Tuesday, 28 February 2017

ಮಾ.02 ರಂದು ಕೊಪ್ಪಳದಲ್ಲಿ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ

ಕೊಪ್ಪಳ, ಫೆ.28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮ ಮಾ.02 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳದ ಗಾಂಧಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಲಿದೆ.
     ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಜನ ಜಾಗೃತಿ (ಎಸ್.ಸಿ.ಪಿ. ಹಾಗೂ ಟಿ.ಎಸ್.ಪಿ. ಯೋಜನೆ ಅಡಿಯಲ್ಲಿ) ಮತ್ತು ಪರಿಶಿಷ್ಟ ಜಾತಿ ಮತ್ತು ಪ.ಪಂಗಡಗಳಿಗೆ ಇರುವ ಹಕ್ಕುಗಳ ಬಗ್ಗೆ ವಿಶೇಷ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ ಮಾ.02 ರಂದು ಕೊಪ್ಪಳದ ಗಾಂಧಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಹಿರಿಯಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಬಿ. ದಶರಥ ಉದ್ಘಾಟನೆ ನೆರೆವೇರಿಸುವರು.  ಕೊಪ್ಪಳ ತಹಶೀಲ್ದಾರ ಹೆಚ್.ಎಂ. ಗುರುಬಸವರಾಜ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ದೊಡ್ಡಬಸಪ್ಪ ಕಂಪ್ಲಿ, ಸರ್ಕಾರಿ ವಕೀಲ ಆಸೀಫ್ ಅಲಿ, ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಡಿ.ಲಂಕೇಶ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ಯಾಮರಾವ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಮರಾವ್ ಬಿ.ವಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ,  ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಿದಾನಂದಪ್ಪ,  ಕಾರ್ಮಿಕ ನಿರೀಕ್ಷಕ ಹೊನ್ನಪ್ಪ, ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ ಶಾಲೆಯ ಮುಖ್ಯೋಪಾಧ್ಯಯರಾದ ಪುಷ್ಪಲತಾ ಪಾಲ್ಗೊಳ್ಳುವರು.
     ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ  ಅವರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು, ಹಾಗೂ ಪ.ಜಾತಿ ಮತ್ತು ಪ.ಪಂಗಡಗಳಿಗೆ ಇರುವ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ಮೋಟಾರ ವಾಹನ ಅಪಘಾತ ಪ್ರಕರಣ : ಮಾ.11 ರಂದು ರಾಜೀ ಸಂಧಾನ

ಕೊಪ್ಪಳ, ಫೆ. 28 (ಕರ್ನಾಟಕ ವಾರ್ತೆ): ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ ಮೋಟಾರ ವಾಹನ ಅಪಘಾತದ ಪ್ರಕರಣಗಳನ್ನು ಜನತಾ ನ್ಯಾಯಾಲಯ ಮುಖಾಂತರ ರಾಜೀ ಸಂಧಾನದಲ್ಲಿ ಇತ್ಯರ್ಥಪಡಿಸಿಕೊಳ್ಳಲು ಜನತಾ ನ್ಯಾಯಾಲಯ ಕಾರ್ಯಕ್ರಮವನ್ನು ಮಾ.11 ರಂದು  ಬೆಳಿಗ್ಗೆ 10-00 ಗಂಟೆಗೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದೆ.
    ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನ ಮೇರೆಗೆ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಮೋಟಾರು ವಾಹನ ಪ್ರಕರಣಗಳನ್ನು ರಾಜೀ ಸಂಧಾನದಲ್ಲಿ ಇತ್ಯರ್ಥಪಡಿಸಿಕೊಳ್ಳಲು ಇಲ್ಲಿ ಅವಕಾಶ ಕಲ್ಪಿಸಲಾಗುವುದು.  ಸಂಬಂಧಪಟ್ಟವರು ಆಯಾ ವಕೀಲರೊಂದಿಗೆ ಹಾಜರಾಗಿ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು. ವ್ಯಾಜ್ಯವನ್ನು ಜನತಾ ನ್ಯಾಯಾಲಯದ ಮೂಲಕ ಶ್ರೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಬಹುದು.  ಜನತಾ ನ್ಯಾಯಾಲಯಗಳಲ್ಲಿ ಉಭಯ ಪಕ್ಷಗಾರರು ರಾಜೀ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗುವುದು.  ಸೌಹಾರ್ದಯುತವಾಗಿ ಪ್ರಕರಣವು ಇತ್ಯರ್ಥಪಡಿಸಿಕೊಳ್ಳವುದರಿಂದ ಬಾಂಧವ್ಯವು ಉಳಿದು ವಿವಾದವು ಇತ್ಯರ್ಥಗೊಳ್ಳುತ್ತದೆ.   ಜನತಾ ನ್ಯಾಯಾಲದಲ್ಲಿ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಹ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.  ರಾಜೀ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಪೂರ್ತಿಯಾಗಿ ಮರುಪಾವತಿಸಲಾಗುವುದು.  ಕಡಿಮೆ ಖರ್ಚು, ಶೀಘ್ರ ವಿಲೇವಾರಿಗಾಗಿ ಇದೊಂದು ಅವಕಾಶ ಎಂದು ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಸ್ವ-ಉದ್ಯೋಗ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ, ಫೆ. 28 (ಕರ್ನಾಟಕ ವಾರ್ತೆ): ಉತ್ತರಕನ್ನಡ ಜಿಲ್ಲೆ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿ ಸಂಸ್ಥೆ ಇವರ ವತಿಯಿಂದ ವಿವಿಧ ವಿನ್ಯಾಸದ ಚಿನ್ನಾಭರಣಗಳ ತಯಾರಿಕೆಯ ತರಬೇತಿ ಹಾಗೂ ಲಘು ವಾಹನ ಚಾಲನಾ ತರಬೇತಿ ಹಮ್ಮಿಕೊಳ್ಳಲಾಗಿದ್ದು.  ಅರ್ಹ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಸಿಲಾಗಿದೆ.
    ತರಬೇತಿ ಪಡೆಯಲಿಚ್ಚಿಸುವವರು ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು.  ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ, ಉದ್ಯೋಗ ವಿದ್ಯಾ ನಗರ, ದಾಂಡೇಲಿ ರಸ್ತೆ, ಹಳಿಯಾಳ (ಉತ್ತರ ಕರ್ನಾಟಕ ಜಿಲ್ಲೆ), ಈ ವಿಳಾಸಕ್ಕೆ ಕೂಡಲೇ ಸಂಪರ್ಕಿಸಲು ಕೋರಲಾಗಿದೆ.     ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ 08284-220807, 9483485489, 9482188780 ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಮಾ. 01 ರಿಂದ ಜಿಲ್ಲೆಯಲ್ಲಿ ಸ್ವಚ್ಛ ಶಕ್ತಿ ಸಪ್ತಾಹ : ನೈರ್ಮಲ್ಯ ಜಾಗೃತಿಗೆ ವೈವಿಧ್ಯಮಯ ಕಾರ್ಯಕ್ರಮ- ಜಿ.ಪಂ. ಸಿಇಓ ವೆಂಕಟರಾಜಾ

ಕೊಪ್ಪಳ ಫೆ. 28 (ಕರ್ನಾಟಕ ವಾರ್ತೆ): ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಾ. 01 ರಿಂದ 08 ರವರೆಗೆ ಜಿಲ್ಲೆಯಾದ್ಯಂತ ಸ್ವಚ್ಛ ಶಕ್ತಿ ಸಪ್ತಾಹ ಆಚರಿಸಲಾಗುತ್ತಿದ್ದು, ನೈರ್ಮಲ್ಯ ಜಾಗೃತಿಗೆ ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತಿಳಿಸಿದ್ದಾರೆ.
     ಸ್ವಚ್ಛ ಶಕ್ತಿ ರಾಷ್ಟ್ರೀಯ ಮಟ್ಟದ ಮಹಿಳಾ ಸಮಾವೇಶ ಮತ್ತು ವಿಶ್ವ ಮಹಿಳಾ ದಿನಾಚರಣೆ ನಿಮಿತ್ಯ ಮಾ. 01 ರಿಂದ 08 ರವರೆಗೆ ಜಿಲ್ಲೆಯಾದ್ಯಂತ ಸ್ವಚ್ಛ ಶಕ್ತಿ ಸಪ್ತಾಹ ಆಚರಿಸುವಂತೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯ ನಿರ್ದೇಶನ ನೀಡಿದೆ.  ಈ ಹಿನ್ನೆಲೆಯಲ್ಲಿ ಒಂದು ವಾರ ಕಾಲ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ನೈರ್ಮಲ್ಯ ಕುರಿತು ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ.  ಕಾರ್ಯಕ್ರಮ ಆಯೋಜಿಸಲು ಪ್ರತಿ ತಾಲೂಕಿಗೆ ಜಿಲ್ಲಾ ಪಂಚಾಯತಿಯಿಂದ ತಲಾ 02 ಲಕ್ಷ ರೂ. ಗಳ ಅನುದಾನ ಬಿಡುಗಡೆ ಮಾಡಲಾಗುವುದು.  ಸ್ವಚ್ಛ ಶಕ್ತಿ ಸಪ್ತಾಹ ಆಚರಣೆಯ ಕುರಿತಂತೆ ಈಗಾಗಲೆ ಪೂರ್ವಭಾವಿ ಸಭೆ ಕೈಗೊಂಡು, ಸಂಬಂಧಪಟ್ಟ ಪಿಡಿಓ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸ್ಪಷ್ಪ ನಿರ್ದೇಶನ ನೀಡಲಾಗಿದೆ.  ಅದರನ್ವಯ ಮಾ. 01 ರಂದು ವಿಶ್ವ ಮಹಿಳಾ ದಿನಾಚರಣೆಯ ಪ್ರಾರಂಭೋತ್ಸವ ಆಚರಿಸುವುದು.  ಮಾ. 02 ರಂದು ಎಲ್ಲ ಗ್ರಾಮ ಪಂಚಾಯತಿಗಳ ಸ್ವಚ್ಛಾಗ್ರಹಿ ಮಹಿಳೆಯರನ್ನು ಗುರುತಿಸಿ, ಸನ್ಮಾನಿಸುವುದು, ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಜಿ.ಪಂ. ಮತ್ತು ತಾ.ಪಂ. ಸದಸ್ಯರುಗಳನ್ನು ಆಹ್ವಾನಿಸಬೇಕು.  ಮಾ. 03 ರಂದು ಎಲ್ಲ ಶಾಲಾ ಮಕ್ಕಳಿಗೆ ಹೆಣ್ಣು ಮಕ್ಕಳ ಮಹತ್ವ, ಮಹಿಳೆಯರ ಆರೋಗ್ಯ ಕುರಿತು ಚಿತ್ರಕಲೆ, ಭಾಷಣ, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಬೇಕು.  ಅಂದು ಸಂಜೆ ಶೌಚಾಲಯದ ಮಹತ್ವ ಕುರಿತಂತೆ ಕಿರುಚಿತ್ರ ಪ್ರದರ್ಶನ ನಡೆಸಿ, ಕಾರ್ಯಕ್ರಮ ಏರ್ಪಡಿಸಿದ ಕುರಿತು ವರದಿ ಸಲ್ಲಿಸಬೇಕು.  ಮಾ. 04 ರಂದು ಶಾಲೆ ಮತ್ತು ಅಂಗನವಾಡಿ ಮಟ್ಟದಲ್ಲಿ ಮಕ್ಕಳಿಗೆ ಕೈ ತೊಳೆಯುವ ದಿನ ಆಚರಿಸಬೇಕು.  ಮಾ. 05 ರಂದು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶಾಲಾ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು, ರಂಗೋಲಿ ಸ್ಪರ್ಧೆಗಳಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು.  ಮಾ. 06 ರಂದು ಗ್ರಾಮ ಪಂಚಾಯತಿಗಳಲ್ಲಿ ನೈರ್ಮಲ್ಯ ಜಾಗೃತಿ ಕುರಿತ ವಿಡಿಯೋ ಚಿತ್ರ ಪ್ರದರ್ಶನ ಆಯೋಜಿಸಬೇಕು.  ಮಾ. 07 ರಂದು ಪ್ರತಿ ತಾಲೂಕಿನಿಂದ 10 ಮಹಿಳಾ ಅಧ್ಯಕ್ಷರು ಹಾಗೂ ಪಿಡಿಓ ಗಳನ್ನು ಶ್ರೀರಾಮನಗರಕ್ಕೆ ಕ್ಷೇತ್ರ ಅಧ್ಯಯನ ಭೇಟಿಗಾಗಿ ಆಯಾ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಆಯೋಜಿಸಿ, ವಿಡಿಯೋ ಕಿರುಚಿತ್ರ ಪ್ರದರ್ಶನ ಏರ್ಪಡಿಸಬೇಕು.  ಮಾ. 08 ರಂದು ವಿಶ್ವ ಮಹಿಳಾ ದಿನವನ್ನು ಆಯಾ ಗ್ರಾ.ಪಂ. ಹಾಗೂ ತಾಲೂಕಾ ಪಂಚಾಯತಿಗಳಲ್ಲಿ ಮಹಿಳೆಯರಿಂದ ಶ್ರಮದಾನ ಹಾಗೂ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತಿಳಿಸಿದ್ದಾರೆ.
ಪ್ರಧಾನಿ ಕಾರ್ಯಕ್ರಮಕ್ಕೆ ಜಿಲ್ಲೆಯ ಗ್ರಾ.ಪಂ. ಮಹಿಳಾ ಅಧ್ಯಕ್ಷರು : ವಿಶ್ವ ಮಹಿಳಾ ದಿನಾಚರಣೆಯನ್ನು ಭಾರತ ಸಕಾರ ಗುಜರಾತ್ ರಾಜ್ಯದ ಗಾಂಧಿನಗರದಲ್ಲಿ ಸ್ವಚ್ಛ ಶಕ್ತಿ-2017 ಎಂಬ ಹೆಸರಿನಲ್ಲಿ ಮಾ. 06 ರಿಂದ 08 ರವರೆಗೆ ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೊಪ್ಪಳ ಜಿಲ್ಲೆಯಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ಉತ್ತಮ ಸಾಧನೆ ತೋರಿರುವ ಗ್ರಾಮ ಪಂಚಾಯತಿ ಮಹಿಳಾ ಅಧ್ಯಕ್ಷರುಗಳನ್ನು ಕರೆ ತರುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.  ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಮಹಿಳೆಯರೇ ಅಧ್ಯಕ್ಷರಾಗಿರುವ ಗ್ರಾಮ ಪಂಚಾಯತಿಗಳ ಪೈಕಿ, ಶೌಚಾಲಯ ನಿರ್ಮಾಣ, ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ಉತ್ತಮ ಸಾಧನೆ ತೋರಿರುವ ಪಂಚಾಯತಿಗಳ ಅಧ್ಯಕ್ಷರುಗಳನ್ನು ಪ್ರಧಾನಿಗಳ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿ ಬರಲು ಕೊಪ್ಪಳ ಜಿಲ್ಲಾ ಪಂಚಾಯತಿ ಈಗಾಗಲೆ ಸಿದ್ಧತೆಗಳನ್ನು ಕೈಗೊಂಡಿದೆ.  ಈಗಾಗಲೆ ಇಂತಹ ಪಂಚಾಯತಿಗಳ ಮಹಿಳಾ ಅಧ್ಯಕ್ಷರುಗಳನ್ನು ಗುರುತಿಸಿದ್ದು, ಇವರ ಜೊತೆಗೆ ಜಿಲ್ಲೆಯಲ್ಲಿ ವೈವಿಧ್ಯಮಯ ಕಾರ್ಯಗಳ ಮೂಲಕ ಶೌಚಾಲಯ ಜಾಗೃತಿಗೆ ಜನರ ಗಮನ ಸೆಳೆದಿರುವ 04 ಜನ ಚಾಂಪಿಯನ್ ಮಹಿಳಾ ಸ್ವಚ್ಛಾಗ್ರಹಿಗಳನ್ನು ಕೂಡ ಗುಜರಾತ್‍ಗೆ ಕರೆದುಕೊಂಡ ಹೋಗಲು ತಯಾರಿ ನಡೆದಿದೆ.  ಪ್ರಧಾನಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಲಿರುವವರ ವಿವರ ಇಂತಿದೆ.  ಗಂಗಾವತಿ ತಾಲೂಕು ವಡ್ಡರಹಟ್ಟಿ ಗ್ರಾ.ಪಂ. ಅಧ್ಯಕ್ಷೆ ಸುನಿತಾ ನಿತ್ಯಾನಂದ.  ಚಿಕ್ಕಜಂತಕಲ್- ಹಂಪಮ್ಮ ರೇಣುಕನಗೌಡ, ಉಳೇನೂರು- ಶಾರದಮ್ಮ ಗವಿಸಿದ್ದಪ್ಪ, ಚಿಕ್ಕಮಾದಿನಾಳ-ತಿಪ್ಪಮ್ಮ ಮಲಿಯಪ್ಪ ಬಳ್ಳಾರಿ.  ಕುಷ್ಟಗಿ ತಾಲೂಕಿನ ಹನಮಸಾಗರ- ದಾಕ್ಷಾಯಣಿ ವೀರೇಶ ಕಟಗಿ, ತುಮರಿಕೊಪ್ಪ- ಹನುಮವ್ವ ಮರಿಯಪ್ಪ ಮಾದರ.  ಹಿರೇಗೊನ್ನಾಗರ- ಫಾತಿಮಾ ಇಲಕಲ್,  ಕೊಪ್ಪಳ ತಾಲೂಕಿನ ಹುಲಗಿ- ರೇಣುಕಾ ರಾಮಣ್ಣ, ಅಳವಂಡಿ- ಫಕೀರವ್ವ ಜಂತ್ಲಿ ಹಾಗೂ ಗುಳದಳ್ಳಿ ಗ್ರಾ.ಪಂ. ಅಧ್ಯಕ್ಷೆ ಮಲ್ಲಮ್ಮ ಗವಿಸಿದ್ದಪ್ಪ ಹಡಪದ ಅವರು ಗುಜರಾತ್‍ನಲ್ಲಿ ಜರುಗುವ ಕಾರ್ಯಕ್ರಮಕ್ಕೆ ತೆರಳಲು ಆಯ್ಕೆಯಾಗಿದ್ದಾರೆ.  ಸ್ವಚ್ಛಾಗ್ರಹಿ ಚಾಂಪಿಯನ್ ಮಹಿಳೆಯರಾದ ಡಣಾಪುರದ ಶರಣಮ್ಮ, ಶ್ರೀರಾಮನಗರದ ಗಂಗಮ್ಮ, ಮಂಡಲಗೇರಿಯ ಪದ್ಮಾ ಹಿರೇಮಠ ಹಾಗೂ ಹಿರೇವಂಕಲಕುಂಟಾದ ಗಿರಿಜಾ ಶಿವಪುತ್ರಪ್ಪ ಕೇರಿ ಅವರು ಸಹ ಗುಜರಾತ್‍ಗೆ ತೆರಳುವರು.
     ಸ್ವಚ್ಛ ಶಕ್ತಿ ಸಪ್ತಾಹ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಿ, ಯಶಸ್ವಿಗೊಳಿಸುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಜಿಲ್ಲೆಯ ಎಲ್ಲ ಪಿಡಿಓ ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದ್ದಾರೆ.

Monday, 27 February 2017

ಜನರ ಮನಸೂರೆಗೊಂಡ ಭಾರತ ಭಾಗ್ಯ ವಿಧಾತ : ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ಕೊಪ್ಪಳದ ಜನತೆ

ಕೊಪ್ಪಳ, ಫೆ. 27 (ಕರ್ನಾಟಕ ವಾರ್ತೆ): ಮೈದಾನದ ತುಂಬೆಲ್ಲಾ ‘ಜೈ-ಭೀಮ್’ ಎನ್ನುವ ಜೈಕಾರದ ಉದ್ಘಾರ.  ಭಾರತ ಭಾಗ್ಯ ವಿಧಾತ. . . ನೀ ಸಮತೆಯ ಸಾರಿದ ಧೂತ. . . ಈ ನೆಲದ ನಿಜಾವಧೂತ. . . ಹಾಡಿನ ಮಾರ್ಧನಿ ಇಡೀ ಮೈದಾನದುದ್ದಕ್ಕೂ ಪಸರಿಸಿತು.  

     ಇದು ಕೊಪ್ಪಳ ನಗರದ ಸಾರ್ವಜನಿಕ ಮೈದಾನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿಯ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಭಾರತ ಭಾಗ್ಯ ವಿಧಾತ’ ಕಾರ್ಯಕ್ರಮದ ನಂತರ ಕೇಳಿ ಬಂದ ಮಾರ್ಧನಿಯಾಗಿತ್ತು.

ಬಿರುಸಿನ ಪ್ರದರ್ಶನ, ಬೆರಗುಗೊಳಿಸುವ ನಟನೆ, ಕಣ್ತುಬಿಂಬಿಸುವ ಬೆಳಕಿನ ಲೋಕ, ಕಿವಿದುಂಬಿಸುವ ಹಿನ್ನೆಲೆ ಸಂಗೀತ, ದೇಶಿ ಜಾನಪದ ಕಲೆಗಳ ವೈಭವದಲ್ಲಿ ಅನಾವರಣಗೊಂಡ ವೈಚಾರಿಕ ಕಥಾ ಹಂದರದ ಭಾರತ ಭಾಗ್ಯವಿಧಾತಾ ಸಾವಿರಾರು ಜನರ ಮನೆಗೆದ್ದಿತು. ಜನಪದ ಸೊಗಡಿನೊಂದಿಗೆ ಮೈ ರೋಮಾಂಚನಗೊಳಿಸುವ ಜನಪದ ನೃತ್ಯ, ಗೀತೆ, ಆಧುನಿಕ ರಂಗಭೂಮಿಯ ನವಿರಾದ ಪರಿಕಲ್ಪನೆಗಳನ್ನು ಮೇಳೈಸಿದ ಅಪರೂಪದ ಪ್ರಯೋಗಕ್ಕೆ ಕೊಪ್ಪಳ ನಗರದ ಸಾವಿರಾರು ಮನಸ್ಮ್ಸಗಳು ಸಾಕ್ಷಿಯಾದವು.  ಕಲಾವಿದರ ಮನೋಜ್ಞ ಅಭಿನಯಕ್ಕೆ ಇಲ್ಲಿನ ಜನತೆ ಮನಸೋತರು.  ಭಾರತ ತಳಸಮುದಾಯಗಳ ಆತ್ಮಸ್ಥೈರ್ಯವನ್ನು ನೂರ್ಮಡಿಗೊಳಿಸಿದ ಮಹಾನ್ ಚೇತನ ಡಾ.ಬಿ.ಆರ್. ಅಂಬೇಡ್ಕರ್‍ವರ 125ನೇ ಜಯಂತಿಯ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ  ಆಯೋಜಿಸಿದ ಭಾರತ ಭಾಗ್ಯವಿಧಾತಾ ಧ್ವನಿ ಬೆಳಕು ಕಾರ್ಯಕ್ರಮ ಕಿಕ್ಕಿರಿದ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾಯಿತು.  ಅತ್ಯಂತ ಆಕರ್ಷಕವಾದ ಧ್ವನಿ ಬೆಳಕಿನ ವೈಭವದಲ್ಲಿ ಪಾತ್ರಧಾರಿಗಳ ನೃತ್ಯ, ಅಭಿನಯ, ದೃಶ್ಯದಿಂದ ದೃಶ್ಯಕ್ಕೆ ಪಡೆದುಕೊಳ್ಳುತ್ತಿರುವ ವೇಗ ನೋಡುಗರ ಮನಸ್ಸನ್ನು ಪುಳಕಗೊಳಿಸಿತು. 

ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಒಂದೊಂದು ಕಲಾಪ್ರಕಾರಗಳನ್ನು ಆಯ್ಕೆ ಮಾಡಿಕೊಂಡು, ನವಿರಾದ ಸಮ್ಮಿಶ್ರಣದಲ್ಲಿ ಅಳವಡಿಸಿಕೊಂಡಿದ್ದು, ಪ್ರೇಕ್ಷಕರಿಗೆ ಇಷ್ಟವಾಯಿತು.  ಒಟ್ಟಾರೆ ಪ್ರದರ್ಶನದಲ್ಲಿ ಅಂಬೇಡ್ಕರ್ ಅವರನ್ನು ಎಲ್ಲ ಸಮುದಾಯದ ಒಳಿತಿಗಾಗಿ ಶ್ರಮಿಸಿದ ಮಹಾನ್ ಮಾನವತಾವಾದಿಯಾಗಿ ಪ್ರದರ್ಶನ ಬಿಂಬಿಸುವಲ್ಲಿ ಯಶಸ್ವಿಯಾಯಿತು.
ಬೃಹತ್ತಾದ ವೇದಿಕೆಯಲ್ಲಿ ಪಾದರಸದಂತೆ ಚಲನಶೀಲತೆ ಪಡೆದ 80 ಕಲಾವಿದರ ವಿಭಿನ್ನ ಅಭಿನಯ ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿತು. ಬಿಗಿಯಾದ ಕಥಾಹಂದರ, ಬಿರುಸಿನ ಸಂಭಾಷಣೆ, ವೈಭಯುತ ದೃಶ್ಯಗಳ ಸಂಯೋಜನೆ, ಶ್ರೀಮಂತ ಜನಪದ ಕಲೆಗಳ ಚಿತ್ತಾರ, ನೆರಳು ಬೆಳಕಿನ ದೃಶ್ಯ ವೈಭವದಲ್ಲಿ ಹಾಡು ನೃತ್ಯ, ಸಿನಿಮಿಯ ಶೈಲಿ ಹೀಗೆ ಎಲ್ಲವೂ ಒಳಗೊಂಡ ರಂಜನೀಯ ಅಂಶಗಳ ಜಾನಪದ ಕಲೆಗಳ ಹಂದರದಲ್ಲಿ ನಡೆದ ಅಂಬೇಡ್ಕರ್ ಅವರ ಜೀವನ ಗಾಥೆಯ ಮೆರವಣಿಗೆ ಅಬಾಲವೃದ್ಧರ ಮನಸ್ಸಿನ ಕದತಟ್ಟಿತು. 

 ಭಾರತ ಭಾಗ್ಯ ವಿಧಾತ- ಬೆಳಕು ಮತ್ತು ದೃಶ್ಯ ವೈಭವಗಳ ರೂಪಕ ಕಾರ್ಯಕ್ರಮ ಇಬ್ಬರು ಗೊರವಪ್ಪಗಳ ಸ್ವಾಗತದೊಂದಿಗೆ ತೆರೆದುಕೊಂಡು, ನಂತರ, ಹಂತ, ಹಂತವ ಹಂತವಾಗಿ ಕಥಾ ಹಂದರ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ.

ಇದು ಸಾಪ್ಟವೇರ್ ಇಂಜನಿಯರ್ ಕಥೆಯಲ್ಲ. ಸೋಶಿಯಲ್ ಇಂಜಿನಿಯರ್ ಕಥೆ ಎಂದು ಪಾತ್ರವೊಂದು ನುಡಿಯುತ್ತಿದ್ದಂತೆ ಅಂಬೇಡ್ಕರ ಅವರ ಜೀವನದ ಸಂಕಷ್ಟಗಳ ಸರಮಾಲೆ, ಸ್ವಾಭಿಮಾನದ ಬದುಕಿನ ನಡೆ, ಲೋಕೋದ್ಧಾರದ ಹಾದಿ, ಸೈದ್ಧಾಂತಿಕ ಚರ್ಚೆಗಳು, ರಾಜಕೀಯ ನಾಯಕರ ಭಿನ್ನಾಭಿಪ್ರಾಯ, ರಾಜಿಸಂಧಾನ, ದಲಿತರ, ಶೋಷಿತರ, ಮಹಿಳೆಯರ, ಅಸ್ಪøಶ್ಯರ, ಕಾರ್ಮಿಕರ ಹೀಗೆ ನೋಂದವರ ನೋವಿಗೆ ಸ್ಪಂದಿಸುವ ಚಾರಿತ್ರಿಕ ಹಿನ್ನೋಟಗಳು, ಗೊರವರ ಕುಣಿತ, ಕಂಸಾಳೆ, ವೀರಭದ್ರಕುಣಿತ, ಭೂತಕೊಲ, ಯಕ್ಷಗಾನ, ಬಯಲಾಟ, ಗೀಗೀಪದ, ಡೊಳ್ಳುಕುಣಿತ, ಮರಾಠಿ ನೆಲದ ಮಂಜರಾ ಜನಪದ ನೃತ್ಯ ಮಾಧ್ಯಮದಲ್ಲಿ ಹೊರಹೊಮ್ಮುತ್ತ ನೋಡುಗರ ಮನ, ಮನಸ್ಸನ್ನು ಕಲಕುತ್ತ ಸಾಗಿತು.  ಸಿರಿವಂತೆ ಭೂಮಿತಾಯಿ. . . ಮಳೆಯಲ್ಲಿ ತೋಯುತ್ತಾ. . . .ಅಂಟಿದಾ ಶಾಪದಾ ಕೊಳೆಯನ್ನು ತೊಳೆಯುತ್ತಾ. . . ಎನ್ನುವ ಹಿನ್ನೆಲೆಯಲ್ಲಿ ಬರುವ ಹಾಡು ಕಾರ್ಯಕ್ರಮದ ಗಟ್ಟಿತನವನ್ನು ತೋರಿಸಿದೆ.  ಹಂತ ಹಂತವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಾಲ್ಯ, ತುಂಟತನ, ಪಾಠ ಕಲಿಸಿದ ಗುರುಗಳು, ಮದುವೆ, ಬ್ಯಾರಿಸ್ಟರ್ ಪದವಿ ಪಡೆದದ್ದು, ತಮಗೆ ಆಶ್ರಯ ನೀಡಿದ ಬರೋಡಾದ ಸಯ್ಯಾಜಿ ಮಹಾರಾಜ, ಸಾಹು ಮಹಾರಾಜ್, ಅಂಬೇಡ್ಕರ್ ಸಿದ್ದಾಂತಗಳನ್ನು ಜಾರಿಗೆ ತಂದ ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್, ಅಂಬೇಡ್ಕರ್ ಅವರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದ್ದ ಮಹಾತ್ಮಾ ಗಾಂಧೀಜಿ, ಜವಾಹರಲಾಲ್ ನೆಹರು, ವೇದಿಕೆಯಲ್ಲಿ ಕಾಣಿಸಿಕೊಂಡು, ಗತ ಇತಿಹಾಸವನ್ನು ಕಣ್ಣಿಗೆ ಕಟ್ಟಿಕೊಡುವಲ್ಲಿ ಯಶಸ್ವಿಯಾಯಿತು. 
ಭಾರತೀಯ ಸಾಮಾಜದ ಜಾತಿ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ, ರಾಜಕೀಯ ಒಳನೋಟಗಳನ್ನು ಅತ್ಯಂತ ಸೂಕ್ಷ್ಮವಾಗಿ ಸರಳ ರೀತಿಯಲ್ಲಿ ಜನರಿಗೆ ಅರ್ಥಮಾಡಿಸುತ್ತಾ ಅಂಬೇಡ್ಕರ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತ ಸಾಗುವ ಭಾರತ ಭಾಗ್ಯವಿಧಾತಾ ಎಲ್ಲರ ಮನ ಗೆದ್ದಿತು. ಶೋಷಿತ ಸಮುದಾಯದ ಬದುಕು, ಊರು ಅಥವಾ ಕಚೇರಿಯಲ್ಲಿ ಕುಡಿಯುವ ನೀರಿಗೂ ಅಡ್ಡಿಪಡಿಸುತ್ತಿದ್ದ ಮೇಲ್ವರ್ಗದ ಜನರನ್ನು ಪ್ರತಿಭಟಿಸಿ, ಅಂಬೇಡ್ಕರ್ ಕಲ್ಲೇಟಿಗೆ ಗುರಿಯಾಗಿದ್ದು, ಬಾಡಿಗೆ ಮನೆ ಸಿಗದೆ ಪರಿತಪಿಸಿದ್ದು, ದೌರ್ಜನ್ಯ, ಅವಮಾನ, ದಬ್ಬಾಳಿಕೆಯ ಪ್ರಸಂಗಗಳು,  ಸಮಾಜ ಸುಧಾರಣೆಗಾಗಿ ಅಂಬೇಡ್ಕರ್ ಹಾಕಿಕೊಟ್ಟ ಸೂತ್ರಗಳನ್ನು ಮನಮುಟ್ಟುವಂತೆ ನಿರೂಪಿಸುವಲ್ಲಿ ಪ್ರದರ್ಶನ ಯಶಸ್ವಿಯಾಯಿತು. ಅಂಬೇಡ್ಕರ ಅವರು ಬುದ್ಧ ಧರ್ಮದ ಅನುಯಾಯಿಯಾಗಿ  ವೇದಿಕೆಯಲ್ಲಿ ಶಾಂತಿಮಂತ್ರ ಪಠಣವಾಗುತ್ತಿದ್ದಂತೆ ಜನ ಧನ್ಯತಾಭಾವದತ್ತ ಮುಖ ಮಾಡಿದಂತಿತ್ತು.
 ಅಂಬೇಡ್ಕರ್ ಅವರ ಜೀವನದ ಕೆಲ ನಿಜ ಚಿತ್ರಗಳ ವಿಡಿಯೋ ತುಣುಕುಗಳನ್ನು ವೇದಿಕೆಯ ಎತ್ತರದ ಭಾಗದಲ್ಲಿ ಪ್ರದರ್ಶಿಸಿದ್ದು, ಕಾರ್ಯಕ್ರಮ ಅರ್ಥಪೂರ್ಣಗೊಳಿಸಲು ಪೂರಕವಾಯಿತು.  ಸಂವಿಧಾನದ ಪುಸ್ತಕ ಅನಾವರಣಗೊಳಿಸುವ ಅಂಬೇಡ್ಕರ್ ಪಾತ್ರಧಾರಿ, ಇದಕ್ಕೆ ಜೊತೆಗೂಡಿದ ರಾಷ್ಟ್ರ ಮಹಾನ್ ನಾಯಕರ ಪಾತ್ರಧಾರಿಗಳು ವೇದಿಕೆಯ ಮುಂಭಾಗಕ್ಕೆ ಬರುತ್ತಿದ್ದಂತೆಯೇ ಜನರಿಂದ ಹರ್ಷೋಲ್ಲಾಸದ ಉದ್ಘಾರ ಕೇಳಿಬಂದಿತು.  ಬೌದ್ಧ ಬಿಕ್ಕುವಾಗಿ ದೀಕ್ಷೆ ಸ್ವೀಕರಿಸುವ ಸನ್ನಿವೇಶದೊಂದಿಗೆ ಪ್ರದರ್ಶನಕ್ಕೆ ಅದ್ಧೂರಿ ತೆರೆಕಂಡಿತು.
ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಗಾಥೆಯನ್ನು ನಾವೆಲ್ಲ ಅರ್ಥಮಾಡಿಕೊಂಡು, ಸಮಾಜದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದರು. ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್ ಉಪಸ್ಥಿತರಿದ್ದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ನಿರೂಪಿಸಿದರು.
 ಖ್ಯಾತ ಚಲನಚಿತ್ರ ನಿರ್ದೇಶಕ ಬಿ.ಎಂ. ಗಿರಿರಾಜ ಅವರ ನಿರ್ದೇಶನದಲ್ಲಿ ಭಾರತ ಭಾಗ್ಯವಿಧಾತ ಧ್ವನಿ ಬೆಳಕು ಕಾರ್ಯಕ್ರಮ ಮೂಡಿಬಂದಿದ್ದು, ಇದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರ ಪರಿಕಲ್ಪನೆಯಾಗಿದೆ. ಸಂಗೀತ ನಿರ್ದೇಶನವನ್ನು ಖ್ಯಾತ ಚಲನಚಿತ್ರ ಯುವ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ನೀಡಿದ್ದರೆ.  ಶಶಿಧರ ಅಡಪ ರಂಗವಿನ್ಯಾಸ, ಪದ್ಮಿನಿ ಅಚ್ಚಿ ಅವರ ನೃತ್ಯ ಸಂಯೋಜನೆ, ನಂದಕಿಶೋರ ಅವರ ಬೆಳಕು, ಪ್ರಮೋದ ಶಿಗ್ಗಾಂವಿ ಅವರಿಂದ ವಸ್ತ್ರಾಲಂಕಾರ, ಎಂಪಿಎಂ ವೀರೇಶ್ ಅವರ ಸಹನಿರ್ದೇಶನದಲ್ಲಿ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿತು.

ಕೃಷಿಗೆ ಕಡಿಮೆ ನೀರು ಬಳಕೆಯಾಗುವ ಪದ್ಧತಿಗೆ ಆದ್ಯತೆ ನೀಡಿ - ಕೃಷ್ಣ ಭೈರೇಗೌಡ


ಕೊಪ್ಪಳ, ಫೆ. 27 (ಕರ್ನಾಟಕ ವಾರ್ತೆ): ಕೃಷಿಯಲ್ಲಿ ಕಡಿಮೆ ನೀರು ಬಳಕೆಯಾಗುವ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಬೇಸಾಯ ಕ್ರಮಕ್ಕೆ ರೈತರು ಹೆಚ್ಚಿನ ಆದ್ಯತೆ ನೀಡುವಂತೆ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ರೈತರಲ್ಲಿ ಮನವಿ ಮಾಡಿದರು.
 
ಯಲಬುರ್ಗಾ ತಾಲೂಕು ಮ್ಯಾದನೇರಿ ಗ್ರಾಮದ ಬಸವರಾಜ ದ್ಯಾಮಣ್ಣ ಪೂಜಾರ ಅವರ ಕೃಷಿ ಭೂಮಿಯಲ್ಲಿ ಶೇಂಗಾ ಬೆಳೆಗೆ ತುಂತುರು ನೀರಾವರಿ ಘಟಕ ಅಳವಡಿಕೆ ವೀಕ್ಷಣೆ ಹಾಗೂ ರೈತರೊಂದಿಗೆ ಸೂಕ್ಷ್ಮ ನೀರಾವರಿ ಅಳವಡಿಕೆ ಕುರಿತು ಸಂವಾದ ನಡೆಸಿ, ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಮಳೆಯ ಕೊರತೆ ಕಾಡುವುದು ಸಾಮಾನ್ಯವಾಗಿದೆ. ಇದರಿಂದಾಗಿ ಪದೇ ಪದೇ ಬರ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ರೈತರು ಇಂತಹ ಪರಿಸ್ಥಿತಿಯ ನಡುವೆಯೂ, ನೂತನ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ, ಆರ್ಥಿಕವಾಗಿ ಲಾಭ ಕಂಡುಕೊಳ್ಳಬೇಕಿದೆ. ಲಭ್ಯವಿರುವ ಅಲ್ಪ ಪ್ರಮಾಣದ ನೀರನ್ನು, ಹೊಲಗಳಲ್ಲಿ ಹಾಯಿಸುವ ಪದ್ಧತಿಯಲ್ಲಿ ಕೃಷಿ ಮಾಡಿದರೆ, ನೀರು ಹೆಚ್ಚು ವ್ಯರ್ಥವಾಗಿ ಹರಿಯುವುದಲ್ಲದೆ, ಬೆಳೆಯ ಇಳುವರಿಯೂ ಅಷ್ಟಕ್ಕಷ್ಟೇ ಆಗಿರುತ್ತದೆ. ಅದರ ಬದಲಿಗೆ ಹನಿ ನೀರಾವರಿ ಅಳವಡಿಕೆ ಅಥವಾ ತುಂತುರು ನೀರಾವರಿ ವ್ಯವಸ್ಥೆಯನ್ನು ಅಳವಡಿಸಿದರೆ, ಬೆಳೆಯೂ ಚೆನ್ನಾಗಿ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಕೃಷಿ ಬೆಳೆಗಳಾದ ಶೇಂಗಾ, ಜೋಳ, ಮುಸುಕಿನಜೋಳ, ತೊಗರಿ, ಕಡಲೆ, ರಾಗಿ ಹೀಗೆ ಯಾವುದೇ ಬೆಳೆಯಾದರೂ ತುಂತುರು ನೀರಾವರಿಯಿಂದ ಬೆಳೆಯನ್ನು ಉತ್ತಮವಾಗಿ ಪಡೆಯಬಹುದು ಎಂಬುದು ಸಾಬೀತಾಗಿದೆ. ಈ ಕುರಿತಂತೆ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಡುವ ಹಾಗೂ ಜಾಗೃತಿ ಮೂಡಿಸುವುದು ಅಗತ್ಯವಿದೆ. ಕೃಷಿಹೊಂಡ, ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಯೋಜನೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೃಷಿ ಇಲಾಖೆ ವತಿಯಿಂದ ಸುಮಾರು 01 ಲಕ್ಷ ರೈತರಿಗೆ 320 ಕೋಟಿ ರೂ. ಅನುದಾನವನ್ನು ಹನಿ ನೀರಾವರಿ ವ್ಯವಸ್ಥೆ ಅಳವಡಿಕೆಗಾಗಿಯೇ ಬಿಡುಗಡೆ ಮಾಡಿದ್ದೇವೆ. ಬರುವ ಮಾರ್ಚ್ ವೇಳೆಗೆ ರಾಜ್ಯದಲ್ಲಿ 50 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಗುರಿ ಸಾಧನೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರೇ ಕೃಷಿ ಹೊಂಡಗಳನ್ನು ನಿರ್ಮಿಸಲು ಹೆಚ್ಚಿನ ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ. ಮಳೆಯ ಪ್ರಮಾಣ ನಿರೀಕ್ಷಿತ ಪ್ರಮಾಣ ಹಾಗೂ ಕಾಲಕ್ಕೆ ತಕ್ಕಂತ ಆಗದಿದ್ದಲ್ಲಿ, ಕೃಷಿ ಹೊಂಡದಲ್ಲಿ ಲಭ್ಯವಿರುವ ನೀರನ್ನು, ಹನಿ ನೀರಾವರಿ ಅಥವಾ ತುಂತುರು ನೀರಾವರಿ ವ್ಯವಸ್ಥೆಗೆ ಬಳಕೆ ಮಾಡಿಕೊಂಡು, ಬೆಳೆ ರಕ್ಷಿಸಿಕೊಳ್ಳುವ ಜೊತೆಗೆ, ಉತ್ತುಮ ಇಳುವರಿ ಪಡೆಯಬಹುದಾಗಿದೆ. ಇಂತಹ ಜನಪ್ರಿಯ ಹಾಗೂ ಅತ್ಯುಪಯುಕ್ತ ಯೋಜನೆಯ ಬಗ್ಗೆ ರೈತರೇ ತಮ್ಮ ತಮ್ಮ ಅನುಭವವನ್ನು ಇತರೆ ರೈತರೊಂದಿಗೆ ಹಂಚಿಕೊಳ್ಳಬೇಕು. ಇತರೆ ರೈತರಿಗೆ ಉತ್ತೇಜನ ನೀಡುವಂತಾಗಬೇಕು ಎಂದು ಕೃಷಿ ಸಚಿವ ಭೈರೇಗೌಡ ಅವರು ಹೇಳಿದರು.
ಇದಕ್ಕೂ ಪೂರ್ವದಲ್ಲಿ ಸಚಿವ ಕೃಷ್ಣ ಭೈರೇಗೌಡ ಅವರು ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದ ಬೀರಪ್ಪ ಅಂಗಡಿ ಅವರ ಕೃಷಿ ಭೂಮಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕೃಷಿ ಹೊಂಡದ ವೀಕ್ಷಣೆ ಹಾಗೂ ಇದೇ ಗ್ರಾಮದ ದೇವಪ್ಪ ನೀಲನಗೌಡ ಅವರ ಕೃಷಿ ಭೂಮಿಯಲ್ಲಿ ಉತ್ತಮವಾಗಿ ನಿರ್ಮಿಸಲಾಗಿರುವ ಕೃಷಿ ಹೊಂಡದ ವೀಕ್ಷಣೆ ಮಾಡಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಜಿ.ಪಂ. ಸದಸ್ಯ ಗವಿಸಿದ್ದಪ್ಪ ಕರಡಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ್ ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್, ಉಪಕೃಷಿ ನಿರ್ದೇಶಕ ವೀರೇಶ್ ಹುನಗುಂದ ಸೇರಿದಂತೆ ಹಲವು ಅಧಿಕಾರಿಗಳು, ಜನಪ್ರತಿನಿಧಿಗಳು, ಪ್ರಗತಿಪರ ರೈತರು ಉಪಸ್ಥಿತರಿದ್ದರು.

ಫೆ.28 ರಂದು ಹುಲಿಗಿ ಗ್ರಾಮದಲ್ಲಿ ಗಿರಿಜನ ಉತ್ಸವ ಕಾರ್ಯಕ್ರಮ


ಕೊಪ್ಪಳ, ಫೆ. 27 (ಕರ್ನಾಟಕ ವಾರ್ತೆ): ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಗಿರಿಜನ ಉಪಯೋಜನೆಯಡಿಯಲ್ಲಿ ಗಿರಿಜನ ಉತ್ಸವ ಕಾರ್ಯಕ್ರಮವನ್ನು ಫೆ.28 ರಂದು ಸಂಜೆ 5-00 ಗಂಟೆಗೆ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮದೇವಿ ದೇವಸ್ಥಾನ ಆವರಣದಲ್ಲಿ ಆಯೋಜಿಸಲಾಗಿದೆ.
      ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಉದ್ಘಾಟನೆ ನೆರೆವೇರಿಸುವರು.  ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿ.ಪ.ಂ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ್ ಎಸ್. ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ ಹಾಗೂ ಶರಣಪ್ಪ ಮಟ್ಟೂರ ಪಾಲ್ಗೊಳ್ಳುವರು.
    ಅತಿಥಿಗಳಾಗಿ ಜಿ.ಪಂ ಉಪಾಧ್ಯಕ್ಷೆ ಲಕ್ಷಮ್ಮ ಎಸ್. ನೀರಲೂಟಿ, ಹುಲಿಗಿ ಗ್ರಾ.ಪಂ ಅಧ್ಯಕ್ಷೆ ರೇಣುಕಾ ರಾಮಣ್ಣ, ಉಪಾಧ್ಯಕ್ಷ ದುರಗಪ್ಪ ಭೋವಿ, ಜಿ.ಪಂ. ಸದಸ್ಯೆ ಗಾಯಿತ್ರಿ ವೆಂಕಟೇಶ, ತಾ.ಪಂ ಸದಸ್ಯ ಜಿ. ಪಾಲಕ್ಷಪ್ಪ, ತಹಶಿಲ್ದಾರ ಕೆ.ಎ. ಗುರುಬಸವರಾಜ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಮೂರ್ತಿ, ಸಿ.ಪಿಐ. ರುದ್ರೇಶ ಎಸ್. ಉಜ್ಜನಕೊಪ್ಪ, ಹುಲಿಗೆಮ್ಮದೇವಿ ಆಡಳಿತ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್. ಚಂದ್ರಮೌಳಿ, ಜಿ.ಪಂ ಮಾಜಿ ಅಧ್ಯಕ್ಷ ಟಿ.ಜನಾರ್ಧನ,  ಹುಲಿಗೆಮ್ಮದೇವಿ ದೇವಸ್ಥಾನ ಸಮಿತಿ ಸದಸ್ಯರುಗಳಾದ ಈ. ಈರಣ್ಣ ಹಾಗೂ ಕಪಾತೆಪ್ಪ ಕಂಪಸಾಗರ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಉಪಸ್ಥಿತರಿರುವರು.
ಜಾನಪದ ಕಲಾ ತಂಡಗಳ ಪ್ರದರ್ಶನ : ಕುಣಕೇರಿಯ ಯಮನೂರಪ್ಪ ಹಾಗೂ ತಂಡದಿಂದ ಜಾಂಜ್ ಮೇಳ.  ಕಂಪ್ಲಿಯ ಶಿಕಾರಿ ರಾಮು ಹಾಗೂ ತಂಡದಿಂದ ತಾಷಾ ರಂಡೋಲ್ ಹಾಗೂ ಜಾನಕಿ ಹಾಗೂ ತಂಡದಿಂದ ಹಕ್ಕಿ-ಪಿಕ್ಕಿ ನೃತ್ಯ ಪ್ರದರ್ಶನಗೊಳ್ಳಲಿದೆ.
ಸಾಂಸ್ಕøತಿಕ ಕಾರ್ಯಕ್ರಮ :  ಭಾಗ್ಯನಗರದ ನಾಗರಾಜ ಶ್ಯಾವಿ ತಂಡದಿಂದ ಬಾನ್ಸುರಿ ವಾದನ.  ಕೀರ್ತಿ ಮೇಟಿ ಯಿಂದ ಸುಗಮ ಸಂಗೀತ.  ತಗ್ಗಿಹಾಳದ ಬಸಪ್ಪ ಚೌಡ್ಕಿ ಹಾಗೂ ತಂಡದಿಂದ ಚೌಡ್ಕಿ ಪದಗಳು.  ನಾಗರಾಜ ಬೇಳೂರು ಹಾಗೂ ತಂಡದಿಂದ ರಂಗ ಗೀತೆಗಳು.  ಯಲಬುರ್ಗಾದ ರಂಜೀತಾ ಲಕಮಾಪೂರ ಹಾಗೂ ತಂಡದಿಂದ ಭರತನಾಟ್ಯ.  ಕನಕನಗೌಡ ಪೊಲೀಸ್ ಪಾಟೀಲ್ ಹಾಗೂ ತಂಡದಿಂದ ತತ್ವ ಪದಗಳು.  ರಾಮಪ್ಪ ಪೂಜಾರ ಹಾಗೂ ತಂಡದಿಂದ ದಾಸವಾಣಿ.  ನವಲಿಯ ಗೋಪಾಲ ನಾಯಕ ಹಾಗೂ ತಂಡದಿಂದ ಭಜನಾ ಪದಗಳು.  ಹನುಮಂತ ಎಸ್. ನರೇಗಲ್ಲ ಹಾಗೂ ತಂಡದಿಂದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ.  ಗ್ಯಾನಪ್ಪ ತಳವಾರ ಹಾಗೂ ತಂಡದಿಂದ ಜಾನಪದ ಸಂಗೀತ.  ಮಾನಪ್ಪ ವಜ್ರಬಂಡಿ ಹಾಗೂ ತಂಡದಿಂದ ರಂಗ ಗೀತೆ.  ಕೊಪ್ಪಳದ ರಿದಂ ಡ್ಯಾನ್ಸ್ ಗ್ರೂಫ್ ವತಿಯಿಂದ ನೃತ್ಯ ಪ್ರದರ್ಶನ.  ಕುಷ್ಟಗಿಯ ವಾಲ್ಮೀಕಿ ಹ. ಎಕ್ಕರನಾಳ ಹಾಗೂ ತಂಡದಿಂದ ಬೀಸುವ ಪದಗಳು.  ಕುಣಿಕೇರಿಯ ಮುದಕಪ್ಪ ಹಾಗೂ ತಂಡದಿಂದ ಬಯಲಾಟ ದೃಶ್ಯಾವಳಿ.  ಗಂಗಾವತಿಯ ಸಂಗೀತಾ ಹಾಗೂ ತಂಡದಿಂದ ಸುಗಮ ಸಂಗೀತ.  ಕೊಡತಗೇರಿಯ ಭೀಮಪ್ಪ ಪೂಜಾರ ಹಾಗೂ ತಂಡದಿಂದ ತತ್ವ ಪದ.  ತರ್ಲಕಟ್ಟಿಯ ರಂಗಪ್ಪ ಹಾಗೂ ತಂಡದಿಂದ ಗೀಗೀ ಪದಗಳು.  ಹುಲಗಿಯ ಶೃತಿ ಹ್ಯಾಟಿ ಹಾಗೂ ತಂಡದಿಂದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ.  ಮ್ಯಾದ್ನೇರಿಯ ದೇವೇಂದ್ರಗೌಡ ಹಾಗೂ ತಂಡದಿಂದ ಜಾನಪದ ಸಂಗೀತ.  ನಾಗರಾಜ ನಿಡಗುಂದಿ ಹಾಗೂ ತಂಡದಿಂದ ವಚನ ಸಂಗೀತ.  ಬಾಲನಗೌಡ ಹಾದಿಮಿ ಹಾಗೂ ತಂಡದಿಂದ ಭಜನೆ.  ಮತ್ತು ಹುಲಗಿಯ ಸುಭಾಷ ಚಂದ್ರ ಭುವನೇಶ್ವರಿ ನಾಟ್ಯ ಸಂಘದಿಂದ “ರತ್ನ ಸಿಂಹಾಸನ” ಎಂಬ ನಾಟಕ ಪ್ರಸರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ತಿಳಿಸಿದ್ದಾರೆ.

Saturday, 25 February 2017

ಫೆ. 28 ರಂದು ಯಲಬುರ್ಗಾದಲ್ಲಿ ಎಸಿಬಿ ಯಿಂದ ಕುಂದುಕೊರತೆ ಹಾಗೂ ದೂರು ಸ್ವೀಕಾರ

ಕೊಪ್ಪಳ, ಫೆ. 25 (ಕರ್ನಾಟಕ ವಾರ್ತೆ):  ಆರಕ್ಷಕ ಉಪಾಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ, ಕೊಪ್ಪಳ ಇವರು ಫೆ. 28 ರಂದು ಯಲಬುರ್ಗಾದ ಹಳೆ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ರಿಂದ ಮದ್ಯಾಹ್ನ 3 ಗಂಟೆಯವರೆಗೆ ಸಾರ್ವಜನಿಕರಿಂದ ಕುಂದು ಕೊರತೆಗಳ ದೂರು ಸ್ವೀಕರಿಸಿ, ಅಹವಾಲು ಆಲಿಸಲಿದ್ದಾರೆ.
       ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಬಗ್ಗೆ ಅರ್ಜಿಗಳನ್ನು ನೀಡಿ ಸದುಪಯೋಗ ಪಡೆಯಬಹುದು ಹಾಗೂ ಸರ್ಕಾರಿ ಸೌಕರರು ಲಂಚದ ಹಣಕ್ಕೆ ಬೇಡಿಕೆ ಹಾಗೂ ಅಕ್ರಮ ಸಂಪತ್ತು ಹೊಂದಿದ್ದಲ್ಲಿ ದೂರು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಆರಕ್ಷಕ ಉಪಾಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ, ಪಿಡಬ್ಲೂಡಿ ಕ್ವಾಟ್ರಸ್ ನಂ-5, ಈಶ್ವರ ಗುಡಿ ಹಿಂದುಗಡೆ, ಕೊಪ್ಪಳ ದೂ.ಸಂ: 08539-221833, ಮೊ-9480806319, 9480806320 ಅಥವಾ ಇ-ಮೇಲ್ ವಿಳಾಸ  dspkpl.acb@karnataka.gov.in ಇಲ್ಲಿಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಎಸಿಬಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೃಷಿ ಸಚಿವರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಫೆ. 25 (ಕರ್ನಾಟಕ ವಾರ್ತೆ): ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಫೆ. 27 ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಅಂದು ಬೆಳಿಗ್ಗೆ 08 ಗಂಟೆಗೆ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಕೊಪ್ಪಳಕ್ಕೆ ಆಗಮಿಸುವರು.  ಬೆ. 9-45 ಗಂಟೆಗೆ ತಾಲೂಕಿನ ಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳ ಪ್ರಗತಿ ವೀಕ್ಷಣೆ ಮಾಡುವರು.  ಬೆ. 11 ಗಂಟೆಗೆ ಯಲಬುರ್ಗಾ ತಾಲೂಕು ಮ್ಯಾದನೇರಿ ಗ್ರಾಮಕ್ಕೆ ಭೇಟಿ ನೀಡಿ ಶೇಂಗಾ ಬೆಳೆಗಳಿಗೆ ತುಂತುರು ನೀರಾವರಿ ಅಳವಡಿಸಿರುವ ಹೊಲಗಳಿಗೆ ಭೇಟಿ ನೀಡುವರು.  ಮಧ್ಯಾಹ್ನ 12-30 ಗಂಟೆಗೆ ಕುಷ್ಟಗಿ ತಾಲೂಕಿನ ಕಲಕೇರಿ ಗೋಶಾಲೆಗೆ ಭೇಟಿ ನೀಡುವರು.  ನಂತರ ಮಧ್ಯಾಹ್ನ 1 ಗಂಟೆಗೆ ಇಳಕಲ್‍ಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಉಜ್ವಲ ಯೋಜನೆ : ಅನಿಲ ಸಂಪರ್ಕ ಪಡೆಯಲು ಅರ್ಜಿ ಆಹ್ವಾನ

ಕೊಪ್ಪಳ, ಫೆ.25(ಕರ್ನಾಟಕ ವಾರ್ತೆ): ಭಾರತ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ರಾಜ್ಯದ ಸಾಮಾಜಿಕ, ಆರ್ಥಿಕ, ಜಾತಿ, ಗಣತಿ-2011ರ ದತ್ತಾಂಶದ (ಎನ್.ಐ.ಸಿ) ಅಡಿಯಲ್ಲಿ ಅಡುಗೆ ಅನಿಲ ಸಂಪರ್ಕ ಪಡೆಯಲು ಅರ್ಹರಿರುವ ಫಲಾನುಭವಿಗಳ ಪಟ್ಟಿಯನ್ನು ಈಗಾಗಲೆ ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಹೆಸರಿದ್ದು, ಇದುವರೆಗೂ ಅಡುಗೆ ಅನಿಲ ಸಂಪರ್ಕ ಹೊಂದಿಲ್ಲದ ಕುಟುಂಬದವರು ಉಜ್ಜಲ ಯೋಜನೆಯಡಿ ಅನಿಲ ಸಂಪರ್ಕ ಪಡೆಯಲು ಅರ್ಹರಾಗಿರುತ್ತಾರೆ. ಯೋಜನೆಯಡಿ ಅನಿಲ ಸಂಪರ್ಕವನ್ನು ಕುಟುಂಬದ  ವಯಸ್ಕ ಮಹಿಳೆಯ ಹೆಸರಿನಲ್ಲಿ ಮಾತ್ರ ನೀಡಲು ಅವಕಾಶವಿರುತ್ತದೆ.  ಅರ್ಹ ಫಲಾನುಭವಿಗಳು ಸಮೀಪದ ಅಡುಗೆ ಅನಿಲ ವಿತರಣಾ ಕೇಂದ್ರಗಳಲ್ಲಿ ಆನ್‍ಲೈನ್ ಮೂಲಕ ಅಗತ್ಯವಾದ ಆಧಾರ ಕಾರ್ಡ ಇತರೆ  ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ಅನಿಲ ಸಂಪರ್ಕವನ್ನು ಪಡೆಯಬಹುದು.  ಅರ್ಹ ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.27 ರಂದು ಕೊಪ್ಪಳದಲ್ಲಿ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಉದ್ಘಾಟನೆ

ಕೊಪ್ಪಳ, ಫೆ.25(ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಇವರ ಸಹಯೋಗದಲ್ಲಿ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಉದ್ಘಾಟನೆ ಫೆ.27 ರಂದು ಕೊಪ್ಪಳದ ದಿವಟರ್ ಸರ್ಕಲ್ ಹತ್ತಿರ, ಜವಹಾರ ರಸ್ತೆಯ ಬಳಿಗಾರ್ ಬಿಲ್ಡಿಂಗ್‍ನಲ್ಲಿ ನಡೆಯಲಿದೆ.
    ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು.  ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಉದ್ಘಾಟನೆ ನೆರೆವೇರಿಸುವರು. ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ಸಂಗಣ್ಣ ಕರಡಿ, ಜಿ.ಪ.ಂ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಖಾಜಾವಲಿ ಬನ್ನಿಕೊಪ್ಪ, ನಗರಸಭೆ ಸದಸ್ಯರಾದ ಚನ್ನಪ್ಪ ಕೊಟ್ಯಾಳ ಮತ್ತು ಶರಣಪ್ಪ ಚಂದನಕಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್ ಕಲಾದಗಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಮರಾವ್ ಬಿ.ವಿ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರುಪಣಾಧಿಕಾರಿ ಮಂಜುನಾಥ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಮಲಪ್ಪ, ಗಣ್ಯರಾದ ಸುರೇಶ ಭೂಮರಡ್ಡಿ ಪಾಲ್ಗೊಳ್ಳುವರು ಎಂದು ಡಾ.ಬಿ.ಆರ್ ಅಂಬೇಡ್ಕರ್ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಡಾ. ಜ್ಞಾನಸುಂದರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.27 ರಂದು ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ ಕಾರ್ಯಕ್ರಮ

ಕೊಪ್ಪಳ, ಫೆ.25(ಕರ್ನಾಟಕ ವಾರ್ತೆ): ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ವತಿಯಿಂದ ಜಿಲ್ಲಾ ಮಟ್ಟದ ಯುವಜನ ಮೇಳ ಕಾರ್ಯಕ್ರಮವನ್ನು ಕೊಪ್ಪಳ ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಫೆ.27 ರಂದು ಬೆಳಿಗ್ಗೆ 9.30 ಗಂಟೆಗೆ ಏರ್ಪಡಿಸಲಾಗಿದೆ.
    ಈ ಮೊದಲು ಕೊಪ್ಪಳ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಮಾ. 01 ರಂದು ನಡೆಸಲು ದಿನಾಂಕ ನಿದಗಿಪಡಿಸಲಾಗಿತ್ತು.  ಆದರೆ, ರಾಜ್ಯ ಮಟ್ಟದ ಯುವಜನ ಮೇಳ ಮಾರ್ಚ್.03 ರಿಂದ 05ರವರೆಗೆ ಉಡುಪಿಯಲ್ಲಿ ಹಾಗೂ ವಿಭಾಗ ಮಟ್ಟದ ಯುವಜನ ಮೇಳ ಫೆ.28 ರಿಂದ ಮಾರ್ಚ್.01 ರವರೆಗೆ ಬಳ್ಳಾರಿಯಲ್ಲಿ ನಡೆಯಲಿರುವುದರಿಂದ, ಕೊಪ್ಪಳ ಜಿಲ್ಲಾ ಮಟ್ಟದ ಯುವಜನ ಮೇಳದ ದಿನಾಂಕವನ್ನು ಹಿಂದೂಡಿ, ಫೆ. 27 ರಂದು ನಡೆಸಲು ನಿರ್ಧರಿಸಲಾಗಿದೆ.
ಕಾರ್ಯಕ್ರಮದಲ್ಲಿ ಭಾವಗೀತೆ, ಜಾನಪದ ಗೀತೆ, ರಂಗಗೀತೆ, ಜಾನಪದ ನೃತ್ಯ, ಗೀಗಿ ಪದಗಳು, ಲಾವಣಿ, ಕೋಲಾಟ, ಭಜನೆ, ಜೋಳ-ರಾಗಿ ಬೀಸುವ ಪದ, ಸೋಬಾನ ಪದಗಳು, ಏಕಪಾತ್ರಾಭಿನಯ, ವೀರಗಾಸೆ ಪುರವಂತಿಕೆ, ಡೋಳ್ಳು ಕುಣಿತ, ದೊಡ್ಡಾಟ, ಸಣ್ಣಾಟ, ಚರ್ಮವಾದ್ಯ ಮೇಳ, ಯಕ್ಷಗಾನ ಸೇರಿದಂತೆ ಒಟ್ಟು 17 ಸ್ಪರ್ದೆಗಳು ನಡೆಸಲಾಗುವುದು.
    ಕೊಪ್ಪಳ ಜಿಲ್ಲೆಯ ನಾಲ್ಕು ತಾಲ್ಲೂಕುಗಳಾದ ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ತಾಲ್ಲೂಕ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಿ ವೈಯಕ್ತಿಕ ಸ್ಪರ್ದೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಹಾಗೂ ಗುಂಪು ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಯುವಕ-ಯುವತಿಯರು ಮಾತ್ರ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಲು ಅರ್ಹರು.  ಅರ್ಹ ಸ್ಪರ್ದಾಳುಗಳು ತಮ್ಮ ವೇಶ ಭೂಷಣ, ವಾದ್ಯ ಮೇಳಗಳೊಂದಿಗೆ ಫೆ.27 ರಂದು ಬೆಳಿಗ್ಗೆ 9.00 ಗಂಟೆಯೊಳಗೆ ಸಂಘಟಕರಲ್ಲಿ ವರದಿ ಮಾಡಿಕೊಂಡು ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು.  ವಯೋಮಿತಿ 15 ರಿಂದ 35 ವರ್ಷದೊಳಗಿರಬೇಕು.  ಸ್ಪರ್ಧಾಳುಗಳಿಗೆ ಆಯಾ ತಾಲ್ಲೂಕು ಕೇಂದ್ರ ಸ್ಥಾನದಿಂದ ಸಂಘಟನೆ ನಡೆಯುವ ಕೇಂದ್ರ ಸ್ಥಾನಕ್ಕೆ ಬಂದು ಹೋಗುವ ಸಾಮಾನ್ಯ ಬಸ್ ದರವನ್ನು ನೀಡಲಾಗುವುದು.  ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಿಬ್ಬಂದಿ ಕೆ.ಎಂ ಪಾಟೀಲ್ ಇವರ ಮೊಬೈಲ್ ಸಂಖ್ಯೆ 9482847320, 7899432227 ಗೆ ಸಂರ್ಪಕಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Friday, 24 February 2017

ಫೆ. 26 ರಂದು ಕೊಪ್ಪಳದಲ್ಲಿ ಭಾರತ ಭಾಗ್ಯ ವಿಧಾತ- ಧ್ವನಿ ಬೆಳಕು ದೃಶ್ಯ ವೈಭವಗಳ ರೂಪಕ


ಕೊಪ್ಪಳ ಫೆ. 23 (ಕರ್ನಾಟಕ ವಾರ್ತೆ): ಭಾರತ ಭಾಗ್ಯ ವಿಧಾತ ಧ್ವನಿ ಬೆಳಕು ದೃಶ್ಯ ವೈಭವಗಳ ರೂಪಕ ಕಾರ್ಯಕ್ರಮವವನ್ನು ಕೊಪ್ಪಳ ಜಿಲ್ಲಾಡಳಿತದ ಸಹಯೋಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕೊಪ್ಪಳ ನಗರದ ಸಾರ್ವಜನಿಕ ಮೈದಾನದಲ್ಲಿ ಫೆ. 26 ರಂದು ಸಂಜೆ 6-30 ಗಂಟೆಗೆ ಆಯೋಜಿಸಿದೆ.
     ಭಾರತ ಭಾಗ್ಯ ವಿಧಾತ- ಇದು ಭಾರತದ ತಳ ಸಮುದಾಯಗಳ ಆತ್ಮಸ್ಥೈರ್ಯವನ್ನು ನೂರ್ಮಡಿಗೊಳಿಸಿದ ಮಹಾ ಚೇತನದ ಜೀವನ ಚರಿತೆ.  ನೊಂದವರ ನೋವಿಗೆ ದನಿಯಾಗಿ ನಿಂತ ಧೀಮಂತ ನಾಯಕ ಆತ್ಮಕತೆ.  ತನ್ನ ಪ್ರತಿಭೆ, ಪರಿಶ್ರಮಗಳಿಂದ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿ, ಪುರಸ್ಕಾರ ಗಳಿಸಿದ ಆರ್ಥಿಕ ತಜ್ಞನ ಯಶೋಗಾಥೆ.  ಭಾರತದ ಸಂವಿಧಾನದ ಶಿಲ್ಪಿಯೆಂದೇ ಖ್ಯಾತರಾದ ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವಗಾಥೆ.
     ಭಾರತ ಭಾಗ್ಯ ವಿಧಾತ- ಅತ್ಯಂತ ಅಪರೂಪದ ವೈಭವಪೂರಿತ ದೃಶ್ಯ ವೈಭವಗಳ ಅದ್ಧೂರಿ ಕಾರ್ಯಕ್ರಮ.  ನಾಡಿನ ವಿವಿಧ ಜಿಲ್ಲೆಗಳಿಂದ ಆಯ್ಕೆ ಮಾಡಿ, ತರಬೇತಿ ಹೊಂದಿದ ಸುಮಾರು 75 ರಂಗಕಲಾವಿದರು ಕೊಪ್ಪಳ ನಗರದ ಸಾರ್ವಜನಿಕ ಮೈದಾನದಲ್ಲಿ ನಿರ್ಮಿಸಿರುವ ಬೃಹತ್ ಧ್ವನಿ ಬೆಳಕಿನ ವೇದಿಕೆಯಲ್ಲಿ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ.
ನೆರಳು ಬೆಳಕು- ಧ್ವನಿಯ ವೈಭವ ಅನಾವರಣ :
****************** ಖ್ಯಾತ ಚಲನಚಿತ್ರ ನಿರ್ದೇಶಕ ಬಿ.ಎಂ. ಗಿರಿರಾಜ ಭಾರತ ಭಾಗ್ಯವಿಧಾತ ಧ್ವನಿ ಬೆಳಕು ಕಾರ್ಯಕ್ರಮದ ನಿರ್ದೇಶನ ಮಾಡಲಿದ್ದಾರೆ.  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಈ ಕಾರ್ಯಕ್ರಮದ ಸಂಗೀತ ನಿರ್ದೇಶನವನ್ನು ಖ್ಯಾತ ಚಲನಚಿತ್ರ ಯುವ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ನೀಡಿದ್ದಾರೆ.  ಶಶಿಧರ ಅಡಪ ರಂಗವಿನ್ಯಾಸ, ಪದ್ಮಿನಿ ಅಚ್ಚಿ ಅವರ ನೃತ್ಯ ಸಂಯೋಜನೆ, ನಂದಕಿಶೋರ ಅವರ ಬೆಳಕು, ಪ್ರಮೋದ ಶಿಗ್ಗಾಂವಿ ಅವರಿಂದ ವಸ್ತ್ರಾಲಂಕಾರ, ಎಂಪಿಎಂ ವೀರೇಶ್ ಅವರ ಸಹನಿರ್ದೇಶನದಲ್ಲಿ ಧ್ವನಿ ಬೆಳಕಿನ ವೈಭವವನ್ನು ಅನಾವರಣಗೊಳಿಸಲಿದ್ದಾರೆ.
     ದೃಶ್ಯ ಕಾವ್ಯದ ಈಕಾರ್ಯಕ್ರಮ ವೈಚಾರಿಕ ಹಿನ್ನೆಲೆಯಲ್ಲಿ ಅರಳುವ ಕಥಾಹಂದರ ನೋಡುಗರನ್ನು ಚಿಂತನೆಗೆ ತೊಡಗಿಸಲಿದೆ.  ಹದವರಿತ ಕಥೆ, ದೇಶಿ ಕಲೆಗಳ ನೃತ್ಯ ರೂಪಕ ಕಣ್ತುಂಬಿಸುವ ಬೆಳಕಿನ ಲೋಕ, ಕಿವಿಗೆ ಇಂಪಾಗಿರುವ ಹಿನ್ನೆಲೆಯ ಸಂಗೀತ ಮೈ ಮರೆಸುವಂತೆ ಮಾಡಲಿದೆ.
ಮಹಾಗೌರವಕ್ಕೆ ಪಾತ್ರರಾದ ಮಹಾತ್ಮಾ ಗಾಂಧೀಜಿ :
**************** ನಮ್ಮ ಭಾರತ ದೇಶ ಹಲವಾರು ಮಹನೀಯರ ಕರ್ಮಭೂಮಿ.  ಸತ್ಯ, ಶಾಂತಿ, ಅಹಿಂಸೆಯೆಂಬ ಮಹಾ ಮೌಲ್ಯಗಳ ಮೂಲಕ ನಮ್ಮ ನಾಡಿಗೆ ಸ್ವಾತಂತ್ರ್ಯ ದೊರಕಿಸಿ, ಭಾರತದ ರಾಷ್ಟ್ರಪಿತ ಎಂಬ ಮಹಾ ಗೌರವಕ್ಕೆ ಪಾತ್ರರಾದವರು ಮಹಾತ್ಮಾ ಗಾಂಧೀಜಿಯವರು.  ಹಾಗೆಯೇ ನಮ್ಮ ಭಾರತದ ತಳ ಸಮುದಾಯಗಳ ಆತ್ಮಸ್ಥೈರ್ಯಕ್ಕೆ ಅಡಿಗಲ್ಲಾಗಿ ನಿಂತು ಶತಮಾನಗಳ ಶೋಷಣೆಗೆ ಸಂವಿಧಾನ ರಚನೆಯ ಮೂಲಕ ವಿದಾಯ ಹೇಳಿದವರು ಡಾ. ಬಿ.ಆರ್. ಅಂಬೇಡ್ಕರ್ ಅವರು.
     ಮಹಾರಾಷ್ಟ್ರದ ಮಹಾರ್ ತಳಸಮುದಾಯದಲ್ಲಿ ಜನಿಸಿದ ಅಂಬೇಡ್ಕರ್ ಅಪಮಾನಗಳ ನಡುವೆಯೇ ಬಾಳಿ ಬದುಕಿ ಭಾರತದ ಮಹಾನ್ ಚೇತನವಾಗಿ ಬೆಳಗಿದ ಕಥೆ ಬೆರಗುಗೊಳಿಸುವಂತಹದು.  ಶಾಲಾ ಬಾಲಕನಾಗಿದ್ದಾಗ ತನ್ನದೇ ನಾಡಿನಲ್ಲಿ ಮೇಲ್ವರ್ಗದವರಿಂದ ಅವಮಾನಿರಾಗಿ, ಗಾಡಿಯಿಂದ ಕೆಳಗೆ ದೂಡಿಸಿಕೊಂಡು ಅಪಮಾನ ಅನುಭವಿಸಿದ ಘಟನೆ ಹಾಗೂ ಗಾಂಧೀಜಿಯವರು ದಕ್ಷಿಣ ಆಫ್ರಿಕದ ಡರ್ಬಾನ್‍ನಲ್ಲಿ ಬಿಳಿ ವರ್ಣೀಯರಿಂದ ರೈಲಿನಿಂದ ಕೆಲಗೆ ದೂಡಿಸಿಕೊಂಡ ಘಟನೆಗಳೆರಡೂ, ಈ ಇಬ್ಬರು ಮಹಾನ್ ಚೇತನಗಳ ಬದುಕಿನಲ್ಲಿ ಮಹತ್ತರ ಘಟನೆಗಳಾಗಿವೆ.  ಈ ಎರಡೂ ಘಟನೆಗಳ ನಂತರವೇ ಈ ಇಬ್ಬರೂ ತಾವು ಅನುಭವಿಸಿದ ಅಪಮಾನ, ನೋವುಗಳನ್ನು ತಮ್ಮ ಸಮುದಾಯದವರು ಅನುಭವಿಸಬಾರದೆಂದು ದೃಢ ಸಂಕಲ್ಪ ತಳೆದು, ತಮ್ಮ ಬದುಕನ್ನೇ ದೇಶವನ್ನು ಸ್ವತಂತ್ರಗೊಳಿಸಲು ಹಾಗೂ ಅಸಮಾನತೆಯ ನಿವಾರಣೆಗಾಗಿ ಹೋರಾಟ ನಡೆಸಿದರು.
ಅಂಬೇಡ್ಕರ್ ಅವರು ಜನಿಸಿದ ಸ್ಮರಣೀಯ ದಿನ :
***************** ಏಪ್ರಿಲ್ 14, 1891, ಭಾರತೀಯ ತಳ ಸಮುದಾಯಗಳ ಚರಿತ್ರೆಯಲ್ಲಿ ಒಂದು ಐತಿಹಾಸಿಕ ದಿನ.  ಸಮಾನತೆಯ ಸಮಾಜಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಜನಿಸಿದ ಸ್ಮರಣೀಯ ದಿನ.  ಈ ದಿನವನ್ನು ಅಂಬೇಡ್ಕರ್ ಜಯಂತಿ ಹೆಸರಿನಲ್ಲಿ ರಾಷ್ಟ್ರಾದ್ಯಂತ ಸಡಗರ- ಸಂಭ್ರಮಗಳಿಂದ ಆಚರಿಸಲಾಗುತ್ತಿದೆ.  2016 ರ ಏಪ್ರಿಲ್ 14 ರಿಂದ ಆರಂಭಿಸಿ, ಒಂದು ವರ್ಷ ಕಾಲ ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆಯನ್ನಾಗಿ ಆಚರಿಸಲು ಕರ್ನಾಟಕ ರಾಜ್ಯ ಸಕಾರ ಕ್ರಮ ಜರುಗಿಸಿದೆ.  ಭಾರತ ಭಾಗ್ಯ ವಿಧಾತ- ಧ್ವನಿ ಬೆಳಕು ಕಾರ್ಯಕ್ರಮ, ಡಾ. ಸಿದ್ದಲಿಂಗಯ್ಯ, ಎಲ್. ಹನುಮಂತಯ್ಯ, ಬಿ.ಟಿ. ಜಾಹ್ನವಿ, ಎಂ. ಚಿನ್ನಸ್ವಾಮಿ, ಡಾ. ಹಂಸಲೇಖ, ಸಿ. ಬಸವಲಿಂಗಯ್ಯ, ಡಾ.ಕೆ.ವೈ. ನಾರಾಯಣಸ್ವಾಮಿ ಸೇರಿದಂತೆ ಹಲವಾರು ಚಿಂತಕರ ಸಲಹೆಯಂತೆ ಮೂಡಿಬಂದಿದೆ.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಜೀವನ ಸಾಧನೆಗಳನ್ನು ಬಿಂಬಿಸುವ ವಿನೂತನ ಧ್ವನಿ-ಬೆಳಕು ಕಾರ್ಯಕ್ರಮವನ್ನು ಭಾರತ ಭಾಗ್ಯವಿಧಾತ ಎನ್ನುವ ಹೆಸರಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಯೋಜಿಸಿದೆ.  ಈ ಕಾರ್ಯಕ್ರಮದ ವೀಕ್ಷಣೆಗೆ ಪ್ರವೇಶ ಉಚಿತವಾಗಿದೆ.  ಕೊಪ್ಪಳ ನಗರದ ಸಾರ್ವಜನಿಕ ಮೈದಾನದಲ್ಲಿ ಫೆ. 26 ರಂದು ಸಂಜೆ 6-30 ಗಂಟೆಗೆ ಕಾರ್ಯಕ್ರಮ ಜರುಗಲಿದ್ದು, ಎಲ್ಲರೂ, ತಪ್ಪದೇ ವೀಕ್ಷಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.

ಫೆ.26 ರಂದು ಕೊಪ್ಪಳದಲ್ಲಿ “ಭಾರತ ಭಾಗ್ಯ ವಿಧಾತ” ಧ್ವನಿ-ಬೆಳಕು ಕಾರ್ಯಕ್ರಮ

ಕೊಪ್ಪಳ, ಫೆ.23(ಕರ್ನಾಟಕ ವಾರ್ತೆ):  ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ಫೆ.26 ರಂದು ಸಂಜೆ 06.30 ಗಂಟೆಗೆ ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿ  “ಭಾರದ ಭಾಗ್ಯ ವಿಧಾತ” ಧ್ವನಿ-ಬೆಳಕು ಕಾರ್ಯಕ್ರಮ ಆಯೋಜಿಸಲಾಗಿದೆ.

      ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಉದ್ಘಾಟನೆ ನೆರೆವೇರಿಸುವರು.  ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿ.ಪ.ಂ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ್ ಎಸ್. ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ ಹಾಗೂ ಶರಣಪ್ಪ ಮಟ್ಟೂರ, ಜಿ.ಪಂ ಉಪಾಧ್ಯಕ್ಷೆ ಲಕ್ಷಮ್ಮ ಎಸ್. ನೀರಲೂಟಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದರ ಖಾದ್ರಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ ಹಾಗೂ ತಾ.ಪಂ ಅಧ್ಯಕ್ಷ ಬಾಲಚಂದ್ರನ್ ಪಾಲ್ಗೊಳ್ಳುವರು.
    ವಿಶೇಷ ಆಹ್ವಾನಿತರಾಗಿ ಕೊಪ್ಪಳ ಜಿಲ್ಲಾಧಿಕಾರಿಗಳಾದ ಎಂ. ಕನಗವಲ್ಲಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಹಾಗೂ ಜಿಲ್ಲಾ ಪೊಲೀಸ್ ಪರಿಷ್ಟಾಧಿಕಾರಿ ಡಾ. ತ್ಯಾಗರಾಜನ್ ಭಾಗವಹಿಸುವರು.

ತಳಕಲ್ ಇಂಜಿನಿಯರಿಂಗ್ ಕಾಲೇಜು ರಾಜ್ಯಕ್ಕೇ ಮಾದರಿಯಾಗಲಿದೆ- ಬಸವರಾಜ ರಾಯರಡ್ಡಿ


ಕೊಪ್ಪಳ ಫೆ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ತಳಕಲ್ ನಲ್ಲಿ 132 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇಡೀ ಕರ್ನಾಟಕ ರಾಜ್ಯಕ್ಕೆ ಒಂದು ಮಾದರಿ ಕಾಲೇಜು ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.

             ತಳಕಲ್ ಗ್ರಾಮದ ಬಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣವಾಗಲಿರುವ ಪ್ರದೇಶಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

            ರಾಜ್ಯದಲ್ಲಿಯೇ ಅತ್ಯುತ್ತಮ ಹಾಗೂ ಮಾದರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಉದ್ದೇಶಿಸಿದೆ.  ಇದಕ್ಕಾಗಿ 32 ಎಕರೆ ವಿಸ್ತಾರದ ಜಮೀನನ್ನು ಈಗಾಗಲೆ ಸರ್ಕಾರದ ವಶಕ್ಕೆ ಪಡೆಯಲಾಗಿದ್ದು, ಕಾಲೇಜು ನಿರ್ಮಾಣಕ್ಕಾಗಿ ಸರ್ಕಾರ ಈಗಾಗಲೆ 132 ಕೋಟಿ ರೂ. ಗಳನ್ನು ಮಂಜೂರು ಮಾಡಿದೆ.  ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ ಇಂಜಿನಿಯರಿಂಗ್ ಕಾಲೇಜಿನಲ್ಲಿ 250 ವಿದ್ಯಾರ್ಥಿನಿಯರು ಹಾಗೂ 500 ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗುವುದು.  ಬೋಧಕರು, ಬೋಧಕೇತರ ಸಿಬ್ಬಂದಿ ವರ್ಗದವರಿಗೂ ಇದೇ ಸ್ಥಳದಲ್ಲಿ ವಸತಿಗೃಹ ಒದಗಿಸಲಾಗುವುದು.  ಕಾಲೇಜು ಕಟ್ಟಡ ನಿರ್ಮಾಣಕ್ಕೆ 24 ತಿಂಗಳ ಕಾಲಮಿತಿ ಇದ್ದು, ಮಹಾರಾಷ್ಟ್ರದ ಬಿ.ಜಿ. ಶಿರ್ಕೆ ಕನ್ಸಟ್ರಕ್ಷನ್ಸ್ ಕಂಪನಿ ಗುತ್ತಿಗೆ ಪಡೆದುಕೊಂಡಿದೆ.  ಆದರೂ 2018 ರ ಮಾರ್ಚ್ ಅಂತ್ಯದೊಳಗೆ ಕಟ್ಟಡವನ್ನು ಪೂರ್ಣಗೊಳಿಸಿ ನೀಡುವುದಾಗಿ ಕಂಪನಿ ಭರವಸೆ ನೀಡಿದೆ.  ಬರುವ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ, ಕೊಪ್ಪಳ ಮೆಡಿಕಲ್ ಕಾಲೇಜು ಉದ್ಘಾಟನೆ, ಇಂಜಿನಿಯರಿಂಗ್ ಕಾಲೇಜು ಭೂಮಿಪೂಜೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕೊಡಿಸಲಾಗುವುದು.  ಇಂಜಿನಿಯರಿಂಗ್ ಕಾಲೇಜಿಗೆ ಸದ್ಯ ಬಿಇ ಮೆಕ್ಯಾನಿಕಲ್, ಬಿಇ ಕಂಪ್ಯೂಟರ್ ಸೈನ್ಸ್ ಸೇರಿದಂತೆ 06 ಕೋರ್ಸ್‍ಗಳಿಗೆ ಮಂಜೂರಾತಿ ನೀಡಲಾಗಿದೆ.  ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ರೈಲ್ವೆ ಇಂಜಿನಿಯರಿಂಗ್ ಕೋರ್ಸ್ ಪ್ರಾರಂಭಿಸಲು ಕೇಂದ್ರ ರೈಲ್ವೆ ಸಚಿವರೊಂದಿಗೆ ಚರ್ಚೆ ನಡೆಸಿದ್ದು, ಅವರು ಕೂಡ ತಾತ್ವಿಕ ಒಪ್ಪಿಗೆ ನೀಡಿದ್ದಾರೆ.  ಇದೇ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೈಲ್ವೆ ಇಂಜಿನಿಯರಿಂಗ್ ಕೋರ್ಸ್ ಪ್ರಾರಂಭಿಸಲು ಯತ್ನಿಸಲಾಗುವುದು.  ಎರಡು ವರ್ಷದೊಳಗೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶೈಕ್ಷಣಿಕ ತರಗತಿಗಳು ಪ್ರಾರಂಭವಾಗಲಿವೆ.  ಬರುವ ದಿನಗಳಲ್ಲಿ ಇಂಜಿನಿಯರಿಂಗ್ ಪಿಜಿ ಕೇಂದ್ರವನ್ನು ಇಲ್ಲಿಯೇ ಪ್ರಾರಂಭಿಸಲಾಗುವುದು.  ಇದಕ್ಕೆ ಬೇಕಾಗುವ 20 ಎಕರೆ ಜಮೀನನ್ನು ಒದಗಿಸಲಾಗುವುದು.  ಗಂಗಾವತಿಯಲ್ಲಿ ಬರುವ ಶೈಕ್ಷಣಿಕ ವರ್ಷದಿಂದ ಇಂಜಿನಿಯರಿಂಗ್ ಕಾಲೇಜು ಪ್ರಾರಂಭವಾಗಲಿದ್ದು, ಅಗತ್ಯವಿರುವ 07 ಕೋಟಿ ರೂ. ಅನುದಾನವನ್ನು ಈಗಾಗಲೆ ಒದಗಿಸಲಾಗಿದೆ ಎಂದು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
            ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಬಂಡಿವಡ್ಡರ್, ಬಿ.ಜಿ. ಶಿರ್ಕೆ ಕನ್ಸಟ್ರಕ್ಷನ್ಸ್ ಕಂಪನಿಯ ಡೆಪ್ಯುಟಿ ಚೀಫ್ ಎಕ್ಸಿಕ್ಯೂಟಿವ್ ಅಧಿಕಾರಿ ಬಿ.ಜಿ. ಸಾಂಗ್ಲಿ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Thursday, 23 February 2017

ಬರ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಸರ್ಕಾರ ಸಿದ್ಧ- ಮುಖ್ಯಮಂತ್ರಿ ಸಿದ್ದರಾಮಯ್ಯ

ಕೊಪ್ಪಳ ಫೆ. 23 (ಕರ್ನಾಟಕ ವಾರ್ತೆ): ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಸಜ್ಜಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
       ಕೊಪ್ಪಳ ತಾಲೂಕಿನ ಬಸಾಪುರ ಬಳಿಯ ಖಾಸಗಿ ವಿಮಾನ ನಿಲ್ದಾಣಕ್ಕೆ ರಾಯಚೂರು ಜಿಲ್ಲೆಗೆ ತೆರಳುವ ಸಲುವಾಗಿ ವಿಶೇಷ ವಿಮಾನ ಮೂಲಕ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
     ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಸರ್ಕಾರ ಸಜ್ಜಾಗಿದೆ.  ಈಗಾಗಲೆ ಜಾನುವಾರುಗಳಿಗೆ ಮೇವು ಒದಗಿಸುವ ನಿಟ್ಟಿನಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಮೇವು ಬ್ಯಾಂಕ್, ಗೋಶಾಲೆಗಳನ್ನು ತೆರೆಯಲಾಗಿದೆ.  ಎಲ್ಲ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಇತ್ತೀಚೆಗೆ ಸಭೆ ಕೈಗೊಂಡು, ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿ, ಕೂಡಲೆ ನೀರು ಒದಗಿಸಬೇಕು, ನೀರಿನ ಮೂಲ ಲಭ್ಯವಿಲ್ಲದಿದ್ದ ಪಕ್ಷದಲ್ಲಿ ಟ್ಯಾಂಕರ್ ಮೂಲಕ ನೀರು, ಖಾಸಗಿ ಬೋರ್‍ವೆಲ್ ಬಾಡಿಗೆಗೆ ಪಡೆದು, ನೀರು ಪೂರೈಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಷ್ಟೇ ಅನುದಾನ ಖರ್ಚಾದರೂ ಪರವಾಗಿಲ್ಲ, ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಸೂಚನೆ ನೀಡಲಾಗಿದೆ.  ಬರಗಾಲದ ಕುರಿತು ಈಗಾಗಲೆ ಅಧಿವೇಶನದಲ್ಲಿಯೂ ಸಹ ಚರ್ಚಿಸಲಾಗಿದೆ.  ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಐದು ಗೋಶಾಲೆ ತೆರೆಯಲಾಗಿದೆ.  ಅಗತ್ಯಕ್ಕನುಗುಣವಾಗಿ ಶೀಘ್ರದಲ್ಲೇ ಇನ್ನಷ್ಟು ಗೋಶಾಲೆ ತೆರೆಯಲು ಸೂಚನೆ ನೀಡಲಾಗಿದೆ.  ಮುಂಗಾರು ಬೆಳೆಹಾನಿ ವಿಚಾರದಲ್ಲಿ 4702 ಕೋಟಿ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು.  ಆದರೆ ಕೇಂದ್ರ ಸರ್ಕಾರ ಕೇವಲ 1782 ಕೋಟಿ ರೂ. ನೀಡಲು ಒಪ್ಪಿಗೆ ನೀಡಿದ್ದು, ಆ ಪೈಕಿ ಈವರೆಗೆ  450 ಕೋಟಿ ರೂ. ಅನುದಾನ ಮಾತ್ರ ಬಿಡುಗಡೆ ಮಾಡಿದೆ.  ಪರಿಹಾರ ಮೊತ್ತವನ್ನು ಕೇಂದ್ರ ಸರ್ಕಾರ ಏಕಕಾಲಕ್ಕೆ ಬಿಡುಗಡೆ ಮಾಡಿದರೆ ಮಾತ್ರ ರೈತರಿಗೆ ಇನ್‍ಪುಟ್ ಸಬ್ಸಿಡಿಯನ್ನು ಸಮರ್ಪಕವಾಗಿ ನೀಡಲು ಸಾಧ್ಯವಾಗಲಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ ಸಂದರ್ಭದಲ್ಲಿ ಪರಿಹಾರ ಅನುದಾನವನ್ನು ಹಂತ, ಹಂತವಾಗಿ ಬಿಡುಗಡೆ ಮಾಡಿದರೆ, ರೈತರಿಗೆ ತಲುಪಿಸುವುದು ಕಷ್ಟವಾಗಲಿದೆ, ಇನ್‍ಪುಟ್ ಸಬ್ಸಿಡಿಯನ್ನು ರೈತರಿಗೆ ಒಟ್ಟಿಗೇ ಕೊಡಬೇಕಾಗುತ್ತದೆ.  ಆದ್ದರಿಂದ ಕೇಂದ್ರ ಸರ್ಕಾರ ಒದಗಿಸುವ ಪರಿಹಾರ ಮೊತ್ತವನ್ನು ಒಟ್ಟಿಗೆ ಬಿಡುಗಡೆ ಮಾಡುವಂತೆ ಇತ್ತೀಚೆಗೆ ಮನವಿ ಸಲ್ಲಿಸಲಾಗಿದೆ.  ಬೀದರ್, ಗುಲಬರ್ಗಾ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆದ ಹಾನಿಗೆ ಪರಿಹಾರ ಕಲ್ಪಿಸಲು 386 ಕೋಟಿ ರೂ., ರಾಜ್ಯದಲ್ಲಿನ ತೀವ್ರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಸಲುವಾಗಿ 800 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.  ಆದರೆ ಇದಕ್ಕೆ ಕೇಂದ್ರದಿಂದ ಯಾವುದೇ ಸ್ಪಂದನೆ ದೊರೆತಿಲ್ಲ.  ಪ್ರಸಕ್ತ ಹಿಂಗಾರು ಹಂಗಾಮಿಗೆ ಸಂಬಂಧಿಸಿದಂತೆ 3310 ಕೋಟಿ ರೂ. ಒದಗಿಸಲು ಮನವಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹೇಳಿದರು.
     ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ಸಂರಕ್ಷಣೆ ನಿಟ್ಟಿನಲ್ಲಿ 05 ಕಡೆ ಗೋಶಾಲೆಗಳನ್ನು ತೆರೆಯಲಾಗಿದೆ.  ಬರುವ ತಿಂಗಳು ಇನ್ನೂ ಐದು ಗೋಶಾಲೆಗಳನ್ನು ಪ್ರಾರಂಭಿಸಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.
     ಲೋಕೋಪಯೋಗಿ ಸಚಿವ ಮಹದೇವಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಾಲ್ಯವಿವಾಹದಿಂದ ಹೆಣ್ಣುಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ- ಮಂಜುನಾಥ್

ಕೊಪ್ಪಳ, ಫೆ.23(ಕರ್ನಾಟಕ ವಾರ್ತೆ):ಬಾಲ್ಯ ವಿವಾಹವು ಹೆಣ್ಣು ಮಕ್ಕಳ ಆರೋಗ್ಯ ಮತ್ತು ಮನಸ್ಸಿನ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ್ ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ವತಿಯಿಂದ ಭಾಗ್ಯನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಬಾಲ್ಯ ವಿವಾಹ ತಡೆ ಬೃಹತ್ ಜಾಗೃತಿ ಜಾಥ ಹಾಗೂ ಅರಿವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಬಾಲ್ಯ ವಿವಾಹವು ಮಗುವಿನ ಮೇಲೆ ಅದರಲ್ಲೂ ಹೆಣ್ಣು ಮಗುವಿನ ಆರೋಗ್ಯದ ಮೇಲೆ ತೀವ್ರತರವಾದ ಗಂಭೀರ ಪರಿಣಾಮ ಬೀರುತ್ತದೆ.  ಅಲ್ಲದೇ ತೀವ್ರ ರಕ್ತ ಹೀನತೆಯಿಂದ ತಾಯಿ, ಶಿಶು ಅಥವಾ ಇಬ್ಬರ ಮರಣದ ಪ್ರಮಾಣವು ಅಧಿಕವಾಗುತ್ತದೆ.  ಈ ಹಿನ್ನಲೆಯಲ್ಲಿ ಸರ್ಕಾರವು ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ರನ್ನು ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಹಾಗೂ ವಿವಿಧ ಇಲಾಖೆಗಳ ಮತ್ತು ಸಂಸ್ಥೆಗಳಿಂದ ಕಾಯ್ದೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಸಮುದಾಯದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆದೇಶದ ಮೇರೆಗೆ 2017ರ ಮೊದಲ ಮೂರು ತಿಂಗಳಿನ 21 ನೇ ದಿನಾಂಕದಂದು ಈ ರೀತಿಯ ಬೃಹತ್ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಮಂಜುನಾಥ್ ಹೇಳಿದರು. 
ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ವಿಭಾಗೀಯ ಸಂಯೋಜಕ ರಾಘವೇಂದ್ರ ಭಟ್ ಅವರು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕುರಿತು ಮಾಹಿತಿ ನೀಡಿ, ಮಕ್ಕಳಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 9, 10, 11ರಡಿಯಲ್ಲಿ ಬಾಲ್ಯ ವಿವಾಹವನ್ನು ಮಾಡಿದ ಅಥವಾ ಮಾಡಿಕೊಂಡ ವ್ಯಕ್ತಿಗಳು, ಆಯೋಜಕರು ಹಾಗೂ ಬಾಲ್ಯ ವಿವಾಹದಲ್ಲಿ ಭಾಗವಹಿಸಿದ ಪೂಜಾರಿ, ವಾದ್ಯ ನುಡಿಸಿದವರು, ಊಟ ತಯಾರಕರು ಹಾಗೂ ಅತಿಥಿಗಳು ಸಹ ಅಪರಾಧಿಗಳಾಗಿದ್ದು, ಇದು ಶಿಕ್ಷಾರ್ಹ ಅಪರಾಧ ಇದಕ್ಕೆ ಎರಡು ವರ್ಷ ಜೈಲು ಮತ್ತು ರೂ.1 ಲಕ್ಷ ದಂಡ ಎಂದು ವಿವರಿಸಿದರು.  ಈ ಹಿಂದೆ ಕೊಪ್ಪಳ ಬಾಲ್ಯ ವಿವಾಹ ಮಾಡುವ ಪ್ರಕರಣಗಳಲ್ಲಿ ಮೊದಲನೇ ಸ್ಥಾನದಲ್ಲಿತ್ತು.  ಆದರೆ ಇತ್ತೀಚೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಹಾಗೂ ಇನ್ನಿತರ ಹಲವಾರು ಇಲಾಖೆಗ ಕಾರ್ಯಾಚರಣೆಯ ಪರಿಣಾಮವಾಗಿ, ಕೊಪ್ಪಳ ಜಿಲ್ಲೆಯು ಬಾಲ್ಯ ವಿವಾಹಗಳನ್ನು ತಡೆಗಟ್ಟುವಲ್ಲಿ ಕರ್ನಾಟಕದಲ್ಲೇ ಮೊದಲನೇ ಸ್ಥಾನದಲ್ಲಿದೆ.  ಕಾರಣ ಇಲಾಖೆ ಜೋತೆಗೆ ಶಿಕ್ಷಕರು, ಮಕ್ಕಳು ಕೈಜೋಡಿಸಿದಲ್ಲಿ ಬಾಲ್ಯಾ ವಿವಾಹ ಎಂಬ ಸಮಾಜಿಕ ಪಿಡುಗನ್ನು ಜಿಲ್ಲೆಯಿಂದ ತೊಲಗಿಸಬಹುದಾಗಿದೆ ಎಂದರು.
     ಬಾಲ್ಯ ವಿವಾಹ ತಡೆ ಬೃಹತ್ ಜಾಗೃತಿ ಜಾಥಕ್ಕೆ  ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ ಅವರು ಭಾಗ್ಯನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರದಂದು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢ ಶಾಲೆ ಪ್ರಾಚಾರ್ಯರಾದ ಸುಜಾತಾ, ಮಕ್ಕಳ ವಿಶೇಷ ಪೊಲೀಸ್ ಘಟಕದ ಬಸಪ್ಪ ಹಾದಿಮನಿ, ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ಹರೀಶ ಜೋಗಿ ಪಾಲ್ಗೊಂಡಿದ್ದರು.  ರವಿಕುಮಾರ ಪವಾರ ನಿರೂಪಿಸಿದರು.  ರೋಹಿಣಿ ಕೊಟಗಾರ ವಂದಿಸಿದರು.

ಗುಣಮಟ್ಟದ ಶಿಕ್ಷಣ ನೀಡಿದರೆ ಮಕ್ಕಳ ಭವಿಷ್ಯ ಉಜ್ವಲ- ಎಂ. ಕನಗವಲ್ಲಿ

ಕೊಪ್ಪಳ ಫೆ. 23 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳು ಈ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆಯುವ ಗುರಿಯನ್ನಿಟ್ಟುಕೊಂಡು, ಅದಕ್ಕೆ ತಕ್ಕಂತೆ ಕಾರ್ಯ ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕು.  ಗುಣಮಟ್ಟದ ಶಿಕ್ಷಣ ನೀಡಿದರೆ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮುಖ್ಯೋಪಾಧ್ಯಾಯರಿಗೆ ಕರೆ ನೀಡಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಉತ್ತಮ ಪಡಿಸಲು ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಗುರುವಾರದಂದು ಏರ್ಪಡಿಸಲಾದ ವಿಶೇಷ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
        ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಶೈಕ್ಷಣಿಕ ಜೀವನದ ಮಹತ್ವದ ಮೈಲಿಗಲ್ಲಾಗಿದೆ.  ಕೊಪ್ಪಳ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳು ಈ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶವನ್ನು ಪಡೆಯುವ ಗುರಿಯನ್ನು ಇಟ್ಟುಕೊಂಡು, ನಿಗದಿತ ಗುರಿ ಸಾಧನೆಗೆ   ಪ್ರಾಮಾಣಿಕತೆಯಿಂದ ಶ್ರಮಿಸಬೇಕು.  ಈ ಅಂಶವನ್ನು ಗಮನದಲ್ಲಿಟ್ಟುಕೊಂಡು, ಎಲ್ಲ ಶಾಲಾ ಶಿಕ್ಷಕರು ಶ್ರಮ ವಹಿಸಿ, ತಮ್ಮ ತಮ್ಮ ಶಾಲಾ ಮಕ್ಕಳನ್ನು ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸೂಕ್ತ ರೀತಿಯಲ್ಲಿ ಸಿದ್ಧಗೊಳಿಸಬೇಕು.  ಕಳೆದ ವರ್ಷ ಫಲಿತಾಂಶದಲ್ಲಿ ಸ್ಪಲ್ಪಮಟ್ಟಿಗೆ ಸುಧಾರಣೆಯಾಗಿ ಜಿಲ್ಲೆ 25ನೇ ಸ್ಥಾನ ಪಡೆದಿತ್ತು. ಈ ವರ್ಷದ ಪರೀಕ್ಷಾ ಫಲಿತಾಂಶದಲ್ಲಿ ಶೇಕಡಾ 100 ಕ್ಕೆ 100 ರಷ್ಟು ತರುವುದು ಎಲ್ಲಾ ಮುಖ್ಯ ಶಿಕ್ಷಕರ ಜವಾಬ್ದಾರಿಯಾಗಿದ್ದು, ಈ ವರ್ಷ ಕನಿಷ್ಟ 10 ರೊಳಗೆ ಕೊಪ್ಪಳ ಜಿಲ್ಲೆ ಸ್ಥಾನ ಪಡೆದುಕೊಳ್ಳಬೇಕು.  ತಮ್ಮ ವಿದ್ಯಾಭ್ಯಾಸದ ಅನುಭವಗಳನ್ನು ತಿಳಿಸಿದ ಜಿಲ್ಲಾಧಿಕಾರಿಗಳು ಸರಕಾರಿ ಶಾಲೆಯಲ್ಲಿಯೇ ಅಭ್ಯಾಸ ಮಾಡಿ ಗುಣಮಟ್ಟದ ಶಿಕ್ಷಣ ಪಡೆದು ಇದೀಗ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ.  ನಮ್ಮ ತಂದೆಯವರು ಶಿಕ್ಷಕರಾಗಿದ್ದರು. ಅವರು ಸರಕಾರಿ ಶಾಲೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅವರ 33 ವರ್ಷಗಳ ಸೇವಾ ಅನುಭವದಲ್ಲಿ ಹಲವಾರು ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದಿದ್ದಾರೆ. ಅವರು ಮಾಡಿರುವ  ಸೇವೆಯಿಂದಾಗಿ ನಮಗೆ ಉತ್ತಮ ಶಿಕ್ಷಣವನ್ನು ಆ ದೇವರು ಕರುಣಿಸಿದ್ದಾರೆ ಎಂದು ಹೇಳಬಹುದು. ಅದೇ ರೀತಿ ಎಲ್ಲ ಶಿಕ್ಷಕರು, ತಮ್ಮ ಶಾಲೆಯಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಅವರು ಉತ್ತಮ ಪ್ರಜೆಗಳಾಗಿ, ಭವಿಷ್ಯ ಉಜ್ವಲಗೊಳ್ಳಲಿದೆ. ವರ್ಷ ಪೂರ್ತಿ    ಮಕ್ಕಳಿಗೆ ಪಾಠ ಬೋಧನೆ ಮಾಡಿದ್ದರೂ, ಈಗ ಕೊನೆಯ ಹಂತದಲ್ಲಿ ಎಲ್ಲಾ ವಿದ್ಯಾರ್ಥಿಗಳ ವೈಯಕ್ತಿಕ ಕಾಳಜಿ ವಹಿಸಿ ಪರೀಕ್ಷಾ ತಯಾರಿಯನ್ನು ಮಾಡಿಸಿವುದು ಉತ್ತಮ.  ಸರ್ಕಾರಿ ಶಾಲೆಗಳ ಬಗ್ಗೆ ಸಾರ್ವಜನಿಕರಲ್ಲಿ ನಂಬಿಕೆ, ವಿಶ್ವಾಸ ಹೆಚ್ಚಿಸುವಂತಹ ಕಾರ್ಯಗಳನ್ನು ಶಿಕ್ಷಕರು ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಮಾತನಾಡಿ, ಪ್ರಾಥಮಿಕ ಶಾಲಾ ಹಂತದಿಂದಲ್ಲೇ ಮಕ್ಕಳಿಗೆ ಉತ್ತಮ ಕಲಿಕೆ ನೀಡುತ್ತಾ ಬಂದರೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸುಲಭವಾಗುವುದು ಇದರಿಂದ  ಮಕ್ಕಳಿಗೆ ನೀಡುವ ಶಿಕ್ಷಣ ಸರಿಯಾದ ನಿಟ್ಟಿನಲ್ಲಿ ಪ್ರಾರಂಭಿಸಿ ಜಿಲ್ಲೆಯ ಫಲಿತಾಂಶ ಸುಧಾರಿಸಬೇಕು.  ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಶಾಲೆಗಳಿಗೆ ಬಹುಮಾನ ನೀಡಲಾಗುವುದು.  ಶಿಕ್ಷಕರು ತಮ್ಮ ಜ್ಞಾನದ ಅನುಭವಗಳನ್ನು ಮಕ್ಕಳಿಗೆ ವರ್ಗಾವಣೆ ಮಾಡಿ ಉತ್ತಮ ಕಲಿಕೆಯಾಗಿ ಮಾರ್ಪಾಡಾಗುವಂತೆ ಮಾಡಬೇಕು ಎಂದು ಹೇಳಿದರು.
       ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿಯವರು ಮಾತನಾಡಿ, ಸರಕಾರಿ ಶಾಲೆಗೆ ನೇಮಕ ಆಗುವ ಶಿಕ್ಷಕರು ಸ್ಪರ್ದಾತ್ಮಕ ಪರೀಕ್ಷೆಗಳನ್ನು ಎದುರಿಸಿ, ಮೇರಿಟ್ ಇರುವ ಪ್ರತಿಭಾವಂತರು ಆಯ್ಕೆ ಆಗಿರುತ್ತಾರೆ.  ಅಂತಹವರು ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾದ ರೀತಿಯಲ್ಲಿ ಅಬ್ಯಾಸ ಮಾಡಿಸಿ, ಸುಲಭವಾಗಿ ನೆನಪಿನಲ್ಲಿಟ್ಟುಕೊಂಡು ಪರೀಕ್ಷಾ ಭಯವಿಲ್ಲದೇ ಉತ್ತಮ ಅಂಕ ಗಳಿಸಲು ಅನುಕೂಲವಾಗುವ ರೀತಿ ಮಾರ್ಗದರ್ಶನ ಮಾಡಬೇಕು ಎಂದರು.
     ಡಿಡಿಪಿಐ ಶ್ಯಾಮಸುಂದರ್ ಅವರು, ಪ್ರಾಸ್ತಾವಿಕವಾಗಿ ಮಾತನಾಡಿ, ಫಲಿತಾಂಶ ಸುಧಾರಣೆಗಾಗಿ ಜಿಲ್ಲೆಯಲ್ಲಿ ಕೈಗೊಂಡಿರುವ ಹಲವು ಕ್ರಮಗಳ ಬಗ್ಗೆ ವಿವರಿಸಿದರು.  ಎಸ್.ಎಸ್.ಎಲ್.ಸಿ ಪರೀಕ್ಷೆ ನೋಡಲ್ ಅಧಿಕಾರಿ ರಾಹತ್ ನವಾಜ್ ಖಾನಂ, ಎಂ.ಎಸ್.ಬಡದಾನಿ, ಅಶೋಕ ಕುಲಕರ್ಣಿ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲೆಯ ಎಲ್ಲ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

ಕೊಪ್ಪಳ ಸ್ಥಿರಾಸ್ತಿ ಮಾರುಕಟ್ಟೆ ಮೌಲ್ಯ ಪರಿಷ್ಕರಣೆ: ಆಕ್ಷೇಪಣೆಗೆ ಆಹ್ವಾನ

ಕೊಪ್ಪಳ, ಫೆ.23(ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿನ ಸ್ಥಿರಾಸ್ತಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಪಟ್ಟಿ ಪ್ರಕಟಣೆಗೊಂಡಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
    ಕೊಪ್ಪಳ ಹಿರಿಯ ಉಪ ನೋಂದಣಾಧಿಕಾರಿಗಳ ಕಾರ್ಯಾಲಯದಿಂದ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಪಟ್ಟಿಯನ್ನು 2017-18 ನೇ ಸಾಲಿಗೆ ಪರಿಷ್ಕರಿಸಲು ಕೇಂದ್ರೀಯ ಮೌಲ್ಯ ಮಾಪನ ಸಮಿತಿಯ ಉಪಸಮಿತಿ ವತಿಯಿಂದ, ಫೆ.22 ರಂದು ತಹಶಿಲ್ದಾರರ ಕಛೇರಿಯಲ್ಲಿ ಜರುಗಿದ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ.  ಚಾಲ್ತಿಯಲ್ಲಿರುವ ದರಗಳನ್ನು ಆಧಾರವಾಗಿಟ್ಟುಕೊಂಡು ವಾಸ್ತವಿಕ ದರಗಳನ್ನು ಪರಿಶೀಲಿಸಿ, ಅವಶ್ಯವಿರುವ ಪ್ರದೇಶಗಳಿಗೆ ಮಾರ್ಗಸೂಚಿ ದರವನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ.
    ಕೊಪ್ಪಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಪಟ್ಟಿಯನ್ನು ಸಾರ್ವಜನಿಕರಿಗೆ ಮಾಹಿತಿಗಾಗಿ ಉಪನೊಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಪ್ರಕಟಿಸಿದ್ದು, ಈ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಲಿಖಿತ ರೂಪದಲ್ಲಿ 15 ದಿನದೊಳಗಾಗಿ ಉಪ ನೋಂದಣಾಧಿಕಾರಿಗಳ ಕಚೇರಿ, ತಹಶಿಲ್ದಾರರ ಕಛೇರಿ ಆವರಣ, ಕೊಪ್ಪಳ ಇವರಿಗೆ ಸಲ್ಲಿಸಲು ಸದಸ್ಯ ಕಾರ್ಯದರ್ಶಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯನಿರ್ಧಾರಣಾ ಉಪಸಮಿತಿ ಹಾಗೂ ಉಪನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 01 ರಂದು ಜಿಲ್ಲಾ ಮಟ್ಟದ ಯುವಜನ ಮೇಳ ಕಾರ್ಯಕ್ರಮ

ಕೊಪ್ಪಳ, ಫೆ.23(ಕರ್ನಾಟಕ ವಾರ್ತೆ): ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಯುವಜನ ಮೇಳ ಕಾರ್ಯಕ್ರಮವನ್ನು ತಾಲೂಕಿನ ಕಾತರಕಿ-ಗುಡ್ಲಾನೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಾರ್ಚ್.01 ರಂದು ಬೆಳಿಗ್ಗೆ 9.30 ಗಂಟೆಗೆ ಏರ್ಪಡಿಸಲಾಗಿದೆ.
    ಕಾರ್ಯಕ್ರಮದಲ್ಲಿ ಭಾವಗೀತೆ, ಜಾನಪದ ಗೀತೆ, ರಂಗಗೀತೆ, ಜಾನಪದ ನೃತ್ಯ, ಗೀಗಿ ಪದಗಳು, ಲಾವಣಿ, ಕೋಲಾಟ, ಭಜನೆ, ಜೋಳ-ರಾಗಿ ಬೀಸುವ ಪದ, ಸೋಬಾನ ಪದಗಳು, ಏಕಪಾತ್ರಾಭಿನಯ, ವೀರಗಾಸೆ ಪುರವಂತಿಕೆ, ಡೋಳ್ಳು ಕುಣಿತ, ದೊಡ್ಡಾಟ, ಸಣ್ಣಾಟ, ಚರ್ಮವಾದ್ಯ ಮೇಳ, ಯಕ್ಷಗಾನ ಸೇರಿದಂತೆ ಒಟ್ಟು 17 ಸ್ಪರ್ಧೆಗಳನ್ನು ನಡೆಸಲಾಗುವುದು.
    ಕೊಪ್ಪಳ ಜಿಲ್ಲೆಯ ನಾಲ್ಕು ತಾಲ್ಲೂಕುಗಳಾದ ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಿ ವೈಯಕ್ತಿಕ ಸ್ಪರ್ದೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಹಾಗೂ ಗುಂಪು ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಯುವಕ-ಯುವತಿಯರು ಮಾತ್ರ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಬಹುದು.   ಸ್ಪರ್ದಾಳುಗಳು ತಮ್ಮ ವೇಶ ಭೂಷಣ, ವಾದ್ಯ ಮೇಳಗಳೊಂದಿಗೆ ಮಾ.01 ರಂದು ಬೆಳಿಗ್ಗೆ 9.00 ಗಂಟೆಯೊಳಗೆ ಸಂಘಟಕರಲ್ಲಿ ವರದಿ ಮಾಡಿಕೊಂಡು ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು.  ವಯೋಮಿತಿ 15 ರಿಂದ 35 ವರ್ಷದೊಳಗಿರಬೇಕು.
ಭಾಗವಹಿಸುವ ಅರ್ಹ ಸ್ಪರ್ಧಾಳುಗಳಿಗೆ, ಆಯಾ ತಾಲ್ಲೂಕು ಕೇಂದ್ರ ಸ್ಥಾನದಿಂದ ಸಂಘಟನೆ ನಡೆಯುವ ಕೇಂದ್ರ ಸ್ಥಾನಕ್ಕೆ ಬಂದು ಹೋಗುವ ಸಾಮಾನ್ಯ ಬಸ್ ದರವನ್ನು ನೀಡಲಾಗುವುದು.  ಹೆಚ್ಚಿನ ಮಾಹಿತಿಗಾಗಿ ಸಂಘಟಕರ ಮೊಬೈಲ್ ಸಂಖ್ಯೆ 9731918176, 9980675209 ಅಥವಾ ಕೊಪ್ಪಳದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Wednesday, 22 February 2017

ಡೆಹಾರಡೂನ್ ಮಿಲಿಟರಿ ಶಾಲೆ 8ನೇ ತರಗತಿ ಪ್ರವೇಶ ಪರೀಕ್ಷೆ : ಅರ್ಜಿ ಆಹ್ವಾನ


ಕೊಪ್ಪಳ, ಫೆ.22(ಕರ್ನಾಟಕ ವಾರ್ತೆ): ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬೆಂಗಳೂರು ಇವರ ವತಿಯಿಂದ, ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಡೆಹಾರಡೂನ್ ಕಾಲೇಜ್ 8ನೇ ತರಗತಿ ಪ್ರವೇಶಕ್ಕಾಗಿ ಕರ್ನಾಟಕದ ಬಾಲಕರಿಗೆ ಜೂನ್ ತಿಂಗಳಲ್ಲಿ ನಡೆಯಲಿರುವ ಪ್ರವೇಶ ಪರಿಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.
    ಜನೇವರಿ-2018ನೇ ಅವಧಿವೇಶನಕ್ಕಾಗಿ ಉತ್ತರಾಖಂಡ ರಾಜ್ಯದ ಡೆಹಾರಡೂನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನ 8ನೇ ತರಗತಿಗಾಗಿ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಜೂನ್.01 ಮತ್ತು 02 ರಂದು ಬೆಂಗಳೂರು ಕೇಂದ್ರದಲ್ಲಿ ನಡೆಯಲಿವೆ.  ಪರೀಕೆಗಾಗಿ 7ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು 01-01-2018 ರಂತೆ 11.5 ರಿಂದ 13 ವರ್ಷದೊಳಗಿರಬೇಕು (ಅಂದರೆ ದಿನಾಂಕ 02-06-2005 ರಿಂದ 01-07-2006 ರೊಳಗೆ ಜನಿಸಿರಬೇಕು).  ಬಾಲಕರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರಾಗಿರುತ್ತಾರೆ.  ಸಂಸ್ಥೆಯ ಮುಖ್ಯ ಗುರಿ ಯುವಕರನ್ನು ದೇಶದ ಸಶಸ್ತ್ರ ಪಡೆಗೆ ಸೇರಲು ಸಿದ್ಧಗೊಳಿಸುವುದು ಹಾಗೂ ಸರ್ವರೀತಿಯ ವಿದ್ಯಾಭ್ಯಾಸ ನೀಡುವುದು.  ಕಾಲೇಜಿನಲ್ಲಿ ವರ್ಷವೊಂದಕ್ಕೆ ಪ್ರಸಕ್ತ ವಿದ್ಯಾಭ್ಯಾಸ ಶುಲ್ಕ ರೂ. 42,400 ಆಗಿರುತ್ತದೆ.
    ವಿವರಣೆ ಪತ್ರ ಹಾಗೂ ಹಳೇ ಪ್ರಶ್ನೆ ಪತ್ರಿಕೆಗಳನ್ನೊಳಗೊಂಡ ಅರ್ಜಿ ನಮೂನೆಯನ್ನು ಕೋರಿಕೆ ಪತ್ರದ ಮೇರೆಗೆ ನಿರ್ದೇಶಕ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಭವನ, ನಂ.58, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆ, ಬೆಂಗಳೂರು 560 025, ಇಲ್ಲಿಂದ ದಿ ಕಮಾಂಡೆಂಟ್, ಆರ್‍ಐಎಂಸಿ ಡೆಹ್ರಾಡೂನ್ (ಪೇಯಬಲ್ ಅಟ್ ಎಸ್‍ಬಿಐ ಟೆಲ್ ಭವನ್, ಡೆಹ್ರಾಡೂನ್- ಬ್ಯಾಂಕ್ ಕೋಡ್- 01576), ಇವರ ಹೆಸರಿನಲ್ಲಿ ಪಡೆದ ರೂ. 550 (ಸಾಮಾನ್ಯ ಅಭ್ಯರ್ಥಿಗಳಿಗೆ) & ರೂ.505 (ಎಸ್/ಎಸ್‍ಟಿ ಅಭ್ಯರ್ಥಿಗಳಿಗೆ) ಡಿಮಾಂಡ್ ಡ್ರಾಪ್ಟ್ ಮೂಲಕ ಖುದ್ದಾಗಿ ಪಡೆಯಬಹುದಾಗಿದೆ. ರಿಜಿಸ್ಟರ್ಡ್ ಪಾರ್ಸಲ್ ಮೂಲಕ ಅರ್ಜಿ ನಮೂನೆಗಳನ್ನು ಪಡೆಯಲಿಚ್ಚಿಸುವ ಅಭ್ಯಾರ್ಥಿಗಳು ಮೇಲೆ ತಿಳಿಸಿದ ಬ್ಯಾಂಕ್ ಡ್ರಾಪ್ಟ್‍ನೊಂದಿಗೆ 11”/9” ಅಳತೆಯ ಸೈಜಿನ ಸ್ವವಿಳಾಸದ ಲಕೋಟೆಯ ಮೇಲೆ ರೂ.10 ಮೌಲ್ಯದ ಅಂಚೆ ಚೀಟಿ ಲಗತ್ತಿಸಿ ಕಳುಹಿಸಬೇಕು.
     ಲಕೋಟೆಯ ಮೇಲೆ ಅಭ್ಯರ್ಥಿಯ ಪೂರ್ಣ ಅಂಚೆ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.  ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯನ್ನು ದ್ವಿಪ್ರತಿಯಲ್ಲಿ ಆಂಗ್ಲ ಭಾಷೆಯ ಜನನ ಪ್ರಮಾಣ ಪತ್ರ, ಪಾಸ್‍ಪೋರ್ಟ್ ಸೈಜಿನ ಭಾವಚಿತ್ರ, ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳು ಸಕ್ಷಮ ಪ್ರಾಧಿಕಾರದಿಂದ ನೀಡಿದ ಜಾತಿ ಪ್ರಮಾಣ ಪತ್ರದ ಧೃಢಿಕರಣ ಪ್ರತಿ (ಆಂಗ್ಲ ಭಾಷೆಯ), ಪರೀಕ್ಷಾ ಪ್ರವೇಶ ಪತ್ರವನ್ನು ರವಾನಿಸಲು ರೂ.40 ರ ಅಂಚೆ ಚೀಟಿ ಅಂಟಿಸಿದ ಸ್ವವಿಳಾಸ ಲಕೋಟೆ, ಶಾಲಾ ಮುಖ್ಯೋಪಾಧ್ಯಯರಿಂದ ಅಭ್ಯರ್ಥಿಯ ಜನ್ಮ ದಿನಾಂಕ ಮತ್ತು ಓದುತ್ತಿರುವ ತರಗತಿ ಬಗ್ಗೆ ಪಡೆದ ಪ್ರಮಾಣ ಪತ್ರ ಮೂಲ ಪ್ರತಿ ಹಾಗೂ ರಾಜ್ಯದ ವಾಸಸ್ಥಾನ ಧೃಢಿಕರಣ ಪತ್ರ (ತಹಶಿಲ್ದಾರರಿಂದ)  ಲಗತ್ತಿಸಿ ಮಾರ್ಚ್ 31 ರ ಒಳಗಾಗಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು ಇವರಿಗೆ ಸಲ್ಲಿಸಬೇಕು..  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-25589459  ಕ್ಕೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಬರ ಪರಿಸ್ಥಿತಿಗೆ ಪರಿಸರ ಅಸಮತೋಲನ ಕಾರಣ- ಗುರುದತ್ ಹೆಗಡೆ


ಕೊಪ್ಪಳ, ಫೆ.22(ಕರ್ನಾಟಕ ವಾರ್ತೆ): ಅಭಿವೃದ್ಧಿಯ ಜೊತೆಗೆ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡದ ಕಾರಣ, ಪರಿಸರ ಅಸಮತೋಲನದಿಂದಾಗಿ ಪದೇ ಪದೇ ಬರ ಪರಿಸ್ಥಿತಿ ತಲೆದೋರುತ್ತಿದೆ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ಗುರುದತ್ ಹೆಗಡೆ ಅವರು ಹೇಳಿದರು.

     ಕೊಪ್ಪಳ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಬೇವೂರಿನ ಕೂಡಲಸಂಗಮೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆ ವತಿಯಿಂದ ಜಿಲ್ಲಾಡಳಿತ ಭವನ ಆಡಿಟೋರಿಯಂ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾದ ಜಿಲ್ಲಾ ಪರಿಸರ ಮಿತ್ರ ಶಾಲೆ 2016-17 ರ ಪ್ರಶಸ್ತಿ ಪ್ರಧಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

    ನೈಸರ್ಗಿಕ ಸಂಪನ್ಮೂಲಗಳ ಬಳಕೆ, ರಕ್ಷಣೆ, ಅಭಿವೃದ್ಧಿ ಮುಂತಾದ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ನಮ್ಮ ಸಮಾಜ ಪರಿಸರ ಮತ್ತು ನೈರ್ಮಲ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡದಿರುವುದು ಕಳವಳಕಾರಿ ಸಂಗತಿಯಾಗಿದೆ.  ನಮ್ಮ ನಾಡು ಪದೇ ಪದೇ ಬರಕ್ಕೆ ತುತ್ತಾಗಲು ಪರಿಸರವನ್ನು ಕಾಯ್ದುಕೊಳ್ಳದಿರುವುದು ಹಾಗೂ ಪರಿಸರದ ಅಸಮತೋಲನವೇ ಪ್ರಮುಖ ಕಾರಣಗಳಲ್ಲೊಂದಾಗಿದೆ.  ಪರಿಸರದ ರಕ್ಷಣೆ ಕುರಿತು ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡಿಸಲು ಶಿಕ್ಷಕರು ಮುಂದಾಗಬೇಕು.  ಕಲೆ, ಸಾಹಿತ್ಯ, ನೃತ್ಯ, ಸಂಗೀತದಂತಹ ಸೃಜನಶೀಲ ಚಟುವಟಿಕೆಗಳಿಗೆ ಆದ್ಯತೆ ನೀಡುವುದರ ಜೊತೆಗೆ, ಪರಿಸರ ಸ್ವಚ್ಛಗೊಳಿಸುವಂತಹ ಚಟುವಟಿಕೆಗಳನ್ನು ಶಾಲಾ ಹಂತದಲ್ಲಿ ಹೆಚ್ಚು ಹಮ್ಮಿಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಗುರುದತ್ ಹೆಗಡೆ ಅವರು ಕರೆ ನೀಡಿದರು.

     ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಪರಿಸರ ಮಿತ್ರ ಶಾಲೆ- ನನಸಾದ ಕನಸುಗಳು ಎನ್ನುವ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿ, ಶಾಲೆಯಲ್ಲಿ ಹೆಚ್ಚು, ಹೆಚ್ಚು ಗಿಡಗಳನ್ನು ನೆಟ್ಟು, ಶಾಲೆಯ ಪರಿಸರವನ್ನು ಸ್ವಚ್ಛವಾಗಿರಿಸಿಕೊಂಡಿರುವ ಶಾಲೆಗಳಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಸಿರು ಶಾಲೆ, ಪರಿಸರ ಮಿತ್ರ ಶಾಲೆ, ಹಳದಿ ಶಾಲೆ ಎನ್ನುವ ಪ್ರಶಸ್ತಿಯನ್ನು ನೀಡಿ ಪ್ರೊತ್ಸಾಹ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ.  ಇಂತಹ ಪ್ರಶಸ್ತಿಯನ್ನು ಎಲ್ಲ ಶಾಲೆಗಳೂ ಪಡೆಯುವಂತಾಗಬೇಕು ಎಂದರು.
     ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಗುರುಬಸವರಾಜ ಮಾತನಾಡಿ, ಶಾಲೆಗಳಲ್ಲಿ ಪರಿಸರವನ್ನು ಉತ್ತಮವಾಗಿರಿಸಿಕೊಳ್ಳಲು, ಶಿಕ್ಷಕರ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಮಕ್ಕಳ ಆಸಕ್ತಿ ಮುಖ್ಯ ಪಾತ್ರ ವಹಿಸಲಿದೆ.  ಶಾಲೆಗಳಲ್ಲಿ ಲಭ್ಯವಿರುವ ನೀರನ್ನು ವ್ಯರ್ಥವಾಗಿ ಹರಿಸದೆ, ಕೈತೋಟ ನಿರ್ಮಾಣ, ಹೆಚ್ಚು, ಹೆಚ್ಚು ಗಿಡಗಳನ್ನು ನೆಡುವುದು, ಶಾಲೆಯ ವಾತಾವರಣವನ್ನು ಹಸಿರಾಗಿಸುವ ಕಾರ್ಯವನ್ನು ಎಲ್ಲ ಶಾಲೆಗಳು ಹಮ್ಮಿಕೊಳ್ಳಬೇಕು ಎಂದರು.
     ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ರಾಜೇಶ್ ಅಂಗಡಿ ಸ್ವಾಗತಿಸಿದರು.  ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.  ಗಂಗಾವತಿ ತಾಲೂಕಿನ ಕರಡಿಗುಡ್ಡ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಸಕ್ತ ಸಾಲಿನ“ಜಿಲ್ಲಾ ಪರಿಸರ ಮಿತ್ರ ಶಾಲೆ” ಪ್ರಶಸ್ತಿಯ ಜೊತೆಗೆ 30 ಸಾವಿರ ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.  ಉಳಿದಂತೆ ಜಿಲ್ಲೆಯ ಗಂಗಾವತಿ ತಾಲೂಕಿನ ಗುಡ್ಡದ ಕ್ಯಾಂಪ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಯಲಬುರ್ಗಾ ತಾಲೂಕಿನ ಬೇವೂರಿನ ಕೂಡಲಸಂಗಮೇಶ್ವರ ಪ್ರೌಢ ಶಾಲೆ, ಮುರಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬುಕನಟ್ಟಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಂಡಲಮರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.  ಕೊಪ್ಪಳ ತಾಲೂಕು ಕೊಪ್ಪಳದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಹೊಸಮುದ್ಲಾಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಜಿನ್ನಾಪುರ ಚಿಕ್ಕತಾಂಡಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಇರಕಲ್‍ಗಡ ಈಶ್ವರ ಪ್ರಾಥಮಿಕ ಶಾಲೆ, ಹಾಗೂ ಹೊಸಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಸಿರು ಶಾಲೆಯ ಪ್ರಶಸ್ತಿಯ ಜೊತೆಗೆ ತಲಾ 05 ಸಾವಿರ ನಗದು ಬಹುಮಾನವನ್ನು ಪಡೆದುಕೊಂಡವು.  ಯಲಬುರ್ಗಾ ತಾಲೂಕಿನ ಗೆದಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೇವೂರ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಕುದುರೆಮೋತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.  ಕೊಪ್ಪಳ ತಾಲೂಕಿನ ಅಗಳಕೇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಿಳೇಬಾವಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಳೇಲಿಂಗಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.  ಕುಷ್ಟಗಿ ತಾಲೂಕಿನ ಕಾಟಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,  ಹಾಬಲಕಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.  ಗಂಗಾವತಿ ತಾಲೂಕಿನ ಹುಳ್ಕಿಹಾಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ,  ನರಸಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ “ಹಳದಿ ಶಾಲೆ’ ಪ್ರಶಸ್ತಿಯ ಜೊತೆಗೆ ತಲಾ 04 ಸಾವಿರ ರೂ. ನಗದು ಬಹುಮಾನವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.  ಯಲಬುರ್ಗಾ ತಾಲೂಕು ಮಂಗಳೂರಿನ ಕಲ್ಲಪ್ಪ ಕವಳಕೇರಿ ಅವರು ಬರೆದ ಹಕ್ಕಿಗೂಡು- ಪರಿಸರ ಉಳಿಸಿ ಜೀವಿಗಳ ರಕ್ಷಿಸಿ ಮಕ್ಕಳ ಕವನ ಸಂಕಲನವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ತಾವರಗೇರಾ : ಖಾಸಗಿ ಬೋರ್‍ವೆಲ್ ವಶಕ್ಕೆ ಪಡೆಯಲು ಡಿಸಿ ಸೂಚನೆ


ಕೊಪ್ಪಳ ಫೆ. 22 (ಕರ್ನಾಟಕ ವಾರ್ತೆ): ತಾವರಗೇರಾ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಜಿನುಗು ಕೆರೆ ಪಕ್ಕದಲ್ಲಿ ಖಾಸಗಿ ವ್ಯಕ್ತಿಗಳು ಕೊರೆದಿರುವ ಬೋರ್‍ವೆಲ್‍ಗಳನ್ನು  ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. 
 
     ತಾವರಗೇರಾ ಪಟ್ಟಣಕ್ಕೆ ಬುಧವಾರದಂದು ಭೇಟಿ ನೀಡಿ, ಅಲ್ಲಿನ ಕುಡಿಯುವ ನೀರು ಪೂರೈಕೆ ಕುರಿತ ಸ್ಥಿತಿ-ಗತಿಗಳನ್ನು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ತಾವರಗೇರಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಜಿನುಗು ಕೆರೆಯ ಪಕ್ಕದಲ್ಲಿ ಕೆಲ ಖಾಸಗಿ ವ್ಯಕ್ತಿಗಳು ಬೋರ್‍ವೆಲ್‍ಗಳನ್ನು ಕೊರೆಯಿಸಿರುವುದನ್ನು ಪರಿಶೀಲಿಸಿದರು.  ಈಗಾಗಲೇ ಕೆರೆಯ ಪಕ್ಕದಲ್ಲಿ ಖಾಸಗಿಯವರು ಕೊರೆದಿರುವ ಬೋರ್‍ವೆಲ್‍ಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಂಡು ತಾವರಗೇರಾ ಪಟ್ಟಣಕ್ಕೆ ನೀರು ಒದಗಿಸಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರವರಿಗೆ ಹಾಗೂ ಪ.ಪಂ. ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪಟ್ಟಣ ಪಂಚಾಯತ್ ವತಿಯಿಂದ ಕೆರೆಯ ಪಕ್ಕದಲ್ಲಿ ಬೋರ್‍ವೆಲ್‍ಗಳನ್ನು ಕೊರೆಯಿಸಲಾಗಿತ್ತು.  ಆದರೆ ಈ ಬೊರ್‍ವೆಲ್‍ಗಳನ್ನು ದುಷ್ಕರ್ಮಿಗಳು ಮುಚ್ಚಿದ್ದು, ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಮೊಕ್ಕದ್ದಮೆ ದಾಖಲಿಸಲಾಗಿದೆ.    ಸರ್ಕಾರದ ಬೋರ್‍ವೆಲ್‍ಗಳನ್ನು ಮುಚ್ಚಿದ ದುಷ್ಕರ್ಮಿಗಳಿಗೆ ಶಿಕ್ಷೆಯಾಗುವಂತೆ ಕಾನೂನಾನ್ಮತಕ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದರು.
 
      ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು ನೀರಿನ ಅಭದ್ರತೆಯನ್ನು ತಪ್ಪಿಸಲು ತಾವರಗೇರಾ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಖಾಸಗಿ ಮಾಲೀಕತ್ವದಲ್ಲಿರುವ ಬೋರ್‍ವೆಲ್‍ಗಳನ್ನು ಬೇಸಿಗೆ ಕುಡಿಯುವ ನೀರಿನ ಪೂರೈಕೆಗಾಗಿ ಸರ್ಕಾರದ ಸುಪರ್ದಿಗೆ ನೀಡಲು ಖಾಸಗಿ ಬೋರ್‍ವೆಲ್ ಮಾಲೀಕರು ಸಹಕರಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.  ಅಲ್ಲದೆ ನೀರನ್ನು ಮಿತವಾಗಿ ಬಳಸುವಚಿತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸೋರಿಕೆಯನ್ನು ತಡೆಗಟ್ಟಲು ಹಾಗೂ ನೀರಿನ ಅಭಾವ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಬೇಕು. ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ ಹಾಗೂ ಅಭಿವೃದ್ದಿ ಕಾರ್ಯಗಳನ್ನು ತ್ವರಿತವಾಗಿ ಅನುಷ್ಟಾನಗೊಳಿಸುವಂತೆ ಮುಖ್ಯಾಧಿಕಾರಿಗೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಸೂಚಿಸಿದರು.
    ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ,  ಕುಷ್ಟಗಿ ತಹಶೀಲ್ದಾರ್ ಗಂಗಪ್ಪ, ಸೇರಿದಂತೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದರು.

ಕುಡಿಯುವ ನೀರು ಯೋಜನೆಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಿ- ಶೇಖರಪ್ಪ ನಾಗರಳ್ಳಿ

ಕೊಪ್ಪಳ, ಫೆ.22(ಕರ್ನಾಟಕ ವಾರ್ತೆ): ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಗಳನ್ನು ಮಾರ್ಚ್ ತಿಂಗಳ ಅಂತ್ಯದೊಳಗೆ ಆದ್ಯತೆ ಮೇರೆಗೆ ಪೂರ್ಣಗೊಳಿಸುವಂತೆ ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಗ್ರಾಮೀಣ ಕುಡಿಯುವ ನೀರು ಯೋಜನೆಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುವ ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಕೊಠಡಿಯಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕೊಪ್ಪಳ ಜಿಲ್ಲೆಗೆ ಪ್ರಸಕ್ತ ಸಾಲಿಗೆ ಗ್ರಾಮೀಣ ಕುಡಿಯುವ ನೀರು ಯೋಜನೆಗಳಿಗೆ ಸಂಬಂಧಿಸಿದಂತೆ 73. 92 ಕೋಟಿ ರೂ. ಅನುದಾನವನ್ನು ಸರ್ಕಾರ ಒದಗಿಸಿದೆ.  ಈವರೆಗೆ 63. 18 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದುವರೆಗೂ 36. 57 ಕೋಟಿ ರೂ. ಮಾತ್ರ ವೆಚ್ಚವಾಗಿದೆ.  ಬೇಸಿಗೆಯ ಕಾಲ ಈಗಾಗಲೆ ಪ್ರಾರಂಭವಾಗಿದ್ದು, ಮುಂಗಾರು ಮತ್ತು ಹಿಂಗಾರು ಮಳೆಯ ಕೊರತೆಯ ಕಾರಣದಿಂದ ಜಿಲ್ಲೆಯ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಈಗಲೆ ಕುಡಿಯುವ ನೀರಿನ ತೊಂದರೆ ಕಂಡುಬರುತ್ತಿದೆ.  ಸರ್ಕಾರ ಒದಗಿಸಿರುವ ಅನುದಾನದಲ್ಲಿ ಗ್ರಾಮೀಣ ಕುಡಿಯುವ ನೀರು ಯೋಜನೆಗಳನ್ನು ಕೂಡಲೆ ಪೂರ್ಣಗೊಳಿಸಿ, ಜನರಿಗೆ ನೀರು ಪೂರೈಸುವಂತಾಗಬೇಕು.  ಲಭ್ಯವಿರುವ ಅನುದಾನ ವ್ಯರ್ಥವಾಗದಂತೆ ಮಾರ್ಚ್ ಅಂತ್ಯದೊಳಗೆ ಅನುದಾನವನ್ನು ಸದ್ಬಳಕೆ ಮಾಡಿಕೊಂಡು, ಕುಡಿಯುವ ನೀರು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.  ಕುಡಿಯುವ ನೀರು ಶುದ್ಧೀಕರಣ ಘಟಕಗಳಿಗೆ ಬಿಲ್ ಪಾವತಿಸಲು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‍ಐಡಿಎಲ್) ಹಣ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಮಾತನಾಡಿ, ಬೇಸಿಗೆಯಲ್ಲಿ ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರು ಸಮಸ್ಯೆ ಕಂಡುಬಂದಲ್ಲಿ, ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು, ಸಮಸ್ಯೆ ಪರಿಹರಿಸಬೇಕು.  ಪ್ರತಿದಿನ ಸಾಗಾಣಿಕೆ ಮೂಲಕ ಹಾಗೂ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸುತ್ತಿರುವ ಗ್ರಾಮಗಳ ವಿವರವನ್ನು ಜಿಲ್ಲಾ ಪಂಚಾಯತಿ ಸೂಚನಾ ಫಲಕದಲ್ಲಿ ನಮೂದಿಸಬೇಕು.  ಬರ ಪರಿಹಾರ ಕಾರ್ಯಪಡೆ ನಿಧಿಯಲ್ಲಿ ಕುಡಿಯುವ ನೀರು ಕಾಮಗಾರಿಗಳನ್ನು ಕೈಗೊಂಡು, ನೀರಿನ ಸಮಸ್ಯೆಗಳಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ತ್ವರಿತವಾಗಿ ಸ್ಪಂದಿಸಿ, ಸಮರ್ಪಕ ನೀರು ಪೂರೈಕೆಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಬಿ.ಬಿ. ಬಟ್ಟೂರ, ಸೇರಿದಂತೆ ಎಲ್ಲ ತಾಲೂಕುಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು ಪಾಲ್ಗೊಂಡಿದ್ದರು.

Tuesday, 21 February 2017

ಛತ್ರಪತಿ ಶಿವಾಜಿ ಅಪ್ರತಿಮ ದೇಶಭಕ್ತ – ಕೆ. ರಾಘವೇಂದ್ರ ಹಿಟ್ನಾಳ್


ಕೊಪ್ಪಳ,ಫೆ.21 (ಕರ್ನಾಟಕ ವಾರ್ತೆ): ಸ್ವರಾಜ್ಯ ಕಲ್ಪನೆಯ ರೂವಾರಿಯಾದ ಛತ್ರಪತಿ ಶಿವಾಜಿ ಅಪ್ರತಿಮ ದೇಶಭಕ್ತರಾಗಿದ್ದರು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಬಣ್ಣಿಸಿದರು.

     ನಗರದ ಸರ್ಕಾರಿ ನೌಕರರ ಸಾಂಸ್ಕøತಿಕ ಭವನದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಜಯಂತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಛತ್ರಪತಿ ಶಿವಾಜಿ ಮಹಾರಾಜರು ಅಪ್ರತಿಮ ದೇಶಭಕ್ತರಾಗಿದ್ದರು.  ರಾಷ್ಟ್ರಾಭಿಮಾನಕ್ಕೆ ಶಿವಾಜಿ ಎನ್ನುವ ಹೆಸರೇ ಪ್ರೇರಣಾ ಶಕ್ತಿಯಾಗಿದೆ.  ಭಾರತದ ಇತಿಹಾಸದಲ್ಲಿ ಪ್ರಸಿದ್ಧ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿದ ಶಿವಾಜಿ, ಚಿಕ್ಕ ವಯಸ್ಸಿನಲ್ಲಿಯೇ ದೇಶಾಭಿಮಾನ ಬೆಳೆಸಿಕೊಂಡಿದ್ದರು.  ಬಾಲ್ಯದಲ್ಲಿಯೇ ಸೈನ್ಯವನ್ನು ಕಟ್ಟಿದ ಕೀರ್ತಿ ಶಿವಾಜಿಯದ್ದು.  ಸ್ವರಾಜ್ಯ ಕಲ್ಪನೆಯ ರೂವಾರಿಯಾಗಿದ್ದ ಶಿವಾಜಿಗೆ, ಆತನ ತಾಯಿಯೇ ಉತ್ತಮ ವ್ಯಕ್ತಿತ್ವ ರೂಪಿಸುವ ಶಕ್ತಿಯಾಗಿದ್ದಳು.  ತನ್ನ ಹೋರಾಟ ಪ್ರವೃತ್ತಿಯಿಂದಲೇ ಸಾಮ್ರಾಜ್ಯ ಕಟ್ಟಿದ ಶಿವಾಜಿ, ಮೂಲಭೂತ ಹಕ್ಕನ್ನು ಹೋರಾಟದಿಂದಲೇ ಪಡೆಯುವುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದರು.  ಸಾಧನೆಯ ಮೂಲಕ ತಾಯಿ ಜೀಜಾಬಾಯಿಗೆ ಗೌರವ ಅರ್ಪಿಸಿದ ಮಾತೃಪ್ರೇಮಿ ಛತ್ರಪತಿ ಶಿವಾಜಿ. ಇಂತಹ ಮಹನೀಯರ ಚರಿತ್ರೆಯನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವುದಲ್ಲದೆ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.  ಮರಾಠ ಸಮಾಜದವರಿಗೆ ಕೊಪ್ಪಳದಲ್ಲಿ ಸಮುದಾಯ ಭವನ ನಿರ್ಮಿಸುವ ಬೇಡಿಕೆ ಇದ್ದು, ಛತ್ರಪತಿ ಶಿವಾಜಿ ಸಮುದಾಯ ಭವನವನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.  ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
      ಛತ್ರಪತಿ ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿದ ಕೊಪ್ಪಳ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕ ವಿಜಯಕುಮಾರ ಬೋಂದಾಡೆ  ಅವರು, ಶಿವಾಜಿಯು ಧಾರ್ಮಿಕ ಸಮಾನತೆ, ಮೂಲಭೂತ ಹಕ್ಕುಗಳನ್ನು ಗೌರವಿಸುವಂತೆ ಮಾಡಿದ್ದರು.  ಜಗತ್ತಿನಲ್ಲಿಯೇ ಮೊದಲ ಬಾರಿಗೆ ಎಲ್ಲ ಬಗೆಯ ಯುದ್ಧ ತಂತ್ರಗಳನ್ನು ಅಳವಡಿಸಿಕೊಂಡ ಶ್ರೇಷ್ಠ ರಣಕಲಿ ಶಿವಾಜಿ ಮಹಾರಾಜರು.  ಶಿವಾಜಿಯು ರಾಷ್ಟ್ರದ ಪ್ರತಿಯೊಬ್ಬ ಯುವಕರಿಗೂ ದೇಶಪ್ರೇಮ ಬಿಂಬಿಸುವ ಪ್ರತೀಕ.  ವ್ಯಕ್ತಿತ್ವ ರೂಪಿಸಿಕೊಳ್ಳಲು ಶಿವಾಜಿಯೇ ಮಾದರಿ ಎಂದರು.
     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ತಹಸಿಲ್ದಾರ್, ಗುರುಬಸವರಾಜ, ನಗರಸಭೆ ಸದಸ್ಯರುಗಳಾದ ಅಮ್ಜದ್ ಪಟೇಲ್, ಮುತ್ತುರಾಜ್ ಕುಷ್ಟಗಿ, ಬಾಳಪ್ಪ ಬಾರಕೇರ, ಗವಿಸಿದ್ದಪ್ಪ ಚಿನ್ನೂರ, ಮಾರುತಿ, ರಾಮಣ್ಣ ಹದ್ದಿನ ಸೇರಿದಂತೆ ನಾಗರಾಜ ಬಡಿಗೇರ, ಪ್ರಸನ್ನ ಗಡಾದ, ಫಕೀರಪ್ಪ ಆರೇರ, ಮಾರುತಿ ನಿಕ್ಕಂ ಸೇರಿದಂತೆ  ಹಲವು ಗಣ್ಯರು ಉಪಸ್ಥಿತರಿದ್ದರು.  ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷಣಮೂರ್ತಿ ದೇಸಾಯಿ ಸ್ವಾಗತಿಸಿ, ವಂದಿಸಿದರು.  ಸಿ.ವಿ. ಜಡಿಯವರ್ ನಿರೂಪಿಸಿದರು. ಸದಾಶಿವ ಪಾಟೀಲ, ರಾಮಚಂದ್ರಪ್ಪ ಉಪ್ಪಾರ್ ಅವರ ತಂಡ ನಾಡಗೀತೆ ಮತ್ತು ರೈತಗೀತೆ ಪ್ರಸ್ತುತಪಡಿಸಿತು.
     ಶಿವಾಜಿ ಜಯಂತಿ ಅಂಗವಾಗಿ ಶಿವಾಜಿ ಭಾವಚಿತ್ರದ ಮೆರವಣಿಗೆ   ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಭ ಮಾರ್ಗವಾಗಿ ತುಳಜಾಭವಾನಿ ದೇವಸ್ಥಾನದವರೆಗೆ ನೆರವೇರಿತು.  ಹಲವು ಜಾನಪದ ಮತ್ತು ಸಾಂಸ್ಕøತಿಕ ಕಲಾತಂಡಗಳು ಮೆರವಣಿಗೆಯನ್ನು ಆಕರ್ಷಕಗೊಳಿಸಿದವು.

ಮಕ್ಕಳ ಹಕ್ಕುಗಳನ್ನು ಎಲ್ಲರೂ ಗೌರವಿಸಿ- ಬಿ. ದಶರಥ

ಕೊಪ್ಪಳ ಫೆ. 21 (ಕರ್ನಾಟಕ ವಾರ್ತೆ): ಬಾಲಕಾರ್ಮಿಕ ಪದ್ಧತಿ ಎನ್ನುವ ಅನಿಷ್ಠ ಸಾಮಾಜಿಕ ಪಿಡುಗನ್ನು ಸಮಾಜದಿಂದ ಸಂಪೂರ್ಣ ನಿರ್ಮೂಲನೆ ಮಾಡಬೇಕಿದ್ದು, ಈ ದಿಸೆಯಲ್ಲಿ ಎಲ್ಲರೂ ಮಕ್ಕಳ ಹಕ್ಕುಗಳಿಗೆ ಗೌರವ ನೀಡುವಂತಾಗಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ. ದಶರಥ ಅವರು ಹೇಳಿದರು.
     ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಶಿಕ್ಷಣ ಮತ್ತು ಮಾನವ ಅಭಿವೃದ್ಧಿ ಸಂಸ್ಥೆ ಕೊಪ್ಪಳ  ಇವರ ಸಹಯೋಗದಲ್ಲಿ ಕೊಪ್ಪಳದ ಕೊಟಗಾರಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಬಾಲಕಾರ್ಮಿಕ ಮತ್ತು ಹದಿಹರೆಯದವರ ದುಡಿಮೆ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಗೆ ಕಳೆದ ವರ್ಷ ತಿದ್ದುಪಡಿಯಾಗಿದೆ.  ಈ ಮೊದಲು 14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಬಳಸುವಂತಿರಲಿಲ್ಲ. ಕಾಯ್ದೆ ತಿದ್ದುಪಡಿಯಿಂದಾಗಿ, ಇದೀಗ 18 ವರ್ಷದೊಳಗಿನ ಯಾವುದೇ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಅಥವಾ ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿದಲ್ಲಿ 2 ವರ್ಷ ಜೈಲು ಹಾಗೂ 50 ಸಾವಿರ ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.  ಅಲ್ಲದೆ ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆಯನ್ವಯ 18 ವರ್ಷದೊಳಗಿನ ಮಕ್ಕಳನ್ನು ದುಡಿಸುವುದು ಶಿಕ್ಷಾರ್ಹ ಅಪರಾಧ,  ಕಾಯ್ದೆ ಉಲ್ಲಂಘಿಸಿದಲ್ಲಿ 5 ವರ್ಷ ಜೈಲು ಹಾಗು 01 ಲಕ್ಷ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.  ಮಕ್ಕಳನ್ನು ದುಡಿಸಿಕೊಳ್ಳುವುದು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು.  ಮಕ್ಕಳ ಹಕ್ಕುಗಳ ಬಗ್ಗೆ ಶಾಲಾ ಹಂತದಲ್ಲಿಯೇ ಶಿಕ್ಷಕರು ಅರಿವು ಮೂಡಿಸಬೇಕು.  ಕಾನೂನನ್ನು ಗೌರವಿಸುವುದು ಎಲ್ಲರ ಕರ್ತವ್ಯವವಾಗಿದ್ದು, ಮಕ್ಕಳು ವಿದ್ಯಾವಂತರಾದರೆ, ಬಲಿಷ್ಟ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ. ದಶರಥ ಅವರು ಹೇಳಿದರು.
     ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಲಂಕೇಶ್ ಅವರು ಮಾತನಾಡಿ, ಬಾಲಕಾರ್ಮಿಕ ಪದ್ಧತಿ ಎಂಬುದು ನಮ್ಮ ಸಮಾಜಕ್ಕೆ ಅಂಟಿದ ಸಾಮಾಜಿಕ ಪಿಡುಗು.  ಹಾಗೂ ಇದೊಂದು ರಾಷ್ಟ್ರೀಯ ಸಮಸ್ಯೆಯಾಗಿದೆ.  ಇದರ ನಿರ್ಮೂಲನೆಗೆ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ, ಕಾಯ್ದೆ, ಕಾನೂನುಗಳು ಜಾರಿಯಾಗಿದ್ದರೂ, ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗಿಲ್ಲ.  ಮಕ್ಕಳು ಉತ್ತಮ ಪರಿಸರ, ವಾತಾವರಣದಲ್ಲಿ ಶಿಕ್ಷಣದ ನಡುವೆ ಬದುಕಬೇಕಾಗಿದೆ. ಹೋಟೆಲ್, ಕಾರ್ಖಾನೆ, ಕೋಳಿಫಾರಂ, ಫುಟ್‍ಪಾತ್ ವ್ಯಾಪಾರಕ್ಕೆ ಮಕ್ಕಳನ್ನು ದುಡಿಯಲು ಕಳುಹಿಸುವುದು ಕಂಡುಬರುತ್ತಿದೆ.  ರಾಜ್ಯದಲ್ಲಿನ ಮಕ್ಕಳ ಪೈಕಿ ಶೇ. 10. 2 ರಷ್ಟು ಮಕ್ಕಳು ಬಾಲಕಾರ್ಮಿಕ ಪದ್ಧತಿಯಲ್ಲಿದ್ದಾರೆ ಎಂಬುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.  ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಾಲಕಾರ್ಮಿಕತೆ ಹೆಚ್ಚು ಕಂಡುಬಂದಿದೆ.  ಬಾಲ್ಯದಿಂದಲೇ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
      ಡಾ. ಬಿ.ಆರ್. ಅಂಬೇಡ್ಕರ್ ಶಿಕ್ಷಣ ಮತ್ತು ಮಾನವ ಅಭಿವೃದ್ಧಿ ಸಂಸ್ಥೆಯ ಜಿಲ್ಲಾಧ್ಯಕ್ಷ ಜ್ಞಾನಸುಂದರ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ಪ.ಜಾತಿ ಮತ್ತು ಪ.ಪಂಗಡದಲ್ಲಿ ಹೆಚ್ಚು ಕಂಡುಬರುತ್ತದೆ.  ಬಡತನ, ಅನಕ್ಷರತೆ ಇದಕ್ಕೆ ಪ್ರಮುಖ ಕಾರಣವಾಗಿರಬಹುದಾಗಿದೆ.  ಇಂತಹ ಸಮಾಜವನ್ನು ಶಿಕ್ಷಣದ ಮೂಲಕವೇ ಮುಖ್ಯವಾಹಿನಿಗೆ ತರಲು ಸಾಧ್ಯ ಎಂದರು.
     ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಟಗಾರಗೇರಾ ಶಾಲೆಯ ಮುಖ್ಯೋಪಾಧ್ಯಯ ಕೆ. ಮಹಾಬಳೇಶ್ವರ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಸಮಾಜ ಕಲ್ಯಾಣ ಇಲಾಖೆಯ ಸೋಮಣ್ಣ, ಕಾರ್ಮಿಕ ಇಲಾಖೆಯ ಹೊನ್ನಪ್ಪ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ  ಅವರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಪ್ರೋತ್ಸಾಹ ಧನ : ಅರ್ಜಿ ಸಲ್ಲಿಕೆ ಅವಧಿ ಫೆ. 28 ರವರೆಗೆ ವಿಸ್ತರಣೆ

ಕೊಪ್ಪಳ, ಫೆ.21(ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮಂಜೂರಾತಿಗಾಗಿ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಫೆ. 28 ರವರೆಗೆ ವಿಸ್ತರಿಸಲಾಗಿದೆ.
    ಸರ್ಕಾರದ ಆದೇಶಗಳ ಅನ್ವಯ 2015-16ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳ ಪಬ್ಲಿಕ್ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಅಥವಾ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರೋತ್ಸಾಹ ಧನ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿ, ಜ. 25 ಕೊನೆ ದಿನವನ್ನಾಗಿ ನಿಗದಿಪಡಿಸಲಾಗಿತ್ತು.  ಆದರೆ ಹಲವು ವಿಶ್ವವಿದ್ಯಾಲಯಗಳ ಫಲಿತಾಂಶ ಇನ್ನೂ ಪ್ರಕಟವಾಗದಿರುವ ಅಥವಾ ತಡವಾಗಿ ಪ್ರಕಟವಾಗಿರುವ ಹಾಗೂ ಪ್ರಮಾಣಪತ್ರಗಳನ್ನು ನೀಡದಿರುವ ಸಾಧ್ಯತೆಗಳು ಇರುವುದರಿಂದ, ಅರ್ಜಿ ಸಲ್ಲಿಕೆ ಅವಧಿಯನ್ನು ಫೆ. 28 ರವರೆಗೆ ವಿಸ್ತರಿಸಲಾಗಿದೆ.  ದ್ವಿತೀಯ ಪಿಯುಸಿ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ಕೃಷಿ, ಇಂಜಿನಿಯರಿಂಗ್, ವೈದ್ಯಕೀಯ, ಪಶುಸಂಗೋಪನೆ ಕೋರ್ಸ್ ಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪ್ರೋತ್ಸಾಹಧನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಫೆ.28 ಕೋನೆಯ ದಿನವಾಗಿದ್ದು,  www.sw.kar.nic.in ನಲ್ಲಿ ಸಲ್ಲಿಸಬೇಕು.  ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ ಪ್ರತಿಯನ್ನು ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಇವರಿಗೆ ಮಾ. 02 ರಂದು ಖುದ್ದಾಗಿ ಸಲ್ಲಿಸಬೇಕು.  ಆನ್‍ಲೈನ್‍ನಲ್ಲಿ ಸ್ವೀಕೃತವಾದ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳು, ಕೊಪ್ಪಳ ಇವರ ಅಧ್ಯಕ್ಷತೆಯ ಸಮಿತಿಯಲ್ಲಿ ಮಂಡಿಸಿ, ನಂತರ ಪ್ರೋತ್ಸಾಹಧನವನ್ನು ಮಂಜೂರು ಮಾಡಲಾಗುವುದು ಎಂದು ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಫೆ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಫೆ. 23 ರಿಂದ 25 ರವರೆಗೆ ಮೂರು ದಿನಗಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಬಸವರಾಜ ರಾಯರಡ್ಡಿ ಅವರು, ಫೆ. 23 ರಂದು ಬೆಳಿಗ್ಗೆ 7 ಗಂಟೆಗೆ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಕೊಪ್ಪಳಕ್ಕೆ ಆಗಮಿಸುವರು.  ನಂತರ ಬೆಳಿಗ್ಗೆ 11 ಗಂಟೆಗೆ ಪಕ್ಷದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವರು.  ಮಧ್ಯಾಹ್ನ 2-30 ಗಂಟೆಗೆ ಯಲಬುರ್ಗಾಕ್ಕೆ ತೆರಳಿ, ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸುವರು.  ರಾತ್ರಿ 8 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ಫೆ. 24 ರಂದು ಬೆಳಿಗ್ಗೆ 9 ಗಂಟೆಯಿಂದ ಯಲಬುರ್ಗಾ ತಾಲೂಕಿನ ಬೆಣಕಲ್, ಇಟಗಿ, ಬನ್ನಿಕೊಪ್ಪ, ಯರೇಹಂಚಿನಾಳ, ಕರಮುಡಿ, ಹಿರೇಮ್ಯಾಗೇರಿ, ಮುಧೋಳ, ಚಿಕ್ಕಮ್ಯಾಗೇರಿ ಗ್ರಾಮಗಳಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ನೆರವೇರಿಸುವರು.  ರಾತ್ರಿ 08 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ಫೆ. 25 ರಂದು ಬೆಳಿಗ್ಗೆ 09 ಗಂಟೆಯಿಂದ ಯಲಬುರ್ಗಾ ತಾಲೂಕಿನ ರ್ಯಾವಣಕಿ, ಮಂಗಳೂರು, ನೆಲಜೇರಿ, ಹಿರೇವಂಕಲಕುಂಟಾ, ಚಿಕ್ಕವಂಕಲಕುಂಟಾ ಗ್ರಾಮಗಳಲ್ಲಿ ಸುವರ್ಣ ಗ್ರಾಮ ಯೋಜನೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ನೆರವೇರಿಸಿ, ಸಂಜೆ 04 ಗಂಟೆಗೆ ಯಲಬುರ್ಗಾದಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ನಡೆಸುವರು.  ಮಂತ್ರಿಗಳು ಅಂದು ರಾತ್ರಿ 8 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ಹಂಪಿ ಎಕ್ಸ್‍ಪ್ರೆಸ್ ರೈಲು ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

ಫೆ.22 ರಿಂದ ಕೊಪ್ಪಳದಲ್ಲಿ ರಸ್ತೆ ಸಂಚಾರ ಸಮೀಕ್ಷೆ

ಕೊಪ್ಪಳ, ಫೆ.21(ಕರ್ನಾಟಕ ವಾರ್ತೆ): ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ವತಿಯಿಂದ ಕೊಪ್ಪಳದಲ್ಲಿ ಫೆ.22 ರ ಬೆಳಿಗ್ಗೆ 6.00 ಗಂಟೆಯಿಂದ ಫೆ.24 ರ ಬೆಳಿಗ್ಗೆ 6.00 ಗಂಟೆಯವರೆಗೆ ಎರಡು ದಿನಗಳ ಕಾಲ ವಾಹನಗಳ ರಸ್ತೆ ಸಂಚಾರ ಸಮೀಕ್ಷೆ ನಡೆಯಲಿದೆ.
    ಕೊಪ್ಪಳ ಜಿಲ್ಲೆಯ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ವತಿಯಿಂದ ಪ್ರತಿ ವರ್ಷಕೊಮ್ಮೆ ಎರಡು ದಿನಗಳ ವರೆಗೆ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ವಾಹನ ಸಂಚಾರ ಗಣತಿ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದೆ.  ಈ ಸಮೀಕ್ಷೆಯಿಂದ ಸಂಗ್ರಹಿಸಿದ ಮಾಹಿತಿಯಿಂದ ರಸ್ತೆಗಳ ಸಂಚಾರ ಸಾಂದ್ರತೆ, ಸಂಚಾರ ತೀವ್ರತೆ ಕಂಡು ಹಿಡಿಯುವುದಕ್ಕೆ ಹಾಗೂ ರಸ್ತೆಗಳ ಅಗಲಳತೆ ನಿರ್ಧರಿಸಲು, ರಸ್ತೆಗಳನ್ನು ಮೇಲ್ದರ್ಜೆಗೇರಿಸಲು, ರಸ್ತೆಗಳ ಸ್ಥಿತಿಗತಿ ಸುಧಾರಿಸಲು ಅನುಕೂಲವಾಗುತ್ತದೆ.  ಫೆ.22 ರ ಬೆಳಿಗ್ಗೆ 6.00 ಗಂಟೆಯಿಂದ ಫೆ.24 ರ ಬೆಳಿಗ್ಗೆ 6.00 ಗಂಟೆ ಯವರೆಗೆ ಎರಡು ದಿನ ಒಟ್ಟು 48 ಗಂಟೆಗಳ ಕಾಲ ರಸ್ತೆ ಸಂಚಾರ ಸಮೀಕ್ಷೆ ಕಾರ್ಯವನ್ನು  ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಸ್ಥಾಪಿಸಲಾಗುವ ಸಮೀಕ್ಷೆ ಕೇಂದ್ರಗಳಲ್ಲಿ ಕೈಗೊಳ್ಳಲಾಗುವುದು.
    ಸಮೀಕ್ಷೆ ಕೇಂದ್ರಗಳಿದ್ದಲ್ಲಿ ‘ವಾಹನಗಳ ರಸ್ತೆ ಸಂಚಾರ ಸಮೀಕ್ಷೆ ಕೇಂದ್ರವಿದೆ’ ಹಾಗೂ ‘ತಮ್ಮ ವಾಹನವನ್ನು ನಿಧಾನವಾಗಿ ಚಲಿಸಿ’ ಎಂಬ ಸೂಚನಾ ಫಲಕಗಳಿದ್ದು, ಎಲ್ಲಾ ವಾಹನ ಚಾಲಕರು ತಮ್ಮ ವಾಹನವನ್ನು ನಿಧಾನವಾಗಿ ಸಾಗಿಸಿಕೊಂಡು ಮುಂದೆ ಸಾಗಬೇಕು.  ಈ ಮೂಲಕ ಸಮೀಕ್ಷಾ ಕಾರ್ಯಕ್ಕೆ ಸಹಕರಿಸಬೇಕು ಎಂದು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಕಾರ್ಯನಿರ್ವಾಹಕ ಇಂಜಿನೀಯರ ಪ್ರಕಟಣೆಯಲ್ಲಿ ಕೋರಿದ್ದಾರೆ.

ಫೆ.22 ರಂದು ಕೊಪ್ಪಳದಲ್ಲಿ ಜಿಲ್ಲಾ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರಧಾನ ಸಮಾರಂಭ

ಕೊಪ್ಪಳ, ಫೆ.21(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಬೇವೂರಿನ ಕೂಡಲಸಂಗಮೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆ ವತಿಯಿಂದ ಜಿಲ್ಲಾ ಪರಿಸರ ಮಿತ್ರ ಶಾಲೆ 2016-17 ರ ಪ್ರಶಸ್ತಿ ಪ್ರಧಾನ ಸಮಾರಂಭ ಫೆ.22 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಡಳಿತ ಭವನ ಆಡಿಟೋರಿಯಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
    ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸುವರು.  ಬಳ್ಳಾರಿ ವಿಭಾಗೀಯ ಹಿರಿಯ ಪರಿಸರ ಅಧಿಕಾರಿ ಕೆ.ಎಂ. ನಾಗರಾಜ್ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮ್‍ಸುಂದರ್ ಪಾಲ್ಗೊಳ್ಳುವರು.  ಜಿಲ್ಲಾ ಪರಿಸರ ಮಿತ್ರ ಶಾಲೆ, ಹಸಿರು ಶಾಲೆ ಹಾಗೂ ಹಳದಿ ಶಾಲೆ ಪ್ರಶಸ್ತಿಗೆ ಆಯ್ಕೆಯಾದ ಶಾಲೆಗಳ ವಿವರ ಈ ಕೆಳಗಿನಂತಿದೆ.
    ಗಂಗಾವತಿ ತಾಲೂಕಿನ ಕರಡಿಗುಡ್ಡ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ “ಜಿಲ್ಲಾ ಪರಿಸರ ಮಿತ್ರ ಶಾಲೆ” ಪ್ರಶಸ್ತಿಗೆ ಆಯ್ಕೆಯಾಗಿದೆ. 
ಹಸಿರು ಶಾಲೆ ಪ್ರಶಸ್ತಿಗೆ ಗಂಗಾವತಿ ತಾಲೂಕಿನ ಗುಡ್ಡದ ಕ್ಯಾಂಪ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಯಲಬುರ್ಗಾ ತಾಲೂಕಿನ ಬೇವೂರಿನ ಕೂಡಲಸಂಗಮೇಶ್ವರ ಪ್ರೌಢ ಶಾಲೆ, ಮುರಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬುಕನಟ್ಟಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಂಡಲಮರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.  ಕೊಪ್ಪಳ ತಾಲೂಕು ಕೊಪ್ಪಳದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಹೊಸಮುದ್ಲಾಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಜಿನ್ನಾಪುರ ಚಿಕ್ಕತಾಂಡಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಇರಕಲ್‍ಗಡ ಈಶ್ವರ ಪ್ರಾಥಮಿಕ ಶಾಲೆ, ಹಾಗೂ ಹೊಸಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿವೆ.
    ಹಳದಿ ಶಾಲೆ ಪ್ರಶಸ್ತಿಗೆ ಯಲಬುರ್ಗಾ ತಾಲೂಕಿನ ಗೆದಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೇವೂರ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಕುದುರೆಮೋತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.  ಕೊಪ್ಪಳ ತಾಲೂಕಿನ ಅಗಳಕೇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಿಳೇಬಾವಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಳೇಲಿಂಗಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.  ಕುಷ್ಟಗಿ ತಾಲೂಕಿನ ಕಾಟಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,  ಹಾಬಲಕಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.  ಗಂಗಾವತಿ ತಾಲೂಕಿನ ಹುಳ್ಕಿಹಾಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ,  ನರಸಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ “ಹಳದಿ ಶಾಲೆ’ ಪ್ರಶಸ್ತಿಗೆ ಆಯ್ಕೆಗೊಂಡಿವೆ ಎಂದು ಕೊಪ್ಪಳ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Monday, 20 February 2017

ದೇಶಿ ತಳಿ ದನಗಳ ವೀರ್ಯ ಸಂಸ್ಕರಣಾ ಕೇಂದ್ರಕ್ಕೆ 03 ಕೋಟಿ ರೂ. ಅನುದಾನ- ಎ. ಮಂಜು

ಕೊಪ್ಪಳ, ಫೆ.20  (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯ ಮುನಿರಾಬಾದಿನಲ್ಲಿ ದೇಶಿ ತಳಿ ದನಗಳ ವೀರ್ಯ ಸಂಸ್ಕರಣಾ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ 03 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಎ. ಮಂಜು ಅವರು ಹೇಳಿದರು.

     ತಾಲೂಕಿನ ಮುನಿರಾಬಾದಿನ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಆವರಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ದೇಶಿ ತಳಿ ದನಗಳ ವೀರ್ಯ ಸಂಸ್ಕರಣಾ ಕೇಂದ್ರದ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

     ದೇಶಿ ತಳಿಗಳಿಂದ ಗುಣಮಟ್ಟದ ಹಾಲು ಉತ್ಪಾದನೆಯ ಜೊತೆಗೆ ಜನರ ಆರೋಗ್ಯ ಸುಧಾರಣೆ ಸಾಧ್ಯ ಎನ್ನುವ ಅಂಶವನ್ನು ತಜ್ಞರು ಸಂಶೋಧನೆಗಳಿಂದ ದೃಢಪಡಿಸಿದ್ದಾರೆ.  ದೇಶಿ ತಳಿ ದನಗಳ ಸಂರಕ್ಷಣೆ ಹಾಗೂ ದೇಶಿ ತಳಿ ದನಗಳ ಉತ್ಪಾದಕತೆಯನ್ನು ಉತ್ತಮಪಡಿಸುವ ಉದ್ದೇಶದಿಂದ ಅಮೃತ ಮಹಲ್, ಹಳ್ಳಿಕಾರ್, ದೇವಣಿ, ಖಿಲಾರ್, ಮಲ್ನಾಡ್‍ಗಿಡ್ಡ, ಕೃಷ್ಣಾ ವ್ಯಾಲಿಯಂತಹ ದೇಶಿ ತಳಿಯ ದನಗಳನ್ನು ಹೆಚ್ಚು, ಬಳಕೆಗೆ ತರುವಂತೆ ಮಾಡಲು ಪಶುಸಂಗೋಪನೆ ಇಲಾಖೆ ಉದ್ದೇಶಿಸಿದೆ.  ಇದಕ್ಕಾಗಿ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮುನಿರಾಬಾದಿನಲ್ಲಿ ದೇಶಿ ತಳಿ ದನಗಳ ವೀರ್ಯ ಸಂಸ್ಕರಣಾ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದ್ದು, ಕಟ್ಟಡ ಹಾಗೂ ಅಗತ್ಯ ಉಪಕರಣಗಳ ಖರೀದಿಗೆ 03 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ.  ಬರುವ 06 ತಿಂಗಳ ಒಳಗಾಗಿ ಈ ಕೇಂದ್ರ ಪ್ರಾರಂಭಗೊಂಡು, ಲೋಕಾರ್ಪಣೆಯಾಗಲಿದೆ.  ದೇಶಿ ಹೋರಿಗಳಿಂದ ವೀರ್ಯವನ್ನು ಸಂಗ್ರಹಿಸಿ, ಸಂಸ್ಕರಿಸಿ, ರಾಜ್ಯದ ಎಲ್ಲ ಜಿಲ್ಲೆಗಳಿಗೆ, ಆಯಾ ಪ್ರದೇಶದ ಭೌಗೋಳಿಕ ಹವಾಗುಣಕ್ಕೆ ಹೊಂದಿಕೊಳ್ಳುವಂತಹ ದೇಶೀಯ ತಳಿಗಳ ದನಗಳನ್ನು ಆಯಾ ಭಾಗಕ್ಕೆ ಪೂರೈಕೆಯಾಗುವ ರೀತಿಯಲ್ಲಿ ವೀರ್ಯ ಸಂಸ್ಕರಣಾ ಕೇಂದ್ರ ಕಾರ್ಯ ನಿರ್ವಹಿಸಲಿದೆ.  ಇದಕ್ಕಾಗಿ 6. 55 ಕೋಟಿ ರೂ. ಅನುದಾನವನ್ನು 2017-18 ನೇ ಸಾಲಿಗೆ ಒದಗಿಸಲಾಗುವುದು.  ರಾಜ್ಯದಲ್ಲಿ ಈ ಹಿಂದೆ ದಿನವೊಂದಕ್ಕೆ 59 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿತ್ತು.  ಇಲಾಖೆ ಕೈಗೊಂಡ ಸುಧಾರಣಾ ಕ್ರಮಗಳಿಂದಾಗಿ ಇದೀಗ 72 ಲಕ್ಷ ಲೀ. ಹಾಲು ಸುಮಾರು 9 ಲಕ್ಷ ರೈತರಿಂದ ನಿತ್ಯ ಸಂಗ್ರಹವಾಗುತ್ತಿದೆ.  ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಪ್ರೋತ್ಸಾಹಧನ 04 ರೂ. ಗಳಿಂದ 05 ರೂ. ಗೆ ಹೆಚ್ಚಿಸಲಾಗಿದ್ದು, ನಿತ್ಯ 3. 5 ಕೋಟಿ ರೂ. ಪ್ರೋತ್ಸಾಹಧನ ಸಂಬಂಧಿಸಿದ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ.  ರೈತರು ಕೃಷಿಯ ಜೊತೆಗೆ ಹೈನುಗಾರಿಕೆ, ರೇಷ್ಮೆಯಂತಹ ಉಪ ಕಸುಬನ್ನು ಹೆಚ್ಚು, ಹೆಚ್ಚು, ಅಳವಡಿಸಿಕೊಂಡರೆ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಎ. ಮಂಜು ಅವರು ಹೇಳಿದರು.

ಪಶುವೈದ್ಯಕೀಯ ಡಿಪ್ಲೋಮಾ ಕಾಲೇಜು :
***************** ಕೊಪ್ಪಳ ತಾಲೂಕಿನ ಮುನಿರಾಬಾದಿನಲ್ಲಿ ಪಶುಸಂಗೋಪನೆ ಇಲಾಖೆಗೆ ಸೇರಿದ ಸಾಕಷ್ಟು ಭೂಮಿ ಲಭ್ಯವಿದ್ದು, ಇಲ್ಲಿ ಪಶು ವೈದ್ಯಕೀಯ ಕಾಲೇಜು ಪ್ರಾರಂಭ ಮಾಡುವಂತೆ ಸ್ಥಳೀಯ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮನವಿ ಸಲ್ಲಿಸಿದ್ದು, ಈಗಾಗಲೆ ಪಶುವೈದ್ಯಕೀಯ ಕಾಲೇಜು ಬೇರೆ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ.  ಪಶು ವೈದ್ಯರ ನೇಮಕದ ಜೊತೆಗೆ ಪಶು ವೈದ್ಯ ಸಹಾಯಕರ ಹುದ್ದೆಗಳೂ ಸಹ ಹೆಚ್ಚು ಖಾಲಿ ಇರುವುದರಿಂದ, ಇದಕ್ಕೆ ಪೂರಕವಾಗುವಂತೆ ಮುನಿರಾಬಾದಿನಲ್ಲಿ ಪಶುವೈದ್ಯಕೀಯ ಡಿಪ್ಲೋಮಾ ಕಾಲೇಜು ಪ್ರಾರಂಭಿಸುವ ಉದ್ದೇಶವಿದ್ದು, ಈ ಕುರಿತು ಬರುವ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ ಸಚಿವ ಎ. ಮಂಜು ಅವರು ಹೇಳಿದರು.
550 ಪಶುವೈದ್ಯರ ನೇರ ನೇಮಕಾತಿ
************ರಾಜ್ಯದಲ್ಲಿ ಪಶು ವೈದ್ಯಾಧಿಕಾರಿಗಳ ವೃಂದದ 695 ಹುದ್ದೆಗಳು ಖಾಲಿ ಇದ್ದು, ಈ ಪೈಕಿ 550 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಶೀಘ್ರ ಭರ್ತಿ ಮಾಡಲಾಗುವುದು.  ಅಲ್ಲದೆ ಹೈದ್ರಾಬಾದ್-ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ 371(ಜೆ) ಅಡಿ 116 ಪಶು ವೈದ್ಯರನ್ನು ಕೂಡ ಶೀಘ್ರ ಭರ್ತಿ ಮಾಡಲಾಗುವುದು.  1512 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಳನ್ನು ಹಂತ ಹಂತವಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಸಚಿವ ಎ. ಮಂಜು ಅವರು ಹೇಳಿದರು.
ಎಲ್ಲ ಹೋಬಳಿಗಳಿಗೆ ಆ್ಯಂಬುಲೆನ್ಸ್ :
*************** ಮನೆ ಬಾಗಿಲಿಗೆ ಪಶುವೈದ್ಯ ಸೇವೆ ನೀಡುವ ಉದ್ದೇಶದಿಂದ ಸಂಚಾರಿ ಪಶು ಚಿಕಿತ್ಸಾ ಸೌಲಭ್ಯವನ್ನು ತಾಲೂಕು ಮಟ್ಟದಿಂದ ಹೋಬಳಿ ಮಟ್ಟಕ್ಕೂ ವಿಸ್ತರಿಸಲಾಗಿದ್ದು, ಈಗಾಗಲೆ ರಾಜ್ಯದ 45 ಹೋಬಳಿಗಳಿಗೆ ಆ್ಯಂಬುಲೆನ್ಸ್ ಒದಗಿಸಲಾಗಿದೆ.  ಈ ವರ್ಷ ಇನ್ನೂ 50 ಹೋಬಳಿಗಳಿಗೆ ಆ್ಯಂಬುಲೆನ್ಸ್ ಮಂಜೂರು ಮಾಡಲಾಗುತ್ತಿದ್ದು, ಬರುವ ದಿನಗಳಲ್ಲಿ ಎಲ್ಲ ಹೋಬಳಿಗಳಿಗೆ ಸಂಚಾರಿ ಪಶು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಲು ಇಲಾಖೆ ಉದ್ದೇಶಿದಿದೆ ಎಂದು ಸಚಿವರು ಹೇಳಿದರು.
     ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ತೀವ್ರ ಬರ ಪರಿಸ್ಥಿತಿಯ ಸಂದರ್ಭದಲ್ಲಿ ಎಲ್ಲ ರೈತರು ಬೆಳೆ ವಿಮೆ ಮಾಡಿಸಲು ಮುಂದಾಗಬೇಕು.  ಕೇವಲ ವ್ಯವಸಾಯದಿಂದ ರೈತರ ಪರಿಸ್ಥಿತಿ ಸುಧಾರಣೆಯಾಗಲು ಸಾಧ್ಯವಾಗದ ಸ್ಥಿತಿ ಈಗಿದೆ.  ಸಾವಯವ ಗೊಬ್ಬರ, ರೇಷ್ಮೆ, ಹೈನುಗಾರಿಕೆಯಂತಹ ಉಪಕಸುಬನ್ನು ರೈತರು ಅಳವಡಿಸಿಕೊಂಡಲ್ಲಿ, ನಿತ್ಯ ಆದಾಯ ಗಳಿಕೆ ಸಾಧ್ಯವಾಗಲಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ.  ಹೈನುಗಾರಿಕೆಯಲ್ಲಿ ಹೊಸ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಶಾಸಕರು, ಮುನಿರಬಾದಿನಲ್ಲಿ ಪಶು ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಅಗತ್ಯ ಮಂಜೂರಾತಿ ನೀಡುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡರು.
     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ತಾ.ಪಂ. ಉಪಾಧ್ಯಕ್ಷೆ ಶಂಕ್ರಮ್ಮ ಅಮರೇಶ ಉಪಲಾಪುರ, ಜಿ.ಪಂ. ಸದಸ್ಯೆ ಬೀನಾಗೌಸ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ನಿರ್ದೇಸಕ ಡಾ. ಕೆ.ಎಂ. ಮಹಮ್ಮದ್ ಜಫರುಲ್ಲಾ ಖಾನ್, ಕೆಎಲ್‍ಡಿಎ ಅಪರ ನಿರ್ದೇಶಕ ಡಾ. ಎಂ.ಟಿ. ಮಂಜುನಾಥ್ ಉಪಸ್ಥಿತರಿದ್ದರು.  ಪಶುಸಂಗೋಪನಾ ಇಲಾಖೆಯ ವಿವಿಧ ಯೋಜನೆಗಳ ಸೌಲಭ್ಯವನ್ನು ಸಚಿವ ಎ. ಮಂಜು ಅವರು ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ವಿತರಣೆ ಮಾಡಿದರು.