Monday, 30 January 2017

ಬಹುವಿಧ ಚಿಕಿತ್ಸೆಯಿಂದ ಕುಷ್ಠರೋಗ ಸಂಪೂರ್ಣ ನಿವಾರಣೆಯಾಗುತ್ತದೆ- ಡಾ. ರಾಮಕೃಷ್ಣ

ಕೊಪ್ಪಳ ಜ. 30 (ಕರ್ನಾಟಕ ವಾರ್ತೆ): ಬಹುವಿಧ ಚಿಕಿತ್ಸೆಯಿಂದ ಕುಷ್ಠರೋಗ ಸಂಪೂರ್ಣ ನಿವಾರಣೆಯಾಗುವುದರಿಂದ, ರೋಗಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಅವರು ಹೇಳಿದರು.
     ಕೊಪ್ಪಳದ ಹಳೆಯ ಜಿಲ್ಲಾಸ್ಪತ್ರೆ ಆವರಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಕುಷ್ಠರೋಗ ಅರಿವು ಆಂದೋಲನದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.
     ಸ್ಪರ್ಶಜ್ಞಾನ ಇಲ್ಲದ ತದ್ದುಗಳು ಕುಷ್ಠ ರೋಗದ ಚಿನ್ಹೆಗಳಾಗಿರುವ ಸಾಧ್ಯತೆಗಳಿರುತ್ತವೆ.  ಸಾರ್ವಜನಿಕರು ಆತಂಕಪಡದೆ, ವೈದ್ಯರಿಂದ ಪರೀಕ್ಷಿಸಿಕೊಂಡು, ಸಂಶಯ ನಿವಾರಿಸಿಕೊಳ್ಳಬಹುದು.  ಬಹುವಿಧ ಚಿಕಿತ್ಸೆಯಿಂದ ಕುಷ್ಠರೋಗ ತೀವ್ರವಾಗಿ ಸಂಪೂರ್ಣ ನಿವಾರಣೆಯಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ಹೇಳಿದರು.
     ಇದಕ್ಕೂ ಪೂರ್ವದಲ್ಲಿ ನಗರದಲ್ಲಿ ಆಯೋಜಿಸಲಾದ ಕುಷ್ಠರೋಗ ಅರಿವು ಆಂದೊಲನ ಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಚಾಲನೆ ನೀಡಿದರು.  ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ತರಬೇತಿ ಕೇಂದ್ರದ ವಿದ್ಯಾರ್ಥಿನಿಯರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಕುಷ್ಠರೋಗ ನಿವಾರಣಾ ಅಧಿಕಾರಿ ಡಾ. ಎಸ್.ಕೆ. ದೇಸಾಯಿ, ತಾಲೂಕು ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ ಮುಂತಾದವರು ಉಪಸ್ಥಿತರಿದ್ದರು.
Post a Comment