Tuesday, 31 January 2017

ಫೆ. 03 ರಿಂದ ಕೊಪ್ಪಳದ ಶಾರದ ಚಿತ್ರಮಂದಿರದಲ್ಲಿ ಚಿತ್ರೋತ್ಸವ ಸಪ್ತಾಹ : ಸಾರ್ವಜನಿಕರಿಗೆ ಉಚಿತ ಪ್ರವೇಶ.

ಫೆ. 03 ರಿಂದ ಕೊಪ್ಪಳದ ಶಾರದ ಚಿತ್ರಮಂದಿರದಲ್ಲಿ ಚಿತ್ರೋತ್ಸವ ಸಪ್ತಾಹ
ಸಾರ್ವಜನಿಕರಿಗೆ ಉಚಿತ ಪ್ರವೇಶ

ಫೆ. 03 ರಿಂದ ಕೊಪ್ಪಳದ ಶಾರದ ಚಿತ್ರಮಂದಿರದಲ್ಲಿ ಚಿತ್ರೋತ್ಸವ ಸಪ್ತಾಹ : ಸಾರ್ವಜನಿಕರಿಗೆ ಉಚಿತ ಪ್ರವೇಶ. ಬನ್ನಿ, ವೀಕ್ಷಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿ

ಫೆ. 03 ರಿಂದ ಕೊಪ್ಪಳದ ಶಾರದ ಚಿತ್ರಮಂದಿರದಲ್ಲಿ ಚಿತ್ರೋತ್ಸವ ಸಪ್ತಾಹ
ಸಾರ್ವಜನಿಕರಿಗೆ ಉಚಿತ ಪ್ರವೇಶ. ಬನ್ನಿ, ವೀಕ್ಷಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿ

Monday, 30 January 2017

ಹುತಾತ್ಮರ ಸ್ಮರಣಾರ್ಥ ಕೊಪ್ಪಳದಲ್ಲಿ ಮೌನಾಚರಣೆ

ಕೊಪ್ಪಳ ಜ. 30 (ಕರ್ನಾಟಕ ವಾರ್ತೆ): ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ ಬಲಿದಾನಗಳ ಮೂಲಕ ಪ್ರಾಣತೆತ್ತು ಹುತಾತ್ಮರಾದವರ ಸ್ಮರಣಾರ್ಥವಾಗಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ 02 ನಿಮಿಷಗಳ ಮೌನ ಆಚರಿಸಲಾಯಿತು.
     ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ಜ. 30 ರ ದಿನವನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತೆತ್ತವರ ಸ್ಮರಣೆ ಮಾಡುವ ದಿನವನ್ನಾಗಿ ಆಚರಿಸಲಾಗುತ್ತಿದೆ.   ಹುತಾತ್ಮರ ಸ್ಮರಣಾರ್ಥ ಸೋವಾರದಂದು ಬೆಳಿಗ್ಗೆ 11 ಗಂಟೆಗೆ ಎರಡು ನಿಮಿಷಗಳ ಮೌನವನ್ನು ಆಚರಿಸಿ, ಹುತಾತ್ಮರಿಗೆ ಗೌರವ ಸಲ್ಲಿಸಲು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು.
     ಜಿಲ್ಲಾಧಿಕಾರಿಗಳ ಕಚೇರಿ ಸಭಾಮಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡು, ಹುತಾತ್ಮರ ಸ್ಮರಣಾರ್ಥ ಎರಡು ನಿಮಿಷಗಳ ಮೌನವನ್ನು ಆಚರಿಸಿದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಖಜಾನೆ ಇಲಾಖೆ ಉಪನಿರ್ದೇಶಕ ಸುರೇಶ್ ಹಳ್ಯಾಳ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.  ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದು, ಮೌನಾಚರಣೆಯಲ್ಲಿ ಪಾಲ್ಗೊಂಡರು.

ವಿವಿಧ ಗ್ರಾಮ ಪಂಚಾಯತಿಗಳಿಗೆ ಚುನಾವಣೆ : ಅಧಿಸೂಚನೆ ಪ್ರಕಟ

ಕೊಪ್ಪಳ ಜ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 07 ಗ್ರಾಮ ಪಂಚಾಯತಿಗಳ ಒಟ್ಟು 08 ಸದಸ್ಯ ಸ್ಥಾನಗಳಿಗಾಗಿ ಚುನಾವಣೆಗಾಗಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಸೂಚನೆ ಹೊರಡಿಸಿದ್ದು, ಜ. 30 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.
       ಅಧಿಸೂಚನೆಯನ್ವಯ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: ಫೆ. 02.  ನಾಮಪತ್ರಗಳ ಪರಿಶೀಲನೆ ಫೆ. 03 ರಂದು ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಫೆ. 06 ಕೊನೆಯ ದಿನವಾಗಿದೆ.  ಮತದಾನದ ಅಗತ್ಯವಿದ್ದರೆ, ಫೆ. 12 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಮತದಾನ ನಡೆಯಲಿದೆ.  ಮತಗಳ ಎಣಿಕೆ ಫೆ. 15 ರಂದು ಆಯಾ ತಾಲೂಕು ಕೇಂದ್ರದಲ್ಲಿ ನಡೆಯಲಿದ್ದು, ಚುನಾವಣೆ ಪ್ರಕ್ರಿಯೆ ಫೆ. 15 ರೊಳಗೆ ಪೂರ್ಣಗೊಳ್ಳಲಿದೆ.  ಚುನಾವಣೆ ನಡೆಯುವ ಗ್ರಾಮ ಪಂಚಾಯತಿ, ಕ್ಷೇತ್ರದ ಹೆಸರು ಹಾಗೂ ಮೀಸಲಾತಿ ವಿವರ ಇಂತಿದೆ.  ಕೊಪ್ಪಳ ತಾಲೂಕಿನ ಲೇಬಗೇರಾ -ಸಾಮಾನ್ಯ,  ಬೆಟಗೇರಿ-ಹಿಂದುಳಿದ ವರ್ಗ (ಬ), ಕೋಳೂರು ಗ್ರಾಮ ಪಂಚಾಯತಿಯ ದದೇಗಲ್ ಕ್ಷೇತ್ರ- ಅನುಸೂಚಿತ ಜಾತಿ-ಮಹಿಳೆ.   ಕುಷ್ಟಗಿ ತಾಲೂಕು ಹಾಬಲಕಟ್ಟಿ ಗ್ರಾಮ ಪಂಚಾಯತಿಯ ವಾರಿಕಲ್- ಹಿಂದುಳಿದ ವರ್ಗ ಅ (ಮಹಿಳೆ).  ಚಿಕ್ಕಗೊಣ್ಣಾಗರ- ಸಾಮಾನ್ಯ.  ಗಂಗಾವತಿ ತಾಲೂಕು ಹುಲಿಹೈದರ್ ಗ್ರಾಮ ಪಂಚಾಯತಿಯ ಕನಕಾಪುರ-ಸಾಮಾನ್ಯ(ಮಹಿಳೆ).  ಯಲಬುರ್ಗಾ ತಾಲೂಕು ಗೆದಿಗೇರಿ ಗ್ರಾಮ ಪಂಚಾಯತಿಯ ಮದ್ಲೂರ-ಅನುಸೂಚಿತ ಜಾತಿ (ಮಹಿಳೆ).  ಮುರಡಿ ಗ್ರಾಮ ಪಂಚಾಯತಿಯ ತರಲಕಟ್ಟಿ-ಸಾಮಾನ್ಯ.  ಹೀಗೆ ಒಟ್ಟು 08 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಐಟಿಐ ಗಳಲ್ಲಿ ಹೊಸ ಸಂಯೋಜನೆ ಪಡೆಯಲು ಅರ್ಜಿ ಆಹ್ವಾನ

ಕೊಪ್ಪಳ ಜ. 30 (ಕರ್ನಾಟಕ ವಾರ್ತೆ): ಸರ್ಕಾರಿ, ಅನುದಾನಿತ, ಅನುದಾನ ರಹಿತ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) ಎಸ್‍ಸಿವಿಟಿ ಅಡಿ ಹೊಸ ಸಂಯೋಜನೆ ಪ್ರಾರಂಭಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     2017 ನೇ ಸಾಲಿಗೆ ಎಸ್‍ಸಿವಿಟಿ ಅಡಿ ಐಟಿಐ ಗಳಲ್ಲಿ ಹೊಸ ವೃತ್ತಿ ಪ್ರಾರಂಭಿಸಲು, ಘಟಕಗಳನ್ನು ಸಂಯೋಜನೆ ಪಡೆಯಲು, ಸಂಯೋಜನೆಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಫೆ. 15 ಕೊನೆಯ ದಿನಾಂಕವಾಗಿದೆ.  ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ವೆಬ್‍ಸೈಟ್  www.emptrg.kar.nic.in ವೀಕ್ಷಿಸಬಹುದಾಗಿದೆ ಎಂದು ಟಣಕನಕಲ್ ಸರ್ಕಾರಿ ಐಟಿಐ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಯೋಗಿ ಸಿದ್ಧರಾಮರು ಸಾಮಾಜಿಕ ಹೊಣೆಗಾರಿಕೆಯ ಮಹತ್ವ ಸಾರಿದ ಯೋಗಿಗಳು- ಡಾ. ಎಸ್. ಶಿವಾನಂದ

ಕೊಪ್ಪಳ ಜ. 30 (ಕರ್ನಾಟಕ ವಾರ್ತೆ): ಕ್ರಾಂತಿಕಾರಿ ಧೋರಣೆಗಳಿಂದ ಸಮಾಜ ತಿದ್ದುವ ಕಾರ್ಯ ಮಾಡುವುದರ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯ ಮಹತ್ವವನ್ನು ಜಗತ್ತಿಗೆ ಸಾರಿದ ಕಾಯಕ ಯೋಗಿ ಎನಿಸಿಕೊಂಡವರು ಶಿವಯೋಗಿ ಸಿದ್ಧರಾಮರು ಎಂದು ಹೊಸಪೇಟೆಯ ನಿವೃತ್ತ ಪ್ರಾಧ್ಯಾಪಕ ಡಾ. ಎಸ್. ಶಿವಾನಂದ ಅವರು ಬಣ್ಣಿಸಿದರು.

     ಜಿಲ್ಲಾಡಳಿತ ವತಿಯಿಂದ ನಗರದ ಮಹಾಂತಯ್ಯನ ಮಠ ಕಲ್ಯಾಣ ಮಂಟಪದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

     ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ವಿಚಾರಧಾರೆಯನ್ನು ಹೊಂದಿದ್ದ ಶಿವಯೋಗಿ ಸಿದ್ಧರಾಮರು, ತಮ್ಮ ಕ್ರಾಂತಿಕಾರಿ ಧೋರಣೆಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದರು.   ಸಿದ್ದರಾಮರ ಸಾಧನೆ, ಸಿದ್ಧಿಗಾಗಿಯೇ ಇಂದಿಗೂ ಅವರು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.  ಜನರ ನಡುವೆ ಜನಪರವಾಗಿ ಬದುಕಿರುವಂತಹ ಗುಣ ಹೊಂದಿದವರು ಮಾತ್ರ ಸಾಮಾಜಿಕ ಹೊಣೆಗಾರಿಕೆ ಹೊಂದಲು ಸಾಧ್ಯ ಎಂಬುದು ಸಿದ್ದರಾಮರ ನಿಲುವಾಗಿತ್ತು.  ಬಸವಣ್ಣನವರ ವ್ಯಕ್ತಿತ್ವ ಸಿದ್ದರಾಮೇಶ್ವರ ಅವರ ಮೇಲೆ ಹೆಚ್ಚು ಪ್ರಭಾವ ಬೀರಿತ್ತು.  ಇದರಿಂದಾಗಿಯೇ ಅವರು ಸಾಮಾಜಿಕ ಹೊಣೆಗಾರಿಕೆಯ ಕುರಿತು ಪ್ರಚುರಪಡಿಸಲು ಹೆಚ್ಚು ಆದ್ಯತೆ ನೀಡಿದರು.  ಸ್ವರ್ಗ-ನರಕದ ಪರಿಕಲ್ಪನೆಯನ್ನು ಸಾರಾಸಗಟಾಗಿ ಅವರು ತಿರಸ್ಕರಿಸಿದ್ದರು.  ಕೇವಲ ಮೆರವಣಿಗೆ ಮಾಡಿ, ಕುಣಿದು, ಕುಪ್ಪಳಿಸುವುದರಿಂದ ಇಂತಹ ಮಹನೀಯರ ಆಚರಣೆಗೆ ಅರ್ಥ ಬರಲು ಸಾಧ್ಯವಿಲ್ಲ.  ಶರಣರ ವಚನಗಳು, ಸಾಧನೆಗಳ ಕುರಿತು ವಿಚಾರ ಹಂಚಿಕೆ ಮೂಲಕ ಆಚರಿಸಿದರೆ ಸಾರ್ಥಕ.  ಶರಣರ ವಚನಗಳು ಎಲ್ಲ ಕಾಲದ ಚಳುವಳಿಗಳಿಗೂ ಪ್ರೇರಕವಾಗಿವೆ.  ಬೋವಿ ಜನಾಂಗದವರು ಶ್ರಮ ಜೀವಿಗಳಾಗಿದ್ದು, ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ, ಸಿದ್ಧರಾಮರ ಆಶಯದಂತೆ ಸಮಾಜದ ಮುಖ್ಯ ವಾಹಿನಿಗೆ ಬಂದು, ಶಿಕ್ಷಣ, ರಾಜಕೀಯ ಇನ್ನಿತರೆ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೇರಬೇಕು.  ಸಿದ್ಧರಾಮರ ಚಿಂತನೆಗಳನ್ನು ಅಳವಡಿಸಿಕೊಂಡು, ಅವರ ಕನಸುಗಳನ್ನು ಸಾಕಾರಗೊಳಿಸುವ ಹೊಣೆ ಇಂದಿನ ಸಮಾಜದ ಮುಖಂಡರ ಮೇಲಿದೆ ಎಂದು ಡಾ. ಎಸ್. ಶಿವಾನಂದ ಅವರು ಹೇಳಿದರು.
     ಸಮಾರಂಭದ ಉದ್ಘಾಟನೆ ನೆರವೇರಿಸಿದ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಮಾತನಾಡಿ, ಸಿದ್ದರಾಮೇಶ್ವರರ ಬದುಕಿನ ಚಿಂತನೆಗಳನ್ನು ನಾವು ಎಲ್ಲರಿಗೂ ಹಂಚಬೇಕಿದೆ.  ವೇದ-ಪುರಾಣಗಳಿಗೆ ಹೆಚ್ಚಿನ ಆದ್ಯತೆ ನೀಡದೆ, ವಾಸ್ತವ ಬದುಕಿನತ್ತ ಗಮನ ನೀಡಬೇಕು.  ಮಹನೀಯರ ಜನ್ಮ ದಿನೋತ್ಸವ ಆಚರಣೆಯ ಜೊತೆಗೆ, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ಕರೆ ನೀಡಿದರು.
     ಬೋವಿ ಸಮಾಜದ ಪ್ರಧಾನ ಕಾರ್ಯದರ್ಶಿ ಬಸವರಾಜ ಬೋವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,  ಬೋವಿ ಸಮಾಜದವರು ಶ್ರಮ ಜೀವಿಗಳಾಗಿದ್ದು, ಕಲ್ಲಿನ ವಿಗ್ರಹಕ್ಕೆ ಮೂರ್ತಿ ರೂಪ ನೀಡಿ, ಸಮರ್ಪಿಸುವ ರೀತಿಯಲ್ಲಿ ಸಮಾಜಕ್ಕೆ ಒಳಿತನ್ನು ಬಯಸುವವರು.  ವೃತ್ತಿಯ ಕಾಯಕದ ಜೊತೆಗೆ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆಯನ್ನು ನೀಡುವುದು ಅಗತ್ಯವಾಗಿದೆ ಎಂದರು.
     ತಾಲೂಕು ಪಂಚಾಯತಿ ಅಧ್ಯಕ್ಷ ಬಾಲಚಂದ್ರನ್, ತಹಸಿಲ್ದಾರ್ ಗುರುಬಸವರಾಜ, ಬೋವಿ ಸಮಾಜದ ಅಧ್ಯಕ್ಷ ಸತ್ಯಪ್ಪ ಬೋವಿ, ಗಣ್ಯರಾದ ಬಸವರಾಜ ಬೋವಿ, ನಿಂಗಪ್ಪ, ರಾಮಣ್ಣ, ಯಂಕಪ್ಪ ಬೋವಿ, ಶಿವಾನಂದ ಹೊದ್ಲುರ, ಗೀತಾ, ವೆಂಕಟೇಶ್ ಸೇರಿದಂತೆ ಸಮಾಜದ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
     ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಸ್ವಾಗತಿಸಿದರು.  ಸಿ.ವಿ. ಜಡಿಯವರ್ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.  ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಜಿಲ್ಲೆಯ ಹಲವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 
     ಸಮಾರಂಭಕ್ಕೂ ಪೂರ್ವದಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರದ ಅದ್ಧೂರಿ ಮೆರವಣಿಗೆಗೆ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ನಗರದ ಶ್ರೀ ಗವಿಸಿದ್ದೇಶ್ವರ ಮಠದ ಆವರಣದಲ್ಲಿ ಚಾಲನೆ ನೀಡಿದರು.  ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಸೇರಿದಂತೆ  ಹಲವು ಗಣ್ಯರು ಪಾಲ್ಗೊಂಡಿದ್ದರು.  ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯ ಮುಂಚೂಣಿಯಲ್ಲಿದ್ದರು.  ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.

ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಜ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಫೆ. 02 ಮತ್ತು 03 ರಂದು ಎರಡು ದಿನಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಜಿಲ್ಲಾ ಉಸ್ತುವಾರಿ ಮಂತ್ರಿಗಳು ಫೆ. 02 ರಂದು ರಾಯಚೂರಿನಿಂದ ಹೊರಟು ಮಧ್ಯಾಹ್ನ 3 ಗಂಟೆಗೆ ಯಲಬುರ್ಗಾ ಪಟ್ಟಣಕ್ಕೆ ಆಗಮಿಸುವರು.  ಯಲಬುರ್ಗಾದಲ್ಲಿ ಸಾರ್ವಜನಿಕರ ಕುಂದುಕೊರತೆ ವಿಚಾರಣೆ ಕೈಗೊಳ್ಳುವರು.  ಸಂಜೆ 05 ಗಂಟೆಗೆ ಹಿರೇಮಠಕ್ಕೆ ಭೇಟಿ ನೀಡುವರು.  ಸಂಜೆ 06 ಗಂಟೆಗೆ ರಾಜೂರು ಶ್ರೀ ಶರಣಬಸವೇಶ್ವರ ರಥಸಪ್ತಮಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವರು.  ರಾತ್ರಿ 8-30 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ಫೆ. 03 ರಂದು ಬೆಳಿಗ್ಗೆ 11 ಗಂಟೆಗೆ ಗಂಗಾವತಿಗೆ ತೆರಳಿ ಎಪಿಎಂಸಿ ಸಮುದಾಯ ಭವನದಲ್ಲಿ ಜರುಗುವ ಸಿಂಧನೂರು ಶಾಸಕರು ಹಾಗೂ ಎಂಎಸ್‍ಐಎಲ್ ಅಧ್ಯಕ್ಷ ಹಂಪನಗೌಡ ಬಾದರ್ಲಿ ಅವರ ಕುಟುಂಬದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಮಂತ್ರಿಗಳು ಅಂದು ಬೆಳಿಗ್ಗೆ  11-30 ಗಂಟೆಗೆ ಧಾರವಾಡ ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ವಿಶೇಷ ಕರ್ತವ್ಯಾಧಿಕಾರಿ ರವಿಪ್ರಕಾಶ್ ತಿಳಿಸಿದ್ದಾರೆ.

ಜ.31 ರಂದು ಕೊಪ್ಪಳದಲ್ಲಿ ಸಾರಿಗೆ ಅದಾಲತ್

ಕೊಪ್ಪಳ, ಜ.27 (ಕರ್ನಾಟಕ ವಾರ್ತೆ): ಕೊಪ್ಪಳದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಿಂದ ಜ.31 ರಂದು ಮಧ್ಯಾಹ್ನ 02 ಗಂಟೆಗೆ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲು ಸ್ವೀಕರಿಸಲು ಹೊಸಪೇಟೆ ರಸ್ತೆಯಲ್ಲಿರುವ ಆರ್‍ಟಿಒ ಕಚೇರಿಯಲ್ಲಿ ಸಾರಿಗೆ ಅದಾಲತ್ ನಡೆಯಲಿದೆ.
     ಅಂದು ಸಾರಿಗೆ ಇಲಾಖೆಯ ಮೇಲಾಧಿಕಾರಿಗಳು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಹುವಿಧ ಚಿಕಿತ್ಸೆಯಿಂದ ಕುಷ್ಠರೋಗ ಸಂಪೂರ್ಣ ನಿವಾರಣೆಯಾಗುತ್ತದೆ- ಡಾ. ರಾಮಕೃಷ್ಣ

ಕೊಪ್ಪಳ ಜ. 30 (ಕರ್ನಾಟಕ ವಾರ್ತೆ): ಬಹುವಿಧ ಚಿಕಿತ್ಸೆಯಿಂದ ಕುಷ್ಠರೋಗ ಸಂಪೂರ್ಣ ನಿವಾರಣೆಯಾಗುವುದರಿಂದ, ರೋಗಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಅವರು ಹೇಳಿದರು.
     ಕೊಪ್ಪಳದ ಹಳೆಯ ಜಿಲ್ಲಾಸ್ಪತ್ರೆ ಆವರಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಕುಷ್ಠರೋಗ ಅರಿವು ಆಂದೋಲನದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.
     ಸ್ಪರ್ಶಜ್ಞಾನ ಇಲ್ಲದ ತದ್ದುಗಳು ಕುಷ್ಠ ರೋಗದ ಚಿನ್ಹೆಗಳಾಗಿರುವ ಸಾಧ್ಯತೆಗಳಿರುತ್ತವೆ.  ಸಾರ್ವಜನಿಕರು ಆತಂಕಪಡದೆ, ವೈದ್ಯರಿಂದ ಪರೀಕ್ಷಿಸಿಕೊಂಡು, ಸಂಶಯ ನಿವಾರಿಸಿಕೊಳ್ಳಬಹುದು.  ಬಹುವಿಧ ಚಿಕಿತ್ಸೆಯಿಂದ ಕುಷ್ಠರೋಗ ತೀವ್ರವಾಗಿ ಸಂಪೂರ್ಣ ನಿವಾರಣೆಯಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ಹೇಳಿದರು.
     ಇದಕ್ಕೂ ಪೂರ್ವದಲ್ಲಿ ನಗರದಲ್ಲಿ ಆಯೋಜಿಸಲಾದ ಕುಷ್ಠರೋಗ ಅರಿವು ಆಂದೊಲನ ಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಚಾಲನೆ ನೀಡಿದರು.  ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ತರಬೇತಿ ಕೇಂದ್ರದ ವಿದ್ಯಾರ್ಥಿನಿಯರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಕುಷ್ಠರೋಗ ನಿವಾರಣಾ ಅಧಿಕಾರಿ ಡಾ. ಎಸ್.ಕೆ. ದೇಸಾಯಿ, ತಾಲೂಕು ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ ಮುಂತಾದವರು ಉಪಸ್ಥಿತರಿದ್ದರು.

ಭಾಗ್ಯನಗರ ಪಟ್ಟಣ ಪಂಚಾಯತಿ ತೆರಿಗೆ ದರ ಪರಿಷ್ಕರಣೆ : ಆಕ್ಷೇಪಣೆಗಳಿಗೆ ಆಹ್ವಾನ

ಕೊಪ್ಪಳ ಜ. 30 (ಕರ್ನಾಟಕ ವಾರ್ತೆ): ಭಾಗ್ಯನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಗೆ ತೆರಿಗೆ ದರವನ್ನು ಪರಿಷ್ಕರಿಸಲು ನಿರ್ಣಯಿಸಲಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ.
     ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ, ಕಟ್ಟಡ, ಖಾಲಿ ನಿವೇಶನ ಹೊಂದಿರುವವರಿಗೆ ತೆರಿಗೆ ದರ ಪರಿಷ್ಕರಿಸಲು ನಿರ್ಣಯ ಕೈಗೊಳ್ಳಲಾಗಿದೆ.  ಈಗಾಗಲೆ ರಾಜ್ಯದಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಯಲ್ಲಿದ್ದು, ಹೊಸದಾಗಿ ಸೃಜಿಸಲಾದ ಪಟ್ಟಣ ಪಂಚಾಯತಿಯಲ್ಲಿ ಪ್ರತಿ ವರ್ಷಕ್ಕೆ ಶೇ. 15 ಕ್ಕಿಂತ ಕಡಿಮೆ ಇಲ್ಲದಂತೆ, 2008-09, 2011-12, 2014-15 ಹಾಗೂ 2017-18 ರ ಆರ್ಥಿಕ ವರ್ಷಕ್ಕೆ ದರ ಹೆಚ್ಚಿಸಿಕೊಂಡು 2017 ರ ಏಪ್ರಿಲ್ 01 ರಿಂದ ಜಾರಿಗೆ ತರಲು ನಿಯಮದನ್ವಯ ಸೂಚನೆ ನೀಡಲಾಗಿದೆ.  ಈಗಾಗಲೆ ಕೌನ್ಸಿಲ್ ಸಭೆಯಲ್ಲಿ ಮಂಡಿಸಿ, ಠರಾವು ನಿರ್ಣಯ ಅಂಗೀಕರಿಸಲಾಗಿದೆ.  ಅದರನ್ವಯ ಆಸ್ತಿಗಳಿಗೆ ಮೂಲ ಮೌಲ್ಯದ ಶೇ. 50 ಮೌಲ್ಯಕ್ಕೆ ಶೇ. ದರವನ್ನು ನಿಗದಿಪಡಿಸಲಾಗಿದ್ದು, ವಾಸದ ಕಟ್ಟಡಕ್ಕೆ ಶೇ. 0.6 (ಪ್ರತಿ ಸಾವಿರಕ್ಕೆ 06 ರೂ.ಗಳು).  ವಾಸೇತರ, ವಾಣಿಜ್ಯ ಮತ್ತು ಕೈಗಾರಿಕೆ ಕಟ್ಟಡಗಳಿಗೆ ಶೇ. 0.9 (ಪ್ರತಿ ಸಾವಿರಕ್ಕೆ 09 ರೂ.) ಹಾಗೂ ಖಾಲಿ ನಿವೇಶನಗಳಿಗೆ ಶೇ. 0.3 (ಪ್ರತಿ ಸಾವಿರಕ್ಕೆ 03 ರೂ.).  2008-09 ರಿಂದ ಪ್ರತಿ 03 ವರ್ಷಗಳಿಗೆ ಶೇ. 15 ರಷ್ಟು ತೆರಿಗೆ ಹೆಚ್ಚಿಸಿಕೊಳ್ಳಲಾಗಿದೆ.  ಅಲ್ಲದೆ ಶೇ. 26 ರಷ್ಟು ಉಪಕರಗಳು, ತ್ಯಾಜ್ಯ ನಿರ್ವಹಣೆಯ ಮಾಸಿಕ ಶುಲ್ಕವನ್ನೂ ಸಹ ಆಸ್ತಿ ತೆರಿಗೆ ಜೊತೆಗೆ ಪಾವತಿಸಬೇಕು ಎಂದು ನಿರ್ಣಯಿಸಲಾಗಿದೆ.  ಈ ಕುರಿತಂತೆ ಸಾರ್ವಜನಿಕರು, ಸಂಘ ಸಂಸ್ಥೆಗಳು ತಮ್ಮ ಸಲಹೆ ಮತ್ತು ಆಕ್ಷೇಪಣೆಗಳನ್ನು 30 ದಿನಗಳ ಒಳಗಾಗಿ ಭಾಗ್ಯನಗರ ಪಟ್ಟಣ ಪಂಚಾಯತಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

ಕಾಲೇಜು ರಂಗೋತ್ಸವ ಸ್ಪರ್ಧೆ ಫಲಿತಾಂಶ ಪ್ರಕಟ

ಕೊಪ್ಪಳ ಜ. 30 (ಕರ್ನಾಟಕ ವಾರ್ತೆ): ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕಲಬುರ್ಗಿ ರಂಗಾಯಣ ಇವರ ಸಂಯುಕ್ತ ಆಶ್ರಯದಲ್ಲಿ ಕಳೆದ ಜ. 27, 28 ರಂದು ಕೊಪ್ಪಳದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕಾಲೇಜು ರಂಗೋತ್ಸವ- ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
     ನಾಟಕ ಸ್ಪರ್ಧೆ ವಿಭಾಗದಲ್ಲಿ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ ಪಡೆದಿದ್ದು, ಗಂಗಾವತಿ ತಾಲೂಕು ಮರಳಿಯ ಎಂಎಸ್‍ಎಂಎಸ್ ಪದವಿಪೂರ್ವ ಕಾಲೇಜು ದ್ವಿತೀಯ ಸ್ಥಾನ ಗಳಿಸಿದೆ.  ಜಾನಪದ ನೃತ್ಯ ವಿಭಾಗದಲ್ಲಿ ಗಂಗಾವತಿಯ ಕಲ್ಮಠ ಶ್ರೀ ಚೆನ್ನಬಸವಸ್ವಾಮಿ ಕಲಾ ವಾಣಿಜ್ಯ ಮಹಾವಿದ್ಯಾಲಯ ಪ್ರಥಮ ಸ್ಥಾನ ಪಡೆದಿದ್ದು, ಕೊಪ್ಪಳದ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ.  
     ನಾಟಕ ಮತ್ತು ಜನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳು ಫೆಬ್ರವರಿಯಲ್ಲಿ ಕಲಬುರ್ಗಿಯಲ್ಲಿ ಜರುಗಲಿರುವ ವಿಭಾಗ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿವೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, 28 January 2017

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಖಾಸಗಿ ಸಹಭಾಗಿತ್ವ : ಅರ್ಜಿ ಆಹ್ವಾನ

ಕೊಪ್ಪಳ ಜ. 28 (ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆಯು ಪ್ರ್ರಸಕ್ತ ಸಾಲಿನಲ್ಲಿ `ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ` ಪಿಪಿಪಿ-ಐಹೆಚ್‍ಡಿ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
       ರೈತರ ಬಂಡವಾಳ ವೆಚ್ಚ ಕಡಿಮೆಗೊಳಿಸಲು ಹಾಗೂ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಬೆಳೆಯಲು ಹಾಗೂ ಸದೃಢ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶಕ್ಕಾಗಿ ಮತ್ತು ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನ ಚಟುವಟಿಕೆಗಳ ಅಭಿವೃದ್ಧಿಗಾಗಿ ಈ ಯೋಜನೆಯನ್ನು ಅನುಮೋದಿತ ಕೃಷಿ/ ತೋಟಗಾರಿಕೆಗೆ ಸಂಬಂಧಿಸಿದ ಕಂಪನಿಗಳ ಮೂಲಕ ಅನುಷ್ಠಾನಗೊಳಿಸಲು ತೋಟಗಾರಿಕೆ ಇಲಾಖೆ ಉದ್ದೇಶಿಸಿದೆ.  ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ  KAPPEC, Syngenta Company/Akshara seeds (Firm), Zuari, Dhaanya, Nuzuveed Companies/ Krushi seeds (Organiser), Nunhem Company, Bayers Group/om seeds (Organiser), Ken Agritech Company  ಹಾಗೂ ಸಂಬಂಧಪಟ್ಟ ಇತರೆ ಆಸಕ್ತ ಕಂಪನಿಗಳಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ.
    ಆಸಕ್ತ ಕಂಪನಿಯವರು ತೋಟಗಾರಿಕೆಯಲ್ಲಿ ಬೆಳೆಗಳ ಉತ್ಪಾದನೆ, ಉತ್ಪಾದಕತೆ ಹಾಗೂ ರೈತರ ಲಾಭ ಹೆಚ್ಚಿಸುವಂತಹ ಪೂರಕ ಯೋಜನೆಯನ್ನು ಕುರಿತಂತೆ ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡ ಸಮಗ್ರ ಪ್ರಸ್ತಾವನೆಯನ್ನು ಸಿದ್ದಪಡಿಸಿ, ತೋಟಗಾರಿಕೆ ಉಪನಿರ್ದೇಶಕರು (ಜಿಪಂ) ಕೊಪ್ಪಳ ರವರ ಕಛೇರಿಗೆ ಫೆ. 06 ರ ಒಳಗಾಗಿ ಸಲ್ಲಿಸಬೇಕು.  ಅಲ್ಲದೆ ಫೆ. 06 ರಂದು ಬೆಳಿಗ್ಗೆ 10-00 ಗಂಟೆಗೆ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ಯೋಜನೆ ಕುರಿತು ಚರ್ಚಿಸಲು ಸಭೆಯನ್ನು ಕರೆಯಲಾಗಿದೆ.  ಈ ಸಭೆಗೆ ಆಸಕ್ತ ಕಂಪನಿದಾರರು ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಜ. 30 ರಂದು ಕೊಪ್ಪಳದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ


ಕೊಪ್ಪಳ ಜ. 28 (ಕರ್ನಾಟಕ ವಾರ್ತೆ): ಜಿಲ್ಲಾಡಳಿತದ ವತಿಯಿಂದ ಶಿವಯೋಗಿ ಸಿದ್ದರಾಮೇಶ್ವರ ಅವರ ಜಯಂತಿ ಕಾರ್ಯಕ್ರಮ ಜ. 30 ರಂದು ಕೊಪ್ಪಳದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
     ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಅಂಗವಾಗಿ ಶಿವಯೋಗಿ ಸಿದ್ದರಾಮೇಶ್ವರ ಅವರ ಭಾವಚಿತ್ರದ ಮೆರವಣಿಗೆ ಬೆಳಿಗ್ಗೆ 09 ಗಂಟೆಗೆ ಕೊಪ್ಪಳ ಗವಿಮಠ ಆವರಣದಿಂದ ಹೊರಡಲಿದೆ.  ಮೆರವಣಿಗೆಯು ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮಾರ್ಗವಾಗಿ ಮಹಾಂತಯ್ಯನಮಠ ಕಲ್ಯಾಣ ಮಂಟಪದವರೆಗೆ ಸಾಗಿ ಬರಲಿದೆ.  ವೇದಿಕೆಯ ಸಮಾರಂಭ ಬೆಳಿಗ್ಗೆ 11-30 ಗಂಟೆಗೆ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಉದ್ಘಾಟನೆ ನೆರವೇರಿಸುವರು.  ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಸಮಾರಂಭದ ಅಧ್ಯಕ್ಷತೆ ವಹಿಸುವರು.  ಜಿಲ್ಲಾ ಪಂಚಾಯತ್ ಅಧ್ಯಕ್ಷ ನಾಗರಳ್ಳಿ ಶೇಖರಪ್ಪ ಬಸವರಡ್ಡೆಪ್ಪ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ್,  ಜಿ.ಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದರ ಖಾದ್ರಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಕೊಪ್ಪಳ ತಾ.ಪಂ ಅಧ್ಯಕ್ಷ ಬಾಲಚಂದ್ರನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ಹೊಸಪೇಟೆಯ ನಿವೃತ್ತ ಪ್ರಾಧ್ಯಾಪಕ ಡಾ. ಎಸ್. ಶಿವಾನಂದ ಅವರು ವಿಶೇಷ ಉಪನ್ಯಾಸ ನೀಡುವರು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ತಿಳಿಸಿದ್ದಾರೆ.

Friday, 27 January 2017

ಕಾರ್ಮಿಕ ಪಿಂಚಣಿದಾರರು ಜೀವಂತ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ

ಕೊಪ್ಪಳ ಜ. 27 (ಕರ್ನಾಟಕ ವಾರ್ತೆ): ಕಾರ್ಮಿಕ ಭವಿಷ್ಯ ನಿಧಿಯ ಪಿಂಚಣಿದಾರರು, ತಮ್ಮ ಜೀವಂತ ಪ್ರಮಾಣ ಪತ್ರವನ್ನು ಆನ್‍ಲೈನ್ ಮೂಲಕ ಫೆ. 28 ರೊಳಗಾಗಿ ಸಲ್ಲಿಸುವಂತೆ ಸಹಾಯಕ ಭವಿಷ್ಯ ನಿಧಿ ಆಯುಕ್ತರು ಸೂಚನೆ ನೀಡಿದ್ದಾರೆ.
     ಕಾರ್ಮಿಕ ಭವಿಷ್ಯ ನಿಧಿಯ ಕೊಪ್ಪಳ ಜಿಲ್ಲೆ ಪಿಂಚಣಿದಾರರು ತಮ್ಮ ಜೀವಂತ ಪ್ರಮಾಣ ಪತ್ರವನ್ನು ಆನ್‍ಲೈನ್ ಮೂಲಕ ಸಲ್ಲಿಸಬೇಕು.  ಈ ಉದ್ದೇಶಕ್ಕಾಗಿ ಪಿಂಚಣಿದಾರರು ಫೆಬ್ರವರಿ 28 ರ ಒಳಗಾಗಿ ನೋಂದಾಯಿಸಲು ಸಾಮಾನ್ಯ ಸೇವಾ ಕೇಂದ್ರಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸಬೇಕು.  ಸೇವಾ ಕೇಂದ್ರಗಳಿಗೆ ಪಿಪಿಒ ಸಂಖ್ಯೆ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ ಇವಿಷ್ಟು ಮಾಹಿತಿಯೊಂದಿಗೆ ಭೇಟಿ ನೀಡಬೇಕು.  ಕೊಪ್ಪಳ ಜಿಲ್ಲೆಯಲ್ಲಿನ ಸಾಮಾನ್ಯ ಸೇವಾ ಕೇಂದ್ರಗಳ ದೂರವಾಣಿ ಸಂಖ್ಯೆ ವಿವರ ಇಂತಿದೆ.  9663780004,  8971633138,  7204452325,  9900288399,  9591645893,  9972119138.  ಪಿಂಚಣಿದಾರರು ತಮ್ಮ ಜೀವಂತ ಪ್ರಮಾಣ ಪತ್ರವನ್ನು ಆನ್‍ಲೈನ್ ಮೂಲಕ ನಿಗದಿತ ಅವಧಿಯೊಳಗೆ ಸಲ್ಲಿಸದಿದ್ದಲ್ಲಿ, ಫೆಬ್ರವರಿ ತಿಂಗಳಿನಿಂದಲೇ ಪಿಂಚಣಿಯನ್ನು ತಡೆಹಿಡಿಯಲಾಗುವುದು ಎಂದು ಬಳ್ಳಾರಿಯ ಸಹಾಯಕ ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿಡಿಒ ಹಾಗೂ ಕಾರ್ಯದರ್ಶಿ ಪರೀಕ್ಷೆ: ನಿಷೇದಾಜ್ಞೆ ಜಾರಿ

ಕೊಪ್ಪಳ, ಜ.27 (ಕರ್ನಾಟಕ ವಾರ್ತೆ): ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯತ್ ಕಾರ್ಯದರ್ಶಿ ಗ್ರೇಡ್-1 ಹುದ್ದೆಗೆ ನೇರ ನೇಮಕಾತಿಯ ಪರೀಕ್ಷೆ ಜ.29 ರಂದು ಜಿಲ್ಲೆಯ 26 ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆ ಸುಗಮ ಹಾಗೂ ಸುವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀ ವ್ಯಾಪ್ತಿಯ ಪ್ರದೇಶದಲ್ಲಿ 144 ಕಲಂ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
     ಜ.29 ರ ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಕೊಪ್ಪಳ, ಗಂಗಾವತಿ, ಯಲಬುರ್ಗಾ ಮತ್ತು ಕುಷ್ಟಗಿಯ 26 ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತ  200 ಮೀ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್ ಪೇಜರ್, ಜಿರಾಕ್ಸ್, ಟೈಪಿಂಗ್ ನಿಷೇಧಿಸಲಾಗಿದೆ. ಪ್ರವೇಶ ಪತ್ರ ಹೊಂದಿದ ವಿದ್ಯಾರ್ಥಿಗಳು ಹಾಗೂ ನಿಯೋಜಿತ ಶಿಕ್ಷಕರು, ಜಾಗೃತ ದಳದರನ್ನು ಹೊರತುಪಡಿಸಿ ಇನ್ನುಳಿದವರಿಗೆ ಪ್ರವೇಶ ನಿಷೇಧಿಸಿದೆ. ನಕಲು ಮಾಡವ ಸಾಮಗ್ರಿಗಳನ್ನು ಹಾಗೂ ಹೊರಗಿನಿಂದ ನಕಲು ಬರೆದು ಪರೀಕ್ಷಾ ಕೇಂದ್ರಗಳಲ್ಲಿ ಪೂರೈಸುವುದನ್ನು ನಿರ್ಬಂಧಿಸಲಾಗಿದೆ. ಹಾಗೂ ಪರೀಕ್ಷಾ ಕೇಂದ್ರದ  200 ಮೀ ವ್ಯಾಪ್ತಿಯಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ. ಈ ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಆದರ್ಶ ವಿದ್ಯಾಲಯ : 6 ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಕೊಪ್ಪಳ, ಜ.27 (ಕರ್ನಾಟಕ ವಾರ್ತೆ): ಆದರ್ಶ ವಿದ್ಯಾಲಯ (ಆರ್‍ಎಂಎಸ್‍ಎ) ಟಣಕನಕಲ್ ಶಾಲೆಗೆ 2017-18 ನೇ ಸಾಲಿನ 6 ನೇ ತರಗತಿ (ವಸತಿ ರಹಿತ ಆಂಗ್ಲ ಮಾದ್ಯಮ-ರಾಜ್ಯ ಪಠ್ಯಕ್ರಮ) ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.
    ಪ್ರಸ್ತುತ 5 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಕೊಪ್ಪಳ ತಾಲೂಕಿನ ಅರ್ಹ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ನಿಗದಿತ ಅರ್ಜಿ ನಮೂನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕೊಪ್ಪಳ ಹಾಗೂ ಆದರ್ಶ ವಿದ್ಯಾಲಯ ಟಣಕನಕಲ್ ಇಲ್ಲಿ ಫೆ.03 ರೊಳಗಾಗಿ ಉಚಿತವಾಗಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ಲಗತ್ತಿಸಿ ಫೆ. 03 ರ ಒಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕೊಪ್ಪಳ ಇವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಇಲಾಖೆ ವೆಬ್‍ಸೈಟ್  www.ssakarnataka.gov.in ಇಲ್ಲಿ ವೀಕ್ಷಿಸಬಹುದು.  ಅಥವಾ ಆದರ್ಶ ವಿದ್ಯಾಲಯದ ಮುಖ್ಯ ಗುರುಗಳಾದ ಎ.ಕೆ. ತುಪ್ಪದ್ ಮೊ-8904226351 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಫೆ.03 ರಂದು ಕೃಷಿ ವಿಜ್ಞಾನ ಕೇಂದ್ರದ ವೈಜ್ಞಾನಿಕ ಸಲಹಾ ಸಮಿತಿ ಸಭೆ

ಕೊಪ್ಪಳ, ಜ.27 (ಕರ್ನಾಟಕ ವಾರ್ತೆ): ಗಂಗಾವತಿಯ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಹದಿನಾಲ್ಕನೇ ವೈಜ್ಞಾನಿಕ ಸಲಹಾ ಸಮಿತಿ ಸಭೆ ಫೆ.03 ರಂದು ಬೆಳಿಗ್ಗೆ 10.30 ಗಂಟೆಗೆ ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದ ತರಬೇತಿ ಸಭಾಂಗಣದಲ್ಲಿ ನಡೆಯಲಿದೆ.
    ಸಭೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಕಳೆದ 3 ವರ್ಷದ ಪ್ರಗತಿ, ಜಿಲ್ಲೆಯ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು, ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಿವಿಧ ಕಾರ್ಯ ಯೋಜನೆಗಳ ಮಂಡನೆ ಹಾಗೂ ಇತರೆ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಕಚೇರಿ ಪ್ರಕಟಣೆ ತಿಳಿಸಿದೆ.

ವಿವಿಧ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳಿಗೆ ಚುನಾವಣೆ

ಕೊಪ್ಪಳ ಜ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 07 ಗ್ರಾಮ ಪಂಚಾಯತಿಗಳ ಒಟ್ಟು 08 ಸದಸ್ಯ ಸ್ಥಾನಗಳಿಗಾಗಿ ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡಿದ್ದು, ಜ. 30 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.
     ಕೊಪ್ಪಳ ತಾಲೂಕು ಲೇಬಗೇರಾ, ಬೆಟಗೇರಿ, ಕೋಳೂರು ಗ್ರಾಮ ಪಂಚಾಯತಿಗಳ ತಲಾ 01 ಸ್ಥಾನ.  ಕುಷ್ಟಗಿ ತಾಲೂಕು ಹಾಬಲಕಟ್ಟಿ ಗ್ರಾ.ಪಂ.ನಲ್ಲಿ 02 ಸದಸ್ಯ ಸ್ಥಾನ.  ಗಂಗಾವತಿ ತಾಲೂಕು ಹುಲಿಹೈದರ್ ಗ್ರಾ.ಪಂ., ಹಾಗೂ ಯಲಬುರ್ಗಾ ತಾಲೂಕು ಗೆದಿಗೇರಿ, ಮುರಡಿ ಗ್ರಾ.ಪಂ.ಗಳ ತಲಾ ಒಂದು ಸ್ಥಾನ ಸೇರಿದಂತೆ ಒಟ್ಟು 08 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.  ವೇಳಾಪಟ್ಟಿ ವಿವರ ಇಂತಿದೆ.  ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸುವ ದಿನಾಂಕ: ಜ. 30.  ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: ಫೆ. 02.  ನಾಮಪತ್ರಗಳ ಪರಿಶೀಲನೆ ಫೆ. 03 ರಂದು ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಫೆ. 06 ಕೊನೆಯ ದಿನವಾಗಿದೆ.  ಮತದಾನದ ಅಗತ್ಯವಿದ್ದರೆ, ಫೆ. 12 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಮತದಾನ ನಡೆಯಲಿದೆ.  ಮತಗಳ ಎಣಿಕೆ ಫೆ. 15 ರಂದು ಆಯಾ ತಾಲೂಕು ಕೇಂದ್ರದಲ್ಲಿ ನಡೆಯಲಿದ್ದು, ಚುನಾವಣೆ ಪ್ರಕ್ರಿಯೆ ಫೆ. 15 ರೊಳಗೆ ಪೂರ್ಣಗೊಳ್ಳಲಿದೆ.  ಚುನಾವಣಾ ಚುನಾವಣೆ ನಡೆಯುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜ. 30 ರಿಂದ ಫೆ. 15 ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.  ನೀತಿ ಸಂಹಿತೆ ಜಾರಿಯ ಅವಧಿ ಮತ್ತು ವ್ಯಾಪ್ತಿ ಪ್ರದೇಶದಲ್ಲಿರುವ ಎಲ್ಲ ಮದ್ಯದ ಅಂಗಡಿಗಳನ್ನು ಮಾಲೀಕರು, ಅಧಿಭೋಗದಾರರು ಅಥವಾ ವ್ಯವಸ್ಥಾಪಕರು ಮುಚ್ಚಬೇಕು. ಅಲ್ಲದೆ ಮೊಹರು ಮಾಡಿ ಅದರ ಕೀ ಯನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಆಯಾ ತಹಸಿಲ್ದಾರರಿಗೆ ಒಪ್ಪಿಸಬೇಕು.  ನೀತಿ ಸಂಹಿತೆ ಜಾರಿ ಅವಧಿಯಲ್ಲಿ ಯಾರಾದರೂ ಮದ್ಯವನ್ನು ಸ್ವಾಧೀನದಲ್ಲಿಟ್ಟುಕೊಂಡಿರುವುದು ಅಥವಾ ಮದ್ಯವನ್ನು ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುತ್ತಿರುವುದು ಕಂಡು ಬಂದರೆ, ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ಮುಕ್ತಾಯವಾಗುವವರೆಗೆ ಅಂತಹವರನ್ನು ಕಸ್ಟಡಿಯಲ್ಲಿ ಇಡಲಾಗುವುದು. ಗ್ರಾಮ ಪಂಚಾಯತಿ ಚುನಾವಣೆಗಳ ಮತಪತ್ರದಲ್ಲಿ ನೋಟಾ ಅವಕಾಶ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಪೊಲೀಸ್ ವಿರುದ್ಧ ದೂರಿದ್ದಲ್ಲಿ ಪ್ರಾಧಿಕಾರಕ್ಕೆ ಸಲ್ಲಿಸಿ

ಕೊಪ್ಪಳ, ಜ. 27  (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರವು ಕರ್ನಾಟಕ ಪೊಲೀಸ್ ಕಾಯ್ದೆ 2012 ರ ತಿದ್ದುಪಡಿ ಪ್ರಕಾರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮೇಲಿನ ದೂರುಗಳ ವಿಚಾರಣೆಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ದೂರು ಪ್ರಾಧಿಕಾರಗಳನ್ನು ರಚಿಸಿದ್ದು, ಜಿಲ್ಲೆಯ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿಗಳ ವಿರುದ್ಧ ದೂರುಗಳಿದ್ದಲ್ಲಿ, ಸಾರ್ವಜನಿಕರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ತ್ಯಾಗರಾಜ್ ತಿಳಿಸಿದ್ದಾರೆ.
    ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವು ಡಿಎಸ್‍ಪಿ ಮತ್ತು ಅದಕ್ಕಿಂತ ಕೆಳದರ್ಜೆ ಅಧಿಕಾರಿ/ಸಿಬ್ಬಂದಿಗಳ ವಿರುದ್ಧದ ಆರೋಪ ಅಂದರೆ ಯಾವುದೇ ಸಾರ್ವಜನಿಕ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ, ಪೊಲೀಸ್ ವಶದಲ್ಲಿದ್ದಾಗ ಮರಣ, ಐಪಿಸಿ ಸೆಕ್ಷನ್-320 ರಲ್ಲಿ ತಿಳಿಸಲಾದಂತಹ ಗಂಭೀರ ಗಾಯ, ಮಾನಭಂಗ, ಅಥವಾ ಮಾನಭಂಗಕ್ಕೆ ಯತ್ನ ಅಥವಾ ಕಾನೂನು ಪ್ರಕಾರವಲ್ಲದ ಬಂಧನ ಇಲ್ಲವೇ ವಶದಲ್ಲಿರಿಸಿಕೊಳ್ಳುವುದು, ಇತರ ಗಂಭೀರ ದುರ್ನಡತೆ ದೂರುಗಳ ವಿಚಾರಣೆ ಮಾಡಲಿದೆ.
    ಪೊಲೀಸ್ ಉಪಾಧೀಕ್ಷರು ಮತ್ತು ಅದಕ್ಕಿಂತ ಕೆಳ ಹಂತದ ಅಧಿಕಾರಿ/ಸಿಬ್ಬಂಧಿಗಳ ವಿರುದ್ದದ ದೂರುಗಳನ್ನು, ಸಾರ್ವಜನಿಕರು  ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಕೊಪ್ಪಳ ಇವರಿಗೆ ಸಲ್ಲಿಸಬಹುದು.
     ಡಿಎಸ್‍ಪಿ ಹುದ್ದೆಯ ಅಧಿಕಾರಿಗಿಂತ ಮೇಲಿನ ದರ್ಜೆಯ ಅಧಿಕಾರಿಗಳ ವಿರುದ್ದದ ದೂರುಗಳನ್ನು ಅಧ್ಯಕ್ಷರು, ರಾಜ್ಯ ಪೊಲೀಸ್ ದೂರು ಪ್ರಾಧಿಕಾರ, ಕೊಠಡಿ ಸಂ.36, ನೆಲಮಹಡಿ, ವಿಕಾಸ ಸೌಧ, ಬೆಂಗಳೂರು-01, ದೂರವಾಣಿ- 080-22386063 ಅಥವಾ 22034220 ಇಲ್ಲಿಗೆ ಸಲ್ಲಿಸಬಹುದಾಗಿದೆ.   
     ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದಿಂದ ಸಾರ್ವಜನಿಕರಿಗಾಗಿ ವೆಬ್‍ಸೈಟ್ ಪ್ರಾರಂಭಿಸಿದೆ  www.karnataka.gov.in/spcablr@    ಸಾರ್ವಜಿನಿಕರು ವೀಕ್ಷಿಸಬಹುದು. ಹಾಗೂ ಕೊಪ್ಪಳ ಪೊಲೀಸ್ ದೂರು ಪ್ರಾಧಿಕಾರದ ಇ-ಮೇಲ್ dpcakpl@karnataka.gov.in  ಮೂಲಕ ಸಂಪರ್ಕಿಸಿ ದೂರು ಸಲ್ಲಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾ.ಪಂ ಚುನಾವಣೆ: ಮದ್ಯಪಾನ ನಿಷೇಧ ಜಾರಿ

ಕೊಪ್ಪಳ, ಜ.27 (ಕರ್ನಾಟಕ ವಾರ್ತೆ): ವಿವಿಧ ಕಾರಣಗಳಿಂದ ತೆರವಾಗಿರುವ  ಕೊಪ್ಪಳ ಜಿಲ್ಲೆಯಲ್ಲಿನ 07 ಗ್ರಾಮ ಪಂಚಾಯತಿಗಳ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣೆಯಲ್ಲಿ ಯಾವುದೇ   ಅಹಿತಕರ ಘಟನೆಗಳು ಜರುಗದಂತೆ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗಾಗಿ ಮತ್ತು ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
       ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜ.30 ರಿಂದ ಫೆ.15 ರವರೆಗೆ ಮದ್ಯಪಾನ ಮತ್ತು ಮದ್ಯಮಾರಾಟ ನಿಷೇಧಿಸಲಾಗಿದೆ.  ಚುನಾವಣೆ ನಡೆಯಲಿರುವ ಗ್ರಾಮಪಂಚಾಯಿತಿಗಳ ವಿವರ ಇಂತಿದೆ: ಕೊಪ್ಪಳ ತಾಲೂಕಿನ ಲೇಬಗೇರಾ, ಬೆಟಗೇರಿ, ಕೋಳೂರು. ಕುಷ್ಟಗಿ ತಾಲೂಕಿನ ಹಾಬಲಕಟ್ಟಿ. ಗಂಗಾವತಿ ತಾಲೂಕಿನ ಹುಲಿಹೈದರ್. ಯಲಬುರ್ಗಾ ತಾಲೂಕಿನ ಗದಗೇರಿ, ಮುರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯಪಾನ ಮತ್ತು ಮದ್ಯಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Thursday, 26 January 2017

ದಕ್ಷತೆಯ ಸೇವೆಯೇ ದೇಶಕ್ಕೆ ಸಲ್ಲಿಸುವ ನಿಜವಾದ ಗೌರವ - ಎಂ. ಕನಗವಲ್ಲಿ

ಕೊಪ್ಪಳ ಜ. 26 (ಕರ್ನಾಟಕ ವಾರ್ತೆ): ಪ್ರತಿಯೊಬ್ಬ ಸರ್ಕಾರಿ ನೌಕರರು ದಕ್ಷತೆಯಿಂದ ಸೇವೆ ಸಲ್ಲಿಸುವುದೇ ದೇಶಕ್ಕೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ಕೊಪ್ಪಳ ಜಿಲ್ಲಾಡಳಿತ ಭವನದ ಆವರಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಅವರು ಮಾತನಾಡಿದರು.
     ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ರಚಿಸಲಾದ ಸಂವಿಧಾನ, ಜಾರಿಗೆ ಬಂದ ಈ ದಿನವನ್ನು ನಾವು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸುತ್ತಿದ್ದೇವೆ.  ಪ್ರತಿಯೊಬ್ಬ ನೌಕರರು ದಕ್ಷತೆಯಿಂದ ಸೇವೆ ಸಲ್ಲಿಸುವ ಮೂಲಕವೇ ದೇಶಕ್ಕೆ ಗೌರವ ಸಲ್ಲಿಸಬೇಕು.  ಸಾರ್ವಜನಿಕರಿಗೆ ಸರ್ಕಾರ ನೀಡುವ ಸೌಲಭ್ಯವನ್ನು ವಿಳಂಬಕ್ಕೆ ಆಸ್ಪದವಿಲ್ಲದಂತೆ ಒದಗಿಸಲು ಪ್ರಾಮಾಣಿಕ ಯತ್ನ ಮಾಡಬೇಕು.  ಜಿಲ್ಲೆಯಲ್ಲಿ ಸದ್ಯ ತಲೆದೋರಿರುವ ಬರ ಪರಿಸ್ಥಿತಿಯನ್ನು ಉತ್ತಮವಾಗಿ ಸೇವೆ ಸಲ್ಲಿಸುವ ಮೂಲಕ ಸಮರ್ಥವಾಗಿ ನಿಭಾಯಿಸೋಣ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗಡೆ ಸೇರಿದಂತೆ ಜಿಲ್ಲಾ ಮಟ್ಟದ ಹಲವು ಅಧಿಕಾರಿಗಳು, ವಿವಿಧ ಇಲಾಖೆಗಳ ಸಿಬ್ಬಂದಿಗಳು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಜ. 27 ರಿಂದ ಕೊಪ್ಪಳದಲ್ಲಿ ಕಾಲೇಜು ರಂಗೋತ್ಸವ

ಕೊಪ್ಪಳ ಜ. 26 (ಕರ್ನಾಟಕ ವಾರ್ತೆ) : ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕಲಬುರ್ಗಿಯ ರಂಗಾಯಣ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ಜಿಲ್ಲಾ ಮಟ್ಟದ ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆಗಳನ್ನೊಳಗೊಂಡ ಕಾಲೇಜು ರಂಗೋತ್ಸವ ಕಾರ್ಯಕ್ರಮ ಜ. 27 ಮತ್ತು 28 ರಂದು ಎರಡು ದಿನಗಳ ಕಾಲ ಕೊಪ್ಪಳದ ರಾಜ್ಯ ಸರ್ಕಾರಿ ನೌಕರರ ಸಂಘದ ಸಾಂಸ್ಕøತಿಕ ಭವನದಲ್ಲಿ ಜರುಗಲಿದೆ.
     ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಉದ್ಘಾಟನೆ ನೆರವೇರಿಸುವರು.  ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಸಮಾರಂಭದ ಅಧ್ಯಕ್ಷತೆ ವಹಿಸುವರು.  ಜಿಲ್ಲಾ ಪಂಚಾಯತ್ ಅಧ್ಯಕ್ಷ ನಾಗರಳ್ಳಿ ಶೇಖರಪ್ಪ ಬಸವರಡ್ಡೆಪ್ಪ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ್,  ಜಿ.ಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದರ ಖಾದ್ರಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಕೊಪ್ಪಳ ತಾ.ಪಂ ಅಧ್ಯಕ್ಷ ಬಾಲಚಂದ್ರನ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಜಂಟಿನಿರ್ದೇಶಕ ಕೆ.ಹೆಚ್. ಚೆನ್ನೂರು, ಕಲಬುರ್ಗಿ ರಂಗಾಯಣದ ಆಡಳಿತಾಧಿಕಾರಿ ದತ್ತಪ್ಪ ಸಾಗನೂರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಹಾಗೂ ಕಾಲೇಜು ರಂಗೋತ್ಸವದ ಜಿಲ್ಲಾ ಸಂಚಾಲಕ ಸಿ.ವಿ. ಜಡಿಯವರ್ ಅವರು ತಿಳಿಸಿದ್ದಾರೆ.

ಹೊಸ ಎಪಿಎಲ್ ಪಡಿತರ ಚೀಟಿಗೆ ಆನ್‍ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ


ಕೊಪ್ಪಳ ಜ. 26 (ಕರ್ನಾಟಕ ವಾರ್ತೆ): ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಹೊಸ ಎಪಿಎಲ್ ಪಡಿತರ ಚೀಟಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
       ಹೊಸದಾಗಿ ಎಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಯಸುವವರು www.ahara.kar.nic.in  ವೆಬ್‍ಸೈಟ್ ನಲ್ಲಿ ಆನ್‍ಲೈನ್‍ನಲ್ಲಿ ಆಧಾರ್ ಕಾರ್ಡ್ ವಿವರ ನಮೂದಿಸುವ ಮೂಲಕ ತಾತ್ಕಾಲಿಕ ಪಡಿತರ ಚೀಟಿಯನ್ನು ಪಡೆಯಬಹುದು.  ಆನ್‍ಲೈನ್‍ನಲ್ಲಿ ಸಲ್ಲಿಸಿದ ವಿವರಗಳನ್ನು ಪರಿಶೀಲಿಸಿದ ನಂತರ, ಅರ್ಜಿದಾರರು ಆನ್‍ಲೈನ್‍ನಲ್ಲಿ ನಮೂದಿಸಿದ ವಿಳಾಸಕ್ಕೆ ಸ್ಪಿಡ್‍ಪೋಸ್ಟ್ ಮೂಲಕ ಪಡಿತರ ಚೀಟಿಯನ್ನು ಕಳುಹಿಸಿಕೊಡಲಾಗುವುದು.  ಪಡಿತರ ಚೀಟಿಯ ಶುಲ್ಕ ರೂ. 100 ಗಳನ್ನು ಸ್ಪೀಡ್‍ಪೋಸ್ಟ್ ಮೂಲಕ ವಿಳಾಸಕ್ಕೆ ತಲುಪಿಸುವ ಪೋಸ್ಟ್‍ಮ್ಯಾನ್‍ಗೆ ಸಂದಾಯ ಮಾಡಿ, ಪಡಿತರ ಚೀಟಿ ಪಡೆದುಕೊಳ್ಳಬಹುದು.  ಹೆಚ್ಚಿನ ಮಾಹಿತಿಗಾಗಿ ಆಯಾ ತಹಸಿಲ್ದಾರರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸಿ.ಡಿ. ಗೀತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉತ್ತಮ ಸೇವೆಗೈದವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ

ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ಸರ್ಕಾರಿ ಸೇವೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿ, ಸಿಬ್ಬಂದಿಗಳಿಗೆ ಜಿಲ್ಲಾಡಳಿತದ ವತಿಯಿಂದ ಕೊಡಮಾಡುವ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಜಿಲ್ಲೆಯ ಒಟ್ಟು 09 ಅಧಿಕಾರಿ, ಸಿಬ್ಬಂದಿಗಳಿಗೆ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಪ್ರದಾನ ಮಾಡಿದರು.
     ಸವೋತ್ತಮ ಸೇವಾ ಪ್ರಶಸ್ತಿ ಪಡೆದವರ ವಿವರ ಇಂತಿದೆ.  ಡಾ. ರಾಮದಾಸ್, ಜಂಟಿಕೃಷಿ ನಿರ್ದೇಶಕರು.  ಸುರೇಶ್ ಹಳ್ಯಾಳ, ಉಪನಿರ್ದೇಶಕರು ಖಜಾನೆ ಇಲಾಖೆ.  ಡಾ. ಪ್ರಕಾಶ್, ಮುಖ್ಯ ವೈದ್ಯಾಧಿಕಾರಿ, ಯಲಬುರ್ಗಾ.  ರಾಮಚಂದ್ರ ಸುತಾರ್, ಎಇಇ, ಜೆಸ್ಕಾಂ ಕಾರಟಗಿ.  ಮುರಳಿಧರ ಕುಲಕರ್ಣಿ, ಉಪತಹಸಿಲ್ದಾರ್, ನಾಡಕಚೇರಿ, ಮಂಗಳೂರು.   ಅಂಬುಜಾ ಪಾಟೀಲ್, ಪಿಡಿಒ, ಕ್ಯಾದಿಗುಪ್ಪ ಗ್ರಾ.ಪಂ., ಕುಷ್ಟಗಿ ತಾಲೂಕು.  ಸಾವಿತ್ರಿಬಾಯಿ ಮಹೇಂದ್ರಕರ್, ಕಿರಿಯ ಆರೋಗ್ಯ ಸಹಾಯಕರು, ಭಾಗ್ಯನಗರ.  ಮಂಜುನಾಥ ನರೇರ, ಅರಣ್ಯ ರಕ್ಷಕ, ಅರಣ್ಯ ಇಲಾಖೆ, ಕೊಪ್ಪಳ.  ಪಾಂಡಪ್ಪ ಚನ್ನದಾಸರ, ವಾಹನ ಚಾಲಕ, ಸಹಾಯಕ ಆಯುಕ್ತರ ಕಚೇರಿ, ಕೊಪ್ಪಳ.
       ಸಂಸದ ಕರಡಿ ಸಂಗಣ್ಣ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಫಲಾನುಭವಿಗಳಿಗೆ ಕಾರುಗಳ ವಿತರಣೆ

ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಪ್ರವಾಸಿ ಟ್ಯಾಕ್ಸಿ ಯೊಜನೆಯಡಿ ಮಂಜೂರು ಮಾಡಲಾದ ಕಾರುಗಳನ್ನು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಫಲಾನುಭವಿಗಳಿಗೆ ವಿತರಣೆ ಮಾಡಿದರು.
     ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ 40 ಫಲಾನುಭವಿಗಳಿಗೆ ಈ ಸಂದರ್ಭದಲ್ಲಿ ಕಾರುಗಳನ್ನು ವಿತರಿಸಲಾಯಿತು. ಸಂಸದ ಕರಡಿ ಸಂಗಣ್ಣ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Wednesday, 25 January 2017

ಪ್ರಜಾಪ್ರಭುತ್ವ ಬಲಪಡಿಸಲು ಮತದಾರರ ಸಹಭಾಗಿತ್ವ ಬೇಕು- ಎಂ. ಕನಗವಲ್ಲಿ


ಕೊಪ್ಪಳ ಜ. 25 (ಕರ್ನಾಟಕ ವಾರ್ತೆ):  ಭಾರತ ದೇಶ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತದಾರರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.  

     ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಬುಧವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

     ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಯುವಕರಿಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ನಂಬಿಕೆ ಬರಬೇಕು.  ಜ. 01 ಕ್ಕೆ 18 ವರ್ಷ ವಯಸ್ಸು ಪೂರ್ಣಗೊಂಡವರು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಇದೇ ಕಾರಣಕ್ಕಾಗಿ ಜನವರಿ ತಿಂಗಳಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.  ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಎಲ್ಲರ ಸಹಭಾಗಿತ್ವ ಅಗತ್ಯವಾಗಿದೆ.  ಇತ್ತೀಚಿನ ಕೆಲ ಚುನಾವಣೆಗಳ ಮತದಾನದ ಅಂಕಿ-ಅಂಶಗಳನ್ನು ಗಮನಿಸಿದಾಗ, ನಗರವಾಸಿಗಳಿಗಿಂತ ಗ್ರಾಮೀಣ ಜನರೇ ಹೆಚ್ಚು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ.  ನಗರವಾಸಿಗಳೂ ಸಹ ಸಕ್ರಿಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು.  ಯಾವುದೇ ಮತದಾರರು ಯಾವುದೇ ಚುನಾವಣೆ ಪ್ರಕ್ರಿಯೆಯಿಂದ ದೂರವಾಗದೆ, ಸಕ್ರಿಯವಾಗಿ ಮತದಾನದಲ್ಲಿ ತೊಡಗಿಸಿಕೊಳ್ಳಬೇಕು.  ಚುನಾವಣೆಗಳಲ್ಲಿ ಮತದಾರರು ಯಾವುದೇ ಜಾತಿ, ಮತಗಳ ಪ್ರಭಾವಕ್ಕೆ ಒಳಗಾಗದೆ, ಹಣ ಇನ್ನಿತರೆ ಆಮಿಷಕ್ಕೆ ಒಳಗಾಗದೆ, ಸೂಕ್ತ ವ್ಯಕ್ತಿಯನ್ನು ಆರಿಸುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಘನತೆ, ಗೌರವವನ್ನು ಎತ್ತಿ ಹಿಡಿಯಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.  ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಜಿಲ್ಲಾಧಿಕಾರಿಗಳು ಮತದಾರರ ಪ್ರತಿಜ್ಞಾ ವಿಧಿಯನ್ನು ಇದೇ ಸಂದರ್ಭದಲ್ಲಿ ಬೋಧಿಸಿದರು.
     ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ಪ್ರಭುರಾಜ ನಾಯಕ್ ಅವರು, ಭಾರತದಲ್ಲಿ ಪ್ರತಿ ವರ್ಷ ಸುಮಾರು 02 ಕೋಟಿಯಷ್ಟು ಹೊಸ ಮತದಾರರು ಸೇರ್ಪಡೆಯಾಗುತ್ತಿದ್ದಾರೆ.  ಮಾನವ ಜನಾಂಗದ ಅಭಿವೃದ್ಧಿಗೆ ಪ್ರಜಾಪ್ರಭುತ್ವವೇ ಯೋಗ್ಯವಾದ ಮಾರ್ಗ.  ಜಾತೀಯತೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಲು ದೊಡ್ಡ ಶತ್ರುವಾಗಿದೆ.  ಜನರೇ ತಮ್ಮ ಪ್ರತಿನಿಧಿಯನ್ನು ಸೀಮಿತ ಅವಧಿಗೆ ನೇಮಿಸುವುದೇ ಚುನಾವಣೆಯ ವ್ಯವಸ್ಥೆ.  ಯಾವ ಮತದಾರರು ಬುದ್ದಿವಂತಿಕೆಯಿಂದ ತಮ್ಮ ನಾಯಕರನ್ನು ಆಯ್ಕೆ ಮಾಡುತ್ತಾರೋ, ಆ ದೇಶ ಅಭಿವೃದ್ಧಿ ಹೊಂದುವುದರ ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯು ಬಲಗೊಳ್ಳಲು ಸಾಧ್ಯ. ದೇಶದಲ್ಲಿ ಹಣ ಬಲ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.  ದೇಶದ ಸಮಗ್ರ ಅಭಿವೃದ್ಧಿಗೆ ಜನಪ್ರಿಯ ಯೋಜನೆಗಳಿಗಿಂತ ದೂರದೃಷ್ಟಿಯ ಯೋಜನೆಗಳು ಅತ್ಯಗತ್ಯ ಎಂದರು.
     ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಅಲ್ಲದೆ ನೂತನವಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಯುವ ಮತದಾರರಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ವಿತರಿಸಲಾಯಿತು.
     ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಸ್ವಾಗತಿಸಿ, ವಂದಿಸಿದರು.

ಬರದ ತೀವ್ರತೆ ತಡೆಯುವಲ್ಲಿ ಅನ್ನಭಾಗ್ಯ ಯೋಜನೆ ಸಹಕಾರಿಯಾಗಿದೆ- ಬಸವರಾಜ ರಾಯರಡ್ಡಿ


ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಹಿಂದೆಂದು ಕಂಡರಿಯದ ಭೀಕರ ಬರ ಪರಿಸ್ಥಿತಿ ಇದ್ದು, ಬಡವರಿಗೆ ಉಚಿತ ಆಹಾರಧಾನ್ಯ ವಿತರಣೆ ಮಾಡುವಂತಹ ಅನ್ನಭಾಗ್ಯ ಯೋಜನೆ ಬರದ ತೀವ್ರತೆ ತಡೆಯುವಲ್ಲಿ ಅತ್ಯಂತ ಸಹಕಾರಿಯಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.

     ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ಜಿಲ್ಲಾಡಳಿತದ ವತಿಯಿಂದ ತೆರೆಯಲಾಗಿರುವ ಗೋಶಾಲೆಯನ್ನು ಹಸುವಿಗೆ ಮೇವು ನೀಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

     ರಾಜ್ಯದಲ್ಲಿ ಈ ವರ್ಷ ತೀವ್ರ ಪ್ರಮಾಣದ ಬರ ಪರಿಸ್ಥಿತಿ ಇದೆ.  ಮುಂಗಾರು ಮತ್ತು ಹಿಂಗಾರು ಮಳೆಯ ವೈಫಲ್ಯದಿಂದಾಗಿ ಆಹಾರ ಧಾನ್ಯ ಉತ್ಪಾದನೆ ತೀವ್ರ ಕುಸಿದಿದೆ.  ಬಡವರು, ರೈತರು ತಮ್ಮ ಜೀವನ ಸಾಗಿಸುವುದು ದುಸ್ಥರವಾಗಿರುವ ಸಂದರ್ಭದಲ್ಲಿ, ಬಿಪಿಎಲ್ ಕುಟುಂಬದವರಿಗೆ ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಪಡಿತರ ಆಹಾರ ಧಾನ್ಯ ನೀಡುತ್ತಿರುವುದು, ಬರದ ತೀವ್ರತೆಯನ್ನು ಸ್ವಲ್ಪವಾದರೂ ಕಡಿಮೆಗೊಳಿಸುವಲ್ಲಿ ಸಹಕಾರಿಯಾಗಿದೆ.  ಈ ವರ್ಷದ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕೊಪ್ಪಲ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
180 ಕೋಟಿ ರೂ. ಬೆಳೆ ಹಾನಿ ಪರಿಹಾರಕ್ಕೆ ವರದಿ ಸಲ್ಲಿಕೆ :
*************** ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಯ ವೈಫಲ್ಯದ ಕಾರಣದಿಂದ ತೀವ್ರ ಬೆಳೆ ಹಾನಿ ಸಂಭವಿಸಿದ್ದು, ಮುಂಗಾರು ಹಂಗಾಮಿನ ಬೆಳೆಹಾನಿ ಪರಿಹಾರಕ್ಕಾಗಿ 120 ಕೋಟಿ ರೂ. ಹಾಗೂ ಹಿಂಗಾರು ಹಂಗಾಮಿನ ಬೆಳೆ ಹಾನಿ ಪರಿಹಾರಕ್ಕಾಗಿ 60 ಕೋಟಿ ರೂ. ಸೇರಿದಂತೆ ಒಟ್ಟು 180 ಕೋಟಿ ರೂ. ಪರಿಹಾರ ಒದಗಿಸುವಂತೆ ಈಗಾಗಲೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.  ಕೇಂದ್ರ ಸರ್ಕಾರ ಮುಂಗಾರು ಹಂಗಾಮಿನ ಬೆಳೆ ಹಾನಿ ಪರಿಹಾರಕ್ಕಾಗಿ 1782 ಕೋಟಿ ರೂ. ಮಾತ್ರ ನೀಡಲು ನಿರ್ಧಾರ ಕೈಗೊಂಡಿದ್ದು, ಇದುವರೆಗೂ ಹಣ ಬಿಡುಗಡೆ ಆಗಿಲ್ಲ.  ಬೆಳೆ ಹಾನಿ ಸಮೀಕ್ಷೆಯನ್ನು ಕೊಪ್ಪಳ ಜಿಲ್ಲೆಯಲ್ಲಿ ವೈಜ್ಞಾನಿಕವಾಗಿ ನಡೆಸಿದ್ದು, ಬೆಳೆ ನಷ್ಟ ಅನುಭವಿಸಿರುವ ರೈತರ ಸಮಗ್ರ ವಿವರವನ್ನು ಈಗಾಗಲೆ ಸಮರ್ಪಕವಾಗಿ ಸಂಗ್ರಹಿಸಲಾಗಿದೆ.  ಪರಿಹಾರ ಹಣ ಜಿಲ್ಲೆಗೆ ಬಿಡುಗಡೆಯಾದ ಕೂಡಲೆ, ತ್ವರಿತವಾಗಿ ಸಂಬಂಧಿಸಿದ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಹಣ ಜಮಾ ಆಗಲಿದೆ ಎಂದು ಮಂತ್ರಿಗಳು ಭರವಸೆ ನೀಡಿದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 90 ಲಕ್ಷ ರೂ. ಬಿಡುಗಡೆ :
****************** ಬರ ಪರಿಸ್ಥಿತಿಯ ಸಂದರ್ಭದಲ್ಲಿ ತುರ್ತು ಕುಡಿಯುವ ನೀರಿನ ಕಾರ್ಯಗಳು ಹಾಗೂ ಇತರೆ ವೆಚ್ಚಗಳಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 90 ಲಕ್ಷ ರೂ. ಗಳ ಅನುದಾನವನ್ನು ಸರ್ಕಾರ ಬಿಡುಗಡೆಗೆ ಕ್ರಮ ವಹಿಸಿದೆ.  ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆಯಾಗದಂತೆ, ಈಗಾಗಲೆ ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿನ ಬೋರ್‍ವೆಲ್‍ಗಳ ಬಗ್ಗೆ ಲಭ್ಯವಿರುವ ನೀರಿನ ಪ್ರಮಾಣ ಸಹಿತ ವೈಜ್ಞಾನಿಕವಾಗಿ ಸಮೀಕ್ಷೆ ಕೈಗೊಂಡು, ವರದಿ ಸಿದ್ಧವಾಗಿದೆ.  ಜೂನ್ 15 ರವರೆಗೆ ಗ್ರಾಮಗಳಿಗೆ ಜನಸಂಖ್ಯಾವಾರು ಬೇಕಾಗಬಹುದಾದ ನೀರಿನ ಪ್ರಮಾಣ ಹಾಗೂ ಲಭ್ಯವಿರುವ ನೀರಿನ ಪ್ರಮಾಣವನ್ನು ಪರಿಗಣಿಸಿ, ಬೇಕಾಗಬಹುದಾದ ನೀರಿನ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.  ಅಗತ್ಯವಿರುವೆಡೆ ಖಾಸಗಿ ಬೋರ್‍ವೆಲ್‍ಗಳನ್ನು ತಿಂಗಳಿಗೆ 10 ರಿಂದ 12 ಸಾವಿರ ರೂ. ಬಾಡಿಗೆ ನೀಡಿ, ಪಡೆಯುವಂತೆಯೂ ಸೂಚನೆ ನೀಡಲಾಗಿದೆ ಎಂದರು.
05 ಗೋಶಾಲೆಗಳು ಪ್ರಾರಂಭ :
****************ತೀವ್ರ ಬರದ ಸಂದರ್ಭದಲ್ಲಿ ಜಾನುವಾರುಗಳ ರಕ್ಷಣೆಗಾಗಿ ಸರ್ಕಾರ ಕ್ರಮ ಕೈಗೊಂಡಿದ್ದು, ಈಗಾಗಲೆ ಜಿಲ್ಲೆಯ ಕನಕಗಿರಿ, ವೆಂಕಟಗಿರಿ, ಅಳವಂಡಿ, ತಲ್ಲೂರು, ಕಲಕೇರಿ ಗ್ರಾಮಗಳಲ್ಲಿ ಸೇರಿದಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದು ಗೋಶಾಲೆ ಪ್ರಾರಂಭಿಸಲಾಗಿದ್ದು, ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಸಮರ್ಪಕ ಮೇವು ಹಾಗೂ ಶೆಡ್, ನೀರು ಪೂರೈಕೆಗೆ ಕ್ರಮ ವಹಿಸಲಾಗಿದೆ.  ಬರುವ ದಿನಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಇನ್ನೂ 05 ಗೋಶಾಲೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ.  ಈ ನಿಟ್ಟಿನಲ್ಲಿ ಈಗಾಗಲೆ ಮೇವು ದಾಸ್ತಾನು ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಸವರಾಜ ರಾಯರಡ್ಡಿ ಅವರು ಹೇಳಿದರು.
     ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಉಪವಿಭಾಗಾಧಿಕಾರಿ ಗುರುದತ್ ಹೆಗಡೆ, ತಹಸಿಲ್ದಾರ್ ಗುರುಬಸವರಾಜ್ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮುರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಯಾಣಿಕರೊಂದಿಗೆ ಸಾರಿಗೆ ಸಿಬ್ಬಂದಿಗಳ ವರ್ತನೆ ಸೌಜನ್ಯಯುತವಾಗಿರಲಿ- ಬಸವರಾಜ ರಾಯರಡ್ಡಿ

ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ಬಸ್‍ಗಳಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರೊಂದಿಗೆ ಸಾರಿಗೆ ಸಿಬ್ಬಂದಿಗಳ ವರ್ತನೆ ಸೌಜನ್ಯಯುತವಾಗಿರಬೇಕು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
     ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರದಂದು ಇದೇ ಮೊದಲ ಬಾರಿಗೆ ಏರ್ಪಡಿಸಿದ ‘ಸಾರಿಗೆ ಸ್ಪಂದನ’ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಕೊಪ್ಪಳ ಜಿಲ್ಲೆಯಲ್ಲಿ ಶೇ. 90 ರಷ್ಟು ಗ್ರಾಮಗಳಿಗೆ ಈಗಾಗಲೆ ಬಸ್‍ಗಳು ಸಂಚರಿಸುತ್ತಿವೆ.  ಸುಮಾರು 1 ಲಕ್ಷ ಪ್ರಯಾಣಿಕರು ದಿನನಿತ್ಯ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಸಂಚರಿಸುತ್ತಿದ್ದಾರೆ.  ಬಸ್ ಹಾಗೂ ಬಸ್ ನಿಲ್ದಾಣಗಳಲ್ಲಿ ಸಾರಿಗೆ ಸಿಬ್ಬಂದಿಯ ವರ್ತನೆ ಸೌಜನ್ಯಯುತವಾಗಿರಬೇಕು.  ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಹಾಗೂ ಸಮರ್ಪಕ ಶೌಚಾಲಯ ವ್ಯವಸ್ಥೆ ಕಾಯ್ದುಕೊಳ್ಳಬೇಕು.  ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಿದ್ದರೂ, ಸಂಸ್ಥೆ ನಷ್ಟದಲ್ಲಿದೆ ಎಂಬುದಾಗಿ ವರದಿ ಸಲ್ಲಿಸಲಾಗಿದೆ.  ಸಂಸ್ಥೆಯ ಉನ್ನತ ಅಧಿಕಾರಿಗಳು, ಬಸ್‍ಗಳು ನಿಗದಿತ ವೇಳಾಪಟ್ಟಿಯಂತೆ ಸಂಚರಿಸುತ್ತಿವೆಯೇ ಇಲ್ಲವೋ ಎನ್ನುವುದನ್ನು ನಿಯಮಿತವಾಗಿ ಪರಿಶೀಲಿಸಬೇಕು. ಆದಾಯ ಸೋರಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಬೇಕು.  ಸದ್ಯ ಇರುವ ಮಾರ್ಗಗಳನ್ನು ಪರಿಷ್ಕರಿಸಿ, ಸಂಸ್ಥೆಗೆ ಆದಾಯ ಬರುವ ರೀತಿಯಲ್ಲಿ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವೇಳಾಪಟ್ಟಿಯನ್ನು ಮರು ನಿಗದಿಪಡಿಸಬೇಕು.  ನಷ್ಟದಲ್ಲಿರುವ ಸಂಸ್ಥೆಯನ್ನು ಲಾಭದತ್ತ ಮರಳುವಂತೆ ಮಾಡುವ ನಿಟ್ಟಿನಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು.  ಕೊಪ್ಪಳದಿಂದ ಗುಲಬರ್ಗಾಕ್ಕೆ ರಾತ್ರಿ ಸಮಯಕ್ಕೆ ನೂತನ ಬಸ್ ಸಂಚಾರ ಸೇವೆ ಪ್ರಾರಂಭಿಸಬೇಕು ಎನ್ನುವ ಬೇಡಿಕೆ ಇದ್ದರೂ, ಇದುವರೆಗೂ ಪ್ರಾರಂಭಿಸಿಲ್ಲ.  ಎಲ್ಲಿ ಅವಶ್ಯಕತೆ ಇದೆಯೋ, ಸಂಚಾರ ದಟ್ಟಣೆ ಇದೆಯೇ ಅಂತಹ ಮಾರ್ಗಗಳಿಗೆ ಹೆಚ್ಚಿನ ಬಸ್ ಸಂಚಾರ ಕೈಗೊಳ್ಳಬೇಕು.  ತಾಲೂಕು ಕೇಂದ್ರಗಳ ನಡುವೆ ಬಸ್ ಸಂಖ್ಯೆ ಹೆಚ್ಚಿಸಬೇಕು.  ಪ್ರತಿ ವರ್ಷ ಸುಮಾರು 800 ಕೋಟಿ ರೂ. ಹಣವನ್ನು ವಿದ್ಯಾರ್ಥಿಗಳ ಬಸ್‍ಪಾಸ್ ಉದ್ದೇಶಕ್ಕಾಗಿಯೇ ಸರ್ಕಾರ ಸಾರಿಗೆ ಸಂಸ್ಥೆಗೆ ಪಾವತಿಸುತ್ತಿದೆ.  ಆದರೆ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜುಗಳ ವೇಳೆಗೆ ಅನುಗುಣವಾಗಿ ಬಸ್ ಸಂಚಾರ ವ್ಯವಸ್ಥೆ ಇಲ್ಲ.  ಇದನ್ನು ಸುಧಾರಿಸಬೇಕು.  ಈಗಾಗಲೆ ಕೊಪ್ಪಳ ಮತ್ತು ಗಂಗಾವತಿಯಲ್ಲಿ ನಗರ ಸಾರಿಗೆ ಪ್ರಾರಂಭಿಸಲಾಗಿದೆ.  ಅದೇ ರೀತಿ ಅಗತ್ಯವಿದ್ದಲ್ಲಿ, ಕುಷ್ಟಗಿ ಪಟ್ಟಣದಲ್ಲಿಯೂ ಸಿಟಿ ಬಸ್ ಸೇವೆ ಪ್ರಾರಂಭಿಸಬೇಕು.  ಹೋಬಳಿ ಅಥವಾ ಪ್ರಮುಖ ಗ್ರಾಮಗಳಲ್ಲಿ ಅಗತ್ಯವಿರುವ ಕಡೆಗಳಲ್ಲಿ ಹೊಸದಾಗಿ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಸದ್ಯ ರಸ್ತೆಗಳ ಗುಣಮಟ್ಟ ಸುಧಾರಣೆಯಾಗಿದ್ದು, ಬಸ್‍ಗಳ ಸಂಚಾರವನ್ನು ಹೆಚ್ಚಿಸಬೇಕಿದೆ.  ಬಸ್‍ಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವಲ್ಲಿ ಸಾರಿಗೆ ಸಂಸ್ಥೆ ವಿಶೇಷ ಗಮನ ನೀಡಬೇಕು.  ಬಹಳಷ್ಟು ಹಳೆಯದಾಗಿರುವ ಬಸ್‍ಗಳನ್ನು ತೆರವುಗೊಳಿಸಿ, ಹೊಸ ಬಸ್‍ಗಳ ಸಂಚಾರವನ್ನು ಪ್ರಾರಂಭಿಸಬೇಕು ಎಂದು ಸಲಹೆ ನೀಡಿದರು.    
     ಈಕರಸಾ ಸಂಸ್ಥೆ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಬೋರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ವಿಭಾಗದಲ್ಲಿ ಒಟ್ಟು 05 ಘಟಕಗಳಿದ್ದು, 413 ಬಸ್‍ಗಳು ಸಂಚರಿಸುತ್ತಿವೆ.  ವಿಭಾಗದಲ್ಲಿ ನಿತ್ಯ 32. 54 ಲಕ್ಷ ರೂ. ಸರಾಸರಿ ಆದಾಯ ಬರುತ್ತಿದೆ.  ವಾಸ್ಕೋ, ಮಂಗಳೂರು, ಮೈಸೂರು, ಊಟಿ, ತಿರುಪತಿ, ಮುಂಬಯಿಗೆ ಪ್ರತಿಷ್ಠಿತ ಸಾರಿಗೆ ಬಸ್ ಸೇವೆಯನ್ನು ಪ್ರಾರಂಭಿಸುವ ಪ್ರಸ್ತಾವನೆ ಇದೆ.  25799 ವಿದ್ಯಾರ್ಥಿ ಬಸ್ ಪಾಸ್, 4728 ಅಂಗವಿಕಲರ ರಿಯಾಯಿತಿ ಬಸ್ ಪಾಸ್, 4748 ಹಿರಿಯ ನಾಗರೀಕರಿಗೆ ಪಾಸ್ ವಿತರಿಸಲಾಗಿದೆ.  ಅಪಘಾತ ರಹಿತ ಚಾಲನೆಗಾಗಿ ಈವರೆಗೆ 18 ಚಾಲಕರು ಚಿನ್ನದ ಪದಕ, 110 ಚಾಲಕರು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.  ಪ್ರಮುಖ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಹೆಚ್.ಕೆ.ಆರ್.ಡಿ.ಬಿ. ಅನುದಾನದಿಂದ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ ಎಂದರು.
     ಕಾರ್ಯಕ್ರಮದಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಈಕರಸಾ ಸಂಸ್ಥೆ ಮಂಡಳಿಯ ನಿರ್ದೇಶಕ ಖಾಸಿಂ ಸಾಬ್ ತಳಕಲ್ ಸೇರಿದಂತೆ ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿಗಳ ಸುಮಾರು 70 ಕ್ಕೂ ಜನಪ್ರತಿನಿಧಿಗಳು ಸಾರಿಗೆ ಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  ಕಾರ್ಯಕ್ರಮದ ಅಂಗವಾಗಿ ಜನಪ್ರತಿನಿಧಿಗಳು ಸಾರಿಗೆ ಸಂಸ್ಥೆಗೆ ಸಂಬಂಧಿಸಿದಂತೆ ಸಲ್ಲಿಸಿದ ಅಹವಾಲುಗಳನ್ನು ಪಡೆದು, ಪರಿಹರಿಸುವ ಭರವಸೆಯನ್ನು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ನೀಡಿದರು.

ಸಕಾಲದಲ್ಲಿ ಉದ್ಯೋಗಖಾತ್ರಿ ಯೋಜನೆ ಕೂಲಿ ಪಾವತಿಸಿ- ಬಸವರಾಜ ರಾಯರಡ್ಡಿ

ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ನಿಗದಿತ ಅವಧಿಯೊಳಗೆ ಕೂಲಿ ಹಣ ಪಾವತಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಕಿನ್ನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಂಡ ಸ್ಥಳಕ್ಕೆ ಬುಧವಾರದಂದು ಭೇಟಿ ನೀಡಿ, ಪರಿಶೀಲಿಸಿದ ನಂತರ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.     ಜಿಲ್ಲೆಯಲ್ಲಿ ತೀವ್ರ ಬರ ಇದೆ.  ಆನರು ಉದ್ಯೋಗ ಅರಸಿಕೊಂಡು ಇತರೆ ಪ್ರದೇಶಗಳಿಗೆ ಗುಳೇ ಹೋಗದಂತೆ ಮಾಡಲು, ಸ್ಥಳೀಯವಾಗಿ ಉದ್ಯೋಗವನ್ನು ಜನರಿಗೆ ನೀಡಬೇಕು.  ಕೂಲಿಕಾರರಿಗೆ ವಿಳಂಬಕ್ಕೆ ಅವಕಾಶವಿಲ್ಲದಂತೆ, ಸಕಾಲದಲ್ಲಿ ಹಣ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಮಂತ್ರಿಗಳು ಸೂಚನೆ ನೀಡಿದರು.  ಉದ್ಯೋಗ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಕುರಿತಂತೆ ಸಾರ್ವಜನಿಕರೊಂದಿಗೆ ಇದೇ ಸಂದರ್ಭದಲ್ಲಿ ಚರ್ಚೆ ನಡೆಸಿದರು.
      ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಉಪಕಾರ್ಯದರ್ಶಿ ಎನ್.ಕೆ. ತೊರವಿ ಸೇರಿದಂತೆ ಜಿ.ಪಂ. ಸದಸ್ಯರು, ತಾ.ಪಂ. ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ರೈತರು ಪರಿಸರದ ಜೊತೆಗೆ ಹೊಂದಿಕೊಂಡು ಹೋಗುವಂತಾಗಬೇಕು- ಡಾ. ಎ. ರಾಮದಾಸ್

ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ಮಳೆಯ ಅನಿಶ್ಚಿತತೆಯ ಇಂದಿನ ದಿನಮಾನಗಳಲ್ಲಿ ಪರಿಸರದ ಜೊತೆಗೆ ಸಮಗ್ರವಾಗಿ ಹೊಂದಿಕೊಂಡು ಹೋಗುವ ರೀತಿಯಲ್ಲಿ ರೈತರು ತಮ್ಮನ್ನು ತಾವು ಸಜ್ಜುಗೊಳಿಸಬೇಕು ಎಂದು ಜಂಟಿಕೃಷಿ ನಿರ್ದೇಶಕ ಡಾ. ಎ. ರಾಮದಾಸ್ ಅಭಿಪ್ರಾಯಪಟ್ಟರು.
     ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೃಷಿ ಇಲಾಖೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ರೈತರಿಂದ ರೈತರಿಗಾಗಿ ಪ್ರಗತಿಪರ ರೈತರ ಆವಿಷ್ಕಾರಗಳನ್ನು ರೈತರಿಗೆ  ತರಬೇತಿ ನೀಡುವ ನಿಟ್ಟಿನಲ್ಲಿ ಜ. 25 ರವರೆಗೆ ಮೂರು ದಿನಗಳ ಕಾಲ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಹಮ್ಮಿಕೊಂಡ “ಪರಿಸರ ಸ್ನೇಹಿ ಕೃಷಿ” ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
      ಇಂದಿನ ದಿನಮಾನಗಳಲ್ಲಿ ಮಳೆಯ ಅನಿಶ್ಚಿತತೆ ಕಾಡುತ್ತಿದೆ. ರೈತರು ಪರಿಸರದ ಜೊತೆಗೆ ಸಮಗ್ರವಾಗಿ ಹೊಂದಿಕೊಂಡು ತಾವೂ ಕೂಡ ಅಭಿವೃದ್ಧಿ ಹೊಂದಿ, ದೇಶದ ಜನತೆಯನ್ನು ಆಹಾರ ಭದ್ರತೆಗೆ ಕೊಂಡೊಯ್ಯುವುದು ಬಹಳ ಮುಖ್ಯ.  ರೈತರ ಪ್ರಗತಿಯ ಹೊರತು ದೇಶದ ಪ್ರಗತಿ ಸಾಧ್ಯವಿಲ್ಲ ಎಂದು ರಾಮದಾಸ್ ಅಭಿಪ್ರಾಯಪಟ್ಟರು.
3 ದಿನಗಳ ತರಬೇತಿಯಲ್ಲಿ ಯುವ ರೈತರಿಗೆ ಹಿರಿಯ ಹಾಗೂ ಅನುಭವಿ ರೈತರಿಂದ ಕೃಷಿ ವಿಷಯದ ಮಾಹಿತಿ ನೀಡಲಾಯಿತು.  ತರಬೇತಿಗಾಗಿ ಆಗಮಿಸಿದ ರೈತರಿಗೆ ತರಬೇತಿ ಪೂರ್ವ ಹಾಗೂ ತರಬೇತಿ ನಂತರ ಮೌಲ್ಯಮಾಪನ ಮಾಡಲಾಯಿತು.  ಪ್ರಗತಿಪರ ರೈತರ ಕ್ಷೇತ್ರಗಳಿಗೆ ಭೇಟಿ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು.  ತರಬೇತಿ ಪಡೆದ ರೈತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.  ತರಬೇತಿದಾರರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ರೈತರಿಗೆ ಜೀವನಕಲೆ ಶಿಕ್ಷಕರು ಯೋಗ, ಧ್ಯಾನದ ತರಬೇತಿ ನೀಡಿದರು. 
ಡಾ. ಎಮ್. ಬಿ. ಪಾಟೀಲ, ವಿಸ್ತರಣಾ ಮುಂದಾಳು ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಕುಷ್ಟಗಿ ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕಮತರ್, ಎಸ್.ಬಿ. ಕೋಣಿ, ಜಿಲ್ಲಾ ಕೃಷಿ ಸಲಹೆಗಾರರು, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ. ಡಾ. ಬಿ.ಎಮ್. ಚಿತ್ತಾಪುರ, ಮುಖ್ಯ ವೈಜ್ಞಾನಿಕ ಅಧಿಕಾರಿಗಳು, ಸರ್ವೋದಯ ಸಂಸ್ಥೆಯ ಮುಖ್ಯಸ್ಥ ನಾಗರಾಜ ದೇಸಾಯಿ ಮತ್ತು ಜೀವನ ಕಲೆ ಸಂಸ್ಥೆಯ ಶರಣು ಗುರೂಜಿ, ಡಾ. ಜೂಕ್ತಿಮಠ,.  ಕವಿತಾ ವೈ. ಉಳ್ಳಿಕಾಶಿ, ವಿಷಯ ತಜ್ಞರು (ಗೃಹ ವಿಜ್ಞಾನ) ಇವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಶ್ವೇತ, ವಿಷಯ ತಜ್ಞರು (ಸಸ್ಯಕೀಟ ಶಾಸ್ತ್ರ) ಹಾಗೂ   ಪ್ರದೀಪ ಬಿರಾದರ, ವಿಷಯ ತಜ್ಞರು (ತೋಟಗಾರಿಕೆ) ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಇವರು ಉಪಸ್ಥಿತರಿದ್ದರು.

ಜ.27 ರಂದು ಯಲಬುರ್ಗಾದಲ್ಲಿ ಎಸಿಬಿ ಯಿಂದ ಕುಂದುಕೊರತೆ ಹಾಗೂ ದೂರು ಸ್ವೀಕಾರ

ಕೊಪ್ಪಳ, ಜ.25 (ಕರ್ನಾಟಕ ವಾರ್ತೆ):  ಆರಕ್ಷಕ ಉಪಾಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ, ಕೊಪ್ಪಳ ಇವರು ಜ.27 ರಂದು ಯಲಬುರ್ಗಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ರಿಂದ ಮದ್ಯಾಹ್ನ 3 ಗಂಟೆಯವರೆಗೆ ಸಾರ್ವಜನಿಕರಿಂದ ಕುಂದು ಕೊರತೆಗಳ ದೂರು ಸ್ವೀಕರಿಸಿ, ಅಹವಾಲು ಆಲಿಸಲಿದ್ದಾರೆ.
       ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಬಗ್ಗೆ ಅರ್ಜಿಗಳನ್ನು ನೀಡಿ ಸದುಪಯೋಗ ಪಡೆಯಬಹುದು ಹಾಗೂ ಸರ್ಕಾರಿ ಸೌಕರರು ಲಂಚದ ಹಣಕ್ಕೆ ಬೇಡಿಕೆ ಹಾಗೂ ಅಕ್ರಮ ಸಂಪತ್ತು ಹೊಂದಿದ್ದಲ್ಲಿ ದೂರು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಆರಕ್ಷಕ ಉಪಾಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ, ಪಿಡಬ್ಲೂಡಿ ಕ್ವಾಟ್ರಸ್ ನಂ-5, ಈಶ್ವರ ಗುಡಿ ಹಿಂದುಗಡೆ, ಕೊಪ್ಪಳ ದೂ.ಸಂ: 08539-221833, ಮೊ-9480806319, 9480806320 ಅಥವಾ ಇ-ಮೇಲ್ ವಿಳಾಸ  dspkpl.acb@karnataka.gov.in ಇಲ್ಲಿಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಎಸಿಬಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Tuesday, 24 January 2017

ಜಿಪಂ, ತಾಪಂ ಗಳಿಗೆ ಹೆಚ್ಚಿನ ಅನುದಾನ ನೀಡಿ- ಜನಪ್ರತಿನಿಧಿಗಳ ಒತ್ತಾಯ


ಕೊಪ್ಪಳ ಜ.24 (ಕರ್ನಾಟಕ ವಾರ್ತೆ): ರಾಜ್ಯ ಹಣಕಾಸು ಆಯೋಗದಿಂದ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳಿಗೆ ಹೆಚ್ಚಿನ ಅನುದಾನವನ್ನು ಒದಗಿಸುವಂತೆ ಜಿ.ಪಂ. ಮತ್ತು ತಾ.ಪಂ. ಜನಪ್ರತಿನಿಧಿಗಳು 4ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ಜಿ. ಚಿನ್ನಸ್ವಾಮಿ ಅವರಿಗೆ ಒಕ್ಕೊರಲ ಒತ್ತಾಯ ಮಾಡಿದರು.

     ರಾಜ್ಯ ರಾಜಸ್ವ ನಿಧಿಯನ್ನು ಪಂಚಾಯತಿ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲು ಹಂಚಿಕಾ ಸೂತ್ರ ನಿರ್ಧರಿಸುವುದರ ಕುರಿತು ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ, ಗ್ರಾಮ ಪಂಚಾಯತಿ ಜನಪ್ರತಿನಿಧಿಗಳೊಂದಿಗೆ ಮಂಗಳವಾರದಂದು ಏರ್ಪಡಿಸಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಎಲ್ಲ ಜನಪ್ರತಿನಿಧಿಗಳಿಂದ ಈ ಒತ್ತಾಯ ಕೇಳಿ ಬಂದಿತು.

     ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ಸಭೆ ಪ್ರಾರಂಭಕ್ಕೂ ಮುನ್ನ ಮಾತನಾಡಿದ 04 ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ಜಿ. ಚಿನ್ನಸ್ವಾಮಿ ಅವರು, ರಾಜ್ಯ ರಾಜಸ್ವ ನಿಧಿಯನ್ನು ಪಂಚಾಯತಿ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲು ಹಂಚಿಕಾ ಸೂತ್ರ ನಿರ್ಧರಿಸುವುದು ಮತ್ತು ಸಂಸ್ಥೆಗಳ ಆರ್ಥಿಕ ಸ್ಥಿತಿಗತಿಗಳನ್ನು ವಿಶ್ಲೇಷಿಸಿ ಸದೃಢಗೊಳಿಸಲು ಮಾರ್ಗೋಪಾಯಗಳ ಕುರಿತು ಶಿಫಾರಸು ಮಾಡುವುದು ಆಯೋಗದ ಕಾರ್ಯವಾಗಿದ್ದು, ಈ ಹಿನ್ನೆಲೆಯಲ್ಲಿ  ಆಯೋಗವು ಈಗಾಗಲೆ 28 ಜಿಲ್ಲೆಗಳಿಗೆ ಭೇಟಿ ನೀಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ವಿಸ್ತøತ ಚರ್ಚೆ ಮಾಡಿದೆ.  ಜನಪ್ರತಿನಿಧಿಗಳಿಗೆ ಪ್ರಶ್ನಾವಳಿಯನ್ನು ಕಳುಹಿಸಿ, ಅವರಿಂದ ಉತ್ತರ ಹಾಗೂ ಸಲಹೆಗಳನ್ನು  ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಇಲ್ಲಿನ 153 ಗ್ರಾ.ಪಂ. ಗಳಿಗೆ ಪ್ರಶ್ನಾವಳಿಯನ್ನು ಕಳುಹಿಸಿಕೊಡಲಾಗಿತ್ತು.  ಆದರೆ 123 ಗ್ರಾ.ಪಂ. ಗಳು ಮಾತ್ರ ಉತ್ತರ ಸಲ್ಲಿಸಿದ್ದು, ಈ ಪೈಕಿ ಬಹುತೇಕ ಗ್ರಾ.ಪಂ. ಗಳು ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ನೀಡಿಲ್ಲ. ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಟ್ಟಾಗ ಮಾತ್ರ ಆಯೋಗದ ಶ್ರಮ ಸಾರ್ಥಕವಾಗಲಿದೆ.  ಈ ಹಿಂದಿನ ಆಯೋಗದಲ್ಲಿ ಎಲ್ಲ ಅನುದಾನ ಗ್ರಾಮ ಪಂಚಾಯತಿಗಳಿಗೆ ಮಾತ್ರ ಬಿಡುಗಡೆಯಾಗುವ ವ್ಯವಸ್ಥೆ ಇದ್ದಿದ್ದರಿಂದ, ಜಿ.ಪಂ. ಮತ್ತು ತಾ.ಪಂ. ಗಳಿಗೆ ಯಾವುದೇ ಅನುದಾನ ಒದಗಿಸಲಾಗಿಲ್ಲ.  ಇದರಿಂದಾಗಿ ಜನಪ್ರತಿನಿಧಿಗಳು ತೀವ್ರ ತೊಂದರೆ ಎದುರಿಸುತ್ತಿದ್ದೇವೆ ಎಂಬುದಾಗಿ ವಿವಿಧ ಜಿಲ್ಲೆಗಳ ಜನಪ್ರತಿನಿಧಿಗಳು ಆಯೋಗದ ಮುಂದೆ ಅಹವಾಲು ಸಲ್ಲಿಸಿದ್ದಾರೆ.  ಸದಸ್ಯರುಗಳಿಗೆ ಗೌರವಧನ ಹೆಚ್ಚಳ, ಮೊಬೈಲ್ ಭತ್ಯೆ ಹೀಗೆ ಹಲವು ವಿಚಾರಗಳಿಗೆ ಸಲಹೆಗಳನ್ನು ನೀಡಿದ್ದಾರೆ.  ಅನುದಾನ ಹಂಚಿಕೆಯಲ್ಲಿನ ಲೋಪದೋಷಗಳಿಂದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಶಿಕ್ಷಣ, ಅಂತರ್ಜಲ ಸುಧಾರಣಾ ಕ್ರಮಗಳು ಮುಂತಾದ ಕ್ಷೇತ್ರಗಳ ಪರಿಣಾಮಕಾರಿ ಅಭಿವೃದ್ಧಿ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.  ಈ ದಿಸೆಯಲ್ಲಿ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದ ನಂತರವೇ, ಅನುದಾನ ಹಂಚಿಕೆ ಕುರಿತಂತೆ ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದರು.
     ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಮಾತನಾಡಿ, ರಾಜ್ಯ ಹಣಕಾಸು ಆಯೋಗವು ಜಿ.ಪಂ. ಗೆ ಕನಿಷ್ಟ 15 ಕೋಟಿ ರೂ. ಅನುದಾನ ಹಂಚಿಕೆ ಮಾಡಿದಲ್ಲಿ, ಜಿ.ಪಂ. ಕ್ಷೇತ್ರವಾರು ಮರು ಹಂಚಿಕೆ ಸಾಧ್ಯವಾಗಲಿದೆ.  ಮೂಲಭೂತ ಸೌಕರ್ಯಗಳಿಗೆ ತ್ವರಿತವಾಗಿ ಸ್ಪಂದಿಸಲು ಸಾಧ್ಯವಾಗಲಿದೆ ಎಂದರು.
     ಜಿಲ್ಲಾ ಪಂಚಾಯತಿ ವ್ಯಾಪ್ತಿ ದೊಡ್ಡದಾಗಿದ್ದು, ಶಾಲೆಗಳು, ಕುಡಿಯುವ ನೀರು, ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಸದಸ್ಯರುಗಳತ್ತ ಬೊಟ್ಟು ಮಾಡುತ್ತಿದ್ದಾರೆ.  ಆದರೆ ಅನುದಾನ ಕೊರತೆಯಿಂದ ಇಂತಹ ಸಮಸ್ಯೆಗಳನ್ನು ಪರಿಹರಿಸಲು ಜಿ.ಪಂ. ಸದಸ್ಯರುಗಳಿಂದ ಸಾಧ್ಯವಾಗದೆ, ಸಾರ್ವಜನಿಕರಿಗೆ ಉತ್ತರಿಸಲು ಆಗುತ್ತಿಲ್ಲ.  ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಜಿ.ಪಂ. ಸದಸ್ಯರುಗಳಿಗೆ ಯಾವುದೇ ಅನುದಾನ ದೊರಕುವುದಿಲ್ಲ.  ಕುಡಿಯುವ ನೀರಿನ ಅನುದಾನವನ್ನು ಅಧಿಕಾರಿಗಳು ಬೇರೆ ಯಾವುದೋ ಉದ್ದೇಶಕ್ಕೆ ಬಳಸುತ್ತಾರೆ.  ಹೀಗೆ ಅನುದಾನವನ್ನು ನಿಗದಿತ ಉದ್ದೇಶಕ್ಕೆ ಬಳಸದೆ, ಬೇರೆಯದಕ್ಕೆ ಬಳಸುತ್ತಾರೆ.  ಇದು ಜಿ.ಪಂ. ಸದಸ್ಯರ ಗಮನಕ್ಕೆ ಬರುವುದೇ ಇಲ್ಲ.  ಅಧಿಕಾರಿಗಳಿಂದ ಸರಿಯಾದ ಮಾಹಿತಿ ದೊರಕುವುದಿಲ್ಲ.  ಪಕ್ಷ ಬೇಧಗಳ ಕಾರಣದಿಂದ ಅನುದಾನ ಹಂಚಿಕೆಯಲ್ಲಿಯೂ ತೊಂದರೆಯಾಗುತ್ತಿದೆ.  ಕ್ಷೇತ್ರವಾರು ಸದಸ್ಯರುಗಳಿಗೆ ಅನುದಾನ ಹಂಚಿಕೆಯಾದರೆ, ಇದರ ತೊಂದರೆ ನಿವಾರಣೆ ಆಗಲಿದೆ ಎಂದು ಕೆಲ ಜಿ.ಪಂ. ಸದಸ್ಯರುಗಳು ಮನವಿ ಮಾಡಿದರು.
     ಜಿ.ಪಂ. ಮಾಜಿ ಅಧ್ಯಕ್ಷ ಜನಾರ್ಧನ ಹುಲಿಗಿ ಮಾತನಾಡಿ, ರಾಜ್ಯದಲ್ಲಿ 6 ಸಾವಿರ ಗ್ರಾಮ ಪಂಚಾಯತಿಗಳಿದ್ದು, ಕನಿಷ್ಟ  01 ಸಾವಿರ ಘನತ್ಯಾಜ್ಯ ವಿಲೇವಾರಿ ಘಟಕಗಳ ಸ್ಥಾಪನೆಯಾದಲ್ಲಿ, ಸಾವಯವ ಗೊಬ್ಬರ ಉತ್ಪಾದನೆ ಹಾಗೂ ಬಳಕೆ ಹೆಚ್ಚಾಗಲಿದೆ.  ಕಾಲುವೆಗಳ ಮೂಲಕ ಕುಡಿಯುವ ನೀರು ಪೂರೈಸಿದಲ್ಲಿ, ಶೇ. 70 ರಷ್ಟು ನೀರು ಪೋಲಾಗುತ್ತದೆ.  ಇದರ ಬದಲಿಗೆ ಕೆರೆಗಳ ನಿರ್ಮಾಣ ಹಾಗೂ ಕೆರೆಗಳನ್ನು ತುಂಬಿಸುವಂತಹ ಯೋಜನೆಗಳಿಗೆ ಆಯೋಗವು ಅನುದಾನವನ್ನು ಒದಗಿಸಬೇಕು.  ಶಾಲೆ ಕಟ್ಟಡಗಳಿಗೆ ಅನುದಾನ ಒದಗಿಸುವ ಸರ್ಕಾರವು ಜಾಗ ಖರೀದಿಗೆ ಮಾತ್ರ ಅನುದಾನ ಕೊಡುವುದಿಲ್ಲ.  ಜಾಗವಿಲ್ಲದೆ ಕಟ್ಟಡ ಕಟ್ಟಲು ಸಾಧ್ಯವಿಲ್ಲ.  ಆದ್ದರಿಂದ ಶಾಲೆ ಕಟ್ಟಡಗಳಿಗೆ ಜಾಗ ಖರೀದಿಸಲು ಆಯೋಗ ಅನುದಾನ ಒದಗಿಸುವುದು ಸೂಕ್ತ ಎಂದರು.
     ತಾಲೂಕಾ ಪಂಚಾಯತಿಗಳಿಗೆ ಕ್ಷೇತ್ರವಾರು ಅನುದಾನ ಹಂಚಿಕೆಯಾಗಬೇಕು.  ಹೆಚ್ಚು ಕ್ಷೇತ್ರಗಳಿರುವ ತಾ.ಪಂ. ಗಳಿಗೂ ಒಂದು ಕೋಟಿ, ಕಡಿಮೆ ಕ್ಷೇತ್ರವಿರುವ ತಾ.ಪಂ. ಗಳಿಗೂ ಒಂದು ಕೋಟಿ ರೂ. ಅನುದಾನ ಒದಗಿಸುತ್ತಿರುವುದು ಸರಿಯಲ್ಲ.  ಕ್ಷೇತ್ರದ ಸಂಖ್ಯೆಗಳಿಗೆ ಅನುಗುಣವಾಗಿ ಅನುದಾನ ಒದಗಿಸಬೇಕು.  ಪ್ರತಿ ತಾ.ಪಂ. ಗಳಿಗೆ ಕನಿಷ್ಟ 03 ಕೋಟಿ ರೂ. ಅನುದಾನವನ್ನು ಆಯೋಗ ಹಂಚಿಕೆ ಮಾಡಬೇಕು ಎಂದು ತಾ.ಪಂ. ಅಧ್ಯಕ್ಷರು ಒತ್ತಾಯಿಸಿದರು.
     ಸಭೆಯಲ್ಲಿ 04ನೇ ರಾಜ್ಯ ಹಣಕಾಸು ಆಯೋಗದ ಸದಸ್ಯರುಗಳಾದ ಹೆಚ್.ಡಿ. ಅಮರನಾಥನ್ ಹಾಗೂ ಡಾ. ಹೆಚ್. ಶಶಿಧರ್, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಸೇರಿದಂತೆ ಹಲವು ಅಧಿಕಾರಿಗಳು, ಜಿ.ಪಂ., ತಾ.ಪಂ., ಗ್ರಾ.ಪಂ. ಗಳ ಜನಪ್ರತಿನಿಧಿಗಳು ಪಾಲ್ಗೊಂಡು, ಉಪಯುಕ್ತ ಸಲಹೆ, ಸೂಚನೆಗಳನ್ನು ಆಯೋಗಕ್ಕೆ ನೀಡಿದರು.

ಗ್ರಾಮ ಪಂಚಾಯತ್‍ಗಳಲ್ಲಿ ವಿಶೇಷ ಗ್ರಾಮ ಸಭೆ ಆಯೋಜಿಸಲು ಸೂಚನೆ

ಕೊಪ್ಪಳ, ಜ.24 (ಕರ್ನಾಟಕ ವಾರ್ತೆ): ರಾಷ್ಟ್ರೀಯ ನೀತಿ ಆಯೋಗ, ಭಾರತ ಸರ್ಕಾರವು 2017 ರಿಂದ 2032 ರ ವರೆಗೆ ಜನಸಂಖ್ಯೆ ಆಧಾರದ ಮೇಲೆ ಕೃಷಿ ಅಭಿವೃದ್ಧಿ, ಶಿಕ್ಷಣ, ಉದ್ಯೋಗ ಸೃಷ್ಟಿಸುವುದು, ಆರೋಗ್ಯ, ನಗರಾಭಿವೃದ್ಧಿ ಕುರಿತು ಯೋಜನೆಗಳನ್ನು ರೂಪಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಜ.26 ರಂದು ಜಿಲ್ಲೆಯ ಎಲ್ಲಾ ಗ್ರಾ.ಪಂ ಗಳಲ್ಲಿ ವಿಶೇಷ ಗ್ರಾಮ ಸಭೆ ಆಯೋಜಿಸುವಂತೆ ಸೂಚನೆ ನೀಡಲಾಗಿದೆ.
    ಜ.26 ರಂದು ಎಲ್ಲಾ ಗ್ರಾಮಗಳ ಗ್ರಾಮಸ್ಥರು ವಿಶೇಷ ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಗ್ರಾಮದ ಅಹವಾಲುಗಳ ಕುರಿತು ಚರ್ಚಿಸಿ 5 ವರ್ಷದ ಕ್ರಿಯಾ ಯೋಜನೆ ರೂಪಿಸಲು ಗ್ರಾಮ ಸಭೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಮನವಿ ಮಾಡಿಕೊಂಡಿದ್ದಾರೆ.

ಮುಖ್ಯೋಪಾದ್ಯಾಯರ ಹುದ್ದೆಗೆ ಬಡ್ತಿ: ಜ 27 ರಂದು ಕೌನ್ಸಿಲಿಂಗ್

ಕೊಪ್ಪಳ, ಜ.24 (ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಂದ ಮುಖ್ಯೋಪಾದ್ಯಾಯರ ಹುದ್ದೆಗೆ ಮತ್ತು ಬಡ್ತಿ ಮುಖ್ಯೋಪಾಧ್ಯಾಯರ ಹುದ್ದೆಯಿಂದ ಸ.ಮಾ.ಹಿ.ಪ್ರಾ ಶಾಲಾ ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿಗಾಗಿ ಕೌನ್ಸಿಲಿಂಗ್ ಅನ್ನು ಜ.27  ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ಕ್ರೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
    ಬಡ್ತಿಗೆ ಅರ್ಹರಿರುವ ಶಿಕ್ಷಕರು ಕೌನ್ಸಿಲಿಂಗ್‍ನಲ್ಲಿ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ.26 ರಂದು ಕೊಪ್ಪಳದಲ್ಲಿ ಗಣರಾಜ್ಯೋತ್ಸವ ಆಚರಣೆ


ಕೊಪ್ಪಳ, ಜ.24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆ   ಜ.26 ರಂದು ಬೆಳಿಗ್ಗೆ 09 ಗಂಟೆಗೆ   ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿದೆ. 
     ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು.  ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಸಮಾರಂಭದ ಅಧ್ಯಕ್ಷತೆ ವಹಿಸುವರು.  ಜಿಲ್ಲಾ ಪಂಚಾಯತ್ ಅಧ್ಯಕ್ಷ ನಾಗರಳ್ಳಿ ಶೇಖರಪ್ಪ ಬಸವರಡ್ಡೆಪ್ಪ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ್,  ಜಿ.ಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದರ ಖಾದ್ರಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಕೊಪ್ಪಳ ತಾ.ಪಂ ಅಧ್ಯಕ್ಷ ಬಾಲಚಂದ್ರನ್, ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
     ಧ್ವಜಾರೋಹಣ ನಂತರ ವಿವಿಧ ಶಾಲಾ ಮಕ್ಕಳು, ಪೊಲೀಸ್, ಎನ್‍ಸಿಸಿ, ಸೇವಾ ದಳ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಗೃಹ ರಕ್ಷಕ ದಳದಿಂದ ಪಥಸಂಚಲನ ಹಾಗೂ ಗೌರವ ರಕ್ಷೆ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.  ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಹಾಗೂ ಸ್ವಾತಂತ್ರ್ಯ ಯೋಧರಿಗೆ ಸನ್ಮಾನಿಸಿ ಗೌರವಿಸಲಾಗುವುದು.  ಇದೇ ಸಂದರ್ಭದಲ್ಲಿ ವಿವಿಧ ಸಾಧಕರಿಗೆ, ನೌಕರರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು.  ಅದೇ ದಿನ ಸಂಜೆ 6 ಗಂಟೆಗೆ ನಗರದ ಬಾಲಕಿಯರ ಕಾಲೇಜು ಹತ್ತಿರದ  ಸಾರ್ವಜನಿಕ ಮೈದಾನದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ. 

ಪತ್ನಿಯನ್ನು ಹೊಡೆದು ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ

ಕೊಪ್ಪಳ ಜ. 24 (ಕರ್ನಾಟಕ ವಾರ್ತೆ): ಪತ್ನಿಯನ್ನು ಕಟ್ಟಿಗೆಯಿಂದ ಹೊಡೆದು, ಪತಿಯೇ ಕೊಲೆಗೈದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೊಪ್ಪಳದ ಜಿಲ್ಲಾ ನ್ಯಾಯಾಲಯ ಆರೋಪಿ ಪತಿಗೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಸೋಮವಾರದಂದು ತೀರ್ಪು ನೀಡಿದೆ.
       ಕೊಪ್ಪಳ ತಾಲೂಕಿನ ಅಗಳಕೇರಾ ಗ್ರಾಮದ ಮಂಜುನಾಥ ತಂದೆ ನಿಂಗಪ್ಪ ಚಿಲಕಮುಖಿ ಎಂಬಾತನೆ ತನ್ನ ಪತ್ನಿ ಮಲ್ಲಮ್ಮಳನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ, ಇದೀಗ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿ.
       ಮಾದಿನೂರು ಗ್ರಾಮದ ಮಲ್ಲಮ್ಮಳನ್ನು ಕೊಪ್ಪಳ ತಾಲೂಕು ಅಗಳಕೇರಾದ ಮಂಜುನಾಥ ತಂದೆ ನಿಂಗಪ್ಪ ಚಿಲಕಮುಖಿ ಎಂಬುವವರಿಗೆ ಕಳೆದ 15 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು.  ಇತ್ತೀಚಿನ ವರ್ಷಗಳಲ್ಲಿ ಆರೋಪಿಯು ತನ್ನ ಪತ್ನಿಯೊಂದಿಗೆ ವಿನಾಕಾರಣ ಜಗಳ ಮಾಡಿ, ಹಲ್ಲೆ ನಡೆಸುವುದು ಮಾಡುತ್ತಿದ್ದ.  ಕಳೆದ 2015 ಆಗಸ್ಟ್ 07 ರಂದು ಇದೇ ರೀತಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಸಂದರ್ಭದಲ್ಲಿ, ವಿನಾಕಾರಣ ಪತ್ನಿಯೊಂದಿಗೆ ಜಗಳವಾಡುವುದು ಸರಿಯಲ್ಲ ಎಂಬುದಾಗಿ ಅನ್ಯರು ಆರೋಪಿಗೆ ಬುದ್ದಿವಾದ ಹೇಳಿದ್ದಾರೆ.   ಇದರಿಂದ ಇನ್ನಷ್ಟು ಸಿಟ್ಟಾದ ಆರೋಪಿ, ಮನೆಯಲ್ಲಿದ್ದ ಉರುವಲು ಕಟ್ಟಿಗೆಯನ್ನು ತೆಗೆದುಕೊಂಡು ಪತ್ನಿಯ ಮೇಲೆ ತೀವ್ರ ಹಲ್ಲೆ ನಡೆಸಿದ್ದರಿಂದ, ಪತ್ನಿ ಮಲ್ಲಮ್ಮ ಸಾವನ್ನಪ್ಪಿದಳು.   ಕೊಲೆ ಪ್ರಕರಣ ಮುನಿರಾಬಾದ್‍ನ ಪೊಲೀಸ್ ಠಾಣೆಯಲ್ಲಿ ದಾಖಲಾಗಿ, ತನಿಖೆಯ ನಂತರ ಆರೋಪಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.  ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಲಕ್ಷ್ಮಿ ಉಪನಾಳ ಅವರು, ಆರೋಪಿಯು ಕೊಲೆ ಮಾಡಿದ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿ ಮಂಜುನಾಥನಿಗೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಸೋಮವಾರದಂದು ತೀರ್ಪು ನೀಡಿದ್ದಾರೆ. 
      ಕೊಪ್ಪಳದ ಆಗಿನ ಗ್ರಾಮೀಣ ಸಿಪಿಐ ಮೋಹನ್ ಪ್ರಸಾದ್, ಮುನಿರಾಬಾದಿನ ಪಿಎಸ್‍ಐ ಜಯಪ್ರಕಾಶ ಪ್ರಕರಣದ ತನಿಖೆ ನಡೆಸಿದ್ದರು.  ಸಾರ್ವಜನಿಕ ಅಭಿಯೋಜಕ ಎಂ.ಎ. ಪಾಟೀಲ್ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು.

ಜ. 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ

ಕೊಪ್ಪಳ ಜ. 24 (ಕರ್ನಾಟಕ ವಾರ್ತೆ): ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಜ. 25 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ನಡೆಯಲಿದೆ.
     ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗಡೆ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ಮತದಾರರ ದಿನಾಚರಣೆ ಅಂಗವಾಗಿ ನೂತನ ಮತದಾರರಿಗೆ ಸಾಂಕೇತಿಕವಾಗಿ ಮತದಾರರ ಗುರುತಿನ ಚೀಟಿ ವಿತರಣೆ, ಮತದಾರರ ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮ ಜರುಗಲಿದೆ ಎಂದು ಕೊಪ್ಪಳ ತಹಸಿಲ್ದಾರ್ ಗುರುಬಸವರಾಜ ಅವರು ತಿಳಿಸಿದ್ದಾರೆ.

Monday, 23 January 2017

ಉದ್ಯೊಗ, ನೀರು, ಜಾನುವಾರುಗಳಿಗೆ ಮೇವು ನಮ್ಮ ಮೊದಲ ಆದ್ಯತೆ- ಬಸವರಾಜ ರಾಯರಡ್ಡಿ


ಕೊಪ್ಪಳ ಜ.23 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದ್ದು, ಕೂಲಿಕಾರರಿಗೆ ಉದ್ಯೋಗ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಸಮರ್ಪಕ ಮೇವು ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.

      ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಬರ ಪರಿಹಾರ ಕಾಮಗಾರಿಗಳ ಪರಿಶೀಲನೆಗಾಗಿ ವಿವಿಧ ಗ್ರಾಮಗಳಿಗೆ ಸೋಮವಾರದಂದು ಭೇಟಿ ನೀಡಿದ ಸಂದರ್ಭದಲ್ಲಿ ರಾಂಪುರ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

     ಪ್ರಸಕ್ತ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ವಿಫಲಗೊಂಡ ಕಾರಣದಿಂದ ರಾಜ್ಯದ 175 ತಾಲೂಕುಗಳ ಪೈಕಿ 160 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು ಸರ್ಕಾರ ಘೋಷಣೆ ಮಾಡಿದೆ.  ಕಳೆದ ತಿಂಗಳು ಸಚಿವ ಸಂಪುಟ ಉಪ ಸಮಿತಿಯು ಜಿಲ್ಲೆಗೆ ಬರ ಪರಿಶೀಲನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಜಾನುವಾರುಗಳಿಗೆ ಮೇವಿನ ತೊಂದರೆಯಾಗದಿರಲು, ಪ್ರತಿ ವಿಧಾನಸಭೆಗೆ ತಲಾ ಒಂದು ಗೋಶಾಲೆಯಂತೆ ಜಿಲ್ಲೆಯಲ್ಲಿ ಒಟ್ಟು 05 ಗೋಶಾಲೆಯನ್ನು ಸದ್ಯ ಪ್ರಾರಂಭಿಸಲಾಗುತ್ತಿದೆ.  ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ವೆಂಕಟಗಿರಿ, ಕನಕಗಿರಿ ಕ್ಷೇತ್ರದಲ್ಲಿ ಕನಕಗಿರಿಯಲ್ಲಿ ಸೋಮವಾರದಂದು ಗೋಶಾಲೆ ಪ್ರಾರಂಭಿಸಲಾಗಿದೆ.  ಎರಡು ದಿನಗಳ ಒಳಗಾಗಿ ಕುಷ್ಟಗಿ ತಾಲೂಕಿನ ಕಲಕೇರಿ, ಕೊಪ್ಪಳ ತಾಲೂಕಿನ ಅಳವಂಡಿ, ಯಲಬುರ್ಗಾ ತಾಲೂಕಿನ ತಲ್ಲೂರಿನಲ್ಲಿ ಗೋಶಾಲೆ ಪ್ರಾರಂಭಿಸಲಾಗುವುದು.  ಗೋಶಾಲೆಯಲ್ಲಿ ಸಮರ್ಪಕ ಮೇವು, ನೀರು, ಶೆಡ್ ವ್ಯವಸ್ಥೇ, ಅಗತ್ಯವಿದ್ದಲ್ಲಿ, ರೈತರು ಉಳಿದುಕೊಳ್ಳಲು ಸಹ ವ್ಯವಸ್ಥೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಅಗತ್ಯ ಕಂಡುಬಂದಲ್ಲಿ, ಬರುವ ತಿಂಗಳು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಂದು ಗೋಶಾಲೆ ಪ್ರಾರಂಭಿಸಲಾಗುವುದು.  ಗೋಶಾಲೆಗಳಿಗೆ ಮೇವು ಪೂರೈಕೆ ಸಮರ್ಪಕವಾಗಿ ನಡೆಯುವಂತೆ ಮೇವು ದಾಸ್ತಾನಿಗೂ ಕ್ರಮ ಕೈಗೊಳ್ಳಲಾಗಿದ್ದು, ಸರ್ಕಾರ ಗೋಶಾಲೆಗಳಿಗಾಗಿ ಸಾಕಷ್ಟು ಅನುದಾನ ಒದಗಿಸಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿ ಬಸವರಾಜ ರಾಯರಡ್ಡಿ ಹೇಳಿದರು.
      ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆಯಾಗದಂತೆ, ಈಗಾಗಲೆ ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿನ ಬೋರ್‍ವೆಲ್‍ಗಳ ಬಗ್ಗೆ ಲಭ್ಯವಿರುವ ನೀರಿನ ಪ್ರಮಾಣ ಸಹಿತ ವೈಜ್ಞಾನಿಕವಾಗಿ ಸಮೀಕ್ಷೆ ಕೈಗೊಂಡು, ವರದಿ ಸಿದ್ಧವಾಗಿದೆ.  ಜೂನ್ 15 ರವರೆಗೆ ಗ್ರಾಮಗಳಿಗೆ ಜನಸಂಖ್ಯಾವಾರು ಬೇಕಾಗಬಹುದಾದ ನೀರಿನ ಪ್ರಮಾಣ ಹಾಗೂ ಲಭ್ಯವಿರುವ ನೀರಿನ ಪ್ರಮಾಣವನ್ನು ಪರಿಗಣಿಸಿ, ಬೇಕಾಗಬಹುದಾದ ನೀರಿನ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.  ಅಗತ್ಯವಿರುವೆಡೆ ಖಾಸಗಿ ಬೋರ್‍ವೆಲ್‍ಗಳನ್ನು ತಿಂಗಳಿಗೆ 10 ರಿಂದ 12 ಸಾವಿರ ರೂ. ಬಾಡಿಗೆ ನೀಡಿ, ಪಡೆಯುವಂತೆಯೂ ಸೂಚನೆ ನೀಡಲಾಗಿದೆ.  ಜನರು ಗುಳೇ ಹೋಗುವುದನ್ನು ತಪ್ಪಿಸಲು, ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಪ್ರಾರಂಭಿಸಿ, ಕೆಲಸ ಕೇಳುವವರಿಗೆ ಉದ್ಯೋಗ ನೀಡಲು ಸೂಚನೆ ನೀಡಲಾಗಿದ್ದು, ಕೂಲಿ ಮೊತ್ತವನ್ನು 15 ದಿನಗಳ ಒಳಗಾಗಿ ಆಯಾ ಕೂಲಿಕಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲು ಕ್ರಮ ಕೈಗೊಳ್ಳಲಾಗಿದೆ.  ಬರುವ ಮೇ. 31 ರವರೆಗೂ ಸಮರ್ಪಕ ಕೂಲಿ ಕೆಲಸ ದೊರಕಿಸಲು ಕ್ರಿಯಾ ಯೋಜನೆ ಸಿದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹೇಳಿದರು.
     ಕದ್ದು ಮುಚ್ಚಿ ಕಾರ್ಖಾನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಂತ್ರಿಗಳು, ತುಂಗಭದ್ರಾ ಜಲಾಶಯದಲ್ಲಿ ಸದ್ಯ ಲಭ್ಯವಿರುವ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಕಾಯ್ದಿರಿಸಲಾಗಿದೆ.   ಇದನ್ನು ಉಲ್ಲಂಘಿಸಿ, ಅಕ್ರಮವಾಗಿ ಬೇರೆ ಉದ್ದೇಶಕ್ಕೆ ನೀರು ಪೂರೈಕೆ ಕಂಡುಬಂದಲ್ಲಿ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರಲ್ಲದೆ, ಈ ಆರೋಪ ಕುರಿತಂತೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
     ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಸೇರಿದಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ವೆಂಕಟಗಿರಿಯಲ್ಲಿ ಗೋಶಾಲೆಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಚಾಲನೆ

ಕೊಪ್ಪಳ ಜ. 23 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ತೀವ್ರ ಬರ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವು ಪೂರೈಕೆ ಮಾಡುವ ಸಲುವಾಗಿ ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮದಲ್ಲಿ ಜಿಲ್ಲಾಡಳಿತದಿಂದ ಪ್ರಾರಂಭಿಸಲಾದ ಗೋಶಾಲೆಗೆ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಸೋಮವಾರದಂದು ಚಾಲನೆ ನೀಡಿದರು.

     ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಬರ ಪರಿಹಾರ ಕಾಮಗಾರಿಗಳ ಪರಿಶೀಲನೆಗಾಗಿ ಸೋಮವಾರದಂದು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಬರ ಪರಿಹಾರ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿಕೊಂಡರು.

     ಬೂದಗುಂಪಾ ಗ್ರಾಮಕ್ಕೆ ಭೇಟಿ ನೀಡಿದ ಮಂತ್ರಿಗಳು, ಇಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ ರಾಜೀವ್‍ಗಾಂಧಿ ಸೇವಾ ಕೇಂದ್ರದ ಕಟ್ಟಡ ನಿರ್ಮಾಣ ಕಾರ್ಯ ಪರಿಶೀಲಿಸಿದರು.  ನಂತರ ಇಲ್ಲಿನ ಮರದ ಕಟ್ಟೆಯ ಮೇಲೆ ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಹಿತ ಆಸೀನರಾದ ಮಂತ್ರಿಗಳು, ಗ್ರಾಮಸ್ಥರೊಂದಿಗೆ ಕುಡಿಯುವ ನೀರಿನ ಸಮಸ್ಯೆ ಕುರಿತು ಸಮಾಲೋಚನೆ  ನಡೆಸಿದರು.  ಗ್ರಾಮದಲ್ಲಿ ಇದುವರೆಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಿಲ್ಲ.  ಒಂದು ಘಟಕವನ್ನಾದರೂ ತುರ್ತಾಗಿ ಪ್ರಾರಂಭಿಸುವಂತೆ ಸಾರ್ವಜನಿಕರು ಮನವಿ ಮಾಡಿದರು.  ಇದಕ್ಕೆ ಸ್ಪಂದಿಸಿದ ಮಂತ್ರಿಗಳು, ಒಂದು ವಾರದ ಒಳಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಮುಕ್ಕುಂಪಿ ಗ್ರಾಮದ ಕೆರೆಗೆ ಭೇಟಿ ನೀಡಿದ ಮಂತ್ರಿಗಳು, ಕೆರೆಯಲ್ಲಿ ಒಂದು ಹನಿ ನೀರು ಸಂಗ್ರಹವಿಲ್ಲದಿರುವ ಬಗ್ಗೆ ವೀಕ್ಷಿಸಿದರು.  ಮುಕ್ಕುಂಪಿ ಕೆರೆ ದೊಡ್ಡ ಕೆರೆಯಾಗಿದ್ದು, ತುಂಗಭದ್ರಾದಿಂದ ಕೆರೆ ತುಂಬಿಸಲು ಯೋಜನೆ ಕೈಗೊಳ್ಳುವಂತೆ ಇಲ್ಲಿನ ಗ್ರಾಮಸ್ಥರು ಮಂತ್ರಿಗಳಿಗೆ ಮನವಿ ಮಾಡಿದರು.  ಈ ಕುರಿತು ಪರಿಶೀಲಿಸುವುದಾಗಿ ಮಂತ್ರಿಗಳು ಭರವಸೆ ನೀಡಿದರು.  ನಂತರ ವೆಂಕಟಗಿರಿ ಗ್ರಾಮಕ್ಕೆ ಭೇಟಿ ನೀಡಿದ ಮಂತ್ರಿಗಳು, ಇಲ್ಲಿನ ವಿಶಾಲವಾದ ಮೈದಾನದಲ್ಲಿ ನಿರ್ಮಿಸಲಾಗಿರುವ ಗೋಶಾಲೆಯನ್ನು ಜಾನುವಾರಿಗೆ ಮೇವು ನೀಡುವ ಮೂಲಕ ಚಾಲನೆ ನೀಡಿದರು.  ಗೋಶಾಲೆಯಲ್ಲಿ ಇನ್ನಷ್ಟು ಶೆಡ್ ವ್ಯವಸ್ಥೆ, ನೀರಿನ ವ್ಯವಸ್ಥೆ ಹಾಗೂ ಸಮರ್ಪಕ ಮೇವು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.  ರಾಂಪುರ ಗ್ರಾಮದ ಬಳಿಯ ಕೆರೆಗೆ ಭೇಟಿ ನೀಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ಪರಿಶೀಲಿಸಿದರು.  ನಂತರ ಕೂಲಿಕಾರ್ಮಿಕರೊಂದಿಗೆ ಮಾತನಾಡಿದ ಮಂತ್ರಿಗಳು, ಉದ್ಯೋಗ ಕೇಳಿ ಬರುವ ಕೂಲಿಕಾರರಿಗೆ ಸಮರ್ಪಕ ಉದ್ಯೋಗ ನೀಡಲಾಗುವುದು.  ಅಲ್ಲದೆ ನಿಯಮದನ್ವಯ ದಿನವೊಂದಕ್ಕೆ 224 ರೂ. ಕೂಲಿಯಂತೆ, ಕೆಲಸ ಮಾಡಿದ 15 ದಿನಗಳ ಒಳಗಾಗಿ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.  ಜನರು ಉದ್ಯೋಗಖಾತ್ರಿ ಯೋಜನೆಯಡಿ ನೀಡುವ ಕೆಲಸವನ್ನು ಸ್ಥಳೀಯವಾಗಿಯೇ ಕೈಗೊಳ್ಳಬಹುದು, ಯಾರೂ ಕೆಲಸ ಹುಡುಕಿಕೊಂಡು ಗುಳೇ ಹೋಗುವ ಅಗತ್ಯವಿಲ್ಲ ಎಂದರು.  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿವಾಹಕ ಅಧಿಕಾರಿ ವೆಂಕಟರಾಜಾ ಅವರು ಮಾತನಾಡಿ, ರಾಂಪುರ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಸುಮಾರು 530 ಜನರಿಗೆ ಉದ್ಯೋಗ ನೀಡಲಾಗಿದ್ದು, ಅಗತ್ಯಕ್ಕೆ ಅನುಗುಣವಾಗಿ ಕೂಲಿಕಾರ್ಮಿಕರಿಗೆ ಉದ್ಯೋಗ ನೀಡಲಾಗುವುದು ಎಂದರು.
        ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ, ಗಂಗಾವತಿ ತಹಸಿಲ್ದಾರ್ ಚಂದ್ರಕಾಂತ್ ಸೇರಿದಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. 

ನಾಲ್ಕನೆ ರಾಜ್ಯ ಹಣಕಾಸು ಆಯೋಗ ಜ. 24 ರಂದು ಕೊಪ್ಪಳಕ್ಕೆ ಭೇಟಿ

ಕೊಪ್ಪಳ ಜ. 23 (ಕರ್ನಾಟಕ ವಾರ್ತೆ): ನಾಲ್ಕನೆ ರಾಜ್ಯ ಹಣಕಾಸು ಆಯೋಗವು ಜ. 24 ರಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ, ವಿವಿಧ ಹಂತದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದೆ.
     ಸಿ.ಜಿ. ಚಿನ್ನಸ್ವಾಮಿ ಅವರು ನಾಲ್ಕನೆ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದು, ಹೆಚ್.ಡಿ. ಅಮರನಾಥನ್ ಹಾಗೂ ಡಾ. ಹೆಚ್. ಶಶಿಧರ್ ಅವರು ಆಯೋಗದ ಸದಸ್ಯರುಗಳಾಗಿದ್ದಾರೆ.  ರಾಜ್ಯ ರಾಜಸ್ವ ನಿಧಿಯನ್ನು ಪಂಚಾಯತಿ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲು ಹಂಚಿಕಾ ಸೂತ್ರ ನಿರ್ಧರಿಸುವುದು ಮತ್ತು ಸಂಸ್ಥೆಗಳ ಆರ್ಥಿಕ ಸ್ಥಿತಿಗತಿಗಳನ್ನು ವಿಶ್ಲೇಷಿಸಿ ಸದೃಢಗೊಳಿಸಲು ಮಾರ್ಗೋಪಾಯಗಳ ಕುರಿತು ಶಿಫಾರಸು ಮಾಡುವುದು ಆಯೋಗದ ಕಾರ್ಯವಾಗಿದೆ.  ಈ ಆಯೋಗವು ಪಂಚಾಯತಿ ರಾಜ್ ಮತ್ತು ನಗರಾಡಳಿತ ಸಂಸ್ಥೆಗಳೊಂದಿಗೆ ಈಗಾಗಲೆ ವಿಸ್ತøತ ಚರ್ಚೆಯನ್ನು ಪ್ರಾರಂಭಿಸಿದೆ.  ಈ ಹಿನ್ನೆಲೆಯಲ್ಲಿ ಆಯೋಗವು ಜ. 24 ರಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ಸಮಾಲೋಚಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.  ನಾಲ್ಕನೆ ರಾಜ್ಯ ಹಣಕಾಸು ಆಯೋಗವು ಜ. 24 ರಂದು ಬೆಳಿಗ್ಗೆ 10-30 ಗಂಟೆಗೆ ಭಾನಾಪುರ ಗ್ರಾಮ ಪಂಚಾಯತಿಯಲ್ಲಿ ಭೇಟಿ ನೀಡಿ, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದೆ.  ಮ. 12 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸಭೆ ನಡೆಸಲಿದ್ದು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಸಂಸದರು, ಶಾಸಕರುಗಳು, ವಿಧಾನಪರಿಷತ್ ಸದಸ್ಯರುಗಳು, ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರುಗಳು, ತಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಇತರೆ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು.  ಮಧ್ಯಾಹ್ನ 2-30 ಗಂಟೆಗೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಚಿವರು, ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಆಯುಕ್ತರು, ಪೌರಾಯುಕ್ತರು ಮುಂತಾದ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.  ಸಂಜೆ 04 ಗಂಟೆಗೆ ಕೊಪ್ಪಳ ತಾಲೂಕು ಪಂಚಾಯತಿಗೆ ಭೇಟಿ ನೀಡಿ, ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು.   ಸಂಜೆ 5-30 ಗಂಟೆಗೆ ಕೊಪ್ಪಳ ನಗರಸಭೆಗೆ ಭೇಟಿ ನೀಡಿ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪೌರಾಯುಕ್ತರೊಂದಿಗೆ ಚರ್ಚೆ ನಡೆಸುವರು.  ಆಯೋಗವು ಸಂಜೆ 6-30 ಗಂಟೆಗೆ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದೆ.

Sunday, 22 January 2017

ರಾಜ್ಯ ಹಣಕಾಸು ಆಯೋಗದಿಂದ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ಸಭೆ

ಕೊಪ್ಪಳ ಜ. 22 (ಕರ್ನಾಟಕ ವಾರ್ತೆ) : ನಾಲ್ಕನೆ ರಾಜ್ಯ  ಹಣಕಾಸು ಆಯೋಗದ ಅಧ್ಯಕ್ಷರು, ಸದಸ್ಯರುಗಳು ಹಾಗೂ ಸಮಾಲೋಚನಕರನ್ನೊಳಗೊಂಡ ಸಮಿತಿಯು ರಾಜಸ್ವ ನಿಧಿ ಹಂಚಿಕೆ ಕುರಿತಂತೆ ಜನಪ್ರತಿನಿಧಿಗಳೊಂದಿಗೆ ಜ. 24 ರಂದು ಮಧಾಹ್ನ 12 ಗಂಟೆಗೆ ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದೆ.
     4ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರು, ಸದಸ್ಯರುಗಳು ಹಾಗೂ ಸಮಾಲೋಚಕರನ್ನು ಒಳಗೊಂಡ ಸಮಿತಿಯು ಆಯೋಗದ ಪ್ರಮುಖ ಕಾರ್ಯಗಳಾದ ರಾಜ್ಯ ರಾಜಸ್ವ ನಿಧಿಯನ್ನು ಪಂಚಾಯತಿ ರಾಜ್ ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲು ಹಂಚಿಕಾ ಸೂತ್ರ ನಿರ್ಧರಿಸಲು ಉದ್ದೇಶಿಸಿದೆ.  ಈ ನಿಟ್ಟಿನಲ್ಲಿ, ಇಂತಹ ಸಂಸ್ಥೆಗಳ ಪ್ರಸ್ತುತ ಆರ್ಥಿಕ ಸ್ಥಿತಿಗತಿಗಳನ್ನು ವಿಶ್ಲೇಷಿಸಿ, ಸದೃಢಗೊಳಿಸುವ ಮಾರ್ಗೋಪಾಯಗಳನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಕುರಿತು ಸಮಾಲೋಚನಾ ಸಭೆಯನ್ನು ಜ. 24 ರಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.  ಸಭೆಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಸಂಸದರು, ಶಾಸಕರುಗಳು, ವಿಧಾನಪರಿಷತ್ ಸದಸ್ಯರುಗಳು, ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರುಗಳು, ತಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಇತರೆ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತಿಳಿಸಿದ್ದಾರೆ.

ಜ. 25 ರಂದು ಕೊಪ್ಪಳದಲ್ಲಿ ಸಾರಿಗೆ ಸ್ಪಂದನ


ಕೊಪ್ಪಳ ಜ. 22 (ಕರ್ನಾಟಕ ವಾರ್ತೆ) : ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕೊಪ್ಪಳ ವಿಭಾಗದ ವತಿಯಿಂದ ‘ಸಾರಿಗೆ ಸ್ಪಂದನ’ ಕಾರ್ಯಕ್ರಮವನ್ನು ಜ. 25 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
            ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಸಾರಿಗೆ ಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಾರಿಗೆ ಸ್ಪಂದನ ಕಾರ್ಯಕ್ರಮದಲ್ಲಿ ಸಂಸದರು, ಶಾಸಕರುಗಳು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಉಪಾದ್ಯಕ್ಷರು, ಸದಸ್ಯರುಗಳು, ಜಿಲ್ಲೆಯ ಎಲ್ಲ ತಾಲೂಕು ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಸೇರಿದಂತೆ ಹಲವು ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ಈಕರಸಾ ಸಂಸ್ಥೆ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಬೋರಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, 21 January 2017

ಶರಣರ ತತ್ವಗಳನ್ನು ಅಳವಡಿಸಿಕೊಂಡಲ್ಲಿ ಜೀವನ ಸಾರ್ಥಕ - ಶಿವರಾಜ ಎಸ್ ತಂಗಡಗಿ

ಕೊಪ್ಪಳ ಜ.21(ಕರ್ನಾಟಕ ವಾರ್ತೆ): ಶರಣರ, ಮಹನೀಯರ ತತ್ವ ಆದರ್ಶಗಳ ಪೈಕಿ ಕೆಲವನ್ನಾದರೂ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವೆನಿಸಲಿದೆ ಎಂದು ಕನಕಗಿರಿ ಶಾಸಕರು ಹಾಗೂ ಮಾಜಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಹೇಳಿದರು.

         ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ನಗರದ ಶಾದಿಮಹಲ್‍ನಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

       ಮಹನೀಯರ ಜಯಂತಿ ಆಚರಣೆಗಳಲ್ಲಿ ಭಾವಚಿತ್ರದ ಮೆರವಣಿಗೆ ಮಾಡಿ, ಡೊಳ್ಳು ವಾದ್ಯದೊಂದಿಗೆ ಕುಣಿದು ಸಂಭ್ರಮಿಸಿದ ಮಾತ್ರಕ್ಕೆ ಜಯಂತಿ ಆಚರಣೆಗೆ ಅರ್ಥ ಬರುವುದಿಲ್ಲ.  ಶರಣರ, ಮಹನೀಯರ ಜೀವನ ಚರಿತ್ರೆಯ ಬಗ್ಗೆ ಅರಿತು, ಅಂತಹವರ ತತ್ವ ಆದರ್ಶಗಳ ಪೈಕಿ ಕೆಲವನ್ನಾದರೂ, ಬದುಕಿನಲ್ಲಿ ಅಳವಡಿಸಿಕೊಂಡರೆ, ಮನುಷ್ಯನಾದವರ ಜೀವನ ಸಾರ್ಥಕವಾಗಲಿದೆ.  ನಿಜಶರಣ ಅಂಬಿಗರ ಚೌಡಯ್ಯನವರು,   ವಚನಗಳ ಮೂಲಕ ಸಮಾಜದಲ್ಲಿ ಮನೆಮಾಡಿದ್ದ ಕೆಟ್ಟ ಸಂಪ್ರದಾಯಗಳನ್ನು ನಿಷ್ಠುರವಾಗಿ ಟೀಕಿಸಿದವರು. ತುಳಿತಕ್ಕೆ ಒಳಗಾದ ಸಮಾಜದ ಪೈಕಿ ಗಂಗಾಮತ ಸಮಾಜವೂ ಒಂದು.  ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದುವರಿಯಬೇಕಾದರೆ, ಸಮಾಜದವರು ಪರಿಶ್ರಮವನ್ನೂ ಹಾಕಬೇಕು.  ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು.  ಶಿಕ್ಷಣವಿಲ್ಲದೆ, ಯಾವುದೇ ಸಮಾಜ ಮುಂದುವರಿಯಲು ಸಾಧ್ಯವಿಲ್ಲ. ಗಂಗಾಮತ ಸಮುದಾಯ ಈಗಲೂ ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವ ಮೂಲಕ, ಸಮಾಜದ ಮುಖ್ಯ ವಾಹಿನಿಗೆ ಬರಲು ಶ್ರಮಿಸಬೇಕು ಎಂದು ಶಾಸಕ ಶಿವರಾಜ ಎಸ್ ತಂಗಡಗಿ ಅವರು ಕರೆ ನೀಡಿದರು.
    ವಿಶೇಷ ಉಪನ್ಯಾಸ ನೀಡಿದ ಗದುಗಿನ ಅನಂತ ವಿದ್ಯಾ ಸಂಸ್ಥೆ ಅಧ್ಯಕ್ಷರು ಹಾಗೂ ಪ್ರಾದ್ಯಾಪಕರಾದ ಪ್ರೊ. ಎಚ್.ಎಸ್. ದಳವಾಯಿ ಅವರು, 12 ನೇ ಶತಮಾನ ಶರಣ ಸಾಹಿತ್ಯದ ಶತಮಾನ. ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳಬಹುದಾದ ಸರಳ ಪದಗಳಿಂದ ವಚನಗಳನ್ನು ರಚಿಸಿ, ದೇವವಾಣಿಯನ್ನು ಜನವಾಣಿಯನ್ನಾಗಿಸಿದ್ದು, ಶರಣರ ಸಾಹಿತ್ಯದಿಂದ.  ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿದಾಗ ಸಮಾಜ ಸುಧಾರಣೆ, ಶಾಂತಿ ಸ್ಥಾಪನೆಗೆ ಬಸವಣ್ಣ, ಅಂಬಿಗರ ಚೌಡಯ್ಯನಂತಹ ಅನೇಕ ಮಹನೀಯರು ಅವತರಿಸಿದ್ದಾರೆ.  ಮನುಕುಲದ ಕಲ್ಯಾಣಕ್ಕಾಗಿ ದುಡಿಯುವವರೇ ಮಹಾತ್ಮರು ಎಂದರು.  ಮೌಢ್ಯತೆಯಿಂದ ಕಂಗಾಲಾಗಿದ್ದ ಸಮಾಜಕ್ಕೆ ಹೊಸ ಸಂಚಲನ ಮೂಡಿಸಿದ ಬಹುತೇಕ ವಚನಕಾರರು ಇದೇ ಶತಮಾನದಲ್ಲಿ ಬಂದವರು. ಜಗತ್ತಿನ ಎಲ್ಲ ಸಮುದಾಯದ ಕಾಯಕ ಪವಿತ್ರವಾದುದು ಎಂದು ಸಾರಿ, ಸಮಾಜದ ಅಂಕು ಡೊಂಕುಗಳನ್ನು ವಚನಗಳಿಂದ ಜಾಗೃತಿ ಮೂಡಿಸಿದವರು ಅಂಬಿಗರ ಚೌಡಯ್ಯ ಅವರು.  ವಚನಗಳ ಮೂಲಕ ಸಮಾಜದ ಲೋಪದೋಷಗಳ ಕುರಿತು ತೀಕ್ಷ್ಣ ಮಾತುಗಳ ಮೂಲಕ ಜನಜಾಗೃತಿ ಮೂಡಿಸಲು ಶ್ರಮಿಸಿದರು.  ಕಾಯಕ ನಿಷ್ಠೆಯನ್ನು ಎಲ್ಲ ವರ್ಗದವರು ಸಮನಾಗಿ ಗೌರವಿಸಬೇಕು  ಎಂಬ ತತ್ವವನ್ನು ತಮ್ಮ ವಚನಗಳಲ್ಲಿ ಬಿಂಬಿಸುವ ಮೂಲಕ ವಿಶ್ವ ಸಾಹಿತ್ಯ ಲೋಕಕ್ಕೆ ಹೊಂಬೆಳಕನ್ನು ಮೂಡಿಸಿದರು.  ಇವರ ವಚನಗಳಲ್ಲಿ ನಿಜ ಶರಣರ ಗಂಭೀರತೆಯ ಜೊತೆಗೆ ಸಮಾಜ ಸುಧಾರಣೆಯ ತೀಕ್ಷ್ಣತೆ ತುಂಬಿಕೊಂಡಿದೆ. ಹೊಗಳುವಿಕೆಯನ್ನು ಬದಿಗಿಟ್ಟು ನಿಷ್ಠುರವಾಗಿ ವಾದಿಸಿದವರು ನಿಜಶರಣ ಅಂಬಿಗರ ಚೌಡಯ್ಯನವರು ಎಂದರು.
     ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದುಳಿದ ವರ್ಗಗಳ ಏಳಿಗೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಮಾಜದವರು ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕು ಎಂದರು.
       ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ನಗರಸಭೆ ಉಪಾಧ್ಯಕ್ಷೆ ಮೀನಾಕ್ಷಮ್ಮ, ಜಿ.ಪಂ. ಸದಸ್ಯ ಗೂಳಪ್ಪ ಹಲಗೇರಿ, ಸೇರಿದಂತೆ ಗಣ್ಯರಾದ ಯಮನಪ್ಪ ಕಬ್ಬೇರ, ಬಾಳಪ್ಪ ಬಾರಕೇರ, ರಾಮಣ್ಣ ಹದ್ದಿನ, ಬಸವರಾಜ, ಹನಮರಡ್ಡಿ ಹಂಗನಕಟ್ಟಿ, ಗಂಗಾಧರ ಕಬ್ಬೇರ, ಲಕ್ಷ್ಮಣ ಗುಡಿ, ಹುಲಗಪ್ಪ ಬಾರಕೇರ ಮುಂತಾದವರು ಪಾಲ್ಗೊಂಡಿದ್ದರು.  ಸಿ.ವಿ. ಜಡಿಯವರ್ ಸ್ವಾಗತಿಸಿ.  ಕಾರ್ಯಕ್ರಮ ನಿರೂಪಿಸಿ ವಂದಿಸಿದರು.  ಎಸ್‍ಎಸ್‍ಎಲ್‍ಸಿ, ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಅಂಬಿಗರ ಚೌಡಯ್ಯ ಅವರ ಕುರಿತು ಏರ್ಪಡಿಸಲಾದ ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 
    ಜಯಂತಿ ಅಂಗವಾಗಿ ನಿಜಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ನಗರದ ಸಿರಸಪ್ಪಯ್ಯನ ಮಠದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬಂದಿತು.  ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ಮಹಿಳಾ ವೀರಗಾಸೆ ಸೇರಿದಂತೆ ವಿವಿಧ ಕಲಾ ತಂಡಗಳು ಪಾಲ್ಗೊಂಡು ಮೆರವಣಿಗೆಯನ್ನು ಹೆಚ್ಚು ಆಕರ್ಷಕಗೊಳಿಸಿದವು.

ಬಾಲ್ಯ ವಿವಾಹದಲ್ಲಿ ಪಾಲ್ಗೊಂಡ ಎಲ್ಲರೂ ಅಪರಾಧಿಗಳು: ರಾಘವೇಂದ್ರ ಭಟ್


ಕೊಪ್ಪಳ, ಜ.21 (ಕರ್ನಾಟಕ ವಾರ್ತೆ): ಬಾಲ್ಯ ವಿವಾಹದಲ್ಲಿ ಪಾಲ್ಗೊಂಡ ವ್ಯಕ್ತಿಗಳು, ಪೂಜಾರಿ, ವಾದ್ಯದವರೂ ಸೇರಿದಂತೆ  ವಿವಾಹದಲ್ಲಿ ಭಾಗವಹಿಸಿದ ಎಲ್ಲರೂ ಅಪರಾಧಿಗಳಾಗುತ್ತಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ-ಯೂನಿಸೆಫ್ ವಿಭಾಗೀಯ ಸಂಯೋಜಕ ರಾಘವೇಂದ್ರ ಭಟ್ ಹೇಳಿದರು.

    ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜಿನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಯೂನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬಾಲ್ಯ ವಿವಾಹ ತಡೆಗಟ್ಟಲು ಬೃಹತ್ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
    ಬಾಲ್ಯವಿವಾಹ ನಿಷೇಧ ಕಾಯ್ದೆ ಪ್ರಕಾರ ಬಾಲ್ಯವಿವಾಹ ಮಾಡುವವರು ಮತ್ತು ಭಾಗವಹಿಸುವವರೆಲ್ಲರೂ ಅಪರಾಧಿಗಳಾಗಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿದೆ.  ಇದಕ್ಕೆ ಎರಡು ವರ್ಷ ಜೈಲು ಶಿಕ್ಷೆಯ ಜೊತೆ 1 ಲಕ್ಷ ರೂ ದಂಡ ವಿಧಿಸಲು ಕಾನೂನು ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.  ಈ ಹಿಂದೆ ಕೊಪ್ಪಳ ಜಿಲ್ಲೆ ಬಾಲ್ಯ ವಿವಾಹದಲ್ಲಿ ಮೊದಲನೇ ಸ್ಥಾನದಲ್ಲಿತ್ತು ಆದರೆ ಜಿಲ್ಲಾಡಳಿತ ಹಾಗೂ ಇತರೆ ಎಲ್ಲಾ ಇಲಾಖೆಗಳ ಕಾರ್ಯಾಚರಣೆಯಿಂದಾಗಿ ಇಂದು ಬಾಲ್ಯ ವಿವಾಹ ತಡೆಯುವಲ್ಲಿ ಕೊಪ್ಪಳ ಜಿಲ್ಲೆ ರಾಜ್ಯದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ. ದೇಶ ಅಭಿವೃದ್ಧಿ ಹೊಂದಬೇಕಾದರೆ ಮತ್ತು ಆರೋಗ್ಯಕರ ಸಮಾಜ ನಿರ್ಮಾಣವಾಗಬೇಕಾದರೆ ಮೊದಲು ಬಾಲ್ಯ ವಿವಾಹದಂತಹ ಪದ್ದತಿಗಳು ನಿರ್ಮೂಲನೆಯಾಗಬೇಕು ಎಂದು ಅವರು ಹೇಳಿದರು.
     ಜಿಲ್ಲಾ  ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶೇಖರಗೌಡ ರಾಮತ್ನಾಳ ಮಾತನಾಡಿ ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳಿಗೆ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಬೀರುತ್ತವೆ, ಅಲ್ಲದೆ ತೀವ್ರ ರಕ್ತಹೀನತೆಯಿಂದ ತಾಯಿ ಅಥವಾ ಶಿಶು ಅಥವಾ ಇಬ್ಬರ ಮರಣ ಪ್ರಮಾಣ ಹೆಚ್ಚಾಗಲಿದೆ. ಬಾಲ್ಯವಿವಾಹ ತಡೆಗಾಗಿ ರಾಜಕೀಯ ಇಚ್ಚಾಶಕ್ತಿಯ ಅವಶ್ಯಕತೆ ತುಂಬಾ ಅಗತ್ಯವಿದೆ. ಮಕ್ಕಳ ರಕ್ಷಣೆ ಮತ್ತು ಬಾಲ್ಯ ವಿವಾಹ ತಡೆಯಲು 1098 ಸಂಖ್ಯೆಯನ್ನು ತೆರೆಯಲಾಗಿದ್ದು, ಬಾಲ್ಯ ವಿವಾಹಹಕ್ಕೆ ಒಳಗಾಗುತ್ತಿರುವ ಮಕ್ಕಳು, ಅಥವಾ ಮಾಹಿತಿ ನೀಡಬಯಸುವವರು ಈ ಸಂಖ್ಯೆಗೆ ಕರೆಮಾಡಿ ಬಾಲ್ಯವಿವಾಹದ ಕುರಿತು ಮಾಹಿತಿ ನೀಡಿದg,É ವಿವಿಧ ಇಲಾಖೆಗಳ ಸಹಕಾರದಲ್ಲಿ ಅವರನ್ನು ರಕ್ಷಸಿಸಲಾಗುವುದು ಎಂದು ಹೇಳಿದರು.  ಶಾಲಾಮಕ್ಕಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.
     ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ನಿರೀಕ್ಷಕ ಆರ್.ಎಚ್ ಪತ್ತಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಾಲಪ್ಪ, ಮಕ್ಕಳ ವಿಶೇಷ ಪೊಲೀಸ್ ಘಟಕದ ಬಸಪ್ಪ ಹಾದಿಮನಿ, ಸರಕಾರಿ ಬಾಲಕಿಯರ ಪ.ಪೂ ಕಾಲೇಜು ಪ್ರಾಚಾರ್ಯ ಸದಾಶಿವ ಪಾಟೀಲ್, ಕುವೆಂಪು ಶಾಲೆ ಮುಖ್ಯೋಪಾಧ್ಯಾಯ ರಾಮು ಓಲೇಕಾರ ಸೇರಿದಂತೆ ಇತರ ಗಣ್ಯರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು. ರವಿ ಕುಮಾರ ಪವಾರ ಕಾರ್ಯಕ್ರಮ ನಿರೂಪಿಸಿದರು ರವಿ ಬಡಿಗೇರ ವಂದಿಸಿದರು. ಇದಕ್ಕೂ ಮುನ್ನ ಗವಿಮಠ ಆವರಣದಲ್ಲಿ ‘ಬಾಲ್ಯವಿವಾಹ ತಡೆಗಾಗಿ’ ಬೃಹತ್ ಜಾಗೃತಿ ಜಾಥಾಕ್ಕೆ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಚಾಲನೆ ನೀಡಿದರು. 

ಕ್ರಿಶ್ಚಿಯನ್ನರಿಗೆ ಸರ್ಕಾರದ ಯೋಜನೆಗಳ ಕುರಿತು ಚರ್ಚ್‍ಗಳಲ್ಲಿ ಜಾಗೃತಿ ಮೂಡಿಸಿ- ಐವನ್ ಡಿ’ಸೋಜಾ

ಕೊಪ್ಪಳ ಜ. 21 (ಕರ್ನಾಟಕ ವಾರ್ತೆ): ಕ್ರಿಶ್ಚಿಯನ್ ಸಮುದಾಯದವರ ಏಳಿಗೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅಧಿಕಾರಿಗಳು ಈ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಚರ್ಚ್‍ಗಳಲ್ಲಿ ಹಮ್ಮಿಕೊಳ್ಳುವಂತೆ ಸರ್ಕಾರಿ ಮುಖ್ಯ ಸಚೇತಕರು, ಹಾಗೂ ಕ್ರಿಶ್ಚಿಯನ್ ಅಭಿವೃದ್ಧಿ ಪರಿಷತ್ತಿನ ಉಪಾಧ್ಯಕ್ಷರು ಮತ್ತು ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿ ಪರಿಶೀಲನಾ ಉಪಸಮಿತಿಯ ಅಧ್ಯಕ್ಷರೂ ಆಗಿರುವ ಐವನ್ ಡಿ’ಸೋಜಾ ಅವರು ಸೂಚನೆ ನೀಡಿದರು.
     ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿ ಕಾರ್ಯಕ್ರಮಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರದಂದು ಏರ್ಪಡಿಸಲಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕ್ರಿಶ್ಚಿಯನ್ ಸಮುದಾಯದ ಶ್ರೇಯೋಭಿವೃದ್ಧಿಗೆ ಸರ್ಕಾರ 2016-17 ನೇ ಸಾಲಿನಲ್ಲಿ 125 ಕೋಟಿ ರೂ. ಅನುದಾನ ಒದಗಿಸಿ, ಹಲವು ಯೋಜನೆಗಳನ್ನು ಜಾರಿಗೊಳಿಸಿದೆ.  ಆದರೆ ಯೋಜನೆಗಳ ಬಗ್ಗೆ ಕ್ರಿಶ್ಚಿಯನ್ನರಿಗೆ ಅರಿವು ಇಲ್ಲದ ಪರಿಣಾಮವಾಗಿ, ನಿಗದಿತ ಗುರಿ ಇದ್ದರೂ, ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆ ಇದೆ.  ಇದರಿಂದಾಗಿ ಸಮುದಾಯದವರು ಅನುದಾನ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ, ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ, ಸಮುದಾಯದಲ್ಲಿ ಜಾಗೃತಿ ಮೂಡಿಸಲು ಯತ್ನಿಸಲಾಗುತ್ತಿದೆ.  ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಜಾತಿ ಪ್ರಮಾಣ ಪತ್ರದ ಬಗ್ಗೆ ಗೊಂದಲವಿದ್ದು, ಇದನ್ನು ಸರ್ಕಾರದ ಮಟ್ಟದಲ್ಲಿ ಪರಿಹರಿಸಬೇಕಿದೆ.  ಕೊಪ್ಪಳ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಸಮುದಾಯಕ್ಕೆ ಶ್ರಮಶಕ್ತಿ ಯೋಜನೆ, ಅರಿವು ಯೋಜನೆ, ಗೃಹ ಸಾಲ ಹೀಗೆ ಹಲವಾರು ಯೋಜನೆಗಳಿದ್ದರೂ, ನಿಗದಿತ ಗುರಿಗಿಂತಲೂ ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆ ಇದೆ.  ಹೀಗಾಗಿ ಅನುದಾನ ಸಂಪೂರ್ಣ ಬಳಕೆಯಾಗುತ್ತಿಲ್ಲ.  ಯೋಜನೆಗಳ ಕುರಿತು ಅಧಿಕಾರಿಗಳು ಚರ್ಚ್‍ಗಳಿಗೆ ತೆರಳಿ, ಅಲ್ಲಿ ಸಮುದಾಯದವರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚನೆ ನೀಡಿದರು.
     ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಭೂ ರಹಿತ ಅಲ್ಪಸಂಖ್ಯಾತರರಿಗಾಗಿ ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ 250 ಫಲಾನುಭವಿಗಳಿಗೆ 500 ಎಕರೆ ಜಮೀನು ಮಂಜೂರು ಮಾಡುವ ಯೋಜನೆಯನ್ನು ಜಾರಿಗೊಳಿಸಲಾಗಿದೆ.  ಇಂತಹ ಯೋಜನೆಯನ್ನು ಗ್ರಾಮೀಣ ಪ್ರದೇಶದಲ್ಲಿರುವ ಭೂರಹಿತ ಕ್ರಿಶ್ಚಿಯನ್ ಸಮುದಾಯದವರಿಗೂ ಜಾರಿಗೊಳಿಸಿದಲ್ಲಿ, ಸಮುದಾಯದ ಅಭಿವೃದ್ಧಿಯಾಗಲಿದೆ.  ಈ ಕುರಿತು ಪ್ರಯತ್ನ ಕೈಗೊಳ್ಳುವಂತೆ ಮನವಿ ಮಾಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಕ್ರಿಶ್ಚಿಯನ್ ಅಭಿವೃದ್ಧಿ ಪರಿಷತ್ ಸದಸ್ಯರುಗಳಾದ ಅನಿಲ್ ರೆಡಸನ್, ಸೆಬಾಸ್ಟಿಯನ್ ಡೇನಿಯಲ್, ಆನಂದ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್, ನಿಗಮದ ಜಿಲ್ಲಾ ವ್ಯವಸ್ಥಾಪಕ ಜಾಕಿರ್, ತಾ.ಪಂ. ಅಧ್ಯಕ್ಷ ಬಾಲಚಂದ್ರನ್ ಸೇರಿದಂತೆ ಹಲವು ಗಣ್ಯರು, ಚರ್ಚ್‍ಗಳ ಫಾದರ್‍ಗಳು, ಅಲ್ಪಸಂಖ್ಯಾತರ ಸಮುದಾಯದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Friday, 20 January 2017

ಸಂಕಷ್ಟಕ್ಕೊಳಗಾದ ಮಕ್ಕಳ ಕುರಿತು ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಲು ಮನವಿ

ಕೊಪ್ಪಳ ಜ. 20 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ ಕಾರ್ಯ ಮಾಡುತ್ತಿದ್ದು ಯಾವುದೇ ಬಗೆಯ ಸಂಕಷ್ಟಕ್ಕೆ ಸಿಲುಕಿದ ಮಕ್ಕಳು ಕಂಡುಬಂದಲ್ಲ್ಲಿ ಮಕ್ಕಳ ಸಹಾಯವಾಣಿ-1098 ಕ್ಕೆ ಉಚಿತ ಕರೆ ಮಾಡಿ ಮಾಹಿತಿ ನೀಡುವಂತೆ ಮಕ್ಕಳ ಸಹಾಯವಾಣಿ ತಂಡದ ಸದಸ್ಯ ರಾಘವೇಂದ್ರ ಕುಲಕರ್ಣಿ ಮನವಿ ಮಾಡಿದರು.
     ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಇವರ ಸಹಯೋಗದಲ್ಲಿ ಗಂಗಾವತಿ ತಾಲೂಕು ಸಾಣಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಪರವಾದ ಕಾನೂನುಗಳ ಕುರಿತು ಶುಕ್ರವಾರದಂದು ಆಯೋಜಿಸಲಾದ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
     ಬಾಲಕಾರ್ಮಿಕ, ಚಿಂದಿ ಆರಿಸುವ ಮಕ್ಕಳು, ಬಿಕ್ಷಾಟನೆ ಮಕ್ಕಳು ಮತ್ತು ಯಾವುದೇ ತೊಂದರೆಗೆ ಅಥವಾ ಸಂಕಷ್ಟಕ್ಕೆ ಸಿಲುಕಿರುವ ಮಕ್ಕಳು ಕಂಡುಬಂದಲ್ಲಿ, ಮಕ್ಕಳ ಸಹಾಯವಾಣಿ-1098 ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು.  ಇದೊಂದು ಉಚಿತ ಕರೆಯಾಗಿದ್ದು  ದಿನದ 24*7 ರೀತಿಯಲ್ಲಿ ಕಾರ್ಯ ಮಾಡುತ್ತಿದೆ.  ಅಂತಹ ಮಕ್ಕಳನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಪೋಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗುವುದು ಇದರ ಸದುಪಯೋಗ ಆಗಬೇಕು.  ಸಂಕಷ್ಟದಿಂದ ಮಕ್ಕಳನ್ನು ಪಾರು ಮಾಡಲು ಎಲ್ಲ ಸಾರ್ವಜನಿಕರು ಇಂತಹ ಕಾರ್ಯಕ್ರಮಕ್ಕೆ ಕೈಜೋಡಿಸಬೇಕು ಎಂದು ರಾಘವೇಂದ್ರ ಕುಲಕರ್ಣಿ ಮನವಿ ಮಾಡಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿ ಬಡಿಗೇರ ಮಾತನಾಡಿ ಮಕ್ಕಳ ಹಕ್ಕುಗಳಾದ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ವಿಕಾಸ ಮತ್ತು ಅಭಿವೃದ್ಧಿ ಹೊಂದುವ ಹಕ್ಕು, ಮತ್ತು ಭಾಗವಹಿಸುವ ಹಕ್ಕುಗಳನ್ನು ಮಕ್ಕಳು ತಮ್ಮ ಬಾಲ್ಯದಲ್ಲಿ ಅನುಭವಿಸುವಂತಾಗಬೇಕು ಎಂದು ತಿಳಿಸಿದರು. ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ  ಸಂಬಂಧಿಸಿದಂತೆ ಪೋಕ್ಸೊ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.  ಇತ್ತೀಚಿನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಸಾಗಾಣಿಕ ಹೆಚ್ಚಾಗುತ್ತಿದ್ದು,  ಪ್ರಾಥಮಿಕವಾಗಿ ಮಹಿಳೆ ಮತ್ತು ಮಕ್ಕಳ ರಕ್ಷಣೆ ಹೆಚ್ಚಿನ ಜವಾಬ್ದಾರಿ ಮೂಲತಃ ಕುಟುಂಬದ್ದು.  ಆರೈಕೆ ಮತ್ತು ಪೋಷಣೆ ಅವಶ್ಯಕತೆಯಿರುವ ಯಾವುದೇ ಮಗುವನ್ನು ಯಾರೇ ವ್ಯಕ್ತಿಗಳು ಆರೈಕೆ ಮತ್ತು ಪೋಷಣೆಗಾಗಿ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರಪಡಿಸಬಹುದಾಗಿದೆ ಎಂದು ತಿಳಿಸಿದರು. 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ, 21 ವರ್ಷದೊಳಗಿನ ಗಂಡು ಮಕ್ಕಳಿಗೆ  ಬಾಲ್ಯವಿವಾಹ ಮಾಡುವುದು ಅಪರಾಧ.  ಒಂದು ವೇಳೆ ಮಾಡಿದಲ್ಲಿ ಕಾನೂನಿನಡಿ 1 ಲಕ್ಷ ರೂ ದಂಡ ಅಥವಾ 2 ವರ್ಷ ಜೈಲು ಶಿಕ್ಷ್ಷೆ ವಿಧಿಸಲಾಗುತ್ತದೆ ಎಂದು ಹೇಳಿದರು. ಮಕ್ಕಳ ರಕ್ಷಣೆಗಾಗಿ ಸರ್ಕಾರವು  ಹಲವಾರು ಕಾನೂನು ಮತ್ತು ಯೋಜನೆಗಳನ್ನು ಜಾರಿಗೊಳಿಸಿದೆ ಜಿಲ್ಲೆಯಲ್ಲಿ ಗುರುತಿಸಿದ ತೀವ್ರ ಸಂಕಷ್ಠದಲ್ಲಿರುವ ಎಚ್.ಐ.ವಿ ಭಾದಿತ ಹಾಗೂ ಸೋಂಕಿತ  ಮಕ್ಕಳಿಗೆÉ ಆರೈಕೆ ಮತ್ತು ಪೋಷಣೆಗಾಗಿ ರೂ 650 ರಿಂದ ರೂ 750 ರವರೆಗೆ ಪ್ರತಿ ತಿಂಗಳು ಮಗುವಿಗೆ 18 ವರ್ಷ ಪೂರ್ಣಗೊಳ್ಳುವವರೆಗೂ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ.  . ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕೊಪ್ಪಳ ಸಂಪರ್ಕಿಸಬಹುದಾಗಿದೆ ಎಂದರು.  
 ಮುಖ್ಯ ಶಿಕ್ಷಕ ಸೈಯದ್ ಮೆಹಬೂಬ ಹುಸೇನ್ ಮಾತನಾಡಿ, ಇತ್ತೀಚೆಗೆ ಮಕ್ಕಳ ರಕ್ಷಣೆಗಾಗಿ ಹಲವಾರು ಕಾನೂನುಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತರಲಾಗಿದೆ ಇದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಿ ಎಂದು ಹೇಳಿದರು.  ಸಹ ಶಿಕ್ಷಕ ಕೊಟ್ರೇಶ ನಿರೂಪಿಸಿದರು.  ಅನ್ನಪೂರ್ಣ ವಂದಿಸಿದರು.

ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪರಿಷ್ಕøತ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಜ. 20 (ಕರ್ನಾಟಕ ವಾರ್ತೆ):  ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಪರಿಷ್ಕøತಗೊಂಡಿದೆ.
         ಪರಿಷ್ಕøತ ಪ್ರವಾಸದನ್ವಯ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜ. 23 ರಂದು ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಳಿಗ್ಗೆ 8 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು.  ನಂತರ ಜಿಲ್ಲೆಯಲ್ಲಿನ ಬರ ಪರಿಹಾರ ಕಾಮಗಾರಿಗಳ ಪರಿವೀಕ್ಷಣಾ ಪ್ರವಾಸ ಕೈಗೊಂಡು, ಕೊಪ್ಪಳದಲ್ಲಿ ವಾಸ್ತವ್ಯ ಮಾಡುವರು.  ಜ. 24 ರಂದು ಮಂತ್ರಿಗಳು ಜಿಲ್ಲೆಯಲ್ಲಿನ ಬರ ಪರಿಹಾರ ಕಾಮಗಾರಿಗಳ ಪರಿವೀಕ್ಷಣಾ ಪ್ರವಾಸ ಕೈಗೊಂಡು, ವಾಸ್ತವ್ಯ ಮಾಡುವರು.  ಜ. 25 ರಂದು ಬೆಳಿಗ್ಗೆ 10 ಗಂಟೆಗೆ ಸಾರಿಗೆ ಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಬೆ. 11 ಗಂಟೆಗೆ ಬರ ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ, ವಾಸ್ತವ್ಯ ಮಾಡುವರು.  ಜ. 26 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗುವ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳುವರು.   ನಂತರ ಮಧ್ಯಾಹ್ನ 02 ಗಂಟೆಗೆ ಇಟಗಿ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆಯ ಶಂಕುಸ್ಥಾಪನೆ ಕಾರ್ಯಕ್ರಮ.  ಮ. 04 ಗಂಟೆಗೆ ಬೆಣಕಲ್ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆಯ ಶಂಕುಸ್ಥಾಪನೆ.  ಸಂಜೆ 05 ಗಂಟೆಗೆ ಗುತ್ತೂರು ಗ್ರಾಮದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಿರುವ ಯಾತ್ರಿ ನಿವಾಸ ಉದ್ಘಾಟನೆ, 5-30 ಗಂಟೆಗೆ ವಣಗೇರಿ, 6-15 ಗಂಟೆಗೆ ಬೇವೂರು, ರಾತ್ರಿ 07 ಗಂಟೆಗೆ ಹುಣಸಿಹಾಳ ಗ್ರಾಮಗಳಲ್ಲಿ ಸುವರ್ಣ ಗ್ರಾಮ ಯೋಜನೆಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಮಂತ್ರಿಗಳು ಅಂದು ರಾತ್ರಿ 8 ಗಂಟೆಗೆ ಹಂಪಿ ಎಕ್ಸ್‍ಪ್ರೆಸ್ ರೈಲು ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

ಕೊಪ್ಪಳ : ನೀರು ಸರಬರಾಜು ಕುರಿತು ಸಹಾಯವಾಣಿ ಪ್ರಾರಂಭ

ಕೊಪ್ಪಳ ಜ. 20 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ನೀರು ಸರಬರಾಜಿಗೆ ಸಂಬಂಧಿಸಿದಂತೆ ಸಹಾಯವಾಣಿ ಸೌಲಭ್ಯ ಪ್ರಾರಂಭಿಸಲಾಗಿದೆ.
     ನೀರು ಸರಬರಾಜಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ದೂರುಗಳನ್ನು ಸಹಾಯವಾಣಿ ಸಂ: 08539-231165 ಕ್ಕೆ ಕರೆ ಮಾಡಿ, ದೂರು ದಾಖಲಿಸಬಹುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಣ್ಣು ಬೆಳೆಗಳ ತರಬೇತಿ ಶಿಬಿರ

ಕೊಪ್ಪಳ, ಜ.20 (ಕರ್ನಾಟಕ ವಾರ್ತೆ): ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಾಗಲಕೋಟ ಇವರಿಂದ ಮಾವು, ಬಾಳೆ, ಪಪ್ಪಾಯ, ಪೇರು ಮತ್ತು ಚಿಕ್ಕು(ಸಪೋಟಾ) ಹಣ್ಣು ಬೆಳೆಗಳ ಕುರಿತು ಉಚಿತ ತರಬೇತಿ ಶಿಬಿರವನ್ನು ಫೆಬ್ರುವರಿ ತಿಂಗಳಿನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ.
      ಹಣ್ಣು ಬೆಳೆಗಳ ಅಧಿಕ ಇಳುವರಿಗೆ ಅನುಸರಿಸಬೇಕಾದ ಆಧುನಿಕ ಬೇಸಾಯ ಕ್ರಮಗಳು, ಸಾವಯವ ಕೃಷಿ ತಂತ್ರಜ್ಞಾನ, ಸೂಕ್ತ ನೀರಾವರಿ ಪದ್ಧತಿಗಳು, ಸಂಸ್ಕರಣಾ ಕ್ರಮಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಶಿಬಿರದಲ್ಲಿ ಮೂರು ದಿನಗಳ ಕಾಲ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು, ಇತರರು ತಮ್ಮ ಹೆಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಜ.31 ರೊಳಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ. ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟ-587103 ಮೊ-9482630790 ಇಲ್ಲಿ ನೋಂದಾಯಿಸಬಹುದು ಎಂದು ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎಸ್ ಹಾಲಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಫೋನ್-ಇನ್ ಕಾರ್ಯಕ್ರಮ

ಕೊಪ್ಪಳ, ಜ.20 (ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಸುಧಾರಣೆಗಾಗಿ ಫೋನ್-ಇನ್ ಕಾರ್ಯಕ್ರಮವನ್ನು ಜ.20 ರಿಂದ ಮಾರ್ಚ್ 25 ರವರಗೆ ಜಿಲ್ಲಾ ಹಂತದಲ್ಲಿ ಆಯೋಜಿಸಲಾಗಿದೆ.
    ವಿದ್ಯಾರ್ಥಿಗಳಿಗೆ ವಿಷಯವಾರು ಕಲಿಕೆಯಲ್ಲಿ ಉಂಟಾಗುವ ಕಠಿಣ ಅಂಶಗಳು ಹಾಗೂ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳೇ ನೇರವಾಗಿ ಕಚೇರಿಯ ದೂರವಾಣಿ ಸಂಖ್ಯೆ 08539-221303 ಅಥವಾ ಜಿಲ್ಲಾ ಕಚೇರಿಯಲ್ಲಿ ವ್ಯವಸ್ಥೆಗೊಳಿಸಲಾಗಿರುವ ವಿಷಯವಾರು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಂಡು ಕಲಿಕೆಯನ್ನು ಉತ್ತಮ ಪಡಿಸಿಕೊಳ್ಳಬಹುದು.
     ಫೋನ್-ಇನ್ ಕಾರ್ಯಕ್ರಮದ ವಿವರ ಹಾಗೂ ವಿಷಯವಾರು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಯ ವಿವರ ಇಂತಿದೆ: ಜ.20 ರಂದು ಕನ್ನಡ (8971418313),  ಜ.21 ರಂದು ಗಣಿತ (9448988588), ಫೆ.03 ರಂದು ವಿಜ್ಞಾನ (9886383275), ಫೆ.04 ರಂದು ಸಮಾಜ ವಿಜ್ಞಾನ (8762983361), ಫೆ.09 ರಂದು ಇಂಗ್ಲೀಷ್ (8749045865), ಫೆ.10 ರಂದು ಹಿಂದಿ (9972699073), ಫೆ.17 ರಂದು ಕನ್ನಡ, ಫೆ.18 ರಂದು ಗಣಿತ, ಫೆ.23 ರಂದು ವಿಜ್ಞಾನ, ಫೆ.25 ರಂದು ಸಮಾಜ ವಿಜ್ಞಾನ, ಮಾ.03 ರಂದು ಇಂಗ್ಲೀಷ್, ಮಾ.04 ರಂದು ಹಿಂದಿ,  ಮಾ.09 ರಂದು ಗಣಿತ, ಮಾ.10 ರಂದು ಕನ್ನಡ, ಮಾ.17 ರಂದು ವಿಜ್ಞಾನ, ಮಾ.18 ರಂದು ಸಮಾಜ ವಿಜ್ಞಾನ, ಮಾ.24 ರಂದು ಇಂಗ್ಲಿಷ್, ಮಾ.25 ರಂದು ಹಿಂದಿ ವಿಷಯಗಳ ಕುರಿತು ಫೋನ್-ಇನ್ ಕಾರ್ಯಕ್ರಮ ನಡೆಯಲಿದೆ.   
     ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಎಲ್ಲಾ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಎಲ್ಲಾ ವಿಷಯ ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕು ಹಾಗೂ ಜಿಲ್ಲೆಯ ಎಲ್ಲಾ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲ್ಲೂಕು ಹಂತದಲ್ಲಿ ಫೋನ್-ಇನ್ ಕಾರ್ಯಕ್ರಮ ಆಯೋಜಿಸಿ ಕಚೇರಿಗೆ ವರದಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ.21 ರಂದು ಕೊಪ್ಪಳದಲ್ಲಿ ಬಾಲ್ಯ ವಿವಾಹ ತಡೆಗಾಗಿ ಜಾಗೃತಿ ಕಾರ್ಯಕ್ರಮ

ಕೊಪ್ಪಳ, ಜ.20 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜಿನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಬೃಹತ್ ಜಾಗೃತಿ ಕಾರ್ಯಕ್ರಮ ಜ.21 ರಂದು ಬೆಳಿಗ್ಗೆ 9 ಗಂಟೆಗೆ ಕೊಪ್ಪಳ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
     ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ದಶರಥ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಅಧ್ಯಕ್ಷತೆ ವಹಿಸುವರು.  ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ತ್ಯಾಗರಾಜನ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ  ವನಿತಾ ತೊರವಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶೇಖರಗೌಡ ಜಿ ರಾಮತ್ನಾಳ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ, ಜಿಲ್ಲಾ ಕಾರ್ಮಿಕ ಅಧಿಕಾರಿ ಶಾಮರಾವ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ ವಿ, ಕೊಪ್ಪಳ ತಹಸೀಲ್ದಾರ ಗುರು ಬಸವರಾಜ, ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ತರಬೇತಿ ಸಂಯೋಜಕ ಹರೀಶ್ ಜೋಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ವಿಭಾಗೀಯ ಸಂಯೋಜಕ ರಾಘವೇಂದ್ರ ಭಟ್ ವಿಶೇಷ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ಜ.21 ರಂದು ಕೊಪ್ಪಳ ತಾಲೂಕ ಮಟ್ಟದ ಯುವಜನ ಮೇಳ

ಕೊಪ್ಪಳ, ಜ.20 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಂದೇ ಮಾತರಂ ಯುವ ಗ್ರಾಮೀಣಾಭಿವೃದ್ಧಿ ಸಾಂಸ್ಕøತಿಕ ಮತ್ತು ಶಿಕ್ಷಣ ಸೇವಾ ಸಂಸ್ಥೆ, ಬುಡಶೆಟ್ನಾಳ ಇವರುಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ತಾಲೂಕ ಮಟ್ಟದ ಯುವಜನ ಮೇಳ ಜ.21 ರಂದು ಬೆಳಿಗ್ಗೆ 10 ಗಂಟೆಗೆ ಬುಡಶೆಟ್ನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
     ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಜಿ.ಪಂ ಅಧ್ಯಕ್ಷ ಎಸ್.ಬಿ ನಾಗರಳ್ಳಿ ಅಧ್ಯಕ್ಷತೆ ವಹಿಸುವರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ತಾ.ಪಂ ಉಪಾಧ್ಯಕ್ಷೆ ಶಂಕ್ರಮ್ಮ ಅಮರೇಶ ಉಪಲಾಪೂರ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಯಲಬುರ್ಗಾ ಪಟ್ಟಣ ವಾರ್ಡ್‍ಗಳ ಪುನರ್ ವಿಂಗಡಣೆ ಅಂತಿಮ ಅಧಿಸೂಚನೆ ಪ್ರಕಟ

ಕೊಪ್ಪಳ, ಜ.20 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಪಟ್ಟಣ ಪಂಚಾಯಿತಿಯ ವಾರ್ಡ್‍ಗಳ ಪುನರ್ ವಿಂಗಡಣೆ ಕುರಿತಂತೆ ಉಪವಿಭಾಗಾಧಿಕಾರಿ ಗುರುದತ್ತ ಹೆಗಡೆ ಅವರು ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ.
      ಅಂತಿಮ ಅಧಿಸೂಚನೆ ಪ್ರಕಾರ ವಾರ್ಡ್‍ಗಳ ಪುನರ್ ವಿಂಗಡಣೆಯ ವಿವರ ಇಂತಿದೆ:  ವಾರ್ಡ್ ನಂ-01 : ಹರ್ತಿಯವರ ಓಣಿ, ಕರಂಡಿಯವರ ಓಣಿ, ಗಾಳಿಯವರ ಓಣಿ, ಮಗ್ಗಿ ಬಸವೇಶ್ವರ ದೇವಸ್ಥಾನ. ವಾರ್ಡ್ ನಂ-02 : ಮಂಕಾದಾರ ಓಣಿ, ಕುಂಬಾರ ಓಣಿ, ಹಣಗಿಯವರ ಓಣಿ, ಕಂಡೇರ ಓಣಿ, ಹೂಗಾರ ಓಣಿ, ಮಣಿಗಾರ ಓಣಿ, ಕಲಾಲರ ಮನೆಗಳು, ಮುಂದುವರೆದು ಬಸವಣ್ಣ ದೇವರ ಗುಡಿಯವರೆಗೆ. ವಾರ್ಡ್ ನಂ-03 : ಪ್ರಶಾಂತ ನಗರ, ಜನತಾ ಕಾಲೋನಿ. ವಾರ್ಡ್ ನಂ-04 : ಕುಂಚಿಕೊರವರ ಓಣಿ, ಲಮಾಣಿ ತಾಂಡಾ, ಭಜಂತ್ರಿ ಓಣಿ, ನೀಲಗಾರ ಓಣಿ, ಬಾರಕೇರ ಓಣಿ, ತಾಸೇದಾರ ಓಣಿ, ದಂಡಿನವರ ಓಣಿ, ಗೋದಾಮಿನ ಹತ್ತಿರ.  ವಾರ್ಡ್ ನಂ-05 : ಛಲವಾದಿಯವರ ಓಣಿ, ಕುರುಬರ ಓಣಿ, ಜೋಗೀನವರ ಓಣಿ, ಶೆಲ್ಲೇದವರ ಓಣಿ, ಉಪ್ಪಾರ ಓಣಿ, ಕಂಡೇರ ಓಣಿ ಎಡಭಾಗ.  ವಾರ್ಡ್ ನಂ-06 : ಗೌಡರ ಓಣಿ, ಗಾಣಿಗೇರ ಓಣಿ, ದಫೇದಾರ ಓಣಿ, ಶ್ಯಾನುಭೋಗರ ಓಣಿ, ಉಪ್ಪಾರ ಓಣಿ, ಗಾಂಜಿಯವರ ಓಣಿ ಬಲಭಾಗ ಮತ್ತು ಕಂಡಿಯವರ ಮನೆಗಳು.  ವಾರ್ಡ್ ನಂ-07 : ಮೊರಗೇರ ಓಣಿ, ಪುರೋಹಿತ ಓಣಿ, ಹಡಪದವರ ಓಣಿ, ಗಾಂಜಿಯವರ ಓಣಿ, ಗೌಡರ ಓಣಿ, ಬನಪ್ಪಗೌಡರ ಮನೆಗಳು, ಬನ್ನಿಮರದವರ ಓಣಿ, ಹಿರೇಮಠದ ಮುಂದಿನ ರಸ್ತೆ. ವಾರ್ಡ್ ನಂ-08 :  ಅರಕೇರಿ ಓಣಿ, ಬಡಿಗೇರ ಓಣಿ, ಕೊಪ್ಪಳದವರ ಓಣಿ, ಅಧಿಕಾರಿಯವರ ಓಣಿ, ಬೇಲೇರಿಯವರ ಓಣಿ, ಹಳ್ಳಿಕೇರಿ ಓಣಿ, ಕೋಣದವರ ಓಣಿ, ದೇಶಪಾಂಡೆ ವಠಾರ. ವಾರ್ಡ್ ನಂ-09 :  ಜೋಶಿ ಓಣಿ, ಗಂಧದವರ ಓಣಿ, ಖಾಜಿಯವರ ಓಣಿ, ಅಧಿಕಾರಿಯವರ ಪ್ಲಾಟ್‍ಗಳು, ಬನ್ನಿಕೊಪ್ಪದವರ ಓಣಿ, ಹುಬ್ಬಳ್ಳಿಯವರ ಓಣಿ, ಹಳ್ಳಿಯವರ ಮನೆಗಳು, ಗಡಾದವರ ಓಣಿ.  ವಾರ್ಡ್ ನಂ-10 : ಮುಧೋಳ ರಸ್ತೆ ಆಶ್ರಯ ಕಾಲೋನಿ ಮತ್ತು ನಾಗನಗೌಡ್ರ ಓಜನಹಳ್ಳಿಯವರ ಪ್ಲಾಟಗಳು.  ವಾರ್ಡ್ ನಂ-11 : ಕೆ.ಇ.ಬಿ ಕ್ವಾಟ್ರಸ್, ಪೋಸ್ಟ್ ಆಫೀಸ್ ಹಿಂದಿನ ಭಾಗ, ವಿದ್ಯಾಸಾಗರ ಕಾಲೋನಿ, ಡಾ.ಬಾಬುಜಗಜೀವನರಾಂ ನಗರ, ಅಧಿಕಾರಿಯವರ ಬಡಾವಣೆ, ಬಿ.ಆರ್.ಸಿ ಕಛೇರಿ ವರೆಗೆ.  ವಾರ್ಡ್ ನಂ-12 : ಬೇವೂರ ರಸ್ತೆ, ಆಶ್ರಯ ಕಾಲೋನಿ, ತಹಶೀಲ್ ಕ್ವಾಟ್ರಸ್, ರಾಘವೇಂದ್ರ ಕಾಲೋನಿ, ಬಿ.ಡಿ.ಓ ಕ್ವಾಟ್ರಸ್, ಎನ್.ಜಿ.ಓ ಕ್ವಾಟ್ರಸ್, ಬನಪ್ಪಗೌಡ್ರ ಬಡಾವಣೆ, ಲಕ್ಷ್ಮೀ ನಗರ. ವಾರ್ಡ್ ನಂ-13 : ರಾಮನಗರ, ಬಸವೇಶ್ವರ ನಗರ, ಕೊತ್ವಾಲರ ಪ್ಲಾಟ್, ಪೊಲೀಸ್ ಕ್ವಾಟ್ರಸ್, ಪಟ್ಟಣ ಪಂಚಾಯಿತಿ, ಜಿ.ಪಂ ಕಛೇರಿ. ವಾರ್ಡ್ ನಂ-14 : ಕೆ.ಎಚ್.ಬಿ ಕಾಲೋನಿ, ಶ್ರೀ ಸಿದ್ದರಾಮಯ್ಯ ನಗರ, ಮೀನಾಕ್ಷಿ ನಗರ, ಗೌಂಡಿ ಸಂಘದ ಪ್ಲಾಟುಗಳು, ಶಿವನಗೌಡರ ಬಡಾವಣೆ, ಬಸ್ ಡಿಪೋ, ಭರಮಗೌಡರ ಅಡ್ಡೆದ ಪ್ಲಾಟುಗಳು.  ವಾರ್ಡ್ ನಂ-15 : ಭೂಸನೂರಮಠದವರ ಪ್ಲಾಟಗಳು, ಕುದ್ರಿಕೊಟಗಿ ರಸ್ತೆ ಆಶ್ರಯ ಕಾಲೋನಿ, ಉಳ್ಳಾಗಡ್ಡಿಯವರ ಬಡಾವಣೆ, ಕೆ.ಸಿ ನಗರ, ಪತ್ತಾರ ಬಡಾವಣೆ, ಡಾ. ಇಟಗಿಯವರ ಬಡಾವಣೆ ಕಲಬುರಗಿಯವರ ಸ್ಟೋನ್ ಪಾಲಿಸಿಂಗ್ ಯುನಿಟ್ ವರೆಗೆ.
     ಯಲಬುರ್ಗಾ ಪಟ್ಟಣ ಪಂಚಾಯತಿ ವಾರ್ಡ್‍ಗಳ ಪುನರ್ ವಿಂಗಡಣೆಗೆ ಸಂಬಂಧಿಸಿದ ಅಂತಿಮ ಅಧಿಸೂಚನೆಯನ್ನು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಯಲಬುರ್ಗಾ ತಹಸಿಲ್ದಾರರ ಕಚೇರಿ ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತಿ ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

Thursday, 19 January 2017

ಸರ್ಕಾರಿ ಮುಖ್ಯ ಸಚೇತಕ ಐವನ್ ಡಿ’ಸೋಜಾ ಅವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಜ. 19 (ಕರ್ನಾಟಕ ವಾರ್ತೆ): ಸರ್ಕಾರಿ ಮುಖ್ಯ ಸಚೇತಕರು, ವಿಧಾನಪರಿಷತ್ತು ಹಾಗೂ ಕ್ರಿಶ್ಚಿಯನ್ ಅಭಿವೃದ್ಧಿ ಪರಿಷತ್ತಿನ ಉಪಾಧ್ಯಕ್ಷರು ಮತ್ತು ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿ ಪರಿಶೀಲನಾ ಉಪಸಮಿತಿಯ ಅಧ್ಯಕ್ಷರೂ ಆಗಿರುವ ಐವನ್ ಡಿ’ಸೋಜಾ ಅವರು ಜ. 21 ರಂದು ಕೊಪ್ಪಳ ಜಿಲ್ಲೆ ಗಂಗಾವತಿಗೆ ಆಗಮಿಸಿ, ಚರ್ಚ್‍ಗೆ ಭೇಟಿ ನೀಡಿ, ಧರ್ಮಗುರುಗಳ ಜೊತೆಗೆ ಸ್ಥಳೀಯ ಕ್ರೈಸ್ತ ಸಮುದಾಯದ ಪ್ರಮುಖ ಕುಂದುಕೊರತೆಗಳ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆ. 10 ಗಂಟೆಗೆ ಗಂಗಾವತಿಯ ಇಸಿಐ ಕಮ್ಯುನಿಟಿ ಹಾಲ್‍ನಲ್ಲಿ ನಡೆಯುವ ಕ್ರೈಸ್ತ ಅಭಿವೃದ್ಧಿ ಸೇವಾ ಸಂಘ, ಕರ್ನಾಟಕ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.  ಮಧ್ಯಾಹ್ನ 12 ರಿಂದ 12-30 ರವರೆಗೆ ಪತ್ರಿಕಾ ಸಂದರ್ಶನ ನಡೆಸುವರು.  ಮಧ್ಯಾಹ್ನ 3 ಗಂಟೆಗೆ ಕೊಪ್ಪಳ ನಗರಕ್ಕೆ ಆಗಮಿಸಿ, ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿ ಕಾರ್ಯಕ್ರಮಗಳ ಕುರಿತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುವರು.  ಸಂಜೆ 4-30 ಗಂಟೆಗೆ ಪತ್ರಿಕಾ ಸಂದರ್ಶನ ನಡೆಸಿ, ಸಂಜೆ 06 ಗಂಟೆಗೆ ಧಾರವಾಡ ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ವಿಶೇಷಾಧಿಕಾರಿ ತಿಳಿಸಿದ್ದಾರೆ.

ಬರ ಎದುರಿಸಲು ಜಿಲ್ಲೆಗೆ ಉದ್ಯೋಗಖಾತ್ರಿಗಾಗಿ 32. 90 ಕೋಟಿ ರೂ. ಹೆಚ್ಚುವರಿ ಅನುದಾನ

ಕೊಪ್ಪಳ ಜ. 19 (ಕರ್ನಾಟಕ ವಾರ್ತೆ): ಪ್ರಸಕ್ತ ವರ್ಷ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ಜಿಲ್ಲೆಗೆ 32. 90 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಹೇಳಿದರು.
     ಕೊಪ್ಪಳದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಈ ವರ್ಷ ತೀವ್ರ ಬರ ಪರಿಸ್ಥಿತಿ ತಲೆದೋರಿದೆ.  ಮುಂಗಾರು ಮತ್ತು ಹಿಂಗಾರು ಮಳೆ ವೈಫಲ್ಯದ ಕಾರಣದಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗದ ಕೊರತೆ ಕಂಡುಬರುತ್ತಿದೆ.  ಕೂಲಿಕಾರ್ಮಿಕರಿಗೆ ಉದ್ಯೋಗ ನೀಡಿ, ಗುಳೆ ಹೋಗುವುದನ್ನು ತಡೆಗಟ್ಟುವುದಲ್ಲದೆ, ಈ ವರ್ಷದ ಭೀಕರ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿ ಈಗಾಗಲೆ ಸಿದ್ಧತೆಗಳನ್ನು ಕೈಗೊಂಡಿದೆ.  ಉದ್ಯೋಗಖಾತ್ರಿ ಯೋಜನೆಯಡಿ ಪ್ರಸಕ್ತ ವರ್ಷ 97. 82 ಕೋಟಿ ರೂ. ಗಳ ಅನುದಾನವನ್ನು ನಿಗದಿಪಡಿಸಲಾಗಿತ್ತು.  ಆದರೆ ಬರಗಾಲವನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಜಿಲ್ಲೆಗೆ 32. 90 ಕೋಟಿ ರೂ. ಗಳ ಹೆಚ್ಚುವರಿ ಅನುದಾನ ಸೇರಿದಂತೆ ಒಟ್ಟು 130. 40 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದ್ದು, 24. 68 ಲಕ್ಷ ಮಾನವ ದಿನಗಳ ಸೃಜನೆಯ ಗುರಿಯನ್ನು ಪರಿಷ್ಕರಿಸಿ, ಹೆಚ್ಚುವರಿಯಾಗಿ 8. 23 ಲಕ್ಷ ಮಾನವ ದಿನಗಳು ಸೇರಿದಮತೆ ಒಟ್ಟು 32. 90 ಲಕ್ಷ ಮಾನವದಿನಗಳನ್ನು ಸೃಜಿಸುವ ಗುರಿ ಹಾಕಿಕೊಳ್ಳಲಾಗಿದೆ.  ಪ್ರಸಕ್ತ ವರ್ಷ ಡಿಸೆಂಬರ್ ಅಂತ್ಯದವರೆಗೆ 71. 72 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದ್ದು, 114570 ಜನರಿಗೆ ಉದ್ಯೋಗ ನೀಡಿ, 19. 11 ಲಕ್ಷ ಮಾನವದಿನಗಳನ್ನು ಸೃಜಿಸಲಾಗಿದೆ.  ಇದಲ್ಲದೆ 2016-17 ರಿಂದ 2019-20 ರವರೆಗೆ ನಾಲ್ಕು ವರ್ಷಗಳಿಗಾಗಿ ಉದ್ಯೋಗಖಾತ್ರಿ ಯೋಜನೆಯಡಿ 624. 86 ಕೋಟಿ ರೂ. ಗಳಿಗೆ ಕಾಮಗಾರಿಗಳ ಗುಚ್ಛವನ್ನು ತಯಾರಿಸಲಾಗಿದ್ದು, ಆಯಾ ಗ್ರಾಮ ಪಂಚಾಯತಿಗಳ ಗ್ರಾಮಸಭೆ, ವಾರ್ಡ್ ಸಭೆಗಳ ಮೂಲಕ ಕಾಮಗಾರಿಗಳನ್ನು ಗುರುತಿಸಿ, ಹಂತ ಹಂತವಾಗಿ ಕಾಮಗಾರಿಗಳನ್ನು ಈ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಜಿ.ಪಂ. ಅಧ್ಯಕ್ಷರು ಹೇಳಿದರು.
ಕುಡಿಯುವ ನೀರು ಪೂರೈಸಲು ಮೊದಲ ಆದ್ಯತೆ :
*****************ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ವೈಫಲ್ಯದಿಂದಾಗಿ ನೀರಿನ ಕೊರತೆ ಉಂಟಾಗಿದೆ.  ಬೇಸಿಗೆ ಕಾಲಕ್ಕೂ ಮುನ್ನವೇ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಂದರೆ ಕಂಡುಬಂದಿದೆ.  ಅಂತರ್ಜಲ ಮಟ್ಟ ಕುಸಿತದಿಂದ ಬೋರ್‍ವೆಲ್‍ಗಳು ವಿಫಲವಾಗುತ್ತಿದ್ದು, ಹೊಸ ಬೋರ್‍ವೆಲ್ ಕೊರೆಯಿಸಿದರೂ, ಯಶಸ್ಸಿನ ಪ್ರಮಾಣ ಅತ್ಯಲ್ಪವಾಗಿದೆ.  ಪರ್ಯಾಯ ಮಾರ್ಗಗಳ ಬಗ್ಗೆ ಈಗಲೇ ಕ್ರಮ ಕೈಗೊಳ್ಳಬೇಕು ಎಂದು ಕೆಲ ಜಿಲ್ಲಾ ಪಂಚಾಯತಿ ಸದಸ್ಯರು ಒತ್ತಾಯಿಸಿದರು.  ಜಿ.ಪಂ. ಅಧ್ಯಕ್ಷರು ಪ್ರತಿಕ್ರಿಯಿಸಿ, ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತಿಯಲ್ಲಿ ಅನುದಾನದ ಯಾವುದೇ ಕೊರತೆ ಇಲ್ಲ.  ಜಿಲ್ಲೆಯ ಯಾವುದೇ ಗ್ರಾಮದಲ್ಲಿಯಾಗಲಿ, ಕುಡಿಯುವ ನೀರಿನ ತೊಂದರೆ ಕಂಡುಬಂದಲ್ಲಿ, ಆದ್ಯತೆ ಮೇರೆಗೆ ಸಮಸ್ಯೆ ಪರಿಹರಿಸಬೇಕು.  ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು, ಜನರಿಗೆ ನೀರು ಪೂರೈಸಬೇಕು. ಇಲ್ಲವೆ ಟ್ಯಾಂಕರ್ ಮೂಲಕ ಪೂರೈಸಬೇಕು.   ಬಾಡಿಗೆ ಆಧಾರದಲ್ಲಿ ಪಡೆಯುವ ಬೋರ್‍ಗಳನ್ನು ದಿನದ 24 ಗಂಟೆಗಳ ಕಾಲವೂ ಚಾಲನೆಯಲ್ಲಿ ಇಟ್ಟಲ್ಲಿ, ನೀರು ವ್ಯರ್ಥವಾಗುವುದಲ್ಲದೆ, ಬೊರ್‍ವೆಲ್ ವಿಫಲವಾಗುತ್ತವೆ.  ಹೀಗಾಗಿ ದಿನಕ್ಕೆ 2 ರಿಂದ 04 ಗಂಟೆಗಳ ಕಾಲ ಚಾಲನೆಗೊಳಿಸಿ, ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಉತ್ತರಿಸಿ, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಗ್ರಾಮೀಣ ಪ್ರದೇಶಗಲ್ಲಿನ ಎಲ್ಲ ನೀರಿನ ಮೂಲಗಳು, ಖಾಸಗಿ ಸೇರಿದಂತೆ ಎಲ್ಲ ಬೋರ್‍ವೆಲ್‍ಗಳ ಸಮೀಕ್ಷೆ ಕೈಗೊಂಡು, ವರದಿ ಸಂಗ್ರಹಿಸಲಾಗಿದೆ.  ಬೇಸಿಗೆಯಲ್ಲಿ ನೀರಿನ ತೊಂದರೆಯಾದಲ್ಲಿ, ತ್ವರಿತವಾಗಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಯೋಜನೆ ಸಿದ್ಧಗೊಳಿಸಿದ್ದೇವೆ ಎಂದರು.
ತೋಟಗಾರಿಕೆ ಯೋಜನೆಗಳು ಎಲ್ಲರಿಗೂ ಸಿಗಬೇಕು :
******************** ತೋಟಗಾರಿಕೆ ಇಲಾಖೆಯಡಿ ಲಭ್ಯವಿರುವ ಯೋಜನೆಗಳನ್ನು ಪದೇ ಪದೇ ಒಬ್ಬರೇ ಫಲಾನುಭವಿಗಳಿಗೆ ನೀಡಲಾಗುತ್ತಿದೆ.  ಇದರಿಂದ ಉಳಿದ ರೈತರಿಗೆ ಇಲಾಖೆಯ ಸೌಲಭ್ಯ ದೊರೆಯದೆ, ಅನ್ಯಾಯವಾಗುತ್ತಿದೆ ಎಂದು ಜಿ.ಪಂ. ಸದಸ್ಯರು ಆರೋಪಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಉಪನಿರ್ದೇಶಕ ಕೃಷ್ಣಾ ಉಕ್ಕುಂದ ಅವರು, ಈ ಕುರಿತು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದರು.  ತೋಟಗಾರಿಕೆ ಇಲಾಖೆಯಡಿ ರೈತರಿಗೆ ದೊರೆಯಬೇಕಾದ ವಿವಿಧ ಯೋಜನೆಯ ಸವಲತ್ತುಗಳನ್ನು ಒಬ್ಬರೇ ಫಲಾನುಭವಿಗೆ ಮಂಜೂರು ಮಾಡುವುದು ಸರಿಯಲ್ಲ.  ಇದರಿಂದ ಇತರರಿಗೆ ಅನ್ಯಾಯವಾದಂತಾಗುತ್ತದೆ.  ಈ ಕುರಿತು ಪರಿಶೀಲಿಸಿ ವರದಿ ಸಲ್ಲಿಸಬೇಕು.  ಅಲ್ಲದೆ ಬರುವ ದಿನಗಳಲ್ಲಿ ಇಂತಹ ಲೋಪಗಳು ಆಗಬಾರದು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷರು ಎಚ್ಚರಿಕೆ ನೀಡಿದರು.
ಮೇವು ಖರೀದಿಗೆ ಟೆಂಡರ್ ಪ್ರಕ್ರಿಯೆ ಪೂರ್ಣ :
*************** ಜಿಲ್ಲೆಯಲ್ಲಿ ಮಳೆಯ ವೈಫಲ್ಯದಿಂದ ಜಾನುವಾರುಗಳಿಗೆ ಬೇಸಿಗೆಯಲ್ಲಿ ಮೇವಿನ ತೊಂದರೆ ಆಗದಂತೆ ನೋಡಿಕೊಳ್ಳಲು ಈಗಾಗಲೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.  ಮೇವು ಬ್ಯಾಂಕ್‍ಗಳನ್ನು ಸ್ಥಾಪಿಸಲು ಕ್ರಮ ಜರುಗಿಸಲಾಗಿದ್ದು, ಮೇವು ಸಂಗ್ರಹಿಸುವ ಕಾರ್ಯ ನಡೆದಿದೆ ಅಲ್ಲದೆ, ಗೋಶಾಲೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.  ಪ್ರತಿ ತಾಲೂಕಿಗೆ ಎರಡು ಗೋಶಾಲೆಗಳನ್ನು ತೆರೆಯಲು ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.  ನಂತರದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಗೋಶಾಲೆ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಶಿವಣ್ಣ ಅವರು ಸಭೆಗೆ ತಿಳಿಸಿದರು.  ಮೇವಿನ ತೊಂದರೆಯಿಂದ ಜಾನುವಾರುಗಳಿಗೆ ತೊಂದರೆಯಾಗುತ್ತಿದೆ ಎಂದು ಜಿ.ಪಂ. ಸದಸ್ಯರು ಸಭೆಯ ಗಮನಕ್ಕೆ ತಂದರು.
ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಪ್ರಸ್ತಾವನೆ :
************* ಜಿಲ್ಲೆಯಲ್ಲಿ ಶಿಥಿಲಾವಸ್ತೆಯಲ್ಲಿರುವ ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ಈಗಾಗಲೆ ಗುರುತಿಸಲಾಗಿದ್ದು, 783 ಪ್ರಾಥಮಿಕ ಶಾಲಾ ಕಟ್ಟಡಗಳು ಹಾಗೂ 242 ಪ್ರೌಢಶಾಲಾ ಕಟ್ಟಡಗಳನ್ನು ನೂತನವಾಗಿ ನಿರ್ಮಿಸಲು ಈಗಾಗಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಡಿಪಿಐ ಎ. ಶ್ಯಾಮಸುಂದರ್ ಸಭೆಯ ಗಮನಕ್ಕೆ ತಂದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಸೇರಿದಂತೆ ಜಿಲ್ಲಾ ಪಂಚಾಯತಿ ಸದಸ್ಯರುಗಳು, ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.