.  ಕಾರ್ಯಕ್ರಮದ ಅಂಗವಾಗಿ ಮಹಾವೀರರ ಭಾವಚಿತ್ರದ ಮೆರವಣಿಗೆ ಅಂದು ಬೆಳಿಗ್ಗೆ 7-30 ಗಂಟೆಗೆ ನಗರದ ಅಶೋಕ ವೃತ್ತದ ಬಳಿಯಿಂದ ಪ್ರಾರಂಭಿಸಲಾಗುವುದು.  ಮೆರವಣಿಗೆಯು ಜವಾಹರ ರಸ್ತೆ, ಗಡಿಯಾರ ಕಂಬ ಮೂಲಕ ಗೋಶಾಲೆ ಬಳಿಯ ಮಹಾವೀರ ಜೈನಭವನದವರೆಗೆ ನೆರವೇರಲಿದೆ.  ಮೆರವಣಿಗೆಯಲ್ಲಿ ಸಾಂಸ್ಕøತಿಕ ಕಲಾತಂಡಗಳ ಬದಲಿಗೆ ಅಹಿಂಸಾ ತತ್ವಗಳನ್ನು ಬಿಂಬಿಸುವ ಸಂದೇಶಗಳು ಹಾಗೂ ಸ್ತಬ್ಧಚಿತ್ರಗಳು ಭಾಗವಹಿಸಲಿವೆ.  ಬೆಳಿಗ್ಗೆ 10 ಗಂಟೆಗೆ ಗೋಶಾಲೆ ಪಕ್ಕದಲ್ಲಿನ ಮಹಾವೀರ ಜೈನಭವನದಲ್ಲಿ ವೇದಿಕೆ ಸಮಾರಂಭ ಜರುಗಲಿದೆ.  ಮಹಾವೀರರ ತತ್ವ ಸಂದೇಶಗಳ ಬಗ್ಗೆ ಸಿದ್ದಲಿಂಗಪ್ಪ ಕೊಟ್ನೆಕಲ್ ವಿಶೇಷ ಉಪನ್ಯಾಸ ನೀಡುವರು ಎಂದು ಅಪರ ಜಿಲ್ಲಾಧಿಕಾರಿ ಡಾ. ಡಾ. ರುದ್ರೇಶ್ ಘಾಳಿ ಅವರು ತಿಳಿಸಿದರು.
     ಮೆರವಣಿಗೆ ಸಾಗಿ ಬರುವ ರಸ್ತೆಯ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲು ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಲಾಯಿತು.  ಅಲ್ಲದೆ ಕಾರ್ಯಕ್ರಮದಲ್ಲಿ ಗಣ್ಯಮಾನ್ಯರಿಗೆ ಮಾಲಾರ್ಪಣೆಯ ಬದಲಿಗೆ ಮಹಾವೀರರ ಸಂದೇಶವನ್ನು ಬಿಂಬಿಸುವ ಪುಸ್ತಕಗಳನ್ನು ವಿತರಿಸಲು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲು ನಿರ್ಧರಿಸಲಾಯಿತು.
     ಸಭೆಯಲ್ಲಿ ಭಾಗವಹಿಸಿದ್ದ ಜೈನ ಸಂಘದ ಅಧ್ಯಕ್ಷ ರಾಮಲಾಲ್ ಜೈನ್ ಅವರು, ಎಲ್ಲ ಜೈನ ಸಮುದಾಯದವರು ಮಹಾವೀರ ಜಯಂತಿಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸಲಾಗುವುದು.  ಕಾರ್ಯಕ್ರಮಕ್ಕೆ ಎಲ್ಲ ಸಮಾಜದವರು ಭಾಗವಹಿಸುವಂತೆ ಮನವಿ ಮಾಡಿಕೊಂಡರು.
     ಸಭೆಯಲ್ಲಿ  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರಾದ ನೇಮಿರಾಜ್, ಅಭಯಕುಮಾರ್ ಮೆಹ್ತಾ, ಚಂದ್ರಕಾಂತ್ ಸುರಾನಾ, ರಾಜೇಂದ್ರ ಜೈನ್, ಪದಮ್ ಮೆಹ್ತಾ, ಗಣ್ಯರಾದ ವಿಠ್ಠಪ್ಪ ಗೋರಂಟ್ಲಿ, ಶಿವಾನಂದ ಹೊದ್ಲೂರ್ ಮುಂತಾದವರು ಭಾಗವಹಿಸಿದ್ದರು.
 

ಸರ್ಕಾರದ ಯೋಜನೆಗಳು-ಮಾಧ್ಯಮಗಳ ಹೊಣೆಗಾರಿಕೆ- ಮಾ. 31 ರಂದು ವಿಚಾರಸಂಕಿರಣ

ಕೊಪ್ಪಳ ಮಾ. 22 (ಕರ್ನಾಟಕ ವಾರ್ತೆ): ಕರ್ನಾಟಕ ಮಾಧ್ಯಮ ಅಕಾಡೆಮಿ, ಕನ್ನಡ ವಿಶ್ವವಿದ್ಯಾಲಯ ಹಂಪಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬಳ್ಳಾರಿ ಇವರ ಸಹಯೋಗದಲ್ಲಿ ‘ಸರ್ಕಾರದ ಯೋಜನೆಗಳು-ಮಾಧ್ಯಮಗಳ ಹೊಣೆಗಾರಿಕೆ’ ವಿಷಯ ಕುರಿತ ಒಂದು ದಿನದ ವಿಚಾರಸಂಕಿರಣ ಮಾ. 31 ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ನಡೆಯಲಿದ್ದು, ಕೊಪ್ಪಳ ಜಿಲ್ಲೆಯ ಆಸಕ್ತ ಪತ್ರಕರ್ತರು ವಿಚಾರಸಂಕಿರಣದಲ್ಲಿ ಭಾಗವಹಿಸಬಹುದಾಗಿದೆ.
     ವಿಚಾರಸಂಕಿರಣವನ್ನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಉದ್ಘಾಟಿಸಲಿದ್ದು, ನಾಡಿನ ಹಲವು ತಜ್ಞರು ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.  ಈ ವಿಚಾರಸಂಕಿರಣದಲ್ಲಿ ಕೊಪ್ಪಳ ಜಿಲ್ಲೆಯಲ್ಲಿನ ಆಸಕ್ತ ಪತ್ರಕರ್ತರು ಪಾಲ್ಗೊಳ್ಳಬಹುದಾಗಿದೆ.  ಹೆಚ್ಚಿನ ಸಂಖ್ಯೆಯಲ್ಲಿ ಕೊಪ್ಪಳ ಜಿಲ್ಲೆಯ ಪತ್ರಕರ್ತರು ವಿಚಾರಸಂಕಿರಣದಲ್ಲಿ ಪಾಲ್ಗೊಂಡು, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರದ್ಧಾ ಭಕ್ತಿಯಿಂದ ದೇವರದಾಸಿಮಯ್ಯ ಜಯಂತಿ ಆಚರಣೆ- ಡಾ. ರುದ್ರೇಶ್ ಘಾಳಿ


ಕೊಪ್ಪಳ ಮಾ. 22 (ಕರ್ನಾಟಕ ವಾರ್ತೆ) : ಆದ್ಯ ವಚನಕಾರ ದೇವರದಾಸಿಮಯ್ಯ ಅವರ ಜಯಂತಿ ಆಚರಣೆಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದ್ದು, ಏ. 01 ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಶ್ರದ್ಧಾ ಭಕ್ತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು.  
 
       ದೇವರದಾಸಿಮಯ್ಯ ಅವರ ಜಯಂತಿ ಆಚರಣೆಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 
 
      ದೇವರದಾಸಿಮಯ್ಯ ಜಯಂತಿ ಉತ್ಸವವನ್ನು  ಏ. 01 ರಂದು ಜಿಲ್ಲಾ ಕೇಂದ್ರವಾಗಿರುವ ಕೊಪ್ಪಳದಲ್ಲಿ ಶ್ರದ್ಧಾ ಭಕ್ತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು.  ಕಾರ್ಯಕ್ರಮ.  ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ 8-30 ಗಂಟೆಗೆ ನಗರದ ಗವಿಮಠ ಆವರಣದಿಂದ ದೇವರದಾಸಿಮಯ್ಯ ನವರ ಭಾವಚಿತ್ರ ಮೆರವಣಿಗೆ ಹೊರಡಲಿದ್ದು, ಮೆರವಣಿಗೆಯು ಗವಿಮಠ ರಸ್ತೆ, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಶಾದಿಮಹಲ್ ವರೆಗೂ ಸಾಗಿ ಬರಲಿದೆ.   ಮೆರವಣಿಗೆಯಲ್ಲಿ ಹಲವು ಜಾನಪದ ಕಲಾ ತಂಡಗಳು ಭಾಗವಹಿಸಿ, ಮೆರವಣಿಗೆಯನ್ನು ಆಕರ್ಷಕಗೊಳಿಸಲಿವೆ.    ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಶಾದಿಮಹಲ್‍ನಲ್ಲಿ ವೇದಿಕೆ ಸಮಾರಂಭ ಜರುಗಲಿದ್ದು, ಸಮಾರಂಭದಲ್ಲಿ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ದೇವರ ದಾಸಿಮಯ್ಯ ಅವರ ಕುರಿತು ವಿಶೇಷ ಉಪನ್ಯಾಸ ನೀಡುವರು.  ಕಾರ್ಯಕ್ರಮದ ಅಂಗವಾಗಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳೊಂದಿಗೆ ಪಾಸಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು.  ಜಯಂತಿ ಆಚರಣೆಯಲ್ಲಿ ಎಲ್ಲ ಸಾರ್ವಜನಿಕರು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.  ಮೆರವಣಿಗೆ ಹಾಗೂ ಸಮಾರಂಭದಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು ತಪ್ಪದೆ ಪಾಲ್ಗೊಳ್ಳಬೇಕು.  ಮೆರವಣಿಗೆ ಸಂದರ್ಭದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್, ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ, ಮೆರವಣಿಗೆ ಸಾಗಿ ಬರುವ ರಸ್ತೆಯನ್ನು ಸ್ವಚ್ಛಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು.
        ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಸೇರಿದಂತೆ  ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು,  ಸಮಾಜದ ಮುಖಂಡರಾದ ವಿಠ್ಠಪ್ಪ ಗೋರಂಟ್ಲಿ, ಪರಣ್ಣ ಕಾಳ್ಗಿ, ವಾಸು ಕೊಳಗದ, ವೀರಣ್ಣ ಬಂಡಾನವರ್, ವೀರಣ್ಣ ಬೆಟಗೇರಿ, ನಾಗರಾಜ ಬಳ್ಳಾರಿ, ರವಿ ಬುಡ್ಡೋಡಿ, ನೀಲಕಂಠಪ್ಪ ನಾಗಶೆಟ್ಟಿ, ಲಕ್ಷ್ಮಣ ಶಿರವಾರ, ಗಣ್ಯರಾದ ಶಿವಾನಂದ ಹೊದ್ಲೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tuesday, 21 March 2017

ಎಸ್‍ಎಸ್‍ಎಲ್‍ಸಿ ಪರೀಕ್ಷೆ : ಪ್ರಶ್ನೆಪತ್ರಿಕೆಗಳ ಸುರಕ್ಷತೆಗೆ ಹೆಚ್ಚಿನ ನಿಗಾವಹಿಸಿ- ವೆಂಕಟರಾಜಾ


ಕೊಪ್ಪಳ ಮಾ. 21 (ಕ.ವಾ): ಜಿಲ್ಲೆಯಲ್ಲಿ ಮಾ. 30 ರಿಂದ ಏ. 12 ರವರೆಗೆ ನಡೆಯಲಿರುವ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆಗಳ ಭದ್ರತೆ  ಕುರಿತಂತೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು.  ಪರೀಕ್ಷಾ ಕಾರ್ಯದಲ್ಲಿ ಬೇಜವಾಬ್ದಾರಿತನ ತೋರುವವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಸಮರ್ಪಕವಾಗಿ ಕೈಗೊಳ್ಳಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.  ಈ ಬಾರಿ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಜಿಲ್ಲೆಯ 05 ಪರೀಕ್ಷಾ ಕೇಂದ್ರಗಳು ಇದುವರೆಗೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸದಿರುವುದು ಗಮನಕ್ಕೆ ಬಂದಿದ್ದು, ಮಾ. 30 ರ ಒಳಗಾಗಿ ಸಿಸಿ ಕ್ಯಾಮೆರಾ ಅಳವಡಿಕೆ ಪೂರ್ಣಗೊಳಿಸಬೇಕು.  ತಪ್ಪಿದಲ್ಲಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು.  ಈ ಬಾರಿ ಒಟ್ಟು 19289 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಇದಕ್ಕಾಗಿ ಒಟ್ಟು 59 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ರಾಜ್ಯದ ವಿವಿಧೆಡೆ ಪ್ರಶ್ನೆಪತ್ರಿಕೆಗಳ ಬಹಿರಂಗದ ಬಗ್ಗೆ ಇತ್ತೀಚೆಗೆ ಹಲವಾರು ಅಕ್ರಮಗಳು ನಡೆಯುತ್ತಿರುವ ಬಗ್ಗೆ ವರದಿಗಳು ಕೇಳಿಬರುತ್ತಿದ್ದು, ಪ್ರಶ್ನೆಪತ್ರಿಕೆಗಳ ಸುರಕ್ಷತೆ ಬಗ್ಗೆ ಅಧಿಕಾರಿಗಳು ಇಲಾಖೆಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸೂಕ್ತ ಆಸನ, ಗಾಳಿ, ಬೆಳಕು ಹಾಗೂ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇರಬೇಕು.  ಪರೀಕ್ಷೆ ಪ್ರಾರಂಭವಾದ ಬಳಿಕ ಕೊಠಡಿಯೊಳಗೆ ಮಾಧ್ಯಮದವರಿಗೆ ಪ್ರವೇಶ ನೀಡುವಂತಿಲ್ಲ ಆದರೆ ಪರೀಕ್ಷಾ ಕೇಂದ್ರದ ಹೊರಗಿನ ಫೋಟೋ ಅಥವಾ ಚಿತ್ರೀಕರಣ ನಡೆಸಬಹುದು ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಅದರಂತೆ ಕಾರ್ಯ ನಿರ್ವಹಿಸಬೇಕು. ಅಲ್ಲದೆ ಸೂಕ್ತ ಪೊಲೀಸ್ ಬಿಗಿ ಬಂದೋಬಸ್ತ್‍ಗೆ ಕ್ರಮ ಕೈಗೊಳ್ಳಬೇಕು.  ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಅಥವಾ ನಕಲಿಗೆ ಅವಕಾಶ ನೀಡದಂತೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಪರೀಕ್ಷೆ ನಡೆಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪರೀಕ್ಷಾ ಕೊಠಡಿಗೆ ಯಾರೂ ಕೂಡ ಮೊಬೈಲ್‍ನೊಂದಿಗೆ ಪ್ರವೇಶಿಸುವಂತಿಲ್ಲ.  ಪರೀಕ್ಷಾ ಕೇಂದ್ರದ ಮುಖ್ಯಸ್ಥರೂ ಕೂಡ, ತಮ್ಮ ಕಚೇರಿಯಲ್ಲಿ ಮಾತ್ರ ಮೊಬೈಲ್ ಬಳಸಬಹುದೇ ಹೊರತು, ಪರೀಕ್ಷಾ ಕೊಠಡಿಗೆ ಒಯ್ಯುವಂತಿಲ್ಲ.  ಜಾಗೃತ ದಳದವರೂ ಕೂಡ ಪರೀಕ್ಷಾ ಕೊಠಡಿಯೊಳಗೆ ಮೊಬೈಲ್‍ನೊಂದಿಗೆ ಪ್ರವೇಶಿಸುವಂತಿಲ್ಲ. ಈ ನಿರ್ದೇಶನವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಯಾವುದೇ ಪರೀಕ್ಷಾ ಅಕ್ರಮಗಳಿಗೆ ಅವಕಾಶ ಕೊಡುವುದು ಅಥವಾ ಸಹಕರಿಸುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.  ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೆ ಕ್ರಮ ವಹಿಸಬೇಕು.  ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿಗಳಿಗೆ ಪರೀಕ್ಷೆ ಮುಕ್ತಾಯವಾಗುವವರೆಗೂ ಯಾವುದೇ ಕಾರಣಕ್ಕೂ ರಜೆ ಮಂಜೂರು ಮಾಡುವಂತಿಲ್ಲ.  ತುರ್ತು ಸಂದರ್ಭದಲ್ಲಿ ಡಿಡಿಪಿಐ ಅವರು ಮಾತ್ರ ರಜೆ ಮಂಜೂರು ಮಾಡಬಹುದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ  ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಮಾತನಾಡಿ, ಕೇಂದ್ರ ಕಚೇರಿಯಿಂದ ಕೊಪ್ಪಳ ಜಿಲ್ಲೆಗೆ ಪ್ರಶ್ನೆಪತ್ರಿಕೆಗಳು ಬಂದ ಬಳಿಕ, ಸ್ವೀಕೃತಿ ಹಾಗೂ ವಿತರಣೆ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಚಿತ್ರೀಕರಿಸಬೇಕು.  ಪ್ರಶ್ನೆಪತ್ರಿಕೆಯ ಸಾಗಾಣಿಕೆ ಕಡ್ಡಾಯವಾಗಿ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಪೊಲೀಸ್ ಬಂದೋಬಸ್ತ್‍ನಲ್ಲಿಯೇ ಆಗಬೇಕು.  ಪ್ರಶ್ನೆಪತ್ರಿಕೆ ಇರುವ ಸ್ಥಳದಿಂದ, ಪರೀಕ್ಷಾ ಕೇಂದ್ರಕ್ಕೆ ಇರುವ ದೂರಕ್ಕೆ ಅನುಗುಣವಾಗಿ, ಸಾಕಷ್ಟು ಮುಂಚಿತವಾಗಿ ವಾಹನ ಹೊರಟು, ನಿಗದಿತ ಸಮಯಕ್ಕೂ ಮುನ್ನ ಪರೀಕ್ಷಾ ಕೇಂದ್ರ ತಲುಪುವ ರೀತಿ ಕ್ರಮ ಕೈಗೊಳ್ಳುವ ಸಂಪೂರ್ಣ ಹೊಣೆಗಾರಿಕೆ ಮಾರ್ಗಾಧಿಕಾರಿಗಳಿಗೆ ನೀಡಲಾಗಿದೆ.  ಜಿಲ್ಲೆಯಲ್ಲಿ ಕೊಪ್ಪಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಭಾಗ್ಯನಗರದ ಸರ್ಕಾರಿ ಪ.ಪೂ. ಕಾಲೇಜು ಪರೀಕ್ಷಾ ಕೇಂದ್ರವನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರವನ್ನಾಗಿ ಗುರುತಿಸಲಾಗಿದ್ದು, ಇಲ್ಲಿಗೆ ಹೆಚ್ಚುವರಿಯಾಗಿ ಸ್ಥಾನಿಕ ಜಾಗೃತ ದಳ ಹಾಗೂ ಪೊಲೀಸ್ ಬಂದೋಬಸ್ತ್ ನೇಮಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
     ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜಿಲ್ಲಾ ನೋಡಲ್ ಅಧಿಕಾರಿ ರಾಹತ್ ನವಾಜ್ ಖಾನಂ ಅವರು ಪರೀಕ್ಷೆಯ ಕುರಿತು ಸಭೆಗೆ ವಿವರಣೆ ನೀಡಿ, ಈ ವರ್ಷ ಒಟ್ಟು 17995 ರೆಗ್ಯುಲರ್ ವಿದ್ಯಾರ್ಥಿಗಳು, 703 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 591 ಖಾಸಗಿ ಅಭ್ಯರ್ಥಿಗಳು ಹೀಗೆ ಒಟ್ಟಾರೆ  19289 ವಿದ್ಯಾರ್ಥಿಗಳು  ಪರೀಕ್ಷೆಗೆ ಹಾಜರಾಗಲಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ 5431, ಗಂಗಾವತಿ-5483, ಕುಷ್ಟಗಿ-3779 ಮತ್ತು ಯಲಬುರ್ಗಾ ತಾಲೂಕಿನಲ್ಲಿ 3302 ಸೇರಿದಂತೆ ಒಟ್ಟು 17995 ರೆಗ್ಯುಲರ್ ವಿದ್ಯಾರ್ಥಿಗಳಿದ್ದಾರೆ.  ಕೊಪ್ಪಳ-20, ಗಂಗಾವತಿ-19, ಕುಷ್ಟಗಿ-08 ಮತ್ತು ಯಲಬುರ್ಗಾ ತಾಲೂಕಿನಲ್ಲಿ 12 ಸೇರಿದಂತೆ ಒಟ್ಟು 59 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ಪರೀಕ್ಷಾ ನಕಲು ತಡೆಗೆ ರಾಜ್ಯ ಮಟ್ಟದಿಂದ ಜಾಗೃತ ದಳ ಆಗಮಿಸಲಿದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ ಜಾಗೃತ ದಳ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ತಾಲೂಕು ಮಟ್ಟದ ಜಾಗೃತ ದಳ ರಚಿಸಲಾಗಿದೆ.  ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ರವಾನೆಗಾಗಿ ಒಟ್ಟು 22 ಮಾರ್ಗಗಳನ್ನು ನಿಗದಿ ಮಾಡಲಾಗಿದ್ದು, ಎಲ್ಲ ಮಾರ್ಗಗಳಿಗೆ ಪ್ರತ್ಯೇಕ ವಾಹನ ಬಳಸಲಾಗುವುದು.  ವಿದ್ಯಾರ್ಥಿಗಳು ಮೊಬೈಲ್ ಅಥವಾ ಕ್ಯಾಲುಕುಲೇಟರ್ ಅನ್ನು ಪರೀಕ್ಷಾ ಕೊಠಡಿಗೆ ತರುವಂತಿಲ್ಲ ಎಂದರು.
     ಸಭೆಯಲ್ಲಿ  ಸರ್ವಶಿಕ್ಷಣ ಅಭಿಯಾನ ಉಪಸಮನ್ವಯಾಧಿಕಾರಿ ವೆಂಕಟೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಖಜಾನೆ ಇಲಾಖೆ ಅಧಿಕಾರಿ ಕಳ್ಳೇರ್,  ಸೇರಿದಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಶಾಲಾ ಮುಖ್ಯಸ್ಥರು ಭಾಗವಹಿಸಿದ್ದರು.
ಫೋಟೋ ಕಳುಹಿಸಿದೆ.

ಮಾ.25 ರಂದು ಕೊಪ್ಪಳದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಕೊಪ್ಪಳ, ಮಾ.21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳೆಯರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಪ್ರಗತಿಪರ ಮಹಿಳಾ ಮಂಡಳಿಗಳು ಇವರ ಸಹಯೋಗದಲ್ಲಿ ಮಾ.25 ರಂದು ಮಧ್ಯಾಹ್ನ 3-00 ಗಂಟೆಗೆ ಕೊಪ್ಪಳ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.
      ಕೊಪ್ಪಳ ಸಂಸ್ಥಾನ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು.  ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಉದ್ಘಾಟನೆ ನೆರೆವೇರಿಸುವರು.  ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿ.ಪ.ಂ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ್ ಎಸ್. ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ ಹಾಗೂ ಶರಣಪ್ಪ ಮಟ್ಟೂರ, ಜಿ.ಪಂ ಉಪಾಧ್ಯಕ್ಷೆ ಲಕ್ಷಮ್ಮ ಎಸ್. ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಸಹಾಯಕ ಆಯುಕ್ತ ಗುರುದತ್ ಹೆಗ್ಡೆ, ರಾಜ್ಯ ವಕೀಲರ ಸಂಘದ ಸದಸ್ಯೆ ಸಂಧ್ಯಾ .ಬಿ. ಮಾದಿನೂರ,   ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಸಿಂಡಿಕೆಟ್ ಸದಸ್ಯೆ ಸಾವಿತ್ರಿ ಮುಜುಂದಾರ, ಜಿಲ್ಲಾ ಬಾಲ ವಿಕಾಸ ಅಕಾಡಮಿ ಸದಸ್ಯೆ ಅರುಣಾ ನರೇಂದ್ರ ಪಾಟೀಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು..
ಕಾರ್ಯಕ್ರಮದ ಅಂಗವಾಗಿ ಪೊಲೀಸ್ ಸಬ್ ಇನಸ್ಪೆಕ್ಟರ್ ನಾಗರತ್ನ ಆರ್. ಅವರು ಪೊಲೀಸ್ ಮತ್ತು ಮಹಿಳೆ ಕುರಿತು. ವಕೀಲರಾದ ಗೌರಮ್ಮ ದೇಸಾಯಿ ಅವರು  ಮಹಿಳೆಯರ ಹಕ್ಕುಗಳ ಮತ್ತು ಕಾನೂನು ಕುರಿತು.  ಹಾಗೂ ಕಾಳಮ್ಮ ಪತ್ತಾರ ಅವರು   ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕುರಿತು  ವಿಶೇಷ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ಮಾ.23 ರಂದು ಕಿನ್ನಾಳ ಗ್ರಾಮದಲ್ಲಿ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ

ಕೊಪ್ಪಳ, ಮಾ.21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕಿನ್ನಾಳ ಸಿದ್ದರಾಮೇಶ್ವರ ಕಟ್ಟಡ ಕಾರ್ಮಿಕ ಸಂಘ ಇವರ ಸಹಯೋಗದಲ್ಲಿ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮ ಮಾ.23 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಉಪ್ಪಾರ ಕಲ್ಯಾಣ ಮಂಟಪ (ಚೌಕಿ ಗುಡಿ ಹತ್ತಿರ ಕೌಲಪೇಟೆ) ದಲ್ಲಿ ನಡೆಯಲಿದೆ.
     ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಜನ ಜಾಗೃತಿ (ಎಸ್.ಸಿ.ಪಿ. ಹಾಗೂ ಟಿ.ಎಸ್.ಪಿ. ಯೋಜನೆ ಅಡಿಯಲ್ಲಿ) ಮತ್ತು ನೊಂದ ಮಹಿಳೆಯ ಪರಿಹಾರದ ಬಗ್ಗೆ ಹಾಗೂ ಪೊಲೀಸ್ ದೂರುಪೆಟ್ಟಿಗೆ ಬಗ್ಗೆ ವಿಶೇಷ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ ಜರುಗಲಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರರಾದ ಬಿ. ದಶರಥ ಅವರು ಉದ್ಘಾಟನೆ ನೆರೆವೇರಿಸುವರು.  ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ಯಾಮರಾವ್ ಅವರು ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ದೊಡ್ಡಬಸಪ್ಪ ಕಂಪ್ಲಿ, ಸರ್ಕಾರಿ ವಕೀಲ ಆಸೀಫ್ ಅಲಿ, ತಹಶೀಲ್ದಾರ ಹೆಚ್.ಎಂ. ಗುರುಬಸವರಾಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಿದಾನಂದಪ್ಪ,  ಕಾರ್ಮಿಕ ನಿರೀಕ್ಷಕ ಹೊನ್ನಪ್ಪ, ಕಿನ್ನಾಳ ಸಿದ್ದರಾಮೇಶ್ವರ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಚಿಲವಾಡಗಿ, ವ್ಹಿ.ಎಸ್.ಎಸ್.ಎನ್. ಅಧ್ಯಕ್ಷ ವಿರೇಶ ತಾವರಗೇರಿ ಹಾಗೂ ನಿರ್ದೇಶಕ ಅಮರೇಶ ಉಪಲಾಪೂರ ಪಾಲ್ಗೊಳ್ಳುವರು.
ಕಾರ್ಯಕ್ರಮದ ಅಂಗವಾಗಿ ಕೊಪ್ಪಳ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಅವರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಪದ್ದತಿ ನಿರ್ಮೂಲನೆ, ಹಾಗೂ ವಕೀಲರಾದ ಮಂಗಳೇಶ ಎನ್. ಮಂಗಳೂರು ಅವರು ನೊಂದ ಮಹಿಳೆಯ ಪರಿಹಾರದ ಬಗ್ಗೆ ಹಾಗೂ ಪೊಲೀಸ್ ದೂರುಪೆಟ್ಟಿಗೆ ವಿಷಯಗಳ ಬಗ್ಗೆ ವಿಶೇಷ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಮಾ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಮಾ. 25 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಬಸವರಾಜ ರಾಯರಡ್ಡಿ ಅವರು ಅಂದು ಹಂಪಿ ಎಕ್ಸ್‍ಪ್ರೆಸ್ ರೈಲು ಮೂಲಕ ಬೆಳಿಗ್ಗೆ  08 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು.  ಬೆಳಿಗ್ಗೆ 10 ಗಂಟೆಗೆ ಯಲಬುರ್ಗಾಕ್ಕೆ ತೆರಳಿ, ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿನ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.  ಸಾಯಂಕಾಲ 7-30 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ರಾತ್ರಿ 8 ಗಂಟೆಗೆ ಹಂಪಿ ಎಕ್ಸ್‍ಪ್ರೆಸ್ ರೈಲು ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

ಮಾ.27 ರಿಂದ ಬೆಂಗಳೂರಿನಲ್ಲಿ ಸೇನಾ ನೇಮಕಾತಿ ರ್ಯಾಲಿ

ಕೊಪ್ಪಳ, ಮಾ.21 (ಕರ್ನಾಟಕ ವಾರ್ತೆ): ಬೆಂಗಳೂರಿನ ಪ್ಯಾರಾಚೂಟ್ ರೆಜಿಮೆಂಟ್ ಟ್ರೇನಿಂಗ್ ಸೆಂಟರ್ ಹಾಗೂ 116 ಇನ್‍ಫೆಂಟ್ರಿ ಬಟಾಲಿಯನ್ (ಟಿಎ ಸೇನಾ) ಇವರ ಸಂಯುಕ್ತ ಆಶ್ರಯದಲ್ಲಿ ಸೇನಾ ನೇಮಕಾತಿ ರ್ಯಾಲಿ ಮಾ.27 ರಿಂದ 31 ರವರೆಗೆ ಬೆಂಗಳೂರಿನ  ಪ್ಯಾರಾಚೂಟ್ ರೇಜಿಮೇಂಟ್ ಟ್ರೈನಿಂಗ್ ಸೆಂಟರ್, ಜೆ.ಸಿ. ನಗರ ಬೆಂಗಳೂರು-06 ಇಲ್ಲಿ ಆಯೋಜಿಸಲಾಗಿದ್ದು,  ಕೊಪ್ಪಳ ಹಾಗೂ ಬಾಗಲಕೋಟ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ಸೇನಾ ನೇಮಕಾತಿಯಲ್ಲಿ ಸೈನಿಕ (ಸಾಮಾನ್ಯ ಕರ್ತವ್ಯ), ಸಿಪಾಯಿ ಕ್ಲಾರ್ಕ, ಹೌಸ್ ಕೀಪರ್ ಹಾಗೂ ಸಿಪಾಯಿ ಕುಕ್ ಹುದ್ದೆಗಳಿಗೆ   ಭರ್ತಿ ಮಾಡಲಾಗುವುದು.  ಭಾಗವಹಿಸಲು 18 ರಿಂದ 42 ವರ್ಷ ವಯೋಮಿತಿಯಲ್ಲಿರಬೇಕು.  ಸಾಮಾನ್ಯ ಕರ್ತವ್ಯ ಹುದ್ದೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನಿಷ್ಟ 45% ಹಾಗೂ ಪ್ರತಿ ವಿಷಯಗಳಲ್ಲಿ ಕನಿಷ್ಟ 33% ಅಂಕಗಳೊಂದಿಗೆ ಪಾಸಾಗಿರಬೇಕು.  ಸಿಪಾಯಿ ಕ್ಲಾರ್ಕ ಹುದ್ದೆಗೆ ಎಸ್.ಎಸ್.ಎಲ್.ಸಿ. ಅಥವಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 50% ಹಾಗೂ ಪ್ರತಿ ವಿಷಯಗಳಲ್ಲಿ 40% ಅಂಕಗಳೊಂದಿಗೆ ಪಾಸಾಗಿರಬೇಕು.  ಹೌಸ್ ಕೀಪರ್ ಹುದ್ದೆಗೆ 8ನೇ ತರಗತಿಯಲ್ಲಿ ಪಾಸಾಗಿರಬೇಕು.  ಸಿಪಾಯಿ ಕುಕ್ ಹುದ್ದೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾದಾರಣ ಅಂಕಗಳೊಂದಿಗೆ ಪಾಸಾಗಿರಬೇಕು. 
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬಾಗಲಕೋಟ ದೂರವಾಣಿ ಸಂಖ್ಯೆ 08354-235434 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಕಾರಟಗಿ : ವಾಹನ ಚಾಲನಾ ತರಬೇತಿಗೆ ಸಂಸ್ಥೆಗಳಿಂದ ಅರ್ಜಿ ಆಹ್ವಾನ

ಕೊಪ್ಪಳ ಮಾ. 21 (ಕರ್ನಾಟಕ ವಾರ್ತೆ) ಕಾರಟಗಿ ಪುರಸಭೆ ವತಿಯಿಂದ ಪ್ರಸಕ್ತ ಸಾಲಿಗಾಗಿ ಡೇ-ನಲ್ಮ್ ಯೋಜನೆಯಡಿ ಲಘು ವಾಹನ ಹಾಗೂ ಭಾರಿ ವಾಹನ ಚಾಲನಾ ತರಬೇತಿಗಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ನೋಂದಾಯಿತಗೊಂಡಿರುವ ಸರ್ಕಾರಿ ಅಥವಾ ಸರ್ಕಾರೇತರ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಆರ್‍ಟಿಓ ಸಂಸ್ಥೆಯಿಂದ ನೋಂದಾಯಿತಗೊಂಡಿರುವ ವಾಹನ ಚಾಲನಾ ತರಬೇತಿ ಸಂಸ್ಥೆಗಳಿಂದ ಕಾರಟಗಿ ನಗರ ವ್ಯಾಪ್ತಿಯಲ್ಲಿ ವಾಹನ ಚಾಲನ ತರಬೇತಿ ಆಯೋಜಿಸಲು ಅರ್ಹ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ   ಅರ್ಜಿ ಆಹ್ವಾನಿಸಲಾಗಿದೆ.  ಆಸಕ್ತ ಸಂಸ್ಥೆಗಳು ಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 7 ದಿನಗಳ ಒಳಗಾಗಿ ಪುರಸಭೆ ಕಾರಟಗಿ ಮುಖ್ಯಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು.   ಹೆಚ್ಚಿನ ಮಾಹಿತಿಯನ್ನು ಕಚೇರಿಯ ಡೇ-ನಲ್ಮ್ ವಿಭಾಗದಲ್ಲಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಪರೀಕ್ಷೆಗಳ ಫಲಿತಾಂಶ ಪ್ರಕಟ

ಕೊಪ್ಪಳ, ಮಾ.21 (ಕರ್ನಾಟಕ ವಾರ್ತೆ): ಕನ್ನಡ ಸಾಹಿತ್ಯ ಪರಿಷತ್ತು 2016-17 ನೇ ಸಾಲಿನಲ್ಲಿ ನಡೆಸಿದ ಕನ್ನಡ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿದೆ.
     ಫಲಿತಾಂಶ ವಿವರವನ್ನು ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ಫಲಕದಲ್ಲಿ ಹಾಗೂ www.kasapa.in    ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ.  ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳನ್ನು ಶೀಘ್ರದಲ್ಲಿಯೇ ಎಲ್ಲಾ ಅಭ್ಯರ್ಥಿಗಳಿಗೆ ಕಳುಹಿಸಿಕೊಡಲಾಗುವುದು.  ಮರು ಎಣಿಕೆಗೆ ಅಂಕಪಟ್ಟಿಗಳು ತಲುಪಿದ ಒಂದು ತಿಂಗಳೊಳಗಾಗಿ ಅರ್ಜಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ದೂರವಾಣಿ ಸಂಖ್ಯೆ 080-26623584 ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಕೃಷಿಕರು ಹೈನುಗಾರಿಕೆಯನ್ನು ಉಪಕಸುಬಾಗಿ ಅಳವಡಿಸಿಕೊಳ್ಳಿ- ಜಯತೀರ್ಥರಾವ್ ದೇಸಾಯಿ


ಕೊಪ್ಪಳ ಮಾ. 21 (ಕರ್ನಾಟಕ ವಾರ್ತೆ): ಪ್ರತಿಯೊಬ್ಬ ರೈತರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಉಪ ಕಸುಬಾಗಿ ಅಳವಡಿಸಿಕೊಂಡಲ್ಲಿ, ತೀವ್ರ ಆರ್ಥಿಕ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿದೆ.  ಇದರಿಂದ ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುವುದಿಲ್ಲ ಎಂದು ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಉತ್ಪಾದಕರ ಸಹಾಯಕ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಜಯತೀರ್ಥರಾವ್ ದೇಸಾಯಿ ಹೇಳಿದರು.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೃಷಿ ಇಲಾಖೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ರೈತರಿಂದ ರೈತರಿಗಾಗಿ ಪ್ರಗತಿಪರ ರೈತರ ಆವಿಷ್ಕಾರಗಳನ್ನು ರೈತರಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಕೊಪ್ಪಳದ  ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿರುವ “ಸ್ವಾವಲಂಬಿ ಕೃಷಿ” ಎಂಬ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.       
 ಪಶುಸಂಪತ್ತು ಈ ದೇಶದ ಸಂಪತ್ತು ಹಾಗೂ ಪ್ರತಿಯೊಬ್ಬ ಕೃಷಿಕನು ಹೈನುಗಾರಿಕೆಯನ್ನು ಮಾಡಿದಲ್ಲಿ ಕೃಷಿಕನು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುವುದಿಲ್ಲ. ಪ್ರತಿಯೊಬ್ಬ ರೈತರು ತಮ್ಮ ವಿಚಾರಗಳನ್ನು ಇತರ ರೈತರೊಂದಿಗೆ ಹಂಚಿಕೊಂಡು, ಸಂಪರ್ಕದೊಂದಿಗೆ ಇದ್ದು ಪ್ರಗತಿ ಸಾಧಿಸೋಣ ಎಂದರು.
ಉಪ ಕೃಷಿ ನಿರ್ದೇಶಕ ವೀರೇಶ ಹುನಗುಂದ ಅವರು ಮಾತನಾಡಿ, ಭಾರತೀಯ ರೈತರು ಸ್ವಾಭಿಮಾನಿಗಳು, ನಮ್ಮ ಆರ್ಥಿಕ ವ್ಯವಸ್ಥೆ ಇನ್ನೂ ಸಧೃಢವಾಗಿದೆ ಎಂದರೆ ಇದಕ್ಕೆ ಕಾರಣ ನಮ್ಮ ರೈತರು ಎಂದರು.  ಡಾ. ಶಿವರಾಜ ಶೆಟ್ಟರ್, ಪಶುವೈಧ್ಯಾಧಿಕಾರಿಗಳು, ಪಶು ಚಿಕಿತ್ಸಾಲಯ, ಹಿರೇಸಿಂಧೋಗಿ ಇವರು ಹೈನುಗಾರಿಕೆಯಿಂದ ಪಡೆಯಬಹುದಾದ ಲಾಭಗಳನ್ನು ತಿಳಿಸಿದರು.  ಹೈನುಗಾರಿಕೆಯಿಂದ ದೈನಂದಿನ ಖರ್ಚನ್ನು ನಿವಾರಿಸಿಕೊಳ್ಳಬಹುದು ಹಾಗೂ ಮೌಲ್ಯವರ್ಧನೆಯಿಂದ ಹೆಚ್ಚು ಲಾಭ ಪಡೆಯಬಹುದು ಎಂದರು.
 ಡಾ. ಎಮ್.ಬಿ. ಪಾಟೀಲ, ವಿಸ್ತರಣಾ ಮುಂದಾಳು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶ ತಿಳಿಸಿದರು.  ಅಧ್ಯಕ್ಷತೆ ವಹಿಸಿದ್ದ ಡಾ. ಬಿ.ಎಮ್. ಚಿತ್ತಾಪುರ, ಮುಖ್ಯ ವೈಜ್ಞಾನಿಕ ಅಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯ, ರಾಯಚೂರು ಅವರು ಸಿರಿಧಾನ್ಯಗಳ ಮಹತ್ವವನ್ನು ತಿಳಿಸಿದರು.
    ಪ್ರಗತಿಪರ ರೈತರಾದ ಶೇಖಮ್ಮ ವಾಣಿ, ಕಲ್ಲತಾವರಗೇರಾ, ಶ್ರೀನಿವಾಸ, ಮುನಿರಾಬಾದ, ಹನುಮೇಶ್ ಬಾರಕೇರ, ಗಿಣಿಗೇರಾ, ಶರಣಪ್ಪ ಹ್ಯಾಟಿ , ಮಂಗಳೂರು, ಇಂದ್ರಗೌಡ, ಚಿಕ್ಕಸಿಂಧೋಗಿ, ನಿಂಗಪ್ಪ, ಇಂದರ್ಗಿ, ಶ್ರೀನಿವಾಸ್, ಗುಡ್ಲಾನೂರ್, ಆನಂದರಡಿ,್ಡ ಡಂಬರಳ್ಳಿ ಇವರು ಸ್ವಾವಲಂಬಿ ಕೃಷಿ ಬಗ್ಗೆ ತರಬೇತಿದಾರರಿಗೆ ಮಾಹಿತಿ ನೀಡಿದರು.