Monday, 30 January 2017

ಶಿವಯೋಗಿ ಸಿದ್ಧರಾಮರು ಸಾಮಾಜಿಕ ಹೊಣೆಗಾರಿಕೆಯ ಮಹತ್ವ ಸಾರಿದ ಯೋಗಿಗಳು- ಡಾ. ಎಸ್. ಶಿವಾನಂದ

ಕೊಪ್ಪಳ ಜ. 30 (ಕರ್ನಾಟಕ ವಾರ್ತೆ): ಕ್ರಾಂತಿಕಾರಿ ಧೋರಣೆಗಳಿಂದ ಸಮಾಜ ತಿದ್ದುವ ಕಾರ್ಯ ಮಾಡುವುದರ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯ ಮಹತ್ವವನ್ನು ಜಗತ್ತಿಗೆ ಸಾರಿದ ಕಾಯಕ ಯೋಗಿ ಎನಿಸಿಕೊಂಡವರು ಶಿವಯೋಗಿ ಸಿದ್ಧರಾಮರು ಎಂದು ಹೊಸಪೇಟೆಯ ನಿವೃತ್ತ ಪ್ರಾಧ್ಯಾಪಕ ಡಾ. ಎಸ್. ಶಿವಾನಂದ ಅವರು ಬಣ್ಣಿಸಿದರು.

     ಜಿಲ್ಲಾಡಳಿತ ವತಿಯಿಂದ ನಗರದ ಮಹಾಂತಯ್ಯನ ಮಠ ಕಲ್ಯಾಣ ಮಂಟಪದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

     ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ವಿಚಾರಧಾರೆಯನ್ನು ಹೊಂದಿದ್ದ ಶಿವಯೋಗಿ ಸಿದ್ಧರಾಮರು, ತಮ್ಮ ಕ್ರಾಂತಿಕಾರಿ ಧೋರಣೆಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದರು.   ಸಿದ್ದರಾಮರ ಸಾಧನೆ, ಸಿದ್ಧಿಗಾಗಿಯೇ ಇಂದಿಗೂ ಅವರು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.  ಜನರ ನಡುವೆ ಜನಪರವಾಗಿ ಬದುಕಿರುವಂತಹ ಗುಣ ಹೊಂದಿದವರು ಮಾತ್ರ ಸಾಮಾಜಿಕ ಹೊಣೆಗಾರಿಕೆ ಹೊಂದಲು ಸಾಧ್ಯ ಎಂಬುದು ಸಿದ್ದರಾಮರ ನಿಲುವಾಗಿತ್ತು.  ಬಸವಣ್ಣನವರ ವ್ಯಕ್ತಿತ್ವ ಸಿದ್ದರಾಮೇಶ್ವರ ಅವರ ಮೇಲೆ ಹೆಚ್ಚು ಪ್ರಭಾವ ಬೀರಿತ್ತು.  ಇದರಿಂದಾಗಿಯೇ ಅವರು ಸಾಮಾಜಿಕ ಹೊಣೆಗಾರಿಕೆಯ ಕುರಿತು ಪ್ರಚುರಪಡಿಸಲು ಹೆಚ್ಚು ಆದ್ಯತೆ ನೀಡಿದರು.  ಸ್ವರ್ಗ-ನರಕದ ಪರಿಕಲ್ಪನೆಯನ್ನು ಸಾರಾಸಗಟಾಗಿ ಅವರು ತಿರಸ್ಕರಿಸಿದ್ದರು.  ಕೇವಲ ಮೆರವಣಿಗೆ ಮಾಡಿ, ಕುಣಿದು, ಕುಪ್ಪಳಿಸುವುದರಿಂದ ಇಂತಹ ಮಹನೀಯರ ಆಚರಣೆಗೆ ಅರ್ಥ ಬರಲು ಸಾಧ್ಯವಿಲ್ಲ.  ಶರಣರ ವಚನಗಳು, ಸಾಧನೆಗಳ ಕುರಿತು ವಿಚಾರ ಹಂಚಿಕೆ ಮೂಲಕ ಆಚರಿಸಿದರೆ ಸಾರ್ಥಕ.  ಶರಣರ ವಚನಗಳು ಎಲ್ಲ ಕಾಲದ ಚಳುವಳಿಗಳಿಗೂ ಪ್ರೇರಕವಾಗಿವೆ.  ಬೋವಿ ಜನಾಂಗದವರು ಶ್ರಮ ಜೀವಿಗಳಾಗಿದ್ದು, ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ, ಸಿದ್ಧರಾಮರ ಆಶಯದಂತೆ ಸಮಾಜದ ಮುಖ್ಯ ವಾಹಿನಿಗೆ ಬಂದು, ಶಿಕ್ಷಣ, ರಾಜಕೀಯ ಇನ್ನಿತರೆ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೇರಬೇಕು.  ಸಿದ್ಧರಾಮರ ಚಿಂತನೆಗಳನ್ನು ಅಳವಡಿಸಿಕೊಂಡು, ಅವರ ಕನಸುಗಳನ್ನು ಸಾಕಾರಗೊಳಿಸುವ ಹೊಣೆ ಇಂದಿನ ಸಮಾಜದ ಮುಖಂಡರ ಮೇಲಿದೆ ಎಂದು ಡಾ. ಎಸ್. ಶಿವಾನಂದ ಅವರು ಹೇಳಿದರು.
     ಸಮಾರಂಭದ ಉದ್ಘಾಟನೆ ನೆರವೇರಿಸಿದ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಮಾತನಾಡಿ, ಸಿದ್ದರಾಮೇಶ್ವರರ ಬದುಕಿನ ಚಿಂತನೆಗಳನ್ನು ನಾವು ಎಲ್ಲರಿಗೂ ಹಂಚಬೇಕಿದೆ.  ವೇದ-ಪುರಾಣಗಳಿಗೆ ಹೆಚ್ಚಿನ ಆದ್ಯತೆ ನೀಡದೆ, ವಾಸ್ತವ ಬದುಕಿನತ್ತ ಗಮನ ನೀಡಬೇಕು.  ಮಹನೀಯರ ಜನ್ಮ ದಿನೋತ್ಸವ ಆಚರಣೆಯ ಜೊತೆಗೆ, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ಕರೆ ನೀಡಿದರು.
     ಬೋವಿ ಸಮಾಜದ ಪ್ರಧಾನ ಕಾರ್ಯದರ್ಶಿ ಬಸವರಾಜ ಬೋವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,  ಬೋವಿ ಸಮಾಜದವರು ಶ್ರಮ ಜೀವಿಗಳಾಗಿದ್ದು, ಕಲ್ಲಿನ ವಿಗ್ರಹಕ್ಕೆ ಮೂರ್ತಿ ರೂಪ ನೀಡಿ, ಸಮರ್ಪಿಸುವ ರೀತಿಯಲ್ಲಿ ಸಮಾಜಕ್ಕೆ ಒಳಿತನ್ನು ಬಯಸುವವರು.  ವೃತ್ತಿಯ ಕಾಯಕದ ಜೊತೆಗೆ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆಯನ್ನು ನೀಡುವುದು ಅಗತ್ಯವಾಗಿದೆ ಎಂದರು.
     ತಾಲೂಕು ಪಂಚಾಯತಿ ಅಧ್ಯಕ್ಷ ಬಾಲಚಂದ್ರನ್, ತಹಸಿಲ್ದಾರ್ ಗುರುಬಸವರಾಜ, ಬೋವಿ ಸಮಾಜದ ಅಧ್ಯಕ್ಷ ಸತ್ಯಪ್ಪ ಬೋವಿ, ಗಣ್ಯರಾದ ಬಸವರಾಜ ಬೋವಿ, ನಿಂಗಪ್ಪ, ರಾಮಣ್ಣ, ಯಂಕಪ್ಪ ಬೋವಿ, ಶಿವಾನಂದ ಹೊದ್ಲುರ, ಗೀತಾ, ವೆಂಕಟೇಶ್ ಸೇರಿದಂತೆ ಸಮಾಜದ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
     ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಸ್ವಾಗತಿಸಿದರು.  ಸಿ.ವಿ. ಜಡಿಯವರ್ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.  ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಜಿಲ್ಲೆಯ ಹಲವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 
     ಸಮಾರಂಭಕ್ಕೂ ಪೂರ್ವದಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರದ ಅದ್ಧೂರಿ ಮೆರವಣಿಗೆಗೆ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ನಗರದ ಶ್ರೀ ಗವಿಸಿದ್ದೇಶ್ವರ ಮಠದ ಆವರಣದಲ್ಲಿ ಚಾಲನೆ ನೀಡಿದರು.  ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಸೇರಿದಂತೆ  ಹಲವು ಗಣ್ಯರು ಪಾಲ್ಗೊಂಡಿದ್ದರು.  ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯ ಮುಂಚೂಣಿಯಲ್ಲಿದ್ದರು.  ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.
Post a Comment