Tuesday, 28 February 2017

ಮಾ. 01 ರಿಂದ ಜಿಲ್ಲೆಯಲ್ಲಿ ಸ್ವಚ್ಛ ಶಕ್ತಿ ಸಪ್ತಾಹ : ನೈರ್ಮಲ್ಯ ಜಾಗೃತಿಗೆ ವೈವಿಧ್ಯಮಯ ಕಾರ್ಯಕ್ರಮ- ಜಿ.ಪಂ. ಸಿಇಓ ವೆಂಕಟರಾಜಾ

ಕೊಪ್ಪಳ ಫೆ. 28 (ಕರ್ನಾಟಕ ವಾರ್ತೆ): ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಾ. 01 ರಿಂದ 08 ರವರೆಗೆ ಜಿಲ್ಲೆಯಾದ್ಯಂತ ಸ್ವಚ್ಛ ಶಕ್ತಿ ಸಪ್ತಾಹ ಆಚರಿಸಲಾಗುತ್ತಿದ್ದು, ನೈರ್ಮಲ್ಯ ಜಾಗೃತಿಗೆ ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತಿಳಿಸಿದ್ದಾರೆ.
     ಸ್ವಚ್ಛ ಶಕ್ತಿ ರಾಷ್ಟ್ರೀಯ ಮಟ್ಟದ ಮಹಿಳಾ ಸಮಾವೇಶ ಮತ್ತು ವಿಶ್ವ ಮಹಿಳಾ ದಿನಾಚರಣೆ ನಿಮಿತ್ಯ ಮಾ. 01 ರಿಂದ 08 ರವರೆಗೆ ಜಿಲ್ಲೆಯಾದ್ಯಂತ ಸ್ವಚ್ಛ ಶಕ್ತಿ ಸಪ್ತಾಹ ಆಚರಿಸುವಂತೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯ ನಿರ್ದೇಶನ ನೀಡಿದೆ.  ಈ ಹಿನ್ನೆಲೆಯಲ್ಲಿ ಒಂದು ವಾರ ಕಾಲ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ನೈರ್ಮಲ್ಯ ಕುರಿತು ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ.  ಕಾರ್ಯಕ್ರಮ ಆಯೋಜಿಸಲು ಪ್ರತಿ ತಾಲೂಕಿಗೆ ಜಿಲ್ಲಾ ಪಂಚಾಯತಿಯಿಂದ ತಲಾ 02 ಲಕ್ಷ ರೂ. ಗಳ ಅನುದಾನ ಬಿಡುಗಡೆ ಮಾಡಲಾಗುವುದು.  ಸ್ವಚ್ಛ ಶಕ್ತಿ ಸಪ್ತಾಹ ಆಚರಣೆಯ ಕುರಿತಂತೆ ಈಗಾಗಲೆ ಪೂರ್ವಭಾವಿ ಸಭೆ ಕೈಗೊಂಡು, ಸಂಬಂಧಪಟ್ಟ ಪಿಡಿಓ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸ್ಪಷ್ಪ ನಿರ್ದೇಶನ ನೀಡಲಾಗಿದೆ.  ಅದರನ್ವಯ ಮಾ. 01 ರಂದು ವಿಶ್ವ ಮಹಿಳಾ ದಿನಾಚರಣೆಯ ಪ್ರಾರಂಭೋತ್ಸವ ಆಚರಿಸುವುದು.  ಮಾ. 02 ರಂದು ಎಲ್ಲ ಗ್ರಾಮ ಪಂಚಾಯತಿಗಳ ಸ್ವಚ್ಛಾಗ್ರಹಿ ಮಹಿಳೆಯರನ್ನು ಗುರುತಿಸಿ, ಸನ್ಮಾನಿಸುವುದು, ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಜಿ.ಪಂ. ಮತ್ತು ತಾ.ಪಂ. ಸದಸ್ಯರುಗಳನ್ನು ಆಹ್ವಾನಿಸಬೇಕು.  ಮಾ. 03 ರಂದು ಎಲ್ಲ ಶಾಲಾ ಮಕ್ಕಳಿಗೆ ಹೆಣ್ಣು ಮಕ್ಕಳ ಮಹತ್ವ, ಮಹಿಳೆಯರ ಆರೋಗ್ಯ ಕುರಿತು ಚಿತ್ರಕಲೆ, ಭಾಷಣ, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಬೇಕು.  ಅಂದು ಸಂಜೆ ಶೌಚಾಲಯದ ಮಹತ್ವ ಕುರಿತಂತೆ ಕಿರುಚಿತ್ರ ಪ್ರದರ್ಶನ ನಡೆಸಿ, ಕಾರ್ಯಕ್ರಮ ಏರ್ಪಡಿಸಿದ ಕುರಿತು ವರದಿ ಸಲ್ಲಿಸಬೇಕು.  ಮಾ. 04 ರಂದು ಶಾಲೆ ಮತ್ತು ಅಂಗನವಾಡಿ ಮಟ್ಟದಲ್ಲಿ ಮಕ್ಕಳಿಗೆ ಕೈ ತೊಳೆಯುವ ದಿನ ಆಚರಿಸಬೇಕು.  ಮಾ. 05 ರಂದು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶಾಲಾ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು, ರಂಗೋಲಿ ಸ್ಪರ್ಧೆಗಳಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು.  ಮಾ. 06 ರಂದು ಗ್ರಾಮ ಪಂಚಾಯತಿಗಳಲ್ಲಿ ನೈರ್ಮಲ್ಯ ಜಾಗೃತಿ ಕುರಿತ ವಿಡಿಯೋ ಚಿತ್ರ ಪ್ರದರ್ಶನ ಆಯೋಜಿಸಬೇಕು.  ಮಾ. 07 ರಂದು ಪ್ರತಿ ತಾಲೂಕಿನಿಂದ 10 ಮಹಿಳಾ ಅಧ್ಯಕ್ಷರು ಹಾಗೂ ಪಿಡಿಓ ಗಳನ್ನು ಶ್ರೀರಾಮನಗರಕ್ಕೆ ಕ್ಷೇತ್ರ ಅಧ್ಯಯನ ಭೇಟಿಗಾಗಿ ಆಯಾ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಆಯೋಜಿಸಿ, ವಿಡಿಯೋ ಕಿರುಚಿತ್ರ ಪ್ರದರ್ಶನ ಏರ್ಪಡಿಸಬೇಕು.  ಮಾ. 08 ರಂದು ವಿಶ್ವ ಮಹಿಳಾ ದಿನವನ್ನು ಆಯಾ ಗ್ರಾ.ಪಂ. ಹಾಗೂ ತಾಲೂಕಾ ಪಂಚಾಯತಿಗಳಲ್ಲಿ ಮಹಿಳೆಯರಿಂದ ಶ್ರಮದಾನ ಹಾಗೂ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತಿಳಿಸಿದ್ದಾರೆ.
ಪ್ರಧಾನಿ ಕಾರ್ಯಕ್ರಮಕ್ಕೆ ಜಿಲ್ಲೆಯ ಗ್ರಾ.ಪಂ. ಮಹಿಳಾ ಅಧ್ಯಕ್ಷರು : ವಿಶ್ವ ಮಹಿಳಾ ದಿನಾಚರಣೆಯನ್ನು ಭಾರತ ಸಕಾರ ಗುಜರಾತ್ ರಾಜ್ಯದ ಗಾಂಧಿನಗರದಲ್ಲಿ ಸ್ವಚ್ಛ ಶಕ್ತಿ-2017 ಎಂಬ ಹೆಸರಿನಲ್ಲಿ ಮಾ. 06 ರಿಂದ 08 ರವರೆಗೆ ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೊಪ್ಪಳ ಜಿಲ್ಲೆಯಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ಉತ್ತಮ ಸಾಧನೆ ತೋರಿರುವ ಗ್ರಾಮ ಪಂಚಾಯತಿ ಮಹಿಳಾ ಅಧ್ಯಕ್ಷರುಗಳನ್ನು ಕರೆ ತರುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.  ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಮಹಿಳೆಯರೇ ಅಧ್ಯಕ್ಷರಾಗಿರುವ ಗ್ರಾಮ ಪಂಚಾಯತಿಗಳ ಪೈಕಿ, ಶೌಚಾಲಯ ನಿರ್ಮಾಣ, ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ಉತ್ತಮ ಸಾಧನೆ ತೋರಿರುವ ಪಂಚಾಯತಿಗಳ ಅಧ್ಯಕ್ಷರುಗಳನ್ನು ಪ್ರಧಾನಿಗಳ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿ ಬರಲು ಕೊಪ್ಪಳ ಜಿಲ್ಲಾ ಪಂಚಾಯತಿ ಈಗಾಗಲೆ ಸಿದ್ಧತೆಗಳನ್ನು ಕೈಗೊಂಡಿದೆ.  ಈಗಾಗಲೆ ಇಂತಹ ಪಂಚಾಯತಿಗಳ ಮಹಿಳಾ ಅಧ್ಯಕ್ಷರುಗಳನ್ನು ಗುರುತಿಸಿದ್ದು, ಇವರ ಜೊತೆಗೆ ಜಿಲ್ಲೆಯಲ್ಲಿ ವೈವಿಧ್ಯಮಯ ಕಾರ್ಯಗಳ ಮೂಲಕ ಶೌಚಾಲಯ ಜಾಗೃತಿಗೆ ಜನರ ಗಮನ ಸೆಳೆದಿರುವ 04 ಜನ ಚಾಂಪಿಯನ್ ಮಹಿಳಾ ಸ್ವಚ್ಛಾಗ್ರಹಿಗಳನ್ನು ಕೂಡ ಗುಜರಾತ್‍ಗೆ ಕರೆದುಕೊಂಡ ಹೋಗಲು ತಯಾರಿ ನಡೆದಿದೆ.  ಪ್ರಧಾನಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಲಿರುವವರ ವಿವರ ಇಂತಿದೆ.  ಗಂಗಾವತಿ ತಾಲೂಕು ವಡ್ಡರಹಟ್ಟಿ ಗ್ರಾ.ಪಂ. ಅಧ್ಯಕ್ಷೆ ಸುನಿತಾ ನಿತ್ಯಾನಂದ.  ಚಿಕ್ಕಜಂತಕಲ್- ಹಂಪಮ್ಮ ರೇಣುಕನಗೌಡ, ಉಳೇನೂರು- ಶಾರದಮ್ಮ ಗವಿಸಿದ್ದಪ್ಪ, ಚಿಕ್ಕಮಾದಿನಾಳ-ತಿಪ್ಪಮ್ಮ ಮಲಿಯಪ್ಪ ಬಳ್ಳಾರಿ.  ಕುಷ್ಟಗಿ ತಾಲೂಕಿನ ಹನಮಸಾಗರ- ದಾಕ್ಷಾಯಣಿ ವೀರೇಶ ಕಟಗಿ, ತುಮರಿಕೊಪ್ಪ- ಹನುಮವ್ವ ಮರಿಯಪ್ಪ ಮಾದರ.  ಹಿರೇಗೊನ್ನಾಗರ- ಫಾತಿಮಾ ಇಲಕಲ್,  ಕೊಪ್ಪಳ ತಾಲೂಕಿನ ಹುಲಗಿ- ರೇಣುಕಾ ರಾಮಣ್ಣ, ಅಳವಂಡಿ- ಫಕೀರವ್ವ ಜಂತ್ಲಿ ಹಾಗೂ ಗುಳದಳ್ಳಿ ಗ್ರಾ.ಪಂ. ಅಧ್ಯಕ್ಷೆ ಮಲ್ಲಮ್ಮ ಗವಿಸಿದ್ದಪ್ಪ ಹಡಪದ ಅವರು ಗುಜರಾತ್‍ನಲ್ಲಿ ಜರುಗುವ ಕಾರ್ಯಕ್ರಮಕ್ಕೆ ತೆರಳಲು ಆಯ್ಕೆಯಾಗಿದ್ದಾರೆ.  ಸ್ವಚ್ಛಾಗ್ರಹಿ ಚಾಂಪಿಯನ್ ಮಹಿಳೆಯರಾದ ಡಣಾಪುರದ ಶರಣಮ್ಮ, ಶ್ರೀರಾಮನಗರದ ಗಂಗಮ್ಮ, ಮಂಡಲಗೇರಿಯ ಪದ್ಮಾ ಹಿರೇಮಠ ಹಾಗೂ ಹಿರೇವಂಕಲಕುಂಟಾದ ಗಿರಿಜಾ ಶಿವಪುತ್ರಪ್ಪ ಕೇರಿ ಅವರು ಸಹ ಗುಜರಾತ್‍ಗೆ ತೆರಳುವರು.
     ಸ್ವಚ್ಛ ಶಕ್ತಿ ಸಪ್ತಾಹ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಿ, ಯಶಸ್ವಿಗೊಳಿಸುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಜಿಲ್ಲೆಯ ಎಲ್ಲ ಪಿಡಿಓ ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದ್ದಾರೆ.
Post a Comment