Monday, 27 February 2017

ಜನರ ಮನಸೂರೆಗೊಂಡ ಭಾರತ ಭಾಗ್ಯ ವಿಧಾತ : ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ಕೊಪ್ಪಳದ ಜನತೆ

ಕೊಪ್ಪಳ, ಫೆ. 27 (ಕರ್ನಾಟಕ ವಾರ್ತೆ): ಮೈದಾನದ ತುಂಬೆಲ್ಲಾ ‘ಜೈ-ಭೀಮ್’ ಎನ್ನುವ ಜೈಕಾರದ ಉದ್ಘಾರ.  ಭಾರತ ಭಾಗ್ಯ ವಿಧಾತ. . . ನೀ ಸಮತೆಯ ಸಾರಿದ ಧೂತ. . . ಈ ನೆಲದ ನಿಜಾವಧೂತ. . . ಹಾಡಿನ ಮಾರ್ಧನಿ ಇಡೀ ಮೈದಾನದುದ್ದಕ್ಕೂ ಪಸರಿಸಿತು.  

     ಇದು ಕೊಪ್ಪಳ ನಗರದ ಸಾರ್ವಜನಿಕ ಮೈದಾನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿಯ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಭಾರತ ಭಾಗ್ಯ ವಿಧಾತ’ ಕಾರ್ಯಕ್ರಮದ ನಂತರ ಕೇಳಿ ಬಂದ ಮಾರ್ಧನಿಯಾಗಿತ್ತು.

ಬಿರುಸಿನ ಪ್ರದರ್ಶನ, ಬೆರಗುಗೊಳಿಸುವ ನಟನೆ, ಕಣ್ತುಬಿಂಬಿಸುವ ಬೆಳಕಿನ ಲೋಕ, ಕಿವಿದುಂಬಿಸುವ ಹಿನ್ನೆಲೆ ಸಂಗೀತ, ದೇಶಿ ಜಾನಪದ ಕಲೆಗಳ ವೈಭವದಲ್ಲಿ ಅನಾವರಣಗೊಂಡ ವೈಚಾರಿಕ ಕಥಾ ಹಂದರದ ಭಾರತ ಭಾಗ್ಯವಿಧಾತಾ ಸಾವಿರಾರು ಜನರ ಮನೆಗೆದ್ದಿತು. ಜನಪದ ಸೊಗಡಿನೊಂದಿಗೆ ಮೈ ರೋಮಾಂಚನಗೊಳಿಸುವ ಜನಪದ ನೃತ್ಯ, ಗೀತೆ, ಆಧುನಿಕ ರಂಗಭೂಮಿಯ ನವಿರಾದ ಪರಿಕಲ್ಪನೆಗಳನ್ನು ಮೇಳೈಸಿದ ಅಪರೂಪದ ಪ್ರಯೋಗಕ್ಕೆ ಕೊಪ್ಪಳ ನಗರದ ಸಾವಿರಾರು ಮನಸ್ಮ್ಸಗಳು ಸಾಕ್ಷಿಯಾದವು.  ಕಲಾವಿದರ ಮನೋಜ್ಞ ಅಭಿನಯಕ್ಕೆ ಇಲ್ಲಿನ ಜನತೆ ಮನಸೋತರು.  ಭಾರತ ತಳಸಮುದಾಯಗಳ ಆತ್ಮಸ್ಥೈರ್ಯವನ್ನು ನೂರ್ಮಡಿಗೊಳಿಸಿದ ಮಹಾನ್ ಚೇತನ ಡಾ.ಬಿ.ಆರ್. ಅಂಬೇಡ್ಕರ್‍ವರ 125ನೇ ಜಯಂತಿಯ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ  ಆಯೋಜಿಸಿದ ಭಾರತ ಭಾಗ್ಯವಿಧಾತಾ ಧ್ವನಿ ಬೆಳಕು ಕಾರ್ಯಕ್ರಮ ಕಿಕ್ಕಿರಿದ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾಯಿತು.  ಅತ್ಯಂತ ಆಕರ್ಷಕವಾದ ಧ್ವನಿ ಬೆಳಕಿನ ವೈಭವದಲ್ಲಿ ಪಾತ್ರಧಾರಿಗಳ ನೃತ್ಯ, ಅಭಿನಯ, ದೃಶ್ಯದಿಂದ ದೃಶ್ಯಕ್ಕೆ ಪಡೆದುಕೊಳ್ಳುತ್ತಿರುವ ವೇಗ ನೋಡುಗರ ಮನಸ್ಸನ್ನು ಪುಳಕಗೊಳಿಸಿತು. 

ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಒಂದೊಂದು ಕಲಾಪ್ರಕಾರಗಳನ್ನು ಆಯ್ಕೆ ಮಾಡಿಕೊಂಡು, ನವಿರಾದ ಸಮ್ಮಿಶ್ರಣದಲ್ಲಿ ಅಳವಡಿಸಿಕೊಂಡಿದ್ದು, ಪ್ರೇಕ್ಷಕರಿಗೆ ಇಷ್ಟವಾಯಿತು.  ಒಟ್ಟಾರೆ ಪ್ರದರ್ಶನದಲ್ಲಿ ಅಂಬೇಡ್ಕರ್ ಅವರನ್ನು ಎಲ್ಲ ಸಮುದಾಯದ ಒಳಿತಿಗಾಗಿ ಶ್ರಮಿಸಿದ ಮಹಾನ್ ಮಾನವತಾವಾದಿಯಾಗಿ ಪ್ರದರ್ಶನ ಬಿಂಬಿಸುವಲ್ಲಿ ಯಶಸ್ವಿಯಾಯಿತು.
ಬೃಹತ್ತಾದ ವೇದಿಕೆಯಲ್ಲಿ ಪಾದರಸದಂತೆ ಚಲನಶೀಲತೆ ಪಡೆದ 80 ಕಲಾವಿದರ ವಿಭಿನ್ನ ಅಭಿನಯ ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿತು. ಬಿಗಿಯಾದ ಕಥಾಹಂದರ, ಬಿರುಸಿನ ಸಂಭಾಷಣೆ, ವೈಭಯುತ ದೃಶ್ಯಗಳ ಸಂಯೋಜನೆ, ಶ್ರೀಮಂತ ಜನಪದ ಕಲೆಗಳ ಚಿತ್ತಾರ, ನೆರಳು ಬೆಳಕಿನ ದೃಶ್ಯ ವೈಭವದಲ್ಲಿ ಹಾಡು ನೃತ್ಯ, ಸಿನಿಮಿಯ ಶೈಲಿ ಹೀಗೆ ಎಲ್ಲವೂ ಒಳಗೊಂಡ ರಂಜನೀಯ ಅಂಶಗಳ ಜಾನಪದ ಕಲೆಗಳ ಹಂದರದಲ್ಲಿ ನಡೆದ ಅಂಬೇಡ್ಕರ್ ಅವರ ಜೀವನ ಗಾಥೆಯ ಮೆರವಣಿಗೆ ಅಬಾಲವೃದ್ಧರ ಮನಸ್ಸಿನ ಕದತಟ್ಟಿತು. 

 ಭಾರತ ಭಾಗ್ಯ ವಿಧಾತ- ಬೆಳಕು ಮತ್ತು ದೃಶ್ಯ ವೈಭವಗಳ ರೂಪಕ ಕಾರ್ಯಕ್ರಮ ಇಬ್ಬರು ಗೊರವಪ್ಪಗಳ ಸ್ವಾಗತದೊಂದಿಗೆ ತೆರೆದುಕೊಂಡು, ನಂತರ, ಹಂತ, ಹಂತವ ಹಂತವಾಗಿ ಕಥಾ ಹಂದರ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ.

ಇದು ಸಾಪ್ಟವೇರ್ ಇಂಜನಿಯರ್ ಕಥೆಯಲ್ಲ. ಸೋಶಿಯಲ್ ಇಂಜಿನಿಯರ್ ಕಥೆ ಎಂದು ಪಾತ್ರವೊಂದು ನುಡಿಯುತ್ತಿದ್ದಂತೆ ಅಂಬೇಡ್ಕರ ಅವರ ಜೀವನದ ಸಂಕಷ್ಟಗಳ ಸರಮಾಲೆ, ಸ್ವಾಭಿಮಾನದ ಬದುಕಿನ ನಡೆ, ಲೋಕೋದ್ಧಾರದ ಹಾದಿ, ಸೈದ್ಧಾಂತಿಕ ಚರ್ಚೆಗಳು, ರಾಜಕೀಯ ನಾಯಕರ ಭಿನ್ನಾಭಿಪ್ರಾಯ, ರಾಜಿಸಂಧಾನ, ದಲಿತರ, ಶೋಷಿತರ, ಮಹಿಳೆಯರ, ಅಸ್ಪøಶ್ಯರ, ಕಾರ್ಮಿಕರ ಹೀಗೆ ನೋಂದವರ ನೋವಿಗೆ ಸ್ಪಂದಿಸುವ ಚಾರಿತ್ರಿಕ ಹಿನ್ನೋಟಗಳು, ಗೊರವರ ಕುಣಿತ, ಕಂಸಾಳೆ, ವೀರಭದ್ರಕುಣಿತ, ಭೂತಕೊಲ, ಯಕ್ಷಗಾನ, ಬಯಲಾಟ, ಗೀಗೀಪದ, ಡೊಳ್ಳುಕುಣಿತ, ಮರಾಠಿ ನೆಲದ ಮಂಜರಾ ಜನಪದ ನೃತ್ಯ ಮಾಧ್ಯಮದಲ್ಲಿ ಹೊರಹೊಮ್ಮುತ್ತ ನೋಡುಗರ ಮನ, ಮನಸ್ಸನ್ನು ಕಲಕುತ್ತ ಸಾಗಿತು.  ಸಿರಿವಂತೆ ಭೂಮಿತಾಯಿ. . . ಮಳೆಯಲ್ಲಿ ತೋಯುತ್ತಾ. . . .ಅಂಟಿದಾ ಶಾಪದಾ ಕೊಳೆಯನ್ನು ತೊಳೆಯುತ್ತಾ. . . ಎನ್ನುವ ಹಿನ್ನೆಲೆಯಲ್ಲಿ ಬರುವ ಹಾಡು ಕಾರ್ಯಕ್ರಮದ ಗಟ್ಟಿತನವನ್ನು ತೋರಿಸಿದೆ.  ಹಂತ ಹಂತವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಾಲ್ಯ, ತುಂಟತನ, ಪಾಠ ಕಲಿಸಿದ ಗುರುಗಳು, ಮದುವೆ, ಬ್ಯಾರಿಸ್ಟರ್ ಪದವಿ ಪಡೆದದ್ದು, ತಮಗೆ ಆಶ್ರಯ ನೀಡಿದ ಬರೋಡಾದ ಸಯ್ಯಾಜಿ ಮಹಾರಾಜ, ಸಾಹು ಮಹಾರಾಜ್, ಅಂಬೇಡ್ಕರ್ ಸಿದ್ದಾಂತಗಳನ್ನು ಜಾರಿಗೆ ತಂದ ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್, ಅಂಬೇಡ್ಕರ್ ಅವರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದ್ದ ಮಹಾತ್ಮಾ ಗಾಂಧೀಜಿ, ಜವಾಹರಲಾಲ್ ನೆಹರು, ವೇದಿಕೆಯಲ್ಲಿ ಕಾಣಿಸಿಕೊಂಡು, ಗತ ಇತಿಹಾಸವನ್ನು ಕಣ್ಣಿಗೆ ಕಟ್ಟಿಕೊಡುವಲ್ಲಿ ಯಶಸ್ವಿಯಾಯಿತು. 
ಭಾರತೀಯ ಸಾಮಾಜದ ಜಾತಿ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ, ರಾಜಕೀಯ ಒಳನೋಟಗಳನ್ನು ಅತ್ಯಂತ ಸೂಕ್ಷ್ಮವಾಗಿ ಸರಳ ರೀತಿಯಲ್ಲಿ ಜನರಿಗೆ ಅರ್ಥಮಾಡಿಸುತ್ತಾ ಅಂಬೇಡ್ಕರ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತ ಸಾಗುವ ಭಾರತ ಭಾಗ್ಯವಿಧಾತಾ ಎಲ್ಲರ ಮನ ಗೆದ್ದಿತು. ಶೋಷಿತ ಸಮುದಾಯದ ಬದುಕು, ಊರು ಅಥವಾ ಕಚೇರಿಯಲ್ಲಿ ಕುಡಿಯುವ ನೀರಿಗೂ ಅಡ್ಡಿಪಡಿಸುತ್ತಿದ್ದ ಮೇಲ್ವರ್ಗದ ಜನರನ್ನು ಪ್ರತಿಭಟಿಸಿ, ಅಂಬೇಡ್ಕರ್ ಕಲ್ಲೇಟಿಗೆ ಗುರಿಯಾಗಿದ್ದು, ಬಾಡಿಗೆ ಮನೆ ಸಿಗದೆ ಪರಿತಪಿಸಿದ್ದು, ದೌರ್ಜನ್ಯ, ಅವಮಾನ, ದಬ್ಬಾಳಿಕೆಯ ಪ್ರಸಂಗಗಳು,  ಸಮಾಜ ಸುಧಾರಣೆಗಾಗಿ ಅಂಬೇಡ್ಕರ್ ಹಾಕಿಕೊಟ್ಟ ಸೂತ್ರಗಳನ್ನು ಮನಮುಟ್ಟುವಂತೆ ನಿರೂಪಿಸುವಲ್ಲಿ ಪ್ರದರ್ಶನ ಯಶಸ್ವಿಯಾಯಿತು. ಅಂಬೇಡ್ಕರ ಅವರು ಬುದ್ಧ ಧರ್ಮದ ಅನುಯಾಯಿಯಾಗಿ  ವೇದಿಕೆಯಲ್ಲಿ ಶಾಂತಿಮಂತ್ರ ಪಠಣವಾಗುತ್ತಿದ್ದಂತೆ ಜನ ಧನ್ಯತಾಭಾವದತ್ತ ಮುಖ ಮಾಡಿದಂತಿತ್ತು.
 ಅಂಬೇಡ್ಕರ್ ಅವರ ಜೀವನದ ಕೆಲ ನಿಜ ಚಿತ್ರಗಳ ವಿಡಿಯೋ ತುಣುಕುಗಳನ್ನು ವೇದಿಕೆಯ ಎತ್ತರದ ಭಾಗದಲ್ಲಿ ಪ್ರದರ್ಶಿಸಿದ್ದು, ಕಾರ್ಯಕ್ರಮ ಅರ್ಥಪೂರ್ಣಗೊಳಿಸಲು ಪೂರಕವಾಯಿತು.  ಸಂವಿಧಾನದ ಪುಸ್ತಕ ಅನಾವರಣಗೊಳಿಸುವ ಅಂಬೇಡ್ಕರ್ ಪಾತ್ರಧಾರಿ, ಇದಕ್ಕೆ ಜೊತೆಗೂಡಿದ ರಾಷ್ಟ್ರ ಮಹಾನ್ ನಾಯಕರ ಪಾತ್ರಧಾರಿಗಳು ವೇದಿಕೆಯ ಮುಂಭಾಗಕ್ಕೆ ಬರುತ್ತಿದ್ದಂತೆಯೇ ಜನರಿಂದ ಹರ್ಷೋಲ್ಲಾಸದ ಉದ್ಘಾರ ಕೇಳಿಬಂದಿತು.  ಬೌದ್ಧ ಬಿಕ್ಕುವಾಗಿ ದೀಕ್ಷೆ ಸ್ವೀಕರಿಸುವ ಸನ್ನಿವೇಶದೊಂದಿಗೆ ಪ್ರದರ್ಶನಕ್ಕೆ ಅದ್ಧೂರಿ ತೆರೆಕಂಡಿತು.
ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಗಾಥೆಯನ್ನು ನಾವೆಲ್ಲ ಅರ್ಥಮಾಡಿಕೊಂಡು, ಸಮಾಜದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದರು. ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್ ಉಪಸ್ಥಿತರಿದ್ದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ನಿರೂಪಿಸಿದರು.
 ಖ್ಯಾತ ಚಲನಚಿತ್ರ ನಿರ್ದೇಶಕ ಬಿ.ಎಂ. ಗಿರಿರಾಜ ಅವರ ನಿರ್ದೇಶನದಲ್ಲಿ ಭಾರತ ಭಾಗ್ಯವಿಧಾತ ಧ್ವನಿ ಬೆಳಕು ಕಾರ್ಯಕ್ರಮ ಮೂಡಿಬಂದಿದ್ದು, ಇದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರ ಪರಿಕಲ್ಪನೆಯಾಗಿದೆ. ಸಂಗೀತ ನಿರ್ದೇಶನವನ್ನು ಖ್ಯಾತ ಚಲನಚಿತ್ರ ಯುವ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ನೀಡಿದ್ದರೆ.  ಶಶಿಧರ ಅಡಪ ರಂಗವಿನ್ಯಾಸ, ಪದ್ಮಿನಿ ಅಚ್ಚಿ ಅವರ ನೃತ್ಯ ಸಂಯೋಜನೆ, ನಂದಕಿಶೋರ ಅವರ ಬೆಳಕು, ಪ್ರಮೋದ ಶಿಗ್ಗಾಂವಿ ಅವರಿಂದ ವಸ್ತ್ರಾಲಂಕಾರ, ಎಂಪಿಎಂ ವೀರೇಶ್ ಅವರ ಸಹನಿರ್ದೇಶನದಲ್ಲಿ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿತು.
Post a Comment